ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಂಧೀ, ಮೋಹನ್ದಾಸ್ ಕರಮ್ಚಂದ್

ವಿಕಿಸೋರ್ಸ್ದಿಂದ

ಗಾಂಧೀ, ಮೋಹನ್‍ದಾಸ್ ಕರಮ್‍ಚಂದ್ 1869-1948. ಭಾರತದ ಸ್ವಾತಂತ್ರ್ಯ ಶಿಲ್ಪಿ. ಅಹಿಂಸಾತ್ಮಕ ಕ್ರಾಂತಿಯಿಂದ ಬ್ರಿಟಿಷರ ಚಕ್ರಾಧಿಪತ್ಯವನ್ನು ಭಾರತದಲ್ಲಿ ಕೊನೆಗೊಳಿಸಿದ ಕಾರಣಪುರುಷ. ತನ್ನ ಇಡೀ ಬಾಳನ್ನು ಸತ್ಯಶೋಧನೆಗಾಗಿ ಮುಡಿಪಿಟ್ಟ ಮಹಾತ್ಮ. ಹಲವಾರು ಶತಮಾನಗಳಿಂದ ನಿಸ್ಸತ್ತ್ವಯುತವೂ ನಿರ್ವೀರ್ಯವೂ ವಿವಕ್ತವೂ ಆಗಿ ಪರಿಣಮಿಸಿದ್ದ ಭಾರತೀಯ ಸಮಾಜವನ್ನು ಕ್ರಾಂತಿಕಾರಿ ಪರಿವರ್ತನೆಗಳಿಗೆ ಒಳಪಡಿಸಿದ ದ್ರಷ್ಟಾರ. ಜನನ 1869ರ ಅಕ್ಟೋಬರ್ 2ರಂದು. ಕಾಠಿಯಾವಾಡದ ಪೋರ್‍ಬಂದರಿನಲ್ಲಿ. ತಂದೆ ಕರಮ್‍ಚಂದ್ ಗಾಂಧೀ ರಾಜಕೋಟೆಯಲ್ಲೂ ವಾಂಕನೀರಿನಲ್ಲೂ ದಿವಾನರಾಗಿದ್ದರು. ಗಾಂಧಿಯವರ ತಾಯಿ ಪುತಲಿಬಾಯಿ. ತಂದೆ ಸ್ವಾಮಿಭಕ್ತ, ಸತ್ಯನಿಷ್ಠ, ಧೈರ್ಯಶಾಲಿ, ಉದಾರಿ. ತಾಯಿಯ ಧರ್ಮಶ್ರದ್ಧೆ ಅನುಪಮವಾದ್ದು. ಗಾಂಧಿಯವರು ಆಕೆಯಿಂದ ಬಹಳಮಟ್ಟಿಗೆ ಪ್ರಭಾವಿತರಾಗಿದ್ದರು.

ಗಾಂಧಿಯವರ ವಿದ್ಯಾಭ್ಯಾಸ ಪೋರ್‍ಬಂದರ್ ಮತ್ತು ರಾಜಕೋಟೆಗಳಲ್ಲಿ ನಡೆಯಿತು. ಶಾಲೆಯಲ್ಲಿ ಅವರು ಸಾಮಾನ್ಯ ವಿದ್ಯಾರ್ಥಿಯಾಗಿದ್ದರು. ಅವರು ಎಂದಿಗೂ ಕಾಲ ತಪ್ಪಿ ನಡೆಯುತ್ತಿರಲಿಲ್ಲ. ಹಿರಿಯರಲ್ಲಿ ವಿಧೇಯತೆ, ಎಲ್ಲ ಬಾಲಕರಂತೆ ಅವರೂ ಕೆಟ್ಟ ಸಹವಾಸ ಸೇರಿ, ಹೊಗೆ ಸೇದಿದರು, ಕಳ್ಳತನವನ್ನೂ ಮಾಡಿದರು, ಮಾಂಸ ಕೂಡ ತಿಂದರು. ಆದರೆ ಇವು ಮಾಡಬಾರದ ಕೃತ್ಯಗಳೆಂದು ಬಹಳ ಬೇಗ ಅರಿತುಕೊಂಡರು. ಪಶ್ಚಾತ್ತಾಪಪಟ್ಟು, ಇವನ್ನು ತ್ಯಜಿಸಿದರು.

ಗಾಂಧಿಯವರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಹದಿಮೂರನೆಯ ವಯಸ್ಸಿನಲ್ಲಿ, ಕಸ್ತೂರ ಬಾ ಒಂದಿಗೆ ಅವರ ವಿವಾಹವಾಯಿತು. ಕಸ್ತೂರ ಬಾ ಅವರಿಗೂ ಗಾಂಧಿಯವರಿಗಾಗಿದಷ್ಟೇ ವಯಸ್ಸಾಗಿತ್ತು. ಉತ್ತರೋತ್ತರದಲ್ಲಿ ಅವರಿಗೆ ನಾಲ್ವರು ಗಂಡುಮಕ್ಕಳಾದರು. (ನೋಡಿ- ಕಸ್ತೂರ-ಬಾ)

ಗಾಂಧಿಯವರ ಎಳಮನಸ್ಸಿನ ಮೇಲೆ ಅದ್ಭುತ ಪರಿಣಾಮ ಮಾಡಿದ ನಾಟಕ ಹರಿಶ್ಚಂದ್ರ. ತಾವೂ ಸತ್ಯಸಂಧರಾಗಬೇಕೆಂಬುದು ಅವರು ಮನಸ್ಸು ಮಾಡಿದರು. ರಂಭಾ ಎಂಬ ದಾದಿ ಅವರಿಗೆ ರಾಮನಾಮ ಕಲಿಸಿದ್ದಳು. ಸತ್ಯ, ರಾಮನಾಮ, ಇವೆರಡೂ ಗಾಂಧೀ ಜೀವನದ ಪರಮ ಆದರ್ಶಗಳಾಗಿದ್ದುವು.

ಗಾಂಧಿಯವರು 18ನೆಯ ವಯಸ್ಸಿನಲ್ಲಿ ರಾಜಕೋಟೆಯ ಆಲ್ಫ್ರೆಡ್ ಪ್ರೌಢಶಾಲೆಯಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿದರು. ಅನಂತರ ಅವರು ಕಾಲೇಜು ಸೇರಿದರಾದರೂ ಅವರ ವಿದ್ಯಾಭ್ಯಾಸ ಚೆನ್ನಾಗಿ ಆಗಲಿಲ್ಲ. ಆಗ ಹಿತೈಷಿಗಳೊಬ್ಬರ ಸಲಹೆಯಂತೆ ಅವರು ಇಂಗ್ಲೆಂಡಿಗೆ ಹೋಗಿ ನ್ಯಾಯಶಾಸ್ತ್ರ ವ್ಯಾಸಂಗ ಮಾಡಿಬರಬೇಕೆಂದು ನಿರ್ಧಾರವಾಯಿತು. ವಿದೇಶದಲ್ಲಿರುವಾಗ ಮಧ್ಯಪಾನ, ಪರಸ್ತ್ರೀಸಂಗ, ಮಾಂಸಾಹಾರಸೇವನೆ ಮಾಡುವುದಿಲ್ಲವೆಂದು ತಾಯಿಗೆ ವಚನವಿತ್ತು, 1888ರ ಸೆಪ್ಟೆಂಬರ್ 4ರಂದು ಗಾಂಧಿಯವರು ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಮೋಧ್ ಬನಿಯ ಜಾತಿಯಲ್ಲಿ ಮೊಟ್ಟಮೊದಲು ಸಮುದ್ರಯಾನ ಮಾಡಿದವರು ಅವರೇ. ಇದು ಜಾತಿಪದ್ಧತಿಗೆ ನಿಷಿದ್ಧವೆಂದು ಮುಖಂಡರು ಅವರಿಗೆ ಬಹಿಷ್ಕಾರ ಹಾಕಿದರು. ಆಗ ಗಾಂಧಿಯವರಿಗೆ 19 ವರ್ಷ. ಕಸ್ತೂರ ಬಾ ಆ ವೇಳೆಗೆ ಒಂದು ಗಂಡು ಮಗುವಿನ ತಾಯಿಯಾಗಿದ್ದರು.

ಗಾಂಧಿಯವರು ಲಂಡನಿನಲ್ಲಿ ಮೂರು ವರ್ಷಗಳ ಕಾಲ ಇದ್ದರು. ಅಪ್ಪಟ ಆಂಗ್ಲ ಗೃಹಸ್ಥನಂತೆ ಆಗಬೇಕೆಂಬುದು ಆರಂಭದಲ್ಲಿ ಇವರ ಪ್ರಯತ್ನವಾಗಿತ್ತು. ನೃತ್ಯ, ಫ್ರೆಂಚ್, ಉಪನ್ಯಾಸ ಕಲೆ ಇವನ್ನು ಅಭ್ಯಸಿಸಬೇಕೆಂದು ಪ್ರಯತ್ನಿಸಿ, ಅವು ತಮಗೆ ಸಾಧ್ಯವಿಲ್ಲವೆಂದು ಕೈಬಿಟ್ಟರು. ಕರ್ತವ್ಯದ ಕಡೆ ಚೆನ್ನಾಗಿ ಗಮನವಿಟ್ಟು ವ್ಯಾಸಂಗ ಮಾಡಿದರು.

ಗಾಂಧಿಯವರು ತಮ್ಮ ತಾಯಿಗೆ ಕೊಟ್ಟಿದ್ದ ವಚನಗಳನ್ನು ಈಡೇರಿಸಲು ಬಹಳ ಶ್ರಮಪಟ್ಟರು. ಮಾಂಸಾಹಾರ ಸೇವಿಸದೆ ಲಂಡನಿನಲ್ಲಿ ಇರುವುದಾದರೂ ಹೇಗೆ ಎಂದು ಸಂಶಯ ಪಡುತ್ತಿದ್ದ ಅವರು ಒಂದು ನಿದರ್ಶನವಾದರು. ಮೊದಮೊದಲು ಶಾಕಾಹಾರದ ಭೋಜನಗೃಹಗಳಲ್ಲಿ ಊಟಮಾಡುತ್ತಿದ್ದರು. ಕೊನೆಗೆ ತಾವೇ ಅಡಿಗೆ ಮಾಡಿಕೊಳ್ಳಲಾರಂಭಿಸಿ ಸಸ್ಯಾಹಾರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಯೋಗಗಳನ್ನು ಮಾಡಿದರು. ರುಚಿಯ ಅಧಿಷ್ಠಾನ ಮನಸ್ಸೇ ಹೊರತು ನಾಲಗೆಯಲ್ಲವೆಂಬುದು ಅವರ ಅರಿವಿಗೆ ಬಂತು. ಅಸ್ವಾದ ಅವರ ಜೀವನದ ಒಂದು ನಿಯಮವಾಯಿತು. ನೀತಿ ತಪ್ಪುವಂಥ ಪ್ರಸಂಗವೂ ಒಮ್ಮೆ ಗಾಂಧಿಯವರಿಗೆ ಬರುವುದರಲ್ಲಿತ್ತು. ಲಂಡನಿನಲ್ಲಿದ್ದಾಗಲೇ ಗಾಂಧಿಯವರು ಭಗವದ್ಗೀತೆಯನ್ನು ಮೊದಲನೆಯ ಬಾರಿಗೆ ಓದಿದ್ದು. ಆ ಮಹಾಗ್ರಂಥ ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿತು. ಅವರ ಬೈಬಲಿನ ಹೊಸ ಒಡಂಬಡಿಕೆಯನ್ನು ಓದಿದ್ದೂ ಅದೇ ಕಾಲದಲ್ಲಿ. ಕೆಡುಕಿಗೆ ಕೆಡುಕನ್ನು ಮಾಡಬೇಡ-ಎಂಬ ಸೂಕ್ತ ಅವರಿಗೆ ಬಹಳ ಹಿಡಿಸಿತು. ಅವರು ಚಿಕ್ಕವರಿದ್ದಾಗ ಓದಿದ್ದ, ಗುಜರಾತೀ ಕವಿ ಶಾಮಲಾಲ್ ಭಟ್ಟನ, ಒಂದು ಸೀಸಪದ್ಯದ ಉದಾತ್ತ ಭಾವಗಳನ್ನು ಅದು ಸಮರ್ಥಿಸಿತು.

ಗಾಂಧಿಯವರು ಇಂಗ್ಲೆಂಡಿನಲ್ಲಿ ವ್ಯಾಸಂಗ ಮುಗಿಸಿ ಬ್ಯಾರಿಸ್ಟರ್ ಪದವಿ ಪಡೆದು 1891ರ ಜೂನ್ 12ರಂದು ಭಾರತಕ್ಕೆ ಹಿಂದಿರುಗಿ ಎರಡು ವರ್ಷಕಾಲ ಮುಂಬಯಿ ರಾಜಕೋಟೆಗಳಲ್ಲಿ ವಕೀಲ ವೃತ್ತಿ ಮಾಡಿದರು. ಆದರೆ ಅವರಿಗೆ ಯಶಸ್ಸು ದೊರಕಲಿಲ್ಲ. ಅವರಲ್ಲಿ ಆತ್ಮವಿಶ್ವಾಸ, ವಾದಚಾತುರ್ಯ ಇರಲಿಲ್ಲ. ದಕ್ಷಿಣ ಆಫ್ರಿಕದಲ್ಲಿದ್ದ ಮುಸ್ಲಿಂ ವರ್ತಕರೊಬ್ಬರಿಂದ ಅವರಿಗೆ ಅನಿರೀಕ್ಷಿತವಾಗಿ ಬೇಡಿಕೆಯೊಂದು ಬಂತು. ತಮ್ಮ ಐರೋಪ್ಯ ವಕೀಲರಿಗೆ ಸಹಾಯಕರಾಗಬೇಕೆಂದು ಆ ವರ್ತಕರು ಬಯಸಿದರು. ಇದು ಗಾಂಧಿಯವರ ಬಾಳಿನ ಒಂದು ಮುಖ್ಯ ತಿರುವಾಗಿ ಪರಿಣಮಿಸಿತು. 1893ರ ಮೇ ತಿಂಗಳಿನಲ್ಲಿ ಡರ್ಬನಿನಲ್ಲಿ ಬಂದು ಇಳಿದ ಒಂದು ವಾರದ ಮೇಲೆ ಗಾಂಧಿಯವರು ಅಲ್ಲಿಯ ನ್ಯಾಯಾಲಯಕ್ಕೆ ಹೋದಾಗ ಅವರು ತಲೆಗೆ ಸುತ್ತಿದ್ದ ಪೇಟವನ್ನು ತೆಗೆಯಬೇಕೆಂದು ನ್ಯಾಯಾಧೀಶ ಆಜ್ಞೆ ಮಾಡಿದ. ಅಲ್ಲಿಯ ಬಿಳಿಯರು ಭಾರತೀಯರನ್ನು ಕಾಣುತ್ತಿದ್ದ ರೀತಿ ಎಂಥದೆಂಬುದು ಗಾಂಧಿಯವರಿಗೆ ಪ್ರಥಮವಾಗಿ ಅರಿವಿಗೆ ಬಂತು. ಇದಕ್ಕಿಂತ ಅತ್ಯಂತ ತೀವ್ರತರವಾದ ಆಘಾತವೊಂದು ಅವರಿಗೆ ಕಾದಿತ್ತು. ಅವರು ಡರ್ಬನಿನಿಂದ ಪ್ರಿಟೋರಿಯಕ್ಕೆ ರೈಲ್ವೆಯ ಮೂಲಕ ಒಂದನೆಯ ತರಗತಿಯ ಡಬ್ಬಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿತು. ಮಾರಿಟ್ಸ್‍ಬರ್ಗ್‍ನಲ್ಲಿ ಬಿಳಿಯನೊಬ್ಬ ಆ ಡಬ್ಬಿಯನ್ನು ಹೊಕ್ಕ. ಗಾಂಧಿಯವರ ಬಳಿ ಒಂದನೆಯ ತರಗತಿಯ ಟಿಕೆಟ್ ಇದ್ದರೂ ಆತ ಗಾಂಧಿಯವರನ್ನು ಹೊರತಳ್ಳಿಸಿದ. ವರ್ಣೀಯರು ಒಂದನೆಯ ತರಗತಿಯಲ್ಲಿ ಬಿಳಿಯರೊಂದಿಗೆ ಪ್ರಯಾಣಮಾಡುವುದಕ್ಕೆ ನಿಷೇಧವಿತ್ತು. ಕತ್ತಲು ತುಂಬಿದ ವಿಶ್ರಾಂತಿಮಂದಿರದಲ್ಲಿ ಗಾಂಧಿಯವರು ಚಳಿಯಿಂದ ನಡುಗುತ್ತ ರಾತ್ರಿ ಕಳೆಯಬೇಕಾಯಿತು. ನನ್ನ ಗಂಟುಮೂಟೆ ಎಲ್ಲಿತ್ತೆಂಬುದು ನನಗೆ ಗೊತ್ತಿರಲಿಲ್ಲ. ಅದು ಎಲ್ಲಿದೆಯೆಂದು ಯಾರನ್ನಾದರೂ ಕೇಳುವ ಧೈರ್ಯವೂ ನನಗಿರಲಿಲ್ಲ. ಹಾಗೆ ಮಾಡಿದರೆ ಮತ್ತೆ ಅವಮಾನ ಹಲ್ಲೆಗಳಿಗೆ ಗುರಿಯಾಗಬೇಕಾಗುತ್ತಿತ್ತು. ನಿದ್ದೆ ಮಾಡುವ ಪ್ರಶ್ನೆಯೇ ಇರಲಿಲ್ಲ. ನನ್ನ ಮನಸ್ಸು ಸಂಶಯದ ಪ್ರಭುತ್ವಕ್ಕೆ ಒಳಗಾಯಿತು. ಭಾರತಕ್ಕೆ ಓಡಿಹೋಗುವುದು ಹೇಡಿತನವೆಂದು ಸರಿರಾತ್ರಿಯಲ್ಲಿ ತೀರ್ಮಾನಕ್ಕೆ ಬಂದೆ-ಎಂದು ಅವರು ಬರೆದುಕೊಂಡಿದ್ದಾರೆ. ನನ್ನ ಕರ್ತವ್ಯವೇನೆಂದು ನನ್ನನ್ನು ನಾನೇ ಕೇಳಿಕೊಂಡೆ. ನಾನು ಭಾರತಕ್ಕೆ ಮರಳಬೇಕೆ? ಅಥವಾ, ದೇವರ ನೆರವಿಗಿರುವನೆಂದು ನಂಬಿ, ಮುಂದುವರಿದು, ಅನುಭವಿಸಬೇಕಾದ್ದನ್ನೆಲ್ಲ ಅನುಭವಿಸಲೆ? ಎಂದು ಅವರು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು. ಅಲ್ಲೇ ಉಳಿದು ಕಷ್ಟ ಅನುಭವಿಸಬೇಕೆಂದು ತೀರ್ಮಾನಿಸಿದೆ. ನನ್ನ ಕ್ರಿಯಾತ್ಮಕ ಅಹಿಂಸೆ ಆರಂಭವಾದ್ದು ಅಂದಿನಿಂದ.

ದಕ್ಷಿಣ ಆಫ್ರಿಕದಲ್ಲಿ ಭಾರತೀಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ನಿರ್ಧರಿಸಿದ ಗಾಂಧಿಯವರು ಈ ಉದ್ದೇಶಕ್ಕಾಗಿ 1894ರಲ್ಲಿ ನಟಾಲ್ ಇಂಡಿಯನ್ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪಿಸಿದರು. ಬ್ರಿಟಿಷ್ ಚಕ್ರಾಧಿಪತ್ಯದ ಒಳ್ಳೆಯತನದಲ್ಲಿ ಅವರಿಗೆ ಆಗ ನಂಬಿಕೆಯಿತ್ತು. ದಕ್ಷಿಣ ಆಫ್ರಿಕ ಯುದ್ಧದಲ್ಲೂ (1899-1902) ಜûುಲು ದಂಗೆಯಲ್ಲೂ ಅವರು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸ್ವಯಂಸೇವಕ ದಳವೊಂದನ್ನು ನಿರ್ಮಿಸಿ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಮನಃಪೂರ್ವಕವಾಗಿ ನೆರವು ನೀಡಿದರು. ಇದಕ್ಕೆ ಬ್ರಿಟಿಷ್ ಸರ್ಕಾರದ ಮೆಚ್ಚುಗೆ ಲಭಿಸಿತಾದರೂ ಭಾರತೀಯರ ಬಗ್ಗೆ ಅದರ ಧೋರಣೆ ಬದಲಾಗಲಿಲ್ಲ. ಪ್ರತಿಯಾಗಿ ಇನ್ನೂ ಕ್ರೂರವಾಯಿತು. ಈ ವೇಳೆಗೆ ಗಾಂಧಿಯವರು ವಕೀಲಿಯಲ್ಲಿ ವಿಶೇಷವಾದ ಕೀರ್ತಿಯನ್ನೂ ಯಶಸ್ಸನ್ನೂ ಗಳಿಸಿದ್ದರು. ಜೀವನದ ಬಗ್ಗೆ, ತಾವು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಅವರ ಮನಸ್ಸು ಹೆಚ್ಚು ಹೆಚ್ಚು ಖಚಿತಗೊಂಡಿತು. ಈ ನಡುವೆ ಅವರು ಭಾರತಕ್ಕೂ ಹೋಗಿ ಬರುತ್ತಿದ್ದರು. ಗೋಪಾಲಕೃಷ್ಣ ಗೋಖಲೆಯವರ ಪರಿಚಯವಾಗಿ ಅದು ಗಾಢ ಸ್ನೇಹವಾಗಿ ಪರಿಣಮಿಸಿತು. ಗೋಖಲೆಯವರನ್ನು ಗಾಂಧಿಯವರು ತಮ್ಮ ರಾಜಕೀಯ ಗುರುವೆಂದೇ ಭಾವಿಸಿದರು. ಭಾರತೀಯ ನೆಲಸುಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸಲು ಇಂಡಿಯನ್ ಒಪಿನಿಯನ್ ಎಂಬ ಪತ್ರಿಕೆಯೊಂದು 1904ರಲ್ಲಿ ಪ್ರಾರಂಭವಾಯಿತು.

ಪ್ರತಿಯೊಬ್ಬ ಭಾರತೀಯನೂ ತನ್ನ ಬೆರಳ ಗುರುತುಗಳನ್ನು ನೋಂದಾಯಿಸಬೇಕೆಂದು ವಿಧಿಸುವ ಮಸೂದೆಯೊಂದಕ್ಕೆ ಟ್ರಾನ್ಸ್‍ವಾಲ್ ಸರ್ಕಾರ 1906ರಲ್ಲಿ ಅನುಮೋದನೆ ನೀಡಿದಾಗ ಹೋರಾಟ ಬಿರುಸಾಯಿತು. ಸ್ತ್ರೀಪುರಷರೆಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಅನ್ವಯಿಸುತ್ತಿದ್ದ ಈ ಕಾನೂನಿನಂತೆ ನಡೆಯದವರು ದಂಡ ಕಾರಾಗೃಹವಾಸಗಳ ಶಿಕ್ಷೆಗೆ ಒಳಗಾಗಬೇಕಾಗುತ್ತಿತ್ತು. ಅಪಮಾನಕವಾದ ಈ ಕಾನೂನಿಗೆ ವಿಧೇಯತೆ ತೋರಿಸಬಾರದೆಂದು ಗಾಂಧಿಯವರು ಭಾರತೀಯರಿಗೆ ಹೇಳಿದರು. ಅವರ ನಾಯಕತ್ವದಲ್ಲಿ 2,000 ಸ್ತ್ರೀಯರು ಪ್ರತಿಭಟನೆಯ ಮೆರವಣಿಗೆ ನಡೆಸಿದರು. ಜೈಲಿಗೂ ನಡೆದರು.

ಗಾಂಧಿಯವರು ಆರಂಭಿಸಿದ ಸತ್ಯಾಗ್ರಹದಲ್ಲಿ ಅನೇಕ ಭಾರತೀಯ ವರ್ತಕರೂ ವಕೀಲರೂ ಸಾಮಾನ್ಯರೂ ಭಾಗವಹಿಸಿ ಕಾರಾಗೃಹವಾಸ ಅನುಭವಿಸಿದರು. ಗಡೀಪಾರು, ಆರ್ಥಿಕ ಒತ್ತಾಯ ಮುಂತಾದ ಯಾವುದಕ್ಕೂ ಸತ್ಯಾಗ್ರಹಿಗಳು ಜಗ್ಗಲಿಲ್ಲ. ಗಾಂಧಿಯವರ ನಾಯಕತ್ವದಲ್ಲಿ ಅವರ ನಂಬಿಕೆ ಅಷ್ಟು ಅಗಾಧವಾಗಿತ್ತು. 1912ರಲ್ಲಿ ಗೋಪಾಲಕೃಷ್ಣ ಗೋಖಲೆಯವರ ದಕ್ಷಿಣ ಆಫ್ರಿಕಕ್ಕೆ ಭೇಟಿಯಿತ್ತುದರ ಪರಿಣಾಮವಾಗಿ ವರ್ಣಭೇದನೀತಿ ನಿಲ್ಲುವುದೆಂದೂ ಭಾರತೀಯರು ತೆರಬೇಕಾಗಿದ್ದ ತೆರಿಗೆ ರದ್ದಾಗುವುದೆಂದೂ ಆಶೆ ಜನಿಸಿತು. ಆದರೆ ಅದು ಭಗ್ನವಾಯಿತು. ಕ್ರೈಸ್ತ ವಿವಾಹಪದ್ಧತಿಗನುಗುಣವಾಗಿ ವಿವಾಹ ದಾಖಲಾತಿ ಹೊಂದದ ಎಲ್ಲ ಹಿಂದೂ, ಮುಸ್ಲಿಂ ಮತ್ತು ಪಾರ್ಸೀ ವಿವಾಹಗಳೂ ನ್ಯಾಯಬದ್ಧವಲ್ಲವೆಂಬುದು ಶ್ರೇಷ್ಠ ನ್ಯಾಯಾಲಯವಿತ್ತ ಒಂದು ತೀರ್ಪಿನ ಫಲ. ಇದು ಭಾರತೀಯರ ಆತ್ಮಗೌರವವನ್ನು ಪೂರ್ಣವಾಗಿ ನಾಶಮಾಡಿತು. ಸತ್ಯಾಗ್ರಹ ಚಳವಳಿಗೆ ಇದರಿಂದ ಪುಟವಿಟ್ಟಂತಾಯಿತು.

ಈ ಸತ್ಯಾಗ್ರಹ ಹೋರಾಟದಲ್ಲಿ ಪುರುಷರ ಜೊತೆಗೆ ಸ್ತ್ರೀಯರೂ ಭಾಗವಹಿಸಿದರು. ಶಾಸನವನ್ನು ಉಲ್ಲಂಘಿಸಿ ನಟಾಲಿನಿಂದ ಟ್ರಾನ್ಸ್‍ವಾಲಿಗೆ ಪ್ರವೇಶಿಸುವುದೇ ಆಗಿನ ಸತ್ಯಾಗ್ರಹದ ಕ್ರಮ. 1913ರ ನವೆಂಬರ್ 6ರಂದು ನಡೆದ ಶಾಸನೋಲ್ಲಂಘನ ಯಾತ್ರೆಯಲ್ಲಿ ಅಸಂಖ್ಯ ಹೆಂಗಸರೂ ಗಂಡಸರೂ ಮಕ್ಕಳೂ ಭಾಗವಹಿಸಿದರು. ದಕ್ಷಿಣ ಆಫ್ರಿಕ ಸರ್ಕಾರ ಸತ್ಯಾಗ್ರಹಿಗಳ ಮೇಲೆ ನಡೆಸಿದ ಅತ್ಯಾಚಾರ ಬಹಳ ಹೇಯವಾದ್ದು. ಕೊನೆಗೆ ಗಾಂಧೀ ಮತ್ತು ಜನರಲ್ ಸ್ಮಟ್ಸರ ನಡುವೆ ಮಾತುಕತೆ ನಡೆದು ಒಂದು ಒಪ್ಪಂದವಾಯಿತು. 8 ವರ್ಷಗಳ ಸತ್ಯಾಗ್ರಹ ಕೊನೆಗೊಂಡಿತು. ಭಾರತೀಯರ ಬೇಡಿಕೆಗಳು ಸ್ವೀಕೃತವಾದುವು. ತೆರಿಗೆ ರದ್ದಾಯಿತು. ಭಾರತೀಯ ಸಂಪ್ರದಾಯದ ಪ್ರಕಾರ ನಡೆದ ವಿವಾಹಗಳು ಶಾಸನಬದ್ಧವೆಂದು ಘೋಷಿತವಾದುವು. ಇದರಿಂದ ದಕ್ಷಿಣ ಆಫ್ರಿಕದ ಭಾರತೀಯರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿದಿದ್ದರೂ ಭಾರತೀಯರು ಆತ್ಮಗೌರವಕ್ಕಾಗಿ ಹೋರಾಡುವ ಶಕ್ತಿಯನ್ನು ಕಂಡುಕೊಂಡರು. ಅಲ್ಲದೆ ಈ ಹೋರಾಟದ ನಾಯಕತ್ವ ವಹಿಸಿದ್ದ ಗಾಂಧಿಯವರು ಅಪಾರ ಅನುಭವ ಪಡೆದಿದ್ದರು. ಸಾಮಾಜಿಕ, ರಾಜಕೀಯ ಚಳವಳಿಗಳನ್ನು ನಡೆಸಲು ಹೊಸದೊಂದು ತಂತ್ರವೇ ಅವರಿಂದ ಸೃಷ್ಟಿಯಾಗಿತ್ತು.

ಗಾಂಧಿಯವರು ಹೂಡಿದ ಈ ಹೋರಾಟವನ್ನು ಮೊದಲು ನಿಶ್ಯಸ್ತ್ರ ಪ್ರತಿಭಟನೆ ಎಂದೇ ಕರೆಯಲಾಗುತ್ತಿತ್ತು. ಅನಂತರ ಅವರು ಇದನ್ನು ಸದಾಗ್ರಹವೆಂದೂ ಕೊನೆಗೆ ಸತ್ಯಾಗ್ರಹ ಎಂದೂ ಕರೆದರು. 1906ರಿಂದ 1914ರ ವರೆಗೆ ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ ಚಳವಳಿ ನಡೆಯಿತು.

ತಮ್ಮ ವಕೀಲಿಯಿಂದ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದ ಗಾಂಧಿಯವರು ಕ್ರಮೇಣ ಅದನ್ನೂ ಬಿಟ್ಟುಕೊಟ್ಟರು. ತಮ್ಮ ವೇಳೆಯನ್ನೆಲ್ಲ ಅವರು ಮುಂದಿರಿಸಿಕೊಂಡ ಉದ್ದೇಶಕ್ಕಾಗಿಯೇ ಮೀಸಲಾಗಿರಿಸಿದರು. ಜೀವನದ ಬಗ್ಗೆ ಅವರ ಧೋರಣೆ ಶೀಘ್ರವಾಗಿ ಬದಲಾಗುತ್ತಿತ್ತು. ಗೀತೆ ಉಪನಿಷತ್ತು ಕೊರಾನ್ ಬೈಬಲ್‍ಗಳನ್ನು ಅವರು ಆಳವಾಗಿ ಅಭ್ಯಾಸ ಮಾಡಿದರು. ಗೀತೆಯಂತೂ ಅವರಿಗೆ ಬಾಯಿಪಾಠವಾಗಿತ್ತು. ಅದು ಅವರ ಜೀವನಧರ್ಮಸೂತ್ರ. ಅವರ ಮೇಲೆ ತುಂಬ ಪರಿಣಾಮ ಮಾಡಿದ ಇನ್ನೊಂದು ಪುಸ್ತಕವೆಂದರೆ ರಸ್ಕಿನನ ಅಂಟು ದಿಸ್ ಲ್ಯಾಸ್ಟ್. ಎಲ್ಲರ ಒಳಿತಾದಾಗಲೇ ವ್ಯಕ್ತಿಯ ಒಳಿತು; ದುಡಿಮೆಯ ಬಾಳೇ ಸಾರ್ಥಕವಾದ್ದು-ಎಂಬುದು ಅವರು ಗ್ರಹಿಸಿದ ತತ್ತ್ವ. ಬ್ರಹ್ಮಚರ್ಯವನ್ನು ಅವರು ಅನುಷ್ಠಾನಕ್ಕೆ ತಂದರು. ತಮ್ಮ ಸಂಸಾರದೊಂದಿಗೂ ಸ್ನೇಹಿತರೊಂದಿಗೂ ಅವರು ಫೀನಿಕ್ಸ್ ಆಶ್ರಮವನ್ನೂ 1910ರಲ್ಲಿ ಟಾಲ್ಸ್‍ಟಾಯ್ ಆಶ್ರಮವನ್ನೂ ಸ್ಥಾಪಿಸಿದರು. ದೇಹ ಮನಸ್ಸುಗಳೆರಡರ ಸಾಮರಸ್ಯ ಸಾಧಿಸಿದರು. ಗುಡಿಸುವುದು, ಮಚ್ಚೆ ಹೊಲಿಯುವುದು, ಕೃಷಿ, ಮುದ್ರಣ-ಹೀಗೆ ಎಲ್ಲ ಬಗೆಯ ಕೆಲಸಗಳನ್ನೂ ಮಾಡಿದರು. ಯಾವ ಕೆಲಸವೂ ತುಚ್ಚವಲ್ಲ, ಯಾವುದೂ ದೊಡ್ಡದಲ್ಲ-ಎಂಬುದು ಅವರು ಸ್ವತಃ ಕಲಿತ, ಕಲಿಸಿದ ಪಾಠ. ಅವರೊಬ್ಬ ವಸ್ತುನಿಷ್ಠ ಆದರ್ಶವಾದಿ.

ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿದ್ದ 21 ವರ್ಷಗಳ ಕಾಲ ಅದು ಅವರಿಗೊಂದು ಪ್ರಯೋಗ ಶಾಲೆ ಆಯಿತು. ಅವರ ವ್ಯಕ್ತಿತ್ವ ವಿಕಾಸ ಹೊಂದಿದ್ದಲ್ಲದೆ, ಅವರ ಜೀವನತತ್ತ್ವದ ವಿಕಾಸವೂ ಆಯಿತು. ನೈತಿಕ ಪ್ರಶ್ನೆಗಳ ಬಗ್ಗೆ ಜಿಜ್ಞಾಸೆ ಅವರ ಬಾಲ್ಯದಿಂದಲೇ ಮುಂದುವರಿದಿದ್ದರೂ ಅದನ್ನು ಆಗ ವ್ಯವಸ್ಥಿತ ರೂಪದಲ್ಲಿ ನಡೆಸಿದರು. ಗೀತಾಧ್ಯಯನದಿಂದ ಅವರು ಅಸಂಗ್ರಹದ-ಐಚ್ಛಿಕ ದಾರಿದ್ರ್ಯದ-ಆದರ್ಶವನ್ನು ರೂಢಿಸಿಕೊಂಡರು. ನಿಷ್ಕಾಮಸೇವೆ, ಬ್ರಹ್ಮಚರ್ಯ ಇವು ಅವರ ಸಾರ್ವಜನಿಕ ಜೀವನಕ್ಕೆ ಶಕ್ತಿಯನ್ನು ನೀಡಿದವು. ಟಾಲ್‍ಸ್ಟಾಯಿಯ ಗ್ರಂಥಗಳ ಅಧ್ಯಯನ ಅವರ ಅಭಿಪ್ರಾಯಗಳನ್ನು ಮತ್ತಷ್ಟು ದೃಢಪಡಿಸಿತು. ಅವರು ಕಾಯಕದ ಪ್ರಭಾವವನ್ನು ಅರಿತರು. ಜಾನ್ ರಸ್ಕಿನ್ನನ ಅಂಟು ದಿಸ್ ಲ್ಯಾಸ್ಟ್ ಗ್ರಂಥವಂತೂ ಅವರ ಜೀವನಪರಿವರ್ತನೆಗೆ ಪ್ರಧಾನ ಕಾರಣವಾಯಿತು. ಟಾಲ್‍ಸ್ಟಾಯಿಯೊಂದಿಗೆ ಅವರು ಪತ್ರವ್ಯವಹಾರ ಬೆಳೆಸಿದರು. ಸತ್ಯಾಗ್ರಹ ವಿಶ್ವವ್ಯಾಪಕವಾಗುವಷ್ಟು ಪ್ರಾಮುಖ್ಯವುಳ್ಳ ಒಂದು ಪರಿಕಲ್ಪನೆ ಎಂದು ಟಾಲ್ಸ್‍ಟಾಯ್ ಹೊಗಳಿದ. ಗಾಂಧಿಯವರು ಒಂದು ನೂತನ ಜೀವನದರ್ಶನವನ್ನೇ ಕಂಡುಕೊಂಡು ಅದಕ್ಕೆ ತಮ್ಮ ಬಾಳನ್ನು ಮುಡುಪಾಗಿ ಇಟ್ಟರು. ಅದನ್ನು ಸರ್ವೋದಯ-ಸರ್ವರ ಕ್ಷೇಮ-ಎಂದು ಕರೆದರು. ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿದ್ದಾಗ ತಮ್ಮ ಮನಸ್ಸಿನಲ್ಲಿ ರೂಪುಗೊಂಡ ಭಾವನೆಗಳನ್ನೆಲ್ಲ ಅಭಿವ್ಯಕ್ತಿಸಿ ಬರೆದ ಪುಸ್ತಕ ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಂ ರೂಲ್ (1909). ಇದು ಗಾಂಧೀ ಚಿಂತನದ ಸಾರದಂತಿದೆ. ಸಾಮಾನ್ಯ ವ್ಯಕ್ತಿಯ ಹಕ್ಕುಗಳಿಗೆ ಮಾನ್ಯತೆ ಇರುವ, ಅವನ್ನು ಅವನು ರಕ್ಷಿಸಿಕೊಳ್ಳಲು ಅವಕಾಶವಿರುವ, ಶೋಷಣರಹಿತವಾದ ಸಮಾಜವೇ ತಮ್ಮ ಗುರಿಯೆಂದು ಅವರು ಇದರಲ್ಲಿ ಪ್ರತಿಪಾದಿಸಿದ್ದಾರೆ. ಯಂತ್ರ ನಾಗರಿಕತೆಯನ್ನು ಅವರು ಇಲ್ಲಿ ಖಂಡಿಸಿರುವ ರೀತಿ ಅನುಪಮವಾದ್ದು. ಟಾಲ್ಸ್‍ಟಾಯಿಗೆ ಈ ಪುಸ್ತಕ ತುಂಬ ಪ್ರಿಯವಾಯಿತು.

ಗಾಂಧಿಯವರು 1915ರ ಜನವರಿಯಲ್ಲಿ ಭಾರತಕ್ಕೆ ಬಂದರು. ರವೀಂದ್ರನಾಥ ಠಾಕೂರರು ಅವರನ್ನು ಮಹಾತ್ಮ ಎಂದು ಕರೆದರು. ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ಗಾಂಧಿಯವರು ಒಂದು ವರ್ಷ ಕಾಲ ಯಾವ ಸಾರ್ವಜನಿಕ ಕಾರ್ಯದಲ್ಲೂ ತೊಡಗಲಿಲ್ಲ. ಭಾರತದ ಪರಿಸ್ಥಿತಿಯ ಅಧ್ಯಯನವನ್ನು ಆರಂಭಿಸಿದರು. 1915ರ ಮೇ ತಿಂಗಳಲ್ಲಿ ಅಹಮದಾಬಾದಿನ ಬಳಿ ಸತ್ಯಾಗ್ರಹ ಆಶ್ರಮ ಆರಂಭವಾಯಿತು. ಆಶ್ರಮವಾಸಿಗಳು ಖಾದಿ ಧರಿಸಬೇಕಾಗಿತ್ತು; ಸತ್ಯ ಅಹಿಂಸೆ ಬ್ರಹ್ಮಚರ್ಯಗಳನ್ನು ಪಾಲಿಸುತ್ತ, ಅಸ್ಪøಶ್ಯತಾ ನಿವಾರಣೆ, ಮಾತೃಭಾಷೆಯ ಮೂಲಕ ಶಿಕ್ಷಣ ಮುಂತಾದ ಕಾರ್ಯಗಳಲ್ಲಿ ಪ್ರವೃತ್ತರಾಗುವುದಾಗಿ ಅವರು ವ್ರತ ತೊಟ್ಟಿದ್ದರು.

ಗಾಂಧಿಯವರು ಎರಡು ವರ್ಷಗಳ ಕಾಲ ಭಾರತದಲ್ಲಿ ಸಂಚಾರ ಮಾಡಿದರು. ಒಂದನೆಯ ಮಹಾಯುದ್ಧ ಅಂತಿಮಘಟ್ಟ ಮುಟ್ಟಿದ್ದ ಆ ಕಾಲದಲ್ಲಿ ಬಿಹಾರದ ಚಂಪಾರಣ್‍ನ ರೈತರ ಕರುಣಾಜನಕ ಸ್ಥಿತಿ ಗಾಂಧಿಯವರ ಗಮನ ಸೆಳೆಯಿತು. ಅಲ್ಲಿಯ ರೈತರು ದೀರ್ಘಕಾಲದಿಂದ ಐರೋಪ್ಯ ಮತ್ತು ಭಾರತೀಯ ಭೂಮಾಲೀಕರ ಶೋಷಣೆಗೆ ಒಳಗಾಗಿದ್ದರು. ಗಾಂಧಿಯವರು ರಾಜೇಂದ್ರ ಪ್ರಸಾದರೊಂದಿಗೆ ಅಲ್ಲಿಯ ರೈತರ ಸ್ಥಿತಿಯನ್ನು ಕುರಿತ ವಿಚಾರಣೆಯಲ್ಲಿ ತೊಡಗಿದರು. ಬ್ರಿಟಿಷ್ ಸರ್ಕಾರ ಇದನ್ನು ಸಹಿಸಲಿಲ್ಲ. ಗಾಂಧಿಯವರು ಆ ಜಿಲ್ಲೆಯಿಂದ ಹೊರಗೆ ಹೋಗಬೇಕೆಂಬ ಆಜ್ಞೆ ಜಾರಿಯಾಯಿತು. ಗಾಂಧಿಯವರು ಅದನ್ನುಲ್ಲಂಘಿಸಿದರು. ಭಾರತದಲ್ಲಿ ಮೊಟ್ಟಮೊದಲನೆಯ ಸತ್ಯಾಗ್ರಹವಿದು. ನ್ಯಾಯಾಲಯದಲ್ಲಿ ಅವರ ವಿಚಾರಣೆಯಾಯಿತು. ತಾವು ಆಜ್ಞೋಲ್ಲಂಘನ ಮಾಡಿದ್ದುಂಟೆಂದು ಗಾಂಧಿಯವರು ಒಪ್ಪಿಕೊಂಡರು. ಗವರ್ನರ್ ನಡುವೆ ಪ್ರವೇಶಿಸಿ, ವಿಚಾರಣಾ ಸಮಿತಿಯೊಂದನ್ನು ನೇಮಕ ಮಾಡಿದರು. ಗಾಂಧಿಯವರೂ ಸದಸ್ಯರಾಗಿದ್ದ ಆ ಸಮಿತಿಯ ಶಿಫಾರಸುಗಳ ಮೇರೆಗೆ ಚಂಪಾರಣ್ ರೈತರ ಸುಧಾರಣೆಗಾಗಿ ಕಾಯಿದೆ ಜಾರಿಗೆ ಬಂತು. ಅನಂತರ ಗಾಂಧಿಯವರ ಗಮನ ಅಹಮದಾಬಾದಿನ ಗಿರಿಣಿ ಕಾರ್ಮಿಕರತ್ತ ಹರಿಯಿತು. ಅವರಿಗೆ ನ್ಯಾಯವಾದ ವೇತನ ದೊರಕಬೇಕೆಂದು ಅವರು ಇಪ್ಪತ್ತೊಂದು ದಿನಗಳ ಮುಷ್ಕರವನ್ನು ಸಂಘಟಿಸಿದರು. ಅದೂ ಫಲಪ್ರದವಾಯಿತು.

ಬ್ರಿಟಿಷ್ ನ್ಯಾಯದಲ್ಲಿ ವಿಶೇಷ ನಂಬಿಕೆ ಇಟ್ಟಿದ್ದ ಮಹಾತ್ಮ ಗಾಂಧಿಯವರು ವೈಸ್‍ರಾಯ್ ಲಾರ್ಡ್ ಚೆಮ್ಸ್‍ಫರ್ಡನ ಅಪೇಕ್ಷೆಯಂತೆ ಒಂದನೆಯ ಮಹಾಯುದ್ಧದಲ್ಲಿ ಬ್ರಿಟನಿಗೆ ತಮ್ಮ ಬೆಂಬಲ ನೀಡಿದರು. ಆದರೆ ಅವರ ಈ ನಂಬಿಕೆ ಅಲುಗುವಂಥ ಘಟನೆಯೊಂದು ಅಷ್ಟರಲ್ಲಿ ಸಂಭವಿಸಿತು. ಜನರ ರಾಜಕೀಯ ಆಶೋತ್ತರಗಳನ್ನು ಸರ್ಕಾರ ಈಡೇರಿಸುವ ಬದಲು ಅವನ್ನು ಹತ್ತಿಕ್ಕುವ ಕ್ರಮ ಕೈಗೊಂಡಿತು. ಬ್ರಿಟಿಷ್ ಸರ್ಕಾರಕ್ಕೆ ವಿರುದ್ಧವಾದ ಕಲಾಪಗಳಲ್ಲಿ ತೊಡಗಿರುವರೆಂಬ ಸಂಶಯಕ್ಕೆ ಒಳಗಾದವರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡಲು ಸರ್ಕಾರಕ್ಕೆ ಅಧಿಕಾರ ನೀಡುವ ರೌಲತ್ ಕಾಯಿದೆ ಜಾರಿಗೆ ಬಂದಿತು. ಗಾಂಧಿಯವರು ಇದನ್ನು ಪ್ರತಿಭಟಿಸಿದರು. ಏಪ್ರಿಲ್ 6ರಂದು ಹರತಾಳವನ್ನಾಚರಿಸಬೇಕೆಂದು ಕರೆ ಇತ್ತರು. ಅವರು ದೆಹಲಿಗೆ ಹೋಗುತ್ತಿದ್ದಾಗ ಹಾದಿಯಲ್ಲಿ ದಸ್ತಗಿರಿಯಾದರು. ಇದರಿಂದ ಮುಳಿದ ಜನ ಹಿಂಸಾಚರಣೆ ಮಾಡಿದರು. ಗಾಂಧಿಯವರು ಸತ್ಯಾಗ್ರಹವನ್ನು ನಿಲ್ಲಿಸಬೇಕಾಯಿತು. ಅದೇ ಸಮಯದಲ್ಲಿ ಇನ್ನೊಂದು ಮಹಾ ದುರ್ಘಟನೆ ನಡೆಯಿತು. ಅಮೃತಸರದ ಜಲಿಯನ್‍ವಾಲಾಬಾಗಿನಲ್ಲಿ ಸೇರಿದ್ದ ನಿಶ್ಯಸ್ತ್ರಜನರ ಮೇಲೆ ಸರ್ಕಾರ ಮಷೀನ್-ಗನ್ ಪ್ರಯೋಗಿಸಿತು. ಪಂಜಾಬಿನಲ್ಲಿ ಲಷ್ಕರಿ ಕಾನೂನು ಜಾರಿಗೆ ಬಂತು. ಇದರಿಂದ ಇಡೀ ಭಾರತದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಕ್ರೋಧ ಹಬ್ಬಿತು.

ಈ ಸಮಯದಲ್ಲಿ ಮಹಾತ್ಮ ಗಾಂಧಿಯವರು ಜನಕ್ಕೆ ಅಹಿಂಸೆಯನ್ನೂ ನಿರ್ಭಯವನ್ನೂ ಬೋಧಿಸಿದರು. ಇದಕ್ಕಾಗಿಯೇ ಯಂಗ್ ಇಂಡಿಯ ಎಂಬ ಪತ್ರಿಕೆಯೂ ಗುಜರಾತಿಯಲ್ಲಿ ನವಜೀವನ ಎಂಬ ಪತ್ರಿಕೆಯೂ ಆರಂಭವಾದುವು. (1919).

1920ರಲ್ಲಿ ಆರಂಭವಾದ ಒಂದು ಮುಖ್ಯ ಚಳವಳಿ ಖಿಲಾಫತ್. ತುರ್ಕಿಯ ಕಲೀಪನ ಅಧಿಕಾರಕ್ಕೆ ಚ್ಯುತಿ ಬಾರದಂತೆ ಬ್ರಿಟನಿಗೆ ಒತ್ತಾಯ ಹಾಕಲು ಭಾರತೀಯ ಮುಸ್ಲಿಮರು ಆರಂಭಿಸಿದ್ದ ಚಳವಳಿಯಿದು. ಮುಸ್ಲಿಮರ ಮನಸ್ಸನ್ನು ಕಲಕಿದ್ದ ಈ ಚಳವಳಿಯಲ್ಲಿ ಹಿಂದುಗಳು ಸಹಾನುಭೂತಿಯಿಂದ ಪಾಲ್ಗೊಳ್ಳಬೇಕೆಂಬುದು ಗಾಂಧಿಯವರ ಅಭಿಮತವಾಗಿತ್ತು. ಹಿಂದೂ ಮುಸ್ಲಿಂ ಐಕ್ಯ ಸಾಧನೆ ಇದರ ಉದ್ದೇಶ. ಬ್ರಿಟಿಷ್ ಸಾಮ್ರಾಜ್ಯಾಧಿಕಾರದ ಸಂಕೇತವಾದ ಎಲ್ಲ ಬಿರುದುಗಳನ್ನೂ ಗೌರವಗಳನ್ನೂ ಭಾರತೀಯರು ಹಿಂದಕ್ಕೊಪ್ಪಿಸಬೇಕು. ಶಾಲೆ ಕಾಲೇಜು ನ್ಯಾಯಾಲಯ ವಿಧಾನಸಭೆಗಳನ್ನು ಬಹಿಷ್ಕರಿಸಬೇಕು-ಎಂದು ಗಾಂಧಿಯವರು ಕರೆ ಕೊಟ್ಟರು. ತಮಗೆ ಬ್ರಿಟಿಷ್ ಸತ್ತೆಯಿಂದ ದತ್ತವಾಗಿದ್ದ ಪದಕವೇ ಮುಂತಾದ ಜನರನ್ನು ಅವರು ಹಿಂದುರುಗಿಸಿದರು. ಸತ್ಯಾಗ್ರಹ ಆರಂಭವಾಯಿತು. ಭಾರತದ ಜನರನ್ನು ಅವರು ಅಹಿಂಸಾತ್ಮಕ ಹೋರಾಟದ ಪಥದಲ್ಲಿ ಕೊಂಡೊಯ್ಯಲು ಸತತವಾಗಿ ಯತ್ನಿಸಿದರು. ಚರಖಾ ಅವರ ಸ್ವರಾಜ್ಯದ ಪ್ರತೀಕವಾಯಿತು. ಚರಖಾ ಅನಾರ್ಥಿಕವೆನ್ನಬಹುದು. ಆದರೆ ಇದು ಅತ್ಯಂತ ಅಗ್ಗ. ನಿರುದ್ಯೋಗಿಗಳಿಗೆ ಇದರಿಂದ ಇಷ್ಟಷ್ಟಾದರೂ ಉದ್ಯೋಗ ದೊರಕುತ್ತದೆ. ಭಾರತವನ್ನು ಲ್ಯಾಂಕಷೈರಿನ ಯಂತ್ರದ ಹಿಡಿತದಿಂದ ಬಿಡಿಸಲು ಇದೊಂದೇ ಮಾರ್ಗ. ಬೇರೆಲ್ಲ ವಿದೇಶೀ ವಸ್ತುಗಳನ್ನು ಬಹಿಷ್ಕರಿಸಿದರೂ ವಸ್ತ್ರಕ್ಕಾಗಿ ಅನ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನು ತಪ್ಪಿಸಲಿಕ್ಕಾಗಿ ಇದು ಅಗತ್ಯ-ಎಂಬುದು ಗಾಂಧಿಯವರ ವಾದ. ಅಸಂಖ್ಯಾತ ಜನರಿಗೆ ತಮ್ಮ ಹರಿದ ಬಟ್ಟೆಯ ಬದಲು ಖಾದಿ ಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದ್ದದ್ದನ್ನು ಕಂಡು ಅವರ ಮನಸ್ಸು ಬಲು ನೊಂದಿತು. ಅಂಥವರಿಗೆ ಒಂದು ತುಂಡು ದಟ್ಟಿಯಿದ್ದರೂ ಸಾಕಿತ್ತು. ಹಾಗಿರುವಾಗ ತಾವಾದರೂ ಹೇಗೆ ಮೈ ತುಂಬ ಬಟ್ಟೆ ತೊಟ್ಟುಕೊಂಡಾರು? 1921ರಲ್ಲಿ ಗಾಂಧಿಯವರೂ ತುಂಡುಲುಂಗೀ ಧಾರಿಯಾದರು. ಅಸಹಕಾರ ಚಳವಳಿಯನ್ನು ಬಲಪಡಿಸಿದರು. ಅಸಹಕಾರ ಧಾರ್ಮಿಕ ಹಾಗೂ ನೈತಿಕ ಚಳವಳಿಯಾದರೂ ಸರ್ಕಾರವನ್ನು ಉರುಳಿಸುವುದೇ ಅದರ ಧ್ಯೇಯ-ಎಂದು ಸಾರಿದರು. ಬ್ರಿಟಿಷ್ ಚಕ್ರಾಧಿಪತ್ಯವನ್ನು ಸೈತಾನನ ಪ್ರಭುತ್ವವೆಂದು ಕರೆದರು.

1922ರಲ್ಲಿ ಗಾಂಧಿಯವರು ಗುಜರಾತಿನ ಬಾರ್ಡೋಲಿ ಜಿಲ್ಲೆಯಲ್ಲಿ ಸಾಮೂಹಿಕ ಕರನಿರಾಕರಣೆಯ ಚಳವಳಿಯ ನಾಯಕತ್ವ ವಹಿಸಲು ನಿರ್ಧರಿಸಿದರು. ಆದರೆ ಆ ಸಮಯಕ್ಕೆ ಸರಿಯಾಗಿ ಉತ್ತರ ಪ್ರದೇಶದ ಚೌರಿಚೌರಾದಲ್ಲಿ ಜನರು ಹಿಂಸಾಕಾರ್ಯದಲ್ಲಿ ತೊಡಗಿದರು. ಪೋಲೀಸರ ಮೇಲೆ ಹಲ್ಲೆ ಮಾಡಿದರು. ಜನರಿನ್ನೂ ಅಹಿಂಸಾತ್ಮಕ ಚಳವಳಿಗೆ ಸಿದ್ಧರಾಗಿಲ್ಲವೆಂದು ಗಾಂಧಿಯವರಿಗೆ ಮನವರಿಕೆಯಾಗಿ ಸಾಮೂಹಿಕ ಚಳವಳಿಯನ್ನು ನಿಲ್ಲಿಸಿದರು. ಗಾಂಧಿಯವರ ಈ ನಿರ್ಣಯವನ್ನು ಅನೇಕರು ಒಪ್ಪಲಿಲ್ಲ. ಗಾಂಧಿಯವರು ಪ್ರಾಯಶ್ಚಿತ್ತರೂಪವಾಗಿ ಐದು ದಿನಗಳ ಉಪವಾಸ ಕೈಗೊಂಡರು. 1922ರ ಮಾರ್ಚ್ 13ರಂದು ಸರ್ಕಾರ ಅವರನ್ನು ಬಂಧಿಸಿತು. ಗಾಂಧಿಯವರು ಯಂಗ್ ಇಂಡಿಯ ಪತ್ರಿಕೆಯಲ್ಲಿ ಬರೆದಿದ್ದ ಲೇಖನಗಳು ರಾಜದ್ರೋಹಾತ್ಮಕವೆಂದು ಅದು ಅಪಾದಿಸಿತು. ನ್ಯಾಯಾಲಯ ಅವರಿಗೆ ಆರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಪುಣೆಯ ಕಾರಾಗೃಹದಲ್ಲಿ ಎರಡು ವರ್ಷ ಕಳೆದ ಮೇಲೆ ಗಾಂಧಿಯವರಿಗೆ ಅಂತ್ರಪುಚ್ಛ ವ್ಯಾಧಿಗಾಗಿ ಶಸ್ತ್ರಚಿಕಿತ್ಸೆ ನಡೆಯಬೇಕಾಗಿದ್ದುದರಿಂದ ಅವರು ಬಿಡುಗಡೆ ಹೊಂದಿದರು.

ಆ ವೇಳೆಗೆ ಖಿಲಾಫತ್ ಚಳವಳಿ ವಿಫಲವಾಗಿತ್ತು. ವಿಧಾನ ಮಂಡಲಗಳನ್ನು ಪ್ರವೇಶಿಸಿ ಅಲ್ಲಿಂದ ಸರ್ಕಾರವನ್ನು ವಿರೋಧಿಸಬೇಕೆಂಬವರು ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದ್ದರು. ವಿಧಾನಮಂಡಲ ಪ್ರವೇಶ ಮಾಡಬೇಕೆಂಬುದು ಕಾಂಗ್ರೆಸಿನ ಬಹುಮತಾಭಿಪ್ರಾಯವಾಗಿತ್ತು. ಗಾಂಧಿಯವರು ರಾಜಕೀಯದಿಂದ ದೂರವಾದರು. ಖಾದಿ ಪ್ರಚಾರಕ್ಕೆ ಅವರು ಹೆಚ್ಚು ಗಮನ ನೀಡಿದರು. 1924ರಲ್ಲಿ ಬೆಳಗಾಂವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧಿಯವರು ಅಧ್ಯಕ್ಷರಾಗಿದ್ದರು.

1927ರಲ್ಲಿ-ಆರ್ವಿನ್ ವೈಸ್‍ರಾಯ್ ಆಗಿದ್ದಾಗ-ಭಾರತದ ರಾಜ್ಯಾಂಗ ಸುಧಾರಣೆಗಳಿಗಾಗಿ ಸರ್ ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಆಯೋಗವನ್ನು ನೇಮಿಸಿತು. ಒಬ್ಬನಾದರೂ ಭಾರತೀಯ ಸದಸ್ಯನಿಲ್ಲದ ಆ ಆಯೋಗವನ್ನು ಭಾರತೀಯರು ವಿರೋಧಿಸಿದರು. ಕಾಂಗ್ರೆಸ್ ಬಹಿಷ್ಕಾರ ಹಾಕಿತು. ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಬ್ರಿಟಿಷ್ ಮತ್ತು ಭಾರತೀಯ ಪ್ರತಿನಿಧಿಗಳನ್ನೊಳಗೊಂಡ ದುಂಡುಮೇಜಿನ ಪರಿಷತ್ತೊಂದು ನಡೆಯುವುದಾಗಿ ಪ್ರಕಟನೆ ಹೊರಬಿತ್ತು. ಭಾರತಕ್ಕೆ ಅಧಿರಾಜ್ಯ ಸ್ಥಾನವನ್ನು (ಡೊಮಿನಿಯನ್ ಸ್ಟೇಟಸ್) ನೀಡುವುದಾಗಿ ಪರಿಷತ್ತು ತೀರ್ಮಾನಿಸುವ ಬಗ್ಗೆ ವೈಸ್‍ರಾಯಿಯಿಂದ ಭರವಸೆ ಬರಲಿಲ್ಲ. ಸಂಪೂರ್ಣ ಸ್ವರಾಜ್ಯವೇ ತನ್ನ ಗುರಿಯೆಂದು ಕಾಂಗ್ರೆಸ್ ಘೋಷಿಸಿತು. ಮತ್ತೊಂದು ಮಹಾ ಚಳವಳಿಗಾಗಿ ಸಿದ್ಧತೆಗಳು ನಡೆದುವು.

1930ರ ಮಾರ್ಚ್ 12ರಂದು ಗಾಂಧಿಯವರು ತಮ್ಮ ಸುಪ್ರಸಿದ್ಧ ಉಪ್ಪಿನ ಸತ್ಯಾಗ್ರಹವನ್ನಾರಂಭಿಸಿದರು. 78 ಮಂದಿ ಅನುಯಾಯಿಗಳೊಂದಿಗೆ ಗಾಂಧಿಯವರು ಅಹಮದಾಬಾದಿನಿಂದ 240 ಮೈ. ದೂರದಲ್ಲಿ ಸಮುದ್ರ ದಂಡೆಯಲ್ಲಿರುವ ದಂಡಿಗೆ ಹೊರಟರು. ಉಪ್ಪಿನ ತಯಾರಿಕೆಯಲ್ಲಿ ಸರ್ಕಾರ ಹೊಂದಿದ್ದ ಏಕಸ್ವಾಮ್ಯವನ್ನು ವಿರೋಧಿಸಿ ಕಾನೂನು ಭಂಗ ಮಾಡುವುದು ಅವರ ಉದ್ದೇಶ. ಏಪ್ರಿಲ್ 6ರಂದು ಅವರು ದಂಡಿಯನ್ನು ತಲಪಿ, ಸಮುದ್ರಸ್ನಾನ ಮಾಡಿ ನೈಸರ್ಗಿಕ ಉಪ್ಪನ್ನು ಕೈಯಲ್ಲಿ ಹಿಡಿದರು. ನಾಡಿನಾದ್ಯಂತ ಜನರು ಗಾಂಧಿಯವರ ಕರೆಯಂತೆ ಸತ್ಯಾಗ್ರಹವನ್ನಾಚರಿಸಿದರು. ಸುಮಾರು ಒಂದು ಲಕ್ಷ ಜನ ದಸ್ತಗಿರಿಯಾದರು. ಮೇ 4ರಂದು ಗಾಂಧಿಯವರ ದಸ್ತಗಿರಿಯಾಯಿತು. 1931ರ ಜನವರಿ 26ರ ವರೆಗೂ ಸರ್ಕಾರ ಅವರನ್ನು ಸೆರೆಯಲ್ಲಿಟ್ಟಿತ್ತು. ಸತ್ಯಾಗ್ರಹವನ್ನು ಅಂತ್ಯಗೊಳಿಸುವ ಬಗ್ಗೆ ಮಾರ್ಚ್ 5ರಂದು ಗಾಂಧಿ-ಆರ್ವಿನ್ ಒಪ್ಪಂದಕ್ಕೆ ಸಹಿಯಾಯಿತು. ಸತ್ಯಾಗ್ರಹಿಗಳು ಬಿಡುಗಡೆಯಾದರು. ಕೆಲವೊಂದು ಮಿತಿಗಳೊಳಗೆ, ಸ್ವಂತ ಉಪಯೋಗಕ್ಕಾಗಿ ಉಪ್ಪನ್ನು ತಯಾರಿಸಲು ಅವಕಾಶ ಲಭ್ಯವಾಯಿತು.

1931ರಲ್ಲಿ ಲಂಡನಿನಲ್ಲಿ ನಡೆದ ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಗಾಂಧಿಯವರು ಪ್ರಯಾಣ ಬೆಳೆಸಿದರು. ಅವರ ಭೇಟಿಯಿಂದಾಗಿ ಇಂಗ್ಲೆಂಡ್-ಭಾರತಗಳ ಸಾಮಾನ್ಯ ಜನಗಳ ನಡುವೆ ಹೆಚ್ಚು ನಿಕಟ ಬಾಂಧವ್ಯ ಬೆಳೆಯಿತು. ಆದರೆ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರ ವಿಶೇಷ ಪ್ರಾಮುಖ್ಯ ನೀಡಿತು. ಭಾರತೀಯರಿಗೆ ಸ್ವಯಮಾಡಳಿತ ನೀಡುವುದಕ್ಕಿಂತ ಇದಕ್ಕೇ ಆದ್ಯ ಗಮನ ನೀಡುವುದಕ್ಕೆ ಗಾಂಧಿಯವರು ಒಪ್ಪಲಿಲ್ಲ. ಸರ್ಕಾರ ಅನಾವಶ್ಯಕವಾಗಿ ಭಾರತದ ಜನಗಳ ನಡುವೆ ಕೋಮುವಾರು ಭೇದಭಾವವನ್ನು ಬೆಳೆಸುತ್ತಿದೆಯೆಂಬ ವಿಷಯ ಅವರಿಗೆ ಮನವರಿಕೆಯಾಯಿತು. ಬ್ರಿಟನ್ ತನ್ನ ಅಧಿಕಾರವನ್ನು ಹಿಂದೆಗೆದುಕೊಂಡರೆ ಕೋಮುವಾರು ಸಮಸ್ಯೆಗಳೆಲ್ಲ ತಾವಾಗಿಯೇ ಬಗೆಹರಿದಾವೆಂಬುದು ಅವರ ಭಾವನೆ. ಆದರೆ ಅವರ ವಾದ ಫಲಿಸಲಿಲ್ಲ. ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿ ಹಿಡಿಯುವವರ ಸಂಖ್ಯೆಯೇ ಹೆಚ್ಚಾಗಿರುವಂತೆ ಸರ್ಕಾರ ತಂತ್ರ ಹೂಡಿತ್ತು.

1931ರ ಕೊನೆಯಲ್ಲಿ ಗಾಂಧಿಯವರು ಹಿಂದಿರುಗಿದಾಗ ಭಾರತದ ರಾಜಕೀಯ ಪರಿಸ್ಥಿತಿ ತೀವ್ರವಾಗಿತ್ತು. ಹಲವು ನಾಯಕರು ಬಂಧಿತರಾಗಿದ್ದರು. ನಿಷೇಧಾಜ್ಞೆಗಳು ಜಾರಿಯಲ್ಲಿದ್ದುವು. ಆಗ ವೈಸ್‍ರಾಯ್ ಆಗಿದ್ದ ವಿಲಿಂಗ್ಡನನಿಗೆ ಗಾಂಧಿಯವರು ಪತ್ರ ಬರೆದರು. ಪರಿಸ್ಥಿತಿ ಕೈಮೀರದಂತೆ ಯತ್ನಿಸಬೇಕೆಂದೂ ಅನಿವಾರ್ಯವಾದರೆ ಕಾಂಗ್ರೆಸ್ಸು ಸತ್ಯಾಗ್ರಹ ಹೋರಾಟವನ್ನು ಮತ್ತೆ ಆರಂಭಿಸಲಾಗುವುದೆಂದೂ ಎಚ್ಚರಿಸಿದರು.

ಆದರೆ ಸರ್ಕಾರ ಲಕ್ಷಿಸಲಿಲ್ಲ. 1932ರ ಜನವರಿ 4ರಂದು ಗಾಂಧಿಯವರು ದಸ್ತಗಿರಿಯಾದರು. ಪಟೇಲರನ್ನೂ ಅವರನ್ನೂ ಸರ್ಕಾರ ಎರವಾಡ ಸೆರೆಮನೆಯಲ್ಲಿಟ್ಟಿತು. ಹರಿಜನರನ್ನು ಪ್ರತ್ಯೇಕಗೊಳಿಸಲು ಸರ್ಕಾರ ಕೈಗೊಳ್ಳಲಿದ್ದ ಕ್ರಮವೊಂದನ್ನು ವಿರೋಧಿಸಿ ಭಾರತ ಕಾರ್ಯದರ್ಶಿಗೆ ಗಾಂಧಿಯವರು ಪತ್ರ ಬರೆದರು. ಗಾಂಧಿಯವರ ಅಭಿಪ್ರಾಯಗಳನ್ನು ಸರ್ಕಾರ ಕಡೆಗಣಿಸಿತು. ಸೆಪ್ಟೆಂಬರ್ 20ರಂದು ಗಾಂಧಿಯವರು ಉಪವಾಸ ಆರಂಭಿಸಿದರು. ಅನೇಕ ದೇವಸ್ಥಾನಗಳು ಹರಿಜನರಿಗೆ ತೆರೆದುವು. ಐದು ದಿನಗಳ ಅನಂತರ ಹಲವು ಒತ್ತಾಯದಂತೆ ಗಾಂಧಿಯವರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು.

ಅಸ್ಪøಶ್ಯರೆನಿಸಿಕೊಂಡ ಹರಿಜನರ ಹಿತಸಾಧನೆಗೆ ಗಾಂಧಿಯವರು ಪಣತೊಟ್ಟರು. ಅವರಿಗೆ ಹರಿಜನರೆಂಬ ಹೆಸರು ಕೊಟ್ಟವರು ಗಾಂಧಿಯವರೇ. 1933ರಲ್ಲಿ ಅವರು ಹರಿಜನ ಎಂಬ ಹೆಸರಿನ ವಾರಪತ್ರಿಕೆಯೊಂದನ್ನು ಸ್ಥಾಪಿಸಿದರು. ಮುಂದೆ ಇದು ಹತ್ತು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು.

ಗಾಂಧಿಯವರು ವರ್ಧಾದಲ್ಲಿ ಸ್ಥಾಪಿಸಿದ ಆಶ್ರಮದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಪಡೆದರು. ಆದರೆ ಆ ಜೀವ ದೀರ್ಘಕಾಲ ವಿಶ್ರಾಂತಿ ಬಯಸಲಿಲ್ಲ. ಹರಿಜನೋದ್ಧಾರಕ್ಕಾಗಿ ದೇಶಾದ್ಯಂತ ಅವರು ಸಂಚಾರ ಕೈಗೊಂಡು ಹಣ, ಒಡವೆ, ಸಂಗ್ರಹಿಸಿದರು.

ಕಾಂಗ್ರೆಸಿನ ಹಾದಿಯ ಬಗ್ಗೆ ಅವರಿಗೆ ಆ ವೇಳೆಗಾಗಲೇ ಅತೃಪ್ತಿ ಮೂಡಿತ್ತು. ಗಾಂಧಿಯವರ ದೃಷ್ಟಿಯಲ್ಲಿ ಅಹಿಂಸೆ ಒಂದು ವ್ರತ. ಆದರೆ ಕಾಂಗ್ರೆಸ್ಸು ಅದನ್ನು ಹಾಗೆಂದು ಪರಿಗಣಿಸಿರಲಿಲ್ಲ. ಅದರ ದೃಷ್ಟಿಯಲ್ಲಿ ಅದೊಂದು ಉಪಾಯ; ಸ್ವಾತಂತ್ರ್ಯ ಗಳಿಸಲು ಅದೊಂದು ಸಾಧನ ಮಾತ್ರ. ಗಾಂಧಿಯವರು ಕಾಂಗ್ರೆಸಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಗ್ರಾಮೋದ್ಧಾರ ಕಾರ್ಯಕ್ಕೇ ತಮ್ಮ ಸಮಯವನ್ನು ಮುಡಿಪಾಗಿಟ್ಟರು. ಅಖಿಲ ಭಾರತ ಗ್ರಾಮ ಕೈಗಾರಿಕಾ ಸಂಘ ಸ್ಥಾಪಿತವಾಯಿತು. ಅವರು ವರ್ಧಾ ಬಳಿಯ ಸೇವಾಗ್ರಾಮದಲ್ಲಿ ನೆಲಸಿದರು.

1935ರ ಕಾಯಿದೆಯ ಪ್ರಕಾರ 1937ರಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ನಡೆದು ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಿತು. 11 ಪ್ರಾಂತ್ಯಗಳ ಪೈಕಿ ಒಂಬತ್ತರಲ್ಲಿ ಕಾಂಗ್ರೆಸ್ ಸರ್ಕಾರಗಳು ಸ್ಥಾಪಿತವಾದುವು. ಪಾನನಿರೋಧ, ಮೂಲ ಶಿಕ್ಷಣ, ರೈತರ ಋಣ ಪರಿಹಾರ, ಗ್ರಾಮಹಿತರಕ್ಷಣೆ-ಇವು ಕಾಂಗ್ರೆಸ್ ಸರ್ಕಾರಗಳ ಮುಂದೆ ಗಾಂಧಿಯವರು ಇಟ್ಟ ಗುರಿಗಳು.

1939ರ ಸೆಪ್ಟೆಂಬರಿನಲ್ಲಿ ಎರಡನೆಯ ಮಹಾಯುದ್ಧ (ನೋಡಿ- ಎರಡನೆಯ-ಮಹಾಯುದ್ಧ) ಆರಂಭವಾದಾಗ ಬ್ರಿಟಿಷ್ ಸರ್ಕಾರಕ್ಕೆ ತಮ್ಮ ನೈತಿಕ ಬೆಂಬಲ ನೀಡಲು ಗಾಂಧಿಯವರು ಸಿದ್ಧವಾಗಿದ್ದರು. ಈ ಬಿಕ್ಕಟ್ಟಿನ ಕಾಲದಲ್ಲಿ ಬ್ರಿಟನನ್ನು ತೊಡಕಿಗೆ ಸಿಲುಕಿಸುವ ಯಾವ ಕ್ರಮಕ್ಕೂ ಗಾಂಧಿಯವರು ಸಿದ್ಧವಿರಲಿಲ್ಲ. ಜರ್ಮನಿ ಜಪಾನ್‍ಗಳ ಸೈನಿಕ ನೆರವು ಪಡೆದು ಭಾರತದ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕೆಂದು ಸುಭಾಷ್ ಚಂದ್ರ ಭೋಸರ ವಾದ ಅವರಿಗೆ ಒಪ್ಪಿಗೆಯಾಗಲಿಲ್ಲ. ಆದರೆ ಯುದ್ಧ ಮುಗಿದ ಮೇಲೆ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಬ್ರಿಟನಿನ ಯುದ್ಧಕಾರ್ಯಕ್ಕೆ ಸಹಕಾರ ನೀಡುವುದೆಂಬುದು ಕಾಂಗ್ರೆಸ್ ಅಭಿಪ್ರಾಯವಾಗಿತ್ತು. ಬ್ರಿಟಿಷ್ ಸರ್ಕಾರದಿಂದ ಅಂಥ ಭರವಸೆಯೇನೂ ಬರಲಿಲ್ಲ.

1940ರಲ್ಲಿ ಗಾಂಧಿಯವರು ವೈಯಕ್ತಿಕ ಸತ್ಯಾಗ್ರಹವನ್ನಾರಂಭಿಸಿದರು. ಗಾಂಧಿಯವರ ಕರೆಯಂತೆ ಸತ್ಯಾಗ್ರಹ ಮಾಡಿ ಕಾರಾಗೃಹ ಹೊಕ್ಕವರ ಪೈಕಿ ವಿನೋಬಾ ಭಾವೆ ಮೊದಲಿಗರು. 1941ರ ಅಂತ್ಯದ ವೇಳೆಗೆ ಯುದ್ಧದಲ್ಲಿ ಬ್ರಿಟನಿನ ಸ್ಥಿತಿ ಆತಂಕಕಾರಿಯಾಗಿ ಪರಿಣಮಿಸಿತ್ತು. ಜಪಾನೀಯರ ಆಕ್ರಮಣಕಾರ್ಯ ತೀವ್ರವಾಗಿತ್ತು. ಸರ್ಕಾರ ಸತ್ಯಾಗ್ರಹಿಗಳನ್ನು ಸೆರೆಯಿಂದ ಬಿಟ್ಟಿತು. ಭಾರತದ ರಾಜಕೀಯ ಸಮಸ್ಯೆಯ ಇತ್ಯರ್ಥ ಮಾಡುವುದು ಬ್ರಿಟನಿನ ಹಿತದಿಂದಲೇ ಅವಶ್ಯವಾಗಿತ್ತು. ಬ್ರಿಟಿಷ್ ಸಚಿವ ಸ್ಟ್ಯಾಫರ್ಡ್ ಕ್ರಿಪ್ಸ್ 1942ರ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಸಲಹೆಹೊಂದನ್ನು ತಂದ. ಗಾಂಧಿಯವರಿಗೆ ಅದು ಪರಿಶೀಲನಯೋಗ್ಯವೆನಿಸಲಿಲ್ಲ. ಭಾರತ ಬಿಟ್ಟು ತೊಲಗಿ ಎಂಬ ಚಳವಳಿಯ ಪರಿಕಲ್ಪನೆ ಗಾಂಧಿಯವರಲ್ಲಿ ಮೂಡಿಬಂತು. ಹರಿಜನದಲ್ಲಿ ಈ ಬಗ್ಗೆ ಲೇಖನಗಳು ಪ್ರಕಟವಾದುವು. ಆ ವರ್ಷ ಆಗಸ್ಟ್ 8ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಈ ಚಳವಳಿಯನ್ನು ಹೂಡಲು ನಿರ್ಣಯ ಮಾಡಿತು. ಮರುದಿನ ಸರ್ಕಾರ ಗಾಂಧಿಯವರನ್ನೂ ಅವರ ಅನುಯಾಯಿಗಳನ್ನೂ ಕಾಂಗ್ರೆಸ್ಸಿನ ಎಲ್ಲ ಮುಖಂಡರನ್ನೂ ದಸ್ತಗಿರಿ ಮಾಡಿತು. ಗಾಂಧಿಯವರ ಕಾರ್ಯದರ್ಶಿ ಮಹಾದೇವ ದೇಸಾಯಿ, ಪತ್ನಿ ಕಸ್ತೂರ ಬಾ ಇವರು ಗಾಂಧಿಯವರೊಂದಿಗೆ ಪುಣೆಯಲ್ಲಿ ಬಂಧನಕ್ಕೊಳಪಟ್ಟರು. ಇವರಿಬ್ಬರೂ ಸೆರೆಮನೆಯಲ್ಲೇ ತೀರಿಕೊಂಡರು. 1943ರ ಜನವರಿಯಲ್ಲಿ ಗಾಂಧಿಯವರು ವೈಸ್‍ರಾಯ್ ಲಿನ್‍ಲಿತ್‍ಗೋಗೆ ಒಂದು ಪತ್ರ ಬರೆದು, ಸರ್ಕಾರದ ಹಿಂಸಾಚಾರವನ್ನು ಖಂಡಿಸಿದರು. ಫೆಬ್ರುವರಿ 10 ರಿಂದ 21. ದಿನಗಳ ಕಾಲ ಉಪವಾಸ ಕೈಗೊಂಡರು. 1944ರ ಮೇ 6ರಂದು ಸರ್ಕಾರ ಅವರನ್ನು ಆರೋಗ್ಯನಿಮಿತ್ತ ಬಿಡುಗಡೆ ಮಾಡಿತು.

1946ರಲ್ಲಿ ಎರಡನೆಯ ಮಹಾಯುದ್ಧ ಮುಗಿಯಿತು. ಬ್ರಿಟನಿನಲ್ಲಿ ಕಾರ್ಮಿಕ ಸರ್ಕಾರ ಸ್ಥಾಪಿತವಾಯಿತು. ಸಂಪುಟ ನಿಯೋಗವೊಂದು ಭಾರತಕ್ಕೆ ಬಂತು. ಪಾಕಿಸ್ತಾನದ ನಿರ್ಮಾಣವಾಗಬೇಕೆಂಬುದು ಮಹಮ್ಮದ್ ಆಲಿಜಿನ್ನಾ ಬೇಡಿಕೆಯಾಗಿತ್ತು. ದ್ವಿರಾಷ್ಟ್ರ ಸಿದ್ಧಾಂತವನ್ನು ಗಾಂಧಿಯವರು ಪ್ರಬಲವಾಗಿ ವಿರೋಧಿಸಿದರು.

ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಕಾರವನ್ನು ಕೊನೆಗೊಳಿಸುವರೆಂದು ಆ ನಿಯೋಗ ಸಾರಿತು. ಅಖಂಡ ಭಾರತ ಸರ್ಕಾರ ಸ್ಥಾಪನೆಯಾಗಲೆಂಬುದು ಅವರ ಸಲಹೆ.

ಮುಸ್ಲಿಂ ಲೀಗ್ ಈ ಸಲಹೆಗೆ ತನ್ನ ಬೆಂಬಲ ನೀಡಲು ನಿರಾಕರಿಸಿತು. ನೇರ ಕಾರ್ಯಾಚರಣೆ ಕೈಗೊಳ್ಳಲು ತೀರ್ಮಾನಿಸಿತು. ಅಂತೂ ಕೊನೆಗೆ 1946ರ ಸೆಪ್ಟೆಂಬರ್ 2ರಂದು ನೆಹರೂ ಅವರ ನಾಯಕತ್ವದಲ್ಲಿ ತಾತ್ಕಾಲಿಕ ಸರ್ಕಾರವೊಂದು ಸ್ಥಾಪಿತವಾಯಿತು. ಮುಸ್ಲಿಂ ಲೀಗ್ ಆಗಸ್ಟ್ 16ರಂದು ನೇರ ಕಾರ್ಯಾಚರಣೆ ಆರಂಭಿಸಿದ್ದರ ಪರಿಣಾಮವೆಂದರೆ ಕೋಮು ಗಲಭೆ. ಹಲವು ಎಡೆಗಳಿಗೆ ಗಲಭೆಗಳು ಹಬ್ಬಿದುವು. 1946ರ ಕೊನೆಯಲ್ಲಿ ಗಾಂಧಿಯವರು ಪೂರ್ವ ಬಂಗಾಳದ ಹಳ್ಳಿಗಳಲ್ಲಿ ಸಂಚರಿಸುತ್ತ ಜನಕ್ಕೆ ಪ್ರೀತಿ ಅಹಿಂಸೆಗಳ ಸಂದೇಶವನ್ನು ಸಾರಿದರು. ಬಿಹಾರದಲ್ಲೂ ಅವರು ಸಂಚಾರ ಕೈಗೊಂಡರು.

1947ರ ಜೂನ್ 3ರಂದು ಬ್ರಿಟನ್ ಭಾರತವಿಭಜನೆಯ ಯೋಜನೆಯನ್ನು ಘೋಷಿಸಿತು. ಕಾಂಗ್ರೆಸ್-ಮುಸ್ಲಿಂ ಲೀಗ್‍ಗಳು ಅದನ್ನೊಪ್ಪಿದುವು. ಆದರೆ ಗಾಂಧಿಯವರು ಅದನ್ನೊಂದು ದುರಂತವೆಂದು ಕರೆದರು. ಮೂವತ್ತೆರಡು ವರ್ಷಗಳ ಕಾರ್ಯವೆಲ್ಲ ವ್ಯರ್ಥವಾಯಿತೆಂಬುದು ಗಾಂಧಿಯವರ ಭಾವನೆ. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದಾಗ ಅವರು ಕಲ್ಕತ್ತದಲ್ಲಿ ಹಿಂಸೆಯಿಂದ ನೊಂದ ಜನರ ನಡುವೆ ಇದ್ದರು. ಅಶಾಂತಿಯನ್ನು ಕಂಡು ಅವರು ಪರಿತಪಿಸುತ್ತಿದ್ದರು. ಆ ದಿನವಿಡೀ ಅವರು ಉಪವಾಸ ಪ್ರಾರ್ಥನೆಗಳಲ್ಲಿ ನಿರತವಾಗಿದ್ದರು. ಅವರು ಅಂದು ದೇಶಕ್ಕೆ ಯಾವ ಸಂದೇಶವನ್ನೂ ನೀಡಲಿಲ್ಲ. ಕೆಲವು ದಿನಗಳಲ್ಲಿ ಕಲ್ಕತ್ತದಲ್ಲಿ ಮತ್ತೆ ಭೀಕರ ಗಲಭೆಗಳು ಸಂಭವಿಸಿದುವು. ಗಾಂಧಿಯವರು ಅನಿರ್ದಿಷ್ಟ ಕಾಲ ಉಪವಾಸ ಕೈಕೊಂಡರು. ಗಲಭೆಗಳು ನಿಂತುವು.

ಆದರೂ ಪರಿಸ್ಥಿತಿ ಶಾಂತವಾಗಿರಲಿಲ್ಲ. ಭಾರತ-ಪಾಕಿಸ್ತಾನಗಳಲ್ಲಿಯ ಅಲ್ಪಸಂಖ್ಯಾತರಿಗೆ ನೆಮ್ಮದಿಯಿರಲಿಲ್ಲ. ಭೀತರಾದ ಹಿಂದೂ ಮುಸ್ಲಿಂ ನಿರಾಶ್ರಿತರು ಅಗಾಧ ಸಂಖ್ಯೆಯಲ್ಲಿ ಗಡಿ ದಾಟುತ್ತಿದ್ದರು. ಅಲ್ಪ ಸಂಖ್ಯಾತರ ಹಿತ ರಕ್ಷಿಸುವುದು ಉಭಯ ರಾಷ್ಟ್ರಗಳ ಹೊಣೆಯೆಂದು ಗಾಂಧಿಯವರು ಹೇಳಿದರು. 1948ರ ಜನವರಿ 13ರಂದು ಗಾಂಧಿಯವರು ಇನ್ನೊಮ್ಮೆ ಉಪವಾಸ ಆರಂಭಿಸಿದರು. ಮತೀಯ ಸೌಹಾರ್ದ ಬೆಳೆಸುವುದಾಗಿ ಮುಖಂಡರು ಒಪ್ಪಂದ ಮಾಡಿಕೊಂಡಾಗಲೇ ಅವರು ಉಪವಾಸವನ್ನು ಕೊನೆಗೊಳಿಸಿದ್ದು.

ಗಾಂಧಿಯವರ ದೃಷ್ಟಿಯಿಂದ ಅತೃಪ್ತರಾದ ಕೆಲವರು ಅವರ ಕೊಲೆಗೆ ಪ್ರಯತ್ನಿಸುತ್ತಿದ್ದರು. ಜನವರಿ 20ರಂದು ಅವರ ಪ್ರಾರ್ಥನಾಸಭೆಯಲ್ಲಿ ಒಬ್ಬ ಯುವಕ ಬಾಂಬೊಂದನ್ನು ಎಸೆದ. ಅದರಿಂದ ಪ್ರಾಣಾಪಾಯವಾಗಲಿಲ್ಲ. ಆ ಯುವಕನ ವಿಚಾರದಲ್ಲಿ ಗಾಂಧಿಯವರು ದ್ವೇಷ ವ್ಯಕ್ತಪಡಿಸಲಿಲ್ಲ.

ಗಾಂಧಿಯವರ ಕೊನೆಯ ದಿನ ಬಳಿಸಾರಿತು. 1948ರ ಜನವರಿ 30ರಂದು ಸಂಜೆ 5 ಗಂಟೆ ದಾಟಿತ್ತು. ಗಾಂಧಿಯವರು ಎಂದಿನಂತೆ ಪ್ರಾರ್ಥನಾಸಭೆಯ ಮೆಟ್ಟಲು ಹತ್ತುತ್ತಿದ್ದರು. ನಾಥುರಾಂ ವಿನಾಯಕ ಗೋಡ್ಸೆಯೆಂಬ ಹಿಂದೂವೊಬ್ಬ ಗುಂಪಿನಿಂದ ಮುನ್ನುಗ್ಗಿ ಗಾಂಧಿಯವರತ್ತ ಮೂರು ಬಾರಿ ಗುಂಡು ಹಾರಿಸಿದ. ಹೇ ರಾಂ ಎನ್ನುತ್ತ ಗಾಂಧಿಯವರು ಕೆಳಗೆ ಬಿದ್ದರು. ಅವರ ಇಹಲೋಕ ಯಾತ್ರೆ ಪೂರೈಸಿತ್ತು.

ಸಮಕಾಲೀನ ಜಗತ್ತಿನ ಮೇಲೆ ಮಾತ್ರವಲ್ಲದೆ ಭವಿಷ್ಯತ್ತಿನ ಮೇಲೆ ಕೂಡ ತಮ್ಮ ಪ್ರಭಾವದ ಮುದ್ರೆಯೊತ್ತಿದ ವ್ಯಕ್ತಿ ಗಾಂಧೀಜಿ. ಅವರು ಸತ್ಯ ಅಹಿಂಸೆಗಳ ಪ್ರವಾದಿ. ಗುರಿ ಶುದ್ಧವಾಗಿದ್ದರೆ ಸಾಲದು; ಅದನ್ನು ನಿಲುಕುವ ಮಾರ್ಗವೂ ಶುದ್ಧವಾಗಿರಬೇಕು-ಎಂದು ಅವರು ಹೇಳಿದರು. ಮಾರ್ಗವೆಂತೋ ಗುರಿಯಂತು-ಎಂದರು. ಜನರು ತಮ್ಮ ಹಕ್ಕುಗಳಿಗಾಗಿ ಹೊಡೆದಾಡುವಾಗ ಜೀವನದ ಬಗ್ಗೆ ಅಗೌರವದಿಂದ ವರ್ತಿಸಬಾರದು-ಎಂಬುದು ಅವರ ಬೋಧನೆ.

ಗಾಂಧಿಯವರು ಜನತೆಯ ನಾಯಕ. ರಾಜಕೀಯ ಸಾಮಾಜಿಕ ಬಂಡಾಯಗಾರ. ತಮ್ಮ ದೇಶವನ್ನು ಸ್ವಾತಂತ್ರ್ಯದ ಗುರಿ ಮುಟ್ಟಿಸುವ ಪ್ರಯತ್ನವೇ ಅವರ ಅಭಿವ್ಯಕ್ತಿಗೆ ಮಾಧ್ಯಮವಾಯಿತು. ತನ್ಮೂಲಕವಾಗಿ ಅವರು ಇಡೀ ಮಾನವತೆಯನ್ನೇ ಪ್ರೀತಿಸಿದರು.

ಜೈನ ವೈಷ್ಣವ ಧರ್ಮಗಳಿಂದ ಗಾಂಧಿಯವರು ತುಂಬ ಪ್ರಭಾವಿತರಾಗಿದ್ದರು. ಮಾಕ್ರ್ಸ್ ಡಾರ್ವಿನ್ ಸಿದ್ಧಾಂತಗಳು ಅತ್ಯಂತ ಪ್ರಚಾರದಲ್ಲಿದ್ದ ಕಾಲದಲ್ಲಿ ಅವರು ಲಂಡನಿನಲ್ಲಿ ವಿದ್ಯಾರ್ಥಿಯಾಗಿದ್ದರು. ಎಪ್ಪತ್ತೈದರ ಪ್ರಾಯದಲ್ಲಿ ಅವರು ಮಾಕ್ರ್ಸ್‍ನ ಕ್ಯಾಪಿಟಲ್ ಉದ್ಗ್ರಂಥ ಬೋಧಿಸಿದರೂ ಅವರು ಮೂಲತಃ ಹಿಂದುವಾಗಿ ಉಳಿದರು. ಸನಾತನಧರ್ಮದ ಉತ್ಕøಷ್ಟ ಉತ್ಪನ್ನ ಗಾಂಧಿಯವರು. ತಮ್ಮ ಇಡೀ ಬಾಳನ್ನೇ ತಮ್ಮ ವಿಚಾರದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡ ಗಾಂಧಿಯವರು ಸ್ವಂತ ಅನುಭವದಿಂದ ಕಂಡುಕೊಳ್ಳದ ಯಾವುದನ್ನೂ ಬೋಧಿಸಲಿಲ್ಲ. ದೇವರು ಸತ್ಯ ಮಾತ್ರವಲ್ಲ, ಸತ್ಯವೇ ದೇವರು-ಎಂದು ಅವರು ಪ್ರತಿಪಾದಿಸಿದರು. ಇಷ್ಟಾದರೂ ಅವರು ಅತ್ಯಂತ ವಿನಯಶೀಲರು. ತಮಗೆ ಯಾವ ದೈವಿಕ ಶಕ್ತಿಯೂ ಇಲ್ಲವೆಂದೇ ಅವರು ಸಾರಿದರು. ಗಾಂಧಿಯವರು ಕಣ್ಮರೆಯಾದರೂ ಅವರ ವಿಚಾರಗಳ ಪ್ರಭಾವ ಮಾತ್ರ ನಿಧಾನವಾದರೂ ಖಂಡಿತವಾಗಿಯೂ ಅಗೋಚರವಾಗಿಯೂ ಜಗತ್ತನ್ನೆಲ್ಲ ವ್ಯಾಪಿಸುತ್ತಿದೆ. ದೇಶವಿದೇಶಗಳಲ್ಲಿ ಅವರ ಬೋಧನೆಯನ್ನು ನಂಬಿ ನಡೆವ ಹಲವಾರು ಮಂದಿ ಇದ್ದಾರೆ. (ಜಿ.ವಿ.ಎನ್.)

ಗಾಂಧಿಯವರ ಸಾಧನೆಗಳು, ಸಿದ್ಧಿ ಮತ್ತು ಪ್ರಭಾವಗಳ ಬಗ್ಗೆ ಈ ಲೇಖನಗಳಲ್ಲಿ ಕೆಳಕಂಡ ಶೀರ್ಷಿಕೆಗಳಲ್ಲಿ ವಿಷಯ ಸಂಗ್ರಹ ಮಾಡಲಾಗಿದೆ : ಗಾಂಧೀ ತತ್ತ್ವದರ್ಶನ; ಗಾಂಧಿಯವರ ರಾಜನೀತಿ; ಗಾಂಧೀ ಸಮಾಜದರ್ಶನ; ಗಾಂಧೀ ಸಾಹಿತ್ಯ; ಗಾಂಧೀ ಅರ್ಥಶಾಸ್ತ್ರ; ಗಾಂಧಿಯವರ ಶಿಕ್ಷಣ ತತ್ತ್ವದೃಷ್ಟಿ; ಗಾಂಧೀ ದೃಷ್ಟಿಯಲ್ಲಿ ಸ್ವರಾಜ್ಯ; ಗಾಂಧೀ ದೃಷ್ಟಿಯಲ್ಲಿ ಸತ್ಯಾಗ್ರಹ ಗಾಂಧೀ ಮತ್ತು ಅಹಿಂಸೆ; ಗಾಂಧೀಯವರ ಅನಾಸಕ್ತಿಯೋಗ; ಗಾಂಧೀ ಆಶ್ರಮಗಳು.

ಗಾಂಧಿಯವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಾಮಾನ್ಯ ವಿಷಯಸೂಚಿಯನ್ನು ನೋಡತಕ್ಕದ್ದು.

ಗಾಂಧೀ ತತ್ತ್ವದರ್ಶನ: ಗಾಂಧಿಯವರ ವಿಪುಲವಾದ ಬರೆವಣಿಗೆ, ಮಾತುಕತೆ, ಭಾಷಣಗಳು, ಸತ್ಯಾನ್ವೇಷಣೆಗಾಗಿ ಮುಡುಪಿಟ್ಟ ಅವರ ಜೀವನ-ಇವುಗಳಲ್ಲಿ ಸ್ಫುರಿಸುವ ಅವರ ತತ್ತ್ವದರ್ಶನವನ್ನು ಇಲ್ಲಿ ಸಂಗ್ರಹವಾಗಿ ತಿಳಿಸಿದೆ.

ಗಾಂಧಿಯವರ ತತ್ತ್ವದೃಷ್ಟಿ ಕೇವಲ ತಾತ್ತ್ವಿಕವಾಗಿರದೆ ಅತ್ಯಂತ ಪ್ರಾಯೋಗಿಕವಾಗಿತ್ತು. ಜೀವನವನ್ನು ಕುರಿತ ಸತ್ಯಾನ್ವೇಷಣೆ ಮತ್ತು ಅತ್ಯುನ್ನತ ಆದರ್ಶಗಳಿಂದ ಪ್ರಭಾವಿತವಾದ ಅವರ ದರ್ಶನವನ್ನು ಪ್ರಾಯೋಗಿಕ ಧ್ಯೇಯವಾದವೆನ್ನಬಹುದು.

ದರ್ಶನಗಳಲ್ಲಿ ಪ್ರಧಾನವಾದ ವಿಷಯಗಳು ಜೀವ, ಜಗತ್ತು ಮತ್ತು ಈಶ್ವರ. ಇವುಗಳನ್ನು ಕುರಿತು ಗಾಂಧಿ ತಮ್ಮ ಅಭಿಪ್ರಾಯಗಳನ್ನು ಅಲ್ಲಲ್ಲಿ ವಿವರಿಸಿದ್ದಾರೆ. ಈಶ್ವರ ಸತ್ಯಸ್ವರೂಪನೆಂದು ತಾತ್ತ್ವಿಕರು ವರ್ಣಿಸುತ್ತಾರೆ. ಆದರೆ ಗಾಂಧಿ ಈಶ್ವರ ಸತ್ಯ ಎನ್ನುವುದಕ್ಕಿಂತಲೂ ಸತ್ಯವೇ ಈಶ್ವರ ಎಂದು ಹೇಳುವುದು ಹೆಚ್ಚು ಉಚಿತ ಎನ್ನುತ್ತಾರೆ. ದರ್ಶನಗಳಲ್ಲಿ ಈಶ್ವರನ ಆಸ್ತಿಕ್ಯವನ್ನು ಸ್ಥಾಪಿಸಲು ಅನೇಕ ವಾದಗಳು ಮಂಡಿಸಲ್ಪಟ್ಟಿವೆಯಷ್ಟೆ. ಗಾಂಧೀಜಿಯವರ ದೃಷ್ಟಿಯಲ್ಲಿ ಈಶ್ವರನ ಅಸ್ತಿತ್ವವನ್ನು ಕೇವಲ ತರ್ಕದಿಂದ ಸಾಧಿಸಲು ಸಾಧ್ಯವಿಲ್ಲ. ಇದು ಶ್ರದ್ಧೆಯ ವಿಷಯ ಮತ್ತು ಅನುಭವದ ವಿಷಯ. ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಎನ್ನುವ ಗೋಜಿಗೆ ಹೋಗದೆ ತಮ್ಮಲ್ಲಿ ಇವೆಲ್ಲದರ ಸ್ವಲ್ಪ ಸ್ವಲ್ಪ ಅಂಶವಿದೆಯೆಂದು ಅವರು ಒಪ್ಪಿಕೊಳ್ಳುತ್ತಾರೆ. ತಾವು ಒಂದು ದೃಷ್ಟಿಯಿಂದ ಅದ್ವೈತಿ ಎಂದೂ ಮತ್ತೊಂದು ದೃಷ್ಟಿಯಿಂದ ದ್ವೈತಿ ಎಂದೂ ಹೇಳಿಕೊಳ್ಳುತ್ತಾರೆ. ಹಾಗೆಯೇ ಜೈನದರ್ಶನದ ಅನೇಕಾಂತವಾದ, ಸ್ಯಾದ್ವಾದಗಳಿಂದ ಕೆಲವು ಅಂಶಗಳನ್ನವರು ತೆಗೆದುಕೊಂಡಿದ್ದಾರೆ. ತಮಗೆ ಬೇಕಾದ ಹಾಗೆ ಆ ಸಿದ್ಧಾಂತಗಳನ್ನು ಬೆಳೆಸಿಕೊಂಡಿದ್ದಾರೆ. ವೈಷ್ಣವದರ್ಶನದ ಕೆಲವು ಅಂಶಗಳೂ ಇವರ ದರ್ಶನದಲ್ಲಿ ಸಮಾವೇಶಗೊಂಡಿವೆ. ಬ್ರಹ್ಮ, ಸತ್ಯ, ಜಗತ್ತು ಸ್ಫೂರ್ತಿದಾಯಕವಾದದ್ದು ಮತ್ತು ಇಡೀ ಮಾನವಜೀವನ ಸತ್ಯಶೋಧನೆಯ ಕ್ಷೇತ್ರ ಎಂಬ ಅಭಿಪ್ರಾಯಗಳು ಇವರ ದರ್ಶನಕ್ಕೆ ಮೂಲಭೂತವಾಗಿವೆ. ಜಗತ್ತಿನ ಎಲ್ಲ ಧರ್ಮಗಳ ಮೂಲ ಉದ್ದೇಶ ಭಗವಂತನ ಸಾಕ್ಷಾತ್ಕಾರವೆನ್ನುತ್ತಾರೆ, ಗಾಂಧಿ. ಪ್ರತಿ ಧರ್ಮದಲ್ಲಿಯೂ ಸತ್ಯಾಂಶದ ಸಂಗತಿಗಳಿವೆ. ಹಾಗೆಯೇ ಅದರೊಡನೆ ಅಸತ್ಯಾಂಶಗಳೂ ಕಾಲಾನುಕ್ರಮವಾಗಿ ಸೇರಿಕೊಂಡಿವೆ. ಈ ಕಾರಣದಿಂದ ಧರ್ಮಗಳನ್ನೂ ಆಗಿಂದಾಗ್ಯೆ ಶುದ್ಧಿಗೊಳಿಸುವ ಅಗತ್ಯವಿದೆ. ಎಲ್ಲ ಧರ್ಮಗಳೂ ನ್ಯಾಯವಾದ ಜೀವನಮಾರ್ಗವನ್ನೇ ಬೋಧಿಸುತ್ತವೆ. ಆದ್ದರಿಂದ ತಮ್ಮ ತಮ್ಮ ಮತಧರ್ಮದಂತೆ ಜನ ನಡೆಯುವುದನ್ನು ಕಲಿಯಬೇಕು. ಸತ್ಯಶೀಲತೆ, ಅಹಿಂಸಾಪಾಲನೆ, ಅಪರಿಗ್ರಹ, ಸ್ವದೇಶೀ ಭಾವನೆ ಇತ್ಯಾದಿ ಆರು ನಿಯಮಗಳನ್ನು ಪ್ರತಿಯೊಬ್ಬನೂ ಪಾಲಿಸುವುದು ಅಗತ್ಯ. ಗಾಂಧೀಜಿಯವರ ದೃಷ್ಟಿಯಲ್ಲಿ ಈ ಜಗತ್ತು ಮತ್ತು ಇಲ್ಲಿ ನಡೆಸುವ ಬಾಳ್ವೆ ಈಶ್ವರ ಸಾಕ್ಷಾತ್ಕಾರಕ್ಕೆ ನಮಗೆ ಬೇಕಾದ ಸಾಧನ ಸಂಪತ್ತನ್ನು ಒದಗಿಸಿಕೊಡುತ್ತವೆ. ಅಂದಮೇಲೆ ಈ ಜಗತ್ತನ್ನು ಕುತ್ಸಿತ ಭಾವದಿಂದ ಕಾಣಬಾರದು. ಈಸಬೇಕು ಇದ್ದು ಜೈಸಬೇಕು ಎನ್ನುವುದೇ ಇದರ ತಾತ್ಪರ್ಯ. ಈಶ್ವರ ಮಾನವನ ಎಲ್ಲ ಮೌಲ್ಯಗಳ ಪರಿಪೂರ್ಣಸ್ವರೂಪ. ಆತ ಸತ್ಯ, ಶಿವ, ಸುಂದರ. ಮಾನವರು ಅಪೂರ್ಣರು, ಈಶ್ವರ ಪೂರ್ಣ. ಈ ಪೂರ್ಣತೆಯ ಕಡೆಗೆ ಮಾನವರು ಸಾಗಬೇಕು; ಇರುವ ಅಪೂರ್ಣತೆಯನ್ನು ಪರಿಶ್ರಮದಿಂದ ಹೋಗಲಾಡಿಸಿಕೊಳ್ಳಬೇಕು. ಬಾಳು ಪ್ರೇಮಪೂರ್ಣವಾಗಬೇಕು. ಮಾನವನ ಮಾನವತ್ವದ ಆಧಾರ ಸತ್ಯ, ಅಹಿಂಸೆಗಳು. ಇವನ್ನು ಅಭ್ಯಾಸ ಮಾಡದಿದ್ದರೆ ಮಾನವ ಪಶುವಾಗುತ್ತಾನೆ. ಮಾನವ ಸಮಾಜದ ನಿಯಮ ಅರಣ್ಯದ ನಿಯಮವಲ್ಲ, ಮತ್ಸ್ಯನ್ಯಾಯವಲ್ಲ. ಪೈಪೋಟಿ ಘರ್ಷಣೆಗಳಲ್ಲ. ಸಹಬಾಳ್ವೆಯ ಸಹಾನುಭೂತಿಯ ಆವಿಷ್ಕಾರವೇ ಮಾನವ ಜೀವನದ ವೈಶಿಷ್ಟ್ಯ. ಸರ್ವೋದಯವೇ ಮಾನವನ ಸಾಮಾಜಿಕ ಜೀವನದ ಸಾರಸರ್ವಸ್ವ. ಸರ್ವೋದಯ ಸರ್ವರ ಉದಯ ಮತ್ತು ಎಲ್ಲ ವ್ಯಕ್ತಿಗಳ ಸಮಗ್ರ ಉದಯ. ವ್ಯಕ್ತಿಯ ಮತ್ತು ರಾಷ್ಟ್ರದ ಜೀವನದಲ್ಲಿ ಉದಾತ್ತ ಧ್ಯೇಯಗಳಿರಬೇಕು. ಅವನ್ನು ಸಾಧನೆ ಮಾಡುವ ದಾರಿಯೂ ಕ್ರಮವೂ ಅಷ್ಟೇ ಉದಾತ್ತವಾದುದಾಗಿರಬೇಕು. ಗುರುಸಾಧನೆಯೇ ಮುಖ್ಯವೆಂದು ಅಡ್ಡದಾರಿಗಳಿಂದ, ಅಧರ್ಮ, ಹಿಂಸೆಗಳಿಂದ ಅದನ್ನು ಸಾಧಿಸಹೋಗುವುದು ಸಲ್ಲದು. ಆದ್ದರಿಂದ ರಾಜಕೀಯ ಹೋರಾಟದಲ್ಲೂ ಧರ್ಮದ ದಾರಿ ಒಳ್ಳೆಯದು. ಗೃಹಸ್ಥನ ಕುಟುಂಬ ಜೀವನ ಬಹಳ ಪವಿತ್ರವಾದುದು. ಮದುವೆ ಅಂಥ ಜೀವನದ ಒಂದು ಪವಿತ್ರ ಪ್ರಾರಂಭ. ಸಂತಾನಕ್ಕಾಗಿ ಮಾತ್ರ ಸಂಭೋಗ. ಉಳಿದಂತೆ ಎಲ್ಲರಿಗೂ ಸಂಯಮ, ಬ್ರಹ್ಮಚರ್ಯ ಅಗತ್ಯ. ದೇವರ ನಾಮಸ್ಮರಣೆ, ಪ್ರಾರ್ಥನೆ, ಕಾಯಕ, ಪರೋಪಕಾರ-ಇವು ಮಾನವನ ಏಳಿಗೆಯ ಸಾಧನಗಳು-ಇದು ಗಾಂಧೀದರ್ಶನದ ಬಹುಮುಖ್ಯ ವಿಷಯ. ಗಾಂಧಿಯವರ ದೃಷ್ಟಿಯಲ್ಲಿ ಜೀವನ ಅಖಂಡವಾದುದು. ಇದರಲ್ಲಿ ಒಂದನ್ನು ಒಂದರಿಂದ ಪ್ರತ್ಯೇಕಗೊಳಿಸುವುದು ಅಸಾಧ್ಯ. ಮಾನವನ ಮನಸ್ಸು, ಮಾನವನ ಸಮಾಜ ಇವುಗಳಲ್ಲಿ ಪ್ರತ್ಯೇಕವಾದ ವಿಭಾಗಗಳಿಲ್ಲ. ಸಾಮಾಜಿಕ ರಾಜಕೀಯ ಮತ್ತು ಧಾರ್ಮಿಕ ಎನ್ನುವ ವಿಭಾಗಗಳಲ್ಲಿ ಇವುಗಳದು ಅನ್ಯೋನ್ಯಾಶ್ರಯ. (ಎಂ.ವೈ.: ಜಿ.ವಿ.ಎನ್.)

ಗಾಂಧಿಯವರ ರಾಜನೀತಿ: ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯವರ ರಾಜಕೀಯ ಗುರು. ಅಧ್ಯಾತ್ಮದಿಂದ ರಾಜಕಾರಣ ಪವಿತ್ರಗೊಳ್ಳಬೇಕು-ಎಂಬುದು ಗೋಖಲೆಯವರ ಅಭಿಮತವಾಗಿತ್ತು. ಗಾಂಧಿಯವರದೂ ಇದೇ ಧೋರಣೆ. ಧರ್ಮವನ್ನು ಬಿಟ್ಟರೆ ರಾಜಕಾರಣದಲ್ಲಿ ಉಳಿದುದೆಲ್ಲ ಕಸವೆಂದು ಅವರ ನಂಬಿಕೆ. ರಾಷ್ಟ್ರಗಳ ಪ್ರಜೆಗಳೆಲ್ಲರ ಯೋಗಕ್ಷೇಮ ಸಾಧನೆಯೆಂದರೆ ಧರ್ಮಸಾಧನೆ. ಧರ್ಮ ಕಾಮಿತಾರ್ಥವನ್ನು ಕೊಡುತ್ತದೆ; ಧರ್ಮ ನೀಡಲಾಗದ ಯಾವುದಕ್ಕೂ ಯಾವ ಬೆಲೆಯೂ ಎಲ್ಲ. ಧರ್ಮವೆಂದರೆ ಕುರುಡು ನಂಬಿಕೆಯಲ್ಲ. ಪರಮತದ್ವೇಷವಲ್ಲ; ಎಲ್ಲ ಪ್ರಾಣಿಗಳನ್ನೂ ತನ್ನಂತೆಯೇ ಭಾವಿಸಿ, ನಡೆದುಕೊಳ್ಳುವುದು; ಎಲ್ಲ ಮತಗಳನ್ನೂ ಸಹಿಷ್ಣುತೆಯಿಂದ ಕಾಣುವ ಔದಾರ್ಯ.

ರಾಜಕಾರಣ ಯಾರನ್ನೂ ಬಿಟ್ಟಿದ್ದಲ್ಲ. ರಾಜನೀತಿ ಹಾವಿನ ಸುರುಳಿಯಂತೆ ನಮ್ಮನ್ನು ಸುತ್ತಿಕೊಂಡಿದೆಯೆನ್ನುತ್ತಾರೆ ಅವರು. ಎಷ್ಟೇ ಹೆಣಗಿದರೂ ಅದರಿಂದ ಬಿಡಿಸಿಕೊಳ್ಳುವುದು ಸಾಧ್ಯವಿಲ್ಲ. ಜೀವನವೆಲ್ಲ ರಾಜಕಾರಣದಿಂದ ತುಂಬಿದೆ. ಜೀವನವನ್ನು ಆಧ್ಯಾತ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರ, ಆರ್ಥಿಕ ಕ್ಷೇತ್ರ, ರಾಜಕೀಯ ಕ್ಷೇತ್ರ ಎಂಬುದಾಗಿ ವಿಭಾಗ ಮಾಡಿ, ಒಂದು ಕ್ಷೇತ್ರಕ್ಕೂ ಇನ್ನೊಂದು ಕ್ಷೇತ್ರಕ್ಕೂ ಸಂಪರ್ಕವಿಲ್ಲದಂತೆ ಮಾಡಲಾಗದು. ಜೀವನ ಅಖಂಡ; ಅದನ್ನು ಖಂಡಗೊಳಿಸುವುದೆಂದರೆ ದುಃಖಕ್ಕೆ, ಘರ್ಷಣೆಗೆ, ನಾಶಕ್ಕೆ ಆಹ್ವಾನ ಕೊಟ್ಟಂತೆ.

ಪ್ರತಿಯೊಬ್ಬ ರಾಜಕಾರಣಿಯೂ ಆಸ್ತಿಕನೂ ಸತ್ಯಶೋಧಕನೂ ಆಗಬೇಕು. ದೇವರಲ್ಲಿ ನಂಬಿಕೆ ಇಟ್ಟು ನಡೆಯುವ ಸತ್ಯವನ್ನು ಆಶ್ರಯಿಸಿರುವ ಪ್ರಜೆ ರಾಜಕಾರಣಿಯಾದಾಗ ಆ ದೇಶದ ಭಾಗ್ಯ ತೆರೆಯುತ್ತದೆ. ಇಂಥ ರಾಜಕಾರಣಿಗಳಿರುವ ದೇಶದಲ್ಲಿ ಸರ್ಕಾರದ ಅತಿಯಾದ ಪಾರುಪತ್ಯಕ್ಕೆ, ವಿಪರೀತ ಸರ್ಕಾರಕ್ಕೆ ಕಾರಣವೇ ಇರುವುದಿಲ್ಲ. ಗಾಂಧಿಯವರ ರಾಜನೀತಿ ಕಲುಷಿತವಲ್ಲ. ಅದಕ್ಕೂ ಸತ್ಯ-ಅಹಿಂಸೆಗಳಿಗೂ ಅವಿನಾಸಂಬಂಧ. ಸತ್ಯ ಅಹಿಂಸೆಗಳು ಅವಳಿಮಕ್ಕಳು. ಅವು ನಾಣ್ಯದ ಎರಡೂ ಬದಿಗಳಂತೆ. ಸತ್ಯಕ್ಕೆ ಸಂಚಕಾರ ಬರುವುದಾದರೆ ನನಗೆ ಸ್ವರಾಜ್ಯವೇ ಬೇಡ ಎಂದು ಗಾಂಧಿಯವರು ಹೇಳಿದರು. ಯಾವುದನ್ನೇ ಸಾಧಿಸಬೇಕಾದರೂ ಅದರ ಮಾರ್ಗವೂ ಪರಿಶುದ್ಧವಾಗಿರಬೇಕೆಂಬುದು ಗಾಂಧಿಯವರ ಅಪೇಕ್ಷೆ. ಮಾರ್ಗವೆಷ್ಟು ನಿರ್ಮಲವೋ ಅಷ್ಟರಮಟ್ಟಿಗೆ ಫಲಪ್ರಾಪ್ತಿ.

ಗಾಂಧಿಯವರು ಪ್ರಜಾತಂತ್ರವಾದಿ; ಪ್ರಾಪ್ರವಯಸ್ಕರೆಲ್ಲ ಮತದಾನ ಮಾಡಿ ನಿರ್ಮಿಸಿದ ವಿಧಾನ ಸಭೆಗಳ ಮೂಲಕ ಮಂತ್ರಿಮಂಡಲಗಳನ್ನು ರಚಿಸುವ, ಆಡಳಿತ ನಡೆಸುವ, ಸಂಯಮಪೂರಿತ ವಿವೇಕಯುತ ಪ್ರಜಾತಂತ್ರದ ಪ್ರತಿಪಾದಕರವರು. ಪ್ರಜಾತಂತ್ರ ಹಿಂಸೆಯಿಂದ ಮುಕ್ತವಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯವೂ ಸುರಕ್ಷಿತವಾಗಬೇಕಾದರೆ ಪ್ರಜಾತಂತ್ರ ಶುದ್ಧ ಅಹಿಂಸಾತ್ಮಕವಾಗಿರಲೇಬೇಕು. ಆಗ ಮಾತ್ರ ಬಲಶಾಲಿ, ದುರ್ಬಲ ಇಬ್ಬರಿಗೂ ಸಮಾನಾವಕಾಶವೂ ಸಮಾನಾಧಿಕಾರವೂ ಇರುತ್ತವೆ.

ಅಲ್ಪಸಂಖ್ಯಾತ ನೌಕರಶಾಹಿಯ ಸರ್ಕಾರ ಎಷ್ಟು ಅನಪೇಕ್ಷಿತವೋ, ಬಹುಸಂಖ್ಯಾತ ಪಕ್ಷದ ಸರ್ಕಾರವೂ ಅಷ್ಟೇ ಅನಪೇಕ್ಷಿತ. ವಿಚಾರಸ್ವಾತಂತ್ರ್ಯವನ್ನು ಕ್ರಿಯಾಸ್ವಾತಂತ್ರ್ಯವನ್ನೂ ಬಯಸುವುದಾದರೆ ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನೂ ಕಾಪಾಡಬೇಕಾಗುತ್ತದೆ. ಬಹುಮತ ಪದ್ಧತಿಯ ಪ್ರಭುತ್ವದಲ್ಲಿ ವ್ಯಕ್ತಿಸಮಷ್ಟಿಯಲ್ಲಿ ಮುಳುಗಿಹೋಗುವ ಸಂಭವವೇ ಹೆಚ್ಚು. ಹಾಗಾಗಬಾರದು. ಸ್ನೇಹದಿಂದ, ಮಧುರಮಾರ್ಗದಿಂದ ಅಲ್ಪಸಂಖ್ಯಾತರನ್ನು ಒಲಿಸಿಕೊಳ್ಳಬೇಕು; ಬೇರೆ ದಾರಿ ಇಲ್ಲ. ಬಹುಮತ ವಾದ ಅಸಹನೀಯ ಹಿಂಸೆಗೆ ಮೂಲ. ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ತಾನು ಪಾಲಿಸಿದಾಗ ಅವನ ಪಾಲಿನ ಹಕ್ಕು ಅವನಿಗೆ ಕ್ರಮಪ್ರಾಪ್ತವಾಗುತ್ತದೆ-ಎಂದು ಗಾಂಧಿಯವರು ಹೇಳಿದ್ದಾರೆ. ಪ್ರಜಾತಂತ್ರವೆಂದರೆ ಪ್ರಜೆಗಳು ಸದಾ ವಿಧೇಯರಾಗಿ ವರ್ತಿಸುವುದಲ್ಲ. ಬಹುಸಂಖ್ಯಾತರಿಂದ ಭಿನ್ನವಾದ ಅಭಿಪ್ರಾಯ ಉಳ್ಳವರಾಗಿ ವರ್ತಿಸುವ ಹಕ್ಕು ಅಲ್ಪಸಂಖ್ಯಾತರಿಗೆ ಉಂಟೆಂದು ವಾದ. ವ್ಯಕ್ತಿ ಗಣನೆಗೆ ಬಾರದೆ ಹೋದರೆ ಸಮಾಜದಲ್ಲಿ ಏನೂ ಉಳಿಯದು. ವ್ಯಕ್ತಿಗೆ ಸ್ವಾತಂತ್ರ್ಯವಿದ್ದಾಗ ಮಾತ್ರ ಅವನು ತಾನಾಗಿ ತಾನೇ ಸಮಾಜದ ಅನುವರ್ತಿಯಾಗುತ್ತಾನೆ; ಅದಕ್ಕೆ ಸೇವೆ ಸಲ್ಲಿಸುತ್ತಾನೆ. ಆ ಸ್ವಾತಂತ್ರ್ಯವನ್ನು ಅವನಿಂದ ಕಸಿದುಕೊಂಡರೆ ಅವನು ಬರಿಯ ಯಂತ್ರವಾಗುತ್ತಾನೆ; ಸಮಾಜ ಹಾಳಾಗುತ್ತದೆ. ವ್ಯಕ್ತಿ ಎಲ್ಲಿ ಸ್ವಾತಂತ್ರ್ಯದಿಂದ ವಂಚಿತನಾಗುತ್ತಾನೊ ಅಲ್ಲಿ ಸಮಾಜವ್ಯವಸ್ಥೆ ಸಾಧ್ಯವಿಲ್ಲ. ವ್ಯಕ್ತಿ, ಸಮಾಜ ಎರಡೂ ಸುರಸವಾಗಿ ಸುಗಮವಾಗಿ ಬೆಳೆಯಬೇಕು. ವ್ಯಕ್ತಿಯೂ ತಾನು ಕೂಟಜೀವಿಯೆಂಬುದನ್ನು ನೆನಪಿನಲ್ಲಿಡಬೇಕು. ಸಮಾಜಪ್ರಗತಿಗೆ ಹೊಂದಿಕೊಂಡು ವ್ಯಕ್ತಿ ನೆಮ್ಮದಿಯ ಜೀವನ ನಡೆಸಬೇಕು. ಅವನು ಸ್ವಾತಂತ್ರ್ಯ ಬಯಸುವುದಾದರೂ ಸ್ವಸುಖಕ್ಕಾಗಿ ಅಲ್ಲ. ಸಕಲರ ಸುಖಕ್ಕಾಗಿ; ಸಕಲರ ಹಿತಕ್ಕಾಗಿ. ವ್ಯಕ್ತಿಸ್ವಾತಂತ್ರ್ಯವೆಂದರೆ ಒಬ್ಬ ಇನ್ನೊಬ್ಬನ ಮೇಲೆ ಸವಾರಿ ಮಾಡುವ ಅವಕಾಶವಲ್ಲ.

ಗಾಂಧಿಯವರು ಸಂಕುಚಿತ ರಾಷ್ಟ್ರವಾದಿಗಳಲ್ಲ. ಇಡೀ ವಿಶ್ವವೇ ಒಂದು ಕುಟುಂಬ-ಎಂಬುದೇ ಅವರ ಆದರ್ಶ. ವಿಶ್ವಕ್ಕೆಲ್ಲ ಲಾಭವಾಗಿ ಭಾರತ ಏಳಬೇಕು. ಇತರ ರಾಷ್ಟ್ರಗಳು ಹಾಳಾಗಿ ಅದರ ಮೇಲೆ ಭಾರತ ಏಳಬಾರದು-ಎಂದು ಅವರು ಹೇಳಿದ್ದಾರೆ. ರಾಷ್ಟ್ರವಾದಿಯಾಗದೆ ಅಂತರರಾಷ್ಟ್ರೀಯವಾದಿಯಾಗುವುದು ಸಾಧ್ಯವಿಲ್ಲವೆಂಬುದು ಗಾಂಧಿಯವರ ಮತ. ರಾಷ್ಟ್ರವಾದದಲ್ಲಿ ಕುಂದೇನೂ ಇಲ್ಲ; ಸಂಕುಚಿತ ದೃಷ್ಟಿಯಲ್ಲಿ, ಸ್ವಾರ್ಥದಲ್ಲಿ ದೋಷವಿದೆ. ಭಾರತದ ರಾಷ್ಟ್ರವಾದವೂ ಅದರ ರಾಷ್ಟ್ರತ್ವ ಕಲ್ಪನೆಯೂ ಮಾನವ ಕುಲದ ಸೇವೆಗೆ ಮುಡುಪಾಗಿರತಕ್ಕದ್ದೆಂದು ಅವರು ಬೋಧಿಸಿದರು.

ವಿಶ್ವಕ್ಕೆಲ್ಲ ಒಂದು ಪ್ರಭುತ್ವವಿರಬೇಕೆಂಬುದು ಗಾಂಧಿಯವರ ಆದರ್ಶ. ಸೇವಾಗ್ರಾಮದ ಪರ್ಣಕುಟಿಯಲ್ಲಿ ಕೂತಿರುವಾಗಲೇ ನಾನು ಇಡೀ ಜಗತ್ತಿನೊಂದಿಗೆ ಸಂಪರ್ಕವನ್ನಿಟ್ಟುಕೊಂಡು, ಅಷ್ಟೇ ಏಕೆ, ಬ್ರಹ್ಮಾಂಡದೊಂದಿಗೆ ಸಂಪರ್ಕವನ್ನಿಟ್ಟುಕೊಂಡು, ಸುರಸವಾಗಿ ಬಾಳನ್ನು ನಡೆಸಲು ಬಯಸುತ್ತೇನೆ-ಎಂದು ಅವರು ಬರೆದಿದ್ದಾರೆ. ಅವರು ವಿಶ್ವ ಒಕ್ಕೂಟ ಸ್ಥಾಪಿಸುವ ವಿಚಾರ ಮಾಡಿದ್ದರು. ಇದನ್ನು ಅವರು ಅಹಿಂಸೆ, ಅಂತರರಾಷ್ಟ್ರೀಯ ಸಹಕಾರ-ಇವುಗಳ ಅಸ್ತಿಭಾರದ ಮೇಲೆ ರಚಿಸುವ ಆಲೋಚನೆ ಮಾಡಿದ್ದರು. ಎಲ್ಲ ರಾಷ್ಟ್ರಗಳೂ ತಮ್ಮ ತಮ್ಮ ಚತುರಂಗ ಬಲಗಳನ್ನು ಕೊನೆಗೊಳಿಸಬೇಕು; ಸಂಪೂರ್ಣ ಶಸ್ತ್ರನಿರಾಕರಣ ನೀತಿಯನ್ನು ಪರಿಪಾಲಿಸಬೇಕು. ರಾಷ್ಟ್ರಗಳ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸ್ನೇಹದಿಂದ, ಸಂಧಾನದಿಂದ ಪರಿಹರಿಸಿಕೊಳ್ಳಬೇಕು. ವಿಶ್ವಶಾಂತಿಯ ಪಾಲನೆಗಾಗಿ ವಿಶ್ವ ಒಕ್ಕೂಟ ಮಾತ್ರ ತಕ್ಕಷ್ಟು ಸೇನಾಬಲವನ್ನು ಇಟ್ಟುಕೊಳ್ಳಬಹುದು; ಶಸ್ತ್ರಧಾರಣ ಮಾಡಬಹುದು-ಎಂದು ಅವರು ಭಾವಿಸಿದ್ದರು. (ಟಿ.ಟಿ.ಎಸ್.)

ಗಾಂಧಿ ಸಮಾಜದರ್ಶನ: ಗಾಂಧೀಜಿ ಭಾರತದ ಸ್ವಾತಂತ್ರ್ಯ ಸಂಪಾದಕರಾದರೂ ಅಖಿಲ ಜಗತ್ತಿನ ಪ್ರಜೆಯಾಗಿ, ಜಗತ್ತಿನ ಕಲ್ಯಾಣವನ್ನು ತಮ್ಮ ಬೋಧನೆಯಿಂದಲೂ ಅವರು ರಾಜತಂತ್ರಜ್ಞರಾಗಿದ್ದುದಕ್ಕಿಂತ ಹೆಚ್ಚಾಗಿ ಧಾರ್ಮಿಕ ಪುರುಷರೂ ಆಧ್ಯಾತ್ಮಸಾಧಕರೂ ಆಗಿದ್ದರು. ಆದುದರಿಂದ ರಾಜಕೀಯ ಹೋರಾಟವೂ ಸೇರಿದಂತೆ, ಅವರ ಎಲ್ಲ ಚಟುವಟಿಕೆಗಳೂ ಸತ್ಯ ಧರ್ಮ ಅಹಿಂಸೆಯ ಮೇಲೆಯೇ ಆಧಾರಿತವಾಗಿದ್ದುವು. ವ್ಯಕ್ತಿಯ ಮಟ್ಟದಲ್ಲಿ, ರಾಷ್ಟ್ರದ ಮಟ್ಟದಲ್ಲಿ, ಅಂತರರಾಷ್ಟ್ರ ಮಟ್ಟದಲ್ಲಿ, ಎಲ್ಲ ಕಾರ್ಯಗಳನ್ನು ನಿರ್ದೇಶಿಸುವ ಮೂಲಪ್ರೇರಣೆ ಸತ್ಯ ಮತ್ತು ಅಹಿಂಸೆಯಾಗಿರಬೇಕೆಂದು ಅವರು ಬಯಸಿದರು ಅಂಥ ಸಮಾಜವನ್ನು ರೂಪಿಸುವುದು ಅವರ ಉದ್ದೇಶವಾಗಿತ್ತು.

ಗಾಂಧೀಜಿಯವರ ಕಲ್ಪನೆಯ ಸಮಾಜರಚನೆಯಲ್ಲಿ ವ್ಯಕ್ತಿಯೇ ಪರಮಗಣ್ಯ. ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡ ಸಮಾಜದಲ್ಲಿ ಮಾತ್ರ ಶಾಂತಿ ಸುಖ ಸಮತೆ ಇರಬಲ್ಲದು. ಸಮಾಜಸೇವೆಗೆ ಅರ್ಪಿಸಿಕೊಳ್ಳುವ ಸ್ಫೂರ್ತಿಯನ್ನು ನೀಡಬಲ್ಲದು. ಪ್ರಜಾಪ್ರಭುತ್ವದ ಹೆಸರಿನಲ್ಲಾಗಲೀ ಬಹುಮತದ ಬಲಪ್ರಯೋಗದಿಂದಾಗಲೀ ವ್ಯಕ್ತಿ ಸ್ವಾತಂತ್ರ್ಯಹರಣ ಸಲ್ಲದು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಎಲ್ಲ ಬಗೆಯ ವಿರೋಧದಮನ ಅಥವಾ ವಿರೋಧಿಗಳ ನಿರ್ನಾಮವಾದರೆ ಅದು ನಿಜವಾದ ಜನತಂತ್ರ ಅಥವಾ ಜನತಾಸ್ವರಾಜ್ಯವಾಗದು. ವ್ಯಕ್ತಿ ತನ್ನ ಪೂರ್ಣತೆಗೆ ಬೆಳೆದು, ತನ್ನ ಶಕ್ತಿಗಳನ್ನೆಲ್ಲ ಸಾಧಿಸಿಕೊಂಡು ಅದರ ಎಲ್ಲ ಫಲಗಳನ್ನೂ ಸಮಾಜಕ್ಕೆ ಹಿಂದಿರುಗಿಸುವುದೇ ನಿಜವಾದ ವ್ಯಕ್ತಿ ಸ್ವಾತಂತ್ರ್ಯದ ಅರ್ಥ. ಇಂಥ ಸಮಾಜದಲ್ಲಿ ಬಡತನವಿರದು, ಯುದ್ಧವಿರದು, ಕ್ರಾಂತಿಯಿರದು, ರಕ್ತಪಾತವಿರದು.

ಆದರ್ಶ ಸಮಾಜದಲ್ಲಿ, ಮನಸ್ಸಿನ ಹಾಗೂ ನೀತಿಯ ಪೂರ್ಣ ವಿಕಾಸದಿಂದ ಕೂಡಿದ ಮಾನವಸೌಖ್ಯವೇ ಜೀವನದಲ್ಲಿ ಆರಿಸುವ ಗುರಿಯಾಗುತ್ತದೆ. ಇಲ್ಲಿ ನೀತಿಯೆಂದರೆ ಆಧ್ಯಾತ್ಮಿಕ ಎಂದೂ ಅರ್ಥ. ಬರಿಯ ದೇಹದ ಸೌಖ್ಯವೇ ಮಾನವನಿಗೆ ಎಂದಿಗೂ ಪೂರ್ಣ ಸೌಖ್ಯವಾಗಲಾರದು. ಅದು ಪಶುಗಳಿಗೆ ಮಾತ್ರ ಸರ್ವಸ್ವವಾಗಬಹುದು. ಇಂಥ ಸಮಾಜದಲ್ಲಿ ವಿಕೇಂದ್ರೀಕರಣ ಒಂದು ಮುಖ್ಯ ಅಂಶ. ಹಳ್ಳಿಗಳು ಸಮಾಜ ಜೀವನದ ಕೇಂದ್ರಬಿಂದುಗಳಾಗಬೇಕು. ಕೇಂದ್ರೀಕರಣ ಪದ್ಧತಿ, ಅಹಿಂಸಕ ಸ್ವರೂಪವುಳ್ಳ ಸಮಾಜರಚನೆಯೊಂದಿಗೆ ಹೊಂದಿಕೊಳ್ಳಲಾರದು. ವ್ಯಕ್ತಿ ತನ್ನ ಹಳ್ಳಿಗಾಗಿ ಪ್ರಾಣಾರ್ಪಣೆ ಮಾಡಲೂ ಸಿದ್ಧನಾಗಿ, ಸಮುದಾಯಕ್ಕಾಗಿ ಸದಾ ದುಡಿಯುತ್ತಾನೆ. ಇಂಥ ಸಮಾಜದಲ್ಲಿ ವ್ಯಕ್ತಿ ಪರಿವರ್ತನೆಹೊಂದಿ ಸ್ವಾರ್ಥರಹಿತನಾಗಿರುತ್ತಾನೆ. ಪ್ರತಿ ಹಳ್ಳಿಯೂ ವ್ಯವಸಾಯ, ಗ್ರಾಮೋದ್ಯೋಗ, ಮೂಲಶಿಕ್ಷಣಶಾಲೆ, ಆಟದ ಬಯಲು, ಪ್ರಕೃತಿ ಚಿಕಿತ್ಸಾಲಯದ, ಸಹಕಾರಸಂಘ, ಶಿಶುವಿಹಾರ, ಒಳ್ಳೆಯ ಕುಡಿಯುವ ನೀರು, ಮಕ್ಕಳಿಗೆ ಹಾಲು-ಇವೆಲ್ಲ ದೊರೆಯುವ ಘಟಕವಾಗುತ್ತದೆ. ಹಳ್ಳಿ ಪಟ್ಟಣಿಗರ ಅಥವಾ ಇತರರ ಲೂಟಿಗೆ ತುತ್ತಾಗದೆ ಸ್ವಾವಲಂಬಿಯಾಗಿರುತ್ತದೆ. ಭಾರತದ ಪ್ರತಿಹಳ್ಳಿಯೂ ಗಣರಾಜ್ಯವಾಗಿ ಯಾವುದೂ ಶ್ರೇಷ್ಠವೂ ಕನಿಷ್ಠವೂ ಆಗದೆ ಕಡೆಯದೂ ಮೊದಲದೂ ಆಗದೆ ಎಲ್ಲವೂ ಸಮಾನವಾಗಿರುತ್ತವೆ.

ಇಂಥ ಸಮಾಜದಲ್ಲಿ, ಸರ್ಕಾರದ ಸಂಪರ್ಕ, ಹಳ್ಳಿಗಳೊಂದಿಗೆ ಎಷ್ಟು ಕಡಿಮೆ ಇದ್ದರೆ ಅಷ್ಟು ಒಳ್ಳೆಯದು. ಜನತೆ ಮಾಡಬೇಕಾದ ಕಾರ್ಯಗಳನ್ನೆಲ್ಲ ತಾನೇ ಮಾಡುತ್ತ ಜನತೆಯನ್ನು ನಿಷ್ಕ್ರಿಯವನ್ನಾಗಿ ಮಾಡಿ, ಅದರ ಕಾರ್ಯಶಕ್ತಿಯನ್ನು ಉಡುಗಿಸುವುದು ಯಾವ ಸರ್ಕಾರಕ್ಕೂ ಒಳ್ಳೆಯದಲ್ಲ. ಅದು ಜನತೆಯ ವ್ಯಕ್ತಿ ಸ್ವಾತಂತ್ರ್ಯವನ್ನೂ ಹರಣಮಾಡುತ್ತದೆ.

ಯಾವ ವ್ಯಕ್ತಿಯೂ ಸಮಾಜಕ್ಕೆ ಕಂಟಕನಾಗಿ ಬೆಳೆಯಕೂಡದು. ಮಾನವ ಪ್ರಧಾನವಾಗಿ ಸಮಾಜಜೀವಿ ಎಂಬುದನ್ನು ಮರೆಯಬಾರದು. ಸಾಮಾಜಿಕ ಪ್ರಗತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತ ಅವನು ಹಿಂದಿನ ಹಂತಕ್ಕೆ ಏರಿದ್ದಾನೆ. ಇಡೀ ಸಮಾಜದ ಕಲ್ಯಾಣದೃಷ್ಟಿಯಿಂದ ವ್ಯಕ್ತಿ ಇಚ್ಛಾಪೂರ್ವಕವಾಗಿ ಸಾಮಾಜಿಕ ನಿಗ್ರಹಕ್ಕೆ ಒಳಗಾಗುವುದರಿಂದ ಸಮಾಜದ ಸದಸ್ಯರಲ್ಲೊಬ್ಬನಾದ ಅವನಿಗೂ ಸಮಾಜಕ್ಕೂ ಒಳಿತಾಗುವುದು.

ಶ್ರೀಮಂತರು ಧರ್ಮದ ಪಾರುಪತ್ಯಗಾರರಾಗಬೇಕು. ಅನಾಸಕ್ತರಾದ ಯಜಮಾನರಾಗಬೇಕು-ಎಂಬ ಮಾತಿನಲ್ಲಿ ಗಾಂಧೀಜಿ ಈ ಮಾರ್ಗವನ್ನು ವಿವರಿಸಿದರು.

ಸರ್ವಸಮಭಾಗ ಎಂಬ ಮಾತಿಗೆ ಗಾಂಧೀಜಿಯ ದೃಷ್ಟಿಯಲ್ಲಿ ಹೀಗೆ ಅರ್ಥ: ಸರ್ವಸಮಭಾಗವೆಂದರೆ ಜಗತ್ತಿನ ಸಂಪತ್ಸಾಮಗ್ರಿಯನ್ನೆಲ್ಲ ಯಾರೋ ಒಬ್ಬರು ಕೂತು ತಮ್ಮ ಮನಸ್ಸಿಗೆ ಬಂದ ಹಾಗೆ ಹಂಚಿಹಾಕುವುದಲ್ಲ. ಪ್ರತಿಯೊಬ್ಬನಿಗೂ ತನತನಗೆ ಸಹಜವಾಗಿ ಎಷ್ಟು ಬೇಕೋ ಅಷ್ಟು ಸಾಮಗ್ರಿ ದೊರೆಯಬೇಕು. ಒಂದು ಕವಡೆಯೂ ಹೆಚ್ಚಾಗಿ ಯಾರಿಗೂ ಸಿಗಬೇಕಾದ್ದಿಲ್ಲ.

ಈ ಸರ್ವಸಮ ವಿಭಾಗ ಹೇಗೆ ಆಗಬೇಕು, ಲೋಕದಲ್ಲಿ? ಕ್ರಾಂತಿಯಿಂದಲೇ ರಕ್ತಪಾತದಿಂದಲೇ? ಹಣವಂತರ ಸಂಪತ್ತನ್ನೆಲ್ಲ ಬಲಾತ್ಕಾರವಾಗಿ ದೋಚುವುದರಿಂದಲೆ?

ಕೂಡದು ಎನ್ನುತ್ತದೆ ಅಹಿಂಸೆ. ಬಲಾತ್ಕಾರವಾದ ಸಂಪತ್ತಿನ ಆಕ್ರಮಣದಿಂದ ಲೋಕ ಇನ್ನೂ ಪಾತಾಳಕ್ಕಿಳಿದೀತು. ಹಣವಂತನ ಕೌಶಲವೆಲ್ಲ ಮಾಯವಾಗಿ ಲೋಕಕ್ಕೆ ಆ ಪ್ರಭಾವದ ಲಾಭ ಇಲ್ಲವಾದೀತು. ಅವನಿಗೆ ಸೃಷ್ಟಿಕೌಶಲ, ನಿರ್ಮಾಣ ಶಕ್ತಿಯಿದೆ. ಆ ಸಾಮಥ್ರ್ಯವನ್ನು ಕಳೆದುಕೊಳ್ಳುವುದು ಉಚಿತವಲ್ಲ. ಆತನ ಧನ ಅವನಿಗಿರಲಿ. ತನ್ನ ಬದುಕಿಗೆ ಅಗತ್ಯವಿದ್ದಷ್ಟನ್ನು ಆತ ಬಳಸಲಿ. ಉಳಿದುದಕ್ಕೆ ಬರೀ ಯಜಮಾನನಾಗಿರಲಿ. ದೇಶದ ಹಿತಕ್ಕಾಗಿ ಅದನ್ನು ಬೆಳೆಸಲಿ. ಗಾಂಧೀತತ್ತ್ವದಂತೆ ಹಿಂಸೆಯ ಮೂಲಕ ಉಂಟಾಗುವ ಸಹಕಾರ, ಬಲತ್ಕಾರದಿಂದ ಉಂಟಾದ ಒಳಿತು, ವ್ಯಕ್ತಿತ್ವವನ್ನು ನಾಶಮಾಡುತ್ತದೆ.

ಮಾನವಕುಟುಂಬದ ಪ್ರತಿಯೊಬ್ಬ ಪುರಷನಿಗೂ ಮಹಿಳೆಗೂ ಅವರೆಷ್ಟೇ ಅಶಕ್ತರಾಗಿದ್ದರೂ ತಮ್ಮ ಆತ್ಮಗೌರವ ಮತ್ತು ಸ್ವಾತಂತ್ರ್ಯಗಳ ರಕ್ಷಣೆ ಮಾಡಿಕೊಳ್ಳಬೇಕೆಂಬ ಮನೋದಾಢ್ರ್ಯವನ್ನುಂಟುಮಾಡುವುದು ಅಗತ್ಯ.

ಆದರ್ಶ ಸಮಾಜದಲ್ಲಿ ಕುಟುಂಬ ಧರ್ಮವನ್ನು ರಾಷ್ಟ್ರಧರ್ಮವನ್ನಾಗಿಯೂ ರಾಷ್ಟ್ರಧರ್ಮವನ್ನು ವಿಶ್ವಧರ್ಮವನ್ನಾಗಿಯೂ ಎಂದಾದರೊಂದು ದಿನ ವಿಸ್ತರಿಸಲೇಬೇಕು.

ವ್ಯಕ್ತಿಸ್ವಾತಂತ್ರ್ಯ ಎಷ್ಟೇ ಇದ್ದರೂ ಮಾನವ ಸಮಾಜಜೀವಿಯಾಗಿಯೇ ಬೆಳೆಯಬೇಕು. ಆ ಸ್ವಾತಂತ್ರ್ಯ ಅವನನ್ನು ಸಮಾಜ ಜೀವನದಿಂದ ಪ್ರತ್ಯೇಕಗೊಳಿಸುವಷ್ಟು ದೂರ ಹೋಗಬಾರದು.

ವಿಕೇಂದ್ರೀಕರಣ ಕ್ರಮದಿಂದ ಸರ್ಕಾರ ಉತ್ಪಾದನೆಯ ಬಹುಭಾಗವನ್ನು ಜನತೆಗೆ ವಹಿಸಿ ವ್ಯಕ್ತಿಸ್ವಾತಂತ್ರ್ಯ ಸಾಮಾಜಿಕ ಅಪಾಯವಾಗುವ ಸ್ಥಿತಿಗೆ ಮುಟ್ಟಿದಾಗ ಮಾತ್ರ ತಾನು ಕೈಹಾಕಬೇಕು. ಈ ವ್ಯವಸ್ಥೆಯಿಂದ ಬಹುಮಟ್ಟಿಗೆ ನಿರುದ್ಯೋಗವೂ ಪೈಪೋಟಿಯೂ ಕಡಿಮೆಯಾಗುವುದು.

ಗಾಂಧೀಜಿ ಸೂಚಿಸಿದ ಈ ಸಮಾಜ ವ್ಯವಸ್ಥೆ ವಿಶ್ವದ ಹಿತದೃಷ್ಟಿಯಿಂದ ರೂಪಿತವಾದುದು. ಅವರು ಹಿಂದೂ ಸಮಾಜದಲ್ಲಿ ಜನಿಸಿದುದರಿಂದ ಹಿಂದೂ ಸಮಾಜದ ಗುಣದೋಷಗಳು, ಅವುಗಳ ನಿವಾರಣೆ-ಇವನ್ನು ಕುರಿತು ಯೋಚಿಸುವುದು ಅವರಿಗೆ ಅನಿವಾರ್ಯವಾಯಿತು. ಹಿಂದೂ ಸಮಾಜದಲ್ಲಿ ಅನೇಕ ಲೋಪದೋಷಗಳಿದ್ದರೂ ತಾನು ಹಿಂದೂ ಧರ್ಮವನ್ನೇ-ತನ್ನ ಹೆಂಡತಿಯನ್ನು ಪ್ರೀತಿಸುವಂತೆ-ಪ್ರೀತಿಸುತ್ತೇನೆಂದು ಗಾಂಧೀಜಿ ಹೇಳಿಕೊಂಡಿದ್ದಾರೆ. ಹಿಂದೂ ಧರ್ಮ ಹಿಂದೂ ಸಂಸ್ಕøತಿ ಹಿಂದೂ ಸಮಾಜದ ವಿಷಯದಲ್ಲಿ ಅವರು ಆಳವಾಗಿ ಹತ್ತೂನಿಟ್ಟಿನಿಂದ ಯೋಚನೆ ಮಾಡಿದ್ದಾರೆ. ಭಾರತ ತನ್ನ ಪ್ರಾಚ್ಯ ಸಂಸ್ಕøತಿಯ ಆಧಾರದಮೇಲೆ ಮಾತ್ರವೆ, ತನ್ನ ಸುಂದರವಾದ ರೀತಿ ನೀತಿಗಳಿಂದ ಬೆಳೆದು, ಭಾರತೀಯ ಸತ್ತ್ವಕ್ಕನುಗುಣವಾಗಿ ಇತರ ಪ್ರಾಚ್ಯ ಮತ್ತು ಪಾಶ್ಚಾತ್ಯದೇಶಗಳ ಸ್ನೇಹಸಂಬಂಧವನ್ನು ಸ್ಥಾಪಿಸಿಕೊಳ್ಳಬಲ್ಲದು. ಏಷ್ಯ ಖಂಡದವರು ಪಾಶ್ಚಾತ್ಯರಿಂದ ಬರುವುದೆಲ್ಲವನ್ನೂ ತಾರತಮ್ಯವಿಲ್ಲದೆ ವಿಚಾರಶೂನ್ಯತೆಯಿಂದ ಅನುಕರಿಸಬಾರದು. ಭಾರತ ತನ್ನ ನಾಗರಿಕತೆಯ ಮೇಲೆ ಅನ್ಯಾಯವಾಗಿ ಆಗುತ್ತಿರುವ ದಾಳಿಗಳನ್ನು ಶಾಂತಿಮಾರ್ಗದಿಂದ ಪ್ರತಿಭಟಿಸಬೇಕು. ಆಗ ವಿಶ್ವದ ಶಾಂತಿಗೂ ಸುಭದ್ರಪ್ರಗತಿಗೂ ಸಹಾಯಕವಾಗುವುದು. ಜನತೆಯ ಬಡತನದ ಸಮಸ್ಯೆಗೆ ಪಾಶ್ಚಾತ್ಯ ಸಮಾಜವಾದ, ಸಾಮ್ಯವಾದಗಳೇ ಅಂತಿಮಪರಿಹಾರವೆಂದು ಭಾವಿಸುವುದು ನಿಜವಾಗಿಯೂ ತಪ್ಪು.

ಹಿಂದೂ ಸಮಾಜ ಧಾರ್ಮಿಕ ತಳಹದಿಯಮೇಲೆ ರಚಿತವಾಗಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಹಿಂದೂ ಧರ್ಮ, ಪಶ್ಚಿಮ ದೇಶಗಳವರು ಭೌತ ವಿಷಯಗಳಲ್ಲಿ ಮಾಡಿರುವುದಕ್ಕಿಂತ ಹೆಚ್ಚು ಶೋಧನೆಗಳನ್ನು ಮಾಡಿದೆ. ಆದರೆ ಮಹತ್ತಮವೂ ಸುಂದರವೂ ಆದ ಆ ಶೋಧನೆಗಳನ್ನು ಕಾಣುವ ಕಣ್ಣುಗಳು ಜನಕ್ಕೆ ಇಲ್ಲ. ಇಂದು ಹಿಂದೂ ಧರ್ಮವನ್ನು ಅದರ ಅನುಯಾಯಿಗಳೇ ವಿಪರೀತಗೊಳಿಸಿ ಅಲ್ಲಗಳೆಯುತ್ತಿರುವರು. ಅದನ್ನು ಅಳಿಸಿಬಿಡುವುದು ಅದಕ್ಕೆ ಮದ್ದಲ್ಲ. ನಿಜವಾದ ಹಿಂದೂ ಭಾವನೆಯನ್ನು ಜನ ತಮ್ಮಲ್ಲಿ ಉಂಟುಮಾಡಿಕೊಳ್ಳಬೇಕು. ಹಿಂದೂ ಧರ್ಮ ಗಂಗಾನದಿಯಂತೆ ಉಗಮಸ್ಥಾನದಲ್ಲಿ ನಿರ್ಮಲವೂ ಶುದ್ಧವೂ ಆಗಿದೆ. ಗಂಗಾನದಿ ಹರಿದುಬರುವಾಗ ಕೊಳೆಯನ್ನು ತೆಗೆದುಕೊಂಡು ಬರುವಂತೆ, ಹಿಂದೂ ಧರ್ಮವೂ ಬೆಳೆಯುತ್ತ ನಡೆದಂತೆ ಕೊಳೆ ಕೂಡಿದೆ ಆದರೆ ಗಂಗಾ ನದಿಯಂತೆ ಒಟ್ಟಿನಲ್ಲದು ಪರೋಪಕಾರಿಯಾಗಿದೆ.

ಹಿಂದೂ ಧರ್ಮ ಒಂದು ಅಧಿಕೃತ ಧರ್ಮವಲ್ಲ. ಅದು ಅದರ ಸುದೈವ. ಮತ್ತು ದುರ್ದೈವ. ಅದಕ್ಕೆ ಇತರ ಮತಗಳಿಗಿರುವಂತೆ (ಬೈಬಲ್, ಕುರಾನ್, eóÉಂಡ್ ಅವೆಸ್ತಗಳಂತೆ) ಒಂದು ಗ್ರಂಥವಿಲ್ಲ. ಆದರೆ ಭಗವದ್ಗೀತೆಯನ್ನು ಹಿಂದೂ ಧರ್ಮದ ಆಧಾರ ಗ್ರಂಥವೆಂದು ಭಾವಿಸಬಹುದು.

ಹಿಂದೂ ಧರ್ಮದ ಲಕ್ಷಣವನ್ನು ಗಾಂಧೀಜಿ ಹೀಗೆ ಹೇಳಿದ್ದಾರೆ. ಅಹಿಂಸಾ ಸಾಧನಗಳ ಮೂಲಕ, ಸತ್ಯವನ್ನು ಹುಡುಕುವುದೇ ಈ ಮತದ ಉದ್ದೇಶ. ಸತ್ಯದ ಕಠೋರ ಶೋಧನವೇ ಹಿಂದೂತ್ವ. ಹಿಂದೂ ಧರ್ಮ ಅತ್ಯಂತ ಸಹಿಷ್ಣು ಧರ್ಮ, ಸಮದರ್ಶಿ ಧರ್ಮ, ಸರ್ವಗ್ರಾಹಿಧರ್ಮ. ಈ ಸರ್ವ ಗ್ರಾಹಿತ್ವವೇ ಅದರ ವಿಶಿಷ್ಟಸೌಂದರ್ಯ. ಬೇರೆ ಧರ್ಮಗಳಲ್ಲಿ ಇರುವುದೆಲ್ಲವನ್ನೂ ಹಿಂದೂ ಧರ್ಮದಲ್ಲಿ ಕಾಣಬಹುದು. ಅದರಲ್ಲಿಲ್ಲದುದು ಅಮುಖ್ಯವೂ ಅನಾವಶ್ಯಕವೂ ಆಗಿದೆ.

ಅಸ್ಪøಶ್ಯತೆ, ಅಸಂಖ್ಯಾತವಾದ ಜಾತಿಗಳು, ಜಾತಿಭೇದ, ಮೂಢನಂಬಿಕೆಗಳು, ಬಾಲ್ಯವಿವಾಹ, ವೈಧವ್ಯದ ಕಠೋರ ನಿಯಮಗಳು, ಎಲ್ಲ ಪ್ರಾಚೀನ ಪದ್ಧತಿಗಳನ್ನೂ ತಾರತಮ್ಯ ಜ್ಞಾನವಿಲ್ಲದೆ ನಿರಾಕರಿಸಿ ನವೀನವಾದುದೆಲ್ಲದರ ಅಂಧಾನುಕರಣೆ, ವ್ಯವಹಾರಗಳಿಂದ ದೇವರನ್ನು ಸಂಪೂರ್ಣವಾಗಿ ಬಹಿಷ್ಕರಿಸಿರುವುದು, ಧರ್ಮ, ನೀತಿ ಮುಂತಾದ ನಿಜವಾದ ಆರ್ಷೇಯದ ಮೌಲ್ಯಗಳನ್ನು ನಿರಾಕರಿಸಿರುವುದು, ಬಡತನ ಬಲ್ಲದತನ ಬಂಡವಾಳ ಕೂಲಿ ಸರ್ವಸಮಾನತೆ ಇವುಗಳಿಗೆಲ್ಲ ಪಾಶ್ಚಾತ್ಯ ಮಾರ್ಗಗಳ ಹೊರತು ಬೇರೆ ದಾರಿ ಇಲ್ಲವೆಂದು ಅವನ್ನೇ ಅನುಸರಿಸುವುದು-ಇವೇ ಹಿಂದೂ ಸಮಾಜದ ದೌರ್ಬಲ್ಯವಾಗಿದೆ. ಹಿಂದೂ ಧರ್ಮದಲ್ಲಿ ಅನ್ಯಮತದಿಂದ ಹಿಂದೂ ಧರ್ಮಕ್ಕೆ ಮತಾಂತರವಿಲ್ಲದುದನ್ನು ಗಾಂಧೀಜಿ ದೊಡ್ಡ ದೋಷವೆಂದು ಎಣಿಸುವುದಿಲ್ಲ. ಯಾವ ಮತದ ಯೋಗ್ಯತೆಯೂ ಬರಿಯ ಸಂಖ್ಯಾಬಲವಲ್ಲ. ಮತಾನುಯಾಯಿಗಳೆಲ್ಲ ತಮ್ಮ ಧರ್ಮದ ತಿರುಳನ್ನು ಅರಿತು ಅದರಂತೆ ಆಚರಿಸುವುದು ಆ ಧರ್ಮದ ಶಕ್ತಿ.

ಹಿಂದೂ ಸಮಾಜದ ಜಾತಿಪದ್ಧತಿ, ಅಸ್ಪøಶ್ಯತೆ, ಮೂಢನಂಬಿಕೆ, ಬಾಲ್ಯವಿವಾಹ, ವಿಧವೆಯರ ಕಷ್ಟಸ್ಥಿತಿ, ಸ್ತ್ರೀಸ್ವಾತಂತ್ರ್ಯ ಇವನ್ನೆಲ್ಲ ತಿದ್ದಲು ಸುಧಾರಣೆ ಅವಶ್ಯಕವೆಂದು ಗಾಂಧೀಜಿ ಅಭಿಮತ. ಸಮಾಜಸುಧಾರಣೆ ರಾಜಕೀಯಕ್ಕಿಂತ ಕಡಿಮೆಯದಲ್ಲ. ಸಮಾಜ ಸುಧಾರಕರು ತೆವಳುತ್ತ ನಡೆಯಬೇಕು. ಶಾಂತರಾಗಿರಬೇಕು. ನಿಸ್ಸ್ವಾರ್ಥತೆಯಿಂದಲೂ ಆತ್ಮತ್ಯಾಗದಿಂದ, ಮನವೊಲಿಸುವ ಮಾರ್ಗದಿಂದಲೂ ಸೇವೆ ಸಲ್ಲಿಸಬೇಕು. ಹಿಂದೂ ಸಮಾಜವನ್ನು ಒಂದೇ ಸಲಕ್ಕೆ ವಿವೇಚನೆಯಿಲ್ಲದೆ ಪಾಶ್ಚಾತ್ಯ ಸಮಾಜವಾಗಿ ಪರಿವರ್ತಿಸಲು ಪ್ರಯತ್ನಿಸಬೇಕು ವಿವೇಚನಾ ರಹಿತಕಾರ್ಯ. ಯಾವ ರೀತಿಯಲ್ಲಿಯೂ ಹಿಂಸಾಮಾರ್ಗ ವಜ್ರ್ಯ.

ಆದರ್ಶ ಸಮಾಜದಲ್ಲಿ ಸ್ತ್ರೀಪುರಷರಲ್ಲಿ ಮೇಲು-ಕೀಳೆಂಬ ಭೇದವಿಲ್ಲ. ಅವರು ವಿವಾಹದಲ್ಲಿ ಗೆಳೆಯರಾಗಿ ಸಮಾನರಾಗಿ ಕೂಡುತ್ತಾರೆ. ಪತಿ ಸ್ವಾಮಿನ್ ಎಂದು ಕರೆಯಲ್ಪಟ್ಟರೆ ಪತ್ನಿ, ಸ್ವಾಮಿನಿ. ಪತ್ನಿಗೆ ಪತಿ ಗುರು. ಪತಿಗೆ ಪತ್ನಿ ನೆರವೀವ ಸಂಗಾತಿ. ಜೀವನದ ಕಾರ್ಯವನ್ನು ಮತ್ತು ಕರ್ತವ್ಯಗಳನ್ನು ಎಸಗುವುದರಲ್ಲಿ ಒಬ್ಬರು ಮತ್ತೊಬ್ಬರ ಜೊತೆ ಸಹಕರಿಸುವರು. ಒಬ್ಬರ ಅಭಿವೃದ್ಧಿ ಮಾರ್ಗದಲ್ಲಿ ಒಬ್ಬರು ಅಡ್ಡಿಯಾಗರು. ಒಬ್ಬರಲ್ಲೆ (ಹೆಣ್ಣಾಗಲಿ, ಗಂಡಾಗಲಿ) ಭಾವಸಂಪತ್ತಿಯುಳ್ಳವರಾದರೆ, ಆ ಭಾವ ತಮ್ಮ ಸಹಭಾಗಿಗೂ ಉಂಟಾಗುವಂತೆ ಮಾಡುತ್ತಾರೆ. ಒಬ್ಬರಿಗೆ ಒಬ್ಬರು ನಿಜವಾದ ಗುರುಗಳೂ ಮಾರ್ಗದರ್ಶಕರೂ ಆಗುತ್ತಾರೆ. ಇಬ್ಬರಲ್ಲಿ ಯಾರೊಬ್ಬರ ಬುದ್ಧಿ ಭಾವ ಸಂಯಮ ಆದರ್ಶಾನುಕರಣೆ ದೈವಭಕ್ತಿ ಬ್ರಹ್ಮಚರ್ಯಗಳಿಗೆ ಎಂದಿಗೂ ಚ್ಯುತಿಬಾರದು. ಒಂದು ಸುವ್ಯವಸ್ಥಿತ ಸಮಾಜದಲ್ಲಿ, ಕುಟುಂಬಕ್ಕೆ ಜೀವನೋಪಾಯ ಕಲ್ಪಿಸುವ ಹೆಚ್ಚುವರಿ ಹೊರೆ ಸ್ತ್ರೀಯ ಪಾಲಿಗೆ ಬರಬಾರದು. ಮಕ್ಕಳ ಪೋಷಣೆ, ಗೃಹಕೃತ್ಯನಿರ್ವಹಣೆ ಇವೇ ಆಕೆಯ ಸರ್ವಶಕ್ತಿಗಳನ್ನೂ ಪೂರ್ಣವಾಗಿ ಆಕರ್ಷಿಸಲು ಸಾಕು. ಆಕೆಗೆ ಇನ್ನೂ ಹೆಚ್ಚು ವ್ಯವಧಾನವೂ ಶಕ್ತಿಯೂ ಇದ್ದಲ್ಲಿ ಅದು ಸಮಾಜಸೇವೆಗೆ ಮೀಸಲಾಗಬೇಕು.

ವಿವಾಹ, ಗಂಡು ಹೆಣ್ಣು ಇಬ್ಬರಿಗೂ ಒಂದು ಪವಿತ್ರ ಸಂಸ್ಕಾರ. ಸತಿಪತಿಯರ ಸಂಯೋಗ, ಬರಿಯ ದೈಹಿಕ ಸಂಯೋಗವಲ್ಲ; ಅದು ಎರಡು ಆತ್ಮಗಳ ನಿಜಸಂಯೋಗ.

ಇಂಥ ಗೃಹಸ್ಥಾಶ್ರಮ ಉಳಿದ ಎಲ್ಲ ಆಶ್ರಮಗಳಿಗಿಂತ ಉತ್ತಮ.

ಗಾಂಧೀ ಸಮಾಜವಾದದಲ್ಲಿ ವಿವಾಹ ಒಂದು ನೈಸರ್ಗಿಕ ಅಂಶ. ಅದನ್ನು ಯಾವ ಅರ್ಥದಲ್ಲಿಯೂ ಕೀಳೆಂದುಭಾವಿಸುವುದು ಶುದ್ಧಾಂಗ ತಪ್ಪು. ವಿವಾಹವನ್ನು ಒಂದು ಪವಿತ್ರ ಸಂಸ್ಕಾರವೆಂದು ಭಾವಿಸಿ, ಅದರ ಅನಂತರವೂ ಆತ್ಮಸಂಯಮದ ಜೀವನವನ್ನು ನಡೆಸುವುದು ಆದರ್ಶ. ಹಿಂದೂ ಧರ್ಮದ ನಾಲ್ಕು ಆಶ್ರಮಗಳಿಗೂ ಅದೇ ಆಧಾರ. ಆದರೆ ದುರದೃಷ್ಟವಶಾತ್ ಆಧುನಿಕ ಕಾಲದಲ್ಲಿ ವಿವಾಹ ಒಂದು ದೈವಿಕ ಸಂಯೋಗವೆಂದು ಪರಿಗಣಿಸಲ್ಪಟ್ಟಿದೆ. ವಿವಾಹದ ಕಟ್ಟು ಸಡಿಲವಾದಾಗ ಸಂಯಮದ ಆಚರಣೆಯಿಲ್ಲದ ಸ್ತ್ರೀ, ವೈಮನಸ್ಯದ ಮೂಲವಾದಾಳು. ನಿಗ್ರಹವಿಲ್ಲದೆ ಹೋದಾಗ ಮಾನವರು ಪಶುಗಳಂತೆ.

ವಿವಾಹ ಮತ್ತು ಕಾಮತೃಪ್ತಿಗಳ ವಿಷಯದಲ್ಲಿ ಗಾಂಧೀಜಿ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿವಾಹದ ಗುರಿ ಸಂತಾನಾಪೇಕ್ಷೆಗಾಗಿ ಮಾತ್ರ. ಸಂತಾನಾಪೇಕ್ಷೆಯಿಲ್ಲದಿದ್ದರೆ ವಿವಾಹ ಖಂಡಿತ ಕೂಡದು. ಸಂತಾನ ಹೊಂದಬೇಕೆಂಬ ಆಸೆ ಸ್ವಾಭಾವಿಕವಾದುದು. ಅದು ತೃಪ್ತಿಯಾದ ಕೂಡಲೇ ಸಂಭೋಗವೇ ಕೂಡದು. ಕಾಮತೃಪ್ತಿಯ ವಿಷಯದಲ್ಲಿ ಸ್ತ್ರೀ ಪುರುಷರು ಒಬ್ಬರನ್ನೊಬ್ಬರು ಬಲಾತ್ಕರಿಸಬಾರದು. ಸಂತಾನಾಪೇಕ್ಷೆ ಮುಗಿದ ಕೂಡಲೇ ಕಾಮರಹಿತ ವಿವಾಹಜೀವನವನ್ನು ನಡೆಸಬೇಕು. ಕಾಮವನ್ನು ತೃಪ್ತಿಮಾಡಿಕೊಳ್ಳದೆ ಇದ್ದರೆ ದೇಹಾರೋಗ್ಯ ಕೆಡುತ್ತದೆ ಎಂಬ ಭಾವನೆ ಶುದ್ಧತಪ್ಪು. ವೀರ್ಯನಾಶದಿಂದ ಯಾರಿಗೂ ಯಾವ ಕಾಲದಲ್ಲಿಯೂ ಒಳ್ಳೆಯದಾಗಿಲ್ಲ. ದಂಪತಿಗಳಲ್ಲಿ ಯಾರೊಬ್ಬರೂ ಸಂಯಮದ ಎಲ್ಲ ಕಟ್ಟುಪಾಡುಗಳನ್ನು ಮುರಿಯುವುದಾದರೆ, ವಿವಾಹಿತ ಜೀವನ ಅಸಹ್ಯವೆನಿಸುತ್ತದೆ. ದಂಪತಿಗಳು ಒಮ್ಮತದಿಂದ, ಸಂಯೋಗ ಅಪೇಕ್ಷಣೀಯವೆಂದು ಭಾವಿಸುವುದಾದರೆ ಇತರರೆಲ್ಲರನ್ನೂ ಬಿಟ್ಟು ಅವರಿಬ್ಬರೇ ಸಂಯೋಗ ಹೊಂದುವ ಅಧಿಕಾರವನ್ನು ವಿವಾಹ ಸ್ಥಿರಪಡಿಸುತ್ತದೆಯೇ ಹೊರತು, ಇಬ್ಬರಲ್ಲಿ ಯಾರೊಬ್ಬರೂ ಮತ್ತೊಬ್ಬರ ಇಚ್ಛೆಯಂತೆ ಸಂಯೋಗಕ್ಕೆ ತಲೆಬಾಗುವಂತೆ ಬಲಾತ್ಕರಿಸುವ ಅಧಿಕಾರವನ್ನು ನೀಡುವುದಿಲ್ಲ. ಇಬ್ಬರಲ್ಲಿ ಯಾರೊಬ್ಬರಾಗಲಿ, ನೈತಿಕ ಅಥವಾ ಇತರ ಯಾವ ಕಾರಣಕ್ಕೇ ಆಗಲಿ, ಮತ್ತೊಬ್ಬರ ಇಚ್ಛೆಯಂತೆ ನಡೆಯದಿದ್ದರೆ, ವಿಚ್ಛೇದನವೇ ಆಯ್ದುಕೊಳ್ಳಬೇಕಾದ ಅವಕಾಶವೆನಿಸಿದಲ್ಲಿ, ಅದನ್ನು ಒಪ್ಪಿಕೊಳ್ಳಲು ಹಿಂದೆಗೆಯಬಾರದು. ಆದರೆ ಅದು ನೈತಿಕ ಅಥವಾ ಸಂಯಮದ ಕಾರಣಗಳಿಗಾಗಿ ಆಗಬೇಕೇ ಹೊರತು ಅನ್ಯಸುಖಲೋಲುಪತೆಗಾಗಿ ಆಗಕೂಡದು. ಪತ್ನಿ ತನ್ನ ಸ್ವತಂತ್ರವಾದ ಮಾರ್ಗವನ್ನು ಆರಿಸಿಕೊಂಡು, ತಾನು ಸರಿ ಎಂದು ಭಾವಿಸಿರುವ ಘನವಾದ ಉದ್ದೇಶಕ್ಕಾಗಿ ನಮ್ರಪೂರ್ವಕ ಧೈರ್ಯದಿಂದ ಪರಿಣಾಮಗಳನ್ನು ಎದುರಿಸಬೇಕು.

ವಿವಾಹ ಬಾಳಿನಲ್ಲಿ ಸ್ವಾಭಾವಿಕ ಅಂಶ. ಭೋಗಾಪೇಕ್ಷೆಯಿಂದ ಚೆನ್ನಾಗಿಯೂ ನಿಜವಾಗಿಯೂ ನಡೆಸುವ ವೈವಾಹಿಕ ಜೀವನ ಅನೇಕ ವಿಧಗಳಲ್ಲಿ ಅವಿವಾಹಿತ ಜೀವನಕ್ಕಿಂತ ಹೆಚ್ಚು ಕಷ್ಟವಾದುದು. ಸಮಾಜಸೇವೆಯನ್ನು ಅಜೀವ ಪರ್ಯಂತ ಮಾಡುವ ದೃಷ್ಟಿಯಿಂದ ಕೆಲವು ಮಹಿಳೆಯರು ಅವಿವಾಹಿತರಾಗಿಯೇ ಉಳಿಯಲು ಬಯಸಬಹುದು. ಅಂಥವರೂ ವಿವಾಹಿತರಾಗಿ ಪತಿಪತ್ನಿಯರಿಬ್ಬರೂ ಪರಸ್ಪರ ಸಹಾಯಕರಾಗಿ ಸಮಾಜಸೇವೆಯನ್ನು ನಡೆಸುವುದು ಉತ್ತಮ. ವಿವಾಹಿತರಾಗಿ ಕುಟುಂಬ ಸೇವೆ ನಡೆಸುವುದು ನಿರರ್ಥಕವಲ್ಲ. ರಾಷ್ಟ್ರಸೇವೆ ಎಂದರೆ ಮಾನವಸೇವೆ. ಹಾಗೆಯೇ ನಿಸ್ಸ್ವಾರ್ಥ ಕುಟುಂಬ ಸೇವೆಯೂ ರಾಷ್ಟ್ರಸೇವೆ ಎನಿಸೀತು. ಧರ್ಮ ಅರ್ಥ ಕಾಮಗಳಲ್ಲಿ, ಪತಿಪತ್ನಿಯರಲ್ಲಿ ಸಹಮತವಿರಬೇಕೆಂಬುದು ಹಿಂದೂ ವಿವಾಹದ ಆರ್ಷೇಯ ಕಟ್ಟಳೆ. ಆತ್ಮಸಾಕ್ಷಿಗೆ ವಿರೋಧವಾದ ಕಟ್ಟಳೆಯನ್ನು ಗಂಡನಾಗಲೀ ಹೆಂಡತಿಯಾಗಲೀ ನಡೆಸಬೇಕಾದುದಿಲ್ಲ. ಗಂಡಹೆಂಡಿರು ಪರಸ್ಪರ ಪ್ರೇಮವುಳ್ಳವರಾಗಿ ವಶವರ್ತಿಗಳಾಗಿರಬೇಕು. ಹಿಂದೂ ಧರ್ಮ ಪುರುಷ-ಸ್ತ್ರೀ ಇಬ್ಬರಿಗೂ ಅವರು ಅಪೇಕ್ಷಿಸುವ ರೀತಿಯಲ್ಲಿ ಅವರ ಹುಟ್ಟಿನ ಏಕಮಾತ್ರ ಗುರಿಯಾದ ಆತ್ಮಸಾಕ್ಷಾತ್ಕಾರವನ್ನು ಹೊಂದಲು ಪೂರ್ಣ ವ್ಯಕ್ತಿಸ್ವಾತಂತ್ರ್ಯವನ್ನು ನೀಡುತ್ತದೆ. ಸ್ತ್ರೀಪುರಷರಿಗೆ, ಹಿಂದೂ ವಿಧವೆಯರು ಇಂದ್ರಿಯ ನಿಗ್ರಹಮಾಡಿ ಕುಟುಂಬದ ಮತ್ತು ಸಮಾಜದ ಸೇವೆ ಸಲ್ಲಿಸುತ್ತಿರುವುದು ಉನ್ನತ ಧ್ಯೇಯದಿಂದಲೆ. ಆದರೆ ಬಾಲವಿಧವೆಯರು ಪುನರ್ವಿವಾಹವಾಗಬಹುದು. ಯಾರೇ ಆಗಲಿ, ಸಂಯಮ ಸಾಧ್ಯವಿಲ್ಲದಿದ್ದರೆ ಪುನರ್ವಿವಾಹಿತರಾಗಿ ಗೃಹಸ್ಥಾಶ್ರಮ ನಡೆಸಬೇಕೇ ಹೊರತು ಸ್ವೇಚ್ಛಾಚಾರಿಗಳಾಗಬಾರದು.

ಗಾಂಧೀಜಿಯ ದೃಷ್ಟಿಯಲ್ಲಿ ಬ್ರಹ್ಮಚರ್ಯವೆಂಬುದು ಮನುಷ್ಯನಿಗೆ ದೊರಕಿರುವ ಅತ್ಯಮೂಲ್ಯ ವಸ್ತು: ಭಾರತೀಯ ಸಮಾಜವಿಜ್ಞಾನ ಜಗತ್ತಿಗೆ ಕೊಟ್ಟಿರುವ ಶುಕ್ರಸಮಪ್ರಕಾಶಮಾನವಾದ ತೇಜೋನಿಧಿ. ಮೇಲುನೋಟಕ್ಕೆ ಬರಿಯ ಜನನೇಂದ್ರಿಯ ನಿಯಂತ್ರಣವಷ್ಟೇ ಬ್ರಹ್ಮಚರ್ಯವೆಂದು ತೋರಿದರೂ ಅದಕ್ಕೆ ಎಲ್ಲ ಬಗೆಯ ನಿಗ್ರಹಗಳೂ ಅಗತ್ಯವಾಗುತ್ತದೆ. ಧ್ಯೇಯಸಾಧನೆಯ ಉತ್ಕಟೇಚ್ಛೆಯ ಜೊತೆಯಲ್ಲಿಯೇ ಅನುಷ್ಠಾನವೂ ಅಗತ್ಯ. ಬ್ರಹ್ಮಚಾರಿ ಮನೋ ವಾಕ್ ಕಾಯಗಳನ್ನು ನಿಯಂತ್ರಿಸಬೇಕು. ಆಲೋಚನೆಯ ಮೇಲೆ ನಿಯಂತ್ರಣವಿಲ್ಲದಿದ್ದರೆ ಉಳಿದೆರಡರ ನಿಯಂತ್ರಣ ವ್ಯರ್ಥ. ಬ್ರಹ್ಮಚಾರಿ ನಿರೋಗಿಯೂ ದೀರ್ಘಾಯುವೂ ಆಗಿರುವನು. ಅವನಿಗೆ ಮುಪ್ಪೂ ಬುದ್ಧಿಮಾಂದ್ಯವೂ ಇಲ್ಲ. ಗೀತೆಯಲ್ಲಿ ಬಣ್ಣಿಸಿದ ಸ್ಥಿತಪ್ರಜ್ಞನ ಲಕ್ಷಣಗಳನ್ನೆಲ್ಲ ಅವನು ತೋರುವನು.

ಬ್ರಹ್ಮಚರ್ಯಕ್ಕೆ ಸಾಧನ ಯಾವುದು? ಸತ್ಯದಲ್ಲಿ ಪರಮಾತ್ಮನಲ್ಲಿ ಅವಲಂಬನೆ. ವಿವರವಾಗಿ ಹೇಳುವುದಾದರೆ ಅಹಿಂಸೆ, ಸತ್ಯ, ಅಸ್ತೇಯ (ಇತರರದನ್ನು ಅಪಹರಿಸದಿರುವುದು), ಬ್ರಹ್ಮಚರ್ಯ, ಅಪರಿಗ್ರಹ, ಕಾಯಕ, ಜಿಹ್ವಾ ನಿಗ್ರಹ, ಅಭಯ, ಸರ್ವಧರ್ಮಸಮನ್ವಯ, ಸ್ವದೇಶಿ ಮತ್ತು ಅಸ್ಪøಶ್ಯತಾ ನಿವಾರಣೆ ಈ ಎಲ್ಲ ನಿಯಮಗಳನ್ನೂ ತಪ್ಪದೆ ಆಚರಿಸುವವನು ಮಾತ್ರ ಬ್ರಹ್ಮಚಾರಿ.

ಬ್ರಹ್ಮಚರ್ಯದ ಗುರಿ ಯಾವುದು? ಪರಮಾತ್ಮಸಾನ್ನಿಧ್ಯ ಅಥವಾ ಬ್ರಹ್ಮಸಾಮೀಪ್ಯ. ಬ್ರಹ್ಮಚರ್ಯ ಪಾಲನೆಗೆ ನೇರವಾದ ದಾರಿ ಪರಮಾತ್ಮಸ್ಮರಣೆ, ರಾಮನಾಮ.

ಇಂಥ ಆದರ್ಶ ಬ್ರಹ್ಮಚರ್ಯ, ಸ್ಥಿತಪ್ರಜ್ಞರಿಗೆ ಮಾತ್ರ ಸಾಧ್ಯವೆಂದು ಉಳಿದವರು ಇಂದ್ರಿಯಗಳ ಸ್ವೇಚ್ಛಾವರ್ತನೆಗೆ ಬಲಿಯಾಗಬಾರದು. ಸಂಯಮ ಎಲ್ಲರಿಗೂ ಅವಶ್ಯಕ. ಗೃಹಸ್ಥರಾದ ಸ್ತ್ರೀಪುರಷರು ಸಹ ಸಂತಾನಾಪೇಕ್ಷೆ ತೀರಿದ ಅನಂತರ ಬ್ರಹ್ಮಚರ್ಯವನ್ನು ಅನುಸರಿಸುವುದರಿಂದ ಅವರ ಬಾಳಿನಲ್ಲಿ ಹೆಚ್ಚು ಕಾಂತಿಯೂ ಸುಖವೂ ದೇಹದಲ್ಲಿ ಬಲವೃದ್ಧಿಯೂ ಉಂಟಾಗುವುದಲ್ಲದೆ, ದಂಪತಿಗಳಾದುದೇ ಇಂದ್ರಿಯ ಲಂಪಟತನಕ್ಕಾಗಿ ಎಂಬ ತಪ್ಪು ಭಾವ ಮರೆಯಾಗಿ ಪರಸ್ಪರರಲ್ಲಿರುವ ಗುಣೌನ್ನತ್ಯವನ್ನರಿತು ಸೇವಾಕಾರ್ಯದಲ್ಲಿ ಒಬ್ಬರಿಗೊಬ್ಬರು ಮಿತ್ರರಾಗಿ ಪರಸ್ಪರ ಆತ್ಮೋದ್ಧಾರಕ್ಕಾಗಿ ತೊಡಗಲು ಸಹಾಯಕವಾಗುವುದು. ಸ್ವತಃಗಾಂಧೀಜಿಯೇ ತಮ್ಮ ಮೂವತ್ತೈದನೆಯ ವಯಸ್ಸಿನಿಂದಲೇ ಕಸ್ತೂರ ಬಾ ಅವರೊಂದಿಗೆ ದೈಹಿಕ ಸಂಪರ್ಕವನ್ನು ತೊರೆದರಾದರೂ ಶ್ರೀರಾಮ ಸೀತೆಯರಂತೆ ಆದರ್ಶ ದಂಪತಿಗಳಾಗಿದ್ದರು.

ಸಂತತಿನಿಯಂತ್ರಣದ ವಿಷಯದಲ್ಲಿ ಗಾಂಧೀಜಿ ಸ್ಪಷ್ಟವಾದ ಮತ್ತು ಖಚಿತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜನನವನ್ನು ನಿಯಂತ್ರಿಸಬೇಕೆಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಪ್ರಾಚೀನಕಾಲದಿಂದಲೂ ಇದಕ್ಕಾಗಿ ಅನುಸರಿಸಿದ ಮಾರ್ಗ ಬ್ರಹ್ಮಚರ್ಯ ಅಥವಾ ಸಂಯಮ. ಸಂತತಿ ನಿಯಂತ್ರಕರು (ಸರ್ಕಾರವೇ ಆಗಲಿ, ಅದರ ಪ್ರಚಾರಕರೇ ಆಗಲಿ) ಕೃತಕ ಉಪಾಯಗಳನ್ನು ಹುಡುಕುವ ಬದಲು ಆತ್ಮನಿಗ್ರಹದ ಸಾಧನಗಳನ್ನು ಶೋಧಿಸಿದರೆ ಮಾನವ ಕುಲವೇ ಅವರಿಗೆ ಋಣಿಯಾಗಿರುವುದು. ಸ್ತ್ರೀಪುರುಷ ಸಂಯೋಗ ಬರಿ ಭೋಗಕ್ಕಾಗಿರದೆ ಸಂತತಿ ಜನನಕ್ಕಾಗಿದೆ. ಸಂತತಿಜನನದ ಇಚ್ಛೆಯಿಲ್ಲದೆ ಮಾಡಿದ ಸ್ತ್ರೀಸಂಭೋಗ ಮಹಾಪರಾಧ. ಕೃತಕ ಉಪಾಯಗಳಿಂದ ದುರಾಚಾರಕ್ಕೆ ಉತ್ತೇಜನ ದೊರೆಯುತ್ತದೆ. ಅಲ್ಲದೆ ಅಂಥ ಉಪಾಯಗಳ ಅಂಗೀಕಾರದಿಂದ ನಪುಂಸಕತ್ವವೂ ಸ್ನಾಯು ದೌರ್ಬಲ್ಯವೂ ಹುಚ್ಚೂ ಉಂಟಾಗುತ್ತದೆ. ಕೃತಕ ಉಪಾಯಗಳನ್ನು ಪುರಸ್ಕರಿಸುವ ಜನರು, ತಮ್ಮ ಅಪಾಯಕರಚಟುವಟಿಕೆಯನ್ನು ತಡೆಹಿಡಿದು, ವಿವಾಹಿತರಿಗೂ ಅವಿವಾಹಿತರಿಗೂ ಬ್ರಹ್ಮಚರ್ಯೆಯಿಂದಾಗುವ ಹಿತವನ್ನು ಬಿಂಬಿಸಬೇಕು. ಸಂತತಿ ನಿಯಮನಕ್ಕೆ ಇದೊಂದೇ ನೇರವಾದ ಹಾಗೂ ಉದಾತ್ತವಾದ ಉಪಾಯ.

ಪ್ರಕೃತಿಯ ನಿಯಮ ಕಠೋರ. ತಾನು ಎಸಗಿದ ಕರ್ಮಗಳ ಫಲವನ್ನು ತಪ್ಪಿಸಿಕೊಳ್ಳಲೆತ್ನಿಸುವುದು ತಪ್ಪು ಹಾಗೂ ಅನೀತಿ. ಯಾವ ಸಮಾಜ, ಆಗಲೇ ಅನೇಕ ಕಾರಣಗಳಿಂದ ಸತ್ತ್ವಹೀನವಾಗಿದೆಯೋ ಅದು ಕೃತಕ ಸಾಧನಗಳಿಂದ ಇನ್ನೂ ಸತ್ತ್ವಹೀನವಾಗುತ್ತದೆ. ಕೃತಕ ಸಾಧನಗಳಿಂದ ಸ್ತ್ರೀಯನ್ನು ಪುರುಷ ಮತ್ತಷ್ಟು ತನ್ನ ಭೋಗಪಾಲನೆಯ ಸಾಮಗ್ರಿಮಾಡಿಕೊಂಡು ಅಧೋಗತಿಗಿಳಿಸುತ್ತಾನೆ. ಪುರುಷ ನಿಜವಾಗಿಯೂ ಸ್ತ್ರೀಗೆ ಒಳ್ಳೆಯದನ್ನು ಮಾಡಲು ಬಯಸುವುದಾದರೆ ಅವನು ತನ್ನ ಮೇಲೆ ನಿಗ್ರಹವನ್ನು ಹಾಕಿಕೊಳ್ಳಲಿ. ಅತಿಸಂತಾನ ಪಾಪಕರ. ಆದರೆ ತಮ್ಮ ಕರ್ಮದ ಪರಿಣಾಮವನ್ನು ತಪ್ಪಿಸಿಕೊಳ್ಳಲೆತ್ನಿಸುವುದು ಇನ್ನೂ ಹೆಚ್ಚು ಪಾಪಕರ. ಇದರಿಂದ ಮಾನವನ ಮಾನವತ್ವವೇ ಹೋಗುತ್ತದೆ.

ಜನನನಿಯಂತ್ರಣ ಪ್ರತಿಪಾದಕರು ಕೃತಕಸಾಧನಗಳ ಮೂಲಕ ಮಾನವನ ಸರ್ವಕಾಲವೂ ಇಂದ್ರಿಯಲಂಪಟವಾಗಲು ಸೌಕರ್ಯವನ್ನು ಒದಗಿಸುತ್ತಿದ್ದಾರೇ ಹೊರತು ಒಂದು ಸಲವಾದರೂ ಸಂಯಮದ ಆದರ್ಶವನ್ನು ಜನರ ಮುಂದೆ ಇಡುವುದು ಅವಶ್ಯಕವೆಂಬುದನ್ನು ಪರಿಗಣಿಸಿಲ್ಲ. ಕೃತಕೋಪಾಯಗಳಿಗೆ ಅನೇಕ ಕೋಟಿ ರೂಪಾಯಿಗಳನ್ನು ವೆಚ್ಚಮಾಡುವಂತೆ ಸಂಯಮ ಸಂತಾನ ನಿಯಂತ್ರಣಕ್ಕೂ ಸ್ತ್ರೀ ಪುರುಷರು ಯಾವಾಗಲೂ ಭೋಗಲಾಲಸರೂ ಕಾಮುಕರೂ ಆದ ಪಶುಗಳಾಗಿರಬೇಕೆಂದು ನಿರ್ಣಯಿಸುವುದು ಸಮಂಜಸವಾಗಲಾರದು. ನಮ್ಮ ವಿಜ್ಞಾನ ಇಷ್ಟೊಂದು ಬೆಳೆದಿದ್ದರೂ ಮನುಷ್ಯದೇಹದ ರಹಸ್ಯದ ವಿಷಯ ನಮಗೆ ತಿಳಿದಿರುವುದು ಬಲು ಕಡಿಮೆ. ಅದರ ಮೇಲೆ ಈ ಬಗೆಯ ಕೃತಕ ಆಘಾತಗಳಿಂದ, ಮುಂದಲ ಜನಾಂಗದ ಮೇಲೆ ಏನು ಪರಿಣಾಮವಾಗುವುದೋ ಎಂಬ ಶಂಕೆ ಅನಿವಾರ್ಯ.

ಇವು ಸಮಾಜದ ಬಗ್ಗೆ ಗಾಂಧೀಜಿ ತಾಳಿದ್ದ ಕೆಲವು ಮೂಲಭೂತ ಅಭಿಪ್ರಾಯಗಳು. (ಜಿ.ಆರ್.ಎ.)

ಗಾಂಧೀ ಸಾಹಿತ್ಯ: ಗಾಂಧೀಜಿ ತಮ್ಮ ಜೀವನದಲ್ಲಿ ಸುಮಾರು ಆರು ದಶಕಗಳ ಕಾಲವನ್ನು (1880-1948) ಒಂದಲ್ಲ ಒಂದು ಬಗೆಯ ಲೋಕಹಿತಕಾರ್ಯಕ್ಕೆ ವಿನಿಯೋಗಿಸಿದರು. ಅಂಥ ಸಮಯಗಳಲ್ಲಿ ಅವರು ಆಡಿದ ಮಾತು, ಬರೆದ ಪತ್ರ, ಮಾಡಿದ ಭಾಷಣ-ಇವೆಲ್ಲವನ್ನೂ ಒಟ್ಟಾಗಿ ಗಾಂಧೀ ಸಾಹಿತ್ಯವೆಂದು ಕರೆಯಬಹುದು.

ಅವರ ಬರೆಹಗಳ ರಾಶಿ ಬೆರಗುಪಡಿಸುವಷ್ಟಿದ್ದರೂ ಅದಾವುದನ್ನೂ ಅವರು ಬರೆಯಬೇಕೆಂದೇ ಬರೆದವರಲ್ಲ. ಅವರು ನಿಜಕ್ಕೂ ಯಾವ ಒಂದು ತತ್ತ್ವಪಂಥವನ್ನಾಗಲೀ ಜೀವನದರ್ಶನವನ್ನಾಗಲೀ ಸ್ಥಾಪಿಸ ಹೊರಟವರೂ ಅಲ್ಲ. ಹಾಗೆ ಮಾಡಲು ಅವರಿಗೆ ಸಾಕಷ್ಟು ಕಾಲಾವಕಾಶವಾಗಲೀ ಮಾಡುವ ಮನೋಧರ್ಮವಾಗಲೀ ಇರಲಿಲ್ಲ. ಅವರಿಗೆ ಸತ್ಯ ಮತ್ತು ಅಹಿಂಸೆಯಲ್ಲಿ ಅಪಾರ ಶ್ರದ್ಧೆ ಇತ್ತಾಗಿ ಅವು ತೋರಿದ ಮಾರ್ಗದಲ್ಲಿ ಅವರು ನಡೆಯಲು ಯತ್ನಿಸಿದರು; ತಮ್ಮ ಸುತ್ತಣ ಜನತೆಯನ್ನೂ ನಡೆಯುವಂತೆ ಪ್ರೇರಿಸಿದರು. ಹೀಗೆ ಮಾಡುವಾಗ ತಮಗೆ ಸತ್ಯವೆಂದು ಕಂಡದ್ದನ್ನು ಹೇಳಿದರು. ಇದೇ ಗಾಂಧೀ ತತ್ತ್ವ, ಗಾಂಧೀ ಸಾಹಿತ್ಯ.

ಗಾಂಧೀಜಿ ಜೀವನದ ಎಲ್ಲ ಕ್ಷೇತ್ರಗಳನ್ನು ಹೊಕ್ಕು ನೋಡಿದ್ದಾರೆ. ರಾಜಕೀಯ ಸಾಮಾಜಿಕ, ಧಾರ್ಮಿಕ, ಸಾಂಸಾರಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಸ್ಯೆಗಳನ್ನವರು ಎದುರಿಸಿದ್ದಾರೆ. ಭಾಷೆ, ಸಾಹಿತ್ಯ, ವಿದ್ಯಾಭ್ಯಾಸ, ವ್ಯವಸಾಯ, ಕೈಗಾರಿಕೆ, ಕಾರ್ಮಿಕರು-ಈ ಎಲ್ಲ ಕ್ಷೇತ್ರಗಳಲ್ಲೂ ಅವರು ಸತ್ಯಾನ್ವೇಷಣೆಗಾಗಿ ಪ್ರವೇಶಿಸಿದ್ದುಂಟು. ಕೊನೆಗೆ ವ್ಯಕ್ತಿಜೀವನದಲ್ಲಿ ಆಹಾರ, ಉಡುಪು, ನಡವಳಿಕೆ ಹೇಗಿರಬೇಕೆಂಬುದರ ಬಗೆಗೂ ಅವರು ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ.

ಆಶ್ಚರ್ಯದ ಸಂಗತಿಯೆಂದರೆ ಸಾಮಾಜಿಕವಾಗಿ ಶತಮಾನಗಳಿಂದ ಕಂಡುಬರುತ್ತಿದ್ದ ಸಮಸ್ಯೆಗಳಿಗೆ ಸಮಂಜಸವಾದ ಉತ್ತರಗಳನ್ನು ಹುಡುಕಲು ಅವರು ಪ್ರಯತ್ನಿಸಿದ್ದಾದರೂ ಅವರ ಅಭಿಪ್ರಾಯಗಳು ಯಾವ ಸಂಪ್ರದಾಯದ ಕಟ್ಟಿಗೂ ಒಳಗಾಗಿಲ್ಲ.

ಅವರ ಮಾರ್ಗವೂ ಅಷ್ಟೆ. ಸಮಸ್ಯೆ ದೊಡ್ಡದಾಗಿರಲಿ, ಸಣ್ಣದಾಗಿರಲಿ, ಪರಿಣಾಮಕಾರಿಯೂ ನೂತನವೂ ಆಗಿರುತ್ತಿತ್ತು. ಹೊಸ ಪ್ರಯೋಗಗಳಿಂದ ಹೊಳೆಯುತ್ತಿದ್ದ ಸತ್ಯಾಂಶಗಳಿಗೆ ಅವರೆಂದು ಕಣ್ಣು ಮುಚ್ಚಿಕೊಂಡವರಲ್ಲ.

ತೋರಿಕೆಯ ಸಾಮಂಜಸ್ಯಕ್ಕೆ ಅವರೆಂದೂ ಬೆಲೆ ಕೊಟ್ಟವರಲ್ಲ. ಆದ್ದರಿಂದ, ಮೇಲೆ ಮೇಲೆ ನೋಡುವವರಿಗೆ ಅವರಲ್ಲಿ ಅಸಮಂಜಸತೆ ಕಾಣಬರಬಹುದು. ತಮ್ಮದು ತಪ್ಪು ದಾರಿ ಎಂದು ಕಂಡುಬಂದಾಗ ಅವರು ನಾಚದೆ ಸಾರ್ವಜನಿಕವಾಗಿ ಅದನ್ನು ಒಪ್ಪಿಕೊಂಡು ಬೇರೆ ಮಾರ್ಗವನ್ನು ಅನುಸರಿಸುತ್ತಿದ್ದರು. ಅದೇ, ತಮ್ಮ ಮಾರ್ಗಸರಿಯೆನಿಸಿದಾಗ ಎಂಥ ಒತ್ತಾಯಕ್ಕೂ ಅವರು ಮಣಿದು ತಮ್ಮ ದಾರಿಯನ್ನು ಬದಲಿಸುತ್ತಿರಲಿಲ್ಲ. ಇದರಿಂದಾಗಿ ಅವರ ಅನೇಕ ಧೋರಣೆಗಳು ಬಹುವೇಳೆ ಅವರ ಟೀಕಾಕಾರರನ್ನು ಬೆರಗುಗೊಳಿಸುತ್ತಿದ್ದುವು. ಆದ್ದರಿಂದ ಗಾಂಧಿಯವರ ಜೀವನದ ನಿಲುವು, ತತ್ತ್ವಗಳನ್ನು ಅರಿಯಲು ಅವೆಲ್ಲವನ್ನೂ ಸಮಗ್ರವಾಗಿ ನೋಡಬೇಕಾಗುತ್ತದೆ. ಆಂಶಿಕವಾದ ಯಾವ ಅಧ್ಯಯನವೂ ಅವರ ಬೃಹದ್ ಜೀವನ, ಸಾಧನೆಗಳಿಗೆ ಸರಿಯಾದ ತಾತ್ಪರ್ಯವನ್ನು ಸೂಚಿಸವು.

ಗಾಂಧೀ ಸಾಹಿತ್ಯ ಪ್ರಕಟಣೆ : ಗಾಂಧೀಜಿ ಬರೆದ, ಆಡಿದ ಮಾತು ಅಪಾರ. ಅವು ಸತ್ಯದ ಜ್ಯೋತಿಯಲ್ಲಿ ಅಹಿಂಸೆಯ ಮೂಸೆಯಿಂದ ಉದ್ಭವಿಸಿ ಬಂದವು. ಅವು ಬದುಕಿನ ಅಂತರಾಳವನ್ನು ಸ್ಪರ್ಶಿಸಿ, ಜನಮಾನಸವನ್ನು ಮೀಟಿ ಎಬ್ಬುತ್ತಿದ್ದಂಥವು. ಐಹಿಕದ ಸಮಸ್ತ ವಿಷಯಗಳನ್ನು ಒಳಗೊಂಡು ಪರಮಾರ್ಥದ ಕಡೆಗೆ ಬಿಡದೆ ಸಾಗುತ್ತಿದ್ದ ಅವರ ವಿಚಾರವ್ಯಾಪ್ತಿ ಆಕಾಶದಂತೆ ಅನಂತ. ಅವರು ತಮ್ಮ ಚಿಂತನ ಮತ್ತು ವಿಚಾರಗಳನ್ನು ಸಂಯಮಕ್ಕೆ ಒಳಪಡಿಸಿಕೊಂಡು ಅವನ್ನು ಸಂಯಮದಿಂದಲೇ ಅಭಿವ್ಯಕ್ತಿಗಳಿಸಿದ ಮಾತು ಎಣೆಯಿಲ್ಲದ ಶಕ್ತಿಯಿಂದ ಹೊಮ್ಮಿಬಂದಂತೆಯೇ ಪ್ರಮಾಣದಲ್ಲಿಯೂ ಅಪಾರವಾಯಿತು. ಅವರ ಜೀವಮಾನ ಕಾಲದಲ್ಲಿ ಸೃಷ್ಟಿಯಾದ ಈ ಸಾಹಿತ್ಯರಾಶಿ ಯಾವ ಒಬ್ಬ ಸಾಹಿತಿಯ ಜೀವಮಾನಕಾಲದಲ್ಲಿ ಸೃಷ್ಟಿಯಾದ, ಯಾವ ಒಬ್ಬನೂ ಸೃಷ್ಟಿಸಬಹುದಾದ ಸಾಹಿತ್ಯದ ಪ್ರಮಾಣಕ್ಕಿಂತ ಯಾವ ವಿಧದಲ್ಲಿಯೂ ಕಡಿಮೆಯಿಲ್ಲ.

ಗಾಂಧಿಯವರೇ ಸ್ಥಾಪಿಸಿದ ನವಜೀವನ ನ್ಯಾಸದವರು ಅವರ ಬರೆಹಗಳನ್ನು ಅಚ್ಚುಹಾಕಿದ್ದಾರೆ. ಅವುಗಳೆಲ್ಲ ಗಾಂಧಿಯವರು ಭಾರತದಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನು ಕುರಿತವಾಗಿವೆ. ನವಜೀವನ, ಯಂಗ್ ಇಂಡಿಯ, ಹರಿಜನ ಮೊದಲಾದ ಪತ್ರಿಕೆಯಲ್ಲಿ ಪ್ರಕಟವಾದ ಮತ್ತು ಮಿಕ್ಕಂತೆ ಅನೇಕ ಕಡೆ ಹಂಚಿಹೋಗಿರುವ ಗಾಂಧೀ ಸಾಹಿತ್ಯವನ್ನು ಈ ಸಂಸ್ಥೆ ಒಂದೆಡೆ ಸಂಗ್ರಹಿಸಿ ಅಚ್ಚು ಮಾಡಿದೆ. ಹೀಗೆ ಮಾಡುವಾಗ ಸತ್ಯ, ದೇವರು, ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ-ಹೀಗೆ ವಿಷಯಕ್ಕೆ ತಕ್ಕಂತೆ ಬರೆಹಗಳನ್ನು ಕೂಡಿಸಿ ಅಚ್ಚುಮಾಡಲಾಗಿದೆ. ಹೀಗೆ ಕೂಡಿಸುವಾಗ ಇಡೀ ಬರೆವಣಿಗೆಯ ಉಚಿತ ಭಾಗವನ್ನು ಮಾತ್ರ ಉದ್ಧರಿಸಿರುವುದರಿಂದ ಎಷ್ಟೋ ಕಡೆ ಗಾಂಧಿಯವರ ಸಮಗ್ರ ಬರೆವಣಿಗೆ ಒಂದು ಕಡೆ ಸಿಗುವಂತಾಗಿಲ್ಲ.

ಇನ್ನೂ ಗಾಂಧೀ ಸ್ಮಾರಕ ನಿಧಿಯವರು ಅವರ ಪತ್ರಗಳಲ್ಲಿ ಬಹುಪಾಲನ್ನು ಅಚ್ಚುಮಾಡಿದ್ದಾರೆ. ಇಲ್ಲಿಯೂ ಅವರ ಎಲ್ಲ ಪತ್ರಗಳು ಸಿಗುವುದಿಲ್ಲ.

ಗಾಂಧಿಯವರ ಎಲ್ಲ ಬರೆಹಗಳನ್ನೂ ಅಚ್ಚುಮಾಡುವ ದೊಡ್ಡ ಕೆಲವನ್ನು ಭಾರತ ಸರ್ಕಾರ ಕೈಗೆತ್ತಿಕೊಂಡು, ನವಜೀವನ ನ್ಯಾಸದ ಸಹಾಯದಿಂದಲೂ ಒಂದು ಪರಿಣತ ಸಂಪಾದಕ ಮಂಡಳಿಯ ಸಹಾಯದಿಂದಲೂ ಪ್ರಕಟಣೆಯ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಮಾಲೆಯ ಮೊದಲ ಸಂಪುಟ ಅಚ್ಚಾದದ್ದು 1958ರ ಜನವರಿ 26ರಂದು. ಅದರಲ್ಲಿ 1884-1896ರ ವರೆಗಿನ ಗಾಂಧೀ ಬರೆಹಗಳು ಅಚ್ಚಾಗಿವೆ. ಮೊದಲ ಎಣಿಕೆಯಂತೆ ಗಾಂಧೀ ಸಾಹಿತ್ಯ 50 ಸಂಪುಟಗಳಾಗಬಹುದೆಂಬ ನಿರೀಕ್ಷೆ ಇತ್ತು. ಈಗ ಅವುಗಳ ಸಂಖ್ಯೆ 75ಕ್ಕೆ ಏರಿದೆ. 1971ರ ಜುಲೈ ತಿಂಗಳಲ್ಲಿ ಈ ಸರಣಿಯಲ್ಲಿ 45 ಸಂಪುಟಗಳು ಅಚ್ಚಾಗಿವೆ.

ಇಲ್ಲಿನ ಕ್ರಮ ಹೀಗಿದೆ. ಸಾಹಿತ್ಯ ಎಂದೆಂದು ಹುಟ್ಟಿತೋ ಅಂದಂದಿನ ಎಣಿಕೆಯಲ್ಲಿ, ಕಾಲಾನುಕ್ರಮವಾಗಿ, ಗಾಂಧಿಯವರ ಬರೆಹಗಳನ್ನು ಇಲ್ಲಿ ಅಚ್ಚುಹಾಕಲಾಗಿದೆ. ಅವರ ಕಾಗದಪತ್ರಗಳು, ಭಾಷಣಗಳು, ದಿನಚರಿ, ಪತ್ರಿಕೆಗೆ ಬರೆದ ಲೇಖನಗಳು, ಅಹವಾಲುಗಳು, ತಂತಿಗಳು, ಪ್ರವಚನಗಳು-ಹೀಗೆ ಗಾಂಧಿಯವರ ಎಲ್ಲ ಲೇಖಗಳನ್ನೂ ಈ ಸಂಪುಟಗಳು ಒಳಗೊಂಡಿವೆ. ಈ ಸರಣಿ ಪೂರ್ಣವಾಗಿ ಅಚ್ಚಾದಾಗ ಗಾಂಧೀ ದರ್ಶನವೇನೆಂಬುದನ್ನು ನಿರ್ಣಯಿಸುವ ಸಂಶೋಧಕರಿಗೆ ತುಂಬ ಸಹಾಯಕವಾಗುತ್ತದೆ.

ಕನ್ನಡಲ್ಲೂ ಗಾಂಧೀ ಸಾಹಿತ್ಯವನ್ನು ಪ್ರಕಟಿಸುವ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತದೆ. ಗಾಂಧೀ ಸ್ಮಾರಕ ನಿಧಿಯವರು ಕನ್ನಡ ಗಾಂಧೀ ಸಾಹಿತ್ಯ ಮಾಲೆ ಎಂಬ ಹೆಸರಿನಲ್ಲಿ ಈಗಾಗಲೆ 15ಕ್ಕೂ ಮೇಲ್ಪಟ್ಟು ಗ್ರಂಥಗಳನ್ನು ಹೊರ ತಂದಿದ್ದಾರೆ. 1. ಸಂಕ್ಷಿಪ್ತ ಆತ್ಮಕಥೆ ಮತ್ತು ಹಿಂದ್ ಸ್ವರಾಜ್ 2. ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ 3. ಗೀತಾಮಾತೆ 4. ಸತ್ಯ-ಅಹಿಂಸೆ 5. ಧರ್ಮ-ನೀತಿ 6. ಸಮಾಜ ಧರ್ಮ 7. ಜೀವನ ಶಿಕ್ಷಣ 8. ಅರ್ಥವಿಚಾರ 9. ಸತ್ಯಾಗ್ರಹ 10. ಮಹಿಳೆಯರು 11. ಪತ್ರಗುಚ್ಛ-1 12. ಪತ್ರಗುಚ್ಛ-2 13. ನನ್ನ ಸಮಕಾಲೀನರು 14. ರಾಜನೀತಿ 15. ಪತ್ರಗುಚ್ಛ-3 ಈ ಶೀರ್ಷಿಕೆಗಳನ್ನು ನೋಡಿದರೆ ಕನ್ನಡದ ಈ ಗ್ರಂಥಗಳಿಗೆ ಮಾದರಿ ನವಜೀವನ ನ್ಯಾಸದವರ ಗ್ರಂಥಗಳು ಎಂಬುದು ಸ್ಪಷ್ಟವಾಗುತ್ತದೆ.

ಗಾಂಧೀ ಸಾಹಿತ್ಯದ ಪ್ರಕಾರಗಳು : ಗಾಂಧೀ ಸಾಹಿತ್ಯವನ್ನು, ಸಹಜವಾಗಿಯೇ, ಗಾಂಧೀಜಿ ಸ್ವತಃ ಬರೆದುವು ಮತ್ತು ಅವರು ಆಡಿದ ಮಾತಿನ ಮೂಲಕ ವ್ಯಕ್ತವಾಗಿ ಗ್ರಂಥರೂಪ ಪಡೆದುವು. ಹಾಗೂ ಗಾಂಧೀಜೀವನ-ಚಿಂತನ ಇವುಗಳ ಬಗೆಗೆ ಇತರರು ಬರೆದುವು ಎಂದು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ಇಲ್ಲಿ ಗಾಂಧೀಯವರೇ ಬರೆದು ಗ್ರಂಥರೂಪಕ್ಕೆ ಬಂದುವುಗಳ ಸಂಗ್ರಹ ಪರಿಚಯವನ್ನು ಕೊಡಲಾಗಿದೆ. ಅವುಗಳಲ್ಲಿ 1. ಹಿಂದ್ ಸ್ವರಾಜ್ಯ, 2. ಸರ್ವೋದಯ, 3. ನೀತಿ ಧರ್ಮ, 4. ಆರೋಗ್ಯ ಮಾರ್ಗದರ್ಶಿನಿ, 5. ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ, 6. ನನ್ನ ಸತ್ಯಾನ್ವೇಷಣೆ ಅಥವಾ ಆತ್ಮಕಥೆ, 7. ಅನಾಸಕ್ತಿಯೋಗ, 8. ಮಂಗಳ ಪ್ರಭಾತ, 9. ರಚನಾತ್ಮಕ ಕಾರ್ಯಕ್ರಮ ಅಥವಾ ನಿರ್ಮಾಣ ಕಾರ್ಯಕ್ರಮ-ಇವುಗಳು ಪ್ರಧಾನವಾದುವು.

1. ಹಿಂದ್ ಸ್ವರಾಜ್ಯ : ಗಾಂಧೀ ವಿಚಾರಕ್ಕೆ ಮೂಲಗ್ರಂಥವಿದು. ಅವರು 1909ರಲ್ಲಿ ಲಂಡನ್ನಿನಿಂದ ದಕ್ಷಿಣ ಆಫ್ರಿಕಕ್ಕೆ ಹಿಂದಿರುಗುವಾಗ, ನವೆಂಬರ್ 13 ರಿಂದ 22ರ ವರೆಗೆ ಹಗಲು ರಾತ್ರಿ ಹಡಗಿನಲ್ಲಿ ಕುಳಿತು ಬರೆದ ಗ್ರಂಥ. ಇದರ ಕರಡುಪ್ರತಿಯ ಕೆಲವು ಪುಟಗಳನ್ನು ಅವರು ಎಡಗೈಯಲ್ಲೂ ಬರೆದರು. ಈ ಪುಸ್ತಕ ಆಧುನಿಕ ನಾಗರಿಕತೆಯ ತೀವ್ರಖಂಡನೆಯಾಗಿದೆ. ಇದು ಸಂವಾದರೂಪದಲ್ಲಿದ್ದು ಅಂದು ಹಿಂದೂಸ್ಥಾನದಲ್ಲಿ ಹೆಚ್ಚುತ್ತಿದ್ದ ಹಿಂಸಾವಾದಕ್ಕೆ ಯುಕ್ತ ಉತ್ತರವಾಗಿದೆ. ದ್ವೇಷಕ್ಕೆ ಪ್ರತಿಯಾಗಿ ಆತ್ಮತ್ಯಾಗವನ್ನಿದು ಕಲಿಸುತ್ತದೆ. ಪಶುಬಲಕ್ಕೆ ಇದಿರಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ-ಎಂದು ಅವರು ವಿವರಿಸಿದ್ದಾರೆ. ಇದನ್ನು ಗಾಂಧೀಜಿ ಮೊದಲು ಗುಜರಾತೀ ಭಾಷೆಯಲ್ಲಿ ಬರೆದರು. ಅವರೇ ಇಂಗ್ಲಿಷಿಗೂ ಭಾಷಾಂತರಿಸಿದರು. ಈ ಗ್ರಂಥದಲ್ಲಿ ಪ್ರತಿಪಾದಿಸಿದ ಆದರ್ಶಕ್ಕೆ ಅವರ ಬದುಕು ವೈಯಕ್ತಿಕವಾಗಿ ಮೀಸಲಾಗಿತ್ತು. ಹಿಂದೂಸ್ತಾನ ಆ ಆದರ್ಶವನ್ನು ಸಾಧಿಸಲು ಕಾಲ ಮಾಗಿ ಬಂದಿರಲಿಲ್ಲವೆಂದು ಅವರು ಚೆನ್ನಾಗಿ ಅರಿತಿದ್ದರು. ಆದರೆ, ನನ್ನ ಸಾಮೂಹಿಕ ಪ್ರಯತ್ನ, ಭಾರತೀಯ ಅಭಿಮತದಂತೆ ಶಾಸನಸಮ್ಮತ ಪ್ರಜಾಪ್ರಭುತ್ವಕ್ಕಾಗಿ ನಡೆದಿದೆ-ಎಂದು ಅವರೇ ವ್ಯಕ್ತಪಡಿಸಿದ್ದರು.

ಹಿಂದ್ ಸ್ವರಾಜ್ಯವನ್ನು ಓದಿದವರು ಗಾಂಧೀಜಿ ನ್ಯಾಯಾಲಯಗಳು, ಗಿರಣಿ, ಯಂತ್ರ, ಸಂಸದಾತ್ಮಕ ಪ್ರಜಾಪ್ರಭುತ್ವ, ಇವೆಲ್ಲವುಗಳ ವಿರೋಧಿಯೆಂದು ಭಾವಿಸುವುದುಂಟು. ಆದರೆ, ವ್ಯಾವಹಾರಿಕ ಆದರ್ಶವಾದಿಯಾಗಿದ್ದ ಅವರು, ತಮ್ಮ ನಿಲುವನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ವ್ಯಕ್ತಪಡಿಸಿದ್ದಾರೆ. ಇವು ಯಾವುವೂ ನಿಜ ನಾಗರಿಕತೆಯ ಲಕ್ಷಣಗಳಲ್ಲವೆಂದೂ ಸಹಜವಾಗಿಯೇ ಇವು ನಾಶವಾದರೆ ಲೋಕಕ್ಕೆ ಕ್ಷೇಮವೆಂದೂ ಆದರೆ ಆ ರೀತಿ ಆಗಬೇಕಾದರೆ ಮನುಜವರ್ಗ ಅಪಾರತ್ಯಾಗಕ್ಕೂ ಸರಳಜೀವನಕ್ಕೂ ಸಿದ್ಧವಾಗಿರಬೇಕೆಂದೂ ಅವರ ಅಭಿಪ್ರಾಯ. ಬ್ರಿಟಿಷ್ ಸಾಮ್ರಾಜ್ಯವಾದಿಯಾಗಿದ್ದ ಲಾರ್ಡ್ ಲೋದಿಯನ್ 1938ರಲ್ಲಿ ಸೇವಾಗ್ರಾಮದಲ್ಲಿ ಕೆಲವು ದಿನ ತಂಗಿದ್ದಾಗ ಹಿಂದ್ ಸ್ವರಾಜ್ಯದ ಪ್ರತಿ ಇದ್ದರೆ ಕೊಡಿ, ಗಾಂಧೀಜಿ ಹೇಳುವುದೆಲ್ಲ ಅದರಲ್ಲಿ ಬೀಜರೂಪದಲ್ಲಿದೆ, ಗಾಂಧೀಜಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಪುಸ್ತಕವನ್ನು ಎಷ್ಟು ಸಲ ಓದಿದರೂ ಸಾಲದು-ಎಂದು ನುಡಿದಿದ್ದರು. ಈ ಮಾತು ಪುಸ್ತಕದ ಮಹತ್ತ್ವವನ್ನು ತೋರಿಸುತ್ತದೆ.

2 ಸರ್ವೋದಯ : ಇದು ಇಂಗ್ಲೆಂಡಿನ ಪ್ರಸಿದ್ಧ ಲೇಖಕ ಜಾನ್ ರಸ್ಕಿನ್ನನ ' ಅಂಟು ದಿಸ್ ಲ್ಯಾಸ್ಟ ಎಂಬ ಪುಸ್ತಕದ ಸಾರಸಂಗ್ರಹ, ಇದ್ಕಕೆ ಗಾಂಧೀಜಿಯೇ ಇಟ್ಟ ಹೆಸರು-ಸರ್ವೋದಯ. ಇದರಲ್ಲಿ ಗಾಂಧೀಜಿ ಕಂಡುಕೊಂಡ ತತ್ತ್ವಗಳೂ ಮೂರು : (ಅ) ವ್ಯಕ್ತಿಯ ಒಳಿತು ಸಮಾಜದ ಒಳಿತಿನಲ್ಲಿ ಅಡಗಿದೆ. (ಆ) ನ್ಯಾಯ ವಾದಿಯ ಕೆಲಸ, ನಾಯಿಂದನ ಕೆಲಸ ಎರಡಕ್ಕೂ ಸಮಾನ ಬೆಲೆ; ಏಕೆಂದರೆ ಇಬ್ಬರಿಗೂ ತಮ್ಮ ಕೆಲಸದಿಂದ ಉದರಂಭಣ ಮಾಡುವ ಸಮಾನ ಹಕ್ಕಿದೆ. (ಇ) ಶ್ರಮ ಜೀವಿಯ ಎಂದರೆ ಕೃಷಿಕನ ಮತ್ತು ಕೈಕಸಬುದಾರನ ಜೀವನವೇ ಯೋಗ್ಯಜೀವನ. ಈ ಮೂರು ಅಧ್ಯಾತ್ಮ ಅಥವಾ ತ್ಯಾಗತತ್ತ್ವ ಆರ್ಥಿಕ ಸಮಾನತೆಯ ತತ್ತ್ವ. ಶ್ರಮಗೌರವ ಅಥವಾ ಶ್ರಮನಿಷ್ಟೆ ಇವನ್ನು ತಿಳಿಸುತ್ತದೆ. ಭಾರತದ ಅಷ್ಟೇ ಏನು ಜಗತ್ತಿನ ಸಮಾಜಗಳು ಈ ತತ್ತ್ವಗಳ ಆಧಾರದ ಮೇಲೆ ಪುನರ್ರಚಿತವಾಗ ಬೇಕೆಂಬುದು ಗಾಂಧೀಜಿಯ ಆಕಾಂಕ್ಷೆಯಾಗಿತ್ತು. ಸರ್ವೋದಯ ಅವರ ಬೋಧೆಯ ಸಾರ, ಅದಕ್ಕಾಗಿಯೇ ಅವರು ದುಡಿದು ಮಡಿದರು.

3 ನೀತಿತತ್ತ್ವ; ಈ ಗ್ರಂಥ ನೀತಿ ಜೀವನವೇ ಧಾರ್ಮಿಕ ಜೀವನದ ತಿರುಳು ಎಂಬುದನ್ನು ಪ್ರತಿಪಾದಿಸುತ್ತದೆ. ನೀತಿಯೆಂದರೆ ಆಚಾರ, ಸದಾಚಾರ, ಅದಿಲ್ಲದೆ ಯಾವ ಧರ್ಮವೂ ಸಾಧಿತವಾಗಲಾರದು. ನಿಜವಾಗಿ ನೋಡಿದರೆ ನೀತಿನಿಯಮಗಳಿಗೆ ವಿಧೇಯನಾಗಿ ನಡೆಯದವನು ಪೂರ್ಣಾರ್ಥದಲ್ಲಿ ಮನುಷ್ಯನೇ ಅಲ್ಲ ಎಷ್ಟೇ ಕಷ್ಟವಾಗಲಿ ಸತ್ಯಶೀಲಗಳಲ್ಲೇ ಸುಖವನ್ನು ಅನುಭವಿಸುವಂತೆ ಆಗಬೇಕು ಎಂಬುದು ನೀತಿಧರ್ಮದ ಮಥಿತಾರ್ಥ. ವೈಯಕ್ತಿಕ ಜೀವನದಲ್ಲಿಯೂ ವೃತ್ತಿಜೀವನದಲ್ಲಿಯು ಸಾರ್ವಜನಿಕ ಜೀವನದಲ್ಲಿಯೂ ನೀತಿಧರ್ಮವೇ ಪ್ರಧಾನ ಅಂಶವಾಗಬೇಕು. ನೀತಿಧರ್ಮದ ಬೆಲೆಯಿಲ್ಲದ ಕರ್ಮಗಳೆಲ್ಲ ಉಸುಬಿನ ಮೇಲೆ ಕಟ್ಚದ ಸೌಧಗಳಂತೆ.

4 ಆರೋಗ್ಯಮಾರ್ಗದರ್ಶಿನಿ : ಸ್ತ್ರೀಪುರುಷರು ಆರೋಗದೃಢಕಾಯರಾಗಿ ಅನುಸರಿಸಬೇಕಾದ ನಿಯಮಗಳನ್ನು ಈ ಪುಸ್ತಕ ತಿಳಿಸುತ್ತರದೆ. ಇವೆಲ್ಲ ಗಾಂಧೀಜಿಯೇ ಪ್ರಯೋಗಿಸಿದ ವಿಧಾನಗಳ ವಿವರಣೆ. ಗಾಲಿ, ಬೆಳಕು ನೀರು, ಮೃತ್ತಿಕೆ ಇವುಗಳ ಉಪಯೋಗವೇ ಇದರ ತಿರುಳು, ಇದನ್ನು ಗಾಂಧೀಜಿ ಪ್ರಕೃತಿಚಿಕಿತ್ಸೆ, ನಿಸರ್ಗಚಿಕಿತ್ಸೆ ಎನ್ನುತ್ತಾರೆ. ಮಾನವ ಪ್ರಕೃತಿಯಿಂದ ದೂರ ವಾದಷ್ಟೂ ರೋಗಗಳಿಗೆ ತುತ್ತಾಗುವುದು ಸಹಜ ಹಾಗೆಯೇ ಪ್ರಕೃತಿಯೇ ಅವುಗಳಿಗೆ ನಿಜವಾದ ಚಿಕಿತ್ಸೆಯ ಮಾರ್ಗವನ್ನು ತೋರಿಸುತ್ತದೆಂದು ಗಾಂಧೀಜಿಯ ನಂಬಿಕೆಯಾಗಿತ್ತು.

5 ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ : ಗಾಂಧೀಜಿ ಸತ್ಯ ಅಹಿಂಸೆಗಳ ಮಾರ್ಗದಲ್ಲಿ ಪ್ರಥಮವಾಗಿ ನಡೆಸಿದ ಸವಿನಯ ಪ್ರತೀಕಾರದ, ಸವಿನಯ ಶಾಸನೋಲ್ಲಂಘನದ, ಪಾಶವೀ ಶಕ್ತಿಗೆ ವಿರುದ್ದವಾಗಿ ನಿಲ್ಲಿಸಿದ ಸಾತ್ತ್ವಿಕ ಶಕ್ತಿಯ ಅಥವಾ ಪ್ರೇಮ ಶಕ್ತಿಯ ಹೋರಾಟದ ಇತಿಹಾಸವಿದು. ಈ ಹೋರಾಟ ಸತ್ಯಾಗ್ರಹ ಎಂಬ ಹೆಸರಿನಿಂದ ಜಗತ್ತಿನಲ್ಲೆಲ್ಲ ಪ್ರಸಿದ್ದವಾಯಿತು. ಭಾರತದ ಸ್ವತಂತ್ರ್ಯ ಹೋರಾಟಕ್ಕೂ ಇದು ಸ್ಫೂರ್ತಿ ನೀಡಿತು.

6 ಮಂಗಳ ಪ್ರಭಾತ : ಇದೊಂದು ಪುಟ್ಟ ಪುಸ್ತಕವಾದರೂ ಸರ್ವೋದಯಕ್ಕೆ ನೆರವಾಗುವ ವ್ಯಕ್ತಿಜೀವನ ಹಾಗೂ ಸಾಮಾಜಿಕ ಜೀವನಗಳನ್ನು ಬೆಳೆಸಿ, ಅಸ್ತೇಯ ಬ್ರಹ್ಮಚರ್ಯ ಅಸಂಗ್ರಹ, ಶರೀರಶ್ರಮ, ಅಸ್ವಾದ, ಭಯಮುಕ್ತಿ, ಸರ್ವಧರ್ಮಸಮಭಾವ, ಸ್ವದೇಶೀ ಸ್ಪರ್ಶಭಾವನೆ (ಅಸ್ಪ್ಯಶ್ಯತಾ ನಿವಾರಣೆ) ಇವನ್ನು ಸಾಧಿಸಲು ನಮ್ರತೆಯಿಂದ ಪ್ರಯತ್ನ ಮಾಡುವುದರ ಮಹತ್ತ್ವವನ್ನು ಇದು ವಿವರಿಸುತ್ತದೆ. ಈ ಪುಸ್ತಕ ಗಾಂಧೀ ಜೀವನವಿಧಾನದ ಕೈಪಿಡಿ ಎನ್ನಬಹುದು.

7 ಆತ್ಮಕಥೆ : ಗಾಂಧೀ ಸಾಹಿತ್ಯದಲ್ಲಿ ಎಂದೆಂದಿಗೂ ಶಿಖರಪ್ರಾಯವಾಗಿ ನಿಲ್ಲುವ ಕೃತಿ ಇದು. ಇದನ್ನು ಓದಿ ಅದೆಷ್ಟೋ ಮಂದಿ ಸ್ಫೂರ್ತಿ ಪಡೆದಿದ್ದಾರೆ ಗಾಂಧೀಜಿಯಂತೆಯೇ ಈಚೆಗೆ ಹಂತಕನ ಗುಂಡಿಗೆ ತುತ್ತಾಗಿ, ಹುತಾತ್ಮನಾದ ಅಮೆರಿಕದ ನೀಗ್ರೋನಾಯಕ ಮಾರ್ಟಿನ್ ಲೂಥರ್ ಕಿಂಗ್ ಇದನ್ನು ಓದಿ ಸ್ಫೂರ್ತಿ ಪಡೆದುದಲ್ಲದೆ ಸವಿನಯ ಪ್ರತೀಕಾರ ಚಳವಳಿಯನ್ನು ಬಿಳಿಯರ ದಬ್ಬಾಳಿಕೆಯ ವಿರುದ್ಧವಾಗಿ ನಡೆಸಿದ. ಜಗತ್ತಿನ ಮಹನೀಯರ ಆತ್ಮಕಥನ ಗ್ರಂಥಗಳಲ್ಲಿ ಇದಕ್ಕೆ ಅಗ್ರಸ್ಥಾನ ದೊರಕಿದೆ.

8 ಅನಾಸಕ್ತಿಯೋಗ : ಗಾಂಧೀಜಿ ಭಗವದ್ಗೀತೆಯನ್ನು ನನ್ನ ತಾಯಿ ಎಂದು ಕರೆದರು. ಅದರಲ್ಲಿ ಅವರು ಕಂಡ ಸತ್ಯವೇ ಅನಾಸಕ್ತಿಯೋಗ, ಅವರು ತಮ್ಮ ಜೀವನವನ್ನೂ ಅನಾಸಕ್ತಿಯೋಗದಿಂದಲೇ ನಡೆಸಿದರು. ಎಲ್ಲವನ್ನೂ ಭಗವಂತಿನಿಗೇ ಅರ್ಪಿಸಿ, ಸುಖ-ದುಃಖಗಳಿಂದ ಉದ್ವಿಗ್ನರಾಗದೆ, ಸೋಲು-ಗೆಲವುಗಳನ್ನು ಸಮನಾಗಿ ಕಂಡು, ಬಾಳಬೇಕಾದ ಪರಿ, ಜೀವನದ ವಿವೇಕ, ಇದರಲ್ಲಿ ಉಲ್ಲೇಖವಾಗಿದೆ. ಗೀತಾಮಾತೆಯ ಪೀಯೂಷಪಾನದಿಂದಲೇ ಗಾಂಧೀಜಿಯ ಆಧ್ಯಾತ್ಮಿಕ ಶಕ್ತಿ ವೃದ್ಧಿಯಾಯಿತು. ಅದು ಅವರ ಎಲ್ಲ ಲೌಕಿಕ ಕರ್ಮಗಳಿಗೂ ಪುಷ್ಟಿ ನೀಡಿತು.

9 ನಿರ್ಮಾಣ ಕಾರ್ಯಕ್ರಮ : ಸರ್ವೋದಯ ದರ್ಶನದ ಆಧಾರದ ಮೇಲೆ ಶಾಂತಿ ಸಮೃದ್ಧವಾದ ಯುದ್ದಭೀತಿಮುಕ್ತವಾದ ಸ್ವತಂತ್ರ ಭಾರತವನ್ನು ಸೃಷ್ಟಿಸುವುದಕ್ಕೂ ವಿಕೇಂದ್ರೀಕರಣ ಪ್ರಧಾನವಾದ ನಿಜವಾದ ಪ್ರಜಾಪ್ರಭುತ್ವ. ಆರ್ಥಿಕ ಸಮತೆ, ಮಾನವ, ಸೋದರಭಾವ ಇವನ್ನು ಕಾರ್ಯರೂಪಕ್ಕೆ ತರುವುದಕ್ಕೂ ಕಾಲ ಕಾಲಕ್ಕೆ ಗಾಂಧೀಜಿ ರೂಪಿಸಿದ ಕಾರ್ಯಕ್ರಮಗಳ ವಿವರಣೆ ಈ ಪುಟ್ಟ ಪುಸ್ತಕದಲ್ಲಿದೆ. ನಿರ್ಮಾಣ ಕಾರ್ಯಕ್ರಮದ ಶ್ರದ್ಧಾಭರಿತ ಅನುಷ್ಠಾನದಿಂದ ನಿಜಸ್ವರಾಜ್ಯವನ್ನು ಸಾಧಿಸಬಹುದೆಂಬ ನಂಬಿಕೆ ಅವರಲ್ಲಿತ್ತು.

ಗಾಂಧೀ ಸಾಹಿತ್ಯದ ಗುಣಲಕ್ಷಣಗಳು : ಜೀವನದ ಸಮಗ್ರ ಚಿತ್ರವನ್ನು ಎದುರಿಗೆ ಇಟ್ಟುಕೊಂಡು ನ್ಯಾಯಸಮ್ಮತವು ಫಲಕಾರಿಯೂ ಆದ ಮಾತುಗಳನ್ನು ಗಾಂಧಿಯವರದಂತೆ ಸೂಚಿಸಿದವರು ಅಪರೂಪ, 60 ವರ್ಷಗಳ ತುಂಬು ಜೀವನದಲ್ಲಿ ಅವರು ಎಂದಿಗೂ ಸಮಯಸಾಧಕರಾಗಿ ವರ್ತಿಸಿದವರಲ್ಲ. ದಾರಿ ಯಾವುದಾದರೂ ಸರಿ ಗುರಿ ಮುಟ್ಟಿದರಾಯಿತು. ಎಂದವರಲ್ಲ. ಜನತೆಯನ್ನು ಒಟ್ಟಾಗಿ ಬಿಡಿಬಿಡಿಯಾಗಿ ತಿದ್ದುವಲ್ಲಿ, ಪ್ರೋತ್ಸಾಹಿಸಿ ಹುರಿದುಂಬಿಸುವಲ್ಲಿ ಕಾರ್ಯೋನ್ಮುಖರನ್ನಾಗಿ ಮಾಡುವಲ್ಲೊ ಹೊಸ ಜಿವನ ಮಾರ್ಗವನ್ನು ತೋರುವಲ್ಲಿ, ಎಲ್ಲ ಕಾಲಕ್ಕೂ ಎಲ್ಲ ದೇಶಗಳೂ ಅವಯವಾಗುವಂಥ ಸಾಂಸ್ಕøತಿಕ ಮೌಲ್ಯಗಳನ್ನು ಎತ್ತಿ ಹಿಡಿವಲ್ಲಿ-ಈ ಎಲ್ಲವನ್ನೂ ಗಾಂಧೀಜಿಗೆ ಇದ್ದ ಮಾನವೀಯ ಧೋರಣೆ ಅವರ ಎಲ್ಲ ಬರೆಹಗಳಲ್ಲೂ ಎದ್ದುಕಾಣುತ್ತದೆ.

ಮಾನವ ಹೃದಯಾಂತರಾಳದಲ್ಲಿ ಹುದುಗಿರುವ ಪ್ರೇಮ, ಪ್ರೀತಿ, ವಿಶ್ವಾಸಗಳ ಬಗ್ಗೆ ಗಾಂಧೀಯವರಿಗೆ ಅಪಾರ ಭರವಸೆ ಅದರ ವಿಕಸನದಿಂದ ಬಮದ ಸ್ವಾತಂತ್ರ್ಯ ನಿಲ್ಲುವಷ್ಟು ಕಾಲ ಕೇವಲ ರಾಜಕೀಯ ಆಂದೋಳನದಿಂದ ಬಂದ ಸ್ವಾತಂತ್ರ್ಯ ನಿಲ್ಲಲಾರದು ಎಂದು ಅವರು ಅರಿತಿದ್ದರು. ಅವರ ಈ ಮನೋಧರ್ಮ ಅವರ ಮಾತಿನಲ್ಲೂ ನೀತಿ ಬರೆಹದಲ್ಲೂ ಎದ್ದುಕಾಣುತ್ತದೆ.

ಅವರ ಆರ್ಥಿಕ ನೀತಿ ಕೇವಲ ಬಡತನದ ನೀತಿಯಲ್ಲ. ಅವರ ಜೀವನವಿವೇಕ ಕೇವಲ ಅಭಾವ ವೈರಾಗ್ಯದಿಂದ ಬಂದ ಸಪ್ಪೆಸರಕಲ್ಲ. ಆಶ್ರಮಜೀವನ ಬ್ರಹ್ಮಚರ್ಯ, ಸ್ವದೇಶಿ, ಸತ್ಯಾಗ್ರಹ, ಉಪವಾಸ ಶಾಂತಿಯುತ ಅಸಹಕಾರ, ಇವೆಲ್ಲ ಜೀವನವನ್ನು ಒಣಗಿಸುವುದಕ್ಕಲ್ಲ. ಅದನ್ನು ವಿಕಸಿಸಿ ಬೆಳೆಸುವುದಕ್ಕೆ-ಎಂಬುದು ಅವರ ಧೋರಣೆ.

ಗಾಂಧಿ ಇಂಗ್ಲಿಷ್ ಮತ್ತು ಗುಜರಾತಿ -—ಎರಡು ಭಾಷೆಗಳಲ್ಲೂ ಬರೆದರು. ಗುಜರಾತಿ ಅವರ ಮಾತೃಭಾಷೆ. ಅವರನ್ನು ಗುಜರಾತಿ ನವ್ಯ ಗದ್ಯದ ನಿರ್ಮಾಪಕರಲ್ಲೊಬ್ಬರೆಂದು ವಿದ್ವಾಂಸರು ಕೊಂಡಾಡಿದ್ದಾರೆ. ಇಂಗ್ಲಿಷಿನಲ್ಲೂ ಗಾಂಧೀಯವರದು ಅಂಥದೇ ಎತ್ತಿದ ಕೈ.

ಸರಳವಾಗಿ, ಸುಲಭವಾಗಿ, ನೇರವಾಗಿ ಹೇಳುವುದು ಅವರ ಮಾರ್ಗ ಅವರ, ಬರೆವಣಿಗೆಯಲ್ಲಿ ಅನಾಶ್ಯಕ ವಿವರಗಳಾಗಲಿ, ಚರ್ವಿತಚರ್ವಣವಾಗಲಿ ಎಲ್ಲಿಯೂ, ಕಾಣದು, ಬೈಬಲ್ ಭಗದ್ವೀತೆ ಪಿಲ್ಗ್ರಿಮ್‍ಸ ಪ್ರಾಗ್ರೆಸ್, ಪಾಸ್ಟ ಅಂಡ್ ಪ್ರೆಸೆಂಟ್, ಅಂಟು ದಿಸ್ ಲ್ಯಾಸ್‍ಟ ಮೊದಲಾದ ಉದ್ಗ್ರಂಥಗಳಲ್ಲಿನ ಸುಲಭತೆಯನ್ನು ಗಾಂಧಿಯವರಲ್ಲಿ ನಾವು ಗುರುತಿಸಬಹುದು. ಮಾತು ಯವಾಗಲೂ ತರ್ಕಬದ್ದ, ನ್ಯಾಯಸಮ್ಮತ ಹಾಗೆಂದ ಮಾತ್ರಕ್ಕೆ ವ್ಯಂಗ್ಯ, ವಿಡಂಬನ ಹಾಸ್ಯ ಸರಸ ಇಲ್ಲವೆಂದಲ್ಲ. ಅನೇಕ ಕಡೆ ಕವಿಯ ಮನೋಧರ್ಮ ಕೂಡ ಕಾಣುವುದುಂಟು.

ಗಾಂಧೀ ಸಾಹಿತ್ಯದ ಪ್ರಭಾವ : ನನ್ನ ಬರೆಹಗಳನ್ನು ನನ್ನ ದೇಹದ ಜೊತೆಯಲ್ಲೆ ಸುಟ್ಟುಬಿಡಬೇಕು. ನಾನು ಮಾಡಿರುವ ಕೆಲಸ ಉಳಿಯುತ್ತದೇ ಹೊರತು ನಾನು ಆಡಿದ್ದೂ ಬರೆದದ್ದೂ ಅಲ್ಲ ಎಂದು ಗಾಂಧೀ ಹೇಳಿಕೊಂಡಿದ್ದಾರಾದದರೂ ಅವರ ಬರೆಹಗಳ ಪ್ರಭಾವ ಬಹು ವ್ಯಾಪಕವಾಗಿದೆ. ಪಾರ್ಥಿವವಾಗಿ ಅವರು ಇಲ್ಲವಾದರೂ ಸೂಕ್ಷ್ಮರೂಪಿಯಾಗಿ ಅವರು ತಮ್ಮ ಬರೆಹಗಳಲ್ಲಿ ಉಳಿದು ಬಂದಿದ್ದಾರೆ.

ಗಾಂಧೀಜಿಯ ವ್ಯಕ್ತಿತ್ವ ಹೇಗೆ ಜಗತ್ತಿನ ಮತ್ತು ಭಾರತದ ವಿಚಾರವಂತರ ಗಮನವನ್ನು ಸೆಳೆಯಿತೋ ಹಾಗೆಯೇ ಭಾರತೀಯ ಭಾಷೆಗಳು ಮತ್ತು ಸಾಹಿತ್ಯಗಳ ಮೇಲೂ ಪ್ರಭಾವ ಬೀರಿದೆ. ಅವರ ಆತ್ಮಕಥೆ ಭಾರತದ ಎಲ್ಲ ಭಾಷೆಗಳಲ್ಲೂ ಅನುವಾದವಾಗಿರುವಂತೆಯೇ ವಿವಿಧ ರಾಷ್ಟ್ರಗಳ ಭಾಷೆಗಳಲ್ಲಿಯೂ ಅನುವಾದವಾಗಿರುವುದನ್ನು ಗಮನಿಸಬಹುದು. ಗಾಂಧೀ ವಿಚಾರ ಜೀವನತತ್ತ್ವ ಸತ್ಯಾಗ್ರಹ ಇವು ಭಾರತೀಯ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾದಂಬರಿ, ಕವನ, ನಾಟಕ ಇವುಗಳಲ್ಲೆಲ್ಲ ಪ್ರತಿಧ್ವನಿಗೊಂಡಿರುವುದನ್ನೂ ಕಾಣಬಹುದು. ಗಾಂಧೀ ಯುಗದ (1920-48) ವಿವಿಧ ಸತ್ಯಾಗ್ರಹ ಸಂಗ್ರಾಮಗಳು ಲೇಖಕರ, ಕವಿಗಳ ವಿಚಾರರಂಗಗಳನ್ನು ಕೆರಳಿಸಿದ್ದುಂಟು: ಭಾವೋತ್ಕರ್ಷ ಮಾಡಿದ್ದುಂಟು. ಕನ್ನಡದ ಕವಿಗಳಾದ ಕುವೆಂಪು, ಬೇಂದ್ರೆ ಆದಿಯಾಗಿ ಈವರೆಗೆ ಮೂರು ತಲೆಮಾರಿನ ಕವಿಗಳು ಗಾಂಧೀಜೀವನ, ವಿಚಾರ, ಚಿಂತನ, ಇವನ್ನೆಲ್ಲ ಕುರಿತು ಕವನಗಳನ್ನು ರಚಿಸಿದ್ದಾರೆಂಬುದು ಉಲ್ಲೇಖನೀಯ, ಗಾಂಧೀ ಸಾಹಿತ್ಯ ಸಾರಸರ್ವಸ್ವವನ್ನು ಕನ್ನಡದಲ್ಲೂ ಭಾರತದ ವಿವಿಧ ಭಾಷೆಗಳಲ್ಲೂ ಅನುವಾದ ಮಾಡಲಾಗಿದೆ. ಇವೆನ್ನೆಲ್ಲ ಗಮನಿಸಿದಾಗ, ಪ್ರಮಾಣದಲ್ಲಿಯೂ ಪ್ರಕಾರದಲ್ಲಿಯೂ ವಿಪುಲವಾಗಿರುವ ಗಾಂಧೀ ಸಾಹಿತ್ಯಕ್ಕೆ ಜಗತ್ತಿನ ವಿಚಾರ ಸಾಹಿತ್ಯ ಕ್ಷೇತ್ರದಲ್ಲಿ ಚಿರಂತನ ಸ್ಥಾನವಿದೆ. ಎಂಬುದು ಗೋಚರಿಸುತ್ತದೆ. (ಜಿ.ವಿ.ಎನ್.)

ಗಾಂಧೀ ಅರ್ಥಶಾಸ್ತ್ರ: ಮಹಾತ್ಮ ಗಾಂಧಿಯವರು ಅರ್ಥಶಾಸ್ತ್ರದ ಮೇಲೆ ಯಾವ ಉದ್ಗ್ರಂಥವನ್ನೂ ಬರೆಯಲಿಲ್ಲ. ಸಾಂಪ್ರದಾಯಿಕವಾಗಿ ಅರ್ಥಶಾಸ್ತ್ರದ ಅಧ್ಯಯನ ಮಾಡಿ ಯಾವ ಪದವಿಯನ್ನು ಪಡೆದಿರಲಿಲ್ಲ. ಆದರೆ ಅವರು ಜೀವನದ ಬಹು ಮುಖ ಸಮಸ್ಯೆಗಳನ್ನು ಅರಿತಿದ್ದು. ಅವಕ್ಕೆ ತಮ್ಮವೇ ಆದ ಪರಿಹಾರಗಳನ್ನು ಮೊದಲು ಅವನ್ನು ತಮ್ಮ ಜೀವನದ ಮೇಲೆ ಪ್ರಯೋಗ ಮಾಡಿಕೊಂಡು ಅನಂತರ ಭಾಷಣಗಳು ಹಾಗೂ ಲೇಖನಗಳ ಮೂಲಕ ಪ್ರಸಿದ್ಧಪಡಿಸುತ್ತಿದ್ದರು. ಮಾನವನ ಆರ್ಥಿಕ ಸಮಸ್ಯೆಗಳ ಬಗ್ಗೆ ಅವರು ಆಗಿಂದಾಗ್ಗೆ ಆಡುತ್ತಿದ್ದ ಮಾತುಗಳನ್ನು ಮತ್ತು ಲೇಖನಗಳನ್ನು ಸುಸಂಬದ್ಧವಾಗಿ ಸಂಕಲನ ಮಾಡಿದರೆ ಒಂದು ಆರ್ಥಿಕ ಸಿದ್ಧಾಂತವೇ ರೂಪು ತಳೆಯುತ್ತದೆ.

ಗಾಂಧೀಯವರು ಜೀವನವನ್ನು ಆಧ್ಯಾತ್ಮಿಕ ಸಾಮಾಜಿಕ, ಆರ್ಥಿಕ ರಾಜಕೀಯ ಎಂದು ಮುಂತಾಗಿ ಪ್ರತ್ಯೇಕ ಭಾಗಗಳಾಗಿ ಮಾಡಿ ಸಂಕೀರ್ಣವಾಗಿ ನೋಡದೆ ಅದನ್ನು ಸಮಗ್ರವಾಗಿ ವೀಕ್ಷಿಸುತ್ತಿದ್ದರು. ಮಾನವನ ಪರಿಪೂರ್ಣ ವಿಕಾಸಕ್ಕೆ ಪೋಷಕವಾಗುವಂತೆ ಆಧ್ಯಾತ್ಮಿಕ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ತತ್ತ್ವಗಳನ್ನು ಅನ್ವಯಿಸಬೇಕೆಂಬುದು ಅವರ ವಿಚಾರವಾಗಿತ್ತು. ಅರ್ಥಾತ್ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚರ್ತುವಿಧ ಪುರುಷಾರ್ಥಗಳ ವಿಚಾರಪೂರ್ವಕ, ನಿಷ್ಠಾವಂತ ಅನ್ವಯವೇ ಅವರ ಸಿದ್ಧಾಂತದ ಮೂಲಸೂತ್ರ ಎನ್ನಬಹುದು.

ಅರ್ಥವನ್ನು ಧರ್ಮ ನೀತಿಗಳಿಂದ ಬೇರ್ಪಡಿಸಿ, ಕೇವಲ, ಸಂಪತ್ತಿನ ಉತ್ಪಾದನೆ ವಿತರಣೆಗಳ ದೃಷ್ಟಿಯಿಂದ ಅರ್ಥಶಾಸ್ತ್ರದ ವ್ಯಾಖ್ಯೆ ಮಾಡುವುದನ್ನು ಗಾಂಧಿಯವರು ವಿರೊಧಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ನೀತಿಬಾಹಿರವಾದ ಅರ್ಥಶಾಸ್ತ್ರ ಪಾಶವೀಶಾಸ್ತ್ರವೇ ಎನಿಸಿತು. ಅರ್ಥಶಾಸ್ತ್ರ ನಿಯಮಗಳು ಧರ್ಮನಿಷ್ಠವಾಗಿರಬೇಕು: ಉದಾತ್ತ ಜೀವನದ ಸಾಗಣೆಗೆ ಅನುವಾಗಬೇಕು ಉದಾತ್ತ ಜೀವನವೆಂದರೆ ಸರಳಜೀವನ; ಉಚ್ಚವಿಚಾರಗಳ ಸೂತ್ರಕ್ಕೆ ಬದ್ಧವಾಗಿರುವಂಥದು. ಮಾನವನ ಜೀವಿತದ ಉದ್ದೇಶ ಧನ ಕನಕ ವಸ್ತು ವಾಹನಗಳ ಸಂಗ್ರಹವಾಗಬಾರದು. ಅದು ಆತ್ಮಶ್ರೀಯ ವಿಕಾಸದ ಸಾಧನೆಯಾಗಿರತಕ್ಕದ್ದು. ಆತ್ಮಶ್ರೀಯ ವಿಕಾಸವಾಗುವುದು ಮಿತಿಮೀರಿದ ಐಹಿಕ ಸುಖದ ಆಸೆಯಿಂದಲ್ಲ. ಬದಲಾಗಿ ಸರಳಜೀವನದಿಂದ ಆದ್ದರಿಂದ ಮನುಷ್ಯ ತನ್ನ ಆತ್ಮವಿಕಾಸವನ್ನೇ ಧ್ಯೇಯವನ್ನಾಗಿಟ್ಟುಕೊಂಡು ಜೀವನ ನಿರ್ವಾಹಕ್ಕೆ ಅತ್ಯಗತ್ಯವಾಗಿ ಎಷ್ಟು ಬೇಕೋ ಅಷ್ಟೇ ವಸ್ತುಗಳನ್ನು ಉಪಯೋಗಿಸಬೇಕು. ಹಾಗೆ ತನಗೆ ಬೇಕಾಗುವ ಅಗತ್ಯವಸ್ತುಗಳನ್ನು ಪಡೆಯಲು ಪ್ರತಿಯೊಬ್ಬನೂ ಶ್ರಮನಿಷ್ಠ ಜೀವನವನ್ನು ನಡೆಸಬೇಕು. ಇದೇ ಅನ್ನಕಾಯಕ. ಜೀವನ ನಿರ್ವಹಣೆಗಾಗಿ ಶ್ರಮ ಮಾಡದೇ ಕೂಡಿಟ್ಟ ಹಣದ ಬಲದಿಂದಲೂ ಬೇರೋಬ್ಬರ ಶ್ರಮದ ಶೋಷಣೆಯಿಂದಲೊ ಲೋಲುಪ್ತಿಯ ಜೀವನ ನಡೆಸುವುದು ಚೌರ್ಯಕ್ಕೆ ಸಮಾನ: ಸಮಾಜದ ವಿಷಮತೆಗೆ ಕಾರಣ. ಸುವ್ಯವಸ್ಥಿತ ಅಹಿಂಸಾತ್ಮಕ ಸಮಾಜಕ್ಕೆ ಶ್ರಮನಿಷ್ಠ ಕಾಯಕ ಅಥವಾ ಅನ್ನಕಾಯಕ ಆಧಾರವಾಗಿರತಕ್ಕದ್ದು.

ಸ್ವದೇಶೀವ್ರತ ಗಾಂಧೀ ಅರ್ಥವಿಚಾರದ ಅವಿಭಾಜ್ಯ ಅಂಗ, ಸ್ವದೇಶೀ ಎಂದರೆ ತನ್ನ ನೆರೆಹೊರೆಯವರ, ಹಳ್ಳಿಯ, ರಾಜ್ಯದ ಅಥವಾ ದೇಶದ ಸಂಘಸಂಸ್ಥೆಗಳ ಬಗ್ಗೆ ಅಭಿಮಾನ ಮತ್ತು ಸ್ವದೇಶೀ ವಸ್ತುಗಳ ಉಪಯೋಗ, ಸ್ವದೇಶೀಗಳ ಬಗ್ಗೆ ಅಭಿಮಾನ ಮತ್ತು ಸ್ವದೇಶಿ ವÀಸ್ತುಗಳ ಉಪಯೋಗ. ಸ್ವದೇಶೀ ದೀಕ್ಷೆ ತನ್ನ ನೆರೆಹೊರೆಯವರ ಹಿತಚಿಂತನೆಯಿಂದಲೆ ಆರಂಭವಾಗುತ್ತದೆ. ನೆರೆಹೊರೆಯವರು ತಯಾರಿಸಿದ ವಸ್ತುಗಳನ್ನು ಕೊಳ್ಳಬೇಕು. ಸ್ಥಳೀಯ ಮತ್ತು ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡಬೇಕು. ಅವುಗಳನ್ನವಲಂಬಿಸಿರುವ ಜನರ ಹಿತವನ್ನು ಈ ಮೂಲಕ ರಕ್ಷಿಸಬೇಕು. ಇದು ಸ್ವದೇಶೀ ಧರ್ಮದ ಕಟ್ಟಲೆ. ಸ್ವದೇಶೀ ಎಂದಮಾತ್ರಕ್ಕೆ ಪರದೇಶೀಯವಾದ್ದನ್ನು ದ್ವೇಷಿಸಬೇಕೆಂಬುದಲ್ಲ. ಯಾವುದೇ ನೆರೆಹೊರೆಯಲ್ಲಿ ಸ್ಥಳೀಯವಾಗಿ ಅಥವಾ ಸ್ವದೇಶದಲ್ಲಿ ಸಿಕ್ಕುವುದಿಲ್ಲವೋ ಅದನ್ನು ಬೇರೆಡೆಯಿಂದ, ಪರದೇಶಗಳಿಂದ ತರಿಸಿಕೊಳ್ಳಲು ಅಭ್ಯಂತರವಿಲ್ಲ. ಅದರೆ ನೆರೆಹೊರೆಯಲ್ಲಿ ತಯಾರಾದ ವಸ್ತುಗಳನ್ನು ಕೊಳ್ಳದೆ ತಯಾರಕರನ್ನು ಹಸಿವಿಗೆ ದೂಡಿ, ದೂರದಿಂದ ಪೈಪೋಟಿಯಿಂದ ಬರುವ ವಸ್ತುಗಳನ್ನು ಕೊಳ್ಳುವುದು ಸ್ವದೇಶೀ ಧರ್ಮಕ್ಕೆ ವಿರೋಧ, ಅದು ಅಮಾನುಷವೂ ಆದೀತು. ಸ್ವದೇಶೀ ಎಂಬುದು ನಮ್ಮ ನಿಕಟ ವಾತಾರಣಕ್ಕೆ ಅನ್ವಯಿಸುವ ಸ್ವಧರ್ಮ ಎಂದು ಗಾಂಧೀಯವರು ಹೇಳಿದ್ದಾರೆ.

ಆರ್ಥಿಕ ನಿಯಮಗಳು ಸರ್ವಕಾಲಕ್ಕೂ ಸರ್ವದೇಶಕ್ಕೂ ಸಾರ್ವತ್ರಿಕವಾಗಿ ಸಮಾನವಾಗಿ ಅನ್ವಯಿಸುವ ನಿಯಮಗಳೇನೂ ಇಲ್ಲ. ಒಂದು ದೇಶಕ್ಕೆ ಲಾಭ ದಾಯಕವಾಗಿ ಅನ್ವಯಿಸಬಹುದಾದ ಆರ್ಥಿಕ ನಿಯಮಗಳು ಮತ್ತೊಂದು ದೇಶಕ್ಕೆ ಪ್ರಯೋಜನಕಾರಿಯಾಗಿರಬಹುದೆಂದು ಹೇಳಲಾಗುವುದಿಲ್ಲ. ಆರ್ಥಿಕ ಸಂಸ್ಥೆಗಳು, ಆಚಾರವಿಚಾರಗಳು ಆಯಾ ದೇಶಗಳ ವಾಯುಗುಣ, ಭೌಗೋಲಿಕ ಸನ್ನಿವೇಶ, ಜನರ ಸಂಖ್ಯೆ ಅವರ ಭಾವನೆಗಳು ಇತ್ಯಾದಿ ವಿಷಯಗಳನ್ನು ಅವಲಂಬಿಸಿರುತ್ತದೆ. ಚಳಿದೇಶದ ಜನರಿಗೆ ಅಗತ್ಯವಾಗಬಹುದಾದ ಬಗೆಯ ಉಡಿತೊಡಿಗೆ, ತಿಂಡಿ ತಿನಿಸು ಉಷ್ಣದೇಶದವರಿಗೆ ಅಗತ್ಯವಾಗಿರಬಹುದು. ಜನಸಂಖ್ಯೆ ಕಡಿಮೆಯಿರುವ ದೇಶಗಳಿಗೆ ಮಾರಕವಾಗಬಹುದು. ಅಂದರೆ ಯಾವುದೇ ಆರ್ಥಿಕ ನಿಯಮಗಳು ಅಥವಾ ಪದ್ಧತಿ ಸರ್ವವ್ಯಾಪಕವಾಗಿರುವುದು ಸಾಧ್ಯವಿಲ್ಲ. ಆಯಾ ದೇಶಗಳ ಸ್ಥಿತಿಗತಿಗಳಿಗನುಗುಣವಾಗಿ ಅರ್ಥಶಾಸ್ತ್ರದ ನಿಯಮಗಳನ್ನು ಅರ್ಥವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ಆದ್ದರಿಂದ ಸಂಖ್ಯಾಬಾಹುಳ್ಯವುಳ್ಳ ಗ್ರಾಮಾಧಾರಿತ ಭಾರತ ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕ ಪದ್ಧತಿಯನ್ನು ಅನುಸರಿಸುವುದು ಸಾಧುವಲ್ಲ.

ಹಳ್ಳಿಗಳ ದೇಶವಾದ ಭಾರತದ ಅರ್ಥವ್ಯವಸ್ಥೆ ಗ್ರಾಮಸ್ವಾವಲಂಬನೆಯ ಆಧಾರದ ಮೇಲೆ ನಿರ್ಮಾಣವಾಗಬೇಕು. ಪ್ರತಿ ಹಳ್ಳಿಯೂ ಅದಕ್ಕೆ ಅಗತ್ಯವಾದ ವಸ್ತುಗಳನ್ನು ಉತ್ಪಾದನೆ ಮಾಡಿಕೊಳ್ಳಬೇಕು. ಗ್ರಾಮ ಅರ್ಥವ್ಯವಸ್ಥೆ ಕೃಷಿ ಮತ್ತು ಕುಟೀರ ಉದ್ಯಮಗಳ ಆಧಾರದ ಮೇಲೆ ನಿಲ್ಲಬೇಕು. ಗ್ರಾಮಕ್ಕೆ ಅಗತ್ಯವಾದ ಆಹಾರ ಧಾನ್ಯ ಹತ್ತಿ ಎಣ್ಣೆಕಾಳುಗಳು, ತರಕಾರಿ ದನಗಳಿಗೆ ಮೇವು ಎಲ್ಲವನ್ನೂ ಗ್ರಾಮದಲ್ಲೇ ಉತ್ಪಾದನೆ ಮಾಡಿಕೊಳ್ಳಬೇಕು ಹತ್ತಿ ನೂತು ಬಟ್ಟೆಯನ್ನು ನೆಯ್ದು ಕೊಳ್ಳಬೇಕು. ಕೃಷಿ ಗ್ರಾಮೋದ್ಯೋಗಗಳಿಗೆ ಬೇಕಾದ ಉಪಕರಣಗಳು ಗ್ರಾಮದಲ್ಲೇ ತಯಾರಾಗಬೇಕು. ಆರೋಗ್ಯರಕ್ಷಣೆ ನೈರ್ಮಲ್ಯ ಗ್ರಾಮರಕ್ಷಣೆ ಎಲ್ಲವೂ ಹಳ್ಳಿ ಯವರದೇ ಜವಾಬ್ದಾರಿ. ಈ ರೀತಿಯಲ್ಲಿ ವ್ಯವಸ್ಥೆಯಾದರೆ ಪ್ರತಿಗ್ರಾಮವೂ ಸ್ವಾವಲಂಬಿ ಫಟಕವಾಗುತ್ತದೆ. ಭಾರತ ಸ್ವಾವಲಂಬಿ ಗ್ರಾಮ ಘಟಕಗಳ ಆಜೇಯ ಗಣರಾಜ್ಯವಾಗುತ್ತದೆ.

ಉತ್ಪಾದನೆಯ ಗುರಿ ಲಾಭಸಂಪಾದನೆಯಾಗಿರಬಾರದು: ಸಾಮಾಜಿಕ ಹಿತ ಸಾಧನೆಯಾಗಿರಬೇಕು, ಉತ್ಪಾದನೆಯ ವ್ಯವಸ್ಥೆ ಜನರ ಅಗತ್ಯಗಳನ್ನು ಅಗತ್ಯಗಳನ್ನು ಪೂರೈಸುವ ಶಕ್ತಿ ಪಡೆದಿರುವುದರ ಜೊತೆಗೆ, ಅದು ಶೋಷಣರಹಿತವು ಪರಮಾವಧಿ ಉದ್ಯೋಗ ಕಾರಕವೂ ಆಗಿರಬೇಕು. ಕೈಗಾರಿಕೆಗಳಲ್ಲಿ ಮುಂದುವರಿದ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ಕೈಗಾರಿಕಾ ವ್ಯವಸ್ಥೆ ಆರ್ಥಿಕ ಶಕ್ತಿಯ ಕೇಂದ್ರಿಕರಣಕ್ಕೆ ಎಡೆ ಮಾಡಿ ಕೊಟ್ಟಿದೆ. ಹಿಡಿಜನ ಬಂಡವಾಳಗಾರರ ಕೈಯಲ್ಲಿ ಆರ್ಥಿಕ ಶಕ್ತಿ ಕೇಂದ್ರಿಕೃತವಾಗಿರುವುದರಿಂದ ಶ್ರಮವರ್ಗದ ಶೋಷಣೆ, ಅಹಿತಕರ ಪೈಪೋಟಿ, ಮಾರಕಟ್ಟೆಗಳ ಸ್ವಾಮ್ಯಕ್ಕಾಗಿ ಹೋರಾಟ ಹಾಗೂ ಸಾಮ್ರಾಜ್ಯಶಾಹಿ ದುರಾಕ್ರಮಣಗಳಿಗೆ ಅವಕಾಶವಾಗಿದೆ: ಯುದ್ಧಗಳಿಗೆ ಕಾರಣವಾಗಿದೆ. ಆದ್ದರಿಂದ ಅಹಿಂಸೆ ಮತ್ತು ಚಿರಶಾಂತಿಯ ಆಧಾರದ ಮೇಲೆ ಸಮಾಜದ ರಚನೆಯಾಗಬೇಕಾದರೆ ಅರ್ಥವ್ಯವಸ್ಥೆ ವಿಕೇಂದ್ರೀಕೃತವಾಗಬೇಕು. ವಿಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ ಮನುಷ್ಯ ಕೇಂದ್ರಬಿಂದುವಾಗಿರತಕ್ಕದ್ದು, ಶ್ರಮಶಕ್ತಿಯ ಉಪಯೋಗದಿಂದ ವಸ್ತುಗಳ ಉತ್ಪಾದನೆಯಾಗ ತಕ್ಕದ್ದು. ಪೈಪೋಟಿ ಮಾಯವಾಗಿ ಸಹಕಾರ ಸರ್ವವ್ಯಾಪಕವಾಗಿರುತ್ತದೆ. ಉತ್ಪಾದನೆ ವ್ಯವಸ್ಥೆ ಕೃಷಿ ಮತ್ತು ಗೃಹಕೈಗಾರಿಕೆಗಳ ಮೇಲೆ ನಿಂತಿರತಕ್ಕದ್ದಾಗಿದೆ. ಕೃಷಿ ಗೋಪಾಲನೆ, ಸಿದ್ಧ, ವಸ್ತುಗಳ ಮಾರಾಟ ಮುಂತಾದವು ಸಹಕಾರದ ಆಧಾರದ ಮೇಲೆ ಜರುಗಬೇಕು. ಲಕ್ಷಾಂತರ ಗ್ರಾಮಗಳ ಕೋಟಿಕೋಟಿ ಕುಟೀರಗಳಲ್ಲಿ ಅನುಭೋಗ ವಸ್ತುಗಳ ತಯಾರಿಕೆ ಸಮೃದ್ಧಿಯಾಗಿ ಆಗಬೇಕು. ಇಂಥ ವ್ಯವಸ್ಥೆಯಲ್ಲಿ ಪರಮಾವಧಿ ಉದ್ಯೋಗ, ಹೇರಳ ಉತ್ಪಾದನೆ, ಸ್ಥಳೀಯ ವಿತರಣೆ, ಶೋಷಣರಾಹಲಿತ್ಯ, ಕೆಲಸಗಾರನಿಗೆ ತಕ್ಕ ಕೌಶಲದ ಔನ್ನತ್ಯದ ಸಾಧನೆ ಮತ್ತು ತಾನೇ ಉತ್ಪಾದಿಸಿದೆನೆಂಬ ಸಂತೋಷ ಎಲ್ಲವೂ ಲಭ್ಯವಾಗುತ್ತವೆ. ಇಂಥ ಉತ್ಪಾದನೆಯ ವ್ಯವಸ್ಥೆಯಲ್ಲಿ ಯಂತ್ರಗಳ ಸ್ಥಾನ ಆದಷ್ಟು ಕಡಿಮೆಯಾಗಿರತಕ್ಕದ್ದು. ಯಂತ್ರಗಳ ಕುರಿತು ಭ್ರಾಂತಿ ಇರುವುದಿಲ್ಲ. ಯಂತ್ರ ಇಂದಿನಂತೆ ಮಾನವನ ಉದ್ಯೋಗಾವಶವನ್ನು ಚೌರ್ಯ ಮಾಡುವ ಮಾರಕಶಕ್ತಿಯಾಗಿರುವುದಿಲ್ಲ. ಯಾವ ಯಾವ ಕ್ಷೇತ್ರಗಳಲ್ಲಿ ಕೇವಲ ಅನಿವಾರ್ಯವಾಗಿ ಯಂತ್ರೋಪಕರಣಗಳ ಸಹಾಯದಿಂದ ದೊಡ್ಡ ಉದ್ಯಮಗಳೂ ರೈಲ್ವೆ ಸಾರಿಗೆ ಮುಂತಾದವು ಇರಲೇಬೇಕೋ ಅಂಥ ಎಡೆಗಳಲ್ಲಿ ಅವುಗಳ ಒಡೆತನ ಸರ್ಕಾರಕ್ಕೆ ಸೇರಿರಬೇಕು.

ಗಾಂಧಿಯವರು ಮೇಲೆ ಕಾಣಿಸಿದ ಆದರ್ಶ ಆರ್ಥಿಕ ವ್ಯವಸ್ಥೆಯ ರೂಪರೇಷೆಯನ್ನು ಕೊಟ್ಟಿದ್ದರೂ ಪ್ರಚಲಿತ ಸಮಸ್ಯೆಗಳ ಬಗ್ಗೆ ಅವರು ಗಮನ ಹರಿಸದೆ, ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸದೆ ಇರಲಿಲ್ಲ. ಬಂಡವಾಳವಾದ, ಸಾಮ್ಯವಾದ, ಸಮಾಜವಾದ ಇವುಗಳ ಬಗ್ಗೆ ಅವರ ಅವಶ್ಯಕ ಆದರೆ ಅಭಿಪ್ರಾಯ ಸ್ಪಷ್ಟವೂ ಖಚಿತವೂ ಆಗಿತ್ತು.

ಬಂಡವಾಳವಾದದ ಅಳಿವು ಅವಶ್ಯಕ. ಆದರೆ ಬಂಡವಾಳಗಾರರನ್ನು ಹಿಂಸಾಮಾರ್ಗದಿಂದ ನಿರ್ನಾಮ ಮಾಡಿದರೆ ಬಂಡವಾಳಶಾಹಿಯ ನಾಶವಾಗುವುದಿಲ್ಲ. ಮನುಷ್ಯನಲ್ಲಿ ರೂಢವಾಗಿರುವ ಲೋಭ ಮತ್ತು ಪರಿಗ್ರಹ ಪ್ರವೃತ್ತಿ ದೂರವಾಗುವಂತೆ ಪ್ರಯತ್ನಪಡಬೇಕು. ಅದಕ್ಕೆ ಹೃದಯಪರಿವರ್ತನ ಮಾರ್ಗವೇ ಶ್ರೇಷ್ಠ ಮಾರ್ಗ,

ಬಂಡವಾಳ ಮತ್ತು ಕಾರ್ಮಿಕರ ನಡುವೆ ನಿರಂತರ ಸಂಘರ್ಷವಿರುವುದು ಅನಿವಾರ್ಯವಲ್ಲ. ಕಾರ್ಮಿಕರ ಸಹಕಾರವಿಲ್ಲದೆ ಬಂಡವಾಳ ಏನನ್ನೂ ಸಾಧಿಸಲಾರದು. ಕೆಲಸಗಾರರ ವರ್ಗದಲ್ಲಿ ಸಂಘಟನೆ ಆಗಿ ಅದರ ಶಕ್ತಿಯ ಅರಿವಾದರೆ ಅದನ್ನು ಬಂಡವಾಳವರ್ಗ ಶೋಷಣೆ ಮಾಡಲು ಸಾಧ್ಯವೇ ಇಲ್ಲ. ಎಲ್ಲಿ ಶೋಷಣೆ, ಅನ್ಯಾಯ ತಲೆದೋರುತ್ತದೋ ಅಲ್ಲಿ ಕಾರ್ಮಿಕರು ಶೋಷಣೆರೊಡನೆ ಅಹಿಂಸಾತ್ಮಕವಾಗಿ ಅಸಹಕರಿಸುವುದರ ಮೂಲಕ ಮುಕ್ತರಾಗಬಹುದು.

ಉದ್ಯಮದ ಒಡೆಯರು ತಾವು ತಮ್ಮ ಸ್ವತ್ತಿನ ಧರ್ಮದರ್ಶಿಗಳೆಂದು ಮನಗಾಣಬೇಕು. ಕೆಲಸಗಾರನ್ನೂ ಉದ್ಯಮದ ಪಾಲುದಾರರೆಂದು ಭಾವಿಸಬೇಕು. ಯೋಗ್ಯ ವೇತನ ಮತ್ತು ಕೆಲಸದ ಭದ್ರತೆಯ ಭರವಸೆಯನ್ನು ಕೆಲಸಗಾರಿಗೆ ದೊರಕಿಸಿಕೊಡಬೇಕು. ಅವರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಪ್ರಗತಿಗೆ ಸೌಕರ್ಯಗಳನ್ನು ಒದಗಿಸತಕ್ಕದ್ದು ಕೆಲಸಗಾರರು ತಮಗೆ ದೊರೆಯುವ ಬಿಡುವು ಮತ್ತು ಹೆಚ್ಚಿನ ವೇತನವನ್ನು ಸ್ವಚ್ಛ ಮನ ಸ್ವಚ್ಛ ಆತ್ಮ ಇವುಗಳ ಸಾಧನೆಗೆ ವಿನಿಯೋಗಿಸಬೇಕು.

ಸಮಾಜವಾದವನ್ನು ಸರಿಯಾದ ರೀತಿಯಲ್ಲಿ ಅನ್ವಯಿಸಿದ್ದಾದರೆ ಅದೊಂದು ಅತ್ಯುಚ್ಛ ತತ್ತ್ವವೇ ಸರಿ. ಆದರೆ ಅದನ್ನು ಬಲವಂತವಾಗಿ ಹಿಂಸಾಮಾರ್ಗದಲ್ಲಿ ಅನ್ವಯಿಸಲು ಹೋದರೆ ಅದೊಂದು ಪಾಶವಿಪ್ರಯೋಗವಾಗುತ್ತದೆ. ನಿಜವಾದ ಸಮಾಜವಾದವೆಂದರೆ ಅಮೂಲ್ಯವಾದ ಅಪರಿಗ್ರಹತತ್ತ್ವವನ್ನು ಸಮಾಜಕ್ಕೆ ಅನ್ವಯಿಸುವುದು. ಈ ಕಾರ್ಯ ಮನಃ ಪೂರ್ವಕವಾಗಿ ಅಹಿಂಸಾತ್ಮಕವಾಗಿ ಅನ್ವಯವಾದರೆ ಅದರಿಂದ ಮಾನವಕಲ್ಯಾಣ ಸಾಧಿತವಾಗುತ್ತದೆ. ಸಮಾಜವಾದ ಕೇಂದ್ರೀ ಕೃತಸರ್ಕಾರದಿಂದ ಇಳಿದು ಬರುವುದಿಲ್ಲ. ಅದರ ಆದರ್ಶವನ್ನು ಜನರು ತಾವಾಗಿಯೇ ಅಂಗೀಕರಿಸಿದರೆ ಅಥವಾ ಶಾಂತಿಯುತ ಪರಿವರ್ತನೆ ಮತ್ತು ಅನುನಯಗಳಿಂದ ಅವರು ಒಪ್ಪುವಂತೆ ಮಾಡಿದುದಾದರೆ, ಅದು ಯಶಸ್ವಿಯಾಗುತ್ತದೆ. ವ್ಯಕ್ತಿಗಳು ತಮ್ಮ ಆಸೆ ಅಪೇಕ್ಷೆಗಳನ್ನು ಕಡಿಮೆ ಮಾಡಿಕೊಂಡು, ಇರುವ ವಸ್ತುಗಳು ಸರ್ವರ ಉಪಯೋಗಕ್ಕೂ ಹಂಚಿಕೆಯಾಗಬೇಕೆಂಬ ಅಂತಃಕರಣದಿಂದ ಕೂಡಿ, ತಮಗೆ ಅತ್ಯಗತ್ಯವದಷ್ಟು ಮಾತ್ರವೇ ಅವಶ್ಯಕ ವಸ್ತುಗಳನ್ನು ಬಳಸಬೇಕು. ಸಮಾಜದ ಸಂಪತ್ತನ್ನು ಹೆಚ್ಚಿಸಲು ಹಿತವನ್ನು ಸಂವರ್ಧಿಸಲು ತಮ್ಮ ಸಕಲ ಶಕ್ತಿ ಸಾಮಥ್ರ್ಯಗಳನ್ನೂ ವಿನಿಯೋಗಿಸುವ ಮನೋಭಾವವನ್ನು ಅವರು ಹೊಂದಿರಬೇಕು. ಮೇಲಾಗಿ ಜಗತ್ತಿನಲ್ಲಿರುವ ಸರ್ವಸ್ವವೂ ಈಶ್ವರನದೆಂಬ ಸತ್ಯವನ್ನು ಅರಿತು. ತಮ್ಮಲಿರುವುದನ್ನೆಲ್ಲ ಜನತಾಜನಾರ್ಧನನ ಸೇವೆಗಾಗಿ ವಿನಿಯೋಗಿಸಬೇಕು. ಯಾರೋಬ್ಬರ ಸ್ವತ್ತಿಗಾಗಲಿ ಸಂಪತ್ತಿಗಾಗಲಿ ಆಸೆ ಪಡಬಾರದು ಪ್ರತಿಯೊಬ್ಬನೂ ತನ್ನ ದೇಹಶಕ್ತಿ ಬುದ್ಧಿ ಸಂಪತ್ತು ಎಲ್ಲಕ್ಕೂ ತಾನು ಧರ್ಮದರ್ಶಿಯೆಂದು ಭಾವಿಸಿ, ಸಂಪಾದನೆಯ ಫಲದಲ್ಲಿ ತನ್ನ ಬದುಕಿಗೆ ಎಷ್ಟು ಅಗತ್ಯವೂ ಅಷ್ಟನ್ನು ತಾನು ಬಳಸಿಕೊಂಡು ಮಿಕ್ಕದ್ದನ್ನೆಲ್ಲ ಸಮಾಜದ ಹಿತಕ್ಕಾಗಿ ಧಾರೆ ಎರೆಯಬೇಕು. ಅಂಥ ವ್ಯಕ್ತಿಗಳನ್ನುಳ್ಳ ಸಮಾಜದಲ್ಲಿ ಸಮಾಜದ ಹಿತಕ್ಕಾಗಿ ಧಾರೆ ಎರೆಯಬೇಕು. ಅಂಥ ವ್ಯಕ್ತಿಗಳನ್ನುಳ್ಳ ಸಮಾಜದಲ್ಲಿ ಸ್ವಾತಂತ್ರ್ಯ, ಸಮತೆ ಸಮೃದ್ಧಿ ಮತ್ತು ಶಾಂತಿ ಶಾಶ್ವÀತವಾಗಿ ನೆಲೆಗೊಂಡಿರುತ್ತವೆ. (ಬಿ.ಆರ್.ಪಿ.)

ಗಾಂಧಿಯವರ ಶಿಕ್ಷಣ ತತ್ತ್ವದೃಷ್ಟಿ: ಶಿಕ್ಷಣದ ಬಗ್ಗೆಯೂ ಗಾಂಧಿ ಅವರು ತತ್ತ್ವ ಚಿಂತನೆ ನಡೆಸಿ ಪ್ರಯೋಗಗಳ ಮೂಲಕ ಅವನ್ನು ಪರೀಕ್ಷಿಸಿ ನೋಡಿದರು. ಅದರ ಫಲವಾಗಿ ಈ ಶತಮಾನದ ನಾಲ್ಕನೆಯ ದಶಕದಲ್ಲಿ ಪೂರ್ಣವಾಗಿ ಭಾರತೀಯನೆನ್ನಬಹುದಾದ ನೂತನ ಶಿಕ್ಷಣ ಪದ್ಧತಿಯೊಂದು ರೂಪುಗೊಂಡಿತು. ಅವರ ಧಾರ್ಮಿಕ ದೃಷ್ಟಿಯಿಂದ ದೇವರೇ ಸತ್ಯ ಅದನ್ನು ಸಾಧಿಸಲು ಅಹಿಂಸೆಯೇ ಮಾರ್ಗ, ಸ್ವಾತಂತ್ರ್ಯ ಸತ್ಯದ ಒಂದು ಮುಖ. ಪ್ರತಿರಾಷ್ಟ್ರಕ್ಕೂ ತನ್ನದೇ ಆದ ಶಿಕ್ಷಣಪದ್ಧತಿಯನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಅಗತ್ಯ. ಭಾರತ ಆಧ್ಯಾತ್ಮಿಕ ದೃಷ್ಟಿಗೆ ಪ್ರಾಚೀನಕಾಲದಿಂದಲೂ ಜೀವನವನ್ನು ಮುಡಿಪಾಗಿರಿಸಿರುವುದರಿಂದ ಅಂಥ ಶಿಕ್ಷಣಪದ್ಧತಿ ಉಪಕರಣವಾಗಬೇಕು. ಹೀಗೆ ತಮ್ಮ ಜೀವನದ ದೃಷ್ಟಿಯನ್ನು ಆಧಾರ ಮಾಡಿಕೊಂಡು ರೂಪಿಸಿದ ಅವರ ನೂತನ ಶಿಕ್ಷಣಪದ್ಧತಿ ದೃಷ್ಟಿಯನ್ನು ಆಧಾರ ಮಾಡಿಕೊಂಡು ರೂಪಿಸಿದ ಅವರ ನೂತನ ಶಿಕ್ಷಣಪದ್ಧತಿ ಭಾರತದಲ್ಲಿ ಜೀವನಶಿಕ್ಷಣ, ಮೂಲಶಿಕ್ಷಣ, ನಯೀ ತಾಲೀಂ (ನೂತನ ಶಿಕ್ಷಣ) ಇತ್ಯಾದಿ ಹೆಸರುಗಳಿಂದ ಪ್ರಚಾರಕ್ಕೆ ಬಂದಿದೆ.

ಗಾಂಧೀಜಿ ತಮ್ಮ ಶಿಕ್ಷಣಪದ್ಧತಿಯನ್ನು ರೂಪಿಸಿರುವ ವೇಳೆಗೆ ಶಿಕ್ಷಣಪ್ರಪಂಚದಲ್ಲಿ ನಿಸರ್ಗವಾದ, ಆದರ್ಶವಾದ, ಯಥಾರ್ಥವಾದ, ಫಲಪರಿಣಾಮಾನುಮೇಯವಾದ-- ಸಮಗ್ರತೆ; ನಿಸರ್ಗ ಸಮಸ್ತ ಪದಾರ್ಥಸ್ವರೂಪ : ನಿಸರ್ಗಕ್ಕೆ ಅನ್ವಯಿಸುವ ವಿಧಾನಗಳನ್ನು ಅನ್ವಯಿಸಲು ಆಗದ ಯಾವ ಜ್ಞಾನ ಅಥವಾ ಅನುಭವದ ಕ್ಷೇತ್ರವೂ ಇಲ್ಲ; ಅಸ್ತಿತ್ವಕ್ಕೆ ಅತಿಮಾನುಷ ಅಥವ ಆಧ್ಯಾತ್ಮಿಕ ಪ್ರಪಂಚವೊಂದರ ಕೈವಾಡ ವಿಲ್ಲ. ಹಾಗೆಯೇ ಎಲ್ಲ ಪ್ರಕ್ರಿಯೆಗಳನ್ನೂ ಪದಾರ್ಥದ ಚಲನೆಯ ರೂಪದಲ್ಲಿ ವಿವರಿಸುವ ಭೌತ ಅಥವಾ ಯಂತ್ರಕೌಶಲವಾದವೂ ಸರಿಯಲ್ಲ-ಎಂದು ಪ್ರತಿಪಾದಿಸುತ್ತದೆ, ಆಧುನಿಕ ನಿಸರ್ಗವಾದ. ಇದನ್ನು ಮೊದಲು ರೂಸೋ ಅನಂತರ, ಪೆಸ್ಟಲಾಜಿ, ಹರ್ಬಾರ್ಟ್, ಸ್ಟಾನ್ಲಿ ಹಾಲ್, ಜಾನ್ ಡ್ಯೂಯಿ ಇವರು ಆಧಾರಮಾಡಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಅಳವಡಿಸಿಕೊಂಡರು. ಈ ವಿಧಾನದಂತೆ ಶಿಕ್ಷಣ ಸ್ವಾಭಾವಿಕ ಬೋಧನ ಕ್ರಮಗಳನ್ನು ಅನುಸರಿಸಬೇಕು. ಮಗುವಿನ ಜೀವನದಲ್ಲಿ ಸ್ವಾಭಾವಿಕ ಬೆಳೆವಣಿಗೆಯ ಅಂತಸ್ತುಗಳನ್ನು ಇದು ಅಂಗೀಕರಿಸುತ್ತದೆ. ಹಾಗೆಯೇ, ಸಿದ್ಧತೆಯ ಮಟ್ಟ, ವೈಯಕ್ತಿಕ ಭಿನ್ನತೆಗಳು ಮತ್ತು ಆಧುನಿಕ ಶಿಕ್ಷಣದ ಪ್ರಗತಿಪರ ಅಂಶಗಳನ್ನು ಪುರಸ್ಕರಿಸುತ್ತದೆ. ಶಿಕ್ಷಣ ಮಕ್ಕಳ ಸ್ವಾಭಾವಿಕ ಬೆಳೆವಣಿಗೆಗೆ ಅನುಗುಣವಾಗಿರಬೇಕೆಂದೂ ಕೆಲವು ಚಟುವಟಿಕೆ ಮತ್ತು ಅನುಭವಗಳ ಆಧಾರದ ಮೇಲೆ ಸಾಗಬೇಕೆಂದೂ ಕೆಲವು ಚಟುವಟಿಕೆ ಮತ್ತು ಅನುಭನಗಳ ಆಧಾರದ ಮೇಲೆ ಸಾಗಬೇಕೆಂದೂ ಶಿಸ್ತು ಮಕ್ಕಳ ಸ್ವಾಭಾವಿಕ ಬೆಳೆವಣಿಗೆಗೆ ಅನುಗುಣವಾಗಿರಬೇಕೆಂದೂ ಕೆಲವು ಚಟುವಟಿಕೆ ಮತ್ತು ಅನುಭವಗಳ ಆಧಾರದ ಮೇಲೆ ಸಾಗಬೇಕೆಂದೂ ಶಿಸ್ತು ಮಕ್ಕಳ ಸ್ವಪ್ರೇರಣೆಯಿಂದ ಮೂಡಬೇಕೆಂದೂ ವಾದಿಸುತ್ತದೆ. ವೈಯಕ್ತಿಕ ಗಮನ, ಇಂದ್ರಿಯಗಳ ಬಳಕೆ, ಆರೋಗ್ಯಜೀವನ, ಅನುಭವಗಳ ಫಲವಾಗಿ ಅಂತರ್ಜನ್ಯವಾಗಿ ವೃದ್ಧಿಸುವ ನೈತಿಕ ಬೆಳೆವಣಿಗೆ (ಹೊರಗಿನ ಕಟ್ಟುನಿಟ್ಟುಗಳಿಂದಲ್ಲ) ಇವುಗಳಿಗೆ ಪ್ರಾಧಾನ್ಯವೀಯುತ್ತದೆ. ಆದರೆ 18ನೆಯ ಶತಮಾನದ ಅಧ್ಯಾತ್ಮವಾದವನ್ನೂ ತರ್ಕಪ್ರಮಾಣವಾದವನ್ನೂ ಇದು ವಿರೋಧಿಸುತ್ತದೆ. ಮುಖ್ಯವಾಗಿ ಕೃತಕರೀತಿಯ ಕಟ್ಟುಕಟ್ಟಳೆಗಳಿಗೆ ಬದಲಾಗಿ ಶಿಕ್ಷಣ ಸ್ವಾಭಾವಿಕ ರೀತಿಯದಾಗಿದ್ದು ನಿಸರ್ಗದ ಮಡಿಲಲ್ಲಿ ನಡೆಯುಬೇಕೆಂದು ವಾದಿಸುತ್ತದೆ. ಒಂದು ದೃಷ್ಟಿಯಲ್ಲಿ ಇದು ಆದಿಕಾಲದ ಸಮಾಜ ರಚನೆಗೆ ಶರಣು ಹೋಗಬೇಕೆಂದೂ ಸೂಚಿಸುತ್ತದೆ.

ಆದರ್ಶವಾದ ವಿಚಾರವಿವರಣೆಯಲ್ಲಿ ಪ್ರಧಾನವಾಗಿ ಚಿತ್‍ಸತ್ಯತೆಯನ್ನು ಒತ್ತಿ ಹೇಳುತ್ತದೆ. ಪ್ರಪಂಚ ಮನಸ್ಸಿನ ಅಥವಾ ಬುದ್ಧಿಯ ಕಲ್ಪನೆ; ಶಾಶ್ವತವಾದ್ದು ಚಿತ್‍ಸ್ವರೂಪದ್ದು; ಆದ್ದರಿಂದ ಎಲ್ಲ ಜ್ಞಾನವೂ ಮನಸ್ಸನ್ನು ಅವಲಂಬಿಸಿದ್ದು ಅದರ ಕ್ರಿಯಾಪರಿಮಿತಿಯೊಳಗೆ ಇರತಕ್ಕದ್ದು ಕಲೆ, ಶಿಕ್ಷಣ, ಧರ್ಮ, ವಿಜ್ಞಾನ, ತರ್ಕ ಇವೆಲ್ಲಕ್ಕೂ ಮೂಲಕಾರಕ ಚೈತನ್ಯ. ಇಂದ್ರಿಯಗೋಚರ ಬಾಹ್ಯ ಜಗತ್ತೆಲ್ಲ ಶಿಕ್ಷಣದಲ್ಲಿ ಹಿಂದಿನವರ ಆದರ್ಶಗಳಿಗೂ ಸಂಪ್ರದಾಯಗಳಿಗೂ ಪ್ರಾಮುಖ್ಯ ಬಂತು. ಜೀವನದ ಉದ್ದೇಶ ಪರಮಾರ್ಥವೆಂಬುದನ್ನು ಎತ್ತಿಹಿಡಿದು ಅದರ ಸಾಧನೆಗಾಗಿ ಇಂದ್ರಿಯನಿಗ್ರಹ, ಭಾವ ಮತ್ತು ಬುದ್ದಿಗಳ ಆದರ್ಶಪಥದಲ್ಲಿ ನಿರೂಪಣೆ ಇತ್ಯಾದಿಯಾದ ಶಿಕ್ಷಣ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿತು.

ಯಥಾರ್ಥವಾದ (ವಾಸ್ತವ) ಜ್ಞಾನ ವಸ್ತುಗಳನ್ನು ಅರಿಯುವ ಕಾರ್ಯಕ್ಕಿಂತ ಬೇರೆಯಾದ್ದೆಂದೂ ಅದು ಅರಿಯುವ ಕಾರ್ಯವನ್ನು ಅವಲಂಬಿಸಿರದೆ ಸ್ವತಂತ್ರ ಅಸ್ತಿತ್ವ ತಳೆದಿದೆಯೆಂದೂ ಅದರ ಸ್ವಭಾವ ಮತ್ತು ಲಕ್ಷಣಗಳು ಅರಿಯುವ ಕಾರ್ಯದಿಂದ ರೂಪುಗೊಳ್ಳುವುದಿಲ್ಲ ಮತ್ತು ಬದಲಾಗುವುದಿಲ್ಲವೆಂದೂ ಪ್ರತಿಪಾದಿಸುತ್ತದೆ. ಶಿಕ್ಷಣದಲ್ಲಿ ಕೇವಲ ಶಬ್ದಗಳನ್ನೊಳಗೊಂಡ ಕಾರ್ಯಕ್ರಮಗಳಿಗೇ ಪ್ರಾಮುಖ್ಯವೀಯುವುದನ್ನು ಇದು ವಿರೋಧಿಸುತ್ತದೆ. ಶಿಕ್ಷಣದಿಂದ ವ್ಯಕ್ತಿ ಸನ್ನಿವೇಶಗಳಿಗೆ ಹೊಂದಿಕೊಂಡು ಹೋಗುವ ಶಕ್ತಿಯನ್ನು ಸಾಧಿಸಬೇಕೆಂದು ಪ್ರತಿಪಾದಿಸುತ್ತದೆ. ಜ್ಞಾನ ಮತ್ತು ಅದರ ಸಾಧನೆಗಾಗಿ ನಡೆಸುವ ಚಟುವಟಿಕೆಗಳೆರಡಕ್ಕೂ ಶಿಕ್ಷಣದಲ್ಲಿ ಪ್ರಾಧಾನ್ಯವೀಯುತ್ತವೆ. ಮಾನವನ ವರ್ತನೆಯ ಪರಿವರ್ತನೆಯಲ್ಲಿ ಬಾಹ್ಯ ಸನ್ನಿವೇಶಗಳ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಶಿಕ್ಷಣದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿರಬೇಕೆಂದು ಪ್ರತಿಪಾದಿಸಿದರೂ ಅದು ಇತರರ ಹಕ್ಕಿಗೂ ನೆಮ್ಮದಿಗೂ ಮಾರಕವಾಗವಾರದೆಂದು ಸೂಚಿಸುತ್ತದೆ. ಮಾನವನ ಸ್ವಭಾವದಲ್ಲೂ ಸಮಾಜಜೀವನದಲ್ಲೂ ಬುದ್ಧಿಗ್ರಾಹ್ಯ ಅಂಶಗಳಿವೆಯೆಂದು ಅವು ವ್ಯಕ್ತಿಯ ಮತ್ತು ಸಮಾಜದ ಜೀವನಕ್ಕೆ ಮಾರ್ಗದರ್ಶನವಾಗಬಲ್ಲವೆಂದೂ ವಿವರಿಸುತ್ತದೆ.

ಫಲಕಪರಿಣಾಮಾನುಮೇಯವಾದವನ್ನು (ಪ್ರಾಗ್ಮಟಿಸಂ) ಪೇರ್ಸ, ಡ್ಯೂಯಿ ಮುಂತಾದ ಅಮೆರಿಕದ ತತ್ತ್ವಚಿಂತನಕರು ಪ್ರತಿಪಾದಿಸಿ ಶಿಕ್ಷಣಕ್ಷೇತ್ರಕ್ಕೆ ಅನ್ವಯಿಸಿಕೊಂಡರು. ವಿಲಿಯಂ ಜೆಮ್ಸ ಅದಕ್ಕೆ ಮನೋವಿಜ್ಞಾನದ ಬೆಳಕಿನಲ್ಲಿ ಅರ್ಥ ಕಲ್ಪಿಸಿಕೊಟ್ಟ. ಅದರ ಪ್ರಕಾರ ಒಂದು ಭಾವನೆಯ ಅರ್ಥ ಅದು ನಿರ್ದೇಶಿಸುವ ನಡವಳಿಕೆಯಲ್ಲಿರುತ್ತದೆ. ಎಲ್ಲ ಭಾವನೆಗಳಲ್ಲೂ ಅವುಗಳ ಅಭ್ಯಾಸದಲ್ಲಿರಬಹುದಾದ ವ್ಯತ್ಯಾಸಗಳಿಂದ ಅವುಗಳ ವೈಶಿಷ್ಟ್ಯ ಕಾಣಿಸಿಕೊಳ್ಳುತ್ತದೆ. ಚಿಂತನೆ ಕಾರ್ಯವನ್ನು ನಿರ್ದೇಶಿಸುವ ಒಂದು ಪ್ರಕ್ರಿಯೇ ಸತ್ಯ ಒಂದು ಸಾಮಾಜಿಕ ಮೌಲ್ಯ. ಬಹಿರಂಗವಾಗಿ ಚರ್ಚಿಸಿ ಪರೀಕ್ಷಿಸಿದಂತೆ ಆ ಮೌಲ್ಯಗಳು ಭಾವನೆಗಳಲ್ಲಿ ಸಂಗ್ರಹವಾಗುತ್ತವೆ. ವಾಸ್ತವ್ಯ ಅಥವಾ ಸತ್ಯ ಅಂತಿಮ ಸ್ವರೂಪದಲ್ಲಿ ಬಹುತ್ವದ್ದಾಗಿರುತ್ತದೆ. ಕೆಲವರು ಇದೊಂದು ಉಪಯುಕ್ತವಾದವೆಂದು ಪರಿಗಣಿಸಿ ಯಾವುದು ಉದ್ದೇಶವನ್ನು ಸಾಧಿಸುವುದೋ ಯಾವುದೋ ಹಿತಕರ ಫಲನೀಡುವುದೋ ಅದೇ ಸತ್ಯ ಎಂದು ಭಾವಿಸುವುಂಟು. ಹೇಗೆ ಆಗಲಿ, ಶಿಕ್ಷಣದಲ್ಲಿ ಇದು ತೀವ್ರ ರೀತಿಯ ಪರಿಣಾಮವನ್ನು ಮೂಡಿಸಿದೆ. ಜೀವನದಲ್ಲಿ ಯಾವುದು ಫಲದಾಯಕವೊ ಅದೆಲ್ಲ ಶಿಕ್ಷಣದ ಕಾರ್ಯಕ್ರಮದಲ್ಲಿ ಸೇರಬೇಕೆಂದೂ ಶಾಲೆ ವಿಶಾಲವು ಬಹುವಿಧವೂ ಅದೆಲ್ಲ ಶಿಕ್ಷಣದ ಕಾರ್ಯಕ್ರಮದಲ್ಲಿ ಸೇರಬೇಕೆಂದೊ ಜ್ಞಾನ ಅನುಭವದಿಂದ ಸಿದ್ಧಿಸಬೇಕೆಂದೂ ಸೂಚಿಸುತ್ತದೆ. ವಿಜ್ಞಾನಕ್ಕೆ ಪ್ರಧಾನ ಸ್ಥಾನವನ್ನು ದೊರಕಿಸಿಕೊಟ್ಟು ಈ ತತ್ತ್ವಪಂಥ ಅನುಭವಗಳೇ ಪ್ರಧಾನವಾಗುಳ್ಳ ಉದ್ಯಮ ಪದ್ಧತಿಯ (ಪ್ರೋಜೆಕ್ಟ್) ಉಗಮಕ್ಕೆ ಅವಕಾಶ ಮಾಡಿಕೊಟ್ಟಿತು. ಯಾವುದನ್ನೇ ಆಗಲಿ ಅದರ ಪರಿಣಾಮದಿಂದ ಅರಿತುಕೊಳ್ಳಬೇಕೆನ್ನುವ ತತ್ತ್ವ ಪಂಥದ ದೃಷ್ಟಿಯಲ್ಲಿ ಅಂತಿಮ ಸ್ವರೂಪದ ಸತ್ಯವೆಂಬುದೇ ಇಲ್ಲ. ಅದು ನಿರಂತರವೂ ಪರಿವರ್ತನೆಯಾಗುತ್ತಿರುತ್ತದೆ. ಶಿಕ್ಷಣದಲ್ಲೂ ನಿರಂತರ ಪರಿವರ್ತನೆಗಳನ್ನು ಪ್ರೋತ್ಸಾಹಿಸುತ್ತವೆ.

ಗಾಂಧೀಜಿಯ ಶಿಕ್ಷಣ ಧೋರಣೆ ಮೇಲಿನ ನಾಲ್ಕು ತತ್ತ್ವಪಂಥಗಳಲ್ಲಿ ಯಾವ ಒಂದು ಪಂಥವನ್ನೂ ಆಧಾರಮಾಡಿಕೊಳ್ಳದಿದ್ದರೂ ಅವುಗಳಲ್ಲೊಂದೊಂದರ ಹಲಕೆಲವು ಅಂಶಗಳನ್ನು ಒಳಗೊಂಡಿದೆ. ಎಂದ ಮಾತ್ರಕ್ಕೆ ಆ ನಾಲ್ಕರಿಂದಲೂ ಆಯ್ದ ತತ್ತ್ವದೃಷ್ಟಿಗಳ ಆಧಾರದ ಮೇಲೆ ಅವರು ತಮ್ಮ ದೃಷ್ಟಿಯನ್ನು ರೂಪಿಸಿದರೆಂದು ಭಾವಿಸಕೂಡದು ಅದನ್ನು ಅವರು ಪ್ರತ್ಯೇಕವಾಗಿ ತಮ್ಮ ಜೀವನದರ್ಶನದ ವಿಶಿಷ್ಟಪ್ರಭಾವದಿಂದ ರೂಪಿಸಿದರು. ಅದರೂ ಅವರ ತತ್ತ್ವದೃಷ್ಟಿ ಯಾವ ಯಾವ ಅಂಶಗಳಲ್ಲಿ ಮೇಲಿನ ತತ್ತ್ವಪಂಥಗಳನ್ನು ಹೋಲುತ್ತದೆಂಬುದನ್ನು ಪರಿಶೀಲಿಸಬೇಕಾಗಿದೆ.

ಗಾಂಧಿಯವರು ರೂಪಿಸಿದ ಮೂಲಶಿಕ್ಷಣ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅನ್ವಯವಾಗುವಂಥದು. ಭಾರತದ ಜನತೆಯ 80 % ರಷ್ಟು ಭಾಗ ಗ್ರಾಮಗಳಲ್ಲಿ ಜೀವಿಸುವುದರಿಂದ ಭಾರತದಲ್ಲಿ ರೂಪಿಸುವ ಯಾವ ರಾಷ್ಟ್ರೀಯ ಶಿಕ್ಷಣ ಯೋಜನೆಯೇ ಆಗಲಿ ಪ್ರಥಮತಃ ಅವರ ಹಿತದೃಷ್ಟಿಗೆ ಒಪ್ಪುವಂತೆ ರೂಪಗೊಳ್ಳಬೇಕೆಂಬುದು ಸ್ವಾಭಾವಿಕ. ಗ್ರಾಮಗಳು ನಿಸರ್ಗದ ಮಡಿಲಲ್ಲಿರುವುದರಿಂದ ಅದರೊಡನೆ ಸಂಪರ್ಕ ಹೊಂದಿ ಅದರಿಂದ ಪರಿಣಾಮ ಹೊಂದಿ ಬೆಳೆಯಲು ಅವಕಾಶವಿದೆ. ಜೀವನದಲ್ಲಿ ಕಂಡುಬರುವ ಒಂದು ಸ್ವಾಭಾವಿಕ ಸನ್ನಿವೇಶವನ್ನು (ಕಸಬು) ಆಧಾರ ಮಾಡಿಕೊಂಡು ಅಲ್ಲಿ ಕಲಿಯುವ ರೀತಿಯಲ್ಲಿ ಶಾಲೆಯಲ್ಲೂ ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಅವರ ದೃಷ್ಟಿ ನಿಸರ್ಗವಾದದ ತತ್ತ್ವದೃಷ್ಟಿಯನ್ನು ಅಳವಡಿಸಿಕೊಂಡಿದೆ. ಕೃತಕರೀತಿಯಲ್ಲಿ ವಿಷಯಗಳನ್ನು ಪ್ರತ್ಯೇಕಿಸಿ ವರ್ಗೀಕರಿಸುವುದರ ಬದಲು ಜೀವನದಲ್ಲಿ ಅವು ಪಾತ್ರವಹಿಸುವ ಸ್ವರೂಪದಲ್ಲಿ ಕಲಿಸುವುದೂ ಆ ತತ್ತ್ವದೃಷ್ಟಿಯನ್ನೇ ವ್ಯಕ್ತಪಡಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಪರಮಚೈತನ್ಯ ಸ್ವರೂಪನ ಒಂದು ಅಂಶವೆಂದು ಅವರು ನಂಬಿದ್ದುದರಿಂದ ಅದು ಆದರ್ಶವಾದದಲ್ಲಿ ಕಂಡುಬರುವ ಅಂಶವೆಂಬುದನ್ನು ಗುರುತಿಸಬಹುದು. ಅನ್ಯಭಾಷೆಯೊಂದರ ಮೂಲಕ ಅನ್ಯಸಂಸ್ಕøತಿಯೊಂದನ್ನು ಕುರಿತ ವಿದ್ಯೆ ಕಲಿಯುವುದು ನಮ್ಮವರಿಗೆ ಅಸ್ವಾಭವಿಕವೆಂದು ಬಗೆದು `ಇಲ್ಲಿನವರ ಶಿಕ್ಷಣ, ಇಲ್ಲಿನ ಜನತೆಯ ಜೀವನಕ್ಕೆ ಸಂಬಂಧಿಸಿದಂತೆ ನಡೆಯಬೇಕು; ಅವರ ಮಾತೃಭಾಷೆಯಲ್ಲಿ ನಡೆಯಬೇಕು; ಇಲ್ಲಿನವರ ಜೀವನ ವಿಧಾನದಲ್ಲಿ ನಡೆಯಬೇಕು. ಹಾಗೂ ಬಡತನದ ಈ ವಿಶಾಲ ದೇಶದಲ್ಲಿ ಅಷ್ಟಾಗಿ ಧನದ ಅಗತ್ಯವಿರದೆ ನಡೆಯಬೇಕು ಎಂಬ ಅವರ ದೃಷ್ಟಿ ಯಥಾರ್ಥವಾದವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿ ಜೀವನೋಪಾಯಕ್ಕಾಗಿ ಜನತೆ ಅನುಸರಿಸುತ್ತಿರುವ ಕಸಬೊಂದನ್ನು ಕೇಂದ್ರವಾಗಿ ಮಾಡಿಕೊಂಡು ಅದನ್ನು ಕಲಿಯಲು ಅಗತ್ಯವೆನಿಸುವ ಜ್ಞಾನ, ಕೌಶಲ, ಮನೋಭಾವ ಇವುಗಳನ್ನು ಕಲಿಸುವ ಯತ್ನ ಫಲ ಪರಿಣಾಮಾನುಮೇಯವಾದದ ಮುಖ್ಯ ಅಂಶವನ್ನು ಅಳವಡಿಸಕೊಂಡಿದೆ. ಹಾಗೂ ಅನುಭವಗಳ ಮೂಲಕ ಶಿಕ್ಷಣ ದೊರಕಿಸಬೇಕೆಂಬ ಆ ತತ್ತ್ವಪಂಥದ ವಿಧಾನವನ್ನು ಅನುಸರಿಸುತ್ತದೆ. ಸದ್ಯದಲ್ಲಿ ಎಲ್ಲ ದೇಶಗಳಲ್ಲೂ ಫಲ ಪರಿಣಾಮವಾದಕ್ಕೆ ಪ್ರಾಶಸ್ತ್ಯ ದೊರಕುತ್ತಿದೆ. ಅದನ್ನು ಆಧಾರಮಾಡಿಕೊಂಡು ಮೊಟ್ಟಮೊದಲು ಈ ಶತಮಾನದ ಆದಿಯಲ್ಲಿ ಜಾನ್ ಡ್ಯೂಯಿಯವರು ಉದ್ಯಮ ಶಾಲೆಗಳನ್ನು ಅಮೆರಿಕದಲ್ಲಿ ಆರಂಭಿಸಿದರು. ಅವರ ತತ್ತ್ವದೃಷ್ಟಿಯನ್ನು ಪ್ರಪಂಚದಾದ್ಯಂತ ಪುರಸ್ಕರಿಸಲಾಯಿತು. ಇಪ್ಪತ್ತನೆಯ ಶತಮಾನದ ಪ್ರಧಾನ ತತ್ತ್ವಚಿಂತಕರೆನಿಸಿರುವ ಅವರು ಮೂಲಶಿಕ್ಷಣ ಪದ್ಧತಿಯನ್ನು ಕುರಿತು ` ಅದು ನನ್ನ ಶಿಕ್ಷಣಪದ್ಧತಿಗಿಂತಲೂ ಒಂದು ಹಂತ ಮುಂದೆ ಸಾಗಿದೆ ' ಎಂದು ತಮ್ಮ ಅಭಿಪ್ರಾಯವನ್ನು ಸೂಚಿಸಿರುವರು. ಇಂಥ ಅನೇಕ ಪ್ರಗತಿಪರ ಅಂಶಗಳನ್ನೊಳಗೊಂಡ ಗಾಂಧೀಜಿಯವರ ಶಿಕ್ಷಣದೃಷ್ಟಿ ಆಕಸ್ಮಿಕವಾಗಿ ರೂಪಗೊಂಡದ್ದಲ್ಲ. ಅವರ ಜೀವನದರ್ಶನ ಬೆಳೆದು ಪಕ್ವಗೊಂಡಂತೆ ಅವರ ಶಿಕ್ಷಣತತ್ತ್ವವೂ ರೂಪುಗೊಂಡಿತು. ಅದನ್ನವರು ಪ್ರತ್ಯೇಕವಾಗಿ ರೂಪುಗೊಳಿಸಲಿಲ್ಲ. ಅವರ ಜೀವನ ದರ್ಶನದ ಕಾರ್ಯಸ್ವರೂಪವಾಗಿ ಅವರ ಶಿಕ್ಷಣ ಪದ್ಧತಿ ಮೈದಾಳಿತು. ಆದ್ದರಿಂದ ಆ ಶಿಕ್ಷಣಪದ್ಧತಿಯಲ್ಲಿ ಅವರ ಜೀವನದ ತತ್ತ್ವದೃಷ್ಟಿ ಪ್ರತಿಬಿಂಬಿಸಿರುವುದು ಸ್ವಾಭಾವಿಕ.

ಗಾಂಧೀಜಿಯ ತತ್ತ್ವದೃಷ್ಟಿಯನ್ನು ಯಾವೊಂದು ಸಾಂಪ್ರದಾಯಿಕ ಹೆಸರಿನಿಂದಲೂ ಕರೆಯುವಂತಿಲ್ಲ. ಏಕೆಂದರೆ, ಅದರಲ್ಲಿರುವ ಲಕ್ಷಣಗಳು ಯಾವ ಒಂದು ತತ್ತ್ವಪಂಥವನ್ನು ಪೂರ್ಣವಾಗಿ ಅನುಸರಿಸುವುದಿಲ್ಲ. ಅದನ್ನು ಗಾಂಧೀವಾದವೆನ್ನುವುದು ಸೂಕ್ತ. ಅವರ ಈ ತತ್ತ್ವದೃಷ್ಟಿಯನ್ನು ಪೋಷಿಸಿದ್ದು ರಸ್ಕಿನ್ನರ `ಅಂಟು ದಿಸ್ ಲ್ಯಾಸ್ಟ್ ಎಂಬ ಕೃತಿ. ವ್ಯಕ್ತಿಯ ಒಳ್ಳಿತು ಎಲ್ಲರ ಒಳ್ಳಿತಿನಲ್ಲೂ ಅಡಗಿದೆ. ತಮ್ಮ ತಮ್ಮ ದುಡಿಮೆಯಿಂದ ತಮ್ಮ ತಮ್ಮ ಜೀವನೋಪಾಯವನ್ನು ಹುಡುಕಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಒಬ್ಬ ನ್ಯಾಯವಾದಿಯ ಕೆಲಸ ಒಬ್ಬ ಕ್ಷೌರಿಕನ ಕೆಲಸದಷ್ಟೇ ಅಮೂಲ್ಯವಾದುದು. ಉಳುವ ರೈತನ, ದುಡಿಯುವ ಕಾರ್ಮಿಕನ ಜೀವನ ಅಷ್ಟೇ ಯೋಗ್ಯ ಜೀವನ - ಎಂಬ ನಂಬಿಕೆಯನ್ನು ಆ ಗ್ರಂಥಪಠನ ಅವರಲ್ಲಿ ಮೂಡಿಸಿತು. ಹಾಗೆಯೇ ಗೀತೆಯ ಪಠನದಿಂದ ಆತ್ಮವತ್ ಸರ್ವಭೂತೇಷು ಎಂಬ ದೃಷ್ಟಿಯನ್ನು ಆಗಲೇ ಅವರು ಅಂತರ್ಗತ ಮಾಡಿಕೊಂಡಿದ್ದರು. ತಮ್ಮ ಈ ಭಾವನೆಗಳನ್ನವರು ಒಟ್ಟಾರೆ ಸರ್ವೋದಯ ಎಂದು ಕರೆದರು. ಆ ತತ್ತ್ವದೃಷ್ಟಿಯನ್ನು ಕಾರ್ಯರೂಪಕ್ಕೆ ಇಳಿಸಲು ಸಿದ್ಧರಾದರು. ಆ ಕಾರ್ಯ ಅವರಿಗೆ ಸತ್ಯಶೋಧನೆಯಾಯಿತು. ಅದಕ್ಕೆ ಅಹಿಂಸೆ ಅಥವಾ ಪ್ರೇಮ ಪಥವಾಯಿತು.

ಗಾಂಧೀಜಿಯ ಪ್ರಯೋಗಗಳು : ತತ್ತ್ವದೃಷ್ಟಿಯ ಕಾರ್ಯಸ್ವರೂಪವೇ ಶಿಕ್ಷಣ ಎಂದು ಆಗಲೇ ಸೂಚಿಸಿದೆಯಷ್ಟೆ. ತಮ್ಮ ಸರ್ವೋದಯ ತತ್ತ್ವವನ್ನು ಪ್ರಯೋಗಿಸಿ ನೋಡಲು ಗಾಂಧೀಜಿ ಹಲವು ಪ್ರಯೋಗಗಳನ್ನು ನಡೆಸಿದರು. ಆ ಒಂದೊಂದು ಪ್ರಯೋಗವೂ ಒಂದೊಂದು ಶಿಕ್ಷಣಯೋಜನೆಯೆನ್ನಬಹುದು. ಫೀನಿಕ್ಸ್ ಆಶ್ರಮ, ಟಾಲ್‍ಸ್ಟಾಯ್ ಆಶ್ರಮ, ಸತ್ಯಾಗ್ರಹಾಶ್ರಮ, ಸೇವಾ ಗ್ರಾಮ ಆಶ್ರಮ ಇವೇ ಮೊದಲಾದವು ಸತ್ಯ - ಅಹಿಂಸಾ ಶಿಕ್ಷಣದ ಕೇಂದ್ರಗಳೆನಿಸಿದವು. ಟಾಲ್‍ಸ್ಟಾಯ್ ಆಶ್ರಮದಲ್ಲಿ ಅವರೇ ಶಿಕ್ಷಕರಾಗಿದ್ದರು. ತಮ್ಮ ಮತ್ತು ಇತರ ಮಕ್ಕಳಿಗೆ ಜೀವನೋಪಾಯದ ಕಸಬೊಂದರ ಮೂಲಶಿಕ್ಷಣ ಕೊಡಲು ತಾವೇ ಚಮ್ಮಾರನ ಕೆಲಸವನ್ನು ಕಲಿತರು. ಇದು ಅವರು ದಕ್ಷಿಣ ಆಫ್ರಿಕದಲ್ಲಿದ್ದಾಗ ನಡೆಸಿದ ಪ್ರಯೋಗ. ಅನಂತರ ಅವರು ಮಾತೃಭೂಮಿಗೆ ಹಿಂದಿರುಗಿದ ಮೇಲೆ ಅಹಮದಾಬಾದಿನ ಬಳಿ ಆಶ್ರಮವನ್ನು ಮಾಡಿಕೊಂಡು ಅಲ್ಲಿ ನೂಲುವುದು, ನೇಯುವುದು, ಮತ್ತು ಅವಕ್ಕೆ ಸಂಬಂಧಿಸಿದ ಇತರ ಕಾರ್ಯಗಳನ್ನೂ ಜೀವನೋಪಾಯದ ಕಸಬನ್ನಾಗಿ ಆರಿಸಿಕೊಂಡು ಅದರ ಆಧಾರದ ಮೇಲೆ ಶಿಕ್ಷಣವೀಯುವ ಬಗ್ಗೆ ಸತತವಾಗಿ ಪ್ರಯತ್ನ ನಡೆಸಿದರು. ಈ ಎಲ್ಲ ಪ್ರಯೋಗಗಳಲ್ಲಿ ದೊರೆತ ಅನುಭವಗಳಿಂದ ಕಸಬನ್ನು ಕೇಂದ್ರವಾಗಿ ಮಾಡಿಕೊಂಡು ಶಿಕ್ಷಣವೀಯುವುದರ ಯಥಾರ್ಥತೆಯನ್ನು ಚೆನ್ನಾಗಿ ಮನದಟ್ಟು ಮಾಡಕೊಂಡರು.

ರಾಷ್ಟ್ರೀಯ ಶಿಕ್ಷಣ ಮತ್ತು ಸರ್ವೋದಯ : ಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್ಧತಿ ಭಾರತದ ಆದ್ಯಂತವೂ ಅಸ್ತಿತ್ವದಲ್ಲಿದ್ದರೂ ಅದು ಇಲ್ಲಿನವರ ಅಗತ್ಯಗಳನ್ನು ಪೂರೈಸಿರಲಿಲ್ಲ; ಆಶೋತ್ತರಗಳನ್ನು ಈಡೇರಿಸಿರಲಿಲ್ಲ. ಉನ್ನತ ಶಿಕ್ಷಣದಲ್ಲಿ ಇಂಗ್ಲಿಷು ಬೋಧನಮಾಧ್ಯಮವಾದ್ದರ ಫಲವಾಗಿ ಜನಸಾಮಾನ್ಯಕ್ಕೂ ಶಿಕ್ಷಣಪಡೆದವರಿಗೂ ಅಂತರ ಏರ್ಪಟ್ಟು ಜ್ಞಾನದ ಸಾರ್ವತ್ರಿಕ ಪ್ರಸಾರಕ್ಕೆ ಅವಕಾಶವಿಲ್ಲವಾಗಿತ್ತು. ಅನ್ಯಭಾಷೆಯಾದ ಇಂಗ್ಲಿಷಿಗೆ ಕೊಟ್ಟಿದ್ದ ಅನುಚಿತ ಪ್ರಾಧಾನ್ಯದ ಫಲವಾಗಿ, ಅದು ವಿದ್ಯಾವಂತರ ಮೇಲೆ ಒಂದು ಹೊರೆಯಾಗಿ ಪರಿಣಮಿಸಿ ಅದರ ಮನಶ್ಯಕ್ತಿಯನ್ನು ಕುಂದಿಸಿ ತಮ್ಮ ನಾಡನಲ್ಲೆ ಅವರು ಅಪರಿಚಿತರಂತಾಗುವಂತೆ ಮಾಡಿತ್ತು. ವೃತ್ತಿಶಿಕ್ಷಣಕ್ಕೆ ಅಷ್ಟಾಗಿ ಅವಕಾಶವಿಲ್ಲದಿದ್ದ ಆ ಪದ್ಧತಿ ವಿದ್ಯಾವಂತರನ್ನು ಉನ್ನತಕಾರ್ಯಗಳಿಗೆ ಯೋಗ್ಯರಲ್ಲದವರನ್ನಾಗಿ ಮಾಡಿ ಅವರ ದೈಹಿಕ ಶಕ್ತಿಯನ್ನು ಕುಂದಿಸುತ್ತಿತ್ತ. ಪ್ರಾಥಮಿಕ ಶಿಕ್ಷಣದಿಂದ ಕಲಿತ ಅಷ್ಟಿಷ್ಟೂ ಮರೆತುಹೋಗಿ, ಅದರ ನಗರ ಅಥವಾ ಗ್ರಾಮಜೀವನದಲ್ಲಿ ಅನುಪಯುಕ್ತವೆನಿಸುತ್ತಿತ್ತು. ಆ ಮಟ್ಟಿಗೆ ಅದರ ಮೇಲೆ ಹೂಡಿದ ಹಣ ವ್ಯರ್ಥವ್ಯಯವಾಗುತ್ತಿತ್ತು. ಅಲ್ಲದೆ ಆ ಪದ್ಧತಿಯಿಂದ ಅನುಕೂಲ ತೆರಿಗೆ ತೆರುವವನಿಗಾಗಲಿ ಅವನ ಮಕ್ಕಳಿಗಾಗಲಿ ಆಗುತ್ತಿರಲಿಲ್ಲ. ಎಲ್ಲೊ ಕೆಲವರಿಗೆ ಸರ್ಕಾರದ ಉದ್ಯೋಗ ದೊರಕುತ್ತಿತ್ತೇ ಹೊರತು ಬಹುತೇಕ ಜನತೆ ನಿರುದ್ಯೋಗ, ಅಜ್ಞಾನ, ದಾರಿದ್ರ್ಯ ಇವುಗಳಲ್ಲಿ ತೊಳಲುವಂತೆ ಮಾಡಿತ್ತಲ್ಲದೆ ಅಸಮಾನತೆ, ಅನುಚಿತಸ್ಪರ್ಧೆ, ಅಸೂಯೆ, ಹಿಂಸೆ ಇವುಗಳಿಗೆ ಪ್ರೋತ್ಸಾಹವೀಯುವಂತೆ ಮಾಡಿತ್ತು. ಆದರೆ ಗಾಂಧೀಜಿಯವರ ಕಲ್ಪನೆಯ ಸರ್ವೋದಯ ಸಮಾಜರಚನೆ ಸಮಾನತೆ, ಅಹಂಕಾರ, ಪ್ರೇಮ, ಅಹಿಂಸೆ ಈ ಅಂಶಗಳು ಆಧಾರವಾಗಬೇಕಿತ್ತು. ಅದಕ್ಕೆ ಜನತೆಯಲ್ಲಿ ಜ್ಞಾನ, ಉದ್ಯೋಗ, ಪ್ರಸಾರ, ದಾರಿದ್ರ್ಯ ನಿವಾರಣೆ ಇವು ಅಗತ್ಯವಾಗಿ ಆಗಬೇಕಾಗಿತ್ತು. ಅದಕ್ಕೆ ಶಿಕ್ಷಣ ಸೂಕ್ತ ರೀತಿಯಲ್ಲಿ ಮಾರ್ಪಡಬೇಕಾಗಿತ್ತು. ಏಕೆಂದರೆ ಸಮಾಜ ಪರಿವರ್ತನೆಗೆ ಅದು ಉಪಕರಣವೆಂಬುದನ್ನು ಅವರು ಗ್ರಹಿಸಿದ್ದರು. ಅಂಥ ಶಿಕ್ಷಣಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಏಳು ವರ್ಷಗಳ ಕಾಲಾವಧಿಗಾದರೂ ಹೆಚ್ಚಿಸಿ, ಅದರಿಂದ ಮೆಟ್ರಿಕ್ಯುಲೇಷನ್ ಹಂತದಲ್ಲಿ ದೊರೆಯುವಷ್ಟು ಸಾಮಾನ್ಯ ಜ್ಞಾನವೂ (ಇಂಗ್ಲಿಷನ್ನುಳಿದು) ವೃತ್ತಿಯೊಂದರಲ್ಲಿ ಶಿಕ್ಷಣವೂ ದೊರಕುವಂತೆ ಅವಕಾಶಕಲ್ಪನೆಯಾಗಬೇಕೆಂದು ತೀರ್ಮಾನಿಸಿಕೊಂಡರು. ಈ ಬದಲಾವಣೆಗಳನ್ನು ಅಂದಿದ್ದ ಶಿಕ್ಷಣ ಪದ್ಧತಿಗೆ ತೇಪೆಹಾಕಿ ನೇರಮಾಡುವುದು ಅಸಾಧ್ಯವೆಂದುಕೊಂಡು ಪ್ರತ್ಯೇಕ ಶಿಕ್ಷಣಪದ್ಧತಿಯೊಂದರ ಅನುಷ್ಠಾನಕ್ಕೆ ಯತ್ನಿಸಿದರು. ರಾಷ್ಟ್ರದ ಅಂದಿನ ತೀವ್ರ ಸಮಸ್ಯೆಗಳನ್ನೂ ನಿವಾರಿಸಿ ತಮ್ಮ ಕನಸಿನ ಸರ್ವೋದಯ ಸಮಾಜವನ್ನು ರಚಿಸಬಲ್ಲ ಆ ಪದ್ಧತಿಯಲ್ಲಿ ಗ್ರಾಮೋದ್ಯೋಗಗಳಿಗೆ ಪ್ರಾಧಾನ್ಯವಿರಬೇಕೆಂದು ಭಾವಿಸಿದರು. ಏಕೆಂದರೆ, ಇಲ್ಲಿನ ಸೇ. 80 ರಷ್ಟು ಜನತೆ ಗ್ರಾಮವಾಸಿಗಳಾಗಿದ್ದರು. ರಾಷ್ಟ್ರದ ಪ್ರಧಾನ ಸಮಸ್ಯೆಗಳನ್ನೂ ಪರಿಹರಿಸಿ ಸಮಾಜದಲ್ಲಿ ಪರಿವರ್ತನೆ ಮಾಡಬಲ್ಲ ಆ ಶಿಕ್ಷಣವನ್ನು ಅವರು `ಗ್ರಾಮೀಣ ರಾಷ್ಟ್ರೀಯ ಶಿಕ್ಷಣ' ಎಂದು ಕರೆದರು. ಸಮಕಾಲೀನ ಶಿಕ್ಷಣವೇತ್ತರು ರಾಷ್ಟ್ರೀಯ ಶಿಕ್ಷಣ ಎಂಬುದಕ್ಕೆ ಬೇರೆ ಬೇರೆ ಅರ್ಥ ವ್ಯಾಪ್ತಿಯನ್ನು ಕಲ್ಪಿಸಿದ್ದರು. ಗಾಂಧಿಜಿಯವರ ಮೇಲಿನ ಅರ್ಥಕಲ್ಪನೆ ಅದೆಲ್ಲಕ್ಕಿಂತ ಭಿನ್ನವಾಗಿದೆ. ಅವರ ಮಾತಿನಲ್ಲೆ ಹೇಳುವುದಾದರೆ `ಇದು ಗ್ರಾಮೀಣ. ಏಕೆಂದರೆ ಉನ್ನತ ಅಥವಾ ಇಂಗ್ಲಿಷ್ ಶಿಕ್ಷಣವನ್ನು ತ್ಯಜಿಸಿರುತ್ತದೆ; ರಾಷ್ಟ್ರೀಯ. ಏಕೆಂದರೆ ಸತ್ಯ, ಅಹಿಂಸೆ, ಗ್ರಾಮೋದ್ಯೋಗಗಳ ಮೂಲಕ (ಎಂದರೆ ಅದನ್ನು ಕಲಿಸುವ ಅಧ್ಯಾಪಕರು ಮಕ್ಕಳಿಗೆ ತಾವು ಆರಿಸಿಕೊಂಡ ಕಸಬಿನ ಮೂಲಕ) ಯಾವ ನಿರ್ಬಂಧ ಹಸ್ತಕ್ಷೇಪಗಳೂ ಇಲ್ಲದೆ ಅವರ ಸರ್ವಸಾಮಥ್ರ್ಯಗಳೂ ವಿಕಸಿಸುವಂತೆ ಮಾಡುವರು.' ಇದು ಯಾವ ದೃಷ್ಟಿಯಲ್ಲೂ ಪಾಶ್ಚಾತ್ಯ ವಿಧಾನದಿಂದ ಪ್ರಭಾವಿತವಾದುದಲ್ಲವೆಂಬುದು ಇದರಿಂದ ಸ್ಪಷ್ಟಪಡುತ್ತದೆ.

ಕಸಬು ಕೇಂದ್ರಿತ ಶಿಕ್ಷಣ : ವ್ಯಕ್ತಿಯ ಸರ್ವತೋಮುಖವಾದ ಬೆಳವಣಿಗೆಯಾಗಲು ಸಾಧ್ಯವಾದಮಟ್ಟಿಗೆ ಎಲ್ಲ ಶಿಕ್ಷಣವನ್ನೂ ಒಂದು ಲಾಭದಾಯಕ ಕಸಬಿನ ಮೂಲಕ ಒದಗಿಸಬಹುದೆಂದು ಗಾಂಧೀಜಿ ತಮ್ಮ ಪ್ರಯೋಗಗಳಿಂದ ಸ್ಪಷ್ಟವಾಗಿ ಅರಿತುಕೊಂಡಿದ್ದರು. ಶಿಕ್ಷಣದ ಕೇಂದ್ರವನ್ನಾಗಿ ಮಾಡಿಕೊಳ್ಳಲು ಆರಿಸಿಕೊಳ್ಳುವ ಕಸಬು ವಿದ್ಯಾರ್ಥಿಯ ದೃಷ್ಟಿಯಲ್ಲಿ ಮೂರು ಉದ್ದೇಶಗಳನ್ನು ಸಾಧಿಸಬೇಕು : ಮೊದಲನೆಯದಾಗಿ, ತನ್ನ ಶಿಕ್ಷಣದ ವೆಚ್ಚವನ್ನು ತನ್ನ ದುಡಿಮೆಯ ಫಲವಾದ ಉತ್ಪನ್ನದಿಂದ ಗಳಿಸಿಕೊಳ್ಳುವಂತಾಗಬೇಕು; ಎರಡನೆಯದಾಗಿ, ತನ್ನ ವ್ಯಕ್ತಿತ್ವದ ಎಲ್ಲ ಮುಖಗಳನ್ನು ಬೆಳೆಸಲು ಅದು ನೆರವಾಗಬೇಕು; ಮೂರನೆಯದಾಗಿ, ಮುಂದೆ ಅದು ತನ್ನ ಜೀನವೋಪಾಯಕ್ಕಾಗಿ ಅನುಸರಿಸಬಹುದಾದ ಉದ್ಯೋಗವೂ ಆಗಬೇಕು. ಹತ್ತಿ, ಉಣ್ಣೆ, ರೇಷ್ಮೆ - ಇವುಗಳ ಬಳಕೆಗೆ ಸಂಬಂಧಿಸದಂತೆ ಸಂಗ್ರಹ, ಶುದ್ಧೀಕರಣ, ಬೀಜ ತೆಗೆಯುವುದು (ಹತ್ತಿಯ ವಿಷಯದಲ್ಲಿ ಮಾತ್ರ), ಎಕ್ಕುವುದು, ನೂಲುವುದು, ಬಣ್ಣಕಟ್ಟುವುದು, ಗಂಜಿಕಟ್ಟುವುದು, ಹಾಸುಮಾಡುವುದು, ಇಮ್ಮಡಿ ನುಲಿಕೆ, ಮಾದರಿ ರಚನೆ, ಮತ್ತು ನೇಯ್ಗೆ - ಇತ್ಯಾದಿಯಾದ ಎಲ್ಲ ಕೆಲಸಗಳೂ ಕಸೂತಿ, ಹೊಲಿಗೆ, ಕಾಗದ ತಯಾರಿಕೆ, ಪುಸ್ತಕಕ್ಕೆ ರಟ್ಟು ಕಟ್ಟುವುದು, ಮರಗೆಲಸ, ಆಟಿಕೆಗಳ ತಯಾರಿಕೆ, ಮನೆಕಟ್ಟುವುದು - ಇವೆಲ್ಲ ಸರಾಗವಾಗಿ ಕಲಿಯಬಹುದಾದ ಹಾಗೂ ಅಷ್ಟಾಗಿ ಬಂಡವಾಳ ಬೇಡದ ಕಸಬುಗಳು. ಪ್ರಾಥಮಿಕ ಕಲಿಕೆ ಬಾಲಕಬಾಲಕಿಯರಿಗೆ ಜೀವನೋಪಾಯಕ್ಕೆ ನೆರವಾಗಬಲ್ಲ ಶಿಕ್ಷಣ ಒದಗಿಸಬೇಕು. ಅವರು ಕಲಿತಿರುವ ಕಸಬಿಗೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸರ್ಕಾರ ಆಶ್ವಾಸನೆ ನೀಡಬೇಕು. ಅಥವ ಅವರು ತಯಾರಿಸುವ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಕೊಂಡುಕೊಳ್ಳಬೇಕು. ಆಗ ಶಿಕ್ಷಣ ವ್ಯಕ್ತಿಗೂ ಸಮಾಜಕ್ಕೂ ಅನುಕೂಲವಾಗುವುದಲ್ಲದೆ ಆರ್ಥಿಕವಾಗಿ ಸ್ವಾವಲಂಬಿಯೂ ಆಗಿರಬಲ್ಲದು. ಇವು ಗಾಂಧೀಜಿಯವರ ಮನಸ್ಸಿನಲ್ಲಿ ಈ ಶತಮಾನದ ಆದಿಯಿಂದಲೂ ಶಿಕ್ಷಣದ ಬಗ್ಗೆ ಪುಟಗೊಳ್ಳುತ್ತಿದ್ದ ಭಾವನೆಗಳು. 1902 ರಲ್ಲೆ ಟಾಲ್‍ಸ್ಟಾಯ್ ಫಾರಮ್ಮಿನಲ್ಲಿ ಅಂಥ ಶಿಕ್ಷಣ ಸ್ವಾವಲಂಬಿಯಾಗಬಹುದೆಂದು ದೃಢಪಡಿಸಿಕೊಂಡಿದ್ದರೂ ಆ ಬಗ್ಗೆ ನಿರ್ದಿಷ್ಟವಾಗಿ ಪ್ರಕಟಿಸಿದ್ದು 1921 ರಲ್ಲಿ. ಹರಿಜನ ಪತ್ರಿಕೆಯಲ್ಲಿ ಮೊಟ್ಟಮೊದಲನೆಯದಾಗಿ ತಮ್ಮ ಶಿಕ್ಷಣದ ಸ್ಥೂಲ ರೂಪರೇಷೆಗಳನ್ನು ವಿವರಿಸಿದರು. ಆದರೆ ಅದನ್ನು ಸಾರ್ವತ್ರಿಕವಾಗಿ ಆಚರಣೆಗೆ ತರಲು ಅಂದು ದೇಶದಲ್ಲಿ ಪರಕೀಯ ಆಡಳಿತ ಅಸ್ತಿತ್ವದಲ್ಲಿದ್ದುದರಿಂದ ಅವಕಾಶವಾಗಲಿಲ್ಲ. ಮೇಲಾಗಿ ಅವರು ಇಂಗ್ಲಿಷರ ಆಡಳಿತದ ವಿರುದ್ಧ ಚಳವಳಿ ಹೂಡಿ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದ್ದುದರಿಂದ ಸರ್ಕಾರ ಅವರ ಪದ್ಧತಿಗೆ ಪುರಸ್ಕಾರ ನೀಡುವುದಾದರೂ ಸಾಧ್ಯವೇ ? ಆದರೂ ಅವರು ವರ್ಧಾದಲ್ಲಿ ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತಂದೇ ಇದ್ದರು. ತಮ್ಮ ನೆಚ್ಚಿನ ಆ ಶಿಕ್ಷಣಪದ್ಧತಿಯನ್ನು ದೇಶಾದ್ಯಂತ ಆಚರಣೆಗೆ ತರಲು ಸೂಕ್ತ ಸನ್ನಿವೇಶಗಳಿಗಾಗಿ ಕಾದಿದ್ದರು.

1937 ರಲ್ಲಿ ಪ್ರಾಂತೀಯ ಸ್ವಾತಂತ್ರ್ಯ ಆಚರಣೆಗೆ ಬಂತು. ಪ್ರಾಂತ್ಯಗಳಲ್ಲಿ ಜನನಾಯಕರು ಶಿಕ್ಷಣ ಸಚಿವರಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸುವಂತೆ ಶಿಕ್ಷಣ ವ್ಯವಸ್ಥೆ ಮಾಡಲು ಸಿದ್ಧರಾದರು. ಅಂದಿಗಾಗಲೆ ಕಡ್ಡಾಯ ಶಿಕ್ಷಣವನ್ನು ದೇಶಾದ್ಯಂತ ಆಚರಣೆಗೆ ತರಬೇಕೆಂಬ ಕೂಗು ಎಲ್ಲೆಲ್ಲೂ ಆರಂಭವಾಗಿತ್ತು. ಹಣದ ಅಭಾವದ ಕರಣವನ್ನು ಮುಂದೊಡ್ಡಿ ಸರ್ಕಾರ ಅದನ್ನು ನಿರ್ಲಕ್ಷಿಸುತ್ತ ಬಂದಿತು. ಈಗ ಜನನಾಯಕರು ಆಡಳಿತಕ್ಕೆ ಬಂದಿದ್ದುದರಿಂದ ಅವರು ಅದನ್ನು ಇನ್ನೂ ಮುಂದೂಡುವುದು ಅಸಾಧ್ಯವಾಯಿತು. ಆದರೆ ಅದಕ್ಕೆ ಬೇಕಾದ ಹಣಕ್ಕೆ ಮಾತ್ರ ಇಂದೂ ಅಭಾವವಿತ್ತು. ಜೊತೆಗೆ ಕಾಂಗ್ರೆಸ್ ಸರ್ಕಾರಗಳು ಪಾನನಿರೋಧವನ್ನು ಆಚರಣೆಗೆ ತರಲು ತೀರ್ಮಾನಿಸಿದ್ದರಿಂದ ಅದರಿಂದ ಬರುತ್ತಿದ್ದ ಆದಾಯವೂ ನಿಂತುಹೋಗಿತ್ತು. ಆದ್ದರಿಂದ ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿತ್ತು. ಆ ಸಮಯದಲ್ಲಿ ಗಾಂಧೀಜಿ ಅಷ್ಟಾಗಿ ಹಣದ ವೆಚ್ಚವಿಲ್ಲದೆ ರಾಷ್ಟ್ರವ್ಯಾಪಕವಾಗಿ ಆಚರಣೆಗೆ ತರಬಯಹುದಾದ ತಮ್ಮ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಜನತೆಯ ಮುಂದಿಟ್ಟರು. ಅಂದಿಗಾಗಲೇ ಅವರ ಶಿಕ್ಷಣ ಪದ್ಧತಿಗೆ ತಕ್ಕಷ್ಟು ಪ್ರಚಾರ ದೊರೆತಿದ್ದು, ಬೇಕಾದ ಹಾಗೆ ಖಂಡನೆ ಮಂಡನೆಗಳು ಪ್ರಕಟವಾಗಿದ್ದುವು. ಹಾಗೂ ಆ ಶಿಕ್ಷಣ ಪದ್ಧತಿಯ ಸ್ವಾವಲಂಬನೆಯ ಬಗ್ಗೆ ತೀವ್ರತರ ಟೀಕೆಗಳು ಬಂದಿದ್ದುವು. ಆದ್ದರಿಂದ ಅದನ್ನು ಆಚರಣೆಗೆ ತರುವ ಮುನ್ನ ತಜ್ಞರು ಅದನ್ನು ಪರಿಶೀಲಿಸಬೇಕೆಂದು ಅವರ ಅಭಿಪ್ರಾಯವಾಗಿತ್ತು.

1937 ರ ಅಕ್ಟೋಬರ್ 23 ರಂದು ವರ್ಧಾದಲ್ಲಿ ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ನಡೆಯಿತು. ಗಾಂಧೀಜಿ ಹರಿಜನ ಪತ್ರಿಕೆಯ ಮೂಲಕ ಪ್ರಕಟಿಸಿದ್ದ ಶಿಕ್ಷಣ ಪದ್ಧತಿಯ ಬಗ್ಗೆ ಟೀಕೆಗಳು ಬರಹತಿದ್ದುವು. ಆ ಪದ್ಧತಿಯನ್ನು ಸಮ್ಮೇಳನ ಚೆನ್ನಾಗಿ ಪರಿಶೀಲಿಸಿತು. ಸಮ್ಮೇಳನದಲ್ಲಿ ಅಂದು ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳ ಶಿಕ್ಷಣ ಸಚಿವರೂ ರಾಷ್ಟ್ರೀಯ ಶಿಕ್ಷಣದಲ್ಲಿ ಆಸಕ್ತಿಯಿದ್ದ ಶಿಕ್ಷಣತಜ್ಞರೂ ಇತರರೂ ಇದ್ದರು. ಗಾಂಧೀಜಿಯ ಶಿಕ್ಷಣಯೋಜನೆಯ ಮೇಲೆ ತೀವ್ರರೀತಿಯಲ್ಲಿ ಚರ್ಚೆ ನಡೆಯಿತು. ಕಡೆಗೆ ಸಮ್ಮೇಳನ ಈ ಕೆಲವು ತೀರ್ಮಾನಗಳನ್ನು ಕೈಕೊಂಡಿತು : 1 ರಾಷ್ಟ್ರವ್ಯಾಪಕವಾಗಿ ಏಳು ವರ್ಷಗಳ ಉಚಿತ ಕಡ್ಡಾಯ ಶಿಕ್ಷಣವನ್ನು ದೊರಕಿಸಬೇಕು; 2 ಬೋಧನಮಾಧ್ಯಮ ಮಾತೃಭಾಷೆಯಾಗಿರಬೇಕು; 3 ಈ ಕಾಲಾವಧಿಯ ಶಿಕ್ಷಣ ಗಾಂಧೀಜಿ ಸಲಹೆ ಮಾಡಿರುವಂತೆ, ಒಂದು ಉತ್ಪನ್ನದಾಯಕ ಕೈಕಸಬನ್ನು ಕೇಂದ್ರಮಾಡಿಕೊಂಡಿರಬೇಕು. ಮಕ್ಕಳಲ್ಲಿ ಮೂಡಿಸಬೇಕಾದ ಮಿಕ್ಕೆಲ್ಲ ಸಾಮಥ್ರ್ಯಗಳೂ ಕೊಡಬೇಕಾದ ತರಪೇತೂ ಸಾಧ್ಯವಾದ ಮಟ್ಟಿಗೆ ಮಗುವಿನ ಸನ್ನಿವೇಶದಿಂದ ಆರಿಸಿಕೊಂಡ ಆ ಕೈಕಸಬಿನೊಡನೆ ಸಂಬಂಧಿಸಿರಬೇಕು; 4 ಈ ಶಿಕ್ಷಣ ಪದ್ಧತಿ ಕ್ರಮಕ್ರಮವಾಗಿ ಅಧ್ಯಾಪಕರ ಸಂಭಾವನೆಯ ಬಗ್ಗೆ ಸ್ವಯಂಪೂರ್ಣವಾಗಬೇಕು ಎಂದು ಸಮ್ಮೇಳನ ಆಶಿಸುವುದು. ಈ ತೀರ್ಮಾನಗಳನ್ನು ಆಧಾರ ಮಾಡಿಕೊಂಡು ಗಾಂಧೀಜಿ ಶಿಕ್ಷಣ ಯೋಜನೆಗೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಕೊಡಬೇಕಾಗಿತ್ತು.; ಅದಕ್ಕಾಗಿ ಸಮ್ಮೇಳನ ಜಾಕೀರ್ ಹುಸೇನ್‍ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಸಮಿತಿ ಎರಡು ತಿಂಗಳೊಳಗಾಗಿ ಈ ಕಾರ್ಯವನ್ನು ಪೂರೈಸಿ ವರ್ಧಾ ಶಿಕ್ಷಣ ಯೋಜನೆ ಎಂಬ ಹೆಸರಿನ ವರದಿಯನ್ನು ಸಲ್ಲಿಸಿತು. ಭಾರತೀಯ ಶಿಕ್ಷಣದ ಇತಿಹಾಸದಲ್ಲಿ ಇದೊಂದು ಪ್ರಧಾನ ದಾಖಲೆ. ಅನಂತರ 1938 ರಲ್ಲಿ ಹರಿಪುರದಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಅಧಿವೇಶನ ಅದಕ್ಕೆ ತನ್ನ ಒಪ್ಪಿಗೆ ನೀಡಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳಲ್ಲೂ ಯೋಜನೆ ಮೂಲಶಿಕ್ಷಣ (ಬೇಸಿಕ್ ಎಜುಕೇಷನ್) ಎಂಬ ಹೆಸರಿನಲ್ಲಿ ಅನುಷ್ಠಾನಕ್ಕೆ ಬಂತು.

ಮೂಲಶಿಕ್ಷಣದ ಶಾಸ್ತ್ರೀಯ ಸ್ವರೂಪ : ಮೂಲಶಿಕ್ಷಣವನ್ನು ರೂಪಿಸಿದ ಗಾಂಧೀಜಿ ಮೂಲತಃ ಶಿಕ್ಷಣವೇತ್ತರಲ್ಲ. ಅವರು ಅದನ್ನು ಶಿಕ್ಷಣಶಾಸ್ತ್ರದ ಬೆಳಕಿನಲ್ಲಿ ರೂಪಿಸುವ ಯತ್ನವನ್ನೂ ಮಾಡಿದವರಲ್ಲ. ಆದರೂ ಅವರ ಯೋಜನೆಯಲ್ಲಿ ಶಿಕ್ಷಣಶಾಸ್ತ್ರ ಎತ್ತಿಹಿಡಿಯುವ ಹಲವು ಸಲ್ಲಕ್ಷಣಗಳನ್ನು ಗುರುತಿಸಬಹುದು. ಉತ್ಪನ್ನದಾಯಕ ಚಟುವಟಕೆಯೊಂದರ ಮೂಲಕ ಮಕ್ಕಳಿಗೆ ಶಿಕ್ಷಣವೀಯಲು ನಿಯೋಜಿಸಿರುವ ಅವರ ಯೋಜನೆ ಎಲ್ಲ ಆಧುನಿಕ ತತ್ತ್ವಗಳಿಗೂ ಒಪ್ಪುವಂತಿದೆ. ಮಕ್ಕಳ ಸಮಗ್ರವೂ ಸರ್ವತೋಮುಖವೂ ಆದ ವಿಕಾಸಕ್ಕೆ ಅದು ಪರಿಣಾಮಕಾರಿ ವಿಧಾನವೆಂಬುದನ್ನು ಎಲ್ಲ ಶಿಕ್ಷಣತತ್ತ್ವಗಳೂ ಒಪ್ಪುತ್ತವೆ. ಅರ್ಥವಾಗದ ಸೈದ್ಧಾಂತಿಕರೂಪದ ಜ್ಞಾನವನ್ನು ಕಲಿಯಲು ಮಕ್ಕಳ ಮನಸ್ಸು ಬೇಸರಗೊಳ್ಳುವುದರಂದ ಅದು ವಿಹಿತವೆನಿಸುವ ವಿಧಾನವಾಗುತ್ತದೆ. ಮೂಲಶಿಕ್ಷಣದಲ್ಲಿ ಬೌದ್ಧಿಕ ಮತ್ತು ಅಭ್ಯಾಸಾತ್ಮಕ (ಕ್ರಿಯಾಪ್ರದ) ಅಂಶಗಳೆರಡೂ ಸೇರಿರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳೆರಡೂ ಸಮನ್ವಯಗೊಂಡು ಅಭಿವೃದ್ಧಿಯಾಗುತ್ತವೆ; ಮಕ್ಕಳು ಬರಿಯ ಗಿಳಿ ಓದಿನ ಅಕ್ಷರ ವಿದ್ಯೆಯನ್ನು ಸಾಧಿಸದೆ ರಚನಾತ್ಮಕ ಉದ್ದೇಶಗಳಿಗಾಗಿ ಬುದ್ಧಿ ಮತ್ತು ಕೈಗಳನ್ನು ಬಳಸಕೊಂಡು ಶಿಕ್ಷಣ ಪಡೆಯುತ್ತಾರೆ; ಸುಮ್ಮನೆ ಕೇಳಿ ಅಥವಾ ಓದಿ ಕಲಿಯುವುದರ ಬದಲು ಮಾಡಿ ಕಲಿಯುವ ಅವಕಾಶವಿರುವುದರಿಂದ ಈ ಪದ್ಧತಿಯಿಂದ ಕಲಿತ ಶಿಕ್ಷಣ ದೃಢವಾಗಿ ನಿಲ್ಲುವುದರ ಜೊತೆಗೆ ಅವರ ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಬಲ್ಲದು. ಯಾವುದೇ ಜ್ಞಾನವನ್ನು ಅವರಿಗೆ ಕಲಿಸಬೇಕಾದರೂ ಕಸಬನ್ನು ಮಾಡಲು ಅನಿವಾರ್ಯವೆನಿಸಿದಾಗ ಆ ಕಾರ್ಯಕ್ಕೆ ಯತ್ನಿಸುವುದರಿಂದ ಕಲಿತದ್ದು ಅರ್ಥವತ್ತಾಗಿರುವುದಲ್ಲದೆ ಅದನ್ನು ಕಲಿಯಲು ಮನಸ್ಸಿನಲ್ಲಿ ಆಸಕ್ತಿ, ಸಿದ್ಧತೆ ಮತ್ತು ಉದ್ದೇಶಗಳು ರೂಪುಗೊಂಡಿರುತ್ತವೆ. ಇವೆಲ್ಲ ಮನಶ್ಯಾಸ್ತ್ರಕ್ಕೆ ಸಮ್ಮತವೆನಿಸಿರುವ ಅಂಶಗಳು. ಶೈಕ್ಷಣಿಕ ಸಮಾಜಶಾಸ್ತ್ರದ ದೃಷ್ಟಿಯಲ್ಲೂ ಮೂಲಶಿಕ್ಷಣ ಹಲವು ಉತ್ತಮ ಗುಣಗಳಿಂದ ಕೂಡಿರುವುದನ್ನು ಕಾಣಬಹುದು. ಸರ್ವೋದಯ ತತ್ತ್ವವ್ಯಕ್ತಿಯ ಜೀವನದಲ್ಲಿ ಅಂಕುರಿಸಿ ಸಮಾಜ ಜೀವನದಲ್ಲಿ ಆವಿಷ್ಕಾರವಾಗಬೇಕೆಂಬುದು ಗಾಂಧೀಜಿಯ ಅಭಿಲಾಷೆಯಾಗಿತ್ತು. ಅಂಥ ಪರಿವರ್ತನೆ ಅಹಿಂಸೆ ಅಥವಾ ಪ್ರೇಮದಿಂದ ಉದ್ಭವಿಸಬೇಕು. ಅದು ಎಲ್ಲ ಮಾನವರ (ಸಮಾಜದ) ಪರಮ ಒಳಿತಿನಲ್ಲಿ ಅಡಗಿದೆ. ಸಮಾಜ ಈಶ್ವರನ ವ್ಯಕ್ತಸ್ವರೂಪ. ಇದು ಜೀವಂತ ಚೈತನ್ಯದಲ್ಲಿನ (ದೇವ) ಅವರ ನೈಜವಾದ ನಂಬಿಕೆ. ವ್ಯಕ್ತಿಯ ಸಾಧನೆ (ಶಿಕ್ಷಣ), ಸಂಪತ್ತು, ಕಾಣಕೆಯ ರೂಪದಲ್ಲಿ ಸಮಾಜಕ್ಕೆ ಸಲ್ಲಬೇಕು. ಸಮಾಜ ಸಂಗ್ರಹಿಸಿಕೊಂಡು ರಕ್ಷಿಸಿಕೊಂಡು ಬಂದಿರುವ ಮಾನವಜನಾಂಗದ ಸಂಸ್ಕøತಿ ಸಂಪತ್ತನ್ನು ವ್ಯಕ್ತಿ ಬಳಸಿಕೊಂಡು ತನ್ನ ಹಿತವನ್ನು ಸಾಧಿಸಿಕೊಂಡು ಸಮಾಜ ಹಿತಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ಶಕ್ತನಾಗಬೇಕು. ಈ ದೃಷ್ಟಿಯಲ್ಲಿ ಅವರ ಸರ್ವೋದಯ ಸಮಾಜದ ತತ್ತ್ವ ಸಾಮಾಜಿಕದೊಡನೆ ಆಧ್ಯಾತ್ಮಿಕವನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಶಿಕ್ಷಣವನ್ನೊಂದು ಉಪಕರಣವನ್ನಾಗಿ ಮಾಡಿಕೊಂಡಿತೆನ್ನಬಹುದು. ಅಂಥ ಶಿಕ್ಷಣದಿಂದ ದೇಶದ ಮಕ್ಕಳೆಲ್ಲ ಕೈಗಾರಿಕೆಯಲ್ಲಿ ತೊಡಗುವುದರಿಂದ ಬುದ್ಧಿಜೀವನಕ್ಕೂ ಶ್ರಮಜೀವನಕ್ಕೂ ಹಿಂದಿನಿಂದಲೂ ಬೆಳೆದುಕೊಂಡು ಬಂದಿದ್ದ ವ್ಯತ್ಯಾಸ ಕಡಿಮೆಯಾಗುವುದರ ಜೊತೆಗೆ ಬೇರೆ ಬೇರೆ ಕಸಬುಗಳಿಗಿರುವ ಭಿನ್ನತೆಯನ್ನೂ ಅಂತರವನ್ನೂ ನಿವಾರಿಸಿದಂತಾಗುತ್ತದೆ. ಸಮಾಜಕ್ಕೆ ಎಲ್ಲ ಕಸಬುಗಳೂ ಅಗತ್ಯವೆಂಬ ಅಂಶ ವ್ಯಕ್ತಪಟ್ಟು ಎಲ್ಲ ವೃತ್ತಿಗಳಿಗೂ ಸಮಾನ ಗೌರವ ಲಭಿಸುತ್ತದೆ. ಮೂಲಶಿಕ್ಷಣ ಈ ಎಲ್ಲ ಸಾಮಾಜಿಕ ಮೌಲ್ಯಗಳನ್ನೂ ವೃದ್ಧಿಪಡಿಸಿ ಸಮಾಜದ ಪ್ರಗತಿಗೆ ರಕ್ತರಹಿತ ಕ್ರಾಂತಿಯ ಮೂಲಕ ನೆರವಾಗಬೇಕು. ಆರ್ಥಿಕ ದೃಷ್ಟಿಯಿಂದ ಪರಿಗಣಿಸಿದರೂ ಮೂಲಶಿಕ್ಷಣದಲ್ಲಿ ಪ್ರಗತಿಪರ ಅಂಶಗಳು ಕಾಣುತ್ತವೆ. ಪ್ರತಿಯೊಬ್ಬನೂ ಶಿಕ್ಷಣ ಮುಗಿಸಿಕೊಂಡು ಜೀವನೋಪಾಯವನ್ನು ಸಾಧಿಸಿಕೊಳ್ಳಲು ಶಕ್ತಿ ಪಡೆದಿರುತ್ತಾನೆ. ಅಲ್ಲದೆ ಅವನು ತನ್ನ ವೃತ್ತಿಯಲ್ಲಿ ಕುರುಡುಕರ್ಮ ಮಾಡದೆ ಬುದ್ಧಿಯನ್ನೂ ಬಳಸುವುದರಿಂದ ವೃತ್ತಿಯಲ್ಲೂ ಪ್ರಗತಿ ಸಾಧನೆಯಾಗಿ ರಾಷ್ಟ್ರದ ಆರ್ಥಿಕ ಪ್ರಗತಿಗೂ ಅವಕಾಶವಾಗುತ್ತದೆ. ಶುದ್ಧ ಶಿಕ್ಷಣಶಾಸ್ತ್ರದ ದೃಷ್ಟಿಯಿಂದ ನೋಡಿದರೂ ಜೀವನದಲ್ಲಿ ಅನುಸರಿಸುವ ಒಂದು ಕಸಬು ಶಾಲೆಯಲ್ಲಿ ಬೋಧನೆಯ ಕೇಂದ್ರವಿಷಯವಾಗಿರುವುದರಿಂದ ಜೀವನಕ್ಕೂ ಶಿಕ್ಷಣಕ್ಕೂ ನಿಕಟಸಂಬಂಧವಿರುವುದು ವ್ಯಕ್ತವಾಗಿ ಜೀವನವೇ ಬೇರೆ ಶಿಕ್ಷಣವೇ ಬೇರೆ ಎನ್ನುವ ಕೃತಕ ಅಹಿತದೃಷ್ಟಿ ಮಾಯವಾಗುತ್ತದೆ. ಯಾವ ಶಿಕ್ಷಣಪದ್ಧತಿಯೇ ಆಗಲಿ ವ್ಯಕ್ತಿಗೆ ಸತ್ಪೌರನಾಗಿ ಬಾಳಲು ಸಿದ್ಧತೆ ನೀಡಬೇಕು. ತಾವು ವೃತ್ತಿಯೊಂದರಲ್ಲಿ ಸಿದ್ಧತೆ ಪಡೆದಿರುವುದರಿಂದ ವ್ಯಕ್ತಿ ತನ್ನ ಜೀವನೋಪಾಯದ ಜೊತೆಗೆ ಸಮಾಜಕ್ಕೆ ಅಗತ್ಯವೆನಿಸುವ ಸೇವಾಕಾರ್ಯವನ್ನೂ ನಿರ್ವಹಿಸಬಲ್ಲನು. ಸಹಕಾರದ ಸನ್ನಿವೇಶದಲ್ಲಿ ಕಲಿತ ಆ ವೃತ್ತಿಮನೋಭಾವ ಸಮಾಜ ಜೀವನಕ್ಕೂ ಹರಿದುಬಂದು ವ್ಯಕ್ತಿಯಲ್ಲಿ ಸೇವಾದೃಷ್ಟಿನ್ನು ಬೆಳೆಸುವುದಲ್ಲದೆ, ವೈಯಕ್ತಿಕ ಮೌಲ್ಯ, ಆತ್ಮಗೌರವ, ವೃತ್ತಿದಕ್ಷತೆ ಮುಂತಾದ ಸದ್ಗುಣಗಳನ್ನೂ ಮೂಡಿಸುತ್ತದೆ. ಗಾಂಧೀಜಿ ಗ್ರಾಂಥಿಕ ಶಿಕ್ಷಣವನ್ನೇನೂ ವಿರೋಧಿಸಲಿಲ್ಲ. ಆದರೆ ಪುಸ್ತಕದ ಓದು ಕಲಿಸುವುದಕ್ಕಾಗಿಯೇ ಕೋಟಿಗಟ್ಟಲೆ ಹಣ ತಿನ್ನುವ ಪ್ರಾಥಮಿಕ ಶಿಕ್ಷಣ ಮಕ್ಕಳ ಮನಶ್ಯಕ್ತಿಯನ್ನು ಶೋಷಿಸದಿರಬೇಕೆಂದು ಅವರ ಆಶಯವಾಗಿತ್ತು. ತಕಲಿ ಮುಂತಾದ ಉಪಕರಣಗಳಿಂದ ಕೆಲಸ ಮಾಡುವುದು ಮಕ್ಕಳಿಗೊಂದು ಆಟದ ರೂಪದಲ್ಲಿದ್ದು ಅಂಥ ಶೋಷಣೆಯಿಂದ ಅವರನ್ನು ವಿಮುಕ್ತಿಮಾಡುವುದೆಂದು ಅವರು ಪ್ರತಿಪಾದಿಸುತ್ತಿದ್ದರು. ಮೂಲಶಿಕ್ಷಣ ಕೇವಲ ಕಸಬೊಂದನ್ನು ಕಲಿಸುವ ಮಧ್ಯಯುಗಳ ಉಮೇದುವಾರಿ ತರಪೇತಿನಂತಿರಲಿಲ್ಲ; ಸಾಮಾನ್ಯ ಶಿಕ್ಷಣದ ಜೊತೆಗೆ ಕೈಗಾರಿಕೆಯೊಂದನ್ನು ಕಲಿಸುವ ಶಿಕ್ಷಣವೂ ಆಗಿರಲಿಲ್ಲ; ಅದು ನಿಜವಾಗಿ, ಯಾವುದಾದರೂ ಕೈಗಾರಿಕೆಯ ಮಾಧ್ಯಮದ ಮೂಲಕ ಇಡೀ ಶಿಕ್ಷಣವನ್ನು ದೊರಕಿಸಿ, ವೃತ್ತಿಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವವನ್ನೇ ರೂಪಿಸುವ ಒಂದು ಯೋಜನೆ. ಉನ್ನತ ಶಿಕ್ಷಣದ ಬಗ್ಗೆ ಗಾಂಧೀಜಿಯ ದೃಷ್ಟಿ : ಈ ಶತಮಾನದ ಪೂರ್ವಾರ್ಧದಲ್ಲಿ ಭಾರತದಲ್ಲಿದ್ದ ವಿಶೇಷ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿ ಗತಿಗಳಿಂದಾಗಿ ಗಾಂಧೀಜಿ ಪ್ರಾಥಮಿಕ ಶಿಕ್ಷಣದ ಕಡೆಯೇ ಹೆಚ್ಚು ಗಮನ ಹರಿಸಿದ್ದರೂ ಶಿಕ್ಷಣದ ಇತರ ಹಂತಗಳ ಬಗ್ಗಯೂ ಚಿಂತನೆ ನಡೆಸಿದ್ದರು. ಪ್ರಾಥಮಿಕ ಪೂರ್ವದ ಮಕ್ಕಳ ಶಿಕ್ಷಣದ ಪ್ರಾಮುಖ್ಯವನ್ನೂ ಅಗತ್ಯವನ್ನೂ ಅವರು ಮನಗಂಡಿದ್ದರು. ರಾಷ್ಟ್ರದ ಮುನ್ನಡೆಗೆ ಉನ್ನತ ಶಿಕ್ಷಣದ ಅಗತ್ಯವನ್ನೂ ಅದರ ಪುನವ್ರ್ಯವಸ್ಥೆಯ ಅಗತ್ಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಅಂದು ಪ್ರಾಥಮಿಕ ಶಿಕ್ಷಣ ಎಲ್ಲ ದೇಶಗಳಂತೆ ಭಾರತದಲ್ಲೂ ತೀರ ಅಗತ್ಯವೆನಿಸಿದ್ದುದರಿಂದ ಅವರು ತಮ್ಮ ಗಮನವನ್ನು ಮುಖ್ಯವಾಗಿ ಆ ಕಡೆ ವಿನಿಯೋಗಿಸಿದರು. ಗಾಂಧೀಜಿಯ ದೃಷ್ಟಿಯಲ್ಲಿ ಮೂಲಶಿಕ್ಷಣ ದೃಷ್ಟಿಯನ್ನೇ ಉನ್ನತಶಿಕ್ಷಣಕ್ಕೂ ವಿಸ್ತರಿಸಬಹುದಾಗಿತ್ತು. ಹರಿಜನ ಪತ್ರಿಕೆಯಲ್ಲಿ ಆ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರ ರೂಪುರೇಖೆಯೂ ಮೂಲಶಿಕ್ಷಣಕ್ಕೆ ಆಧಾರವಾದ ಸ್ವಯಂ ಉದ್ಯೋಗ, ಸ್ವಾವಲಂಬನೆ, ಶ್ರಮಜೀವನ - ಇವುಗಳನ್ನೇ ಅವಲಂಬಿಸಿದ್ದು, ಪ್ರಾಥಮಿಕ ಶಿಕ್ಷಣದಂತೆ ಆ ಮೂಲಕ ಉನ್ನತ ಶಿಕ್ಷಣದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾಗಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. `ಅದು ರಾಷ್ಟ್ರೀಯ ಅವಶ್ಯಕತೆಗಳನ್ನು ಆಧಾರಮಾಡಿಕೊಂಡು ವ್ಯವಸ್ಥೆಗೊಳ್ಳಬೇಕು; ಯಂತ್ರ ಪರಿಣಿತರು, ತಾಂತ್ರಿಕ ತಜ್ಞರು, ವಿವಿಧ ವೃತ್ತಿನಿಪುಣರು - ಇತ್ಯಾದಿಯವರನ್ನು ಸಿದ್ಧಪಡಿಸಲು ವೃತ್ತಿಶಿಕ್ಷಣ ವ್ಯವಸ್ಥೆಯೂ ಇದ್ದೇ ಇರಬೇಕು ' ಎಂದು ಅವರು ಭಾವಿಸಿದ್ದರು. ಆದರೆ ಔದ್ಯೋಗಿಕ ಶಿಕ್ಷಣ ಆಯಾ ಉದ್ಯೋಗಕ್ಕೆ ಹೊಂದಿಕೊಂಡಂತಿದ್ದು ಅಲ್ಲಿಗೆ ಅಗತ್ಯವಾಗುವ ಪದವೀಧರರ ಶಿಕ್ಷಣವನ್ನು ಆ ಉದ್ಯೋಗ ಕ್ಷೇತ್ರವೇ ನಿರ್ವಹಿಸಬೇಕೆಂದು ಅವರು ಪ್ರತಿಪಾದಿಸಿರುವರು. ಅದರ ಪ್ರಕಾರ ತಾತಾ ಔದ್ಯೋಗಿಕ ಸಂಸ್ಥೆಗಳಂಥವು ರಾಷ್ಟ್ರದ ಮೇಲ್ವಿಚಾರಣೆಯಲ್ಲಿ ಎಂಜಿನಿಯರಿಂಗ್ ಕಾಲೇಜೊಂದನ್ನು ನಡೆಸಬಹುದು. ಗಿರಣಿ ಕೆಲಸಗಾರರು ತಮ್ಮ ಉದ್ಯೋಗಗಳಿಗೆ ಬೇಕಾಗುವ ತಾಂತ್ರಿಕ ಪದವೀಧರರಿಗೆ ಶಿಕ್ಷಣವೀಯಲು ಕಾಲೇಜುಗಳನ್ನು ನಡೆಸಬಹುದು; ವಾಣಿಜ್ಯಕ್ಷೇತ್ರ ವಾಣಿಜ್ಯಕಾಲೇಜುಗಳನ್ನೂ ನಡೆಸಬಹುದು; ವೈದ್ಯವೃತ್ತಿ ಧನಿಕರ ಆಸಕ್ತಿಯನ್ನು ಗಳಿಸಿರುವುದರಿಂದ ಖಾಸಗಿ ಅಂಗೀಕೃತ ಕಾಲೇಜುಗಳಲ್ಲಿ ಆ ಶಿಕ್ಷಣವನ್ನು ವ್ಯವಸ್ಥೆಗೊಳಿಸಬಹುದು. ಇವೆಲ್ಲ ಸರ್ಕಾರದ ಧನಸಹಾಯವಿಲ್ಲದಿದ್ದರೂ ಆರ್ಥಿಕವಾಗಿ ಸ್ವಾವಲಂಬಿಯಾಗಿ ಕೆಲಸಮಾಡಬಲ್ಲವು. ಎಷ್ಟೋ ಕಲಾಶಾಸ್ತ್ರ ಮತ್ತು ವಿಜ್ಞಾನಶಾಸ್ತ್ರದ ಖಾಸಗಿ ಕಾಲೇಜುಗಳೂ ಆ ರೀತಿಯಲ್ಲಿ ನಡೆಯಲು ಸಾಧ್ಯವೆಂಬುದು ಆಗಲೆ ವ್ಯಕ್ತವಾಗಿತ್ತು. ಹಾಗೆಯೇ ಕೃಷಿ ಕಾಲೇಜುಗಳೂ ಸ್ವಾವಲಂಬಿಯಾಗಿ ನಡೆಯಬೇಕೆಂದು ಅವರು ಭಾವಿಸಿದ್ದರು. ಕೃಷಿಕ್ಷೇತ್ರದಲ್ಲೇ ಅವರಿಗೆ ಶಿಕ್ಷಣವೀಯುವುದಾದರೆ ಅದು ಸಾಧ್ಯವಾಗುವುದೆಂದೂ ಅಲ್ಲಿನ ವಿದ್ಯಾರ್ಥಿಗಳು ಪದವೀಧರರಾದ ಮೇಲೆ ವ್ಯವಸಾಯ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸುವರೆಂದೂ ಅವರು ಸೂಚಿಸಿರುವರು; ಹೀಗೆಯೇ ಇತರ ವೃತ್ತಿಶಿಕ್ಷಣಗಳೂ ಸ್ವಾವಲಂಬಿಯಾಗಿ ಕೆಲಸ ಮಾಡುವುದು ಸಾಧ್ಯವೆಂದು ತೋರಿಸಿರುವರು. ಈ ದೃಷ್ಟಿ ವೈಪರೀತ್ಯವನ್ನು ಮುಟ್ಟಿರುವಂತೆ ತೋರಿದರೂ ಸಾಧ್ಯವೆಂಬುದನ್ನು ಅವರು ಮನಗಂಡಿದ್ದರು. ಮೇಲಾಗಿ ಅವರ ಆಸಕ್ತಿ ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದ ಕಡೆಗೆ ಇದ್ದುದರಿಂದ ಉನ್ನತ ಶಿಕ್ಷಣವನ್ನೆಲ್ಲ ಖಾಸಗೀ ಸಂಸ್ಥೆಗಳೇ ನಡೆಸುವಂತಾದರೆ ಸರ್ಕಾರ ತನ್ನ ಪೂರ್ಣಗಮನವನ್ನು ಪ್ರಾಥಮಿಕ ಶಿಕ್ಷಣದ ಕಡೆಗೆ ಮೀಸಲಿಡಲು ಸಾಧ್ಯವಾಗುವುದೆಂದು ಅವರು ಆಲೋಚಿಸಿದರು. ಮೂಲ ಶಿಕ್ಷಣದ ಭವಿಷ್ಯ : ಭಾರತ ಸರ್ಕಾರ ಮೂಲಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ಪದ್ಧತಿಯೆಂದು ಅಂಗೀಕರಿಸಿ ಅದರ ಪ್ರಗತಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿತು. ಅದರೊಡನೆ ಅಂಟಿಕೊಂಡಿದ್ದ `ವಿದ್ಯಾರ್ಥಿ ದುಡಿಮೆಯಿಂದ ಅಧ್ಯಾಪಕರ ವೇತನವನ್ನು ದೊರಕಿಸಿಕೊಳ್ಳಬೇಕೆಂಬ ಅಂಶವನ್ನು ಕೈಬಿಡಲಾಯಿತು. ಆದರೂ ಅದು ದೇಶಾದ್ಯಂತ ಆಚರಣೆಗೆ ಬರಲಿಲ್ಲ. ಜನತೆಗೆ ಇಂದು ಅದರಲ್ಲಿ ಆಸಕ್ತಿಯಿಲ್ಲವಾಗಿದೆ. ಅದು ಉತ್ತಮ ತತ್ತ್ವಗಳ ಬುನಾದಿಯ ಮೇಲೆ ರಚನೆಯಾಗಿರುವುದೆಂದು ದೇಶವಿದೇಶಗಳ ಪಂಡಿತರನೇಕರು ಒಪ್ಪಿದ್ದರೂ ಅದು ತನ್ನ ಜನ್ಮಭೂಮಿಯಲ್ಲೇ ಪ್ರಚಾರಕ್ಕೆ ಬರದಾದುದು ಆಶ್ಚರ್ಯದ ಸಂಗತಿ. ಆ ಪದ್ಧತಿಯ ಮೇಲೆ ಟೀಕೆಗಳೇನೋ ಹೇರಳವಾಗಿ ಬಂದುವು. ಅವುಗಳಲ್ಲಿ ವಾಸ್ತವಿಕವೆನ್ನಬಹುದಾದ ಕೆಲವನ್ನು ಇಲ್ಲಿ ಸೂಚಿಸಿದೆ. 1 ತೀರ ಚಿಕ್ಕ ವಯಸ್ಸಿನಲ್ಲಿ ಅವರ ಸ್ವಾಭಾವಿಕ ಆಸಕ್ತಿಗಳಿಗೆ ವಿರುದ್ಧವಾದ ವೃತ್ತಿಶಿಕ್ಷಣದ ವಾತಾವರಣವನ್ನು ಕಲ್ಪಿಸುತ್ತದಾಗಿ ಈ ಪದ್ಧತಿ ಮಕ್ಕಳಿಗೆ ಶಿಕ್ಷಣವೆಂದರೆ ಜಿಗುಪ್ಸೆ ಹುಟ್ಟಿಸುತ್ತದೆ. 2 ತಲೆಗೆಲ್ಲ ಒಂದೇ ಮಂತ್ರವೆಂದು ನೂಲುವುದನ್ನು ಎಲ್ಲರಿಗೂ ಕಲಿಸಹೋದರೆ ಯಾವ ಪುರುಷಾರ್ಥ ತಾನೆ ಸಾಧನೆಯಾದೀತು ? ಮುಂದಿನ ಜನಾಂಗವೆಲ್ಲ ಅದೇ ಕೈಗಾರಿಕೆಯನ್ನು ಅನುಸರಿಸಿದರೆ ಮುಂದೆ ಗತಿಯೇನು ? 3 ದಿನದ ಅರ್ಧಭಾಗದಲ್ಲಿ ತಮ್ಮ ಸ್ವಾಭಾವಿಕ ಆಸಕ್ತಿಗೆ ವಿರುದ್ಧವಾಗಿ ಇತರರು ಹೇರಿದ ಗೈಮೆಯಲ್ಲಿ ತೊಡಗಿ ಆ ಸ್ವಾಭಾವಿಕ ಆಸಕ್ತಿಗಳ ಪ್ರಕಾಶನಕ್ಕೆ ಅಡಚಣೆಯಾಗಿ ಅವರ ವ್ಯಕ್ತಿತ್ವದಲ್ಲಿ ತೊಡಕುಗಳು ಮೂಡಿಕೊಳ್ಳುವುದಿಲ್ಲವೆ ? 4 ಕಸಬೇ ಪ್ರಧಾನವಾಗಿರುವ ಈ ಪದ್ಧತಿ ಮಗುವನ್ನೇ ಮರೆತಿರುವುದಲ್ಲದೆ ದೈಹಿಕ ಶಿಕ್ಷಣ, ನೈತಿಕ ಶಿಕ್ಷಣಗಳಿಗೆ ಅವಕಾಶ ಕಲ್ಪಸಿಲ್ಲ. 5 ಕಸಬಿಗೆ ಸಂಬಂಧಿಸಿದಂತೆ ವಿಷಯವನ್ನು ಬೋಧಿಸುವ ಯತ್ನದಲ್ಲಿ ಗೊಂದಲಕ್ಕೂ ಕೃತಕತೆಗೂ ಅವಕಾಶವಾಗಿ ಶಾಲೆಗೂ ಜೀವನಕ್ಕೂ ಅಂತರ ಹುಟ್ಟಿಕೊಳ್ಳುತ್ತದೆ. 6 ಪಠ್ಯಪುಸ್ತಕಗಳಿಗೆ ಪುರಸ್ಕಾರವೀಯದ ಈ ಶಿಕ್ಷಣ ಹೇಗೆ ತಾನೆ ಜನಪ್ರಿಯವಾದೀತು - ದೇವರಿಲ್ಲದ ಗುಡಿಯಂತೆ ? 7 ಮೇಲ್ಮಟ್ಟದ ಶಿಕ್ಷಣಕ್ಕೆ ಈ ಪದ್ಧತಿಯ ಅನ್ವಯ ಯೋಗ್ಯವಲ್ಲ. ಈಚೆಗೆ ಈ ದಿಕ್ಕಿನಲ್ಲಿ ಮೂಲಶಿಕ್ಷಣವನ್ನು ಸುಧಾರಿಸುವ ಯತ್ನ ನಡೆದಿದೆ. ಆದರೂ ಮೂಲಶಿಕ್ಷಣಕ್ಕೆ ಸ್ವಾತಂತ್ರ್ಯದ ಆರಂಭದಲ್ಲಿ ಲಭಿಸಿದ್ದ ಜನಪ್ರಿಯತೆ ಈಗ ಇಲ್ಲವಾಗಿದೆ. ಅದನ್ನು ಆ ರೂಪದಲ್ಲಿ ದೇಶಾದ್ಯಂತ ಪ್ರಚಾರಕ್ಕೆ ತರುವ ಯತ್ನವೂ ಹಿಂಬದಿಗೆ ಬಿದ್ದಂತೆ ಕಾಣುತ್ತದೆ. ಹೊಸದಾಗಿ ಪ್ರಚಾರಕ್ಕೆ ಬಂದ ಎಲ್ಲ ಶಿಕ್ಷಣಪದ್ಧತಿಗಳಿಗೂ ಇದೇ ಪಾಡು ಒದಗಿದೆ. ಅವು ಮೊದಲು ಪರಮೋತ್ಕøಷ್ಟವೆಂದು ಹೊಗಳಿಸಿಕೊಳ್ಳುತ್ತವೆ; ಅನಂತರ ಅವುಗಳ ಕುಂದುಕೊರತೆಗಳನ್ನು ಕಂಡು ಜನತೆ ಅವನ್ನು ಕಟುವಾಗಿ ಟೀಕಿಸುತ್ತದೆ. ಆಮೇಲೆ ಅದರಲ್ಲಿರುವ ಉತ್ತಮಾಂಶಗಳನ್ನು ಮಾತ್ರ ಇಂದಿನ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತದೆ. ಮೂಲಶಿಕ್ಷಣದ ಬಗ್ಗೆಯೂ ಈ ಮಾತು ಒಪ್ಪುತ್ತದೆ. ಈಗ ಅದು ತನ್ನ ಆ ಮೂರನೆಯ ಅಂತಸ್ತನ್ನು ಮುಟ್ಟಿದೆ. ಅದರಲ್ಲಿರುವ ಉತ್ತಮಾಂಶಗಳು ನಮ್ಮ ಪ್ರಾಥಮಿಕ ಶಿಕ್ಷಣಕ್ಷೇತ್ರವನ್ನು ಈಗಾಗಲೇ ಪರಿಣಾಮಗೊಳಿಸಿವೆ. ಕಸಬು, ಕಲೆ, ಕೈಕೆಲಸ ಮುಂತಾದ ಕಾಯಕಾನುಭವಗಳನ್ನೊದಗಿಸುವ ಚಟುವಟಿಕೆಗಳು ಅಲ್ಲಿನ ಪಠ್ಯಕ್ರಮದಲ್ಲಿ ಹೊಸದಾಗಿ ಸೇರಿಕೊಂಡಿವೆ. ಜೀವನಕ್ಕೆ ಹೊಂದಿಸಿಕೊಂಡು ವಿಷಯಗಳನ್ನು ಸಮಿಕರಿಸಿಕೊಂಡು ಪಾಠ ಬೋಧಿಸುವ ನೂತನ ಬೋಧನಕ್ರಮಬಳಕೆಗೆ ಬರುತ್ತಿದೆ. ತಮ್ಮ ಶಾಲೆಯನ್ನು ತಾವೇ ಚೊಕ್ಕಟವಾಗಿಟ್ಟುಕೊಳ್ಳುವ ಸ್ವಾವಲಂಬನೆಯ ದೃಷ್ಟಿ ಆಚರಣೆಗೆ ಬರುತ್ತಿದೆ. ಕೈಕೆಲಸಗಳ ಮೂಲಕ ಮಕ್ಕಳ ಕ್ರಿಯಾತ್ಮಕ ಶಕ್ತಿಗೆ ಪೋಷಣೆ ದೊರೆಯುವುದರ ಜೊತೆಗೆ ಅವರ ಮನಸ್ಸಿನಲ್ಲಿ ಶ್ರಮಜೀವನದ ಬಗ್ಗೆ ಗೌರವ ಬೆಳೆಯಲು ಅವಕಾಶವಾಗಿದೆ. ಶಾಲೆಯೊಡನೆ ಸುತ್ತಣ ಸಮಾಜದ ಜೀವನವನ್ನು ಹೊಂದಿಸಿಕೊಂಡು ಕೆಲಸಮಾಡುತ್ತ ಶಾಲೆ ಸಮಾಜದ ಕ್ಷೇಮಚಿಂತನೆಗೂ ಅಭಿವೃದ್ಧಿಸಾಧನೆಗೂ ಕೆಲಸ ಮಾಡಬೇಕಾದ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ. ಇಷ್ಟೆಲ್ಲ ಮೂಲಶಿಕ್ಷಣ ಪ್ರಾಥಮಿಕ ಶಿಕ್ಷಣದ ಮೇಲೆ ಇತ್ತೀಚಿನ ದಿನಗಳಲ್ಲಿ ಬೀರಿರುವ ಪ್ರಭಾವವೆನ್ನಬಹುದು. ಆದರೂ ಅದು ತನ್ನ ಶುದ್ಧರೂಪದಲ್ಲಿ ದೇಶಾದ್ಯಂತ ಆಚರಣೆಗೆ ಬರಲೇಬೇಕೆಂದು ವಾದಿಸತಕ್ಕವರು ಇಂದಿಗೂ ಉಳಿದುಕೊಂಡೇ ಇರುವರು. (ಎನ್.ಎಸ್.ಪಿ.) ಗಾಂಧೀ ದೃಷ್ಟಿಯಲ್ಲಿ ಸ್ವರಾಜ್ಯ: ಭಾರತದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮವಾಗಿ ಹೋರಾಟ ನಡೆಸಿದ ಗಾಂಧೀಜಿಯವರು ಕೇವಲ ರಾಜಕೀಯ ಸ್ವಾತಂತ್ರ್ಯ ಗುರಿ ಇಟ್ಟುಕೊಂಡಿರಲಿಲ್ಲ. ಪೂರ್ಣ ಸ್ವರಾಜ್ಯದ ಸ್ಥಾಪನೆಗೆ ರಾಜಕೀಯ ಸ್ವಾತಂತ್ರ್ಯ ಮೊದಲ ಮೆಟ್ಟಲೆಂದು ಮಾತ್ರ ಭಾವಿಸಿದ್ದರು. ಅವರ ದೃಷ್ಟಿಯಲ್ಲಿ ಸ್ವರಾಜ್ಯವೆಂದರೆ ಪರಿಪೂರ್ಣವಾದ ಪ್ರಜಾರಾಜ್ಯ. ಈ ವ್ಯವಸ್ಥೆಯಲ್ಲಿ ಸಾರ್ವಭೌಮಾಧಿಕಾರವಿರುವುದು ಪ್ರಜೆಗಳಲ್ಲೇ ಹೊರತು ಪ್ರಭುತ್ವದಲ್ಲಿ ಅಲ್ಲ. ಪ್ರಜೆಗಳ ಸಾರ್ವಭೌಮತ್ವಕ್ಕೆ ಬುನಾದಿ ನೈತಿಕ ಅಧಿಕಾರ; ದಂಡಿನ ಬಲವಲ್ಲ. ಸತ್ಯ, ಅಹಿಂಸೆ, ಸ್ವಾತಂತ್ರ್ಯ, ಸಮಾನತೆ - ಈ ಮೌಲ್ಯಗಳ ಸಾಕ್ಷತ್ಕಾರವೇ ಪ್ರಜೆಗಳ ಗುರಿ. ಈ ಮೌಲ್ಯಗಳು ಹೆಚ್ಚುಹೆಚ್ಚಾಗಿ ಅನುಷ್ಠಾನಕ್ಕೆ ಬಂದಂತೆ ವ್ಯಕ್ತಿಗಳ ವಿಕಾಸದ ಹಾಗೂ ಸಮಾಜದ ಮೇಲ್ಮೆಯ ಸಾಧನೆಯಾಗುತ್ತ ಹೋಗುತ್ತದೆ. ಅಂಥ ಪ್ರಜಾರಾಜ್ಯ ಶೋಷಣರಹಿತವರ್ಗರಹಿತ ರಾಜ್ಯವಾಗಿರುತ್ತದೆ. ಪೂರ್ಣ ಸ್ವರಾಜ್ಯ ಏರ್ಪಟ್ಟಾಗ ಯಾವುದೇ ರೀತಿಯ ಸರ್ಕಾರಿ ಅಂಕುಶವಿರುವುದಿಲ್ಲ. ಈ ವ್ಯವಸ್ಥೆಯಲ್ಲಿ ಜನೆತೆಗೆ ಪೂರ್ಣವಾಗಿ ಸಾಮಾಜಿಕ ನ್ಯಾಯ, ಆರ್ಥಿಕ ನೆಮ್ಮದಿ ಹಾಗೂ ವ್ಯಕ್ತಿಸ್ವಾತಂತ್ರ್ಯ ಇರುತ್ತವೆ. ಇಂಥ ಪ್ರಜಾರಾಜ್ಯವನ್ನು ಗಾಂಧಿಯವರು ರಾಮರಾಜ್ಯವೆಂದು ಕರೆದರು; ಪ್ರಬುದ್ಧ ಅರಾಜಕತೆ (ಎನ್‍ಲೈಟನ್ಡ್ ಆನಾರ್ಕಿ) ಎಂದರು. ಸರ್ಕಾರವೇ ಇಲ್ಲದ ರಾಜ್ಯ ಆದರ್ಶವಾದರೂ ಸದ್ಯಕ್ಕೆ ಅದು ಎಟುಕದ ಆದರ್ಶ. ಆದ್ದರಿಂದ ಯಾವುದು ಅತ್ಯಂತ ಮಿತವಾದ ಪ್ರಭುತ್ವವೋ ಅದೇ ಉತ್ಕøಷ್ಟ ಪ್ರಭುತ್ವ ಎಂಬ ಥಾರೋವಿನ ವಿಚಾರವನ್ನು ಗಾಂಧಿಯವರು ಒಪ್ಪಿಕೊಂಡರು. ಸ್ವತಂತ್ರ ಭಾರತ ಬ್ರಿಟನಿನ ಸಂಸದೀಯಪ್ರಭುತ್ವ ಪದ್ಧತಿಯನ್ನಾಗಲಿ ಸೋವಿಯೆತ್ ಪದ್ಧತಿಯನ್ನಾಗಲಿ ಫ್ಯಾಸಿಸ್ಟ್ ಪದ್ಧತಿಯನ್ನಾಗಲಿ ಅನುಕರಿಸಬಾರದು. ಅವುಗಳಲ್ಲಿ ಯಾವುದೂ ಭಾರತೀಯ ಜನಜೀವನ ಅಥವಾ ಸಂಸ್ಕøತಿಗೆ ಹೊಂದಿಕೊಳ್ಳುವಂಥದಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರೂಢವಾಗಿರುವ ಪ್ರಭುತ್ವಗಳೆಲ್ಲವೂ ಸಾಮ್ರಾಜ್ಯವಾದ, ಹಿಂಸೆ, ಶೋಷಣೆ ಇವುಗಳ ಮೇಲೆ ನಿಂತಿರುವಂಥವು. ಆದ್ದರಿಂದ ಅವು ಭಾರತಕ್ಕೆ ವಜ್ರ್ಯವೆಂಬುದು ಗಾಂಧಿಯವರ ಮತ. ಭಾರತದಲ್ಲಿ ಕೇವಲ ಕೆಲವು ಜನತಾಪ್ರತಿನಿಧಿಗಳು ಅಧಿಕಾರಸೂತ್ರ ವಹಿಸಿಕೊಂಡರೆ ನಿಜವಾದ ಸ್ವರಾಜ್ಯವಾಗಲಾರದು. ಸರ್ಕಾರ ತಪ್ಪು ಮಾಡಿದಾಗ ಅದನ್ನು ತಡೆಗಟ್ಟುವ ಸಾಮಥ್ರ್ಯ ಪ್ರತಿಯೊಬ್ಬ ಪ್ರಜೆಗೂ ಬಂದಾಗಲೇ ನಿಜವಾದ ಸ್ವರಾಜ್ಯಪ್ರಾಪ್ತಿ ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ರಾಜಕೀಯ ಅಧಿಕಾರದ ಕೇಂದ್ರೀಕರಣವಾದಷ್ಟೂ ಪ್ರಭುತ್ವ ಜನಸಾಮಾನ್ಯರ ಹಿಡಿತದಿಂದ ದೂರ ಸರಿಯುತ್ತದೆ. ಹಿಂಸೆಯನ್ನು ಆಧರಿಸಿದ ಸರ್ಕಾರ ದೊಡ್ಡ ಶೋಷಕಶಕ್ತಿಯಾಗುವುದಲ್ಲದೆ ವ್ಯಕ್ತಿಸ್ವಾತಂತ್ರ್ಯಕ್ಕೆ ಕಂಟಕವಾಗುತ್ತದೆ. ಅಂಥ ಕೇಂದ್ರೀಕೃತ ರಾಜಕೀಯ ವ್ಯವಸ್ಥೆ ಜನರ ಹೆಸರಿನಲ್ಲಿ ನಡೆದರೂ ಅದು ಹೆಸರಿಗೆ ಮಾತ್ರ ಪ್ರಜಾಪ್ರಭುತ್ವವಾಗಿರುತ್ತದೆ. ಪ್ರಜೆಗಳು ತಮ್ಮ ಆಗುಹೋಗುಗಳನ್ನು ನಿರ್ಧರಿಸುವುದರಲ್ಲಿ ಸಕ್ರಿಯಾಪಾತ್ರವಹಿಸಲಾಗುವುದಿಲ್ಲ. ಬದಲಾಗಿ ಪ್ರತಿಯೊಂದು ಕೆಲಸಕ್ಕೂ ಸರ್ಕಾರವನ್ನೇ ಎದುರು ನೋಡುವ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ. ಇದು ತಪ್ಪಬೇಕಾದರೆ ರಾಜಕೀಯ ಅಧಿಕಾರದ ವಿಕೇಂದ್ರೀಕರಣವಾಗಬೇಕು. ಭಾರತದಲ್ಲಿ ರಾಜ್ಯಶಕ್ತಿಯ ವಿಕೇಂದ್ರೀಕರಣಕ್ಕೆ ಸಹಾಯಕವಾಗುವ ಗ್ರಾಮ ಘಟಕಗಳಿವೆ. ಗಾಂಧಿಯವರ ದೃಷ್ಟಿಯಲ್ಲಿ ಪ್ರತಿ ಗ್ರಾಮವೂ ಸ್ವಾಯತ್ತತೆಯ ಘಟಕವಾಗಬೇಕು. ಅವರು ದೇಶದ ಮುಂದಿಟ್ಟ ಗ್ರಾಮಸ್ವರಾಜ್ಯದ ಚಿತ್ರವಿದು. ನನ್ನ ಕಲ್ಪನೆಯ ಗ್ರಾಮಸ್ವರಾಜ್ಯವೆಂದರೆ ಅದೊಂದು ಪರಿಪೂರ್ಣಗಣರಾಜ್ಯ. ತನ್ನ ಪ್ರಧಾನ ಅಗತ್ಯಗಳಲ್ಲಿ ಅದು ನೆರೆಹೊರೆಯವರಿಂದ ಸ್ವತಂತ್ರ. ಆದರೂ ಅಗತ್ಯವಾದಲ್ಲಿ, ಎಷ್ಟೋ ವಿಷಯಗಳಲ್ಲಿ ಗ್ರಾಮಗಳು ಪರಸ್ಪರಾವಲಂಬಿಯಾಗಿರುತ್ತವೆ. ಹೀಗೆ ತನ್ನ ಆಹಾರ ಬೆಳೆಯುವುದು, ಬಟ್ಟೆಗಾಗಿ ಹತ್ತಿ ಬೆಳೆಯುವುದು, ಪ್ರತಿ ಹಳ್ಳಿಯ ಮೊದಲ ಗಮನ. ದನಕರುಗಳಿಗಾಗಿ ಕಾವಲು, ಮಕ್ಕಳಿಗಾಗಿಯೂ ಪ್ರೌಢರಿಗಾಗಿಯೂ ಆಟಕ್ಕೂ ಮನೋರಂಜನೆಗೂ ಸ್ಥಳ ಇರಬೇಕು. ಇದಕ್ಕೆಲ್ಲ ಆಗಿ ಭೂಮಿ ಮಿಕ್ಕರೆ ಅದರಲ್ಲಿ ಗಾಂಜಾ, ತಂಬಾಕು, ಅಫೀಮುಗಳ ಹೊರತಾಗಿ ಉಪಯೋಗಕರ ಹಣದ ಬೆಳೆಗಳನ್ನು ಬೆಳೆಯಬಹುದು. ಹಳ್ಳಿಹಳ್ಳಿಯಲ್ಲೂ ನಾಟಕಮಂದಿರ, ಶಾಲೆ, ಸಭಾಭವನ ಇದ್ದಾವು; ಶುದ್ಧವಾದ ನೀರಿನ ಪೂರೈಕೆಯ ಕೇಂದ್ರ ಇದ್ದೀತು. ಮೂಲಶಿಕ್ಷಣದ ಅವಧಿಯ ಪೂರ್ಣ ಶಿಕ್ಷಣ ಕಡ್ಡಾಯವಿದ್ದೀತು. ಸಾಧ್ಯವಿದ್ದಷ್ಟು ಮಟ್ಟಿಗೂ ಪ್ರತಿಯೊಂದು ಕೆಲಸವನ್ನು ಸಹಕಾರತತ್ತ್ವದ ಆಧಾರದ ಮೇಲೆ ಕೈಗೊಳ್ಳಲಾದೀತು. ಘಟ್ಟಘಟ್ಟಗಳ ಅಸ್ಪøಶ್ಯತೆಯುಳ್ಳ ಇಂದಿನಂಥ ಜಾತಿಗಳಿರುವುದಿಲ್ಲ. ಸತ್ಯಾಗ್ರಹ ಹಾಗೂ ಅಸಹಕಾರ ತಂತ್ರವುಳ್ಳ ಅಹಿಂಸೆಯೇ ಗ್ರಾಮಸಮಾಜದ ಆಧಾರಶಕ್ತಿ. ಹಳ್ಳಿಯಲ್ಲಿ ಇಡಲಾದ ಒಂದು ಖಾತೆಯಿಂದ ಸರದಿ ಪ್ರಕಾರ ಆರಿಸಲಾಗುವ, ಎಲ್ಲರಿಗೂ ಅನಿವಾರ್ಯವಾದ, ಗ್ರಾಮರಕ್ಷಕ ಪಡೆ ಇದ್ದೀತು. ಹಳ್ಳಿಯಲ್ಲಿ ಯೋಗ್ಯಕನಿಷ್ಠ ಅರ್ಹತೆಗಳುಳ್ಳ ಎಲ್ಲ ಪ್ರೌಢ ಸ್ತ್ರೀಪುರುಷರೂ ವರ್ಷಕ್ಕೊಮ್ಮೆ ಚುನಾಯಿಸುವ ಐವರ ಪಂಚಾಯಿತಿ ಹಳ್ಳಿಯ ಆಡಳಿತವನ್ನು ನಡೆಸಿಕೊಂಡು ಹೋಗುವುದು. ಆಡಳಿತಕ್ಕೆ ಬೇಕಾದ ಅಧಿಕಾರ, ವ್ಯಾಪ್ತಿ ಎರಡೂ ಈ ಮಂಡಳಿಗೆ ಇರುವುವು. ಪ್ರಚಲಿತ ಅರ್ಥದ ಶಿಕ್ಷೆಯ ಪದ್ಧತಿ ಇರುವುದಿಲ್ಲವಾದ್ದರಿಂದ ಪಂಚಾಯಿತಿಯೇ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗಗಳಾಗಿ ತನ್ನ ಒಂದು ವರ್ಷದ ಅಧಿಕಾರಾವಧಿಯಲ್ಲಿ ಕೆಲಸ ಮಾಡೀತು. ಇಲ್ಲಿ ವ್ಯಕ್ತಿಸ್ವಾತಂತ್ರ್ಯದ ಆಧಾರದ ಮೇಲೆ ಪರಿಪೂರ್ಣ ಜನತಂತ್ರವಿದೆ. (ಆಧಾರ : ಹರಿಜನ, ಜುಲೈ 26, 1942) ಗ್ರಾಮ ಗಣರಾಜ್ಯಗಳ ಮಹಾ ಒಕ್ಕೂಟವೇ ಭಾರತರಾಷ್ಟ್ರ. ಅಸಂಖ್ಯ ಹಳ್ಳಿಗಳುಳ್ಳ ಈ ರಚನೆಯಲ್ಲಿ ಸದಾ ವ್ಯಾಪಕವೃತ್ತಗಳಿರುತ್ತವೆ; ಆರೋಹಣ ವೃತ್ತಗಳಿರುವುದಿಲ್ಲ. ಬದುಕು ಪಿರಮಿಡಿನಂತಿರುವುದಿಲ್ಲ. ಅದು ಸಾಗರ ಸಮವೃತ್ತದಂತೆ. ಅದರ ಕೇಂದ್ರಬಿಂದು ವ್ಯಕ್ತಿ. ಆತ ತನ್ನ ಹಳ್ಳಿಗಾಗಿ ಅಳಿಯಲೂ ಸಿದ್ಧ. ಗ್ರಾಮಗಳ ಸಮೂಹಕ್ಕಾಗಿ ನಾಶವಾಗಲು ಹಳ್ಳಿ ಸಿದ್ಧ. ಕೊನೆಗೆ ಇಡೀ ಜೀವನ ಒಂದು ಪೂರ್ಣತೆಯಾಗುತ್ತದೆ. ಅದರಲ್ಲಿರುವ ವ್ಯಕ್ತಿಗಳು ಎಂದೂ ಅಹಂಕಾರದಿಂದ ಆಕ್ರಮಣಕಾರಿಗಳಾಗುವುದಿಲ್ಲ. ಅವರು ಸದಾ ವಿನಿಮ್ರರು. ಸಾಗರ ಸಮವೃತ್ತದ ಗಾಂಭೀರ್ಯದಲ್ಲಿ ಪಾಲುಗೊಂಡವರು. ಆದ್ದರಿಂದ ಹೊರಗಿನ ವೃತ್ತಿ ಒಳಗಿನ ವೃತ್ತವನ್ನು ತುಳಿಯಲು ತನ್ನ ಅಧಿಕಾರವನ್ನು ಉಪಯೋಗಿಸುವುದಿಲ್ಲ. ಅದರ ಬದಲಾಗಿ ತಾನೂ ಅದಕ್ಕೆ ಶಕ್ತಿ ನೀಡುತ್ತದೆ. ಅದರಿಂದ ತಾನೂ ಶಕ್ತಿ ಪಡೆಯುತ್ತದೆ. ಇದೆಲ್ಲ ಅಸಾಧ್ಯವಾದ ಆದರ್ಶ ಎಂದು ನೀವು ನನ್ನನ್ನು ಮೂದಲಿಸಬಹುದು. ಮನುಷ್ಯಮಾತ್ರರು ಗುರುತಿಸಲಾದ ಯೂಕ್ಲಿಡದ ಬಿಂದುವಿಗೇ ಅಳಿಯದ ಬೆಲೆ ಇರುವುದಾದರೆ ಮಾನವಕುಲ ಉಳಿಯುವಂಥ ನನ್ನ ಚಿತ್ರಕ್ಕೂ ತನ್ನದೇ ಆದÀ ಮೌಲ್ಯವುಂಟು. ಚಿತ್ರವನ್ನು ಪರಿಪೂರ್ಣವಾಗಿ ಎಂದೂ ಸಾಧಿಸಲಾಗದಿದ್ದರೂ ಭಾರತ ಈ ನೈಜ ಚಿತ್ರಕ್ಕಾಗಿ ಬದುಕಲಿ, ನಮಗೆ ಬೇಕಾದುದರ ಯೋಗ್ಯ ಚಿತ್ರವಿಲ್ಲದೆ ನಾವು ಅದರತ್ತ ಧಾವಿಸುವುದು ಸಾಧ್ಯವಿಲ್ಲ. ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಎಂದಾದರೊಂದು ದಿನ ಪ್ರಜಾರಾಜ್ಯವಾಗಬೇಕಾಗಿದ್ದರೆ ನನ್ನ ಈ ಚಿತ್ರವೇ ಸರಿ ಎನ್ನುತ್ತೇವೆ. ಇದರಲ್ಲಿ ಕೊನೆಯದೂ ಮೊದಲಿನದೂ ಪರಸ್ಪರ ಸಮಾನ; ಅರ್ಥಾತ್ ಪ್ರಥಮ ಅಂತಿಮ ಯಾವುದೂ ಇದರಲ್ಲಿಲ್ಲ. (ಆಧಾರ: ಹರಿಜನ ಜಲೈ 22,1946). ಪ್ರಜಾಪ್ರಭುತ್ವದ ಯಶಸ್ಸು ವಿಕೇಂದ್ರೀಕರಣವನ್ನು ಅವಲಂಬಿಸಿದೆ ಎಂಬುದು ಗಾಂಧಿಯವರ ಸ್ಪಷ್ಟ ಅಭಿಮತ, ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಮಾತ್ರ ಅಹಿಂಸೆಯ ಆಚರಣೆ ಸಾಧ್ಯ. ಅಹಿಂಸೆ ಆಧಾರವಾಗಿರದ ಪ್ರಜಾತಂತ್ರ ನಿಜವಾದ ಪ್ರಜಾಪ್ರಭುತ್ವವಾಗುವುದೇ ಇಲ್ಲ. ರಾಜಕೀಯ ಅಧಿಕಾರದ ಜೊತೆಯಲ್ಲಿ ಆರ್ಥಿಕಶಕ್ತಿಯ ವಿಕೇಂದ್ರೀಕರಣವೂ ಆಗಬೇಕು. ವಿಕೇಂದ್ರೀಕೃತ ಅರ್ಥವ್ಯವಸ್ಥೆ, ಜನತೆಗೆ ಉಪಯುಕ್ತವಾದ ಎಲ್ಲ ಅಗತ್ಯ ಬಳಕೆಯ ವಸ್ತುಗಳ ಉತ್ಪಾದನೆ ಕುಟೀರಗಳಲ್ಲಿ ಅಥವಾ ಸಣ್ಣ ಸಣ್ಣ ಘಟಕಗಳಲ್ಲಿ ಆಗುತ್ತದೆ. ಭಾರತದಂಥ ಜನಬಾಹುಳ್ಯನಿರುವ ದೇಶದಲ್ಲಿ ಕೋಟಿ ಕೋಟಿ ಕೈಗಳೂ ಲಕ್ಷೋಪಲಕ್ಷ ಕುಟೀರಗಳಲ್ಲಿ ಉತ್ಪಾದಿಸಿದ ವಸ್ತುಗಳ ಒಟ್ಟು ಗಾತ್ರ ಆಗಾಧವಾದ ಜನರ ಅವಶ್ಯಕತೆಗಳನ್ನು ಪೊರೈಸುತ್ತದೆ. ಶ್ರಮಶಕ್ತಿಗೆ ಪೂರಕವಾಗಿ ಸಣ್ಣ ಯಂತ್ರಗಳಿಗೆ ಅವಕಾಶವಿರುತ್ತದೆ. ಇಂಥ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳಿಂದ ಶೋಷಣೆ ಅಥವಾ ಲಾಭಬಡುಕತನ ಇರುವುದಿಲ್ಲ. ಉತ್ಪಾದನೆ ವಿತದರಣೆಗಳು ಒಟ್ಟಿಗೆ ಆಗಿ ಪರಮಾವಧಿ ಉದ್ಯೋಗ ಪ್ರಾಪ್ತಿ ಹಾಗೂ ನ್ಯಾಯೋಚಿತ ವಿತರಣೆ ಆಗುತ್ತದೆ. ಅನಿವಾರ್ಯವಾಗಿ ಹಲವು ಬೃಹತ್ ಕೈಗಾರಿಕೆಗಳು ಇರಬೇಕಾದ ಸಂದರ್ಭದಲ್ಲಿ ಅದರ ಮಾಲೀಕತ್ವದಲ್ಲಿ ಕಾರ್ಮಿಕ ಸಹಭಾಗಿತ್ವ ಇರಬೇಕು. ಮಾಲೀಕರು ಉದ್ಯಮದ ಧರ್ಮದರ್ಶಿಗಳಾಗಿ ವರ್ತಿಸಿ ಕಾರ್ಮಿಕವರ್ಗಕ್ಕೆ ಸಮಪಾಲು ನೀಡಬೇಕು. ಮಾಲೀಕವರ್ಗ ಹಾಗೇ ನಡೆದುಕೊಳ್ಳದಿದ್ದ ಪಕ್ಷದಲ್ಲಿ ಅಂಥ ಭಾರೀ ಉದ್ಯಮಗಳು ಸರ್ಕಾರದ ಒಡೆತನಕ್ಕೆ ಒಳಪಡುತ್ತದೆ. ಸರ್ಕಾರದ ಅಧೀನದಲ್ಲಿದ್ದರೂ ಅದರ ಆಡಳಿತ ಮಂಡಲಿಯಲ್ಲಿರತಕ್ಕದ್ದು. ಗಾಂಧಿಯವರ ಕಲ್ಪನೆಯ ಸಮಾಜ ಜಾತಿರಹಿತ ಹಗೂ ವರ್ಗರಹಿತ ಸಮಾಜ. ಎಲ್ಲ ಜನರ ಸರ್ವಾಂಗೀಣ ವಿಕಾಸಕ್ಕೆ ಇದರಲ್ಲಿ ಆದ್ಯ ಗಮನ ಸ್ತ್ರೀಪುರುಷರು ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಸಹಭಾಗಿಗಳು. ಸ್ವರಾಜ್ಯದ ರಾಜಕರಣ ಸೇವಾಪರವಾದ ರಾಜಕಾರಣ. ನೀತಿಬಾಹಿರವಾದ ರಾಜಕಾರಣ ಪಾಶವೀ ರಾಜಕೀಯವಾದ್ದರಿಂದ ಅದು ಸಮಾಜಘಾತಕ. ಸಾಧನ, ಗುರಿ ಇವೆರಡೂ ಪವಿತ್ರವಾಗಿದ್ದಲ್ಲಿ ರಾಜಕಾರಣ ಪರಿಶುದ್ಧುವಾಗಿರುತ್ತದೆ. ಜನತೆಯಿಂದ ಚುನಾಯಿತರಾದ ಪ್ರತಿನಿಧಿಗಳು ಪ್ರಾಮಾಣಿಕವಾಗಿ ಸೇವಾತತ್ಪರರಾಗಿದ್ದರೆ ಅವರು ನಡೆಸುವ ಸರ್ಕಾರ ಸೇವಾಸಾಧನವಾಗುತ್ತದೆ. ವಿವಿಧ ಘಟ್ಟಗಳಲ್ಲಿ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವ್ಯಷ್ಟಿ ಹಾಗೂ ಸಮಷ್ಟಿ ಹಿತಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುವುದರಿಂದ ಸಮಾಜದ ಅಭ್ಯುದಯ ಉಂಟಾಗುತ್ತದೆ. ಅಂಥ ಸಮಾಜ ಸರ್ವರ ಯೋಗಕ್ಷೇಮ ಸಾಧಿಸುವ ಸರ್ವೋದಯ ಸಮಾಜವಾಗುತ್ತದೆ. ಅದು ಸ್ವರಾಜ್ಯವು ಸುರಾಜ್ಯವೂ ಆಗಿರುತ್ತದೆ. ಗಾಂಧಿಯವರ ಸ್ವರಾಜ್ಯದ ಕಲ್ಪನೆ ಕೇವಲ ಭಾರತಕ್ಕೆ ಸೀಮಿತವಾಗಿರದೆ ಇಡೀ ಮಾನವಜನಾಂಗಕ್ಕೆ ಅನ್ವಯಿಸುತ್ತದೆ. ದೊಡ್ಡವು, ಚಿಕ್ಕವು ಎಂಬ ಭೇದವಿಲ್ಲದೆ ಎಲ್ಲ ರಾಜ್ಯಗಳೂ ಸರಿಸಮಾನವಾದವು. ಎಲ್ಲ ದೇಶಗಳಲ್ಲೂ ರಾಜ್ಯವ್ಯವಸ್ಥೆ ಸತ್ಯ ಅಹಿಂಸೆ, ವಿಕೇಂದ್ರಿಕರಣ ಇವುಗಳ ಆಧಾರದ ಮೇಲೆ ರಚಿತವಾದರೆ ವಿಶ್ವಶಾಂತಿ ಪಾಶ್ವತವಾಗಿರುತ್ತದೆ. ಮಾನವ ಸ್ವಾತಂತ್ರ್ಯದ ದಿಗಂತ ವಿಸ್ತಾರವಾಗುತ್ತದೆ. (ಬಿ.ಆರ್.ಪಿ.) ಗಾಂಧೀ ದೃಷ್ಟಿಯಲ್ಲಿ ಸತ್ಯಾಗ್ರಹ: ಮಹಾತ್ಮ ಗಾಂಧಿಯವÀರು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ವಿಮೋಚನೆಗೊಳಿಸಿದ ರಾಷ್ಟ್ರನಾಯಕರು. 19ನೆಯ ಶತಮಾನದ ಯೂರೋಪಿನ ಕೈಗಾಗಿಕಾ ಕ್ರಾಂತಿ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯ ವಿಸ್ತರಣಗಳ ಪರಿಣಾಮವಾಗಿ ಏಷ್ಯ ಆಫ್ರಿಕ ಖಂಡಗಳಲ್ಲಿಯ ಬಹು ಭಾಗ ದಾಸ್ಯಕ್ಕೆ ಒಳಗಾಗಿತ್ತು. ದಕ್ಷಿಣ ಆಫ್ರಿಕದಲ್ಲಿದ್ದ ಭಾರತೀಯ ವರ್ತಕರ ವಕೀಲರಾಗಿ ಅಲ್ಲಿಗೆ ಹೋಗಿದ್ದ ಗಾಂಧೀಯವರು ಅಲ್ಲಿಯ ಬ್ರಿಟಿಷ್ ಸಾಮ್ರಾಜ್ಯ ಶಾಹಿ ವರ್ಣೀಯರನ್ನು ಅತ್ಯಂತ ಹೀನದಾಸ್ಯಕ್ಕೆ ಗುರಿಮಾಡಿ ಅವರ ನಾಗರಿಕ ಹಕ್ಕುಗಳನ್ನೆಲ್ಲ ದಮನ ಮಾಡಿದ್ದನ್ನು ಕಂಡು ಮೊದಲ ಬಾರಿಗೆ ಪ್ರತಿಭಟಿಸಿ ನಿಲ್ಲುವ ಸಾಹಸ ಮಾಡಿದರು. ಅಸಂಖ್ಯಾತ ಬಡ ಕೂಲಿಗಾರರ ಸಮೂಹವನ್ನು ಸಂಘಟಿಸಿ, ಅಲ್ಲಿ ನೆಲೆಸಿದ್ದ ಇತರ ಬುದ್ಧಿ ಜೀವಿಗಳ ನೆರವನ್ನೂ ಪಡೆದ ನಿಶ್ಯಸ್ತ್ರ ಸಾಮೂಹಿಕ ಪ್ರತಿಭಟನಾಸಮರವೊಂದನ್ನು ಪ್ರಾರಂಭಿಸಿದರು. ಮಾನವನ ನೈತಿಕಶಕ್ತಿಗಳನ್ನು ಜಾಗೃತಗೊಳಿಸಿ ಆತ್ಮಗೌರವದ ನಿಷ್ಠೆಯನ್ನು ಉಜ್ವಲಗೊಳಿಸಿ ಸಾಮಾನ್ಯ ಜನತೆ ಪ್ರವಲ ಸಶಸ್ತ್ರ ಸಾಮ್ರಾಜ್ಯ ಸರ್ಕಾರದ ಅನ್ಯಾಯ ದುರಾಡಳಿತಗಳನ್ನು ಪ್ರತಿಭಟಿಸಿ ನಿಲ್ಲುವಂತೆ ಪ್ರೇರೇಪಿಸಿದರು. ಅವಮಾನಕರ ಕಾನೂನುಗಳನ್ನು ಸವಿನಯವಾಗಿ ಉಲ್ಲಂಘಿಸಿ ದಬ್ಬಾಳಿಕೆಯ ಶಿಕ್ಷೆಯನ್ನನುಭವಿಸುತ್ತ ಸತತವಾಗಿ ನ್ಯಾಯಕ್ಕಾಗಿ ಹೋರಾಡುವ ಕ್ರಮವನ್ನು ರೂಪಿಸಿದರು. ಮೊದಲು ಸದಾಗ್ರಹ ಎಂದೂ ಅನಂತರ ಸತ್ಯಾಗ್ರಹ ಎಂದೂ ಅದಕ್ಕೆ ಹೆಸರಿಟ್ಟರು. ರಸ್ಕಿನ್ ಟಾಲ್ ಸ್ಟಾಯ್, ಥಾರೋ, ಮತ್ತು ರಾಯಿಚಂದಭಾಯಿ ಅವರ ಬರಹಗಳಿಂದಲೂ ಗೀತಾ, ಉಪನಿಷತ್, ಕೊರಾನ್, ಬೈಬಲ್‍ಗಳ ಮೂಲ ತತ್ತ್ವಗಳ ಅಧ್ಯಯನ ಅನುಷ್ಠಾನಗಳಿಂದಲೂ ಪ್ರೇರಣೆ ಪಡೆದು ಸತ್ಯಾಗ್ರಹ ಚಳವಳಿಯನ್ನು 1906ರಲ್ಲಿ ಪ್ರಾರಂಭಿಸಿದರು. 1917ರಲ್ಲಿ ಭಾರತಕ್ಕೆ ಬಂದು ಸಾಬರಮತಿಯ ಸತ್ಯಾಗ್ರಹಾಶ್ರಮವನ್ನು ಸ್ಥಾಪಿಸಿ, ಭಾರತದ ಸ್ವಾತಂತ್ರ್ಯ ಸಮರದ ನಾಯಕತ್ವ ವಹಿಸಿಕೊಂಡರು. ಅವರ ಇಡೀ ಜೀವನವೇ ಅಲ್ಲಿಂದಾಚೆಗೆ ಸತ್ಯಾಗ್ರಹಪಥವನ್ನು ಹಿಡಿದು ನಡೆಯಿತು. ಜೀವನದ ಯಾವ ಕ್ಷೇತ್ರದಿಂದಲೂ ವಿಮುಖವಾಗದೆ, ಆದರ್ಶದ ಒರೆಗಲ್ಲಿಗೆ ಸಕಲ ಕರ್ಮಗಳನ್ನೂ ನಿಷ್ಠುರವಾಗಿ ಉಜ್ಜಿನೋಡಿ, ಸತ್ಯದ ಅರಿವಾದೊಡನೆ ನಿರ್ಭಯವಾಗಿ ಅದನ್ನನುಸರಿಸಿ ಮುನ್ನಡೆಯಲು ವ್ಯಕ್ತಿಗಾಗಲಿ, ಸಮಾಜಕ್ಕಾಗಲಿ, ರಾಷ್ಟ್ರಕ್ಕಾಗಲಿ ಅಹಿಂಸಾಮಾರ್ಗವೊಂದೇ ಸಾಧನ, ಅದೇ ಸತ್ಯಾಗ್ರಹ. ಇದು ಗಾಂಧಿಯವರು ಕಂಡುಕೊಂಡ ಸಿದ್ಧಾಂತ. ಜೀವನದ ಸಮಸ್ಯೆಗಳನ್ನು ಸಮಗ್ರವಾಗಿ ಕಂಡು ಅವುಗಳನ್ನೆದುರಿಸಿ ಪರಿಹಾರ ಪಡೆದುಕೊಳ್ಳಲು ಅಹಿಂಸಾತ್ಮಕ ಹೋರಾಟವನ್ನು ಆತ್ಮಶಕ್ತಿಯ ಬಲದಿಂದ ನಡೆಸುವುದು ಸತ್ಯಾಗ್ರಹ. ಶಸ್ತ್ರಬಲದ ಅಥವಾ ಭಯೊತ್ಪಾದನೆಯ ಮೂಲಕ ಕಡ್ಡಾಯವಾಗಿ ಪರಿವರ್ತನೆ ಸಾಧಿಸುವ ಕ್ರಮದಿಂದ ಮಾನವೀಯ ಸಂಬಂಧಗಳು ಕಡಿಯುತ್ತವೆ. ಅದರಿಂದ ಉದ್ದೇಶಿತ ಫಲ ದೊರಕುವುದಿಲ್ಲ. ಆದ್ದರಿಂದ ವಿಕಾಸಶೀಲ ಕ್ರಾಂತಿಗೆ ಸತ್ಯಾಗ್ರಹವೇ ಆಧಾರಶಕ್ತಿ ಎನ್ನುವುದು ಗಾಂಧೀವಾದ. ಅವರ ಮಾತಿನಲ್ಲಿ 'ಕೌಟಂಬಿಕ ಪ್ರೇಮತತ್ತ್ವವನ್ನು ರಾಜಕೀಯಕ್ಕೆ ವಿಸ್ತರಣೆ ಮಾಡುವುದೇ ಸತ್ಯಾಗ್ರಹ. ಕುಟುಂಬದಲ್ಲಿ ತೊಂದರೆಗೀಡಾದ ವ್ಯಕ್ತಿ ಇತರರ ವಿಷಯದಲ್ಲಿ ಪ್ರೇಮಭಾವ ಕಳೆದುಕೊಳ್ಳುವುದಿಲ್ಲ. ತನ್ನ ತತ್ತ್ವಗಳಿಗಾಗಿ ಹಿಂಸೆಯನ್ನು ಸಹಿಸಿಕೊಳ್ಳುತ್ತಾನೆ. ಭಿನ್ನಾಭಿಪ್ರಾಯದವರ ಬಗ್ಗೆ ಕ್ರೋಧವನ್ನಾಗಲಿ ಸೇಡಿನ ಮನೋಭಾವವನ್ನಾಗಿ ತಳೆದಿರುವುದಿಲ್ಲ. ಕ್ರೋಧದ ದಮನ, ಆತ್ಮಕ್ಲೇಶಾನುಭವ ಇವನ್ನು ಅಂಗೀಕರಿಸಿ ತಾಳ್ಮೆಯಿಂದ ಇತರರ ತಪ್ಪನ್ನು ತಿದ್ದುವ ಪ್ರಯತ್ನ ಮಾಡುತ್ತಾನೆ. ಉತ್ಕಟ ಪರಿಸ್ಥಿತಿಗಳಲ್ಲಿ ಕುಟುಂಬದ ಇತರರೊಂದಿಗೆ ಜಾಗ್ರತೆ ಒಮ್ಮತಕ್ಕೆ ಬಂದು ಕುಟುಂಬದ ಶಾಂತಿಯುತ ಕ್ಷೇಮಕ್ಕೆ ನೆರವಾಗುತ್ತಾನೆ. ಈ ಪ್ರೇಮತತ್ತ್ವ ಜಗತ್ತಿನ ಬಹುತೇಕ ನಾಗರಿಕ ರಾಷ್ಟ್ರಗಳ ಕುಟುಂಬಗಳಲ್ಲಿ ಆಗೋಚರವಾಗಿಯೂ ಸ್ಥಿರವಾಗಿಯೂ ಪ್ರಭಾವ ಬೀರುತ್ತಲೇ ಇದೆ. ಈ ತತ್ತ್ವವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವ್ಯವಹಾರಗಳೆಲ್ಲದರಲ್ಲೂ ಒಪ್ಪಿದ ಹೊರತು ಜನಾಂಗಗಳ ಒಕ್ಕೊಟವಾಗಲಿ ಮನುಜಕುಲದ ಸರ್ವತೋಮುಖ ಏಳಿಗೆಯಾಗಲಿ ಅಸಾಧ್ಯ ಸತ್ಯಾಗ್ರಹದ ಮೂಲಶಕ್ತಿ ಸತ್ಯನಿಷ್ಠೆ. ಸತ್ಯಕ್ಕಾಗಿ ಹೋರಾಡುವಾಗ ಹಿಂಸಾಚಾರ ಎಂದಿಗೂ ಸಮಂಜಸವಾದ ಅಸ್ತ್ರವಾಗಲಾರದು. ಅಹಿಂಸೆಯ ಪಥ ಅನಿವಾರ್ಯ ವೈಯಕ್ತಿಕ ಅಹಿಂಸೆ ಮಾನವಧರ್ಮದ ಅವಿಭಾಜ್ಯ ಅಂಗ ಎಂದು ಎಲ್ಲ ಧರ್ಮಗಳಿಗೂ ನಂಬಿಕೆ ಅಂತೆಯೇ ಸಾಮೂಹಿಕ ಪ್ರತಿಭಾಟನೆ ಸತ್ಯವಿಷ್ಠವೂ ಅಹಿಂಸಾತ್ಮಕವೂ ಆದಾಗ ಮಾತ್ರ ಸಾಮಾಜಿಕ ನ್ಯಾಯ ಸುಪ್ರತಿಷ್ಠಿತವಾಗುತ್ತದೆ. ಇದರ ಪ್ರಪ್ರಥಮ ಪ್ರಯೋಗ ಗಾಂಧಿಯವರ ಸತ್ಯಾಗ್ರಹ ಚಳವಳಿಗಳು. 1906ರಲ್ಲಿ ದಕ್ಷಿಣ ಆಫ್ರಿಕದ ಟ್ರಾನ್ಸ್‍ವಾಲಿನಲ್ಲಿ ಏಷ್ಯನರ ಮೇಲೆ ಬಿಳಿಯರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಅಲ್ಲಿಯ ಕಾಮಿಕರ ಆತ್ಮಗೌರವದಿಂದ ಬಾಳಲು ಗಾಂಧಿಯವರು ಹೂಡಿದ ಮೊದಲ ಸತ್ಯಾಗ್ರಹ ಹಂತಹಂತವಾಗಿ ಬೆಳೆದು ಭಾರತದ ಸ್ವಾತಂತ್ರ್ಯ ಸಮರದ ಹದಿನಾಲ್ಕು ವಿವಿಧ ಪ್ರಯೋಗಗಳಲ್ಲಿ ಒಂದು ವ್ಯಾವಹಾರಿಕ ಸಿದ್ಧಾಂತವಾಯಿತು. ಸತ್ಯಾಗ್ರಹ ಎಂದರೆ ನಿಷ್ಕ್ರಿಯತೆ ಅಲ್ಲ. ಅನ್ಯಾಯಗಳನ್ನು ಸಹಿಸಿಕೊಂಡು ಉಪೇಕ್ಷೆಯಿಂದಿರುವುದಲ್ಲ. ಅದನ್ನು ಪ್ರತಿಭಟಿಸಿ ನಿಂತು ಪ್ರೇಮ ಶಕ್ತಿಯಿಂದ ಸರಿಪಡಿಸುವ ನೈತಿಕ ಸಮರವೇ ಸತ್ಯಾಗ್ರಹ. ಸವಿನಯ ಶಾಸನಭಂಗ, ಅಹಿಂಸಾತ್ಮಕ ಅಸಹಕಾರ, ಶಸ್ತ್ರಾವಲಂಬನೆಯ ನಿರಾಕರಣೆ, ತತ್ತ್ವಪಾಲನೆಯಲ್ಲಿ ನಿಸ್ಸೀಮಬಲಿದಾನದ ಸಿದ್ಧತೆ ವೈರಿಯ ಬಗ್ಗೆ ನಿಸ್ಸಂಕೋಚ ಪ್ರೀತಿ ಮತ್ತು ವ್ಯಕ್ತಿದ್ವೇಷದ ಸಂಪೂರ್ಣದಮನ ಇವು ಸತ್ಯಾಗ್ರಹದ ಕ್ರಮಬದ್ಧ ಪ್ರಭಾವಯುತ ಅಸ್ತ್ರಗಳೆಂದು ಗಾಂಧೀಜಿಯ ಸತ್ಯಾನ್ವೇಷಣೆಯ ಪ್ರಯೋಗಗಳು ಸಿದ್ಧಮಾಡಿ ಕೊಟ್ಟಿದೆ. ಸಾತ್ವಿಕ ಪ್ರತಿಭಟನೆಯಿಂದ ಮಾನವನ ದೌರ್ಜನ್ಯ ಪ್ರವೃತ್ತಿ ಕ್ರಮೇಣ ಅಳಿಸಿಹೋಗಿ ಮಾನವ ಮಾನವನಾಗುತ್ತಾನೆ ಎಂಬ ನಂಬಿಕೆ ಸತ್ಯಾಗ್ರಹಶಾಸ್ತ್ರದ ಅಡಿಗಲ್ಲು. ಮಾನವಚರಿತ್ರೆಯಲ್ಲಿ ವಿಕಾಸಶೀಲ ಪರಿರ್ತನೆಗಳೆಲ್ಲವೂ ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಸತ್ಯಾಗ್ರಹಗಳ ಪರಿಣಾಮವಾಗಿಯೇ ಆಗಿವೆ. ಎನ್ನುವುದು ಗಾಂಧೀದೃಷ್ಟಿ. ಸತ್ಯಾನ್ವೇಷಣೆ ಮಾನವನ ಸಹಜಧರ್ಮ. ಅದು ಎಷ್ಟರಮಟ್ಟಿಗೆ ಅಹಿಂಸಾತ್ಮಕವಾಗಿ ಸಾಗುತ್ತದೆಯೋ ಅಷ್ಟರಮಟ್ಟಿಗೆ ಮತ್ರ ನಿಜವಾದ ವಿಕಾಸ ಸಾಗುತ್ತದೆ ಎನ್ನುವುದು ಗಾಂಧಿಯವರ ಅಭಿಪ್ರಾಯ ಗುರಿಯಷ್ಟೇ ಸಾಧನವೂ ಶುದ್ಧವಾಗಬೇಕೆನ್ನಲುವುದೇ ಸತ್ಯಾಗ್ರಹಜೀವನದ ಮೂಲತತ್ತ್ವ. ಗಾಂಧಿಯವರ ದೃಷ್ಟಿಯಲ್ಲಿ ಸತ್ಯಾಗ್ರಹ ಕೇವಲ ರಾಜಕೀಯ ಕ್ಷೇತ್ರದ ಪ್ರತಿ ಭಟನೆಯ ಮಾರ್ಗ ಮಾತ್ರವಲ್ಲ. ಅದು ಒಂದು ಸಮಗ್ರ ಜೀವನವಿಧಾನದ ಸೂತ್ರವೂ ಹೌದು. ಹಿಂಸೆ ಕೇವಲ ಭೌತಿಕ ಸ್ವರೂಪದ್ದಷ್ಟೇ ಆಗಿರುವುದಿಲ್ಲ. ಅತ್ಯಂತ ಸೂಕ್ಷ್ಮ ರೂಪದ ಪರೋಕ್ಷ ಶೋಷಣೆಯ ವ್ಯವಸ್ಥೆಗಳೆಲ್ಲವೂ ವ್ಯಾಪಕ ಹಿಂಸೆಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲ ರೀತಿಯ ಹಿಂಸಾಮಯ ಆರ್ಥಿಕ, ಸಾಮಜಿಕ ಮತ್ತು ರಾಜಕೀಯ ಸಂಸ್ಥೆಗಳನ್ನು ನೈತಿಕ ದೃಷ್ಟಿಯಿಂದ ನಿರಾಕರಿಸಿ ಎಷ್ಟೇ ವೈಯಕ್ತಿಕ ಸಂಕಟಗಳಿಗೊಳಗಾಗಬೇಕಾದರೂ ಅವುಗಳೊಂದಿಗೆ ಅಸಹಕರಸಿ ನಿರ್ಭಯವಾಗಿ ವರ್ತಿಸುವುದೇ ಸತ್ಯಾಗ್ರಹ. ಈ ನಿರ್ಭಯತಡೆ ಬಹಳಮಟ್ಟಿಗೆ ಸ್ವಾವಲಂಬನೆಯ ಜೀವನದಿಂದ ಬರುತ್ತದೆ. ರಾಷ್ಟ್ರಗಳಾಗಲಿ ಜನಸಮೂಹಗಳಾಗಲಿ ಜೀವನದ ಅತ್ಯಾವಶ್ಯಕ ವಸ್ತುಗಳ ಪೂರೈಕೆಗೆ ಪರಾವಲಂಬಿಗಳಾದರೆ ಶೋಷಣೆಗೆ ಗುರಿಯಾಗುವುದು ಅನಿವಾರ್ಯವಾಗುತ್ತದೆ. ಕ್ರಿಯಾತ್ಮಕವಾದ, ಆತ್ಮಗೌರವದಿಂದ ಕೂಡಿದ ಸ್ವತಂತ್ರವಿಚಾರಶಕ್ರಿಯುಳ್ಳ ಸರಳಜೀವನ ಸತ್ಯಾಗ್ರಹಿಯದವರಿಗೆ ಸಹಾಯವಾಗಬೇಕು ಎನ್ನುತ್ತಾರೆ ಗಾಂಧೀಜಿ ಅಂಥ ಬಾಳಿನ ನಿಯಮಗಳನ್ನು ತಾವು ಅನುಷ್ಠಾನ ಮಾಡಿ, ಸಾಮೂಹಿಕ ದಳಗಳೂ ಯಶಸ್ವಿಯಾಗಿ ಆಚರಿಸುವಂತಗೆ ಮಾಡಿದ ವಿಶಿಷ್ಟ ಮಾರ್ಗದರ್ಶನ ಗಾಂಧಿಯವರದು. ಈ ನಿಯಮಗಳನ್ನು ಅವರು ಏಕಾದಶವ್ರತಗಳೆಂದು ಕರೆದರು. ಧಾರ್ಮಿಕ ಪರಂಪರೆಗಳಿಗೆ ಸುಪರಿಚಿತವಾದ ಸತ್ಯ. ಅಹಿಂಸೆ ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅಸ್ವಾದಗಳ ಜೊತೆಗೆ ಸಾಮಾಜಿಕ ಮೌಲ್ಯಗಳುಳ್ಳ ಶರೀರಶ್ರಮ, ಸರ್ವಧರ್ಮ ಸಮಭಾವ, ಸ್ಪರ್ಶಭಾವನೆ ಸ್ವದೇಶೀ ಮತ್ತು ನಿರ್ಭಯತೆಗಳನ್ನು ಅವರು ಸೇರಿಸಿದರು. ಸತ್ಯಾಗ್ರಹಶಾಸ್ತ್ರದಲ್ಲಿ ಈ ವ್ರತ ನಿಯಮಗಳು ಅತ್ಯಂತ ಮುಖ್ಯವಾದ ಅಂಗ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಿರುವ ಯುದ್ಧವಿರೋಧೀ ಚಳವಳಿ, ಸಾತ್ತ್ವಿಕ ಪ್ರತಿಭಟನೆ ಶಾಸನೋಲ್ಲಂಘನೆ ಕರನಿರಾಕರಣೆ, ಮುಂತಾದ ನಿಶ್ಯಸ್ತ್ರ ಪ್ರತಿಭಟನಾಕ್ರಮಕ್ಕೂ ಸತ್ಯಾಗ್ರಹಕ್ಕೂ ಒಂದು ಮೂಲಭೂತ ವ್ಯತ್ಯಾಸವುಂಟು. ಅವನ್ನು ನಡೆಸುವವರು ಆಯುಧ ದೊರಕದ್ದರಿಂದ ತಾವು ದುರ್ಬಲತೆಂದು ತಿಳಿದು ಆ ಚಳವಳಿಗಳಲ್ಲಿ ಹಿಂಸೆಯನ್ನು ವರ್ಜಿಸುತ್ತಾರೆ. ಅವಕಾಶ ಒದಗಿದಾಗ ಹಿಂಸೆಯನ್ನು ಉಪಯೋಗಿಸಲು ಅವರು ಹಿಂದೆಗೆಯುವುದಿಲ್ಲ. ಅಲ್ಲದೆ ರಾಷ್ಟ್ರ ರಕ್ಷಣೆಗಾಗಿ ಶಸ್ತ್ರಾಸ್ತ್ರ ಸಂಗ್ರಹಣೆ ಅತ್ಯಗತ್ಯ ಎಂದು ನಂಬಿ ಅದನ್ನು ಬೆಂಬಲಿಸುತ್ತಾರೆ. ಗಾಂಧಿಯವರು ರೂಪಿಸಿಕೊಟ್ಟ ಸತ್ಯಾಗ್ರಹಕ್ರಮದಲ್ಲಿ ಹಿಂಸೆಗೆ ಯಾವ ಸಂದರ್ಭದಲ್ಲೂ ಅವಕಾಶವೇ ಇರಲಾಗದು. ಸತ್ಯಾಗ್ರಹದಲ್ಲಿ ಸತ್ಯ ಮತ್ತು ಅಹಿಂಸೆ ಪ್ರಬಲ ರಾಷ್ಟ್ರವೂ ಶಸ್ತ್ರ ನಿರಾಕರಣೆಯನ್ನು ಅಂಗೀಕರಿಸುವುದು ಸತ್ಯಾಗ್ರಹಮಾರ್ಗ ಸತ್ಯವನ್ನು ಹಿಂಸಾವೃತ್ತಿಯಿಂದ ಪಡೆಯುವುದು ಅಸಾಧ್ಯ. ಅಹಿಂಸೆ ಒಂದು ಸಶಕ್ತ ಆತ್ಮಶಕ್ತಿಯ ಪ್ರಕಟಿತರೂಪ; ಅದಕ್ಕೆ ಶಸ್ತ್ರದ ಅವಲಂಬನೆ ಯಾವ ಸಂದರ್ಭದಲ್ಲೂ ಅನಾವಶ್ಯಕ; ಈ ಶಕ್ತಿ ಸಮರದಿಂದ ಸಮರಕ್ಕೆ ವೃದ್ಧಿಯಾಗುತ,್ತ ವೈರವನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆ. ಸತ್ಯಾಗ್ರಹದ ಶುದ್ಧಸ್ವರೂಪದಲ್ಲಿ ಈ ನಿಷ್ಠೆ ಆಡಗಿದೆ. ಸತ್ಯಾಗ್ರಹ ಕ್ರಮದಲ್ಲಿ ವೈರಿಯನ್ನು ಸಾಂಪ್ರದಾಯಿಕ ದೃಷ್ಟಿಯಿಂದ ಹತ್ಯಾಯೋಗ್ಯ ಪಾಪಿ ಎಂದು ಪರಿಗಣಿಸಲಾಗುವುದಿಲ್ಲ. ಅವನಲ್ಲಿ ತಾತ್ಕಾಲಿಕವಾಗಿ ಸುಪ್ತವಾಗಿರುವ ವಿವೇಕಪೂರ್ಣ ಸಾತ್ತ್ವಿಕತೆಯನ್ನು ಎಚ್ಚರಗೊಳಿಸಿ ಅವರು ತನ್ನ ತಪ್ಪನ್ನು ತಾನೇ ಅರಿಯುವಂತೆ ಮಾಡುವ ಪ್ರಕ್ರಿಯೆ ಸತ್ಯಾಗ್ರಹ ಗಾಂಧಿಯವರ ಮಾತಿನಲ್ಲಿ ದುರುಳ ಎತ್ತುವ ಕತ್ತಿಯ ಎದುರು ಇನ್ನೂ ಹೆಚ್ಚು ಹರಿತವಾದ ಆಯುಧವನ್ನು ಹಿಡಿಯದೆಯೇ ಅವನ ಕತ್ತಿಯ ಅಗಲನ್ನು ಮೊಂಡಾಗಿಸುವ ಪ್ರಯತ್ನ ನನ್ನದು. ಅವನು ನಿರೀಕ್ಷಿಸುವ ದೈಹಿಕ ಪ್ರತಿಭಟನೆಯನ್ನು ಕಾಣದೆ ಹೋದಾಗ ಅವನು ಹತಾಶನಾಗುತ್ತಾನೆ. ನನ್ನ ಸಾತ್ತ್ವಿಕ ಪ್ರತಿಭಟನೆ ಅವನ ಹಿಡಿತಕ್ಕೆ ಸಿಗದು. ಅವನನ್ನು ದಿಗ್ಘ್ರಾಂತನನ್ನಾಗಿ ಮಾಡಿಬಿಡುತ್ತದೆ. ಕೊನೆಗೆ ಅವನು ಅಂಥ ಸಾತ್ತ್ವಿಕ ಪ್ರತಿಭಟನೆಯನ್ನು ಗೌರವದಿಂದ ಕಾಣುತ್ತಾನೆ. ಹೀಗೆ ಮಾನ್ಯತೆ ನೀಡುವುದು ಅವನಿಗೆ ಅಪಮಾನ ಎನಿಸುವುದಿಲ್ಲ. ತನ್ನ ಘನತೆ ಹೆಚ್ಚಾಯಿತೆಂದೇ ಅವನು ಭಾವಿಸುತ್ತಾನೆ. ತನ್ನ ವೈರಿ ಶರಣಾಗತನಾಗಿ ತಾನು ಅವನ ಮೇಲೆ ಅಧಿಕಾರ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ ಸತ್ಯಾಗ್ರಹಿಗೆ ಸಲ್ಲದು. ಸತ್ಯಾಗ್ರಹ ಸಮರದ ಅಂತ್ಯದಲ್ಲಿ ಗೆದ್ದವರೂ ಪುನೀತರಾಗುತ್ತಾರೆ. ಸೋತವರೂ ಪುನೀತರಾಗುತ್ತಾರೆ. ಯಾವ ಬಲತ್ಕಾರಕ್ಕೂ ಮಣಿಯದೆ ಭಿನ್ನಾಭಿಪ್ರಾಯಾಗಳು ಸಮರಸವಾಗಿ ಕೊನೆಗೊಂಡು ಪರಸ್ಪರ ಸಹಕಾರಿಗಳಾಗಿಯೆ ಉಳಿಯುವುದು ಸತ್ಯಾಗ್ರಹದ ಗೆಲುವು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೊನೆಗೊಂಡಾಗ ಭಾರತ, ಬ್ರಿಟನ್ ಎರಡು ರಾಷ್ಟ್ರಗಳೂ ಧನ್ಯತೆಯ ಅನುಭವವನ್ನು ಪಡೆದುದು. ಒಂದು ಪ್ರಖ್ಯಾತ ನಿದರ್ಶನ. ಚಕ್ರಾಧಿಪತ್ಯದ ಪ್ರತಿನಿಧಿಯೇ ತಮ್ಮ ಬಾವುಟವನ್ನು ಇಳಿಸಿ ಸ್ವತಂತ್ರ ಭಾರತದ ಪ್ರಜಾನುರಾಗಿ ಗವರ್ನರ್-ಜನರಲ್ ಎನಿಸಿಕೊಂಡರು. ಇದು ಸತ್ಯಾಗ್ರಹದ ಒಂದು ಪರಿಣಾಮ. ಗಾಂಧಿಯವರು ನಿರ್ದೇಶಿಸಿದ ಸತ್ಯಾಗ್ರಹಗಳಲ್ಲಿ ಅವರು ಸ್ವತಃ ಒಂದು ಸ್ವಯಂ ಸೇವಕ ಶಿಕ್ಷಣಕ್ರಮವನ್ನು ಅನುಸರಿಸುತ್ತಿದ್ದರು. ಸಾಮೂಹಿಕ ಸತ್ಯಾಗ್ರಹ ಇನ್ನೂ ಹೊಸ ಪ್ರಯೋಗ, ಅದಕ್ಕೆ ಜನತೆಯ ಅತ್ಯಂತ ದಕ್ಷವಾದ ಶಿಸ್ತಿನ ಶಿಕ್ಷಣ ಅತ್ಯಗತ್ಯ ಎಂದರು. ಸತ್ಯಾಗ್ರಹವೆಂದರೆ ವೇದನೆಯನ್ನು ಸದಾ ಸಹಿಸುವ ನಿರಂತರ ಸಿದ್ಧತೆ. ಈ ಸಹನೆ ನಿಷ್ಕಲಂಕವಾದಷ್ಟೂ ಅದರ ಪರಿಣಾಮ ಸತ್ತ್ವಶಾಲಿಯಾಗುತ್ತದೆ. ಸತ್ಯಾಗ್ರಹದಲ್ಲಿ ಅಸಹಾಯಕತೆ ಎಂದಿಗೂ ಇರಬಾರದು ಎನ್ನುತ್ತಿದ್ದರು. ತಮ್ಮ ಸೂಚನೆಗಳ ಹಿನ್ನೆಲೆಯಲ್ಲಿ ಯಾವ ಗುಣಗಳು ಪ್ರತಿ ಸತ್ಯಾಗ್ರಹಿಯಲ್ಲೂ ಇರಬೇಕೋ ಅವನ್ನು ಅವರು ಹೀಗೆ ಸಂಗ್ರಹಿಸಿಕೊಟ್ಟಿದ್ದಾರೆ : 1 ಸತ್ಯಸ್ವರೂಪನಾದ ದೇವರಲ್ಲಿ ಅಚಲನಂಬಿಕೆ. 2 ಸತ್ಯ ಅಹಿಂಸೆಗಳಲ್ಲೂ ಕಷ್ಟಸಹಿಷ್ಣುತೆಯಿಂದ ಇತರರಲ್ಲಿ ಎಚ್ಚರಗೊಳ್ಳುವ ಮಾನವೀಯ ಒಳ್ಳೆಯತನದಲ್ಲೂ ವಿಶ್ವಾಸ. 3 ಪರಿಶುದ್ಧ ಜೀವನ, ತ್ಯಾಗಬಲಿದಾನಗಳಿಗೆ ಸಿದ್ಧತೆ. 4 ಸ್ವದೇಶೀ ಮತ್ತು ಶರೀರಶ್ರಮ ವ್ರತಗಳ ಸ್ವೀಕಾರ. 5 ಮದ್ಯ ಮತ್ತು ಇತರ ಮಾದಕವಸ್ತುಗಳ ಸಂಪೂರ್ಣ ನಿಷೇಧ. 6 ಕಾಲಕಾಲಕ್ಕೆ ಅನುಸರಿಸಬೇಕಾದ ಶಿಸ್ತುಗಳ ಮನಃಪೂರ್ವಕ ಪಾಲನೆ. 7 ಶಿಕ್ಷೆಯನ್ನು ಸಂತೋಷದಿಂದ ಅನುಭವಿಸುವಾಗ ನಿಯಮಗಳನ್ನು ಪಾಲಿಸುತ್ತ ವಿನಯ ಪೂರ್ವಕವಾಗಿ ಆತ್ಮಗೌರವದಿಂದ ನಡೆದುಕೊಳ್ಳುವುದು. ಸತ್ಯಾಗ್ರಹದ ಸಮಗ್ರರೂಪದ ಪರಿಣಾಮ ಮಾನವನ ಆಧ್ಯಾತ್ಮಿಕ ವಿಕಾಸ. ವಸ್ತುನಿಷ್ಠ ಬಾಹ್ಯ ಪ್ರಪಂಚ ಸಂಪತ್ಸಮೃದ್ಧಿಯ ಅವಿರತ ಕಾರ್ಯದಲ್ಲಿ ತೊಡಗಿರುವಾಗಲೂ ಆತ್ಮವಿಕಾಸ ನಿರಂತರವಾಗಿ ಹರಿದುಬರುವ ಸಾಧನ ಸತ್ಯಾಗ್ರಹ ಜೀವನಮಾರ್ಗ. ವಿಜ್ಞಾನ + ಹಿಂಸೆ = ಸರ್ವನಾಶ; ವಿಜ್ಞಾನ + ಅಹಿಂಸೆ = ಸರ್ವೋದಯ, ಎಂದು ವಿನೋಬಾ ಭಾವೆಯವರು ಕೊಟ್ಟಿರುವ ಸೂತ್ರ ಗಾಂಧಿ ಪ್ರಣೀತ ಸತ್ಯಾಗ್ರಹ ಮಾರ್ಗದ ವ್ಯಾಖ್ಯೆಯೂ ಹೌದು. ವಿಜ್ಞಾನ ಮತ್ತು ಆತ್ಮ ಜ್ಞಾನಗಳ ಸಮತೋಲನ ವಿಕಾಸವಾಗುತ್ತ ಹೋದಂತೆ ಮಾನವಸಮಾಜದ ಸ್ವರೂಪವೇ ಬದಲಾಗಿ ಮಾನವೀಯ ಮೌಲ್ಯಗಳು ಸುಪ್ರತಿಷ್ಠವಾಗುತ್ತವೆ. ಸತ್ಯಾಗ್ರಹಶಾಸ್ತ್ರ ಈ ದಿಸೆಯಲ್ಲಿ ಸಂಶೋಧಿತವಾದ ಅತ್ಯಂತ ಪ್ರಭಾವಯುತ ಸಿದ್ಧಾಂತವೆಂದು ಪರಿಗಣಿತವಾಗಿದೆ. (ಕೆ.ಎಸ್.ಎನ್.ಎಸ್.) ಗಾಂಧಿ ಮತ್ತು ಅಹಿಂಸೆ : ಗಾಂಧೀಜಿಯವರ ಜೀವನದರ್ಶನದಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ ಅಹಿಂಸೆಗೆ ದ್ವಿತೀಯ ಸ್ಥಾನ. ಸತ್ಯಶೋಧನೆಯಲ್ಲಿ ತೊಡಗಿದ ಇವರು ಅನುಸರಿಸಿದ ಏಕೈಕ ಮಾರ್ಗವೇ ಅಹಿಂಸೆ. ಅಹಿಂಸೆ ಸಾಧನ, ಸತ್ಯವೇ ಅದರ ಸಿದ್ಧಿ. ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಇವರು ಅಹಿಂಸೆಯ ಆಚರಣೆಗೆ ತಮ್ಮ ಬಾಳಿನ ಸರ್ವಸ್ವವನ್ನೂ ಪಣವಾಗಿಟ್ಟರು. ಇವರ ಅಂತರಂಗ ಬಹಿರಂಗ ಜೀವನವನ್ನೆಲ್ಲಾ ಇದು ವ್ಯಾಪಿಸಿತು. ತ್ರಿಕರಣಪೂರ್ವಕ ಅಹಿಂಸೆಯ ಆಚರಣೆಯಲ್ಲಿ ತೊಡಗಿದ ಇವರು ಅಹಿಂಸೆಯನ್ನು ಕುರಿತು ಹೇಳಿರುವ ಮಾತುಗಳು ಋಷಿ ವಾಣಿಯಂತೆ ಪ್ರಮಾಣವಾಕ್ಯಗಳಾಗಿವೆ. ಅಹಿಂಸೆಯ ಅರ್ಥ : ಗಾಂಧೀಜಿಯವರೇನು ಅಹಿಂಸಾತತ್ತ್ವದ ಜನಕರಲ್ಲ. ಏಕೆಂದರೆ ಭಾರತೀಯ ದರ್ಶನದಲ್ಲಿ ಅದರಲ್ಲಿಯೂ ಜೈನ ಮತ್ತು ಬೌದ್ಧದರ್ಶನದಲ್ಲಿ, ಅಹಿಂಸಾತತ್ತ್ವ ಮತ್ತು ಅದರ ಆಚರಣೆ ಅತ್ಯಂತ ಸಮರ್ಥರೀತಿಯಲ್ಲಿ ನಿರೂಪಿತವಾಗಿದೆ. ಆದರೂ ಗ್ರಂಥಸ್ಥವಾದ ಈ ತತ್ತ್ವ ಗಾಂಧಿಜಿಯವರ ಬದುಕಿನಲ್ಲಿ ಜೀವಂತಗೊಂಡು ನಮ್ಮ ಸಮಕಾಲೀನ ಯುಗದಲ್ಲಿ ಒಂದು ಪವಾಡವನ್ನೇ ಎಸಗಿದೆ. ಸ್ಥೂಲವಾಗಿ ನೋಡಿದಾಗ ಅಹಿಂಸೆ ಎಂದರೆ ಕೊಲ್ಲದಿರುವುದು ಅಥವಾ ಹಿಂಸಿಸದಿರುವುದು ಎಂದಾದರೂ ಇದರ ಸೂಕ್ಷ್ಮ ಹಾಗೂ ವಿಸ್ತುೃತವಾದ ಅರ್ಥವನ್ನು ಗ್ರಹಿಸಲು ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೆರಡನ್ನೂ ಅವಲೋಕಿಸಬೇಕಾಗುತ್ತದೆ. ಸತ್ಯನಿಷ್ಠನಾದ ವಿe್ಞÁನಿಯಂತೆ ಅಹಿಂಸೆಯ ಪ್ರಯೋಗದಲ್ಲಿ ತೊಡಗಿದ ಗಾಂಧೀಜಿಯವರು ಇದು ಕೇವಲ ಒಂದು ಧಾರ್ಮಿಕ ನಿಯಮ ಮಾತ್ರವಲ್ಲ; ಇದು ಆರ್ಥಿಕ, ಸಾಮಾಜಿಕ, ರಾಜಕೀಯವೇ ಮುಂತಾದ ಎಲ್ಲ ರಂಗಗಳಲ್ಲಿಯೂ ಪ್ರತಿಧ್ವನಿತವಾಗುವಂಥ ವಿಶ್ವವ್ಯಾಪಿತತ್ತ್ವ. ಚರಾಚರಾತ್ಮಕವಾದ ಜಗತ್ತಲ್ಲವೂ ಈ ತತ್ತ್ವಕ್ಕೆ ತಲೆಬಾಗಿ ನಡೆಯುತ್ತದೆ- ಎಂಬುದನ್ನು ಕಂಡುಕೊಂಡರು. ವ್ಯಾಖ್ಯಾನ ಮಾನವನಿಂದ ಸಾಧ್ಯವಾಗದು, ತಮ್ಮಿಂದಂತೂ ಸಾಧ್ಯವಾಗಿಲ್ಲ ಎಂಬುದನ್ನು ಬಹುದುಃಖದಿಂದ ಹೇಳಿಕೊಂಡರು. ಆದರೂ ಅಹಿಂಸೆಯ ಸಾಧನೆ ತಮಗೆ ಆಳವಟ್ಟಷ್ಟರಿಂದಲೇ ಅದಕ್ಕಿರುವ ಅಗಾಧ ಶಕ್ತಿಯ ಅರಿವು ತಮಗಾಯಿತೆಂಬ ತೃಪ್ತಿಯೂ ಇವರಲ್ಲಿ ಕಾಣತ್ತದೆ. ವಿನಾಶಕಾರಿ ಅಸ್ತ್ರಗಳಿಂದೊದಗುವ ಯಾವ ಶಕ್ತಿಯೂ ಈ ಅಹಿಂಸೆಯ ಶಕ್ತಿಗೆ ಸರಿಸಮನಾಗಲಾರದೆಂದು ಇವರು ಹೇಳಿದರು. ಅಹಿಂಸೆಯಿಂದ ಸಾಧಿಸಲಾರದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದೇ ಇವರ ಅನುಭವ. ಆದರೆ ಅಹಿಂಸೆಯ ಸಾಧಕನಲ್ಲಿ ಅಮಿತವಾದ ಸಾಮಥ್ರ್ಯವಿರಬೇಕೆಂಬುದನ್ನು ಹೇಳಲು ಇವರು ಮರೆತಿಲ್ಲ. ಅಹಿಂಸೆಯ ಸಹಕಾರಿ ಧರ್ಮಗಳು: ಗಾಂಧೀಜಿ ಕಂಡಂತೆ, ಅಹಿಂಸೆಯ ಆಚರಣೆಯಲ್ಲಿ ಪ್ರೇಮ, ತ್ಯಾಗ, ಸಹನೆ ಮತ್ತು ಧೈರ್ಯ ಎಂಬ ಮೂಲಧಾತುಗಳು ಅಡಗಿವೆ. ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತಸ್ವರೂಪವೇ ಅಹಿಂಸೆ. ಪ್ರೀತಿ ಇರುವಲ್ಲಿ ಹಿಂಸೆಗೆ ಸ್ಥಾನವಿಲ್ಲ. ನಮಗೆ ಪ್ರಿಯವಾದುದನ್ನು ನಾವು ಎಂದೂ ನಾಶಪಡಿಸುವುದಿಲ್ಲ. ಪ್ರೀತಿಯ ಅಭಾವವಿದ್ದಲ್ಲಿ ಮಾತ್ರವೇ ಹಿಂಸೆ ಸಾಧ್ಯ. ದ್ವೇಷಕ್ಕೆ ದ್ವೇಷ ಪರಿಹಾರವಲ್ಲ. ಕ್ರೌರ್ಯಕ್ಕೆ ಏಕೈಕ ಪರಿಹಾರವೆಂದರೆ ಪ್ರೇಮ. ಈ ಅಂಶವನ್ನು ಗಾಂಧೀಜಿಯವರ ಮಾತಿನಲ್ಲಿಯೇ ಹೇಳುವುದಾದರೆ `ಶಸ್ತ್ರಸನ್ಯಾಸ ಮಾಡಿರುವ ನನ್ನಲ್ಲಿ ನನ್ನನ್ನು ದ್ವೇಷಿಸುವವರಿಗೆ ಕೊಡಲು ಪ್ರೇಮ ತುಂಬಿದ ಬಟ್ಟಲಲ್ಲದೆ ಬೇರೇನೂ ಇಲ್ಲ`. ಈ ಮಾತು ಅಹಿಂಸೆಗೆ ಇವರು ಕೊಟ್ಟ ಒಂದು ವ್ಯಾಖ್ಯಾನ. ಪುನರ್‍ಜನ್ಮದಲ್ಲಿ ನಂಬಿಕೆ ಇದ್ದ ಇವರು ಈ ಜನ್ಮದಲ್ಲಲ್ಲದಿದ್ದರೆ ಅನೇಕ ಜನ್ಮಗಳ ಅನಂತರವಾದರೂ ವಿಶ್ವದ ಜೀವಜಂತುಗಳನ್ನೆಲ್ಲ ತಮ್ಮ ಪ್ರೇಮಬಾಹುಗಳಿಂದ ಅಪ್ಪಲು ಬಯಸುತ್ತಾರೆ. ಅಹಿಂಸೆಯ ಸಾಧನೆ ತಕ್ಕ ಮಟ್ಟಿಗಾದರೂ ಫಲಪ್ರದವಾಗಬೇಕಾದರೆ ತ್ಯಾಗ ಅತ್ಯಂತ ಅವಶ್ಯಕವೆಂಬುದನ್ನು ಗಾಂಧೀಜಿ ಮನಗಂಡಿದ್ದರು. ಸ್ವಾರ್ಥವೆಂಬುದು ಒಂದು ರೀತಿಯ ಹಿಂಸೆ. ಶರೀರ ಸುಖ, ಕೀರ್ತಿ ಲಾಭ, ಇಲ್ಲವೆ ಅಹಂಕಾರದ ಆಡಂಬರ, ಇವುಗಳಿಗಾಗಿಯೇ ಒಬ್ಬರು ಮತ್ತೊಬ್ಬರನ್ನು ಹಿಂಸಿಸುವುದು. ವ್ಯಕ್ತಿಗಳಷ್ಟೇ ಏಕೆ, ರಾಷ್ಟ್ರಗಳೂ ಇದರಿಂದ ಮುಕ್ತವಲ್ಲ. ಕಾಮ, ಕ್ರೋಧ, ಮದ, ಮತ್ಸರಗಳಿಗೆ ಒಳಗಾಗಿರುವ ಮಾನವನಿಗೆ ಶುದ್ಧ ಅಹಿಂಸೆಯ ಅಚರಣೆ ಕೇವಲ ಮರೀಚಿಕೆಯೇ ಸರಿ. ಯಾವ ರೀತಿಯಿಂದಲೇ ಆಗಲಿ ತನ್ನ ಹಿತಕ್ಕಾಗಿ ಅನ್ಯರನ್ನು ಬಳಸುವುದು ಸ್ವಾರ್ಥ. ಇದೊಂದು ಮೃಗಧರ್ಮ. ಅನ್ಯರ ಒಳೀತಿಗಾಗಿ ತಾನು ಶ್ರಮಿಸುವುದೇ ತ್ಯಾಗ. ಆದ್ದರಿಂದ ಅಹಿಂಸೆ ಅಥವಾ ವಿಶ್ವಪ್ರೇಮಕ್ಕೆ ಯಾವ ತ್ಯಾಗವೂ ಹೆಚ್ಚೆನಿಸಲಾರದು. ಅಹಿಂಸೆಯ ಆಚರಣೆ ಬೇಕಾದ ಮತ್ತೊಂದು ಸಹಕಾರಿ ಧರ್ಮವೆಂದರೆ ಸಹನೆ. ತನ್ನನ್ನು ದ್ವೇಷಿಸುವವನನ್ನು ತಾನು ಪ್ರೀತಿಸಬೇಕೆಂದರೆ ಆಗ ಅವನಲ್ಲಿ ಬೆಟ್ಟದಷ್ಟು ಸಹನೆ ಬೇಕು. ಕೋಪ ಮತ್ತು ಮಾತ್ಸರ್ಯ ಅಹಿಂಸೆಯ ಪರಮ ವೈರಿಗಳು. ನಿರಹಂಕಾರಿಯಾದವನಿಗೆ ಮಾತ್ರ ಈ ಸಹನೆ ಸಾಧ್ಯ. ಗಾಂಧೀಜಿ ಉದಾಹರಿಸಿದಂತೆ, ತಾಯಿಯ ಪ್ರೇಮ ಸಹನೆಯ ಪ್ರತೀಕ.

ಇನ್ನು ಅಹಿಂಸೆಯ ಆಚರಣೆ ಹೇಡಿಯಾದವನಿಗೆ ಎಂದೂ ಸಾಧ್ಯವಿಲ್ಲ. ಗೀತೆಯಲ್ಲಿ ಹೇಳಿರುವ ಅಭಯತ್ವ ಕೈಗೂಡದವನು ಹಿಂಸೆಗೆ ಅಹಿಂಸೆಯನ್ನು ಹಿಂದಿರುಗಿಸಲು ಎಂದೂ ಶಕ್ತನಾಗುವುದಿಲ್ಲ. ಹಿಂಸಾವಾದಿಗಲಿಂದ ತನಗಾಗುವ ಎಲ್ಲ ರೀತಿಯ ಅಘಾತಗಳನ್ನೂ ಸಹಿಸಿಕೊಂಡು ಹಿಂಸಾವಾದಿಗಳ ಹೃದಯ ಪರಿವರ್ತನೆಯಾಗುವಂತೆ ಮಾಡುವುದೇ ಅಹಿಂಸೆಯ ಉದ್ದೇಶ. ಸತ್ಯಕ್ಕೆ ಹೊರತಾಗಿ ಮತ್ತಾವುದಕ್ಕೂ ಅಹಿಂಸಾಚರಣೆಯಲ್ಲಿ ತೊಡಗಿರುವವನು ಸಾಕ್ರಟಿಸ್‍ನಂತೆ, ಏಸುವಿನಂತೆ, ಸತ್ಯಕ್ಕಾಗಿ ಸಾವನ್ನೂ ಸ್ವಾಗತಿಸುತ್ತಾರೆ. ವಿಶ್ವದಲ್ಲಿಯೇ ಅಜೇಯವೆನಿಸಿದ ಬ್ರಿಟಿಷ ಸಾಮ್ರಾಜ್ಯದೆದುರು ಗಾಂಧೀಜಿಯವರ ಹೋರಾಟದ ಜೀವನ ಹಾಗೂ ಅe್ಞÁನಿಯೊಬ್ಬನ ಗುಂಡಿಗೆ ಬಲಿಯಾದ ಇವರ ಧೀರಮರಣ ಇವು ಇವರ ಅಭಯತ್ವದ ಜೀವಂತಸಾಕ್ಷಿ. ಅಹಿಂಸಾಚರಣೆಗೆ ಬೇಕಾದ ಅಭಯತ್ವಕ್ಕೆ ಈ ಮಹನೀಯರ ಇಡೀ ಜೀವನವೇ ನಿದರ್ಶನ.

ಅಹಿಂಸೆಯ ದಾರ್ಶನಿಕ ಸ್ವರೂಪ: ಅಹಿಂಸೆ ಎಂಬುದು ಒಂದು ಆತ್ಮಕಶಕ್ತಿ. ಅತ್ಯಂತ ಕ್ರೂರಿಯ ಹೃದಯದಲ್ಲಿಯೂ ಭಗವಂತನ ಅಂಶ ಇದೆ ಎಂಬುದೇ ಇದರ ಬುನಾದಿ. ಇದ ಯಾವಾಗಲೂ ಯಾರಿಗೂ ಕೆಟ್ಟದ್ದನ್ನು ಮಾಡುವಂಥದಲ್ಲ. ಇದನ್ನು ಅರಿತು ಅಚರಿಸುವವರೂ ಉಂಟು. ಅರಿಯದೇ ಆಚರಿಸುವ ಮುಗ್ಧ ಚೇತನಗಳೂ ಉಂಟು. ಇದನ್ನು ಎಷ್ಟೇ ಅರ್ಥಪೂರ್ಣವಾಗಿ ಆಚರಿಸಿದರೂ ಅದರಿಂದ ಸಾಕಷ್ಟು ಉತ್ತಮ ಫಲ ದೊರೆತೇ ದೊರೆಯುತ್ತದೆ. ಇದರ ಆಚರಣೆಗೆ ಪಂಡಿತನ ಪಾಂಡಿತ್ಯವೇ ಬೇಕೆಂದಿಲ್ಲ. ಸತ್ಯದಲ್ಲಿ ನಿಷ್ಠೆಯೊಂದಿದ್ದರೆ ಮಿಕ್ಕೆಲ್ಲ ಮಾರ್ಗದರ್ಶನವೂ ತಾನೇ ತಾನಾಗಿ ದೊರೆಯುತ್ತದೆ. ಇದನ್ನು ಆಚರಿಸುವನು ಮಾತ್ರ ಸಪ್ತವಾಗಿರುವ ದಿವ್ಯಶಕ್ತಿಯನ್ನು ಸಚೇತನ ಗೊಳಿಸುವ ಶಕ್ತಿ ಅಹಿಂಸೆಗಿದೆ. ಶುದ್ಧ ಅಹಿಂಸಾವ್ರತಿಗೆ ವಿಷ ತುಂಬಿದ ಹಾವಿನೊಂದಿಗೂ ಸಖ್ಯಸಾಧ್ಯವಾಗಬೇಕು. ಆದರೆ ತಾವು ಆ ಆದರ್ಶ ಸ್ಥಿತಿಯಿಂದ ಬಹು ಹಿಂದೆ ಬಿದ್ದಿರುವುದಾಗಿ ಗಾಂಧೀಜಿ ಒಮ್ಮೆ ಮನನೊಂದು ಹೇಳಿದ್ದಾರೆ. ಅಹಿಂಸೆಯ ಆಚರಣೆಯಿಂದ ಶತ್ರು ಮಿತ್ರನಾಗುತ್ತಾನೆ. ದ್ವೇಷಿಸುವವ ಪ್ರೀತಿಸಲು ಕಲಿಯುತ್ತಾನೆ. ನಿಂದಕನಲ್ಲಿ ಪಶ್ಚಾತ್ತಾಪ ಮೂಡುತ್ತದೆ. ಜೀವಂತ ನಿದರ್ಶನವಿಲ್ಲದಿದ್ದಾಗ ಈ ಮಾತು ಕೇವಲ ಕಲ್ಪನೆಯಂತೆ ಕಾಣಬಹುದು. ಅಹಿಂಸೆಯನ್ನು ನಂಬಿ ತುಸು ದೂರ ಆ ಮಾರ್ಗದಲ್ಲಿ ನಡೆದ ಭಾರತರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಟ್ಟಾಗಲೂ ಅನಂತರವೂ ಬ್ರಿಟಿಷ್ ಸಾಮ್ರಾಜ್ಯ ಹಾಗೂ ಅಲ್ಲಿನ ವಿಚಾರವಂತ ಜನರಲ್ಲಿ ಕಂಡ ಪ್ರೇಮ ಮತ್ತು ಮೈತ್ರಿಗಳು ವಿಶ್ವದ ಇತಿಹಾಸದಲ್ಲಿಯೇ ಕಂಡರಿಯದ ಒಂದು ವಿನೂತನ ಅನುಭವ.

ಪೂರ್ಣ ಅಹಿಂಸೆ ಸಾಧ್ಯವೇ? ನೂರಕ್ಕೆ ನೂರರಷ್ಟು ಅಹಿಂಸೆಯ ಆಚರಣೆ ಮಾನವ ಮಾನವನಾಗಿರುವವರೆಗೂ ಸಾಧ್ಯವಾಗದೆಂಬುದೇ ಗಾಂಧೀಜೀಯವರ ಮತ. ಮಾನವ ತನ್ನ ಶರೀರ ಪೋಷಣೆಗಾಗಿ ಅನ್ನಪಾನೀಯಗಳನ್ನು ತೆಗೆದುಕೊಳ್ಳುವಾಗ ಅನೇಕ ಸಸ್ಯ ಹಾಗೂ ಸೂಕ್ಷ್ಮ ಕ್ರಿಮಿಗಳ ನಾಶ ಅವನಿಗರಿವಿಲ್ಲದೇ ನಡೆಯುತ್ತದೆ. ಆಹಾರಧಾನ್ಯಗಳನ್ನು ಬೆಳೆವಾಗ ಮತ್ತು ದವಸಧಾನ್ಯಗಳನ್ನು ರಕ್ಷಿಸುವಾಗ ಅನೇಕ ಕ್ರಿಮಿಕೀಟಗಳ ನಾಶ ಅನಿವಾರ್ಯ. ಹುಚ್ಚಿದ್ದ ವ್ಯಕ್ತಿಯೊಬ್ಬ ತನ್ನೆದುರಿಗೆ ಕಂಡವರನ್ನೆಲ್ಲಾ ಕೊಲ್ಲುತ್ತ ಹೋಗುವಾಗ ಅವನನ್ನು ಗುಂಡಿಕ್ಕಿ ಕೊಲ್ಲುವುದು ಯುಕ್ತವಾಗಿಯೇ ಕಾಣುತ್ತದೆ. ಹಾಗೆಯೇ ವೈದ್ಯಕೊಟ್ಟ ಯಾವ ಔಷಧಿಗೂ ಮಣಿಯದ ನಿರಂತರ ವೇದನೆಯಿಂದ ಯಾತನೆಗೊಳ್ಳುತ್ತಿದ್ದ ತಮ್ಮ ಆಶ್ರಮದ ಕರು ಒಂದನ್ನು, ಕರುವಿನ ಮೇಲಿನ ಕರುಣೆಯಿಂದಲೇ ಕೊಲ್ಲಲು ಗಾಂಧೀಜಿಯವರೇ ಅನುಮತಿ ಕೊಟ್ಟದ್ದುಂಟು. ಪೋಲೀಸಿನವರಿಂದ ತಮ್ಮ ಹೆಂಡತಿ ಮಕ್ಕಳ ಮಾನಭಂಗವಾದದ್ದನ್ನು ಅಹಿಂಸಾಚರಣೆಯ ಹೆಸರಿನಲ್ಲಿ ಮೂಕ ಪ್ರೇಕ್ಷಕರಂತೆ ನೋಡಿ ಬಂದ ಬೆಟ್ಟೆಯ ಎಂಬ ಗ್ರಾಮದ ಜನರ ನಡತೆಯನ್ನು `ಇದು ಕೇವಲ ಅಹಿಂಸೆಯ ದುರುಪಯೋಗ` ಎಂದು ಗಾಂಧೀಜಿಯವರೇ ಖಂಡಿಸಿದರು. ಅಹಿಂಸೆ ಸಾಧ್ಯವಾಗದಿದ್ದಾಗ ಹಿಂಸೆಯಿಂದಲಾದರೂ ಅವರ ಮಾನರಕ್ಷಣೆ ಮಾಡಬೇಕಾಗಿದ್ದಿತೆಂಬುದೇ ಗಾಂಧೀಜೀಯವರ ಅಭಿಮತ.

ಅಹಿಂಸೆಯ ಹೆಸರಿನಲ್ಲಿ ಮಾನವ ಹೇಡಿಯಾಗಬೇಕೆಂದು ಗಾಂಧೀಜಿ ಎಂದೂ ಬಯಸಲಿಲ್ಲ. ಹಿಂಸೆಯನ್ನು ಆತ್ಮಬಲದಿಂದ ಎದುರಿಸಲು ಕಲಿಯಬೇಕೆಂಬುದೇ ಅಹಿಂಸೆಯ ಮೂಲ ಸಂದೇಶ. ಹೇಡಿತನ ಮತ್ತು ಹಿಂಸೆ ಈ ಎರಡರ ನಡುವೆ ಯಾವುದಾದರೂ ಒಂದನ್ನು ಆರಿಸಬೇಕಾದಲ್ಲಿ ನಾನು ಹಿಂಸೆಯ ಮಾರ್ಗವನ್ನೆ ತುಳಿದೇನು ಎಂದು ಗಾಂಧೀಜಿ ಹೇಳಿದ್ದರು. ಅಂದಮೇಲೆ ಅಹಿಂಸೆ ಸಾಧ್ಯವಾದಾಗ ಹಿಂಸೆಯೇ ಮೇಲು, ಹೇಡಿತನವಂತೂ ಎಂದಿಗೂ ಕೂಡದು. ಗುಣಮಟ್ಟದಿಂದ ನಿರ್ಣಯಿಸಬಹುದಾದರೆ ಅಹಿಂಸಯೇ ಪರಮಧರ್ಮ, ಅದಕ್ಕೆ ಕೀಳಾದದ್ದು ಹಿಂಸೆ, ಹೇಡಿತನವಂತೂ ಅದಕ್ಕಿಂತ ಕೀಳಾದದ್ದು, ಅಂದಮೇಲೆ ಅಹಿಂಸೆಯನ್ನು ಗುರುತಿಸುವಾಗ ಕೇವಲ ಒಂದು ಕಾರ್ಯದ ಸ್ಥೂಲ ರೂಪÀವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅದರಲ್ಲಡಗಿರುವ ಉದ್ದೇಶ ಅದರಿಂದಾಗುವ ಫಲ ಮತ್ತು ಅದು ಅನುಸರಿಸುವ ಮಾರ್ಗ ಇವುಗಳ ಸಮಗ್ರ ಚಿತ್ರ ನಮ್ಮ ಕಲ್ಪನೆಗೆ ಬರಬೇಕು. ಪೂರ್ಣ ಅಹಿಂಸೆಯ ಆಚರಣೆ ಒಂದು ಮಹದಾದರ್ಶ ಎನ್ನುವುದಂತೂ ನಿಜ. ಮಾನವನ ಬದುಕು ಸಾಧ್ಯವಾಗಬೇಕಾದರೆ ಸ್ವಲ್ಪಮಟ್ಟಿನ ಹಿಂಸೆ ಅನಿವಾರ್ಯವೆಂದೇ ಕಾಣುತ್ತದೆ. ಇದನ್ನು ವ್ಯಾವಹಾರಿಕವಾಗಿ ಗುರುತಿಸಿದ ಗಾಂಧೀಜಿ, ಹಿಂಸೆಯ ವಲಯವನ್ನು ಆದಷ್ಟು ಕಡಿಮೆ ಮಾಡುವುದು ಮಾನವನ ಪ್ರಗತಿಯ ಚಿಹ್ನೆ ಎಂದರು. ಈ ರೀತಿಯ ಅತ್ಯಲ್ಪ ಹಿಂಸೆ ತನ್ನ ಬದುಕಿಗೆ ಅನಿವಾರ್ಯ ಹಾಗೂ ಇದು ತನ್ನ ದೌಬಲ್ಯವೇ ಸರಿ ಎಂದರಿತು ಮಾನವ ಹೆಚ್ಚು ನಮ್ರತೆಯಿಂದ ಜಗತ್ತಿನಲ್ಲಿ ವ್ಯವಹರಿಸುವಂತಾಗಬೇಕು ಎಂದು ಗಾಂಧೀಜಿ ಹೇಳಿದರು.

ತಮ್ಮ ಬಾಳಪರ್ಯಂತ ಗೌರವಿಸಿ ಆಚರಿಸುತ್ತಿದ್ದ ಅಸ್ತೇಯ, ಅಸಂಗ್ರಹ, ಬ್ರಹ್ಮಚರ್ಯ, ಶರೀರಶ್ರಮ, ಸರ್ವಧರ್ಮಸಮಾನತ್ವ, ಸ್ವದೇಶಿ ಮುಂತಾದ ಏಕಾದಶ ವ್ರತಗಳೂ ಮೂಲತಃ ಸತ್ಯ ಮತ್ತು ಅಹಿಂಸೆಯ ಪೂರಕ ತತ್ತ್ವಗಳೇ ಸಂಗ್ರಹಿಸಿಡುವುದು ಅನ್ಯರ ಅವಶ್ಯಕತೆಗಳನ್ನು ಮರೆತು ನಾವು ಅವರಿಗೆಸಗಿದ ಹಿಂಸೆ ಇಲ್ಲವೇ ಪೀಠೋಪಕರಣ, ಉಡುಪು ವಸ್ತ್ರಗಳಿಂದಲೂ ತಾವು ಅಹಿಂಸಾಚರಣೆಯ ಉಲ್ಲಂಘನೆ ಮಾಡುತ್ತೇವೆಂದೂ ಗಾಂಧೀಜಿ ಯೋಚಿಸಿದರು. ಈ ಭಾವನೆಯ ಫಲವಾಗಿಯೇ ತಮ್ಮ ವಸ್ತ್ರ ಉಡುಪುಗಳಲ್ಲಿವರು ನಿರಾಡಂಬರವನ್ನು ಕ್ರಮಕ್ರಮವಾಗಿ ಸಾಧಿಸಿದರು.

ಅಹಿಂಸೆಯ ತತ್ತ್ವದಲ್ಲಿ ಅಂತರ್ಗತವಾಗಿರುವ ಸೂಕ್ಷ್ಮ ಅಂಶಗಳು ಇನ್ನೂ ಅಗಾಧವಾಗಿದ್ದು ಅವುಗಳ ವೈe್ಞÁನಿಕ ಸಂಶೋಧನೆ ಮಾನವವಂಶ ಇರುವವರೆಗೂ ನಡೆದುಕೊಂಡು ಹೋಗುತ್ತದೆಂಬುದಕ್ಕೆ ಗಾಂಧೀಜಿ ಮತ. ಅಹಿಂಸೆಯತ್ತ ಕ್ರಮಗತಿಯಲ್ಲಿ ಬೆಳೆಯುತ್ತಿರುವುದೇ ಮಾನವನ ಇತಿಹಾಸ. ಮೃಗಗಳ ಬೇಟೆಯಿಂದ ಜೀವಿಸುತ್ತಿದ್ದ ಆದಿಮಾನ ಅಹಿಂಸೆಯ ಜಾಡನ್ನು ತುಳಿದಂತೆಲ್ಲ ಕೃಷಿಯಿಂದ ಬದುಕಲು ಕಲಿತ. ಸೂಕ್ಷ್ಮಸಂವೇದಿಯಾದ ಮಾನವನಿಗೆ ಹಿಂಸೆ ಏಕೋ ಮುಜುಗರವೆನಿಸಿತೆಂಬುದು ಮಾನವನ ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮಗೆ ಕಂಡುಬರುತ್ತದೆ.

ಅಹಿಂಸೆ ಹಾಗೂ ಸತ್ಯಾಗ್ರಹ: ಅಸತ್ಯದೊಡನೆ ಮಾಡುವ ಅಸಹಕಾರವನ್ನು ಅಥವಾ ಸತ್ಯಕ್ಕಾಗಿ ಎಸಗುವ ಆಗ್ರಹವನ್ನು ಗಾಂಧೀಜಿ ಸತ್ಯಾಗ್ರಹ ಎಂದು ಕರೆದರು. ಈ ಅಸಹಕಾರ ಯಾವ ಕಾರಣದಿಂದಲೂ ಅಹಿಂಸೆಗೆ ವಿರುದ್ಧವಾಗುವಂತಿಲ್ಲ. ಅದು ಹಿಂಸಾತ್ಮಕವಾದರೆ ಆಗ ಅದು ದುರಾಗ್ರಹವೆನಿಸುತ್ತದೆ. ಆದ್ದರಿಂದಲೇ ಸತ್ಯಾಗ್ರಹಿ ಪೂರ್ಣ ಅಹಿಂಸವಾದಿಯಾಗಬೇಕೆಂಬ ನಿಯಮ. ತಾನು ಮಾಡುವ ಅಸಹಕಾರದಿಂದ ಎದುರಾಳಿಗೆ ಯಾವ ರೀತಿಯಿಂದಲೂ ಕೆಡುಕಾಗಬಾರದು. ಸತ್ಯಾಗ್ರಹಿ ಸದಾ ಎದುರಾಳಿಯ ಒಳಿತನ್ನೇ ಗಮನದಲ್ಲಟ್ಟಿರಬೇಕು. ಅಸತ್ಯದಕ್ಕಂಟಿದ ಅವನ ಮನಸ್ಸನ್ನು ಪರಿವರ್ತಿಸಿ ಅವನ ಆತ್ಮೋನ್ನತಿಗೆ ಸಹಾಯ ಮಾಡುವುದೇ ಈ ಸತ್ಯಾಗ್ರಹದ ಮೂಲ ಉದ್ದೇಶ. ಎದುರಾಳಿಯಿಂದ ಸತ್ಯಾಗ್ರಹಿಗೆ ಎಷ್ಟೇ ನೋವಾದರೂ ಅದನ್ನು ಸಹಿಸುವ ಹೊಣೆಗಾರಿಕೆ ಇವನದು. ಸತ್ಯಾಗ್ರಹಿಯಲ್ಲಿ ಯಾವ ರಹಸ್ಯ, ಗುಟ್ಟು ಇಲ್ಲವೇ, ಕುತಂತ್ರವೂ ಇರಬಾರದು. ಸತ್ಯಾಗ್ರಹಿ ತಾನು ಮಾಡುವ ಕಾರ್ಯವಿಧಾನಗಳನ್ನೆಲ್ಲ ಪೂರ್ವಭಾವಿಯಾಗಿ ಎದುರಾಳಿಗೆ ತಿಳಿಸಿ ಅವನು ಅದಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಳ್ಳಲು ನೆರವಾಗಬೇಕು. ಆ ಕಾರಣದಿಂದಲೇ ಗಾಂಧೀಜಿಯವರು ತಾವೆಸಗಿದ ಎಲ್ಲ ಸತ್ಯಾಗ್ರಹಗಳಿಗೂ ಮುನ್ನ ಅದರ ಕ್ರಮ ಮತ್ತು ಉದ್ದೇಶಗಳನ್ನು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿ ಅವರಿಗೆ ಯಾವ ರೀತಿಯ ಇಕ್ಕಟ್ಟೂ ಆಗದಂತೆ ನೋಡಿಕೊಳ್ಳ್ಳುತ್ತಿದ್ದರು. ಇಷ್ಟೆಲ್ಲ ಏಕೆಂದರೆ ಸತ್ಯಾಗ್ರಹದಲ್ಲಿ ಹಿಂಸೆ ವಜ್ರ್ಯ.

ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹಿಂಸಾಚರಣೆಯಲ್ಲಿ ಮಿಕ್ಕ ರಾಷ್ಟ್ರಗಳಿಗಿಂತಲೂ ಮುಂದೆ ಹೋಗಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡುವಂತಾಗಬೇಕು. - ಗಾಂಧೀಜಿಯವರ ಈ ನಂಬಿಕೆಗೆ ಪುಷ್ಟಿ ದೊರೆಯುವಂಥ ಕೆಲವು ನಿದರ್ಶನಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿರುವುದು ಒಂದು ಆಶಾದಾಯಕ ಚಿಹ್ನೆ. ಅಮೆರಿಕದ ಅಹಿಂಸಾತತ್ತ್ವದಿಂದ ಪ್ರೇರಿತನಾದ ಮಾರ್ಟಿನ್ ಲೋಥರ್ ಕಿಂಗ್ ದ್ವೇಷರಹಿತ ಹೋರಾಟದಿಂದ ಬಿಳಿ ಜನರ ಮನಸ್ಸನ್ನೂ ಮಾರ್ಪಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ನಿದÀರ್ಶನ ಇನ್ನೂ ಅಚ್ಚ ಹಸುರಾಗಿದೆ. ಇಪ್ಪತ್ತನೆಯ ಶಮಾನದಲ್ಲಿ ಬಹು ವಿಚಾರಪರ ದಾರ್ಶನಿಕನೆನಿಸಿದ ಬರ್‍ಟ್ರೆಂಡ್ ರಸಲ್ ಯುದ್ಧ ದಾಹದಿಂದ ಉನ್ಮತ್ತರಾಗಿ, ವಿನಾಶಕಾರಕವಾದ ಅಣ್ವಸ್ತ್ರಗಳನ್ನು ಸೃಷ್ಟಿಸಿ, ಸರ್ವನಾಶಕ್ಕೆ ಉದ್ಯುಕ್ತರಾಗಿದ್ದ ಶಕ್ತ ರಾಷ್ಟ್ರಗಳ ಮನ ಒಲಿಸಲು ಬಳಸಿದ ಅಸ್ತ್ರದ ಸ್ವರೂಪವಾದರೂ ಏನು? ಶಾಂತಿಪ್ರಿಯರಾದ ಜನರೆಲ್ಲ ತಮ್ಮ ಹಿಂದೆ ಸಾಲ್ಗೂಡಿಸಿ ಲಂಡನ್ ನಗರದ ಬೀದಿಗಳಲ್ಲಿ ಮೈಲುಗಟ್ಟಳೆ, ಮಳೆ ಚಳಿಯನ್ನು ಲೆಕ್ಕಿಸದೆ, ಪಾದಯಾತ್ರೆ ನಡೆಸಿ ವಿಶ್ವದ ಜನತೆಯ ಅಭಿಪ್ರಾಯವನ್ನೆಲ್ಲ ಶಾಂತಿಯ ಸಂದೇಶದತ್ತ ವಾಲುವಂತೆ ಮಾಡಿದ ರಸಲ್ಲನ ಈ ಮಾರ್ಗ ಗಾಂಧೀಜಿಯವರ ದಂಡಿಯಾತ್ರೆಯ ಪುನಃ ಸ್ಮರಣೆಯಂತಿದೆ.

ಹಾಗೆ ನೋಡುವುದಾದರೆ ಮಾನವ ಅನಾದಿಕಾಲದಿಂದ ಹಿಂಸಾಮಾರ್ಗವನ್ನು ತುಳಿದು ಅದರಲ್ಲಿ ನೂರಾರು ಪ್ರಯೋಗಗಳನ್ನು ಮಾಡಿ ಅದರಿಂದ ಈಗ ಬೇಸತ್ತಿದ್ದಾನೆ. ಅದು ಈಗ ಗತಕಾಲದ ಪಳೆಯುಳಿವಿಕೆಯಂತಿದೆ. ಆದ್ದರಿಂದಲೇ ಈಗ ಅವನು ಅಹಿಂಸೆಯ ಅರುಣೋದಯದತ್ತ ಆಶಾವಾದಿಯಾಗಿ ಕಣ್ತೆರೆಯುತ್ತಿದ್ದಾನೆ. (ಎ.ಎಲ್.ಎಸ್.)


ಗಾಂಧೀಜೀಯವರ ಅನಾಸಕ್ತಿಯೋಗ: ಗಾಂಧೀಜಿಯವರ ಜೀವನದರ್ಶನವನ್ನು ಒಂದು ಮಾತಿನಲ್ಲಿ ಹೇಳಬೇಕೆಂದರೆ ಅದನ್ನು ಅನಾಸಕ್ತಿಯೋಗ ಎಂದೇ ಕರೆಯಬಹುದಾದರೂ ಈ ಮಾತನ್ನು ಅವರು ಒಂದು ನಿರ್ದಿಷ್ಟವಾದ ಅರ್ಥದಲ್ಲಿ ಬಳಸಿದ್ದಾರೆ. ಭಗವದ್ಗೀತೆಯಲ್ಲಿ ತಾವು ಕಂಡ ತಾತ್ತ್ವಿಕ ಸ್ವರೂಪವೇನೆಂಬುದನ್ನು ವಿವರಿಸುವಾಗ ಅನಾಸಕ್ತಿಯೋಗ ಎಂಬ ಮಾತನ್ನು ಅವರು ವಿಶಿಷ್ಟವಾಗಿ ಬಳಸಿದ್ದಾರೆ. ತಮ್ಮ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ತಮ್ಮ ನಡೆ ನುಡಿಯ ಕೈಪಿಡಿಯಂತಿದ್ದು ತಮಗೆ ಮಾರ್ಗದರ್ಶನವಿತ್ತ ಭಗವದ್ಗೀತೆಯ ವಿಚಾರದಲ್ಲಿ ಗಾಂಧೀಜಿಯವರಿಗೆ ಅಪಾರ ಗೌರವ, ಅದರ ವಿಚಾರದಲ್ಲಿ ತಮಗಿದ್ದ ಭಕ್ತಿಗೌರಗಳನ್ನು ವಿವರಿಸಲು ಅತ್ಯಂತ ಗಂಭೀರವಾದ ಹಾಗೂ ಮನಮುಟ್ಟುವಂಥ ರೂಪಕಗಳನ್ನವರು ಬಳಸುತ್ತಾರೆ. ತಮ್ಮ ಭೌತ ಶರೀರಕ್ಕೆ ಜನ್ಮವಿತ್ತು ಸಲಹಿದ ತಾಯಿ ಹೇಗೋ ಹಾಗೆಯೇ ತಮ್ಮ ಆಂತರಿಕ ವ್ಯಕ್ತಿತ್ವಕ್ಕೆ ಪೋಷಣೆಯಿತ್ತು. ಅವರ ಧಾರ್ಮಿಕ ಶ್ರದ್ಧೆಗೆ ನೀರೆರೆದು ಬೆಳೆಸಿದ ಭಗವದ್ಗೀತೆ ಅವರಿಗೆ ಜೀವಂತ ಮಾತೆ. ಆ ಕಾರಣದಿಂದ ಅವರು ಗೀತೆಯಲ್ಲಿ ತಪ್ಪದೇ ಪರಿಹಾರ ದೊರೆತದ್ದರಿಂದ ಅದು ಭಾಗದ ಕಾಮಧೇನು. ಅಷ್ಟೇ ಏಕೆ, ಅದು ಅವರ ಧಾರ್ಮಿಕ ಸಮಸ್ಯೆಗಳ ಅರ್ಥಕೋಶ. ಆತ್ಮದರ್ಶನಕ್ಕೆ ಭಗವದ್ಗೀತೆಯಲ್ಲಿ ಅದ್ವಿತೀಯಮಾರ್ಗ ಒಂದಿದೆ ಎಂಬುದನ್ನು ಅವರು ಚೆನ್ನಾಗಿ ಗ್ರಹಿಸಿದ್ದರೆಂಬುದಕ್ಕೆ ಈ ಮಾತುಗಳೇ ಸಾಕ್ಷಿ.


ವೈe್ಞÁನಿಕ ಯುಗದ ಶಿಶುವಾದ ಯುವಕ ಗಾಂಧಿ ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಥಿಯಾಸಫಿಸ್ಟ್ ಸೋದರರಿಬ್ಬರಿಂದಾಗಿ ಮೊಟ್ಟಮೊದಲಿಗೆ ಭಗವದ್ಗೀತೆಯನ್ನು ಓದು ಅದರಿಂದ ಸ್ವಲ್ಪಮಟ್ಟಿಗೆ ಪ್ರಭಾವಿತರಾದರು. ದಿನಕಳೆದಂತೆಲ್ಲ ಅವರಿಗೆ ಗೀತೆಯ ಆಕರ್ಷಣೆ ಹೆಚ್ಚುತ್ತ ಬಂದು ಕೊನೆಗೆ ತತ್ತ್ವe್ಞÁನಕ್ಕೆ ಅದೇ ಸರ್ವೋತ್ತಮ ಗ್ರಂಥ ಎಂದೆನ್ನುವಂತಾಯಿತು. ಈ ರೀತಿಯ ವಿಶಿಷ್ಟವಾದ ಅನುಭವಕ್ಕೆ ಅವರಿಗೆ ಸ್ವಭಾವಜನ್ಯವಾಗಿ ಬಂದಿದ್ದ ಧಾರ್ಮಿಕ ತೃಷೆಯೇ ಬಹುಮಟ್ಟಿಗೆ ಕಾರಣವೆನ್ನಬಹುದು. ಗೀತೆಯ ಸಾರಸರ್ವಸ್ವವನ್ನೂ ತಿಳಿಯಬೇಕೆಂಬ ದಾಹ ಹೆಚ್ಚುತ್ತ ಬಂದಂತೆ, ಅದರ ವಿಚಾರÀದಲ್ಲಿ ಸಂಪ್ರದಾಯಬದ್ಧವಾದ ಭಾಷ್ಯಗಳೇ ಅಲ್ಲದೆ ಟಿಳಕರಂಥ ಪ್ರಾಜ್ಞರ ಪಾಂಡಿತ್ಯಪೂರ್ಣ ವ್ಯಾಖ್ಯೆಗಳನ್ನು ಓದು ನೋಡಿದರು. ಭಗವದ್ಗೀತೆಯನ್ನು ಪಂಡಿತರ ಭಾಷ್ಯಗಳೊಂದಿಗೆ ಓದಿದಾಗ ಗಾಂಧಿಗೆ ಅಷ್ಟೊಂದು ತೃಪ್ತಿ ದೊರೆತಂತೆ ಕಾಣಲಿಲ್ಲ. ಆದ್ದರಿಂದ ಪಾಂಡಿತ್ಯದ ಭಾರವನ್ನು ತೊರೆದು ಕೇವಲ ಉಪಾಸಕನಾಗಿ ಅತ್ಯಂತ ನಮ್ರತೆಯಿಂದ ಗೀತೆಯನ್ನು ಮೊರೆಹೊಕ್ಕಾಗ ಅದರಷ್ಟು ಸುಲಭಸಾಧ್ಯವಾದ ಧಾರ್ಮಿಕ ಗ್ರಂಥ ಮತ್ತೊಂದಿಲ್ಲ ಎಂಬುದು ಅವರಿಗೆ ಅರಿವಾಯಿತು.

ಸ್ಥೂಲವಾಗಿ ನೋಡಿದರೆ, ಯುದ್ಧದಿಂದ ವಿಮುಖನಾದ ಕ್ಷತ್ರಿಯ ಶ್ರೇಷ್ಠನಾದ ಅರ್ಜುನನನ್ನು ಯುದ್ಧೋನ್ಮುಖವಾಗಿ ಮಾಡಲು ಭಗವಾನ್ ಶ್ರೀಕೃಷ್ಣ ಕೊಟ್ಟ ಸಂದೇಶವೇ ಭಗವದ್ಗೀತೆ. ಕರ್ತವ್ಯ ವಿಮೂಢನಾಗಿ ವೀರನಲ್ಲಿ ಕರ್ತವ್ಯದ ಸ್ಮರಣೆಯನ್ನು ಮೂಡಿಸಿ ಅವನನ್ನು ಕಾರ್ಯಪ್ರವೃತ್ತನನ್ನಾಗಿ ಮಾಡಲು, ಭಗವಂತ ಒಟ್ಟು ಸೃಷ್ಟಿಯ ರಹಸ್ಯ ಮತ್ತು ಉದ್ದೇಶ, ಅದರಲ್ಲಿ ಪ್ರe್ಞÁಶೀಲನಾದ ಮಾನವನ ಪಾತ್ರ, ಧರ್ಮಾಧರ್ಮಗಳ ನೈಜಸ್ವರೂಪÀವೇ ಮುಂತಾದ ಉಪನಿಷತ್ತಿನ ಸಾರಸರ್ವಸ್ವವಾದ ದಾರ್ಶನಿಕ ತತ್ತ್ವಗಳನ್ನೆಲ್ಲ ಪ್ರಾಸಂಗಿಕವಾಗಿ ವಿವರಿಸುತ್ತಾನೆ. ಗೀತಾಚಾರ್ಯನ ಈ ವಿವರಣೆಯಲ್ಲಿ ಭಕ್ತಿ, ಕರ್ಮ, e್ಞÁನ ಹಾಗೂ ಅಭ್ಯಾಸಯೋಗಗಳು ಹಾಸುಹೊಕ್ಕಾಗಿ ಬೆಳೆದು ಬರುತ್ತವೆ. ಅರ್ಜುನನಲ್ಲಿ ಕರ್ತವ್ಯಸ್ಮರಣೆಯನ್ನುಂಟುಮಾಡುವುದೇ ಗೀತೆಯ ಪರಮ ಧ್ಯೇಯವಾದ್ದರಿಂದ ಇದು ಕರ್ಮಯೋಗದ ಒಂದು ವ್ಯಾಖ್ಯಾನ ಎಂದು ಟಿಳಕ ಮುಂತಾದವರು ಮಾಡಿದ ಸಿದ್ಧಾಂತವನ್ನು ಗಾಂಧಿ ಗೌರವದಿಂದಲೇ ಓದು ತಿಳಿದುಕೊಂಡರು. ಅದೆ ತಾವು ತಮ್ಮ ಜೀವನಪರ್ಯಂತ ಸಾಧಿಸುತ್ತ ಬಂದ ಅಹಿಂಸೆಯ ಸಂದೇಶವನ್ನು ಭಗವದ್ಗೀತೆಯಲ್ಲಿ ಕಂಡದ್ದು ಅವರ ಒಂದು ವೈಶಿಷ್ಟ್ಯ. ತಮ್ಮ ಈ ಅನುಭವವನ್ನು ವಿವರಿಸಲು ಅಲ್ಲೊಂದು ಇಲ್ಲೊಂದು ಗೀತಾ ಶ್ಲೋಕಗಳನ್ನು ಅವರು ಉದಾಹರಿಸುತ್ತಿದ್ದುದುಂಟು. ಇದನ್ನು ಕಂಡ ಇವರ ಮಿತ್ರರು, ಅದರಲ್ಲಿಯೂ ಮುಖ್ಯವಾಗಿ ಅವರ ಆತ್ಮಕಥನವನ್ನು ಬರೆಯಲು ಪ್ರೇರೇಪಿಸಿದ ಸ್ವಾಮಿ ಆನಂದರು ಗಾಂಧೀಜಿ ತಾವು ಕಂಡ ರೀತಿಯಲ್ಲಿ ಇಡೀ ಭಗವದ್ಗೀತೆಯನ್ನು ಏಕೆ ವಿವರಿಸಬಾರದು ಎಂಬ ಸೂಚನೆಯನ್ನು ಕೊಟ್ಟರು. ಅದರ ಫಲವಾಗಿ ಗಾಂಧೀಜಿ ಭಗವದ್ಗೀತೆಗೆ ಅತ್ಯಂತ ಸುಲಭವಾದ ರೀತಿಯಲ್ಲಿ, ಗುಜರಾತಿಭಾಷೆಯಲ್ಲಿ ಅರ್ಥವಿವರಣೆ ಬರೆದರು. ಗೀತೆಗೆ ಈ ರೀತಿ ವಿವರಣೆ ಬರೆಯಲು ತಮಗೆ ಪಾಂಡಿತ್ಯದ ಅರ್ಹತೆ ಏನೂ ಇಲ್ಲವೆಂಬುದನ್ನು ಚೆನ್ನಾಗಿ ಮನಗಂಡಿದ್ದರು ಅವರು, ಗೀತೆಯ ಮಾರ್ಗದÀರ್ಶನದಲ್ಲಿ ತಾವು ಬದುಕಿದ ನಲವತ್ತುವರ್ಷಗಳ ಪ್ರಯೋಗಾತ್ಮಕ ಜೀವನದ ಅನುಭವದ ಹಿನ್ನೆಲೆಯಲ್ಲಿ ಈ ಪ್ರಯತ್ನ ಮಾಡಿದ್ದೇನೆಂದು ಸ್ಪಷ್ಟಪಡಿಸಿದ್ದಾರೆ. ಮಹಾಭಾರತವನ್ನು ಶ್ರದ್ಧೆಯಿಂದ ಓದಿ, ಮಹಾಭಾರತದ ಕರ್ತೃ ಭೌತಿಕ ಯುದ್ಧದ ನಿರರ್ಥಕತೆಯನ್ನು ಸಿದ್ಧಾಂತಪಡಿಸುವಲ್ಲಿ ಪೂರ್ಣ ಯಶಸ್ವಿಯಾಗಿದ್ದಾನೆಂಬುದು ಗಾಂಧೀಜಿ ಮನಗಂಡರು. ಮಹಾಭಾರತದ ಕೊನೆಯಲ್ಲಿ ವ್ಯಾಸರು ಗೆದ್ದವರನ್ನು ಅಳಿಸಿ ಅದಕ್ಕಾಗಿ ಅವರು ಪಶ್ಚಾತ್ತಾಪ ಪಡುವಂತೆ ಮಾಡಿದ್ದಾರೆ. ಸೋತು ಸತ್ತವರಿಗಿಂತಲೂ ಗೆದ್ದು ಉಳಿದವರೇನು ಹೆಚ್ಚು ಸುಖಪಟ್ಟಂತೆ ಕಾಣುವುದಿಲ್ಲ. ಅಂದಮೇಲೆ ಮಹಾಭಾರತಕ್ಕೆ ಮಕುಟಪ್ರಾಯವಾದ ಭಗವದ್ಗೀತೆಯಲ್ಲಿ, ದಾರ್ಶನಿಕ ಕವಿ ವ್ಯಾಸರು, ಅರ್ಜುನನನ್ನು ಇಂಥ ನಿರರ್ಥಕವಾದ ಭೌಥಿಕ ಯುದ್ಧಕ್ಕೆ ಧರ್ಮದ ಹೆಸರಿನಲ್ಲಿ ಪ್ರಚೋದಿಸಿದರೆಂಬುದು ಮೂಲ ಗ್ರಂಥದ ಧ್ವನಿ ಸರಿಹೊಂದುವಂತೆ ಗಾಂಧೀಜಿಗೆ ಕಾಣಲಿಲ್ಲ. ಆದ್ದರಿಂದ ಗೀತೆಯ ಮೊದಲ ಅಧ್ಯಾಯದಲ್ಲಿ ಬರುವ ಕುರುಕ್ಷೇತ್ರದ ರಣರಂಗ ಕವಿಯ ಒಂದು ಉಪಮೆ ಮಾತ್ರವಾಗಿ ಗಾಂಧೀಜಿಗೆ ಕಂಡಿತು. ಅಷ್ಟೇ ಅಲ್ಲ ರಣರಂಗದಲ್ಲಿ ಕಾದಲು ನಿಂತ ಇಕ್ಕೆಲದ ಸೇನೆಗಳೂ ಸಾಂಕೇತಿಕವೆಂದೇ ಅವರು ಗ್ರಹಿಸಿದರು. ಗೀತೆಯಲ್ಲಿ ಎಲ್ಲೆಲ್ಲಿ ಸಂಹಾರದ ಪ್ರಸ್ತಾಪ ಬರುತ್ತದೋ ಅಲ್ಲೆಲ್ಲ ಬೇರೆ ಅರ್ಥವಿರಬೇಕೆಂಬ ಮನವರಿಗೆ ಅವರಿಗಾಯಿತು. ಪ್ರತಿ ಮಾನವನ ಹೃದಯದಲ್ಲಿಯೂ ಸದಾ ಓಳಿತು ಕೆಟ್ಟದು, ಯುಕ್ತ ಅಯುಕ್ತ, ಧರ್ಮ ಅಧರ್ಮಗಳ ನಡುವೆ ಹೋರಾಟ ನಡೆಯುತ್ತಲೇ ಇರುತ್ತದೆ. ಈ ಹೋರಾಟದಲ್ಲಿ ಕೊನೆಗಂತೂ ಧರ್ಮಕ್ಕೆ ಜಯ ಖಂಡಿತ. ಈ ಸಂದೇಶವನ್ನು ಸಾರುವುದೇ ಗೀತೆಯ ಉದ್ದೇಶ. ಇದಕ್ಕಾಗಿ ಕುರುಕ್ಷೇತ್ರದಂಥ ಒಂದು ರೂಪಕವನ್ನು ಬಳಸಿಕೊಂಡು ಬಹು ಮಾರ್ಮಿಕವಾಗಿ ಈ ಉದ್ದೇಶವನ್ನು ವ್ಯಾಸರು ಸಾಧಿಸಿದ್ದಾರೆಂಬುದು ಗಾಂಧೀಜಿ ಮತ.

ಈ ಹಿನ್ನೆಲೆಯಲ್ಲಿ ನೋಡಿದಾಗ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಕರ್ತವ್ಯ ಪ್ರಜ್ಞೆಯ ಸ್ವರೂಪವೇ ಬೇರೆಯಾಗಿ ಕಾಣುತ್ತದೆ. ಈ ಬೋಧನೆಯಲ್ಲಿ ಗಾಂಧೀಜಿಯವರಿಗೆ ಅಹಿಂಸೆಯೇ ಮೂರ್ತಿವೆತ್ತಂತಿದೆ. ಇದನ್ನು ತಿಳಿಯಬೇಕಾದರೆ ಶಸ್ತ್ರ ಸಂನ್ಯಾಸ ಮಾಡಿನಿಂತ ಅರ್ಜುನನ ಮಾನಸಿಕ ಸ್ಥಿತಿಯನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹುಟ್ಟುವೀರನಾದ ಅರ್ಜುನ ಯುಧಕ್ಕೆ ಹೊಸಬನಲ್ಲ; ಮಾನವರ ಮೇಲೆ ಏಕೆ, ಪರಮೇಶ್ವರನೊಂದಿಗೆ ಕಾದಿ ಪಾಶುಪತಾಸ್ತ್ರವನ್ನು ಪಡೆದ ಕಡುಗಲಿ. ಅಂದರೆ ಹಿಂಸೆಗೆ ಹೆದರುವ ಸ್ವಭಾವ ಇವನದಲ್ಲ. ಅಹಿಂಸೆ ಇವನ ಜಾಯಮಾನದಲ್ಲಿ ಈವರೆಗೂ ಕಂಡುಬಂದಿಲ್ಲ. ಕುರುಕ್ಷೇತ್ರದ ರಣರಂಗದಲ್ಲಿ ತನ್ನೆದುರಿಗೆ ಹೋರಾಡಲು ನಿಂತ ಕೌರವಸೇನೆಯಲ್ಲಿ ತನ್ನ ಗುರುಹಿರಿಯರಾದ ದ್ರೋಣ. ಭೀಷ್ಮ ಮುಂತಾದವರನ್ನು ಕಂಡು ಇವನು ಶಸ್ತ್ರಸಂನ್ಯಾಸದ ಮಾತನ್ನಾಡುತ್ತಾನೆ. ಇವನು ಕೇವಲ ತನ್ನ ಬಂಧು ಬಾಂಧವರನ್ನು ಕೊಲ್ಲಲು ಹಿಂದೆಗೆಯುತ್ತಾನೆಯೆ ಹೊರತು ಹಿಂಸೆಗೆ ಮನ ಒಗ್ಗದೆ ಯುದ್ಧದಿಂದ ವಿಮುಖನಾಗುತ್ತಿಲ್ಲ. ಆದ್ದರಿಂದ ಅರ್ಜುನನಲ್ಲಿ ಕಾಣುವ ವಿಷಾದ ಅಹಿಂಸೆಯಿಂದ ಅಥವಾ ವಿರಾಗದಿಂದ ಮೂಡಿಬಂದ ವಿಷಾದವಲ್ಲ. ಅದು ಒಂದು ರೀತಿಯ ವ್ಯಾಮೋಹದಿಂದ ಮೂಡಿಬಂದಿದೆ. ಇಂಥ ಹೃದಯದೌರ್ಬಲ್ಯದವನಿಗೆ ಅಹಿಂಸೆ ಸಾಧ್ಯವಿಲ್ಲ. ಅರ್ಜುನನಲ್ಲಿ ಕಂಡ ಈ ಕ್ಷಿಪ್ರವೈರಾಗ್ಯ ಗಂಟೆಗೆ ನಲವತ್ತು ಮೈಲಿ ವೇಗದಲ್ಲಿ ಓಡುವ ರೈಲಿನಲ್ಲಿ ಕುಳಿತವನು ಪ್ರವಾಸಕ್ಕೆ ಬೇಸತ್ತು ಓಡುವ ಗಾಡಿಯಿಂದ ದುಮುಕುವವನ ಸ್ಥಿತಿಯಂತೆ - ಎಂದು ಗಾಂಧೀಜಿ ವಿವರಿಸುತ್ತಾರೆ. ಈ ಕಾರಣದಿಂದ ನಿಜವಾದ ಅಹಿಂಸೆ ಅಥವಾ ವೈರಾಗ್ಯ ಸಾಧ್ಯವಾಗದ ಅರ್ಜುನನಿಗೆ ನಿಜವಾದ ನಿಷ್ಕಾಮ ಕರ್ಮದ ಸ್ವಭಾವವೇನೆಂಬುದನ್ನು ಶ್ರೀಕೃಷ್ಣ ಭೋಧಿಸಿರುವುದು, ಗಾಂಧೀಜಿಗೆ ಅತಿಸೂಕ್ತವಾಗಿ ಕಂಡಿತು. ನಿಷ್ಕಾಮ ಕರ್ಮಕ್ಕೆ ಗಾಂಧೀಜಿ ಕೊಡುವ ವ್ಯಾಖ್ಯಾನ ಬಹು ವಿಶಿಷ್ಟವಾದದ್ದು, ಗೀತೆಯಲ್ಲಿ ಬೋಧಿಸುವ ನಿಷ್ಕಾಮಕರ್ಮ ನಿಜವಾಗಿಯೂ ಕಾರ್ಯಸಾಧ್ಯವೇ ಎಂದು, ಬಾಳಪರ್ಯಂತ ಮಾನವಸೇವೆಗೆ ತಮ್ಮನ್ನು ಮುಡಿಪಿಟ್ಟಂಥ ಅನೇಕ ಮಾನವತಾವಾದಿಗಳು ಅನುಮಾನಪಟ್ಟಿದ್ದಾರೆ. ಫಲಾಪೇಕ್ಷೆ ಇಲ್ಲದೆ ಕಾರ್ಯ ಮಾಡಬೇಕೆಂಬ ಗೀತಾಸಂದೇಶ ಅವ್ಯವಹಾರಿಕವೆಂದು ಅನೇಕರಿಗೆ ಕಂಡಿದ್ದರೂ ಗಾಂಧೀಜಿಗೆ ಅದರಲ್ಲಿ ಕ್ಲಿಷ್ಟತೆಯೂ ಕಾಣಬರಲಿಲ್ಲ. ಏಕೆಂದರೆ ನಿಷ್ಕಾಮಕರ್ಮಕ್ಕೆ ಆಧಾರವಾದ ಧರ್ಮದ ವಿಚಾರದಲ್ಲಿ ಗಾಂಧೀಜಿಗೆ ನಿಚ್ಚಳವಾದ ಅರಿವಿತ್ತು. ಅವರ ಅನಾಸಕ್ತಿಯೋಗವನ್ನು ನಾಆವು ಗುರತಿಸಬೇಕಾದದ್ದು ಇಲ್ಲಿಯೇ.

ಯಾವ ಕಾರ್ಯವನ್ನು ಮಾಡುವಾಗ ಅದರ ಫಲಾಪೇಕ್ಷೆ ನಮ್ಮನ್ನು ಸಹಜವಾಗಿ ಬಾಧಿಸುವುದಿಲ್ಲವೋ ಅದೇ ನಿಷ್ಕಾಮಕರ್ಮ. ಅಂದ ಮೇಲೆ ಫಲಾಸಕ್ತಿ ಅಥವಾ ಅನಾಸಕ್ತಿಯ ಬೇರು ಕಾರ್ಯದ ಸ್ವರೂಪದಲ್ಲಿಯೇ ಇರುತ್ತದೆ. ಆದ್ದರಿಂದ ಅನಾಸಕ್ತಿಯನ್ನು ಪ್ರೇರಿಸುವ ಕಾರ್ಯಗಳನ್ನು ಆರಿಸಿಕೊಂಡು ಫಲಾಸಕ್ತಿ ಪ್ರೇರಕವಾದ ಕಾರ್ಯಗಳನ್ನು ವರ್ಜಿಸುವುದಷ್ಟೇ ಮಾನವನ ಹೊಣೆಗಾರಿಕೆ. ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಸ್ವಾರ್ಥ - ಸ್ವಭಾವತಃ ನಮ್ಮಲ್ಲಿ ಅಪೂರ್ಣ ಫಲದ ಬಗ್ಗೆ ಆಸಕ್ತಿಯನ್ನು ಕೆರಳಿಸುತ್ತದೆ. ಇಂಥ ಕಾರ್ಯಗಳನ್ನು ಮಾಡಿದಮೇಲೆ ಅವನ್ನು ಮರೆಯುವಂತಿಲ್ಲ. ಮಾಡುವ ಮುನ್ನವೇ ಅವುಗಳ ಫಲದ ವಿಚಾರದಲ್ಲಿ ಇಲ್ಲದ ಆಶೆ ಆಕಾಂಕ್ಷೆಗಳು ನಮ್ಮಲ್ಲಿ ಮೂಡಿರುತ್ತವೆ. ಮಾಡಿ ಆದಮೇಲೆ ಅದರಿಂದ ಬರುವ ಫಲದಿಂದಾಗಿ ಸುಖದುಃಖದ ರೂಪದಲ್ಲಿ ನಾವು ಸಮ್ಮೋಹಿತರಾಗುತ್ತೇವೆ. ಈ ಕ್ರಿಯೆ ಕೊನೆ ಮೊದಲಿಲ್ಲದೆ ನಡೆದು ಕೊನೆಗೊಮ್ಮೆ ನಮ್ಮನ್ನು ವಿನಾಶದಲ್ಲಿಗೆ ಕೊಂಡೊಯ್ಯುತ್ತದೆ. ಇದೇ ಸಕಾಮಕರ್ಮದ ಸ್ವಭಾವ. ನಿಷ್ಕಾಮಕರ್ಮಗಳಾದರೋ ನಾವು ಕಣ್ಣಿನ ರೆಪ್ಪೆಮಿಡಿಯುವ ರೀತಿಯಲ್ಲಿದ್ದು ಕೇವಲ ಸಹಜ ಕರ್ಮಗಳಾಗಿರುತ್ತವೆ. ಈ ರೀತಿಯ ಸಹಜಕರ್ಮಗಳನ್ನು ಮಾಡುವಾಗ ಯಾವು ಫಲಾಪೇಕ್ಷೇಯೋ ಇಲ್ಲದಿರುವುದರಿಂದ, ಅವುಗಳ ಆಚರಣೆ ಅನಾಸಕ್ತಿಯೋಗವೆನಿಸುತ್ತದೆ.

ಆಸಕ್ತಿಯಿಂದ ಮಾಡುವ ಕರ್ಮಗಳು ಲಾಭ, ನಷ್ಟ ಸುಖದುಃಖ, ಜಯಾಪಜಯಗಳ ರೂಪದಲ್ಲಿ ನಮ್ಮನ್ನು ಅಂಥ ಕೆಲಸಗಳಲ್ಲಿ ಮತ್ತಷ್ಟು ಆಸಕ್ತರಾಗುವಂತೆ ಮಾಡುತ್ತವೆ. ಒಂದು ಕಾರ್ಯ ಮತ್ತೊಂದು ಕಾರ್ಯಕ್ಕೆ ಬೀಜರೂಪದಲ್ಲಿದ್ದು ನಾವು ಅದಕ್ಕೆ ದಾಸರಾಗುವಂತೆ ಮಾಡುತ್ತವೆ. ಈ ರೀತಿ ಫಲಾಸಕ್ತರಾಗಿ ಕಾರ್ಯ ಮಾಡುವವರು ದಿನದಿನಕ್ಕೂ ತಮ್ಮ ಮಾನಸಿಕ ಸ್ತಿಮಿತತೆಯನ್ನು ಕಳೆದುಕೊಳ್ಳ್ಳುತ್ತಾರೆ. ತಮ್ಮ ಬಯಕೆಯ ವಿಚಾರದಲ್ಲಿ ಮೋಹ, ಅದು ಕೈಗೊಡದಿದ್ದರೆ ಕೋಪ ಅನಂತರ ಸ್ಮøತಿವಿಭ್ರಮೆ, ಹಾಗೆಯೇ ವ್ಯಕ್ತಿಯ ಸರ್ವನಾಶ. ಅಂದ ಮೇಲೆ ಆಸಕ್ತಿಯಲ್ಲಿಯೇ ವಿನಾಶದ ಬೀಜವೂ ಇದೆ. ಆದ್ದರಿಂದ ಗಾಂಧೀಜಿಯವರು ಅನಾಸಕ್ತಿಯಿಂದ ಮಾತ್ರ ಸ್ಥಿತಪ್ರಜ್ಞೆÉ ಸಾಧ್ಯ ಎಂಬುದನ್ನ ಚೆನ್ನಾಗಿ ಮನಗಂಡರು. ಅಷ್ಟೇ ಅಲ್ಲದೆ ಅನಾಸಕ್ತಿಯೋಗ ಕೈಗೂಡದ ಹೊರತು ಭವಂತನಲ್ಲಿ ಪೂರ್ಣ ಭಕ್ತಿ ಸಾಧ್ಯವಾಗದೆಂಬುದು ಅವರ ಮತ. ಅನಾಸಕ್ತಿಯೋಗಿಯೇ ನಿಜವಾದ ಭಕ್ತ ಹಾಗೂ e್ಞÁನಿಯೆನಿಸುತ್ತಾರೆ. ಗಾಂಧೀಜಿಯವರ ಅನಾಸಕ್ತಿಯೋಗ ನಿಷ್ಕ್ರಿಯೆಯನ್ನು ಬೋಧಿಸುತ್ತದೆಂದು ತಿಳಿದುಕೊಳ್ಳಬಾರದು. ಫಲದ ವಿಚಾರದಲ್ಲಿ ಇಲ್ಲದ ಆಸಕ್ತಿಯನ್ನು ಕೆರಳಿಸಿದಂಥ ಕಾರ್ಯಗಳನ್ನು ಮಾಡುವಾಗ ಸಹಜವಾಗಿ ಆಸಕ್ತಿಯೆಲ್ಲ ಕಾರ್ಯ ಮಾಡುವುದರಲ್ಲಿಯೇ ವಿನಿಯೋಗವಾಗುತ್ತದೆ. ಮೋಹ ಮಾತ್ಸರ್ಯಗಳ ಹೊರೆ ಮನಸ್ಸಿನ ಮೇಲಿಲ್ಲವೆಂದಾಗ ಮನಸ್ಸು ಸದಾ ಪ್ರಫುಲ್ಲವಾಗಿದ್ದು ಶಾಂತವಾಗಿರುತ್ತದೆ. ಅನಾಸಕ್ತಿಯಿಂದ ಮಾಡಿದ ಕೆಲಸಗಳು ಗುಣದಲ್ಲಿ ಕಡಿಮೆ ಇರುವುದಿಲ್ಲ. ಇಲ್ಲವೆ ಅವುಗಳಿಂದ ಬರಬೇಕಾದ ಫಲವೂ ಕಡಿಮೆಯಾಗುವುದಿಲ್ಲ - ಎಂಬುದೇ ಭಗವಂತನ ಆಶ್ವಾಸನೆ. ಅದರ ಫಲ ಕಡಿಮೆಯಾಗುವ ಬದಲು ನೂರ್ಮಡಿ ಹೆಚ್ಚುತ್ತದೆ, ಏಕೆಂದರೆ ನಿರಹಂಕಾರದಿಂದ ಮಾಡಿದ ಕೆಲಸದಲ್ಲಿ ಭಗವಂತನ ಕೃಪೆಗೆ ಪೂಣ್ ಅವಕಾಶವಿರುತ್ತದೆ. ಆಕಾರಣದಿಂಲೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ, ನಿಷ್ಕಾವಂ ಕರ್ಮಕ್ಕೆ ಯಥೇಚ್ಛವಾಗಿ ಫಲಕೊಡುವ ಹೊಣೆಯನ್ನು ತಾನೇ ವಹಿಸಿಕೊಂಡಿದ್ದಾನೆ. ಭಕ್ತನಾದ ಅನಾಸಕ್ತಿಯೋಗಿಗೆ ಈ ಅಭಯ ಒಂದು ವರವಿದ್ದಂತೆ. ಗಾಂಧೀಜಿಯವರಿಗೆ ಅನಾಸಕ್ತಿಯೆಂಬುದು ಭಕ್ತಿ, e್ಞÁನ, ಧ್ಯಾನ, ಯೋಗಿಗಳಿಗೆ ಹೊರತಾದ ಆತ್ಮಸಾಕ್ಷಾತ್ಕಾರದ ಬೇರೊಂದು ಮಾರ್ಗ ಎಂದು ಕಾಣಲಿಲ್ಲ. ಅವರ ಅನಾಸಕ್ತಿಯೋಗದಲ್ಲಿ ಭಕ್ತಿ, e್ಞÁನ, ಮತ್ತು e್ಞÁನಗಳು ಸಮಪ್ರಮಾಣದಲ್ಲಿ ಸಮನ್ವಯಗೊಳ್ಳುತ್ತವೆ. ಈ ಎಲ್ಲ ಯೋಗಗಳ ಸಾಮರಸ್ಯವಾದಾಗ ಮಾತ್ರ ಅನಾಸಕ್ತಿಯೋಗ ಸಿದ್ಧಿಸುತ್ತದೆಂಬ ದಿವ್ಯತತ್ತ್ವವನ್ನು ಗೀತಾ ಸಂದೇಶದಲ್ಲಿ ಕಂಡುಕೊಂಡು ಅದನ್ನು ತಮ್ಮ ಜೀವನಪರ್ಯಂತ ಬಾಳಲು ಗಾಂಧೀಜಿ ತಪ್ಪಿಸಿದರು. (ಎ.ಎಲ್.ಎಸ್.) ಗಾಂಧೀ ಆಶ್ರಮಗಳು: ಮಹಾತ್ಮ ಗಾಂಧೀಜಿಯವರು ತಮ್ಮ ಧ್ಯೇಯ ಸಾಧನೆಗಾಗಿದಿಗತ್ಯ ಕಂಡಾಗಲೆಲ್ಲ ಕೆಲವು ಆಶ್ರಮಗಳನ್ನು ಸ್ಥಾಪಿಸಿ, ಅಲ್ಲಿ ತಮ್ಮ ಸಹಚರರೊಅಂಗೆÉ ಇದ್ದು ನಿಯಮಬದ್ಧವಾದ ಸಾತ್ತ್ವಿಕ ಜೀವನವನ್ನು ನಡೆಸುತ್ತ ಇಹಪರಗಳೆರಡರ ಸಾಧನೆಗೆ ತೊಡಗಿದ್ದು ಅವರ ಸಮಾಜೋದ್ಧಾರ ಕಾರ್ಯದ ಒಂದು ಮುಖ್ಯ ವಿಷಯ. ಕ್ರಮೇಣ ತಾವು ಕೈಗೊಂಡ ಸಾರ್ವಜನಿಕ ಕಾರ್ಯಗಳಿಗೂ ಸತ್ಯಾಗ್ರಹ ಆಂದೋಲನಗಳಿಗೂ ಈ ಆಶ್ರಮಗಳೇ ಶಿಕ್ಷಣ ಕ್ಷೇತ್ರಗಳಾಗಿಯೂ ಪರಿಣಮಿಸಿದವು. ಅವನಿಗೆ ಪ್ರತ್ಯೇಕವಾದ ಸ್ವಂತ ಮನೆ ಎಂಬುದು ಎಲ್ಲಿಯೂ ಇರಲಿಲ್ಲ. ಅವರ 36 ನೆಯ ವಯಸ್ಸಿನಿಂದ ಅಂತ್ಯಕಾಲದ ವರೆಗೂ ಈ ಆಶ್ರಮಗಳೇ ಅವರ ವಸತಿಗಳಾಗಿದ್ದುವು. ಫೀನಿಕ್ಸ್ ವಸತಿ: ಹೀಗೆ ಅವರು ಸ್ಥಾಪಿಸಿದ. ಆಶ್ರಮಗಳಲ್ಲಿ ಮೊದಲನೆಯದು ದಕ್ಷಿಣ ಅಫ್ರಿಕದ ನಟಾಲಿನಲ್ಲಿ 1904 ರಲ್ಲಿ ಅವರು ಏರ್ಪಾಡು ಮಾಡಿದ ಫೀನಿಕ್ಸ್ ವಸತಿ.

ಆ ವರ್ಷ ಜೋಹ್ಯಾನಿಸ್‍ಬರ್ಗಿನಿಂದ ಡರ್ಬನಿಗೆ ಕೈಗೊಂಡ 24 ಗಂಟೆಯ ರೈಲು ಪ್ರಯಾಣದಲ್ಲಿ ಹೊತ್ತು ಕಳೆಯಲು ಅವರ ಮಿತ್ರರಾದ ಪೋಲಕ್ ಅವರು ಕೊಟ್ಟ ಅಂಟು ದಿಸ್ ಲ್ಯಾಸ್ಟ್ ಎಂಬ ರಸ್ಕಿನ್ನನ ಪುಸ್ತಕ ಅವರ ಮೇಲೆ ಉಂಟುಮಾಡಿದ ಅದ್ಭುತ ಪ್ರಭಾವವೇ ಈ ಫೀನಿಕ್ಸ್ ವಸತಿ ನಿರ್ಮಾಣಕ್ಕೆ ಮುಖ್ಯ ಕಾರಣವಾಯಿತು. ಈ ಮೊದಲೇ ಅವರ ಅಂತರ್ಮುಖಿಗಳಾಗಿ ಜೀವನದ ಕಾರಣವಾಯಿತು. ಈ ಮೊದಲೇ ಅವರು ಅಂತಮುಖಿಗಳಾಗಿ ಜೀವನದ ಧ್ಯೇಯಗಳ ಬಗೆಗೆ ವಿಚಾರ ನಡೆಸಿ ಆದಷ್ಟು ಸರಳವೂ ನಿಯಮಿತವೂ ಆದ ಜೀವನವನ್ನು ನಡೆಸುತ್ತಿದ್ದರಾಗಿ ಅವರ ಚಿತ್ತ ಹದಗೊಂಡಿತ್ತು. ರಸ್ಕಿನ್ನಿನ ಪುಸ್ತಕದಲ್ಲಿ ಪ್ರತಿಪಾದಿಸಿರುವ ತತ್ತ್ವಗಳು ಅವರ ಮನಸ್ಸನ್ನು ಸೂರೆಗೊಂಡವು. ಎಲ್ಲ ಕಸುಬುಗಳೂ ಸಮಾನವಾದ ಆದರವನ್ನು ಪಡೆಯಬೇಕು ಮತ್ತು ಶ್ರಮಜೀವನ ಅಥವಾ ಕಾಯಕ ಎಲ್ಲಕ್ಕಿಂತಲೂ ಯೋಗ್ಯವಾದ ಜೀವನ ವಿಧಾನ - ಈ ತತ್ತ್ವಗಳನ್ನು ಅನುಷ್ಠಾನಕ್ಕೆ ತರಲು ಅವರು ಈಗ ಸ್ಥಿರ ಸಂಕಲ್ಪವನ್ನು ಕೈಗೊಂಡರು.

ಈ ಫೀನಿಕ್ಸ್ ವಸತಿಯನ್ನು ವಿಲಂಬವಿಲ್ಲದೆ ಆರಂಭಿಸಲು ಮತ್ತೊಂದು ಕಾರಣವೂ ಇತ್ತು. ಕೆಲವು ತಿಂಗಳುಗಳ ಹಿಂದೆ, ಭಾರತೀಯ ಸೇವೆಗಾಗಿ ಇಂಡಿಯನ್ ಒಪಿನಿಯನ್ ಎಂಬ ವಾರಪತ್ರಿಕೆಯನ್ನು ಡರ್ಬನ್ನಿನಲ್ಲಿ ಅವರು ಸ್ಥಾಪಿಸಿದ್ದರು. ಅಲ್ಬರ್ಟ್ ವೆಸ್ಟ್ ಎಂಬ ಆಂಗ್ಲೇಯ ಮಿತ್ರ ಅದನ್ನು ಸಂಬಂಧಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಹಳ ನಷ್ಟದಲ್ಲಿ ನೆಡೆಯುತ್ತಿತ್ತು. ಈ ಪತ್ರಿಕೆಯನ್ನು ಫೀನಿಕ್ಸ್ ವಸತಿಗೆ ಬದಲಾಯಿಸಿ ಇದರ ವ್ಯಯವನ್ನು ಅಲ್ಲಿನ ನಿವಾಸಿಗಳ ನೆರವಿನಿಂದ ಕಡಿಮೆ ಮಾಡಬಹುದೆಂಬುದು ಗಾಂಧೀಜಿಯವರ ತೀರ್ಮಾನವಾಗಿತ್ತು. ಅದು ಹಾಗೆಯೇ ಆಯಿತು.

ಈ ವಸತಿ ಫೀನಿಕ್ಸ್ ರೈಲ್ವೆ ನಿಲ್ದಾಣದಿಂದ ಮೈಲಿ (ಇದೇ ಅದರ ಹೆಸರಿಗೆ ಕಾರಣ) ಮತ್ತು ಡರ್ಬನಿನಿಂದ 14 ಮೈಲಿ ದೂರದಲ್ಲಿತ್ತು.

ಇಲ್ಲಿ ವಾಸಕ್ಕೆ ಬಂದವರಲ್ಲಿ ಆಲ್ಬರ್ಟ್ ವೆಸ್ಟ್, ಪೋಲಕ್, ಗಾಂಧಿಯವರ ಚಿಕ್ಕಪ್ಪ ಮಗ ಛಗನಲಾಲ್ ಗಾಂಧಿ ಮತ್ತು ಆತನ ಕುಟುಂಬ, ಹಾಗೂ ಗಾಂಧಿಯವರಿಗೆ ಬಲಗೈಯಂತಿದ್ದ ಅವರ ಸೋದರಳಿಯ ಮದನ್‍ಲಾಲ್ ಗಾಂಧೀ ಉಲ್ಲೇಖನೀಯರು. ಹೆಂಗಸರೂ ಮಕ್ಕಳೂ ಇದ್ದರು. ಎಲ್ಲರೂ ಶಕ್ತ್ಯನುಸಾರ ಶ್ರಮಜೀವನ ನಡೆಸಬೇಕು. ಪ್ರತಿಯೊಬ್ಬರಿಗೂ ತಿಂಗಳಿಗೆ 3 ಪೌಂಡು ಸಮಾನವಾದ ವೇತನ. ವ್ಯವಸಾಯ ಮಾಡಲು ಪ್ರತಿಯೊಬ್ಬರಿಗೂ 3 ಎಕರೆ ಹಂಚಲಾಗಿತ್ತು. ಒಟ್ಟು ಇಲ್ಲಿ ಇದ್ದ 100 ಎಕರೆಗಳನ್ನು 100 ಪೌಂಡುಗಳಿಗೆ ಕೊಳ್ಳಲಾಗಿತ್ತು. ಸತ್ಯಾಗ್ರಹ ಆಂದೋಲನ ನಡೆದಾಗ ಸೆರೆಮನೆಗೆ ಹೋಗಿ ಬಂದರವರು ಬೇರೆ ಮನೆಗಳಿಲ್ಲದ್ದಿದ್ದರೆ ಇಲ್ಲಿಗೆ ಬಂದು ತಂಗುತ್ತಿದ್ದರು. ಬೇರೆ ಬೇರೆ ಮತಧರ್ಮಗಳಿಗೆ ಸೇರಿದವರು ಇಲ್ಲಿ ಸಾಮೂಹಿಕ ಜೀವನವನ್ನು ನಡೆಸುತ್ತಿದ್ದರು. ಅಲ್ಲಿದ್ದ ಮಕ್ಕಳಿಗೆ ಗಾಂಧಿಯವರೇ ಮುಖ್ಯ ಶಿಕ್ಷಕರು. ಅಚ್ಚಾದ ಇಂಡಿಯನ್ ಒಪಿನಿಯನ್ ಪತ್ರಿಕೆಗಳನ್ನು ಚಂದಾದಾರರಿಗೆ ರವಾನಿಸುವ ಕಾರ್ಯದಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ನೆರವಾಗುತ್ತಿದ್ದರು.

ಗಾಂಧೀಜಿಯವರಿಗೆ ಮಾತ್ರ ತಮ್ಮ ವಕೀಲಿ ವೃತ್ತಿಯ ಕಾರಣದಿಂದಾಗಿ ಯಾವಾಗಲೂ ಈ ವಸತಿಯಲ್ಲಿರಲು ಸಾಧ್ಯವಾಗುತ್ತಿರಲಿಲ್ಲ.

ಟಾಲ್‍ಸ್ಟಾಯ್ ಆಶ್ರಮ: ಮಹಾತ್ಮ ಗಾಂಧಿಯವರು ಸ್ಥಾಪಿಸಿದ ಎರಡನೆಯ ಆಶ್ರÀಮ ಟ್ರಾನ್ಸ್‍ವಾಲ್ ಪ್ರಾಂತ್ಯದಲ್ಲಿ ಲಾಲಿ ಎಂಬ ರೈಲ್ವೆ ನಿಲ್ದಾಣದಿಂದ ಒಂದು ಮೈಲಿ, ಜೊಹ್ಯಾನಿಸ್‍ಬರ್ಗ್ ಪಟ್ಟಣದಿಂದ 21 ಮೈಲಿ ದೂರದಲ್ಲಿದ್ದ ಟಾಲ್‍ಸ್ಟಾಯ್ ಆಶ್ರಮ. ಟಾಲ್‍ಸ್ಟಾಯ್ ಅವರ ಬರೆಹಗಳನ್ನು ಓದು ಗಾಂಧಿ ಪ್ರಭಾವಿತರಾಗಿದ್ದರು. ತಮ್ಮ ಆಂದೋಲನದ ಬಗೆಗೆ ಅವರೊಂದಿಗೆ ಪತ್ರವ್ಯವಹಾರ ನಡೆಸಿದ್ದರು. ಅವರ ಆಶೀರ್ವಾದÀವನ್ನೂ ಪಡೆದಿದ್ದರು. ಟ್ರಾನ್ಸ್‍ವಾಲಿನಲ್ಲಿ ಭಾರತೀಯರ ಮೇಲೆ ವಿಧಿಸಿದ್ದ ಮೂರು ಪೌಂಡ್ ತಲೆಕಂದಾಯದ ವಿರುದ್ಧ ಗಾಂಧಿಯವರು ಹೂಡಿದ ಸತ್ಯಾಗ್ರಹ ಚಳವಳಿಯ ಕಾಲದಲ್ಲಿ ಸ್ಥಾಪಿಸಿದ ಆಶ್ರಮವಿದು (30 ಮೇ 1910). ಸೆರೆಮನೆ ಸೇರಿದ ಕುಟುಂಬದವರ ವಸತಿಗೆಂದು ಮುಖ್ಯವಾಗಿ ಇದ್ದು ಸ್ಥಾಪಿತವಾಯಿತು. ಇದಕ್ಕೆ 1100 ಎಕರೆಯ ಜಮೀನು ಮತ್ತು ತೋಟವಿದ್ದು ಅದರಲ್ಲಿ ಸುಮಾರು 1000 ಹಣ್ಣಿನ ಗಿಡಗಳಿದ್ದವು. ಇದರ ಮಾಲಿಕ ಗಾಂಧಿಯವರ ಮಿತ್ರನೂ ಅನುಯಾಯಿಯೂ ಆದ ಕ್ಯಾಲೆನ್ ಬ್ಯಾಕ್ ಎಂಬ ಜರ್ಮನ್ ಗ್ರಹಸ್ಥ (ಬಾಡಿಗೆ ಇಲ್ಲದೆ ಈ ಕ್ಷೇತ್ರವನ್ನು ಭಾರತೀಯರಿಗಾಗಿ ಆತ ಬಿಟ್ಟು ಕೊಟ್ಟ.) ಗೃಹಶಿಲ್ಪ ಮತ್ತು ಅದಕ್ಕೆ ಸಂಬಂಧಿಸಿದ ಕಸುಬುಗಳಲ್ಲಿ ಪರಿಣತನಾದ ಆತ ಪಾದರಕ್ಷೆಗಳನ್ನು ಹೊಲಿಯುವದನ್ನು ತಾನು ಕಲಿತು ಗಾಂಧಿಯವರಿಗೂ ಕಲಿಸಿದ. ಈ ಆರ್ಶಮದಲ್ಲಿ ಆರಂಭದಲ್ಲಿಯೇ ಸುಮಾರು 70 ಜನರಿದ್ದರು. ಸದಸ್ಯತ್ವಕ್ಕೆ ವಯಸ್ಸಿನ, ಮತಧರ್ಮದ ಯಾವ ಮಿತಿಯೂ ಇರಲಿಲ್ಲ. ವಾಸಕ್ಕಾಗಿ ಕಟ್ಟಡಗಳು ಅಲ್ಲಿನ ನಿವಾಸಿಗಳ ಶ್ರಮದಾನದಿಂದಲೇ ಬಹುಮಟ್ಟಿಗೆ ಸಿದ್ಧವಾದಂಥವು. ಇದರ ಮೇಲ್ವಿಚಾರಣೆಯೆಲ್ಲ ಕ್ಯಾಲೆನ್ ಬ್ಯಾಕನದೇ. ಒಂದೇ ಅಡಿಗೆಯ ಮನೆ ಇತ್ತು. ಅದರ ನಿರ್ವಹಣೆ ಅಲ್ಲಿದ್ದ ಮಹಿಳೆಯರದಾಗಿತ್ತು. ಸಸ್ಯಾಹಾರ ಸೇವನೆಯೇ ಅಲ್ಲಿನ ಪದ್ಧತಿ. ಧೂಮ ಮತ್ತು ಸುರಾಪಾನಗಳು ನಿಷೇಧಿಸಲ್ಪಟ್ಟಿದ್ದವು. ಸಾಮೂಹಿಕ ಪ್ರಾರ್ಥನೆ ಮತ್ತು ಭೋಜನ ರೂಢಿಯಲ್ಲಿದ್ದುವು. ನೈರ್ಮಲ್ಯ ರಕ್ಷಣೆಗೆ ಒಳ್ಳೆಯ ಏರ್ಪಾಡಿತ್ತು. ಜಲಮಲಗಳ ವಿಷರ್ಜನೆಗಾಗಿ ಆಡಿದ ಗುಂಡಿಗಳು ಕಾಲಾನಂತರ ಉತ್ತಮ ಗೊಬ್ಬರವನ್ನೊದಗಿಸುತ್ತಿದ್ದವು. ಖಾಸಗಿ ಕೆಲಸಕ್ಕಾಗಿ ಜೊಹ್ಯಾನಿಸ್‍ಬರ್ಗಿಗೆ ಹೋಗುವವರು 21 ಮೈಲಿ ದೂರವನ್ನು ಕಾಲುನಡಿಗೆಯಲ್ಲೇ ನಿರ್ವಹಿಸುತ್ತಿದ್ದರು.

ಸತ್ಯಾಗ್ರಹಾಶ್ರಮ, ಸಾಬರಮತಿ: 1915 ರ ಜನವರಿಯಲ್ಲಿ ಗಾಂಧಿಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಇಲ್ಲಿಯೂ ಆಶ್ರಮ ವಾಸವನ್ನು ಕೈಗೊಳ್ಳಬೇಕೆಂದು ಅವರಿಗೆ ತೋರಿತು. ಅಂತೆಯೇ ಮೇ ತಿಂಗಳಲ್ಲಿ ಸತ್ಯಾಗ್ರಹಾಶ್ರಮವನ್ನು ಸ್ಥಾಪಿಸಿದರು. ಅವರೊಂದಿಗೆ ಹಿಂತಿರುಗಿದ ಅವರ ಬಂಧುವರ್ಗದವರು ಮತ್ತು ಅನುಯಾಯಿಗಳು ಸುಮಾರು 25 ಮಂದಿ ಆಶ್ರಮವಾಸಿಗಳಾದರು. ಆಶ್ರಮ ಆರಂಭವಾದದ್ದು ಅಹಮದಾಬಾದಿಗೆ ಸೇರಿದ ಕೊಚರಾಬ್ ಹಳ್ಳಿಯಲ್ಲಿ. ಒಂದು ಬಾಡಿಗೆ ಬಂಗಲೆಯಲ್ಲಿ. ಸ್ವಲ್ಪ ಕಾಲವಾದ ಮೇಲೆ ಸಾಬರಮತಿ ನದೀತೀರಕ್ಕೆ ಆಚೆ ಸುಮಾರು 150 ಎಕೆರೆಯ ನಿವೇಶನಕ್ಕೆ ಆಶ್ರಮವನ್ನು ಬದಲಾಯಿಸಿಲಾಯಿತು. ಹಳ್ಳಿಯ ಮಾದರಿಯ ಮನೆಗಳೂ ಕಟ್ಟಡಗಳೂ ಸಿದ್ಧವಾದವು. ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆ ಅವಕಾಶ ಮಾಡಲಾಯಿತು. ಆಶ್ರಮವಾಸಿಗಳು ಕೆಲವು ನಿಯಮಗಳನ್ನು ಪಾಲಿಸಿ ಸಾಮೂಹಿಕವಾದ ಧಾರ್ಮಿಕ ಜೀವನವನ್ನು ಕೈಗೊಳ್ಳಬೇಕೆಂದು ನಿರ್ಧರಿಸಲಾಯಿತು. ಅಸ್ತ್ಯ, ಅಹಿಂಸೆ, ಬ್ರಹ್ಮಚರ್ಯ, ನಾಲಗೆಯ ರುಚಿಯ ಮೇಲ ಹತೋಟಿ, ಅಸ್ತೇಯ, ಅಸಂಗ್ರಹ ಇವು ಮೂಲಭೂತವಾದ ನಿಯಮಗಳು. ಇವೇ ಅಲ್ಲದೆ ಸ್ವದೇಶಿ, ನಿರ್ಭಯತ್ವ, ಕಾಯಕ, ಅಸ್ಪøಶ್ಯತಾ ನಿವಾರಣೆ - ಇವನ್ನೂ ವ್ಯಾವಹಾರಿಕ ಜೀವನದಲ್ಲಿ ಪಾಲಿಸಬೇಕು. ನಿತ್ಯ ಪ್ರಾರ್ಥನೆಯೊಂದಿಗೆ ಈ ಏಕಾದಶವ್ರತಗಳ ಹೆಸರನ್ನೊಳಗೊಂಡ ಒಂದು ಶ್ಲೋಕವನ್ನು ಹೇಳುವುದು ರೂಢಿಯಾಗಿತ್ತು.

ಆಶ್ರಮದ ನಿತ್ಯಜೀವನದಲ್ಲಿ ಬೆಳಗ್ಗೆ ಗಂಟೆಗೆ ಮತ್ತು ಸಂಜೆ 5 ಗಂಟೆಗೆ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಈ ಪ್ರಾರ್ಥನೆಯಲ್ಲಿ ಕೆಲವು ಉಪನಿಷತ್ತಿನ ಮಂತ್ರಗಳು. ಸ್ತ್ರೋತ್ರಗಳು. ಭಗವದ್ಗೀತೆಯ ಶ್ಲೋಕಗಳು. ತುಲಸೀದಾಸ ರಾಮಾಯಣ, ಇವೇ ಅಲ್ಲದೆ ಅನ್ಯ ಧರ್ಮಾವಲಂಬಿಗಳಿದ್ದಾಗ ಅವರ ಧರ್ಮಗಳಿಂದ ಆಯ್ದ ಭಾಗಗಳೂ ಸಾಮೂಹಿಕ ಭಜನೆ, ರಾಮನಾಮ- ಇವು ರೂಢಿಯಲ್ಲಿದ್ದವು. ಮಸಾಲೆ ಪದಾರ್ಥಗಳನ್ನು ದೂರ ಮಾಡಿ ಭೋಜನಕ್ಕೆ ಕೇವಲ ಸಾತ್ತ್ವಿಕ ಆಹಾರ ಬಳಸಲಾಗುತ್ತಿತ್ತು. ಸಂಜೆಯ ಭೋಜನ ಸೂರ್ಯಾಸ್ತಮದೊಳಗಾಗಿ ಮುಗಿಯಬೇಕು ಮತ್ತು ರಾತ್ರಿ 9 ಗಂಟೆಗೆ ಎಲ್ಲರೂ ವಿಶ್ರಮಿಸಬೇಕು - ಎಂಬುದು ಒಂದು ಮುಖ್ಯ ಕಟ್ಟಳೆ. ಎಲ್ಲ ಆಶ್ರಮವಾಸಿಗಳೂ ಸಫಾಯಿ - ಝಾಡಮಾಲಿಯ ಮತ್ತು ಭಂಗಿಯ - ಕೆಸಲಗಳನ್ನು ಮಾಡಲು ಮೊದಲು ಶಿಕ್ಷಣ ಪಡೆಯುತ್ತಿದ್ದರು. ಎಲ್ಲರೂ ಒಂದಲ್ಲ ಒಂದು ಕಾಯಕವನ್ನು ಕೈಗೊಳ್ಳಬೇಕಾಗಿತ್ತು (ಅವುಗಳಲ್ಲಿ ರಾಟೆಯಿಂದ ನೂಲುವುದು ಅನಿವಾರ್ಯ) ಕೃಷಿ, ತೋಟಗಾರಿಕೆ, ಬಡಗಿ, ಕೆಲಸ, ನೇಯ್ಗೆ ಗೋಪಾಲನೆ ಇತ್ಯಾದಿ ಉಚ್ಚ ನೀಚವೆಂಬ ಭಾವನೆಯನ್ನು ತೊಡೆದು ಹಾಕಲಾಗಿತ್ತು.

ಸತ್ಯಾಗ್ರಹ ಆಶ್ರಮದ ದಿನಗಳಲ್ಲಿಯೇ ಹರಿಜನ ಕುಟುಂಬ ಒಂದನ್ನು ಆಶ್ರಮಕ್ಕೆ ಸೇರಿಸಿ ಕೊಂಡದ್ದರಿಂದ ದಾನಿಗಳು ತಮ್ಮ ಸಹಾಯವನ್ನು ನಿಲ್ಲಿಸಿದರು. ಆಶ್ರಮ ಉಳಿಯುವುದೇ ಒಂದು ಸಮಸ್ಯೆಯಾಯಿತು. ಅಹಮದಾಬಾದಿನ ಪ್ರಸಿದ್ಧ ಆಗತಾನೇ ಹುಟ್ಟಿದ ಕರುವಿನೊಂದಿಗೆ ಗಿರಣಿ ಮಾಲಿಕರಾದ ಅಂಬಾಲಾಲ್ ಸಾರಾಭಾಯಿ ಅವರು ಅಪ್ರಾರ್ಥಿತವಾಗಿ ಆಶÀ್ರಮಕ್ಕೆ ಮಾಡಿದ 1300 ರೂಪಾಯಿಗಳ ಉದಾರ ದಾನದಿಂದ ಆಶ್ರಮದ ಕೆಲಸ ಕಾರ್ಯಗಳು ಮುಂದೆ ಸಾಗಿದವು.

1930 ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಆಶ್ರಮದ ಚಟುವಟಿಕೆಗಳೂ ಅಲ್ಲಿದ್ದವರ ಸಂಖ್ಯೆಯೂ ಹಿಂದೆ ಎಂದೂ ಇಲ್ಲದ ಪ್ರಮಾಣದಲ್ಲಿದ್ದವು. ತರಪೇತನ್ನು ಪಡೆದ 87 ಮಂದಿ ಸತ್ಯಾಗ್ರಹಿಗಳೊಡನೆ ಭಜನೆಯೊಂದಿಗೆ ಗಾಂಧಿಯವರು ಸುಮಾರು 240 ಮೈಲಿ ದಕ್ಷಿಣದಲ್ಲಿ ಸಮುದ್ರತೀರದಲ್ಲಿರುವ ದಂಡಿ ಎಂಬ ಗ್ರಾಮಕ್ಕೆ ಕಾಲು ನಡಿಗೆಯಿಂದ ಹೋಗಲು ಆಶ್ರಮದಿಂದ ಹೊರಬಿದ್ದರು. ಸ್ವರಾಜ್ಯಪ್ರಾಪ್ತಿಯಾಗದೆ ಆಶ್ರಮಕ್ಕೆ ಹಿಂತಿರುಗುವುದಿಲ್ಲವೆಂದು ಪ್ರತಿಜ್ಞೆ ತೊಟ್ಟರು. ಹೀಗವರು ದೂರವಾದ್ದರಿಂದ ಸಾಬರಮತಿ ಆಶ್ರಮದ ವರ್ಚಸ್ಸು ಕಳೆಗುಂದಿತು.

ಸೇವಾಗ್ರಾಮ: ವರ್ಧಾ ನಗರಕ್ಕೆ ಸುಮಾರು ಐದು ಮೈಲಿ ದೂರದಲ್ಲಿ ಶೇಗಾಂವ್ ಎಂಬ ಹಳ್ಳಿಯ ಬಳಿಯಲ್ಲಿ ಗಾಂಧಿಯವರ ಪ್ರಿಯ ಶಿಷ್ಯರಾದ ಸೇಠ್ ಜಮನಾಲಾಲ್ ಬಜಾಜ್ ಅವರ ಜಮೀನಿನಲ್ಲಿ ಹಾಕಿದ ಒಂದು ಗುಡಿಸಲಿನಲ್ಲಿ 1936 ರಲ್ಲಿ ಗಾಂಧಿಯವರು ನೆಲೆಸಿದರು. ಅನಂತರ ಇದನ್ನು ಸೇವಾಗ್ರಾಮವೆಂದು ಕರೆಯಲಾಯಿತು. ಸಕ್ರಿಯ ರಾಜಕೀಯದಿಂದ ಈ ವೇಳೆಗೆ ಗಾಂಧಿಯವರು ನಿವೃತ್ತರಾಗಿ ಹರಿಜನೋದ್ಧಾರ, ಗ್ರಾಮೋದ್ಯೋಗ, ನೂತನ ಶಿಕ್ಷಣ, ಗೋಸೇವಾ ಮುಂತಾದ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಅನಂತರ ಇತರ ಕಾರ್ಯಕರ್ತರೂ ಅಲ್ಲಿಗೆ ತರಬೇತಿಗೆ ಬಂದ ವಿದ್ಯಾರ್ಥಿಗಳೂ ಸಾಬರಮತಿ ಆಶ್ರಮದಂತೆ ಅಲ್ಲದಿದ್ದರೂ ಸರಳವೂ ನಿಯಮಿತವೂ ಸಾಮೂಹಿಕವೂ ಆದ ಜೀವನವನ್ನು ಇಲ್ಲಿ ನಡೆಸಿದರು.

ಸೇವಾಗ್ರಾಮದಲ್ಲಿ ಗಾಂಧಿಯವರು ವಾಸವಾಗಿದ್ದ ಗುಡಿಸಲು ಈಗ ಅವರ ಸ್ಮಾರಕವಾಗಿ ಕಾಪಾಡಲ್ಪಟ್ಟಿದ್ದು ಒಂದು ಯಾತ್ರಾಸ್ಥಳವಾಗಿ ಪರಿಣಮಿಸಿದೆ.

ಹೀಗೆ ಗಾಂಧಿಯವರು ಸ್ಥಾಪಿಸಿದ ಆಶ್ರಮಗಳು ಆತ್ಮೋನ್ನತಿಗೂ ಸಮಾಜ ಸೇವೆಗೂ ಕೇಂದ್ರಗಳಾದುವು. ಆಶ್ರಮವಾಸಿಗಳಿಗೆ ಈ ಹೊಸ ಬಗೆಯ ತಪೋಜೀವನವನ್ನು ನೇಮಿಸಿ ಮಹಾತ್ಮಾಗಾಂಧಿಯವರು ವ್ಯಕ್ತಿ ಜೀವನವನ್ನು ಚೊಕ್ಕಟ ಮಾಡುವುದು ಹೇಗೆಂಬುದನ್ನು ಕಲಿಸಿದರು. ಗಾಂಧಿಯವರ ಸ್ಫೂರ್ತಿಯಿಂದ ಅವರು ಸ್ಥಾಪಿಸಿದ ಆಶ್ರಮಗಳ ಮಾದರಿಯಲ್ಲಿಯೇ ಆಶ್ರಮಗಳು ಸ್ಥಾಪಿತವಾದುವು. ಇವು ನಿಷ್ಠಾವಂತ ಸಮಾಜ ಸೇವಕರನ್ನು ಸಿದ್ಧಮಾಡಿವೆ ಮತ್ತು ಮಾಡುತ್ತಲಿವೆ. (ಎಸ್.ಆರ್.ಕೆ.)