ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣಿಗಾರಿಕೆ

ವಿಕಿಸೋರ್ಸ್ದಿಂದ

ಗಣಿಗಾರಿಕೆ : ಭೂಮೇಲ್ಮೈಯಿಂದ ಹಾಗೂ ಭೂಮಿಯ ಒಳಗಿನಿಂದ ಖನಿಜಗಳನ್ನು ಹೊರತೆಗೆಯುವ ಕ್ರಿಯೆ (ಮೈನಿಂಗ್). ಸಾಮಾನ್ಯವಾಗಿ ಖನಿಜತೈಲ ಹಾಗೂ ಅನಿಲವನ್ನು ಪಡೆಯುವ ಉದ್ಯಮವನ್ನು ಪ್ರತ್ಯೇಕ ಕೈಗಾರಿಕೆ ಎಂದೇ ಪರಿಗಣಿಸುವುದು ವಾಡಿಕೆ.

ಪ್ರಾಚೀನತೆ[ಸಂಪಾದಿಸಿ]

ಪ್ರಾಚೀನ ಮಾನವ ಮೊದಲಿಗೆ ಉಪಯೋಗಿಸಿದ ಭೂವಸ್ತುಗಳೆಂದರೆ ಬೆಣಚು ಕಲ್ಲು ಮತ್ತು ಚಕಮಕಿಕಲ್ಲು. ಬೆಂಕಿ ಹೊತ್ತಿಸುವುದಕ್ಕೆ ಇವು ಬೇಕಾಗಿದ್ದುವು. ಜೇಡಿಮಣ್ಣಿನಿಂದ ಮಡಕೆ ಇಟ್ಟಿಗೆ ಮಾಡುವುದೂ ಅತಿ ಪ್ರಾಚೀನವಾದ ಕೈಗಾರಿಕೆಯಾಗಿತ್ತು. ಕಟ್ಟಡಕ್ಕಾಗಿ ಕಲ್ಲುಗಳನ್ನು ಬಂಡೆಯಿಂದ ಪ್ರತ್ಯೇಕಿಸಿ ಅವುಗಳಿಗೆ ಆಕಾರ ಕೊಟ್ಟು ಜೋಡಿಸುವ ಕೈಗಾರಿಕೆ ಆಮೇಲೆ ಬೆಳೆಯಿತು. ಈಜಿಪ್ಟಿನಲ್ಲಿರುವ ಪಿರಮಿಡ್ ಒಂದಕ್ಕೆ ಸುಮಾರು ಒಂದೊಂದೂ 2-2.5 ಟನ್ ತೂಕದ 23,00,000 ಕಲ್ಲು ಚಪ್ಪಡಿಗಳು ಬೇಕಾಗಿದ್ದುವು. ಇವನ್ನು ಪಡೆಯಬೇಕಾದರೆ ಕಲ್ಲುಗಣಿಗಾರಿಕೆ ಎಷ್ಟು ಮುಂದುವರಿದಿತ್ತೆನ್ನುವುದನ್ನು ಊಹಿಸಬಹುದು. ಭಾರತದ ಪ್ರಾಚೀನ ದೇವಸ್ಥಾನಗಳು ವಿಶೇಷವಾಗಿ ಕಲ್ಲಿನಿಂದ ಕಡೆದವು. ಬಹು ತೂಕದ ಮತ್ತು ಕುಂದಿಲ್ಲದಂಥ ಕಲ್ಲನ್ನು ಬಂಡೆಯಿಂದ ಬೇರೆ ಮಾಡಿ ಅದನ್ನು ದೂರ ಸಾಗಿಸಿರುವುದನ್ನು ನೋಡಿದರೆ ಪ್ರಾಚೀನ ಭಾರತೀಯರು ಗಣಿಗಾರಿಕೆಯಲ್ಲಿ ಬಹಳ ಪರಿಣಿತರಾಗಿದ್ದರೆನ್ನುವುದು ಮನದಟ್ಟಾಗುತ್ತದೆ. ನಾಗರಿಕತೆ ಹೆಚ್ಚಿದಂತೆ ವಜ್ರ ವೈಡೂರ್ಯ ಮುಂತಾದ ರತ್ನಗಳಿಗೂ ಬೆಳ್ಳಿ ಬಂಗಾರದಂಥ ಲೋಹಗಳಿಗೂ ಪ್ರಾಮುಖ್ಯ ಬಂದಿತು. ರತ್ನಗಳು ಎಲ್ಲಿ ಹೇಗೆ ದೊರೆಯುತ್ತವೆ ಮತ್ತು ಅವುಗಳ ಜಾಡನ್ನು ಹಿಡಿದು ಸಾಗಿ ಅವುಗಳನ್ನು ಪಡೆಯುವುದು ಹೇಗೆ ಎನ್ನುವ ಕಲೆ ಬೆಳೆಯಿತು. ಪ್ರಾಚೀನ ಜನಾಂಗಗಳಲ್ಲಿ ಭಾರತೀಯರು, ಈಜಿಪ್ಟಿಯನ್ನರು, ಬ್ಯಾಬಿಲೋನಿಯರು ಮತ್ತು ಅಸ್ಸೀರಿಯನರು ಗಣಿಗಾರಿಕೆಯಲ್ಲಿ ತುಂಬ ಪರಿಶ್ರಮ ಗಳಿಸಿದ್ದರು. ವಜ್ರಕ್ಕಾಗಿಯೂ ಮಣಿ ರತ್ನಗಳಿಗಾಗಿಯೂ ಅನೇಕ ಕಡೆ ಅವರು ಕೂಪಗಳನ್ನು ತೋಡಿದ್ದರು. ಮೊದಲಿಗೆ ಚಿನ್ನ ಮತ್ತು ತಾಮ್ರ ಲೋಹಗಳು ನದಿಯ ಮೆಕ್ಕಲು ಮಣ್ಣಿನಲ್ಲಿ ಗಟ್ಟಿಗಳ ರೂಪದಲ್ಲಿ ಅವರಿಗೆ ದೊರೆತಿರಬೇಕು. ಇವುಗಳ ಜಾಡನ್ನು ಹಿಡಿದು ಅವು ಹುದುಗಿರುವ ಮೂಲಶಿಲೆಗಳನ್ನು ಪುರಾತನರು ಗುರುತಿಸಿದರು. ಗಣಿಗಾರಿಕೆ ಹೀಗೆ ಆರಂಭವಾಯಿತು. ಭಾರತದಲ್ಲಿ ಕಾಣುವ ಅನೇಕ ಪುರಾತನ ಗಣಿಗಳು ಎರಡು ಸಾವಿರ ವರ್ಷಗಳಿಗೂ ಹಳೆಯವು. ರಾಯಚೂರಿನ ಹಟ್ಟಿಯ ಬಳಿ ಪುರಾತನ ಚಿನ್ನದ ಗಣಿ 182 ಮೀ ಆಳಕ್ಕೂ ಹೆಚ್ಚು ಇಳಿದಿತ್ತು. ಭಾರತದಲ್ಲಿ ಮೌರ್ಯರ ಕಾಲದಲ್ಲಿ ಗಣಿಗಾರಿಕೆ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆ ಕಾಲದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗಣಿಗಾರಿಕೆಯನ್ನು ಯಾವ ರೀತಿ ನಡೆಸಬೇಕು, ಕಲ್ಲಿನಿಂದ ಲೋಹವನ್ನು ಪ್ರತ್ಯೇಕಗೊಳಿಸುವ ಬಗೆ ಹೇಗೆ, ಗಣಿಗಳಿಂದ ರಾಜಾದಾಯವನ್ನು ಹೇಗೆ ಪಡೆಯಬೇಕು ಇವೇ ಮುಂತಾದ ವಿವರಗಳಿವೆ. ಈ ರೀತಿ ಬಹುಮುಖವಾಗಿ ಭಾರತದಲ್ಲಿ ಬೆಳೆದಿದ್ದ ಗಣಿಗಾರಿಕೆ ಮುಂದೆ ಹೇಳ ಹೆಸರಿಲ್ಲದಂತೆ ಮಾಯವಾಗಿ ಹೋದುದರ ಖಚಿತ ಕಾರಣ ತಿಳಿಯದು. ಪ್ರಾಯಶಃ ದಂಡೆತ್ತಿ ಬಂದ ಮುಸಲ್ಮಾನರಿಗೆ ಗಣಿಗಳಿರುವ ಸ್ಥಳ ಗೊತ್ತಾಗಬಾರದೆಂದು ಎಲ್ಲವನ್ನು ಮುಚ್ಚಿಬಿಟ್ಟರೋ ಏನೋ. ಆಗ ನೆಲಸಮವಾದ ಗಣಿಗಾರಿಕೆ ಭಾರತದಲ್ಲಿ ಮತ್ತೆ ಬಹುಕಾಲದವರೆಗೆ ತಲೆ ಎತ್ತಲೇ ಇಲ್ಲ. ಹಿರೋಡಾಟಸ್, ಪ್ಲೀನಿ ಮೊದಲಾದ ಚರಿತ್ರಕಾರರು ಯುರೋಪಿನ ಅನೇಕ ಹಳೆಯ ಗಣಿಗಳ ವಿವರಗಳನ್ನು ಕೊಟ್ಟಿದ್ದಾರೆ. ಖನಿಜಗಳ ಲಕ್ಷಣ ಅವುಗಳ ಶೋಧನೆ ಈ ವಿಷಯವಾಗಿ ಬಹುಮಟ್ಟಿನ ಜ್ಞಾನ 17, 18ನೆಯ ಶತಮಾನಗಳಲ್ಲಿ ಶೇಖರವಾಗಿ 19, 20ನೆಯ ಶತಮಾನಗಳಲ್ಲಿ ಗಣಿಗಾರಿಕೆ ವಿಶೇಷವಾಗಿ ಬೆಳೆಯಿತು. ಯಂತ್ರೋಪಕರಣ ಗಳ ಸಹಾಯದಿಂದ ಅಗಾಧ ಮೊತ್ತದಲ್ಲಿ ಖನಿಜಗಳನ್ನು ಪಡೆಯಲು ಅವಕಾಶವಾಯಿತು. ಲೋಹಗಳ ಮತ್ತು ಖನಿಜಗಳ ಬಳಕೆ ದಿನದಿನ ಹೆಚ್ಚುತ್ತ ಹೋಯಿತು.

ಸ್ಥಾನ ನಿರ್ಧರಣೆ[ಸಂಪಾದಿಸಿ]

ಒಂದು ಸ್ಥಳದಲ್ಲಿ ಗಣಿ ಕೆಲಸವನ್ನು ಕೈಗೊಳ್ಳಬೇಕಾದರೆ ಮೊದಲು ನಿರ್ಧರಿಸಬೇಕಾದ ಅಂಶಗಳಿವು : 1 ಒಂದು ಗಣಿಕೆಲಸದ ಖರ್ಚು ಅಥವಾ ಕ್ವಾರೀ ಕೆಲಸದ ವೆಚ್ಚ. 2 ಗಣಿಯಿಂದ ತೆಗೆಯುವ ಖನಿಜದಲ್ಲಿರುವ ಉಪಯುಕ್ತ ಅದಿರಿನ ಪ್ರಮಾಣ. 3 ಅದಿರನ್ನು ಅದರೊಡನೆ ಬೆರೆತಿರುವ ಕಲ್ಲು, ಮಣ್ಣು ಮೊದಲಾದ ಕಶ್ಮಲಗಳಿಂದ ಬೇರ್ಪಡಿಸಲು ಆಗುವ ವೆಚ್ಚ. 4 ಗಿರಾಕಿಗಳಿಗೆ ಬೇಕಾದ ರೂಪದಲ್ಲಿ ಅದಿರನ್ನು ಸಿದ್ಧಪಡಿಸಲು ಆಗುವ ವೆಚ್ಚ. 5 ಅದಿರನ್ನು ಗಣಿಯಿಂದ ಗಿರಾಕಿಗೆ ತಲಪಿಸಲು ಆಗುವ ಸಾಗಣೆ ವೆಚ್ಚ. ಇವುಗಳಲ್ಲಿ ಮೊದಲು ತಿಳಿಸಿರುವ ಗಣಿ ಕೆಲಸದ ಖರ್ಚನ್ನು ಅನೇಕ ಅಂಶಗಳು ನಿರ್ಧರಿಸುತ್ತವೆ. ಅನಾವೃತ ಗಣಿ (ಓಪನ್ ಕ್ಯಾಸ್್ಟ ಮೈನ್) ವಿಧಾನಗಳಲ್ಲಿ ಖರ್ಚು ಒಂದು ತೆರನಾದರೆ ಭೂಗತಗಣಿ (ಅಂಡರ್ಗ್ರೌಂಡ್ ಮೈನ್) ವಿಧಾನಗಳಲ್ಲಿ ಅದು ಬೇರೆಯೇ ಆಗಿರುತ್ತದೆ. ಭೂತಲದಲ್ಲಿ ಕೆಲಸ ಮಾಡಿದರೆ (ತೆರೆದಗಣಿ) ಸಾಮಾನ್ಯವಾಗಿ ಬಹಳ ಖರ್ಚಾಗದೆ ಇದ್ದರೂ ಅದಿರಿನ ಮೇಲಿರುವ ಹೊದಿಕೆ, (ಹೊರೆ, ಟೋಪಿ) ಸಾಕಷ್ಟು ದಪ್ಪವಾಗಿದ್ದರೆ ಇಲ್ಲವೇ ಗಟ್ಟಿಯಾಗಿದ್ದರೆ ಗಣಿಯಿಂದ ತೆಗೆಯುವ ಅದಿರಿನ ಪ್ರತಿ ಟನ್ನಿಗೂ ಬೆಲೆ ಹೆಚ್ಚುತ್ತದೆ. ಭೂಗತ ಗಣಿ ಕೆಲಸದಲ್ಲಿ ಗಣಿಯ ಆಳ, ಅಲ್ಲಿರುವ ಶಿಲೆಯ ಕಠಿಣತೆ, ಅಲ್ಲಿ ಮಾಡಬೇಕಾದ ನೀರ್ಗಾಲುವೆ ವ್ಯವಸ್ಥೆ, ಮೇಲ್ಭಾಗಕ್ಕೆ ಅಗತ್ಯವಾದ ಆಧಾರ ಕೊಡಲು ತಗಲುವ ವೆಚ್ಚ, ಗಣಿಯೊಳಕ್ಕೆ ವಾಯು, ಬೆಳಕು ಸರಬರಾಜು ಮಾಡಲು ಆಗುವ ಖರ್ಚು, ಗಣಿಯೊಳಕ್ಕೆ ಇಳಿದು ಕೆಲಸಮಾಡುವ ಜನರ ಸೌಕರ್ಯಗಳು ಮತ್ತು ರಕ್ಷಣೆಗೆ ತಗಲುವ ಖರ್ಚು, ಗಣಿ ಪ್ರದೇಶಕ್ಕೆ ಆಹಾರ ಇತ್ಯಾದಿ ಅವಶ್ಯ ವಸ್ತುಗಳ ಸರಬರಾಜಿನ ಖರ್ಚು, ಕೆಲಸಗಾರರ ವೇತನ ಇವನ್ನೆಲ್ಲ ಗಮನಿಸಬೇಕು.

ಖನಿಜಗಳು ಸಿಕ್ಕುವ ರೀತಿ[ಸಂಪಾದಿಸಿ]

ಖನಿಜಗಳು ಪದರಗಳಂತೆ ಮತ್ತು ಸಿರಗಳಂತೆ ಸಿಕ್ಕುತ್ತವೆ. ಪದರಗಳಂತೆ ಹಬ್ಬಿರುವ ನಿಕ್ಷೇಪಗಳಲ್ಲಿ ಕಬ್ಬಿಣದ ಅದಿರುಗಳು, ಕಲ್ಲಿದ್ದಲು ಮತ್ತು ಅದರ ಪ್ರಭೇದಗಳು, ಕಲ್ಲುಪ್ಪು, ಮೊದಲಾದ ಲವಣಗಳು, ಕಲ್ಲೆಣ್ಣೆ ಇರುವ ಷೇಲ್ ಶಿಲೆ ಇವು ಮುಖ್ಯವಾದುವು. ಕಲ್ಲುಬಂಡೆಗಳ ಮಧ್ಯ ಎಳೆಗಳಂತೆ ರೇಕುಗಳಂತೆ ನಾಳಗಳಂತೆ ಮತ್ತು ಸಿರಗಳಂತೆ ಚಿನ್ನ, ಬೆಳ್ಳಿ, ತಾಮ್ರ, ಸೀಸ, ಸತು ಮೊದಲಾದ ಲೋಹಖನಿಜಗಳು ಹೀಗೆ ಸಿಕ್ಕುತ್ತವೆ. ಕಲ್ನಾರು, ಗ್ರಾಫೈಟ್ ಮೊದಲಾದ ಅಲೋಹ ಖನಿಜಗಳೂ ಹೀಗೆ ಸಿಕ್ಕುತ್ತವೆ. ಪದರಗಳ ಮೇಲಿರುವ ಹೊರೆಯನ್ನು ಮೊದಲು ತೆಗೆದು ದೂರಕ್ಕೆ ಸಾಗಿಸಿ, ಅದಿರಿರುವ ನಿಕ್ಷೇಪದಲ್ಲಿ ಗುಂಡಿಗಳನ್ನು ತೋಡಿ ಕಬ್ಬಿಣದ ಅದಿರು, ಸುದ್ದೆ ಮಣ್ಣು, ಸುಣ್ಣಕಲ್ಲು, ಮೊದಲಾದವನ್ನು ತೆಗೆಯಬಹುದು. ಖನಿಜ ಸಿರ ಮತ್ತು ಎಳೆಗಳನ್ನು ಅವು ಸಿಕ್ಕುವ ಕಲ್ಲಿನ ಬಂಡೆಯನ್ನು ಒಡೆದು ಬೇರ್ಪಡಿಸ ಬೇಕಾಗುತ್ತದೆ. ಕೆಲವು ನಿಕ್ಷೇಪಗಳಲ್ಲಿ ಖನಿಜಗಳ ಹರಳುಗಳು ಚದರಿ ಹೋಗಿರುತ್ತವೆ ಅಥವಾ ಲೋಹಗಳು ಸೂಕ್ಷ್ಮ ಕಣಗಳಂತೆ ಸಿಕ್ಕುತ್ತವೆ. ಸಾಮಾನ್ಯವಾಗಿ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುವವರು ತಾವು ತೋಡಿ ತೆಗೆಯುವ ಚಿನ್ನವನ್ನೇ ನೋಡಿರುವುದಿಲ್ಲ. ಬಹಳ ಸಾಮಥರ್್ಯಯುತವಾದ ಸೂಕ್ಷ್ಮದರ್ಶಕ ಯಂತ್ರಗಳ ಸಹಾಯದಿಂದ ಮಾತ್ರ ಆ ಚಿನ್ನದ ಕಣಗಳನ್ನು ನೋಡಬಹುದಷ್ಟೆ. ಅಂಥ ಸಂದರ್ಭಗಳಲ್ಲಿ ಲೋಹಕ್ಕೂ ಶಿಲೆಗೂ ಇರುವ ಪ್ರಮಾಣ ಅತ್ಯಲ್ಪ. ತಾಮ್ರದ ಗಣಿಗಳಲ್ಲಿ ಸಾಮಾನ್ಯವಾಗಿ ಲೋಹಾಂಶ ಶೇ.2 ಕ್ಕಿಂತ ಕಡಿಮೆ ಇರುತ್ತದೆ. ಶೇ.0.7 ತಾಮ್ರವಿದ್ದರೆ 1 ಟನ್ ಲೋಹವನ್ನು ಪಡೆಯಲು ಸುಮಾರು 140 ಟನ್ ಶಿಲೆಯನ್ನು ತೋಡಬೇಕಾಗುತ್ತದೆ. ಅಂಥ ಅದಿರನ್ನು ತೆಗೆದು ದೂರದೇಶಗಳಿಗೆ ಸಾಗಿಸುವ ವೆಚ್ಚ ದುಬಾರಿ ಆಗುವುದರಿಂದ ಅನೇಕ ಲೋಹದ ಅದಿರುಗಳನ್ನು ಗಣಿಯಲ್ಲಿ ಇಲ್ಲವೇ ಅದರ ಸಮೀಪದಲ್ಲಿ ಬೇಡದ ಶಿಲಾವಸ್ತುಗಳಿಂದ ಬೇರ್ಪಡಿಸಿ ಸಾಂದ್ರೀಕರಿಸಿ ಕಳುಹಿಸುತ್ತಾರೆ. ಇದಕ್ಕೆ ಲೋಹವಿದ್ಯೆಯ ಸಹಕಾರ ಅತ್ಯಗತ್ಯ.

ಖನಿಜಗಳ ಶುದ್ಧೀಕರಣ[ಸಂಪಾದಿಸಿ]

ಕೆಲವು ಮುಖ್ಯ ವಿಧಾನಗಳನ್ನು ಇಲ್ಲಿ ವಿವರಿಸಿದೆ. 1 ಸಾರವರ್ಧನೆ : ಖನಿಜಗಳನ್ನು ನೀರಿನಲ್ಲಿ ಕೈಯಿಂದಾಗಲಿ ಯಂತ್ರದಿಂದಾಗಲಿ ತೊಳೆದು ಅವುಗಳ ಜೊತೆಯಲ್ಲಿರುವ ಕಲ್ಲು, ಮಣ್ಣು ಮೊದಲಾದ ವಸ್ತುಗಳನ್ನು ಬೇರ್ಪಡಿಸಬಹುದು. ಗಣಿಯ ಹೊರಗೆ ಗಂಡಸರೂ ಹೆಂಗಸರೂ ಕೈಯಿಂದಲೇ ದಪ್ಪ ದಪ್ಪ ಅದಿರಿನ ಚೂರುಗಳನ್ನು ಅನುಪಯುಕ್ತ ವಸ್ತುಗಳಿಂದ ಆರಿಸಿ ಬೇರ್ಪಡಿಸಬಹುದು; ಅಥವಾ ವಂದರಿಗಳಿಂದ ಸೋಸಿ ಬೇರೆ ಬೇರೆ ದರ್ಜೆಗಳಿಗೆ ವಿಂಗಡಿಸಬಹುದು. ಗಣಿಯ ಒಳಗೆ ಅದಿರನ್ನು ಗಂಡಸರು ಆರಿಸಿ ಮೇಲಕ್ಕೆ ಸಾಗಿಸಬಹುದು. 2 ಚೂರ್ಣೀಕರಣ : ಅದಿರು ಸಿಕ್ಕುವ ಶಿಲೆಯನ್ನು ಜಜ್ಜಿ ಪುಡಿಮಾಡಿ ತೊಳೆದರೆ ಹಗುರವಾದ ಮಣ್ಣು ಕೊಚ್ಚಿಕೊಂಡು ಹೋಗುವುದು; ಅದಿರಿನ ತೂಕವಾದ ಕಣಗಳು ಉಳಿಯುತ್ತವೆ. ಜಾಂಬಿಯದ ತಾಮ್ರಗಣಿಗಳಲ್ಲಿ ಹೀಗೆ ಮಾಡುತ್ತಾರೆ. 3 ಪ್ಲವನ (ಫ್ಲೊಟೇಷನ್) : ಚೆನ್ನಾಗಿ ಅರೆದು ಪುಡಿ ಮಾಡಿದ ಅದಿರನ್ನು ಎಣ್ಣೆಯಂತಿರುವ ನೊರೆಯಿಂದ ಕೂಡಿದ ರಾಸಾಯನಿಕ ದ್ರವವಸ್ತುವಿನಲ್ಲಿ ಹಾಕಿ ಕಲಕುತ್ತಾರೆ. ಆಗ ಮಣ್ಣಿನಂತಿರುವ ವಸ್ತು ತಳಕ್ಕೆ ಮುಳುಗುತ್ತದೆ. ಅದಿರಿನ ಕಣಗಳು ಮೇಲಕ್ಕೆ ಬರುವ ನೊರೆಯ ರಾಶಿಗೆ ಅಂಟಿಕೊಳ್ಳುತ್ತವೆ. ಈ ಮುದ್ದೆಯನ್ನು ಕೆನೆಯಂತೆ ತೆಗೆದು ತೊಳೆದು ಒಣಗಿಸುತ್ತಾರೆ. ಕಶ್ಮಲಗಳಿಂದ ಅದಿರನ್ನು ಈ ಪ್ರಕಾರ ಬೇರ್ಪಡಿಸಿದರೆ ಲೋಹಾಂಶ ಹೆಚ್ಚುತ್ತದೆ. ಇದಕ್ಕೆ ಸಾರವರ್ಧಿತ ಅದಿರು (ಓರ್ ಕಾನ್ಸೆಂಟ್ರೇಟ್) ಎಂದು ಹೆಸರು. ಪ್ಲವನ ವಿಧಾನದಲ್ಲಿ ಬೇರೆ ಬೇರೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಎರಡು ಮೂರು ಲೋಹಗಳನ್ನು ಬೇರ್ಪಡಿಸಬಹುದು. ಮಿಶ್ರಲೋಹದ ಅದಿರುಗಳ ಬಳಕೆಯಲ್ಲಿ ಇದಕ್ಕೆ ಪ್ರಾಶಸ್ತ್ಯ ಉಂಟು. ತಕ್ಕ ಇಂಧನ ಅಥವಾ ವಿದ್ಯುಚ್ಛಕ್ತಿ ಗಣಿಯ ಬಳಿಯಲ್ಲೇ ದೊರೆತರೆ ಈ ಅದಿರಿನ ಸಾರವನ್ನು ಕುಲುಮೆಯಲ್ಲಿ ಕರಗಿಸಿ ಲೋಹವನ್ನು ಬೇರ್ಪಡಿಸಬಹುದು. ಬಳಿಕ ಇದನ್ನು ಶುದ್ಧಿ ಮಾಡಿ, ಸಂಸ್ಕರಿಸಿ ಬೇಕಾದಂತೆ ಬಳಸಿಕೊಳ್ಳಬಹುದು. ಇತರ ವಿಧಾನಗಳು : ಇವುಗಳಲ್ಲದೆ ವಾಯು ಇಲ್ಲವೇ ಸೂಜಿಗಲ್ಲು ಇಲ್ಲವೇ ರಾಸಾಯನಿಕ ವಿಧಾನಗಳಿಂದ ಕೂಡ ಅದಿರಿನ ಲೋಹಾಂಶವನ್ನು ಹೆಚ್ಚಿಸಬಹುದು. ಪ್ರಪಂಚದ ಮಾರುಕಟ್ಟೆ ಮತ್ತು ಗಣಿಗಾರಿಕೆಗೆ ಇರುವ ಸಂಬಂಧ : ಪ್ರಪಂಚದ ಮಾರುಕಟ್ಟೆಯಲ್ಲಿ ಒಂದು ಲೋಹದ ಬೆಲೆಯಲ್ಲಿ ಆಗುವ ವ್ಯತ್ಯಾಸಗಳಿಂದ ಅತ್ಯಲ್ಪ ಪ್ರಮಾಣದ ಲೋಹಾಂಶವಿರುವ ಅದಿರಿನ ಗಣಿಯನ್ನು ಮುಚ್ಚಬೇಕಾಗಿಬರಬಹುದು; ಅಥವಾ ಅಲ್ಲಿ ಮತ್ತೆ ಕೆಲಸಮಾಡುವ ಅವಕಾಶ ಒದಗಬಹುದು. ಹಿಂದೆ ಉಪೇಕ್ಷಿಸಿದ್ದ ನಿಕ್ಷೇಪಗಳನ್ನು ಅದಿರುಗಳ ಸಾರವರ್ಧನ ಮತ್ತು ಸಂಸ್ಕರಣ ವಿಧಾನಗಳಲ್ಲಿ ಇತ್ತೀಚೆಗೆ ಆಗಿರುವ ಸಂಶೋಧನೆಗಳಿಂದ ಬಳಸುವ ಅವಕಾಶ ಉಂಟಾಗಬಹುದು. ಅನೇಕ ಅದಿರುಗಳಲ್ಲಿ ರಂಜಕ ಮೊದಲಾದ ಕಶ್ಮಲಗಳನ್ನು ಸುಲಭವಾಗಿ ಬೇರ್ಪಡಿಸುವಂಥ ಹೊಸ ರಾಸಾಯನಿಕ ವಿಧಾನಗಳು ಈಚೆಗೆ ಪ್ರಕಟವಾಗಿವೆ. ಬೇರೆ ಹೊಸ ವಿಧಾನಗಳು ಮುಂದೆಯೂ ಬೆಳಕಿಗೆ ಬರಬಹುದು. ಅವನ್ನು ಅನುಸರಿಸಿ ಹಿಂದೆ ಕಸವೆಂದು ಕೈ ಬಿಟ್ಟಿದ್ದ ಅದಿರುಗಳನ್ನು ಬಳಸುವ ಯೋಗ ಒದಗಬಹುದು.

ಚಿನ್ನ, ಯುರೇನಿಯಂ, ಪ್ಲಾಟಿನಂ ಮುಂತಾದ ಪ್ರಶಸ್ತ ಲೋಹಗಳ ಅದಿರುಗಳಲ್ಲಿ ಅತ್ಯಲ್ಪ ಲೋಹಾಂಶವಿದ್ದರೂ ಲಾಭವುಂಟು. ದಕ್ಷಿಣ ಆಫ್ರಿಕದ ರ್ಯಾಂಡ್ ಗಣಿಗಳಲ್ಲಿ ಒಂದು ಟನ್ ಶಿಲೆಯಲ್ಲಿ ಸರಾಸರಿ 1/3 ಔನ್್ಸ ಚಿನ್ನವಿದ್ದರೂ ಅಲ್ಲಿ ಗಣಿಗಾರಿಕೆ ಲಾಭದಾಯಕವಾಗಿದೆ. ಅಲಾಸ್ಕದ ಒಂದು ಗಣಿಯಲ್ಲಿ ಒಂದು ಔನ್್ಸ ಚಿನ್ನಕ್ಕೆ 25 ಟನ್ ಶಿಲೆಯನ್ನು ಬಳಸಿಯೂ ಲಾಭ ಬರುತ್ತಿದೆ. ಹೀಗೆಯೇ ಒಂದು ಖನಿಜಕ್ಕೆಂದು ಆರಂಭಿಸಿದ ಗಣಿ ಕಾಲಗತಿಯಲ್ಲಿ ಮತ್ತೊಂದು ಖನಿಜಕ್ಕೆ ಪ್ರಮುಖ ಆಕರವಾಗಬಹುದು. ಉದಾಹರಣೆಗೆ ಕಾರ್ನ್ವಾಲ್ ತಾಮ್ರದ ಗಣಿಗಳ ಮೇಲ್ಭಾಗದಲ್ಲಿ ತಾಮ್ರ ಹೆಚ್ಚು ಸಿಕ್ಕುತ್ತಿತ್ತು. ನಡುವೆ ತಾಮ್ರ-ತವರಗಳ ಮಿಶ್ರ ಅದಿರು ದೊರಕಿತು. ಆಳದಲ್ಲಿ ತವರವೇ ಹೆಚ್ಚಾಗಿತ್ತು. ಹಿಂದೆ ಲಾಭದಾಯಕವಲ್ಲವೆಂದೋ ಅನುಪಯುಕ್ತವೆಂದೋ ಕೈ ಬಿಟ್ಟಿದ್ದ ಲೋಹ ಖನಿಜಗಳಿಗೆ ಮುಂದೆ ಗಿರಾಕಿ ದೊರೆಯಬಹುದು. ಉದಾಹರಣೆಗೆ ಬೊಲಿವಿಯದಲ್ಲಿದ್ದ ಹಿಂದಿನ ಚಿನ್ನದ ಗಣಿಗಳು ಈಗ ತವರವನ್ನು ಸರಬರಾಜು ಮಾಡುತ್ತಿವೆ. ಗಾಳಿ ಬಿಸಿಲಿಗೆ ಜಗ್ಗದೆ ಕುಗ್ಗದೆ ತಮ್ಮ ಹೊಳಪನ್ನು ಸದಾ ಉಳಿಸಿಕೊಳ್ಳುವ ಚಿನ್ನ ಬೆಳ್ಳಿಗಳಿಗೆ ಬಹಳ ಕಾಲದಿಂದಲೂ ಬೆಲೆ ಹೆಚ್ಚು. ಚಿನ್ನ ಪತ್ತೆಯಾದ್ದರಿಂದಲೇ ದಕ್ಷಿಣ ಆಫ್ರಿಕದಲ್ಲಿ ಗಣಿಗಳಿಂದ ಬಂದರುಗಳಿಗೆ ಹೊಗೆಬಂಡಿಯ ಸಂಪರ್ಕ ಉಂಟಾಯಿತು. ಚಿನ್ನಕ್ಕಾಗಿಯೇ ಯುರೋಪಿನಿಂದ ಜನರು ಆಸ್ಟ್ರೇಲಿಯಕ್ಕೆ ವಲಸೆ ಹೋದರು. ಚಿನ್ನದಿಂದಲೇ ಕ್ಯಾಲಿಫೋರ್ನಿಯ ಶ್ರೀಮಂತವಾದ ರಾಷ್ಟ್ರವಾಯಿತು. ಕರ್ನಾಟಕ ಚಿನ್ನದ ನಾಡು ಎಂಬ ಹೆಸರನ್ನು ಗಳಿಸಿತು. ಚಿನ್ನಕ್ಕಾಗಿ ಅತ್ಯಂತ ಶೀತ ಪ್ರದೇಶಗಳಲ್ಲೂ ಮರುಭೂಮಿಗಳಲ್ಲೂ ಬಹಳ ಆಳವಾದ ಪ್ರದೇಶಗಳಲ್ಲೂ (ಉದಾಹರಣೆಗೆ ಕೋಲಾರದ ಮತ್ತು ದಕ್ಷಿಣ ಆಫ್ರಿಕದ ಟ್ರಾನ್್ಸವಾಲ್ನ ಚಿನ್ನದ ಗಣಿಗಳು) ಜನರು ದುಡಿಯುತ್ತಾರೆ. ಚಿನ್ನದೊಡನೆ ಮತ್ತು ಸೀಸ, ತವರ, ತಾಮ್ರದ ಅದಿರುಗಳೊಡನೆ ಬೆಳ್ಳಿ ಸಿಕ್ಕುತ್ತವೆ. ಪ್ಲಾಟಿನಂ ದಕ್ಷಿಣ ಆಫ್ರಿಕದ ಚಿನ್ನದ ಗಣಿಗಳಲ್ಲಿ ಸಿಕ್ಕುತ್ತದೆ. ಇಂಥ ಅಮೂಲ್ಯ ಖನಿಜಗಳಿಗೆ ಗಿರಾಕಿ ಯಾವಾಗಲೂ ಹೆಚ್ಚಾಗಿರುತ್ತದೆ.

ವರ್ಗೀಕರಣ[ಸಂಪಾದಿಸಿ]

ಖನಿಜ ಸಂಪತ್ತಿನ ವರ್ಗೀಕರಣ ಪರಿಪರಿಯಾಗಿದೆ. ಖನಿಜಗಳು ಪ್ರಕೃತಿಯಲ್ಲಿ ಸಿಕ್ಕುವ ರೀತಿ, ಅವುಗಳ ರಾಸಾಯನಿಕ ಸ್ವಭಾವ ಮತ್ತು ಸಹಚರ ಖನಿಜಗಳು, ಅವುಗಳ ಉತ್ಪತ್ತಿ ಇತ್ಯಾದಿ ನಾನಾಂಶಗಳನ್ನು ಅನುಸರಿಸಿ ಅವನ್ನು ವಿಂಗಡಿಸಬಹುದು. ಸರ್ವ ಸಾಮಾನ್ಯವಾಗಿ ಕೈಗಾರಿಕೆಗೆ ಉಪಯೋಗವಾಗುವಂಥ ಒಂದು ರೀತಿಯಲ್ಲಿ ಭೂಮಿಯ ಮೇಲ್ಮೈಯ ಸಂಪತ್ತನ್ನು ಕೆಳಗೆ ವಿಂಗಡಿಸಿದೆ : 1 ಲೋಹ ಖನಿಜಗಳು : ಚಿನ್ನ, ಬೆಳ್ಳಿ, ಪ್ಲಾಟಿನಂ, ತಾಮ್ರ, ಕಬ್ಬಿಣ, ಸೀಸ, ತವರ, ಸತು, ಆಂಟಿಮೊನಿ, ಮ್ಯಾಂಗನೀಸ್, ಕ್ರೋಮಿಯಂ, ಟಂಗ್ಸ್ಟನ್ ಮೊದಲಾದ ಲೋಹಗಳ ಅದಿರುಗಳು. ಇವುಗಳಲ್ಲಿ ಕಬ್ಬಿಣಕ್ಕೆ ಸಂಬಂಧಪಟ್ಟ ಅದಿರುಗಳೆಂದೂ ಎರಡು ಮುಖ್ಯ ವಿಭಾಗಗಳು ಬಳಕೆಯಲ್ಲಿವೆ. 2 ಅಲೋಹ ಖನಿಜಗಳು : ಕೈಗಾರಿಕೆಗೆ ಉಪಯುಕ್ತವಾದ ಖನಿಜಗಳು. ಕಲ್ಲಿದ್ದಲು, ಲಿಗ್ನೈಟ್ ಪೆಟ್ರೋಲಿಯಂ, ಜಿಪ್ಸಂ, ಸುಣ್ಣಕಲ್ಲು, ಸುದ್ದೆ ಮಣ್ಣು, ಇತರ ಮಣ್ಣುಗಳು, ಪಮಿಸ್, ಕ್ಯಾಲ್ಸೈಟ್, ಫೆಲ್್ಡಸ್ಟಾರ್, ಟಾಲ್್ಕ, ಬಳಪದ ಕಲ್ಲು, ಬೆಣಚುಕಲ್ಲು, ಮ್ಯಾಗ್ನಸೈಟ್, ಚಾಲೊಮೈಟ್, ಘರ್ಷಕ ದ್ರವ್ಯಗಳಾದ ಕೊರಂಡಂ, ಗಾರ್ನೆಟ್, ಸ್ಟಾನೊಲೈಟ್ ಮೊದಲಾದವೂ ಕಲ್ನಾರು, ಅಭ್ರಕ ಬ್ಯಾರೈಟಿಸ್, ಗ್ರಾಫೈಟ್, ಫೋರಸ್ಪಾರ್, ಗಂಧಕ, ಪಿರೈಟಿಸ್ (ಸುವರ್ಣ ಮುಖಿ) ಮತ್ತು ಉಪ್ಪುಗಳು. 3 ಕಟ್ಟಡದ ಕಲ್ಲುಗಳು ಮತ್ತು ಅಲಂಕಾರಶಿಲೆಗಳು : ಇವನ್ನು ಕ್ವಾರಿಗಳಲ್ಲಿ ತೆರೆದ ಗಣಿ ವಿಧಾನಗಳಿಂದ ತೆಗೆದು ಬಳಸುತ್ತಾರೆ. ಒಳ್ಳೆಯ ಮೆರಗು ಕೊಡಬಹುದಾದ ಗ್ರಾನೈಟ್ನೈಸ್, ಅಮೃತ ಶಿಲೆ ಮೊದಲಾದವನ್ನು ಉಜ್ಜಿ ನಯವಾಗಿ ಹೊಳೆಯುವಂತೆ ಮಾಡಿ ಹೊರದೇಶಗಳಿಗೆ ಕಳುಹಿಸುತ್ತಾರೆ. 4 ನವರತ್ನಗಳು ಮತ್ತು ಆಭರಣಗಳಿಗೆ ಬಳಸುವ ಇತರ ಖನಿಜಗಳು. ಗಣಿಕೆಲಸದ ವಿಧಾನಗಳು : ಗಣಿಗಾರಿಕೆಯ ರೀತಿ ಖನಿಜ ನಿಕ್ಷೇಪಗಳನ್ನು ಅನುಸರಿಸಿ ಇದೆ. ಇವುಗಳಲ್ಲಿ ತೆರೆದ ಗಣಿ ವಿಧಾನಗಳು, ಭೂಗತ ಗಣಿ ವಿಧಾನಗಳು ಮತ್ತು ಮಿಶ್ರ ವಿಧಾನಗಳು ಎಂಬ ಮೂರು ಬಗೆಗಳುಂಟು.

ತೆರೆದ ಗಣಿ[ಸಂಪಾದಿಸಿ]

ಭೂಮಿಯ ಮೇಲ್ಮೈ ಅಥವಾ ಅದಕ್ಕಿಂತ ಸ್ವಲ್ಪವೇ ಆಳದಲ್ಲಿ ಸಿಕ್ಕುವ ಖನಿಜಗಳನ್ನು ಹೊರತೆಗೆಯಲು ಇಂಥ ಗಣಿಗಳನ್ನು ತೋಡುತ್ತಾರೆ. ಕೆಲವು ವೇಳೆ ಗುಡ್ಡಗಾಡು ಪ್ರದೇಶಗಳಲ್ಲಿ ಕಬ್ಬಿಣ, ಮ್ಯಾಂಗನೀಸ್ ಮುಂತಾದ ಅದಿರು ನಿಕ್ಷೇಪಗಳು ಸಿಗುವ ಸಾಧ್ಯತೆ ಉಂಟು. ಇಂಥ ನಿಕ್ಷೇಪಗಳನ್ನು ಕ್ಷಿತಿಜಕ್ಕೆ 700 ಬಾಗುವಿನಲ್ಲಿ ಅಗೆಯುತ್ತಾರೆ. ಭೂಗತ ಗಣಿಯ ಕೆಲಸಕ್ಕಿಂತಲೂ ತೆರೆದ ಗಣಿ ಕೆಲಸ ಬಹು ಲಾಭದಾಯಕ, ಸರಳ, ಮತ್ತು ಸುರಕ್ಷಿತ. ಇದನ್ನು ಭೂಗತ ಗಣಿಗೆ ಹೋಲಿಸಿದಾಗ ಇದರ ಮುಖ್ಯ ಉಪಯೋಗಗಳು ಹೀಗೆ ಇವೆ; 1. ನೆಲದ ಕೆಳಗೆ ಉಂಟಾಗಬಹುದಾದ ಭೂಕುಸಿತ ಅಥವಾ ಬಂಡೆ ಸಿಡಿತ ಇವು ಯಾವುವೂ ಇಲ್ಲಿಲ್ಲ; 2. ಕೃತಕ ವಾಯುಸಂಚಾರ ಇಲ್ಲಿ ಅನಾವಶ್ಯಕ; 3. ಹಗಲು ಹೊತ್ತಿನಲ್ಲಿ ಕೃತಕ ಬೆಳಕು ಇಲ್ಲಿ ಅನಾವಶ್ಯಕ; 4. ಸಾಮಾನ್ಯವಾಗಿ ಭೂಗತ ಕಲ್ಲಿದ್ದಲು ಗಣಿಯಲ್ಲಿ ಕಂಡುಬರುವ ಮಿಥೇನ್ ಅಥವಾ ಕಲ್ಲಿದ್ದಲು ದೂಳಿನ ಆಸ್ಫೋಟನೆ ಇಲ್ಲಿಲ್ಲ; 5. ಪ್ರಕೃತಿಯ ಒಳ್ಳೆಯ ವಾಯು ಮತ್ತು ಬೆಳಕಿನ ಪರಿಣಾಮವಾಗಿ ಹೆಚ್ಚಿನ ಕಾರ್ಯಾಚರಣೆ ಇಲ್ಲಿ ಸಾಧ್ಯ. ಮಳೆಗಾಲದಲ್ಲಿ ತೆರೆದ ಗಣಿಗಳಲ್ಲಿ ಸರಿಯಾದ ಕೆಲಸ ನಡೆಸಲಾಗದಿರುವುದು ಒಂದು ಮುಖ್ಯ ಅನನುಕೂಲ. ತೆರೆದ ಗಣಿ ಕಾರ್ಯಾಚರಣೆಯನ್ನು ಸಾಮಾನ್ಯವಾಗಿ ತೋಳ್ಬಲ ಎಂದರೆ ಕರಚಲ (ಮ್ಯಾನುವಲ್) ಮತ್ತು ಯಂತ್ರಚಲ (ಮೆಕಾನಿಕಲ್) ಎಂಬುದಾಗಿ ವಿಭಾಗಿಸಬಹುದು. ಅನಾವಶ್ಯಕ ವಸ್ತುಗಳ ವಿನಿಯೋಗ, ಖನಿಜವನ್ನು ಹೊರತೆಗೆಯುವುದು ಸುರಂಗ ರಂಧ್ರ ಕೊರೆಯುವುದು ಇವೇ ಮುಂತಾದ ಕೆಲಸಗಳನ್ನು ಕರಚಲವಾಗಿಯೇ ನಡೆಸಲಾಗುವುದು. ಇಂಥ ಗಣಿಯಲ್ಲಿ ಅದಿರಿನ ಉತ್ಪಾದನೆ ಬಹಳ ಕಡಿಮೆ ಮತ್ತು ಇದು ಅಷ್ಟು ಲಾಭದಾಯಕವಲ್ಲ. ಪುರ್ಣ ಯಂತ್ರಚಲ ಅನಾವೃತಗಣಿಯಲ್ಲಿ ಸುರಂಗರಂಧ್ರ ಕೊರೆಯುವುದರಿಂದ ಆರಂಭವಾಗಿ ಖನಿಜವನ್ನು ರೈಲು ಅಥವಾ ಹಡಗಿಗೆ ತುಂಬುವವರೆಗಿನ ಪ್ರತಿಯೊಂದು ಕೆಲಸವೂ ಯಂತ್ರಗಳಿಂದಲೇ ಆಗುತ್ತದೆ. ಈ ಕೆಲಸಕ್ಕಾಗಿ ಉಪಯೋಗಿಸುವ ಮುಖ್ಯ ಯಂತ್ರಗಳೆಂದರೆ ಡ್ರ್ಯಾಗ್ ಲೈನ್್ಸ, ವ್ಯಾಗನ್ ಡ್ರಿಲ್್ಸ, ಡಂಪಿಂಗ್ ಟ್ರಕ್್ಸ, ಬಕೆಟ್ ವ್ಹೀಲ್ ಎಕ್್ಸಕವೇಟರ್್ಸ ಇತ್ಯಾದಿ. ಒಂದು ತೆರೆದ ಗಣಿಯಲ್ಲಿ ಸಮಗ್ರ ಖನಿಜ ನಿಕ್ಷೇಪವನ್ನು ಒಂದೇ ಬಾರಿಗೆ ತೆಗೆಯುವುದು ಅಸಾಧ್ಯ. ಸುರಕ್ಷಿತತೆಯ ದೃಷ್ಟಿಯಿಂದ ಈ ನಿಕ್ಷೇಪವನ್ನು ಹಲವು ಬೆಂಚುಗಳನ್ನಾಗಿ (ಬೆಂಚಿಂಗ್) ವಿಂಗಡಿಸಿದ ಬಳಿಕ ಆ ಬೆಂಚುಗಳಲ್ಲಿ ಖನಿಜವನ್ನು ಏಕಕಾಲದಲ್ಲಿ ತೆಗೆಯಲಾಗುವುದು. ಈ ಕಾರಣಕ್ಕಾಗಿ ಇದನ್ನು ಬೆಂಚಿನ ಗಣಿ ಎಂದು ಸಹ ಕರೆಯುವುದುಂಟು.

ಸುರಂಗ ಪದ್ಧತಿ[ಸಂಪಾದಿಸಿ]

ತೆರೆದ ಗಣಿಗಳಲ್ಲಿ ಸುರಂಗ ಪದ್ಧತಿ ಬಹಳ ಬಿರುಸು. ಇಲ್ಲಿ ಭೂಗತ ಗಣಿಯಲ್ಲಿ ಇರುವಂತೆ ಅಡ್ಡಿ ಆತಂಕಗಳು ಇಲ್ಲ. ಬಾವಿ ಕೊರೆಯುವ ಬೈರಿಗೆಯನ್ನು ಉಪಯೋಗಿಸಿ ಅತಿ ದೊಡ್ಡ ವ್ಯಾಸವುಳ್ಳ ರಂಧ್ರಗಳನ್ನು ಕೊರೆದು ಸಿಡಿಮದ್ದನ್ನು ತುಂಬಿ ಹೊಡೆಯುತ್ತಾರೆ. ಇದಕ್ಕೆ ಪ್ರಾಥಮಿಕ ಸುರಂಗ ಪದ್ಧತಿ ಎಂದು ಹೆಸರು. ಇಂಥ ಸುರಂಗ ಪದ್ಧತಿಯಲ್ಲಿ ಒಂದು ಬಾರಿಗೆ 500 ರಿಂದ 1000 ಟನ್ ಖನಿಜವನ್ನು ಬೇರ್ಪಡಿಸಬಹುದು. ಇದರಲ್ಲಿ ದೊರೆಯುವ ಬಲುದೊಡ್ಡ ಶಿಲಾಖಂಡ ಗಳನ್ನು ಸಣ್ಣ ಸಿಡಿಮದ್ದನ್ನು ಇಟ್ಟು ದ್ವಿತೀಯಕ ಸುರಂಗ ಪದ್ಧತಿಯಿಂದ ಸಣ್ಣ ಚೂರುಗಳನ್ನಾಗಿ ಮಾಡುತ್ತಾರೆ. ಲೋಹಾಂಶ ಕಡಿಮೆ ಇರುವ ಖನಿಜಗಳಿಂದ ಲೋಹವನ್ನು ಲಾಭದಾಯಕವಾಗಿ ಪಡೆಯಬೇಕಾದರೆ ಅಗಾಧ ಗಾತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೇರಳವಾಗಿ ಖನಿಜಗಳನ್ನು ಸುಲಭ ವೆಚ್ಚದಲ್ಲಿ ತೆಗೆಯಲು ತೆರೆದ ಗಣಿ ವಿಧಾನದಿಂದ ಮಾತ್ರ ಸಾಧ್ಯ. ಇಂಥ ಗಣಿಗಳಲ್ಲಿ ಕೆಲಸ ನಡೆಯುವ ವಿಧಾನವನ್ನು ಮುಂದೆ ವಿವರಿಸಿದೆ.

ಗುಂಡಿಗಳು, ಟ್ರೆಂಚುಗಳು[ಸಂಪಾದಿಸಿ]

ಭೂಮಿಯ ಮೇಲು ಭಾಗದಲ್ಲಿಯೇ ಸ್ವಲ್ಪ ಮೊತ್ತದಲ್ಲಿ ಸಿಕ್ಕುವ ಖನಿಜಗಳನ್ನು ತೆಗೆಯಲು ಸಣ್ಣ ಗುಂಡಿಗಳನ್ನೂ ಅಡ್ಡ ಕಾಲುವೆಯಂಥ ಟ್ರೆಂಚುಗಳನ್ನೂ ತೋಡುತ್ತಾರೆ. ಈ ಕಾರ್ಯಕ್ಕೆ ಅಂಥ ಯಂತ್ರೋಪಕರಣಗಳು ಬೇಕಿಲ್ಲ.

ಕಲ್ಲರೆ ಅಥವಾ ಕ್ವಾರಿ[ಸಂಪಾದಿಸಿ]

ಕಲ್ಲುಬಂಡೆಗಳನ್ನು ತೆಗೆಯಲು ದೊಡ್ಡದಾದ ಬಂಡೆಯನ್ನು ಹಂತ ಹಂತವಾಗಿ ಕಡೆಯುತ್ತಾರೆ. ಈ ಹಂತಗಳನ್ನು ಬಿಡಿಸುವುದಕ್ಕೆ ಸಿಡಿಮದ್ದಿನ ಉಪಯೋಗ ಉಂಟು. ಬೆಂಗಳೂರಿನ ಸುತ್ತಮುತ್ತ ಸುಟ್ಟಕಲ್ಲಿಗಾಗಿ ತೆಗೆದಿರುವ ಕ್ವಾರಿಗಳು ಈ ರೀತಿಯವು. ಇವು ಸಣ್ಣ ಗಾತ್ರದವಾಗಿರಬಹುದು, ಅಥವಾ ರೈಲುಮಾರ್ಗಗಳನ್ನೊಳ ಗೊಂಡು ಭೂತಾಕಾರದ ಕ್ರೇನುಗಳು ಮತ್ತು ಷೊವೆಲ್ಲುಗಳ ಸಹಾಯದಿಂದ ಕಲ್ಲುಮಣ್ಣನ್ನು ದೂರಸಾಗಿಸುವ ಬೃಹದಾಕಾರದ ಗಣಿಗಳಾಗಿಯೂ ಇರಬಹುದು. ಬಾಬಾಬುಡನ್ ಶ್ರೇಣಿಯ ಕೆಮ್ಮಣ್ಣು ಗುಂಡಿಯಲ್ಲಿನ ಕಬ್ಬಿಣದ ಗಣಿ, ಹೊಸಪೇಟೆಯ ಬಳಿಯ ಕಬ್ಬಿಣದ ಗಣಿ, ಷಹಬಾದ್ ಮತ್ತು ದಾಡಿ ಬಳಿ ಇರುವ ಸುಣ್ಣಕಲ್ಲಿನ ಗಣಿ ಈ ಬಗೆಯವು. ಭೂಮಿಯ ಮೇಲು ಪದರದಲ್ಲಿ ಸಿಕ್ಕುವ ಕಲ್ಲಿದ್ದಲು, ಅಲ್ಯುಮಿನಿಯಂ ಲೋಹದ ಅದಿರಾದ ಬಾಕ್ಸೈಟ್ ಇವೇ ಮುಂತಾದವನ್ನು ತೆಗೆಯಲು ಖನಿಜ ಪದರದ ಮೇಲಿರುವ ಕಳಪೆ ಕಲ್ಲಿನ ಹೊದಿಕೆಯನ್ನು ತೆಗೆದು ಹೊರಹಾಕಬೇಕಾಗುತ್ತದೆ. ಇದಕ್ಕೆ ಉದ್ದದ ತೋಳುಳ್ಳ ಷೊವೆಲ್ಲುಗಳನ್ನು ಉಪಯೋಗಿಸುತ್ತಾರೆ. ಮೊದಲಿಗೆ ಈ ಷೊವೆಲ್ಲು ಕಾಲುವೆಯ ತರಹದ ಒಂದು ಟ್ರೆಂಚನ್ನು ತೋಡುತ್ತದೆ. ಆಮೇಲೆ ಅದೇ ಷೊವೆಲ್ಲಿನ ಸಹಾಯದಿಂದ ಕಾಲುವೆಯ ಗೋಡೆಗಳನ್ನು ಹಿಂದೆ ಸರಿಸುತ್ತ ಹೋಗುತ್ತಾರೆ. ಈ ರೀತಿ ಮೇಲಿನ ಪದರವನ್ನು ತೆಗೆದಾದ ಬಳಿಕ ಕೆಳಗಿರುವ ಕಲ್ಲಿದ್ದಲಿನ ಪದರವನ್ನು ಷೊವೆಲ್ಲಿನ ಮೂಲಕ ತೋಡಿ ರೈಲುಬಂಡಿಗಳಿಗೆ ತುಂಬಿ ಹೊರಗಡೆ ಕಳಿಸುತ್ತಾರೆ. ಷೊವೆಲ್ಲುಗಳ ತೋಳಿನ ತುದಿಯಲ್ಲಿರುವ ಬಾಲ್ದಿಗಳು ಒಂದು ಸಲ ಹಲ್ಲೂರಿದರೆ ಹತ್ತು ಟನ್ನುಗಳವರೆಗೂ ತೆಗೆಯಬಲ್ಲವು. ಮದರಾಸಿನ ದಕ್ಷಿಣಕ್ಕಿರುವ ನೈವೇಲಿಯ ಬಳಿ ಕಂದುಬಣ್ಣದ ಇದ್ದಲನ್ನು ತೆಗೆಯುವ ಬೃಹದಾಕಾರದ ಬಂiÀÄಲು ಗಣಿ ಇದೆ. ಕಬ್ಬಿಣದ ಗಣಿಯಲ್ಲಿ ಮೇಲಿನ ಹೊರಹೊದಿಕೆಯನ್ನು ತೆಗೆದು ಹಾಕುವ ಬೇರೆ ಬೇರೆ ಹಂತಗಳನ್ನು ಚಿತ್ರ 1ರಲ್ಲಿ ತೋರಿಸಿದೆ.

ಬಯಲು ಗಣಿಗಳು[ಸಂಪಾದಿಸಿ]

ಭೂಮಿಯ ಮೇಲೆ ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಸುಲಭ ಬೆಲೆಯ ಕಬ್ಬಿಣದ ಅದಿರು ಅಥವಾ ತೀರ ಅಲ್ಪ ಲೋಹಾಂಶವಿರುವ ತಾಮ್ರದ ಅದಿರು ಮುಂತಾದವನ್ನು ಪಡೆಯಲು ಬೃಹದಾಕಾರದ ಗಣಿಗಳನ್ನು ತೋಡಬೇಕಾಗುತ್ತದೆ. ಇಂಥ ಗಣಿಗಳು ಸಾವಿರಾರು ಮೀಟರು ಉದ್ದ ಅಗಲವಿರುತ್ತವೆ. ಇವು ಹಂತ ಹಂತವಾಗಿ ಕೆಳಗೆ ಇಳಿದಿರುತ್ತವೆ. ದಿನಂಪ್ರತಿ ಇಂಥ ಗಣಿಗಳಿಂದ 20,000 ಟನ್ನುಗಳಿಗೂ ಹೆಚ್ಚು ಅದಿರನ್ನು ಪಡೆಯಲಾಗುವುದು. ಪ್ರಪಂಚದಲ್ಲಿ ಅತಿದೊಡ್ಡ ಬಂiÀÄಲುಗಣಿಯಾದ ಯೂಟಾದಲ್ಲಿನ ಬೆಂಗಾಮ್ ಗಣಿ ಪ್ರತಿ ದಿವಸ ಒಂದೂವರೆ ಲಕ್ಷ ಟನ್ನಿಗೂ ಮೀರಿದ ಕಳಪೆ ಕಲ್ಲನ್ನು ಕಿತ್ತೆಸೆದು ದೂರ ಒಗೆಯುತ್ತದೆ. ತಾತಾ ಕಂಪನಿಯ ಕಬ್ಬಿಣದ ಗಣಿಗಳು, ಅಸೋಸಿಯೇಟೆಡ್ ಸಿಮೆಂಟ್ ಕಂಪನಿಯ ಸುಣ್ಣ ಕಲ್ಲಿನ ಗಣಿಗಳು ಈ ಬಗೆಯ ಬಂiÀÄಲು ಗಣಿಗಳಿಗೆ ಉತ್ತಮ ನಿದರ್ಶನಗಳು. ಬಂiÀÄಲು ಗಣಿ ನೆಲ ಮಟ್ಟದಿಂದ ನೂರಿನ್ನೂರು ಮೀಟರು ಆಳಕ್ಕೂ ಇಳಿದಿರಬಹುದು. ಹಂತ ಹಂತವಾಗಿ ಮೆಟ್ಟಲಾಕಾರದಲ್ಲಿ ಗಣಿ ಕೆಳಗೆ ಇಳಿದಿರುತ್ತದೆ. ಒಂದೊಂದು ಹಂತವೂ 6-9 ಮೀ. ಎತ್ತರವಿರಬಹುದು. ಒಂದು ಹಂತದಿಂದ ಮೇಲಿನ ಹಂತಕ್ಕೆ ಏರುವುದಕ್ಕೆ ಮತ್ತು ಇಳಿಯುವುದಕ್ಕೆ ಇಳಿದಾರಿಗಳಿರುತ್ತವೆ. ಕಲ್ಲುಗಳನ್ನು ಹೊತ್ತಿರುವ ಟ್ರಕ್ಕುಗಳು ಈ ಇಳಿದಾರಿಗಳ ಮೂಲಕ ಅವನ್ನು ಮೇಲಕ್ಕೆ ಒಯ್ಯುತ್ತವೆ.

ಭೂಗತ ಗಣಿ[ಸಂಪಾದಿಸಿ]

ಹೆಸರೇ ಸೂಚಿಸುವಂತೆ ಈ ಬಗೆಯ ಗಣಿ ಭೂಮಿಯೊಳಗೆ ವ್ಯಾಪಿಸಿರುತ್ತದೆ. ಇದರ ಒಳಗೆ ಇಳಿಯುವುದಕ್ಕೆ ಹತ್ತು ಹನ್ನೆರಡು ಅಡಿ ವ್ಯಾಸವಿರುವ ಕೂಪ ಉಂಟು. ಇದು ನೇರವಾಗಿಯಾದರೂ ಇರಬಹುದು. ಇಳಿಕಲಾಗಿಯಾದರೂ ಇರಬಹುದು. ಇಂಥ ಒಂದು ಕೂಪದಿಂದ ನೂರು ಅಥವಾ ಇನ್ನೂರು ಅಡಿ ಅಂತರದಲ್ಲಿ ಮಟ್ಟಗಳನ್ನು ಕೊರೆದಿರುತ್ತಾರೆ. ಈ ರೀತಿಯಾಗಿ ಸಾವಿರಾರು ಮೀಟರುಗಳವರೆಗೂ ಗಣಿಯನ್ನು ಬೆಳೆಸಿ ಎರಡು ಮಟ್ಟಗಳ ನಡುವಿರುವ ಲೋಹಮಯ ಕಲ್ಲನ್ನು ತೆಗೆದು ಕೂಪದ ಹತ್ತು ಸಾವಿರ ಅಡಿಗಳವರೆಗೂ ಗಣಿಯನ್ನು ಬೆಳೆಸಿ ಎರಡು ಮಟ್ಟಗಳ ನಡುವಿರುವ ಲೋಹಮಯ ಕಲ್ಲನ್ನು ತೆಗೆದು ಕೂಪದ ಮೂಲಕ ಮೇಲಕ್ಕೆ ಸಾಗಿಸುತ್ತಾರೆ. ಕಲ್ಲನ್ನು ಮೇಲಕ್ಕೆ ಒಯ್ಯುವುದಕ್ಕೆ ಪಂಜರಗಳಿರುತ್ತವೆ. ಇವುಗಳಲ್ಲಿ ಒಂದರಿಂದ ಐದು ಟನ್ ತೂಕದಷ್ಟು ಕಲ್ಲನ್ನು ಮೇಲಕ್ಕೆ ರವಾನಿಸಬಹುದು. ರಾಟೆ ಯಂತ್ರಗಳು ಪಂಜರಗಳನ್ನು ಮಿನಿಟಿಗೆ 303 ಮೀ. ಮೇಲಕ್ಕೆ ಎತ್ತುತ್ತಲೊ ಇಳಿಸುತ್ತಲೊ ಇರುತ್ತವೆ. ಗಣಿ ಸುರಂಗಗಳಲ್ಲಿ ಸರಿಯಾಗಿ ವಾಯು ಆಡುವಂತೆ ಮೇಲಿನಿಂದ ತಣ್ಣನೆಯ ವಾಯುವನ್ನು ವಿದ್ಯುತ್ ಬೀಸಣಿಗೆಗಳ ಮೂಲಕ ಒಳಗೆ ರವಾನಿಸುತ್ತಾರೆ. ಅದಿರನ್ನು ತೆಗೆದಾಗ ಮೇಲೆ ಗೋಡೆ ಕುಸಿಯದಂತೆ ಮರದ ತೊಲೆಗಳನ್ನು ಕೊಟ್ಟು ಇಲ್ಲವೇ ಕಲ್ಲುಗೋಡೆಗಳನ್ನು ಅಥವಾ ಕಾಂಕ್ರೀಟು ಕಂಬಗಳನ್ನು ಕಟ್ಟಿ ಭದ್ರಪಡಿಸುತ್ತಾರೆ. ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಸಂಬಂಧ ಕಲ್ಪಿಸುವ ಕೂಪಕ್ಕೆ ವಿನ್್ಸ ಎಂದು ಹೆಸರು. ದಟ್ಟ ಚುಕ್ಕೆಗಳಿಂದ ತೋರಿಸಿರುವ ಭಾಗದಲ್ಲಿ ಲೋಹಾಂಶ ಹೆಚ್ಚು. ಇಂಥವುಗಳಿಗೆ ಕುಡಿಗಳೆಂದು (ಶೂಟ್್ಸ) ಹೆಸರು. ಈ ರೀತಿ ಗಣಿಯನ್ನು ಅನೇಕ ಖಂಡಗಳಾಗಿ ವಿಂಗಡಿಸುತ್ತ ಹೋಗುತ್ತಾರೆ. ಹೀಗೆ ಗಣಿಯನ್ನು ಸಿದ್ಧಪಡಿಸಿದ ಮೇಲೆ ಅದಿರನ್ನು ತೆಗೆಯುವ ಮುಖ್ಯ ಕೆಲಸ ಮೊದಲಾಗುತ್ತದೆ. ಇದರಲ್ಲಿಯೂ ಸಿರದ ಆಕಾರ ಯಾವ ರೀತಿ ಇದೆ ಎನ್ನುವುದನ್ನು ಅನುಸರಿಸಿ ನಾನಾತರದ ವಿಧಾನಗಳು ಬಳಕೆಯಲ್ಲಿವೆ. ಯಾವ ವಿಧಾನವನ್ನು ಬಳಸಿದರೂ ಕೆಲಸ ಮಾಡುವವರಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕಾದದ್ದು ಮುಖ್ಯ. ಎಲ್ಲ ರಾಜ್ಯಗಳಲ್ಲಿಯೂ ಗಣಿ ಕೆಲಸಗಾರರ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕಾಗಿ ಕಟ್ಟುನಿಟ್ಟಾದ ನಿಯಮಗಳಿವೆ. ಯಾವ ಗಣಿ ಮಾಲೀಕನೂ ಅವನ್ನು ಉಲ್ಲಂಘಿಸುವಂತಿಲ್ಲ. ಎರಡು ಮಟ್ಟಗಳ ನಡುವಿನ ಕಲ್ಲನ್ನು ತೆಗೆಯಲು ಸ್ಟೋಪಿಂಗ್ ಎನ್ನುವ ವಿಧಾನವನ್ನು ಬಳಸುತ್ತಾರೆ. ಇಂಥ ವಿಧಾನವನ್ನು ಚಿತ್ರ(6)ರಲ್ಲಿ ತೋರಿಸಿದೆ. ಇಲ್ಲಿ ಹಂತ ಹಂತವಾಗಿ ರಂಧ್ರಗಳನ್ನು ಕೊರೆದು ಸಿಡಿಮದ್ದನ್ನು ಉಪಯೋಗಿಸಿ ಅದಿರನ್ನು ತೆಗೆಯುವ ವಿಧಾನವನ್ನು ಗುರುತಿಸಬಹುದು. ಈ ರೀತಿ ಒಡೆದು ತೆಗೆದ ಕಲ್ಲನ್ನು ಮುಖ್ಯ ಕೂಪಗಳ ಮೂಲಕ ಮೇಲಕ್ಕೆ ಸಾಗಿಸುತ್ತಾರೆ. ಕಲ್ಲು ಮೇಲಕ್ಕೆ ಬಂದು ಅಲ್ಲಿ ನಿಂತಿರುವ ಬಂಡಿಗಳಿಗೆ ಸುರಿಯುವಂತೆ ಅನುಕೂಲಿಸಲು ಕೂಪಗಳ ಮೇಲೆ ಉಕ್ಕಿನಿಂದ ತಯಾರಾದ ಒಂದು ಗೋಪುರ ಉಂಟು. ಇಂಥ ಗೋಪುರಗಳನ್ನು ಭೂಗತ ಗಣಿಗಳಿರುವ ಎಲ್ಲ ಪ್ರದೇಶಗಳಲ್ಲಿಯೂ ಗುರುತಿಸಬಹುದು. ಅಮೆರಿಕ ಮತ್ತು ರಷ್ಯ ದೇಶಗಳು ಗಣಿಗಾರಿಕೆಯಲ್ಲಿ ಬಹು ಮುಂದುವರಿದ ದೇಶಗಳಾಗಿವೆ. ಅತ್ಯಂತ ಆಧುನಿಕ ವಿಧಾನಗಳನ್ನು ಬಳಸಿ ಹೇರಳವಾಗಿ ಅದಿರನ್ನು ನೆಲದಿಂದ ತೆಗೆಯುವ ಕಲೆಯಲ್ಲಿ ಆ ದೇಶಿಗರು ಪರಿಣತರಾಗಿದ್ದಾರೆ. ಪ್ರಪಂಚದ ಮುಖ್ಯ ಗಣಿಗಳಿರುವುದೆಲ್ಲ ಈ ದೇಶಗಳಲ್ಲಿ. ಈಚಿನ ವರ್ಷಗಳಲ್ಲಿ ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಜಪಾನ್, ಜರ್ಮನಿ, ಇಂಗ್ಲೆಂಡ್ ಈ ರಾಜ್ಯಗಳಲ್ಲಿ ಗಣಿಗಾರಿಕೆ ಏಳ್ಗೆ ಹೊಂದುತ್ತಿದೆ. ಪ್ರಾಚೀನ ಕಾಲದಲ್ಲಿ ಭಾರತ ಗಣಿಗಾರಿಕೆಗೆ ಹೆಸರಾಗಿದ್ದರೂ ಈಗ ಇನ್ನೂ ಹಿಂದುಳಿದಿದೆಯೆಂದೇ ಹೇಳಬೇಕು. ಪ್ರಪಂಚದ ಮುಖ್ಯ ಗಣಿಗಳ ಸಾಲಿಗೆ ಸೇರುವಂಥ ಗಣಿ ಎಂದರೆ ಕೋಲಾರದ ಚಿನ್ನದ ಗಣಿ ಒಂದೇ. ಇಲ್ಲಿನ ಗಣಿ 3660 ಮೀ ಆಳದವರೆಗೂ ಇಳಿದು ಪ್ರಪಂಚದಲ್ಲೆಲ್ಲ ಅತ್ಯಂತ ಆಳವಾದ ಗಣಿಯೆಂದು ಹೆಸರು ಗಳಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಆಧುನಿಕ ವಿಧಾನಗಳನ್ನು ಬಳಸಿ ದೊಡ್ಡ ಗಾತ್ರದಲ್ಲಿ ಕಬ್ಬಿಣ ಅದಿರು ಮತ್ತು ಕಲ್ಲಿದ್ದಲಿನ ಗಣಿಗಳು ಕೆಲಸ ಮಾಡುತ್ತಿವೆ. ಗಣಿಗಾರಿಕೆಯಲ್ಲಿ ಭಾರತ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಾಗಿದೆ. ಮಿಶ್ರ ವಿಧಾನಗಳು : ಬಹಳ ದೊಡ್ಡ ಗಾತ್ರದಲ್ಲಿ ಗಣಿಗಳನ್ನು ತೋಡುವಾಗ ಸಂದರ್ಭವನ್ನು ಅನುಸರಿಸಿ ತೆರೆದ ಮತ್ತು ಭೂಗತ ವಿಧಾನಗಳೆರಡನ್ನೂ ಸೂಕ್ತವಾಗಿ ಆರಿಸಿಕೊಂಡು ಕೆಲಸ ನಡೆಸುತ್ತಾರೆ. ಸಮುದ್ರ ತೀರದಲ್ಲಿ ಕೊಲ್ಲಿ ಖಾರಿಗಳ ಬಳಿ ಬೆಟ್ಟಗಳ ಪಕ್ಕದಲ್ಲಿ ತಪ್ಪಲಿನಲ್ಲಿ ಮತ್ತು ನದೀಮುಖಜ ಭೂಮಿಗಳ ಹತ್ತಿರ ಮತ್ತು ಭೂಮಿಯ ಮೇಲೆ ಅದಿರು ಎಲ್ಲಿ ಗೋಚರವಾಗುವುದೋ ಅಲ್ಲೆಲ್ಲ ತೆರೆದ ಗಣಿ ವಿಧಾನದಿಂದ ಕೆಲಸ ಮಾಡಬಹುದು. ಬಹಳ ಆಳವಾಗಿ ಹಬ್ಬಿರುವ ನಿಕ್ಷೇಪಗಳಿಗೂ ಕಡಿದಾಗಿರುವ ಲೋಹಸಿರಗಳಿಗೂ ಭೂಗತಗಣಿವಿಧಾನಗಳನ್ನು ಬಳಸಬೇಕು. ಖನಿಜ ನಿಕ್ಷೇಪಗಳನ್ನು ಪರಿಶೀಲಿಸಿ, ಬಹಳ ಎತ್ತರವಾದ ಮೇಲು ಹೊದಿಕೆಯಿಲ್ಲದೆ ಇರುವ ಪದರಗಳ ರೂಪದಂತಿರುವ ನಿಕ್ಷೇಪಗಳಿಗೆ (ಕಬ್ಬಿಣದ ಅದಿರುಗಳು, ಕಲ್ಲಿದ್ದಲು ಇತ್ಯಾದಿ,) ತೆರೆದ ಗಣಿ ವಿಧಾನಗಳೇ ಅತ್ಯುಪಯುಕ್ತವಾದವು. ಬೈರಪುರ ಕ್ರೋಮಿಯಂ ಗಣಿಗಳಲ್ಲಿ ಮೊದಲು ಈ ವಿಧಾನಗಳಿಂದಲೇ ಅದಿರನ್ನು ತೆಗೆಯುತ್ತಿದ್ದರು. ಈಚೆಗೆ ನಡೆಸಿದ ಸಂಶೋಧನೆಗಳಿಂದ ಒಳ್ಳೆಯ ಅದಿರು ಹೇರಳವಾಗಿ ಆಳದಲ್ಲಿದೆ ಎಂದು ತಿಳಿದು ಬಂದ ಮೇಲೆ ಭೂಗತ ಗಣಿ ವಿಧಾನಗಳನ್ನು ಬಳಸುತ್ತಿದ್ದಾರೆ. ಸಣ್ಣ ಗಣಿಗಳಲ್ಲಿ, ಕೆಲಸವನ್ನು ಆರಂಭಿಸುವಾಗ ಅಲ್ಲದೇ, ಮೇಲು ಹೊರೆ ಬಹಳ ಗಟ್ಟಿಯಾಗಿಲ್ಲದೆ ಮರಳು, ಮಣ್ಣು, ಗರಸು, ಮರಳುಕಲ್ಲು, ಸ್ಲೇಟ್ ಮೊದಲಾದ ವಸ್ತುಗಳಿಂದ ನಿರ್ಮಿತವಾಗಿದ್ದರೆ ಮನುಷ್ಯರೇ ಹಾರೆ ಪಿಕಾಸಿಗಳಿಂದ ಕಡಿದು ಗುದ್ದಲಿಯಿಂದ ಬಾಣಲೆಗಳಲ್ಲಿ ತುಂಬಿ ಕೈಗಾಡಿಗಳ ಮೂಲಕ ಸಾಗಿಸಬಹುದು. ಗಟ್ಟಿಯಾದ ಗ್ರಾನೈಟ್, ನೀಸ್, ಬೆಸಾಲ್್ಟ ಮೊದಲಾದ ಶಿಲೆಗಳಿದ್ದರೆ ರಂಧ್ರಗಳನ್ನು ಕೊರೆದು ಸಿಡಿಮದ್ದನ್ನು ಬಳಸಿ ಗಟ್ಟಿ ಕಲ್ಲನ್ನು ಒಡೆಯಬೇಕು.

ಉತ್ಖನನ ವಿಧಾನಗಳು[ಸಂಪಾದಿಸಿ]

ದೊಡ್ಡ ದೊಡ್ಡ ಗಣಿಗಳಲ್ಲಿ ದಿನಕ್ಕೆ ಸಾವಿರಾರು ಟನ್ ಮೇಲ್ಮಣ್ಣನ್ನೂ ಅದಿರನ್ನೂ ತೋಡಿ ತೆಗೆಯಬೇಕಾಗಿರುವುದರಿಂದ ಆಧುನಿಕ ಉತ್ಖನನ ಯಂತ್ರೋಪಕರಣಗಳನ್ನು ಬಳಸುತ್ತಾರೆ. ಕ್ರಮಬದ್ಧವಾಗಿ ನಡೆಸುವ ದೊಡ್ಡ ಗಣಿಗಳಲ್ಲಿ ತೋಡುವುದಕ್ಕೆ ಬಳಸಲು, ತೋಡಿದ ಮಣ್ಣನ್ನು ತುಂಬಲು ಮತ್ತು ಅದನ್ನು ದೂರ ಸಾಗಿಸಲು ಬೇರೆ ಬೇರೆ ಯಂತ್ರಗಳಿವೆ. ಇವುಗಳ ಸಹಾಯದಿಂದ, ಮೊದಲಿಗೆ ಸಾಧ್ಯವೆಂದು ಊಹಿಸಲೂ ಆಗದಷ್ಟು ಎತ್ತರವಾಗಿರುವ ಮೇಲ್ಮಣ್ಣನ್ನು ಬಹಳ ಬೇಗ ಕಡಿದು ಸಾಗಿಸಬಹುದು. ಅನೇಕ ಕೆಲಸಗಾರರ ಗುಂಪುಗಳು ಬಹಳ ಕಾಲದಲ್ಲಿ ಮಾಡುತ್ತಿದ್ದ ಕೆಲಸವನ್ನು ಎಕ್್ಸ್ಕವೇಟರ್, ಬುಲ್ಡೋಜರ್, ಡಂಪರ್ ಎಂಬ ನವೀನ ಯಂತ್ರೋಪಕರಣಗಳು ಅತ್ಯಲ್ಪ ಕಾಲದಲ್ಲಿ ಮುಗಿಸುತ್ತವೆ. ಎಕ್್ಸ್ಕವೇಟರಿನ ಬಾಲ್ದಿಯಲ್ಲಿ ಒಂದು ಮೋಟಾರ್ ಕಾರಿನಲ್ಲಿ ತುಂಬುವಷ್ಟು ಸಾಮಾನನ್ನು ತುಂಬಬಹುದು ಮತ್ತು ದಾರಿಮಾಡಿಕೊಂಡು ಮುಂದೆ ನುಗ್ಗಬಹುದು. ಈಗ ಕಲ್ಲಿದ್ದಲು, ಕಬ್ಬಿಣ ಮ್ಯಾಂಗನೀಸ್ ಮೊದಲಾದ ಅದಿರುಗಳನ್ನು ತೆಗೆಯಲು ರಷ್ಯದಲ್ಲಿ ವಿಶೇಷವಾಗಿ ತೆರೆದ ಗಣಿ ವಿಧಾನಗಳನ್ನು ಬಳಸುತ್ತಿದ್ದಾರೆ. ವರ್ಷಕ್ಕೆ ಒಂದು ಕೋಟಿ ಟನ್ ಕಬ್ಬಿಣದ ಅದಿರುಗಳನ್ನು ತೆಗೆಯುತ್ತಿದ್ದಾರೆ; 3,000 ಗುಂಡಿಗಳಲ್ಲಿ 60 ಕೋಟಿ ಟನ್ ಶಿಲೆ ಜಲ್ಲಿಕಲ್ಲು ಮರಳು ಮತ್ತು ಕಟ್ಟಡದ ಕಲ್ಲು ದೊರೆಯುತ್ತಿವೆ. ಗಯಾನಾ ಬಾಕ್ಸೈಟುಗಳಲ್ಲಿ ವರ್ಷಕ್ಕೆ 30 ಲಕ್ಷ ಘನಮೀಟರುಗಳಿಗಿಂತ ಹೆಚ್ಚು ಗಾತ್ರದಲ್ಲಿ ಮೇಲ್ಮಣ್ಣನ್ನು ಡ್ರಾಗ್ ಲೈನ್ ಎಕ್್ಸಕವೇಟರ್ ಸಹಾಯದಿಂದ ತೆಗೆಯುತ್ತಾರೆ. ಪುಡಿ ಮಾಡಿದ ಶಿಲೆ ಅಥವಾ ಅದಿರನ್ನು ವಾಹನಗಳಲ್ಲಿ ತುಂಬಿ ಬೇರೆ ಕಡೆ ಸಾಗಿಸಿ ರಾಶಿ ಮಾಡಲು ಬೇಕಾಗುವ ಕಾಲ, ಸರಾಸರಿ ವೇಗ ಇದೆಲ್ಲವನ್ನೂ ನಿರ್ಧರಿಸಿ ಎಲ್ಲದರ ಖರ್ಚನ್ನು ವಿಮರ್ಶಿಸಿ ಮೇಲು ಹೊದಿಕೆಯನ್ನು ಕಡಿದು ಸಾಗಿಸುವ ವ್ಯವಸ್ಥೆಯನ್ನು ಮಾಡುತ್ತಾರೆ.

ಗಣಿಗಾರಿಕೆ, ಅಲೋಹ ಖನಿಜಗಳ[ಸಂಪಾದಿಸಿ]

ಕಲ್ಲಿದ್ದಲು, ಕೈಗಾರಿಕೆಗಳಿಗೆ ಬಳಸುವ ಖನಿಜಗಳು, ಕಲ್ಲುಪ್ಪು ಮೊದಲಾದ ಉಪ್ಪುಗಳು, ಗಂಧಕ ಮತ್ತು ಗೊಬ್ಬರದ ಖನಿಜಗಳು, ಕಲ್ಲೆಣ್ಣೆ (ಪೆಟ್ರೋಲಿಯಂ, ಖನಿಜತೈಲ), ಕಟ್ಟಡಗಳಿಗೆ ಬೇಕಾಗುವ ಸಾಮಗ್ರಿಗಳು ಇವೇ ಮೊದಲಾದ ಅಲೋಹ ಖನಿಜಗಳನ್ನು ಕುರಿತ ಗಣಿಗಾರಿಕೆ. ಖನಿಜದ ಉತ್ಪನ್ನ ಹೆಚ್ಚುತ್ತ ಬಂದಂತೆ ಕಲ್ಲಿದ್ದಲು ಮತ್ತು ಇತರ ನಿಕ್ಷೇಪಗಳನ್ನು ಕತ್ತರಿಸುವುದಕ್ಕೂ ಒಡೆದ ಖನಿಜಗಳನ್ನು ತುಂಬಿ ಸಾಗಿಸುವುದಕ್ಕೂ ವಿಶೇಷ ಯಂತ್ರಗಳು ನಿರ್ಮಿತವಾದುವು. ಕಲ್ಲಿದ್ದಲು, ಕಲ್ಲುಪ್ಪು, ಟಾಲ್್ಕ, ಚಿಪ್ಪುಗಳಿರುವ ಸುಣ್ಣದ ಕಲ್ಲುಗಳನ್ನು ಕತ್ತರಿಸಲು ಬೇರೆ ಬೇರೆ ಯಂತ್ರಗಳಿವೆ. ಇವು ಒತ್ತಡದ ವಾಯು ಅಥವಾ ವಿದ್ಯುಚ್ಛಕ್ತಿಯಿಂದ ಕೆಲಸ ಮಾಡುತ್ತವೆ. ಕಲ್ಲಿದ್ದಲಿನ ಸ್ತರಗಳು ಬಹಳ ತೆಳುವಾಗಿರಬಹುದು; ಅರ್ಧ ಮೀಟರಿನಿಂದ ಮೂರು ಮೀಟರ್ ಅಥವಾ ಇನ್ನೂ ಹೆಚ್ಚು ದಪ್ಪವಾಗಿರಬಹುದು. ಹೀಗೆ ನಾನಾ ರೀತಿಯಲ್ಲಿ ಸಿಕ್ಕುವ ಸ್ತರಗಳನ್ನು ಕತ್ತರಿಸಿ ಸಾಗಿಸಲು ಬೇರೆ ಬೇರೆ ಯಂತ್ರ್ರಗಳೂ ವಿಧಾನಗಳೂ ಇವೆ. ಸ್ತರಗಳ ಎತ್ತರ, ಇಳಿವೋರೆ, ರಚನೆ, ಮೇಲೆ ಮತ್ತು ಕೆಳಗಿರುವ ಶಿಲೆಗಳ ಸ್ವಭಾವ, ಮೀಥೇನ್ ಅನಿಲದ ಇರುವಿಕೆ ಇತ್ಯಾದಿ ಅಂಶಗಳನ್ನು ಪರಿಶೀಲಿಸಿ ಆಯಾ ಸ್ಥಳಕ್ಕೆ ತಕ್ಕ ವಿಧಾನವನ್ನು ಆರಿಸಿಕೊಳ್ಳಬೇಕು. ಕಲ್ಲಿದ್ದಲನ್ನು ಒಡೆದು ಪುಡಿಮಾಡಿ ಸಾಗಿಸಿದ ಮೇಲೆ ತಡಮಾಡದೆ ಆ ಖಾಲಿ ಜಾಗವನ್ನು ಕೆಲಸಕ್ಕೆ ಬಾರದ ವಸ್ತುಗಳಿಂದ ತುಂಬಿ ಮುಚ್ಚಿಬಿಡಬೇಕು; ಅಥವಾ ಮರದ ಮತ್ತು ಕಬ್ಬಿಣದ ತೊಲೆಗಳ ಆಧಾರವನ್ನು ಕೊಡಬೇಕು. ಇಲ್ಲದಿದ್ದರೆ ಮೇಲಿರುವ ಶಿಲೆ ಕುಸಿದು ಬಹಳ ನಷ್ಟವೂ ಅಪಾಯವೂ ಆಗಬಹುದು. ಮೊದಮೊದಲು ಕಲ್ಲಿದ್ದಲನ್ನು ಜನರು ಕೈಗಳಿಂದಲೇ ಒಡೆದು ತುಂಬಿ ಕೈಗಾಡಿಗಳಲ್ಲಿ ಸಾಗಿಸುತ್ತಿದ್ದರು. 20ನೆಯ ಶತಮಾನದ ಆದಿಯಲ್ಲಿ ಗಣಿಗಳ ಯಾಂತ್ರೀಕರಣ ಮೊದಲಾಯಿತು. ಕಲ್ಲಿದ್ದಲಿನ ಸ್ವಭಾವನ್ನು ಪರಿಶೀಲಿಸಿ, ಗಿರಾಕಿಗೆ ಬೇಕಾದ ಗಾತ್ರದಲ್ಲಿ ಸರಬರಾಜು ಮಾಡುವಂತೆ, ನಿಯತವಾದ ಅಂತರದಲ್ಲಿ ಸ್ತರಗಳಲ್ಲಿ ಗುಳಿಗಳನ್ನು ಕೊರೆದು ಗೊತ್ತಾದ ಗಾತ್ರದಲ್ಲಿ ಸಿಡಿಮದ್ದನ್ನು ತುಂಬಿ ಹೊತ್ತಿಸಬೇಕು. ಅದಕ್ಕೆ ಮೊದಲು ಒಳಗೆ ಇರುವ ಕೆಲಸಗಾರರನ್ನೆಲ್ಲ, ವಾಯು ಬೆಳಕು ಚೆನ್ನಾಗಿ ಇದ್ದು ಮೇಲ್ಚಾವಣಿ ಕುಸಿಯದಂತೆ ಇರುವ ಮತ್ತು ಸಿಡಿದ ಖನಿಜಗಳ ಚೂರುಗಳು ಹಾರಿಬರದಂತೆ ಇರುವ, ಭದ್ರವಾದ ಜಾಗಕ್ಕೆ ಕಳುಹಿಸಿರಬೇಕು. ಕಲ್ಲಿದ್ದಲಿನ ಸ್ತರಗಳು ಕಡಿದಾಗಿದ್ದರೆ ಅದರ ಚೂರುಗಳು ಕೆಳಕ್ಕೆ ಜಾರಿಬೀಳುತ್ತವೆ. ಸ್ಕ್ರೇಪರುಗಳ ಮೂಲಕ ಅವನ್ನು ತುಂಬಿ ಹೊರಕ್ಕೆ ಸಾಗಿಸಬಹುದು. ಬಹಳ ದಪ್ಪವಾದ ಪದರುಗಳಿದ್ದರೆ ಅವನ್ನು ಭಾಗಶಃ ಕತ್ತರಿಸಿ ತೆಗೆಯುತ್ತಾರೆ. ಕಲ್ಲಿದ್ದಲಿನ ಎರಡು ಸ್ತರಗಳ ನಡುವೆ ಅಂತರ ಹೆಚ್ಚಾಗಿದ್ದರೆ ಅವನ್ನು ಬೇರೆ ಬೇರೆಯಾಗಿ ಹೇಗೆ ಬೇಕಾದರೂ ತೋಡಿ ತೆಗೆಯಬಹುದು. ಬಹಳ ಆಳವಾದ ಗಣಿಗಳಲ್ಲಿ ಆಗಾಗ ಶಿಲೆಗಳು ಬಹಳ ದೂರದವರೆಗೆ ಅಲ್ಲಾಡುತ್ತವೆ. ಕಲ್ಲಿದ್ದಲಿನ ಮತ್ತು ಶಿಲೆಯ ದೂಳು ಏಳುತ್ತದೆ. ಮೇಲಿರುವ ಶಿಲೆಯ ತೂಕದಿಂದ ಆಧಾರದ ಕಂಬಗಳಲ್ಲಿ ಸಂಚಿತವಾದ ಶಕ್ತಿ ರೂಪಾಂತರ ಹೊಂದಿದಾಗ ಈ ಸಿಡಿತಗಳು ಉಂಟಾಗುತ್ತವೆ. 1953 ರಿಂದ ಈಚೆಗೆ ರಷ್ಯ ಮೊದಲಾದ ದೇಶಗಳಲ್ಲಿ ಜಲಧಾರಾವಿಧಾನ ಮತ್ತು ಅನಿಲೀಕರಣಗಳು ಬಳಕೆಗೆ ಬಂದಿವೆ. ಮಾನಿಟರ್ ಎಂಬ ಯಂತ್ರಗಳ ಸಹಾಯದಿಂದ ಜಲಧಾರೆಯನ್ನು ಕಲ್ಲಿದ್ದಲಿನ ಪದರಗಳ ಮೇಲೆ ಹಾಯಿಸುತ್ತಾರೆ. ಕಲ್ಲಿದ್ದಲು ಮತ್ತು ನೀರಿನ ಮಿಶ್ರಣ (ಕುಸುರಿ, ಪಲ್್ಪ) ಗಣಿಯಿಂದ ಹೊರಕ್ಕೆ ಬರುತ್ತದೆ. ಅದನ್ನು ಪಂಪುಗಳಿಂದ ಮೇಲಕ್ಕೆ ಎತ್ತುತ್ತಾರೆ. ನೀರನ್ನು ಬೇರ್ಪಡಿಸಿ ಮತ್ತೆ ಬಳಸುತ್ತಾರೆ. ಈ ವಿಧಾನದಲ್ಲಿ ಗಂಟೆಯೊಂದಕ್ಕೆ 450 ಟನ್ ಕಲ್ಲಿದ್ದಲನ್ನು ಪಡೆಯಬಹುದು. 1941ರಿಂದ ಈಚೆಗೆ ಕಲ್ಲಿದ್ದಲನ್ನು ಉರಿಯುವ ಅನಿಲಗಳ ರೂಪಕ್ಕೆ ಮಾರ್ಪಡಿಸಿ ಕೊಳಾಯಿಗಳ ಮೂಲಕ ಬಹುದೂರಕ್ಕೆ ಸಾಗಿಸುತ್ತಾರೆ. ಈ ವಿಧಾನದಿಂದ ಬಹಳ ಸಣ್ಣ ಸಣ್ಣ ಕಲ್ಲಿದ್ದಲಿನ ಸ್ತರಗಳನ್ನೂ ಉಪಯೋಗಿಸಿಕೊಳ್ಳಬಹುದು. ಈಗ ಇದು ರಷ್ಯ, ಅಮೆರಿಕ, ಯುರೋಪ್ ಖಂಡಗಳ ನಾನಾ ದೇಶಗಳಲ್ಲಿ ಬಳಕೆಯಲ್ಲಿದೆ. ಪೆಟ್ರೋಲಿಯಂ ಸಂಶೋಧನೆ ಮತ್ತು ಉತ್ಪತ್ತಿಯ ವಿಧಾನಗಳು ಬಹಳ ಮುಂದುವರೆದಿವೆ. ಅವನ್ನು ಬೇರೆಯಾಗಿಯೇ ಪರಿಶೀಲಿಸಬೇಕು. ಇತರ ಅಲೋಹ ಖನಿಜಗಳನ್ನು ಲೋಹದ ಅದಿರುಗಳಂತೆಯೇ ತೋಡಿ ತೆಗೆಯುತ್ತಾರೆ. ಸಾಧ್ಯವಾದ ಸ್ಥಳಗಳಲ್ಲೆಲ್ಲ ಅನಾವೃತಗಣಿ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಅನೇಕ ಸ್ಥಳಗಳಲ್ಲಿ ನಿಕ್ಷೇಪಗಳು ಬಹಳ ಆಳದಲ್ಲಿ ಸಿಕ್ಕುವುದರಿಂದ ಭೂಗತ ಗಣಿ ವಿಧಾನಗಳನ್ನು ಬಳಸಬೇಕಾಗುತ್ತದೆ. ಉಪ್ಪು, ಜಿಪ್ಸಂ. ಸುಣ್ಣಕಲ್ಲು, ಮರಳು, ಪೊಟಾಷ್ ಇವನ್ನು ಭೂಗತ ಗಣಿ ವಿಧಾನಗಳಿಂದ ತೆಗೆಯುವುದುಂಟು. ಆಧಾರಕ್ಕೆ ಬಿಡುವ ಕಂಬಗಳಲ್ಲಿ ಶೇ. 20 - ಶೇ. 25 ಖನಿಜ ನಿಂತು ಹೋಗುತ್ತದೆ. ಮಣ್ಣು, ಫಾಸ್ಫೇಟ್ ಶಿಲೆಗಳನ್ನು ಕೆಲವು ವೇಳೆ ಮೇಲಿಂದ ಕತ್ತರಿಸುವ ವಿಧಾನದಲ್ಲಿ ತೋಡಿ ಸಂಪುರ್ಣವಾಗಿ ತೆಗೆಯುತ್ತಾರೆ. ಟಾಲ್್ಕ, ಫ್ಲೋರ್ ಸ್ಪಾರ್, ಬ್ಯಾರೈಟಿಸ್, ಫೆಲ್ಡಸ್ಪಾರ್ ಇವನ್ನು ಕಂಬಗಳ ಆಧಾರದೊಡನೆ ಪರುವು ವಿಧಾನದಿಂದ ತೋಡಿ ತೆಗೆಯುತ್ತಾರೆ. ಸುಣ್ಣಕಲ್ಲು ಮತ್ತು ಸುದ್ದೆಮಣ್ಣು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಇವೆ. ಕಬ್ಬಿಣದ ಅದಿರನ್ನು ಕುಲುಮೆಯಲ್ಲಿ ಕರಗಿಸಲು ಸುಣ್ಣ ಕಲ್ಲು ಬೇಕು. ಪಿಂಗಾಣಿ, ಕಾಗದ, ಬಟ್ಟೆ, ರಬ್ಬರ್ ಕೈಗಾರಿಕೆಗಳಿಗೆ ಸುದ್ದೆಮಣ್ಣು ಬೇಕು. ಕೈಗಾರಿಕೆಗಳಿಗೆ ಬೇಕಾದ ಗಂಧಕ ಅಗ್ನಿಪರ್ವತಗಳ ಬಳಿ ಸಿಕ್ಕುತ್ತದೆ. ಅದು ಖನಿಜಗಳ ರೂಪದಲ್ಲೂ ಸಿಕ್ಕುತ್ತದೆ. ಲೂಸಿಯಾನದಲ್ಲಿ 152 ಮೀ. ಆಳದಲ್ಲಿರುವ ಗಂಧಕವನ್ನು ಶಿಲೆಯ ಕಂಡಿಗಳನ್ನು ಕೊರೆದು ಕೊಳಾಯಿಗಳ ಮೂಲಕ ಹೆಚ್ಚು ಕಾಸಿದ ನೀರನ್ನು ಪಂಪ್ಮಾಡಿ ಕೆಳಕ್ಕೆ ಕಳುಹಿಸುತ್ತಾರೆ. ಕಾವಿನಿಂದ ಗಂಧಕ ಕರಗಿ ಕಂಡಿಯ ತಳವನ್ನು ಸೇರುತ್ತದೆ. ಅಲ್ಲಿಂದ ವಾಯು ಯಂತ್ರದಿಂದ ಮೇಲಕ್ಕೆ ಸಾಗಿಸಿ ವಿಶಾಲವಾದ ಆಯತಾಕಾರದ ಕಡಾಯಿಗಳಲ್ಲಿ ಶೇಖರಿಸುತ್ತಾರೆ. ಅಮೆರಿಕದ ಟೆಕ್್ಸಸ್ ಸಂಸ್ಥಾನದಲ್ಲಿ ಲಕ್ಷ ಟನ್ಗಟ್ಟಲೆ ಪ್ರಮಾಣದಲ್ಲಿ ಪ್ರತಿವರ್ಷವೂ ಗಂಧಕ ಉತ್ಪನ್ನವಾಗುತ್ತದೆ. ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿಯೂ ಮನೆ ಕಟ್ಟಲು ಬೇಕಾದ ಬಗೆ ಬಗೆಯ ಸುಣ್ಣಕಲ್ಲು, ಮರಳು ಕಲ್ಲು, ಸ್ಲೇಟ್, ಗ್ರಾನೈಟ್ ಮತ್ತು ನೈಸ್ ಮೊದಲಾದ ಶಿಲೆಗಳಲ್ಲಿ ಕೆಲವಾದರೂ ಸಿಕ್ಕುತ್ತವೆ. ಕೆಲವು ಶಿಲೆಗಳಲ್ಲಿ ಸಹಜವಾಗಿಯೇ ಬಿರುಕುಗಳಿರುವವು. ಪದರಗಳ ಉದ್ದಕ್ಕೂ ಅವನ್ನು ಬಿಡಿಸಿ ತೆಗೆಯಬಹುದು. ಸಿಡಿಮದ್ದನ್ನು ಬಳಸಿ ಗಟ್ಟಿಯಾದ ಗ್ರಾನೈಟ್, ನೈಸ್ ಶಿಲೆಗಳ ಚಪ್ಪಡಿಗಳನ್ನು ಎಬ್ಬಿಸಬಹುದು. ಸ್ಲೇಟ್ ಒಂದು ರೂಪಾಂತರ ಶಿಲೆ, ಅದನ್ನು ಮೇಲ್ಚಾವಣಿಗೆ ಬಳಸಬಹುದು. ಹಾಗೂ ನೆಲಕ್ಕೆ ಹಾಸಬಹುದು. ಗ್ರಾನೈಟ್, ನೈಸ್ ಮತ್ತು ಪಾರ್ಫಿರಿ ಎಂಬ ಶಿಲೆಗಳು ಗಟ್ಟಿಯಾಗಿ ಬಾಳಿಕೆಗೆ ಬರುತ್ತವೆ. ಇವಕ್ಕೆ ಒಳ್ಳೆಯ ಮೆರಗನ್ನೂ ಕೊಡಬಹುದು. ಮನೆ ಕಟ್ಟಲು ಅಧಿಕ ಮೊತ್ತದಲ್ಲಿ ಕಲ್ಲನ್ನು ಬಳಸಿದರೂ ಅದಕ್ಕಿಂತ ಹೆಚ್ಚಾಗಿ ಕಲ್ಲನ್ನು ಪುಡಿಮಾಡಿ ರಸ್ತೆ ಕೆಲಸದಲ್ಲಿಯೂ ಕಾಂಕ್ರೀಟ್ ತಯಾರಿಸುವುದರಲ್ಲಿಯೂ ಬಳಸುತ್ತಾರೆ. ಇಟ್ಟಿಗೆ ಮಣ್ಣು ಸಾಮಾನ್ಯವಾಗಿ ಎಲ್ಲೆಲ್ಲೂ ಸಿಕ್ಕುತ್ತದೆ. ಉಷ್ಣದೇಶಗಳಲ್ಲಿ ಇಟ್ಟಿಗೆಯನ್ನು ಕೊಯ್ದು ಬಿಸಿಲಿನಲ್ಲಿ ಒಣಗಿಸುತ್ತಾರೆ. ಗೂಡುಗಳನ್ನು ಕಟ್ಟಿ ಮರಗಳನ್ನಿಟ್ಟು ಬೆಂಕಿಹಾಕಿ ಸುಡುವುದೂ ಉಂಟು. ಕಾರ್ಖಾನೆಗಳಲ್ಲಿ ಕುಲುಮೆಗಳನ್ನು ಕಟ್ಟಲು ಬಗೆಬಗೆಯ ವಿಶೇಷ ಪರಿಸ್ಥಿತಿಯ ಕಾವಿಟ್ಟಿಗೆಗಳು ಬೇಕು. ಇವನ್ನು ತಯಾರಿಸಲು ಬೇಕಾದ ಕ್ರೋಮೈಟ್, ಬಳಪದ ಕಲ್ಲು, ಮಣ್ಣು ಮೊದಲಾದ ಸಾಮಗ್ರಿಗಳು ನಮ್ಮ ದೇಶದಲ್ಲಿವೆ. ಮರಳು ಮತ್ತು ಗರಸು ನದೀಪಾತ್ರಗಳಲ್ಲಿ ಮತ್ತು ಕಡಲಕರೆಯಲ್ಲಿ ಸಿಕ್ಕುತ್ತವೆ. ಗುಂಡಿಗಳನ್ನು ತೋಡಿ ಇವನ್ನು ತೆಗೆಯುತ್ತಾರೆ. ಅನೇಕ ದಶಲಕ್ಷ ಘನ ಮೀಟರುಗಳ ಗಾತ್ರದಲ್ಲಿ ಇವು ನಮ್ಮ ದೇಶಕ್ಕೆ ಪ್ರತಿವರ್ಷವೂ ಬೇಕು. ಸಿಮೆಂಟ್, ಸುಣ್ಣಕಲ್ಲು, ಮಣ್ಣು ಮತ್ತು ಮರಳುಗಳನ್ನು ಬೆರಕೆ ಮಾಡಿ ತಯಾರಿಸಿದ ವಸ್ತು. ಇದಕ್ಕೆ ಹೆಚ್ಚಿನ ಗಿರಾಕಿ ಇದೆ.

ಗಣಿ ಕೆಲಸಗಾರರಿಗೆ ಬೇಕಾದ ಸೌಲಭ್ಯಗಳು[ಸಂಪಾದಿಸಿ]

ಕೆಲಸ ಮಾಡುವಾಗ ತಲೆಗೂ ಕಾಲಿಗೂ ಅಪಾಯವಾಗದಂತೆ ರಕ್ಷೆಯನ್ನು ನೀಡುವ ಟೋಪಿ ಮತ್ತು ಪಾದರಕ್ಷೆಗಳನ್ನು ಕೆಲಸಗಾರರಿಗೆ ಒದಗಿಸಬೇಕು. ಸಿಡಿಮದ್ದನ್ನು ಬಳಸುವಾಗ ನಾನಾ ಅನಿಲಗಳು ಉತ್ಪನ್ನವಾಗುತ್ತವೆ; ಅವುಗಳಿಂದಲೂ ಗಣಿಯೊಳಗೆ ಇರುವ ಕೆಟ್ಟ ವಾಯುವಿನಿಂದಲೂ ಅಪಾಯವಾಗದಂತೆ ಕೆಲಸಗಾರರು ಶ್ವಾಸ ಶೋಧಕಗಳನ್ನು ಉಪಯೋಗಿಸಬೇಕು. ಸಿಡಿಮದ್ದಿನಿಂದ ಒಡೆದ ಕಲ್ಲಿನ ಅಥವಾ ಅದಿರಿನ ಚೂರುಗಳು ಕಣ್ಣಿಗೆ ತಗಲದಂತೆ ಅವರು ವಿಶೇಷ ರೀತಿಯ ಕನ್ನಡಕಗಳನ್ನು ಹಾಕಿಕೊಳ್ಳಬೇಕು. ಗಣಿಯ ಒಳಗೆ ಇಳಿದಂತೆ ಕಾವು ಹೆಚ್ಚುತ್ತಾ ಹೋಗುತ್ತದೆ. ದಕ್ಷಿಣ ಆಫ್ರಿಕದ ಚಿನ್ನದ ಗಣಿಗಳಲ್ಲೂ ಕೋಲಾರದ ಚಿನ್ನದ ಗಣಿಗಳಲ್ಲೂ ಭೂತಲದಿಂದ 3050 ಮೀ ಕೆಳಗೆ ಒಂದು ಮೈಲಿಗಿಂತ ಹೆಚ್ಚು ಆಳದಲ್ಲಿ ಜನರು ಕೆಲಸ ಮಾಡುತ್ತಾರೆ. ಕೆಲಸ ಮಾಡುವವರಿಗೆ ಉಲ್ಲಾಸವಾಗುವಂತೆ ತಂಗಾಳಿಯನ್ನು ಒದಗಿಸಬೇಕು.

ಅಪಘಾತಗಳು ಮತ್ತು ಗಣಿಕೆಲಸಗಾರರ ರೋಗಗಳು[ಸಂಪಾದಿಸಿ]

ಗಣಿ ಕೆಲಸ ಬಲು ಅಪಾಯಕರವೆಂಬುದು ಸ್ಪಷ್ಟ. ಇಲ್ಲಿನ ಕೆಲಸಗಾರರಿಗೆ ಅಪಾಯವಾಗದಂತೆ ನೋಡಿಕೊಳ್ಳುವ ಕೆಲಸಕ್ಕೆ ಗಣಿ ಇಲಾಖೆಯ ಅಧಿಕಾರಿಗಳು ವಿಶೇಷ ಗಮನ ಕೊಡುತ್ತಿದ್ದಾರೆ. ಭೂಗತ ಗಣಿಗಳಲ್ಲಿ ಒಳ್ಳೆಯ ವಾಯು ಬೆಳಕಿನ ವ್ಯವಸ್ಥೆಯಿದ್ದು, ಎಲ್ಲರೂ ಎಚ್ಚರಿಕೆಯಿಂದ ಭದ್ರತಾ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ಕೆಲಸಗಾರರೂ ಮೇಲ್ವಿಚಾರಕರೂ ಸಹಕರಿಸಿ ಕೆಲಸ ಮಾಡಿದರೆ ಎಷ್ಟೊ ಅಪಘಾತಗಳನ್ನು ನಿಲ್ಲಿಸಬಹುದು. ಕಾರ್ಮಿಕರು ರಕ್ಷಾವಿಧಾನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕೆಲಸಗಾರರಿಗೆ ಅವುಗಳ ಬಗ್ಗೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕು. ಕಲ್ಲಿದ್ದಲಿನ ಮತ್ತು ಕಲ್ಲಿನಪುಡಿಯ ದೂಳಿನಿಂದ ಮತ್ತು ಸಿಡಿಮದ್ದನ್ನು ಬಳಸುವಾಗ ಉಂಟಾಗುವ ಅನಿಲಗಳಿಂದ ಕಾರ್ಮಿಕರಿಗೆ ಅಪಾಯವಾಗದಂತೆ ಅವರಿಗೆ ರಕ್ಷೆಯನ್ನು ನೀಡಬೇಕು. ಕಲ್ಲಿದ್ದಲಿನ ಗಣಿಗಳಲ್ಲಿ ತೆರೆದ ದೀಪಗಳನ್ನು ಬಳಸಲೇಕೂಡದು. ಭೂಗತ ಗಣಿಗಳಲ್ಲಿ ವಿದ್ಯುದ್ದೀಪಗಳನ್ನು ಬಳಸುವುದೇ ಮೇಲು. ಲೋಹದ ಗಣಿಗಳಲ್ಲಿ ಬೆಂಕಿಯ ಅಪಘಾತವಾದಾಗ ಮೊದಲು ಕೆಲಸಗಾರರನ್ನೆಲ್ಲ ಬೇಗ ಹೊರಕ್ಕೆ ಕಳುಹಿಸಿ ಬೆಂಕಿಯನ್ನು ಆರಿಸಬೇಕು. ಆಮ್ಲಜನಕವನ್ನು ಒಳಕ್ಕೆ ಬಿಟ್ಟು ಒಳಗಿನ ವಾಯುಸೇವನೆಗೆ ಅರ್ಹವಾಗುವಂತೆ ಮಾಡಬೇಕು. ಕೆಲವು ಜನರಿಗೆ ಪ್ರಥಮ ಚಿಕೆತ್ಸೆಯಲ್ಲಿ ಶಿಕ್ಷಣ ಕೊಡಬೇಕು. ಗಣಿಯ ಮೇಲ್ಗಡೆ ತುರ್ತು ಆಸ್ಪತ್ರೆಯಂತಿರುವ ಒಂದು ವಿಶೇಷ ಕೋಣೆ ಇರಬೇಕು. ಕೆಲಸಮಾಡುವಾಗ ಅಂಗವಿಕಲರಾದವರಿಗೆ ಪರಿಹಾರ, ವಿಶ್ರಾಂತಿ ವೇತನಗಳನ್ನು ಕೊಡಬೇಕಾಗುತ್ತದೆ; ಸತ್ತು ಹೋದವರ ಕುಟುಂಬಕ್ಕೆ ಜೀವನ ಸೌಕರ್ಯವನ್ನು ಕಲ್ಪಿಸಬೇಕಾಗುತ್ತದೆ. ನ್ಯುಮೋನಿಯಾ, ಸಂಧಿವಾತ, ಕ್ಷಯ, ಕಲ್ಲಿದ್ದಲು ಮತ್ತು ಬೆಣಚುಕಲ್ಲಿನ ದೂಳಿನ ಸೇವನೆಯಿಂದ ಬರುವ ರೋಗಗಳು, ಕೊಕ್ಕೆಹುಳುವಿನ ರೋಗ, ವಿಷವಸ್ತುಗಳು ಆಹಾರ ಅಥವಾ ದೂಳಿನಲ್ಲಿ ಸೇರಿರುವುದು, ಟೈಫಾಯಿಡ್ ಮತ್ತು ಮಲೇರಿಯ ಇವು ಸಾಮಾನ್ಯವಾಗಿ ಗಣಿಗಾರಿಕೆಗೆ ಸಂಬಂಧಿಸಿದ ರೋಗಗಳು. ಗಣಿಯಿಂದ ಮೇಲಕ್ಕೆ ಬಂದೊಡನೆ ಜನರು ಮಿಂದು ಆಹಾರವನ್ನು ಸೇವಿಸಿದರೆ ಎಷ್ಟೋ ರೋಗಗಳನ್ನು ನಿವಾರಿಸಬಹುದು.


ಗಣಿಗಾರಿಕೆ ಕಾನೂನುಗಳು[ಸಂಪಾದಿಸಿ]

ಖನಿಜ ನಿಕ್ಷೇಪಗಳ ಪುರ್ವೇಕ್ಷಣ ಕಾರ್ಯ ವಿಧಾನ; ಪುರ್ವೇಕ್ಷಕನ ಹಕ್ಕು ಬಾಧ್ಯತೆಗಳು; ಗಣಿಗಾರಿಕೆ ಕಾರ್ಯ ನಿಯಂತ್ರಣ; ಗಣಿ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ, ದುಡಿಮೆ, ವೇತನ ಇತ್ಯಾದಿ ವಿಚಾರಗಳನ್ನು ಕುರಿತ ನಿಬಂಧನೆಗಳು ಮುಂತಾದವನ್ನೊಳಗೊಂಡ ಕಾಯಿದೆಗಳು (ಮೈನಿಂಗ್ ಲಾಸ್). ಒಂದು ಪ್ರದೇಶದಲ್ಲಿ ಖನಿಜ ನಿಕ್ಷೇಪ ಇರುವ ಸಾಧ್ಯತೆಯ ಮತ್ತು ಅದನ್ನು ವಾಣಿಜ್ಯಕ ಗಾತ್ರದಲ್ಲಿ ಹೊರತೆಗೆಯುವ ಬಗ್ಗೆ ಸಾಮಾನ್ಯವಾಗಿ ಖಾಸಗಿ ಉದ್ಯಮವಲಯಕ್ಕೆ ಅವಕಾಶ ಇರುವ ಎಲ್ಲ ದೇಶಗಳಲ್ಲೂ ವ್ಯಾಪಕವಾದ ಕಾನೂನುಗಳಿರುತ್ತವೆ. ಇವನ್ನು ಸಂಬಂಧಪಟ್ಟವರು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ. ಗಣಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಸ್ಥೂಲವಾಗಿ ಎರಡು ಬಗೆ: 1 ರಿಯಾಯಿತಿ ಪದ್ಧತಿ (ಕನ್ಸೆಷನ್ ಸಿಸ್ಟೆಂ,) 2 ಗೊತ್ತುಗಾರಿಕೆ ಪದ್ಧತಿ (ಕ್ಲೇಮ್ ಸಿಸ್ಟೆಂ). ರಿಯಾಯಿತಿ ಪದ್ಧತಿ ಪ್ರಾಚೀನ ನಾಗರಿಕತೆಗಳಿರುವ ಬಹುತೇಕ ಎಲ್ಲ ದೇಶಗಳಲ್ಲೂ ಜಾರಿಯಲ್ಲಿದೆ. ಒಂದು ಪ್ರದೇಶದಲ್ಲಿಯ ಖನಿಜ ತೆಗೆಯುವ ಹಕ್ಕನ್ನು ಅಥವಾ ರಿಯಾಯಿತಿಯನ್ನು ಅಲ್ಲಿಯ ಸರ್ಕಾರವೋ ಆ ಪ್ರದೇಶದ ಒಡೆತನ ಹೊಂದಿರುವ ಖಾಸಗಿ ವ್ಯಕ್ತಿಯೋ ತನ್ನ ಸ್ವಂತ ವಿವೇಚನೆಗೆ ಅನುಗುಣವಾಗಿ ಮತ್ತು ಕೆಲವು ಸ್ಥೂಲ ನಿಬಂಧನೆಗಳಿಗೆ ಒಳಪಟ್ಟು ವ್ಯಕ್ತಿಗಳಿಗೋ ಸಂಸ್ಥೆಗಳಿಗೋ ಗುತ್ತಿಗೆಯಾಗಿ ಕೊಡುವುದು ರಿಯಾಯಿತಿ ಪದ್ಧತಿ. ನೆಲ ಹಿಂದೆ ರಾಜರ ಅಥವಾ ಊಳಿಗ ಮಾನ್ಯ ಪ್ರಭುಗಳ ಸ್ವತ್ತಾಗಿತ್ತು. ಆ ಕಾಲದಿಂದಲೂ ಈ ಪದ್ಧತಿ ಹಲವಾರು ಮಾರ್ಪಾಡುಗಳಿಗೆ ಒಳಪಟ್ಟು ಬೆಳೆದುಕೊಂಡುಬಂದಿದೆ. ಸರ್ಕಾರವೋ ಗಣಿ ಹಕ್ಕುಗಳ ಒಡೆತನ ಹೊಂದಿದವನೋ ತನಗೆ ಸೂಕ್ತವೆನಿಸದಂಥವರನ್ನು ಆರಿಸಿ ಅಂಥವರಿಗೆ ಗಣಿಗಾರಿಕೆ ಹಕ್ಕು ನೀಡಬಹುದಾದ್ದು ಈ ಪದ್ಧತಿಯ ಅನುಕೂಲ. ಗಣಿ ಕೆಲಸ ನಡೆಸುವ ಹಕ್ಕು ಪಡೆದವರು ಅದಕ್ಕೆ ಪ್ರತಿಯಾಗಿ ಬಾಡಿಗೆಯನ್ನು, ತೆರಿಗೆಯನ್ನು ಅಥವಾ ಸ್ವಾಮಿಸ್ವವನ್ನು (ರಾಯಲ್ಟಿ) ಪಾವತಿ ಮಾಡಬೇಕು. ಒಳ್ಳೆಯ ವ್ಯವಸ್ಥೆ, ವಸೂಲಿ ಕಾರ್ಯದಲ್ಲಿ ಮಿತವ್ಯಯ, ಗಣಿಕಾರ್ಯದಲ್ಲಿ ಸ್ಥಿರತೆ-ಇವನ್ನು ಸಾಧಿಸಬಹುದೆಂಬುದು ಈ ಪದ್ಧತಿಯ ಅನುಕೂಲ. ಆದರೆ ಈ ಪದ್ಧತಿಯಲ್ಲಿ ಪ್ರತಿಕೂಲಗಳಿಲ್ಲದೆಯೂ ಇಲ್ಲ. ಸ್ವತ್ತಿಗೆ ಸಂಬಂಧಿಸಿದಂತೆ ಅಗಾಧ ಅಧಿಕಾರಗಳು ಕೆಲವೇ ಜನರ ಹಸ್ತಗಳಲ್ಲಿ ಕೇಂದ್ರೀಕೃತವಾಗುತ್ತವೆ. ಸ್ಪರ್ಧೆಗೆ ಎಡೆಯಿರುವುದಿಲ್ಲ. ಕೆಲವೇ ಜನರು ಭಾರಿ ಲಾಭ ಗಳಿಸುತ್ತಾರೆ. ಗಣಿಕಾರ್ಯದ ಹಕ್ಕು ಪಡೆದುಕೊಂಡವರು ತಮ್ಮ ಅನುಕೂಲಕ್ಕೆ ತಕ್ಕಂತೆ ಅದಿರನ್ನು ಅತಿಯಾಗಿ ತೆಗೆದು ಗಣಿಯನ್ನು ಶೀಘ್ರವಾಗಿ ಬರಿದು ಮಾಡುವ, ಅಥವಾ ಸಾಕಷ್ಟು ಅದಿರನ್ನು ತೆಗೆಯದೆ ಇರುವ ಸಂಭವವುಂಟು. ಆದರೆ ಗಣಿಯನ್ನು ಅಭಿವೃದ್ಧಿ ಸ್ಥಿತಿಯಲ್ಲಿಟ್ಟಿರುವ ಬಗ್ಗೆ ಸೂಕ್ತ ವಿಧಿಗಳನ್ನು ಕರಾರಿನಲ್ಲಿ ಸೇರಿಸುವುದರ ಮೂಲಕ ಈ ಸಂಭವವನ್ನು ನಿವಾರಿಸಿಕೊಳ್ಳಬಹುದು. ಇಂಥ ಗಣಿ ಕಂಪನಿಗಳ ಹಣಕಾಸಿನ ವಹಿವಾಟುಗಳ ಮೇಲೆ ಮತ್ತು ಬಂಡವಾಳ ನಿರ್ಮಾಣದ ಮೇಲೆ ಸರ್ಕಾರ ಸೂಕ್ತ ಹತೋಟಿ ಪಡೆಯಬಹುದು. ದೊಡ್ಡ ಕಂಪನಿಗಳು ಗಣಿಕಾರ್ಯದ ಹಕ್ಕು ಪಡೆಯುವುದರಿಂದ ಅವುಗಳ ನಿರ್ವಹಣೆಯಲ್ಲಿ ಮತ್ತು ಗಣಿಗಳ ಪುರ್ವೇಕ್ಷಣೆಯಲ್ಲಿ ಮಿತವ್ಯಯವೂ ದಕ್ಷತೆಯೂ ಸಾಧಿಸಬಹುದೆಂದೂ ವಾದಿಸಲಾಗಿದೆ. ಗೊತ್ತುಗಾರಿಕೆ ಪದ್ಧತಿ ಉಗಮಿಸಿದ್ದು ಅಮೆರಿಕ ಸಂಯುಕ್ತಸಂಸ್ಥಾನದಂಥ ನೂತನ ದೇಶಗಳಲ್ಲಿ ಗಣಿಗಾರಿಕೆ ಆರಂಭವಾದ ಸಮಯದಲ್ಲಿ. ಕ್ಯಾಲಿಫೋರ್ನಿಯದಲ್ಲೂ ಆಸ್ಟ್ರೇಲಿಯದಲ್ಲೂ ಹೊಸದಾಗಿ ಬೆಳಕಿಗೆ ಬಂದ ಚಿನ್ನದ ಗಣಿಗಳೆಡೆಗೆ ಪುರ್ವೇಕ್ಷಕರು ಧಾವಿಸಿದರು. ಚಿನ್ನದ ಆಸೆಯಿಂದ ಹೀಗೆ ಹೋದವರಲ್ಲೇ ಪರಸ್ಪರ ಬಡಿದಾಟ ಉಂಟಾದಾಗ ಅದನ್ನು ನಿವಾರಿಸಲು ಗೊತ್ತುಗಾರಿಕೆ ಕಾನೂನುಗಳು ಸೃಷ್ಟಿಯಾದುವು. ಯಾರು ಯಾವ ಸ್ಥಳದಲ್ಲಿ ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚುತ್ತಾರೋ ಆ ಸ್ಥಳದಲ್ಲಿ ಗಣಿ ಕಾರ್ಯ ಕೈಗೊಳ್ಳುವ ಹಕ್ಕು ಅವರದಾಗುತ್ತದೆ ಎಂಬುದು ಸ್ಥೂಲವಾಗಿ ಇವುಗಳ ತತ್ತ್ವ. ಸಣ್ಣಪುಟ್ಟ ಹಕ್ಕುಗಳು ಉದ್ಭವಿಸಿದಾಗ ಅವನ್ನೆಲ್ಲ ಕ್ರೋಡೀಕರಿಸುವುದು ಅವಶ್ಯವಾಗುತ್ತದೆ. ಇಲ್ಲದಿದ್ದರೆ ಗಣಿಕಾರ್ಯ ಲಾಭದಾಯಕವಾಗದಿರಬಹುದು ; ಬಂಡವಾಳ ವ್ಯರ್ಥವಾಗಬಹುದು. ಮೇಲಣ ವಿವೇಚನೆಯ ದೃಷ್ಟಿಯಲ್ಲಿ ಒಟ್ಟಿನಲ್ಲಿ ಗಣಿಗಾರಿಕೆ ಕಾನೂನುಗಳಿಗೆ ಸಂಬಂಧಿಸಿದಂತೆ ಎರಡು ಮೂಲಭೂತ ತತ್ತ್ವಗಳನ್ನು ಗುರುತಿಸಬಹುದು: 1) ಗಣಿ ನಿರ್ವಾಹಕರು ತಮ್ಮ ಕಾರ್ಯಾಚರಣೆಗೆ ಒಳಪಟ್ಟ ಭೂ ಸ್ವತ್ತಿನ ಮೇಲೆ ರದ್ದು ಮಾಡಲಾಗದಂಥ ಸ್ವಸ್ವ (ಟೈಟ್್ಲ) ಪಡೆಯುವ ಹಕ್ಕು. ಇದಕ್ಕೆ ಪ್ರತಿಯಾಗಿ ನಿರ್ದಿಷ್ಟವಾದ ಮತ್ತು ಅವರ ಕಾರ್ಯವ್ಯಾಪ್ತಿಗೆ ಒಳಪಟ್ಟ ಕೆಲವು ಷರತ್ತುಗಳನ್ನು ಅವರು ಪುರೈಸಬೇಕಾಗುತ್ತದೆ. 2) ಗಣಿಯಿಂದ ಬರುವ ಲಾಭದ ಮೇಲೆ ಗೊತ್ತಾದ ಬಾಡಿಗೆ, ಸ್ವಾಮಿಸ್ವ ಅಥವಾ ತೆರಿಗೆಯನ್ನು ಪಡೆಯಲು ಸರ್ಕಾರಕ್ಕೆ ಅಥವಾ ಸ್ವತ್ತಿನ ಒಡೆಯನಿಗೆ ಹಕ್ಕು ಇರುತ್ತದೆ. ಸ್ವತ್ತು ಹಾಗೂ ಕಾರ್ಮಿಕರ ರೂಪದಲ್ಲಿರುವ ಬಂಡವಾಳ ವಿನಾಕಾರಣವಾಗಿ ಅನುಪಯೋಗಿಯಾಗಿರದಂತೆ ಗಣಿಯಲ್ಲಿ ನಿರಂತರವಾಗಿ ನ್ಯಾಯವಾದ ಹಾಗೂ ಪರಿಣಾಮಕಾರಿಯಾದ ಕಾರ್ಯ ನಡೆಯುವುದಾಗಿ ನಿರೀಕ್ಷಿಸುವ ಹಕ್ಕೂ ಸರ್ಕಾರಕ್ಕೆ ಅಥವಾ ಸ್ವತ್ತಿನ ಒಡೆಯರಿಗೆ ಉಂಟು. ಎಲ್ಲ ದೇಶಗಳ ಕಾನೂನುಗಳಲ್ಲೂ ಸ್ಥೂಲವಾಗಿ ಈ ಎರಡು ತತ್ತ್ವಗಳು ಅಂತರ್ಗತವಾಗಿರುತ್ತವೆ. ಗಣಿ ಕಾರ್ಮಿಕರಿಗೆ ಸೂಕ್ತವಾದ ವೇತನ ಪಾವತಿ, ಅವರ ಕೆಲಸದ ಕಾಲದ ನಿಯಂತ್ರಣ, ಅಪಘಾತ ಪರಿಹಾರ ಮತ್ತು ವಿಮೆ, ವಿರಾಮವೇತನ, ಸಹಾಯಾರ್ಥ ನಿಧಿ, ಕಾರ್ಮಿಕ-ವ್ಯವಸ್ಥಾಪಕ ಸಂಬಂಧಗಳು, ಕಾರ್ಮಿಕ ವ್ಯಾಜ್ಯಗಳ ಇತ್ಯರ್ಥ, ಕಾರ್ಮಿಕ ಕಲ್ಯಾಣ, ಕಾರ್ಮಿಕ ಸೌಲಭ್ಯಗಳು, ಆರೋಗ್ಯ ರಕ್ಷಣೆ, ನೈರ್ಮಲ್ಯ ಸಾಧನೆ, ಕೆಲಕೆಲವು ಗಣಿಗಳಿಗೆ ವಿಶಿಷ್ಟವಾದ ಕಾಯಿಲೆಗಳ ನಿವಾರಣೆ ಮುಂತಾದ ಅನೇಕ ವಿಚಾರಗಳನ್ನು ಕುರಿತ ಕಾನೂನುಗಳೂ ಜಾರಿಯಲ್ಲಿವೆ. ಪ್ರಪಂಚದ ಇತರ ಹಲವು ದೇಶಗಳಂತೆ ಭಾರತದಲ್ಲೂ ಮೇಲ್ಕಂಡ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಕಾನೂನುಗಳುಂಟು. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಗಣಿಗಳ ಅಭಿವೃದ್ಧಿಗಾಗಿ ಅವುಗಳ ಕಾರ್ಯವನ್ನು ಅಂಕೆಯಲ್ಲಿಡುವ ಬಗ್ಗೆ 1957ರಲ್ಲಿ ಗಣಿಗಳು ಮತ್ತು ಖನಿಜಗಳ ನಿಬಂಧನೆ ಮತ್ತು ಅಭಿವೃದ್ಧಿ ಕಾಯಿದೆ ಜಾರಿಗೆ ಬಂತು. ಈ ಶಾಸನದ ಅಥವಾ ಇದಕ್ಕೆ ಅನುಗುಣವಾಗಿ ರಚಿತವಾದ ನಿಯಮಗಳ ಪ್ರಕಾರ ಪುರ್ವೇಕ್ಷಣ ಕಾರ್ಯದ ಅನುಜ್ಞೆ ಅಥವಾ ಗುತ್ತಿಗೆ ಪಡೆಯದೆ ಯಾರಿಗೂ ಪುರ್ವೇಕ್ಷಣಕಾರ್ಯ ಅಥವಾ ಗಣಿ ಕಾರ್ಯದಲ್ಲಿ ಕೈ ಹಚ್ಚಲು ಸಾಮಾನ್ಯವಾಗಿ ಸಾಧ್ಯವಿಲ್ಲ. ಭಾರತೀಯ ಪ್ರಜೆಗಳಿಗೆ ಅಥವಾ ಭಾರತೀಯರೇ ಹೆಚ್ಚಿನ ಪಾಲು ಪಡೆದಿರುವ ಸಂಸ್ಥೆಗಳಿಗೆ ಮಾತ್ರ ಇದನ್ನು ಪಡೆಯುವ ಅರ್ಹತೆಯುಂಟು.

ಒಂದು ರಾಜ್ಯದಲ್ಲಿ ಒಬ್ಬನಿಗೆ ಪುರ್ವೇಕ್ಷಣೆಗೆ 50 ಚ.ಮೈ.ಗಿಂತ, ಗುತ್ತಿಗೆಗೆ 10 ಚ.ಮೈ.ಗಿಂತ ಹೆಚ್ಚು ಸ್ಥಳ ಸಿಗಲಾರದು. ಆದರೆ ಕೇಂದ್ರ ಸರ್ಕಾರ ಗಣಿಯ ಅಭಿವೃದ್ಧಿಗಾಗಿ ಹೆಚ್ಚು ಸ್ಥಳವನ್ನು ಕೊಡಬೇಕೆಂದು ಅಭಿಪ್ರಾಯಪಟ್ಟಲ್ಲಿ ಈ ಪರಿಮಿತಿಗಿಂತ ಹೆಚ್ಚಿಗೆ ಸ್ಥಳ ಕೊಡಬಹುದು. ಅನುಜ್ಞೆಯ ಮತ್ತು ಗುತ್ತಿಗೆಯ ಅವಧಿ, ಅರ್ಜಿಯನ್ನು ಮಾಡುವ ಕ್ರಮ, ಕೊಡಬೇಕಾದ ಸ್ವಾಮಿಸ್ವ ಮುಂತಾದವುಗಳ ಬಗ್ಗೆ ಕಾಯಿದೆಯಲ್ಲಿ ಸೂಕ್ತ ವಿಧಿಗಳಿವೆ. ಅನುಜ್ಞೆ ಮತ್ತು ಗುತ್ತಿಗೆಗಳನ್ನು ಈ ಕಾಯಿದೆಗೆ ವಿರೋಧವಾಗಿ ಕೊಟ್ಟಲ್ಲಿ ಅವು ಸಂಪುರ್ಣವಾಗಿ ಶೂನ್ಯವಾಗುತ್ತವೆ. ರಾಜ್ಯ ಸರ್ಕಾರದ ಅಭಿಪ್ರಾಯ ಪಡೆದುಕೊಂಡು ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವೇ ಸ್ವತಃ ಗಣಿ ಕಾರ್ಯ ಕೈಗೊಳ್ಳಬಹುದು. ಆದರೆ ಆ ಸಂದರ್ಭದಲ್ಲಿ ಅದು ಕೊಡಬೇಕಾದ ಸ್ವಾಮಿಸ್ವ ಇತ್ಯಾದಿಗಳನ್ನು ಖಾಸಗಿ ವ್ಯಕ್ತಿಗಳಂತೆಯೆ ಕೊಡಬೇಕಾಗುತ್ತದೆ. 1952ರಲ್ಲಿ ಭಾರತದಲ್ಲಿ ಜಾರಿಗೆ ಬಂದ ಗಣಿಗಳ ಕಾಯಿದೆ ಗಣಿನಿರ್ವಹಣೆ, ಕಾರ್ಮಿಕರ ಹಿತರಕ್ಷಣೆ ಮುಂತಾದವುಗಳ ದೃಷ್ಟಿಯಿಂದ ಅತ್ಯಂತ ಮುಖ್ಯವಾದ್ದು. ಗಣಿ ಎಂಬ ಶಬ್ದಕ್ಕೆ ಕಾನೂನಿನ ದೃಷ್ಟಿಯಿಂದ ಇಲ್ಲಿ ವ್ಯಾಖ್ಯಾನ ನೀಡಲಾಗಿದೆ. ಈ ಕಾಯಿದೆಯ ಉದ್ದೇಶಕ್ಕಾಗಿ ಯಾವ ಉದ್ಯಮವನ್ನು ಗಣಿಗಾರಿಕೆ ಎನ್ನಬೇಕು ಎಂಬುದರ ಬಗ್ಗೆ ನಿರ್ಣಯಾಧಿಕಾರ ಸರ್ಕಾರದ್ದು.

ಗಣಿಯಲ್ಲಿ ಕೆಲಸಮಾಡುವ ಕಾರ್ಮಿಕರ ಆರೋಗ್ಯವನ್ನು ಕಾಪಾಡಲು, ಗಣಿಗಳಲ್ಲಿ ಬರ ಬಹುದಾದ ಅಪಾಯಗಳನ್ನು ತಡೆಯಲು ಅನೇಕ ನಿಬಂಧನೆಗಳಿವೆ. ಈ ಉದ್ದೇಶದ ಸಾಧನೆಗಾಗಿ ಗಣಿಗಳ ಮೇಲ್ವಿಚಾರಣೆ ನಡೆಯಿಸಲು ನಿರೀಕ್ಷಕರು, ಪ್ರಮಾಣಪತ್ರ ನೀಡಬಲ್ಲ ವೈದ್ಯರು, ಗಣಿ ಮಂಡಲಿ, ಸಮಿತಿ ಮುಂತಾದವುಗಳ ನೇಮಕಕ್ಕೆ ಸೂಕ್ತ ವಿಧಿಗಳಿದ್ದು ಅವರ ಮತ್ತು ಅವುಗಳ ಅಧಿಕಾರ ವ್ಯಾಪ್ತಿಯ ನಿರ್ದೇಶವಿದೆ. ಗಣಿಗಳ ಕಾಯಿದೆಯ ನಿಬಂಧನೆಗಳು, ನಿಯಮಗಳು ಉಪನಿಯಮಗಳು ಸರಿಯಾಗಿ ಪರಿಪಾಲಿಸಲ್ಪಡುವುವೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಅಗತ್ಯವಾದ ನಿರೀಕ್ಷಣ ಮತ್ತು ತನಿಖೆ ಮಾಡುವ ಅಧಿಕಾರ ಮುಖ್ಯ ನಿರೀಕ್ಷಕ, ಅವನ ಕೈ ಕೆಳಗೆ ಕೆಲಸ ಮಾಡುವ ನಿರೀಕ್ಷಕರು-ಇವರಿಗೆ ಇದೆ. ಹಗಲೇ ಆಗಲಿ, ರಾತ್ರಿಯೇ ಆಗಲಿ ಗಣಿಯ ಕೆಲಸಕ್ಕೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಸಹಾಯಕರೊಂದಿಗೆ ಗಣಿಯನ್ನು ಪ್ರವೇಶಿಸಲು ಅವರಿಗೆ ಹಕ್ಕಿದೆ. ಗಣಿಗಳ ಪರಿಸ್ಥಿತಿ, ಗಾಳಿಯ ಕಿಂಡಿ, ಉಪನಿಯಮಗಳ ಪರ್ಯಾಪ್ತತೆ, ಕೆಲಸಗಾರರ ಸುರಕ್ಷಣೆ, ನೆಮ್ಮದಿ, ಆರೋಗ್ಯ ಈ ದೃಷ್ಟಿಯಿಂದ ಅವರು ಪರಿಶೀಲನೆ ಅಥವಾ ತನಿಖೆ ನಡೆಸಬಹುದು. ತತ್ಸಂಬಂಧವಾಗಿ ಹೇಳಿಕೆಗಳನ್ನು ಪಡೆದುಕೊಳ್ಳಬಹುದು. ಕಾಯಿದೆಯ ಉಲ್ಲಂಘನೆಯಾಗಿದೆಯೆಂಬುದು ಸಿದ್ಧ ಪಟ್ಟರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಥಳವನ್ನು ಶೋಧಿಸುವ, ಸ್ವತ್ತನ್ನು ಸ್ವಾಧೀನಪಡಿಸಿ ಕೊಳ್ಳುವ ಅಧಿಕಾರ ಅವರಿಗಿರುತ್ತದೆ. ಗಣಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿರತರಾದವರ, ಅಪಾಯಕಾರಿ ಉದ್ಯೋಗ ಅಥವಾ ಕೆಲಸಗಳಲ್ಲಿ ತೊಡಗಿಸಲಾದವರ ಪರೀಕ್ಷೆ, ಕೆಲಸದಿಂದ ಅಥವಾ ಕೆಲಸದ ಸ್ವರೂಪದಿಂದ ಅಸ್ವಸ್ಥತೆ ಬಂದುದಾಗಿ ಶಂಕೆ ಇದ್ದವರ ಪರೀಕ್ಷೆ, ಪ್ರಮಾಣಪತ್ರ ನೀಡಿಕೆ ಮುಂತಾದ ಉದ್ದೇಶಗಳಿಗಾಗಿ ವೈದ್ಯರನ್ನು ನೇಮಿಸುವ ಅಧಿಕಾರ ಸರ್ಕಾರಕ್ಕಿರುತ್ತದೆ. ಕಾಯಿದೆಗೆ ಸಂಬಂಧಿಸಿದಂತೆ ಯಾವುದೇ ಪ್ರದೇಶಕ್ಕೆ ಅಥವಾ ಗಣಿಗಳ ಸಮುದಾಯಕ್ಕೆ ಅಥವಾ ಒಂದೇ ತೆರನಾದ ಹಲವು ಗಣಿಗಳಿಗೆ ಒಂದು ಗಣಿ ಮಂಡಳಿಯನ್ನು ಸರ್ಕಾರ ರಚಿಸಬಹುದು. ಸರ್ಕಾರ, ಮಾಲೀಕರು, ಕಾರ್ಮಿಕರು-ಇವರ ಪ್ರತಿನಿಧಿಗಳನ್ನೊಳಗೊಂಡ ಮಂಡಲಿಯೊಂದು ಗಣಿ ಸಂಬಂಧವಾದ ವಿಚಾರಗಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಬಹುದು. ಆ ವರದಿಗೆ ಅನುಗುಣವಾಗಿ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಕೆಲಸಗಾರರ ಆರೋಗ್ಯ ಮತ್ತು ಸುರಕ್ಷಣೆಗಾಗಿ ಕಾಯಿದೆಯಲ್ಲಿ ಅನೇಕ ವಿಧಿಗಳಿವೆ. ಕುಡಿಯುವ ನೀರಿನ ಸರಬರಾಯಿ, ಶೌಚಗೃಹಗಳ ನಿರ್ಮಾಣ, ಶುಚಿತ್ವ, ಪ್ರಥಮ ಚಿಕಿತ್ಸೆಯ ವ್ಯವಸ್ಥೆ-ಇವನ್ನು ಒದಗಿಸುವ ಬಗ್ಗೆ ವಿಶೇಷ ವಿಧಿಗಳುಂಟು. ಅನುಚಿತವಾದ ಅಥವಾ ಅಪಾಯಕಾರಿ ಗಣಿ ಕೆಲಸದಲ್ಲಿ ಕಾರ್ಮಿಕರನ್ನು ತೊಡಗಿಸಿರುವುದು ಕಂಡು ಬಂದರೆ ತಕ್ಕ ಕ್ರಮವನ್ನು ಕೈಗೊಂಡು ಗಣಿ ವ್ಯವಸ್ಥಾಪಕರಿಗೆ ಸೂಕ್ತ ಆದೇಶವನ್ನು ಕೊಡುವ ಹಕ್ಕು ಮುಖ್ಯ ನಿರೀಕ್ಷಕನಿಗೆ ಅಥವಾ ನಿರೀಕ್ಷಕರಿಗೆ ಇರುತ್ತದೆ. ನಿರೀಕ್ಷಕನ ಆದೇಶಗಳ ಮೇಲೆ ಆಕ್ಷೇಪಣೆಯನ್ನು ಗಣಿಯ ಆಡಳಿತದವರು ತಂದಲ್ಲಿ ಅದನ್ನು ವಿಚಾರಿಸಲು ಪ್ರತ್ಯೇಕವಾಗಿ ಗಣಿ ಸಮಿತಿಯಿದೆ. ಸುತ್ತಮುತ್ತ ಮರಣ ಅಥವಾ ಬೇರೆ ಯಾವುದಾದರೂ ವಿಪರೀತಗಳು ಸಂಭವಿಸಿದಲ್ಲಿ ಅವನ್ನು ಗಣಿ ವ್ಯವಸ್ಥಾಪಕರು ಸೂಕ್ತ ಅಧಿಕಾರಿಗಳಿಗೆ ತಿಳಿಸಬೇಕಲ್ಲದೆ ಪ್ರಕಟನೆ ಹಲಗೆಯ ಮೇಲೆ ಅದನ್ನು ಪ್ರಕಟಿಸಬೇಕು. ಕಾಯಿದೆಯಲ್ಲಿ ಹೇಳಲಾದ ಅಪಘಾತಗಳು ಸಂಭವಿಸಿದರೆ ಕೇಂದ್ರ ಸರ್ಕಾರ ಅದರ ತನಿಖೆಯ ಬಗ್ಗೆ ವಿಚಾರಣಾ ನ್ಯಾಯಾಲಯವನ್ನು ನೇಮಿಸಬಹುದು. ಕೆಲವೊಂದು ಕಾಯಿಲೆಗಳು ಗಣಿಸಂಬಂಧದವುಗಳೆಂದು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ. ಅಂಥ ಕಾಯಿಲೆ ಬಂದದ್ದು ಕಂಡುಬಂದರೆ ಗಣಿ ವ್ಯವಸ್ಥಾಪಕರು ಮತ್ತು ರೋಗಿಗೆ ಚಿಕಿತ್ಸೆ ಮಾಡುತ್ತಿರುವ ವೈದ್ಯರು ಅದರ ವಿವರಗಳನ್ನು ಮುಖ್ಯ ನಿರೀಕ್ಷಕನಿಗೆ ಕಳುಹಿಸಬೇಕು. ಆ ಕಾಯಿಲೆ ಗಣಿಸಂಬಂಧಿಯಾದ್ದು ಎಂಬುದು ಮುಖ್ಯ ನಿರೀಕ್ಷಕನಿಗೆ ಮನವರಿಕೆಯಾದಲ್ಲಿ ಆತ ಅದರ ವೈದ್ಯಕೀಯ ಖರ್ಚನ್ನು ಕೊಡುತ್ತಾನೆ ಮತ್ತು ಆ ಹಣವನ್ನು ಮಾಲೀಕನಿಂದ ಬಳಿಕ ವಸೂಲು ಮಾಡಲಾಗುವುದು. ಗಣಿಯಿಂದಾಗಿ ಬಂದ ಕಾಯಿಲೆಯಾಗಿದ್ದರೆ ಅಥವಾ ಹಾಗೆಂದು ಊಹಿಸಲು ಆಸ್ಪದವಿದ್ದರೆ ಕೇಂದ್ರ ಸರ್ಕಾರ ಅದರ ತನಿಖೆಗೆ ಏರ್ಪಾಡು ಮಾಡಬಹುದು. ಸಮಿತಿಯ ಮತ್ತು ರೋಗದ ತನಿಖೆಯ ವರದಿಯನ್ನು ಸರ್ಕಾರ ಪ್ರಕಟಿಸಬಹುದು; ವಿಚಾರಣಾ ನ್ಯಾಯಾಲಯದ ವರದಿಯನ್ನು ಅದು ಪ್ರಕಟಿಸಲೇಬೇಕು.

ಕೆಲಸಗಾರರ ಸ್ವಾಸ್ಥ್ಯ ದೃಷ್ಟಿಯಿಂದ, ಅವರು ಕೆಲಸ ಮಾಡಬೇಕಾದ ಸಮಯದ ಪರಿಮಿತಿಯನ್ನು ಕಾಯಿದೆಯಲ್ಲಿ ನಿಗದಿಗೊಳಿಸಲಾಗಿದೆ. ವಾರಕ್ಕೆ ಆರು ದಿನಗಳಿಗಿಂತ ಹೆಚ್ಚು ಯಾರೂ ಕೆಲಸ ಮಾಡಕೂಡದು. ಕಾರ್ಮಿಕರಿಗೆ ಕೊಡಬೇಕಾದ ವಿಶ್ರಾಂತಿಯ ದಿನ, ವೇಳೆ, ನೆಲದ ಮೇಲೆ ಮತ್ತು ಗಣಿಯ ಒಳಗೆ ಕೆಲಸ ಮಾಡುವ ಸಮಯದ ನಿಗದಿ, ನಿಗದಿಯಾದ ಸಮಯದಿಂದ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ವೇತನ ಕ್ರಮ, ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕೆಲಸ, ಅಪ್ರಾಪ್ತ ವಯಸ್ಕರನ್ನು ಗಣಿಯಲ್ಲಿ ತೊಡಗಿಸುವುದು, ಅವರಿಗೆ ಇರಬೇಕಾದ ಪ್ರಮಾಣಪತ್ರ, ಕೆಲಸಗಾರರ ರಜೆ, ಸಂಬಳ, ಮುಂಗಡ-ಇತ್ಯಾದಿಗಳನ್ನು ಕ್ರಮಪಡಿಸಲು ವಿವಿಧ ವಿಧಿಗಳನ್ನು ಗಣಿ ಕಾಯಿದೆಯಲ್ಲಿ ಅಳವಡಿಸಲಾಗಿದೆ. ಈ ಕಾಯಿದೆಯನ್ನು ಅನ್ವಯಿಸಿ ಸೂಕ್ತ ನಿಬಂಧನೆಗಳನ್ನು ಮಾಡುವ ಅಧಿಕಾರವೂ ಕೇಂದ್ರ ಸರ್ಕಾರಕ್ಕಿದೆ. ಅಪಘಾತಗಳನ್ನು ತಡೆದು, ಗಣಿಯಲ್ಲಿ ಕೆಲಸ ಮಾಡುವವರ ಭದ್ರತೆ, ಸೌಕರ್ಯ ಮತ್ತು ಶಿಸ್ತು ರಕ್ಷಣೆಗಾಗಿ ಗಣಿಯನ್ನು ನಡೆಯಿಸುವವರಿಗೆ ಮತ್ತು ಕೆಲಸ ಮಾಡುವವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಅಗತ್ಯವಾದ ಉಪನಿಬಂಧನೆಗಳನ್ನು ಮಾಡಲು ಗಣಿಗಳ ಮಾಲೀಕರು, ನಿಯೋಗಿಗಳು ಅಥವಾ ವ್ಯವಸ್ಥಾಪಕರಿಗೆ ಅಧಿಕಾರವುಂಟು. ಅವರು ಇಂಥ ಉಪನಿಬಂಧನೆಗಳನ್ನು ಎರಡು ತಿಂಗಳುಗಳ ಒಳಗೆ ರಚಿಸದಿದ್ದಲ್ಲಿ ಅಥವಾ ಅಂಥ ಉಪನಿಬಂಧನೆಗಳು ಮುಖ್ಯ ನಿರೀಕ್ಷಕನ ದೃಷ್ಟಿಯಲ್ಲಿ ಸರಿಯೆನಿಸದಿದ್ದಲ್ಲಿ ಆತ ಅಗತ್ಯವಾದ ಉಪನಿಬಂಧನೆಗಳನ್ನು ರಚಿಸಿ ಅಥವಾ ಅದಕ್ಕೆ ಸೂಕ್ತ ತಿದ್ದುಪಡಿ ಮಾಡಿ ಗಣಿಗಳ ನಿರ್ವಾಹಕರಿಗೆ ಕಳುಹಿಸಿಕೊಡಬೇಕು. ಇವು ಗಣಿ ನಿರ್ವಾಹಕರಿಗೆ ಒಪ್ಪಿಗೆಯಾಗದಿದ್ದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೇಂದ್ರ ಸರ್ಕಾರದ್ದು. ಗಣಿ ಕಾಯಿದೆಯಲ್ಲಿ ಕಾರ್ಮಿಕರಿಗೆ ಅನ್ವಯವಾಗುವ ಭಾಗಗಳನ್ನೂ ನಿಬಂಧನೆ ಉಪನಿಬಂಧನೆಗಳನ್ನೂ ಕಾರ್ಮಿಕರಿಗೆ ತಿಳಿಯುವಂತೆ ಗಣಿ ಪ್ರಕಟಿಸಬೇಕು. ಕಾಯಿದೆಯ ಪಾಲನೆ ಮಾಡದಿದ್ದರೆ ಸೂಕ್ತ ಶಿಕ್ಷೆಗಳೂ ಸೂಚಿತವಾಗಿವೆ.

ಕಾಯಿದೆಯ ವಿಧಿಗಳ ಮತ್ತು ನಿಯಮಗಳ ಪರಿಪಾಲನೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂದು ಪರಿಶೀಲಿಸುವ ಬಗ್ಗೆ ಯಾವುದೇ ಗಣಿಯ ತನಿಖೆಯ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಸ್ತ್ರೀ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾಯಿದೆಯಿದೆ. ಹೆರಿಗೆ, ಶಿಶುಪೋಷಣೆ ಮುಂತಾದವುಗಳಿಗಾಗಿ ಸ್ತ್ರೀ ಕಾರ್ಮಿಕರಿಗೆ ರಜ ಮತ್ತು ಇತರ ಸೌಲಭ್ಯಗಳು ಕಡ್ಡಾಯ. ದುಡಿಮೆಗಾರ್ತಿಯರನ್ನು ಹೆರಿಗೆಯ ಸಮಯದಲ್ಲಿ ಕೆಲಸದಿಂದ ತೆಗೆಯುವುದಕ್ಕೆ ನಿಷೇಧವುಂಟು. ಭಾರತದ ಕಾರ್ಖಾನೆ ಕಾಯಿದೆಯ 3 ಮತ್ತು 4 ನೆಯ ಪರಿಚ್ಛೇದಗಳನ್ನು ಗಣಿಗಳಿಗೆ ವಿಸ್ತರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ರಾಜ್ಯ ಸರ್ಕಾರದ ಗಣಿಗಳನ್ನು ವಶಪಡಿಸಿಡಿಕೊಳ್ಳುವ ಅಧಿಕಾರವೂ ಕೇಂದ್ರಕ್ಕೆ ಉಂಟು