ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿನಿ

ವಿಕಿಸೋರ್ಸ್ದಿಂದ


ಪಶ್ಚಿಮ ಆಫ್ರಿಕದಲ್ಲಿ ಉ.ಅ. 15°, ದ.ಅ. 15° ನಡುವೆ-ಕೇಪ್ವರ್ಡ್ನಿಂದ ಆಂಗೋಲದ ಮೋಕಮಿಡಿಸ್ವರೆಗೆ-ಹಬ್ಬಿರುವ ಕರಾವಳಿಪ್ರದೇಶಕ್ಕೆ ಸ್ಥೂಲವಾಗಿ ಈ ಹೆಸರಿದೆ. ಗಿನಿ ಖಾರಿಯಲ್ಲಿರುವ ಆನೊವಾನ್ ದ್ವೀಪದಿಂದ ಸೌನ್ ತೂಮೇ ದ್ವೀಪದ ಮೂಲಕ ಹಾಯ್ದು ಕ್ಯಾಮರೂನ್ ಪರ್ವತದವರೆಗೆ ಇರುವ ಜ್ವಾಲಾಮುಖೀಯ ಶಿಖರಗಳ ಸಾಲಿಗೆ ಪಶ್ಚಿಮದಲ್ಲಿರುವ ಪ್ರದೇಶ ಮೇಲಣ ಗಿನಿ; ಅದಕ್ಕೆ ದಕ್ಷಿಣದಲ್ಲಿರುವ ಪ್ರದೇಶ ಕೆಳಗಣ ಗಿನಿ. ಈ ಕರಾವಳಿಯ ಮಗ್ಗುಲಿಗೆ ಗಿನಿ ಖಾರಿಯಿದೆ. ಇದು ಅಟ್ಲಾಂಟಿಕ್ ಸಾಗರದ ಭಾಗ. 8ನೆಯ ಶತಮಾನದಲ್ಲಿ ಮೇಲಣ ನೈಜರ್ ನದೀಪ್ರದೇಶ ದಲ್ಲಿದ್ದ, ಘಿನಿ, ಗೆನಿ, ಜೆನಿ, ಡ್ಜೆನಿ ಎಂದು ಕರೆಯಲಾಗುತ್ತಿದ್ದ ರಾಜ್ಯದಿಂದಲೋ ಪಶ್ಚಿಮ ಸೂಡಾನಿನ ಅತ್ಯಂತ ಪ್ರಾಚೀನ ದೇಶವೆಂದು ಭಾವಿಸಲಾಗಿರುವ ಘಾನದಿಂದಲೋ ಗಿನಿ ಎಂಬ ಹೆಸರು ಬಂದಿರಬೇಕೆಂದು ಊಹಿಸಲಾಗಿದೆ.


ಸುಮಾರು 1350ರಿಂದಲೇ ಗಿನಿಯ ಹೆಸರು ಭೂಪಟಗಳ ಮೇಲೆ ಕಾಣಬರುತ್ತದೆ. 1364-65ರಷ್ಟು ಹಿಂದೆಯೇ ಉತ್ತರ ಫ್ರಾನ್ಸಿನ ಡಿಯೆಪ್ ಬಂದರಿನಿಂದ ಹೊರಟ ಹಡಗುಗಳು ಗಿನಿ ತೀರವನ್ನು ಮುಟ್ಟಿದ್ದುವೆಂದೂ ಘಾನದ ವರೆಗೂ ಫ್ರೆಂಚ್ ವರ್ತಕರು ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆದಿದ್ದರೆಂದೂ ಫ್ರೆಂಚರು ಹೇಳಿಕೊಳ್ಳುತ್ತಾರೆ. ಆದರೆ ಇದಕ್ಕೆ ಖಚಿತವಾದ ಆಧಾರಗಳಿಲ್ಲ. ಪೋರ್ಚುಗೀಸ್ ನಾವಿಕರು ಉ.ಅ. 260 ಯಲ್ಲಿರುವ ಬಾಜಡಾರ್ ಭೂಶಿರವನ್ನು 1434ರಲ್ಲಿ ಬಳಸಿದರು. ಕೆಲವು ವರ್ಷಗಳ ಅನಂತರ ಈ ಪ್ರದೇಶದಿಂದ ಸರಕುಗಳನ್ನೂ ಗುಲಾಮರನ್ನೂ ಲಿಸ್ಬನಿಗೆ ಮೊಟ್ಟಮೊದಲಿಗೆ ತರಲಾಯಿತು. ಪೋರ್ಚುಗೀಸರು 1471ರಲ್ಲಿ ಸಮಾಭಾಜಕವನ್ನು ತಲಪಿದರು. ಕಾಂಗೋದ ಆವಿಷ್ಕಾರವಾದ್ದು 1482ರಲ್ಲಿ. ಇತರ ಐರೋಪ್ಯ ದೇಶಗಳವರು ಈ ಪ್ರದೇಶಕ್ಕೆ ಬಂದದ್ದು 1530ರಲ್ಲಿ ಅನಂತರ. ಅವರೆಲ್ಲ ಇಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆದರು. ಈ ಪ್ರದೇಶದ ಒಂದೊಂದು ಭಾಗಕ್ಕೂ ಅಲ್ಲಿಯ ಪ್ರಧಾನ ವಸ್ತುವಿಗೆ ಅನುಗುಣವಾದ ಹೆಸರು ಬಂತು. ಸಿಯೆರ ಲಿಯೋನಿನಿಂದ ಪಾಲ್ಮಾಸ್ ವರೆಗಿನ ಪ್ರದೇಶ ಗ್ರೇನ್ ಕೋಸ್ಟ್ (ಧಾನ್ಯ ಕರಾವಳಿ) ಎನಿಸಿಕೊಂಡಿದೆ. ಸ್ವರ್ಗದ ಧಾನ್ಯವೆಂದು ಕರೆಯಲಾದ ಗಿನಿ ಪೆಪರ್ ಇಲ್ಲಿಯ ಮುಖ್ಯ ವಸ್ತು. ಪಾಲ್ಮಾಸ್ನಿಂದ ಆಚೆಗಿನ ಪ್ರದೇಶ ಐವರಿ ಕೋಸ್ಟ್ (ದಂತ ಕರಾವಳಿ). ವೋಲ್ಟ ನದಿಯಿಂದ ನೈಜರ್ ನದೀಮುಖಜಭೂಮಿಯವರೆಗಿನದು ಸ್ಲೇವ್ ಕೋಸ್ಟ್ (ಗುಲಾಮ ಕರಾವಳಿ). ತ್ರೀ ಪಾಯಿಂಟ್ಸ್ ಭೂಶಿರಕ್ಕೆ ಪೂರ್ವದ ಪ್ರದೇಶ ಗೋಲ್ಡ್ ಕೋಸ್ಟ್ (ಚಿನ್ನದ ಕರಾವಳಿ). ಗಿನಿ ಗಣರಾಜ್ಯ, ಸೆಯೆರ ಲಿಯೋನ್, ಲೈಬೀರಿಯ, ಐವರಿ ಕೋಸ್ಟ್ ಗಣರಾಜ್ಯ, ಉತ್ತರ ವೋಲ್ಟ, ಘಾನ, ಟೋಗೋ, ದಹೋಮಿ ಗಣರಾಜ್ಯ, ನೈಜೀರಿಯ, ಕ್ಯಾಮರೂನ್, ಸಮಭಾಜಕೀಯ ಗಿನಿ, ಗ್ಯಾಬನ್, ಗ್ಯಾಂಬಿಯ, ಪೋರ್ಚುಗೀಸ್ ಗಿನಿ-ಇವು ಗಿನಿ ಪ್ರದೇಶದಲ್ಲಿರುವ ಮುಖ್ಯ ದೇಶಗಳು. ಇವನ್ನು ಕುರಿತ ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ.