ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಿಮಿಯ ಯುದ್ಧ
ಕ್ರಿಮಿಯ ಯುದ್ಧ 1854-1856. ರಷ್ಯಕ್ಕೂ ಬ್ರಿಟನ್, ಫ್ರಾನ್ಸ್, ತುರ್ಕಿ ಮತ್ತು ಸಾರ್ಡಿನಿಯಗಳಿಗೂ ನಡುವೆ ನಡೆದ ಯುದ್ಧ, ಸಾರ್ಡಿನಿಯ ಇದರಲ್ಲಿ ಸೇರಿದ್ದು 1855ರ ಜನವರಿಯಲ್ಲಿ. ಈ ಯುದ್ಧ ಮುಖ್ಯವಾಗಿ ಕ್ರಿಮಿಯ ಪರ್ಯಾಯ ದ್ವೀಪದಲ್ಲಿ ನಡೆದದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ತುರ್ಕಿ ಸಾಮ್ರಾಜ್ಯದ ಅವನತಿ 1700ರಲ್ಲಿ ಪ್ರಾರಂಭವಾದಾಗ ಅದರಿಂದ ಯೂರೋಪಿನಲ್ಲಿ ಅನೇಕ ರಾಜಕೀಯ ಸಮಸ್ಯೆಗಳು ಉದ್ಭವಿಸಿದುವು. ಇವನ್ನು 'ಪೂರ್ವದ ಸಮಸ್ಯೆ ಅಥವಾ ಪೂರ್ವದ ಪ್ರಶ್ನೆ ಎಂದೂ ಕರೆಯುತ್ತಾರೆ. ಕ್ರಿಮಿಯ ಯುದ್ಧಕ್ಕೂ ಇದೇ ಮೂಲಕಾರಣ. 18ನೆಯ ಶತಮಾನದಲ್ಲಿ ನಡೆದ ರಷ್ಯ-ತುರ್ಕಿ ಯುದ್ಧಗಳಿಂದ, ಪೂರ್ವ ಯೂರೋಪ್ ಮತ್ತು ಪಶ್ಚಿಮ ಏಷ್ಯಗಳಲ್ಲಿ ರಷ್ಯ ಪ್ರಬಲವಾಯಿತು. ರಷ್ಯದ ಈ ವಿಸ್ತರಣನೀತಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಿಗೆ ಗಾಬರಿಯನ್ನುಂಟುಮಾಡಿತು. ತುರ್ಕಿಯನ್ನು ಹಂಚಿಕೊಳ್ಳಬೇಕೆಂಬುದು ಆಸ್ಟ್ರಿಯ ಮತ್ತು ರಷ್ಯ ದೇಶಗಳ ಯೋಜನೆಯಾಗಿತ್ತು. ಇಂಗ್ಲೆಂಡ್ ಮತ್ತು ಫ್ರಾನ್ಸ್ ಇದನ್ನು ತಾತ್ಕಾಲಿಕವಾಗಿ ತಡೆಗಟ್ಟಿದುವು. ಆದಾಗ್ಯೂ 19ನೆಯ ಶತಮಾನದಲ್ಲಿ ವರ್ಷಗಳುರುಳಿದಂತೆ ತುರ್ಕಿ ಸಾಮ್ರಾಜ್ಯ ಅವನತಿಯ ಹಾದಿಯಲ್ಲೇ ಸಾಗಿತು. ಕಾನ್‍ಸ್ಟಾಂಟಿನೋಪಲ್ ಮತ್ತು ಡಾರ್ಡನೆಲ್ಸ್‍ಗಳನ್ನು ಆಕ್ರಮಿಸಿಕೊಳ್ಳಬೇಕೆಂಬ ರಷ್ಯದ ಹಂಚಿಕೆ, ಬಾಲ್ಕನ್ ರಾಷ್ಟ್ರಗಳು ತುರ್ಕಿಯಿಂದ ಬೇರ್ಪಟ್ಟು ಸ್ವಾತಂತ್ರ ಗಳಿಸಿದ್ದರಿಂದ ಸಂಭವಿಸಿದ ಅವನತಿ-ಇವು ಕ್ರಿಮಿಯ ಯುದ್ಧಕ್ಕೆ ಮೂಲಕಾರಣಗಳಾದುವು.
ಪ್ಯಾಲಿಸ್ತೀನಿನಲ್ಲಿದ್ದ ಮತಸಂಬಂಧವಾದ ಪವಿತ್ರಸ್ಥಳಗಳ ಮೇಲಿನ ಹತೋಟಿ ಯಾರಿಗೆ ಸೇರಬೇಕೆಂಬ ಬಗ್ಗೆ ರಷ್ಯ ಮತ್ತು ಫ್ರಾನ್ಸ್ ದೇಶಗಳಲ್ಲಿ ಸಂಭವಿಸಿದ ಭಿನ್ನಾಭಿಪ್ರಾಯವೇ ಕ್ರಿಮಿಯ ಯುದ್ಧಕ್ಕೆ ತತ್‍ಕ್ಷಣದ ಕಾರಣ. ರಷ್ಯದ ಹಕ್ಕುಗಳನ್ನು ತುರ್ಕಿ ತಿರಸ್ಕರಿಸಿದಾಗ ರಷ್ಯ ಮಾಲ್ಡೇವಿಯ ಮತ್ತು ವಾಲೇಕಿಯಗಳನ್ನು ಆಕ್ರಮಿಸಿಕೊಂಡಿತು. ಇದರಿಂದ ತುರ್ಕಿ ರಷ್ಯದ ಮೇಲೆ ಯುದ್ಧ ಘೋಷಿಸಿತು (1853). 1854ರಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್‍ಗಳೂ 1855ರಲ್ಲಿ ಸಾರ್ಡಿನಿಯವೂ ತುರ್ಕಿಯ ಪರ ಸೇರಿದುವು. ಸೆಬಾಸ್ಟೊಪಾಲಿನ ಮುತ್ತಿಗೆ, ಬ್ಯಾಲಕ್ಲಾವದಲ್ಲಿ ನಡೆದ ಹೋರಾಟ ಇವು ಕ್ರಿಮಿಯ ಯುದ್ಧದ ವಿಶೇಷ ಘಟನೆಗಳು. ಸೇನಾ ಆಸ್ಪತ್ರೆಗಳಲ್ಲಿಯ ದುಸ್ಥಿತಿಯಿಂದಾಗಿ ಸಾವಿರಾರು ಸೈನಿಕರು ಮೃತಪಟ್ಟರು. ಈ ದುರಂತ ಸ್ಥಿತಿಯನ್ನು ಅರಿತ ಫ್ಲಾರೆನ್ಸ್ ನೈಟಿಂಗೇಲ್ ಕ್ರಿಮಿಯಕ್ಕೆ ಹೋಗಿ ಶತ್ರು ಮಿತ್ರರೆನ್ನದೆ ಸೇವೆ, ಶುಶ್ರೂಷೆ ಸಲ್ಲಿಸಿದಳು.
1856ರಲ್ಲಿ ಕ್ರಿಮಿಯ ಯುದ್ಧ ಪ್ಯಾರಿಸ್ ಒಪ್ಪಂದದಲ್ಲಿ ಕೊನೆಗೊಂಡಿತು. ಈ ಯುದ್ಧದಿಂದಾಗಿ ಆಗ್ನೇಯ ಯೂರೋಪಿನಲ್ಲಿ ರಷ್ಯದ ಪ್ರಭಾವಕ್ಕೆ ತಡೆಯುಂಟಾಯಿತು. (ಬಿ.ಎಸ್.ಎ.)