ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಜರಾತಿನ ಇತಿಹಾಸ

ವಿಕಿಸೋರ್ಸ್ದಿಂದ

ಪ್ರಾಗಿತಿಹಾಸ

[ಸಂಪಾದಿಸಿ]

ಶಿಲಾಯುಗದಿಂದಲೂ ಗುಜರಾತು ಮಾನವನ ನೆಲೆಯಾಗಿತ್ತೆಂಬುದು 1890ರ ದಶಕದಲ್ಲಿ ಬ್ರೂಸ್ಫುಟ್ನಿಂದ ಮತ್ತು ಇತ್ತೀಚೆಗೆ ಶೋಧವಾದ ಆದಿಶಿಲಾಯುಗದ ನೆಲೆಗಳಿಂದ ತಿಳಿದುಬಂದಿದೆ. ಕಚ್ಛ್‌ ಪ್ರದೇಶದ ವಿರಾಣಿ ನದಿಯ ಬಯಲಿನಲ್ಲಿ ಬಲ್ಸಾರ್ ಜಿಲ್ಲೆಯಲ್ಲಿಯ ಮಾನ್, ತಾನ್ ನದಿಗಳ ಪ್ರದೇಶದಲ್ಲಿ ಆದಿಶಿಲಾಯುಗದ ಕೈಗೊಡಲಿ, ಮಚ್ಚು, ಸೀಳುಗತ್ತಿ, ಹೆರೆಯುವ ಚಕ್ಕೆಗಳು ಮುಂತಾದ ಶಿಲಾ ಉಪಕರಣಗಳು ದೊರೆತಿವೆ. ರಾಜಕೋಟೆ ಜಿಲ್ಲೆಯಲ್ಲಿರುವ ಭದರ್ ಹತ್ತಿರ ನದಿದಂಡೆಯ ಕೆಳಭಾಗದ ಮರಳಿನ ಪದರದಲ್ಲಿ ಆದಿಶಿಲಾಯುಗದ ಕಲ್ಲಿನ ಉಪಕರಣಗಳೂ ಮೇಲಿನ ಮರಳಿನ ಪದರದಲ್ಲಿ ಮಧ್ಯ ಶಿಲಾಯುಗದ ಕಲ್ಲಿನ ಉಪಕರಣಗಳೂ ದೊರೆತಿವೆ. ಇವುಗಳಿಂದ ಗುಜರಾತಿನ ಶಿಲಾಯುಗ ಸಂಸ್ಕೃತಿಗಳ ಅನುಕ್ರಮ ತಿಳಿದಿದೆ.


ಕಚ್ಛ್‌ನಲ್ಲಿರುವ ರೋಜ್ಡಿಯದ ಹತ್ತಿರದ ನದಿಯ ದಡದಲ್ಲಿಯ ಮೇಲಿನ ಪದರಗಳಲ್ಲಿ ಮಧ್ಯಶಿಲಾಯುಗದ ನೀಳ ಚಕ್ಕೆಗಳು, ಮೊನೆಗಳು, ತಿರುಳುಗಲ್ಲು ಮುಂತಾದ ಟರ್ಟ್‌ ಮತ್ತು ಕ್ವಾರ್ಟ್‌ಜೈಟ್ ಕಲ್ಲಿನಲ್ಲಿ ಮಾಡಿದ ಉಪಕರಣಗಳು ದೊರೆತಿರುವುದು ಗಮನಾರ್ಹ. ಆದಿ ಹಾಗೂ ಮಧ್ಯಶಿಲಾಯುಗದ ಇನ್ನೂ ಕೆಲವು ನೆಲೆಗಳ ಶೋಧವಾಗಿದೆ.


ನರ್ಮದಾ ಮತ್ತು ಅದರ ಉಪನದಿಗಳ ಪ್ರದೇಶದಲ್ಲಿ ತೋರಿಬಂದ ಶಿಲಾಯುಗ ಸಂಸ್ಕೃತಿಗಳು ಮತ್ತು ಅವುಗಳ ಕಾಲದ ಬಗ್ಗೆ ಗಮನಾರ್ಹವಾದ ವೈಜ್ಞಾನಿಕ ಅಧ್ಯಯನ ನಡೆದಿದೆ.


ಈ ಸಂಶೋಧನೆಯ ಕಾರ್ಯ ಸಂಕಾಳಿಯಾ ಅವರಿಂದ 1946ರ ಪೂರ್ವದಲ್ಲಿ ಪ್ರಾರಂಭವಾಗಿ, ಅನಂತರ ಎಫ್.ಇ. ಜಾಯ್ನರರ ನೇತೃತ್ವದಲ್ಲಿ ಭಾರತ ಸರ್ಕಾರದ ಪುರಾತತ್ತ್ವ ಸರ್ವೇಕ್ಷಣ ಶಾಖೆ ಮತ್ತು ಪುಣೆಯ ಡೆಕ್ಕನ್ ಕಾಲೇಜ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಪುರಾತತ್ತ್ವ ಶಾಖೆಯಿಂದ ಮುಂದುವರಿಯಿತು. ಪುನ: ಡಾ. ಜಾ಼ಯ್ನರ್ 1960ರಲ್ಲಿ ಮಾಹೀ ನದಿಯ ಪ್ರದೇಶದಲ್ಲಿ ಸಂಶೋಧನೆ ನಡೆಸಿ, ಪ್ಲೀಸ್ಟೊಸೀನ್ ಯುಗದಲ್ಲಿ ಉಂಟಾದ ಸಮುದ್ರದ ಏರಿಳಿತಗಳ ಕುರುಹುಗಳಿಂದ ಗುಜರಾತಿನ ಶಿಲಾಯುಗ ಸಂಸ್ಕೃತಿಗಳ ಕಾಲವನ್ನು ಗೊತ್ತು ಮಾಡುವ ಸಾಧ್ಯತೆಯನ್ನು ತೋರಿಸಿಕೊಟ್ಟರು. ಮುಂದೆ ಜಿ. ಜೆ.ವೈನ್ರೈಟ್ ನರ್ಮದಾ ನದಿತೀರದ ಚಂದೋಡ್ನಿಂದ ಅರಬ್ಬೀ ಸಮುದ್ರದವರೆಗೆ, ಅಂದರೆ ಸುಮಾರು 110 ಕಿಮೀ ದೂರದ ನದಿ ಪ್ರದೇಶವನ್ನು ಕೂಲಂಕುಷವಾಗಿ ಪರೀಕ್ಷಿಸಿದರು. ಯುರೋಪಿನ ಅಶೂಲಿಯನ್ ಪದ್ಧತಿಯ ಶಿಲಾ ಉಪಕರಣಗಳಂತಿರುವ ಆದಿಶಿಲಾಯುಗದ ಕೈಗೊಡಲಿ ಮತ್ತು ಮಚ್ಚುಗತ್ತಿಯಂಥವು ಮತ್ತು ಲೆವಾಲ್ವ ಪದ್ಧತಿಯ ಗಟ್ಟಿಗಳು ದೊರೆತುವು. ಇವು ಯುರೋಪಿನ ಕೊನೆಯ ಮಧ್ಯಂತರ ಹಿಮ ಪ್ರವಾಹ ಕಾಲದ ಒಂದು ಭಾಗಕ್ಕೆ ಸೇರಿದವೆಂದು ಕಾಣುತ್ತದೆ.



ಸಾಬರಮತಿ, ಮಾಹಿ ಮತ್ತು ನರ್ಮದಾ ನದಿಗಳ ಪ್ರದೇಶದಲ್ಲಿ ಸೂಕ್ಷ್ಮ ಶಿಲಾಯುಗದ ಅನೇಕ ನೆಲೆಗಳು 1941ರಿಂದ ಈಚೆಗೆ ಬೆಳಕಿಗೆ ಬಂದಿವೆ. ಇವುಗಳಲ್ಲಿ ಲಾಂಘನಾಜ್ ಎಂಬ ಒಂದು ನೆಲೆಯನ್ನು ವಿಶೇಷವಾಗಿ ಸಂಕಾಳಿಯಾ ಮತ್ತು ಅವರ ಸಹೋದ್ಯೋಗಿಗಳು ಪರೀಕ್ಷಿಸಿ 1944-63ರ ನಡುವೆ ಇಲ್ಲಿ ಉತ್ಖನನ ನಡೆಸಿ, ಅಲ್ಲಿಯ ಸೂಕ್ಷ್ಮ ಶಿಲಾಯುಗದ ಜನಜೀವನದ ಕೆಲವೊಂದು ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಈ ಜನ ಅಲ್ಲಲ್ಲಿ ಮರುಳುದಿಣ್ಣೆಗಳ ಮೇಲೆ ಹಾಗೂ ನದಿಗಳ ದಂಡೆಗಳ ಮೇಲೆ ವಾಸಿಸುತ್ತಿದ್ದರು. ಆದರೆ ಇವರ ವಸತಿಗೃಹಗಳ ಅವಶೇಷಗಳೇನೂ ದೊರೆತಿಲ್ಲ. ಪ್ರಾಯಶಃ ಮಣ್ಣು ಬಳಿಯದ, ಗಿಡ ಸೊಪ್ಪುಗಳ ತಡಿಕೆಯುಳ್ಳ ಗುಡಿಸಿಲುಗಳನ್ನು ಕಟ್ಟಿಕೊಂಡಿದ್ದರೆಂದು ತೋರುತ್ತದೆ. ಇವರು ಮೊದಲು ಅಗೇಟ್, ಜಾಸ್ಪರ್, ಬೆಣಚುಕಲ್ಲು ಮುಂತಾದವುಗಳಿಂದ ಅತಿ ಸಣ್ಣ, ತ್ರಿಕೋಣಾಕೃತಿಯ, ನೀಳವಾದ ಚಕ್ಕೆಗಳ ವಿವಿಧ ಉಪಕರಣಗಳನ್ನೂ ಕ್ರಮೇಣ, ಅಪರೂಪವಾಗಿ ಮಧ್ಯೆ ತೂತುಳ್ಳ ಕವಣೆಗಲ್ಲುಗಳನ್ನೂ ನಯಮಾಡಿದ ಮೇಲ್ಮೈಯುಳ್ಳ ಕೊಡಲಿಗಳನ್ನೂ ಮಾಡಿಕೊಳ್ಳುತ್ತಿದ್ದರು. ಈ ಕಲ್ಲುಗಳನ್ನು 50 ರಿಂದ 150 ಕಿಮೀ ದೂರದ ಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದಾರೆಂದು ಕಾಣುತ್ತದೆ. ಇವರು ಆಹಾರಕ್ಕಾಗಿ ಖಡ್ಗಮೃಗ, ಕಾಡುಹಂದಿ, ನೀಲ್ಗಾಯ್, ಚಿಗರಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಮಜ್ಜೆಗಾಗಿ ಎಲುಬುಗಳನ್ನು ಸೀಳಿದ, ಮಿದುಳಿಗಾಗಿ ತಲೆಬರುಡೆಗಳನ್ನು ಒಡೆದ ಗುರುತುಗಳು ಇಲ್ಲಿ ದೊರೆತ ಪ್ರಾಣಿಗಳ ಎಲುಬುಗಳಲ್ಲಿ ತೋರಿಬಂದಿವೆ. ಮೀನು ಆಮೆಗಳೂ ಇವರ ಆಹಾರವಾಗಿದ್ದುವು. ಇವರು ಅರ್ಧಗೋಲಾಕೃತಿಯ ಗುಡಾಣದಂಥ ಮತ್ತು ಇತರ ಅರೆಸುಟ್ಟ ಮಣ್ಣಿನ ಪಾತ್ರೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ಕೆಲವು ಪಾತ್ರೆಗಳ ಮೇಲೆ, ಅವು ಅರೆಹಸಿಯಾಗಿದ್ದಾಗ, ಮೊನೆಚಾದ ಕಡ್ಡಿಯಿಂದ ರೇಖಾಚಿತ್ರಗಳನ್ನು ಕೊರೆಯುತ್ತಿದ್ದರು. ಕೆಮ್ಮಣ್ಣನ್ನು ನೀರಿನಲ್ಲಿ ಕದಡಿಕೆಲವು ಪಾತ್ರೆಗಳ ಮೇಲೆ ಬಳಿಯುತ್ತಿದ್ದರು. ಶವಗಳ ಕಾಲುಗಳನ್ನು ಹಿಂದಕ್ಕೆ ಮಡಿಚಿ, ತಲೆ ಬಲಮಗ್ಗುಲಿಗೆ ಬರುವಂತೆ ಮಾಡಿ ಪುರ್ವ ಪಶ್ಚಿಮವಾಗಿ ಅವನ್ನು ಕುಣಿಗಳಲ್ಲಿ ಮಲಗಿಸಿ ಮುಚ್ಚುತ್ತಿದ್ದರು. ಈ ಜನ ಮಿಶ್ರಜನಾಂಗದವರಾಗಿದ್ದು ಇವರಲ್ಲಿ ಮೆಡಿಟರೆನಿಡ್ ಮತ್ತು ವೆಡಿಡ್ ಜನಾಂಗಗಳ ಲಕ್ಷಣಗಳಿದ್ದುವೆಂಬುದು ಉತ್ಖನನದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳಿಂದ ತಿಳಿದುಬರುತ್ತದೆ. ಈ ಸಂಸ್ಕೃತಿ ಪ್ರ.ಶ.ಪು. ಸುಮಾರು 2000ಕ್ಕೆ ಇತ್ತೆಂದು ಹೇಳಬಹುದು. ರಂಗಪುರದಲ್ಲೂ, ಹರಪ್ಪ ಸಂಸ್ಕೃತಿಯ ಅವಶೇಷಗಳ ಕೆಳಭಾಗದಲ್ಲಿ, ಈ ಶಿಲಾಯುಗದ ಅವಶೇಷಗಳು ತೋರಿಬಂದಿವೆ.


ಸಿಂಧೂ ಬಯಲಿನ (ಹರಪ್ಪ) ನಾಗರಿಕತೆಯ ಅನೇಕ ನೆಲೆಗಳು 1934ರಿಂದ ಈಚೆಗೆ ಬೆಳಕಿಗೆ ಬಂದಿವೆ. ಮುಖ್ಯವಾಗಿ ರಂಗಪುರ, ರೋಜ್ಡಿ, ದೇಸಲ್ಪುರ, ಸೋಮನಾಥ, ಲೋಥಾಲ್ ಮತ್ತು ಸುರಕೋಟಡ ನೆಲೆಗಳಲ್ಲಿ ಉತ್ಖನನಗಳನ್ನು ನಡೆಸಿ, ಈ ನಾಗರಿಕತೆಯ ಬಗ್ಗೆ ಕೆಲವು ಹೊಸ ವಿಷಯಗಳನ್ನು ತಿಳಿದುಕೊಳ್ಳಲಾಗಿದೆ. ಲೋಥಾಲ್ನಲ್ಲಿ ದೊರೆತ ಈ ನಾಗರಿಕತೆಯ ಅವಶೇಷಗಳಲ್ಲಿ ಹಡಗು ಕಟ್ಟೆ ಬಹು ಮುಖ್ಯವಾದ್ದು. ಇದು ಆ ಜನರ ಸಮುದ್ರ ವ್ಯಾಪಾರದ ಸಾಮಥರ್ಯ್‌ವನ್ನು ತೋರಿಸುತ್ತದೆ. ಪ್ರಪಂಚದಲ್ಲಿಯೇ ಇದು ಅತ್ಯಂತ ಪ್ರಾಚೀನವಾದ್ದು. ಹರಪ್ಪ, ಮೊಹೆಂಜೋದಾರೊಗಳ ಅನಂತರ, ಭಾರತದಲ್ಲಿ ದೊರೆತ ಈ ನಾಗರಿಕತೆಯ ದೊಡ್ಡ ನಗರಗಳಲ್ಲಿ ಲೋಥಾಲ್ ಒಂದು. ಇದು ಅಹಮದಾಬಾದ್ ಜಿಲ್ಲೆಯಲ್ಲಿದೆ; ಆ ನಗರದ ದಕ್ಷಿಣಕ್ಕೆ, ಸು. 100 ಕಿಮೀ ದೂರದಲ್ಲಿ ಇದೆ. ಈ ಪ್ರಾಚೀನ ನಗರ ಉನ್ನತಿಯಲ್ಲಿದ್ದಾಗ ಅರಬ್ಬಿ ಸಮುದ್ರ ಇದರ ಸಮೀಪದವರೆಗೂ ವಿಸ್ತರಿಸಿತ್ತು. ಕ್ರಮೇಣ ಸಮುದ್ರದ ಮಟ್ಟದ ಇಳಿತದಿಂದ ಈ ಪ್ರದೇಶ ಸಮುದ್ರದಿಂದ ದೂರವಾಯಿತು. ಇಲ್ಲಿಯ ನಗರ ಸಂಸ್ಕೃತಿಯ ಬೆಳೆವಣಿಗೆಯಲ್ಲಿ ಎರಡು ಹಂತಗಳು ತೋರುತ್ತವೆ. ಪೂರ್ವದ ಹಂತದಲ್ಲಿ ಇದು ಹರಪ್ಪ ನಗರದ ಹಾಗೆ, ಆದರೆ ಸಣ್ಣ ಗಾತ್ರದಲ್ಲಿ, ಕ್ರಮಬದ್ಧವಾಗಿ ಕಟ್ಟಲಾದ ನಗರವಾಗಿತ್ತು. ನಗರದ ಪ್ರಮುಖ ಭಾಗ ಬಲವಾದ ಗೋಡೆಯಿಂದ ಆವೃತವಾಗಿತ್ತು. ಹೊರಭಾಗದಲ್ಲಿ ಸುಮಾರು ಒಂದೂವರೆ ಕಿಮೀ ದೂರದಲ್ಲಿ ವಾಯವ್ಯದ ಕಡೆಗೆ ಒಂದು ಸ್ಮಶಾನವೂ ಪೂರ್ವಭಾಗದಲ್ಲಿ ಚತುರ್ಭುಜಾಕೃತಿಯ ಹಡಗುಕಟ್ಟೆಯೂ (213 ಮೀ ಘಿ 36 ಮೀ) ಇದ್ದುವು. ಇದು 4.20 ಮೀ ಎತ್ತರವಿತ್ತೆಂಬುದಾಗಿ ಉತ್ಖನನದಲ್ಲಿ ಕಂಡುಬಂದಿದೆ; ಇನ್ನೂ ಎತ್ತರವಿದ್ದಿರಬಹುದು.



ನಗರದಲ್ಲಿ ಆರು ಭಾಗಗಳಿದ್ದವು. ಪ್ರತಿಯೊಂದು ಭಾಗದಲ್ಲೂ ವಿಶಾಲವಾದ ಇಟ್ಟಿಗೆ ಕಟ್ಟೆಯ ಮೇಲೆ ಮನೆಗಳನ್ನು ಕಟ್ಟಲಾಗಿತ್ತು. ಪುರ್ವಪಶ್ಚಿಮ ಮತ್ತು ಉತ್ತರದಕ್ಷಿಣವಾಗಿ ಹಾದುಹೋಗುವ ಎರಡೆರಡು ಬೀದಿಗಳಿದ್ದುವು ಮತ್ತು ಎರಡೆರಡು ಓಣಿಗಳಿದ್ದುವು. ಒಂದು ಬೀದಿಯ ಬದಿಯಲ್ಲಿ ಸಾಲಾಗಿ ಮನೆಗಳಿದ್ದುವು. ಇವಲ್ಲದೆ ಎದುರುಬದುರಾಗಿರುವ ಎರಡು ಮೂರು ಕೋಣೆಗಳುಳ್ಳ ಮನೆಗಳಿದ್ದುವು. ಇವು ಅಂಗಡಿಗಳಾಗಿದ್ದಿರಬಹುದು. ದೊಡ್ಡ ಮನೆಗಳು ಮುಂಭಾಗದಲ್ಲಿ ಅಂಗಳಗಳಿಂದ ಕೂಡಿದ್ದವು. ಮತ್ತೆ ಕೆಲವು ಮನೆಗಳ ಮಧ್ಯದಲ್ಲಿ ಅಂಗಳಗಳಿದ್ದು ಸುತ್ತಲೂ ಕೋಣೆಗಳಿದ್ದುವು. ಚಿನಿವಾರರ, ಇತರ ಲೋಹ ಕೆಲಸ ಮಾಡುವವರ ಮನೆಗಳು ಸಣ್ಣವಿದ್ದುವು. ನಗರನೈರ್ಮಲ್ಯ ವ್ಯವಸ್ಥೆ ಚೆನ್ನಾಗಿತ್ತು. ಈ ಬೀದಿಯ ಬದಿಯ ದೊಡ್ಡ ಚರಂಡಿಗಳಿಗೆ ಮನೆಯ ಒಳ ಚರಂಡಿಗಳನ್ನು ಸೇರಿಸಲಾಗಿತ್ತು. ಮನೆಗಳಲ್ಲಿ ಬಿಟುಮೆನ್ ಸವರಿದ ನೆಲವುಳ್ಳ ಸ್ನಾನಗೃಹಗಳು, ಶೌಚಗೃಹ ಮತ್ತು ಹಿಂಗುಣಿಗಳಿದ್ದುವು. ನಗರದ ದಕ್ಷಿಣ ಭಾಗದಲ್ಲಿ ಎತ್ತರದ ಕಟ್ಟೆಯ ಮೇಲೆ ನಿರ್ಮಿಸಿದ ದೊಡ್ಡದೊಂದು ಮನೆಗೆ ಸುವ್ಯವಸ್ಥಿತವೂ ವಿಶಾಲವೂ ಆದ ಚರಂಡಿಯೂ ಪ್ರತ್ಯೇಕ ಬಾವಿಯೂ ಇದ್ದುವು. ರೋಜ್ಡಿಯಲ್ಲಿ ಈ ನಾಗರಿಕತೆಯ ಕೊನೆಯ ಹಂತದಲ್ಲಿ ತುಂಡುಕಲ್ಲುಗಳಿಂದ ಮನೆಗಳನ್ನು ಕಟ್ಟಲಾಗಿತ್ತು. ಸುರ್ಕೋಟಡದಲ್ಲಿ ನಗರದ ಸುತ್ತಲೂ ರಕ್ಷಣಾರ್ಥವಾಗಿ ಬಲವಾದ ಗೋಡೆಗಳಿದ್ದುವು.


ಹರಪ್ಪದಲ್ಲಿಯ ಹಾಗೆ ಲೋಥಾಲಿನಲ್ಲಿ ಕೆಂಪುವರ್ಣದ ಮೃಣ್ಪಾತ್ರೆಗಳು ವೈವಿಧ್ಯಪುರಿತವಾಗಿದ್ದು, ಕಪ್ಪು ನೀಲಿ ಬಣ್ಣಗಳ ಚಿತ್ರಗಳಿಂದ ಅಲಂಕೃತವಾಗಿದ್ದುವು; ದೇಸಲ್ಪುರದಲ್ಲಿ ಕಪ್ಪು ನೀಲಿ ಮತ್ತು ಕೆಂಪು ಕೂಡಿದ ಚಿತ್ರಗಳಿಂದ ಅಲಂಕೃತ ವಾಗಿದ್ದುವು. ಜೊತೆಗೆ ಇಲ್ಲಿ ಮಾತ್ರ ಮತ್ತೊಂದು ವಿಧವಾದ, ಕೆಂಪು ಕಪ್ಪು ಬಣ್ಣವುಳ್ಳ ದ್ವಿವರ್ಣ ಪಾತ್ರೆಗಳು ಉಪಯೋಗದಲ್ಲಿದ್ದುವು. ಕಂಚು ಅಥವಾ ತಾಮ್ರದ ಉಪಕರಣಗಳ ಜೊತೆಗೆ ಫ್ಲಿಂಟ್ ಕಲ್ಲಿನ ನೀಳ ಚಕ್ಕೆಗಳು ನಿತ್ಯ ಕೆಲಸಗಳಿಗೆ ಬೇಕಾಗುವ ಉಪಕರಣಗಳಾಗಿ ಉಪಯೋಗದಲ್ಲಿದ್ದುವು.



ಸುಟ್ಟ ಮಣ್ಣಿನಿಂದ, ಆನೆಯ ಮತ್ತು ಇತರ ದಂತಗಳಿಂದ, ಒಳ್ಳೆಯ ಜಾತಿಯ ಕಲ್ಲುಗಳಿಂದ, ತಾಮ್ರ, ಚಿನ್ನ ಮುಂತಾದವುಗಳಿಂದ ಮಾಡಿದ ವಿವಿಧ ಆಕಾರಗಳ ಆಭರಣಗಳು ಅಲ್ಲಿಯ ಜನರ ಕುಶಲಕೆಲಸಕ್ಕೆ, ಸೌಂದರ್ಯಪ್ರಿಯತೆಗೆ ಸಾಕ್ಷಿಗಳಾಗಿವೆ. ಒಂದು ಚಿನ್ನದ ಸರದಲ್ಲಿ 5 ಲಕ್ಷ ಅತಿ ಸಣ್ಣ ಗುಂಡುಗಳು ಮತ್ತು ಕೊಳವೆಗಳಿದ್ದುವು. ಒಂದು ತಾಮ್ರದ ನಾಯಿಯ ಗೊಂಬೆಯ ಮುಖಭಾವ ಮಾರ್ಮಿಕವಾಗಿದೆ. ತಾಮ್ರ, ಕಂಚಿನ ಕೊರೆಯುವ ತಂತಿ ಒಂದು ಮುಖ್ಯವಾದ ಶೋಧ. ಚದುರಂಗದ ಕಾಯಿಗಳಾಗಿದ್ದಿರ ಬಹುದಾದ, ಹೋತದ ತಲೆಯುಳ್ಳ, ಪ್ರಾಣಿ, ಎತ್ತು ಮುಂತಾದ ಗೊಂಬೆಗಳು ಆಕರ್ಷಕವಾಗಿವೆ. ಸು. 17.5 ಸೆಂಮೀ ಉದ್ದದ, 1.7 ಮಿಮೀ ಅಂತರದಲ್ಲಿ ಎಳೆದ ಗೆರೆಗುಳುಳ್ಳ ದಂತದ ಅಳತೆಪಟ್ಟಿ, ಸುಣ್ಣ ಮಣ್ಣಿನ ಅಳತೆಗುಂಡುಗಳು ಇವು ಇವರ ಮಾಪನ ಜ್ಞಾನದ ಗುರುತುಗಳಾಗಿವೆ. ಮಣ್ಣಿನ ಗೊಂಬೆಗಳಲ್ಲಿ ಒಂದು ಕುದುರೆಯ ಹಾಗೆ ಇದೆ. ಇದು ಕುದುರೆಯೋ ಹೇಸರಗತ್ತೆಯೋ ಅಷ್ಟು ಸ್ಪಷ್ಟವಾಗಿಲ್ಲ. ಕುದುರೆಯಾಗಿದ್ದಲ್ಲಿ ಈ ನಾಗರಿಕತೆಯ ಜನರಲ್ಲಿ ಈ ಪ್ರಾಣಿ ಉಪಯೋಗದಲ್ಲಿದ್ದುದು ಪ್ರಥಮ ಬಾರಿಗೆ ತಿಳಿದ ಹಾಗಾಗುತ್ತದೆ. ಹರಪ್ಪ, ಮೊಹೆಂಜೋದಾರೊಗಳಲ್ಲಿ ದೊರೆತ ಹಾಗೆ ಲೋಥಾಲಿನಲ್ಲಿಯೂ ಅಕ್ಷರಗಳುಳ್ಳ ಚಿತ್ರಿತ ಮುದ್ರಿಕೆಗಳು ದೊರೆತಿವೆ; ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿಯ ಸಮಕಾಲೀನ ಸಂಸ್ಕೃತಿಯ ಗುರುತುಗಳಲ್ಲಿ ಒಂದಾದ ದುಂಡು ಮುದ್ರಿಕೆಗಳು ಒಂದೆರಡು ಇಲ್ಲಿ ದೊರೆತು ಈ ಎರಡೂ ಪ್ರದೇಶಗಳ ನಡುವಿನ ಸಮುದ್ರವ್ಯಾಪಾರ ಸಂಬಂಧವನ್ನು ಇವು ಪುಷ್ಟೀಕರಿಸಿವೆ. ಹರಪ್ಪ ಮೊಹೆಂಜೋದಾರೊ ಪ್ರದೇಶಕ್ಕೆ ಮತ್ತು ಗುಜರಾತಿನ ಸೌರಾಷ್ಟ್ರಭಾಗಕ್ಕೆ ಭೂಮಾರ್ಗ ಸಂಪರ್ಕವೂ ಇತ್ತು ಎಂಬುದು ಕಚ್ಛ್‌ ಪ್ರದೇಶದ ಉತ್ಖನನದಿಂದ ತಿಳಿದುಬಂದಿದೆ.


ಅಲ್ಲಿ ಎರಡು ವಿಧವಾದ ಶವಸಂಸ್ಕಾರ ಪದ್ಧತಿಗಳು ಇದ್ದುವು : ಶವವನ್ನು ಉತ್ತರ ದಕ್ಷಿಣವಾಗಿ ಅಥವಾ ಕ್ವಚಿತ್ತಾಗಿ ಪೂರ್ವ ಪಶ್ವಿಮವಾಗಿ ಹುಗಿಯುವುದು; ಇಲ್ಲವೇ ಶವದ ಅಸ್ಥಿಗಳನ್ನು ಕಾಲಕ್ರಮದಲ್ಲಿ ಸಂಗ್ರಹಿಸಿ ಮೃಣ್ಪಾತ್ರೆಯಲ್ಲಿ ಹಾಕಿ ಅವನ್ನು ಕ್ರಮವಾಗಿ ಹುಗಿಯುವುದು. ಅಪರೂಪವಾಗಿ ಶವದ ಕುಣಿಯ ಬದಿಯನ್ನು ಇಟ್ಟಿಗೆಗಳಿಂದ ಭದ್ರ ಮಾಡುತ್ತಿದ್ದದ್ದುಂಟು.


ಎರಡನೆಯ ಹಂತದಲ್ಲಿ ಹರಪ್ಪ ನಾಗರಿಕತೆ ಇಳಿಮುಖವಾದ ಲಕ್ಷಣಗಳು ತೋರುವುವು. ಅಲ್ಲದೆ ಫ್ಲಿಂಟ್ ಬದಲು ಜಾಸ್ಪರ್ ಮತ್ತು ಅಗೇಟ್ ಕಲ್ಲಿನ ನೀಳ ಚಕ್ಕೆಗಳನ್ನು ಉಪಕರಣಗಳಾಗಿ ಉಪಯೋಗಿಸುತ್ತಿದ್ದ ಬೇರೆ ಜನವರ್ಗದವರು ಇಲ್ಲಿ ಬಂದು ನೆಲೆಸಿದ ಹಾಗೆ ಕಾಣುತ್ತದೆ. ಈ ಹಂತದ ಮೃಣ್ ಪಾತ್ರೆಗಳು ಹಿಂದಿನವುಗಳಿಗಿಂತ ತೀರ ಭಿನ್ನವಾಗಿವೆ; ಮತ್ತು ಈ ಸಂಸ್ಕೃತಿಯ ಲಕ್ಷಣಗಳಲ್ಲಿ ದಖನ್ ಪ್ರಸ್ಥಭೂಮಿಯ ಶಿಲಾ ತಾಮ್ರಯುಗದ ಸಂಸ್ಕೃತಿಗೆ ಹೆಚ್ಚು ಹೋಲಿಕೆಯಿದೆ. ಈ ಸಾಧಾರಣ ಸಂಸ್ಕೃತಿಯ ಲಕ್ಷಣಗಳು ರಂಗಪುರದಲ್ಲಿಯೂ ಕಂಡಿವೆ. ಆದರೆ ಲೋಥಾಲ್ನಲ್ಲಿ ಇದು ಸರಿಯಾಗಿ ಬೇರೂರುವುದರಲ್ಲಿಯೇ ಅಲ್ಲಿಯ ನದಿಪ್ರವಾಹದಿಂದ ಹಾಳಾಯಿತು. ರಂಗಪುರದಲ್ಲಿ ಸುಡದ ಮಣ್ಣಿನ ಇಟ್ಟಿಗೆ ಮನೆಗಳಿದ್ದುವು. ಬಿಳಿಬಣ್ಣದ ರೇಖಾಚಿತ್ರಗಳಿಂದ ಅಲಂಕರಿಸಲ್ಪಟ್ಟ ಕಪ್ಪು ಕೆಂಪು ಬಣ್ಣಗಳ ಮಣ್ಣಿನ ಪಾತ್ರೆಗಳು ಉಪಯೋಗದಲ್ಲಿದ್ದುವು. ಕ್ರಮೇಣ ವಿಶೇಷ ಹೊಳಪುಳ್ಳ ಬಣ್ಣದ ಮೃಣ್ಪಾತ್ರೆಗಳು ಬಳಕೆಯಲ್ಲಿದ್ದುವು.



ಸೋಮನಾಥದಲ್ಲಿ ಹರಪ್ಪ ನಾಗರಿಕತೆಯ ಕೊನೆಯ ಹಂತದ ಗುರುತುಗಳುಂಟು. ಈ ಹಂತದಲ್ಲಿ ಕಂದುಬಣ್ಣದ ರೇಖಾಚಿತ್ರಗಳಿಂದ ಅಲಂಕರಿಸಿದ ಬಿಳಿ ಅಥವಾ ಸ್ವಲ್ಪ ಬಿಳಿಹಳದಿ ಬಣ್ಣದ ಮೃಣ್ಪಾತ್ರೆಗಳೂ ಬಳಕೆಯಲ್ಲಿದ್ದುದು ಒಂದು ವೈಶಿಷ್ಟ್ಯ. ಜೊತೆಗೆ ಹೊಸ ಮಾದರಿಯ ಮೃಣ್ಪಾತ್ರೆಯ ಬಟ್ಟಲುಗಳು (ಪ್ರಭಾಸ್ ಅಥವಾ ಸೋಮನಾಥ್ ಬೋಲ್) ಇದ್ದವು. ಇದಕ್ಕೂ ಪೂರ್ವದಲ್ಲಿ, ಕೊರೆದ ಗೆರೆಚಿತ್ರಗಳಿಂದ ಅಲಂಕರಿಸಿದ, ಒರಟಾದ, ಬೂದು ಮತ್ತು ಕೆಂಪುಬಣ್ಣಗಳ ಮೃಣ್ಪಾತ್ರೆಗಳನ್ನು ಉಪಯೋಗಿಸುತ್ತಿದ್ದ ಜನರಿದ್ದರು. ಹರಪ್ಪ ನಾಗರಿಕತೆಯ ತರುವಾಯ ಅನುಕ್ರಮವಾಗಿ ವಿಶೇಷ ಹೊಳಪುಳ್ಳ ಕೆಂಪು ಮೃಣ್ಪಾತ್ರೆಗಳನ್ನು, ಬಿಳಿ ಬಣ್ಣದ ರೇಖಾಚಿತ್ರಗಳುಳ್ಳ ಕಪ್ಪು - ಕೆಂಪು ವರ್ಣದ ಪಾತ್ರೆಗಳನ್ನು ಹಾಗೂ ಕಬ್ಬಿಣವನ್ನು, ಅನಂತರ ವಿಶೇಷ ಹೊಳಪುಳ್ಳ ಕಪ್ಪು ವರ್ಣದ ಪಾತ್ರೆಗಳನ್ನು (ನಾರ್ದರನ್ ಬ್ಲಾಕ್ ಪಾಲಿಷ್ಡ್‌ ವೇರ್) ಉಪಯೋಗಿಸುತ್ತಿದ್ದ ಜನ ಇಲ್ಲಿ ನೆಲೆಸಿದ್ದರು.


ಸೂಕ್ಷ್ಮಶಿಲಾಯುಗದ ಅನಂತರದ ಈ ವಿವಿಧ ಸಂಸ್ಕೃತಿಗಳು ಅನುಕ್ರಮವಾಗಿ ಪ್ರ.ಶ.ಪು. 2000-100ರವರೆಗೆ ಬೆಳೆದು ನಶಿಸಿಹೋದುವು. ಇವುಗಳಲ್ಲಿ ಮುಖ್ಯವಾಗಿ ಹರಪ್ಪ ನಾಗರಿಕತೆ ಪ್ರ.ಶ.ಪು. 2000-1700ರವರೆಗೆ ಊರ್ಜಿತವಾಗಿತ್ತು. ಗಿರ್ನಾರದಲ್ಲಿರುವ ಅಶೋಕನ ಕಲ್ಲುಬಂಡೆ ಶಾಸನವೇ ಮುಂತಾದ ಐತಿಹಾಸಿಕ ಆಧಾರಗಳಿಂದ ಪ್ರ.ಶ.ಪು 3ನೆಯ ಶತಮಾನದಲ್ಲಿ ಗುಜರಾತು ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತೆಂದು ಹೇಳಬಹುದು. ಇಲ್ಲಿ ಇತಿಹಾಸಯುಗ ಪ್ರಾರಂಭವಾಯಿತು.


ಇತಿಹಾಸ

[ಸಂಪಾದಿಸಿ]

ಅಥರ್ವವೇದ ಹಾಗೂ ಐತರೇಯ ಬ್ರಾಹ್ಮಣಗಳಲ್ಲಿ ಭಾರತವನ್ನು ಐದು ಭಾಗಗಳಾಗಿ - ಪ್ರಾಚ್ಯ, ದಕ್ಷಿಣ, ಪ್ರತೀಚಿ, ಉದೀಚಿ, ಮತ್ತು ಧ್ರುವಾಮಧ್ಯಮಾ ಎಂದು - ವಿಂಗಡಿಸಲಾಗಿದೆ. ಇದರಲ್ಲಿ ಪ್ರತೀಚಿ ಅಥವಾ ಪಶ್ಚಿಮ ಭಾಗಕ್ಕೆ ಅಪರಾಂತ ವೆಂಬ ಹೆಸರೂ ಇದೆ. ಪ್ರ.ಶ.ಪು 6ನೆಯ ಶತಮಾನದಿಂದ ಮೌರ್ಯರ ಕಾಲದ ಅಂತ್ಯದವರೆಗೂ ಉಜ್ಜಯಿನಿಯಿಂದ ಸಿಂಧಿನ ಮತ್ತು ಸಿಂಧಿನಿಂದ ಸುರ್ಪಾರಕದ (ಸೋಪಾರಾ) ವರೆಗಿನ ಭಾಗಕ್ಕೆ ಅಪರಾಂತವೆಂಬ ಹೆಸರಿತ್ತು. ಅನಂತರ ಮಾಹೆಯಿಂದ ಗೋವದವರೆಗಿನ ಭಾಗಕ್ಕೂ ಈ ಹೆಸರೂ ಹಲವು ಬಾರಿ ಅನ್ವಯವಾಗುತ್ತಿತ್ತು. ಪ್ರ.ಶ.ಪು 1ನೆಯ ಶತಮಾನದ ಬಳಿಕ ಲಾಟ, ಉತ್ತರ, ಮತ್ತು ದಕ್ಷಿಣ ಕೊಂಕಣ ಪ್ರದೇಶಗಳನ್ನೊಳಗೊಂಡ ಭಾಗಕ್ಕೆ ಅಪರಾಂತವೆಂಬ ಹೆಸರಾಯಿತು. ಅನಂತರ ಈ ಪ್ರದೇಶಗಳಿಗೆ ಬೇರೆ ಬೇರೆ ಹೆಸರುಗಳು ಬಂದುವಾದರೂ ಈಗಿನ ಗುಜರಾತಿನ ಪ್ರದೇಶದಲ್ಲಿ ಹಿಂದೆ ಆನರ್ತ, ಸೌರಾಷ್ಟ್ರ ಮತ್ತು ಲಾಟವೆಂಬ ಮೂರು ಭೌಗೋಳಿಕ ಭಾಗಗಳಿದ್ದುವು. ಆನರ್ತವೆಂಬುದು ಗುಜರಾತಿನ ಉತ್ತರ ಭಾಗ. ಇದರ ರಾಜಧಾನಿ ಕುಶಸ್ಥಲೀ ಎಂದು ಮಹಾಭಾರತದಲ್ಲಿ ಹೇಳಿದೆ. ಈ ನಗರ ನಾಶವಾದ ಬಳಿಕ ದ್ವಾರಕಾನಗರವನ್ನು ಹೊಸದಾಗಿ ಸ್ಥಾಪಿಸಲಾಯಿತೆಂದೂ ಅದು ಯಾದವರ ರಾಜಧಾನಿಯಾಯಿತೆಂದೂ ದ್ವಾರಕಾ ಮತ್ತು ಪ್ರಭಾಸಗಳೆರಡೂ ಸೌರಾಷ್ಟ್ರದಲ್ಲಿದ್ದುವೆಂದು ಆ ಗ್ರಂಥದಲ್ಲಿಯೇ ಹೇಳಿದೆ. ಇದರಿಂದ ಬಹುಶಃ ರುದ್ರದಾಮನ ಕಾಲಕ್ಕೂ ಹಿಂದೆ ಸೌರಾಷ್ಟ್ರ ಹಾಗೂ ಗುಜರಾತಿನ ಉತ್ತರ ಭಾಗಗಳು ಕೂಡಿ ಆನರ್ತವಾಗಿದ್ದುವೆಂದು ಊಹಿಸಬಹುದು. ರುದ್ರದಾಮನ ಜುನಾಗಢ ಶಾಸನದಲ್ಲಿ ಆನರ್ತ ಎಂಬ ಹೆಸರೇ ಉಲ್ಲೇಖಿಸಲ್ಪಟ್ಟಿದೆ. ಆನರ್ತದ ಮುಖ್ಯಪಟ್ಟಣ ಆನಂದ (ಆನತರ್ತ್‌)ಪುರ, ಈಗಿನ ವಡ್ನಗರ. ಸೌರಾಷ್ಟ್ರವೆಂಬುದು ಈಗಿನ ಕಾಠಿಯಾವಾಡಕ್ಕೆ 18ನೆಯ ಶತಮಾನದವರೆಗೂ ಇದ್ದ ಹೆಸರು. ಈ ಹೆಸರು ಸುರಠ ಎಂಬ ಹೆಸರಿನಿಂದ ಬಂದಿರಬಹುದೆಂದೂ ಅಭಿಪ್ರಾಯಪಡಲಾಗಿದೆ. ಈಚೆಗೆ ಕಾಠಿಯಾವಾಡದ ದಕ್ಷಿಣ ಭಾಗವನ್ನು ಮಾತ್ರ ಸೊರಠ್ ಎಂದು ಕರೆಯುತ್ತಾರೆ. ಸ್ವಾಭಾವಿಕ ಸಂಪತ್ತಿನಿಂದ ಕೂಡಿದ ಈ ಭಾಗಕ್ಕೆ ಈ ಹೆಸರು ಅನ್ವರ್ಥನಾಮವಾಗಿದೆ. ಮಾಹಿಯಿಂದ ತಾಪಿ ನದಿಯವರೆಗಿನ ಗುಜರಾತಿನ ಪ್ರದೇಶಕ್ಕೆ ಲಾಟ ಎಂಬ ಹೆಸರಿದೆ. ಮೊದಲಬಾರಿಗೆ ಟಾಲೆಮಿ ಇದನ್ನು ಲಾರಿಕೆ ಎಂದಿದ್ದಾನೆ. ಮೂರನೆಯ ಶತಮಾನದ ಬಳಿಕ ಈ ಹೆಸರು ಹೆಚ್ಚಾಗಿ ಬಳಕೆಗೆ ಬಂತು.


ವಿಷ್ಣುಪುರಾಣದಲ್ಲಿ ಸೌರಾಷ್ಟ್ರವನ್ನು ಕುರಿತಾದ ಕಥೆಯೊಂದಿದೆ. ಅದರಂತೆ ಆನತರ್ತ್‌ ಎಂಬ ದೊರೆ ಕುಶಸ್ಥಲೀ ರಾಜಧಾನಿಯಿಂದ ಆಳುತ್ತಿದ್ದ. ಆನತರ್ತ್‌ ಸಹ ಇವನ ರಾಜ್ಯದ ಒಂದು ಭಾಗವಾಗಿತ್ತು. ಇವನ ಮಗ ರೇವತನ ಮೊಮ್ಮಗಳು ರೇವತಿ. ಈಕೆ ಯಾದವ ವಂಶದ ಅರಸನಾದ ದ್ವಾರಕೆಯ ಬಲದೇವನ ಪತ್ನಿ. ಇವಳ ತಂದೆಯಾದ ರೈವತನನ್ನು ಬಲದೇವ ಸೋಲಿಸಿ ಸೌರಾಷ್ಟ್ರದ ಅಧಿಪತಿಯಾದ. ಆದರೆ ಪುರಾಣದಲ್ಲಿ ಈ ಕತೆ ಬೇರೆಯಾಗಿದೆ. ಯಾದವ ವಂಶದಲ್ಲಿ ಜನಿಸಿದವನು ಕೃಷ್ಣ ಬಲದೇವರ ತಂದೆಯಾದ ವಸುದೇವ. ಕಂಸನ ಮರಣಾನಂತರ ಅವನ ಮಾವನಾದ ಜರಾಸಂಧನ ಉಪಟಳವನ್ನು ತಡೆಯಲಾರದೆ ಅವರು ಮಧುರೆಯನ್ನು ಬಿಟ್ಟು ಆನತರ್ತ್‌ ದೇಶದಲ್ಲಿ ದ್ವಾರಕೆಯನ್ನು ನಿರ್ಮಿಸಿದರು. ಸೌರಾಷ್ಟ್ರದಲ್ಲಿ ಆಳಿದ ಯಾದವರು ಅಂತಃಕಲಹಗಳ ಪರಿಣಾಮವಾಗಿ ಮಹಾಭಾರತದ ಯುದ್ಧ ಮುಗಿದ 36 ವರ್ಷದೊಳಗಾಗಿಯೇ ತಮ್ಮ ರಾಜ್ಯವನ್ನು ಕಳೆದುಕೊಂಡರು. ನಿರ್ಜನವಾದ ದ್ವಾರಕೆಯನ್ನು ಸಮುದ್ರ ನುಂಗಿತಂತೆ.


ಇದು ಗುಜರಾತಿಗೆ ಸಂಬಂಧಿಸಿದ ಪುರಾಣಕತೆ. ಆದರೆ ನಮಗೆ ತಿಳಿದಂತೆ ಇದರ ರಾಜಕೀಯ ಇತಿಹಾಸ ಆರಂಭವಾಗುವುದು ಮೌರ್ಯರ ಕಾಲದಿಂದಲೇ. ಆ ವಂಶದ ಚಂದ್ರಗುಪ್ತ ಸೆಲ್ಯೂಕಸನನ್ನು ಸೋಲಿಸಿದ ಬಳಿಕ ಕಾಠಿಯಾವಾಡವನ್ನು ಸ್ವಾಧೀನಪಡಿಸಿಕೊಂಡು ಆ ಪ್ರಾಂತ್ಯದ ಆಡಳಿತಕ್ಕೆ ತನ್ನ ಅಧಿಕಾರಿಗಳನ್ನು ನೇಮಿಸಿದ. ವೈಶ್ಯ ಪುಷ್ಯಗುಪ್ತ ಇವನಿಂದ ಹಾಗೆ ನೇಮಿತವಾದ ಒಬ್ಬ ರಾಷ್ಟ್ರೀಯ (ಪ್ರಾಂತ್ಯಾಧಿಕಾರಿ). ಜುನಾಗಢದ ಸುದರ್ಶನ ಸರೋವರವನ್ನು ಕಟ್ಟಿಸಿದವನೀತನೇ. ಆದರೂ ಇಲ್ಲಿ ಆಳುತ್ತಿದ್ದ ಒಂದು ಅರಸುಮನೆತನ ಮೌರ್ಯರ ಅಧೀನತೆಯನ್ನು ಒಪ್ಪಿಕೊಂಡಿತ್ತೆಂದೂ ಬಿಂದುಸಾರನ ಆಳ್ವಿಕೆಯ 16ನೆಯ ವರ್ಷದಲ್ಲಿ ಆ ಮನೆತನದ ಪಿಂಗಲ ಪಟ್ಟಕ್ಕೆ ಬಂದನೆಂದೂ ಹೇಳಿದೆ. ಅಶೋಕನ ಕಾಲದಲ್ಲಿ ಯವನರ ತುಶಾಷ್ಪ ಇಲ್ಲಿಯ ಪ್ರಾಂತ್ಯಾಧಿಕಾರಿಯಾಗಿದ್ದ. ಅಶೋಕನ 14 ಬಂಡೆ ಶಾಸನಗಳು ಜುನಾಗಢದಲ್ಲಿ ದೊರೆತಿವೆ. ಮೌರ್ಯರ ಅವನತಿಯ ಕಾಲದಲ್ಲಿ ಅವರ ಸಾಮ್ರಾಜ್ಯದ ಇತರ ಭಾಗಗಳು ಬೇರೆಯವರ ಅಧೀನವಾದರೂ ಕಾಠಿಯವಾಡದ ಭಾಗದಲ್ಲಿ ಆ ವಂಶದ ಅರಸನೊಬ್ಬ ಆಳುತ್ತಿದ್ದನೆಂದು ತೋರುತ್ತದೆ. ಅನಂತರ ವಾಯವ್ಯದಿಂದ ಗ್ರೀಕರು ಮತ್ತು ಪಾರ್ಥಿಯನರು ಈ ಭಾಗದಲ್ಲಿ ಕೆಲಕಾಲ ಅಧಿಕಾರ ನಡೆಸಿದರು. ಗ್ರೀಕರ ರಾಜ ಡೆಮಿಟ್ರಿಯೆಸ್ನ ಇಬ್ಬರು ಸೇನಾನಿಗಳು ಭಾರತದ ಮೇಲೆ ಧಾಳಿ ಮಾಡಿದರು. ಅಪೋಲೊಡೋಟಸ್ (ಪ್ರ.ಶ.ಪು 175 - ಪ್ರ.ಶ.ಪು 156) ಅವರಲ್ಲೊಬ್ಬ. ಅವನ ಬಳಿಕ ಮಿನಾಂಡರ್, ಅನಂತರ ಇವನ ಮಗನಾದ 1ನೆಯ ಸೋತರ್ ಈ ಪ್ರದೇಶವನ್ನು ಆಳಿದರು. ಸೋತರನ ಕಾಲದಲ್ಲಿ ಅವನ ಅಧೀನದಲ್ಲಿ ಸತ್ರಪನಾದ (ಕ್ಷತ್ರಪ) ಇಮ್ಮಡಿ ಅಪೋಲೊಡೋಟಸ್ ಕಾಠಿಯಾವಾಡದಲ್ಲಿ ಅಧಿಕಾರ ನಡೆಸಿದ.


ಕ್ಷತ್ರಪ ಎಂಬುದು ಪ್ರಾಂತ್ಯಾಧಿಕಾರಿಯ ಬಿರುದು. ಇದೆ ಮುಂದೆ ಉತ್ತರದಲ್ಲಿ ಸ್ವತಂತ್ರವಾಗಿ ಆಳಿದ ಮನೆತನಗಳ ಹೆಸರೂ ಆಯಿತು. ಅಂತೆಯೇ ಉಜ್ಜಯಿನಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಮಾಳವ, ಕಾಠಿಯಾವಾಡ ಮತ್ತು ಗುಜರಾತಗಳಲ್ಲಿ ಆಳತೊಡಗಿದ ಕ್ಷತ್ರಪರು ಭೂಮಕ ಮತ್ತು ನಹಪಾಣರು. ಇವರು ಕ್ಷಹರಾತ ಕುಲಕ್ಕೆ ಸೇರಿದವರು. ನಹಪಾಣನ ರಾಜ್ಯ ನಾಸಿಕದಿಂದ ಸೂರ್ಪಾರಕದವರೆಗೂ ಹಬ್ಬಿತ್ತು. ಆದರೆ ಇವನನ್ನು ಶಾತವಾಹನ ಕುಲದ ಗೌತಮೀಪುತ್ರ ಶಾತಕರ್ಣಿ ಸೋಲಿಸಿ, ಅಶಿಕ, ಅಸಕ, ಮುಲಕ, ಸುರಠ, ಕುಕರ, ಅಪರಾಂತ ಮುಂತಾದ ಪ್ರದೇಶಗಳನ್ನು ಗೆದ್ದುಕೊಂಡ. ಆದರೆ ಸುರಾಷ್ಟ್ರ, ಮಾಳವ ಮತ್ತು ಗುಜರಾತ್ಗಳ ಮೇಲೆ ಶಾತಕರ್ಣಿಯ ಹಿಡಿತ ಕ್ರಮೇಣ ಸಡಿಲವಾಯಿತು. ಕ್ಷತ್ರಪರಾದ ಚಷ್ಟನ ಮತ್ತು ರುದ್ರದಾಮರು ಶಾತಕರ್ಣಿಯನ್ನೂ ಸೋಲಿಸಿ ಈ ಪ್ರದೇಶಗಳನ್ನು ತಮ್ಮ ಅಧೀನಕ್ಕೆ ತಂದುಕೊಂಡರು. ರುದ್ರದಾಮನ ಕೈಕೆಳಗಿನ ಪ್ರಾಂತ್ಯಾಧಿಕಾರಿಯಾಗಿ ಸೌರಾಷ್ಟ್ರ, ಆನತರ್ತ್‌ ಪ್ರದೇಶಗಳನ್ನು ಪಹ್ಲವ ಕುಲೈಪನ ಮಗನಾದ ಸುವಿಶಾಖ ಆಳುತ್ತಿದ್ದ. ಈತನ ಕಾಲದಲ್ಲಿ ಪ್ರವಾಹದ ಹಾವಳಿಯಿಂದ ಒಡೆದು ಹಾಳಾದ ಸುದರ್ಶನ ಸರೋವರವನ್ನು ಮತ್ತೊಮ್ಮೆ ಜೀರ್ಣೋದ್ಧಾರ ಮಾಡಲಾಯಿತು.


ರುದ್ರದಾಮನ ಬಳಿಕ ಅವನ ಮಗ ದಾಮಘಸದ ಆಳಿದ. ಅವನ ಬಳಿಕ ಅವನ ಮಕ್ಕಳಲ್ಲಿ ಅಂತಃಕಲಹಗಳುಂಟಾಗಿ, ಸೇನಪತಿಗಳಾಗಿದ್ದ ಆಭೀರರು ಕೊನೆಗೆ ಈ ಭಾಗದ ಅರಸರಾದರು. 236 - 239ರಲ್ಲಿ ಇಲ್ಲಿ ಆಳಿದ ಈಶ್ವರದತ್ತ ಆಭೀರ ಕುಲದವರು. 4ನೆಯ ಶತಮಾನದಲ್ಲಿ ಶಕರ ಆಳ್ವಿಕೆಗೊಳಪಟ್ಟ ಈ ಪ್ರದೇಶದ ಮೇಲೆ ಗುಪ್ತರ ಇಮ್ಮಡಿ ಚಂದ್ರಗುಪ್ತ ದಂಡೆತ್ತಿ ಶಕರ 3ನೆಯ ರುದ್ರಸಿಂಹನನ್ನು ಸೋಲಿಸಿ ಅವನ ರಾಜ್ಯವನ್ನು ತನ್ನ ಅಧೀನಕ್ಕೆ ತಂದುಕೊಂಡ. ಸ್ಕಂದಗುಪ್ತನ ಕಾಲದಲ್ಲಿ ಸುರಾಷ್ಟ್ರ ಪ್ರಾಂತ್ಯವನ್ನು ಅವನ ಅಧಿಕಾರಿಯಾದ ಪರ್ಣದತ್ತ ಆಳುತ್ತಿದ್ದ. ಇವನ ಅನಂತರ ಇವನ ಕೈಕೆಳಗಿನ ಭಟಾರ್ಕ ಇಲ್ಲಿ ಆಳತೊಡಗಿದ. ಈತ ಮೈತ್ರಕ ವಂಶಕ್ಕೆ ಸೇರಿದವನು. ವಲ್ಲಭಿನಗರವನ್ನು ಈತ ಸ್ಥಾಪಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಜುನಾಗಢ (ಗಿರಿನಗರ) ತನ್ನ ಮೊದಲಿನ ಖ್ಯಾತಿಯನ್ನು ಕಳೆದುಕೊಂಡಿತು. ಹೊಸದಾಗಿ ಕಟ್ಟಿದ ವಲ್ಲಭಿನಗರದ ಹೆಸರಿನಲ್ಲಿ ವಲ್ಲಭಿಶಕೆ ಎಂಬ ಒಂದು ಕಾಲಗಣನೆ ಆರಂಭವಾಗಿ ಅದು ಮೈತ್ರಕರ ಶಾಸನಗಳಲ್ಲಿ ಉಕ್ತವಾಗಿದೆ. ವಲ್ಲಭಿ ಶಕೆ ಮತ್ತು ಗುಪ್ತರ ಶಕೆ ಎರಡೂ ಒಂದೇ ಎಂದೂ ಈ ಎರಡರ ಮೊದಲ ವರ್ಷ ಪ್ರ. ಶ. 319 ಎಂದೂ ಅನೇಕರು ಅಬಿಪ್ರಾಯಪಟ್ಟಿದ್ದಾರಾದರೂ ಇದಿನ್ನೂ ಸರ್ವಸಮ್ಮತವಾಗಿಲ್ಲ.


ಸು.472ರಲ್ಲಿ ಭಟಾರ್ಕನಿಂದ ಆರಂಭವಾದ ಮೈತ್ರಕ ವಂಶದ ಅರಸರು ಮೂರು ಶತಮಾನಗಳ ಕಾಲ - 776 ರವರೆಗೆ - ವಲ್ಲಭಿüಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದರು. ಆರಂಭದಲ್ಲಿ ಇವರು ಗುಪ್ತರ ಸಾಮಂತರಾಗಿದ್ದರು. ಅನಂತರ ವಾಕಾಟಕರ ಅಧೀನತೆಯನ್ನು ಒಪ್ಪಿದರು. ವಾಕಾಟಕ ಹರಿಷೇಣನ ಮಗಳಾದ ಚಂದ್ರಲೇಖೆಯನ್ನು ಮೈತ್ರಕ 1ನೆಯ ಧ್ರುವಸೇನ ಮದುವೆಯಾಗಿದ್ದ. ಹರಿಷೇಣನ ಉತ್ತರಾಧಿಕಾರಿಯನ್ನು ಮಂಡಸರಸ್ತಂಭ ಶಾಸನದ ಮಾಳವದ ಯಶೋಧರ್ಮ ಸೋಲಿಸಿ ಧ್ರುವಸೇನನನ್ನು ತನ್ನ ದಂಡನಾಯಕನಾಗಿ ನೇಮಿಸಿಕೊಂಡಂತೆ ತೋರುತ್ತದೆ. ಆದರೆ ಯಶೋಧರ್ಮನ ವಿಜಯ ಕ್ಷಣಿಕವಾದ್ದಾಗಿದ್ದು ಧ್ರುವಸೇನ ಪುನಃ ಮಹಾರಾಜ, ಮಹಾಸಾಮಂತ ಎಂಬ ತನ್ನ ಮೊದಲಿನ ಬಿರುದುಗಳನ್ನೇ ಧರಿಸಿದ. ಇವನ ಆಳ್ವಿಕೆಯ ಕಾಲದಲ್ಲಿ ಸು. 525ರಲ್ಲಿ ವಲ್ಲಭಿನಗರದಲ್ಲಿ ಜೈನರ ಮಹಾಸಭೆಯೊಂದು ನೆರೆದಿತ್ತು. ಇಮ್ಮಡಿ ಧರಸೇನನ (569 - 589) ಕಾಲದಲ್ಲಿ ಮೌಖರಿ ಕುಲದ ಈಶಾನವರ್ಮ ಮೈತ್ರಕರನ್ನು ಸೋಲಿಸಿದ. ಧರಸೇನನ ತಂದೆಯಾದ ಗುಹಸೇನ ಮಹಾರಾಜನೆಂದು ಬಿರುದಾಂಕಿತನಾಗಿದ್ದ. ಆದರೆ ಆಗ ಈತ ಪುನಃ ಮಹಾಸಾಮಂತ ಪದವಿಯಲ್ಲೇ ತೃಪ್ತಿಗೊಳ್ಳಬೇಕಾಯಿತು. ಆದರೆ ಇವನ ಮಗ 1ನೆಯ ಶೀಲಾದಿತ್ಯನ (590-615) ಕಾಲದಲ್ಲಿ ಇವನ ರಾಜ್ಯ ವಿಸ್ತಾರಗೊಂಡು ಪುರ್ವ ಮಾಳವ ಸಹ ಇವರಿಗೆ ಸೇರಿತ್ತೆಂದು ತಿಳಿದುಬರುತ್ತದೆ. ಯುವಾನ್ಚಾಂಗ್ ನಮೂದಿಸಿರುವ ಮೊದಲ ಪೊದ (ಮಾಳವ) ಶೀಲಾದಿತ್ಯ ಇವನೇ ಎಂದು ಹಲವರು ಸೂಚಿಸಿದ್ದಾರೆ. ಅಂದು ಮಾಳವದ ಅರಸನಾಗಿದ್ದ ದೇವಗುಪ್ತನಿಗೂ ಕಳಚುರಿಗಳಿಗೂ ಹೋರಾಟಗಳಾದವು. ಆ ಕಲಹದಲ್ಲಿ ಅನಂತರ ಕನೌಜಿನ ಶ್ರೀಹರ್ಷನೂ ಗೌಡ ದೇಶದ ಶಶಾಂಕನೂ ಪಾಲುಗೊಂಡಿದ್ದರು. ಶೀಲಾದಿತ್ಯ ಆ ಸಂದರ್ಭದಲ್ಲಿ ಶಶಾಂಕನ ಬೆಂಬಲಿಗನಾಗಿದ್ದ ಕಾರಣ ದೇವಗುಪ್ತನ ಮರಣಾನಂತರ ಹರ್ಷ ಮಾಳವವನ್ನು ಆಕ್ರಮಿಸದೆ ಅದು ಶೀಲಾದಿತ್ಯನ ಕರಗತವಾಯಿತೆಂದು ಊಹಿಸಲಾಗಿದೆ. ಆದರೆ ಶಶಾಂಕ ಸತ್ತ ಕೂಡಲೇ ಶ್ರೀಹರ್ಷ ಮೈತ್ರಕರ ಮೇಲೆರಿ ಹೋಗಿ ಮಾಳವನನ್ನು ಕಸಿದುಕೊಂಡ. ಇದು ನಡೆದದ್ದು ಇಮ್ಮಡಿ ಧ್ರುವಸೇನ ಬಾಲಾದಿತ್ಯನ ಆಳ್ವಿಕೆಯ ಕಾಲದಲ್ಲಿ (ಸು. 627-641) ಎಂದು ಊಹಿಸಲಾಗಿದೆ. ಈ ಸಂದರ್ಭದಲ್ಲಿ ಬಾಲಾದಿತ್ಯ ಗೂರ್ಜರಾಧಿಪತಿಯಾದ ನಾಲ್ಕನೆಯ ದದ್ದನ ಆಶ್ರಯಪಡೆದನೆಂದೂ ಈ ಇಬ್ಬರೂ ಕರ್ನಾಟಕದಲ್ಲಿ ಆಳುತ್ತಿದ್ದ ಚಳುಕ್ಯ ಇಮ್ಮಡಿ ಪುಲಕೇಶಿಯ ಸಾಮಂತಿಕೆಯನ್ನು ಒಪ್ಪಿದ್ದರೆಂದೂ ಇವರಿಂದ ಸ್ವಲ್ಪಮಟ್ಟಿಗೆ ಹೆದರಿದ ಶ್ರೀಹರ್ಷ ತನ್ನ ಮಗಳನ್ನು ಬಾಲಾದಿತ್ಯನಿಗೆ ವಿವಾಹ ಮಾಡಿಕೊಟ್ಟು ಅವನನ್ನು ತನ್ನ ಸಾಮಂತನಾಗಿ ಮಾಡಿಕೊಂಡನೆಂದೂ ಹೇಳಲಾಗಿದೆ.


ನಾಲ್ಕನೆಯ ಧರಸೇನ (641 - 650) ಮೈತ್ರಕರಲ್ಲೆಲ್ಲ ಅತ್ಯಂತ ಪ್ರಸಿದ್ಧನಾದ ದೊರೆ. ಈತ ಮಹಾರಾಜಾಧಿರಾಜ, ಪರಮೇಶ್ವರ ಚಕ್ರವರ್ತಿ ಇತ್ಯಾದಿ ಸಾರ್ವಭೌಮ ಸೂಚಕ ಬಿರುದುಗಳನ್ನು ಪಡೆದಿದ್ದ. 642ರ ಬಳಿಕ ಕೆಲವು ಕಾಲ ಬಾದಾಮಿಯ ಚಳುಕ್ಯರ ಬಲ ಗ್ರಹಣ ಪೀಡಿತವಾಗಿದ್ದ ಸಮಯದಲ್ಲಿ ಅವರ ಸಾಮಂತರಾಗಿದ್ದ ಗೂರ್ಜರರನ್ನು ಧರಸೇನ ಸೋಲಿಸಿ ಭರುಕಚ್ಛವನ್ನು ಆಕ್ರಮಿಸಿದ. ಶ್ರೀಹರ್ಷನ ಮರಣಾನಂತರ ಅವನಿಗೆ ಗಂಡು ಸಂತತಿ ಇಲ್ಲದ ಕಾರಣ ಧರಸೇನನೇ ಪುಷ್ಪಭೂತಿ ರಾಜ್ಯದ ಉತ್ತರ ಆಧಿಕಾರಿಯಾದನೆಂದೂ ಇದು ಇವನ ಸಾರ್ವಭೌಮ ಪದವಿಗೆ ನಿಮಿತ್ತವಾಯಿತೆಂದೂ ಹಲವರು ಸೂಚಿಸಿದ್ದಾರಾದರೂ ಇದು ಸಂದೇಹಾಸ್ಪದವೇ.



ಚಳುಕ್ಯ 1ನೆಯ ವಿಕ್ರಮಾದಿತ್ಯ ತನ್ನ ತಂದೆಯ ರಾಜ್ಯವನ್ನು ಪುನಃ ಪ್ರತಿಷ್ಠಾಪಿಸಿ ಅದು ತನ್ನ ಹಿಂದಿನ ಯಶಸ್ಸನ್ನು ಗಳಿಸಲು ಶ್ರಮಿಸಿದ. ಇದರ ಪರಿಣಾಮವಾಗಿ ಮೈತ್ರಕರ ಬಲವೂ ಕುಗ್ಗಿತು. ಮುಮ್ಮಡಿ ಧ್ರುವಸೇನ (650 - 55) ದಕ್ಷಿಣ ಗುಜರಾತಿನ ಪ್ರದೇಶಗಳನ್ನು ಪುನಃ ಕಳೆದುಕೊಂಡ. ಚಳುಕ್ಯರ ಸಾಮಂತ ನಾದ ಅಲ್ಲಶಕ್ತಿ ಪೃಥ್ವಿವಲ್ಲಭ ಇಲ್ಲಿಯ ಪ್ರಾಂತ್ಯಾಧಿಕಾರಿಯಾಗಿ ನಿಯಮಿತನಾದ. ಅನಂತರ ಆಳಿದ ಮೈತ್ರಕರು ಕಳೆದುಹೋದ ತಮ್ಮ ರಾಜ್ಯದ ಭಾಗಗಳನ್ನು ಪುನಃ ಪಡೆಯಲು ಯತ್ನಿಸಿದರಾದರೂ ಅವರಿಗೆ ಹೆಚ್ಚಿನ ಯಶಸ್ಸು ದೊರೆಯಲಿಲ್ಲ. ಚಳುಕ್ಯ ವಿನಯಾದಿತ್ಯ ತನ್ನ ಉತ್ತರ ದಂಡಯಾತ್ರೆಯ ಸಮಯದಲ್ಲಿ ಮಾಳವವನ್ನು ಆಕ್ರಮಿಸಿದನೆಂದು ಹೇಳಿದೆ. ಆಗ ಅಲ್ಲಿ ಆಳುತ್ತಿದ್ದವರು ಮೈತ್ರಕರೇ ಆದ ಕಾರಣ ಚಳುಕ್ಯರ ಸಾಮಂತಿಕೆಯನ್ನು 3ನೆಯ ಶೀಲಾದಿತ್ಯ ಒಪ್ಪಬೇಕಾಯಿತೆಂದೂ ತೋರುತ್ತದೆ. ಈ ಮಧ್ಯೆ ಅರಬರ ಸೈನ್ಯ ಜುನೈದನ ನೇತೃತ್ವದಲ್ಲಿ ಗುಜರಾತಿನ ಕರಾವಳಿಯನ್ನು ಮುತ್ತಿ ಅಲ್ಲಿ ಆಳುತ್ತಿದ್ದ ಗೂರ್ಜರ, ಮೈತ್ರಕ ಇತ್ಯಾದಿ ಅರಸರನ್ನು ತೊಂದರೆಗೀಡು ಮಾಡಿತು. 4ನೆಯ ಹಾಗೂ 5ನೆಯ ಶೀಲಾದಿತ್ಯರು ಇವರ ಧಾಳಿಗಳನ್ನು ಎದುರಿಸ ಬೇಕಾಯಿತು. ಆದರೆ ಮೈತ್ರಕರ ಆಳ್ವಿಕೆ ಬಹುಕಾಲ ಮುಂದುವರಿಯಲು ಸಾಧ್ಯವಿರಲಿಲ್ಲ. ಮಾಳವ, ಗುಜರಾತ್ ಪ್ರದೇಶಗಳಲ್ಲಿ ರಾಷ್ಟ್ರಕೂಟರೂ, ಗೂರ್ಜರ ಪ್ರತೀಹಾರರೂ ತಲೆ ಎತ್ತಿದರು. ರಾಷ್ಟ್ರಕೂಟರು ಕ್ರಮೇಣ ಬಾದಾಮಿಯ ಚಳುಕ್ಯರನ್ನು ಸೋಲಿಸಿ ಅವರ ರಾಜ್ಯವನ್ನು ಕಸಿದುಕೊಂಡರು. ಮೈತ್ರಕರು ಗೂರ್ಜರ - ಪ್ರತೀಹಾರರ ವಿರೋಧ ವನ್ನೆದುರಿಸಲಾರದೆ ಹೋದರು. ಕೊನೆಗೆ ಅವರ ರಾಜ್ಯವನ್ನು ಆ ಶತ್ರುಗಳು ಕಬಳಿಸಿದರು. ಆರನೆಯ ಶೀಲಾದಿತ್ಯನೇ ಈ ಮನೆತನದ ಕೊನೆಯ ಅರಸ (ಸು. 762 - 776).


ಭರುಕಚ್ಛದ ಸುತ್ತಲಿನ ಪ್ರದೇಶದಲ್ಲಿ ಗೂರ್ಜರ ವಂಶಕ್ಕೆ ಸೇರಿದ ಒಂದು ಶಾಖೆಯ ಅರಸರು ಕೆಲಕಾಲ ಆಳುತ್ತಿದ್ದರು. ಇವರನ್ನು ನಂದಿಪುರಿಯ (ಈಗಿನ ನಾಂದೋಡ್) ಗೂರ್ಜರರೆಂದು ಕರೆಯಲಾಗಿದೆ. ಈ ಮನೆತನದ ಮೊದಲ ಅರಸ ದದ್ದ; ರಾಜಸ್ತಾನದ ಜೋಧಪುರದಲ್ಲಿ ಆಳಿದ ಗೂರ್ಜರ ವಂಶದ ಮೂಲಪುರುಷನಾದ ಹರಿಚಂದ್ರನ ನಾಲ್ವರು ಮಕ್ಕಳಲ್ಲಿ ಕಿರಿಯವನು. ಈತ ಮೊದಲು ರಾಜಸ್ತಾನದ ದಕ್ಷಿಣದಲ್ಲಿ ಆಳ್ವಿಕೆಯನ್ನು ಆರಂಭಿಸಿ, ಕ್ರಮೇಣ, ಕಳಚುರಿಗಳ ಅವನತಿಯ ಅನಂತರ, ಭರುಕಚ್ಛವನ್ನು ಆಕ್ರಮಿಸಿರಬೇಕು. ಇವನು ಈ ರಾಜ್ಯ ವಿಸ್ತರಣೆಗಾಗಿ ಬಾದಾಮಿಯ ಚಳುಕ್ಯರ ನೆರವನ್ನು ಪಡೆದು ಅವರ ಸಾಮಂತಿಕೆಯನ್ನೂ ಒಪ್ಪಿಕೊಂಡ. ಈತನ ಮೊಮ್ಮಗ ಇಮ್ಮಡಿ ದದ್ದ ಹರ್ಷನ ಹೆದರಿಕೆಯಿಂದ ಓಡಿ ಬಂದ ವಲ್ಲಭಿಯ ಮೈತ್ರಕ ಅರಸನಿಗೆ ಆಶ್ರಯವಿತ್ತ. ಆದರೆ ಇವರೇ ಗೂರ್ಜರರ ಶತ್ರುಗಳಾಗಿ ಅವರ ರಾಜ್ಯವನ್ನು ಕಸಿಯಲು ಹವಣಿಸಿದರು. ಆದರೆ ಇದು ಸಾಧ್ಯವಾಗಲಿಲ್ಲ. ಇಮ್ಮಡಿ ದದ್ದನ ಅನಂತರ ಐದನೆಯ ತಲೆಮಾರಿನವನಾದ ನಾಲ್ವಡಿ ಜಯಭಟನೆಂಬವನು ಚಳುಕ್ಯ ಅವನಿಜನಾಶ್ರಯ ಪುಲಿಕೇಶಿ ರಾಜನ ಸಹಾಯದಿಂದ ಅರಬರನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾದ. ಈತ ನಂದಿಪುರಿಯ ಗೂರ್ಜರರ ಕೊನೆಯ ಅರಸ. 4 ನೆಯ ಶತಮಾನದ ಮಧ್ಯಭಾಗದಲ್ಲಿ ಈತನ ರಾಜ್ಯ ಮೊದಲು ಚಳುಕ್ಯರಿಂದ, ಅನಂತರ ರಾಷ್ಟ್ರಕೂಟರಿಂದ ಮುತ್ತಲ್ಪಟ್ಟು ಕೊನೆಗೆ ಅವಂತಿಯ ಪ್ರತೀಹಾರ ವಂಶದ ನಾಗಭಟನ ವಶವಾಯಿತು.


ಕಾಠಿಯಾವಾಡ ಹಾಗೂ ಉತ್ತರ ಗುಜರಾತಿನ ನಡುವಣ ಪ್ರದೇಶದಲ್ಲಿ 8ನೆಯ ಶತಮಾನದ ಆರಂಭದಿಂದ 10ನೆಯ ಶತಮಾನದ ಮಧ್ಯಭಾಗದವರೆಗೂ ಚಾಪ ಅಥವಾ ಚಾಪೋತ್ಕಟರು ಆಳಿದರು. ಇವರನ್ನು ಚಾವೋಟಕರೆಂದೂ ಚಾವಡಾರೆಂದೂ ಸಹ ಕರೆಯಲಾಗಿದೆ. ಅಣಹಿಲಪಾಟಕ ನಗರವನ್ನು (ಈಗಿನ ಪಾಟಣ) ಪಂಚಾಶರದ ಜಯಶೇಖರನ ಮಗ ವನರಾಜ 746ರಲ್ಲಿ ಕಟ್ಟಿಸಿದ. 914ರಲ್ಲಿ ಈ ಮನೆತನದ ಧರಣೀವರಾಹ ಪೂರ್ವ ಕಾಠಿಯಾವಾಡವನ್ನು ಆಳುತ್ತಿದ್ದ.


ವಡೋದರದ ಸುತ್ತಲಿನ ಪ್ರದೇಶ 6 - 7ನೆಯ ಶತಮಾನಗಳಲ್ಲಿ ಕಳಚುರಿಗಳ ಆಳ್ವಿಕೆಗೊಳಪಟ್ಟಿತ್ತು. ಆರನೆಯ ಶತಮಾನದ ಉತ್ತರ ಭಾಗದಲ್ಲಿ ಮಹಾರಾಷ್ಟ್ರದ ನಾಸಿಕ್ ಹಾಗೂ ಸುತ್ತಲಿನ ಪ್ರಾಂತ್ಯದಲ್ಲಿ ಪ್ರಾಬಲ್ಯಕ್ಕೆ ಬಂದ ಇವರು ಕ್ರಮೇಣ ಗುಜರಾತಿನ ಭಾಗಗಳನ್ನು ಆಕ್ರಮಿಸಿದರು. ಕೃಷ್ಣರಾಜ, ಶಂಕರಗಣ ಹಾಗೂ ಬುದ್ಧರಾಜರೆಂಬ ಈ ವಂಶದ ಮೂವರೂ ಅರಸರನ್ನು ಕುರಿತು ನಮಗೆ ಹೆಚ್ಚಿನ ವಿವರಗಳು ಲಭ್ಯವಾಗಿವೆ. ಆದರೆ ಬುದ್ಧರಾಜನನ್ನು ಬಾದಾಮಿ ಚಳುಕ್ಯ ಮಂಗಲೇಶ ಸೋಲಿಸಿದನೆಂದು ಮಹಾಕೂಟ ಶಾಸನದಿಂದ ತಿಳಿದಿದೆ. ಇದು ಏಳನೆಯ ಶತಮಾನದ ಆರಂಭದಲ್ಲಿ. ಹೀಗೆ ಚಳುಕ್ಯರಿಂದಲೂ ಇನ್ನೊಂದು ಕಡೆ ವಲ್ಲಭಿಯ ಮೈತ್ರಕರಿಂದಲೂ ಆಕ್ರಮಣಕ್ಕೊಳಗಾದ ಕಳಚುರಿಗಳು ಕ್ರಮೇಣ ಪುರ್ವಾಭಿಮುಖವಾಗಿ ಸರಿದು ಜಬ್ಬಲ್ಪುರ ಪ್ರದೇಶದಲ್ಲಿ ಅಂತಿಮವಾಗಿ ನೆಲೆಸಿದರು.


ಕರ್ನಾಟಕದಲ್ಲಿ ಆಳಿದ ಚಳುಕ್ಯ ಮತ್ತು ರಾಷ್ಟ್ರಕೂಟ ವಂಶಗಳಿಗೆ ಸಂಬಂಧಿಸಿದ ಮನೆತನಗಳು ಗುಜರಾತಿನಲ್ಲಿಯೂ ಆಳಿದುವು. ಚಳುಕ್ಯ ಮನೆತನಕ್ಕೆ ಸೇರಿದವನೆಂದು ಹೇಳಲಾದ ವಿಜಯವರ್ಮರಾಜ (ಸು. 643) ಇವರಲ್ಲಿ ಮೊದಲಿಗ. ಈತ ಜಯಸಿಂಹ ರಾಜನ ಮೊಮ್ಮಗ ಹಾಗೂ ರಣವಿಕ್ರಾಂತ ಬುದ್ಧವರ್ಮ ರಾಜನ ಮಗ. ಮೂಲ ಚಳುಕ್ಯ ವಂಶದ ಅರಸರೊಡನೆ ಇವನ ಬಾಂಧವ್ಯವೆಂಥದೆಂಬುದು ತಿಳಿದಿಲ್ಲ. ಒಂದನೆಯ ಕೀರ್ತಿವರ್ಮನ ಮಗನಾದ ಧರಾಶ್ರಯ ಜಯಸಿಂಹವರ್ಮನೆಂಬುವನು ಸಹ ಗುಜರಾತಿ ನಲ್ಲಿ ಅಧಿಕಾರದಲ್ಲಿದ್ದನೆಂದು ಹೇಳಿದೆ. ಇಮ್ಮಡಿ ಪುಲಿಕೇಶಿಯ ಮಕ್ಕಳಲ್ಲಿ ಒಬ್ಬನಾದ ಧರಾಶ್ರಯ ಜಯಸಿಂಹವರ್ಮ ಲಾಟಮಂಡಲವನ್ನು ಆಳುತ್ತಿದ್ದ. ಇವನ ಮಗ ಶ್ರ್ಯಾಶ್ರಯಶೀಲಾದಿತ್ಯ. ಈತನಿಗೆ ಇನ್ನೂ ಇಬ್ಬರು ತಮ್ಮಂದಿರು-ವಿನಯಾದಿತ್ಯ ಯುದ್ಧಮಲ್ಲ ಜಯಾಶ್ರಯ ಮಂಗಲರಸ ಮತ್ತು ಅವನಿಜನಾಶ್ರಯ ಪುಲಕೇಶಿ - ಇದ್ದರೆಂಬುದು ಅವರ ಬಲ್ಸಾರ ಮತ್ತು ನವಸಾರಿ ತಾಮ್ರ ಶಾಸನಗಳಿಂದ ತಿಳಿದಿದೆ. ಇವರು ಸೂರತ್, ವಡೋದರ ಜಿಲ್ಲೆಗಳ ಸುತ್ತಲಿನ ಪ್ರಾಂತ್ಯವನ್ನು ಆಳುತ್ತಿದ್ದರೆಂದು ತಿಳಿದುಬಂದಿದೆ.


ಇದರಂತೆಯೇ ರಾಷ್ಟ್ರಕೂಟ ಮನೆತನಕ್ಕೆ ಸೇರಿದ ಕೆಲವು ಶಾಖೆಗಳು ಸಹ ಈ ಭಾಗದಲ್ಲಿ ಆಳುತ್ತಿದ್ದುವು. ಎಂಟನೆಯ ಶತಮಾನದ ಮಧ್ಯಭಾಗದಲ್ಲಿ ರಾಹಪ್ಪನೆಂಬವನಿಂದ ಬಾದಾಮಿಯ ಚಳುಕ್ಯರ ರಾಜ್ಯವನ್ನು ಕಸಿದುಕೊಂಡ ಮೊದಲನೆಯ ಕೃಷ್ಣ ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದನೆಂದು ಹೇಳಿದೆ. ಸೂರತ್ ಜಿಲ್ಲೆಯಲ್ಲಿ ದೊರೆತ ತಾಮ್ರ ಶಾಸನವೊಂದರಲ್ಲಿ ಗುಜರಾತಿನಲ್ಲಿ ಆಳಿದ ರಾಷ್ಟ್ರಕೂಟ ಮನೆತನವೊಂದರ ವಂಶಾವಳಿಯನ್ನು ಕೊಟ್ಟಿದೆ. ಅದರ ಪ್ರಕಾರ ಅವರ ಮೊದಲ ಅರಸ 1ನೆಯ ಕಕ್ಕರಾಜ; ಇವನ ಮಗ ಧ್ರುವರಾಜ; ಈತನ ಮಗ ಗೋವಿಂದರಾಜ ಮತ್ತು ಮೊಮ್ಮಗ ಇಮ್ಮಡಿ ಕಕ್ಕರಾಜ. ಈತನನ್ನೂ ಪರಮೇಶ್ವರ, ಪರಮಭಟ್ಟಾರಕ ಎಂದೆಲ್ಲ ವರ್ಣಿಸಲಾಗಿದೆ. ಈತನೇ ರಾಹಪ್ಪನಾಗಿರಬಹುದೆಂದು ಊಹಿಸಲಾಗಿದೆ.


ರಾಷ್ಟ್ರಕೂಟರ ಮುಮ್ಮಡಿ ಗೋವಿಂದ ಲಾಟಮಂಡಲವನ್ನು ಗೆದ್ದುಕೊಂಡು ಅಲ್ಲಿ ತನ್ನ ತಮ್ಮನಾದ ಇಂದ್ರರಾಜನನ್ನು ಅಧಿಕಾರದಲ್ಲಿ ಸ್ಥಾಪಿಸಿದ. ಇಂದ್ರ ಲಾಟಮಂಡಲದಲ್ಲಿ ಆಳಿದ ಇನ್ನೊಂದು ರಾಷ್ಟ್ರಕೂಟ ಮನೆತನದ ಮೊದಲ ಅರಸನಾದ. ಈತ ತನ್ನ ಅಣ್ಣನ ಉತ್ತರದ ದಂಡಯಾತ್ರೆಯಲ್ಲಿ ಆತನಿಗೆ ಬೆಂಬಲವಾಗಿ ನಿಂತು, ಶತ್ರುಗಳಿಂದ ಆತನನ್ನು ಕಾಪಾಡಿದ. ಗೋವಿಂದ ಸಾಯುವ ಮೊದಲು ತನ್ನ ಅಲ್ಪವಯಸ್ಕ ಮಗನಾದ ಅಮೋಘವರ್ಷನ ರಕ್ಷಣೆಗಾಗಿ ಇಂದ್ರನ ಮಗ ಸುವರ್ಣವರ್ಷ ಕರ್ಕರಾಜನನ್ನು ರಾಜಪ್ರತಿನಿಧಿಯಗಿ ನೇಮಿಸಿದ (814). ಕರ್ಕ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ಹೊತ್ತು ಅಮೋಘವರ್ಷನನ್ನು ಸಂಕಟಗಳಿಂದ ಪಾರು ಮಾಡಿ, ಸು. 821ರಲ್ಲಿ ಆತನನ್ನು ಸಿಂಹಸನದಲ್ಲಿ ಕುಳ್ಳಿರಿಸಿದ. ಕರ್ಕನ ಮಗ ಧಾರಾವರ್ಷ ನಿರುಪಮ ಧ್ರುವರಾಜ. ಈತನ 834 - 35ರ ಶಾಸನ ಲಭ್ಯವಿದೆ. ಈತನ ಮೊಮ್ಮಗ, ಅಕಾಲವರ್ಷ ಶುಭತುಂಗನ ಮಗನಾದ ಧಾರಾವರ್ಷ ಧ್ರುವರಾಜ ಸಹ ಮಾನ್ಯಖೇಟದಲ್ಲಿ ಆಳಿದ ಅಮೋಘವರ್ಷನ ಸಮಕಾಲೀನನೇ. ಇವನ 866 - 67ರ ತಾಮ್ರ ಶಾಸನವೊಂದು ನವಸಾರಿ ಜಿಲ್ಲೆಯಲ್ಲಿ ದೊರತಿದೆ. 888ರ ಬಾಗುಮ್ರಾ ಶಾಸನದಲ್ಲಿ ಉಕ್ತನದ ಅಕಾಲವರ್ಷ ಕೃಷ್ಣರಾಜ ಇಮ್ಮಡಿ ಧ್ರುವರಾಜನ ಮೊಮ್ಮಗನೆಂದು ತೋರುತ್ತದೆ. ಈತ ವಲ್ಲಭನ ಸಮಕ್ಷದಲ್ಲಿಯೆ ಉಜ್ಜಯಿನಿಯ ಶತ್ರುಗಳನ್ನು ಸೋಲಿಸಿದನೆಂದು ಶಾಸನದಲ್ಲಿ ಹೇಳಿದೆ. ಈ ವಲ್ಲಭ ಮಾನ್ಯಖೇಟದಲ್ಲಿ ಆಳುತ್ತಿದ್ದ ರಾಷ್ಟ್ರಕೂಟ ಇಮ್ಮಡಿ ಕೃಷ್ಣನಾಗಿರಬೇಕು. ಇವರೆಲ್ಲ ತಮ್ಮ ಶಾಸನಗಳಲ್ಲಿ ಮಹಸಾಮಂತಾಧಿಪತಿಗಳೆಂದೇ ವರ್ಣಿತರಾಗಿದ್ದಾರೆ. ಇವರು ತಮ್ಮ ಸ್ವಾಮಿಯ ಬೆಂಬಲಿಗರಾಗಿ, ವಿಧೇಯರಾಗಿ ಲಾಟಮಂಡಲದಲ್ಲಿ ಆಳುತ್ತಿದ್ದರೆನ್ನಲು ಆಧಾರಗಳಿವೆ.


ಖೇಟಕ ಮಂಡಲದ (ಈಗಿನ ಖೇಡಾ ಜಿಲ್ಲೆ) ವರೆಗಿನ ದಕ್ಷಿಣ ಗುಜರಾತು ರಾಷ್ಟ್ರಕೂಟರ ಅಧೀನದಲ್ಲಿದ್ದುದನ್ನು ನೋಡಿದ್ದೇವೆ. ಧ್ರುವ, ಮುಮ್ಮಡಿ ಗೋವಿಂದ, ಮುಮ್ಮಡಿ ಇಂದ್ರರು ಉತ್ತರ ದಿಗ್ವಿಜಯವನ್ನು ಕೈಗೊಂಡು ಗೂರ್ಜರ-ಪ್ರತೀಹಾರ ಹಾಗೂ ಪಾಲರೊಡಗೂಡಿದ ತ್ರಿಕೂಟ ಸಮರದಲ್ಲಿ ಪ್ರತಿಬಾರಿಯೂ ವಿಜಯವನ್ನು ಗಳಿಸಿ ಭಾರತದಲ್ಲಿಯೇ ಅತಿ ಪ್ರಬಲ ಅರಸರೆನಿಸಿಕೊಂಡರು. ಆ ಸಂದರ್ಭದಲ್ಲಿ ಜ್ಞಾತಿಗಳೂ ಸಾಮಂತರೂ ಆಗಿದ್ದ ಗುಜರಾತಿನ ರಾಷ್ಟ್ರಕೂಟರು ಇವರಿಗೆ ನೀಡಿದ ಸಹಾಯ ಸ್ಮರಣೀಯವಾದದ್ದು.


ಇದೇ ಸಮಯದಲ್ಲಿ ಸೌರಾಷ್ಟ್ರ ಮತ್ತು ಕಚ್ಛ್‌ ಪ್ರದೇಶಗಳಲ್ಲಿ ಅನೇಕ ಸಣ್ಣಪುಟ್ಟ ಸಾಮಂತರು ಆಳುತ್ತಿದ್ದರು. ಚಾವೋಟಕರು ಅವರಲ್ಲಿ ಒಬ್ಬರು. ಪಶ್ಚಿಮ ಸೌರಾಷ್ಟ್ರದಲ್ಲಿ (ಅಪರ ಸೌರಾಷ್ಟ್ರ ಮಂಡಲ) ಭೂಮಿಲಿಕಾವನ್ನು (ಈಗಿನ ಕಾಠಿಯಾವಾಡದಲ್ಲಿಯ ಭುಮಿಲಿ) ರಾಜಧಾನಿಯಾಗಿ ಮಾಡಿಕೊಂಡಿದ್ದ ಸೈಂಧವರು 8ನೆಯ ಶತಮಾನದಿಂದ 10ನೆಯ ಶತಮಾನದವರೆಗೆ ಆಳುತ್ತಿದ್ದರು. ಇವರು ಪ್ರತೀಹಾರರಿಗೆ ಸಾಮಂತರಾಗಿದ್ದರೆಂದು ತೋರುತ್ತದೆ. ಇವರ ಸರ್ವಕಾಲೀನರಾಗಿ ಜುನಾಗಢದಲ್ಲಿ ಚಳುಕ್ಯರೂ ದಕ್ಷಿಣ ಹಾಗೂ ಪಶ್ಚಿಮ ಸೌರಾಷ್ಟ್ರದಲ್ಲಿ ಅಭೀರರೂ ಸೌರ್ಯಮಂಡಲದ ವರಾಹರೂ ಅಧಿಕಾರದಲ್ಲಿದ್ದರು.


ಕಲ್ಯಾಣ ಚಾಳುಕ್ಯರು ಮಾನ್ಯಖೇಟದಿಂದ ರಾಷ್ಟ್ರಕೂಟರನ್ನು ಓಡಿಸಿದ ಸಮಯದಲ್ಲಿ, ಇಮ್ಮಡಿ ತೈಲಪನ ಸೇನಾನಿ ಎನಿಸಿದ ಚೌಳುಕ್ಯ ಮನೆತನದ ಬಾರಪ್ಪನೆಂಬವನು ಖೇಟಕ ಮಂಡಲದಲ್ಲಿದ್ದ ರಾಷ್ಟ್ರಕೂಟರನ್ನು ಸೋಲಿಸಿ, ಭೃಗುಕಚ್ಚವನ್ನು ರಾಜಧಾನಿಯಾಗಿ ಹೊಂದಿದ್ದ ಲಾಟಮಂಡಲದ ಅಧಿಪತಿಯಾದ. ಆದರೆ ಇವನು ಪರಮಾರ ಮುಂಜನನ್ನು ಎದುರಿಸಬೇಕಾಯಿತು. ಚೌಳುಕ್ಯ ಚಾಮುಂಡರಾಜ ಇವನ್ನು ಸೋಲಿಸಿ ಇವನ ರಾಜ್ಯವನ್ನು ಕಸಿದುಕೊಂಡನಾದರೂ ಬಾರಪ್ಪನ ಮಗನಾದ ಗೊಗಿರಾಜ ಇದನ್ನು ಪುನಃ ತನ್ನ ವಶಕ್ಕೆ ತಂದುಕೊಂಡ. ಈತನ ಮಗನಾದ ಕೀರ್ತಿರಾಜನ ಕಾಲದಲ್ಲಿ ದುರ್ಲಭರಾಜ ಮತ್ತೊಮ್ಮೆ ಇವನ ರಾಜ್ಯವನ್ನು ಕಸಿಯಲು ಯತ್ನಿಸಿ ವಿಫಲನಾದ. ಕೀರ್ತಿರಾಜನ ಮಗ ವತ್ಸರಾಜ ಮತ್ತು ಮೊಮ್ಮಗ ತ್ರಿಲೋಚನಪಾಲ 1051ರವರೆಗೆ ಆಳಿದರು. ಅನಂತರ ಇವರ ರಾಜ್ಯವನ್ನು ಗುಜರಾತಿನ ಚಾಳುಕ್ಯರು ವಶಪಡಿಸಿಕೊಂಡರು.


ಮುಮ್ಮಡಿ ಕೃಷ್ಣನ ತರುವಾಯ ಮಾನ್ಯಖೇಟದ ರಾಷ್ಟ್ರಕೂಟ ರಾಜ್ಯ ಮತ್ತೊಮ್ಮೆ ಚಾಳುಕ್ಯರ ವಶವಾಯಿತು. ಇಮ್ಮಡಿ ತೈಲಪ ಚಾಳುಕ್ಯ ರಾಜ್ಯದ ಪುನಃಪ್ರತಿಷ್ಠಾಕನೆನಿಸಿ ಕೊಂಡ. ಆ ವೇಳೆಗೆ ಗುಜರಾತಿನಲ್ಲಿಯೂ ಅದುವರೆಗೆ ಆಳಿದ ಅರಸು ಮನೆತನಗಳು ಅಳಿದು ಇನ್ನೊಂದು ಚಾಳುಕ್ಯ (ಚೌಳುಕ್ಯ) ಮನೆತನ ಪ್ರಾಬಲ್ಯಕ್ಕೆ ಬಂದಿತು. ಅಣಹಿಲಪಾಟಕವನ್ನು ರಾಜಧಾನಿಯಾಗಿ ಮಾಡಿಕೊಂಡ ಈ ವಂಶದ ಮೂಲರಾಜ ಕ್ರಮೇಣ ತನ್ನ ರಾಜ್ಯವನ್ನು ವಿಸ್ತರಿಸಿದ. ಅಭೀರರ ಗ್ರಾಹರಿಪು ಬ್ರಾಹ್ಮಣ ದ್ವೇಷಿಯಾಗಿ, ಪ್ರಭಾಸತೀರ್ಥಕ್ಕೆ (ಸೋಮನಾಥ) ಹೋಗುತ್ತಿದ್ದ ಯಾತ್ರಾರ್ಥಿಗಳನ್ನು ನಿಷೇಧಿಸಿ ಪ್ರಜೆಗಳನ್ನು ತೊಂದರೆಗೀಡು ಮಾಡಿದ್ದ. ಮೂಲರಾಜ ಇವನ ವಿರುದ್ಧ ದಂಡೆತ್ತಿ ಗ್ರಾಹರಿಪುವನ್ನು ಸೋಲಿಸಿ ಸೆರೆಹಿಡಿದ. ಚಾಹಮಾನ ವಿಗ್ರಹರಾಜ, ಪರಮಾರ ಮುಂಜ, ಕಳಚುರಿ ಲಕ್ಷ್ಮಣ ಇವರ ವಿರುದ್ಧ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಈತ ಹೋರಾಡಬೇಕಾಯಿತು.


ಮೂಲರಾಜನ ಮಗ ಚಾಮುಂಡರಾಜ ಸಹ ವಿರೋಧಿಗಳನ್ನೆದುರಿಸಬೇಕಾಯಿತು. ತಾನು ಎಸಗಿದ ಯಾವುದೋ ಪಾಪಕಾರ್ಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಈತ ವಾರಾಣಸಿಗೆ ಹೋಗುವ ಮುನ್ನ ರಾಜ್ಯವನ್ನು ಮಗನಾದ ವಲ್ಲಭರಾಜನಿಗೆ ಒಪ್ಪಿಸಿದ. ಮಾರ್ಗಮಧ್ಯದಲ್ಲಿ ಇವನ ಮೇಲೆರಗಿ ಇವನ ರಾಜಚಿಹ್ನೆಗಳನ್ನು ಕಸಿದುಕೊಂಡ ಪರಮಾರ ಭೋಜನನ್ನು ಶಿಕ್ಷಿಸಲು, ಈತ ಸ್ವರಾಜ್ಯಕ್ಕೆ ಹಿಂದಿರುಗಿದ ಬಳಿಕ ಮಗನನ್ನು ಸೇನೆಯೊಡನೆ ಕಳಿಸಿದ. ಆದರೆ ಆತ ಹಾದಿಯಲ್ಲಿ ಸಿಡುಬುರೋಗದಿಂದ ಸತ್ತ. ರಾಜ್ಯ ಎರಡನೆಯ ಮಗನಾದ ದುರ್ಲಭರಾಜನಿಗೆ ಲಭಿಸಿತು (1009-10). ದುರ್ಲಭ ತನ್ನ ಸೋದರಳಿಯನಾದ ಭೀಮದೇವನಿಗೆ 1022ರಲ್ಲಿ ರಾಜ್ಯವನ್ನೊಪ್ಪಿಸಿ ತಾನು ಅಧಿಕಾರದಿಂದ ನಿವೃತ್ತನಾದ. ಭೀಮನ ಕಾಲದಲ್ಲಿ ಘಜ್ನಿಯ ಮಹಮೂದ ಗುಜರಾತನ್ನು ಮುತ್ತಿ ಸೋಮನಾಥ ದೇವಾಲಯದಲ್ಲಿಯ ಅಪಾರ ಸಂಪತ್ತನ್ನು ಕೊಳ್ಳೆಹೊಡೆದ(1025). 1031ರ ಅನಂತರ ಅಬೂ ಪರ್ವತ ಪ್ರದೇಶವನ್ನು ಭೀಮದೇವ ಗೆದ್ದುಕೊಂಡ. ಕಳಚುರಿ ಕರ್ಣನೊಡಗೂಡಿ ಪರಮಾರ ಭೋಜನನ್ನು ಸೋಲಿಸಿದ.


1064ರ ಸುಮಾರಿಗೆ ಭೀಮನ ಕಿರಿಯ ಮಗ ಕರ್ಣ ಪಟ್ಟಕ್ಕೆ ಬಂದ. ಈತ ಕರ್ನಾಟಕದ ಚಾಳುಕ್ಯರೊಡಗೂಡಿ ಪರಮಾರ ಜಯಸಿಂಹನನ್ನು ಸೋಲಿಸಿದನಾದರೂ ಮಾಳವ ದೇಶದಿಂದ ಹಿಂದಿರುಗಬೇಕಾಯಿತು. ಪರಮಾರ ಉದಯಾದಿತ್ಯ ಇವನನ್ನು ಅಲ್ಲಿಂದ ಓಡಿಸಿದ. ಇನ್ನೊಮ್ಮೆ ಪರಮಾರ ಜಗದ್ದೇವ ಇವನನ್ನು ಸೋಲಿಸಿದ. ಗೋವೆಯ ಕದಂಬ ವಂಶದ ಜಯಕೇಶಿಯ ಮಗಳಾದ ಮಯಣಲ್ಲಾ ದೇವಿಯನ್ನು ಕರ್ಣ ಮದುವೆಯಾದ. 1094ರಲ್ಲಿ ಈತ ಮರಣ ಹೊಂದಿದಾಗ, ಇವನ ಮಗ ಜಯಸಿಂಹ ಇನ್ನೂ ಕಿರಿಯನಾಗಿದ್ದ ಕಾರಣ ಮಯಣಲ್ಲಾದೇವಿ ರಾಜಪ್ರತಿನಿಧಿಯಾಗಿ ಕೆಲಕಾಲ ರಾಜ್ಯಭಾರ ಮಾಡಿದಳು.



ಜಯಸಿಂಹ ಚಾಳುಕ್ಯರಲ್ಲಿ ಅತಿ ಪ್ರಸಿದ್ಧನಾದ ಅರಸ. ಸಿದ್ಧರಾಜನೆನಿಸಿದ ಈತನ ಕಾಲದಲ್ಲಿ ಚಾಳುಕ್ಯರ ರಾಜ್ಯ ಉತ್ತರದಲ್ಲಿ ಜೋಧಪುರದ ಬಲಿ ಮತ್ತು ಜಯಪುರದ ಸಾಂಭರ್ವರೆಗೂ ಪೂರ್ವದಲ್ಲಿ ಭಿಲ್ಸಾ ಮತ್ತು ಪಶ್ಚಿಮದಲ್ಲಿ ಕಾಠಿಯಾವಾಡ ಮತ್ತು ಕಚ್ಛ್‌ವರೆಗೂ ಹಬ್ಬಿತ್ತು. ಚಾಹಮಾನ ಅರ್ಣೊ ರಾಜ, ಪರಮಾರ ನರವರ್ಮ, ಚಂದೇಲ ಮದನವರ್ಮ, ಕಲ್ಯಾಣದ 6ನೆಯ ವಿಕ್ರಮಾದಿತ್ಯ, ಡಾಹಲದ ಕಳಚುರಿ ಗಯಾಕರ್ಣ ಇವರು ಇವನ ಸಮಕಾಲೀನರು. ಇವರ ವಿರುದ್ಧ ಸೆಣಸಾಡಿ ಇವರಿಗೆ ಸೇರಿದ ಕೆಲವು ಪ್ರದೇಶಗಳನ್ನು ಈತ ವಶಪಡಿಸಿಕೊಂಡ. ಸಿದ್ಧಪುರದ ರುದ್ರಮಹಾಕಾಲ ದೇವಾಲಯವನ್ನು ಈತ ಕಟ್ಟಿಸಿ, ಜ್ಯೋತಿಷ, ನ್ಯಾಯ ಮುಂತಾದ ಶಾಸ್ತ್ರಗಳನ್ನು ಕಲಿಸುವ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ. ಜೈನ ಕವಿ ಹೇಮಚಂದ್ರ ಈತನ ಆಸ್ಥಾನವನ್ನು ಬೆಳಗಿದ.


ಜಯಸಿಂಹನಿಗೆ ಮಕ್ಕಳಿರಲಿಲ್ಲವಾದ ಕಾರಣ ಹತ್ತಿರದ ಸೋದರ ಸಂಬಂಧಿಯಾದ ಕುಮಾರಪಾಲ ಪಟ್ಟಕ್ಕೆ ಬಂದ ಆದರೆ ಈತ ರಾಜನಾಗುವುದು ಜಯಸಿಂಹನಿಗೆ ಒಪ್ಪಿಗೆಯಾಗಿರಲಿಲ್ಲವಾದ ಕಾರಣ. ಕುಮಾರಪಾಲ ಅಧಿಕಾರಕ್ಕೆ ಬರುವ ಮೊದಲು ಶತ್ರುಗಳನ್ನು ಸೋಲಿಸಬೇಕಾಯಿತು. ಹೇಮಚಂದ್ರನಿಂದಾಗಿ ಜೈನಮತವನ್ನು ಸ್ವೀಕರಿಸಿದ ಕುಮಾರಪಾಲ ತನ್ನ ವಿಜಯಗಳಿಗಿಂತ ಹೆಚ್ಚಾಗಿ ಜೈನಧರ್ಮ ಪೋಷಕನೆಂದೇ ಖ್ಯಾತಿ ಪಡೆದಿದ್ದಾನೆ. ಕುಮಾರಪಾಲನ (1143-44 ರಿಂದ 1171-72) ಬಳಿಕ ರಾಜ್ಯಕ್ಕಾಗಿ ಅಂತಃಕಲಹಗಳುಂಟಾದವು. ಕೊನೆಗೆ ಅಜಯಪಾಲ ಯಶಸ್ವಿಯಾದ. ಇವನ ಮಗ ಇಮ್ಮಡಿ ಮೂಲರಾಜನ ಕಾಲದಲ್ಲಿ ಮಹಮದ್ ಘೋರಿ ಗುಜರಾತನ್ನು ಧಾಳಿ ಮಾಡಿದ. ಇಮ್ಮಡಿ ಭೀಮ ಆಳಲು ಬಂದಾಗ ಗುಜರಾತಿನ ಬಲ ಕುಗ್ಗಿ ಸೇವುಣರು, ಪರಮಾರರು, ಮಹಮ್ಮದೀಯರು ಈ ಪ್ರದೇಶಕ್ಕೆ ದಂಡೆತ್ತಿ ಬಂದರು. ಚೌಳುಕ್ಯರ ಸಾಮಂತರಾಗಿದ್ದ ವಾಘೇಲರ ಲವಣ ಪ್ರಸಾದ ಭೀಮನ ನೆರವಿಗೆ ಬಂದ. ಈ ಮನೆತನದ ಕೊನೆಯ ಅರಸ ಕರ್ಣ. ಈತನ ಕಾಲದಲ್ಲಿ ಅಲ್ಲಾವುದ್ದೀನ್ ಖಲ್ಜಿಯ ಸೇನಾಪತಿಗಳಾದ ಉಲುಘ್ ಖಾನ್ ಮತ್ತು ನಸರತ್ಖಾನರು ಗುಜರಾತನ್ನು ಆಕ್ರಮಿಸಿ ಕರ್ಣನನ್ನು ಸೋಲಿಸಿ, ಅವನ ಪತ್ನಿ ಕಮಲಾದೇವಿಯನ್ನೂ ಮಗಳು ದೇವಲದೇವಿಯನ್ನೂ ಸೆರೆಹಿಡಿದು ದೆಹಲಿಗೆ ಸಾಗಿಸಿದರು. ಅವನ ರಾಜಧಾನಿಯನ್ನು ಸೈನಿಕರು ಮುತ್ತಿ ಅಲ್ಲಿಯ ಅಪಾರ ಸಂಪತ್ತನ್ನು ಲೂಟಿ ಮಾಡಿದರು. ಅನಂತರ ಪಾಟಣದಿಂದ (ಅಣಹಿಲ ಪಟ್ಟಣ) ಸೋಮನಾಥಕ್ಕೆ ಹೋಗಿ ಅಲ್ಲಿಯ ಪ್ರಸಿದ್ಧ ದೇವಾಲಯವನ್ನು ಹಾಳುಗೆಡವಿ, ಆಲಯದಲ್ಲಿದ್ದ ಲಿಂಗವನ್ನು ಭಗ್ನ ಮಾಡಿ ದೆಹಲಿಗೆ ಒಯ್ದರು. ದೇವಾಲಯದ ಧನಕನಕಗಳು ಅವರ ವಶವಾದುವು. ಇನ್ನೊಮ್ಮೆ 1034-05ರಲ್ಲಿ ಅಲ್ಲಾವುದ್ದೀನ್ ತನ್ನ ಸೇನಾನಿಗಳನ್ನು ಗುಜರಾತಿಗೆ ಕಳಿಸಿದ. ಪುನಃ ರಾಜಧಾನಿಯಿಂದ ಓಡಿಹೋದ ಕರ್ಣ ವಾರಂಗಲ್ಲಿನ ಕಾಕತೀಯ ಪ್ರತಾಪರುದ್ರನ ಆಶ್ರಯ ಪಡೆದು ಅಲ್ಲಿಯೇ ತನ್ನ ಕೊನೆಯುಸಿರೆಳೆದ.


ಅಂದಿನಿಂದ ಗುಜರಾತು ದೆಹಲಿಯ ಸುಲ್ತಾನರ ಅಧಿಪತ್ಯಕ್ಕೊಳಪಟ್ಟಿತು. ಆದರೆ ಸೌರಾಷ್ಟ್ರ ಮಾತ್ರ ಇವರ ಸ್ವಾಧೀನಕ್ಕೆ ಬರದೆ, ಅಲ್ಲಿ ರಜಪುತ ಮನೆತನಗಳವರು ಆಳುತ್ತಿದ್ದರು. ಒಂದು ಶತಮಾನದ ಬಳಿಕ ಗುಜರಾತಿನಲ್ಲಿ ಹೊಸದೊಂದು ಸುಲ್ತಾನ ಮನೆತನ ಆಳ್ವಿಕೆಗೆ ತೊಡಗುವವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರಿದಿತ್ತು. ಅಲ್ಲಾವುದ್ದೀನ್ ಆಲ್ಪ್‌ಖಾನನನ್ನು ಈ ಪ್ರಾಂತ್ಯದ ಅಧಿಕಾರಿಯಾಗಿ ನೇಮಿಸಿದ. ಆದರೆ ಕೆಲಕಾಲದ ಬಳಿಕ ಈತನನ್ನು ಮಲಿಕ್ ಕಾಫರ್ ದೆಹಲಿಗೆ ಬರಮಾಡಿಕೊಂಡು ಕೊಲೆಮಾಡಿದ. ಗುಜರಾತಿನಲ್ಲಿದ್ದ ಅವನ ಹಿಂಬಾಲಕರು ಇದರಿಂದ ದಂಗೆ ಎದ್ದರು. ದೆಹಲಿಯಲ್ಲಿ ಘಟನೆಗಳು ತೀವ್ರ ಸ್ವರೂಪ ಪಡೆದು ಮಲಿಕ್ ಕಾಫರನೇ ತನ್ನ ಪ್ರಾಣವನ್ನು ಕಳೆದುಕೊಂಡ. ಮುಬಾರಕ್ ಷಹ ದೆಹಲಿಯ ಸುಲ್ತಾನನಾದ (1316). ಬಳಿಕ ಗುಜರಾತಿನ ದಂಗೆಯನ್ನು ಅಡಗಿಸಲಾಯಿತು.


ಮಹಮ್ಮದ್ ಬಿನ್ ತುಘಲಕನ ಕಾಲದಲ್ಲಿ ಗುಜರಾತು ಅವನ ರಾಜ್ಯದ ಒಂದು ಪ್ರಾಂತ್ಯವಾಗಿ ಮುಂದುವರಿಯಿತಾದರೂ, ಅಲ್ಲಿ ಅವನಿಂದ ನೇಮಿತರಾದ ಅಧಿಕಾರಿಗಳ ಪರಸ್ಪರ ದ್ವೇಷಾಸೂಯೆಗಳಿಂದ ಆಡಳಿತ ಸಡಿಲಗೊಂಡಿತು. ಅಲ್ಲಲ್ಲಿ ದಂಗೆಗಳು ಸಂಭವಿಸಿದುವು. ಇವನ್ನು ಅಡಗಿಸಲು ಸುಲ್ತಾನ ಸ್ವತಃ ದೆಹಲಿಯಿಂದ ಬಂದ (1345). ಪಾಟಣದಿಂದ ವಡೋದರಕ್ಕೆ ದಂಗೆಕೋರರನ್ನು ಬೆನ್ನಟ್ಟಿ ಕೊನೆಗೆ ಭರುಕಚ್ಛವನ್ನು ತಲಪಿ ಅದನ್ನು ತನ್ನ ನೆಲೆವೀಡಾಗಿ ಮಾಡಿಕೊಂಡ. ದಂಗೆಕೋರರನ್ನು ಅಡಗಿಸುವುದರಲ್ಲಿ ಯಶಸ್ವಿಯಾದ ಬಳಿಕ ಗುಜರಾತಿನ ಆಡಳಿತವನ್ನು ಕ್ರಮಬದ್ಧಗೊಳಿಸಲು ಉದ್ಯುಕ್ತನಾಗಿದ್ದಾಗ ದೌಲತಾಬಾದದ ದಂಗೆ ಅವನ ಗಮನ ಸೆಳೆದು ಆತ ಗುಜರಾತನ್ನು ಬಿಟ್ಟ. ಆರು ತಿಂಗಳುಗಳ ಬಳಿಕ ಪುನಃ ಗುಜರಾತಿಗೆ ಬಂದು (1347) ಪುನಃ ತಲೆ ಎತ್ತಿದ ದಂಗೆಕೋರರನ್ನು ಸೋಲಿಸಿದ. ಈ ಅವಾಂತರಗಳಲ್ಲಿ ದೌಲತಾಬಾದ್ ತುಘಲಕನ ಕೈಯಿಂದ ಜಾರಿತ್ತು. ಸೌರಾಷ್ಟ್ರ ಹಾಗೂ ಜುನಾಗಢದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಇದ್ದ ಮಹಮ್ಮದ್ ಅನಂತರ ಸಿಂಧ್ ಮೂಲಕ ದೆಹಲಿಗೆ ಹಿಂದಿರುಗುವಾಗ ಥಟ್ಟಾದಲ್ಲಿ ಅನಾರೋಗ್ಯದಿಂದ 1351ರ ಮಾರ್ಚ್ 20 ರಂದು ಮರಣಹೊಂದಿದ. ಅನಂತರ ಬಂದ ಫಿರೋಜ್ ಷಹ ಜ಼ಫರ್ಖಾನನ್ನು ಗುಜರಾತಿನ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿ ದೆಹಲಿಗೆ ಹಿಂದಿರುಗಿದ. ಈತನ ಬಳಿಕ ಇತರರು ಕೆಲವರು ಅಧಿಕಾರಕ್ಕೆ ಬಂದ ಮೇಲೆ, ಗುಜರಾತಿನಲ್ಲಿ ನೆಲಸಿದ್ದ ಮಹಮ್ಮದೀಯರ ಅಪೇಕ್ಷೆಯಂತೆ ದೆಹಲಿಯಲ್ಲಿ ಆಗ ಸುಲ್ತಾನನಾಗಿದ್ದ ಇಮ್ಮಡಿ ಮಹಮೂದ ಜಫರ್ಖಾನನನ್ನು ಪ್ರಾಂತ್ಯಾಧಿಕಾರಿಯಾಗಿ ನೇಮಿಸಿ ಕಳಿಸಿದ. ಇವನಿಗೆ ಮುಜ಼ಫರ್ಖಾನ್ ಎಂಬ ಬಿರುದನ್ನು ಇತ್ತ. ಈ ಮೊದಲೇ ಆ ಅಧಿಕಾರ ಪಡೆದಿದ್ದ ಫರ್ಹತ್ ಉಲ್ಮುಲ್ಕ್‌ ಇವನನ್ನು ವಿರೋಧಿಸಿ ಕಂಬೋಇ ಕದನದಲ್ಲಿ ಮಡಿದ (1392). ಅನಂತರ ಅಣಹಿಲವಾಡವನ್ನು ಮುಜಫರ್ಖಾನ್ ಆಕ್ರಮಿಸಿದ. 1394ರಲ್ಲಿ ಸುಲ್ತಾನ್ ಮಹಮೂದ ಸತ್ತ ಬಳಿಕ ಗುಜರಾತಿನ ಹಿಂದೂ ನಾಯಕರು ಕೆಲವರು ದಂಗೆ ಎದ್ದರಾದರೂ ಮುಜಫರ್ಖಾನ್ ಅವರನ್ನು ಅಡಗಿಸಿದ. ಆದರೆ ದೆಹಲಿಯಲ್ಲಿ ಸುಲ್ತಾನನೊಡನೆ ಇದ್ದ ಈತನ ಮಗ ತಾತರ್ಖಾನ್, ತೈಮೂರ ದೆಹಲಿಯಿಂದ ಹಿಂದಿರುಗಿದ ಬಳಿಕ ಸುಲ್ತಾನ್ ಪದವಿಯನ್ನು ಪಡೆಯಬೇಕೆಂದು ಮುಜಫರನನ್ನು ಪ್ರೋತ್ಸಾಹಿಸಿದನಾದರೂ ಮುಜಫರ್ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ತಾತರ್ ತಂದೆಯನ್ನು ಸೆರೆಹಿಡಿದು ತಾನೆ ಗುಜರಾತನ ಸ್ವತಂತ್ರ ಸುಲ್ತಾನನೆಂದು ಘೋಷಿಸಿಕೊಂಡನೆಂದು ಹಲವರ ಹೇಳಿಕೆ.



ಒಂದು ವಿಧದಲ್ಲಿ ಈತನೇ ಗುಜರಾತಿನಲ್ಲಿ ಆಳಿದ ಮೊದಲನೆಯ ಸುಲ್ತಾನ. ಈತ ಮಹಮ್ಮದ್ಷಹ ಎಂಬ ಹೆಸರಿನಿಂದ ಆಳತೊಡಗಿದ(1403). ಇವನು ಮರುವರುಷವೇ ಸತ್ತ. ಇವನ ತಂದೆ ಸೆರೆಯಿಂದ ಮುಕ್ತನಾದ. ಬೆಂಬಲಿಗರ ಕೋರಿಕೆಯನ್ನು ಮನ್ನಿಸಿ ಆತ ಸುಲ್ತಾನ್ ಮುಜಫರ್ಷಹ ಎಂಬ ಹೆಸರಿನಿಂದ ಸ್ವತಂತ್ರವಾಗಿ ಆಳಲು ಒಪ್ಪಿದ (1407). ಅನಂತರ ಆತನ ಮೊಮ್ಮಗ ಅಹಮದ್ಷಹ 32 ವರ್ಷಗಳ ಕಾಲ (1411-43) ಆಳಿದ. ಸೌರಾಷ್ಟ್ರದಲ್ಲಿ ಆಳುತ್ತಿದ್ದ ಹಿಂದೂ ಮಾಂಡಲಿಕರನ್ನು ಸೋಲಿಸುವ ಇವನ ಯತ್ನ ವಿಫಲವಾಯಿತು. ಅನ್ಯಮತ ದ್ವೇಷಿಯಾದ ಈತ ಅನೇಕ ದೇವಾಲಯಗಳನ್ನು ಹಾಳುಗೆಡವಿದ. ಅಹಮದಾಬಾದ್ ನಗರವನ್ನು ಕಟ್ಟಿ ರಾಜಧಾನಿಯನ್ನು ಅಣಹಿಲವಾಡದಿಂದ ಈ ಹೊಸ ನಗರಕ್ಕೆ ಬದಲಾಯಿಸಿಕೊಂಡ.


1458ರಿಂದ ಆಳತೊಡಗಿದ ಫತ್ಖಾನ್ ಈ ಸುಲ್ತಾನರಲ್ಲಿ ಪ್ರಮುಖ. ಈತ ಮಹಮೂದ್ ಬೇಗಡಾ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದಾನೆ. ಸೌರಾಷ್ಟ್ರವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳುವುದರಲ್ಲಿ ಈತ ಯಶಸ್ವಿಯಾದ. ಜುನಾಗಢಕ್ಕೆ ಮುಸ್ತಫಾಬಾದ್ ಎಂದು ನಾಮಕರಣವಾಯಿತು. ದ್ವಾರಕಾದಲ್ಲಿ ಅಧಿಕಾರದಲ್ಲಿದ್ದ ಭೀಮನನ್ನು ಈತ ಸೋಲಿಸಿ ಕೊಂದು ಆ ನಗರವನ್ನು ಲೂಟಿಮಾಡಿದ. ಚಂಪಾನೇರಿಯ ಅರಸನಾದ ಜಯಸಿಂಹನನ್ನು ಸೋಲಿಸಿ ಆ ಪ್ರಾಂತ್ಯವನ್ನು ವಶಪಡಿಸಿಕೊಂಡ. ಇಪ್ಪತ್ತು ತಿಂಗಳ ಮುತ್ತಿಗೆಯ ಅನಂತರ ಪಾವಾಗಢದ ಕೋಟೆ ಇವನ ವಶವಾಯಿತು. ಚಂಪಾನೇರಿಗೆ ಮುಹಮ್ಮದಾಬಾದ್ ಎಂಬ ಹೊಸ ಹೆಸರು ಬಂತು. ಎರಡು (ಜುನಾಗಢ ಮತ್ತು ಚಂಪಾನೇರ್) ಕೋಟೆಗಳನ್ನು ಗೆದ್ದ ಕಾರಣ ಈತ ಬೇಗಢಾ ಎನಿಸಿಕೊಂಡ. ಇವನು ಹಿಂದೂಗಳಿಗೆ ವಿಶೇಷವಾಗಿ ಕಿರುಕುಳ ಕೊಟ್ಟನೆಂದು ತಿಳಿದುಬರುತ್ತದೆ. ಈ ವೇಳೆಗೆ ಕ್ಯಾಂಬೆಯಲ್ಲಿ ಕೋಠಿಯನ್ನು ಕಟ್ಟಿಕೊಂಡು ವ್ಯಾಪಾರದಲ್ಲಿ ತೊಡಗಿದ್ದ ಪೋರ್ಚುಗೀಸರನ್ನು ಹಿಂದೂಡುವುದರಲ್ಲಿ ಈತ ವಿಫಲನಾದ. ದೀವ್ ದ್ವೀಪ ಅವರ ವಶವಾಯಿತು. ಅವರ ಪ್ರಾಬಲ್ಯ ಕ್ರಮೇಣ ಬೆಳೆಯಿತು. ಈತ 1511ರಲ್ಲಿ ತೀರಿಕೊಂಡ.


ಇವನ ಮಗ ಇಮ್ಮಡಿ ಮುಜ಼ಫರ್ಷಹ ಹಿಂದೂ ಅರಸರ-ಮುಖ್ಯವಾಗಿ ಮೇವಾಡದ ರಾಣಾ ಸಾಂಗಾನ-ವಿರುದ್ಧ ಕದನಗಳಲ್ಲಿ ತೊಡಗಿದ್ದನಾದರೂ ಸಾಂಗಾನನ್ನು ಸೋಲಿಸಲಾಗಲಿಲ್ಲ. 1526ರಿಂದ ಆಳತೊಡಗಿದ ಬಹದೂರ್ಷಹನ ಕಾಲದಲ್ಲಿ, ಆ ವೇಳೆಗೆ ದೆಹಲಿಯನ್ನು ಆಕ್ರಮಿಸಿದ ಮೊಗಲ್ ಅರಸ ಹುಮಾಯೂನ್ ಗುಜರಾತಿನ ವಿರುದ್ಧ ದಂಡೆತ್ತಿ ಬಂದ. ಇವನನ್ನು ಎದರಿಸಲಾರದ ಬಹದೂರ್ ಪೊರ್ಚುಗೀಸರ ಸ್ನೇಹಹಸ್ತವನ್ನು ಬಯಸಿದ. ತಲೆಮರೆಸಿಕೊಂಡು ದೇಶದಿಂದ ಓಡಿಹೋಗುವುದರಲ್ಲಿದ್ದ ಈತನಿಂದ ಪೋರ್ಚುಗೀಸರು ಕೆಲವು ಅನುಕೂಲಗಳನ್ನು ಪಡೆದುಕೊಂಡರು. ಸ್ವಲ್ಪ ಕಾಲ ಗುಜರಾತು ಹುಮಾಯೂನನ ವಶವಾಗಿದ್ದರೂ, ಷೇರ್ ಷಹ ಹುಮಾಯೂನನನ್ನು ಓಡಿಸಲು ಮಾಡಿದ ಯತ್ನಗಳ ಸಂದರ್ಭದಲ್ಲಿ ಬಹುದೂರ್ ಸ್ವಸ್ಥಾನಕ್ಕೆ ಮರಳಿದ. ಆದರೆ ಪೋರ್ಚುಗೀಸರಿಗೆ ಇವನು ನೀಡಿದ್ದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಅವರನ್ನು ಹತ್ತಿಕ್ಕಲು ಇವನು ಮಾಡಿದ ಯತ್ನ ವಿಫಲವಾಯಿತಷ್ಟೇ ಅಲ್ಲ, ಅವರಿಂದ ಈತ ಹತನಾದ (1551). ಮುಮ್ಮಡಿ ಮಹಮೂದ (1537-54) ಬೆಸಿನ್, ದೀವ್, ದಮನ್ಗಳನ್ನು ಇವರಿಗೆ ಬಿಟ್ಟುಕೊಡಬೇಕಾಯಿತು.


ಸೋಮನಾಥ ದೇವಾಲಯ


ಅಕ್ಬರನ ಕಾಲದಲ್ಲಿ 1572ರ ವೇಳೆಗೆ ಮೊಗಲರು 1572ರಲ್ಲಿ ಗುಜರಾತಿನ ಮೇಲೆ ದಂಡೆತ್ತಿ ಹೊರಟು 1573ರ ಫೆಬ್ರವರಿ 26ರಂದು ಸೂರತ್ ಕೋಟೆಯನ್ನು ವಶಪಡಿಸಿಕೊಂಡನು. ಗುಜರಾತಿನಲ್ಲಿ ದಂಗೆಯೆದ್ದ ಸುದ್ದಿ ತಿಳಿದು ರಾಜಧಾನಿಯಿಂದ ಹಿಂತಿರುಗಿ ಅಹಮದಾಬಾದ್ ಬಳಿ ಯುದ್ಧದಲ್ಲಿ ದಂಗೆಕೋರರನ್ನು ಸೋಲಿಸಿ 1573ರ ಸೆಪ್ಟೆಂಬರ್ 2ರಂದು ಸಂಪುರ್ಣವಾಗಿ ಗುಜರಾತನ್ನು ಆಕ್ರಮಿಸಿಕೊಂಡು ಅದರ ಪ್ರತ್ಯೇಕ ಇತಿಹಾಸವನ್ನು ಕೊನೆಗಾಣಿಸಿದರು. ತೋದರಮಲ್ಲನ ಸಹಾಯದಿಂದ ಅಕ್ಬರ್ ಕಂದಾಯದ ಜಮಾಬಂದಿಯನ್ನು (1575) ನಡೆಸಿದ. ಷಹಜಹಾನ ಅಲ್ಲಿಯ ವೈಸ್ರಾಯ್ ಆಗಿ ನೇಮಿಸಲ್ಪಟ್ಟಾಗ ಶಾಹಿಬಾಗನ್ನು ಕಟ್ಟಿಸಿದ. ಷಹಜಹಾನನ ಆಳ್ವಿಕೆಯ ಕಾಲದಲ್ಲಿ 1631ರಲ್ಲಿ ಅಲ್ಲಿ ಒಂದು ದೊಡ್ಡ ಕ್ಷಾಮ ತಲೆದೋರಿತು.


1760ರ ಮೊದಲೇ ಮರಾಠರು ಗುಜರಾತಿನ ಮೇಲೆ ತಮ್ಮ ಪ್ರಭಾವವನ್ನು ಸ್ಥಾಪಿಸಿ 1819ರ ವೇಳೆಗೆ ಬ್ರಿಟಿಷರ ಮುನ್ನಡೆಯಿಂದ ತಮ್ಮ ಅಧಿಕಾರವನ್ನು ಕಳೆದುಕೊಂಡರು. ಈ ಅವಧಿಯಲ್ಲಿ ಮರಾಠರು ಗುಜರಾತಿನ ಸಂಪುರ್ಣ ಸ್ವಾಮ್ಯವನ್ನು ಪಡೆದಿದ್ದರು. ಔರಂಗ್ಜೇ಼ಬನ ಕಾಲದಲ್ಲಿ ಶಿವಾಜಿಯಿಂದ ಗುಜರಾತಿನಲ್ಲಿ ಮರಾಠರ ಕಾರ್ಯಾಚರಣೆ ಪ್ರಾರಂಭವಾಯಿತು. ಸೂರತ್ ಮತ್ತು ಭಡೋಚ ಸಮುದ್ರದ ಕಡೆಯಿಂದ ಸೂರೆಗೆ ಒಳಗಾದುವು. 1699 ಮತ್ತು 1716ರಲ್ಲಿ ದಾಭಡೆ ಗುಜರಾತ್ ಪ್ರದೇಶಗಳನ್ನು ಕೊಳ್ಳೆಹೊಡೆದ. ತ್ರಿಂಬಕ್ರಾವ್ ದಾಭಡೆ, ಪೀಲಾಜಿ ಗಾಯಕವಾಡ್ ಗುಜರಾತಿನಲ್ಲಿ ಆಸಕ್ತಿವಹಿಸಿದರು. ಒಂದನೆಯ ಬಾಜೀರಾಯನ ಅನುಯಾಯಿಯಾಗಿದ್ದ ಪೀಲಾಜಿ ಗಾಯಕವಾಡ ವಡೋದರದಲ್ಲಿ ನೆಲೆಸಿ, ಗಾಯಕವಾಡ ಮನೆತನದ ಆಳ್ವಿಕೆಯನ್ನು ಆರಂಭಿಸಿದ. ಈತನ ಮಗ ಇಮ್ಮಡಿ ದಾಮಾಜಿ 1761ರಲ್ಲಿ ನಡೆದ ಪಾಣೀಪಟ್ ಕದನದಲ್ಲಿ ಭಾಗವಹಿಸಿ ಜೀವಸಹಿತ ಹಿಂದಿರುಗಿದ. ಬಳಿಕ (1763) ಇವನ ಮಕ್ಕಳಲ್ಲಿ ಕಲಹಗಳುಂಟಾಗಿ, ಕೊನಗೆ ಹಿರಿಯ ಮೊಮ್ಮಗನಾದ ಆನಂದರಾಯ ರಾಜ್ಯವನ್ನು ಪಡೆದ. ಈತ 1805ರಲ್ಲಿ ಬ್ರಿಟಿಷರೊಡನೆ ಮಾಡಿಕೊಂಡ ಒಪ್ಪಂದದ ಫಲವಾಗಿ, ಮರಾಠರು ಅವರೊಡನೆ ನಡೆಸಿದ ಕದನಗಳಲ್ಲಿ ಈತ ಭಾಗವಹಿಸಬೇಕಾಗಲಿಲ್ಲ. ಆದರೆ 1875ರಲ್ಲಿ ದುರಾಡಳಿತದ ನೆಪವನ್ನು ಒಡ್ಡಿ ಆಗಿನ ಗಾಯಕವಾಡನಾಗಿದ್ದ ಮಲ್ಹಾರ್ರಾಯನನ್ನು ಸಿಂಹಾಸನದಿಂದ ಇಳಿಸಿ ಆತನ ಸ್ಥಾನಕ್ಕೆ ಬಾಲಕನಾಗಿದ್ದ ಸಯಾಜಿರಾಯನನ್ನು ಬ್ರಿಟಿಷರು ತಂದರು. ಈ ಅರಸ 1930ರವರೆಗೂ ಆಳಿದ. ಈತನ ಕಾಲದಲ್ಲಿ ವಡೋದರ ಸಂಸ್ಥಾನ ಬಹಳ ಅಭಿವೃದ್ಧಿ ಹೊಂದಿತು. ವಡೋದರದಂತೆಯೇ ಕಾಠಿಯಾವಾಡ್ ಅಥವಾ ಸೌರಾಷ್ಟ್ರ ಸಹ ಮೂರನೆಯ ಮರಾಠಾ ಯುದ್ಧದ ಬಳಿಕ ಬ್ರಿಟಿಷರ ಆಡಳಿತಕ್ಕೆ ಸೇರಿತು.


ಕ್ಯಾಂಬೇ, ಛೋಟ ಉದಯಪುರ, ಬರಿಯ, ಬಲಾಸಿನೋರ್ ಮತ್ತಿತರ ಹಲವು ಸಣ್ಣ ಸಂಸ್ಥಾನಗಳ ರಾಜರು ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು ಆಶ್ರಿತರಾಗಿ ಉಳಿದುಕೊಂಡರು. ದೇಶೀಯ ಸಂಸ್ಥಾನಗಳನ್ನುಳಿದ ಭಾಗ ಆಗಿನ ಮುಂಬಯಿ ಪ್ರಾಂತ್ಯದ ಅಂಗವಾಗಿತ್ತು. 1947ರಲ್ಲಿ ದೇಶೀಯ ಸಂಸ್ಥಾನಗಳು ಭಾರತ ಗಣರಾಜ್ಯದಲ್ಲಿ ವಿಲೀನಗೊಂಡುವು. 1948ರಲ್ಲಿ ಕಾಠಿಯಾವಾಡದ ಬಹು ಭಾಗ ಸೌರಾಷ್ಟ್ರವೆನಿಸಿಕೊಂಡು ರಾಜಪ್ರಮುಖರ ರಾಜ್ಯವಾಗಿ ರೂಪಗೊಂಡಿತು. 1956ರಲ್ಲಿ ಭಾಷಾನುಗುಣ ರಾಜ್ಯ ವಿಂಗಡಣೆಯಾದಾಗ ಗುಜರಾತ್-ಮಹಾರಾಷ್ಟ್ರಗಳು ಒಂದಾದ ದ್ವಿಭಾಷಾ ಮುಂಬಯಿ ರಾಜ್ಯದ ರಚನೆಯಾಯಿತು. ಇವೆರಡೂ ಪ್ರತ್ಯೇಕ ರಾಜ್ಯಗಳಾದ್ದು ಮೇ 1, 1960ರಲ್ಲಿ. 1960ರಿಂದ 1995ರವರೆಗೆ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿತು. 1995ರಿಂದ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದೆ. 2011 ಅಕ್ಟೋಬರ್ 7ಕ್ಕೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ 10 ವರ್ಷಗಳಾಯಿತು, ಇಂದಿಗೂ ನರೇಂದ್ರಮೋದಿ ಮುಖ್ಯಮಂತ್ರಿಯಾಗಿದ್ದಾರೆ.


ಗುಜರಾತಿನಲ್ಲಿ ಪ್ರಾಚೀನ ಕಾಲದ ಅನೇಕ ಸಾಂಸ್ಕೃತಿಕ ಕುರುಹುಗಳುಂಟು. ಮೌರ್ಯರ ಆಳ್ವಿಕೆಯ ಕುರುಹುಗಳು ವಿರಳವಾಗಿದ್ದರೂ ಚಾಳುಕ್ಯರ ಕೋಟೆಗಳು, ಧಾರ್ಮಿಕ ಕಟ್ಟಡಗಳು, ಸರೋವರಗಳು, ಬಾವಿಗಳಿವೆ. ಉದಯಮತಿ ರಾಣಿಯ ರಾಣಿವಾವ್, ಕರ್ಣನ ಕರ್ಣಸಾಗರ ಮತ್ತು ಸಿದ್ಧರಾಜ ಜಯಸಿಂಹನ ಸಹಸ್ರಲಿಂಗ ತಲಾಬ್, ವಿರಂಗಾಂ ಎಂಬಲ್ಲಿಯ ಕೆರೆಗಳು ಉದಾಹರಣೆಗಳು. ಚಾಳುಕ್ಯರ ಕಾಲ ದೇವಾಲಯ ನಿರ್ಮಾಣದಲ್ಲಿ ಅತ್ಯುತ್ತಮ ಹೆಸರನ್ನು ಪಡೆದಿದೆ. ಉತ್ತರ ಗುಜರಾತಿನಲ್ಲಿ ಆರಂಭಿಸಿ, ಸೋಮನಾಥ ದೇವಾಲಯವೇ ಮೊದಲಾದ ಪ್ರಮುಖ ದೇವಾಲಯಗಳನ್ನು ಕಟ್ಟಿದ್ದು ಆ ಕಾಲದಲ್ಲಿ. ಆದರೆ, ಮುಸ್ಲಿಮರು ಅನೇಕ ಸಲ ದಾಳಿ ಮಾಡಿ ಅವನ್ನು ಧ್ವಂಸ ಮಾಡಿದರು. (ನೋಡಿ-ಗುಜರಾತಿನ ವಾಸ್ತು-ಶಿಲ್ಪ)


ಗುಜರಾತಿನ ರಾಜಮನೆತನದಲ್ಲಿ 13ನೆಯ ಶತಮಾನದವರೆಗೆ ಸೂರ್ಯಪುಜೆ ಪ್ರಚಲಿತವಾಗಿತ್ತು. ಮೊದಲಲ್ಲಿ ಶಿವಪುಜೆ ಅಷ್ಟೇನೂ ಜನಪ್ರಿಯವಾಗಿದ್ದಂತೆ ಕಾಣುವುದಿಲ್ಲ. ರಾಷ್ಟ್ರಕೂಟರು ಮತ್ತು ಚಾಳುಕ್ಯರು ಶೈವ ಮತ್ತು ವೈಷ್ಣವ ಧರ್ಮಗಳನ್ನು ಸಮನಾಗಿ ಕಾಣುತ್ತಿದ್ದರು. 10ನೆಯ ಶತಮಾನದಲ್ಲಿ ಶೈವ ಧರ್ಮದ ಪ್ರಚಾರವಾಯಿತು. ಸೋಮನಾಥ ಒಂದು ಮುಖ್ಯ ಯಾತ್ರಾಸ್ಥಳವಾಗಿತ್ತು. ಮೂಲರಾಜ, ಸಿದ್ಧರಾಜರು ಶೈವಧರ್ಮಕ್ಕೆ ಉತ್ತೇಜನ ಕೊಟ್ಟರು. ಕುಮಾರಪಾಲ ಜೈನಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ. ಕೆಲವು ಕಾಲ ಅದು ರಾಜ್ಯದ ಮುಖ್ಯ ಧರ್ಮವಾಗಿತ್ತು. ಸಂಸ್ಕೃತ, ಗುಜರಾತಿ ಭಾಷೆಗಳಲ್ಲಿ ಅನೇಕ ಧಾರ್ಮಿಕ ಮತ್ತು ಇತರ ಗ್ರಂಥಗಳ ರಚನೆಯಾಗಿದೆ. (ನೋಡಿ- ಗುಜರಾತಿ ಸಾಹಿತ್ಯ).