ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಣೇಶ ಶಂಕರ ವಿದ್ಯಾರ್ಥಿ

ವಿಕಿಸೋರ್ಸ್ದಿಂದ

ಗಣೇಶ ಶಂಕರ ವಿದ್ಯಾರ್ಥಿ : 1890-1931. ಹಿಂದೀ ಸಾಹಿತಿ ಮತ್ತು ಸಾರ್ವಜನಿಕ ಕಾರ್ಯಕರ್ತ. ಉತ್ತರ ಪ್ರದೇಶದ ನನಿಹಾಲ್ ಪ್ರಯಾಗನಲ್ಲಿ ಜನಿಸಿದ. ತಂದೆಯ ಹೆಸರು ಜಯನಾರಾಯಣ. ಮುಂಗಾವಲಿ (ಗ್ವಾಲೇರ್) ಎಂಬಲ್ಲಿ ಶಿಕ್ಷಣ ನಡೆಯಿತು. ಅನಂತರ ಕಾನ್ಪುರದಲ್ಲಿ ಸರ್ಕಾರಿ ನೌಕರಿ ಹಿಡಿದನಾದರೂ ಅಲ್ಲಿನ ಇಂಗ್ಲಿಷ್ ಅಧಿಕಾರಿಗಳ ಜೊತೆಗೆ ಹೊಂದಿಕೊಳ್ಳಲು ಆಗದ್ದರಿಂದ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟ. ಅನಂತರ ಸರಸ್ವತಿ, ಅಭ್ಯುದಯ ಇತ್ಯಾದಿ ನಿಯತಕಾಲಿಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯತೊಡಗಿದ. ಪ್ರಭಾ ಪತ್ರಿಕೆಯ ಸಂಪಾದಕನಾದ. 1913ರಲ್ಲಿ ಪ್ರತಾಪ ವಾರಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡ ಮೇಲೆ ಒಂದುಕಡೆ ನೆಲೆ ನಿಲ್ಲಲು ಸಾಧ್ಯವಾಯಿತು. ಕ್ರಮೇಣ ಪತ್ರಕರ್ತ, ನಿಬಂಧ ಲೇಖಕ ಮತ್ತು ವಿಶಿಷ್ಟ ಶೈಲಿಯ ಬರೆಹಗಾರ ಎಂದು ಹಿಂದೀ ಸಾಹಿತ್ಯದಲ್ಲಿ ಈತ ಪ್ರಸಿದ್ಧಿ ಗಳಿಸಿದ. ಒಕ್ಕಲಿಗರ ಚಳವಳಿಗಳಲ್ಲಿ, ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ನಿರ್ಭಯದಿಂದ ಈತ ಸಕ್ರಿಯವಾಗಿ ಭಾಗವಹಿಸಿದ. ಕಾನ್ಪುರದಲ್ಲಿ ನಡೆದ ಹಿಂದೂ-ಮುಸ್ಲಿಂ ದುರಂತದಲ್ಲಿ ನೊಂದವರಿಗೆ ಸಹಾಯ ಮಾಡುತ್ತಿರುವ ಸಮಯದಲ್ಲಿ ಗುಂಡಿನೇಟಿಗೆ ಬಲಿಯಾಗಿ ಈತ ಅಕಾಲ ಮರಣಕ್ಕೆ ತುತ್ತಾದ.