ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಲ್

ವಿಕಿಸೋರ್ಸ್ದಿಂದ
ಲೇರಸ್ ಪ್ಯಾಸಿಫಿಕಸ್

ಕರ್ಯಾಡ್ರಿಯಿಫಾರ್ಮೀಸ್ ಗಣದ ಲ್ಯಾರಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಸಾಗರವಾಸಿ ಹಕ್ಕಿಗಳಿರುವ ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರು. ಸುಮಾರು 40 ಕ್ಕೂ ಹೆಚ್ಚು ಬಗೆಯ ಗಲ್ ಹಕ್ಕಿಗಳಿವೆ. ಟರ್ನ್ ಹಕ್ಕಿಗಳಿಗೆ ಬಹಳ ಹತ್ತಿರದ ಸಂಬಂಧಿಗಳಿವು. ಪ್ರಪಂಚದ ಮೇರು ಪ್ರದೇಶಗಳು ಮತ್ತು ಸಮಶೀತೋಷ್ಣ ವಲಯಗಳಲ್ಲೆಲ್ಲ ಇವುಗಳ ವ್ಯಾಪ್ತಿಯಿದೆ. ಕೆಲವು ಬಗೆಯವು ಉಷ್ಣಪ್ರದೇಶಗಳಲ್ಲೂ (ಚಳಿಗಾಲದಲ್ಲಿ) ಕಾಣಬರುತ್ತವೆ.


ವಿವಿಧ ಬಗೆಯ ಗಲ್ ಹಕ್ಕಿಗಳಲ್ಲಿ ಕೆಲವು ಭಿನ್ನತೆಗಳಿರುವುವಾದರೂ ಎಲ್ಲಕ್ಕೂ ಸಮಾನವೆನಿಸುವ ಹಲವಾರು ಗುಣಲಕ್ಷಣಗಳನ್ನು ನೋಡಬಹುದು : ಸುಪ್ರಮಾಣ ಬದ್ಧವಾದ ದೇಹ, ಉದ್ದವಾದ ಮತ್ತು ಬಲಯುತವಾದ ರೆಕ್ಕೆಗಳು, ಅತ್ಯಂತ ದೃಢವಾದ ಮತ್ತು ತುದಿಯಲ್ಲಿ ಕೊಕ್ಕೆಯಂತೆ ನಸುಬಾಗಿದ ಕೊಕ್ಕು, ಜಾಲಪಾದ, ಇತ್ಯಾದಿ. ದೇಹದ ಬಣ್ಣ ಪ್ರೌಢಹಕ್ಕಿಗಳಲ್ಲಿ ಸಾಮಾನ್ಯವಾಗಿ ಬಿಳಿ. ಆದರೆ ಕೆಲವು ಬಗೆಗಳಲ್ಲಿ ಬೆನ್ನು, ರೆಕ್ಕೆ ಮತ್ತು ತಲೆಗಳು ಬೂದಿ, ಕಪ್ಪು, ಕಂದು ಮುಂತಾದ ವರ್ಣಗಳನ್ನು ಪಡೆದಿರಬಹುದು. ಮರಿಹಕ್ಕಿಗಳು ಕಂದುಬಣ್ಣಕ್ಕಿರುತ್ತವೆ. ವಯಸ್ಕ ಹಾಗೂ ಮರಿಹಕ್ಕಿಗಳು ಒಂದೆಡೆ ಕೂಡಿದಾಗ ಬೇರೆ ಬೇರೆ ಪ್ರಭೇದಗಳು ಸೇರಿವೆಯೆಂಬ ಭಾವನೆ ಬರುವಷ್ಟು ಬಣ್ಣವ್ಯತ್ಯಾಸವನ್ನು ಇವು ಪ್ರದರ್ಶಿಸುತ್ತವೆ. ಕಂದುಬಣ್ಣಕ್ಕಿರುವ ಮರಿಹಕ್ಕಿ ವರ್ಷಕ್ಕೆರಡು ಸಲ ತನ್ನ ಗರಿಗಳನ್ನು ಬದಲಿಸುತ್ತದೆ. ಪ್ರತಿಸಲ ಗರಿಯುದುರಿದಾಗಲೂ ದೇಹದ ಬಣ್ಣ ಕಂದಿನಿಂದ ತಿಳಿಯಾಗುತ್ತ ಬಂದು ಸುಮಾರು 3 ವರ್ಷಗಳ ಅನಂತರ ವಯಸ್ಕ ಹಕ್ಕಿಯ ಬಣ್ಣವಾದ ಬಿಳಿ ಬಣ್ಣಕ್ಕೆ ತಿರುಗುತ್ತದೆ.


ಗಲ್ ಹಕ್ಕಿಗಳು ಬಲು ಸೊಗಸಾಗಿ ಶ್ರಮವಿಲ್ಲದೆ ಗಾಳಿಯಲ್ಲಿ ತೇಲುವಂತೆ ಹಾರಬಲ್ಲವು. ಸಾಮಾನ್ಯವಾಗಿ ಸಮುದ್ರತೀರ, ರೇವುಪಟ್ಟಣಗಳ ಬಳಿಯೇ ಇವುಗಳ ವಾಸ. ಆದಷ್ಟು ನೆಲದ ಸಮೀಪವೇ ಇರುವುದು ಇವುಗಳಿಗೆ ಇಷ್ಟವಾದರೂ ಆಗಿಂದಾಗ್ಗೆ ಹಡಗು, ದೋಣಿಗಳನ್ನು ಹಿಂಬಾಲಿಸಿ ಸಾಗರಗಳ ಮೇಲೆ ಹಲವಾರು ಕಿಲೋಮೀಟರ್ಗಳಷ್ಟು ದೂರ ಸಾಗುವುದೂ ಉಂಟು. ಮೀನು ಮತ್ತು ಸಾಗರವಾಸಿ ಪ್ರಾಣಿಗಳೇ ಇವುಗಳ ಮುಖ್ಯ ಆಹಾರ. ಆದರೆ ಬೇರೆ ಬಗೆಯ ಆಹಾರವನ್ನೂ ತಿನ್ನದೆ ಇಲ್ಲ. ಚೆನ್ನಾಗಿ ಈಜಬಲ್ಲವಾದರೂ ಟರ್ನ್ ಮುಂತಾದ ಇತರ ಹಕ್ಕಿಗಳಂತೆ ಸಾಗರಗಳಲ್ಲಿ ಈಜುವ ಮೀನು ಮುಂತಾದ ಪ್ರಾಣಿಗಳನ್ನು ಹಿಡಿವ ಚಾಣಾಕ್ಷತೆ ಇವಕ್ಕೆ ಇಲ್ಲ. ಅಕಸ್ಮಾತ್ತಾಗಿ ಸತ್ತು ನೀರಮೇಲೆ ತೇಲುವ ಇಲ್ಲವೆ ಗಾಯಗೊಂಡು ಚೆನ್ನಾಗಿ ಈಜಲಾರದ ಪ್ರಾಣಿಗಳನ್ನು ಮಾತ್ರ ಚುರುಕಾಗಿ ಹಿಡಿಯಬಲ್ಲವು. ಈ ಕಾರಣದಿಂದಲೇ ಗಲ್ಗಳು ಸಾಮಾನ್ಯವಾಗಿ ಮನುಷ್ಯರ ವಾಸ್ತವ್ಯವಿರುವ ಸ್ಥಳಗಳಲ್ಲೆ ಇದ್ದು ಅವರು ಎಸೆಯುವ ಕೊಳೆತ ಮೀನು ಮತ್ತಿತರ ಆಹಾರವನ್ನು ತಿನ್ನುತ್ತ ವಾಸಿಸುತ್ತವೆ. ತೀರಪ್ರದೇಶಗಳ ಬಂದರುಗಳು, ಕೊಳಚೆ ಸ್ಥಳಗಳು, ಚರಂಡಿ, ಹೊಲಸು ಇರುವೆಡೆಯೆಲ್ಲೆಲ್ಲ ಇವು ಇರುತ್ತವೆ. ಈ ಗುಣದಲ್ಲಿ ಕಾಗೆಗಳನ್ನು ಹೋಲುವ ಗಲ್ಗಳು ಮನುಷ್ಯನಿಗೆ ಅತ್ಯಂತ ಉಪಕಾರಿಯೆನಿಸಿವೆ. ಕೆಲವೊಮ್ಮೆ ಒಳನಾಡಿನ ಕೃಷಿಭೂಮಿಯಲ್ಲೂ ಗಲ್ಗಳನ್ನು ಕಾಣಬಹುದು. ಅಲ್ಲಿ ಸಿಗಬಹುದಾದ ಕ್ರಿಮಿಕೀಟಗಳನ್ನು ಇವು ಹಿಡಿದು ತಿನ್ನುತ್ತವೆ. ಗಲ್ಗಳಿಗೆ ಕಪ್ಪೆಚಿಪ್ಪಿನ ಪ್ರಾಣಿಗಳೆಂದರೆ ಬಲು ಇಷ್ಟ. ಚಿಪ್ಪಿನೊಳಗಿನ ಪ್ರಾಣಿಗಳನ್ನು ಹೊರತೆಗೆಯಲು ಸುಲಭವಾಗಿ ಆಗದೆಂದು ಅರಿತಿರುವ ಇವು ಚಿಪ್ಪನ್ನು ಹಿಡಿದುಕೊಂಡು ಮೇಲಕ್ಕೆ ಹಾರಿ ಅಲ್ಲಿಂದ ನೆಲದ ಮೇಲಿನ ಕಲ್ಲು ಮುಂತಾದ ಯಾವುದಾದರೂ ಗಟ್ಟಿಯಾದ ವಸ್ತುವಿನ ಮೇಲೆ ಬೀಳಿಸಿ ಚಿಪ್ಪು ಒಡೆಯುವಂತೆ ಮಾಡುತ್ತವೆ. ತತ್ಕ್ಷಣವೇ ಅಲ್ಲೆ ಸುತ್ತ ಇರುವ ಬೇರೆ ಹಕ್ಕಿಯೊಂದು ಆಹಾರದ ಮೇಲೆ ಎರಗುವ ಮುನ್ನವೇ ಕೆಳಕ್ಕೆ ಧಾವಿಸಿ ಚಿಪ್ಪಿನಿಂದ ಹೊರಬಂದ ಪ್ರಾಣಿಯನ್ನು ಭಕ್ಷಿಸುತ್ತವೆ. ಚಿಪ್ಪನ್ನು ಒಡೆಯಲು ಕೆಲವೊಮ್ಮೆ ಕಾರು, ಮನೆ, ಮಾಡು, ರಸ್ತೆಗಳ ಮೇಲೂ ಹಾಕುವುದುಂಟು. ಕೆಲವು ಬಗೆಯ ಗಲ್ಗಳು ಬೇರೆ ಹಕ್ಕಿಗಳ ಮೊಟ್ಟೆ, ಮರಿಹಕ್ಕಿ, ಕೆಲವೊಮ್ಮೆ ವಯಸ್ಕ ಹಕ್ಕಿಗಳನ್ನು ತಿನ್ನುವುದುಂಟು.


ಬೇರೆ ಬಹುಪಾಲು ಬಗೆಯ ಹಕ್ಕಿಗಳಿಗೆ ಹೋಲಿಸಿದರೆ ಗಲ್ಗಳು ಬಹಳ ವರ್ಷ ಬದುಕಿರುತ್ತವೆ. ಇವುಗಳ ಆಯಸ್ಸು ಸುಮಾರು 25-30 ವರ್ಷಗಳು. ಇವು ಸಂಘಜೀವಿಗಳು. ಪ್ರದೇಶದಿಂದ ಪ್ರದೇಶಕ್ಕೆ ಸಾಗುವಾಗ, ಆಹಾರಕ್ಕಾಗಿ ಬೇಟೆಯಾಡು ವಾಗ, ವಿರಮಿಸುವಾಗ ಹೀಗೆ ಎಲ್ಲ ಚಟುವಟಿಕೆಗಳಲ್ಲೂ ಗುಂಪುಗಳಲ್ಲಿಯೇ ಇರುತ್ತವೆ. ಯಾವಾಗಲೂ ಕರ್ಕಶವಾಗಿ ಕೂಗುತ್ತ ಆಹಾರಕ್ಕಾಗಿ ಪರಸ್ಪರ ಜಗಳವಾಡುತ್ತ ಹಾರಾಡುತ್ತಿರುತ್ತವೆ. ಸಂತಾನೋತ್ಪತ್ತಿಯ ಕಾಲದಲ್ಲಂತೂ ಈ ಸ್ವಭಾವ ಹೆಚ್ಚು ವ್ಯಕ್ತವಾಗುತ್ತದೆ. ಒಂದೇ ಪ್ರಭೇದದ ಹಲವಾರು ಹಕ್ಕಿಗಳು ಗುಂಪುಗೂಡುವುದು ಸಾಮಾನ್ಯವಾದರೂ ಕೆಲವೊಮ್ಮೆ ಬೇರೆ ಪ್ರಭೇದಗಳೊಂದಿಗೆ ಟರ್ನ್, ಕಾರ್ಮೊರಾಂಟ್, ಪೆಲಿಕನ್ ಮುಂತಾದ ಬೇರೆ ಜಾತಿಯ ಹಕ್ಕಿಗಳೊಂದಿಗೆ ಇರುವುದೂ ಉಂಟು. ಮೊಟ್ಟೆಯಿಡುವ ಕಾಲದಲ್ಲಿ ಯಾವುದಾದರೂ ಸುರಕ್ಷಿತವಾದ ದ್ವೀಪವನ್ನು ಆರಿಸಿಕೊಂಡು ನೆಲದಮೇಲೆ ಇಲ್ಲವೆ ಸಣ್ಣಗಾತ್ರದ ಮರಗಳ ಮೇಲೆ ಕಡ್ಡಿ, ಸಮುದ್ರದ ಸಸ್ಯಗಳನ್ನು ಉಪಯೋಗಿಸಿ ಗೂಡುಗಳನ್ನು ನಿರ್ಮಿಸುತ್ತವೆ. ಕೆಲವು ಪ್ರಭೇದಗಳು (ಅಮೆರಿಕದ ಕ್ಯಾಲಿಫೋರ್ನಿಯ ಗಲ್, ಫ್ರಾಂಕ್ಲಿನ್ಸ್ ಗಲ್, ಚೀನದ ಸಾಂಡರ್ಸ್ ಗಲ್, ನ್ಯೂಜಿಲೆಂಡಿನ ಬಲರ್್ಸ ಗಲ್) ಒಳನಾಡಿನ ಸರೋವರಗಳ ಬಳಿ ಗೂಡು ಕಟ್ಟುತ್ತವೆ. ಭಾರತದಲ್ಲಿ ಕಾಣಬರುವ ಕಂದು ತಲೆಯ ಗಲ್ ಹಕ್ಕಿ ಹಿಮಾಲಯದ ಲಡಾಕ್, ಟಿಬೆಟ್, ಮಾನಸಸರೋವರಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಉತ್ತರಾರ್ಧಗೋಳದ ಸಾಗರವಾಸಿಯಾದ ಕಿಟಿವೇಕ್ ಎಂಬ ಹೆಸರಿನ ಗಲ್ ಚಳಿಗಾಲದಲ್ಲಿ ಬ್ರಿಟನ್ನಿನವರೆಗೆ ವಲಸೆ ಬಂದು ಸಮುದ್ರತೀರಗಳಲ್ಲಿನ ಪ್ರಪಾತಗಳಲ್ಲಿ ಗೂಡುಕಟ್ಟಿ ಮರಿಮಾಡುತ್ತದೆ. ಬಹುಪಾಲು ಪ್ರಭೇದಗಳಲ್ಲಿ ಮೊಟ್ಟೆಗಳ ಸಂಖ್ಯೆ ಸೂಲಿಗೆ ಮೂರನ್ನು ಮೀರುವುದಿಲ್ಲ. ಮೊಟ್ಟೆಗಳ ಬಣ್ಣ ಕಂದು, ಮೇಲೆಲ್ಲ ಕಗ್ಗಂದು ಇಲ್ಲವೆ ಕಪ್ಪುಬಣ್ಣದ ಚುಕ್ಕೆಗಳಿರುತ್ತವೆ. ಗಂಡು ಹೆಣ್ಣು ಹಕ್ಕಿಗಳೆರಡೂ ಕಾವು ಕೊಟ್ಟು ಮರಿಮಾಡುವ ಮತ್ತು ಮರಿಗಳ ಪಾಲನೆಯ ಕೆಲಸವನ್ನು ಹಂಚಿಕೊಳ್ಳುತ್ತವೆ. ಅದೇ ತಾನೇ ಮೊಟ್ಟೆಯೊಡೆದು ಹೊರಬಂದ ಮರಿಹಕ್ಕಿಗಳು ಸ್ವಶಕ್ತಿಯಿಂದ ನಿಲ್ಲುವ ನಡೆದಾಡುವ ಸಾಮರ್ಥ್ಯವನ್ನು ಪಡೆದಿವೆಯಾದರೂ ಸಾಮಾನ್ಯವಾಗಿ ಪೂರ್ಣ ದೊಡ್ಡವಾಗುವವರೆಗೂ ತಂದೆತಾಯಿಗಳನ್ನು ಬಿಟ್ಟು ಕದಲುವುದಿಲ್ಲ. ಇವು ಸುಮಾರು 4-6 ವಾರಗಳಲ್ಲಿ ಹಾರುವ ಶಕ್ತಿ ಪಡೆಯುತ್ತವೆ.


ಸುಮಾರು 40ಕ್ಕೂ ಹೆಚ್ಚು ಬಗೆಯ ಗಲ್ ಹಕ್ಕಿಗಳಿವೆ ಎಂದು ಮೊದಲೇ ಹೇಳಿದೆ. ಇವುಗಳಲ್ಲಿ ಬಹುಮುಖ್ಯವಾದ ಕೆಲವು ಪ್ರಭೇದಗಳನ್ನು ಮುಂದೆ ವಿವರಿಸಲಾಗಿದೆ.


  • ಲೇರಸ್ ಬ್ರುನಿಸಿಫ್ಯಾಲಸ್ (ಕಂದುತಲೆಯ ಗಲ್) : ಭಾರತದಲ್ಲಿ ಕಾಣಬರುವ ಬಗೆ ಇದು. ಕಾಡುಕಾಗೆ ಗಾತ್ರದ್ದು. ಬೂದಿಬಣ್ಣದ ಬೆನ್ನುಭಾಗ, ಬಿಳಿಯ ಹೊಟ್ಟೆಭಾಗ, ಕಾಫಿಬಣ್ಣದ ತಲೆ ಇದೆ. ಕರ್ಕಶವಾಗಿ ಕೀಯಾ ಎಂದು ಕೂಗುತ್ತ ಹಾರಾಡುತ್ತಿರುತ್ತದೆ.
  • ಲೇರಸ್ ರಿಡಿಬಂಡಸ್ (ಕಪ್ಪು ತಲೆಯ ಗಲ್) : ಯುರೇಶಿಯದ ಸಮಶೀತೋಷ್ಣ ವಲಯಗಳಲ್ಲೆಲ್ಲ ಇದು ಸಾಮಾನ್ಯ. ಚಳಿಗಾಲದಲ್ಲಿ ಭಾರತಕ್ಕೂ ಬರುತ್ತದೆ. ಯುರೋಪಿನ ಕೃಷಿ ಭೂಮಿಗಳಲ್ಲಿನ ಕೀಟಗಳನ್ನು ತಿನ್ನುವುದರಿಂದ ಬಲು ಉಪಕಾರಿ ಎನಿಸಿದೆ.
  • ಲೇರಸ್ ಮ್ಯಾರಿನಸ್ (ಕಪ್ಪು ಬೆನ್ನಿನ ಗಲ್) : ಉತ್ತರ ಅಟ್ಲಾಂಟಿಕ್ ಸಾಗರದ ತೀರಪ್ರದೇಶಗಳಲ್ಲಿ ಕಾಣಬರುತ್ತದೆ. ಗಲ್ಹಕ್ಕಿಗಳಲ್ಲೆಲ್ಲ ಅತಿದೊಡ್ಡದು. ಇದರ ರೆಕ್ಕೆ ಹರಡಿದಾಗ ಅಗಲ ಸುಮಾರು 1.5 ಮೀ ಗೂ ಹೆಚ್ಚು. ಬೇರೆ ಹಕ್ಕಿಗಳ ಮೊಟ್ಟೆ ಮರಿ ಮುಂತಾದುವನ್ನು ತಿನ್ನುವುದರಿಂದ ಒಂದು ರೀತಿಯ ಹಿಂಸ್ರ ಪಕ್ಷಿಯಂತಿದೆ.
  • ಲೇರಸ್ ಅರ್ಜೆಂಟೇಟಸ್ (ಹೆರ್ರಿಂಗ್ ಗಲ್) : ಉತ್ತರಾರ್ಧಗೋಳದಲ್ಲೆಲ್ಲ ಬಲು ಸಾಮಾನ್ಯ.
  • ಲೇರಸ್ ಪಿಪಿಕ್ಸ್‌ಕನ್ (ಫ್ರಾಂಕ್ಲಿನ್ಸ್ ಗಲ್) : ಉತ್ತರ ಅಮೆರಿಕದ ಒಳನಾಡಿನಲ್ಲಿ ವಾಸಿಸುತ್ತದೆ. ಹಿಂದೊಮ್ಮೆ ಕೃಷಿಪಿಡುಗುಗಳಾದ ಮಿಡತೆಗಳನ್ನು ಸಂಪೊರ್ಣವಾಗಿ ನಾಶಮಾಡಿ ಬೆಳೆಯನ್ನು ಉಳಿಸಿಕೊಟ್ಟವೆಂದು ಅಮೆರಿಕದ ಸಾಲ್್ಟಲೇಕ್ ನಗರಗಳಲ್ಲಿ ಈ ಪ್ರಭೇದದ ಗಲ್ಗಳಿಗೆ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.
  • ಲೇರಸ್ ಕ್ಯಾಲಿಫೋರ್ನಿಕಸ್ (ಕ್ಯಾಲಿಫೋರ್ನಿಯ ಗಲ್) : ಉತ್ತರ ಅಮೆರಿಕದಲ್ಲಿನ ಪಶ್ಚಿಮ ಭಾಗಗಳಲ್ಲಿ ಬಲುಸಾಮಾನ್ಯ. ಅಲ್ಲಿನ ಒಳನಾಡಿನ ಸರೋವರಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.
  • ಪ್ಯಾಗೊಫಿಲ ಎಬರ್ನಿಯ (ಐವರಿ ಗಲ್) : ಗಲ್ಗಳಲ್ಲೆಲ್ಲ ಬಹುಶಃ ಅತ್ಯಂತ ಸುಂದರವಾದುದು. ಮೈಬಣ್ಣ ಅಚ್ಚಬಿಳಿ. ಕಾಲುಗಳು ಮಾತ್ರ ಕಪ್ಪು. ಆರ್ಕ್ಟಿಕ್ ಪ್ರದೇಶಗಳಲ್ಲಿ ವಾಸಿಸುತ್ತದೆ.
  • ರಿಸ ಟ್ರೈಡ್ಯಾಕ್ಟಿಲ (ಕಿಟಿವೇಕ್) : ಉತ್ತರಾರ್ಧಗೋಳದ ಸಾಗರಗಳಲ್ಲಿ ಕಾಣಬರುತ್ತದೆ. ಬ್ರಿಟನ್ನಿನ ಸಮುದ್ರತೀರದ ಪ್ರಪಾತಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಇದರ ಕಾಲುಗಳಲ್ಲಿ ಹಿಂಬೆರಳು ಇಲ್ಲ.
  • ರೋಡೋಸ್ಟಿತಿಯ ರೋಸಿಯ (ರೋಸಿಯೇಟ್ ಗಲ್) : ಆರ್ಕ್ಟಿಕ್ ಪ್ರದೇಶಗಳ ವಾಸಿ. ಗುಲಾಬಿ ಬಣ್ಣದ ರೆಕ್ಕೆ ಪುಕ್ಕಗಳಿಂದಾಗಿ ಸುಂದರವಾಗಿ ಕಾಣುತ್ತದೆ.
  • ಕ್ಸೀಮ ಸ್ಯಾಬಿನೈ (ಸ್ಯಾಬೈನ್ಸ್ ಗಲ್) : ಇದು ಕೂಡ ಆರ್ಕ್ಟಿಕ್ ಪ್ರದೇಶಗಳಲ್ಲಿ ಕಾಣಬರುವಂಥದು. ಇದರ ಬಾಲ ಕವಲೊಡೆದಿದೆ. ನೆಲದಮೇಲೆ ಚೆನ್ನಾಗಿ ಓಡಲೂಬಲ್ಲದು ಇದು.
  • ಕ್ರಿಯಾಗ್ರಸ್ ಫರ್ಕೇೕಟಸ್ (ಕವಲುತೋಕೆ ಗಲ್) : ಗಲಾಪಗಸ್ ದ್ವೀಪಗಳ ಮೂಲವಾಸಿ. ಬಾಲ ಎರಡು ಭಾಗಗಳಾಗಿ ಸೀಳಿದೆ.
  • ಗೇಬಿಯಾನಸ್ ಪ್ಯಾಸಿಫಿಕಸ್ (ಪೆಸಿಫಿಕ್ ಗಲ್) : ಟಾಸ್ಮೇನಿಯ ಮತ್ತು ದಕ್ಷಿಣ ಆಸ್ಟ್ರೇಲಿಯಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ದೇಹದ ಬಣ್ಣ ಬೂದಿ.