ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾರ್ಗಿ

ವಿಕಿಸೋರ್ಸ್ ಇಂದ
Jump to navigation Jump to search

ಗಾರ್ಗಿ[ಸಂಪಾದಿಸಿ]

ಬ್ರಹ್ಮಜಿಜ್ಞಾಸೆಯಲ್ಲಿ ಆಸಕ್ತಳಾಗಿದ್ದ ಒಬ್ಬ ಮಹಿಳೆ. ಗರ್ಗ ವಂಶದವಳು. ಮಹರ್ಷಿ ಮಿಥಿಲೆಯ ಜನಕಮಹಾರಾಜ ತಾನು ಕೈಕೊಂಡ ಯಜ್ಞ ಪುರ್ತಿಯಾದ ಅನಂತರ ಸಂತುಷ್ಟಬ್ರಹ್ಮಸಭೆಯನ್ನುದ್ದೇಶಿಸಿ ಬ್ರಹ್ಮಿಷ್ಠಿನಾದವನು ಸುವರ್ಣಾಲಂಕೃತವಾದ ಸಾವಿರ ಆಕಳುಗಳನ್ನು ಕೊಂಡೊಯ್ಯಲಿ ಎಂದಾಗ ಯಾಜ್ಞವಲ್ಕ್ಯ ಋಷಿ ಮುಂದೆ ಬಂದನಷ್ಟೆ. ಆಗ ಯಾಜ್ಞವಲ್ಕ್ಯನ ಬ್ರಹ್ಮಜ್ಞಾನವನ್ನು ಕುರಿತು ಪ್ರಶ್ನಿಸಹೊರಟವರಲ್ಲಿ 6ನೆಯವಳಾಗಿ ಗಾರ್ಗಿ ಬರುತ್ತಾಳೆ. ಎಲ್ಲವನ್ನೂ ಆವರಿಸಿದ್ದು ಎನ್ನಲಾದ ನೀರು ಯಾವುದರಿಂದ ಆವೃತವಾಗಿದೆ-ಎಂದು ಮುಂತಾಗಿ ಅವಳು ಪ್ರಶ್ನಿಸುತ್ತಾಳೆ. ಕೊನೆಗೆ ಬ್ರಹ್ಮನನ್ನು ತರ್ಕದಿಂದ ಅರಿಯಲಸಾಧ್ಯ, ವಿಪರೀತ ಪ್ರಶ್ನಿಸಿದರೆ ತಲೆ ಸಿಡಿದೀತು ಎಂದು ಯಾಜ್ಞವಲ್ಕ್ಯ ಹೇಳಿದಾಗ ಸುಮ್ಮನಾಗುತ್ತಾಳೆ. ಏಳನೆಯವನಾಗಿ ಪ್ರಶ್ನಿಸಿದ ಉದ್ದಾಲಕನೂ ಸೋತಮೇಲೆ, ತಡೆಯಲಾರದೆ, ಬ್ರಹ್ಮಸಭೆಯ ಅಪ್ಪಣೆಯೊಂದಿಗೆ ಗಾರ್ಗಿ ಮತ್ತೆರಡು ಪ್ರಶ್ನೆಗಳನ್ನು ಕೇಳುತ್ತಾಳೆ. ಸ್ವರ್ಗಮತರ್ಯಗಳನ್ನು ಸದಾಕಾಲವೂ ಆವರಿಸಿದ್ದು ಯಾವುದು-ಎಂಬ ಪ್ರಶ್ನೆಗೆ ಯಾಜ್ಞವಲ್ಕ್ಯನಿಂದ ಆಕಾಶವೆಂಬ ಉತ್ತರ ಸಿಗುತ್ತದೆ. ಆಕಾಶವನ್ನು ಆವರಿಸಿದ್ದು ಯಾವುದು-ಎಂಬ ಪ್ರಶ್ನೆಗೆ ಆಕಾಶವನ್ನು ಯಾವುದು ತಾನೇ ಆವರಿಸಬಲ್ಲದು-ಎಂಬ ಪ್ರಶ್ನೆಯಿಂದಲೇ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ. ಆಕಾಶ ಎಲ್ಲದರಲ್ಲಿದ್ದು ಎಲ್ಲವನ್ನೂ ಮೀರಿದ್ದು, ಬ್ರಹ್ಮನನ್ನು ಸಂಪುರ್ಣವಾಗಿ ಅರಿಯುವುದು ಯಾರಿಂದಲೂ ಎಂದಿಗೂ ಸಾಧ್ಯವಿಲ್ಲ ಎಂದು ಮುಂತಾದ ಯಾಜ್ಞ ವಲ್ಕ್ಯನ ನುಡಿಗಳಿಂದ ಗಾರ್ಗಿ ಸಮಾಧಾನ ಹೊಂದಿ ಯಾಜ್ಞವಲ್ಕ್ಯನನ್ನು ಬ್ರಹ್ಮಿಷ್ಠನೆಂದು ಮನ್ನಿಸಲು ಸಭೆಯನ್ನು ಕೇಳಿಕೊಳ್ಳುತ್ತಾಳೆ.