ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರಿಯಾವಾದ

ವಿಕಿಸೋರ್ಸ್ದಿಂದ

ಕ್ರಿಯಾವಾದ

ಒಂದು ಸಮಗ್ರ ರಚನೆಯಲ್ಲಿ ಇರಬಹುದಾದ ಅನೇಕ ಅಂಗಗಳು ಅಥವಾ ಅಂಶಗಳು ತಮ್ಮ ತಮ್ಮ ಸ್ಥಾನಕ್ಕೆ ಯೋಗ್ಯವಾದ ಕರ್ಮಗಳನ್ನು (ಅಥವಾ ಕಾರ್ಯಗಳನ್ನು) ಮಾಡುವ ಮೂಲಕ ತಮ್ಮ ತಮ್ಮ ಮೌಲ್ಯಗಳನ್ನು ನಿರ್ಧರಿಸಿಕೊಳ್ಳುತ್ತವೆ ಎಂಬ ವಿವೇಚನೆಯನ್ನು ತತ್ತ್ತ್ವಶಾಸ್ತ್ತ್ರದಲ್ಲಿ ಈ ಹೆಸರಿನಿಂದ (ಫಂಕ್ಷನಲಿಸಂ) ಕರೆಯುತ್ತಾರೆ.

ಸಮಾಜ, ವ್ಯಕ್ತಿ ಅಥವಾ ಯಾವುದೇ ಘಟಕದ ಸಾಧನೆ ಹಾಗೂ ಯಶಸ್ಸು ಅವುಗಳ ರಚನೆಯಲ್ಲಿರಬಹುದಾದ ಅಂಗಾಂಗಗಳ ಅಂಶಾಂಶಗಳ-ಅವು ಭೌತಿಕ ಅಥವಾ ದೈಹಿಕ ಆಗಿರಬಹುದು. ಮಾನಸಿಕ ಅಥವಾ ಆಧ್ಯಾತ್ಮಕ ಆಗಿರಬಹುದು-ಕರ್ತವ್ಯ ನಿರ್ವಹಣೆಗೆ ಹೊಂದಿಕೊಂಡಿರುತ್ತವೆಂಬುದು ಸ್ಪಷ್ಟ. ಹಾಗೆಯೇ ಈ ನಿರ್ವಹಣೆಯಲ್ಲಿ ಎಲ್ಲಿಯಾದರೂ ಕುಂದು ಇರುವುದಾದರೆ ಸಮಗ್ರತೆಯ ಅಥವಾ ಘಟಕದ ಸುಸ್ಥಿತಿಗೆ ಪೆಟ್ಟು ಬರುತ್ತದೆಂಬುದೂ ಸ್ಪಷ್ಟ. ಆದರೆ ಇಲ್ಲಿ ಕರ್ತವ್ಯ ಮತ್ತು ಅದರ ಸಿದ್ಧಿ ಸಮಗ್ರ ಘಟಕಕ್ಕೆ ಸಂಬಂಧಿಸಿದುದೇ ಅಥವಾ ಪ್ರತ್ಯೇಕ ಪ್ರತ್ಯೇಕವಾಗಿರುವ ಅಂಶ (ಅಥವಾ ಅಂಗ)ಗಳಿಗೆ ಸಂಬಂಧಿಸಿದುದೇ ಎನ್ನುವುದು ಜಿe್ಞÁಸೆಗೆ ಎಡೆಕೊಡುತ್ತದೆ. ಈ ವಿಚಾರದಲ್ಲಿ ತಾತ್ತ್ವಿಕರಲ್ಲಿ ಪಂಗಡಗಳೇ ಆಗಿವೆ. ಕ್ರಿಯಾವಾದ ಸಮಗ್ರತೆಯ ಕರ್ತವ್ಯವನ್ನು ಹೇಗೆ ಸಮಷ್ಟಿದೃಷ್ಟಿಯಿಂದ ಮೌಲಿಕವಾದುದೆಂದು ಬಗೆಯುತ್ತದೋ ಹಾಗೆಯೇ ಅಂಶ ಅಂಶಗಳ ಕರ್ತವ್ಯವನ್ನೂ ಮೌಲಿಕವೆಂದು ತಿಳಿಯಬೇಕೆಂಬುದು ಮತ್ತೊಂದು ವಾದ. ಹಾಗೆಯೇ ಭೌತಿಕವೊ ಅಭೌತಿಕವೊ ಎಂಬುದನ್ನು ಅನುಸರಿಸಿ ಪ್ರತಿಯೊಂದು ಘಟಕಕ್ಕೂ ಒಂದು ಆಂತರಿಕ ರಚನೆ ಇರುವುದೆಂಬುದು ಸತ್ಯ. ಉದಾಹರಣೆಗೆ-ನಮ್ಮ ದೇಹದಲ್ಲಿ ವಿವಿಧ ಅಂಗಗಳು ಇರುವ ಹಾಗೆ, ಒಂದು ಯಂತ್ರದಲ್ಲಿ ವಿವಿಧ ಭಾಗಗಳು ಇರುವ ಹಾಗೆ, ಸಮಾಜದಲ್ಲಿ ವ್ಯಕ್ತಿಗಳೂ ಸಂಸ್ಥೆಗಳಿಗೂ ಇರುವ ಹಾಗೆ. ಇಲ್ಲಿ ಜಿe್ಞÁಸೆಗೆ ಅರ್ಹವಾದುದು ಏನೆಂದರೆ ಘಟಕದಲ್ಲಿನ ರಚನೆ (ಸ್ಟ್ರಕ್ಚರ್) ಮುಖ್ಯವೋ ಅದರ ಕ್ರಿಯೆ ಅಥವಾ ಕಾರ್ಯ (ಫಂಕ್ಷನ್) ಮುಖ್ಯವೋ ಎನ್ನುವುದು. ಈ ವಿಚಾರದಲ್ಲೂ ವಿದ್ವಾಂಸರಲ್ಲಿ ಪಂಗಡಗಳಾಗಿವೆ.

ಪ್ರಶ್ನೆಯನ್ನು ಪರಿಶೀಲಿಸುವ ದೃಷ್ಟಿಕೋನಗಳಲ್ಲಿ ವ್ಯತ್ಯಾಸ ಬರುವುದರಿಂದ ಈ ಪಂಗಡಗಳು ಏರ್ಪಟ್ಟಿರುವುದು ಸಹಜ. ಆದರೆ ರಚನೆ ಇಲ್ಲದೆ ಕಾರ್ಯವಿಲ್ಲ, ಕಾರ್ಯವಿಲ್ಲದ ರಚನೆಯಿಲ್ಲ ಎನ್ನುವುದನ್ನು ಮರೆಯಬಾರದು. ಈ ಎರಡನ್ನೂ ಕೂಡಿಸುವ ಪ್ರಮೇಯ ಅವುಗಳ ಧ್ಯೇಯದಲ್ಲಿ ಕಾಣುತ್ತದೆ. ಪ್ರತಿಯೊಂದು ಸಮಗ್ರದ ಅಥವಾ ಘಟಕದ ಕಾರ್ಯಪ್ರವೃತ್ತಿಯಲ್ಲೂ ಅಂಶಗಳ ಕಾರ್ಯಪ್ರವೃತ್ತಿಯಲ್ಲೂ ಒಂದು ಆಂತರಿಕ ಧ್ಯೇಯ ಇರಲೇಬೇಕೆಂಬ ಸತ್ಯವನ್ನು ಅನುಸರಿಸಿದ ಕ್ರಿಯಾವಾದವೂ ಒಂದು ತರಹೆಯ ಮೂಲ ಸಂಕಲ್ಪವಾದ (ಟೆಲಿಯಾಲೊಜಿ) ಎಂದೇ ಹೇಳಬೇಕು.

ಕ್ರಿಯಾವಾದ ಚಿತ್‍ಪ್ರಧಾನವಾದಕ್ಕೂ (ಐಡಿಯಲಿಸಂ) ಏಕತಾವಾದಕ್ಕೂ (ಮಾನಿಸಂ) ಎಡೆ ಕೊಟ್ಟಂತೆಯೇ ವಾಸ್ತವಿಕತಾವಾದಕ್ಕೂ (ರಿಯಲಿಸಂ) ಅನೇಕತಾವಾದಕ್ಕೂ (ಪ್ಲೂರಲಿಸಂ) ಎಡೆ ಕೊಟ್ಟಿರುವುದನ್ನು ಪಾಶ್ಚಾತ್ಯ ತತ್ತ್ವಶಾಸ್ತ್ತ್ರದ ಇತಿಹಾಸದಲ್ಲಿ ಕಾಣುತ್ತೇವೆ. (ಕೆ.ಬಿ.ಆರ್.)

I ಕ್ರಿಯಾವಾದಗಳಲ್ಲಿ ಅರಿಸ್ಟಾಟಲಿನ ವಾದ (ಆಕ್ಚುಯಾಲಿಟಿ ಥಿಯೊರಿ) ಒಂದು. ಅವನ ಪ್ರಕಾರ ಇರವಿನ ದಶೆಗಳು ಎರಡು-ಅಂತಸ್ಥದಶೆ ಮತ್ತು ವಾಸ್ತವದಶೆ. ಇವೆರಡನ್ನೂ ಬೇರೆ ಬೇರೆಯಾಗಿ ಗುರುತಿಸಬಹುದಾದರೂ ಇವು ಒಂದನ್ನು ಬಿಟ್ಟು ಒಂದು ಇರುವುದಿಲ್ಲ. ಅಂತಸ್ಥ ದಶೆಯಲ್ಲಿ ಇರವನ್ನು ಅರಿಸ್ಟಾಟಲ್ ದ್ರವ್ಯವೆಂದೂ (ಮ್ಯಾಟರ್) ಕ್ರಿಯಾದಶೆಯಲ್ಲಿರುವುದನ್ನು ರೂಪ (ಫಾರಂ) ಎಂದೂ ಕರೆದಿದ್ದಾನೆ. ಯಾವುದೊಂದು ರೂಪ ಪ್ರಕಟವಾಗಬೇಕಾದರೂ ಅದು ಇರವಿನಲ್ಲಿ ಅಂತಸ್ಥವಾಗಿರಬೇಕು. ಯಾವುದನ್ನಾದರೂ ಅದು ವಾಸ್ತವ ಎಂದು ಹೇಳಬೇಕಾದರೆ ಅಂಶಸ್ಥವಾಗಿರುವುದು ಕ್ರಿಯಾರೂಪವಾಗಬೇಕು. ಅರಿಸ್ಟಾಟಲನ ಪ್ರಕಾರ ಪ್ರತಿಯೊಂದು ವಸ್ತುವಿಗೂ ನಾಲ್ಕು ಬಗೆಯಾದ ಕಾರಣಗಳಿವೆ. ಒಂದು ಗಿಡ ಹುಟ್ಟಿ ಬೆಳೆದು ಹೂ, ಕಾಯಿ, ಹಣ್ಣುಗಳನ್ನು ಬಿಡಬೇಕಾದರೆ ಅದಕ್ಕೆ ಬೀಜ ಕಾರಣ. ಇದು ಉಪಾದಾನ ಕಾರಣ (ಮೆಟೀರಿಯಲ್). ಬೀಜದಲ್ಲಿರುವುದನ್ನು ಕಾರ್ಯರೂಪಕ್ಕೆ ತರುವ ಶಾಖ, ನೀರು, ಭೂಸಾರ ಇತ್ಯಾದಿಗಳ ಸಮೂಹ ನಿಮಿತ್ತ ಕಾರಣ (ಎಫಿಷಂಟ್). ಗಿಡದ ವಿನ್ಯಾಸ ಭಾವಕಾರಣ (ಫಾರ್ಮಲ್). ಫಲಿಸಿ ಮುಂದೆ ಸಂತಾನಾಭಿವೃದ್ದಿಗೊಳಿಸುವುದು ಅಂತಿಮ ಕಾರಣ (ಫೈನಲ್) ಅಥವಾ ಪ್ರಯೋಜನ ಕಾರಣ. ಪ್ರಕೃತಿ ಪರಿಣಾಮಗೊಳ್ಳಲು ನಾಲ್ಕೂ ಅಗತ್ಯ. ಹೀಗೆ ಪರಿಣಾಮಗೊಳ್ಳುವ ಸತ್ತನ್ನು ಅರಿಸ್ಟಾಟಲ್ ಎಂಟೆಲಿಕಿ ಎಂದು ಕರೆದಿರುತ್ತಾನೆ.

II ಭಾರತದಲ್ಲಿ ಅರಿಸ್ಟಾಟಲನ ಕ್ರಿಯಾವಾದವನ್ನು ಬಹುಮಟ್ಟಿಗೆ ಹೋಲುವ ವಾದವೆಂದರೆ ಸಾಂಖ್ಯ ಪರಿಣಾಮವಾದ. ಪ್ರಕೃತಿಯಲ್ಲಿ ಅಂತಸ್ಥವಾಗಿರುವುದು ವಾಸ್ತವ ವಿಶ್ವವಾಗಿ ಪರಿಣಾಮಗೊಳ್ಳುತ್ತದೆ ಎಂಬ ಒಂದು ಅಂಶದಲ್ಲಿ ಮಾತ್ರ ಸಾಂಖ್ಯಕ್ಕೂ ಅರಿಸ್ಟಾಟಲನ ತತ್ತ್ವಕ್ಕೂ ಸಾಮ್ಯವಿದೆ. ಸಾಂಖ್ಯದರ್ಶನ ವಿವರಿಸುವ ಪರಿಣಾಮ ಕ್ರಿಯೆ ತನ್ನದೇ ಆದ ವೈಶಿಷ್ಟ್ಟ್ಯವನ್ನು ಪಡೆದಿದೆ. ವಿವರಗಳಿಗೆ ನೋಡಿ-ಸಾಂಖ್ಯ ದರ್ಶನ.

ಭಾರತದ ಇನ್ನೊಂದು ಕ್ರಿಯಾವಾದ ಜೈನ ದಾರ್ಶನಿಕರದು. ಇವರದು ಸಾಂಖ್ಯರದಕ್ಕಿಂತ ಭಿನ್ನವಾದದ್ದು. ಸಾಂಖ್ಯರುವ ಪ್ರಕೃತಿ ಮಾತ್ರ ಕ್ರಿಯಾರೂಪವಾದದ್ದು, ಪುರುಷ ನಿಷ್ಕ್ರಿಯಾರೂಪ ಎಂದು ಹೇಳುತ್ತಾರೆ. ಜೈನರಾದರೋ ಪುರುಷ ಕ್ರಿಯಾರೂಪನೆಂದು ಭಾವಿಸುತ್ತಾರೆ.

ಭಾರತದ ಬೌದ್ದರು ಪರಮ ಕ್ರಿಯಾವಾದಿಗಳು. ಇವರ ಪ್ರಕಾರ ಕ್ರಿಯೆ ಇಲ್ಲದ ಯಾವೂದೂ ಇಲ್ಲವೇ ಇಲ್ಲ. ಯಾವುದೊಂದನ್ನಾಗಲಿ ಅದು ಇದೆ ಎಂದು ಹೇಳಬೇಕಾದರೂ ಅದರು ಅರ್ಧಕ್ರಿಯಾಕಾರಿಯಾಗಿರಬೇಕು. ಕ್ರಿಯಾರೂಪವೇ ವಾಸ್ತವರೂಪ. ಕ್ರಿಯೆ ಇಲ್ಲದ ಆತ್ಮನನ್ನು ಇವರು ಒಪ್ಪುವುದಿಲ್ಲ. ಸಕಲವೂ ಸದಾ ಬದಲಾಯಿಸುತ್ತಿದೆ. ಆದ್ದರಿಂದ ಸಕಲವೂ ಕ್ಷಣಿಕ ಎಂಬುದು ಇವರ ಮೂಲತತ್ತ್ವ.

III ಅರಿಸ್ಟಾಟಲ್ ಪ್ರತಿಪಾದಿಸಿದ ನಾಲ್ಕು ಬಗೆಯ ಕಾರಣಗಳಲ್ಲಿ ಅಂತಿಮ ಕಾರಣಕ್ಕೆ ಹೆಚ್ಚು ಹೆಚ್ಚು ಪ್ರಾಶಸ್ತ್ಯ ಕೊಟ್ಟ ಆಧುನಿಕ ಪಾಶ್ಚಾತ್ಯ ತಾತ್ತ್ವಿಕರು, ಮುಖ್ಯವಾಗಿ ಧ್ಯೇಯವಾದಿಗಳು, ಸತ್ ತತ್ತ್ತ್ವವನ್ನು ಬೆಳೆಸಿದ್ದಾರೆ. ಸತ್ತಿನ ರಚನೆ ಮತ್ತು ಕ್ರಿಯೆಯನ್ನು ಕೂಡಿಸುವುದು ಅವೆರಡರಲ್ಲೂ ಅಂತಸ್ಥವಾದ ಧ್ಯೇಯ. ಆ ಧ್ಯೇಯವೇ ರಚನೆ ಮತ್ತು ಕ್ರಿಯೆಗಳ ಉದ್ದೇಶ. ಅದನ್ನು ಮುಟ್ಟುವುದೇ ಸಮಗ್ರ ಕಾರ್ಯ ಪ್ರವೃತ್ತಿಗಳ ಮತ್ತು ಅಂಶಗಳ ಕಾರ್ಯಪ್ರವೃತ್ತಿಯ ಪರಮಧ್ಯೇಯ. ಆ ಧ್ಯೇಯವೇ ರಚನೆ ಮತ್ತು ಕ್ರಿಯೆಗಳ ಉದ್ದೇಶ. ಅದನ್ನು ಮುಟ್ಟುವುದೇ ಸಮಗ್ರ ಕಾರ್ಯ ಪ್ರವೃತ್ತಿಗಳ ಮತ್ತು ಅಂಶಗಳ ಕಾರ್ಯಪ್ರವೃತ್ತಿಯ ಪರಮಧ್ಯೇಯ. ಈ ಧ್ಯೇಯ ವಾದವನ್ನು ಒಂದು ಬಗೆಯ ಕ್ರಿಯಾವಾದವೆಂದು ಭಾವಿಸಬಹುದು. ಇಂಥ ಕ್ರಿಯಾವಾದ ಚಿತ್‍ಪ್ರಧಾನವಾದಕ್ಕೂ ಏಕತಾವಾದಕ್ಕೂ ಹಬ್ಬಿರುವಂತೆ ವಾಸ್ತವವಾದಕ್ಕೂ ಅನೇಕತಾವಾದಕ್ಕೂ ಹಬ್ಬಿದೆ. ಜರ್ಮನಿಯ ಪ್ರಸಿದ್ಧ ತಾತ್ತ್ವಿಕನಾದ ಹೆಗೆಲನ ತತ್ತ್ವ ಚಿತ್‍ಪ್ರಧಾನ ಏಕತಾವಾದವಾದರೆ, ಜರ್ಮನಿಯ ಇನ್ನೊಬ್ಬ ಪ್ರಖ್ಯಾತ ತಾತ್ವಿಕನಾದ ಷೋಪೆನ್‍ಹೌರನದು ಸಂಕಲ್ಪ ಪ್ರಧಾನ ಕ್ರಿಯಾವಾದ. ಜೇಮ್ಸ್ ವಾರ್ಡ್ ಎಂಬ ಆಂಗ್ಲೇಯನ ತತ್ತ್ವ ಚಿತ್‍ಪ್ರಧಾನ ಅನೇಕತಾವಾದಕ್ಕೆ ನಿದರ್ಶನ. ಪಪ್ ಅಲೆಕ್ಸಾಂಡರ್ ಎಂಬುವನ ವಿಕಾಸವಾದ ವಾಸ್ತವಕ್ರಿಯಾವಾದಕ್ಕೆ ಉದಾಹರಣೆ ಎ.ಎನ್. ವೈಟ್‍ಹೆಡ್ ಆಧುನಿಕ ಕ್ರಿಯಾವಾದಗಳನ್ನು ಅರಿಸ್ಟಾಟಲನ ಕ್ರಿಯಾವಾದದೊಡನೆ ಸಮನ್ವಯಗೊಳಿಸಿದ್ದಾನೆ. ಇವನದು ಒಂದು ದೃಷ್ಟಿಯಿಂದ ವಾಸ್ತವವಾದ, ಇನ್ನೊಂದು ದೃಷ್ಟಿಯಿಂದ ಧ್ಯೇಯವಾದ; ಒಂದು ದೃಷ್ಟಿಯಿಂದ ಅದು ಏಕತಾವಾದ, ಇನ್ನೊಂದು ದೃಷ್ಟಿಯಿಂದ ಅನೇಕತಾವಾದ, ಹೀಗೆ ಅದು ಅನೇಕ ದೃಷ್ಟಿಗಳನ್ನು ಸಮನ್ವಯ ಮಾಡುವ ಕ್ರಿಯಾವಾದ. ಆತ ತನ್ನ ಒಂದು ಮುಖ್ಯ ಗ್ರಂಥಕ್ಕೆ ಪೋಸಸ್ ಅಂಡ್ ರಿಯಾಲಿಟಿ ಎಂಬ ಹೆಸರಿಟ್ಟು ಕಾರ್ಯಗತಿಗೆ ಆದ್ಯ ಸ್ಥಾನ ಕೊಟ್ಟಿದ್ದಾನೆ.

IV ಜೀವಶಾಸ್ತ್ರದಲ್ಲಿ ಡಾರ್ವಿನ್ನನ ವಿಕಾಸವಾದ ಹುಟ್ಟಿದ ಮೇಲೆ ಕ್ರಿಯಾವಾದ ಇನ್ನೊಂದು ರೂಪ ತಾಳಿತು. ಸನ್ನಿವೇಶಕ್ಕೆ ಹೊಂದಿಕೊಳ್ಳುವುದೇ ಒಂದು ಪ್ರಾಣಿಯ ಅಥವಾ ಸಸ್ಯದ ಉಳಿವಿಗೂ ಬೆಳೆವಿಗೂ ಕಾರಣ. ಸರಿಯಾಗಿ ಹೊಂದಿಕೊಂಡದ್ದು ಉಳಿಯುತ್ತದೆ. ಹೊಂದಿಕೊಳ್ಳದ್ದು ಅಳಿಯುತ್ತದೆ. ಒಂದು ಪ್ರಾಣಿಯ ಅಂಗರಚನೆ ಈ ಹೊಂದಿಕೆಗೆ ಅನುಸಾರವಾಗಿ ಬದಲಾಯಿಸುತ್ತದೆ. ಈಗಿನ ಕುದುರೆಯ ವಂಶಕ್ಕೆ ಮೂಲವಾದ ಪ್ರಾಣಿಯ ಕಾಲಿನಲ್ಲಿ ಒಂದು ದೊಡ್ಡ ಮುಂಗೊರಸಿಗೆ ಸೇರಿದಂತೆ ಅದರ ಹಿಂದೆ ಅದಕ್ಕಿಂತ ಸಣ್ಣದಾದ ಹಿಂಗೊರಸುಗಳಿದ್ದುವು. ಈ ಹಿಂಗೊರಸುಗಳಿಂದ ಅದರ ಓಟಕ್ಕೆ ಯಾವ ರೀತಿಯ ಅನುಕೂಲವೂ ಇರಲಿಲ್ಲ. ಕೆಲಸವಿಲ್ಲದ್ದರಿಂದ ಅವು ಕ್ರಮಕ್ರಮವಾಗಿ ಸಣ್ಣವಾಗಿ ಹಿಂದಕ್ಕೆ ಸರಿದು ಈಗ ಕೇವಲ ಅವಶೇಷಗಳಾಗಿ ಉಳಿದಿವೆ. ಹೀಗೆಯೇ ತೀರ ಸರಳವಾದ ಜೀವಿಯಿಂದ ಹಿಡಿದು ಸಂಕೀರ್ಣ ದೇಹಪಡೆದ ಮಾನವನವರೆಗೆ, ಕಾರ್ಯಪ್ರವೃತ್ತಿಗೆ ಅನುಗುಣವಾಗಿ ಅಂಗಗಳ ಮತ್ತು ಇಡೀ ದೇಹದ ರಚನೆ ಮಾರ್ಪಡುತ್ತಿರುವುದನ್ನು ಕಾಣಬಹುದು. ಡಾರ್ವಿನ್ನನ ವಿಕಾಸವಾದದಿಂದ ಪ್ರೇರಿತವಾಗಿ ತತ್ತ್ವಶಾಸ್ತ್ರದಲ್ಲಿ ಹೊಸಬಗೆಯ ಕ್ರಿಯಾವಾದಗಳು ಹುಟ್ಟಿಕೊಂಡವು. ಫ್ರಾನ್ಸ್ ದೇಶದ ಪ್ರಸಿದ್ದ ತಾತ್ತ್ತ್ತ್ವಿಕನಾದ ಬರ್ಗ್‍ಸನ್ನನ ಸೃಷ್ಟ್ಯಾತಂಕ ಕ್ರಿಯಾವಾದ ಅವುಗಳಲ್ಲಿ ಒಂದು. ಇನ್ನೊಂದು ಬಗೆಯ ಕ್ರಿಯಾವಾದವನ್ನು ರೂಪಿಸಿದವ ಅಮೇರಿಕದ ತಾತ್ತ್ವಿಕ ಜಾನ್ ಡ್ಯೂಯಿ. ಸತ್ತಿನಲ್ಲಾಗಲಿ ಜ್ಞಾನದಲ್ಲಾಗಲಿ ಸತ್ತ್ವವಿರುವುದು ಅದರ ಕ್ರಿಯಾಕಾರಿತ್ವದಲ್ಲೇ-ಎಂಬುದು ಇವರ ವಾದ. ಯಾವುದಾದರೂ ಇದೆ ಎಂದು ನಾವು ಬಗೆಯಬೇಕಾದರೆ ಅದು ಪರಿಣಾಮಕಾರಿಯಾಗಿರಬೇಕು. ಯಾವ ಭಾವನೆಯನ್ನೇ ಆಗಲಿ ಅದು ಸತ್ಯ ಎಂದು ನಾವು ಸ್ಥಿರಪಡಿಸಬೇಕಾದೆ ಅದರಿಂದ ನಾವು ನಿರೀಕ್ಷಿಸಬಹುದಾದ ಫಲ ದೊರೆಯಬೇಕು. ಜೀವನದಲ್ಲಿ ಪರಿಣಾಮಕಾರಿಯಾಗುವುದೇ ಸತ್ಯದ ಹೆಗ್ಗುರುತು. ಜ್ಞಾನ ಕೇವಲ ಬೆಳಕಲ್ಲ, ಅದು ಒಂದು ಶಕ್ತಿ, ಕ್ರಿಯಾಕಾರಕ ಸಾಧನ ಅಥವಾ ಕರಣ. ಆದ್ದರಿಂದ ಡ್ಯೂಯಿ ತನ್ನ ಜ್ಞಾನತತ್ತ್ವವನ್ನು ಕರಣತತ್ತ್ವವೆಂದು ಕರೆದಿದ್ದಾನೆ. ಡ್ಯೂಯಿಗೆ ಪ್ರೇರಕವಾದದ್ದು ವಿಲಿಯಮ್ ಜೇಮ್ಸ್‍ನ ಫಲವಾದವೆಂಬ ಕ್ರಿಯಾವಾದ.

V ಡಾರ್ವಿನ್ನನ ವಿಕಾಸವಾದ ಎಲ್ಲ ಶಾಸ್ತ್ರಗಳ ಮೇಲೂ ತನ್ನ ಪ್ರಭಾವವನ್ನು ಬೀರಿತಾಗಿ ಕ್ರಿಯಾವಾದ ಕೇವಲ ಇರವಿನ ತತ್ತ್ವ ಮತ್ತು ಜ್ಞಾನತತ್ತ್ವಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ತತ್ತ್ವಶಾಸ್ತ್ರಜ್ಞರು ಯಾರೂ ತಮ್ಮ ತತ್ತ್ವವನ್ನು ಫಂಕ್ಷನಲಿಸಂ ಎಂದು ಕರೆದಿರಲಿಲ್ಲ. ಈ ಹೆಸರು ವಿಶೇಷವಾಗಿ ಉಪಯೋಗವಾಗಿರುವುದು ಜೀವಿ ವಿಜ್ಞಾನದಲ್ಲಿ ಮತ್ತು ಮನಃಶ್ಯಾಸ್ತ್ರ, ಸಮಾಜಶಾಸ್ತ್ರಗಳಲ್ಲಿ. ಕ್ರಿಯಾಪರಿಣಾಮವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಷಯವನ್ನು ವಿಶ್ಲೇಷಿಸುವ ವಿಧಾನ ವಿಶೇಷವಾಗಿ ಸಮಾಜಶಾಸ್ತ್ರದಲ್ಲಿ ಬಳಕೆಗೆ ಬಂತು. ಈ ವಿಧಾನಕ್ಕೆ ಫಂಕ್ಷನಲ್ ಅನ್ಯಾಲಿಸೀಸ್ ಎಂದು ಹೆಸರು. ಫಂಕ್ಷನಲಿಸಂ ಎಂಬ ಈ ಹೊಸ ಕ್ರಿಯಾವಾದವನ್ನು ಆಕ್ಚುಯಾಲಿಟಿ ಥಿಯೊರಿ ಎಂಬ ಅರಿಸ್ಟಾಟಲನ ಕ್ರಿಯಾವಾದದಿಂದ ಬೇರ್ಪಡಿಸಲು ಅದಕ್ಕೆ ವೃತ್ತಿವಾದ ಅಥವಾ ವ್ಯಾಪಾರವಾದ ಎಂಬ ಹೆಸರನ್ನು ಕೊಡುವುದರಲ್ಲಿ ಹೆಚ್ಚು ಔಚಿತ್ಯವಿದೆ. ಈ ವಾದ ಸ್ಟ್ರಕ್ಚರಲಿಸಂ ಎಂಬ ರಚನಾಪ್ರಧಾನವಾದಕ್ಕೆ ಪ್ರತಿಯಾಗಿ ಹುಟ್ಟಿಕೊಂಡದ್ದು. ವಸ್ತು, ಸಮಾಜ, ವ್ಯಕ್ತಿ ಅಥವಾ ಘಟಕ ಯಾವುದೇ ಆಗಲಿ, ಅವು ಭೌತಿಕವಾದುವಾಗಲಿ, ದೈಹಿಕವಾದುವಾಗಲಿ, ಮಾನಸಿಕವಾದುವಾಗಲಿ, ಆಧ್ಯಾತ್ಮಿಕವಾದುವಾಗಲಿ ಅವುಗಳ ಸಾಧನೆ, ಯಶಸ್ಸು ಅಥವಾ ಬೆಲೆ ಅವುಗಳ ಅಂಗಾಂಗಗಳ ಅಂಶಾಂಗಗಳ ರಚನೆ ಮತ್ತು ಅವುಗಳ ಕಾರ್ಯಪ್ರವೃತ್ತಿಯನ್ನು ಅನುಸರಿಸಿರುತ್ತವೆ. ಒಂದು ಭೌತವಸ್ತುವಿನಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಾದ ಸರಳ ವಸ್ತುಗಳು ಅಂಗಗಳಾಗಿ ಸೇರಿ ಇರುವಂತೆ, ದೇಹದಲ್ಲಿ ಹಲವು ಅಂಗಗಳು ಸೇರಿ ಇರುವಂತೆ ಎಲ್ಲೆಲ್ಲೂ ಭಾಗಗಳಿಂದ ಕೂಡಿದ ರಚನೆ ಇದೆ. ಅವುಗಳ ಒಂದೊಂದು ಭಾಗದ ರಚನೆಯೂ ಇಡೀ ವಸ್ತುವಿನ ರಚನೆಯೂ ಒಂದು ಕ್ರಿಯೆಗೆ, ವ್ಯಾಪಾರಕ್ಕೆ ಅಥವಾ ವೃತ್ತಿಗೆ ಸಾಧನ. ರಚನೆ ಮತ್ತು ಕಾರ್ಯಪ್ರವೃತ್ತಿ ಎರಡೂ ವಾಸ್ತವವಾದುವು. ಇದನ್ನು ಎಲ್ಲ ಪಕ್ಷದವರೂ ಒಪ್ಪಿದ್ದಾರೆ. ಆದರೆ ಜಿಜ್ಞಾಸೆಗೆ ಕಾರಣವಾದ ಪ್ರಶ್ನೆ ಇದು. ರಚನೆ ಮುಖ್ಯವೋ ಅಥವಾ ವೃತ್ತಿ ಮುಖ್ಯವೋ ಎಂಬುದು. ರಚನೆ ಕಾರ್ಯಪ್ರವೃತ್ತಿಗೆ ಅಧೀನವೆಂಬುದು ವೃತ್ತಿ ಪ್ರಧಾನವಾದಿಗಳ ನಿಲುವು. ಕಾರ್ಯಪ್ರವೃತ್ತಿಗಿಂತ ರಚನೆ ಮುಖ್ಯವೆಂಬುದು ಸ್ಟ್ರಕ್ಚರಲಿಸ್ಟರು ಎಂಬ ರಚನಾಪ್ರಧಾನವಾದಿಗಳ ನಿಲುವು.

ವೃತ್ತಿವಾದಿಗಳಲ್ಲೂ ಮತಭೇದಗಳಿವೆ. ಕಾರ್ಯಪ್ರವೃತ್ತಿ ಸಮಗ್ರ ಘಟಕಕ್ಕೆ ಸೇರಿದ್ದು ಎಂಬುದು ಒಂದು ಏಕತಾವಾದ. ಆಡಳಿತ ವೃತ್ತಿ ರಾಜ್ಯದ ಕೇಂದ್ರ ಸರ್ಕಾರಕ್ಕೆ ಸಂಪೂರ್ಣವಾಗಿ ಸೇರಿದ್ದು ಎಂಬುದು ರಾಜಕೀಯ ಪ್ರಪಂಚದ ಏಕತಾವಾದ. ಸಮಾಜದಲ್ಲಿ ಶಕ್ತಿ ಇರುವುದು ಕೇವಲ ವ್ಯಕ್ತಿಯ ಬಲದಲ್ಲಲ್ಲ. ಇಡೀ ಸಮಾಜದ ಬಲದಲ್ಲಿ-ಎಂಬುದು ಸಮಾಜಶಾಸ್ತ್ರದ ಏಕತಾವಾದ. ಒಂದೇ ಕೇಂದ್ರದಲ್ಲಿ ಆಡಳಿತ ಕಾರ್ಯ ಪ್ರವೃತ್ತಿ ಅಡಗಿರುವುದು ಜನರ ಹಿತಕ್ಕೆ ಹಾನಿಕರ, ಅದು ಒಂದು ಪೀಡೆ, ಆಡಳಿತ ಪ್ರವೃತ್ತಿ ವ್ಯಕ್ತಿಗಳಲ್ಲಿ, ಸಣ್ಣ ಸಣ್ಣ ಸ್ಥಳೀಯ ಗುಂಪುಗಳಲ್ಲಿ, ಸಂಸ್ಥೆಗಳಲ್ಲಿ ಹಂಚಿಕೆಯಾಗಿದ್ದರೇನೇ ಜನರಿಗೆ ಸೌಖ್ಯ ಎಂಬುದು ರಾಜಕೀಯ ಜಗತ್ತಿನ ಅನೇಕತಾವಾದ. ಒಂದೇ ಆದ ಆತ್ಮದಲ್ಲಿ ಎಲ್ಲ ವ್ಯಾಪಾರಗಳೂ ಕೇಂದ್ರಿತವಾದಾಗಲೇ ಎಲ್ಲ ವ್ಯಾಪಾರಗಳೂ ಅದಕ್ಕೆ ಅಧೀನವಾಗಿದ್ದಾಗಲೇ ಆ ಆತ್ಮದ ಜೀವನ ಸುಗಮವಾಗುವುದು ಎಂಬುದು ಮನಃಶ್ಯಾಸ್ತ್ರದ ಏಕತಾವಾದ. ಬಿಡಿಬಿಡಿ ವರ್ತನೆಗಳ ಸಾಫಲ್ಯದಿಂದಲೇ ಒಂದು ವ್ಯಕ್ತಿಯ ಜೀವನ ಸುಗಮವಾÀಗುವುದು ಎಂಬುದು ಮನಃಶ್ಯಾಸ್ತ್ರದ ಅನೇಕತಾವಾದ.

(i) ಮನಃಶ್ಯಾಸ್ತ್ರದಲ್ಲಿ ವೃತ್ತಿವಾದ : ಜೀವವಿಜ್ಞಾನದಲ್ಲಿ ಕಾಣಿಸಿಕೊಂಡ ವೃತ್ತಿವಾದ ಮೊಟ್ಟಮೊದಲಿಗೆ ಹಬ್ಬಿದ್ದು ಮನಃಶ್ಯಾಸ್ತ್ರಕ್ಕೆ ಇ.ಬಿ. ಫೆಚ್‍ನರ್ ಎಂಬುವನ ರಚನಾಪ್ರಧಾನವಾದಕ್ಕೆ ಪ್ರತಿಯಾಗಿ ವೃತ್ತಿಪ್ರಧಾನವಾದವನ್ನು ಮಂಡಿಸಿದವ ಇ.ಎ. ಎಂಜೆಲ್. ಅನಂತರ ಅದನ್ನು ಮುಂದುವರಿಸಿದವರು ಜಾನ್ ಡ್ಯೂಯಿ ಮತ್ತು ವಿಲಿಯಮ್ ಜೇಮ್ಸ್. ಇವರ ಮನ:ಶ್ಯಾಸ್ತ್ರ ಗ್ರಂಥಗಳು ಈ ಶತಮಾನದ ಆದಿಯಲ್ಲಿ ತುಂಬ ಮೆಚ್ಚಿಗೆಯಾಗಿದ್ದುವು.

ಮನಃಶ್ಯಾಸ್ತ್ರದ ವೃತ್ತಿಪ್ರಧಾನವಾದದ ಮುಖ್ಯ ಅಂಶಗಳು ಇವು : 1 ಮಾನಸಿಕ ಕ್ರಿಯೆಗಳ ವರ್ಣನೆಯಲ್ಲಿ ಅವುಗಳ ಉಪಯೋಗ ಪ್ರಧಾನವಾಗಿರಬೇಕು. ಮಾನಸಿಕ ವಿಷಯಗಳ ರಚನೆಗಿಂತಲೂ ಅವು ಜೀವನದಲ್ಲಿ ಹೀಗೆ ಫಲಕಾರಿಗಳಾಗಿವೆ ಎಂಬುದನ್ನು ತಿಳಿಸುವುದು ಮನಃಶ್ಯಾಸ್ತ್ರದ ಮುಖ್ಯ ಕರ್ತವ್ಯ. 2. ಮನಃಶ್ಯಾಸ್ತ್ರದ ವಿಷಯ ಚೇತನವೂ ಅಲ್ಲ ಮಾನಸಿಕ ವರ್ತನೆಗಳನ್ನು ತಿಳಿಯುವ ವಿಧಾನ ಅಂತರಂಗಾವೇಕ್ಷಣ ವಿಧಾನವೂ ಅಲ್ಲ. ಮನಶ್ಯಾಸ್ತ್ರ ಪರಿಶೀಲಿಸಬೇಕಾದ ವಿಷಯ ವರ್ತನೆ (ಬಿಹೇವಿಯರ್). ಅದನ್ನು ತಿಳಿದುಕೊಳ್ಳಲು ಉಪಯೋಗಿಸುವ ವಿಧಾನ ಪ್ರಯೋಗವಿಧಾನ. ವೃತ್ತಿ ಪ್ರಧಾನ ವಾದಿಗಳಲ್ಲಿ ಕೆಲವರು ಅಂತರಂಗದ ಆವೇಕ್ಷಣವನ್ನೂ ಒಂದು ಸಾಧನವೆಂದು ಒಪ್ಪಿಕೊಂಡರೂ ಅದರಿಂದ ತಿಳಿದದ್ದು ಪ್ರಯೋಗ ವಿಧಾನದಿಂದ ತಿಳಿದಿದ್ದಕ್ಕೆ ಅಧೀನವಾಗಿರಬೇಕೆಂದು ಹೇಳಿ ಪ್ರಯೋಗ ವಿಧಾನದ ಶ್ರೇಷ್ಠತೆಯನ್ನು ಎತ್ತಿ ಹಿಡಿದರು.

ಕಾಲಕ್ರಮದಲ್ಲಿ ವೃತ್ತಿವಾದದ ಸತ್ಯಾಂಶವನ್ನು ಇತರ ಪಕ್ಷಗಳೂ ಅಂಗೀಕರಿಸಿದ್ದರಿಂದ ಆ ವಿಚಾರದಲ್ಲಿ ವಾದ ಪ್ರತಿವಾದಗಳ ಘರ್ಷಣೆ, ಕಾವು ಅಡಗಿತು. ಅದೊಂದು ಪ್ರತ್ಯೇಕ ಪಕ್ಷವಾಗಿ ನಿಲ್ಲಲಿಲ್ಲ. ಮನಃಶ್ಯಾಸ್ತ್ರಜ್ಞರು ರಚನೆಯೂ ಮುಖ್ಯ, ಪ್ರವೃತ್ತಿಯೂ ಮುಖ್ಯವೆಂದು ಒಪ್ಪಿಕೊಂಡು ಈಗ ರಚನಾಮನಃಶ್ಯಾಸ್ತ್ರವನ್ನೂ ವೃತ್ತಿ ಮನಶಾಸ್ತ್ರವನ್ನೂ ಮನಶ್ಯಾಸ್ತ್ರದ ಎರಡು ಅಗತ್ಯ ಅಧ್ಯಯನ ಭಾಗಗಳಾಗಿ ಬೆಳೆಸಿದ್ದಾರೆ.

(ii) ವಾಸ್ತುಶಿಲ್ಪದಲ್ಲಿ ವೃತ್ತಿಪ್ರಧಾನವಾದ : ಮನೆಗಳಲ್ಲಿ, ಕಚೇರಿಗಳಲ್ಲಿ ಕಾರ್ಖಾನೆಗಳಲ್ಲಿ ಉಪಯೋಗಿಸುವ ಪೀಠೋಪಕರಣಗಳ ನಿರ್ಮಾಣದಲ್ಲಿ ಸೌಂದರ್ಯಕ್ಕಿಂತ ಉಪಯೋಗ ಮುಖ್ಯವೆಂಬ ಭಾವನೆ ವಿಶೇಷವಾಗಿ ಪ್ರಚಾರಕ್ಕೆ ಬಂದದ್ದು ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲಿ. ಆದರೂ ಈ ಭಾವನೆ ತೀರ ಹೊಸದಲ್ಲ. ಮಧ್ಯಯುಗದ ಕೋಟೆ ಕೊತ್ತಳಗಳ ನಿರ್ಮಾಣದಲ್ಲಿ, ಕಾರ್ಖಾನೆಗಳ ಕಟ್ಟಡಗಳ ನಿರ್ಮಾಣದಲ್ಲಿ ಉಪಯೋಗವೇ ಪ್ರಧಾನವಾಗಿತ್ತು. ಇಪ್ಪತ್ತನೆಯ ಶತಮಾನದಲ್ಲಿ ಅದು ಎಲ್ಲ ಬಗೆಯ ಕಟ್ಟಡಗಳ ನಿರ್ಮಾಣದಲ್ಲೂ ಅನುಸರಿಸಬೇಕಾದ ಸಾರ್ವತ್ರಿಕ ಸೂತ್ರವಾಯಿತು. ರೂಪ ವೃತ್ತಿಯ ಅನುಯಾಯಿ ಎಂಬ ಪ್ರಸಿದ್ಧ ಸೂತ್ರವನ್ನು 1880ರಲ್ಲಿ ಘೋಷಿಸಿದಾತ ಆಧುನಿಕ ವಾಸ್ತುಶಿಲ್ಪಿ ಲೂಯೀ ಎಚ್. ಸಲವನ್. ಮನೆ ಎಂಬುದು ವಾಸಕ್ಕಾಗಿ ನಿರ್ಮಾಣವಾದ ಯಂತ್ರ ಎಂದು 1920ರಲ್ಲಿ ಸಾರಿದಾತ ವಾಸ್ತುಶಿಲ್ಪಿ ಕಲೆ. ಕಾರ್ಬೂಸರ್. ಹೀಗೆಂದ ಮಾತ್ರಕ್ಕೆ ಆತ ಕಟ್ಟಡ ಸುಂದರವಾಗಿರಬೇಕೆಂಬುದನ್ನು ನಿರಾಕರಿಸಿದನೆಂದು ಭಾವಿಸಕೂಡದು. ಉಪಯುಕ್ತವಲ್ಲದ ಕಟ್ಟಡ ಸುಂದರವಾಗಿರಲಾರದು. ಪ್ರವೇಶಕ್ಕೆ ಅಗತ್ಯವಾದ ತಲೆಬಾಗಿಲು, ಗಾಳಿ ಬೆಳಕು ಸಂಚರಿಸಲು ಅಗತ್ಯವಾದ ಕಿಟಕಿಗಳು ಇಲ್ಲದ ಕಟ್ಟಡ ಸುಂದರವಲ್ಲ. ಉಪಯೋಗಕ್ಕೆ ತಕ್ಕಂತೆ ಅದರ ಒಟ್ಟು ರೂಪವೂ ಬಿಡಿ ಭಾಗಗಳ ರೂಪವೂ ಹೊಂದಿ, ಸುಂದರವಾಗಿರಬೇಕು. ಸೌಂದರ್ಯ ಉಪಯೋಗಕ್ಕೆ ಹೊಂದಿಕೊಳ್ಳಬೇಕು, ಅದಕ್ಕೆ ಆಂತರಿಕವಾಗಿರಬೇಕು. ಅಲಂಕಾರಗಳು ಬಲಾತ್ಕಾರವಾಗಿ ಹೊರಗಿನಿಂದ ತಂದು ಹೇರಿದಂತೆ ತೋರಕೂಡದು.

      (iii) ಇತರ ಕಲೆಗಳಲ್ಲಿ ವೃತ್ತಿವಾದ : ಇತರ ಕಲೆಗಳಲ್ಲೂ ವೃತ್ತಿವಾದ ಸ್ವಲ್ಪಮಟ್ಟಿಗೆ ತಲೆಹಾಕಿದೆ. ರಷ್ಯದ ಕಲಾಮೀಮಾಂಸೆಯಲ್ಲಿ ವೃತ್ತಿವಾದಕ್ಕೆ ವಿಶೇಷ ಸ್ಥಾನವಿದೆ. ಕಲೆ ಇರುವುದು ಕಲೆಗಾಗಿಯೇ ಅಲ್ಲ. ಜನರ ಹಿತಕ್ಕೆ ಸಾಧನವಲ್ಲದ, ಕೇವಲ ಶ್ರೀಮಂತರ ವಿನೋದಕ್ಕಾಗಿ ಹುಟ್ಟಿದ ಕಲೆ ನಿಜವಾದ ಕಲೆಯಲ್ಲ. ಅದು ಬಡಬಗ್ಗರ ಜೀವನವನ್ನು, ಹೃದಯವನ್ನು ಹದಗೊಳಿಸಬೇಕು. ಹೀಗೆ ಜನಜೀವನವನ್ನು ಹದಗೊಳಿಸಬೇಕಾದರೆ ಶ್ರೀಮಂತರಿಂದ ಬಡಜನರಿಗೆ ಆಗುತ್ತಿರುವ ಅನ್ಯಾಯವನ್ನೂ ಕಷ್ಟಗಳ ಪರಂಪೆಯನ್ನೂ ಅವುಗಳಿಂದ ಉಂಟಾಗಬಹುದಾದ ದುಃಖಗಳನ್ನೂ ಕಲೆ ಪ್ರತಿಬಿಂಬಿಸಬೇಕು. ಜನರ ಹೃದಯದಲ್ಲಿ ಸಮತಾಭಾವನೆ ಉಕ್ಕಿ ಹರಿಯುವಂತೆ ಕಾವ್ಯವನ್ನು ರಚಿಸಬೇಕು. ಕಾವ್ಯ, ನಾಟ್ಯ, ಸಂಗೀತ ಶಿಲ್ಪ-ಎಲ್ಲವೂ ಜೀವನದ ಪುರುಷಾರ್ಥಗಳನ್ನು, ಮುಖ್ಯವಾಗಿ ಆರ್ಥಿಕ ಪುರುಷಾರ್ಥವನ್ನು ಸಾಕ್ಷಾತ್ಕರಿಸಬೇಕು. ಇದು ರಷ್ಯನರ ಅಭಿಪ್ರಾಯ.				(ಜೆ.ಎಚ್.)
     (iv) ಸಮಾಜಶಾಸ್ತ್ರದಲ್ಲಿ ಕ್ರಿಯಾವಾದ : ಸಮಾಜಶಾಸ್ತ್ರದಲ್ಲಿ ಕ್ರಿಯೆ ಎಂಬ ಪದ ವೃತ್ತಿ, ವ್ಯಾಪಾರ, ಒಂದು ಗುರಿಯ ಸಾಧನೆಗೆ ಅಗತ್ಯವಾದ ಕಾರ್ಯ, ಕ್ರಿಯಾಕಾರಕಧರ್ಮ-ಎಂಬ ಅರ್ಥಗಳಲ್ಲಿ ಉಪಯೋಗವಾಗಿದೆಯೆಂದು ಆಗಲೇ ತಿಳಿಸಿದೆಯಷ್ಟೆ. ಇತ್ತೀಚೆಗೆ ಸಮಾಜಶಾಸ್ತ್ರಜ್ಞರು ಜೀವವಿಜ್ಞಾನ ಉಪಯೋಗಿಸಿದ ಕ್ರಿಯೆ ಎಂಬ ಅರ್ಥವನ್ನು ಗಣಿತಶಾಸ್ತ್ರದ ಶ್ರಿತ ಎಂಬ ಕ್ರಿಯಾಕಲ್ಪನೆಗೆ ಅಳವಡಿಸಿಕೊಂಡರು. ಇದನ್ನು ಅನುಸರಿಸಿ ಸಾಮಾಜಿಕ ವ್ಯವಸ್ಥೆಯ ಭಿನ್ನ ಕಾರ್ಯಗಳನ್ನು ಅಥವಾ ಬೆಲೆಗಳನ್ನು ವಿಶ್ಲೇಷಿಸಿ ಅವುಗಳಿಗೆ ಹೊಂದಿಕೆಯಾಗುವಂಥ ಚಲಪರಿಣಾಮ ಅಥವಾ ಅವಲಂಬಿ ಪರಿಣಾಮವನ್ನು ನಿರ್ಧರಿಸುವ ವಿಧಾನ ಬಳಕೆಗೆ ಬಂತು. ಈ ವಿಶ್ಲೇಷಣ ವಿಧಾನವನ್ನು ರಚನಾ ಕ್ರಿಯಾತ್ಮಕ ವಿಶ್ಲೇಷಣೆ ಎಂದು ಕರೆಯುವುದುಂಟು. ಮೆರೀಯನ್ ಜೆ. ಲೆವೀ ಈ ರಚನಾ ಕ್ರಿಯಾತ್ಮಕ ವಿಶ್ಲೇಷಣೆಯನ್ನೂ ವೈಜ್ಞಾನಿಕ ವಿಶ್ಲೇಷಣೆಯನ್ನೂ ಸಮಾನಾರ್ಥಕ ಪದಗಳಾಗಿ ಉಪಯೋಗಿಸಿದ್ದಾನೆ. ಇವನಂತೆ ಎಲ್ಲ ಸಮಾಜಶಾಸ್ತ್ರಜ್ಞರೂ ಈ ಶ್ರಿತ ವಿಧಾನಕ್ಕೆ ಪ್ರಾಶಸ್ತ್ಯ ಕೊಟ್ಟಿಲ್ಲ. ಜೀವಶಾಸ್ತ್ರ ಕ್ರಿಯೆಗೆ ಕೊಟ್ಟಿರುವ ಅರ್ಥಕ್ಕೆ ಅವರು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಒಟ್ಟಿನಿಂದ ವಿಶೇಷವಾಗಿ ಅಧ್ಯಯನ ನಡೆದಿರುವುದು ಆದಿವಾಸಿ ಸಮಾಜದ ವಿಚಾರವಾಗಿ.

(ಅ) ಜೀವಶಾಸ್ತ್ರದಲ್ಲಿ ಹುಟ್ಟಿದ ವಿಕಾಸ ಕ್ರಿಯಾಕಲ್ಪನೆಯನ್ನು ಅನುಸರಿಸಿ ಆದಿವಾಸಿಗಳ ಸರಳ ಸಾಮಾಜಿಕ ಜೀವನ ರೀತಿಗೆ ಅವರ ರಚನೆ ಕಾರಣವೆಂಬುದನ್ನು ಹರ್ಬರ್ಟ್ ಸ್ಪೆನ್ಸ್‍ರ್ ತೋರಿಸಿದ. ಆದಿವಾಸಿಗಳ ಸಮಾಜದ ಸಂಖ್ಯೆ ಆಧುನಿಕ ಸಮಾಜದ ಸಂಖ್ಯೆಯಂತೆ ಹೆಚ್ಚಿನದಲ್ಲ. ಅದರ ರಚನೆಯೂ ಸರಳವಾದುದು. ಆದ್ದರಿಂದ ಅಂಥ ಸಮಾಜದಲ್ಲಿ ವೃತ್ತಿ ವಿಭಜನೆ ಆಧುನಿಕ ಸಮಾಜದಲ್ಲಿರುವಂತೆ ಹೆಚ್ಚಾಗಿ ಕಾಣುವುದಿಲ್ಲ. ಸರಳರಚನೆಯುಳ್ಳ ಎರೆಹುಳುವಿನಂಥ ಜೀವಿಯಲ್ಲಿ ಅರ್ಧಭಾಗ ಕಡಿದು ಹೋದರೂ ಇನ್ನರ್ಧ ಬದುಕಿಯೇ ಇದ್ದು ಕಾಲಕ್ರಮದಲ್ಲಿ ಪೂರ್ಣಶರೀರಿಯಾಗಿ ಬೆಳೆಯುತ್ತದೆ. ಸಂಕೀರ್ಣ ರಚನೆಯುಳ್ಳ ಸಸ್ತನಿಯ ಅರ್ಧಭಾಗ ಕತ್ತರಿಸಿ ಹೋದರೆ ಅದರ ಜೀವನಕಾರ್ಯ ಕುಂಠಿತವಾಗುತ್ತದೆ; ಅದು ಸಾಯಲೂಬಹುದು. ಸರಳರಚನೆಯ ಆದಿವಾಸಿ ಗುಂಪಿನಿಂದ ಕೆಲವರು ಬಿಟ್ಟುಹೋದರೂ ಆ ಸಮಾಜಕ್ಕೆ ಧಕ್ಕೆ ಇಲ್ಲ. ಅವರು ಮಾಡುತ್ತಿದ್ದ ಕೆಲಸವನ್ನು ಇತರರು ಮಾಡಿಕೊಂಡು ಹೋಗುತ್ತಾರೆ. ಏಕೆಂದರೆ ಆ ಸಮಾಜದ ಕೆಲಸಗಳು ಕೆಲವೇ; ವ್ಯವಸಾಯ, ಮೀನುಗಾರಿಕೆ, ಬೇಟೆ, ಬಟ್ಟೆಯನ್ನು ನೇಯುವುದು ಮುಂತಾದ ಕೆಲಸಗಳನ್ನು ಇಡೀ ಕುಟುಂಬದಲ್ಲಿ ಪ್ರತಿಯೊಬ್ಬನೂ ಕಲಿತಿರುತ್ತಾನೆ. ಉದಾಹರಣೆಗೆ, ಪೆರುವಿನ ಆದಿವಾಸಿಗಳೆಲ್ಲರೂ ತಮ್ಮ ಸರಳಜೀವನದ ಅಗತ್ಯಗಳನ್ನು ಪೂರೈಸಲು ಶಕ್ತರಾಗಿದ್ದರು. ಆದರೆ ಸಂಕೀರ್ಣ ರಚನೆಯುಳ್ಳ ಆಧುನಿಕ ಸಮಾಜದಲ್ಲಿ ವೃತ್ತಿ ವಿಭಜನೆ ವಿಶೇಷವಾಗಿರುವುದರಿಂದ ವಿದ್ಯುಚ್ಛಕ್ತಿಯವರು ನೀರು ಸರಬರಾಜಿನವರು ಆಹಾರವನ್ನು ಒದಗಿಸುವ ಅಂಗಡಿಯವರು ಮುಷ್ಕರ ಹೂಡಿದರೆ ಒಂದು ಕೈಗಾರಿಕೆಗೆ ಬೇಕಾದ ಕಚ್ಚಾ ಮಾಲು ಬರುವುದು ನಿಂತು ಹೋದರೆ ಜನರ ಜೀವನ ಸ್ಥಗಿತವಾಗುತ್ತದೆ. ಹೀಗೆ ಪ್ರಾಣಿಜೀವನದ ವಿಕಾಸಕ್ರಮವನ್ನೂ ಮಾನವ ಸಾಮಾಜಿಕ ಜೀವನದ ವಿಕಾಸ ಕ್ರಮವನ್ನೂ ಅವಲೋಕಿಸಿದರೆ ಎರಡರಲ್ಲೂ ಜೀವನ ಸಂಕೀರ್ಣವಾದಷ್ಟೂ ಅವುಗಳ ಅಂಗಗಳ ಪರಸ್ಪರಾವಲಂಬನೆಯೂ ಹೆಚ್ಚುತ್ತದೆ. ಪ್ರಾಣಿಗಳಾಗಲಿ ಸಮಾಜ ಸಂಸ್ಥೆಗಳಾಗಲಿ ವೈವಿಧ್ಯವಿಲ್ಲದ ಹಂತದಿಂದ ಹೆಚ್ಚು ವೈವಿಧ್ಯವುಳ್ಳ ಹಂತಕ್ಕೆ ಏರಿದಾಗ ಅವುಗಳ ಜೀವನಕಾರ್ಯ ಸಂಕೀರ್ಣವಾಗುತ್ತದೆ ಎಂದು ಸ್ಪೆನ್ಸ್‍ರ್ ಪ್ರತಿಪಾದಿಸಿದ.

(ಆ) ಒಂದು ಸಾಮಾಜಿಕ ವಿಷಯದ ಅರ್ಥವನ್ನು ಅದರಿಂದ ಸಮಾಜಕ್ಕೆ ಆಗುವ ಪ್ರಯೋಜನದ ಮೂಲಕ ತಿಳಿಸಿದವರು ಹರ್ಬರ್ಟ್‍ಸ್ಪೆನ್ಸ್‍ರ್ ಮತ್ತು ಆಗಸ್ಟ್ ಕಾಂಟ್. ಮಾನವ ವಿವಿಧ ಸಂಸ್ಥೆಗಳನ್ನು ಸೃಷ್ಟಿಸಿದುದಕ್ಕೆ ಅವುಗಳಿಂದ ಅವನಿಗೆ ಆಗುವ ಪ್ರಯೋಜನವೇ ಕಾರಣ. ಜೀವನ ಮಟ್ಟ ಏರಿದಂತೆಲ್ಲ ಪ್ರಯೋಜನಕಾರಿಗಳಾದ ಸಂಸ್ಥೆಗಳ ಬಗ್ಗೆ ಅವನ ಸಹಕಾರ ಮನೋಭಾವವೂ ಬೆಳೆಯಿತು. ಸ್ಪೆನ್ಸರನ ಈ ಅಭಿಪ್ರಾಯದಲ್ಲಿರುವ ನ್ಯೂನತೆಯನ್ನು ಪ್ರಸಿದ್ಧ ಸಮಾಜ ಶಾಸ್ತ್ರಜ್ಞನಾದ ಡಕ್ರ್ಹೀಮ್ ತೋರಿಸಿದ. ಒಂದು ವಿಷಯದ ಉಪಯೋಗವನ್ನು ತಿಳಿಸಿದ ಮಾತ್ರಕ್ಕೆ ಅದು ಹೇಗೆ ಉದ್ಭವಿಸಿತು, ಹೇಗೆ ರೂಪುಗೊಂಡಿತು, ಏತಕ್ಕೋಸ್ಕರ ಆ ರೂಪ ಮತ್ತು ವ್ಯವಸಾಯವನ್ನು ಹೊಂದಿದೆ-ಎಂಬುದನ್ನು ತಿಳಿಸಿದಂತಾಗುವುದಿಲ್ಲ. ಕೇವಲ ನಮ್ಮ ಅಗತ್ಯಗಳು ಸಂಸ್ಥೆಗಳ ಅಸ್ತಿತ್ವಕ್ಕೆ ಕಾರಣಗಳಲ್ಲ. ಒಂದು ಕುಟುಂಬದ ಸುಭದ್ರತೆಯ ಅಗತ್ಯವನ್ನು ತಿಳಿದ ಮಾತ್ರಕ್ಕೇ ಆ ಕುಟುಂಬದ ಜೀವನ ಸುಖಮಯವಾಗುವುದಿಲ್ಲ. ಒಂದು ಸರ್ಕಾರ ದೃಢತೆಯ ಅಗತ್ಯವನ್ನು ಅರಿತ ಮಾತ್ರಕ್ಕೆ ಅದು ಸುಭದ್ರವಾಗುವುದಿಲ್ಲ. ಆ ಅಗತ್ಯಗಳನ್ನು ಅರಿತು, ಅದನ್ನು ಹೊಂದುವ ಕಾರ್ಯಕ್ರಮವನ್ನು ಪ್ರಯತ್ನಪೂರ್ವಕವಾಗಿ ಆಚರಣೆಗೆ ತಂದಾಗ ಮಾತ್ರ ಕುಟುಂಬದ ಮತ್ತು ಸರ್ಕಾರದ ಸುಭದ್ರತೆ ಏರ್ಪಡುತ್ತದೆ. ಒಂದು ಸಮಾಜಸಂಸ್ಥೆಯ ಆರಂಭದ ಅಥವಾ ಹುಟ್ಟಿನ ಕಾರಣಗಳನ್ನು ಅರಿತು ತನ್ಮೂಲಕ ಅದರ ಉಪಯೋಗವನ್ನು ತಿಳಿಯುವ ರೀತಿ ಉತ್ತಮವಾದುದು. ಇವೆರಡೂ ಪ್ರತ್ಯೇಕವಾದವು. ಆದರೂ ಎರಡನ್ನೂ ಸಮಗ್ರವಾಗಿ ಅರಿತಾಗಲೇ ಅಧ್ಯಯನ ಪೂರ್ಣವಾಗುತ್ತದೆ. ಒಂದು ವಸ್ತು ಉಪಯೋಗವಿಲ್ಲದೆ ಇರುವುದು ಸಾಧ್ಯ. ಅದರ ಅಸ್ತಿತ್ವಕ್ಕೂ ಅದರ ಉಪಯೋಗಕ್ಕೂ ಸಂಬಂಧವಿಲ್ಲದಿರುವುದೂ ಸಾಧ್ಯ. ಹಿಂದೆ ಒಂದು ಕಾಲದಲ್ಲಿ ಅದು ನಮ್ಮ ಅಗತ್ಯಗಳ ಪೂರೈಕೆಗೆ ಅನಿವಾರ್ಯವಾಗಿದ್ದು ಇಂದು ಅದರಿಂದ ಯಾವ ಪ್ರಯೋಜನವೂ ಇಲ್ಲದಿರಬಹುದು. ಅನುಪಯುಕ್ತವಾದ ಪ್ರಾಣಿಗಳ ಅವಶೇಷಗಳಿಗಿಂತ ಅನುಪಯುಕ್ತವಾದ ಸಾಮಾಜಿಕ ಅವಶೇಷಗಳು ಹೆಚ್ಚಾಗಿವೆಯೆಂದು ಡಕ್ರ್ಹೀಮ್ ತೋರಿಸಿದ್ದಾನೆ. ಉದಾಹರಣೆಗೆ, ಹಿಂದೆ ನ್ಯಾಯಸ್ಥಾನದಲ್ಲಿ ಒಬ್ಬ ಮಾಡಿದ ಪ್ರಮಾಣ ಆತ ಹೇಳಿದ್ದು ಸತ್ಯವೆಂದು ಭಾವಿಸಲು ಆದೇಶವಾಗಿತ್ತು. ಇಂದು ಆ ಪ್ರಮಾಣ ಬಾಹ್ಯಾಡಂಬರವಾಗಿದೆ. ಒಂದು ಸಂಸ್ಥೆಯ ಅರ್ಥವ್ಯಾಪ್ತಿ ಕಾಲಕ್ರಮದಲ್ಲಿ ಬದಲಾಯಿಸಬಹುದು. ರೋಮನರ ಕಾನೂನಿಗೆ ಸಂಗತವಾಗಿ ವಿವಾಹ ನಡೆದಿದ್ದರೆ ಮಾತ್ರ ತಂದೆಗೆ ಮಕ್ಕಳ ಮೇಲಿನ ಅಧಿಕಾರ ಲಭಿಸುತ್ತಿತ್ತು. ಆದರೆ ಕಾಲಕ್ರಮೇಣ ಈ ಸೂತ್ರದ ಅರ್ಥವ್ಯಾಪ್ತಿ ಬದಲಾಯಿಸಿತು. ಕ್ರಮಬದ್ಧವಾದ ವಿವಾಹದಿಂದ ಮಕ್ಕಳ ಪೋಷಣೆಯ ಹಕ್ಕು ಮಾತ್ರ ತಂದೆಗೆ ದೊರೆಯುವಂತಾಯಿತು. ವಿವಾಹ ಸೂತ್ರದ ಪದಗಳಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ಅದರ ಅರ್ಥ ಬದಲಾಯಿಸಿತು. ಆದ್ದರಿಂದ ಡಕ್ರ್ಹೀಮ್ ಒಂದು ಸಾಮಾಜಿಕ ವಿಷಯಕ್ಕೆ ನಿಮಿತ್ತವಾದುದನ್ನು ಅದರ ಉಪಯೋಗದಿಂದ ಪ್ರತ್ಯೇಕಿಸುವುದು ಸಾಧು ಹಾಗೂ ತರ್ಕಬದ್ಧ ಮಾರ್ಗವೆಂದು ತೋರಿಸಿದ. ನಾವು ಸಾಮಾಜಿಕ ಅಗತ್ಯಕ್ಕೂ ಹೊಂದಿಕೆ ಅಥವಾ ಸಂವಾದವಿದೆಯೆ ಎಂಬುದನ್ನು ಪರಿಶೀಲಿಸಬೇಕು. ಈ ವಿಷಯದ ಪರಿಣಾಮಗಳು ಉದ್ದೇಶಪೂರಿತವಾಗಿರಬಹುದು ಅಥವಾ ಇಲ್ಲದೆ ಇರಬಹುದು. ಉದ್ದೇಶದ ವಿಷಯ ಸಮಾಜಶಾಸ್ತ್ರಜ್ಞನಿಗೆ ಮುಖ್ಯವಲ್ಲ. ಅಲ್ಲಿ ಕ್ರಿಯೆ ಎಂಬ ಪದ ಕಾರ್ಯಕಾರಿ ಎಂಬ ಅರ್ಥದಲ್ಲಿ ಬಳಕೆಗೆ ಬಂದಿದೆ. ಗುರಿ ಅಥವಾ ಉದ್ದೇಶ ಎಂಬ ಅರ್ಥದಲ್ಲಲ್ಲ. ಡಕ್ರ್ಹೀಮ್ ಮತ ಕ್ರಿಯಾವಿಧಾನಗಳನ್ನು ಅಪರಾಧ, ಶಿಕ್ಷೆ, ಅವುಗಳಲ್ಲಿ ಪಾತ್ರ ವಹಿಸಿದ ವ್ಯಕ್ತಿಗಳ ವೈವಿಧ್ಯ ಮತ್ತು ಅವುಗಳ ಕಾರ್ಯಕಾರಿತ್ವಗಳನ್ನು ವಿಶದಪಡಿಸಿದ. ಕಾರ್ಯಕಾರಣ ವಿಶ್ಲೇಷಣೆಯನ್ನು ಕ್ರಿಯಾತ್ಮಕ ವಿಶ್ಲೇಷಣೆಯಿಂದ ಪ್ರತ್ಯೇಕಿಸಿ ಅವು ಪರಸ್ಪರ ಪೂರಕಗಳೇ ಹೊರತು ವಿರುದ್ಧವಲ್ಲವೆಂಬುದನ್ನು ತೋರಿಸಿದ.

(ಇ) ಕ್ರಿಯಾತ್ಮಕ ವಿಶ್ಲೇಷಣೆಯನ್ನು ಇ.ಬಿ. ಟಿಯ್ಲರ್, ಡಬ್ಲ್ಯೂ, ರಾಬರ್ಟ್‍ಸನ್‍ಸ್ಮಿತ್, ಎಫ್, ಬೋಅನ್, ಎ.ಎಲ್. ಕ್ರೋಬರ್ ಮುಂತಾದವರು ಸಮಾಜಶಾಸ್ತ್ರದಲ್ಲಿ ಬಳಕೆಗೆ ತಂದರೂ ಅದು ಒಂದು ಸುವ್ಯವಸ್ಥಿತ ವೈಜ್ಞಾನಿಕ ರೂಪವನ್ನು ಪಡೆದಿರಲಿಲ್ಲ. ಅದನ್ನು ವೈಜ್ಞಾನಿಕ ಸಾಧನವಾಗಿ ವ್ಯವಸ್ಥೆಗೊಳಿಸಿದವರಲ್ಲಿ ಇಂಗ್ಲೆಂಡಿನ ಬ್ರೋನೀಸ್ ಲಾ, ಮೆಲಿನೋಸ್ಕಿ ಮತ್ತು ಎ.ಆರ್.ರ್ಯಾಡ್‍ಕ್ಲಿಫ್ ಪ್ರಮುಖರು.

      ಮೆಲಿನೋಸ್ಕಿ ಸಂಸ್ಕøತಿಯ ವಿವಿಧ ಭಾಗಗಳು ಸಮಾಜದ ವ್ಯವಸ್ಥೆಗೆ ಅನುಕೂಲತೆಗಳನ್ನು ಒದಗಿಸಿಕೊಡುವ ರೀತಿಯನ್ನು ಕ್ರಿಯಾತ್ಮಕ ವಿಶ್ಲೇಷಣೆಯ ದೃಷ್ಟಿಯಿಂದ ವಿವರಿಸಿದ. ಆತನ ಅಭಿಪ್ರಾಯದಲ್ಲಿ ಕ್ರಿಯಾತ್ಮಕ ವಿಶ್ಲೇಷಣೆಗೆ ವಿಕಾಸತತ್ತ್ವದ ಅಧ್ಯಯನ ಆವಶ್ಯಕ. ವಿಕಾಸತತ್ತ್ವ ಕೇವಲ ಕಾಲಕ್ರಮವಾದ ಬದಲಾವಣೆಗಳನ್ನು ಗಮನಿಸಿ ಕರ್ತವ್ಯವನ್ನು ನಿರ್ವಹಿಸುವ ರೀತಿಯನ್ನು ವಿವರಿಸುತ್ತದೆ. ಆದುದರಿಂದ ಸರಿಯಾದ ರೀತಿಯಲ್ಲಿ ವಿಚಾರ ಮಾಡಿದರೆ ವಿಕಾಸ ತತ್ತ್ವದೃಷ್ಟಿಯ ವಿವರಣೆ ಕ್ರಿಯಾತ್ಮಕ ವಿಶ್ಲೇಷಣೆಗೆ ಸಹಾಯ ಮಾಡುತ್ತದೆ.

ಸಂಸ್ಕøತಿಯ ವಿವಿಧ ಭಾಗಗಳ ನಿಕಟ ಸಂಬಂಧವನ್ನು ಮೆಲಿನೋಸ್ಕಿ ಆದಿವಾಸಿಗಳ ಜೀವನದ ರೀತಿಯನ್ನು ತೆಗೆದುಕೊಂಡು ವಿವರಿಸಿದ. ಆದಿವಾಸಿಗಳ ಜೀವನ ಕೇವಲ ಆಹಾರ ಮತ್ತು ಉಡುಪುಗಳನ್ನು ಪಡೆಯುವ ಮಾರ್ಗಗಳಿಗೆ ಮಾತ್ರ ಮೀಸಲಾಗಿಲ್ಲ. ಅದರಲ್ಲಿ ಧರ್ಮ, ಶ್ರದ್ಧೆ, ಸಂಪ್ರದಾಯ, ನಿಷ್ಠೆ ಸೌಂದರ್ಯ-ಎಲ್ಲ ಮಿಳಿತವಾಗಿವೆ. ಅವರ ಊಟೋಪಚಾರಗಳಲ್ಲಿ, ಉಡಿಗೆತೊಡಿಗೆಗಳಲ್ಲಿ, ನೃತ್ಯ ಸಂಗೀತಗಳಲ್ಲಿ ನಾವದನ್ನು ಕಾಣುತ್ತೇವೆ. ಫ್ರೇಸರ್ ಕ್ರಾಲಿ ಮತ್ತು ಜೇನ್ ಹ್ಯಾರಿಸನ್-ಈ ಇಬ್ಬರು ವಿದ್ವಾಂಸರು ಆದಿವಾಸಿಗಳ ಧರ್ಮವನ್ನು ವಿವರವಾಗಿ ಪರಿಶೀಲಿಸಿ, ಜೀವನದ ಸಂದಿಗ್ಧ ಸನ್ನಿವೇಶಗಳಲ್ಲಿ ಧರ್ಮದ ಮತ್ತು ನೀತಿಯ ಪಾತ್ರವೇನೆಂಬುದನ್ನು ತಿಳಿಸಿದ್ದಾರೆ.

ಸಮುದಾಯ ದೃಢವಾಗಿದ್ದು ಸಂಸ್ಕøತಿ ಅವಿಚ್ಛಿನ್ನವಾಗಿ ಸಾಗಬೇಕಾದರೆ ಅಗತ್ಯವಾಗಿ ಇರಬೇಕಾದ ಪರಿಸ್ಥಿತಿಗಳನ್ನು ಮೆಲಿನೋಸ್ಕಿ ಸಮುದಾಯದ ಸಾಂಸ್ಕøತಿಕ ಅಗತ್ಯಗಳೆಂದು ಕರಿದಿದ್ದಾನೆ.

(ಈ) ಇಂಗ್ಲೆಂಡಿನ ಸುಪ್ರಸಿದ್ಧ ಮಾನವಶಾಸ್ತ್ರಜ್ಞನಾದ ರ್ಯಾಡ್‍ಕ್ಲಿಫ್ ಬ್ರೌನ್ ಕ್ರಿಯೆಯ ಕಲ್ಪನೆಯನ್ನು ಸುವ್ಯವಸ್ಥಿತ ರೀತಿಯಲ್ಲಿ ವಿವರಿಸಿದ್ದಾನೆ. ಕ್ರಿಯೆ ಒಂದು ರಚನೆಯ ಅವಿಚ್ಛಿನ್ನತೆಗೆ ಸಹಾಯ ಮಾಡುತ್ತದೆ. ಇದರಿಂದ ಕ್ರಿಯಾತ್ಮಕ ಏಕತೆ ಅಥವಾ ಕ್ರಿಯಾತ್ಮಕ ಅಖಂಡತೆ ಎಂಬ ಒಂದು ಕಲ್ಪನೆಗೆ ಅವಕಾಶವಿದೆಯೆಂದು ಆತ ತನ್ನ ಅಧ್ಯಯನದಲ್ಲಿ ಪ್ರತಿಪಾದಿಸಿದ್ದಾನೆ. ಮೆಲಿನೋಸ್ಕಿ ಸಾಂಸ್ಕøತಿಕ ಅಗತ್ಯಗಳ ಹಿನ್ನೆಲೆಯಲ್ಲಿ ಕ್ರಿಯಾತ್ಮಕವಾದವನ್ನು ನಿರೂಪಿಸಿದ್ದಾನಷ್ಟೆ. ರ್ಯಾಡ್‍ಕ್ಲಿಫ್ ರಚನೆಯ ಕಲ್ಪನೆಯ ಅಗತ್ಯವನ್ನು ಮತ್ತು ರಚನೆ ಮತ್ತು ಕ್ರಿಯೆಗಳ ಪರಸ್ಪರ ನಿಕಟಸಂಬಂಧವನ್ನು ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿ ಮೆಲಿನೋಸ್ಕಿಯ ಅಭಿಪ್ರಾಯವನ್ನು ಇನ್ನೂ ಮುಂದುವರಿಸಿ ಪರಿಷ್ಕರಿಸಿದ್ದಾನೆ. ಸಮಾಜ ಬಹು ಸಂಕೀರ್ಣವಾದ ಒಂದು ವ್ಯವಸ್ಥೆ. ಅಲ್ಲಿನ ಕ್ರಿಯೆ ಪ್ರಕ್ರಿಯೆಗಳು ಅದರ ಭದ್ರತೆಗೆ ಪ್ರಗತಿಗೆ ಕಾರಣವಾಗುವಂತೆ ಅದರ ಅವನತಿಗೂ ಕಾರಣವಾಗುತ್ತವೆ ಎಂಬ ಅಂಶವನ್ನು ಮೆರಟನ್ ಸೂಚಿಸಿದ್ದಾನೆ.

ರ್ಯಾಡ್‍ಕ್ಲಿಫ್ ಬ್ರೌನ್ ಸಾಮಾಜಿಕ ಕ್ರಿಯೆಗಳನ್ನು ಗುಂಪಿನ ಆವಶ್ಯಕತೆಗಳ ಹೊಂದಾಣಿಕೆಯ ದೃಷ್ಟಿಯಿಂದ ನಿರೂಪಿಸಿ ಅದಕ್ಕೆ ಮೂಲ ಸಂಕಲ್ಪವಾದದ ಭಾವನೆಯ ಅಗತ್ಯವಿಲ್ಲವೆಂಬುದನ್ನು ಸ್ಪಷ್ಟಪಡಿಸಿದ. ಸಾಮಾಜಿಕ ಸಮಸ್ಥಿತಿ ಎಂಬ ಭಾವನೆಯನ್ನು ಸಾಮಾಜಿಕ ಕ್ರಿಯೆಗೆ ಸಂಬಂಧಿಸಿದಾಗ ಸಮಾಜದಲ್ಲಿ ಕೆಲವು ವಿಚಾರಗಳಲ್ಲಿ ವ್ಯತಿರಿಕ್ತತೆ ಕಂಡುಬಂದರೂ ಒಟ್ಟಿನಲ್ಲಿ ಒಂದು ಸಮಾಜದ ಜೀವನದಲ್ಲಿ ಸಮಸ್ಥಿತಿಯನ್ನುಂಟು ಮಾಡುವ ವಿವಿಧ ಅಂಶಗಳೂ ಕಾರ್ಯಾಚರಣೆಯಲ್ಲಿರುತ್ತವೆಂಬ ಅಂಶ ಹೊರಪಡುತ್ತದೆಂದು ಅವನ ಮತ. ಟಾಲ್‍ಕಾರ್ಟ್ ಪಾರ್ಸನ್ಸ್ ಎಂಬಾತ ಕ್ರಿಯೆಯ ಕಲ್ಪನೆಯನ್ನು ಸಂಸ್ಥೆಗಳ ಅಧ್ಯಯನಕ್ಕೆ ಉತ್ತಮವಾದ ಉಪಕರಣವೆಂದು ತಿಳಿಸಿದ್ದಾನೆ. ಕ್ರಿಯೆ ತತ್ತ್ವದ ಸಹಾಯದಿಂದ ಒಂದು ವಸ್ತುವಿಗೂ ಮತ್ತು ಅದರ ಚಟುವಟಿಕೆಗೂ ಇರುವ ಸಂಬಂಧವನ್ನು ಸ್ಪಷ್ಟಪಡಿಸಬಹುದು. ಒಂದು ವಸ್ತುವಿನ ಅಥವಾ ಸಂಸ್ಥೆಯ ರಚನೆಯ ಸ್ಥಾಯಿಕ ಭಾಗಗಳಿಗೂ ಅದರ ಚಲನಾತ್ಮಕ ಚಟುವಟಿಕೆಗಳಿಗೂ ಸಂಬಂಧವನ್ನು ಸೂಚಿಸುವ ಭಾವನೆಯೇ ಕ್ರಿಯೆ ಎಂದು ಆತನ ವಾದ.

ವಿಮರ್ಶಾತ್ಮಕ ಕ್ರಿಯಾವಾದದ ವಿವರಣೆಯನ್ನು ರಾಬರ್ಟ್ ಮೆರ್ಟನ್ನನ ಬರೆವಣಿಗೆಗಳಲ್ಲಿ ಕಾಣುತ್ತೇವೆ. ಕ್ರಿಯಾತ್ಮಕವಾದವನ್ನು ಸವಿಸ್ತಾರವಾಗಿ ವಿವರಿಸಲು ಒಂದು ಮಾದರಿಯನ್ನು ಈತ ಉಪಯೋಗಿಸಿದ್ದಾನೆ. ಸಾಧಾರಣವಾಗಿ ಕ್ರಿಯಾತ್ಮಕ ವಾದಕ್ಕೆ ಮೂರು ಆಧಾರ ಪ್ರತಿಜ್ಞೆಗಳ ಅಗತ್ಯವಿದೆ : (i) ಸಮಾಜದ ಕ್ರಿಯಾತ್ಮಕ ಏಕತೆ ಅಥವಾ ಅಖಂಡತೆ, (ii) ಸಂಸ್ಕøತಿಯ ಎಲ್ಲ ಭಾಗಗಳಲ್ಲಿರುವ ಕ್ರಿಯೆ, (iii) ಪ್ರತಿಯೊಂದು ಸಂಸ್ಕøತಿಯ ಭಾಗವೂ ಅತ್ಯಾವಶ್ಯಕವಾಗಿ ಬೇಕಾದ ಕ್ರಿಯೆಯನ್ನು ಹೊಂದಿರುವುದು. ಇವನ್ನು ರ್ಯಾಡ್‍ಕ್ಲಿಫ್ ಬ್ರೌನ ಮತ್ತು ಮೆಲಿನೋಸ್ಕಿಗಳ ಬರೆವಣಿಗೆಗಳಲ್ಲಿ ಸ್ಫುಟವಾಗಿ ನೋಡಬಹುದು. ಮೆರ್ಟನ್ ಕ್ರಿಯೆಗಳಲ್ಲಿ ಹಲವು ಬಗೆಗಳನ್ನು ವಿಶದಪಡಿಸಿದ್ದಾನೆ ; ಅವು (i) ವ್ಯಕ್ತ ಕ್ರಿಯೆಗಳು, (ii) ಗುಪ್ತ ಕ್ರಿಯೆಗಳು, (iii) ದುಷ್ಪರಿಣಾಮಕ ಕ್ರಿಯೆಗಳು.

	ಎಫ್.ಎಂ. ಕಾನಿಕನ್ ಎಂಬಾತ ಕ್ರಿಯಾತ್ಮಕ ವಿಶ್ಲೇಷಣೆಗಳ ವಿವಿಧ ಅಧ್ಯಯನಗಳನ್ನು ಪರಿಶೀಲಿಸಿ ಸರ್ವವ್ಯಾಪಕವಾದ ಮೂರು ಪ್ರಮುಖ ವಿಷಯಗಳನ್ನು ತಿಳಿಸಿದ್ದಾನೆ : (i) ಕ್ರಿಯಾತ್ಮಕ ವಿಶ್ಲೇಷಣೆ ಸಮಾಜಶಾಸ್ತ್ರದ ಸಾಮಾನ್ಯ ಕಲ್ಪನೆಗಳ ಆಧಾರದ ಮೇಲೆ ನಿರೂಪಿತವಾಗಿದೆ. (ii) ಎಲ್ಲ ಸಾಮಾಜಿಕ ರೂಪಿಕೆಗಳು ಸಾಮಾಜಿಕ ವ್ಯವಸ್ಥೆಯ ಸಮಗ್ರತೆಗೆ ಅಥವಾ ದೃಢತೆಗೆ, ಇಲ್ಲವೇ ಹೊಂದಿಕೆಗೆ ಸಹಾಯಕವಾಗುತ್ತವೆ. (iii) ಸಾಮಾಜಿಕ ವ್ಯವಸ್ಥೆ ಸ್ವಯಂ ನಿಯಂತ್ರಿಕ ವ್ಯವಸ್ಥೆ.

(ಉ) ಕ್ರಿಯಾತ್ಮಕವಾದದ ಕೆಲವು ನ್ಯೂನತೆಗಳನ್ನು ಸಮಾಜಶಾಸ್ತ್ರಜ್ಞರು ಹೇಳಿದ್ದಾರೆ. ಕ್ರಿಯಾತ್ಮಕ ವಿಶ್ಲೇಷಣೆ ಹೊಸ ಹೆಸರೇ ಹೊರತು, ಅದರಲ್ಲಿ ಯಾವ ನವ್ಯತೆಯೂ ಇಲ್ಲವೆಂದು ಡೇವಿಸನ ಅಭಿಪ್ರಾಯ.

     ಒಂದು ಸಮಾಜ ವ್ಯವಸ್ಥೆಯ ವಿವಿಧ ಭಾಗಗಳು ಅತ್ಯಾವಶ್ಯಕವಾಗಿದ್ದರೆ, ಅವನ್ನು ಬದಲಾಯಿಸಿದರೆ ಸಮಾಜದ ವ್ಯವಸ್ಥೆಗೆ ಅಪಾಯ ಒದಗುತ್ತದೆ. ಆದುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಲ್ಲವೆಂದು ತಿಳಿಯಬೇಕಾಗುತ್ತದೆ. ಆದರೆ ವಾಸ್ತವಿಕವಾಗಿ ಎಲ್ಲ ಸಮಾಜಗಳಲ್ಲಿಯೂ ಬದಲಾವಣೆಗಳಾಗುತ್ತವೆ. ಕ್ರಿಯಾತ್ಮಕವಾದದ ಆಧಾರಪ್ರತಿಜ್ಞೆಗಳನ್ನು ಕಟ್ಟುನಿಟ್ಟಾದ ಅರ್ಥದಲ್ಲಿ ತೆಗೆದುಕೊಂಡರೆ ಸಮಾಜದ ಪ್ರಗತಿಗೆ ಅವಕಾಶವಿರುವುದಿಲ್ಲ. ಆದರೆ ರ್ಯಾಡ್‍ಕ್ಲಿಫ್ ಬ್ರೌನ್, ಮೆರ್ಟನ್ ಮೊದಲಾದವರ ವಾದವನ್ನು ಗಮನಿಸಿದರೆ ಕ್ರಿಯಾತ್ಮಕವಾದದ ಮೇಲೆ ಆರೋಪಿತವಾಗಿರುವ ದೋಷಗಳಲ್ಲಿ ತಿರುಳಿಲ್ಲದಿರುವುದು ಸ್ಪಷ್ಟವಾಗುತ್ತದೆ

ಒಟ್ಟಿನಲ್ಲಿ ಆಧುನಿಕ ಸಮಾಜಶಾಸ್ತ್ರದ ಅಧ್ಯಯನದಲ್ಲಿ ಇತ್ತೀಚಿನ ದಶಕಗಳಲ್ಲಿ ರಚನಾ ಕ್ರಿಯಾತ್ಮಕ ವಿಶ್ಲೇಷಣೆ ಅತ್ಯಂತ ವ್ಯಾಪಕವಾಗಿದೆ. ಈ ತತ್ತ್ವವನ್ನು ಆದಷ್ಟು ಕಟ್ಟುನಿಟ್ಟಾಗಿ ಅವಲಂಬಿಸಿ ಮಾಡಿರುವ ಅಧ್ಯಯನಗಳಲ್ಲಿ ಮೆಲಿನೋಸ್ಕಿ, ರ್ಯಾಡ್‍ಕ್ಲಿಫ್ ಬ್ರೌನ್, ಜೆ.ಪಿ. ಜೊಹಾನಸೆನ್, ರೇಪೊಪೊರ್ಟ್ ಮತ್ತು ಮೊನಿಕ ವಿಲ್ಸನ್ ಇವರ ಗ್ರಂಥಗಳು ಗಣನೀಯವೆನಿಸಿವೆ.

ಅವರು ರಚಿಸಿರುವ ಸಾಮಾಜಿಕ ಸಂಘವಾದ ಗೌಟಲ್ಲಿನ ವಿಷಯವನ್ನು ರಚನಾ ಕ್ರಿಯಾತ್ಮಕತತ್ತ್ವದ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ. ಗೌಟಲ್ಲಿನ ಮುಖ್ಯವಾದ ಕಾರ್ಯ ಯುವಕರು ಸಮಾಜದ ಕರ್ತವ್ಯಗಳನ್ನು ನಿರ್ವಹಿಸುವ ವಿಷಯದಲ್ಲಿ ದಕ್ಷತೆಯನ್ನು ಸಂಪಾದಿಸಲು ಅನುಕೂಲವಾಗುವಂತೆ ವಿವಿಧ ವಿಷಯಗಳಲ್ಲಿ ಅವರಿಗೆ ಶಿಕ್ಷಣವನ್ನು ಒದಗಿಸುವುದು. ಗೌಟಲ್ಲಿನ ಅನುಭವ ಮತ್ತು ಶಿಕ್ಷಣದ ಪ್ರಭಾವದಿಂದ ಯುವಕರು ಸಮಾಜ ಜೀವನದಲ್ಲಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ಸಮುದಾಯದ ಶ್ರೇಯಸ್ಸಿಗೆ ದುಡಿಯುವ ಮನೋವೃತ್ತಿಯನ್ನು ಹೊಂದುತ್ತಾರೆ. ನಾಗಪುರ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಟಿ.ಎಸ್. ವಿಲ್ಕಿನ್‍ಸನ್ ಗೌಟಲ್ಲಿನಲ್ಲಿ ಯುವಕರಿಗೆ ಕೊಡುವ ಹೆಸರಿಗೂ ಅವರು ಸಮಾಜದಲ್ಲಿ ನಿರ್ವಹಿಸಬೇಕಾಗುವ ಪಾತ್ರಗಳ ಕರ್ತವ್ಯಗಳಿಗೂ ಇರುವ ಸಂಬಂಧವನ್ನು ಕ್ರಿಯಾತ್ಮಕ ತತ್ತ್ವದ ಹಿನ್ನಲೆಯಲ್ಲಿ ನಿರೂಪಿಸಿದ್ದಾನೆ.

(ಊ) ಭಾರತ ಸ್ವತಂತ್ರವಾದ ಮೇಲೆ ಮಾನವಶಾಸ್ತ್ರದ ಅಭ್ಯಾಸದಲ್ಲಿ ಹೆಚ್ಚು ಶ್ರದ್ಧೆ ಮತ್ತು ಚಟುವಟಿಕೆಗಳನ್ನು ಕಾಣುತ್ತಿದ್ದೇವೆ. ಇದರ ಪರಿಣಾಮವಾಗಿ ಸಾಮಾಜಿಕ ಮಾನವಶಾಸ್ತ್ರಜ್ಞರ ಗಮನ ಜನಾಂಗಗಳ ಅಧ್ಯಯನದಿಂದ ಗ್ರಾಮಗಳ ಅಧ್ಯಯನಗಳ ಕಡೆಗೆ ಹರಿಯಿತು. ಇವುಗಳಲ್ಲಿ ಪ್ರಮುಖವಾದುವು-ಎಸ್.ಸಿ. ಡೂಬೆಯವರ ಇಂಡಿಯನ್ ವಿಲೇಜ್, ಎ.ಸಿ. ಮಯರ್‍ರವರ ಕ್ಯಾಸ್ಟ್ ಅಂಡ್ ಕಮ್ಯೂನಿಕೇಷನ್ ಇನ್ ಸೆಂಟ್ರಲ್ ಇಂಡಿಯ, ಡಿ.ಎನ್. ಮಜುಂದಾರರ ಕ್ಯಾಸ್ಟ್ ಅಂಡ್ ಕಮ್ಯೂನಿಕೇಷನ್ ಎನ್ ಇಂಡಿಯನ್ ವಿಲೇಜ್, ಎಂ.ಎನ್. ಶ್ರೀನಿವಾಸರು ಸಂಗ್ರಹಿಸಿರುವ ಇಂಡಿಯನ್ ವಿಲೇಜ್, ಮೇಕಿಂ ಮೇರಿಯಟ್ ಸಂಗ್ರಹಿಸಿರುವ ವಿಲೇಜ್ ಇಂಡಿಯ ಮತ್ತು ಶ್ರೀಮತಿ ಇಬ್‍ಸ್ಟ್ರೆನ್‍ರವರ ಎಕನಾಮಿಕ್ ಡೆವಲಪ್‍ಮೆಂಟ್ ಅಂಡ್ ಸೋಷಿಯಲ್ ಚೇಂಜ್, ಇನ್ ಟು ಸೌತ್ ಇಂಡಿಯನ್ ವಿಲೇಜಸ್.

ಮೊದಲಿಗೆ ಭಾರತದಲ್ಲಿ ಮಾನವಶಾಸ್ತ್ರದ ಅಧ್ಯಯನಕ್ಕೆ ಪ್ರೋತ್ಸಾಹ ದೊರಕಿದುದು ಕೇವಲ ಆಡಳಿತದ ದೃಷ್ಟಿಯಿಂದ. ಆಡಳಿತ ಪ್ರವೀಣರು ಜನಾಂಗಗಳ ಜೀವನದ ರೀತಿಯನ್ನು ಅರಿತು, ತಮ್ಮ ಆಡಳಿತ ನೀತಿಯನ್ನು ನಿರೂಪಿಸಲು ಪ್ರಯತ್ನಿಸಿದರು. ಆದುದರಿಂದ, 19ನೆಯ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚಾಗಿ ವ್ಯಾಪಕವಾದ ಸಾಮಾಜಿಕ, ಮಾನವಶಾಸ್ತ್ರ ಆಡಳಿತಗಾರರಿಗೆ ಜನಗಳ ಜೀವನದ ರೀತಿನೀತಿಗಳನ್ನು ಒದಗಿಸಿ ಕೊಡುವ ಕಾರ್ಯಕ್ಕೆ ಸೀಮಿತವಾಗಿತ್ತು. ಅದು ವೈಜ್ಞಾನಿಕ ದೃಷ್ಟಿಯಿಂದ ಯಾವ ಒಂದು ನಿಶ್ಚಿತವಾದ ತತ್ತ್ವದ ಹಿನ್ನೆಲೆಯಲ್ಲಿ ವಿಷಯವನ್ನು ವಿಶ್ಲೇಷಿಸುವ ಗೊಡವೆಗೆ ಹೋಗಲಿಲ್ಲ. ಎಲ್.ಕೆ. ಅನಂತಕೃಷ್ಣಯ್ಯರವರು 1908ರಲ್ಲಿ ಕೊಚ್ಚಿ ಪ್ರದೇಶದ ಜನಾಂಗಗಳು ಮತ್ತು ಜಾತಿಗಳು ಎಂಬ ವಿಷಯವಾಗಿ ನಾಲ್ಕು ಪುಸ್ತಕಗಳನ್ನು ಬರೆದರು. ಇದರಲ್ಲಿ ವಿವಿಧ ಜನಾಂಗಗಳ ಜೀವನದ ರೀತಿಯನ್ನು ವಿವರಿಸಿ, ಸಮಾಜದ ವಿವಿಧ ಸಂಸ್ಥೆಗಳಿಗಿರುವ ಸಂಬಂಧಗಳನ್ನು ನಿರೂಪಿಸಿದರು. ಅನಂತರ ಅವರು ರಾವ್‍ಬಹದ್ದೂರ್ ನಂಜುಂಡಯ್ಯನವರ ಜೊತೆಯಲ್ಲಿ ಮೈಸೂರಿನಲ್ಲಿರುವ ಜಾತಿಗಳ ಪದ್ಧತಿಗಳನ್ನು ನಿರೂಪಿಸಿದರು. 20ನೆಯ ಶತಮಾನದ ಮೊದಲಿನ ದಶಕಗಳಿಂದ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ಅನೇಕ ಮಾನವಶಾಸ್ತ್ರಜ್ಞರು ಆದಿವಾಸಿಗಳ ಜೀವನದ ಬಗೆಯನ್ನು ನಿರೂಪಿಸಿದರು. ಇದರ ಪರಿಣಾಮವಾಗಿ ಹಲವು ಪ್ರಸಿದ್ಧವಾದ ಏಕ ವಿಷಯ ಪ್ರಬಂಧಗಳು (ಮಾನೊಗ್ರ್ಯಾಫ್‍ಗಳು) ರಚಿತವಾದುವು. ಇವು ಹೆಚ್ಚಾಗಿ ವಿವರಣಾತ್ಮಕವಾಗಿವೆ.

ಬಸ್ತಾರಿನ ಮರಿಯಗೊಂಡರ ವಿಚಾರದಲ್ಲಿ ಅಭ್ಯಾಸ ಮಾಡಿದವರಲ್ಲಿ ವೆರಿಯರ್ ಎಲ್ವಿನ್ ಮತ್ತು ಡಿ.ಎಸ್. ಮಜುಂದಾರರು ಮುಖ್ಯರು. ಎಂ.ಎನ್. ಶ್ರೀನಿವಾಸರು ಸೊಸೈಟಿ ಅಂಡ್ ರಿಲಿಜನ್ ಎಮಂಗ್ ಕುಗ್ರ್ಸ್ ಆಫ್ ಸೌತ್ ಇಂಡಿಯ ಎಂಬ ಪುಸ್ತಕದಲ್ಲಿ ಕೊಡವರ ಸಮಾಜದ ರಚನೆಗೂ ಮತ್ತು ಅವರ ಧರ್ಮಕ್ಕೂ ಇರುವ ನಿಕಟ ಸಂಬಂಧವನ್ನು ಅವರ ಸಂಘ ಸಂಸ್ಥೆಗಳ ಕೂಲಂಕಷ ವಿವರಣೆಗಳೊಂದಿಗೆ ವಿಶ್ಲೇಷಿರುವರು. ಎಂ.ಎನ್. ಶ್ರೀನಿವಾಸರು ಅನುಸರಿಸಿದ ಅಧ್ಯಯನದ ಮಾದರಿಯಲ್ಲಿ ಎಚ್.ಎಂ. ಸದಾಶಿವಯ್ಯನವರು ವೀರಶೈವರ ಸಾಮಾಜಿಕ ಜೀವನದಲ್ಲಿ ವೀರಶೈವ ಮಠಗಳ ಪಾತ್ರವನ್ನು ಎ ಕಂಪ್ಯಾರಿಟಿವ್ ಸ್ಟಡಿ ಆಫ್ ಟು ವೀರಶೈವ ಮೊನಾಸ್ಟ್ರೀಸ್ ಎಂಬ ಪುಸ್ತಕದಲ್ಲಿ ವಿವರಿಸಿರುವರು. ಈ ಪುಸ್ತಕದಲ್ಲಿ ಸಮಾಜದ ವಿವಿಧ ಸಂಸ್ಥೆಗಳ ಕಾರ್ಯಗಳಲ್ಲಿ ಧರ್ಮದ ಪಾತ್ರವನ್ನು ವಿವರಿಸಿ, ಕಾಲ ಮತ್ತು ದೇಶಗಳಿಗೆ ಅನುಗುಣವಾಗುವಂತೆ ಮಠಗಳು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿ, ಸಮಾಜದ ಭದ್ರತೆಗೆ ಅನುಕೂಲವಾಗಿರುವ ಅಂಶವನ್ನು ನಿರೂಪಿಸಲಾಗಿದೆ. (ಎಚ್.ಎಂ.ಎಸ್.)