ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗರುಡಗಂಬ
ದೇವಾಲಯಗಳ ಮುಂದಿರುವ ಕಲ್ಲಿನ ಧ್ವಜಸ್ತಂಭ ಅಥವಾ ದೀಪಸ್ತಂಭ. ಗರುಡಗಂಬಗಳನ್ನು ನಿಲ್ಲಿಸುವ ಪದ್ಧತಿ ವಿಜಯನಗರ ಕಾಲದಿಂದೀಚೆಗೆ ಬಂದಂತೆ ತೋರುತ್ತದೆ. ಬೇಲೂರಿನ ಕೇಶವ ದೇವಾಲಯದ ಮುಂದೆ ಇರುವ ಖಗ ಧ್ವಜಸ್ತಂಭವನ್ನು ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಜಕ್ಕನೃಪ ನಿಲ್ಲಿಸಿದ. ವಿಷ್ಣು ದೇವಾಲಯಗಳ ಮುಂದಿನ ಈ ಕಂಬಗಳು ಗರುಡಧ್ವಜಗಳನ್ನು ಸೂಚಿಸುತ್ತವೆ. ಶಿವದೇವಾಲಯಗಳ ಮುಂದೆ ನಿಲ್ಲಿಸಿರುವ ಕಂಬಗಳನ್ನು ನಂದಿಕಂಬವೆಂದು ಕರೆಯುತ್ತಾರೆ.
ವಿಜಯನಗರದ ಕಾಲದಿಂದೀಚೆಗೆ ನಿಲ್ಲಿಸಿರುವ ಇಂಥ ಕಂಬಗಳು ಧ್ವಜಸ್ತಂಭ ಅಥವಾ ದೀಪಸ್ತಂಭಗಳಾಗಿರಬಹುದು. ಆದರೆ ಹೊಯ್ಸಳರ ಕಾಲದಲ್ಲಿ ಶಿವ ದೇವಾಲಯಗಳ ಬಳಿ ನಿಲ್ಲಿಸುತ್ತಿದ್ದ ಕೆಲವು ವಿಶಿಷ್ಟವಾದ ಕಂಬಗಳಿಗೆ ಗರುಡಗಂಬಗಳೆಂಬ ಹೆಸರು ಬಂದಿರಬೇಕು. ಆ ಕಾಲದಲ್ಲಿ ರಾಜನಿಗೆ ನಿಷ್ಠರಾಗಿ, ಅವನ ಪ್ರಾಣ ರಕ್ಷಣೆಯೇ ತಮ್ಮ ಕರ್ತವ್ಯವೆಂದು ತಿಳಿದು, ರಾಜನ ಮರಣಾನಂತರ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದ ಲೆಂಕರಿಗೆ ಗರುಡರೆಂಬ ಹೆಸರಿತ್ತು ಗರುಡರು. ಸ್ವಾಮಿನಿಷ್ಠೆಯಲ್ಲಿ ತಾವು ಗರುಡನಿಗಿಂತ ಕಡಿಮೆಯೇನೂ ಇಲ್ಲವೆಂದು ಇವರು ಭಾವಿಸುತ್ತಿದ್ದುದರಿಂದ ಬಹುಶಃ ಇವರಿಗೆ ಈ ಹೆಸರು ಬಂದಿರಬೇಕು. ಸ್ವಾಮಿಗಾಗಿ ಸತ್ತವರ ನೆನಪಿಗಾಗಿ ಕಂಬಗಳನ್ನು ನಿಲ್ಲಿಸಿ ಶಾಸನ ಹಾಕಿಸುತ್ತಿದ್ದದ್ದುಂಟು. ಅಥವಾ ಅವರು ಅಂಥ ಕಂಬಗಳ ಮೇಲಿಂದ ಹಾರಿ ಪ್ರಾಣತ್ಯಾಗ ಮಾಡುತ್ತಿದ್ದರು. ಆನೆಯ ಮೇಲೆ ಕುಳಿತು ಗರುಡನೊಂದಿಗೆ ಸೆಣಸುತ್ತಿರುವ ಲೆಂಕರ ಮೂರ್ತಿಗಳನ್ನು ಹೊತ್ತ ಮೂರು ಕಂಬಗಳು ಅಗ್ರಹಾರ ಬಾಚಹಳ್ಳಿಯ ಹುಣಸೇಶ್ವರ ದೇವಾಲಯದ ಮುಂದೆ ಇವೆ. ಇಮ್ಮಡಿ ಬಲ್ಲಾಳನ ಮರಣಾನಂತರ ಗರುಡನಾದ ಕುವರಲಕ್ಷ್ಮ ಮತ್ತು ಅವನನ್ನುಸರಿಸಿದ ಸಾವಿರ ಲೆಂಕರು ಮತ್ತು ಅವರ ಹೆಂಡಿರ ನೆನಪಿಗಾಗಿ ಹಳೆಯಬೀಡಿನ ಹೊಯ್ಸಳೇಶ್ವರ ದೇವಾಲಯದ ಬಳಿ ಕಂಬವನ್ನು ನಿಲ್ಲಿಸಲಾಗಿದೆ. ಹೊಯ್ಸಳ ದೇವಾಲಯದಲ್ಲಿ ಈಗ ಊರೆಕಂಬ ವಾಗಿರುವ ಪ್ರೌಢ ದೇವರಾಯ ಕಂಬವೂ ರವಳ ಬೋವನಿನೆಂಬ ಗರುಡನೊಬ್ಬನ ನೆನಪಿಗಾಗಿ ನಿಲ್ಲಿಸಿದ್ದ ಕಂಬವೇ. ಬಸರಾಳಿನಲ್ಲಿ ಮಲ್ಲಿಕಾರ್ಜುನ ದೇವಾಲಯದ ಮುಂದಿನ ಕಂಬದ ಮೇಲೆ ಶಾಸನವಿಲ್ಲದಿದ್ದರೂ ಮೇಲಿನಿಂದ ಹಾರಿ ಪ್ರಾಣತ್ಯಾಗ ಮಾಡಲು ಸಿದ್ಧನಾಗಿರುವ ಗರುಡ, ಅವನ್ನನುಸರಿಸುತ್ತಿರುವ ಅವನ ಹೆಂಡತಿ-ಇವರ ಮೂರ್ತಿಗಳಿರುವುದರಿಂದ ಅದು ಗರುಡಗಂಬವೆಂಬುದು ಸ್ಪಷ್ಟ.