ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಳಿ

ವಿಕಿಸೋರ್ಸ್ದಿಂದ
ಗಿಳಿ

ಸಿಟಾಸಿಫಾರ್ಮೀಸ್ ಗಣದ ಸಿಟಾಸಿಡೀ ಕುಟುಂಬಕ್ಕೆ ಸೇರಿದ ಸಿಟಾಕ್ಯುಲ ಜಾತಿಯ ವಿವಿಧ ಪ್ರಭೇದಗಳಿಗಿರುವ ಸಾಮಾನ್ಯ ಹೆಸರು (ಪ್ಯಾರೆಟ್, ಪ್ಯಾರಕೀಟ್). ಭಾರತದಲ್ಲಿ ಈ ಜಾತಿಯ ಯೂಪ್ಯಾಟ್ರಿಯ, ಕ್ರಾಮೆರಿ ಮತ್ತು ಸಯಾನೊಸಿಫ್ಯಾಲ ಎಂಬ ಮೂರು ಪ್ರಭೇದಗಳು ಕಂಡುಬರುತ್ತವೆ. ಅಲ್ಲದೆ ಗಿಳಿಗಳ ಕುಟುಂಬದಲ್ಲಿ ಗಿಳಿಗಳನ್ನೇ ಹೋಲುವ ಕಾಕಟೂ, ಕಾಕಟೀಲ್, ಲೋರಿಸ್, ಲೋರಿಕೀಟ್, ಮಕಾವ್, ಬಡ್ಜರಿಗಾರ್, ಕಿಯಾ, ಒಲವಿನ ಹಕ್ಕಿಗಳು (ಲವ್ ಬರ್ಡ್ಸ್) ಮುಂತಾದವೂ ಸೇರಿವೆಯಾದ್ದರಿಂದ ಒಟ್ಟಾಗಿ ಇವನ್ನೂ ಗಿಳಿಗಳೆಂದು ನಿರ್ದೇಶಿಸುವುದುಂಟು. ಮೈ ಬಣ್ಣದ ಬೆಡಗಿಗೂ ಮನುಷ್ಯನ ಧ್ವನಿಯನ್ನು ಅನುಕರಿಸುವ ಅಸಾಧಾರಣ ಶಕ್ತಿಗೂ ಹೆಸರಾಗಿ ರುವ ಇವನ್ನು ಬಹುಪ್ರಾಚೀನ ಕಾಲದಿಂದಲೂ ಮಾನವ ಸಾಕುತ್ತಿದ್ದಾನೆ. ಇವನ್ನು ಸಾಕುವುದು ಸುಲಭವೂ ಹೌದು. ಗಿಳಿಯನ್ನು ಗಿಣಿ, ಪಂಡಿತವಕ್ಕಿ, ಕನ್ನಡವಕ್ಕಿ ಎಂದೂ ಕೀರ, ಶುಕ ಎಂದೂ ಕವಿಗಳು ಕರೆದಿದ್ದಾರೆ. ಪುರುಳಿ ಎಂಬುದು ಹೆಣ್ಣು ಗಿಳಿಯ ಹೆಸರು. ಗಿಳಿ ಬಹುಹಿಂದಿನಿಂದಲೂ ಕವಿಗಳಿಗೆ, ರಸಿಕರಿಗೆ ಬಹು ಮೆಚ್ಚಿನ ಹಕ್ಕಿಯಾಗಿದೆ.


ಗಿಳಿ ಎಲ್ಲರಿಗೂ ಪರಿಚಿತವಾದ ಪಕ್ಷಿ. ದೊಡ್ಡ ತಲೆ, ಮೋಟುಕತ್ತು, ವಿಶಿಷ್ಟವಾದ ಕೊಕ್ಕಯಂತೆ ಬಾಗಿದ, ಬಲಯುತವಾದ ಹಾಗೂ ಕೆಂಪು ಬಣ್ಣದ ಕೊಕ್ಕು, ಹಸಿರು ಮೈಬಣ್ಣ, ಚೂಪು ಬಾಲ ಇವೆಲ್ಲ ಗಿಳಿಯ ಪ್ರಮುಖ ಲಕ್ಷಣಗಳು. ಗಿಳಿಯ ಇನ್ನೊಂದು ಮುಖ್ಯ ಲಕ್ಷಣ ಅದರ ಕಾಲು. ಕಾಲಿನ 4 ಬೆರಳುಗಳಲ್ಲಿ ಎರಡು ಹಿಂದಕ್ಕೂ ಎರಡು ಮುಂದಕ್ಕೂ ಬಾಗಿವೆ. ಇದರಿಂದ ಗಿಳಿ ಮರದ ರೆಂಬೆಗಳನ್ನು ಹಿಡಿದುಕೊಂಡು ಚಲಿಸಬಲ್ಲದು. ಅಲ್ಲದೆ ಆಹಾರವನ್ನು ಹಿಡಿದುಕೊಂಡು ಬಾಯಿಗೆ ಸಾಗಿಸುವ ಸೌಲಭ್ಯವೂ ಗಿಳಿಗೆ ಇದರಿಂದ ದೊರೆತಿದೆ. ಇದು ಬೇರಾವ ಹಕ್ಕಿಗಳಲ್ಲೂ ಇಲ್ಲ. ಇದೊಂದು ಜೀವಿಕಾಸದ ಪ್ರಕ್ರಿಯೆ. ಕೊಕ್ಕಿನ ಬುಡದಲ್ಲಿ ಸೆರೆ ಎಂಬ ಅಗಲವಾದ ಭಾಗವಿದೆ. ಇದರ ಮೂಲಕ ನಾಸಿಕ ರಂಧ್ರಗಳು ಹೊರತೆರೆಯುತ್ತವೆ. ಕೊಕ್ಕಿನ ಮೇಲ್ಭಾಗ ತಲೆಬುರುಡೆಗೆ ಬಂಧಿತವಾಗಿರುವುದರಿಂದ ಇದು ಅತ್ಯಂತ ಬಲಯುತವಾಗಿದೆ. ಅಲ್ಲದೆ ಗಿಳಿ ತನ್ನ ಕೊಕ್ಕನ್ನು ಮೂರನೆಯ ಕಾಲಿನಂತೆ ಬಳಸಿಕೊಂಡು ಮರವನ್ನು ಹತ್ತಬಲ್ಲದು. ಗಿಳಿಯ ನಾಲಗೆ ಉರುಳೆಯಾಕಾರದ್ದೂ, ತುಂಬ ಮೆತುವಾದದೂ ಆಗಿದೆ.


ಬಹುಪಾಲು ಗಿಳಿಗಳು ಮರದ ಪೊಟರೆಗಳಲ್ಲಿ ಗೂಡುಗಳನ್ನು ಕಟ್ಟುತ್ತವೆ. ಕೆಲವು ಮಾತ್ರ ನೆಲದ ಬಿಲಗಳಲ್ಲಿ ಗೂಡುಮಾಡಿ ಕೊಳ್ಳುತ್ತವೆ. ಹೆಣ್ಣು 1 ರಿಂದ 12 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳ ಬಣ್ಣ ಬಿಳಿ. ಕಾವು ಕೂರುವ ಕೆಲಸದಲ್ಲಿ ಸಾಮಾನ್ಯವಾಗಿ ಗಂಡು ಹೆಣ್ಣುಗಳೆರಡೂ ಪಾಲುಗೊಳ್ಳುತ್ತವೆ. ಕಾವು ಕೊಡುವ ಅವಧಿ ಚಿಕ್ಕ ಜಾತಿಗಳಲ್ಲಿ 16-19 ದಿವಸಗಳವರೆಗೂ ದೊಡ್ಡ ಜಾತಿಗಳಲ್ಲಿ ಸುಮಾರು 30 ದಿವಸಗಳವರೆಗೂ ಇರುತ್ತದೆ. ಆಗ ತಾನೆ ಹುಟ್ಟಿದ ಮರಿಗಳಿಗೆ ಪುಕ್ಕದ ಹೊದಿಕೆಯಿರುವುದಿಲ್ಲ; ಕಣ್ಣುಗಳೂ ಮುಚ್ಚಿರುತ್ತವೆ. ಸುಮಾರು 2-3 ತಿಂಗಳ ವರೆಗೆ ಮರಿಗಳನ್ನು ತಂದೆ ಮತ್ತು ತಾಯಿ ಗಿಳಿಗಳು ಗುಟುಕು ಕೊಟ್ಟು ಪೋಷಿಸುತ್ತವೆ. ಗಿಳಿಗಳು ಸುಮಾರು 50 ವರ್ಷ ಬದುಕಬಲ್ಲವು (ಕೆಲವು ದೊಡ್ಡ ಜಾತಿ ಗಿಳಿಗಳು 80 ಕ್ಕೂ ಹೆಚ್ಚು ವರ್ಷ ಬದುಕಿರುವ ಅನಧಿಕೃತ ವರದಿ ಉಂಟು.) ಆದರೆ ಚಿಕ್ಕ, ಪಂಜರದ ಗಿಳಿಗಳಾದ ಪ್ಯಾರಕೀಟ್ ಮತ್ತು ಬಡ್ಜರಿಗಾರ್ಗಳು 5 ವರ್ಷ ಮಾತ್ರ ಬದುಕುತ್ತವೆ. ಬಡ್ಜರಿಗಾರ್ ಆಸ್ಟ್ರೇಲಿಯಾದ ಹಕ್ಕಿಯಾಗಿದ್ದು ಪಂಜರದ ಹಕ್ಕಿಯಾಗಿ ಶೋಷಣೆಗೊಳಗಾಗಿದೆ. ಹೊರಬಿಟ್ಟರೆ ಇವು ಪರಿಸರದಲ್ಲಿ ಬದುಕಲಾರವು.


ಗಿಳಿಗಳು ಸಮಭಾಜಕವೃತ್ತಪ್ರದೇಶಕ್ಕೆ ಸೀಮಿತವಾಗಿವೆ. ಅದರಲ್ಲೂ ಆಸ್ಟ್ರೇಲಿಯ ಖಂಡದಲ್ಲಿ ವಿವಿಧ ಜಾತಿಗಳು ಅಧಿಕಸಂಖ್ಯೆಯಲ್ಲಿ ವಾಸಿಸುತ್ತವೆ. ಕೆಲವು ಪ್ರಭೇದದ ಗಿಳಿಗಳು ಮಣ್ಣಿನಲ್ಲಿರುವ ಖನಿಜಾಂಶಗಳನ್ನು ಬಳಸಿಕೊಳ್ಳುವ ಸಲುವಾಗಿ ಆಯ್ದ ಸ್ಥಳದ ಮಣ್ಣನ್ನು ತಿನ್ನುತ್ತವೆ. ಇದನ್ನು ಆನೆಗಳು ಉಪ್ಪುನೆಕ್ಕುವುದಕ್ಕೆ ಹೋಲಿಸಬಹುದು ಆನೆ.