ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಜ್ರಾಲ್.ಐ.ಕೆ.

ವಿಕಿಸೋರ್ಸ್ದಿಂದ

1919-2012. ಭಾರತ ಗಣರಾಜ್ಯದ 12ನೆಯ ಪ್ರಧಾನಮಂತ್ರಿ. ಇವರ ಪೂರ್ಣ ಹೆಸರು ಇಂದ್ರಕುಮಾರ್ ಗುಜ್ರಾಲ್. 1919ರ ಡಿಸೆಂಬರ್ 4ರಂದು ಜನಿಸಿದರು. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇವರು 23 ವರ್ಷದವರಾಗಿದ್ದಾಗ 1942ರ ಆಗಸ್ಟ್‌ನಲ್ಲಿ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾದರು. ಸ್ವಾತಂತ್ರ್ಯಾನಂತರ ಇಂದಿರಾಗಾಂಧಿಯವರ ಸಚಿವ ಸಂಪುಟದಲ್ಲಿ 1975ರಲ್ಲಿ ವಾರ್ತಾ ಮತ್ತು ಪ್ರಸಾರಖಾತೆಯ ಸಚಿವರಾಗಿದ್ದರು. 1975ರ ಜೂನ್ 12ರಂದು ಅಲಹಬಾದ್ ಹೈಕೋರ್ಟು ಇಂದಿರಾಗಾಂಧಿಯವರ 1976 ಚುನಾವಣೆಯ ಲೋಕಸಭೆಯ ಸದಸ್ಯತ್ವ ಅಸಿಂಧುವೆಂದು ತೀರ್ಪುಕೊಟ್ಟಾಗ ಆ ಸಂಪುಟದಲ್ಲಿದ್ದರು. ಅನಂತರ ರಷ್ಯಕ್ಕೆ ರಾಯಭಾರಿಯಾಗಿ ನೇಮಕವಾಗಿ ಮಾಸ್ಕೊನಲ್ಲಿದ್ದರು.


1980ರ ಮಧ್ಯದಲ್ಲಿ ಇವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜನತಾ ಪಕ್ಷವನ್ನು ಸೇರಿದರು. 1989ರ ಚುನಾವಣೆಯಲ್ಲಿ ಪಂಜಾಬ್ ಪ್ರಾಂತದ ಜಲಂಧರ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದರು. ಪ್ರಧಾನಿ ವಿಶ್ವನಾಥ ಪ್ರತಾಪಸಿಂಗ್ರ (ವಿ.ಪಿ. ಸಿಂಗ್) ಸಂಪುಟದಲ್ಲಿ ವಿದೇಶಾಂಗ ವ್ಯವಹಾರ ಖಾತೆ ಸಚಿವರಾಗಿದ್ದರು. ಅದೇ ವರ್ಷ ರುಬಿಯ ಸಯೇದ್ ಅಪಹರಣದ ವಿಷಯವಾಗಿ ಅಪಹರಣಕಾರರೊಡನೆ ಸಂಧಾನ ನಡೆಸಲು ಗುಜ್ರಾಲ್ ಅವರನ್ನು ಶ್ರೀನಗರಕ್ಕೆ ಕಳಿಸಲಾಯಿತು. ಅನಂತರ ಕುವೈತ್ ಮೇಲೆ ಇರಾಕ್ 1990 ಆಗಸ್ಟ್‌ 2ರಂದು ಧಾಳಿ ನಡೆಸಿತು. ಇದು 1991 ಜನವರಿಯಲ್ಲಿ ಮೊದಲ ಗಲ್ಫ್‌ ಯುದ್ಧಕ್ಕೆ ಕಾರಣವಾಯಿತು. ಅಮೆರಿಕ ಮತ್ತು ಬ್ರಿಟನ್ ಕುವೈತ್ ಸಹಾಯಕ್ಕೆ ಬಂದು ಇರಾಕ್ ಕುವೈತ್ನಿಂದ ಕಾಲ್ತೆಗೆಯುವಂತೆ ಮಾಡಿದವು. ಭಾರತದ ಪ್ರತಿನಿಧಿಯಾಗಿ ಇವರು ಇರಾಕ್ನ ಅಧ್ಯಕ್ಷ ಸದ್ದಾಂ ಹುಸೇನ್ರನ್ನು ಖುದ್ದಾಗಿ ಭೇಟಿಯಾದರು. ಆ ಸಮಯದಲ್ಲಿ ಇವರು ಹುಸೇನ್ರನ್ನು ತಬ್ಬಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು.


1991ರ ಮಧ್ಯಾಂತರ ಚುನಾವಣೆಯಲ್ಲಿ ಇವರು ಬಿಹಾರದ ಪಾಟ್ನ (ಪಟಣ) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಅಲ್ಲಿಯ ಚುನಾವಣೆಯು ರದ್ದಾಯಿತು. 1992ರಲ್ಲಿ ರಾಜ್ಯಸಭೆ ಸದಸ್ಯರಾಗಿ ಚುನಾಯಿತರಾದರು. ಇವರು ಜನತಾದಳ ಪಕ್ಷದ ಒಬ್ಬ ಮುಖ್ಯ ನಾಯಕರಾಗಿದ್ದರು. 1996ರ ಚುನಾವಣೆಯ ಅನಂತರ ಅನೇಕ ರಾಜಕೀಯ ಪಕ್ಷಗಳು ಜೊತೆಗೂಡಿ ಕರ್ನಾಟಕದ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ರಚನೆಯಾಯಿತು. ಅದರಲ್ಲಿ ಮತ್ತೆ ವಿದೇಶಾಂಗ ವ್ಯವಹಾರಗಳ ಸಚಿವರಾದರು. ಈ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಡುತ್ತಿದ್ದ ಕಾಂಗ್ರೆಸ್ ಪಕ್ಷದವರು ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದರಿಂದ ಸರ್ಕಾರದ ಪತನಕ್ಕೆ ಹಾದಿಯಾಯಿತು. ಚುನಾವಣೆಯನ್ನು ತಪ್ಪಿಸಲು ಸಂಧಾನ ಏರ್ಪಟ್ಟು ನಾಯಕರನ್ನು ಬದಲಾಯಿಸಿದರೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಡುವುದಾಗಿಯೂ, ಅನೇಕ ವಿಷಯಗಳಲ್ಲಿ ಕಾಂಗ್ರೆಸ್ ಸಲಹೆಯನ್ನು ಪಡೆಯಬೇಕೆಂದೂ ಷರತ್ತು ವಿಧಿಸಿದರು. ಯುನೈಟೆಡ್ ಫ್ರಂಟ್ (ಸಂಯುಕ್ತ ರಂಗ) ಅದಕ್ಕೆ ಒಪ್ಪಿಕೊಂಡು ಇವರನ್ನು ನಾಯಕನನ್ನಾಗಿ ಚುನಾಯಿಸಿತು. ಆಗ ಇವರು 1997 ಏಪ್ರಿಲ್ 21ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಪ್ರಧಾನಿಯಾದ ಕೆಲವೇ ವಾರಗಳಲ್ಲಿ ಒಂದು ತೊಂದರೆ ಪ್ರಾರಂಭವಾಯಿತು. ಜನತಾ ಪಕ್ಷದವರೇ ಆದ ಬಿಹಾರ್ನ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪಶುಗಳ ಮೇವಿನ ಹಗರಣದಲ್ಲಿ ಸಿಲುಕಿಕೊಂಡರು. ಆಗ ಈ ಅವ್ಯವಹಾರದ ಮೊಕದ್ದಮೆ ಹೂಡಲು ಸಿ.ಬಿ.ಐ. ಬಿಹಾರಿನ ರಾಜ್ಯಪಾಲರಾಗಿದ್ದ ಎ.ಆರ್. ಕಿದ್ವಾಯಿಯವರ ಅನುಮತಿ ಕೇಳಿತು. ರಾಜ್ಯಪಾಲರು ಅನುಮತಿ ನೀಡಿದರು. ಪಕ್ಷದ ಒಳಗೆ ಮತ್ತು ಹೊರಗೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು. ಈ ಬೇಡಿಕೆಯನ್ನು ಯಾದವ್ ನಿಷ್ಠುರವಾಗಿ ತಿರಸ್ಕರಿಸಿದರು. ಗುಜ್ರಾಲ್ ಯಾದವ್ಗೆ ಮಂತ್ರಿಪದವಿಯಿಂದ ಕೆಳಗಿಳಿಯಲು ಸೂಚಿಸಿದರು. ಆದರೆ ಸರ್ಕಾರದ ಮೇಲೆ ಯಾವ ಕ್ರಮವನ್ನೂ ಜರುಗಿಸಲಿಲ್ಲ. ಆಗ ಸಿ.ಬಿ.ಐ. ನಿರ್ದೇಶಕರಾಗಿದ್ದ ಜೋಗಿಂದರ್ ಸಿಂಗ್ ಅವರನ್ನು ವರ್ಗ ಮಾಡಿದರು. ಇದು ಲಾಲುಪ್ರಸಾದ್ ಅವರನ್ನು ಗುಜ್ರಾಲ್ ರಕ್ಷಿಸುತ್ತಿರುವರೆಂಬ ಆಪಾದನೆಗೆ ಹಾದಿ ಮಾಡಿಕೊಟ್ಟಿತು. ಅನಂತರ ಯಾದವ್ ಜನತಾದಳ ತೊರೆದು 1997ರ ಜುಲೈ 3ರಂದು ರಾಷ್ಟ್ರೀಯ ಜನತಾದಳ ಎಂಬ ಪಕ್ಷವನ್ನು ಪ್ರಾರಂಭ ಮಾಡಿದರು. ಈ ಹೊಸ ಪಕ್ಷದಲ್ಲಿ ಸಂಸತ್ತಿನ 17 ಸದಸ್ಯರಿದ್ದರು. ಹೊಸ ಪಕ್ಷ ಗುಜ್ರಾಲ್ಗೆ ಬೆಂಬಲ ಸೂಚಿಸಿತು. ಇದರಿಂದ ಸರ್ಕಾರಕ್ಕೆ ಅಪಾಯ ತಪ್ಪಿತು.


ಇವರ ಸರ್ಕಾರದ ಒಂದು ವಿವಾದಾಸ್ಪದ ನಿರ್ಧಾರ ಎಂದರೆ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದ್ದು. ಆದರೆ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಆ ಶಿಫಾರಸನ್ನು ಹಿಂದಕ್ಕೆ ಕಳುಹಿಸಿದರು. ಜೊತೆಗೆ ಉತ್ತರಪ್ರದೇಶದ ಅಲಹಬಾದ್ ಉಚ್ಚ ನ್ಯಾಯಾಲಯ ಸಹಿತ ರಾಷ್ಟ್ರಪತಿ ಆಡಳಿತವನ್ನು ವಿರೋಧಿಸಿ ತೀರ್ಪು ನೀಡಿತು. ರಾಜೀವ್ಗಾಂಧಿ ಹತ್ಯೆಯ ತನಿಖೆಯನ್ನು ನಡೆಸಿದ ಜೈನ್ ನಿಯೋಗದ ಮಧ್ಯಾಂತರ ವರದಿಯ ರಹಸ್ಯ ಹೊರಬಿದ್ದು ಅನಂತರದಲ್ಲಿ ಡಿ.ಎಂ.ಕೆ. (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷ ಗುಪ್ತವಾಗಿ ಎಲ್.ಟಿ.ಟಿ.ಇ.ಗೆ ಬೆಂಬಲ ನೀಡಿದೆ ಎಂಬ ವಿಷಯ ಬಹಿರಂಗವಾಯಿತು. ಗುಜ್ರಾಲ್ ಮಂತ್ರಿಮಂಡಲದಲ್ಲಿ ಡಿ.ಎಂ.ಕೆ. ಸಚಿವರುಗಳಿದ್ದರು. ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ಜೈನ್ವರದಿಯನ್ನು ಮಂಡಿಸಲು ಒತ್ತಾಯಿಸಿತು. 1997 ನವೆಂಬರ್ 19ರಂದು ವರದಿ ಮಂಡನೆಯಾಗಿ ಅದರಲ್ಲಿ ಡಿ.ಎಂ.ಕೆ. ಪಕ್ಷ ಎಲ್.ಟಿ.ಟಿ.ಇ.ಗೆ ಬೆಂಬಲಿಸಿರುವುದು ಖಚಿತವಾಯಿತು. ಕಾಂಗ್ರೆಸ್ ಪಕ್ಷ ಡಿ.ಎಂ.ಕೆ. ಸಚಿವರನ್ನು ಕೈಬಿಡಲು ಒತ್ತಾಯಿಸಿತು. ಈ ವಿಷಯವಾಗಿ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿ ಮತ್ತು ಪ್ರಧಾನಿ ಗುಜ್ರಾಲ್ ಮಧ್ಯೆ ಪತ್ರವ್ಯವಹಾರ ನಡೆಯಿತು. ಆದರೆ ಇದಕ್ಕೆ ಪ್ರಧಾನಿ ಒಪ್ಪಲಿಲ್ಲ. 1997ರ ನವೆಂಬರ್ 28ರಂದು ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ಸು ಪಡೆಯಿತು. ಅನಂತರ ಗುಜ್ರಾಲ್ ರಾಜೀನಾಮೆ ಕೊಟ್ಟರು. 1998ರಲ್ಲಿ ನಡೆದ ಚುನಾವಣೆಯಲ್ಲಿ ಪಂಜಾಬಿನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಅಕಾಲಿದಳದಿಂದ ಬೆಂಬಲಿತರಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಗಿಂತ 1,31,000 ಅಧಿಕಮತದಿಂದ ಜಯಗಳಿಸಿದರು. ಅನಂತರ ಇವರು 1999ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಇವರು ರಾಜಕೀಯದಿಂದ ನಿವೃತ್ತರಾಗಿ ವಿಶ್ರಾಂತ ಜೀವನವನ್ನು ಆಯ್ಕೆ ಮಾಡಿಕೊಂಡರು. ಇವರು 2012ರ ನವೆಂಬರ್ 30ರಂದು ನಿಧನವಾದರು.


ಗುಜ್ರಾಲ್ ಅವರು ಉರ್ದು ಭಾಷೆಯ ಸರಳ ಮಾತುಗಳ ವಾಗ್ಮಿ. ತಮಗೆ ಅವಕಾಶ ದೊರೆತಾಗೆಲ್ಲಾ ಉರ್ದುವಿನಲ್ಲಿ ದ್ವಿಪದಿಗಳನ್ನು ರಚಿಸಿ ವಾಚಿಸುತ್ತಿದ್ದುದುಂಟು. ಇವರ ಪತ್ನಿ ಶೈಲಗುಜ್ರಾಲ್. ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಈಕೆ 2011ರ ಜುಲೈ 11ರಂದು ನಿಧನರಾದರು. ಈ ದಂಪತಿಗಳಿಗೆ ಇಬ್ಬರು ಪುತ್ರರು, ಮೂರು ಮೊಮ್ಮಕ್ಕಳು ಇದ್ದಾರೆ.