ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಂಡಪ್ಪ, ಡಿ ವಿ

ವಿಕಿಸೋರ್ಸ್ದಿಂದ

ಗುಂಡಪ್ಪ, ಡಿ ವಿ 1889-1975 ಪ್ರಸಿದ್ಧ ಸಾಹಿತಿ, ಪತ್ರಿಕೋದ್ಯಮಿ, ಸಾರ್ವಜನಿಕ. ಡಿ.ವಿ.ಜಿ. ಎಂಬ ಮೂರಕ್ಷರದ ಸಂಕ್ಷಿಪ್ತನಾಮದಿಂದ ಚಿರಪರಿಚಿತರಾಗಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ತಂದೆ ದೇವನಹಳ್ಳಿ ವೆಂಕಟರಮಣಯ್ಯ. ತಾಯಿ ಅಲಮೇಲಮ್ಮ. ವಿದ್ಯಾಭ್ಯಾಸ ಲೋಯರ್ ಸೆಕೆಂಡರಿವರೆಗೆ-ಮುಳಬಾಗಿಲಿನ ಆಂಗ್ಲೋ ವೆರ್ನಾಕ್ಯುಲರ್ ಶಾಲೆಯಲ್ಲಿ; ಮೆಟ್ರಿಕ್ಯುಲೇಷನ್ ವರಗೆ-ಮೈಸೂರು ಮತ್ತು ಕೋಲಾರ ಪ್ರೌಢಶಾಲೆಗಳಲ್ಲಿ.

ಗುಂಡಪ್ಪನವರಿಗೆ ಪತ್ರಿಕೋದ್ಯಮದಲ್ಲಿ ಮೊದಲಿನಿಂದಲೂ ಅಮಿತವಾದ ಆಸಕ್ತಿ. ಬೆಂಗಳೂರಿನ ಸೂರ್ಯೋದಯ ಪ್ರಕಾಶಿಕಾ ವಾರಪತ್ರಿಕೆಯ ಕಾರ್ಖಾನೆಯಲ್ಲಿವರು ಎರಡು ವರ್ಷ ಕೆಲಸಮಾಡಿದರು (1905-06). ಸ್ಥಾಪಕ-ಸಂಪಾದಕರಾಗಿ 'ಭಾರತಿ' ಎಂಬ ಕನ್ನಡ ದಿನಪತ್ರಿಕೆಯನ್ನು ಕೆಲವು ಕಾಲ (1907-08) ನಡೆಸಿದರು. ಮೈಸೂರು ಸ್ಟ್ಯಾಂಡರ್ಡ್, ನಗೆಗನ್ನಡಿ, ಮೈಸೂರು ಮೇಲ್, ಇಂಡಿಯನ್ ರೆವ್ಯು ಮುಂತಾದ ಪತ್ರಿಕೆಗಳಿಗೆ ಇವರು ಮೂರು ವರ್ಷಕಾಲ (1908-11) ಲೇಖನಗಳನ್ನು ಬರೆದುದುಂಟು. ಸಹಸಂಪಾದಕರಾಗಿ ಮೈಸೂರು ಟೈಮ್ಸ್ ಎಂಬ ವಾರಾರ್ಧ ಪತ್ರಿಕೆಯನ್ನೂ (1909-10) ಪ್ರಕಾಶಕ-ಸಂಪಾದಕರಾಗಿ ಕರ್ನಾಟಕ ಎಂಬ ಇಂಗ್ಲಿಷಿನ ವಾರಾರ್ಧಪತ್ರಿಕೆಯನ್ನೂ (1921-22) ರಿಂದ ಇವರು ನಡೆಸಿರುವುದುಂಟು. ತಾವೇ ಕಟ್ಟಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಅಂಗಪತ್ರಿಕೆಯಾದ ಪಬ್ಲಿಕ್ ಅಫೇರ್ಸ್ ಎಂಬ ಮಾಸ ಪತ್ರಿಕೆಗೆ 1949 ರಿಂದಲೂ ಸಂಪಾದಕರಾಗಿದ್ದರು. ಗುಂಡಪ್ಪನವರು ಬಾಗಲಕೋಟೆಯಲ್ಲಿ ಸಮಾವೇಶಗೊಂಡ (1928) ಅಖಿಲ ಕರ್ಣಾಟಕ ವೃತ್ತಪತ್ರಿಕಾಕರ್ತರ ಪ್ರಥಮ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದುದಲ್ಲದೆ ಮೈಸೂರು ಸಂಸ್ಥಾನದ ಪತ್ರಿಕೋದ್ಯಮಿಗಳ ಸಂಘದ ಪ್ರಥವi ಅಧ್ಯಕ್ಷರಾಗಿಯೂ ಕೆಲಸಮಾಡಿದ್ದರು.

ಭಾರತದ ನೂತನ ಸಂವಿಧಾನದಲ್ಲಿ ದೇಶೀಯ ಸಂಸ್ಥಾನಗಳ ಹಾಗೂ ಸಾಂಸ್ಥಾನಿಕ ಪ್ರಜೆಗಳ ಸ್ಥಾನಮಾನಗಳೇನಿರಬೇಕೆಂಬುದನ್ನು ಕುರಿತು ಗುಂಡಪ್ಪನವರು ಗಾಢವಾದ ಅಧ್ಯಯನ ನಡೆಸಿ ಅನೇಕ ಲೇಖನಗಳನ್ನು ಬರೆದಿದ್ದಾರಲ್ಲದೆ ಪ್ರಮುಖರಿಗೆ ಮನವಿಗಳನ್ನು ಸಲ್ಲಿಸಿದ್ದುಂಟು. ಅವುಗಳಲ್ಲಿ ಬಿಕನೀರ್ ಮಹಾರಾಜರಿಗೆ (1917). ಮಾಂಟೆಗು ಅವರಿಗೆ (1928) ಮತ್ತು ಬಟ್ಲರ್ ಸಮಿತಿಗೆ (1928) ಸಲ್ಲಿಸಿದ ಮನವಿಗಳನ್ನು ನೆನೆಯಬಹುದು. ಈ ಬಗ್ಗೆ ಶ್ರೀಯುತರು ಇಂಗ್ಲಿಷಿನಲ್ಲಿ 'ದಿ ಪ್ರಾಬ್ಲಮ್ ಆಫ್ ಇಂಡಿಯನ್ ನೇಟಿವ್ ಸ್ಟೇಟ್ಸ್ (1917). 'ದಿ ಗೌರ್ನಮೆಂಟ್ ಆಫ್ ಇಂಡಿಯ ಅಂಡ್ ದಿ ಇಂಡಿಯನ್ ಸ್ಟೇಟ್ಸ್ (1926), 'ದಿ, ಸ್ಟೇಟ್ಸ್ ಅಂಡ್ ದೇರ್ ಪೀಪಲ್ ಇನ್ ದಿ ಇಂಡಿಯನ್ ಕಾನ್ಸ್ಟಿಟ್ಯೂಷನ್ (1931)_ ಈ ಪುಸ್ತಕಗಳನ್ನು ರಚಿಸಿದ್ದಾರೆ. ತಿರುವಾಂಕೂರಿನಲ್ಲಿ ನಡೆದ ದಕ್ಷಿಣ ಭಾರತ ದೇಶಿಯ ಪ್ರಜೆಗಳ ಸಮ್ಮೇಳನದ ಸಂದರ್ಭದಲ್ಲಿ (1929) ಅಧ್ಯಕ್ಷರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ಗುಂಡಪ್ಪನವರು ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು.

ಬೆಂಗಳೂರಿನಲ್ಲಿ (1) ಪಾಪ್ಯುಲರ್ ಎಜ್ಯುಕೇಷನ್ ಲೀಗ್, (2) ಸೋಷಿಯಲ್ ಸರ್ವೀಸ್ ಲೀಗ್ (1915-20), (3) ಪ್ರಜಾಜನ ಪರಿಷತ್ತು (ಮೈಸೂರು ಪೀಪಲ್ಸ್ ಕನ್‍ವೆನ್‍ಷನ್ 1919 ಡಿಸೆಂಬರ್), (4) ದೇಶಿಯ ಸಂಸ್ಥಾನಗಳ ಪ್ರಜಾಪರಿಷತ್ತು (ಸ್ಟೇಟ್ಸ್ ಪೀಪಲ್ಸ್ ಕಾನ್‍ಫರೆನ್ಸ್. 1931). (5) ದ್ವಿತೀಯ ಮಹಾಯುದ್ಧ ಸಮಯದಲ್ಲಿ ಸೆಲ್ಫ್-ಪ್ರೊಟೆಕ್ಷನ್ ಲೀಗ್ (1938-39) ಮೊದಲಾದ ಹತ್ತಾರು ಸಾರ್ವಜನಿಕ ಸಂಘ ಸಮಾರಂಭಗಳ ಮುಖ್ಯ ಪ್ರವರ್ತಕರಾದವರು ಗುಂಡಪ್ಪನವರು. ಬೆಂಗಳೂರು ಪುರಸಭೆಯ ಸದಸ್ಯರಾಗಿ (1912ರಿಂದ), ಮೈಸೂರು ಸಂಸ್ಥಾನ ಶಾಸನ ಪರಿಷತ್ತಿನ ಸದಸ್ಯರಾಗಿ (1926-40) ಮೈಸೂರು ವಿಶ್ವವಿದ್ಯಾನಿಲಯದ ಸನೆಟ್ ಸದಸ್ಯರಾಗಿ 1927-43, ಯೂನಿವರ್ಸಿಟಿ ಕೌನ್ಸಿಲ್ ಸದಸ್ಯರಾಗಿ (1933-39) ಮಿರ್ಜಾ ಸರ್ಕಾರ ನಿಯಮಿಸಿದ ರಾಜ್ಯಾಂಗ ಸುಧಾರಣ ಸಮಿತಿ (1939) ಹಾಗೂ ಇತರ ವಿಶೇಷ ಸಮಿತಿಗಳ ಸದಸ್ಯರಾಗಿ ಶ್ರೀಯುತರು ಅಪಾರ ಜನಸೇವೆಯನ್ನು ಮಾಡಿರುವರಲ್ಲದೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ (1945ರಿಂದ) ಸ್ಥಾಪಕ ಪ್ರಮುಖರೂ ಕಾರ್ಯದರ್ಶಿಗಳೂ ಆಗಿ ಕೆಲಸಮಾಡಿದ್ದಾರೆ. ಈ ಸಂಸ್ಥೆಯ ಬಗೆಗಿನ ವಿವರಗಳು ಈ ಲೇಖನದ ಕೊನೆಯಲ್ಲಿವೆ.

ಸಾರ್ವಜನಿಕ ಕ್ಷೇತ್ರದಲ್ಲಿ ಹೇಗೋ ಹಾಗೇ ಸಾಹಿತ್ಯ ಕ್ಷೇತ್ರದಲ್ಲೂ ಗುಂಡಪ್ಪನವರ ಕಾರ್ಯವ್ಯಾಪ್ತಿ ಅಮೋಘವಾದದು. ಮಡಿಕೇರಿಯಲ್ಲಿ ಸಮಾವೇಶಗೊಂಡ 18ನೆಯ ಕನ್ನಡ ಸಾಹಿತ್ಯ ಸಮಾವೇಶಕ್ಕೆ (1932) ಅವರು ಅಧ್ಯಕ್ಷರಾಗಿದ್ದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (1933-37) ಅವರು ವಸಂತ ಸಾಹಿತ್ಯೋತ್ಸವ, ಗಮಕ ಕಲಾಭ್ಯಾಸ ತರಗತಿಗಳು, ಕನ್ನಡ ಶಿಕ್ಷಕರಿಗೆ ತರಬೇತಿ ಶಿಬಿರ, ಗ್ರಂಥಪ್ರದರ್ಶನ ಮುಂತಾದ ನಾಲ್ಕಾರು ನೂತನ ಯೋಜನೆಗಳ ಪ್ರವರ್ತಕರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದೊಂದಿಗೆ ಅವರು ನಿಕಟ ಸಂಬಂಧವನ್ನು (1928-44) ಇಟ್ಟುಕೊಂಡಿದ್ದರಲ್ಲದೆ ಆ ಸಂಘದ ರಜತೋತ್ಸವದ ಅಧ್ಯಕ್ಷರೂ ಆಗಿದ್ದರು. (1944). ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕ ಮಂಡಲಿಯ ಸದಸ್ಯರಾಗಿ (1933-46) ಬೆಂಗಳೂರಿನ ರಾಮಾಯಣ ಪ್ರಕಾಶನ ಸಮಿತಿ, ರಾಮಾಯಣ ಮಹಾಭಾರತಾದಿ ಪ್ರಕಟನ ಸಮಿತಿ (1964-70) ಮೊದಲಾದ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಗುಂಡಪ್ಪನವರು ಅವಿರತವಾಗಿ ಸಾಹಿತ್ಯಸೇವೆ ಮಾಡಿದ್ದಾರೆ. ಸಾಹಿತ್ಯ ರಾಜಕೀಯಾದಿ ವಿಭಿನ್ನ ಕ್ಷೇತ್ರಗಳಲ್ಲಿ ಶತಮಾನದ ಪ್ರಾರಂಭದಿಂದ 65 ವರ್ಷಕಾಲ ಡಿ.ವಿ.ಜಿ. ಯವರಷ್ಟು ಸತತವಾಗಿ ಸಾರ್ವಜನಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ವ್ಯವಸಾಯ ಮಾಡಿದವರು ನಾಡಿನಲ್ಲಿ ಹೆಚ್ಚು ಮಂದಿ ಇಲ್ಲ. ನಿರಂತರ ಪತ್ರಿಕೋದ್ಯಮ, ವಿಫುಲ ಸಾಹಿತ್ಯ ಸೃಷ್ಟಿ, ಸಂಗೀತಾದಿ ಕಲಾಭಿಜ್ಞತೆ, ರಾಜಕೀಯ ಚರ್ಚೆ, ಸಮಾಜಸೇವೆ, ನಾನಾ ಸಂಸ್ಥೆಗಳ ನೇತೃತ್ವ, ಇವೆಲ್ಲಕ್ಕೂ ಹಿನ್ನೆಲೆಯಾಗಿ ಉದ್ದಾಮಪಾಂಡಿತ್ಯ, ಪ್ರತಿಭೆ, ದೈವಶ್ರದ್ಧೆ, ಆದರ್ಶನಿಷ್ಠೆ, ಉದಾರಚಿಂತನೆ, ಪೂರ್ವಸಂಪ್ರದಾಯಕ್ಕೂ ಸಾಂಪ್ರತಲೋಕದ ರೀತಿನೀತಿಗೂ ಸ್ನೇಹಸೇತುವಾಗಿ ಅವೆರಡಕ್ಕೂ ವಿರಸ ಬಾರದಂಥ ಒಂದು ಜೀವನದರ್ಶನವನ್ನು ಜನತೆಗೀಯುವ ಮಹೋತ್ಸಾಹ, ತಮ್ಮ ವೈಯಕ್ತಿಕ ಜೀವನವನ್ನು ಬದಿಗಿರಿಸಿ ಸಮಾಜದ ಎಲ್ಲ ವರ್ಗಗಳಲ್ಲೂ ಸರಸವಾಗಿ ಬೆರೆತುಕೊಳ್ಳುವ ಸಹೃದಯತೆ- ಈ ಹಲವಾರು ಕಾರಣಗಳಿಂದ ಡಿ.ವಿ.ಜಿ ಭಾರತ ಜನತೆಯ, ವಿಶೇಷವಾಗಿ ಕನ್ನಡ ಜನತೆಯ ಅಭಿಮಾನವನ್ನು ಗಳಿಸಿದ್ದಾರೆ. ಜನತೆಯಲ್ಲಿ ರಾಷ್ಟ್ರಕಪ್ರಜ್ಞೆಯನ್ನು ಜಾಗೃತಗೊಳಿಸಲು ಗೋಖಲೆ ಸಂಸ್ಥೆ ಮತ್ತು ಇತರ ಸಂಘಸಂಸ್ಥೆಗಳ ನಿರ್ಮಿತಿ-ಪೋಷಣೆ, ಆರ್ಥಿಕ-ಸಾಮಾಜಿಕ ಶೈಕ್ಷಣಿಕ ವಿಚಾರಗಳ ವಿದ್ವತ್‍ಪೂರ್ಣ ಪರಾಮರ್ಶೆ, ಪ್ರಾಂತೀಯ ಹಾಗೂ ಕೇಂದ್ರದ ಆಡಳಿತಗಳ ನಿರಂತರ ಪರೀಕ್ಷಣೆ, ವಿಮರ್ಶೆ-ಮನವಿ-ನಿರೂಪಗಳು- ಈ ದಿಶೆಯಲ್ಲಿ ಕಳೆದ ಆರು ದಶಕಗಳುದ್ದಕ್ಕೂ ಡಿ.ವಿ.ಜಿ ಮಾಡಿರುವ ಕಾರ್ಯ ಅವರ ಸಾಹಿತ್ಯ ಸೃಷ್ಟಿಯಷ್ಟೇ ಗಣನೀಯವಾಗಿದೆ. ಒಂದೇ ಸಮ್ಯಗ್ದರ್ಶನದ ಚಿಲುಮೆ ಡಿ.ವಿ.ಜಿ.ಯವರಲ್ಲಿ ಒಂದಡೆ ತಾತ್ತ್ವಿಕ ಚಿಂತನೆಯಾಗಿ ಇನ್ನೊಂದೆಡೆ ಕಾವ್ಯಾದಿ ಸಾಹಿತ್ಯನಿರ್ಮಿತಿಯಾಗಿ, ಮತ್ತೊಂದಡೆ ರಾಜಕೀಯ ಟೀಕೆಯಾಗಿ ಹೊರಹೊಮ್ಮಿದೆ.

ಈ ಸಮನ್ವಯ ಬುದ್ಧಿಯ ಪ್ರಕಟರೂಪಗಳೇ ವಸಂತ ಕುಸುಮಾಂಜಲಿ (1922). ನಿವೇದನೆ (1924) ಮುಂತಾದ ಕಾವ್ಯಮಾಲೆಗಳು; ಜೀವನ ಸೌಂದರ್ಯ ಮತ್ತು ಸಾಹಿತ್ಯ (1932). ಸಾಹಿತ್ಯ ಶಕ್ತಿ (1950) ಮುಂತಾದ ವೈಚಾರಿಕ ಪ್ರಬಂಧ ಸಂಚಯಗಳು; ಅನುವಾದದ ಆಕಾರ ತಳೆದಿದ್ದರೂ ನೂತನ ಕಾವ್ಯದಂತೆ ಸೊಗಯಿಸುವ ಉಮರನ ಒಸಗೆ (1930), ಷೇಕ್ಸ್‍ಪಿಯರ್‍ನ ಮ್ಯಾಕ್‍ಬೆತ್ ನಾಟಕದ ಪದ್ಯಾನುವಾದ (1936); ಶ್ರೀರಾಮ ಕಥೆಯ ನೆವದಿಂದ ಧರ್ಮದ್ವೈಧಕ್ಲೇಶಗಳಿಗೆ ಪರಿಹಾರವನ್ನು ವಿವೇಚಿಸುವ ಶ್ರೀರಾಮಪರೀಕ್ಷಣಂ (1945); ಬೇಲೂರು ಚೆನ್ನಕೇಶವ ಅಂತಃಪುರದ ಮದನಿಕೆಯರ ಶೃಂಗಾರವಿಲಾಸಗಳ ಸಂಗೀತ ಚಿತ್ರಣವಾದ ಅಂತಃಪುರ ಗೀತೆ (1950), ಶಾಕುಂತಲ ನಾಟಕದ ಸರಸ ಸಂದರ್ಭಗಳ ಸಂಗೀತಾನುವಾದ ಗೀತ ಶಾಕುಂತಲ (1960); ಉತ್ತಮ ಜೀವಿತದ ನಡೆವಳಿಕೆಗಳನ್ನು ವರ್ಣಿಸುವ ಬಾಳಿಗೊಂದು ನಂಬಿಕೆ (1950), ಸಂಸ್ಕøತಿ (1953) ಮುಂತಾದ ಪ್ರಬಂಧಗಳು; ವಿದ್ಯಾರಣ್ಯ, ರಂಗಾಚಾರ್ಲು, ಗೋಖಲೆ ಇತ್ಯಾದಿ ಜೀವಿತವೃತ್ತಗಳು; ರಾಜ್ಯಶಾಸ್ತ್ರ (1951) ಮೊದಲಾದ ಶಾಸ್ತ್ರಗ್ರಂಥಗಳು; ಪ್ರವೃತ್ತಿ-ನಿವೃತ್ತಿ ಸಮನ್ವಯವನ್ನೂ ಜೀವೋತ್ಕರ್ಷವು ಅಪೇಕ್ಷಿಸುವ ಪ್ರತ್ಯಗ್ದøಷ್ಟಿಯನ್ನೂ ಪ್ರತಿಪಾದಿಸುವ ಪುರುಷಸೂಕ್ತ (1953) ಮತ್ತು ಈಶೋಪನಿಷತ್ತು (1953) - ಈ ಮೊದಲಾದ ಅವರ ಸಾಹಿತ್ಯ ಕೃತಿಗಳು. ಭೋಗೇಚ್ಛೆ ಪಾಪವಲ್ಲ, ಜೀವನಕ್ಕೆ ಉಲ್ಲಾಸಕ್ಕೆ ಮಹತ್ತ್ವದ ಸ್ಥಾನ ಸಲ್ಲುತ್ತದೆ. ಸೌಂದರ್ಯಾನುಭವ ಆತ್ಮೋತ್ಕರ್ಷಕ್ಕೆ ಸಾಧಕವೇ ಆಗಬಲ್ಲದು ಎಂಬುದು ಶೃಂಗಾರ ಮಂಗಳಂ ಎಂಬ (1970) ಪದ್ಯಮಾಲಿಕೆಯ ಆಶಯ.

ಸುಖಮುಂ ಸಂಸ್ಕಾರಂ ಜೀ |
ವಕೆ ದುಃಖದವೋಲೆ ಚಿತ್ತಪರಿಪಾಚನಕಂ ||
ವಿಕಸಿತಮದರಿಂ ಹೃತ್ಕೋ |
ರಕಮಾ ಸೌರಭದೆ ಜೀವಕಾತ್ಮಾನುಭವಂ ||
ಇದೇ ವಾದಧಾರೆ ಶ್ರೀ ಕೃಷ್ಣಪರೀಕ್ಷಣಂ (1971) ಎಂಬ ಗೀತರೂಪಕದಲ್ಲಿಯೂ ಅನುವೃತ್ತವಾಗಿದೆ.
ಬ್ರಹ್ಮಕೆ ಹೃದಯವನಿತ್ತು ಜ |
ಗನ್ಮಂಗಲಕಾರ್ಯಕೊಡನೆಲ್ಲವನಿತ್ತುಂ ||
ಇಮ್ಮಿದಳೊಡನಾಡುತ ಸ |
ಚ್ಚಿನ್ಮಯನಂ ಮರೆಯದರ್ದೊಡದು ನಿರ್ವಾಣಂ ||

1953ರಿಂದ ಪತ್ರಿಕೆಗಳಲ್ಲಿ ಧಾರವಾಹಿಯಾಗಿ (1969ರಿಂದ ಗ್ರಂಥರೂಪವಾಗಿ) ಪ್ರಕಟವಾಗುತ್ತಿದ್ದ ಡಿ. ವಿ. ಜಿಯವರ e್ಞÁಪಕ ಚಿತ್ರಶಾಲೆಯ ಎಂಟು ಸಂಪುಟಗಳು 1969-74ರ ಅವಧಿಯಲ್ಲಿ ಪ್ರಕಟವಾದವು. ಹತ್ತಾರು ಮಂದಿ ಪ್ರಸಿದ್ಧಪುರುಷರ, ವಿದ್ವದ್ರಸಿಕರ, ಹಾಗೂ ಸಾಮಾನ್ಯ ವೃತ್ತಿ ವೈಲಕ್ಷಣ್ಯಗಳ ಚಿತ್ರಣಗಳಿಂದಲೂ ಹಾಸ್ಯ ಸನ್ನಿವೇಶಗಳಿಂದಲೂ ತುಂಬಿ, ಡಿ. ವಿ. ಜಿ. ಯವರ ಸ್ವಾರಸ್ಯಗ್ರಹಣಪಟುತೆಗೂ ಕಥನಕೌಶಲಕ್ಕೂ ನಿದರ್ಶನವಾಗಿರುವುವಲ್ಲದೆ, ಸಾಂಪ್ರತಶತಮಾನದ ಸಮಾಜೇತಿಹಾಸವೆನ್ನಬಹುದಾದ ಒಂದು ವಿಶಿಷ್ಟ ಪ್ರಕಾರದ ಸಾಹಿತ್ಯರಾಶಿಯಾಗಿ ಪರಿಣಮಿಸಿದೆ. ಜೀವಾನುಭವದ ರಸಪಾಕ ಸೂತ್ರವಾಗಿ ಹೊರಹೊಮ್ಮಿರುವ ಮನನ ಕಾವ್ಯಧಾರೆ ಮಂಕುತಿಮ್ಮನ ಕಗ್ಗ (1943) ಕನ್ನಡದ ಅತ್ಯಂತ ಜನಪ್ರಿಯ ಕೃತಿಗಳಲ್ಲೊಂದೆನಿಸಿದೆ; ಜೀವನದ ಆಘಾತಗಳನ್ನೆದುರಿಸುವಲ್ಲಿ ಒಂದು ಸ್ಥೈರ್ಯವನ್ನೂ ನಯನೋಪಾಯವನ್ನೂ ಬೋಧಿಸುವ ಕಗ್ಗದ ಸೂಚ್ಯುಕ್ತಿಗಳು ಮನಃಸ್ಪರ್ಶಿಯೂ ಅವಿಸ್ಮರಣಿಯೂ ಆಗಿದ್ದು. ಡಿ.ವಿ.ಜಿ ಯವರಿಗೆ ಆಧುನಿಕ ಸರ್ವಜ್ಞ ಎಂಬ ಅಭಿಧಾನವನ್ನು ತಂದುಕೊಟ್ಟಿವೆ. ಯಾವುದೇ ಕಾರಣದಿಂದ ಮನ ಕುಗ್ಗಿದವರಿಗೆ ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು | ಉಲ್ಲಾಸಕೆಡೆಮಾಡು ನಿನ್ನಿನಾದನಿತು || ನಿಲ್ಲು ಸಿಚ್ಚೆದೆಯಿಂದಲನ್ಯಾಯಗಳನಳಿಸೆ | ಎಲ್ಲಕಂ ಸಿದ್ಧನಿರು- ಮಂಕುತಿಮ್ಮ || ಮುಂತಾದ ಸ್ನೇಹವಚನಗಳು ಧೈರ್ಯೋತ್ಸಾಹಪ್ರದಗಳಾಗಿವೆ. ಇದೇ ಚಿಂತನಧೋರಣೆ ಡಿ.ವಿ.ಜಿ ಯವರ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (1966) ಎಂಬ ಉಪನ್ಯಾಸ ಗ್ರಂಥದಲ್ಲಿ ಶಾಸ್ತ್ರಪರಿಷ್ಕøತಿಯಿಂದ ವಿಸ್ತರಿಸಲ್ಪಟ್ಟಿದೆ. ಲೋಕಜೀವನ ಗೌರವಾರ್ಹ; ಸಮ್ಯಗ್ಜೀವನವೇ ಭಗವದಾರಾಧನೆ-ಇದು ಭಗವದಗ್ಗೀತೆಯ ಪ್ರಧಾನೋಪದೇಶವೆಂದಿದ್ದಾರೆ. ಡಿ.ವಿ.ಜಿ; ಅಂತರಂಗ- ಬಹಿರಂಗ ಸಾಮರಸ್ಯವೂ ದ್ವೈತ-ಅದ್ವೈತಾದಿ ವಿವಿಧ ಮತಸಾಮರಸ್ಯವೂ ಸಾಧ್ಯ ಹಾಗೂ ಅವಶ್ಯವೆಂದು ಪ್ರತಿಪಾದಿಸಿದ್ದಾರೆ.

ವಿವಿಧಮತಗಂಭೀರಂ ಸಾಮರಸ್ಯಪ್ರಕಾರಂ |
ಗೃಹಿ-ಯತಿಸಮುದಾರಂ ಸರ್ವಜೀವೋಪಚಾರಂ ||

ಸುರ-ನರಸಹಕಾರಂ ಸ್ವಾತ್ಮಸಾರ್ವಾತ್ಮ್ಯಸಾರಂ | ಭವಜಲನಿಧಿಪಾರಂ ಕೃಷ್ಣಗೀತಾವತಾರಂ || ಡಿ.ವಿ.ಜಿ. ಯವರ ಬಹುಮುಖಸೇವೆಗಾಗಿ 1961ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಡಾಕ್ಟರೇಟ್ (ಡಿ.ಲಿಟ್) ಪದವಿಯನ್ನಿತ್ತು ಗೌರವಿಸಿತು. ಶ್ರೀಮದ್ಭಗವದ್ಗೀತಾ ತಾತ್ಪರ್ಯ ವೆಂಬ ಕೃತಿ 1967ರಲ್ಲಿ ಭಾರತ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿತು. ಇವರು 7-10-1975 ರಂದು ನಿಧನರಾದರು. (ಎಸ್.ಆರ್.ಆರ್.ಎಸ್.)

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ : ಪ್ರಜಾಸೇವೆಯೊಂದನ್ನೇ ತಮ್ಮ ಜೀವಿತಧರ್ಮವೆಂದು ಭಾವಿಸಿ ಸಾರ್ವಜನಿಕ ಜೀವನ ನಡೆಸಿದ ಗೋಪಾಲ ಕೃಷ್ಣ ಗೋಖಲೆಯವರ ಮೇಲ್ಪಂಕ್ತಿಯನ್ನನುಸರಿಸಿ, ದೇಶಸೇವಾವ್ರತವನ್ನು ತೊಟ್ಟು ಕೆಲಸ ಮಾಡಬಲ್ಲ ಜನರನ್ನು ತಯಾರು ಮಾಡಬೇಕೆಂಬ ಡಿ.ವಿ.ಗುಂಡಪ್ಪನವರ ಸಂಕಲ್ಪದ ಚರಿತ್ರೆಯೇ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಚರಿತ್ರೆಯಾಗಿದೆ. ಡಿ.ವಿ.ಜಿ.ಯವರ ಕಾರ್ಯಗೌರವ ಅವರನ್ನು ಪತ್ರಿಕೋದ್ಯಮ, ಸಾಹಿತ್ಯ ರಚನೆ, ಶಾಸನಸಭೆ, ಪೌರಸಭೆ, ರಾಜಕೀಯ ರಂಗಗಳಿಗೆ ಕರೆದೊಯ್ದರೂ ಅವರ ಮೂಲಧ್ಯೇಯ ಅವರ ಎಲ್ಲ ಪ್ರಯತ್ನಗಳಲ್ಲಿಯೂ ಕಾಣಬರುತ್ತದೆ. ಆದ್ದರಿಂದ ಗೋಖಲೆ ಸಂಸ್ಥೆ ಶಾಸನತಃ ಪ್ರಾರಂಭವಾದದ್ದು 1945ರಲ್ಲಿಯಾದರೂ ಅದಕೋಸ್ಕರ ಆದ ಪ್ರಯತ್ನದ ಕಥೆ ಮೊದಲಾದದ್ದು 1915ರಲ್ಲಿ.

ಫೆಬ್ರುವರಿ 1915ರಲ್ಲಿ ಗೋಖಲೆಯವರು ಕಾಲಾಧೀನರಾದ ತರುಣದಲ್ಲಿ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಎಂ. ವಿಶ್ವೇಶ್ವರಯ್ಯನವರು ಗೋಖಲೆಯವರ ರಾಜ್ಯತಂತ್ರ ನಿಪುಣತೆಯನ್ನು ಕೊಂಡಾಡಿದರು. ಆ ಹೊತ್ತಿಗಾಗಲೆ ಗೋಖಲೆಯವರ ಕಾರ್ಯನೀತಿಯನ್ನು ಮೆಚ್ಚಿಕೊಂಡಿದ್ದ ಕೆಲವು ಸ್ನೇಹಿತರು, ಅಂಥ ದೇಶಸೇವಕರ ಕಾರ್ಯವಿಧಾನ, ಮತ್ತು ಧ್ಯೇಯಗಳನ್ನು ಜನಸಾಮಾನ್ಯಕ್ಕೆ ಪರಿಚಯ ಮಾಡಿಸುವುದು ದೇಶದ ಹಿತದೃಷ್ಟಿಯಿಂದ ಕರ್ತವ್ಯವೆಂದು ತಿಳಿದು, ಬೆಂಗಳೂರಿನಲ್ಲಿ ಮೈಸೂರು ಸಮಾಜ ಸೇವಾ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅದೇ ಸಮಯದಲ್ಲಿ ಮದರಾಸಿಗೆ ಬಂದಿದ್ದ ಮಹಾತ್ಮ ಗಾಂಧೀಜಿಯವರು ಈ ಸಂಘದ ಆಹ್ವಾನವನ್ನು ಅಂಗೀಕರಿಸಿ ಬೆಂಗಳೂರಿನಲ್ಲಿ 8-5-1915ರಂದು ಗೋಖಲೆಯವರ ಭಾವಚಿತ್ರವೊಂದನ್ನು ಅನಾವರಣ ಮಾಡಿ, ತಮ್ಮ ಮೇಲೆ ಗೋಖಲೆಯವರಿಂದ ಆದ ಪ್ರಭಾವವನ್ನು ಪ್ರಕಟಪಡಿಸಿದರು. (ಆ ಮೂಲ ಭಾವಚಿತ್ರವೂ ಅದರ ಪ್ರತಿಕೃತಿಯು ಈಗ ಗೋಖಲೆ ಸಂಸ್ಥೆಯಲ್ಲಿದೆ.) ಆ ಸಂಘದ ಕಾರ್ಯಕ್ರಮಗಳಲ್ಲಿ ಮುಖ್ಯವಾದವು; ಉಪನ್ಯಾಸಗಳು, ವಯಸ್ಕರಿಗೂ ಮಕ್ಕಳಿಗೂ ಪಾಠಶಾಲೆಗಳು, ಬಡವರಿಗೂ ರೋಗಿಗಳಿಗೂ ಹಬ್ಬದ ದಿನಗಳಲ್ಲಿ ತಿಂಡಿಯ ಹಂಚಿಕೆ- ಇತ್ಯಾದಿ. ಇನ್‍ಪ್ಲುಯೆಂಜಾó ಜ್ವರ ಸಾಂಕ್ರಾಮಿಕವಾಗಿ ಹರಡಿದಾಗ (1918-19) ಈ ಸಂಘದ ಸದಸ್ಯರು ರೋಗಿಗಳ ಔಷಧೋಪಚಾರದಲ್ಲಿ ನೆರವಾದರು. ಇದರಲ್ಲಿ ಪಿ. ಕೋದಂಡರಾಯರು ಮತ್ತು ಎಚ್. ವಿ. ಆರ್ ಅಯ್ಯಂಗಾರ್ಯರು ಸೇರಿದ್ದರು. 1920ರ ವೇಳೆಗೆ ಈ ಸಂಘದ ನೆನಪೂ ಅಳಿಸಿಹೋಗುತ್ತಾ ಬಂತು. 1944ರಲ್ಲಿ ಡಿ.ವಿ.ಜಿ ಯವರು ಸ್ನೇಹಿತರನೇಕರ ಬೆಂಬಲದಿಂದಲೂ ಸಹಾನುಭೂತಿಯಿಂದಲೂ ಈಗಿನ ಗೋಖಲೆ ಸಂಸ್ಥೆಯನ್ನು ಪ್ರಾರಂಭಿಸುವ ಪ್ರಯತ್ನವನ್ನು ಕೈಗೊಂಡರು. ಜಾತಿಮತ ಭೇದಭಾವನೆಗಳಿಗೆ ಅವಕಾಶ ಕೊಡದೆ, ಯಾವ ರಾಜಕೀಯ ಪಕ್ಷಕ್ಕೂ ಒಳಪಡದೆ, ಜನಸಮುದಾಯದ ಮತ್ತು ಒಟ್ಟು ದೇಶದ ಹಿತದೃಷ್ಟಿಯಿಂದ ಸಾರ್ವಜನಿಕ ವಿಚಾರಗಳನ್ನು ಆಲೋಚನೆ ಮಾಡುವ ಉದ್ದೇಶವಿಟ್ಟುಕೊಂಡ ಸಂಸ್ಥೆಯ ಸ್ಥಾಪನೆಗಾಗಿ 18-2-1945ರಲ್ಲಿ ಡಿ. ವಿ. ಜಿ ಯವರ ಮನೆಯಲ್ಲಿಯೇ ಪ್ರಾರಂಭ ಸದಸ್ಯರ ಮೊದಲನೆಯ ಸಭೆ ನಡೆಯಿತು. ಮೈಸೂರು ಸೊಸೈಟಿಗಳ ರಿಜಿಸ್ಟ್ರೇಷನ್ ಕಾನೂನಿನ ಪ್ರಕಾರ ಈ ಸಂಸ್ಥೆ 6-4-1945ರಲ್ಲಿ ರಿಜಿಸ್ಟರ್ ಆಯಿತು. ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಬಿ. ಕೆ. ಗರುಡಾಚಾರ್, ಸಿ. ಪಿ. ರಾಮಸ್ವಾಮಿ ಅಯ್ಯರ್, ಎ. ಆರ್. ಕೃಷ್ಣಶಾಸ್ತ್ರೀ ಮುಂತಾದ ಅನೇಕ ಮಹನೀಯರು ಸಂಸ್ಥೆಯ ಸದಸ್ಯರಾದರು. ಬೆಂಗಳೂರು ಬಸವನಗುಡಿಯಲ್ಲಿ, ಎಂ. ಎನ್. ಕೃಷ್ಣರಾಯರ ಪಾರ್ಕಿನ ಬಳಿಯಿರುವ (ಆಗ್ಗೆ ಪಾಮಡಿ ಸುಬ್ಬರಾಮಶೆಟ್ಟರ ಸ್ವಾಧೀನದಲ್ಲಿದ್ದ) ಕಟ್ಟಡದ ಒಂದು ಭಾಗವನ್ನು ಬಾಡಿಗೆಗೆ ತೆಗೆದುಕೊಳ್ಳಲಾಯಿತು. ಯುವಜನರನ್ನು ರಾಷ್ಟ್ರಕಾರ್ಯಗಳಿಗೆ ಸಿದ್ಧಪಡಿಸಲು ವ್ಯಾಸಂಗಗೋಷ್ಟಿಯೊಂದು 15-12-1947ರಲ್ಲಿ ಪ್ರಾರಂಭವಾಯಿತು. ಜನವರಿ 1948ರಿಂದ ವ್ಯಾಸಂಗಗೋಷ್ಟಿಯ ಸದಸ್ಯರು ಪ್ರತಿ ಭಾನುವಾರ ಸೇರಿ ಗ್ರಂಥವ್ಯಾಸಂಗ ಮಾಡುವ ಪದ್ಧತಿಯನ್ನು ಮೊದಲು ಮಾಡಿದರು. 8-3-1948ರಲ್ಲಿ ನಿಟ್ಟೂರು ಶ್ರೀನಿವಾಸರಾಯರು ವಾಚನಾಲಯವನ್ನೂ 15-8-1948ರಲ್ಲಿ ಬಿ. ಪಿ. ವಾಡಿಯಾ ಅವರು ಪುಸ್ತಕ ಭಂಡಾರವನ್ನೂ ಸಮಾರಂಭಗೊಳಿಸಿದರು. ಜನವರಿ 1949ರಿಂದ ಪಬ್ಲಿಕ್ ಅಫೇರ್ಸ್ (ಸಾರ್ವಜನಿಕ) ಎಂಬ ಮಾಸಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಾರಂಭವಾಯಿತು. ರಾಷ್ಟ್ರಕಧರ್ಮವನ್ನು ಕುರಿತು ಜನರಲ್ಲಿ ಪ್ರಚಾರಮಾಡುವುದೂ ಸಂಸ್ಥೆ ಹಾಗೂ ಅದರ ಸದಸ್ಯರೊಡನೆ ಸಂಪರ್ಕ ಸಾಧನವನ್ನಳವಡಿಸುವುದೂ ಪತ್ರಿಕೆಯ ಧ್ಯೇಯ. ಆಗಾಗ್ಗೆ ವಿಘ್ನಗಳನ್ನು ದಾಟಿ 1963ರಿಂದ ಪತ್ರಿಕೆ ಇಂಗ್ಲಿಷಿನಲ್ಲಿ ಪ್ರತಿ ತಿಂಗಳೂ ಪ್ರಕಟವಾಗುತ್ತಿದೆ. ಕನ್ನಡ ವಿಭಾಗವನ್ನೂ ಮತ್ತೆ ಆರಂಭಿಸುವ ಆಸೆಯುಂಟು.

ಬೆಂಗಳೂರು ಪುರಸಭೆಯವರು 1949ರಲ್ಲಿ ಸಂಸ್ಥೆಯ ಕಟ್ಟಡಕ್ಕಾಗಿ ಒಂದು ನಿವೇಶನವನ್ನು ದಾನವಾಗಿ ಕೊಟ್ಟರು. 26-7-1956ರಲ್ಲಿ ಸಂಸ್ಥೆಯ ನೂತನ ಭವನ ಪ್ರವೇಶೋತ್ಸವ ನಡೆಯಿತು. 1959 ಮತ್ತು 1962ರಲ್ಲಿ ಇನ್ನಷ್ಟು ಸ್ಥಳವನ್ನು ಬೆಂಗಳೂರು ಪುರಸಭೆಯವರು ದಾನವಾಗಿ ಕೊಟ್ಟದ್ದರಿಂದ ಸಂಸ್ಥೆಯನ್ನು ವಿಸ್ತರಿಸಲು ಅನುಕೂಲವಾಯಿತು. ಯಂತ್ರೋದ್ಯಮಿಗಳಾದ ವಿ. ಎಸ್. ನಟರಾಜನ್ ಅವರು ಕಟ್ಟಡದ ಮೊದಲನೆಯ ಮಹಡಿಯ ಮಧ್ಯಭಾಗದ ಸಭಾಂಗಣವನ್ನು ಕಟ್ಟಿಕೊಟ್ಟರು. ಕಟ್ಟಡದ ವಿಸ್ತರಣೆಗೆ ಮತ್ತು ಇತರ ವಿಧವಾಗಿ, ಸಹಾಯ ಮಾಡಿರುವವರಲ್ಲಿ ಟಿ. ಸದಾಶಿವಂ, ಎಂ.ಎಸ್. ಸುಬ್ಬುಲಕ್ಷ್ಮಿ, ನಾಟಕರತ್ನ ಗುಬ್ಬಿ ವೀರಣ್ಣ, ನಿಜಾಮರ ನ್ಯಾಸನಿಧಿಯಿಂದ ಸಹಾಯ ಬರಲು ನೆರವಾದ ವಿ. ಪಿ. ಮೆನನ್, ಎಂ. ವಿ. ಕೃಷ್ಣಮೂರ್ತಿ. ಶಿವಮೊಗ್ಗದ ಜಿ. ಶ್ರೀನಿವಾಸ ಅಯ್ಯಂಗಾರ್, ಕಿರ್ಲೋಸ್ಕರ್ ಕಂಪೆನಿಯವರು, ದೀಪಕ್ ಕೇಬಲ್ಸ್ ಕಂಪೆನಿಯವರು, ತಾತಾ ಟ್ರಸ್ಟ್-ಮೊದಲಾದವರು ಸೇರಿದ್ದಾರೆ. 1965ರಲ್ಲಿ ಸಂಸ್ಥೆ ಶಾಸನತಃ ಸ್ಥಾಪನೆಯಾದ 20ನೆಯ ವರ್ಷದ ಉತ್ಸವದ ಸಂದರ್ಭದಲ್ಲಿ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯವರು 5,000 ರೂ ಗಳ ಸಹಾಯ, ಡಿ. ವಿ. ಜಿ. ಅವರಿಗೆ ಅವರ `ಭಗವದ್ಗೀತಾ ತಾತ್ಪರ್ಯ ಗ್ರಂಥಕ್ಕಾಗಿ ಭಾರತ ಸಾಹಿತ್ಯ ಅಕಾಡೆಮಿಯವರು ಕೊಟ್ಟ 5,000 ರೂಗಳ ಗೌರವ ಸಂಭಾವನೆ ಮತ್ತು 1970ರಲ್ಲಿ ದೇಶದ ಜನ ಡಿ. ವಿ. ಜಿ. ಅವರಿಗೆ ಕೊಟ್ಟ ಸುಮಾರು ಒಂದು ಲಕ್ಷ ರೂಪಾಯಿಗಳ ಗೌರವನಿಧಿ- ಇವೆಲ್ಲವೂ ಸಂಸ್ಥೆಯ ಪುರೋಭಿವೃದ್ಧಿಗೆ ವಿನಿಯೋಗವಾಗಿದೆ. ಈ ಸಂಸ್ಥೆ ಸಹಾಯ ಮಾಡಿರುವವರಲ್ಲಿ ಎಲ್ಲ ಜನವರ್ಗದವರೂ ನಾನಾ ಸಾಮಾಜಿಕ ಹಂತಗಳವರೂ ಎಲ್ಲ ಮತ ಕಸುಬಿನವರೂ, ಉದ್ಯೋಗಗಳವರು- ಎಲ್ಲ ಪಂತಗಳವರೂ ಇದ್ದಾರೆ. 2002ರಲ್ಲಿ ಡಿ.ವಿ.ಜಿ. ಸಭಾಂಗಣದ ಉದ್ಘಾಟನೆ ಆಯಿತು.

ಪ್ರಜಾಜನರು ನೆರೆವೇರಿಸಬೇಕಾದ ಕರ್ತವ್ಯಗಳೂ ಸಾಧಿಸಿಕೊಳ್ಳಬೇಕಾದ ಹಕ್ಕುಗಳೂ ಕೆಲವಿರುತ್ತದೆ. ಇವನ್ನು ಅವರು ಚೆನ್ನಾಗಿ ತಿಳಿದುಕೊಂಡು ರಾಷ್ಟ್ರ ಜೀವನಕ್ಕೂ ಸಹಾಯವಾಗುವುದೇ ರಾಷ್ಟ್ರಕಧರ್ಮ. ಈ ಮಹತ್ತರವಾದ ಧರ್ಮದ ಆಚರಣೆಗೆ ಸಹಾಯವನ್ನೊದಗಿಸುವುದು ಈ ಸಂಸ್ಥೆಯ ಮುಖ್ಯೋದ್ದೇಶ. ಸಮಸ್ತ ಜನಹಿತಕ್ಕೆ ಸಂಬಂಧಪಟ್ಟ ಎಲ್ಲ ಪ್ರಶ್ನೆಗಳನ್ನೂ ಶಾಸ್ತ್ರವಿಹಿತ ದೃಷ್ಟಿಯಿಂದಲೂ ನಿಷ್ಪಕ್ಷಪಾತ ಮನೋಭಾವದಿಂದಲೂ ವಾಸ್ತವಿಕ ಸಂಗತಿಗಳ ಪರಾಮರ್ಶನದ ಮೂಲಕವೂ ವ್ಯಾಸಂಗ ಮಾಡಿಸುವುದು, ಜನಕ್ಕಿರುವ ಕಷ್ಟಗಳನ್ನೂ ಕೊರತೆಗಳನ್ನೂ ಆಗಿಂದಾಗ್ಗೆ ಆಯಾ ಅಧಿಕಾರಿಗಳ ಗಮನಕ್ಕೆ ತರುವುದು - ಒಟ್ಟಿನಲ್ಲಿ ಸಾರ್ವಜನಿಕ ಪ್ರಶ್ನೆಗಳನ್ನು ಕುರಿತು ಜನಾಭಿಪ್ರಾಯವು ವಿವೇಕದಿಂದಲೂ ಸ್ಪುಟವಾಗಿಯೂ ವ್ಯಕ್ತಪಡುವಂತೆ ಮಾಡುವುದಕ್ಕೆ ಸಹಾಯ ಕೊಡುವುದು; ಮತ್ತು ನಾನಾ ಜನವರ್ಗಗಳಲ್ಲಿ ಸ್ನೇಹವನ್ನೂ ಐಕ್ಯಮತವನ್ನೂ ಬೆಳೆಸುವುದು, ಜನದ ನಡೆನುಡಿಗಳಲ್ಲಿ ಸೌಜನ್ಯಸೌಶೀಲ್ಯಗಳು ಅಭಿವೃದ್ಧಿಯಾಗುವಂತೆ ಸಂಸ್ಕøತಿಯನ್ನು ಪ್ರೋತ್ಸಾಹಿಸುವುದು-ಇವು ಈ ಸಂಸ್ಥೆಯ ಕಾರ್ಯವಿಧಾನಗಳು. ಸಂಸ್ಥೆ ಅಧಿಕಾರಪ್ರಸಕ್ತಿಯ ರಾಜಕೀಯಕ್ಕೆ ಕೈಹಾಕತಕ್ಕದಲ್ಲ.

ಸಂಸ್ಥೆಯ ಕಾರ್ಯಾಂಗಗಳು : ಸುಮಾರು ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಸಂಸ್ಥೆಯ ಆಸ್ತಿಸ್ವತ್ತುಗಳ ಉಸ್ತುವಾರಿಯನ್ನು ಒಂದು ನ್ಯಾಸ ನಿರ್ವಾಹಕ ಸಮಿತಿ ನಡೆಸುತ್ತದೆ. ಸಂಸ್ಥೆಯ ದೈನಂದಿನ ಕಾರ್ಯಕ್ರಮಗಳನ್ನು ಪ್ರತಿವರ್ಷವೂ ಚುನಾಯಿಸಲ್ಪಡುವ ಕಾರ್ಯ ಸಮಿತಿ ನೋಡಿಕೊಳ್ಳುತ್ತದೆ.

ಸಂಸ್ಥೆಯ ಸ್ವಂತ ಕಟ್ಟಡ ಬೆಂಗಳೂರು ಬಸವನಗುಡಿಯಲ್ಲಿರುವ ಬಸವಣ್ಣನ ಗುಡಿಯ ಪಕ್ಕದ ರಸ್ತೆಯಲ್ಲಿದೆ.

ಸಾರ್ವಜನಿಕನಾಗುವವ ತನ್ನ ಉದ್ದೇಶಕ್ಕಾಗಿ ಒಂದು ಉದ್ಯೋಗವನ್ನಿಟ್ಟುಕೊಂಡು ತನ್ನ ಮಿಕ್ಕ ಕಾಲವನ್ನೂ ಬುದ್ಧಿಯನ್ನೂ ಪ್ರತಿಫಲ ನಿರೀಕ್ಷೆಯಿಲ್ಲದೆ ದೇಶಕ್ಕೆ ಮೀಸಲಿಡಬೇಕು. ರಾಜಕೀಯವನ್ನೇ ಜೀವಿತದ ಕಸುಬನ್ನಾಗಿ ಮಾಡಿಕೊಳ್ಳಬಾರದು- ಎಂಬ ಡಿ. ವಿ. ಜಿ ಯವರ ಅಭಿಪ್ರಾಯದಂತೆ ನಡೆಯಲು ಸಂಸ್ಥೆ ಪ್ರಯತ್ನಪಡುತ್ತಿದೆ.

ಇಲ್ಲಿಯ ಪುಸ್ತಕ ಭಂಡಾರದಲ್ಲಿ ಸಾಹಿತ್ಯ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅಂತರರಾಷ್ಟ್ರೀಯ ಕಾನೂನು, ದರ್ಶನಶಾಸ್ತ್ರ ಮುಂತಾದ ವಿಷಯಗಳನ್ನು ಕುರಿತು 30,000 ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಪುಸ್ತಕಗಳಿವೆ. ಅನೇಕ ವಿದ್ವಾಂಸ ಮಹನೀಯರು ಗ್ರಂಥದಾನ ಮಾಡಿದ್ದಾರೆ. ಜಿ.ಪಿ. ರಾಜರತ್ನಂ ಅವರು ಪ್ರಾರಂಭಿಸಿದ `ಶ್ರೀಗಂಧಕುಟಿ' ಎಂಬ ಪರಾಮರ್ಶ ಗ್ರಂಥಶಾಖೆಯಲ್ಲಿ ಹಳಗನ್ನಡ ಕಾವ್ಯಗಳೂ 1862ರಿಂದ ಪ್ರಕಟವಾಗುತ್ತಿದ್ದ ವೃತ್ತಾಂತಬೋಧಿನಿ, ಕರ್ಣಾಟಕ ಪ್ರಕಾಶಿಕೆ ಪತ್ರಿಕೆಗಳ ಸಂಪುಟಗಳೂ ಸರ್ಕಾರದ ಆಡಳಿತ ಮತ್ತು ವಿಶೇಷ ವರದಿಗಳೂ ಮುಖ್ಯ ಇಂಗ್ಲಿಷ್ ಕನ್ನಡ ಪತ್ರಿಕೆಗಳ ಹಳೆಯ ಸಂಚಿಕೆ ಸಂಪುಟಗಳೂ ಶಾಸನ ವರದಿಗಳೂ ತಾಳೆಯೋಲೆ ಗ್ರಂಥಗಳೂ ಇವೆ. ಸಂಸ್ಥೆಯು ವ್ಯವಸ್ಥೆ ಮಾಡುವ ರಾಜಾಜಿ ಸ್ಮಾರಕ ಉಪನ್ಯಾಸದ ಕಾರ್ಯಕ್ರಮದಲ್ಲಿ ನಾನಿ ಫಾಲ್ಕಿ ವಾಲಿ, ಬಿ.ಎ. ನೆಹರು, ಡಾ|| ಆರ್. ವೆಂಕಟರಾಮನ್, ಎಚ್. ವೈ. ಶಾರದಾ ಪ್ರಸಾದ್, ಸ್ವಾಮಿ ರಂಗನಾಥಾನಂದಜಿ, ಟಿ. ಎನ್. ಶೇಷನ್ ಮೊದಲಾದ ಗಣ್ಯರು ಉಪನ್ಯಾಸ ಮಾಡಿದ್ದಾರೆ. 2001ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ರಾಜ್ಯಾಂಗವನ್ನು ಕುರಿತ ವಿಚಾರಸಂಕಿರಣದಲ್ಲಿ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸದರಾವ್, ಡಾ|| ಜಿ. ತಿಮ್ಮಯ್ಯ ಮೊದಲಾದ ತಜ್ಞರು ಭಾಗವಹಿಸಿದರು.

ಹೀಗೆ ಡಿ.ವಿ.ಜಿ. ಯವರ ಕಲ್ಪನೆಯಂತೆ ರಾಷ್ಟ್ರಕ ತತ್ತ್ವಧ್ಯೇಯಗಳಿಗೆ ಕೇಂದ್ರಸ್ಥಾನವೂ ಪ್ರತ್ಯಕ್ಷ ನಿದರ್ಶನವೂ ಆಗಬೇಕೆಂದು ಗೋಖಲೆ ಸಂಸ್ಥೆ ಶ್ರಮಿಸುತ್ತಿದೆ. ಡಿ.ವಿ.ಜಿ. ಅವರು ತೀರಿಕೊಂಡನಂತರ ಅವರ ನಿಕಟಸಹವರ್ತಿಗಳಾಗಿದ್ದ ನಿಟ್ಟೂರು ಶ್ರೀನಿವಾಸರಾಯರು 2003ರ ವರೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿದ್ದರು, ಸ್ವಲ್ಪ ಕಾಲ ಸಂಸ್ಥೆಯ ಆಶ್ರಯದಾತ (ಪೇಟ್ರಿನ್) ಆಗಿದ್ದರು. (ಡಿ.ಆರ್.ಪಿ.; ಬಿ.ಎಸ್.ಎಸ್.ಆರ್.) ಪರಿಷ್ಕರಣೆ: ಡಾ|| ಎಲ್. ಎಸ್. ಶೇಷಗಿರಿರಾವ್