ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಂಗ್ಕೋ

ವಿಕಿಸೋರ್ಸ್ದಿಂದ

ಗಿಂಗ್ಕೋ

[ಸಂಪಾದಿಸಿ]

ಗಿಂಗೊಯೋಲೀಸ್ ಗಣದ ಗಿಂಗೊಯೇಸೀ ಕುಟುಂಬಕ್ಕೆ ಸೇರಿದ ಒಂದು ನಗ್ನ ಬೀಜ ಸಸ್ಯ. ಪರ್ಮಿಯನ್ ಅವಧಿಯಲ್ಲಿ ಪ್ರಥಮತಃ ಕಾಣಿಸಿಕೊಂಡ ಈ ಮರ ಬಹುಪ್ರಾಚೀನಕಾಲದ ಸಸ್ಯಗಳ ಏಕೈಕ ಪ್ರತಿನಿಧಿಯಾಗಿ ಇಂದಿಗೂ ಮೂಲತಃ ಯಾವ ಬದಲಾವಣೆಯನ್ನೂ ತೋರಿಸದೆ ಉಳಿದಿರುವುದರಿಂದ ಇದನ್ನು ಜೀವಂತ ಫಾಸಿಲ್ ಎಂದು ಕರೆಯುವುದುಂಟು. ಟ್ರಯಾಸಿಕ್, ಜುರಾಸಿಕ್ ಮತ್ತು ಟರ್ಶಿಯರಿ ಕಾಲಗಳಲ್ಲಿ ಅತ್ಯಂತ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿದ್ದ ಗಿಂಗ್ಕೋದಲ್ಲಿ ಈಗ ಬೈಲೋಬ ಎಂಬ ಒಂದೇ ಒಂದು ಪ್ರಭೇದ ಮಾತ್ರ ಉಳಿದಿದೆ. ಇದಾದರೂ ಪಶ್ಚಿಮ ಚೀನದ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣದೊರೆಯುತ್ತದೆ. ಚೀನದಲ್ಲಿ ಇದನ್ನು ಪವಿತ್ರಮರವೆಂದು ಪರಿಗಣಿಸಲಾಗಿದ್ದು ಅಲ್ಲಿನ ದೇವಾಲಯಗಳ ಆವರಣಗಳಲ್ಲಿ ಬೆಳೆಸಲಾಗಿದೆ. ಜಪಾನಿನಲ್ಲೂ ಇದನ್ನು ಕಾಣಬಹುದು. ಭಾರತದಲ್ಲಿ ನೀಲಗಿರಿಯಲ್ಲಿ ಸಸ್ಯಾರಾಮ, ಡೆಹ್ರಾಡೂನ್ ಮುಂತಾದೆಡೆಗಳಲ್ಲಿ ಕೆಲವು ಮರಗಳನ್ನು ನೋಡಬಹುದು.

ಗಿಂಗ್ಕೋ ಸುಮಾರು 120' ಎತ್ತರಕ್ಕೆ ಬೆಳೆಯುವ ಚೆಲುವಾದ ಮರ. ಇದರಲ್ಲಿ ಹೆಚ್ಚು ರೆಂಬೆಗಳು ಹುಟ್ಟುವುದಿಲ್ಲ. ರೆಂಬೆಗಳಲ್ಲಿ ಉದ್ದರೆಂಬೆ ಮತ್ತು ಮೋಟುರೆಂಬೆ ಎಂಬ ಎರಡು ಬಗೆಗಳಿವೆ. ಮೋಟುರೆಂಬೆಗಳ ಮೇಲೆಯೇ ಎಲೆಗಳು ರೂಪುಗೊಳ್ಳುವುದು. ಗುಂಪು ಗುಂಪಾಗಿ ಹುಟ್ಟುವ ಈ ಎಲೆಗಳು ತಮ್ಮ ಆಕಾರ, ನೋಟ ಮತ್ತು ನಾಳವಿನ್ಯಾಸದಲ್ಲಿ ತಾಮ್ರಶಿಖಿ ಎಂಬ (ಮೇಡನ್ ಹೇರ್ ಫರ್ನ್) ಜರೀಗಿಡದ ಎಲೆಗಳನ್ನು ಹೋಲುತ್ತವೆ. ಇದರಿಂದ ಗಿಂಗ್ಕೋ ಮರಕ್ಕೆ ಮೇಡನ್ ಹೇರ್ ಟ್ರೀ ಎಂಬ ಹೆಸರಿದೆ. ಒಂದೊಂದು ಎಲೆಯೂ 2-4 ಇಂಚು ಉದ್ದವೂ ಹೆಚ್ಚು ಕಡಿಮೆ ಅಷ್ಟೇ ಅಗಲವೂ ಇದ್ದು ಬೀಸಣಿಗೆಯಾಕಾರದಲ್ಲಿದೆ ಹಾಗೂ ದ್ವಿಭಜನ ರೀತಿಯ ನಾಳ ವಿನ್ಯಾಸವನ್ನು ಪ್ರದರ್ಶಿಸುತ್ತದೆ. ಎಲೆಗಳು ವರ್ಷಕ್ಕೊಮ್ಮೆ ಉದುರುತ್ತವೆ. ಗಿಂಗ್ಕೋವಿನಲ್ಲಿ ಲಿಂಗಭೇದವಿದೆ. ಈ ಲಕ್ಷಣದಲ್ಲಿ ಇದು ಗೊಡ್ಡು ಈಚಲು ಜಾತಿಯ ಮರಗಳನ್ನು (ಸೈಕ್ಯಾಸ್) ಹೋಲುತ್ತದೆ. ಕಾಯಿ ಒಂದು ರೀತಿಯ ಅಷ್ಟಿಫಲ. ಇದರ ತಿರುಳಿಗೆ ಒಂದು ಬಗೆಯ ದುರ್ವಾಸನೆಯಿದೆ.

ಗಿಂಗ್ಕೋ ಮರ ಆಕರ್ಷಕವಾಗಿರುವುದರಿಂದ ಇದನ್ನು ಅಲಂಕಾರಕ್ಕಾಗಿ ತೋಟಗಳಲ್ಲಿ ಅಲ್ಲಲ್ಲಿ ಬೆಳೆಸಲಾಗಿದೆ. ಇದನ್ನು ಬೀಜಗಳ ಮೂಲಕ ಇಲ್ಲವೆ ಕಾಂಡತುಂಡುಗಳಿಂದ ವೃದ್ಧಿಸಬಹುದು. ಆದರೆ ಬೆಳೆವಣಿಗೆ ಬಲು ನಿಧಾನ. ಕಾಂಡತುಂಡುಗಳಿಂದ ಬೇರುಮೂಡಲು ಕೊನೆಯ ಪಕ್ಷ ಎರಡು ವರ್ಷಗಳಾದರೂ ಬೇಕು. ಗಿಂಗ್ಕೋ ಮರದಿಂದ ಹಲವಾರು ಉಪಯೋಗಗಳುಂಟು. ಚೀನ, ಜಪಾನುಗಳಲ್ಲಿ ಬೀಜದಲ್ಲಿನ ತಿರುಳಿನ ಭಾಗವನ್ನು ಹುರಿದು ಇಲ್ಲವೇ ಬೇಯಿಸಿ ತಿನ್ನುವುದಿದೆ. ಬಟ್ಟೆಗಳನ್ನು ಒಗೆಯುವುದಕ್ಕೂ ಬೀಜಗಳನ್ನು ಉಪಯೋಗಿಸುವುದುಂಟು. ಇದರ ಚೌಬೀನೆ ಹಳದಿವರ್ಣದಿಂದಿದ್ದು ಹಗುರವೂ ಬಿದುರವೂ ಆಗಿದೆ. ಚೀನ, ಜಪಾನುಗಳಲ್ಲಿ ಆಟದ ಸಾಮಾನುಗಳನ್ನು ಮತ್ತು ಕೇರಂ ಬೋರ್ಡುಗಳನ್ನು ತಯಾರಿಸಲು ಇದನ್ನು ಉಪಯೋಗಿಸುತ್ತಾರೆ. ಗಿಡತಿಗಣೆಗಳೆಂದರೆ, ಹೆಮಿಪ್ಟರ ಗಣ ಮತ್ತು ಹೆಟಿರಾಪ್ಟರ ಉಪಗಣಗಳ ಹಲವಾರು ಕುಟುಂಬಗಳಿಗೆ ಸೇರಿದ ಕೀಟಗಳು (ಪ್ಲಾಂಟ್ಬಗ್ಸ). ತಿಗಣೆ, ಹೇನು ಮುಂತಾದ ಕೀಟಗಳಿಗೆ ಬಲು ಹತ್ತಿರ ಸಂಬಂಧಿಗಳು. ಹಲವಾರು ಬಗೆಯ ಸಸ್ಯಗಳ ಕಾಂಡ, ಎಲೆ, ಹೂ ಮುಂತಾದ ಅಂಗಗಳ ಮೇಲೆ ಪರಾವಲಂಬಿಗಳಾಗಿದ್ದು ಅವುಗಳ ರಸವನ್ನು ಕುಡಿದು ಬದುಕುವುದರಿಂದ ಇವಕ್ಕೆ ಈ ಹೆಸರು ಬಂದಿದೆ.

ಗಿಡತಿಗಣೆಗಳ ದೇಹಲಕ್ಷಣಗಳು ಬಗೆಯಿಂದ ಬಗೆಗೆ ಸ್ವಲ್ಪ ವ್ಯತ್ಯಾಸವಾದರೂ ಎಲ್ಲಕ್ಕೂ ಸಮಾನವಾದ ಕೆಲವು ಗುಣಲಕ್ಷಣಗಳನ್ನು ಗುರುತಿಸಬಹುದು. ಈ ಕೆಳಗಿನವುಗಳು ಹೀಗಿವೆ

  1. ರೆಕ್ಕೆಗಳು ಎರಡು ಜೊತೆ ಇವೆ. ಮುಂದಿನ ಜೊತೆ ಬುಡಭಾಗ ದಪ್ಪವಾಗಿಯೂ ಚರ್ಮಿಲವಾಗಿಯೂ ಇದೆ. ತುದಿಭಾಗ ಪೊರೆಯಂತಿದೆ. ಇದರಿಂದಾಗಿ ಈ ಬಗೆಯ ರೆಕ್ಕೆಯನ್ನು ಹೆಮೆಲಿಟ್ರಾನ್ ಮಾದರಿಯದು ಎಂದು ಕರೆಯಲಾಗುತ್ತದೆ. ಹಿಂದಿನ ರೆಕ್ಕೆಗಳು ಸಂಪುರ್ಣವಾಗಿಯೇ ಎಲೆಗಳ ರೂಪದಂತಿವೆ. ರೆಕ್ಕೆಗಳನ್ನು ಮಡಚಿದಾಗ ಅವು ಉದರಭಾಗದ ಮೇಲೆ ಚಪ್ಪಟೆ ಆಕಾರವಾಗಿ ಕುಳಿತುಕೊಳ್ಳುತ್ತವೆ. ಕೆಲವು ಕೀಟಗಳಿಗೆ ರೆಕ್ಕೆಯೇ ಇಲ್ಲ.
  2. ಕುಡಿಮೀಸೆಗಳು (ಆಂಟೆನೀ) ಉದ್ದವಾಗಿವೆ ಹಾಗೂ 4-5 ತುಂಡುಗಳಿಂದ ಕೂಡಿವೆ.
  3. ಕಣ್ಣುಗಳು ಸಂಯುಕ್ತ ಮಾದರಿಯವು.
  4. ಬಾಯಿಯ ಭಾಗಗಳು ಸಸ್ಯಭಾಗಗಳನ್ನು ಚುಚ್ಚಿ, ರಸವನ್ನು ಹೀರಲು ಅನುಕೂಲವಾಗಿವೆ. ತಲೆಯ ಮುಂಭಾಗ ಒಂದು ರೀತಿಯ ತೆಳುವಾದ ಕೊಕ್ಕಿನಂಥ ರಚನೆಯಿದೆ. ಇದು ಹಿಮ್ಮುಖವಾಗಿ ಬುಡದವರೆಗೂ ಚಾಚಿದೆ. ಇದರೊಳಗೆ ಚುಚ್ಚುಸಾಧನಗಳಾದ 2 ಮ್ಯಾಂಡಿಬಲ್ಗಳೂ 2 ಮ್ಯಾಕ್ಸಿಲಗಳೂ ಇವೆ. ಮ್ಯಾಕ್ಸಿಲಗಳು ಒಂದರೊಡನೊಂದು ಕೂಡಿಕೊಂಡು ಆಹಾರ ಮತ್ತು ಜೊಲ್ಲು ಸಾಗಣೆಗೆ ಅನುಕೂಲವಾದ ಕಾಲುವೆಗಳಾಗಿ ಪರಿವರ್ತಿತವಾಗಿವೆ.
  5. ಬಹುಪಾಲು ಗಿಡತಿಗಣೆಗಳಲ್ಲಿ ವಾಸನೆಯನ್ನು ಉಂಟುಮಾಡುವ ಗ್ರಂಥಿಗಳಿವೆ. ಇವು ವಿಶಿಷ್ಟ ರೀತಿಯ ಹಾಗೂ ಅಸಹ್ಯವಾದ ವಾಸನೆಯನ್ನು ಹೊರಸೂಸುತ್ತವೆ.
  6. ಗಿಡತಿಗಣೆಗಳು ಸರಳರೀತಿಯ ರೂಪಾಂತರತೆಯನ್ನು ಪ್ರದರ್ಶಿಸುತ್ತವೆ.

ಗಿಡತಿಗಣೆಗಳ ಸಂಖ್ಯೆ ಅಗಾಧ ಮತ್ತು ವ್ಯಾಪ್ತಿ ಬಲು ವಿಸ್ತಾರ. ಪ್ರಪಂಚದಾದ್ಯಂತ ಸುಮಾರು 55,೦೦೦ ಬಗೆಯ ಗಿಡತಿಗಣೆಗಳಿವೆ. ಭಾರತದಲ್ಲಿ ಸುಮಾರು 45೦೦ ಬಗೆಗಳು ಕಾಣಬರುತ್ತವೆ. ಇವುಗಳಲ್ಲಿ ಹೆಚ್ಚಿನವು ನೆಲವಾಸಿಗಳು. ಕೆಲವು ಜಲವಾಸಿಗಳೂ ಹೌದು. ಸಸ್ಯಗಳ ರಸವನ್ನು ಹೀರಿ ಬದುಕುವ ಇವು ಕೃಷಿ ಸಸ್ಯಗಳಿಗೆ ತೀವ್ರಸ್ವರೂಪದ ಹಾನಿಯುಂಟು ಮಾಡುತ್ತವೆ. ಆದರೆ ಅವುಗಳಲ್ಲೂ ಕೆಲವು ಉಪಕಾರಿ ಕೀಟಗಳಿಲ್ಲದೇ ಇಲ್ಲ. ಇತರೆ ಬಗೆಯ ಹಾನಿಕಾರಕ ಕೀಟಗಳನ್ನು ತಿಂದು ಮಾನವನಿಗೆ ಉಪಕಾರಿಗಳೆನಿಸಿವೆ.

ಕುಡಿಮೀಸೆಗಳ ಲಕ್ಷಣಗಳ ಆಧಾರದ ಗಿಡತಿಗಣೆಗಳ ಗಣವನ್ನು ಕ್ರಿಪ್ಟೊಸೆರೇಟ ಮತ್ತು ಜಿಮ್ನೊಸೆರೇಟ ಎಂಬ ಎರಡು ಉಪಗಣಗಳಾಗಿ ವಿಂಗಡಿಸಲಾಗಿದೆ. ಇದೊಂದು ಉಪಗಣವನ್ನೂ ಅದರಲ್ಲಿನ ಕೀಟಗಳ ರೆಕ್ಕೆ, ಕಾಲು ಮತ್ತು ಕೊಕ್ಕುಗಳ ಗಣಗಳನ್ನು ಆಧರಿಸಿ ಹಲವಾರು ಕುಟುಂಬಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮುಖ್ಯವಾದ ಕುಟುಂಬಗಳನ್ನೂ ಅವುಗಳ ಪ್ರರೂಪೀ ಕೀಟಗಳನ್ನೂ ಮುಂದೆ ವಿವರಿಸಲಾಗಿದೆ.

  1. ಕಾರಿಕ್ಸಿಡೀ, ಉದಾ : ಕಾರಿಕ್ಸ.
  2. ನೋಟೋನೆಕ್ಟಿಡೀ, ಉದಾ : ನೋಟೋನೆಕ್ಟ.
  3. ನೇಪಿಡೀ, ಉದಾ : ನೇಪ, ರೆನೇಟ್ರ,
  4. ಬೆಲಾಸ್ಟೊಮಾಟಿಡೀ, ಉದಾ : ಬೆಲಾಸ್ಟೋಮ.
  5. ಜೆರಿಡೀ, ಉದಾ : ಜೆರಿಸ್.
  6. ಮಿರಿಡೀ, ಉದಾ : ಹಾಲ್ಟಿಕಸ್, ಲೈಗಸ್, ಲೈಗೀಡಿಯ ಇತ್ಯಾದಿ.
  7. ಫೈಮ್ಯಾಟಿಡೀ, ಉದಾ : ಫೈಮೇಟ,
  8. ಪೆಂಟಟೋಮಿಡೀ, ಉದಾ : ಬೆಗ್ರಾಡ.
  9. ಲೈಗೀಯಿಡೀ, ಉದಾ : ಬ್ಲಿಸಸ್, ಆಕ್ಸಿಕೆರೀನಸ್, ಫೇನಸ್ ಇತ್ಯಾದಿ.
  10. ಕೋರಿಯಿಡೀ, ಉದಾ ಲೆಪ್ಟೊಕೊರಿಸ.