ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗರುಡ ಮೂಗಿನ ಆಮೆ

ವಿಕಿಸೋರ್ಸ್ದಿಂದ
ಗರುಡ ಮೂಗಿನ ಆಮೆ

ಎರೆಟ್ಮೊಕೆಲಿಸ್ ಇಂಬ್ರಿಕೇಟ ಎಂಬ ವೈಜ್ಞಾನಿಕ ಹೆಸರಿನ ಕಡಲಾಮೆ. ಮೂತಿ ಗರುಡ ಪಕ್ಷಿಯ ಕೊಕ್ಕಿನ ಹಾಗೆ ಬಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಆಂಧ್ರಪ್ರದೇಶ, ಗುಜರಾತ್, ಕೇರಳ, ಲಕ್ಷದ್ವೀಪ, ಒರಿಸ್ಸ ಮತ್ತು ತಮಿಳುನಾಡುಗಳಲ್ಲಿ ಕಂಡು ಬರುತ್ತದೆ. ಆಫ್ರಿಕ, ಅಮೆರಿಕ, ಏಷಿಯ, ಆಸ್ಟ್ರೇಲಿಯ ಮತ್ತು ಯುರೋಪ್ಗಳ ಬಹುತೇಕ ಉಷ್ಣ ಮತ್ತು ಸಮಶೀತೋಷ್ಣ ಸಾಗರಗಳಲ್ಲಿ ಸರ್ವೇಸಾಮಾನ್ಯವಾಗಿ ಹರಡಿದೆ. ಮಾಂಸಾಹಾರಿ. ಸ್ಪಂಜುಗಳನ್ನೂ ತಿನ್ನುವ ಏಕೈಕ ಆಮೆ ಪ್ರಭೇಧ. ಹವಳ ದ್ವೀಪಗಳ ಬಳಿಯಿರುವ ತೀರ ಪ್ರದೇಶಗಳಲ್ಲಿ ಸಂತಾನಾಭಿವೃದ್ಧಿ ಮಾಡುವುದು ಸಾಮಾನ್ಯ. ದೇಹದ ಮೇಲೆ ಸುಮಾರು 915 ಮಿಮೀ ಉದ್ದದ ಚಿಪ್ಪು ಇದೆ. ಚಿಪ್ಪಿನ ಮೇಲೆಲ್ಲ ಹೆಂಚು ಹೊದಿಸಿದಂತೆ ಕಾಣುವ ಕಂದುಬಣ್ಣದ ದಪ್ಪನೆಯ ಫಲಕಗಳಿವೆ. ಆಮೆಯ ಚಿಪ್ಪುಗಳಲ್ಲೆಲ್ಲ ಗರುಡ ಮೂಗಿನ ಆಮೆಯದು ಅತ್ಯುತ್ತಮ ವಾದುದೆಂದು ಹೇಳಲಾಗಿದೆ. ಇದರಿಂದ ಬಾಚಣಿಗೆ, ಕಡಗ, ಅಲಂಕಾರಿಕ ಸಮಾನುಗಳು ಮುಂತಾದವನ್ನು ಮಾಡಲಾಗುತ್ತದೆ. ಚಿಪ್ಪಿಗೋಸ್ಕರ ಹಿಂದಿನ ಕಾಲದಲ್ಲಿ ಇದನ್ನು ಬಹಳವಾಗಿ ಹಿಡಿಯುವುದಿತ್ತು. ಆದರೆ ಈಗ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗಿದ್ದು ಇದರ ಚಿಪ್ಪಿಗೆ ಬೇಡಿಕೆ ಕಡಿಮೆಯಾಗಿದೆ. ಆದರೂ ಸಂಖ್ಯೆ ಕ್ಷೀಣಿಸಿರುವುದರಿಂದ ಭಾರತದ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಪಟ್ಟಿ 4 ರಲ್ಲಿ ಸೇರಿಸಲ್ಪಟ್ಟಿದೆ.