ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಡಿಬಂಡೆ
ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಒಂದು ತಾಲ್ಲೂಕು. ದಕ್ಷಿಣದಲ್ಲಿ ಚಿಕ್ಕಬಳ್ಳಾಪುರ, ಪೂರ್ವದಲ್ಲಿ ಶಿಡ್ಲಘಟ್ಟ ಮತ್ತು ಬಾಗೇಪಲ್ಲಿ, ಪಶ್ಚಿಮದಲ್ಲಿ ಗೌರಿಬಿದನೂರು ತಾಲ್ಲೂಕುಗಳು, ಉತ್ತರದಲ್ಲಿ ಸ್ವಲ್ಪ ದೂರದವರೆಗೆ ಆಂಧ್ರಪ್ರದೇಶದ ಗಡಿ ಇವುಗಳಿಂದ ಸುತ್ತುವರಿಯಲ್ಪಟ್ಟಿದೆ. ತಾಲ್ಲೂಕಿನ ವಿಸ್ತೀರ್ಣ 222ಚ.ಕಿಮೀ. ಕಸಬಾ ಮತ್ತು ಸೋಮೇನ ಹಳ್ಳಿ ಹೋಬಳಿಗಳು. ಒಟ್ಟು ಗ್ರಾಮಗಳು 105. ಜನಸಂಖ್ಯೆ 55618 (2011).
ತಾಲ್ಲೂಕು ಹೆಚ್ಚುಮಟ್ಟಿಗೆ ಕಣಶಿಲೆಯ ಬೆಟ್ಟಗಳ ಪ್ರದೇಶ. ಭೂಮಿ ಉತ್ತರಕ್ಕೆ ಇಳಿಜಾರಾಗಿದ್ದು ಅನೇಕ ಏರು ತಗ್ಗುಗಳಿಂದ ಕೂಡಿದೆ. ನಂದಿಬೆಟ್ಟದ ಉತ್ತರದಲ್ಲಿ ಆವಲುಕೊಂಡ ಎಂಬಲ್ಲಿ ಹುಟ್ಟುವ ಕುಶಾವತಿ ನದಿ ಈ ತಾಲ್ಲೂಕಿನ ಮೂಲಕ ಉತ್ತರಕ್ಕೆ ಹರಿದು ಮುಂದೆ ಚಿತ್ರಾವತಿ ನದಿಯನ್ನು ಸೇರಿಕೊಳ್ಳುತ್ತದೆ. ತಾಲ್ಲೂಕಿನ ಮುಖ್ಯ ಕೆರೆಯಾಗಿರುವ ಅಮಾನಿ ಬೈರಸಾಗರ ಈ ಕೆರೆಯ ಎರಡು ನಾಲೆಗಳಲ್ಲಿ ಒಂದು ಸುಮಾರು 2.5ಕಿಮೀ ದೂರದವರೆಗೂ ಮತ್ತೊಂದು 6.5ಕಿಮೀ ದೂರದವರೆಗೂ ಸಾಗುತ್ತದೆ. ಈ ತಾಲ್ಲೂಕಿನಲ್ಲಿ ನುರುಜುಗಲ್ಲಿನಿಂದ, ಕಲ್ಲುಗಳಿಂದ ಕೂಡಿದ ಭೂಪ್ರದೇಶವೇ ಹೆಚ್ಚು. ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 733.84ಮಿಮೀ. ಮಳೆ ಕಡಿಮೆಯಾದರೂ ಕೆರೆ ಬಾವಿಗಳ ಆಸರೆಯಿಂದ ನೆಲಗಡಲೆ, ರಾಗಿ, ಬತ್ತ, ಕಬ್ಬು, ಆಲೂಗೆಡ್ಡೆ, ಈರುಳ್ಳಿ, ಮೆಣಸಿನಕಾಯಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಗುಡಿಬಂಡೆಯ ಸುತ್ತಮುತ್ತಲೂ ಹುಣಿಸೆ ಮರಗಳನ್ನು ಹೆಚ್ಚಾಗಿ ಕಾಣಬಹುದು. ಮೈದಾನ ಪ್ರದೇಶಗಳಲ್ಲಿ ಮಾವಿನ ತೋಪುಗಳಿವೆ. ಪಶುಸಂಪತ್ತಿನ ಅಭಿವೃದ್ಧಿಗೆ ಹೆಚ್ಚು ಗಮನ ನೀಡಲಾಗುತ್ತಿದ್ದು, ಗುಡಿಬಂಡೆಯಲ್ಲಿ ತಾಲ್ಲೂಕು ಮಟ್ಟದ ಒಂದು ಪಶುವೈದ್ಯಾಲಯವೂ ಎಲ್ಲೋಡಿನಲ್ಲಿ ಗ್ರಾಮಮಟ್ಟದ ಪಶುವೈದ್ಯಾಲಯವೂ ಇವೆ.
ಗುಡಿಬಂಡೆ ತಾಲ್ಲೂಕು ಬೆಲ್ಲ ಮತ್ತು ಕಲ್ಲುಸಕ್ಕರೆ ತಯಾರಿಕೆಗೆ, ರೇಷ್ಮೆನೇಯ್ಗೆ ಮತ್ತು ಕೊಟ್ಟಣದ ಅಕ್ಕಿಗೆ ಪ್ರಸಿದ್ಧ. ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರದ ರೈಲು ನಿಲ್ದಾಣಗಳೇ ಈ ತಾಲ್ಲೂಕಿಗೆ ಹತ್ತಿರವಿರುವ ರೈಲುಸಂಪರ್ಕ. ಗುಡಿಬಂಡೆಯಿಂದ ಸುತ್ತಲ ಮುಖ್ಯ ಸ್ಥಳಗಳಿಗೆ ಉತ್ತಮ ಮಾರ್ಗಗಳಿವೆ.
ಗುಡಿಬಂಡೆ ಈ ತಾಲ್ಲೂಕಿನ ಮುಖ್ಯ ಸ್ಥಳ. ನಂದಿದುರ್ಗ ಬೆಟ್ಟಸಾಲಿನಲ್ಲಿ ಕೋಲಾರದ ವಾಯವ್ಯಕ್ಕೆ 95ಕಿಮೀ ದೂರದಲ್ಲಿದೆ. ಗುಡಿಯಿಂದ ಕೂಡಿದ ಬಂಡೆಯೊಂದರ ದಕ್ಷಿಣದ ಬುಡದಲ್ಲಿ ಈ ಪಟ್ಟಣವಿರುವುದರಿಂದ ಇದಕ್ಕೆ ಗುಡಿಬಂಡೆ ಎಂಬ ಹೆಸರು ಬಂದಿದೆ. ಈ ಸುತ್ತಲ ಪ್ರದೇಶಕ್ಕೆ ಇದೇ ವ್ಯಾಪಾರಕೇಂದ್ರ.
ಔರಂಗಜೇಬನ ಕರ್ನಾಟಕ ಭಾಗದ ಫೌಜುದಾರ ಖಾಸಿಂಖಾನ್ ದೊಡ್ಡಬಳ್ಳಾಪುರವನ್ನು ವಶಪಡಿಸಿಕೊಂಡಮೇಲೆ ಗುಡಿಬಂಡೆ ಮತ್ತು ಅದರ ಸುತ್ತಲಿನ ಅರಣ್ಯ ಭಾಗಗಳನ್ನು ಹಾವಳಿ ಬೈರೇಗೌಡನಿಗೆ ಕೊಟ್ಟ. ಹಾವಳಿ ಬೈರೇಗೌಡ ಮಕ್ಕಳಿಲ್ಲದೆ ಮೃತಪಟ್ಟ. ಅವನ ಮೈದುನ ರಾಮೇಗೌಡ ಉತ್ತರಾಧಿಕಾರಿಯಾದ. 1689ರಲ್ಲಿ ಗುಡಿಬಂಡೆ ಚಿಕ್ಕಬಳ್ಳಾಪುರದ ಪಾಳೆಯಗಾರ ಬೈಚೇಗೌಡನ ವಶವಾಯಿತು.
ಹಾವಳಿ ಬೈರೇಗೌಡ ಮೊದಲು ಹಳೆಯ ಗುಡಿಬಂಡೆಯ ಕೋಟೆಯನ್ನೂ ಅನಂತರ ಈಗಿನ ಬಂಡೆಯ ತಳದ ಗುಡಿಬಂಡೆ ಪಾಳೆಯವನ್ನೂ ಸ್ಥಾಪಿಸಿದ. ಕೋಟೆಯ ಭಾಗದಲ್ಲಿ ಈಗಲೂ ಅನೇಕ ಬಂಡೆದ್ವಾರಗಳು, ಬಂಡೆಗಳಲ್ಲಿ ಬಿಡಿಸಿದ ಸೋಪಾನಗಳು, ಸಿಹಿನೀರಿನ ದೊಣೆಗಳು, ಗುಡಿಗಳು, ಹಗೇವುಗಳು, ಮದ್ದಿನ ಉಗ್ರಾಣಗಳು ಇವೆ. ಕೋವಿಯ ಮದ್ದನ್ನು ತಯಾರಿಸಲು ಉಪಯೋಗಿಸುತ್ತಿದ್ದ ಬೀಸುವ ಕಲ್ಲು ಸಹ ಇದೆ.
ಈ ಊರಿನ ಹೆಸರಿಗೆ ಕಾರಣವಾದ ಬಂಡೆಯ ಮೇಲಿರುವ ಗುಡಿ ಅಹೋಬಲ ಓಬಲ ನರಸಿಂಹಸ್ವಾಮಿಯದು. ಇದೊಂದು ನೈಸರ್ಗಿಕ ಗವಿ. ಗವಿಯು ಗರ್ಭಗುಡಿ ಮತ್ತು ಹೊರ ಅಂಕಣವೆಂದು ಎರಡಾಗಿ ವಿಂಗಡಿತವಾಗಿದೆ. ಹೊರ ಅಂಕಣದ ಮಂಟಪದ ದ್ವಾರದಲ್ಲಿ ದ್ವಾರಪಾಲಕ ವಿಗ್ರಹಗಳೂ ಮಂಟಪದ ಉತ್ತರದ ಗೋಡೆಯ ಮೇಲೆ ವಾಮನ, ರಾಮ, ವರಾಹ ಮತ್ತು ಉಗ್ರನರಸಿಂಹಸ್ವಾಮಿಯ ಉಬ್ಬುಚಿತ್ರಗಳೂ ಇವೆ. ಗರ್ಭಗುಡಿಯಲ್ಲಿ ವಿಗ್ರಹದ ಬದಲು ಉದ್ಭವ ಶಿಲೆ ಇದೆ. ಗವಿಯ ಸುತ್ತಲೂ ಕಲ್ಲಿನ ಗೋಡೆ ಇದೆ. ಗುಡಿಬಂಡೆಯಲ್ಲಿ ಎರಡು ಜಿನಾಲಯಗಳೂ ಇವೆ.