ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗದಗ

ವಿಕಿಸೋರ್ಸ್ದಿಂದ

ಗದಗ: ಕರ್ನಾಟಕ ರಾಜ್ಯದ ಒಂದು ಜಿಲ್ಲೆ, ತಾಲ್ಲೂಕು ಹಾಗೂ ಅವುಗಳ ಆಡಳಿತ ಕೇಂದ್ರ. 1997ರ ಜಿಲ್ಲಾ ಮರುವಿಂಗಡಣಾ ಯೋಜನೆಯ ಮೇರೆಗೆ ಧಾರವಾಡ ಜಿಲ್ಲೆಯ ಐದು ತಾಲ್ಲೂಕುಗಳನ್ನು ಬೇರ್ಪಡಿಸಿ ಗದಗ ಜಿಲ್ಲೆಯನ್ನು ರಚಿಸಲಾಯಿತು. ಗದಗ, ರೋಣ, ನರಗುಂದ, ಮುಂಡರಗಿ ಮತ್ತು ಶಿರಹಟ್ಟಿ-ಇವು ತಾಲ್ಲೂಕುಗಳು. ಜಿಲ್ಲೆಯ ಉತ್ತರಕ್ಕೆ ಬಾಗಲಕೋಟೆ, ದಕ್ಷಿಣಕ್ಕೆ ಹಾವೇರಿ, ಪೂರ್ವಕ್ಕೆ ಕೊಪ್ಪಳ ಹಾಗೂ ಬಳ್ಳಾರಿ, ಪಶ್ಚಿಮಕ್ಕೆ ಧಾರವಾಡ ಮತ್ತು ಬೆಳಗಾಂವಿ ಜಿಲ್ಲೆಗಳು ಇದರ ಮೇರೆಗಳು. ಜಿಲ್ಲೆಯ ವಿಸ್ತೀರ್ಣ 4,657ಚ.ಕಿಮೀ. ಹೋಬಳಿಗಳು 11, ಗ್ರಾಮಗಳು 312. ಜನಸಂಖ್ಯೆ 10,65,235 (2011).

ಮೇಲ್ಮೈಲಕ್ಷಣ[ಸಂಪಾದಿಸಿ]

ಕರ್ನಾಟಕದ ಉತ್ತರ ಮಧ್ಯ ಭಾಗದಲ್ಲಿರುವ ಈ ಜಿಲ್ಲೆಯು ಪಶ್ಚಿಮದಿಂದ ಪೂರ್ವದತ್ತ ಇಳಿಜಾರಾಗಿರುವ ಪ್ರದೇಶವನ್ನು ಹೊಂದಿದೆ. ಜಿಲ್ಲೆ ಪಾರಂಪರಿಕವಾಗಿ ಬೆಳವಲನಾಡೆಂದು ಪ್ರಸಿದ್ಧವಾಗಿದೆ. ಇದು ಫಲವತ್ತಾದ ಕಪ್ಪುಮಣ್ಣಿನಿಂದ ಕೂಡಿದ್ದು ಸಾಧಾರಣ ಬೆಟ್ಟಗುಡ್ಡಗಳಿಂದ ಕೂಡಿದೆ. ಮುಂಡರಗಿ ತಾಲ್ಲೂಕಿನ ಕಪ್ಪತಗುಡ್ಡ, ನರಗುಂದ ಮತ್ತು ಗಜೇಂದ್ರಗಡದಲ್ಲಿ ಮತ್ತು ಗದಗದ ಬಳಿ ಬೆಟ್ಟಸಾಲುಗಳಿವೆ. ಈ ಬೆಟ್ಟಶ್ರೇಣಿಯ ಅತ್ಯಂತ ಹೆಚ್ಚಿನ ಎತ್ತರ 937ಮೀ ಈ ಶ್ರೇಣಿ ಗದಗದಿಂದ ಆಗ್ನೇಯದಲ್ಲಿ 48ಕಿಮೀ ಉದ್ದವಾಗಿ ಹಬ್ಬಿ ಎರಡು ತುದಿಗಳಲ್ಲೂ ಸು. 6ಕಿಮೀ ಅಗಲವಿದೆ. ಮಧ್ಯದಲ್ಲಿ 16ಕಿಮೀ ಅಗಲವಾಗಿ ವ್ಯಾಪಿಸಿದೆ. ಧಾರವಾಡ ಬಂಡೆಗಳಿಂದ ರಚಿತವಾಗಿರುವ ಪಳೆಯುಳಿಕೆಯ ಬೆಟ್ಟಗಳು ಗದಗದಿಂದ ದಕ್ಷಿಣಕ್ಕೆ ತುಂಗಭದ್ರಾದ ಕಡೆ ಹರಡಿವೆ. ಇಲ್ಲಿ ಕಣಿವೆಗಳು, ಕಂದರಗಳು ಹೆಚ್ಚು. ಎತ್ತರದ ಪ್ರದೇಶಗಳು ಬೋಳಾಗಿವೆ ಅಲ್ಲಿ ದಟ್ಟವಾಗಿ ಹುಲ್ಲು ಬೆಳೆಯುತ್ತದೆ. ಇಲ್ಲಿನ ಭೂಮಿಯ ಫಲವತ್ತತೆ ಪೂರ್ವಕ್ಕೆ ಬಂದಂತೆಲ್ಲ ಕಡಿಮೆಯಾಗಿದೆ. ಜಿಲ್ಲೆಯ ಒಟ್ಟು ಅರಣ್ಯ ಪ್ರದೇಶ 3,264 ಹೆಕ್ಟೇರ್. ಜಿಲ್ಲೆಯ ಬಹುಭಾಗ ಪ್ರಾಚೀನ ಬೆಣಚುಕಲ್ಲು ಮತ್ತು ಪದರ ಶಿಲೆಗಳಿಂದ ಕೂಡಿದೆ. ಇವು ಅಗ್ನಿ ಮತ್ತು ಜಲಶಿಲೆಗಳ ಸಂಯೋಗದಿಂದ ರೂಪಾಂತರ ಹೊಂದಿ ಪಸರಿಸಿವೆ. ಪದರ ಶಿಲೆ, ಗ್ರಾನೈಟ್ ಮತ್ತು ಬೆಣಚುಕಲ್ಲು ಶಿಲಾ ವರ್ಗವು ಎಲ್ಲ ದಿಕ್ಕುಗಳಲ್ಲೂ ಹರಡಿದೆ. ಮ್ಯಾಂಗನೀಸ್ ಇಲ್ಲಿನ ಪ್ರಮುಖ ಅದಿರುಗಳಲ್ಲೊಂದು. ಕಪ್ಪತಗುಡ್ಡದಿಂದ ಪ್ರಾರಂಭವಾದ ದೋಣಿ ಸಾಲಿನಲ್ಲಿ ತಾಮ್ರದ ಅದಿರಿನ ಅಂಶ ಕಂಡು ಬಂದಿದೆ. ಸೊರಟೂರು ಮತ್ತು ಜಲ್ಲಿಗೇರಿಗಳಲ್ಲಿ ಪೈರೈಟ್್ಸ ಇದೆ. ಕಪ್ಪತ್ತ ಗುಡ್ಡ ಸಾಲಿನಲ್ಲಿ ಕಬ್ಬಿಣದ ಅದಿರು ಹೆಚ್ಚು ಪ್ರಮಾಣದಲ್ಲಿದೆ. ಇಲ್ಲಿ ಹೆಮೆಟೈಟ್ ನಿಕ್ಷೇಪಗಳಿವೆ. ಆದರೆ ಆರ್ಥಿಕ ದೃಷ್ಟಿಯಿಂದ ಇದು ಹೆಚ್ಚು ಲಾಭಕರವಾಗಿಲ್ಲ. ಚಿನ್ನದ ಅದಿರು ಅಲ್ಲಲ್ಲಿ ಕಂಡುಬಂದರೂ ಅಷ್ಟು ಸಾಂದ್ರವಾಗಿಲ್ಲ. ಜಿಲ್ಲೆಯ ಕೆಲವೆಡೆ ಬಳಪದ ಕಲ್ಲು ಕಂಡುಬರುತ್ತದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಹೆಮಟೈಟ್ ನಿಕ್ಷೇಪಗಳು ಕಂಡುಬಂದಿವೆ. ಇಲ್ಲಿನ ಮಣ್ಣು ವಿವಿಧ ಪ್ರಕಾರದ ವಿಭಜಿತ ಶಿಲಾ ಮಿಶ್ರಣದಿಂದ ಕೂಡಿದೆ. ಹುಳಕೆರೆ, ಎರೆ, ಕೆಂಪು ಮಸಾರಿ, ಮಡಿಕಟ್ಟು, ಮತ್ತು ರೇವೆ ಮಣ್ಣುಗಳು ಸೇರಿವೆ. ರೋಣ, ಗದಗ, ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ಮರಳುಮಿಶ್ರಿತ ಮಣ್ಣು ಕಂಡುಬರುತ್ತದೆ. ರೋಣ ಮತ್ತು ನರಗುಂದ ತಾಲ್ಲೂಕುಗಳಲ್ಲಿ ಮಲಪ್ರಭಾ ನದಿಯ ಬಲದಂಡೆಯುದ್ದಕ್ಕೂ ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ತುಂಗಭದ್ರಾ ನದಿಯ ಎಡದಂಡೆಯುದ್ದಕ್ಕೂ ರೇವೆಮಣ್ಣು ಹರಡಿದೆ. ಕಪ್ಪು ಮಣ್ಣು ಫಲವತ್ತಾಗಿದೆ. ಇದು ಜಿಲ್ಲೆಯ ರೋಣ, ಗದಗ, ನರಗುಂದ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ವಾಯುಗುಣ[ಸಂಪಾದಿಸಿ]

ಬೇಸಗೆಯಲ್ಲಿ (ಏಪ್ರಿಲ್-ಮೇ) ಅದಿsಕ ಉಷ್ಣಾಂಶವಿರುವುದನ್ನು ಬಿಟ್ಟರೆ ಉಳಿದಂತೆ ಹಿತಕರವಾಗಿರುತ್ತದೆ. ಕೆಲವು ವೇಳೆ ಆ ಅವಧಿಯಲ್ಲಿ 40.4ಸೆ. ನಿಂದ 39.6ಸೆ. ವರೆಗೂ ಇರುತ್ತದೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಪ್ರಾರಂಭವಾದಾಗ ಉಷ್ಣಾಂಶ ತಗ್ಗುತ್ತದೆ. ಸಾಮಾನ್ಯವಾಗಿ ಜೂನ್-ನವೆಂಬರ್ಗಳಲ್ಲಿ ವಾರ್ಷಿಕ ಮಳೆಯ ಅಧಿಕ ಭಾಗ ಬೀಳುತ್ತದೆ. ಸರಾಸರಿ ವಾರ್ಷಿಕ ಮಳೆ 612.30ಮಿಮೀ. ಇದು ಸಾಧಾರಣ ಮಳೆ ಪ್ರದೇಶ. ಮುಂಗಾರು ಮಾರುತದ ಅವದಿsಯಲ್ಲಿ ಬೀಳುವ ಮಳೆ ಹಿಂಗಾರು ಮಾರುತದ ಅವದಿsಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಹಿಂಗಾರಿನಲ್ಲಿ ಚಂಡಮಾರುತದ ಮಳೆಗಳು ಬೀಳುವುದುಂಟು. ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಮುಂಗಾರು ಅದಿsಕವಾಗಿ ಬಿದ್ದರೆ ಪೂರ್ವ ಭಾಗದಲ್ಲಿ ಹಿಂಗಾರು ಬೀಳುತ್ತದೆ. ಸರಾಸರಿ ಲೆಕ್ಕದಲ್ಲಿ ಪಶ್ಚಿಮ ಭಾಗದಲ್ಲಿ ಮಳೆ ಸರಾಸರಿ ಸ್ವಲ್ಪ ಅದಿsಕ. ಜಿಲ್ಲೆಯಲ್ಲಿ ಯಾವ ಪ್ರಮುಖ ನದಿಯೂ ಹರಿಯುವುದಿಲ್ಲ. ತುಂಗಭದ್ರಾ ನದಿ ದಕ್ಷಿಣದ ಅಂಚಿನಲ್ಲಿ ಹರಿದರೆ ಮಲಪ್ರಭಾ ನದಿ ಉತ್ತರದ ಅಂಚಿನಲ್ಲಿ ಹರಿಯುತ್ತದೆ. ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಿಗೂ ಬಳ್ಳಾರಿ ಜಿಲ್ಲೆಗೂ ಮೇರೆಯಾಗಿ ತುಂಗಭದ್ರಾ ನದಿ ಹರಿಯುತ್ತದೆ. ಶಿರಹಟ್ಟಿ ಹಳ್ಳ ಮತ್ತು ಹಿರೇಹಳ್ಳಗಳು ಈ ಜಿಲ್ಲೆಯಲ್ಲಿ ಹುಟ್ಟಿ ಆಗ್ನೇಯಾಬಿsಮುಖವಾಗಿ ಹರಿದು ತುಂಗಭದ್ರಾ ನದಿಯನ್ನು ಸೇರಿಕೊಳ್ಳುತ್ತವೆ. ಮಲಪ್ರಭಾ ನದಿ ಈ ಜಿಲ್ಲೆಗೂ ಬಾಗಲಕೋಟೆ ಜಿಲ್ಲೆಗೂ ಸರಹದ್ದಾಗಿ ಹರಿಯುತ್ತದೆ. ನರಗುಂದ ತಾಲ್ಲೂಕಿನ ಲಕ್ಮಾಪುರದ ಬಳಿ ಜಿಲ್ಲೆಗೆ ತಾಗಿ ಹರಿದು ರೋಣ ತಾಲ್ಲೂಕಿನ ಹಡಗಲಿ ಗ್ರಾಮದವರೆಗೂ ಮುಂದುವರಿಯುತ್ತದೆ. ಮಲಪ್ರಭಾ ನದಿಗೆ ಈ ಜಿಲ್ಲೆಯ ಮೂಲಕ ಹರಿಯುವ ಮುಖ್ಯ ಉಪನದಿಗಳಲ್ಲೊಂದಾದ ಬೆಣ್ಣೆಹಳ್ಳ ರೋಣ ತಾಲ್ಲೂಕಿನ ಮೆಣಸಿಗೆಯ ಬಳಿ ಅದನ್ನು ಸೇರುತ್ತದೆ. ಈ ನದಿಗೆ ಗೂಗಿಹಳ್ಳ, ತುಪರಿಹಳ್ಳ, ಹಂದಿಗನ ಹಳ್ಳಗಳು ಕೂಡಿಕೊಳ್ಳುತ್ತವೆ. ಇನ್ನೊಂದು ಹಿರೇಹಳ್ಳ. ಅದನ್ನು ಉತ್ತರಾಬಿsಮುಖವಾಗಿ ಗದಗ ಮತ್ತು ರೋಣ ತಾಲ್ಲೂಕುಗಳಲ್ಲಿ ಹರಿದು ಬೇಲೆರಿಯ ಹತ್ತಿರ ಮಲಪ್ರಭಾ ನದಿಯನ್ನು ಸೇರುತ್ತದೆ. ಪವಡಿ ಬಳಿ ಹರಿಯುವ ಆಲೂರು ಹಳ್ಳ ಈ ನದಿಗೆ ಸೇರುವ ಉಪಹಳ್ಳ.

ವ್ಯವಸಾಯ ಮತ್ತು ನೀರಾವರಿ[ಸಂಪಾದಿಸಿ]

ಈ ಜಿಲ್ಲೆಯಲ್ಲಿ ಶೇ.70 ಮಂದಿ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಪಶ್ಚಿಮ ಕರಾವಳಿಯಿಂದ ಬೀಸುವ ಮುಂಗಾರು ಮಾರುತಗಳು ಇಲ್ಲಿಯ ವ್ಯವಸಾಯಕ್ಕೆ ಹೆಚ್ಚು ಅನುಕೂಲಕರವಾಗಿವೆ. ಈಶಾನ್ಯ ಮಾರುತಗಳಿಂದ ಹಿಂಗಾರು ಮಳೆ ಜಿಲ್ಲೆಯ ಎಲ್ಲ ಭಾಗಗಳಿಗೆ ಸಾಧಾರಣವಾಗಿ ಬೀಳುತ್ತದೆ. ಇಲ್ಲಿನ ವ್ಯವಸಾಯದ ಜಮೀನು, ಮಳೆ ಮಾರುತಗಳನ್ನು ಅವಲಂಬಿಸಿದೆ. ಒಣ ಬೆಳೆಗಳು ಬೆಳೆಯುವ ಜಿರಾಯತು ಜಮೀನು ಮತ್ತು ನೀರಾವರಿ ಬೆಳೆ ಬೆಳೆಯುವ ಬಾಗಾಯತು ಜಮೀನುಗಳೆಂದು ಇಲ್ಲಿಯ ಬೇಸಾಯದ ನೆಲವನ್ನು ವಿಂಗಡಿಸಬಹುದು. ಈ ಜಿಲ್ಲೆಯಲ್ಲಿ ಪ್ರಾಚೀನ ಕಾಲದಲ್ಲಿ ಕಟ್ಟಿದ ಅನೇಕ ಕೆರೆಗಳು ಮತ್ತು ಜಲಾಶಯಗಳು ಇಂದಿಗೂ ಉಪಯುಕ್ತವಾಗಿವೆ. ಶಿರಹಟ್ಟಿ ತಾಲ್ಲೂಕಿನ ಮಜ್ಜೂರು, ಮಾಗಡಿ, ಶಿಟ್ಟಿಕೇರಿ, ಮುಂಡರಗಿ ತಾಲ್ಲೂಕಿನ ಡಂಬಳ ಕೆರೆಗಳು ಹೆಸರಿಸಬಹುದಾದಂಥವು. ಮಲಪ್ರಭಾ ಬಲದಂಡೆ ಯೋಜನೆಯಿಂದ ನರಗುಂದ, ಗದಗ ಮತ್ತು ರೋಣ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ದೊರಕುತ್ತದೆ. ತುಂಗಭದ್ರಾ ನದಿಯಿಂದ ತೀರ ಪ್ರದೇಶದ ಜಮೀನುಗಳಿಗೆ ನೀರಾವರಿ ಅನುಕೂಲ ಒದಗಿದೆ. ಜಿಲ್ಲೆಯಲ್ಲಿ ಕಾಲುವೆಗಳಿಂದ 34,621 ಕೆರೆಗಳಿಂದ 2,030 ಮತ್ತು ಬಾವಿಗಳಿಂದ 7,373 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಈ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ವಿಶೇಷವಾಗಿ ಜೋಳ ಬೆಳೆಯುತ್ತದೆ. ಬೆಳವಲನಾಡು ಗೋದಿ, ಜೋಳ, ಹತ್ತಿ, ಗೋವಿನಜೋಳಕ್ಕೆ (ಮೆಕ್ಕೆಜೋಳ) ಪ್ರಸಿದ್ಧ. ಗದಗನ್ನು ರಾಜ್ಯದ ಗೋದಿಯ ಕಣಜವೆಂದು ಕರೆಯುತ್ತಾರೆ. ಶಿರಹಟ್ಟಿ ತಾಲ್ಲೂಕಿನಲ್ಲಿ ಎಳ್ಳನ್ನು ಬೆಳೆಯುತ್ತಾರೆ. ಹೆಸರು, ಕಡಲೆ, ಹುರುಳಿ, ತೊಗರಿ ಮುಂತಾದ ಬೆಳೆಗಳು ಸಾಮಾನ್ಯವಾಗಿ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಬೆಳೆಯುತ್ತವೆ. ಎಣ್ಣೆ ಕಾಳುಗಳನ್ನೂ ಮುಖ್ಯವಾಗಿ ಕಡಲೆಕಾಯಿಯನ್ನೂ ಶಿರಹಟ್ಟಿ, ಮುಂಡರಗಿ, ರೋಣ ತಾಲ್ಲೂಕುಗಳಲ್ಲಿ ಬೆಳೆದರೆ, ಕುಸುಬೆ, ಎಳ್ಳು, ಔಡಲ ಇವು ಬೆಳವಲನಾಡಿನಲ್ಲಿ ವಿಶೇಷವಾಗಿ ಬೆಳೆಯುತ್ತವೆ. ಜಿಲ್ಲೆಯ ಕಪ್ಪು ಮಣ್ಣಿನ ಪ್ರದೇಶದಲ್ಲಿ ಹೆಚ್ಚಾಗಿ ಹತ್ತಿ ಬೆಳೆಯುವುದು. ನೀರಾವರಿ ಪ್ರದೇಶದಲ್ಲಿ ಬತ್ತ ಬೆಳೆಯುತ್ತಾರೆ. ದ್ರಾಕ್ಷಿ, ಪೇರಲ, ಬೋರೆ, ಮಾವು, ಬಾಳೆ, ನಿಂಬೆ, ಬದನೆ, ಬೆಂಡೆ, ಹೀರೆ, ಪಡುವಲ, ಬಟಾಟೆ, ಗೆಣಸು, ಈರುಳ್ಳಿ ಮೊದಲಾದವು ಈ ಜಿಲ್ಲೆಯಲ್ಲಿ ಬೆಳೆಯುತ್ತವೆ. ಗೋದಿಯನ್ನು 35,181, ಮುಸುಕಿನ ಜೋಳವನ್ನು 18,063, ಜೋಳವನ್ನು 84,427, ಸಜ್ಜೆಯನ್ನು 1,190 ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ (1998-99).

ಕೈಗಾರಿಕೆ[ಸಂಪಾದಿಸಿ]

ಜಿಲ್ಲೆಯಲ್ಲಿ ಗ್ರಾಮೀಣ ಸಂಪನ್ಮೂಲ ಬಳಸಿಕೊಂಡು ಅಸ್ತಿತ್ವಕ್ಕೆ ಬಂದ ಕೈಗಾರಿಕೆಗಳೇ ಹೆಚ್ಚು. ಕೈಮಗ್ಗ, ಕಂಬಳಿ ನೇಯುವುದು, ಬೀಡಿ ಕಟ್ಟುವುದು, ಬಿದಿರು ವಸ್ತುಗಳು, ಚುರಮರಿ (ಮಂಡಕ್ಕಿ) ಅವಲಕ್ಕಿ ಮತ್ತು ರೇಷ್ಮೆ ಇವುಗಳ ತಯಾರಿಕೆ, ಚರ್ಮ ಹದ ಮಾಡುವುದು. ವಿದ್ಯುತ್ ಮಗ್ಗಗಳಿಂದ ಸೀರೆ, ಕುಪ್ಪಸ ತಯಾರಿಕೆ ಕುಂಬಾರಿಕೆ ಮುಂತಾದ ವಿವಿಧ ಉದ್ದಿಮೆಗಳಲ್ಲಿ ಸಾವಿರಾರು ಜನ ನಿರತರಾಗಿದ್ದಾರೆ. ಗದಗ, ನರಗುಂದ ಇವು ಹತ್ತಿಯ ಉದ್ದಿಮೆಗೆ ಪ್ರಸಿದ್ಧ. ಗದಗದಲ್ಲಿ ಬಟ್ಟೆ ತಯಾರಿಸುವ ಕಾರ್ಖಾನೆಯಿದೆ. ನರಗುಂದ, ಹುಲಕೋಟಿ, ಲಕ್ಷ್ಮೇಶ್ವರಗಳಲ್ಲಿ ನೂಲಿನ ಗಿರಣಿಗಳಿವೆ. ಮೇಲಿನ ಎಲ್ಲ ಸ್ಥಳಗಳಲ್ಲೂ ಹತ್ತಿ ಹಿಂಡುವ ಕಾರ್ಖಾನೆಗಳಿವೆ. ಗದಗ ಜಿಲ್ಲೆ ಕೈಮಗ್ಗದ ಬಟ್ಟೆಗಳಿಗೂ ಪ್ರಸಿದ್ಧ. ರೋಣ ತಾಲ್ಲೂಕಿನಲ್ಲಿ ಖಾದಿ ಬಟ್ಟೆ ತಯಾರಾಗುತ್ತದೆ. ಗದಗ, ಬೆಟಗೇರಿ, ಗಜೇಂದ್ರಗಡ, ಶಿರೋಳ ಇವು ಕೈಮಗ್ಗದ ಸೀರೆ, ಕುಪ್ಪಸ ಮುಂತಾದವುಗಳಿಗೆ ಪ್ರಸಿದ್ಧ. ಗಜೇಂದ್ರಗಡ, ಶಿರೋಳಗಳಲ್ಲಿ ಕಣಗಳು (ರವಿಕೆಬಟ್ಟೆ) ಪ್ರಸಿದ್ಧ. ನರಗುಂದ ಗುಡಾರ ತಯಾರಿಸುವುದಕ್ಕೆ ಪ್ರಸಿದ್ಧ. ತಂಬಳೆ, ಲಕ್ಕುಂಡಿ, ಕೊಣ್ಣೂರುಗಳಲ್ಲಿ ಕಂಬಳಿ ತಯಾರಿಸುವ ಉದ್ಯಮವಿದೆ. ಗದಗದಲ್ಲಿ ಹಿತ್ತಾಳೆ ಪಾತ್ರೆ ತಯಾರಿಸುತ್ತಾರೆ. ಗ್ರಾಮೋದ್ಯಮಗಳಾದ ಗಾಣದ ಎಣ್ಣೆ, ಸೋಪು, ಚರ್ಮ ಹದಮಾಡುವುದು, ಖಾದಿ ಬಟ್ಟೆ ತಯಾರಿಕೆ ಗದಗ, ರೋಣ, ನರಗುಂದ ಇವುಗಳಲ್ಲಿ ಹರಡಿದೆ. ಗದಗ ಪಟ್ಟಣ ಮುದ್ರಣ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ತಿಜೋರಿ, ಕಪಾಟು, ಕುರ್ಚಿ, ಮೇಜು, ಮುಂತಾದವುಗಳ ತಯಾರಿಕೆ ಗದಗ, ನರಗುಂದದಲ್ಲಿ ಹೆಚ್ಚು. ಜಿಲ್ಲೆಯಲ್ಲಿ ಬಟ್ಟೆ ಗಿರಣಿಗಳು, ರಾಸಾಯನಿಕ ಕಾರ್ಖಾನೆಗಳು, ಎಂಜನಿಯರಿಂಗ್ ಕೇಂದ್ರಗಳು, ಇತರ ಉದ್ದಿಮೆಗಳು, ಕೈಗಾರಿಕಾ ಕೇಂದ್ರಗಳು, ಕೈಗಾರಿಕಾ ಎಸ್ಟೇಟ್ಗಳಿವೆ. ಹತ್ತಿಯ ಕೈಮಗ್ಗದ ಬಟ್ಟೆಗಳು, ಮೆಣಸಿನಕಾಯಿ, ಕಡಲೆಕಾಯಿ, ಗೋದಿ, ಜೋಳ ಮುಂತಾದವು ಈ ಜಿಲ್ಲೆಯ ಪ್ರಮುಖ ರಫ್ತು ವಸ್ತುಗಳಾಗಿವೆ. ಮನೆ ಕಟ್ಟುವ ಸಾಮಗ್ರಿಗಳು, ಯಂತ್ರಗಳು, ಔಷದಿs, ಇಂಧನ, ದಿನಬಳಕೆಯ ಸಾಮಗ್ರಿಗಳು, ಅಲಂಕಾರ ವಸ್ತುಗಳು, ಏಲಕ್ಕಿ, ಕಾಪಿsಬೀಜ, ಹೊಗೇಸೊಪ್ಪು ಮೊದಲಾದವು ಹೆಚ್ಚಾಗಿ ಹೊರಗಡೆಯಿಂದ ಬರುತ್ತವೆ. ಗದಗ, ಲಕ್ಷ್ಮೇಶ್ವರ ನಗರಗಳು ಬೆಳೆವಣಿಗೆಯಾದಂತೆಲ್ಲ ಜಿಲ್ಲೆಯ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ನಿಯಂತ್ರಿತ ಮಾರುಕಟ್ಟೆಗಳಿವೆ. ವಾಣಿಜ್ಯ ವ್ಯಾಪಾರಗಳಿಗೆ ಸಂಬಂದಿsಸಿದಂತೆ ವಿವಿಧ ಸಂಸ್ಥೆಗಳು ಸ್ಥಾಪಿತವಾಗಿವೆ. ಗದಗಿನಲ್ಲಿರುವ ಚೆೇಂಬರ್ ಆಫ್ ಕಾಮರ್ಸ್ ಸಂಸ್ಥೆ ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ.

ಈ ಜಿಲ್ಲೆಯಲ್ಲಿ ಹಣಕಾಸು ಮತ್ತು ಬ್ಯಾಂಕಿಂಗಿಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳಿವೆ. ಕರ್ನಾಟಕ ರಾಜ್ಯ ಹಣಕಾಸು ನಿಗಮ ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಕೈಗಾರಿಕೆಗಳಿಗೆ ಹಣಕಾಸಿನ ನೆರವನ್ನು ನೀಡುತ್ತದೆ. ಸಹಕಾರ ವ್ಯವಸ್ಥೆಯಿಂದ ರೈತರಿಗೆ, ಕೈಕಸಬಿನವರಿಗೆ ಆರ್ಥಿಕ ನೆರವು ದೊರೆಯುತ್ತಿದೆ. ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕ್ಗಳು, ಗ್ರಾಮೀಣ ಬ್ಯಾಂಕ್ಗಳು ಇವೆ. ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಹಕಾರಿ ನಗರ ಬ್ಯಾಂಕ್ಗಳಿವೆ. ಇತರ ಸಹಕಾರ ಬ್ಯಾಂಕ್ಗಳಿವೆ. ಭೂ ಅಬಿsವೃದ್ಧಿ ಬ್ಯಾಂಕ್ಗಳಿವೆ. ಸಾಲ ಸಹಕಾರ ಸಂಘಗಳಿವೆ.

ಸಾರಿಗೆಸಂಪರ್ಕ[ಸಂಪಾದಿಸಿ]

ಗದಗದಿಂದ ವಿವಿಧ ತಾಲ್ಲೂಕುಗಳಿಗೆ ಮತ್ತು ಜಿಲ್ಲೆಯ ಹೊರ ಊರುಗಳಿಗೆ ರಸ್ತೆ ಮಾರ್ಗಗಳಿವೆ. 46ಕಿಮೀ ರಾಷ್ಟ್ರೀಯ ಹೆದ್ದಾರಿ, 203 ಕಿಮೀ ರಾಜ್ಯ ಹೆದ್ದಾರಿ, 663 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳಿವೆ. ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳೂ ಸೇರಿದಂತೆ ಇವುಗಳ ಒಟ್ಟು ಉದ್ದ 2,594 ಕಿಮೀ. ಈ ಜಿಲ್ಲೆಯೊಂದಿಗೆ ಹೊರಗಿನ ಸಂಪರ್ಕ ಕಲ್ಪಿಸುವ ಕೆಲವು ಮುಖ್ಯ ರೈಲುಮಾರ್ಗಗಳಿವೆ. ಹುಬ್ಬಳ್ಳಿ ಬೆಂಗಳೂರು ರೈಲು ಮಾರ್ಗ ಈ ಜಿಲ್ಲೆಯಲ್ಲಿ ಗದಗದ ಮೂಲಕ ಹಾಯ್ದು ಹೋಗುತ್ತದೆ. ಹುಬ್ಬಳ್ಳಿಯಿಂದ ಗುಂತಕಲ್ಲು, ಸೊಲ್ಲಾಪುರ ಗೋವ ಕಡೆಗಳಿಗೆ ರೈಲುಮಾರ್ಗಗಳಿವೆ. ಗದಗ ಕರ್ನಾಟಕದ ದೊಡ್ಡ ರೈಲು ಜಂಕ್ಷನ್ಗಳಲ್ಲೊಂದಾಗಿದೆ. ಜಿಲ್ಲೆಯಲ್ಲಿ 62 ಕಿಮೀ ಬ್ರಾಡ್ಗೇಜ್ ಮತ್ತು 50 ಕಿಮೀ ಮೀಟರ್ ಗೇಜ್ ರೈಲು ಮಾರ್ಗವಿದೆ.

ಶಿಕ್ಷಣ[ಸಂಪಾದಿಸಿ]

ಗದಗ ಜಿಲ್ಲೆ ಹಿಂದೆ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಜಿಲ್ಲಾ ಕೇಂದ್ರ ಧಾರವಾಡ, ಹುಬ್ಬಳ್ಳಿ ಇವು ಉತ್ತರ ಕರ್ನಾಟಕದಲ್ಲೇ ಹೆಚ್ಚು ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿದ್ದ ಸ್ಥಳಗಳು. ಅಲ್ಲಿನ ಕರ್ನಾಟಕ ಕಾಲೇಜು, ಕೃಷಿ ಶಿಕ್ಷಣ ಕಾಲೇಜು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಿಂದ ಗದಗ ಜಿಲ್ಲೆಯ ವಿದ್ಯಾರ್ಥಿಗಳು ಉಪಯೋಗ ಪಡೆಯುತ್ತಿದ್ದಾರೆ. 1950ರಲ್ಲಿ ಸ್ಥಾಪಿತವಾದ ಕರ್ನಾಟಕ ವಿಶ್ವವಿದ್ಯಾಲಯ ಉನ್ನತ ಶಿಕ್ಷಣದ ಅನುಕೂಲವನ್ನು ಒದಗಿಸಿತು. ಗದಗ-ಬೆಟಗೇರಿ ಪುರಸಭೆಯ ವ್ಯಾಪ್ತಿಯಲ್ಲಿ ಮತ್ತು ಇತರೆಡೆ ಕಾಲೇಜುಗಳು, ಕಿರಿಯ ಕಾಲೇಜುಗಳು ಸ್ಥಾಪಿತವಾಗಿವೆ. ಜಿಲ್ಲೆಯ ಒಟ್ಟು ಸಾಕ್ಷರತಾ ಪ್ರಮಾಣ ಶೇ. 75. ಪುರುಷರ ಸಾಕ್ಷರತೆ ಶೇ. 79.55, ಸ್ತ್ರೀಯರ ಸಾಕ್ಷರತೆ ಶೇ. 52.58. ಜಿಲ್ಲೆಯಲ್ಲಿ 697 ಪ್ರಾಥಮಿಕ ಶಾಲೆಗಳೂ 170 ಪ್ರೌಢ ಶಾಲೆಗಳೂ 35 ಪದವಿಪೂರ್ವ ಕಾಲೇಜುಗಳೂ 23 ಸಾಮಾನ್ಯ ಶಿಕ್ಷಣ ಕಾಲೇಜುಗಳೂ 8 ಪಾಲಿಟೆಕ್ನಿಕ್ಗಳೂ 2 ಎಂಜನಿಯರಿಂಗ್ ಕಾಲೇಜುಗಳೂ 4 ಭಾರತೀಯ ವೈದ್ಯ ಶಿಕ್ಷಣ ಸಂಸ್ಥೆಗಳೂ ಇವೆ. ಮಕ್ಕಳ ಪೋಷಣೆ ಮತ್ತು ಶಿಕ್ಷಣಕ್ಕಾಗಿ ಜಿಲ್ಲೆಯಲ್ಲಿ 826 ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ (2000-01).

ಆರೋಗ್ಯ[ಸಂಪಾದಿಸಿ]

ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳು ಅಬಿsವೃದ್ಧಿಗೊಂಡಿವೆ. 7 ಸರ್ಕಾರಿ ಆಸ್ಪತ್ರೆಗಳು, 2 ಭಾರತೀಯ ವೈದ್ಯ ಪದ್ಧತಿ ಆಸ್ಪತ್ರೆಗಳು ಇವೆ. 29 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ಪ್ರಾಥಮಿಕ ಆರೋಗ್ಯ ಘಟಕಗಳಿವೆ. ಜನಾರೋಗ್ಯ ರಕ್ಷಣೆಗಾಗಿ ಸರ್ಕಾರ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಕುಡಿಯುವ ನೀರು ಸರಬರಾಜಿಗಾಗಿ 2,793 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. 387 ಕೊಳವೆನೀರು ಸರಬರಾಜು ಯೋಜನೆ ಗಳನ್ನು ಕಾರ್ಯಗತಗೊಳಿಸಲಾಗಿದೆ. 296 ನೀರು ಸರಬರಾಜು ಯೋಜನೆಗಳು ಅನುಷ್ಠಾನಗೊಂಡಿವೆ. ನಿರ್ಮಲ ಗ್ರಾಮ ಯೋಜನೆ ಅಡಿಯಲ್ಲಿ 1,853 ಶೌಚಾಲಯ ಗಳನ್ನು ನಿರ್ಮಿಸಲಾಗಿದೆ. ಕೊಳಚೆ ಅಬಿsವೃದ್ಧಿ ಯೋಜನೆ ಅಡಿಯಲ್ಲಿ 152 ಮನೆಗಳನ್ನು ನಿರ್ಮಿಸಲಾಗಿದೆ (2000-01). ಹಸುರು ಯೋಜನೆಯಲ್ಲಿ 9.14 ಲಕ್ಷ ಮರಗಳನ್ನು ನೆಡಲಾಗಿದೆ.

ಇತಿಹಾಸ ಮತ್ತು ಸಂಸ್ಕೃತಿ[ಸಂಪಾದಿಸಿ]

ಈ ಜಿಲ್ಲೆ ಪ್ರಾಚೀನ ಕಾಲದಿಂದ ಜನ ವಸತಿ ಹೊಂದಿದ್ದ ಪ್ರದೇಶ. ತುಂಗಭದ್ರಾ, ಮಲಪ್ರಭಾ ನದಿಗಳ ದಂಡೆಯಲ್ಲಿ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿಯಿದೆ. ಈ ಜಿಲ್ಲೆಯಲ್ಲಿನ ರೋಣ ತಾಲ್ಲೂಕಿನ ಮೆಣಸಗಿ, ಶಿರಹಟ್ಟಿ ತಾಲ್ಲೂಕಿನ ಕೊಂಚಿಗೇರಿ, ನಿಟ್ಟೂರು ಮುಂತಾದ ಸ್ಥಳಗಳಲ್ಲಿ ಪುರಾತನ ಶಿಲಾಯುಗದ ಶಿಲಾ ಉಪಕರಣಗಳು ದೊರಕಿವೆ. ನವ ಶಿಲಾಯುಗದ ಸಂಸ್ಕೃತಿಗಳಿಗೆ ಸಂಬಂದಿsಸಿದ ಅನೇಕ ನೆಲೆಗಳು ನರಗುಂದÀ ತಾಲ್ಲೂಕಿನ ಅರಿಶಿಣಗೋತಿ, ಬೈರನಹಟ್ಟಿ, ಹಾಳಗುಪ್ಪ, ಕರಗೋವಿನಕುಪ್ಪ, ಲಿಂಗಧಾಳ ಮತ್ತು ಶಿರೋಳ, ರೋಣ ತಾಲ್ಲೂಕಿನ ಮಣ್ಣೂರು, ಮೆಣಸಗಿ, ನಿಡಗುಂದಿ, ನಿಡಗುಂದಿಕೊಪ್ಪ, ಸವಡಿ, ಶಿರಹಟ್ಟಿ ತಾಲ್ಲೂಕಿನ ಬಲೈರು ಮೊದಲಾದ ಸ್ಥಳಗಳಲ್ಲಿ ಬೆಳಕಿಗೆ ಬಂದಿವೆ. ರೋಣ ತಾಲ್ಲೂಕಿನ ಹಿರೇಹಾಳದಲ್ಲಿ ನವಶಿಲಾ ಸಂಸ್ಕೃತಿ ಅಂಶಗಳು ಬೆಳಕಿಗೆ ಬಂದಿವೆ. ಇಲ್ಲಿಯೇ ದಕ್ಷಿಣ ಭಾರತದ ಕಬ್ಬಿಣ ಯುಗಕ್ಕೆ ಸಂಬಂದಿsಸಿದ ವಾಸದ ನೆಲೆ ದೊರೆತಿದೆ. ಇಂಥಹ ನೆಲೆಗಳನ್ನು ನರಗುಂದ ತಾಲ್ಲೂಕಿನ ಕೊಪ್ಪ, ರೋಣ ತಾಲ್ಲೂಕಿನ ಉಣಚಗೇರಿ ಮುಂತಾದೆಡೆಗಳಲ್ಲಿ ಕಾಣಬಹುದು. ಉಣಚೆಗೇರಿಯಲ್ಲಿ ಹಳ್ಳವೊಂದರ ಪಕ್ಕದಲ್ಲಿ ತುಂಡು ಎಲಬುಗಳಿದ್ದ ಅನೇಕ ಮಡಕೆ ಸಮಾದಿsಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ನುರುಜು ಕೂಡಿದ ಶಿಲಾವೃತ್ತಗಳು ಇವೆ. ಬೃಹತ್ ಶಿಲಾಸಮಾದಿs ಕಾಲದ ಶಿಲಾವೃತ್ತಗಳನ್ನು ರೋಣ ತಾಲ್ಲೂಕಿನ ಗಜೇಂದ್ರಗಡ, ಉಣಚಗೇರಿ, ಈ ಸ್ಥಳಗಳಲ್ಲಿ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಇವುಗಳನ್ನು ಪಾಂಡವರ ಮನೆ, ಪಾಂಡವರ ಕಟ್ಟೆ ಎಂದು ಕರೆಯುವ ರೂಡಿs. ಆದಿಕಾಲದಲ್ಲಿ ಪ್ರಚಲಿತವಿದ್ದ ಕೆಂಪು ಮಡಕೆಗಳು, ಗಾಜಿನ ಮಣಿ ಇತ್ಯಾದಿ ವಸ್ತು ದೊರಕಿರುವ ಅನೇಕ ನೆಲೆಗಳಿವೆ. ಮುಂಡರಗಿ ತಾಲ್ಲೂಕಿನ ಶೀರೆನಹಳ್ಳಿ, ರೋಣ ತಾಲ್ಲೂಕಿನ ಬೆಣಚಕಟ್ಟೆ, ಹಿರೇಹಾಳ, ಕಂಟೋಜಿ, ಶಿರಹಟ್ಟಿ, ಬಟ್ಟೂರು, ಹೊಳಲಾಪುರ, ಹುಲ್ಲೂರು, ಜೀರೆಮಾದಾಪುರ, ಲಕ್ಷ್ಮೇಶ್ವರ, ನವೆಭಾವನೂರು, ನಿಟ್ಟೂರು, ಸಂಕದಾಳ, ಯಳವತ್ತಿ, ಬೆಳ್ಳಟ್ಟಿ, ಚವತಾಳ್, ಇಟಗಿ, ನಾಗರಮಡುವು, ತಂಗೋಡ ಹೀಗೆ ಇಲ್ಲಿನ ನೆಲೆಗಳನ್ನು ಗುರುತಿಸಬಹುದು. ಶಿರಹಟ್ಟಿ ತಾಲ್ಲೂಕಿನ ಇಟಗಿಯ ನೆಲೆಯಲ್ಲಿ ವೈದಿಕ ಯಜ್ಞಗಳಲ್ಲಿ ಉಪಯೋಗಿಸಲಾಗುತ್ತಿದ್ದ ಉಖಾಪಾತ್ರ ಎಂಬ ವಿಶಿಷ್ಟ ರೀತಿಯ ಮಣ್ಣಿನ ಪಾತ್ರೆ ದೊರೆತಿರುವುದು ಕುತೂಹಲಕಾರಿ. ಇತರೆ ಅನೇಕ ಸ್ಥಳಗಳಂತೆ ಇಲ್ಲಿನ ವಿವಿಧ ಸ್ಥಳಗಳಿಗೂ ಪೌರಾಣಿಕ ಹಿನ್ನೆಲೆಯಿದೆ. ಗದಗ ತಾಲ್ಲೂಕಿನ ಲಕ್ಕುಂಡಿಯನ್ನು ಶ್ರೀರಾಮ ಸ್ಥಾಪಿಸಿದನೆಂದು ಪ್ರತೀತಿ. ಅದು ರಾಮರ ದತ್ತಿ ಅಗ್ರಹಾರವಾಗಿತ್ತು. ಅಲ್ಲಲ್ಲಿ ಪಾಂಡವರ ಕಟ್ಟೆಗಳ ಬಗ್ಗೆ ಕೇಳಿಬರುತ್ತದೆ.

ಇತಿಹಾಸ[ಸಂಪಾದಿಸಿ]

ಇತಿಹಾಸ ಕಾಲದಲ್ಲಿ ಮೌರ್ಯರು ಮತ್ತು ಸಾತವಾಹನರು ಈ ಜಿಲ್ಲೆಯನ್ನು ಆಳಿದ್ದು ಐತಿಹಾಸಿಕ ಆಧಾರಗಳಿಂದ ತಿಳಿದುಬರುತ್ತದೆ. ಮುಂದೆ ಮೂರನೆಯ ಶತಮಾನದಿಂದ ಆಳಿಕೆ ನಡೆಸಿದ ಬನವಾಸಿಯ ಕದಂಬರು ತಮ್ಮ ರಾಜ್ಯವನ್ನು ಇಲ್ಲಿಯವರೆಗೂ ವಿಸ್ತರಿಸಿದ್ದರು. ಬಾದಾಮಿ ಚಳುಕ್ಯರು 5-8ನೆಯ ಶತಮಾನದಲ್ಲಿ ಆಳಿದರು. ಆಗ ಇದು ಅವರ ಸಾಮ್ರಾಜ್ಯದ ಹೃದಯಭಾಗದಲ್ಲಿದ್ದಿತು. ಈ ಸಾಮ್ರಾಜ್ಯ ವ್ಯವಸ್ಥೆ ಮುಂದೆ ಅದಿsಕಾರಕ್ಕೆ ಬಂದ ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಳುಕ್ಯರ ಕಾಲದವರೆಗೂ ಮುಂದುವರಿಯಿತು. ಆಗ ಈ ಪ್ರದೇಶ ಬೆಳವಲ 300, ಕಿಸುಕಾಡು 70, ಪುರಿಗೆರೆ 300 ಮುಂತಾದ ಹೆಸರುಗಳಿಂದ ಪ್ರಸಿದ್ಧವಾಗಿದ್ದಿತು. ಈ ಪ್ರಾಂತ್ಯ ಐತಿಹಾಸಿಕ ಮಹತ್ವ ಪಡೆದಿದ್ದು ಸಾಮಾನ್ಯವಾಗಿ ಇದನ್ನು ಸಾಮ್ರಾಟರ ಮನೆತನದ ಸದಸ್ಯರು ಮತ್ತು ರಕ್ತಸಂಬಂದಿsಗಳು ಆಳುತ್ತಿದ್ದರು. ಅವರನ್ನು ಮಾಂಡಲಿಕ ಅಥವಾ ಮಹಾಮಂಡಲೇಶ್ವರರೆಂದು ಕರೆಯಲಾಗುತ್ತಿತ್ತು. ರಾಷ್ಟ್ರಕೂಟರ ಕಾಲದಲ್ಲಿ ಗಂಗರು ಮತ್ತು ರಾಷ್ಟ್ರಕೂಟ ಮನೆತನಗಳ ಅನ್ಯೋನ್ಯತೆಯಿಂದ ಗಂಗರಾಜರು ಈ ಪ್ರಾಂತ್ಯವನ್ನು ಕೆಲಕಾಲ ಆಳಲು ಅವಕಾಶವಾಯಿತು. ರಾಷ್ಟ್ರಕೂಟರು ಶತ್ರುಗಳಿಂದ ಪೀಡನೆಗೊಳಗಾಗಿದ್ದಾಗ ಗಂಗ ಇಮ್ಮಡಿ ಬೂತುಗ (936-61) ಅವರ ಸಹಾಯಕ್ಕೆ ಹೋದ. ಇದರಿಂದ ಸುಪ್ರೀತನಾದ ರಾಷ್ಟ್ರಕೂಟ ಮುಮ್ಮಡಿ ಅಮೋಘವರ್ಷ ತನ್ನ ಮಗಳು ರೇವಕ ನಿಮ್ಮಡಿಯನ್ನು ಕೊಟ್ಟು ವಿವಾಹ ಮಾಡಿದ. ಮೂರನೆಯ ಕೃಷ್ಣನ ವಿರುದ್ಧ ದಂಗೆಯೆದ್ದ ಲಲ್ಲೆಯನನ್ನು ಬೂತುಗ ನಿರ್ಮೂಲ ಮಾಡಿದ. ರಾಷ್ಟ್ರಕೂಟರ ಶತ್ರುವಾಗಿದ್ದ ಚೋಳ ಯುವರಾಜನಾದ ರಾಜಾದಿತ್ಯನನ್ನು ಬೂತುಗ ರಣರಂಗದಲ್ಲಿ ಕೊಂದು ಸಾಮ್ರಾಜ್ಯದ ಪ್ರತಿಷ್ಠೆಯನ್ನು ಹೆಚ್ಚಿಸಿದ. ಇದರಿಂದ ಬೂತುಗನಿಗೆ ಪುರಿಗೆರೆ 300, ಬೆಳ್ವೊಲ 300, ಕಿಸುಕಾಡು 70 ಮತ್ತು ಬಾಗೆನಾಡು 70 ಪ್ರಾಂತಗಳನ್ನು ಕೊಡಲಾಯಿತು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಈ ಪ್ರದೇಶ ಸಾಮ್ರಾಜ್ಯದ ಹಿಡಿತದಿಂದ ಬಿಡುಗಡೆಗೊಳ್ಳತೊಡಗಿತು. ದ್ವಾರಸಮುದ್ರದಲ್ಲಿ ಹೊಯ್ಸಳರು, ದೇವಗಿರಿಯಲ್ಲಿ ಸೇವುಣರು ಪ್ರಬಲರಾಗಿ ರಾಜ್ಯ ವಿಸ್ತರಣೆ ಮಾಡಿದಾಗ ಹಿಂದಿನ ಸಾಮ್ರಾಜ್ಯ ವ್ಯವಸ್ಥೆ ಹೋಗಿ ಪ್ರಾಂತೀಯ ರಾಜ್ಯಗಳು ಹುಟ್ಟಿಕೊಂಡುವು. ಹೊಯ್ಸಳ ವಿಷ್ಣುವರ್ಧನ ತನ್ನ ರಾಜ್ಯದ ವಿಸ್ತರಣೆಯ ವಿಜಯಯಾತ್ರೆಯಲ್ಲಿ ಬೆಳುವಲ, ಅಣ್ಣಿಗೆರೆ, ಗದಗ ಮುಂತಾದ ಪಟ್ಪಣಗಳನ್ನು ವಶಪಡಿಸಿಕೊಂಡು ಮಲಪ್ರಭಾ ನದಿಯವರೆಗೂ ಸೈನ್ಯವನ್ನು ಮುನ್ನಡೆಸಿದ. ಲೊಕ್ಕಿಗುಂಡಿ ಇವನ ಅದಿsೕನದಲ್ಲಿತ್ತು. ವಿಷ್ಣುವರ್ಧನ ಗದಗದಲ್ಲಿ ಪಂಚನಾರಾಯಣ ದೇವಾಲಯಗಳಲ್ಲೊಂದನ್ನು ಕಟ್ಟಿಸಿದ. ಈ ಕಾಲದಲ್ಲೇ ಕಲ್ಯಾಣಿ ಚಾಳುಕ್ಯರು ಕಟ್ಟಿಸಿದ ಮೂರು ದೇವಾಲಯಗಳು ಗದಗದಲ್ಲಿವೆ. 11-12ನೆಯ ಶತಮಾನದಲ್ಲಿ ಗದಗ ಉತ್ಕರ್ಷದಲ್ಲಿದ್ದ ಪಟ್ಟಣವಾಗಿತ್ತು. ಕುಮಾರವ್ಯಾಸ (ನೋಡಿ) ಗದಗಿನ ವೀರನಾರಾಯಣ ನಿಂದ ಸ್ಫೂರ್ತಿ ಪಡೆದು ಕರ್ಣಾಟ ಭಾರತ ಕಥಾಮಂಜರಿಯನ್ನು (ಕುಮಾರವ್ಯಾಸ ಭಾರತ) ರಚಿಸಿದ್ದು ಸುಪರಿಚಿತವಾಗಿದೆ. ಹೊಯ್ಸಳರು ಮತ್ತು ಸೇವುಣರ ನಡುವಿನ ಸಂಘರ್ಷದ ಸ್ಥಳವಾಗಿದ್ದ ಈ ಜಿಲ್ಲೆಯು ಸೊರಟೂರಿನಲ್ಲಿ ಹೊಯ್ಸಳ ಎರಡನೆಯ ಬಲ್ಲಾಳನ ಸೈನ್ಯಕ್ಕೂ ಸೇವುಣ ಬಿsಲ್ಲಮನ ಸೈನ್ಯಕ್ಕೂ ನಿರ್ಣಾಯಕ ಯುದ್ಧ ನಡೆದು ಸೇವುಣರನ್ನು ಕೃಷ್ಣಾ ನದಿಯ ಆಚೆಗೆ ಹಿಮ್ಮೆಟ್ಟಿ ಸಲಾಯಿತು. ಮುಂದೆಯೂ ಈ ಪ್ರದೇಶ ಸೇವುಣ ಹೊಯ್ಸಳರ ಸ್ಪರ್ಧೆಯ ತಾಣವಾಗಿತ್ತು. ವಿಜಯನಗರದ ಆಡಳಿತ ಕಾಲದಲ್ಲಿ ಇದು ವಿಜಯನಗರದ ಒಂದು ಪ್ರಾಂತವಾಯಿತು. 1565ರ ತಾಳಿಕೋಟೆ ಯುದ್ಧದ ತರುವಾಯ ಬಿಜಾಪುರದ ಸುಲ್ತಾನಶಾಹಿ ರಾಜ್ಯ ಈ ಜಿಲ್ಲೆಯ ಮೇಲೆ ಹತೋಟಿ ಸಾದಿsಸಲು ಮುಂದಾಯಿತು. ಈಗಿನ ದಾವಣಗೆರೆ ಜಿಲ್ಲೆಯಲ್ಲಿರುವ ಹರಸನಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದ ಪಾಳೆಯಪಟ್ಟಿನ ನಾಯಕರು ಬಿಜಾಪುರದ ಸುಲ್ತಾನರಿಗೆ ಕಪ್ಪ ಕೊಟ್ಟುಕೊಂಡು ಈ ಜಿಲ್ಲೆಯ ಕೆಲವು ಪ್ರದೇಶಗಳೂ ಸೇರಿಕೊಂಡಂತೆ ಆ ಪ್ರದೇಶವನ್ನು ಆಳಿಕೊಂಡು ಬಂದರು. ಮುಂದೆ ಔರಂಗಜೇಬ್ ಬಿಜಾಪುರ ರಾಜ್ಯವನ್ನು ನಾಶಪಡಿಸಿದ ಅನಂತರ ಮೊಗಲ್ ಸುಬೇದಾರನೊಬ್ಬ ಸಮೀಪದ ಸವಣೂರಿನಲ್ಲಿ ನೆಲೆಯೂರಿದ. ಆಗ ಈ ಜಿಲ್ಲೆಯ ಬಹು ಭಾಗಗಳು ಮೊಗಲರ ಅದಿsಕಾರಕ್ಕೆ ಬಂದವು. ಅಂತಿಮವಾಗಿ ಸವಣೂರು ಪ್ರಾಂತ ಮರಾಠರ ಕೈಗೂ ತರುವಾಯ ಬ್ರಿಟಿಷರ ಕೈಗೂ ಬಂತು. 1830ರಲ್ಲಿ ಧಾರವಾಡ ಜಿಲ್ಲೆಯ ರಚನೆಯಾಗಿ ಈ ಪ್ರದೇಶ ಮುಂಬಯಿ ಪ್ರಾಂತ್ಯಕ್ಕೆ ಸೇರಿತು. 1857-58ರಲ್ಲಿ ನರಗುಂದದ ಬಾಬಾ ಸಾಹೇಬ, ಮುಂಡರಗಿ ಭೀಮರಾಯ (ನೋಡಿ) - ಇವರು ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಭಾಗವಹಿಸಿದ್ದರು. ಭೀಮರಾಯ ಇನಾಂದಾರರ ಮನೆತನಕ್ಕೆ ಸೇರಿದವನಾಗಿದ್ದು ಸುತ್ತಮುತ್ತಲ ಜಮೀನ್ದಾರರನ್ನು ಸಂಘಟಿಸಿ ರೈತರ ಬೆಂಬಲ ಪಡೆದು ಡಂಬಳ, ಗದಗ ಮತ್ತು ಕೊಪ್ಪಳಗಳನ್ನು ವಶಪಡಿಸಿಕೊಂಡ. ನರಗುಂದದ ಬಾಬಾಸಾಹೇಬ (ನೋಡಿ) ಇವನಿಗೆ ನೆರವಾಗಿ ದಂಗೆಯೆದ್ದ. ಬಾಬಾಸಾಹೇಬ ಬ್ರಿಟಿಷ್ ದಳಪತಿ ಮ್ಯಾನ್ಶನ್ನನ್ನು ಸುರೆಬಾನದಲ್ಲಿ ಎದುರಿಸಿ ಹತ್ಯೆ ಮಾಡಿದ. ಬ್ರಿಟಿಷರು ಸೈನ್ಯಬಲದಿಂದಲೂ ಯುಕ್ತಿಯಿಂದಲೂ ಈ ಇಬ್ಬರು ಬಂಡಾಯಗಾರರನ್ನು ಹತ್ಯೆಗೈದರು. ಮುಂಬಯಿ ಪ್ರಾಂತದಲ್ಲಿ ಧಾರವಾಡ ಜಿಲ್ಲೆಗೆ ಸೇರಿದ್ದ ಈ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಅವು ಸ್ವಾತಂತ್ರ್ಯಾನಂತರ ಧಾರವಾಡ ಜಿಲ್ಲೆಯ ಭಾಗವಾದವು. ಧಾರವಾಡ ಜಿಲ್ಲೆ ಭಾಷಾವಾರು ಪ್ರಾಂತ ರಚನೆಯಾದಾಗ ವಿಶಾಲ ಮೈಸೂರು ರಾಜ್ಯಕ್ಕೆ ಸೇರಿತು.

ಇತಿಹಾಸಕಾಲದಲ್ಲಿ ಈ ಜಿಲ್ಲೆಯಲ್ಲಿ ಸಂಸ್ಕೃತಿ ಮತ್ತು ಕಲೆಗಳಿಗೆ ಪ್ರಸಿದ್ಧವಾದ ಅನೇಕ ಊರುಗಳು ಇದ್ದುವು. ಅವುಗಳಲ್ಲಿ ಗದಗ, ಲಕ್ಷ್ಮೇಶ್ವರ ಮತ್ತು ಲಕ್ಕುಂಡಿಗಳು ಪ್ರಮುಖವಾದವು. ಗದಗದಲ್ಲಿ ಚಾಳುಕ್ಯ ಶೈಲಿಯ ಮೂರು ದೇವಾಲಯಗಳಿವೆ. ಅವುಗಳಲ್ಲಿ ತ್ರಿಕೂಟೇಶ್ವರ ದೇವಾಲಯ ಅತ್ಯಲಂಕರಣದಿಂದಲೂ ವಿಸ್ತಾರದಿಂದಲೂ ಕೂಡಿದೆ. ಹೊಯ್ಸಳ ವಿಷ್ಣುವರ್ಧನ ನಿರ್ಮಿಸಿದ ವೀರನಾರಾಯಣ ದೇವಾಲಯ ಜಕಣಾಚಾರಿಯಿಂದ ನಿರ್ಮಿಸಲ್ಪಟ್ಟಿತೆಂದು ಐತಿಹ್ಯವಿದೆ. ಗದಗದಿಂದ 11ಕಿಮೀ ದೂರದಲ್ಲಿರುವ ಲಕ್ಕುಂಡಿ ಪ್ರಾಚೀನ ಕಾಲದಲ್ಲಿ ಲೊಕ್ಕಿಯಗುಂಡಿ ಎಂದು ಪ್ರಸಿದ್ಧವಾಗಿತ್ತು. ಬೆಳ್ವೊಲದ 18 ಅಗ್ರಹಾರಗಳಲ್ಲಿ ಇದೂ ಒಂದು. ದಾನ ಚಿಂತಾಮಣಿ ಅತ್ತಿಮಬ್ಬೆ ಇಲ್ಲಿ ಬ್ರಹ್ಮಜಿನಾಲಯವನ್ನು ಕಟ್ಟಿಸಿದಳು. ಶಿರಹಟ್ಟಿ ತಾಲ್ಲೂಕಿನ ಲಕ್ಷ್ಮೇಶ್ವರ (ನೋಡಿ) ಇತಿಹಾಸ ಕಾಲದಲ್ಲಿ ಪುಲಿಗೆರೆ, ಪುರಿಗೆರೆ, ಪುಲಿಕರ ಎಂಬ ಹೆಸರುಗಳಿಂದ ಪ್ರಸಿದ್ಧವಾಗಿತ್ತು. 11ನೆಯ ಶತಮಾನದಲ್ಲಿ ಲಕ್ಷ್ಮರಸನೆಂಬಾತ ಇಲ್ಲಿ ಲಕ್ಷ್ಮೇಶ್ವರ ದೇವಾಲಯವನ್ನು ಕಟ್ಟಿಸಿದ್ದರಿಂದ ಈ ಊರಿಗೆ ಅದೇ ಹೆಸರು ಬಂದಿರಬೇಕೆಂಬ ಅಬಿsಪ್ರಾಯವಿದೆ. ಮುಂಡರಗಿ ತಾಲ್ಲೂಕಿನ ಡಂಬಳ (ನೋಡಿ) ಇನ್ನೊಂದು ಪ್ರಾಚೀನ ಧಾರ್ಮಿಕ ಕೇಂದ್ರ. ಇಲ್ಲಿ ಬೌದ್ಧ ವಿಹಾರಗಳು, ಚೈತ್ಯಾಲಯಗಳು ಮತ್ತು ದೇವಾಲಯಗಳು ಇವೆ. ಅವುಗಳಲ್ಲಿ ದೊಡ್ಡ ಬಸಪ್ಪ ದೇವಾಲಯ ಪ್ರಸಿದ್ಧವಾದದ್ದು. ಇದಲ್ಲದೆ ಶಿರಹಟ್ಟಿ ತಾಲ್ಲೂಕಿನ ದೇವಿಗಾಳ, ಸೊರಟೂರು, ಶ್ರೀಮಂತಗಡಕೋಟಿ, ಗುದಗೇರಿ, ಯೆಲವತ್ತಿ, ರೋಣ ತಾಲ್ಲೂಕಿನ ಗಜೇಂದ್ರಗಡ, ಸವಡಿ, ಸುದಿ, ಗದಗ ತಾಲ್ಲೂಕಿನ ಹೊಂಬಳ, ಮೂಲಗುಂದ, ನಾಗಾವಿ, ನೀಲಗುಂದ, ನರಗುಂದ ತಾಲ್ಲೂಕಿನ ಕೊಣ್ಣೂರು, ಮುಂಡರಗಿ ತಾಲ್ಲೂಕಿನ ಕೊರಳಹಳ್ಳಿ, ಆಲೂರು, ತಾಮ್ರಗುಂಡಿ, ಬಿದರಹಳ್ಳಿ, ನಾಗರಹಳ್ಳಿ - ಇವು ದೇವಾಲಯಗಳು, ಕವಿ ಕಲಾವಿದರು, ಕೋಟೆಗಳು ಮುಂತಾದವಕ್ಕೆ ಹೆಸರಾಗಿವೆ.

ರಾಜ್ಯದ ಇತರ ಭಾಗಗಳಂತೆ ಇಲ್ಲಿಯೂ ಜನಪದ ಸಂಸ್ಕೃತಿ ಪಸರಿಸಿದೆ. ಬಸಪ್ಪ, ಭಂಡಪ್ಪ, ದ್ಯಾಮವ್ವ, ದುರ್ಗವ್ವ, ರೇಣುಕ, ಹುಲಿಗೆವ್ವ, ಜೋತಿಬಾ, ಖಂಡೋಬಾ - ಇಲ್ಲಿನ ಜನಪದ ದೇವತೆಗಳು. ಸಂಗೀತಗಾರರಾದ ಪಂಡಿತ ಭೀಮಸೇನ ಜೋಶಿ, ಪುಟ್ಟರಾಜ ಗವಾಯಿ ಸಾಹಿತಿಗಳಾದ ಹುಯಿಲಗೋಳ ನಾರಾಯಣರಾಯ, ಎನ್.ಕೆ. ಕುಲಕರ್ಣಿ, ಆಲೂರ ವೆಂಕಟರಾಯ, ಸಂ.ಶಿ. ಭೂಸನೂರಮಠ, ಗಿರಡ್ಡಿ ಗೋವಿಂದರಾಜ, ಆರ್.ಸಿ. ಹಿರೇಮಠ, ಜಿ.ಬಿ. ಜೋಶಿ, ಕೀರ್ತಿನಾಥ ಕುರ್ತಕೋಟಿ, ಶಾಂತಕವಿ, ಗರೂಡ ಸದಾಶಿವರಾಯ, ಮಹಾಂತೇಶಶಾಸ್ತ್ರೀ, ಎಚ್.ಎನ್. ಹೂಗಾರ, ಸಿದ್ಧರಾಮ ಜಂಬಲದಿನ್ನಿ, ಚಿತ್ರಕಲೆಯ ಟಿ.ಪಿ. ಅಕ್ಕಿ, ಎಂ.ಎ. ಚಟ್ಟಿ ಮೊದಲಾದವರು ಈ ಜಿಲ್ಲೆಯವರು.

ತಾಲ್ಲೂಕು ಮತ್ತು ಮುಖ್ಯ ಪಟ್ಟಣ[ಸಂಪಾದಿಸಿ]

ಇದು ಗದಗ, ರೋಣ, ಮುಂಡರಗಿ, ನರಗುಂದ ತಾಲ್ಲೂಕುಗಳನ್ನೊಳಗೊಂಡ ಉಪವಿಭಾಗದ ಕೇಂದ್ರವೂ ಆಗಿದೆ. ಈ ತಾಲ್ಲೂಕನ್ನು ಆಗ್ನೇಯದಲ್ಲಿ ಮುಂಡರಗಿ, ದಕ್ಷಿಣದಲ್ಲಿ ಶಿರಹಟ್ಟಿ, ತಾಲ್ಲೂಕುಗಳೂ ಪಶ್ಚಿಮದಲ್ಲಿ ಧಾರವಾಡ ಜಿಲ್ಲೆ ಮತ್ತು ನವಲಗುಂದ, ಉತ್ತರದಲ್ಲಿ ರೋಣ ಮತ್ತು ಪೂರ್ವದಲ್ಲಿ ಕೊಪ್ಪಳ ಜಿಲ್ಲೆ ಸುತ್ತುವರಿದಿವೆ. ತಾಲ್ಲೂಕಿನ ವಿಸ್ತೀರ್ಣ 1,098.5 ಚ.ಕಿಮೀ. ಜನಸಂಖ್ಯೆ 2,06,908. ಗದಗ, ಬೆಟಗೇರಿ ಎರಡು ಹೋಬಳಿಗಳಿದ್ದು ಒಟ್ಟು 57 ಗ್ರಾಮಗಳಿವೆ. ತಾಲ್ಲೂಕಿನ ಹೆಚ್ಚು ಭಾಗ ಎರೆಮಣ್ಣಿನ ಪ್ರದೇಶ. ಅಲ್ಲಲ್ಲಿ ಧಾರವಾಡ ಶಿಲಾಶ್ರೇಣಿಗೆ ಸೇರಿದ ಕಲ್ಲಿನ ಗುಡ್ಡಗಳೂ ಇವೆ. ಅದರಲ್ಲೂ ಗದಗದಿಂದ ದಕ್ಷಿಣ ಪ್ರದೇಶ ಈ ರೀತಿಯದು. ಈ ಭಾಗದ ಕಪ್ಪತ ಗುಡ್ಡ ಶ್ರೇಣಿಯಲ್ಲಿ ಚಿನ್ನದ ನಿಕ್ಷೇಪವಿದೆ. ತಾಲ್ಲೂಕು ದಕ್ಷಿಣದಿಂದ ವಾಯವ್ಯ, ಉತ್ತರಕ್ಕೆ ಇಳಿಜಾರಾಗಿದೆ. ದೊಡ್ಡ ನದಿಗಳಾವುವೂ ಇಲ್ಲ. ವಾರ್ಷಿಕ ಸರಾಸರಿ ಮಳೆ ಸು.635ಮಿಮೀ. ಕಪ್ಪತಗುಡ್ಡ ಭಾಗದ ಕುರುಚಲ ಗಿಡಗಳ ಪ್ರದೇಶವನ್ನು ಬಿಟ್ಟರೆ ಮಿಕ್ಕ ಎರೆಭೂಮಿ ಪ್ರದೇಶÀ ಫಲವತ್ತಾದುದು. ಹೆಚ್ಚಿನ ವ್ಯವಸಾಯ ಮಳೆಯ ಆಧಾರದಿಂದ. ಬಾವಿಗಳ ಸಂಖ್ಯೆಯೂ ಕಡಿಮೆ. ಹತ್ತಿ, ಜೋಳ, ಗೋದಿ ತಾಲ್ಲೂಕಿನ ಮುಖ್ಯ ಬೆಳೆಗಳು. ಕಡಲೆಕಾಯಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಗದಗ ತಾಲ್ಲೂಕು ಸು.14ನೆಯ ಶತಮಾನದವರೆಗೆ ಬೆಳುವಲ 300 ಎಂಬ ಪ್ರಾಚೀನ ವಿಭಾಗದಲ್ಲಿತ್ತು. ಉತ್ತಮ ಶಿಲ್ಪಗಳಿಂದ ಕೂಡಿದ ಶಂಕರಲಿಂಗಪ್ಪ ದೇವಾಲಯವಿರುವ, 11ರಿಂದ 16ನೆಯ ಶತಮಾನಗಳಲ್ಲಿ ಅಗ್ರಹಾರವಾಗಿದ್ದ ಹೊಂಬಳ, ಪ್ರಾಚೀನ ವಿದ್ಯಾಕೇಂದ್ರವೆನಿಸಿದ್ದ 11-12 ನೆಯ ಶತಮಾನದ ದೇವಾಲಯಗಳಿರುವ ಕೋಟುಮಚಿಗಿ, ಬೌದ್ಧ ನಾಗಾರ್ಜುನನ ಸಂಬಂಧವಿತ್ತೆಂದು ಹೇಳುವ ನಾಗಾವಿ, 12ನೆಯ ಶತಮಾನದ ಶಾಸನಗಳು ಮತ್ತು ನಾರಾಯಣ ದೇವಾಲಯವಿರುವ ನೀಲಗುಂದ, ಪ್ರಾಚೀನ ಅಗ್ರಹಾರ ಸೊರಟೂರು ಮುಂತಾದ ಹಲವು ಚಾರಿತ್ರಿಕ ಸ್ಥಳಗಳು ಈ ತಾಲ್ಲೂಕಿನಲ್ಲಿವೆ. * ಲಕ್ಕುಂಡಿ (ನೋಡಿ) ಅನೇಕ ದೇವಾಲಯಗಳಿಂದ ಪ್ರಸಿದ್ಧವಾಗಿದೆ. ಕವಿ ನಯಸೇನನಿಗೆ ಸಂಬಂದಿsಸಿದೆಯೆಂಬುದು ಹಾಗೂ ಅಜಿತಪುರಾಣ ಬರೆಯಿಸಿ ರನ್ನನಿಗೆ ಆಶ್ರಯ ನೀಡಿದ ಅತ್ತಿಮಬ್ಬೆಯ ಸಂಪರ್ಕವಿದ್ದಿತೆಂಬುದು ಈ ತಾಲ್ಲೂಕಿನ ಮುಳಗುಂದದ ಖ್ಯಾತಿ. ಗದಗದಿಂದ 9ಕಿಮೀ ದೂರವಿರುವ ಬೆಳದಡಿಯಲ್ಲಿ ಶ್ರೀರಾಮಚಂದ್ರನ ದೇವಾಲಯ ಮತ್ತು 16ಕಿಮೀ ದೂರದಲ್ಲಿ ತಿರುಪತಿಯೆಂದು ಖ್ಯಾತಿ ಗಳಿಸಿರುವ ವೆಂಕಟಾಪುರದಲ್ಲಿ ವೆಂಕಟರಮಣ ಹಾಗೂ ಮಹಾಲಕ್ಷ್ಮಿಯ ದೇವಾಲಯ ಮತ್ತು ಬ್ರಹ್ಮಾನಂದರ ಸಮಾಧಿ ಇವೆ. ಈ ತಾಲ್ಲೂಕಿನ ಆಡಳಿತ ಕೇಂದ್ರ ಮತ್ತು ಮುಖ್ಯ ಪಟ್ಟಣವಾದ ಗದಗ ಹುಬ್ಬಳ್ಳಿ-ಗುಂತಕಲ್ಲು ರೈಲುಮಾರ್ಗದಲ್ಲಿ ಹುಬ್ಬಳ್ಳಿಗೆ 59 ಕಿಮೀ ಪೂರ್ವಕ್ಕಿದೆ. ಪಕ್ಕದ ಬೆಟಗೇರಿಯನ್ನೂ ಸೇರಿಸಿ ಗದಗ-ಬೆಟಗೇರಿ ಪುರಸಭೆ ಇಲ್ಲಿ ವ್ಯವಸ್ಥಿತವಾಗಿದೆ. ಗದಗ- ಬೆಟಗೇರಿಯ ಜನಸಂಖ್ಯೆ 95,426. ಹಲವು ಶಾಲೆಗಳು, ಒಂದು ಕಾಲೇಜು, ಆಸ್ಪತ್ರೆಗಳು ಇತ್ಯಾದಿ ನಗರ ಸಾಮಾನ್ಯವಾದುವೆಲ್ಲ ಇಲ್ಲಿವೆ. ಗದಗ ಹತ್ತಿ ವ್ಯಾಪಾರ ಕೇಂದ್ರ. ಇದರ ದೊಡ್ಡ ಮಾರುಕಟ್ಟೆ, ವಖಾರುಗಳು ಇಲ್ಲಿವೆ. ಹತ್ತಿ ಉತ್ಪನ್ನ ಮತ್ತು ಮಾರಾಟದಲ್ಲಿ ಕರ್ನಾಟಕ ರಾಜ್ಯದ ಈಜಿಪ್್ಟ ಎಂದು ಹೇಳುವಷ್ಟು ಪ್ರಸಿದ್ಧವಾಗಿದೆ. ಹತ್ತಿ ಸಂಸ್ಕರಿಸುವ ಕಾರ್ಖಾನೆಗಳು ಸ್ಥಾಪಿತವಾಗಿವೆ. ಬಟ್ಟೆ ಮತ್ತು ದವಸದ ಮಾರುಕಟ್ಟೆಗಳೂ ಇವೆ. ಇದು ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ. ಕೈಮಗ್ಗ ಮತ್ತು ಯಂತ್ರಮಗ್ಗಗಳಿಂದ ನೇಯ್ಗೆ ಉದ್ಯಮ ಪ್ರಮುಖವಾಗಿದೆ. ಎಣ್ಣೆ ತೆಗೆಯುವುದು, ನೂಲು ಉತ್ಪಾದನೆ, ಬೀಡಿ ಕಟ್ಟುವುದು ಇತರ ಉದ್ಯಮಗಳು. ದಕ್ಷಿಣ ಮಧ್ಯ ರೈಲ್ವೆಯಲ್ಲಿ ಗದಗ ಒಂದು ಕೂಡುನಿಲ್ದಾಣ. ಇಲ್ಲಿಂದ ಸೊಲ್ಲಾಪುರಕ್ಕೆ ಮೀಟರ್ಗೇಜಿನ ರೈಲುಮಾರ್ಗ ಇದೆ. ಗದಗದಲ್ಲೊಂದು ಸಣ್ಣ ರೈಲ್ವೆ ಕಾರ್ಯಾಗಾರವುಂಟು.

ಇಲ್ಲಿನ ಸ್ಥಳಪುರಾಣದ ಪ್ರಕಾರ ಗದಗಿನ ಪೂರ್ವ ಹೆಸರು ಕ್ರತುಪುರ. ಈಗ ಊರಿನ ಹೆಸರು ಗದಗ್, ಗದುಗು ಎಂದು ಹಿಂದಿನ ರೀತಿಗಳಲ್ಲಿ ಬಳಕೆಯಲ್ಲಿದೆ. ಗದುಗೆಂಬ ಹೆಸರು ಇಲ್ಲಿರುವ ತೋಂಟದಾರ್ಯರ (ಸಿದ್ಧಲಿಂಗೇಶ್ವರರ) ಗದ್ದುಗೆಯಿಂದ ಬಂದಿರಬಹುದೆಂದೂ ಒಂದು ಹೇಳಿಕೆ. ಗಜಗ, ಕಲ್ಲುಗ, ಗ¿್ದಗು ಇತ್ಯಾದಿ ಹೆಸರುಗಳಿಂದ ಬಂದಿರಬಹುದೆಂಬ ಅಬಿsಪ್ರಾಯವೂ ಇದೆ. ಗದಗ ಒಂದು ಕಾಲದಲ್ಲಿ ಮಹಾ ಅಗ್ರಹಾರವಾಗಿ ಮೆರೆದ ಪಟ್ಟಣವೆಂಬುದು ಇಲ್ಲಿ ದೊರೆತಿರುವ ಚಾಳುಕ್ಯ, ಹೊಯ್ಸಳ, ಸೇವುಣ, ವಿಜಯನಗರ ಕಾಲದ ಹಲವು ಶಾಸನಗಳಿಂದ ತಿಳಿಯುತ್ತದೆ. ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬನಾದ ಕ್ರತು ಗದಗಿನ ಸಮೀಪದಲ್ಲಿರುವ ಕಪ್ಪತಗುಡ್ಡದಲ್ಲಿ ತಪಸ್ಸು ಮಾಡಿದ. ಕಪೋತರೋಮ ಎಂಬ ರಾಕ್ಷಸನ ಕಿರುಕುಳವನ್ನು ತಪ್ಪಿಸಲು ದೇವರು ವೀರನಾರಾಯಣನ ರೂಪದಲ್ಲಿ ಕಾಣಿಸಿಕೊಂಡು ರಾಕ್ಷಸನನ್ನು ವದಿsಸಿದ. ಕ್ರತುವಿನ ಪ್ರಾರ್ಥನೆಯಂತೆ ನಾರಾಯಣ ಇಲ್ಲಿಯೇ ಉಳಿದ. ಜನಮೇಜಯ ಸರ್ಪಯಾಗ ಮಾಡಿದ ಅಗ್ರಹಾರವೇ ಗದಗ. ರಾಷ್ಟ್ರಕೂಟ 3ನೆಯ ಇಂದ್ರನ ಒಂದು ಶಾಸನ (918) ಇಲ್ಲಿನ ಶಾಸನಗಳಲ್ಲಿ ಅತಿ ಪ್ರಾಚೀನವಾದುದು.

ಇಲ್ಲಿ ಕಲ್ಯಾಣ ಚಾಳುಕ್ಯ ಶೈಲಿಯ ಮೂರು ದೇವಾಲಯಗಳು ಇವೆ. ಪ್ರಮುಖವಾದುದು ತ್ರಿಕೂಟೇಶ್ವರ ದೇವಾಲಯ. ಮೂಲತ ದ್ವಿಕೂಟವಾಗಿದ್ದ ಈ ದೇವಾಲಯದ ಪೂರ್ವಾಬಿsಮುಖವಾಗಿರುವ ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಮೂರು ಲಿಂಗಗಳಿವೆ. ಗರ್ಭಗುಡಿಯ ಮುಂದೆ ಅರ್ಧಮಂಟಪ ಮತ್ತು ಅದರ ಮುಂದೆ ತೆರೆದ ಮಹಾಮಂಟಪ ಇವೆ. ಮಹಾಮಂಟಪದಲ್ಲಿ ಚಾವಣಿ ಮತ್ತು ತೊಲೆಗಳ ಮಧ್ಯೆ ಜಾಲಂಧ್ರಗಳಿವೆ. ಕಂಬಗಳು ಮತ್ತು ಅನೇಕ ಅಲಂಕರಣ ಶಿಲ್ಪಗಳು ಸುಂದರವಾಗಿವೆ. ಶಿಖರ ಈಚಿನದು. ತ್ರಿಕೂಟೇಶ್ವರ ಗುಡಿಯ ಆವರಣದಲ್ಲೇ ದಕ್ಷಿಣಕ್ಕೆ ಇರುವ ಸರಸ್ವತೀಗುಡಿ ಚಿಕ್ಕದು. ಗರ್ಭಗುಡಿ ಮತ್ತು ತೆರೆದ ಮಂಟಪ ಮಾತ್ರ ಇವೆ. ಬಹುಸೂಕ್ಷ್ಮವಾಗಿ ಕೆತ್ತಿರುವ ವಿನ್ಯಾಸಗಳಿರುವ ಇಲ್ಲಿನ ಕಂಬಗಳು ಇಡೀ ಚಾಳುಕ್ಯ ಸಂಪ್ರದಾಯದಲ್ಲೇ ಬಹುಸುಂದರ ರಚನೆಗಳೆಂದು ಪ್ರಸಿದ್ಧವಾಗಿವೆ. ಹಾಗೆಯೇ ಭುವನೇಶ್ವರಿ ಮತ್ತು ಗೋಡೆಗಳಲ್ಲಿನ ಕುಸುರಿ ಕೆಲಸವೂ ಚೆನ್ನಾಗಿವೆ. ಇಲ್ಲಿನ ಆಳೆತ್ತರದ, ಕುಳಿತ ಭಂಗಿಯ ಸರಸ್ವತೀ ವಿಗ್ರಹ ಮುರಿದಿದ್ದರೂ ಅದರಲ್ಲಿರುವ ಸಹಜ ಸುಂದರ ಪ್ರಮಾಣ, ಭಾವಲಾಲಿತ್ಯ, ವಸ್ತ್ರ ಆಭರಣಗಳ ಕೆತ್ತನೆಯ ನವಿರು ಕೆಲಸ ಇವುಗಳಿಂದಾಗಿ ಮೋಹಕವಾಗಿದೆ. ಊರ ಮಧ್ಯದಲ್ಲಿರುವ ಸೋಮೇಶ್ವರ ಅತ್ಯಲಂಕರಣದಿಂದ ಕೂಡಿದ ಇನ್ನೊಂದು ಚಾಳುಕ್ಯ ಶೈಲಿಯ ಗುಡಿ.

ಕನ್ನಡ ಮಹಾಭಾರತದ ಕರ್ತೃ ಕುಮಾರವ್ಯಾಸನ ಪ್ರೇರಕ ದೈವವೆಂದು ಪ್ರಸಿದ್ಧವಾಗಿರುವ ವೀರನಾರಾಯಣಸ್ವಾಮಿಯ ದೇವಸ್ಥಾನ 1117ರಲ್ಲಿ ಹೊಯ್ಸಳ ವಿಷ್ಣುವರ್ಧನ ನಿರ್ಮಿಸಿದ ಪಂಚನಾರಾಯಣ ದೇವಾಲಯಗಳಲ್ಲಿ ಒಂದೆÀಂದೂ ಜಕಣಾಚಾರಿಯಿಂದ ನಿರ್ಮಿಸಲ್ಪಟ್ಟಿತೆಂದೂ ಐತಿಹ್ಯ. “ಕೃತಪುರಮಹಾತ್ಮೆಯ” ಪ್ರಕಾರ ಕೃತಮುನಿಯ ರಕ್ಷಣೆಗಾಗಿ ಬದರಿಯಿಂದ ನಾರಾಯಣ ಬಂದು ಇಲ್ಲಿ ನೆಲಸಿದ. 11-12ನೆಯ ಶತಮಾನದ ಕೆಲವು ಹಳೆಯ ಭಾಗಗಳಿದ್ದರೂ ಇಂದು ಇದು ಬಹುವಾಗಿ ನವೀಕೃತವಾಗಿದೆ. ಇತ್ತೀಚೆಗೆ ದೇವಸ್ಥಾನ ಜೀರ್ಣೊದ್ಧಾರವಾಗಿತ್ತು (1962). ದೇವಸ್ಥಾನದ ಸುತ್ತ ಸುಮಾರು 300' ಉದ್ದ 200' ಅಗಲದ ಪ್ರಾಕಾರ ಇದೆ. ಪೂರ್ವದ್ವಾರದ ಮೇಲೆ ಎತ್ತರವಾದ ಗೋಪುರ ಇದೆ. ಒಳ ಅಂಗಣ 50' ಉದ್ದ 20' ಅಗಲ ಇದೆ. ಇಲ್ಲಿರುವ ಮಧ್ಯದ ನಾಲ್ಕು ಕಂಬಗಳಲ್ಲಿ ದಶಾವತಾರ ಚಿತ್ರಗಳಿವೆ. ನರಸಿಂಹ ವಿಗ್ರಹವಿರುವ ಇಲ್ಲಿನ ಎರಡನೆಯ ಕಂಬ ಕುಮಾರವ್ಯಾಸ ಕಂಬವೆಂದು ಪ್ರಸಿದ್ಧವಾಗಿದೆ. ಕುಮಾರವ್ಯಾಸ ಇಲ್ಲಿ ಕುಳಿತು ವೀರನಾರಾಯಣನಿಂದ ಸ್ಫೂರ್ತಿ ಪಡೆದು ಕನ್ನಡ ಭಾರತವನ್ನು ರಚಿಸಿದನೆಂದು ಹೇಳಲಾಗಿದೆ. ಗರ್ಭಗುಡಿಯ ಮೇಲಿನ ವಿಮಾನ ಸುಮಾರು 20' ಎತ್ತರವಿದೆ. ವಿಮಾನ ಹನ್ನೊಂದು ಹಂತಗಳಿಂದಾದುದು. ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ಪ್ರಭಾವಳಿ ಸಹಿತವಾಗಿ 8' ಎತ್ತರವಿರುವ ವೀರನಾರಾಯಣಸ್ವಾಮಿಯ ಮೂರ್ತಿ ಇದೆ. ಮೂರ್ತಿಯ ಎತ್ತರ ಸುಮಾರು 51/4' ಪ್ರಭಾವಳಿಯಲ್ಲಿ ದಶಾವತಾರ ಚಿತ್ರಗಳನ್ನು ಕೆತ್ತಲಾಗಿದೆ. ಸ್ವಾಮಿಯ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ, ಮತ್ತೊಂದು ಅಭಯಹಸ್ತ ಇವೆ. ಎಡಗೈಯಲ್ಲಿ ಬೆಂಡು ಇವೆ. ದೇವಾಲಯದಲ್ಲಿ ಗರ್ಭಗುಡಿಯಿಂದ ಬಲಕ್ಕೆ ಶ್ರೀ ರಾಘವೇಂದ್ರಸ್ವಾಮಿಯವರ ಬೃಂದಾವನ, ಕುಮಾರವ್ಯಾಸಮಂಟಪ ಮತ್ತು ಲಕ್ಷ್ಮೀನರಸಿಂಹ, ಈಶ್ವರ ಮತ್ತು ಹನುಮಂತ ದೇವಾಲಯಗಳು ಇವೆ. ವರ್ಷದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೂ ಉಪನ್ಯಾಸಗಳೂ ಭಾರತವಾಚನ ಇತ್ಯಾದಿ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ. ಶ್ರಾವಣ ಬಹುಳ ಬಿದಿಗೆಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ, ಪುಷ್ಯ ಶುದ್ಧ ಚತುರ್ದಶಿ ಅಥವಾ ಹುಣ್ಣಿಮೆಯಂದು ಕುಮಾರವ್ಯಾಸ ಜಯಂತಿ ವಿಜೃಂಭಣೆಯಿಂದ ನಡೆಯುತ್ತವೆ. ಗದಗಿನಲ್ಲಿ ತೋಂಟದ ಸಿದ್ಧಲಿಂಗೇಶ್ವರ ಮಠವಿದೆ. ಇಲ್ಲಿನ ತೋಂಟದಾರ್ಯರ ಜಾತ್ರೆ ಬಹುಜನರನ್ನು ಆಕರ್ಷಿಸುತ್ತದೆ. ಜೋಡು ಹನುಮಾನ್, ಶಂಕರಲಿಂಗ, ದುರ್ಗಾ, ವೀರಭದ್ರ, ವಿಠೋಬ ಮುಂತಾದವು ಈ ಪಟ್ಟಣದ ಇತರ ದೇವಸ್ಥಾನಗಳು.