ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗರಗಸ ಮೀನು

ವಿಕಿಸೋರ್ಸ್ದಿಂದ
ಗರಗಸ ಮೀನು

ಪ್ರಪಂಚದ ಉಷ್ಣವಲಯ ಸಾಗರಗಳಲ್ಲಿ ಕಾಣಸಿಗುವ ಒಂದು ಬಗೆಯ ಮೃದ್ವಸ್ಥಿ ಮೀನು (ಸಾ ಫಿಶ್). ಶಾರ್ಕ್, ರೇ, ಸ್ಕೇಟ್ ಮೀನುಗಳ ವರ್ಗದಲ್ಲಿ ಸ್ಕ್ವಾಲಿಫಾರ್ಮಿಸ್ ಗಣದ ಪ್ರಿಸ್ಟಿಡೆ ಕುಟುಂಬದ ಮೀನು. ಇದರ ಶಾಸ್ತ್ರೀಯ ಹೆಸರು ಪ್ರಿಸ್ಟಿಸ್. ಅಕ್ಕ ಪಕ್ಕದಲ್ಲಿ ಚೂಪಾದ ಹಲ್ಲುಗಳಿರುವ ಮತ್ತು ಬಲು ಉದ್ದವಾಗಿರುವ ಗರಗಸ ದಂಥ ಮೂತಿಯಿರುವುದರಿಂದ ಇದಕ್ಕೆ ಈ ಹೆಸರು. ಇದರಲ್ಲಿ ಆರು ಪ್ರಬೇಧಗಳಿವೆ. ಇವುಗಳಲ್ಲಿ ಅಮೆರಿಕದ ಆಗ್ನೇಯ ಹಾಗೂ ಗಲ್ಫ್ ತೀರ ಪ್ರದೇಶಗಳಲ್ಲಿ ಕಾಣಬರುವ ಪೆಕ್ಟಿನೇಟಸ್ ಪ್ರಭೇದ, ಮೆಡಿಟರೇನಿಯನ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಕಾಣಬರುವ ಆಂಟಿಕೋರಮ್ ಪ್ರಭೇದ ಮತ್ತು ಭಾರತದ ತೀರ ಪ್ರದೇಶಗಳಲ್ಲಿ ಸಿಕ್ಕುವ ಕಸ್ಪಿಡೇಟಸ್ ಮತ್ತು ಮೈಕ್ರೋಡಾನ್ ಪ್ರಭೇದಗಳು ಪ್ರಮುಖವಾದವು.


ಗರಗಸ ಮೀನುಗಳು ತೀರಕ್ಕೆ ಸಮೀಪದಲ್ಲಿ ಮತ್ತು ಅಳಿವೆಗಳಲ್ಲಿ ಜೀವಿಸುವುವು. ಅನೇಕ ಸಂದರ್ಭದಲ್ಲಿ ನದಿಗಳಲ್ಲಿ ಒಳನಾಡಿಗೂ ಹಲವಾರು ಮೈಲಿಗಳಷ್ಟು ದೂರ ಬರುವುದೂ ಉಂಟು. ಇದು ಸು. 6.1 ಮೀ ಗಳವರೆಗೆ ಬೆಳೆಯುತ್ತದೆ. ದೇಹರಚನೆಯಲ್ಲಿ ಶಾರ್ಕ್ ಮೀನನ್ನು ಹೋಲುತ್ತದಾದರೂ ಇದು ರೇ ಮೀನುಗಳ ಹತ್ತಿರದ ಸಂಬಂಧಿ ಅಂದರೆ ಕಿವಿರು ದ್ವಾರಗಳು ದೇಹದ ತಳ ಭಾಗದಲ್ಲಿರುತ್ತವೆ. (ಶಾರ್ಕ್ ಮೀನುಗಳಲ್ಲಿ ಕಿವಿರು ದ್ವಾರಗಳು ದೇಹದ ಪಾರ್ಶ್ವದಲ್ಲಿರುತ್ತವೆ). ಅಗಲವಾದ ಎದೆಯ ಈಜುರೆಕ್ಕೆಗಳು, ಎರಡು ಬೆನ್ನಿನ ಈಜುರೆಕ್ಕೆಗಳು, ಬಾಲದ ಈಜುರೆಕ್ಕೆ, ಗರಗಸದಂತಹ ಮೂತಿ, ತಲೆಯ ಕೆಳಭಾಗದಲ್ಲಿನ ಅರ್ಧಚಂದ್ರಾಕೃತಿಯ ಬಾಯಿ, ಬಾಲದ ಆಚೀಚೆ ದೋಣಿಯ ಆಕಾರದ ಚರ್ಮದ ಮಡಿಕೆ-ಇವು ಗರಗಸ ಮೀನಿನ ಬಾಹ್ಯ ಲಕ್ಷಣಗಳು. ಮೂತಿ ಚಪ್ಪಟೆಯಾಗಿ ಬಲು ಉದ್ದವಾಗಿರುತ್ತದೆ; ಕೆಲವು ಮೀನುಗಳಲ್ಲಿ ಸು. 1.8ಮೀ ಉದ್ದವಿರುತ್ತದೆ. ಅದರ ಒಂದೊಂದು ಅಲುಗಿನಲ್ಲಿ ಚೂಪಾದ ಸುಮಾರು 22-32 ಹಲ್ಲುಗಳಿರುತ್ತವೆ. ಸಾಗರತಳವನ್ನು ಹೆಕ್ಕಿ ಅದರೊಳಗಿರುವ ಹಲವಾರು ಬಗೆಯ ಪ್ರಾಣಿಗಳನ್ನು ತಿನ್ನಲು ಈ ಗರಗಸವನ್ನು ಬಳಸುತ್ತದೆ. ಅಲ್ಲದೆ ಚಲಿಸುವಾಗ ಸಣ್ಣ ಮೀನುಗಳ ಗುಂಪಿನಲ್ಲಿ ಮಧ್ಯೆ ನುಗ್ಗಿ ಗರಗಸ ವನ್ನು ಅತ್ತಿತ್ತ ಬಲವಾಗಿ ಆಡಿಸಿ ಕೆಲವು ಮೀನುಗಳು ಇದರ ಹೊಡೆತಕ್ಕೆ ಸಿಕ್ಕಿ ಸಾಯುವಂತೆ ಮಾಡಿ ತಿನ್ನುವುದೂ ಉಂಟು. ಗರಗಸ ಮೀನು ಜರಾಯುಜ ಪ್ರಾಣಿ. ಹುಟ್ಟುವ ಮುನ್ನವೇ ಮರಿಗಳಿಗೆ ಗರಗಸವಿರುವುದಾದರೂ ಅದು ಬಲು ಮೃದುವಾಗಿಯೂ ಒಂದು ಬಗೆಯ ಹೊದಿಕೆಯಿಂದ ಆವೃತವಾಗಿರುವುದರಿಂದ ತಾಯಿಯ ಹೊಟ್ಟೆಲ್ಲಿರುವಾಗ ಅಲ್ಲಿನ ಅಂಗಾಂಶಗಳಿಗೆ ಹಾನಿಯಾಗುವ ಸಂಭವವಿರುವುದಿಲ್ಲ.


ಮಲೇಶಿಯಾ, ಇಂಡೋನೇಶಿಯಾ ಮತ್ತು ಚೀನಾಗಳಲ್ಲಿ ಗರಗಸ ಮೀನನ್ನು ತಿನ್ನುತ್ತಾರೆ. ಇದರ ಮಾಂಸ ಶಾರ್ಕ್ ಮೀನಿನ ಮಾಂಸದಷ್ಟೇ ರುಚಿ ಎಂದು ಹೇಳಲಾಗಿದೆ. ಅಲ್ಲದೆ ಈ ಮೀನಿನ ಚರ್ಮದಿಂದ ಕತ್ತಿಯ ಒರೆಯನ್ನು ಮಾಡುವುದಿದೆ. ಇದರ ಯಕೃತ್ತಿನಿಂದ ಎಣ್ಣೆಯನ್ನು ತೆಗೆಯುತ್ತಾರೆ.