ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗದ್ಯಸಾಹಿತ್ಯ
ಗದ್ಯಸಾಹಿತ್ಯ
ಗದ್ಯಕಾವ್ಯ ಮತ್ತು ಪದ್ಯಕಾವ್ಯಗಳ ನಡುವಣ ವ್ಯತ್ಯಾಸಗಳು ಬಹು ಸೂಕ್ಷ್ಮ ರೀತಿಯವಾದುದರಿಂದ ಅವನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಗದ್ಯಕ್ಕೂ ತನ್ನದೇ ಆದ ಲಯವುಂಟು; ಆದರೆ ಅದು ಕಾವ್ಯದ ಲಯದಂತೆ ಪುನರಾವೃತ್ತಿಯನ್ನು ಆಧರಿಸಿದುದಲ್ಲ, ಅಲ್ಲದೆ ಅದನ್ನು ಇಲ್ಲಿ ನಿರೀಕ್ಷಿಸಬಹುದಾದುದೂ ಅಲ್ಲ. ಎರಡನೆಯದಾಗಿ, ಕಾವ್ಯದಲ್ಲಿ ಛಂದಸ್ಸಿಗೂ ಭಾಷೆಗೆ ಸಹಜವಾದ ಲಯಕ್ಕೂ ತುಯ್ತವಿರುತ್ತದೆ. ಮೂರನೆಯದಾಗಿ, ಕಾವ್ಯದಲ್ಲಿ ಅರ್ಥಕ್ಕೂ ಛಂದಸ್ಸಿಗೂ ತುಯ್ತವುಂಟು. ಇದೂ ಕವನದ ಸಂಪೂರ್ಣ ಅರ್ಥದ ಸೃಷ್ಟಿಯಲ್ಲಿ ಪಾಲುಗೊಳ್ಳುತ್ತದೆ. ನಾಲ್ಕನೆಯದಾಗಿ, ಭಾಷೆಯ ವ್ಯಾಕರಣದ ನಿಯಮಗಳ ಪಾಲನೆಯಲ್ಲಿ ಕಾವ್ಯ ಹೆಚ್ಚಿನ ಸ್ವಾತಂತ್ರ್ಯ ಪಡೆಯುತ್ತದೆ. ಆದರೆ, ಐದನೆಯದಾಗಿ, ಛಂದಸ್ಸಿನ ಬೇಡಿಕೆಯಿಂದ ಪದಗಳ ಆಯ್ಕೆಯಲ್ಲಿ ಅದರ ಸ್ವಾತಂತ್ರ್ಯ ಮಿತಗೊಳ್ಳುತ್ತದೆ. ಆರನೆಯದಾಗಿ, ಗದ್ಯಕ್ಕಿಂತ ಕಾವ್ಯ ಸೂಚ್ಯಾರ್ಥವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಏಳನೆಯದಾಗಿ, ಕಾವ್ಯದಲ್ಲಿ ಭಾಷೆಯ ಹಲವು ಅಂಶಗಳಾದ ನಾದ, ಲಯ, ವಾಕ್ಯಬಂಧ, ಪದಗಳ ಸ್ಪಷ್ಟ ಮತ್ತು ಸೂಚ್ಯ ಅರ್ಥ-ಇಂಥವು ಮತ್ತು ವಿಶೇಷ ಸಾಧನಗಳಾದ ಅಲಂಕಾರಗಳು, ಉಪಮಾನಗಳು, ಪ್ರತಿಮೆಗಳು-ಇಂಥವು ಜಟಿಲವಾದ ರೀತಿಯಲ್ಲಿ ಹೆಣೆದುಕೊಂಡು ಅರ್ಥವನ್ನು ನಿರ್ಮಿಸುತ್ತವೆ. (ನೋಡಿ- ಗದ್ಯ)
ಯಾವ ದೇಶದಲ್ಲಿಯಾದರೂ ಸಾಹಿತ್ಯವೆನ್ನಿಸಿಕೊಳ್ಳಬಹುದಾದ ಗದ್ಯಸೃಷ್ಟಿ ಕಾಣಿಸಿಕೊಳ್ಳುವುದು ಒಳ್ಳೆಯ ಕಾವ್ಯದ ರಚನೆಯಾದ ಎಷ್ಟೊ ಕಾಲದ ಅನಂತರ. ಕಾವ್ಯಕ್ಕಿಂತ ಗದ್ಯ ಸಾಮಾಜಿಕ ಸ್ಥಿತಿಗತಿಗಳನ್ನು ಹೆಚ್ಚಾಗಿ ಅವಲಂಬಿಸುತ್ತದೆ. ಜನರ ಆಸಕ್ತಿಗಳು ಬೆಳೆದಂತೆ, ಜ್ಞಾನ ವಿಸ್ತಾರವಾದಂತೆ ಗದ್ಯದ ಹರವೂ ಶಬ್ದಸಂಪತ್ತೂ ಬೆಳೆಯುತ್ತವೆ; ವಾಕ್ಯಬಂಧ ಮತ್ತು ಪರಿಣಾಮದ ಸಾಧನೆಗಳು ಬದಲಾಗುತ್ತವೆ. ಸಮಾಜದಲ್ಲಿ ಒಂದು ಹಳೆಯ ವರ್ಗದ ಇಳಿಮುಖ, ಹೊಸ ವರ್ಗದ ಪ್ರಾಬಲ್ಯ, ಶಿಕ್ಷಣದ ಬೆಳೆವಣಿಗೆ, ಅಚ್ಚುಕೂಟಗಳ ಪ್ರಾರಂಭ ಮತ್ತು ಅಚ್ಚಿನ ತಂತ್ರದ ಪ್ರಗತಿ, ರಾಜಕೀಯ ಪಕ್ಷಗಳ ಸಂಖ್ಯೆ ಮತ್ತು ಸ್ಪರ್ಧೆ, ಜನ ತಮ್ಮ ವಿರಾಮವನ್ನು ಕಳೆಯುವ ರೀತಿ, ಸಾಮಾಜಿಕ ಜೀವನದಲ್ಲಿ ಹೆಂಗಸರ ಪಾತ್ರ-ಇಂಥ ಅಂಶಗಳೆಲ್ಲ ಗದ್ಯ ಸಾಹಿತ್ಯವಾಹಿನಿಯ ದಿಕ್ಕನ್ನು ಪ್ರಭಾವಿಸಬಹುದು. ಇಂಗ್ಲೆಂಡಿನಲ್ಲಿ ಹದಿನೇಳನೆಯ ಶತಮಾನದಲ್ಲಿ ಕಾಫಿ ಹೌಸುಗಳ ಬೆಳವಣಿಗೆ (ನೋಡಿ- ಕ್ಲಬ್ಬುಗಳು) ಗದ್ಯ ಸಾಹಿತ್ಯದ ಸೃಷ್ಟಿಗೆ ನೆರವಾಯಿತು ಎಂಬುದನ್ನಿಲ್ಲಿ ನೆನೆಯಬಹುದು. ವಿಜ್ಞಾನದ ಪ್ರಗತಿ ಮತ್ತು ಉಚ್ಛ ವೈಜ್ಞಾನಿಕ ಅಧ್ಯಯನದ ಸಾಧನೆಯನ್ನು ಜನಸಾಮಾನ್ಯಕ್ಕೆ ತಂದುಕೊಡುವ ಅವಶ್ಯಕತೆಗಳು ಸಹ ಗದ್ಯಸಾಹಿತ್ಯದ ಮೇಲೂ ಪ್ರಭಾವ ಬೀರುತ್ತವೆ. ಆರ್ಥರ್ ಸ್ಟ್ಯಾನ್ಲಿ ಎಡಿಂಗ್‍ಟನ್ (1882-1944), ಜೇಮ್ಸ್ ಜೀನ್ಸ್ (1877-1946), ಜೂಲಿಯನ್ ಹಕ್ಸ್‍ಲಿ (1887) ಮೊದಲಾದ ವಿಜ್ಞಾನಿಗಳೂ ಸೊಗಸಾದ ಗದ್ಯಕೃತಿಗಳನ್ನು ಬರೆದಿದ್ದಾರೆ.
ಪ್ರಾಚೀನ ಗ್ರೀಸಿನಲ್ಲಿ ಗದ್ಯ ಮೊದಲು ಬಳಕೆಯಾದದ್ದು ಶಾಸನಗಳಿಗಾಗಿ; ಆಮೇಲೆ ಕ್ರಿ.ಪೂ. ಆರನೆಯ ಶತಮಾನದಲ್ಲಿ ಜ್ಞಾನ ಸಾಹಿತ್ಯಕ್ಕಾಗಿ ಬಳಕೆಯಾಯಿತು. ಇದರಲ್ಲಿ ಕೆಲವೇ ವಾಕ್ಯಗಳು ಉಳಿದು ಬಂದಿವೆ. ಕ್ರಿ.ಪೂ. ಸುಮಾರು 500ರಲ್ಲಿದ್ದ ಹಿರಾಕ್ಲಿಟಸನ ಬರೆಹದಲ್ಲಿ ಚಾಟೂಕ್ತಿಗಳ ಸೊಗಸನ್ನು ಕಾಣಬಹುದು. ಪ್ರಾರಂಭದ ಗದ್ಯ ಬರೆಹಗಾರರ ಗುರಿ ಸ್ಫುಟತ್ವ. ಪರ್ಷಿಯದ ಸಂಪರ್ಕವಾದಂತೆಲ್ಲ ಗ್ರೀಕರಿಗೆ ಹೊರದೇಶಗಳ ವಿಷಯದಲ್ಲಿ ಆಸಕ್ತಿ ಬೆಳೆಯಿತು. ಮೊದಲನೆಯ ಚರಿತ್ರಕಾರನಾದ ಹಿರಾಡೊಟಸನ (ಕ್ರಿ.ಪೂ. ಸು. 484-425) ತಿಳಿಯಾದ ಶೈಲಿಯಲ್ಲಿ ವೈಜ್ಞಾನಿಕ ನಿರೂಪಣಾ ವಿಧಾನವನ್ನು ಕಾಣಬಹುದು. ಆದರೆ ಇವನಲ್ಲಿನ ವೃತ್ತಾಂತದ ರೀತಿ, ಮಹಾಪುರುಷರ ಚಿತ್ರಣ, ಭಾಷಣಗಳು, ಚರ್ಚೆಗಳ ಬಳಕೆ, ಕವನಗಳ ವರ್ಣನೆ-ಇವು ಮಹಾಕಾವ್ಯಗಳ ಪ್ರಭಾವಕ್ಕೆ ಸಾಕ್ಷಿಯಾಗಿವೆ. ಇವನ ಖ್ಯಾತ ಶಿಷ್ಯ ಥೂಸಿಡಿಡೀಸ್ (ಕ್ರಿ.ಪೂ. 471-401). ಗುರುವಿನ ಶೈಲಿಯ ಸರಳತೆ, ಲಾಸ್ಯ ಇವನ ಬರೆಹದಲಿಲ್ಲವಾದರೂ ವಿಜ್ಞಾನಿಯ ಮನೋಧರ್ಮ, ಕಲಾವಿದನ ರೂಪ ಪ್ರಜ್ಞೆ ಎರಡೂ ಉಂಟು. ಪ್ರಸಿದ್ಧ ತತ್ತ್ವಜ್ಞಾನಿ ಪ್ಲೇಟೊ ಹುಟ್ಟು ಕವಿ. ತನ್ನ ಗುರು ಸಾಕ್ರಟೀಸನನ್ನು ಕುರಿತ ಇವನ ಬರೆಹಗಳಲ್ಲಿ ನಾಟಕದ ಸ್ವಾರಸ್ಯವಿದೆ, ಕಾದಂಬರಿಕಾರನ ಪಾತ್ರಸೃಷ್ಟಿ ಇದೆ. ಗ್ರೀಸಿನಲ್ಲಿ ಗದ್ಯದ ಬೆಳವಣಿಗೆಗೆ ವಾಗ್ಮಿಗಳ ಕೊಡುಗೆ ವಿಶೇಷವಾದದ್ದು. ಆ ದೇಶದಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗವಹಿಸ ಬಯಸುವವರು ಭಾಷಣ ಕಲೆಯನ್ನು ಅಭ್ಯಾಸ ಮಾಡಬೇಕಾಗಿತ್ತು. ಥಿಮಿಸ್ಟಾಕ್ಲೀಸ್, ಪೆರಿಕ್ಲೀಸ್ ಮೊದಲಾದವರ ಭಾಷಣಗಳು ಮೂಲದಲ್ಲಿ ಉಳಿದುಬಂದಿಲ್ಲ. ಭಾಷಣ ಕಲೆಯನ್ನು ಹೇಳಿಕೊಟ್ಟ ಗುರುಗಳಲ್ಲಿ ಬಹು ಪ್ರಸಿದ್ಧನಾದವ ಐಸಾಕ್ರಟೀಸ್ (ಕ್ರಿ.ಪೂ. 436-338). ಭಾಷಣಕಾರರಲ್ಲಿ ಅಗ್ರಗಣ್ಯ ಎನಿಸಿಕೊಂಡವ ಡಿಮಾಸ್ಥನೀಸ್ (ಕ್ರಿ.ಪೂ. 384-322). ಶ್ರೋತೃಗಳ ಭಾವಗಳನ್ನು ಉದ್ದೀಪಿಸುವ ಸಾಧಾರಣ ವಾಗ್ಮಿತೆ ಇವನದು. ಒಟ್ಟಿನಲ್ಲಿ ಗ್ರೀಸಿನ ಪ್ರಸಿದ್ಧ ಭಾಷಣಕಾರರೆಲ್ಲ ಚೆನ್ನಾಗಿ ಓದಿಕೊಂಡವರು. ಮನುಷ್ಯ ಸ್ವಭಾವವನ್ನು ಅರ್ಥಮಾಡಿಕೊಂವರು. ಬೌದ್ಧಿಕ ಶಕ್ತಿ ಇವರಲ್ಲಿ ಎದ್ದು ಕಾಣುತ್ತದೆ.
ರೋಮನ್ ಸಾಹಿತ್ಯದಲ್ಲಿ ಪ್ರಾಯಶ: ಅಪಿಯಸ್ ಸೀಕಸ್ ಕ್ಲಾಡಿಯಸನ (ಕ್ರಿ.ಪೂ.ಸು. 300) ಭಾಷಣಗಳಲ್ಲಿ ಮೊಟ್ಟಮೊದಲು ಗದ್ಯ ಕಾಣಸಿಗುತ್ತದೆ. ಲ್ಯಾಟಿನ್ ಸಾಹಿತ್ಯದ ಸುವರ್ಣಯಗದಲ್ಲಿಯೇ (ಕ್ರಿ.ಪೂ. 80-42) ಶ್ರೇಷ್ಠ ಗದ್ಯ ಸಾಹಿತ್ಯವೂ ಸೃಷ್ಟಿಯಾಯಿತು. ಪ್ರಸಿದ್ಧ ಯೋಧ ಹಾಗೂ ಆಡಳಿತಗಾರ ಜೂಲಿಯಸ್ ಸೀಸರನ `ಕಾಮೆಂಟರಿ'ಗಳಲ್ಲಿ ಭಾಷೆಯ ಪರಿಶುದ್ಧತೆ ಮತ್ತು ಸ್ಫುಟತ್ವ ಅಸಾಧಾರಣವಾದುವು. ಪ್ರಸಿದ್ಧ ವಾಗ್ಮಿ ಸಿಸರೊ (ಕ್ರಿ.ಪೂ. 106-43) ಅಮೂರ್ತವೂ ಜಟಿಲವೂ ಆದ ಭಾವನೆಗಳನ್ನು ಸ್ಪಷ್ಟವಾಗಿ ನಿರೂಪಿಸುವ ಲ್ಯಾಟನ್ ಶೈಲಿಯನ್ನು ಬೆಳೆಸಿದ. ಚಾತುರ್ಯದಿಂದ ಹೆಣೆದ ದೀರ್ಘವಾಕ್ಯಗಳು, ಹೊಸ ಲಯಗತಿ ಇವು ಸಿಸರೋನ ಶೈಲಿಯ ಲಕ್ಷಣಗಳು. ಇವನ ಕಾಲದಿಂದಾಚೆಗಿನ ಗದ್ಯಲೇಖಕರು ಇವನನ್ನು ಅನುಕರಿಸಿದರು ಇಲ್ಲವೇ ಇವನ ಶೈಲಿಯನ್ನು ವಿರೋಧಿಸಿದರು; ಹೀಗೆ ಸಿಸರೋ ತನ್ನ ಕಾಲದ ಅನಂತರದ ಎಲ್ಲ ಗದ್ಯ ಲೇಖಕರ ಮೇಲೆ ಪ್ರಭಾವ ಬೀರಿದ.
ಇವನಿಗೆ ವಿರುದ್ಧವಾದ ಪ್ರತಿಕ್ರಿಯೆ ತೋರಿದವರಲ್ಲಿ ಪ್ರಮುಖ ಸ್ಟಾಲಸ್ಟ್ (ಅಥವಾ ಸ್ಟಾಲಿಸ್ಟಿಯಸ್) (ಕ್ರಿ.ಪೂ. 86-34). ಇವನದು ಅಡಕವಾದ, ಚಾಟೂಕ್ತಿಯ ಶೈಲಿ. ಅರಸೊತ್ತಿಗೆಯ ಸ್ಥಾಪನೆಯಿಂದ ಸಾರ್ವಜನಿಕ ಜೀವನದಲ್ಲಿ ವಾಗ್ಮಿತೆಗೆ ಪ್ರಭಾವ ಕಡಿಮೆಯಾದುದು ಈ ಬಗೆಯ ಶೈಲಿಗೆ ನೆರವಾಯಿತು. ಹೊಸ ವಾತಾವರಣದಲ್ಲಿ ಜನರ ಮನಸ್ಸನ್ನಾಕರ್ಷಿಸುವ ಇಲ್ಲವೇ ಭಾವೋದ್ವೇಗವನ್ನುಂಟು ಮಾಡುವ ವಾಗ್ಮಿತೆ ಕಳೆಗುಂದಿ ಬುದ್ಧಿಶಕ್ತಿಗೆ ಪ್ರಾಧಾನ್ಯ ದೊರೆಯಿತು. ಕಿರಿಯ ಸೆನಿಕ (ಕ್ರಿ.ಪೂ. 5-ಕ್ರಿ.ಶ. 65) ಮತ್ತು ಟ್ಯಾಸಿಟಸ್ (56-120) ಈ ಶೈಲಿಯನ್ನು ಬೆಳೆಸಿದರು. ಟ್ಯಾಸಿಟಸ್ ವೈವಿಧ್ಯವನ್ನೇ ಮುಖ್ಯವಾಗಿ ಗಣಿಸಿ ಆರ್ಷೇಯ ಪದಗಳನ್ನೂ ಬಳಸುತ್ತಾನೆ. ಇವನ ಶೈಲಿಯನ್ನು ಇಂಗ್ಲಿಷ್ ಸಾಹಿತಿ ಕಾರ್ಲೈಲನ ಶೈಲಿಗೆ ಹೋಲಿಸಬಹುದು.
ರೋಮ್ ಸಾಮ್ರಾಜ್ಯದ ಪ್ರಾಬಲ್ಯ ಕಡಿಮೆಯಾಗಿ ರೋಮನರಿಗೆ ತಮ್ಮ ನಾಡುನುಡಿಗಳಲ್ಲಿನ ತೀವ್ರ ಹೆಮ್ಮೆ ಕುಂದಿದಂತೆ ಆ ದೇಶದ ಲೇಖಕರು ಗ್ರೀಕ್ ಭಾಷೆಯಲ್ಲಿ ಬರೆಯುವುದು ಹೆಚ್ಚಿತು. ರೋಮನ್ ಬರೆಹಗಳಲ್ಲಿನ ಅತಿ ಶ್ರೇಷ್ಠ ಗದ್ಯಕೃತಿ, ಮಾರ್ಕಸ್ ಅರೀಲಿಯಸನ ಚಿಂತನೆಗಳು ಗ್ರೀಕ್ ಭಾಷೆಯಲ್ಲಿದೆ.
ಸುಮಾರು ಹದಿನೇಳನೆಯ ಶತಮಾನದ ಅಂತ್ಯದವರೆಗೆ ಲ್ಯಾಟಿನ್ ಭಾಷೆಗೆ ಪ್ರತಿಷ್ಠೆಯ ಸ್ಥಾನ ದೊರಕಿತ್ತು. ಯೂರೋಪಿನಲ್ಲಿ ಅದು ಅಂತರರಾಷ್ಟ್ರೀಯ ಭಾಷೆಯಾಗಿ, ವಿದ್ವತ್ತಿನ, ಜಗತ್ತಿನ ಭಾಷೆಯಾಗಿ ಮುಂದುವರಿಯಿತು. ಇಂಗ್ಲೆಂಡಿನ ಫ್ರಾನ್ಸಿಸ್ ಬೇಕನ್ (1561-1626) ತಾನು ಮುಖ್ಯ ಎಂದು ಗಣಿಸಿದ ಕೃತಿಗಳನ್ನು ಲ್ಯಾಟಿನ್ ಭಾಷೆಯಲ್ಲಿ ಬರೆದು ಅಮುಖ್ಯ ಎಂದು ಭಾವಿಸಿದ ಪ್ರಬಂಧಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದ.
ಪ್ರಾಚೀನ ಲ್ಯಾಟಿನ್ ಸಾಹಿತ್ಯಕ್ಕೂ ಅರ್ವಾಚೀನ ಲ್ಯಾಟಿನ್ ಸಾಹಿತ್ಯಕ್ಕೂ ನಡುವೆ ವಿಚ್ಛಿನ್ನತೆ ಬರಲಿಲ್ಲ. ಕ್ರೈಸ್ತಮತ ಹಬ್ಬಿದಂತೆ ಹೊಸ ಪದಗಳು ಭಾಷೆಗೆ ಸೇರಿದುವು. ಕ್ರಿ.ಶ. ಆರನೆಯ ಶತಮಾನದಲ್ಲಿ ಬೊಯೀಥೀಯಸ್‍ನ ತತ್ತ್ವಜ್ಞಾನದ ಸಂತೈಕೆಗಳು ಕ್ಯಾಸಿಒಡೊರಸ್‍ನ ಗಾತರ ಚರಿತ್ರೆಗಳಂಥ ಒಳ್ಳೆಯ ಕೃತಿಗಳು ರಚಿತವಾದುವು.
ಭಾಷೆ ಮತ್ತು ಸಾಹಿತ್ಯಗಳ ದೃಷ್ಟಿಯಿಂದ ಇಂಗ್ಲಿಷ್ ಗದ್ಯಸಾಹಿತ್ಯ ಗ್ರೀಕ್ ಮತ್ತು ಲ್ಯಾಟಿನ್‍ಗಳ ಪ್ರಭಾವಕ್ಕೆ ಒಳಗಾಗಿದೆ. ಸರಳ ವೃತ್ತಾಂತ, ಐತಿಹಾಸಿಕ ಬರೆಹ, ಅನ್ಯಾರ್ಥ, ಜೀವನಚರಿತ್ರೆ, ಆತ್ಮವೃತ್ತ, ತತ್ತ್ವಶಾಸ್ತ್ರ, ಗದ್ಯ ವಿಡಂಬನ, ವೈಜ್ಞಾನಿಕ ಬರೆಹ, ಸಾಹಿತ್ಯ ವಿಮರ್ಶೆ-ಇವುಗಳಲ್ಲಿ ಪ್ರಾಚೀನಸಾಹಿತ್ಯ ಇಂಗ್ಲಿಷ್, ಗದ್ಯಸಾಹಿತ್ಯದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ವಿಶ್ಲೇಷಿಸುವುದು ಬಹು ಕಷ್ಟದ ಕಾರ್ಯ. ಅಷ್ಟೊಂದು ವ್ಯಾಪಕ, ಸೂಕ್ಷ್ಮ, ಈ ಪ್ರಭಾವ. ತಂತ್ರಜ್ಞಾನದ ಭಾಷಾ ಸಂಪತ್ತಿಗೆ ಈ ಭಾಷೆಗಳ ಕೊಡುಗೆಯೂ ಸಮೃದ್ಧ. ಲಾಜಿಕ್ ಫಿಲಾಸಫಿ, ಟ್ರ್ಯಾಜಡಿ, ಕಾಮಿಡಿ, ಅಸ್ಟ್ರಾನಮಿ ಮೊದಲಾದ ಪದಗಳೆಲ್ಲ ಗ್ರೀಕ್ ಭಾಷೆಯಿಂದ ಬಂದವು. ಸ್ಯಾಟೈರ್ ಲ್ಯಾಟಿನ್ ಭಾಷೆಯ ಕೊಡುಗೆ. ಪ್ಲೇಟೋ, ಪ್ಲೂಟಾರ್ಕ್ ಮೊದಲಾದ ಗ್ರೀಕ್ ಬರೆಹಗಾರರೂ ಇಂಗ್ಲಿಷ್ ಗದ್ಯ ಶೈಲಿಗಳ ಮೇಲೆ ತಮ್ಮ ಪ್ರಭಾವ ಬೀರಿದ್ದಾರೆ.
ಇಂಗ್ಲಿಷ್ ಸಾಹಿತ್ಯದ ಪ್ರಾರಂಭ ಕ್ರಿ.ಶ. ಐದನೆಯ ಶತಮಾನದಲ್ಲಿ ಬ್ರಿಟನ್ನಿಗೆ ಬಂದ ಆಂಗ್ಲೊ-ಸ್ಯಾಕ್ಸನ್ ದಾಳಿಕಾರರಿಂದಾಯಿತು. ಇವರು ಬರುವಾಗ ಕಾವ್ಯಗಳನ್ನು ತಂದುಕೊಂಡರು. ಆದರೆ ಗದ್ಯಬರೆಹದ ಪರಂಪರೆ ಪ್ರಾರಂಭವಾದದ್ದು ಇಂಗ್ಲೆಂಡಿನಲ್ಲಿಯೇ. ಅಲ್ಲೂ ಬಹುಕಾಲ ಲ್ಯಾಟಿನ್ ಭಾಷೆಯೇ ಬಳಕೆಯಲ್ಲಿತ್ತು. ಇಂಗ್ಲಿಷ್ ಗದ್ಯ ನಿಜವಾಗಿ ಪ್ರಾರಂಭವಾಗುವುದು ಆಲ್ಫ್ರೆಡ್ ರಾಜನ ಕಾಲದಲ್ಲಿ (849-901). ಯುದ್ಧಗಳಲ್ಲಿ ಬಹುಕಾಲ ನಿರತನಾಗಿದ್ದರೂ ಸಂಸ್ಕøತಿಯ ಬೆಳೆವಣಿಗೆಯಲ್ಲಿ ವಿಶೇಷ ಆಸಕ್ತಿ ತಳೆದಿದ್ದ ಈ ರಾಜ ಪಾಶ್ಚಾತ್ಯ ಸಂಸ್ಕøತಿಯ ಫಲ ತನ್ನ ದೇಶದ ತರುಣರಿಗೆ ಲಭ್ಯವಾಗಬೇಕೆಂದು ಬಯಸಿದ. ವಿದ್ವಾಂಸರ ನೆರವಿನಿಂದ ತಾನೇ ಲ್ಯಾಟಿನ್ ಭಾಷೆಯಿಂದ ಹಲವು ಕೃತಿಗಳನ್ನು ಅನುವಾದಿಸಿದ. ಹೀಗೆ ಇಂಗ್ಲಿಷ್ ಭಾಷೆಯಲ್ಲಿ ಗದ್ಯಸಾಹಿತ್ಯ ಮೊಳಕೆ ಇಟ್ಟಿತು. ಅನುವಾದದಲ್ಲಿ ಈತ ಇಂಗ್ಲಿಷ್ ಭಾಷೆಗೆ ಸಹಜವಾದ ಶಬ್ದಜೋಡಣೆಯನ್ನೂ ವಾಕ್ಯರಚನೆಯನ್ನೂ ಧೈರ್ಯವಾಗಿ ಬಳಸಿದ. ಇವನ ಕಾಲದಲ್ಲಿ ಪ್ರಾರಂಭವಾದ ಆಂಗ್ಲೊ-ಸ್ಯಾಕ್ಸನ್ ಕ್ರಾನಿಕಲ್ (ನೋಡಿ) ಮುಖ್ಯವಾದ ಕೃತಿ ಆದರೂ ಒಟ್ಟಿನಲ್ಲಿ ಆಂಗ್ಲೊ-ಸ್ಯಾಕ್ಸನರ ಯುಗದಲ್ಲಿ ಗದ್ಯ ಧಾರ್ಮಿಕ ಉದ್ದೇಶಗಳಿಗೇ ಬಹುಮಟ್ಟಿಗೆ ಬಳಕೆಯಾಗುತ್ತಿತ್ತು.
1066ರಲ್ಲಿ ನಾಮಂಡಿಯ ವಿಲಿಯಂ ಇಂಗ್ಲೆಂಡನ್ನು ಗೆದ್ದ ಅನಂತರ ಫ್ರೆಂಚು ಆಡಳಿತದ ಭಾಷೆ, ಚರಿತ್ರೆಯ ದಾಖಲೆಗಳ ಭಾಷೆ ಆಯಿತು. ಜನಸಾಮಾನ್ಯಕ್ಕೆ ಉಪದೇಶ ಮಾಡಲು ಇಂಗ್ಲಿಷ್ ಮಾಧ್ಯಮವಾಯಿತು. ಬೈಬಲ್ಲನ್ನು ಮೊಟ್ಟಮೊದಲ ಬಾರಿಗೆ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಕೀರ್ತಿ ಜಾನ್ ವಿಕ್ಲಿಫ್‍ನದು (1320 ?-1384). ಧಾರ್ಮಿಕ ಗದ್ಯಸಾಹಿತ್ಯದ ಪ್ರಭಾವದ ಹೊರಕ್ಕೆ ಉಳಿದ ಮುಖ್ಯ ಬರೆಹಗಾರ ಥಾಮಸ್ ಮ್ಯಾಲೊರಿ(1400 ?-1470). ಇವನ ಮಾರ್ಟ್ ಡ ಆರ್ಥರ್‍ನ ಸಂಭಾಣೆಯಲ್ಲಿ ಲವಲವಿಕೆಯಿದೆ, ವೃತ್ತಾಂತದಲ್ಲಿ ಗಾಂಭೀರ್ಯವಿದೆ, ಭಾಷೆಯಲ್ಲಿ ವೃತ್ತಾಂಶಕ್ಕೆ ಹೊಂದಿಕೊಂಡ ಲಯವಿದೆ.
ಹದಿನಾಲ್ಕನೆಯ ಶತಮಾನದ ಗದ್ಯಸಾಹಿತ್ಯದಲ್ಲಿ ಆಲ್ಫ್ರೆಡ್‍ನ ಬರೆಹದ ನಿರಾಡಂಬರ ವಾಕ್ಯಬಂಧ ಕಾಣುತ್ತದೆ. ಇದೇ ಕಾಲದಲ್ಲಿ ಫ್ರೆಂಚ್ ಸಾಹಿತ್ಯದ ಪ್ರಭಾವದಿಂದ ಇಂಗ್ಲಿಷ್ ಗದ್ಯದಲ್ಲಿ ಬಿಗಿಯಾದ ಬಂಧವಿಲ್ಲದ, ಉಪವಾಕ್ಯಕ್ಕೆ ಉಪವಾಕ್ಯ ಸೇರಿ ಬೆಳೆದ, ಲಂಬವಾದ ವಾಕ್ಯಗಳೂ ಕಾಣುತ್ತವೆ. ಅಲ್ಫ್ರೆಡ್‍ನ ಗದ್ಯದ ಸಂಪ್ರದಾಯ ಉಳಿಯುವುದೇ ಈ ಹೊಸ ಸಂಪ್ರದಾಯ ಉಳಿಯುವುದೇ ಎಂಬುದು ಹದಿನಾಲ್ಕನೆಯ ಶತಮಾನದ ಅಂತ್ಯದಲ್ಲೂ ಪ್ರಶ್ನೆಯಾಗಿಯೇ ಉಳಿಯಿತು.
ಹದಿನೈದನೆಯ ಶತಮಾನ ಪ್ರಯೋಗಗಳ ಕಾಲ.
1422ರಲ್ಲಿ ಲಂಡನ್ನಿನ ಮದ್ಯವ್ಯಾಪಾರಿಗಳು ತಮ್ಮ ದಾಖಲೆಗಳಿಗೆ ಲ್ಯಾಟಿನ್ನಿಗೆ ಬದಲು, ಇಂಗ್ಲಿಷನ್ನೇ ಬಳಸುತ್ತೇವೆಂದು ತೀರ್ಮಾನಿಸಿದರು. ಇವರು ತಕ್ಕಮಟ್ಟಿಗೆ ವಿದ್ಯಾವಂತರು, ಸಮಾಜದಲ್ಲಿ ಹೊಸದಾಗಿ ಗಣ್ಯತೆ ಪಡೆಯುತ್ತಿದ್ದವರು. ಇವರ ತೀರ್ಮಾನ ಇಂಗ್ಲಿಷಿನ ಬಳಕೆ, ಬೆಳೆವಣಿಗೆಗಳಿಗೆ ಹೊಸ ಸ್ಫೂರ್ತಿಯನ್ನು ನೀಡಿತು. ವಿದ್ಯೆ ಇಲ್ಲದವರಿಗೆ ಮತ್ತು ಹೆಂಸರಿಗೆ ಮಾತ್ರ ಇಂಗ್ಲಿಷ್ ಎನ್ನುವುದು ಹೋಗಿ ಆ ಭಾಷೆಗೆ ಗೌರವ ಬಂತು.
ಹದಿನೈದನೆಯ ಶತಮಾನದ ಗದ್ಯಸಾಹಿತ್ಯ ಶೈಲಿ ಮೂರು ಬಗೆಯದು. ಒಂದು ನಿತ್ಯಬಳಕೆಯ ಭಾಷೆಗೆ ಸಮೀಪವಾದುದು; ಎರಡನೆಯದು ಲ್ಯಾಟಿನ್ ಮತ್ತು ಫ್ರೆಂಚ್‍ಗಳಿಂದ ಭಾಷಾಂತರ ಮಾಡುತ್ತಿದ್ದವರದು; ಇದು ಬಹುಮಟ್ಟಿಗೆ ಯಾಂತ್ರಿಕ. ಮೂರನೆಯದು, ಉದ್ದೇಶಪೂರ್ವಕವಾಗಿ ಪ್ರಯೋಗಗಳನ್ನು ನಡೆಸಿದವರದು. ಇಂಗ್ಲಿಷ್ ಹೆಚ್ಚು ಹೆಚ್ಚಾಗಿ ಲೌಕಿಕ ಬರೆಹಗಳಿಗೆ ಉಪಯೋಗವಾಗಲು ಪ್ರಾರಂಭವಾದದ್ದು ಬಹುಮುಖ್ಯ ಅಂಶ. ವರ್ತಕರು ಮತ್ತು ವೃತ್ತಿಸಂಘಗಳ ಲೆಕ್ಕದ ಭಾಷೆ ಇಂಗ್ಲಿಷ್ ಆಯಿತು. ಬೇಟೆ, ಅಡಿಗೆ, ಶಸ್ತ್ರ ಚಿಕಿತ್ಸೆ, ಶಿಷ್ಟಾಚಾರ-ಹೀಗೆ ಹಲವಾರು ವಿಷಯಗಳನ್ನು ಕುರಿತ ಇಂಗ್ಲಿಷ್ ಪುಸ್ತಕಗಳಿಗೆ ಬೇಡಿಕೆ ಬಂತು. ಬಳಕೆ ಹೆಚ್ಚಾದಂತೆ ಇಂಗ್ಲಿಷ್ ಗದ್ಯಕ್ಕೆ ಬಳುಕು, ಲಾಸ್ಯ, ವೈವಿಧ್ಯ ಲಭ್ಯವಾದುವು.
ಯೂರೋಪಿನಲ್ಲಿ ಮೊದಲೆ ಪ್ರಾರಂಭವಾದ ನವೋದಯದ ಅಲೆ ಇಂಗ್ಲೆಂಡಿನ ತೀರವನ್ನು ಹದಿನೈದನೆಯ ಶತಮಾನದ ಕಡೆಯ ಭಾಗದಲ್ಲಿ ಮುಟ್ಟಿತು. ಪ್ರಾಚೀನ ಭಾಷೆಗಳಲ್ಲಿನ ಗ್ರಂಥಗಳ ಅಧ್ಯಯನ ಬೆಳೆಯಿತು. ಇದೇ ಕಾಲದಲ್ಲಿ ಯೂರೋಪಿನಲ್ಲಿ ಪ್ರಬಲ ಅರಸರು ತಲೆ ಎತ್ತಿದರು. ಆಡಳಿತದ ಸೌಕರ್ಯಕ್ಕಾಗಿ ಲ್ಯಾಟಿನ್ ಭಾಷೆಯಲ್ಲಿ ವಿದ್ವಾಂಸರಾದವರನ್ನು ಅವರು ನೇಮಿಸಿಕೊಂಡರು. 7ನೆಯ ಹೆನ್ರಿ ಯೂರೋಪಿನಿಂದ ವಿದ್ವಾಂಸರನ್ನು ಬರಮಾಡಿಕೊಂಡ. ಗಣ್ಯ ಕುಟುಂಬದ ತರುಣನಿಗೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಅಭ್ಯಾಸ ಅಗತ್ಯವಾಯಿತು. ಲ್ಯಾಟಿನ್ ಭಾಷೆಯಿಂದ ಸಾವಿರಾರು ಪದಗಳು ಇಂಗ್ಲಿಷ್ ಭಾಷೆಯನ್ನು ಪ್ರವೇಶಿಸಿದುವು. ಸ್ಕೆಲ್ಡನ್, ಎಡ್ವರ್ಡ್‍ಹಾಲ್ ಮೊದಲಾದವರ ಬರೆಹದಲ್ಲಿ `ಇಂಕ್‍ಹಾರ್ನ್ ಪದಗಳೇ ಹೆಚ್ಚೆಂಬ ಆಕ್ಷೇಪಣೆಯೂ ಬಂತು. ಸರ್ ಥಾಮಸ್ ಎಲ್ಯಟ್‍ನಂಥವರು ತಮ್ಮ ಭಾಷೆಯ ಶಬ್ದಸಂಪತ್ತಿನ ಕೊರತೆಯನ್ನು ತುಂಬಿಕೊಳ್ಳಲು ಮಾತ್ರ ಲ್ಯಾಟಿನ್ ಪದಗಳನ್ನು ಬಳಸಿದರು. ಹಲವು ಅಕ್ಷರಗಳ ಲ್ಯಾಟಿನ್ ಪದಗಳು ಇಂಗ್ಲಿಷ್ ವಾಕ್ಯಗಳಲ್ಲಿ ಸೇರಿದಂತೆ ಇಂಗ್ಲಿಷಿಗೆ ಸಹಜವಾದ ಲಯದೊಂದಿಗೆ ಈ ಪದಗಳ ಲಯ ಬೆರೆಯಬೇಕಾಯಿತು. ಈ ಹೊಸ ಲಯದ ಶಿಖರವನ್ನು ಹದಿನಾರನೆಯ ಶತಮಾನದಲ್ಲಿ ಹುಕರ್ ಮತ್ತು ಇತರ ಉಪದೇಶಕರ ಭಾಷಣಗಳಲ್ಲಿ ಕಾಣಬಹುದು.
ಈ ಯುಗದಲ್ಲಿ ಸಿಸರೋನ ಪ್ರಭಾವ ಕಾಣುತ್ತದೆ. ಹಲವು ಉಪವಾಕ್ಯಗಳನ್ನು ಸೇರಿಸಿ ಎಚ್ಚರಿಕೆಯಿಂದ ಹೆಣೆದ ಲಂಬವಾದ ವಾಕ್ಯಗಳು, ವಾಕ್ಯದ ಕಡೆಯಲ್ಲಿ ಕ್ರಿಯಾಪದದ ಬಳಕೆ, ವಾಕ್ಯದ ಕೊನೆಯವರೆಗೆ ಅರ್ಥದ ಬೆಳೆವಣಿಗೆ-ಇವನ್ನು ಇಂಗ್ಲಿಷ್ ಗದ್ಯದಲ್ಲಿ ಗುರುತಿಸಬಹುದು. ಇನ್ನು ಕೆಲವರು ಬರೆಹಗಾರರ ಮೇಲೆ ಕ್ವಿಂಟಲಿಯನ್ ಪ್ರಭಾವ ಬೀರಿದ್ದಾನೆ. ಹಲವರಿಗೆ ಇಂಥ ಪ್ರಭಾವ ಉಂಟಾದದ್ದು ದಿ ಆರ್ಟ್ ಆಫ್ ರೆಟೊರಿಕ್ ಬರೆದ ಥಾಮಸ್ ವಿಲ್ಸನ್ನನ (1525-81) ಮೂಲಕ. ಪದಗಳ ನಾದ, ಅಲಂಕಾರಗಳ ಬಳಕೆ ಇವುಗಳಲ್ಲೆ ಸಂಭ್ರಮಪಡುವ ಮನೋಧರ್ಮ ಲಿಲಿಯ ಯೂಫುಯಿಸ್‍ನಲ್ಲಿ(1578) ಕಾಣುತ್ತದೆ. ನಾವೀನ್ಯ ಮಾಸಿದಂತೆ ಈ ಶೈಲಿ ಹಾಸ್ಯಕ್ಕೆ ವಸ್ತುವಾಯಿತು. ಲ್ಯಾಟಿನ್ನಿನ ಮಾದರಿಯನ್ನು ಅನುಸರಿಸಿದರೂ ಸೊಗಸಾದ, ಇಂಗ್ಲಿಷಿನ ಸಹಜ ಲಯಕ್ಕೆ ಹೊಂದಿಕೊಂಡ ಗದ್ಯವನ್ನು ಕ್ರ್ಯಾನ್‍ಮರ್, ಹುಕರ್ ಮೊದಲಾದವರು ಬಳಸಿದರು. 16ನೆಯ ಶತಮಾನದಲ್ಲಿಯೇ ಇಂಗ್ಲಿಷ್ ಭಾಷೆಯ ಶ್ರೀಮಂತಿಕೆಯನ್ನೂ ಸೊಗಸನ್ನೂ ಎತ್ತಿ ಹಿಡಿದು ಓದುಗರಿಗೆ ಪರಿಚಿತವಾದ ಶಬ್ದಗಳನ್ನೂ ವಾಕ್ಯಬಂಧನ್ನೂ ರೋಜರ್ ಆಸ್ಕಮ್, ಹ್ಯೂಲ್ಯಾಟಿಮರ್, ಸರ್ ಥಾಮಸ್ ಮೋರ್ ಮೊದಲಾದವರು ಬಳಸಿದರು. ಈ ಕಾಲದಲ್ಲಿ ಬೈಬಲ್ ಇಂಗ್ಲಿಷ್ ಭಾಷೆಗೆ ಅನುವಾದವಾಯಿತು. ಇವುಗಳಲ್ಲಿ ಟಿಂಡಲ್ ಎಂಬುವನದು ಪ್ರಸಿದ್ಧ. (1611ರಲ್ಲಿ ಬೈಬಲಿನ ಅಧಿಕೃತ ಆವೃತ್ತಿ ಪ್ರಕಟವಾಯಿತು.) ಮುದ್ರಣದ ಸೌಕರ್ಯ ಹೆಚ್ಚಿ ಮನೆಮನೆಯಲ್ಲಿ ಬೈಬಲಿನ ಪ್ರತಿ ಕಂಡುಬಂದಂತೆ, ಅದರಲ್ಲಿನ ಗದ್ಯದ ಪ್ರತಿಮೆಗಳು ಮತ್ತು ಚಿತ್ರಗಳು ಇಂಗ್ಲಿಷ್ ಗದ್ಯದಲ್ಲಿ ಹಾಸುಹೊಕ್ಕಾದವು; ಅದರ ಭಾಷೆ ಮತ್ತು ಲಯಗಳ ಪ್ರಭಾವ ಹೆಚ್ಚಾಯಿತು.
ಹದಿನೇಳನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಇಂಗ್ಲಿಷ್ ಭಾಷೆ ಗದ್ಯ ಸಾಹಿತ್ಯಯದ ಮಾಧ್ಯಮ ಎನ್ನಿಸಿಕೊಂಡಿತು. ಬೇಕನ್ನನ ಪ್ರಬಂಧಗಳು ಇಂಗ್ಲಿಷಿಗೆ ಹೊಸದೊಂದು ಸಾಹಿತ್ಯಪ್ರಕಾರವನ್ನು ತಂದುಕೊಟ್ಟವು 1660ರವರೆಗಿನ ಅವಧಿಯಲ್ಲಿ ಮೂರು ಪಂಥಗಳನ್ನು ಕಾಣುತ್ತೇವೆ. ಮೊದಲನೆಯದು, ಸಿಸರೋನ ಪ್ರಭಾವಕ್ಕೆ ಒಳಗಾದವರದು. ಸರ್ ವಾಲ್ಟರ್ ರ್ಯಾಲಿ, ಮಿಲ್ಟನ್ ಈ ಪಂಥದವರು. (ಮುಂದಿನ ಶತಮಾನದ ಗಿಬ್ಬನ್, ಬರ್ಕ್ ಮೊದಲಾದವರು ಉದ್ದವಾದ ವಾಕ್ಯಗಳನ್ನು ಉಳಿಸಿಕೊಂಡರು. ಆದರೆ ಅವರ ವಾಕ್ಯಬಂಧ ಬೇರೆ ರೀತಿಯದು.) ಫ್ರಾನ್ಸಿಸ್ ಬೇಕನ್, ಬೆನ್ ಜಾನ್‍ಸನ್, ಜೊಸೆಫ್ ಹಾಲ್ ಮೊದಲಾದವರು ಲ್ಯಾಟಿನ್ ಗದ್ಯದ ಪ್ರಭಾವಕ್ಕೆ ಒಳಗಾದರೂ ಅವರಿಗೆ ಮಾದರಿಗಳು ಟ್ಯಾಸಿಟಸ್ ಮತ್ತು ಸೆನಿಕ. ಸ್ವತಂತ್ರವಾದ ಸಣ್ಣ ಸಣ್ಣ ವಾಕ್ಯಗಳು, ಇಲ್ಲವೆ ಇಂಥ ವಾಕ್ಯಗಳನ್ನು ಸಡಿಲವಾಗಿ ಜೋಡಿಸಿದ ಮತ್ತೊಂದು ವಾಕ್ಯ - ಇವನ್ನು ಇವರ ಬರೆಹಗಳಲ್ಲಿ ಕಾಣುತ್ತೇವೆ. (1612ರಿಂದಾಚೆ ಕೆಲವು ಬರೆಹಗಳಲ್ಲಿ ಬೇಕನ್ ವೈವಿಧ್ಯಕ್ಕಾಗಿ ಬೇರೊಂದು ಶೈಲಿಯನ್ನು ಬಳಸಿದ; ಇದರಲ್ಲಿ ವಾಕ್ಯರಚನೆಯ ಬಂಧಕ್ಕಿಂತ ತಾರ್ಕಿಕ ಬಂಧ ಮುಖ್ಯ. ಉಪಮಾನ ಮತ್ತು ಪ್ರತಿಮೆಗಳ ಬಳಕೆಯುಂಟು. ಇದನ್ನು ಬರೋಕ್ ಶೈಲಿ ಎನ್ನುತ್ತಾರೆ.) ಮೂರನೆಯದು ನಿರಾಡಂಬರವಾದ, ಆಡು ಮಾತಿನ ಆಧಾರ ಪಡೆದ ಗದ್ಯ. ಜಾನ್ ಬನ್ಯನ್, ಐಸಾಕ್ ವಾಲ್ಟನ್ ಮೊದಲಾದವರ ಗದ್ಯ ಈ ರೀತಿಯದು.
ದೇಶಭ್ರಷ್ಠನಾಗಿ ಫ್ರಾನ್ಸ್‍ನಲ್ಲಿದ್ದ ರಾಜಕುಮಾರ ಚಾಲ್ರ್ಸ್ 1660ರಲ್ಲಿ ಹಿಂದಿರುಗಿದ ಅನಂತರದ ಒಂದು ಶತಮಾನದಲ್ಲಿ ಗದ್ಯ ಅಸಾಧಾರಣವಾದ ಬೆಳೆವಣಿಗೆಯನ್ನೂ ವೈವಿಧ್ಯವನ್ನೂ ಸಾಧಿಸಿತು. ಇದಕ್ಕೆ ಕಾರಣಗಳು ಹಲವಾರು. ಜನಜೀವನದಲ್ಲಿಯೇ ಹೊಸ ಲವಲವಿಕೆ ಮಾಡಿದುದು ಒಂದು. ಅರಸನೂ ಆಸ್ಥಾನಿಕರೂ ನಾಟಕಗಳಲ್ಲಿ ಆಸಕ್ತಿವಹಿಸಿದುದು ಇನ್ನೊಂದು. ಈ ಕಾಲದಲ್ಲಿ ವಿಜ್ಞಾನದಲ್ಲಿನ ಆಸಕ್ತಿ ಹೆಚ್ಚಿತು. ರಾಯಲ್ ಸೊಸೈಟಿಯ ಸ್ಥಾಪನೆಯಾಯಿತು. ಇದು ಪ್ರಸಿದ್ಧ ವಿಜ್ಞಾನಿ ಐಸಾಕ್ ನ್ಯೂಟನ್ (1642-1727) ಮತ್ತು ಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಜಾನ್ ಲಾಕ್‍ರ (1632-1704) ಯುಗ. ವೃತ್ತ ಪತ್ರಿಕೆಗಳೂ ಬೆಳೆದುವಾಗಿ ಓದುಗರ ಸಂಖ್ಯೆ ಹೆಚ್ಚಿತು. ರಾಜಕೀಯ ಪಕ್ಷಗಳ ಸ್ಪರ್ಧೆ ತೀವ್ರವಾಗಿ, ಜನಕ್ಕೆ ರಾಜಕೀಯ ತತ್ತ್ವಗಳ ಚರ್ಚೆಯಲ್ಲಿ ಆಸಕ್ತಿ ಹೆಚ್ಚಿತು. ಹಲವು ವರ್ಷಗಳಿಂದ ಮುಚ್ಚಿಹೋಗಿದ್ದ ನಾಟಕ ಶಾಲೆಗಳು ಮತ್ತೆ ತೆರೆದು, ಗದ್ಯದಲ್ಲಿ ರಚಿತವಾದ ವಿನೋದನಾಟಕಗಳು ಜನಪ್ರಿಯವಾದುವು. ಹಿಂದಿನ ಯುಗದಲ್ಲಿ ವಿದ್ವಾಂಸ ಓದುಗರಿಗಾಗಿ ಬರೆಯುತ್ತಿದ್ದ ಲೇಖಕ ಈ ಯುಗದಲ್ಲಿ ಜನಸಾಮಾನ್ಯರಿಗಾಗಿ ಬರೆಯಲಾರಂಭಿಸಿದ. (ತತ್ತ್ವಜ್ಞಾನವನ್ನು ವಿಶ್ವವಿದ್ಯಾನಿಲಯಗಳಿಂದ ಜನಸಾಮಾನ್ಯರ ಮನೆಗಳಿಗೆ ತಾನು ತಂದುಕೊಟ್ಟೆ ಎಂದು ಹೇಳಿದ-ಜೋಸೆಫ್ ಅಡಿಸನ್.) ಮಧ್ಯವರ್ಗ ಮತ್ತು ವರ್ತಕವರ್ಗಗಳು ಪ್ರಾಮುಖ್ಯಕ್ಕೆ ಬರತೊಡಗಿದುವು. ರಸ್ಟೊರೇಷನ್ ಯುಗದಲ್ಲಿ ಫ್ಯಾಷನಬಲ್ ವರ್ಗದ ಗಂಡಸರು ಹೆಂಗಸರು ಗಂಟೆಗಟ್ಟಲೆ ನಡಸುತ್ತಿದ್ದ ಸಂಭಾಷಣೆಗಳಿಂದ ಗದ್ಯಕ್ಕೆ ಅದೆಷ್ಟು ನಯ ನಾಜೂಕು, ಬಳುಕು, ಹೊಳಪು ಲಭ್ಯವಾದುವು ಎಂಬುದು ವಿಸ್ಮಯದ ಸಂಗತಿ. ಸಮತೋಲ, ವಿರೋಧಕಗಳನ್ನು ಬಳಸಿಕೊಂಡು, ಸ್ಫುಟವಾದ ಬಳುಕುಳ್ಳ, ಲವಲವಿಕೆಯ ಗದ್ಯವನ್ನು ಜಾನ್ ಡ್ರೈಡನ್ ಸೃಷ್ಟಿಸಿದ. ನಿಯತಕಾಲಿಕಗಳಲ್ಲಿ ತಮ್ಮ ಪ್ರಬಂಧಗಳನ್ನು ಪ್ರಕಟಿಸಿದ ಅಡಿಸನ್, ಸ್ಟೀಲ್ ಮೊದಲಾದವರ ಗುರಿ ಸಾಮಾನ್ಯ ಓದುಗರನ್ನು ಆಕರ್ಷಿಸುವುದು ಮತ್ತು ಅವರ ಮನಸ್ಸನ್ನು ಒಲಿಸಿ ಉಪದೇಶಿಸುವುದೇ ಆಗಿತ್ತು. ಇವರದು ಸ್ನೇಹಿತರ ಸಂಭಾಷಣೆಯ ಶೈಲಿ. ಕಾದಂಬರಿ ಪ್ರಕಾರ ರೂಪುಗೊಂಡದ್ದು, ಸೊಗಸಾದ ಗದ್ಯದಲ್ಲಿ ಪತ್ರಲೇಖನ ಬೆಳೆದದ್ದು ಈ ಅವಧಿಯಲ್ಲಿಯೇ.
1760ರಿಂದ ಈಚೆಗೆ ಇಂಗ್ಲೀಷ್ ಗದ್ಯ ಶೈಲಿಯಲ್ಲಿ ಮಾರ್ಪಾಡುಗಳಾಗಿರುವುದನ್ನು ನಾವು ಕಾಣುತ್ತೇವೆ. 1761ರಿಂದ ಈಚೆ ಹೊರಬಂದ ಪ್ರಭಾವೀ ವ್ಯಾಕರಣಗ್ರಂಥಗಳು ಕ್ವಿಂಟಿಲಿಯನ್ನನ ಶೈಲಿಯನ್ನು ಹೊಗಳಿದವು. ಗಂಭೀರ ಬರೆಹದ ಮತ್ತು ವೈಚಾರಿಕ ಬರೆಹದ ಶೈಲಿ ನಿತ್ಯದ ಭಾಷೆಯನ್ನು ಶಬ್ದ, ವ್ಯಾಕಬಂಧ, ಲಯಗಳಿಂದ ಭಿನ್ನವಾಗಿರಬೇಕು ಎಂಬ ಆಭಿಪ್ರಾಯವನ್ನು ಬ್ಲೇರ್‍ನಂಥ ವಿದ್ವಾಂಸರು ವ್ಯಕ್ತಪಡಿದಿದರು. ಸಾಮ್ಯುಯೆಲ್ ಜಾನ್‍ಸನ್, ಗಿಬ್ಬನ್, ಬರ್ಕ್ ಮೊದಲಾದವರು ಈ ಅಭಿಪ್ರಾಯವನ್ನು ಒಪ್ಪಿದರು. ಇವರದು ಪ್ರಾಚೀನ ಸಾಹಿತ್ಯದ ಪ್ರಭಾವಕ್ಕೆ ಒಳಗಾದ, ನಿತ್ಯ ಜೀವನದ ಭಾಷೆಯಿಂದ ದೂರವಾದ ಶೈಲಿ, ಸಾಮಾನ್ಯ ಓದುಗರಿಗೆ ಅಪರಿಚಿತವಾದ ಲ್ಯಾಟಿನ್ ಶಬ್ದಗಳನ್ನೂ ಸಮತೋಲ, ವಿರೋಧ, ಎಪನಫೋರ(ವಾಕ್ಯದ ಹಲವು ಭಾಗಗಳನ್ನು ಒಂದೇ ರೀತಿ ಪ್ರಾರಂಭಿಸುವುದು) ಮೊದಲಾದ ಅಲಂಕಾರಗಳನ್ನೂ ಇವರು ಬಳಸಿದ್ದಾರೆ. ಅಡಿಸನ್, ಸ್ಟೀಲ್, ಲಾಕ್ -- ಇವರು ಓದುಗರನ್ನು ತಮ್ಮ ತರ್ಕದಿಂದ ಒಲಿಸಿಕೊಂಡರೆ ಬರ್ಕ್ ತನ್ನ ಕೆಲವು ಕೃತಿಗಳಲ್ಲಿ (ಉದಾಹರಣೆಗೆ ಅಮೆರಿಕವನ್ನು ಕುರಿತ ಭಾಷಣಗಳಲ್ಲಿ ಮತ್ತು ಗೋಲ್ಡ್‍ಸ್ಮಿತ್ ತನ್ನ ಹಲವು ಪ್ರಬಂಧಗಳಲ್ಲಿ ಓದುಗರನ್ನು ತಮ್ಮ ಭಾವಪೂರ್ಣ ಬರೆಹದಿಂದ ಒಲಿಸಿಕೊಂಡಿದ್ದಾರೆ. ಬರಲಿರುವ ರಮ್ಯಯುಗದ ಸೂಚನೆಯನ್ನು ಇಲ್ಲಿ ಕಾಣಬಹುದು.
ಹದಿನೆಂಟನೆಯ ಶತಮಾನದ ಕಡೆಯ ಭಾಗದ ಹೊತ್ತಿಗೆ ಮೂರು ಬಗೆಯ ಶೈಲಿಗಳು ರೂಪುಗೊಂಡಿದ್ದುವು. ಇವು ಮೂರೂ ಮುಂದಿನ ಗದ್ಯಸಾಹಿತ್ಯದ ಮೇಲೆ ಪ್ರಭಾವ ಬೀರಿದವು. ಮೊದಲನೆಯದು ಹೆಚ್ಚು ಉಪಮಾನ, ಅಲಂಕಾರಗಳನ್ನು ಬಳಸದೆ ಇರುವ, ನಿತ್ಯಜೀವನದ ಭಾಷೆಗೆ ಸಮೀಪವಾದ ಶೈಲಿ. ಇದನ್ನು ವಿಮರ್ಶಕರು ಕೇಂದ್ರ ಪರಂಪರೆ ಎಂದು ಗುರುತಿಸುತ್ತಾರೆ. ಮುಂದಿನ ಶತಮಾನದಲ್ಲಿ ಜೇನ್, ಆಸ್ಟಿನ್, ಹ್ಯಾಜóóóಲಿಟ್, ನ್ಯೂಮನ್, ಥ್ಯಾಕರೆ ಮೊದಲಾದವರು ಈ ಶೈಲಿಯಲ್ಲಿ ಅನುಸರಿಸಿದರು. ಎರಡನೆಯ ಶೈಲಿಗೆ ಕ್ವಿಂಟಲಿಯನ್ನನ ಶೈಲಿಯೇ ಮಾದರಿ. ಜ್ಞಾನ ಸಾಹಿತ್ಯದ ಬರೆಹಗಳು ಬಹುಮಟ್ಟಿಗೆ ಈ ಶೈಲಿಯನ್ನು ಬಳಸಿದುವು; ಸರ್ ವಾಲ್ಟರ್ ಸ್ಕಾಟನ್ ಶೈಲಿಯೂ ಈ ಬಗೆಯದೇ ಆಗಿದ್ದು ಓದುಗರ ಭಾವಗಳನ್ನು ಒಲಿಸುವ ರಮ್ಯ ಪ್ರಕಾರಕ್ಕೆ ಸೇರಿದ್ದಾಗಿದೆ. ಲ್ಯಾಮ್, ಡೆಕ್ವಿನ್ಸಿ, ಪೇಟರ್, ರಸ್ಕಿನ್, ಹಾರ್ಡಿ, ಡಿ.ಎಚ್. ಲರೆನ್ಸ್, ಜೇಮ್ಸ್ ಜಾಯ್ಸ್ ಈ ಪಂಥಕ್ಕೆ ಸೇರಿದವರು. ಕಾದಂಬರಿ ಜನಪ್ರಿಯವಾದಂತೆ, ಆ ಪ್ರಕಾರದಲ್ಲಿ ಪ್ರಯೋಗಗಳು ಹೆಚ್ಚಿದಂತೆ, ರಮ್ಯಗದ್ಯದ ವೈವಿಧ್ಯವೂ ಹೆಚ್ಚಿತು.
1870ರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಇಂಗ್ಲೆಂಡಿನಲ್ಲಿ ಕಡ್ಡಾಯವಾಗಿ ಬಹುವೇಗವಾಗಿ ಹರಡಿತು. ತಂತ್ರಜ್ಞಾನ ಬೆಳೆದಂತೆ ಅಧಿಕ ಸಂಖ್ಯೆಯಲ್ಲಿ ಪುಸ್ತಕಗಳನ್ನೂ ಪ್ರತಿಕೆಗಳನ್ನೂ ಮುದ್ರಿಸಿ ಸುಲಭ ಬೆಲೆಗೆ ಮಾರುವುದು ಸಾಧ್ಯವಾಯಿತು. ಇದರಿಂದ ಓದುಗರ ಸಂಖ್ಯೆ ಏರತೊಡಗಿತು. ಎಡಿನ್‍ಬರ ರೆವ್ಯೂ, ಕ್ವಾರ್ಟರ್ಲಿ ಮುಂತಾದ ಹತ್ತೊಂಬತ್ತನೆಯ ಶತಮಾನದ ಪ್ರಭಾವೀ ಪತ್ರಿಕೆಗಳು ಜಾನ್‍ಸನ್ನನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋದವು. ಗಂಭೀರವಾದ ಅಥವಾ ಶಾಸ್ತ್ರೀಯ ಬರೆಹಕ್ಕೆ ಇದೇ ಉಚಿತವಾದ ಶೈಲಿ ಎಂಬ ಅಭಿಪ್ರಾಯ ಬೆಳೆಯಿತು. ಜೆ,ಎಸ್. ಮಿಲ್, ಚಾಲ್ರ್ಸ್ ಡಾರ್ವಿನ್ ಮೊದಲಾದ ಬೌದ್ಧಿಕ ವರ್ಗದ ಮುಖಂಡರು ಬೆಳೆಸಿದ ಶೈಲಿ ಇದು. ರೊಮ್ಯಾಂಟಿಕ್ ಯುಗದಲ್ಲಿ ವ್ಯಕ್ತಿಗೆ ಹೆಚ್ಚು ಪ್ರಾಧಾನ್ಯ ದೊರೆಯಿತು. ಆ ಯುಗ ಕಳೆದ ಅನಂತರವೂ ಕಾರ್ಲೈಲ್, ರಸ್ಕಿನ್ ಮೊದಲಾದವರ ಬರೆಹಗಳಲ್ಲಿ ರಮ್ಯಗದ್ಯ ಕಾಣುತ್ತದೆ. ವ್ಯಾಥ್ಯೂ ಆರ್ನಲ್ಡ್, ಬರ್ನಾರ್ಡ್ ಷಾ, ಬರ್‍ಟ್ರಂಡ್ ರಸೆಲ್ ಮೊದಲಾದವರು ಕೇಂದ್ರಪರಂಪರೆಗೆ ಸೇರಿದವರು.
ಗದ್ಯ ಸಾಹಿತ್ಯದ ಚರಿತ್ರೆಯಲ್ಲಿ ಕಾದಂಬರಿಯ ಪಾತ್ರವನ್ನು ವಿಮರ್ಶಿಸಲು ಒಂದು ಇಡೀ ಪುಸ್ತಕವೇ ಬೇಕಾದೀತು. ಭಾಷೆಯನ್ನು ಒಡೆದು ಅದರ ಸ್ವರೂಪವನ್ನೇ ವಿಶ್ಲೇಷಿಸುವ ಅಸಾಧಾರಣ ಪ್ರಯೋಗಗಳು ಕಾದಂಬರಿ ಮತ್ತು ಸಣ್ಣ ಕತೆಗಳಲ್ಲಿ ನಡೆದಿದೆ. ಇಲ್ಲಿ ಗಮನಿಸಬಹುದಾದ ಒಂದು ಅಂಶ ಎಂದರೆ, ಕಾದಂಬರಿಯಲ್ಲಿ ವರ್ಣನೆ, ವೃತ್ತಾಂತ, ಸಂಭಾಷಣೆ, ವ್ಯಾಖ್ಯಾನ -- ಎಲ್ಲ ಬೆರೆಯುವುದರಿಂದ ನಿತ್ಯಬಳಕೆಯ ಭಾಷೆಯನ್ನು ಬಳಸುವ ಕಾದಂಬರಿಕಾರನೂ ಅದರಲ್ಲಿ ಹೆಚ್ಚಿನ ವ್ಯಾಪ್ತಿಯನ್ನೂ ವೈವಿಧ್ಯವನ್ನೂ ಸಾಧಿಸಬಲ್ಲ. ಸಂಭಾಷಣೆಗೆ ಉಪಭಾಷೆಗಳನ್ನೂ ವಿದ್ಯಾವಂತ - ಅವಿದ್ಯಾವಂತ, ಶ್ರೀಮಂತ - ಕಾರ್ಮಿಕ ಮೊದಲಾದ ಎಲ್ಲ ವರ್ಗಗಳ ಭಾಷಾರೀತಿಗಳನ್ನೂ ಬಳಸುವುದು ಸಾಮಾನ್ಯವಾಗಿದೆ. ವೃತ್ತಾಂತ ಭಾಗದಲ್ಲಿ ವಿದ್ಯಾವಂತರ ಭಾಷೆಯೇ ಮುಖ್ಯ. ವರ್ಣನೆಯ ಭಾಗದಲ್ಲಿ ಸಾಮಾನ್ಯವಾಗಿ ಬಳಸುವುದು ರಮ್ಯಶೈಲಿ. ಹತ್ತೊಂಬತ್ತನೆಯ ಶತಮಾನದಲ್ಲಿ ಕಾದಂಬರಿಕಾರ ನೇರವಾಗಿ ವ್ಯಾಖ್ಯಾನ ಮಾಡುತ್ತಿದ್ದ. ಇದನ್ನು ತ್ಯಜಿಸಿದ ಅನಂತರ ಕಾದಂಬರಿಕಾರರು ತಮ್ಮ ವ್ಯಾಖ್ಯಾನವನ್ನು ವೃತ್ತಾಂತದಲ್ಲಿ ಅಂತರ್ಗತ ಮಾಡುವ ಪ್ರಯತ್ನದಲ್ಲಿ ಪ್ರತಿಮೆಗಳ ಬಳಕೆ, ವಾಕ್ಯಬಂಧ ಇವುಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಡಾನ್ ವಾಸ್‍ಪೋಸ್. ಜೇಮ್ಸ್ ಜಾಯ್ಸ್, ವಿಲಿಯಂ ಫಾಕ್‍ನರ್, ವ್ಲಾಡಿಮಿರ್ ನಬಕೊವ್ ಮೊದಲಾದವರ ಪ್ರಯೋಗಗಳು- ಇವರಲ್ಲಿ ಕೆಲವರು ಬ್ರಿಟನಿಗೆ ಸೇರಿದವರೇ ಅಲ್ಲ- ಗದ್ಯದ ಮೆಲೆ ಪ್ರಭಾವ ಬೀರುವುದು ಸಾಧ್ಯವಿರಲಿಲ್ಲ. ಇಪ್ಪತ್ತನೆಯ ಶತಮಾನದ ಉಸಿರುಗಟ್ಟಿಸುವ ತಂತ್ರಜ್ಞಾನದ ಯುಗ. ಇದರಿಂದಾಗಿ ಓದುಗರು ಹಲವು ವರ್ಗಗಳಿಗೆ ಸೇರಿದವರು. ಪ್ರಕಾಶಕರು ಹಲವು ಬಗೆಯವರು. ಸಾಹಿತ್ಯದ ವಾಣಿಜ್ಯೀಕರಣವೂ ಗದ್ಯದ ಮೇಲೆ ಪ್ರಭಾವ ಬೀರುವುದು ಅನಿವಾರ್ಯವಾಯಿತು. ಎರಡು ಮಹಾಯುದ್ಧಗಳು ಮಾನಸಿಕ ಜಗತ್ತನ್ನು ತಳೆಕೆಳಗೂ ಮಾಡಿಬಿಟ್ಟ ಅನಂತರ ಹೊಸ ಮನೋಧರ್ಮ, ಹೊಸ ಬೇಡಿಕೆಗಳಿಗೆ ಹೊಂದಿಕೊಳ್ಳುವ ಗದ್ಯದ ಬೆಳೆವಣಿಗೆಯೂ ಅನಿವಾರ್ಯವಾಯಿತು. ಜೀವನಚರಿತ್ರೆ, ಆತ್ಮವೃತ್ತಗಳ ಸಂಖ್ಯೆ ಬೆಳೆದುದು ಅರ್ಥವತ್ತಾದ ಸಂಗತಿ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿಯೇ ವಿಚಾರ ಸಾಹಿತ್ಯದಲ್ಲಿ ರೂಢಿಯಾಗಿದ್ದ ದೀರ್ಘವಾಕ್ಯಗಳು, ಗಂಭೀರ ಲಯ, ಭಾವಗೀತೆಯಲ್ಲಿನಂಥ ಸ್ಫೋಟಕ ಅಭಿವ್ಯಕ್ತಿ- ಇವು ಕಡಿಮೆಯಾಗಿ ಸ್ಪುಟವೂ ನಿಷ್ಕøಷ್ಟವೂ ಆದ ಬರೆಹಕ್ಕೆ ಪ್ರಾಧಾನ್ಯ ಬಂತು. ಇದನ್ನು ಮೂರನ ಪ್ರಿನ್ಸಿಪಿಯ ಎಥಿಕ (1905)ದಲ್ಲಿಯೇ ಕಾಣಬಹುದು. ಪ್ರಾಮಾಣಿಕತೆ ಸ್ಫುಟತ್ವ, ನಿಷ್ಕøಷ್ಟತೆ, ಇವು ಇಂದಿನ ಬರೆಹಗಾರನ ಗುರಿಗಳು. ಪ್ರಜಾಪ್ರಭುತ್ವ, ವಿಜ್ಞಾನ ಎರಡರ ಬೆಳೆವಣಿಗೆ ಪ್ರಭಾವವನ್ನೂ ಇಂದಿನ ಶೈಲಿಯಲ್ಲಿ ಕಾಣಬಹುದು. ವಿನ್‍ಸ್ಟನ್ ಚರ್ಚಿಲ್‍ನಂಥ (1874-1965) ಕೆಲವೇ ಬರಹೆಗಾರರಲ್ಲಿ ಉದ್ದೇಶಿತ ವಾಗ್ಮಿತೆ, ದೀರ್ಘವಾಕ್ಯಗಳು, ಜಟಿಲ ವಾಕ್ಯಬಂಧ, ನಾದ ಮತ್ತು ಜಟಿಲ ಲಯಗಳಿಗೆ ಗಮನ- ಇವನ್ನು ಕಾಣುತ್ತೇವೆ. ಚೆಸ್ಟರ್‍ಟನ್, ಹಿಂದಿನ ಶತಮಾನದ ಲ್ಯಾಮ್‍ನಂತೆ, ಬಹು ವೈಯಕ್ತಿಕವಾದ, ವಿರುದ್ದೋಕ್ತಿಯ ವಿಶೇಷ ಬಳಕೆಯ ಶೈಲಿಯನ್ನು ರೂಪಿಸಿಕೊಂಡ. ಆದರೆ ಬರ್ನಾರ್ಡ ಷಾನ ಮುನ್ನುಡಿಗಳು, ಟಾಯ್ನ್‍ಬಿ, ಬಟ್ರ್ರಂಡ್ ರಸಲ್ ಮೊದಲಾದವರ ಬರೆಹಗಳಲ್ಲಿ ಇಪ್ಪತ್ತನೆಯ ಶತಮಾನದ ಗದ್ಯ ಕೇಂದ್ರ ಪರಂಪರೆಗೆ ಹಿಂದಿರುಗಿದೆ. (ಎಲ್.ಎಸ್.ಎಸ್.)
ಸಂಸ್ಕøತ ಗದ್ಯ: ಗದ್ಯ ಎಂಬುದು ಗದ್-ವ್ಯಕ್ತಾಯಾಂ ವಾಚಿ (ಹೇಳುವುದು) ಎಂಬ ಧಾತುವಿಗೆ ಯ (ತ್) ಪ್ರತ್ಯಯ ಸೇರಿಸಿ ಬಂದಿದೆ; ಗದ್ಯವೆಂದರೆ ಹೇಳಲ್ಪಡತಕ್ಕದ್ದು ಎಂದರ್ಥ. ಛಂದೋಬದ್ದವಾಗಿರುವ ವೃತ್ತರೂಪದ ಪದ್ಯದಿಂದ ಬೇರೆಯಾಗಿರುವುದೆಂದೂ (ವೃತ್ತಗಂಧೋಜ್ಝಿತಂ ಗದ್ಯಂ) ಪಾದರಹಿತವಾದ ಪದವಿನ್ಯಾಸವೆಂದೂ (ಅಪಾದಃಪದ ಸಂತಾನೋ ಗದ್ಯಂ) ಹೇಳಲಾಗಿರುವ ಒಂದು ಸಂಸ್ಕøತಕಾವ್ಯ ಪ್ರಕಾರ; ಅದೇ ಸಂಸ್ಕøತ ಗದ್ಯ. ಪದ್ಯ, ಚಂಪೂ, ನಾಟಕ ಇವು ಉಳಿದ ಪ್ರಕಾರಗಳು. ನಾಟಕ ದೃಶ್ಯಗಳಲ್ಲೂ ಗದ್ಯ ಪದ್ಯ ಚಂಪೂಗಳು ಶ್ರವ್ಯದಲ್ಲೂ ಸೇರಿವೆ.
ಪುರಾತನವಾಗಿರುವ ವೈದಿಕವಾಙ್ಮಯಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಶ್ರುತಿ ಎನಿಸಿಕೊಂಡಿರುವ ಗ್ರಂಥಗಳಲ್ಲಿ ಮೊದಲನೆಯದಾದ ಋಗ್ವೇದ ಸಂಪೂರ್ಣವಾಗಿ ಛಂದೋಬದ್ದ ಗ್ರಂಥ; ಸಂಸ್ಕøತಸಾಹಿತ್ಯದಲ್ಲೇ ಅದು ಪ್ರಾಚೀನತಮ. ಅನಂತರ ಬಂದ ಅಥರ್ವವೇದ, ಕೃಷ್ಣಯಜುರ್ವೇದ, ಬ್ರಾಹ್ಮಣಗಳು, ಉಪನಿಷತ್ತುಗಳು- ಇವುಗಳಲ್ಲಿ ಸರಳವೂ ಹೃದ್ಯವೂ ಆದ ಪ್ರಾಚೀನ ಗದ್ಯವನ್ನು ಕಾಣಬಹುದು. ತರುವಾಯ, ಸ್ಮøತಿ ಗ್ರಂಥಗಳಲ್ಲಿ ಸೇರಿಸಲ್ಪಟ್ಟಿರುವ ಧರ್ಮಸೂತ್ರಾಧಿಗಳು ಬಹುಮಟ್ಟಿಗೆ ಸೂತ್ರರೂಪದ ಗದ್ಯದಲ್ಲಿವೆ. ಅನಂತರ ಮಹಾಭಾರತದಲ್ಲೂ ವಿಷ್ಣುಪುರಾಣ ಮುಂತಾದ ಪುರಾಣಗಳಲ್ಲೂ ಅಲ್ಲಲ್ಲಿ ಗದ್ಯಭಾಗಗಳನ್ನು ಕಾಣಬಹುದು. ಮೇಲ್ಕಂಡ ಗ್ರಂಥಗಳ ಗದ್ಯ ಪ್ರಾಯಶಃ ಕಾವ್ಯನಿಯಮಕ್ಕನುಸಾರವಾಗಿ ರಚಿತವಾಗಿಲ್ಲದಿದ್ದರೂ ಸರಳವೂ ಶಕ್ತಿಯುತವೂ ಆಗಿದೆ.
ಋಗ್ವೇದದ ಛಂದಸ್ಸಿನ ಸಂಪ್ರದಾಯದಿಂದಲೋ ಲೇಖನ ಸೌಕರ್ಯವಿಲ್ಲದೆ ಎಲ್ಲ ಸಾಹಿತ್ಯವನ್ನೂ ಪದ್ಯರೂಪದಲ್ಲಿಟ್ಟು ಸ್ಮರಣೆಗೆ ಸೌಲಭ್ಯವುಂಟುಮಾಡಬೇಕಾಗಿದ್ದ ಕಾರಣದಿಂದಲೋ ಬೇರೆ ಚಾರಿತ್ರಿಕ ಕಾರಣದಿಂದಲೋ ಸಂಸ್ಕøತ ಗದ್ಯ ರಚನೆ ವಿರಳವಾಗಿ, ಕಷ್ಟವೆಂಬ ಅಭಿಪ್ರಾಯವೂ ಮೂಡಿ ಗದ್ಯಂ ಕವೀನಾಂ ನಿಕಷಂ ವದಂತಿ (ಗದ್ಯವು ಕವಿ ಪರೀಕ್ಷೆಯ ಒರೆಗಲ್ಲು) ಇತ್ಯಾದಿ ಮಾತುಗಳು ರೂಢಿಗೆ ಬಂದಿವೆ. ಅದಕ್ಕೆ ತಕ್ಕಂತೆ ಮುಂದೆ ಸಂಸ್ಕøತಸಾಹಿತ್ಯದಲ್ಲಿ ಗದ್ಯ ವಿರಳವಾಗಿರುವುದಲ್ಲದೆ, ಅದರ ರಚನೆ ಸುಲಭವಲ್ಲವೆಂಬ ಅಂಶವೂ ಕ್ರಮೇಣ ಬಂದ ಗ್ರಂಥಗಳ ಭಾಷೆ ಶೈಲಿಯಿಂದ ಗೋಚರವಾಗುತ್ತದೆ.
ಸ್ವರೂಪದಲ್ಲಿ ನಿಯಮಿತವಾದ ಸ್ಥಿತಿಯುಳ್ಳ ಗದ್ಯ ಮೊಟ್ಟಮೊದಲಾಗಿ ಪತಂಜಲಿಯ ಮಹಾಭಾಷ್ಯದಲ್ಲಿ (ಕ್ರಿ.ಪೂ.ಸುಮಾರು 2ನೆಯ ಶತಮಾನ) ಕಂಡುಬರುತ್ತದೆ. ಈ ಗದ್ಯ ಲಲಿತವೂ ಮನೋಹರವೂ ಆಗಿದೆ. ತರುವಾಯ ಬಂದ ಗದ್ಯ ಹಲವಾರು ಉದ್ಗ್ರಂಥಗಳ ಮೇಲಣ ಭಾಷ್ಯಗಳದ್ದು. ಅದರ ರಚನೆಯಲ್ಲಿ ಮನೋಜ್ಞತೆಯ ದೃಷ್ಟಿಯಿಂದ ಗಮನಾರ್ಹ ಪ್ರಗತಿಯನ್ನು ಕಾಣಬಹುದು.
ಕ್ರಿ.ಶ ಸುಮಾರು 2ನೆಯ ಶತಮಾನದಿಂದ ಕಾವ್ಯಸಂದರ್ಭಗಳಲ್ಲಿ ಗದ್ಯದ ಬಳಕೆ ಗೋಚರವಾಗುತ್ತದೆ; ಅದರ ಸಾಧನೆಗಳೆಂದರೆ- ಆ ಕಾಲದ ಕೆಲವು ಶಾಸನಗಳು; ಕ್ರಮೇಣ ಬಂದ ನೀತಿಕಥಾಯುಕ್ತ ಪಂಚತಂತ್ರಾದಿ ಗ್ರಂಥಗಳು; ದಂಡಿಯ ದಶಕುಮಾರಚರಿತ, ಸುಬಂಧುವಿನ ವಾಸವದತ್ತಾ, ಬಾಣಭಟ್ಟನ ಕಾದಂಬರಿ ಮತ್ತು ಹರ್ಷಚರಿತ. ಇವುಗಳ ಗದ್ಯದಲ್ಲಿ ಪ್ರಮುಖವಾಗಿ ಎರಡು ಮಾರ್ಗಗಳನ್ನು ಕಾಣಬಹುದು; ಒಂದು, ಹರ್ಷಚರಿತಾದಿ ಅಖ್ಯಾಯಿಕೆಗಳ ಕ್ಲಿಷ್ಟ ಗದ್ಯ; ಮತ್ತೊಂದು, ನೀತಿಕಥೆ ಮುಂತಾದವುಗಳಿಂದ ಕೂಡಿದ ಪಂಚತಂತ್ರಾದಿಗಳ ಸರಳಗದ್ಯ.
ಹೀಗೆ, ಸಂಸ್ಕøತಗದ್ಯ ವೈದಿಕ ಕಾಲದಷ್ಟು ಪ್ರಾಚೀನ ಅದರ ಬೆಳೆವಣಿಗೆಯಲ್ಲಿ ಪತಂಜಲಿಯ ಮಹಾಭಾಷ್ಯದ ಮನೋಹರ ಗದ್ಯ ಮುಖ್ಯವಾದ ಒಂದು ಹಂತ. ಅನಂತರ ಇದು ಕ್ರಮಬದ್ಧ ಕಾವ್ಯಸ್ವರೂಪಗಳೆನೆಸಿಕೊಂಡ ಅಖ್ಯಾಯಿಕೆ ಮುಂತಾದ ಕ್ಲಿಷ್ಟಪ್ರಕಾರಗಳಲ್ಲೂ ನೀತಿ ಮುಂತಾದ ಸರಳ ಪ್ರಕಾರಗಳಲ್ಲೂ ಮುಂದುವರಿಯುತ್ತ ವಿರಳವಾಗಿದ್ದರೂ ಸಂಸ್ಕøತ ಸಾಹಿತ್ಯದ ಅತ್ಯುಪಯುಕ್ತ ಹಾಗೂ ಪ್ರಭಾವಶಾಲಿ ಸ್ವರೂಪಗಳಲ್ಲಿ ಒಂದಾಗಿ ನೆಲೆಗೊಂಡಿದೆ. (ಬಿ.ಕೆ.ಎಸ್.)
ಕನ್ನಡದಲ್ಲಿ ಗದ್ಯ ಸಾಹಿತ್ಯ: ಕನ್ನಡ ಗದ್ಯಸಾಹಿತ್ಯದ ಚರಿತ್ರೆ ಹಲ್ಮಿಡಿ ಶಾಸನದಿಂದ (ಸು.450) ಪ್ರಾರಂಭವಾಗುತ್ತದೆ. ಅಲ್ಲಿಂದ ಸು.18ನೆಯ ಶತಮಾನದವರೆಗೆ ಅಸಂಖ್ಯ ಗದ್ಯಶಾಸನಗಳು ದೊರೆಯುತ್ತವೆ. ಕ್ರಿ.ಶ 5ನೆಯ ಶತಮಾನಕ್ಕೂ ಹಿಂದೆ ಗದ್ಯ ಇತ್ತೆನ್ನಲು ಉಪಲಬ್ದ ಆಧಾರಗಳಿಲ್ಲ. ಎಲ್ಲ ಸಾಹಿತ್ಯದಂತೆ ಕನ್ನಡ ಸಾಹಿತ್ಯವೂ ಪದ್ಯಸಾಹಿತ್ಯದಿಂದ ಪ್ರಾರಂಭವಾಗಿರಬಹುದು. 10ನೆಯ ಶತಮಾನವನ್ನು ಚಂಪೂಯುಗದ ಸುವರ್ಣಕಾಲವೆನ್ನಲಾಗಿದೆ. ಪಂಪರನ್ನಾದಿಗಳಲ್ಲಿ ಬರುವ ಗದ್ಯ ಕ್ವಚಿತ್ತಾದರೂ ಗಮನಾರ್ಹವಾದುದಾಗಿದೆ. ಉಪಲಬ್ಧ ಗದ್ಯಗ್ರಂಥಗಳಲ್ಲಿ ಮೊದಲನೆಯದು ಪ್ರಮುಖವೂ ಆದದ್ದು ಶಿವಕೋಟಾಚಾರ್ಯನ ವಡ್ಡಾರಾಧನೆ (ಸು.920). ಅನಂತರ ಹೆಸರಿಸಬೇಕಾದ ಕೃತಿಯೆಂದರೆ ಚಾವುಂಡರಾಯನ ತ್ರಿಷಷ್ಟಿ ಲಕ್ಷಣ ಮಹಾಪುರಾಣ (ಸು.978). 12ನೆಯ ಶತಮಾನದಲ್ಲಿ ವಿಪುಲವಾಗಿ ನಿರ್ಮಾಣವಾದ ವಚನಸಾಹಿತ್ಯದ ಗದ್ಯ ಕನ್ನಡದಲ್ಲೇ ವಿಶೇಷ ಉಲ್ಲೇಖಕ್ಕೆ ಅರ್ಹವಾದುದಾಗಿದೆ. ಆ ಯುಗದ ಪ್ರಾರಂಭದಲ್ಲಿದ್ದ ಹರಿಹರ ತನ್ನ ರಗಳೆಗಳಲ್ಲಿ ಗದ್ಯಕ್ಕೆ ವಿಚಿತ್ರ ನಿಲುವನ್ನು ತಿರುವನ್ನು ಕೊಟ್ಟಿದ್ದಾನೆ. 17ನೆಯ ಶತಮಾನದಲ್ಲಿ ಗದ್ಯ ಹಿಂದಿಲ್ಲದ ಒಂದು ಪ್ರಾಶಸ್ತ್ಯವನ್ನು ಪಡೆಯಿತು. ಒಡೆಯರ ಕಾಲದ ಸಾಹಿತ್ಯ ಈ ದೃಷ್ಟಿಯಿಂದ ಮುಖ್ಯವೆನಿಸಿದೆ. 17, 18ನೆಯ ಶತಮಾನದ ಬಖೈರುಗಳು, 18, 19ನೆಯ ಶತಮಾನಗಳವರಾದ ಕಳಲೆ ನಂಜರಾಜ, ದೇವಚಂದ್ರ, ಮುಮ್ಮಡಿ ಕೃಷ್ಣರಾಜ, ಕೆಂಪುನಾರಾಯಣ, ಅಳಿಯ ಲಿಂಗರಾಜ, ಮುದ್ದಣ್ಣ-ಮೊದಲಾದವರ ಕೃತಿಗಳು ಗಮನಾರ್ಹ ಗದ್ಯಕೃತಿಗಳಾಗಿವೆ. 20ನೆಯ ಶತಮಾನ ನಿಜಕ್ಕೂ ಗದ್ಯಸಾಹಿತ್ಯದ ಸುವರ್ಣಯುಗವೇ. ಕಥೆ, ಕಾದಂಬರಿ, ಪ್ರಬಂಧಗಳು, ಜೀವನ ಚರಿತ್ರೆಗಳು, ಪ್ರವಾಸ, ವಿಮರ್ಶೆ-ಹೀಗೆ ವಿವಿಧ ಪ್ರಕಾರಗಳಲ್ಲಿ ಗಣನೀಯ ಕೆಲಸ ನಡೆಯುತ್ತಿದೆ. ಟಿ.ಎಸ್.ವೆಂಕಣ್ಣಯ್ಯ, ಎ.ಎನ್.ಮೂರ್ತಿರಾವ್, ಎ.ಆರ್.ಕೃಷ್ಣಶಾಸ್ತ್ರೀ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾವi ಕಾರಂತ, ದೇಜಗೌ, ಹಾ.ಮಾ.ನಾಯಕ ಮೊದಲಾದ ಅನೇಕರು ಕನ್ನಡಗದ್ಯಕ್ಕೆ ವಿಪುಲವಾದ ಹೊಸ ತಿರುವುಗಳನ್ನೊದಗಿಸಿ ಒಬ್ಬೊಬ್ಬರೂ ವಿಶಿಷ್ಟವಾದ ಶೈಲಿಯೊಂದನ್ನು ರೂಢಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ (ನೋಡಿ- ಕನ್ನಡದಲ್ಲಿ-ಗದ್ಯ-ಸಾಹಿತ್ಯ). *