ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಾಕಿ ಬಟ್ಟೆ
ಖಾಕಿ ಬಟ್ಟೆ
ಮಾಸಲು ಹಳದಿ ಅಥವಾ ಕಂದುಬಣ್ಣದ ಒಂದು ರೀತಿಯ ಬಟ್ಟೆ. ಮೊದಲಿಗೆ ಭಾರತದಲ್ಲಿ ರಾಜ್ಯವಾಳುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ಸೈನಿಕರು ಇದನ್ನು ಬಳಸುತ್ತಿದ್ದರು. 1848ನೆಯ ಇಸವಿಯಲ್ಲಿ ಸರ್ ಹ್ಯಾರಿ ಬರ್‍ನೆಟ್ ಲುಂಡ್ಸೆನ್ ಎಂಬಾತ ಭಾರತದಲ್ಲಿದ್ದ ಬ್ರಿಟಿಷ್ ರೆಜಿಮೆಂಟಿನ ಸಮವಸ್ತ್ರವಾಗಿ ಖಾಕಿಯನ್ನು ಬಳಸಲಾರಂಭಿಸಿದ. ಅಲ್ಲಿನ ಮುಂಚೂಣಿ ಪ್ರದೇಶಗಳಲ್ಲಿದ್ದ ಕಾವಲುಪಡೆಯವರು ಇದನ್ನು ಮೊದಲು ಧರಿಸುತ್ತಿದ್ದರು. ಅದಾದ ಮೇಲೆ ಬ್ರಿಟಿಷ್ ಚಕ್ರಾಧಿಪತ್ಯದ ಬೇರೆಲ್ಲ ರೆಜಿಮೆಂಟುಗಳಲ್ಲಿ ಇದನ್ನು ಉಪಯೋಗಿಸಲಾರಂಭಿಸಿದರು. 1830-1902ರ ಅವಧಿಯಲ್ಲಿ ನಡೆದ ದಕ್ಷಿಣ ಆಫ್ರಿಕ ಯುದ್ಧದಲ್ಲಿ ಬ್ರಿಟಿಷ್ ಹಾಗೂ ವಲಸೆ ಬಂದಿದ್ದ ಪಡೆಗಳು ಕಂದು ಮಿಶ್ರಿತವಾದ ಖಾಕಿ ಸಮವಸ್ತ್ರವನ್ನು ಧರಿಸಿ ಯುದ್ಧ ಮಾಡಿದವೆಂದು ಹೇಳಲಾಗಿದೆ. ಖಾಕಿಗೆ ಸೇರು ಎಂದು ಸೈನ್ಯಕ್ಕೆ ಸೇರು ಎನ್ನುವಷ್ಟರಮಟ್ಟಿಗೆ ಇದರ ಬಳಕೆ ಒಂದು ಕಾಲಕ್ಕೆ ಅಧಿಕವಾಗಿತ್ತು.
ಖಾಕಿ ಶಬ್ದ ಉರ್ದು ಅಥಮ ಪರ್ಷಿಯನ್ ಭಾಷೆಯ ಖಾಕ್ (ಮಣ್ಣು) ಎಂಬ ಶಬ್ದದಿಂದ ವ್ಯುತ್ಪನ್ನವಾಗಿದೆ, ಮಣ್ಣು ಬಣ್ಣ ಅಥವ ಮಾಸಲು ಬಣ್ಣವಿರುವುದರಿಂದ ಯುದ್ಧ ಕ್ಷೇತ್ರದಲ್ಲಿ ಇದರಿಂದ ಬಹಳ ಅನುಕೂಲ. ಯೋಧರು ಸುಲಭವಾಗಿ ಶತ್ರುಗಳ ಕಣ್ಣು ತಪ್ಪಿಸಿ (ಕ್ಯಾಮುಫ್ಲೇeóï) ಮುಂದೆಸಾಗಲೂ ಯುದ್ದರಂಗದಲ್ಲಿ ವೈರಿಯ ಎದುರಿಗೆ ತಮ್ಮ ಇರವನ್ನೇ ಮರೆಮಾಚಿ ಬಿಡಲೂ ಇದರಿಂದ ಸಾಧ್ಯ. ನೇಯ್ಗೆಯ ವೈಶಿಷ್ಟ್ಯದಿಂದ ಈ ಬಟ್ಟೆ ಒರಟು ಉಪಯೋಗಕ್ಕೆ ತಕ್ಕುದಾಗಿದ್ದು ಬೆವರನ್ನು ಹೀರುವುದಲ್ಲದೆ ಸೂರ್ಯನ ಬೆಳಕನ್ನು ಚೆನ್ನಾಗಿ ತಡೆಯಬಲ್ಲುದು. ಆದ್ದರಿಂದಲೇ ಸೈನಿಕ ಸಮವಸ್ತ್ರಕ್ಕಾಗಿ ಇದರ ಬಳಕೆ ಉಚಿತವಾಗಿದೆ. ಹೀಗಾಗಿ ಇದು ಬ್ರಿಟಷ್ ಚಕ್ರಾಧಿಪತ್ಯದ ಪಡೆಗಳ ಸರ್ವಮಾನ್ಯ ಸಮವಸ್ತ್ರವಾಯಿತು. ಇದನ್ನು ಸ್ಪ್ಯಾನಿಷ್ ಅಮೆರಿಕನ್ನರ ಕದನದಲ್ಲಿ ಅಮೆರಿಕದ ಪಡೆಗಳು ಉಪಯೋಗಿಸಿದ್ದವು. ಒಂದನೆಯ ಹಾಗೂ ಎರಡನೆಯ ಮಹಾ ಯುದ್ಧಗಳಲ್ಲಿಯೂ ಇದರ ಬಳಕೆಯಾದುದಕ್ಕೆ ದಾಖಲೆಗಳಿವೆ. ಈಗಲೂ ವಿಶ್ವದ ಬಹಳಷ್ಟು ಪಡೆಗಳು ಖಾಕಿಯ ಸಮವಸ್ತ್ರವನ್ನೇ ಧರಿಸುತ್ತವೆ.
1900 ರಿಂದೀಚೆಗೆ ಸಾಮಾನ್ಯವಾಗಿ ಎಲ್ಲ ರೀತಿಯ ನಸುಗಂದು ಇಲ್ಲವೆ ಮಾಸಲು ಹಸಿರು ಬಣ್ಣದ ಬಟ್ಟೆಗಳಿಗೂ ಕ್ಯಾನ್ ವಾಸ್, ಡ್ರಿಲ್ ಅಥವಾ ಹಾಲಂಡ್ ಬಟ್ಟೆಗಳಿಗೂ ಖಾಕಿಯೆಂದು ಕರೆಯುವುದು ರೂಢಿಯಾಗಿದೆ. ಮೊದಲಿಗೆ ಕೇವಲ ಹತ್ತಿಯಿಂದಲೇ ತಯಾರಿಸುತ್ತಿದ್ದ ಖಾಕಿ ಉಡುಪುಗಳನ್ನು ಇತ್ತೀಚೆಗೆ ಉಣ್ಣೆಯಿಂದಲೂ ತಯಾರಿಸುತ್ತಿದ್ದಾರೆ. ಒಂದು ಕಾಲಕ್ಕೆ ಕೇವಲ ಸೈನಿಕರ ಉಡುಪಾಗಿದ್ದ ಖಾಕಿ ಕ್ರಮೇಣ ಕ್ರೀಡಾಪಟುಗಳ, ಕಾರ್ಖಾನೆ ಮೊದಲಾದೆಡೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ, ಬಾಲಚಮೂಗಳ, ಎಂಜಿನಿಯರುಗಳ ಸಮವಸ್ತ್ರವಾಗಿದೆ. ಖಾಕಿ ಬಟ್ಟೆ ಬಣ್ಣ ಹೋಗುವುದಿಲ್ಲ. ಹೆಚ್ಚು ಕಾಲ ಬಾಳಿಕೆ ಬರುತ್ತದೆಯಲ್ಲದೆ, ಬಹಳ ಅಗ್ಗ.
ಈಗಲೂ ಭಾರತದಲ್ಲಿ ಪೊಲೀಸರು, ಹೋಂಗಾರ್ಡುಗಳು, ಎ.ಸಿ.ಸೆ., ಎನ್.ಸಿ.ಸಿ. ಮತ್ತು ಸ್ವಯಂಸೇವಕ ದಳಗಳವರು ಖಾಕಿ ಸಮವಸ್ತ್ರವನ್ನು ಧರಿಸುವುದುಂಟು. ಶಾಲೆಗೆ ಹೋಗುವ ಮಕ್ಕಳು ಸಹ ವಿವಿಧ ನಮೂನೆಯ ಖಾಕಿ ಸಮವಸ್ತ್ರಗಳನ್ನು ಉಪಯೋಗಿಸುತ್ತಾರೆ. ಸಮಾನತೆ, ಏಕತೆ ಮೊದಲಾದ ಭಾವೈಕ್ಯದ ಭಾವನೆಗಳನ್ನು ಮೂಡಿಸುವುದರಲ್ಲಿ ಇದು ಸಫಲವಾಗಿದೆ. ಅಲ್ಲದೆ ಮನೆಯಲ್ಲಿ ಬಳಸುವ ಚೀಲ, ರೇಡಿಯೋ, ಫ್ಯಾನ್, ಸೋಫ, ಮೆತ್ತೆ ಮೊದಲಾದವನ್ನು ಮುಚ್ಚುವ ಹೊದಿಕೆಗಳು ಹಾಗೂ ಹಾಸಿಗೆ ಸುತ್ತುವ ಚೀಲಗಳು, ಡೇರಾಗಳು ಇವೆಲ್ಲಕ್ಕೂ ಖಾಕಿಯನ್ನು ಬಳಸುತ್ತಾರೆ.
ಖಾಕಿ ಬಟ್ಟೆಯ ನೇಯ್ಗೆಯನ್ನು ಮೂಲೆ ನೇಯ್ಗಯೆಂದು (ಟ್ವೆಲ್) ಕರೆಯುತ್ತಾರೆ. ಇದರಲ್ಲಿ ನೇಯ್ಗೆ ಕರ್ಣ (ಡಯಾಗೊನಲ್) ರೀತಿಯಲ್ಲಿ ಮುಂದುವರಿಯುತ್ತದೆ. ಈ ಮಾದರಿ ನೇಯ್ಗೆಯ ಖಾಕಿಗೆ ತಡೆತ ಹಾಗೂ ತೊಡಿಕೆಯ ಶಕ್ತಿ ಹೆಚ್ಚಿಗೆಯಿರುತ್ತದೆ. ಸಾಧಾರಣ ನೇಯ್ಗೆಗಿಂತ ನಮ್ಯತೆ ಹಾಗೂ ಸ್ಥಿತಿಸ್ಥಾಪಕ ಶಕ್ತಿ ಇದರಲ್ಲಿ ಹೆಚ್ಚು. ನೇಯ್ಗೆಯ ವೈಶಿಷ್ಟ್ಯದಿಂದಾಗಿ ಖಾಕಿ ಬಟ್ಟೆಗಳು ಬೇಗ ಕೊಳೆಯಾಗುವುದಿಲ್ಲ.
ಮೂಲೆ ನೇಯ್ಗೆಯಲ್ಲಿ ಎಡಗೈ ಬಲಗೈ ಎಂದು ಎರಡು ಬಗೆ. ಖಾಕಿ ಬಟ್ಟೆಗೆ ಗಂಧಕ ಬಣ್ಣಗಾರಿಕೆ (ಸಲ್ಫರ್ ಡೈಯಿಂಗ್) ಮಾಡುತ್ತಾರೆ. ಇದು ಬಾಳಿಕೆ ಬರುವಂಥದು; ಒಗೆತ ಮತ್ತು ಬೆವರುಗಳಿಗೆ ತಡೆದು ಬರುವಂಥದು. ಆದರೆ ಅತಿಯಾಗಿ ಕ್ಲೋರಿನಿನಿಂದ ಚೆಲುವೆ ಮಾಡಿದರೆ ಬಣ್ಣ ಹೋಗುತ್ತದೆ. ಬಣ್ಣ ಕಟ್ಟುವುದಕ್ಕೆ ಮುಂಚೆ ಬಟ್ಟೆಯ ಮೊದಲಿನ ಬಣ್ಣವನ್ನು ತೆಗೆದು ಹಾಕುತ್ತಾರೆ. ಅನಂತರ ಬಣ್ಣದ ತೊಟ್ಟಿಯಲ್ಲಿ ನೆನೆಸಿ ಬಟ್ಟೆಯನ್ನು ಗಾಳಿಯಲ್ಲಿಟ್ಟು ಉತ್ಕರ್ಷಿಸುತ್ತಾರೆ. ಇಲ್ಲವೆ ಪೊಟ್ಯಾಸಿಯಂ ಬೈಕ್ರೊಮೇಟ್ ಮತ್ತು ಅಸಿಟಿಕಾಮ್ಲಗಳನ್ನು ಉಪಯೋಗಿಸಿ ಬೇಕಾದ ಮಟ್ಟಕ್ಕೆ ಬಣ್ಣವನ್ನು ಉಳಿಸಿಕೊಳ್ಳತ್ತಾರೆ. ಇಂಥ ಉತ್ಕರ್ಷಣದಿಂದ ಗಂಧಕ ಸಲ್ಫೂರಿಕ್ ಆಮ್ಲವಾಗಿ ಪರಿವರ್ತನೆಹೊಂದಿ ಬಟ್ಟೆಯನ್ನು ನಾಶ ಮಾಡಬಹುದು. ಆದ್ದರಿಂದ ಎಚ್ಚರಿಕೆ ವಹಿಸಿ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಹೆಚ್ಚಿನ ಬಣ್ಣವನ್ನು ಚೆನ್ನಾಗಿ ತೊಳೆದು ತೆಗೆಯಬೇಕು. ಅತಿಯಾದ ತಾಪ ಮತ್ತು ಬಣ್ಣದ ತೊಟ್ಟಿಯಲ್ಲಿನ ಕ್ಷಾರತೆಯಿಂದಾಗಿ ಬಣ್ಣ ಬಟ್ಟೆಯ ಒಳಗೆ ಚೆನ್ನಾಗಿ ಇಳಿಯುತ್ತದೆ. ಕೆಲಕಾಲ ಒಣಗಿಸಿದ ತರುವಾಯ ಬಟ್ಟೆ ನುಣುಪಾಗಿ ನವುರಾಗುತ್ತದೆ. (ಎಸ್ ಎಲ್.ಎ.)