ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಲ್ಬರ್ಗ

ವಿಕಿಸೋರ್ಸ್ದಿಂದ
ಗುಲ್ಬರ್ಗ ಕೋಟೆ

ಕರ್ನಾಟಕದ ಒಂದು ವಿಭಾಗ; ಜಿಲ್ಲೆ; ತಾಲ್ಲೂಕು- ಅವುಗಳ ಆಡಳಿತ ಕೇಂದ್ರ ಮತ್ತು ನಗರ. ಗುಲ್ಬರ್ಗ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಗುಲ್ಬರ್ಗ ವಿಭಾಗಕ್ಕೆ ಒಳಪಟ್ಟಿವೆ.


ಜಿಲ್ಲೆ[ಸಂಪಾದಿಸಿ]

ಗುಲ್ಬರ್ಗ ಜಿಲ್ಲೆ ಕರ್ನಾಟಕದ ಉತ್ತರ ಭಾಗದಲ್ಲಿದೆ. 1956ರಲ್ಲಿ ಭಾರತದ ರಾಜ್ಯಗಳ ಮರುವಿಂಗಡಣೆಯಾದಾಗ ಹೈದರಾಬಾದ್ ಕರ್ನಾಟಕ ಪ್ರದೇಶದಿಂದ ಅಂದಿನ ಮೈಸೂರು ರಾಜ್ಯಕ್ಕೆ ಸೇರಿದ ಮೂರು ಜಿಲ್ಲೆಗಳಲ್ಲಿ ಒಂದು. ಉಳಿದೆರಡು ಜಿಲ್ಲೆಗಳು ಬೀದರ್ ಮತ್ತು ರಾಯಚೂರು. ಉತ್ತರದಲ್ಲಿ ಬೀದರ್ ಮತ್ತು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ, ಪೂರ್ವದಲ್ಲಿ ಆಂಧ್ರ ಪ್ರದೇಶ, ದಕ್ಷಿಣದಲ್ಲಿ ರಾಯಚೂರು ಜಿಲ್ಲೆ, ಪಶ್ಚಿಮದಲ್ಲಿ ಬಿಜಾಪುರ ಮತ್ತು ಮಹಾರಾಷ್ಟ್ರ ಇವು ಗುಲ್ಬರ್ಗ ಜಿಲ್ಲೆಯನ್ನು ಸುತ್ತುವರಿದಿವೆ. ಜಿಲ್ಲೆಯಲ್ಲಿ ಅಫಜಲಪುರ, ಆಳಂದ, ಗುಲ್ಬರ್ಗ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ ಮತ್ತು ಸೇಡಂ ತಾಲ್ಲೂಕುಗಳಿವೆ. ಗುಲ್ಬರ್ಗ ಜಿಲ್ಲೆಯ ವಿಸ್ತೀರ್ಣ 16,224 ಚ.ಕಿಮೀ, ಜನಸಂಖ್ಯೆ 25,64,892 (2011).


ಜಿಲ್ಲೆಯ ಹೆಚ್ಚಿನ ಭಾಗ ದಖನ್ ಟ್ರಾಪ್ ಶಿಲಾಪ್ರದೇಶ. ಜಿಲ್ಲೆಯ ಮಧ್ಯದ ಭಾಗದಲ್ಲಿ ಸ್ವಲ್ಪಮಟ್ಟಿಗೆ ಭೀಮಾವರ್ಗಕ್ಕೆ ಸೇರಿದ ಸುಣ್ಣಕಲ್ಲು ಮತ್ತು ಶೇಲ್ ಪದರಗಳಿವೆ. ದಕ್ಷಿಣ ಮತ್ತು ಪೂರ್ವದ ಅಂಚಿನ ಕೆಲವೆಡೆಗಳಲ್ಲಿ ಬಹು ಪ್ರಾಚೀನವಾದ ಪೆನಿನ್ಸುಲರ್ ನೈಸ್ ಮತ್ತು ಧಾರವಾಡ ವರ್ಗಕ್ಕೆ ಸೇರಿದ ಶಿಲೆಗಳು ಕಂಡುಬರುತ್ತವೆ. ಗುಲ್ಬರ್ಗ ಜಿಲ್ಲೆ ದಖನ್ ಪ್ರಸ್ಥಭೂಮಿಯ ಭಾಗ. ಉತ್ತರದಿಂದ ದಕ್ಷಿಣಕ್ಕೆ ಇಳಿಜಾರಾಗಿದೆ. ಇಡೀ ಜಿಲ್ಲೆ ಸಾಮಾನ್ಯವಾಗಿ ಸಮುದ್ರಮಟ್ಟದಿಂದ 300ರಿಂದ 600ಮೀ. ಎತ್ತರದಲ್ಲಿದೆ. ಸೇಡಂ ತಾಲ್ಲೂಕಿನಲ್ಲಿ ಕೆಲವು ಭಾಗಗಳು 600 ಮೀಗಿಂತ ಎತ್ತರವಾಗಿದೆ. ಆಳಂದ ತಾಲ್ಲೂಕಿನಲ್ಲಿ ನೆಲ ಏರುತಗ್ಗುಗಳಿಂದ ಕೂಡಿದೆ. ಗುಲ್ಬರ್ಗ ಜಿಲ್ಲೆಯಲ್ಲಿ ಎತ್ತರವಾದ ಬೆಟ್ಟಗಳಿಲ್ಲ. ವಾಯವ್ಯದಲ್ಲಿ ಪ್ರವೇಶಿಸುವ ಚಿಕ್ಕ ಬೆಟ್ಟಗಳ ಶ್ರೇಣಿಯೊಂದು ಆಗ್ನೇಯಾಭಿಮುಖವಾಗಿ ಸು. 90ಕಿಮೀ ದೂರಸಾಗಿದೆ. ಸೇಡಂ ತಾಲ್ಲೂಕಿನಲ್ಲಿ ಅಷ್ಟೇನೂ ಎತ್ತರವಿಲ್ಲದ ಕೆಲವು ಬೆಟ್ಟಗಳುಂಟು. ಗುಲ್ಬರ್ಗದಲ್ಲಿ ಜಿಪ್ಸಂ, ಚಿಂಚೋಳಿ ತಾಲ್ಲೂಕಿನಲ್ಲಿ ಫುಲ್ಲರ್ಸ್‌ ಅರ್ತ್ ಸಿಗುತ್ತವೆ. ಸಿಮೆಂಟ್ ಕೈಗಾರಿಕೆಗೆ ಉಪಯುಕ್ತವಾದ ಸುಣ್ಣಕಲ್ಲು ಜಿಲ್ಲೆಯ ಹಲವೆಡೆಗಳಲ್ಲುಂಟು. ಕಟ್ಟಡಗಳಿಗೆ ಉಪಯೋಗಿಸುವ ಉತ್ತಮವಾದ ಕಲ್ಲು ಜಿಲ್ಲೆಯಲ್ಲಿ ಹೇರಳವಾಗಿ ದೊರಕುತ್ತದೆ.


ಜಿಲ್ಲೆಯ ಮುಖ್ಯ ನದಿಗಳು ಕೃಷ್ಣಾ ಮತ್ತು ಭೀಮಾ. ಬೆಳಗಾಂವಿ ಜಿಲ್ಲೆಯಲ್ಲಿ ಕರ್ನಾಟಕವನ್ನು ಪ್ರವೇಶಿಸುವ ಕೃಷ್ಣಾ ನದಿ ಈ ಜಿಲ್ಲೆಯ ದಕ್ಷಿಣ ಎಲ್ಲೆಯಾಗಿ ಹರಿದು ಗುಲ್ಬರ್ಗ ಜಿಲ್ಲೆಯನ್ನು ರಾಯಚೂರು ಜಿಲ್ಲೆಯಿಂದ ಬೇರ್ಪಡಿಸುತ್ತದೆ. ಗುಲ್ಬರ್ಗ ಜಿಲ್ಲೆಯಲ್ಲಿ ಈ ನದಿಯ ಉದ್ದ ಸು.160 ಕಿಮೀ. ಸುರಪುರ ತಾಲ್ಲೂಕಿನ ನಾರಾಯಣ ಪುರದಿಂದ ಸು.3 ಕಿಮೀ ಕೆಳಗೆ ಈ ನದಿಯ 60 ಮೀ ಎತ್ತರದ ಜಲದುರ್ಗ ಜಲಪಾತವಿದೆ. ಭೀಮಾ ನದಿ ಮಹಾರಾಷ್ಟ್ರದಿಂದ ಕರ್ನಾಟಕವನ್ನು ಪ್ರವೇಶಿಸಿ, ಬಿಜಾಪುರ ಜಿಲ್ಲೆಯ ಎಲ್ಲೆಯ ಉದ್ದಕ್ಕೆ ಸ್ವಲ್ಪ ದೂರ ಹರಿದು ಅನಂತರ ಗುಲ್ಬರ್ಗ ಜಿಲ್ಲೆಯನ್ನು ಹೊಕ್ಕು 219ಕಿಮೀ ದೂರ ಸಾಗಿ ಕೃಷ್ಣಾ ನದಿಗೆ ಸೇರುವುದು. ಮಹಾರಾಷ್ಟ್ರದಲ್ಲಿ ಹುಟ್ಟಿ ಅಫಜಲಪುರ ತಾಲ್ಲೂಕಿನಲ್ಲಿ 24ಕಿಮೀ ದೂರ ಹರಿದು ಅಫಜಲಪುರಕ್ಕೆ ಪಶ್ಚಿಮದಲ್ಲಿ ಭೀಮಾನದಿಯನ್ನು ಸೇರುವ ಬೋರಿ, ಮಹಾರಾಷ್ಟ್ರದಲ್ಲಿ ಉಗಮಿಸಿ ಅಳಂದ ತಾಲ್ಲೂಕಿನಲ್ಲಿ ಗುಲ್ಬರ್ಗ ಜಿಲ್ಲೆಯನ್ನು ಹೊಕ್ಕು ಜಿಲ್ಲೆಯಲ್ಲಿ 88ಕಿಮೀ ದೂರ ಹರಿದು ಅಫಜಲಪುರ ತಾಲ್ಲೂಕಿನ ಗಾಣಗಾಪುರದ ಬಳಿ ಭೀಮಾನದಿಗೆ ಸೇರುವ ಅಮರಜ ನದಿ, ಆಂಧ್ರ ಪ್ರದೇಶದಿಂದ ಗುಲ್ಬರ್ಗ ಜಿಲ್ಲೆಯನ್ನು ಪ್ರವೇಶಿಸಿ ಸು.64ಕಿಮೀ ದೂರ ಹರಿದು ಚಿತ್ತಾಪುರದ ಹುನಗುಂಟ ಗ್ರಾಮದ ಬಳಿ ಬಿsೕಮೆಯನ್ನು ಕೂಡುವ ಕಾಗಿಣಾ ನದಿ,ಮಹಾರಾಷ್ಟ್ರದಲ್ಲಿ ಹುಟ್ಟಿ ಗುಲ್ಬರ್ಗ ಜಿಲ್ಲೆಯನ್ನು ಪ್ರವೇಶಿಸಿ ಕಾಗಿಣಾ ನದಿಯನ್ನು ಸೇರುವ ಮುಲ್ಲಾಮಾರಿ ಇವು ಜಿಲ್ಲೆಯ ಇತರ ನದಿಗಳು. ಇಡೀ ಜಿಲ್ಲೆ ಕೃಷ್ಣಾ ಮತ್ತು ಬಿsೕಮಾ ನದಿಗಳ ಜಲಾನಯನ ಪ್ರದೇಶ.


ಗುಲ್ಬರ್ಗ ಜಿಲ್ಲೆಯ ವಾಯುಗುಣ ಶುಷ್ಕ ಮತ್ತು ಆರೋಗ್ಯಕರ. ಇಲ್ಲಿಯ ಹವಾಗುಣ ದಖನ್ ಪ್ರಸ್ಥಭೂಮಿಯ ಮಾದರಿಯದೆ ಆಗಿದೆ. ಫೆಬ್ರುವರಿಯಿಂದ ಜೂನ್ ಆರಂಭದವರೆಗೆ ಬೇಸಗೆ. ಅಲ್ಲಿಂದ ಮುಂದೆ ಸೆಪ್ಟೆಂಬರ್ ಅಂತ್ಯದ ವರೆಗೆ ಮಳೆಗಾಲ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 715.5ಮಿಮೀ. ಡಿಸೆಂಬರಿನಿಂದ ಫೆಬ್ರುವರಿಯವರೆಗೆ ಚಳಿಗಾಲ. ಆಗಿನ ಮಧ್ಯಕ ದೈನಿಕ ಗರಿಷ್ಠ ಉಷ್ಣತೆ 14.8°ಸೆಂ. (58.6°ಫ್ಯಾ.) ಮೇ ಅತ್ಯಂತ ಉಷ್ಣತೆಯ ತಿಂಗಳು. ಆಗಿನ ಮಧ್ಯಕ ದೈನಿಕ ಗರಿಷ್ಠ ಉಷ್ಣತೆ 40.6°ಸೆಂ (105.1°ಫ್ಯಾ). ಕೆಲವು ಸಾರಿ ಹಗಲಿನ ಉಷ್ಣತೆ 45°ಸೆಂ. (113°ಫ್ಯಾ) ವರೆಗೂ ಏರುವುದುಂಟು. ಗುಲ್ಬರ್ಗ ಜಿಲ್ಲೆಯಲ್ಲಿ ಎರಡು ಬಗೆಯ ಕಾಡುಗಳನ್ನು ಕಾಣಬಹುದು. ಈಶಾನ್ಯ ಭಾಗದ ಪರ್ಣಪಾತಿ ಕಾಡು ಒತ್ತಾಗಿದ್ದು ತೇಗ, ಬೀಟೆ, ನಲ್ಲಮಡ್ಡಿ, ಹುರಗಲು ಮರಗಳಿಂದ ಕೂಡಿದೆ. ಆಗ್ನೇಯ ಭಾಗದಲ್ಲಿರುವ ಕುರುಚಲು ಕಾಡು ಸೌದೆಗೆ ಮಾತ್ರ ಉಪಯುಕ್ತ. ಜಿಲ್ಲೆಯ ಒಟ್ಟು ಅರಣ್ಯ ಪ್ರದೇಶ 696 ಚ.ಕಿಮೀ. ಇದು ಇಡೀ ಜಿಲ್ಲೆಯ ಶೇ.4ರಷ್ಟು. ಇದರಲ್ಲಿ ಶೇ.41ರಷ್ಟು ಭಾಗ ಚಿಂಚೋಳಿ ತಾಲ್ಲೂಕಿನಲ್ಲೇ ಇದೆ. ಚೌಬೀನೆ, ಸೌದೆ, ಬೀಡಿ ಎಲೆ, ಚರ್ಮ ಹದಮಾಡಲು ಉಪಯೋಗಿಸುವ ತೊಗಟೆ, ಸೀತಾಫಲ, ಜೇನು ಮೇಣ, ಹಣ್ಣು,ರಾಳ, ಗೋಂದು, ಹುಳಿ, ಸೀಗೆ ಇವು ಕೆಲವು ಅರಣ್ಯೋತ್ಪನ್ನಗಳು ಜಿಲ್ಲೆಯ ನೈಸರ್ಗಿಕ ಸಸ್ಯಸಂಪತ್ತು ಅಷ್ಟೇನೂ ಸಮೃದ್ಧವಾಗಿಲ್ಲ.


ಗುಲ್ಬರ್ಗ ಜಿಲ್ಲೆಯಲ್ಲಿ ವನ್ಯಮೃಗಗಳು ಹೆಚ್ಚಾಗಿಲ್ಲ. ಕಾಡುಗಳಲ್ಲಿ ಕೋತಿಗಳಿವೆ. ಕೆಲವು ಕಡೆ ಚಿರತೆಗಳೂ ಕಿರುಬಗಳೂ ಉಂಟು. ಹುಲಿಗಳು ಕಾಣಬರುವುದಿಲ್ಲ. ಚಿಂಚೋಳಿಯ ಕಾಡುಗಳಲ್ಲಿ ಕರಡಿಗಳಿದ್ದು, ಅವುಗಳಿಂದ ಪೈರುಗಳಿಗೆ ಹಾನಿಯಾಗುತ್ತಿ ರುತ್ತದೆ. ಕತ್ತೆಕಿರುಬ, ತೋಳ, ಕಾಡುನಾಯಿ, ಜಿಂಕೆ, ನರಿ ಇವೆ. ಗಿಣಿ, ಮೈನಾ, ಮರಕುಟುಕ, ನವಿಲು, ಗೂಬೆ, ಹದ್ದು, ಹಾಡುವಕ್ಕಿ ಮತ್ತು ಪಾರಿವಾಳಗಳು ಬಹುತೇಕ ವಿರಳವಾಗುತ್ತಿವೆ. ಗೋಸುಂಬೆ, ಚೇಳು, ಚಿಪ್ಪುಹಂದಿ, ನಾಗರಹಾವು, ಮಂಡಲದಹಾವು ಮೊದಲಾದ ಪ್ರಾಣಿಗಳನ್ನು ಕಾಣಬಹುದು.


ಅಚ್ಚಕಪ್ಪಿನ, ಸಾಧಾರಣ ಕಪ್ಪಿನ, ಕೆಂಪುಮರಳು ಮಿಶ್ರಿತ ಜೇಡಿಯ, ಜಂಬಿನ ಮತ್ತು ಮೆಕ್ಕಲಿನ ಮಣ್ಣುಗಳು ಜಿಲ್ಲೆಯಲ್ಲಿವೆ. ಒಳಬೇಸಾಯಕ್ಕೆ ಸಹಾಯಕವಾದ ಕಪ್ಪುಮಣ್ಣು ಗುಲ್ಬರ್ಗ, ಜೇವರ್ಗಿ, ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ತಾಲ್ಲೂಕುಗಳಲ್ಲಿ ಕಾಣಬಹುದು. ಕೆಲವು ಕಡೆಗಳಲ್ಲಿ ಕಪ್ಪು ಮತ್ತು ಕೆಂಪು ಮಣ್ಣುಗಳು ಮಿಶ್ರಿತವಾಗಿವೆ. ಎತ್ತರದ ಪ್ರದೇಶಗಳಲ್ಲಿ ಕೆಂಪು ಮಣ್ಣು ಸಾಧಾರಣ. ಬಾವಿ ಮತ್ತು ಹೊಳೆಗಳ ನೀರಾವರಿ ಸೌಲಭ್ಯವಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಗುಲ್ಬರ್ಗ ಜಿಲ್ಲೆಗೂ ಪ್ರಯೋಜನವಾಗುತ್ತಿದೆ. ಚಂದ್ರಂಪಳ್ಳಿ, ಭೀಮಾನದಿ, ಅಮರಜ, ಬೆಣ್ಣೆತೊರೆ, ಮುಲ್ಲಾಮಾರಿ, ಮುಧೋಳ, ಕಾಗಿಣಾ, ಇಂದನಕಲ್ ಇವು ಜಿಲ್ಲೆಯಲ್ಲಿ ಕಾರ್ಯಗತವಾಗಲಿರುವ, ಆಗುತ್ತಿರುವ ಕೆಲವು ನೀರಾವರಿ ಯೋಜನೆಗಳು. ಜಿಲ್ಲೆಯಲ್ಲಿ ಜೋಳ, ತೊಗರಿ, ಸೇಂಗಾ (ಕಡಲೆಕಾಯಿ), ಬತ್ತ, ಹತ್ತಿ, ಗೋದಿ ಮತ್ತು ದ್ವಿದಳ ಧಾನ್ಯಗಳನ್ನೂ ಬೆಳೆಯಲಾಗುತ್ತಿದೆ. ಈ ಮುಖ್ಯ ಬೆಳೆಗಳ ಜೊತೆಗೆ ಜಿಲ್ಲೆಯಲ್ಲಿ ಬಾರ್ಲಿ, ಮುಸುಕಿನ ಜೋಳ, ರಾಗಿ, ಹೆಸರು, ತೊಗರಿ, ಕಬ್ಬು, ಹರಳು, ಎಳ್ಳು, ಮೆಣಸಿನಕಾಯಿ, ಈರುಳ್ಳಿ ಮುಂತಾದುವನ್ನು ಬೆಳೆಯುತ್ತಾರೆ.


ಒಳನಾಡಿನಲ್ಲಿ ಮೀನು ಸಾಕುವ ಹಾಗೂ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗದ ಕೆರೆಗಳಲ್ಲಿ ಮೀನುಗಳನ್ನು ಅಭೀವೃದ್ಧಿ ಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪಶುಪಾಲನೆಯೂ ವ್ಯವಸಾಯದ ಒಂದು ಅಂಗವಾಗಿ ಮುಂದುವರಿಯುತ್ತಿದೆ. ಜಿಲ್ಲೆಯಲ್ಲಿ ಬಹಳ ಜನ ಬೇಸಾಯವನ್ನು ಅವಲಂಬಿಸಿದ್ದಾರೆ. ಗೃಹೋದ್ಯೋಗಗಳಲ್ಲಿ ನೇಕಾರಿಕೆ ಮುಖ್ಯ. ಹಿತ್ತಾಳೆ ಪಾತ್ರೆ, ಸೀಗೆ, ಮಸಾಲೆ, ಗಂಧದೆಣ್ಣೆ, ಬೀಡಿ ಕಟ್ಟುವುದು- ಇವು ಇಲ್ಲಿಯ ಕೆಲವು ಹಳೆಯ ಕೈಗಾರಿಕೆಗಳು. ವಿದ್ಯುತ್ತಿನ ಬಳಕೆ ಹೆಚ್ಚಿದಂತೆ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಬೆಳೆದುಬಂದಿವೆ. ಅನೇಕ ಸಣ್ಣ ಪ್ರಮಾಣದ ಆಧುನಿಕ ಕೈಗಾರಿಕೆಗಳು ಜಿಲ್ಲೆಯ ನಗರಗಳಲ್ಲಿ ಹರಡಿ ವಿಸ್ತರಿಸುತ್ತಿವೆ. ಅವುಗಳಲ್ಲದೆ ವ್ಯವಸಾಯ ಮತ್ತು ಗೃಹೋಪಕರಣಗಳ ಉತ್ಪಾದನೆಯ ಘಟಕಗಳು ಇವೆ. ಮರದ ಪೀಠೋಪಕರಣಗಳ, ಮರ ಕೊಯ್ಯುವ ಕಾರ್ಖಾನೆ, ಚರ್ಮ ಹದ ಮಾಡುವುದು, ಚರ್ಮದ ಪಾದರಕ್ಷೆ, ಚೀಲ ಮುಂತಾದವುಗಳ ತಯಾರಿಕೆಯು ಇಲ್ಲಿದೆ. ಜಿಲ್ಲೆಯಲ್ಲಿ 129ಕಾರ್ಖಾನೆಗಳು,11 ಕೈಗಾರಿಕಾ ಪ್ರದೇಶಗಳು,140 ಕೈಗಾರಿಕಾ ಶೆಡ್ಡುಗಳು ಇವೆ. ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ತರಬೇತಿ ಕೇಂದ್ರಗಳಿದ್ದು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ಮಾಡುತ್ತಿವೆ. ಗುಲ್ಬರ್ಗ, ಸೇಡಂ, ಚಿತ್ತಾಪುರ ಮತ್ತು ಸಯ್ದಾಪುರಗಳಲ್ಲಿ ನಿಯಂತ್ರಿತ ಮಾರುಕಟ್ಟೆಗಳಿವೆ. ಜಿಲ್ಲೆಯಲ್ಲಿ ಅನೇಕ ಬ್ಯಾಂಕುಗಳಿದ್ದು ವಾಣಿಜ್ಯೋದ್ಯಮಿಗಳಿಗೆ ಆರ್ಥಿಕ ನೆರವು ದೊರೆಯುತ್ತಿವೆ. ಶಾಹಬಾದಿನ ಸಿಮೆಂಟ್ ಕಾರ್ಖಾನೆ, ಗುಲ್ಬರ್ಗದ ಜವಳಿ ಗಿರಣಿ, ಎಣ್ಣೆ ಗಿರಣಿ - ಇವು ಕೆಲವು ದೊಡ್ಡಕೈಗಾರಿಕೆಗಳು. ಇವಲ್ಲದೆ ಸಣ್ಣ ಗಾತ್ರದ ಅನೇಕ ಆಧುನಿಕ ಉದ್ಯಮಗಳಿವೆ.


ಗುಲ್ಬರ್ಗ ಜಿಲ್ಲೆಯಲ್ಲಿ ಎರಡು ಬ್ರಾಡ್ಗೇಜ್ ರೈಲು ಮಾರ್ಗಗಳಿವೆ. ಗುಲ್ಬರ್ಗ ನಗರದ ಮೂಲಕ ಹಾದುಹೋಗುವ ಮುಂಬಯಿ- ರಾಯಚೂರು ಮಾರ್ಗವೊಂದು; ವಾಡಿಯಿಂದ ಸಿಕಂದರಾಬಾದಿಗೆ ಇನ್ನೊಂದು. ಯಾದಗಿರಿ, ವಾಡಿ, ಶಾಹಬಾದ, ಗುಲ್ಬರ್ಗ ಮುಖ್ಯ ನಿಲ್ದಾಣಗಳು. ವಾಡಿ-ಸಿಕಂದರಾಬಾದ್ ಮಾರ್ಗದಲ್ಲಿ ವಾಡಿ, ಚಿತ್ತಾಪುರ, ಮಳಖೇಡ ರೋಡ್, ಸೇಡಂ- ಇವು ಮುಖ್ಯ ನಿಲ್ದಾಣಗಳು. ಹುಮನಾಬಾದ್-ಗುಲ್ಬರ್ಗ, ಗುಲ್ಬರ್ಗ-ಶಾಹಪುರ, ಜೇವರ್ಗಿ- ಜೆರಟ್ಗಿ, ಖಾನಾಪುರ- ಲಿಂಗಸುಗೂರು, ಶಾಹಪುರ- ಹತ್ತಿಗುಡೂರ್, ಗುಲ್ಬರ್ಗ-ಕೋಡಂಗಲ್, ಗುಲ್ಬರ್ಗ-ಅಳಂದ, ಅಳಂದ- ವಾಗ್ಧಾರಿ ರಸ್ತೆಗಳು ರಾಜ್ಯ ಹೆದ್ದಾರಿಗಳು. ಇವಲ್ಲದೆ ಜಿಲ್ಲಾ ಮತ್ತು ಗ್ರಾಮಾಂತರ ರಸ್ತೆಗಳೂ ಇವೆ.


ಗುಲ್ಬರ್ಗ ಜಿಲ್ಲೆ 9ನೆಯ ಶತಮಾನದಲ್ಲಿ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಜಿಲ್ಲೆಯಲ್ಲಿ ಸೇಡಂ ತಾಲ್ಲೂಕಿನಲ್ಲಿರುವ ಮಳಖೇಡ ರಾಷ್ಟ್ರಕೂಟ ಅರಸರ ರಾಜಧಾನಿಯಾಗಿದ್ದು ಮಾನ್ಯಖೇಟವೆಂದು ಪ್ರಸಿದ್ಧಿ ಹೊಂದಿತ್ತು. ಕಲ್ಯಾಣದ ಚಾಳುಕ್ಯರು ಹತ್ತನೆಯ ಶತಮಾನದ ಅಂತ್ಯಭಾಗದಿಂದ ಆಳತೊಡಗಿದಾಗ ಅವರು ತಮ್ಮ ರಾಜಧಾನಿಯನ್ನು ಜಿಲ್ಲೆಯ ಕಲ್ಯಾಣಕ್ಕೆ ಬದಲಾಯಿಸಿಕೊಂಡರು. 11-12ನೆಯ ಶತಮಾನಗಳ ಶಾಸನಗಳಲ್ಲಿ ಗುಲ್ಬರ್ಗ ಕಲುಂಬರಗಿ, ಕಲುಂಬರಗ ಎಂಬ ಹೆಸರುಗಳಲ್ಲಿ ಖ್ಯಾತಿ ಹೊಂದಿತ್ತು. ಅಳಂದ ತಾಲ್ಲೂಕು ಮತ್ತು ಪರಿಸರದ ಪ್ರದೇಶಗಳು ಅಂದು ಅಳಂದೆ ಸಾಸಿರವೆಂಬ ಪ್ರಾಂತ್ಯದಲ್ಲಿ ಸೇರಿದ್ದುವು. ಕಲ್ಯಾಣದ ಚಾಳುಕ್ಯರ ಅದಿsೕನರಾಗಿ ಬಾಣ ವಂಶಕ್ಕೆ ಸೇರಿದ ಗೊಂಕರಸ ಮುಂತಾದ ಹಲವಾರು ಸಣ್ಣ ಮಂಡಲದ ಅಧಿಪತಿಗಳು ಚಿತ್ತಾಪುರ ತಾಲ್ಲೂಕಿನ ಪರಿಸರದಲ್ಲಿ ಆಳುತ್ತಿದ್ದರೆಂದು ಇತ್ತೀಚಿನ ಶಾಸನಗಳಿಂದ ತಿಳಿದುಬಂದಿದೆ. ಮಹಮ್ಮದ್ ಬಿನ್ ತುಗಲಕ್ ದೆಹಲಿಯ ಸುಲ್ತಾನನಾಗಿದ್ದಾಗ ದಕ್ಷಿಣಕ್ಕೆ ದಂಡಯಾತ್ರೆ ಮಾಡಿ ವಾರಂಗಲಿನಲ್ಲಿ ಆಳಿದ ಕಾಕತೀಯರನ್ನು ಸೋಲಿಸಿ ಅವರ ರಾಜ್ಯವನ್ನು ಗೆದ್ದುಕೊಂಡಾಗ ಗುಲ್ಬರ್ಗ ಸಹ ಸುಲ್ತಾನರ ಅಧಿನಕ್ಕೆ ಒಳಪಟ್ಟಿತು. ಇದು 13ನೆಯ ಶತಮಾನದ ಅಂತ್ಯದಿಂದ 45 ವರ್ಷಗಳ ಕಾಲ ಇತ್ತು. ಆದರೆ ಅಲಾಉದ್ದೀನ್ ಹಸನ್ ಗಂಗು ಬಹಮನ್ ಷಾ 1347ರಲ್ಲಿ ಬಹಮನೀ ರಾಜ್ಯವನ್ನು ಸ್ಥಾಪಿಸಿದಾಗ ಗುಲ್ಬರ್ಗ ಅವನ ರಾಜಧಾನಿಯಾಯಿತು. 1424ರವರೆಗೂ ರಾಜಧಾನಿಯಾಗಿ ಇದು ಮೆರೆಯಿತು. ಬಹಮನೀ ರಾಜ್ಯ ಐದು ಭಾಗಗಳಾಗಿ ಒಡೆದಾಗ ಇದರ ಸ್ವಲ್ಪಭಾಗ ಬಿದರೆಯ ಬರೀದ್ ಶಾಹೀ ಸುಲ್ತಾನರ ಅಧೀನದಲ್ಲೂ ಸ್ವಲ್ಪ ಭಾಗ ಬಿಜಾಪುರದ ಆದಿಲ್ಶಾಹೀ ಸುಲ್ತಾನರ ಅಧೀನದಲ್ಲೂ ಇತ್ತು.


ಔರಂಗಜೇಬ್ ದಕ್ಷಿಣದ ದಂಡಯಾತ್ರೆ ಕೈಗೊಂಡಾಗ ಗುಲ್ಬರ್ಗ ಅವನ ಕೈವಶವಾಯಿತು. ಔರಂಗಜೇಬನ ಮರಣಾನಂತರ ಮೊಗಲ್ ಸಾಮ್ರಾಜ್ಯದಲ್ಲಿ ಅಂತಃಕಲಹಗಳು ಸಂಭವಿಸಿದಾಗ ಅಲ್ಲಿಯ ರಾಜಕೀಯದಲ್ಲಿ ಬೇಸತ್ತ ಸುಬೇದಾರ ಆಸಫ್ ಜಾ ದಕ್ಷಿಣದ ಪ್ರಾಂತ್ಯಾಧಿಪತಿಯಾಗಿ ಬಂದು ಇಲ್ಲಿ ಸ್ವತಂತ್ರನಾದ. ಇದು ಹೈದರಾಬಾದಿನ ನಿಜಾಂ ವಂಶದ ನಾಂದಿಯಾಯಿತು. ಆ ಸಮಯದಲ್ಲಿ ಸುರಪುರ, ಶಾಹಾಪುರ, ಜೇವರಗಿ ತಾಲ್ಲೂಕುಗಳ ಭಾಗ ಸುರಪುರದ ನಾಯಕರ ಆಡಳಿತದಲ್ಲಿ ಸ್ವತಂತ್ರವಾದ ಸಂಸ್ಥಾನವಾಯಿತು. ಗುಲ್ಬರ್ಗದ ಇತರ ಭಾಗಗಳು ನಿಜಾಂ ರಾಜ್ಯಕ್ಕೆ ಸೇರಿದುವು. 1707-1857ರ ವರೆಗೆ ಸ್ವತಂತ್ರವಾಗಿ ಸುರಪುರದಲ್ಲಿ ಆಳಿದ ಬೇಡರ ಮನೆತನದ ರಾಜಾ ವೆಂಕಟಪ್ಪನಾಯಕ 1857ರ ಕ್ರಾಂತಿಯಲ್ಲಿ ಭಾಗವಹಿಸಿದ. ಬ್ರಿಟಿಷರು ಅವನನ್ನು ದಮನಮಾಡಿ ಅವನಿಂದ ಕಸಿದುಕೊಂಡ ರಾಜ್ಯವನ್ನು ನಿಜಾಮನಿಗೆ ವಹಿಸಿಕೊಟ್ಟರು.


ನಿಜಾಮರ ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದ ಸಾಲಾರ್ ಜಂಗ್ ಕೈಗೊಂಡ ಆಡಳಿತ ಸುಧಾರಣೆಗಳಲ್ಲಿ ಸಂಸ್ಥಾನದಲ್ಲಿ ಹಲವಾರು ಜಿಲ್ಲೆಗಳು ಅಸ್ತಿತ್ವಕ್ಕೆ ಬಂದುವು. ಆ ಸಂದರ್ಭದಲ್ಲಿ ಗುಲ್ಬರ್ಗ ಸುರಪುರ ಜಿಲ್ಲೆಯ ಒಂದು ಭಾಗವಾಯಿತು. ಗುಲ್ಬರ್ಗವನ್ನು ಒಂದು ಪ್ರತ್ಯೇಕವಾದ ಜಿಲ್ಲೆಯಾಗಿ ಪರಿವರ್ತಿಸಿದ್ದು 1873ರಲ್ಲಿ. ಅಂದಿನಿಂದ ಆ ಜಿಲ್ಲೆಗೆ ಸಂಬಂದಿsಸಿದಂತೆ ಅನೇಕ ಬದಲಾವಣೆಗಳಾದುವು. 1956ರಲ್ಲಿ ಕೋಡಂಗಲ್ ಮತ್ತು ತಾಂಡೂರ್ ತಾಲ್ಲೂಕುಗಳು ಆಂಧ್ರಪ್ರದೇಶಕ್ಕೆ ಸೇರಿದುವು. ಉಳಿದ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು.


ಗುಲ್ಬರ್ಗ ಜಿಲ್ಲೆಯ ಮಳಖೇಡ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಕವಿರಾಜಮಾರ್ಗದ ಕರ್ತೃ ಇಲ್ಲಿಯವನು. ಕವಿ ಪೊನ್ನ, ವಚನಕಾರ ದೇವರ ದಾಸಿಮಯ್ಯ ಇವರೂ ಈ ಜಿಲ್ಲೆಯವರು. ದ್ವೈತಮತಸ್ಥಾಪಕರಾದ ಮಧ್ವಾಚಾರ್ಯರ ನಾಲ್ವರು ಪ್ರಮುಖ ಶಿಷ್ಯರ ಪೈಕಿ ಒಬ್ಬರಾದ ಅಕ್ಷೋಭ್ಯತೀರ್ಥರ ಶಿಷ್ಯರಾದ ಜಯತೀರ್ಥರು ಮಳಖೇಡದಲ್ಲಿ ನೆಲಸಿದ್ದರು. ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆಗಳನ್ನು ಬರೆದು ಟೀಕಾಚಾರ್ಯರೆಂದು ಪ್ರಸಿದ್ಧರಾಗಿರುವ ಇವರ ಬೃಂದಾವನ ಇಲ್ಲಿದೆ. ಮಹಾಪುರಾಣ, ನಯಕುಮಾರಚರಿತ ಮುಂತಾದ ಅಪಭ್ರಂಶ ಕಾವ್ಯಗಳ ಕರ್ತೃವಾದ ಪುಷ್ಪದಂತ ಕವಿಗೂ ಇದು ನೆಲೆವೀಡಾಗಿತ್ತು.


ಈ ಜಿಲ್ಲೆಯಲ್ಲಿ ಪುರಾತತ್ತ್ವ ಅವಶೇಷಗಳು ವಿಪುಲವಾಗಿವೆ. ಮಧ್ಯ ಹಳೆಶಿಲಾಯುಗದ ಅನೇಕ ನೆಲೆಗಳು ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಮತ್ತು ಸೇಡಂ ತಾಲ್ಲೂಕಿನ ಮಳಖೇಡ ಈ ಸ್ಥಳಗಳಲ್ಲೂ ಈ ರೀತಿಯ ಕೆಲವು ಉಪಕರಣಗಳು ದೊರೆತಿವೆ. ಈ ಘಟ್ಟದ ಉಪಕರಣಗಳು ನದಿದಡದಲ್ಲಿರುವ ಪ್ರಾಕ್ಕಾಲೀನ ಹರಹುಗಳಲ್ಲಿ ಮಧ್ಯಶಿಲಾ ಮತ್ತು ಅಂತ್ಯ ಹಳೆಶಿಲಾಯುಗದ ಉಪಕರಣಗಳು ದೊರಕುವ ಸ್ತರಗಳ ನಡುವಣ ಸ್ತರಗಳಲ್ಲಿ ದೊರಕಿವೆ. ಸೂಕ್ಷ್ಮಶಿಲಾಯುಗದ ಅನೇಕ ನೆಲೆಗಳು ಈ ಜಿಲ್ಲೆಯ ಅಳಂದ ತಾಲ್ಲೂಕಿನ ಜವಳಿ, ಶಾಖಾಪುರ, ಇಕ್ಕಳ್ಕಿ ಮುಂತಾದ ಗ್ರಾಮಗಳ ಬಳಿ ದೊರಕಿವೆ. ನವಶಿಲಾಯುಗದ ಸಂಸ್ಕೃತಿ ಕೂಡ ಗುಲ್ಬರ್ಗ ಜಿಲ್ಲೆಯಲ್ಲಿ ಹರಡಿತ್ತು. ಇಲ್ಲಿಯ ನವಶಿಲಾಯುಗ ಸಂಸ್ಕೃತಿ ಪ್ರ.ಶ.ಪೂ. 2500ರ ಸುಮಾರಿನಲ್ಲೇ ಪ್ರಚಲಿತವಾಗಿತ್ತೆಂದು ತಿಳಿದುಬಂದಿದೆ. ಈ ಘಟ್ಟದ ಜನ ವ್ಯವಸಾಯ ಮತ್ತು ಪಶುಪಾಲನೆಗಳನ್ನು ಸಾದಿsಸಿದ್ದರೂ ಸಾರಂಗ, ಜಿಂಕೆ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರೆಂದು ಆಗ ಮೀನುಗಾರಿಕೆ ಸಾಮಾನ್ಯವಾಗಿತ್ತೆಂದೂ ಗೊತ್ತಾಗಿದೆ. ಕೋಡೆಕಲ್ಲು ಅಲ್ಲದೆ ಮುಳ್ಳೂರು, ತೀರ್ಥ, ಕಕ್ಕೇರಿ, ಬೆನಕನಹಳ್ಳಿ ಮುಂತಾದೆಡೆಗಳಲ್ಲೂ ಸಮಕಾಲೀನ ಬೂದಿಯ ರಾಶಿಗಳಿವೆ. ಇವಲ್ಲದೆ ಆ ಕಾಲದ ಜನ ನೆಲೆಸಿದ್ದ ಕೆಲವು ನೆಲೆಗಳು ಕೂಡ ಬೀರನೂರು, ಕನ್ನೆಕೋಳೂರು, ಬೂದನಾಳು ಮುಂತಾದೆಡೆ ಬೆಳಕಿಗೆ ಬಂದಿವೆ. ಹಾವಿನಮೆಟ್ಟಿ, ಕಿರದಹಳ್ಳಿ, ಮಂಗಳೂರು, ಮಾಕನಗವಿ ಮುಂತಾದೆಡೆಗಳಲ್ಲಿ ಪ್ರಾಚೀನ ಕಾಲದಲ್ಲಿ ಚಿನ್ನದ ಗಣಿಗಳಿದ್ದ ಕುರುಹುಗಳಿವೆ. ಆದರೆ ಇವು ಯಾವ ಕಾಲದವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಗುಲ್ಬರ್ಗ ಜಿಲ್ಲೆ ಅಲ್ಲಿಯ ಕಬ್ಬಿಣಯುಗದ ಬೃಹತ್ ಶಿಲಾಸಮಾದಿಗಳ ಸಂಸ್ಕೃತಿಯ ಅವಶೇಷಗಳಿಗೆ ಹಿಂದಿನಿಂದಲೂ ಪ್ರಸಿದ್ಧವಾಗಿದೆ. ಜೇವರಗಿ ತಾಲ್ಲೂಕಿನಲ್ಲಿ ಹಗರಟಗಿ, ರಾಜನಕೋಳೂರು, ಚಿಕ್ಕನಹಳ್ಳಿ, ವಿಭೂತಿಹಳ್ಳಿ, ಇಜೇರಿ, ಕೊಲ್ಲೂರು, ಜೇವರಗಿ ಮುಂತಾದೆಡೆಗಳಲ್ಲಿ ಈ ಸಂಪ್ರದಾಯದ ಅನೇಕ ಸಮಾಧಿಗಳನ್ನು ಗುರುತಿಸಲಾಗಿದೆ. ಅವಶೇಷಗಳನ್ನು ಹೂತಿರುವ ಅಥವಾ ಅವಶೇಷಗಳನ್ನು ಜಾಡಿಗಳಲ್ಲಿ ಶೇಖರಿಸಿ ಹೂತಿರುವ ಗುಣಿಗಳ ಸುತ್ತ ರಚಿಸಿದ ಶಿಲಾ ವರ್ತುಲಗಳು ಅಥವಾ ತೊಟ್ಟಿಗಳು ಕಂಡು ಬಂದಿವೆ. ಜೇವರಗಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಹಲವೆಡೆ ದೊಡ್ಡ ಕಲ್ಲುಗಳನ್ನು ಅನೇಕ ಸಮಾನಾಂತರ ಸಾಲುಗಳಲ್ಲಿ ನೆಟ್ಟಿರುವುದು ಕಂಡುಬಂದಿದೆ. ಪ್ರಾಚೀನ ಕಾಲದ ಈ ಶಿಲಾ ಸಾಲುಗಳು ಶವಸಂಸ್ಕಾರ ವಿಧಿಗೆ ಸಂಬಂಧಿಸಿದ್ದೋ ಅಲ್ಲವೋ ಹೇಳುವುದು ಕಷ್ಟ.


ಉತ್ತರ ಭಾರತದಲ್ಲಿ ಪ್ರಚಲಿತ ಶಕ ಪೂರ್ವದ ಕೊನೆಯ ಸಹಸ್ರಮಾನದ ಉತ್ತರಾರ್ಧದಲ್ಲಿ ಪ್ರಚಲಿತವಿದ್ದ ಔತ್ತರೇಯ ಕಪ್ಪು ಹೊಳಪಿನ ಮಡಕೆ ಚೂರು ಅಳಂದ ತಾಲ್ಲೂಕಿನಲ್ಲಿ ಕಂಡುಬಂದಿವೆ. ಅಲ್ಲದೆ 1940ರ ಸುಮಾರಿನಲ್ಲಿ ಗುಲ್ಬರ್ಗ ತಾಲ್ಲೂಕಿನ ಹೆಬ್ಬಾಳ ಗ್ರಾಮದಿಂದ 225 ಬೆಳ್ಳಿಯ ಒತ್ತು ಮುದ್ರೆಯ ನಾಣ್ಯಗಳು ದೊರಕಿದುವು. ನಾಣ್ಯಗಳು ಮತ್ತು ಔತ್ತರೇಯ ಹೊಳಪಿನ ಮಡಕೆ ಚೂರುಗಳು ಗುಲ್ಬರ್ಗ ಜಿಲ್ಲೆ ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದ ಕಾಲದಲ್ಲಿ ಬಂದವುಗಳಾಗಿರಬೇಕು.


ಮೌರ್ಯ ಮತ್ತು ಸಾತವಾಹನ ಕಾಲಕ್ಕೆ ಸಂಬಂಧಿಸಿದ ಕೆಲವು ನೆಲೆಗಳು ಅಳಂದ ಮತ್ತು ಚಿತ್ತಾಪುರ ತಾಲ್ಲೂಕುಗಳಲ್ಲಿವೆ. ಚಿತ್ತಾಪುರ ತಾಲ್ಲೂಕಿನ ಭೀಮಾನದಿಯ ಎಡದಂಡೆಯಲ್ಲಿರುವ ಸನ್ನತಿ ಇವುಗಳ ಪೈಕಿ ಪ್ರಸಿದ್ಧವಾದ್ದು. ಸನ್ನತಿ ಒಂದು ಬೌದ್ಧ ಕೇಂದ್ರವೂ ಪ್ರಾಯಶಃ ಸ್ಥಳೀಯ ಮಾಂಡಲಿಕನೊಬ್ಬನ ರಾಜಧಾನಿಯೂ ಆಗಿದ್ದಂತೆ ತೋರುತ್ತದೆ. ಸನ್ನತಿಯ ಕನಗನ ಹಳ್ಳಿಯ ಬೌದ್ಧ ಸ್ತೂಪದ ಅವಶೇಷಗಳಲ್ಲಿ ಅಶೋಕನ ಶಾಸನ ಇರುವ ಚಿತ್ರಣ ಫಲಕ ವಿಶಿಷ್ಟವಾದುದು. ಸನ್ನತಿಯಲ್ಲಿ ದೊರಕಿರುವ ಅಶೋಕನ ಶಾಸನಗಳು ಈ ಜಿಲ್ಲೆಯಲ್ಲಿ ಇದುವರೆಗೆ ದೊರಕಿರುವ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದುವು. ಸಾತವಾಹನರ ಕಾಲದ ಶಾಸನಗಳೂ ದೊರೆತಿವೆ.


ಚಿತ್ತಾಪುರ ತಾಲ್ಲೂಕಿನ ನಾಗಾಯಿ ಹಿಂದು, ಜೈನ ಮತ್ತು ಇಸ್ಲಾಂ ಸಂಸ್ಕೃತಿಗಳಿಗೆ ಸಂಬಂದಿsಸಿದ ವಸ್ತು ಅವಶೇಷಗಳಿಗೆ ಪ್ರಸಿದ್ಧವಾಗಿದೆ ನಾಗಾಯಿ.


ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿ ಬಾದಾಮಿ ಚಳುಕ್ಯರ ಕಾಲದ ಒಂದು ಶಾಸನ ದೊರಕಿದೆ. ಇದರಲ್ಲಿ ಚಳುಕ್ಯ ರಾಜವಂಶದ ಕೊನೆಗಾಲ ಅಥವಾ ಅನಂತರದ ಸಂಧಿಕಾಲದಲ್ಲಿದ್ದ ಕೆಲವು ತದ್ವಂಶೀಯರ ಹೆಸರುಗಳಿವೆ. ಕಲ್ಯಾಣದ ಚಾಳುಕ್ಯರ, ಕಳಚುರಿಗಳ ಮತ್ತು ದೇವಗಿರಿ ಯಾದವರ ಕಾಲದ ಸುಮಾರು ಇನ್ನೂರಕ್ಕೂ ಹೆಚ್ಚಿನ ಶಾಸನಗಳು ಬೆಳಕಿಗೆ ಬಂದಿವೆ. ಈ ಕಾಲದ ಅನೇಕ ದೇವಾಲಯಗಳು ನಾಗಾಯಿ, ಮಳಖೇಡ, ಕಾಳಗಿ, ನಿಂಬರ್ಗಿ, ಚಿಂಚಹನಸೂರು, ಪಡಸಾವಳಿ ಮುಂತಾದೆಡೆಗಳಲ್ಲಿವೆ. ಇವೆಲ್ಲ ಸಮಕಾಲೀನ ಚಾಳುಕ್ಯ ಶೈಲಿಯಲ್ಲಿ ಉತ್ತಮ ರಚನಾವಿನ್ಯಾಸದೊಡನೆ ಕಡೆದ ಹೊಳಪಿನ ದುಂಡುಕಂಬಗಳಿಂದ ಕೂಡಿದ್ದು ಸುಂದರ ಶಿಲ್ಪಗಳಿಂದ ಅಲಂಕೃತವಾಗಿರುವ ಕಟ್ಟಡಗಳು.


ಬಹಮನೀಯರ ರಾಜಧಾನಿಯಾಗಿದ್ದ ಗುಲ್ಬರ್ಗ ನಗರವಲ್ಲದೆ ಈ ಜಿಲ್ಲೆಯ ಇತರ ಭಾಗಗಳಲ್ಲೂ ಇಸ್ಲಾಮೀ ವಾಸ್ತುಶೈಲಿಯ ಅನೇಕ ಕಟ್ಟಡಗಳಿವೆ. ಇವುಗಳಲ್ಲಿ ಪಿsರೋಜಾಬಾದ್, ಚಿಂಚೋಳಿ ಮತ್ತು ಚಿತ್ತಾಪುರ ಕೋಟೆಗಳನ್ನು ಹೆಸರಿಸಬಹುದು. ಪಿsರೋಜಾಬಾದಿನಲ್ಲಿ 1406ರಲ್ಲಿ ಕಟ್ಟಿದ ಒಂದು ಮಸೀದಿಯಿದೆ. ಸುಲ್ತಾನಾ ಫಾತಿಮಾ ಎಂಬವಳು ಗೋಗಿ ಗ್ರಾಮದ ಕಾಲಿ ಮಸೀದಿಯನ್ನು ಕಟ್ಟಿಸಿದಳು (ಸು.1500). ಇದು ಒಂದು ಸುಂದರ ಕಟ್ಟಡ. ಈ ಮಸೀದಿಯ ಬಳಿಯಲ್ಲಿ ಕೆಲವು ಆದಿಲ್ಶಾಹೀ ಅರಸರ ಸಮಾದಿsಗಳುಂಟು. ಚಂಚೋಳಿಯಲ್ಲಿ ಪೋರ್ಚ್ಗೀಸರು ಒಂದು ಚರ್ಚ್ ಕಟ್ಟಿಸಿದರೆಂದು ಹೇಳಲಾಗಿದೆ. ಆದರೆ ಈಗ ಇರುವ ಚರ್ಚ್ನವೀಕೃತವಾಗಿದೆ.


ಮುಸ್ಲಿಂ ಅರಸರ ಕಾಲದ ಅನೇಕ ಪಾರಸೀ ಮತ್ತು ಅರಬ್ಬೀ ಶಾಸನಗಳು ಗುಲ್ಬರ್ಗ ಜಿಲ್ಲೆಯಲ್ಲಿವೆ. ಇವುಗಳಲ್ಲಿ ಗುಲ್ಬರ್ಗ ಕೋಟೆಯಲ್ಲಿ ದೊಡ್ಡ ಮಸೀದಿಯಲ್ಲಿರುವ ರಫಿಯ ಶಾಸನ, ಚಿಂಚೋಳಿಯಲ್ಲಿ ನಸ್ತಾಲಿಕ್ ಲಿಪಿಯಲ್ಲಿರುವ ಶಾಸನ, ಅಳಂದಿನಲ್ಲಿರುವ ಫರ್ಹಾದ್ ಖಾನನ ಶಾಸನ (1656-57), ಮಳಖೇಡದ ಅರಬ್ಬೀ ಶಾಸನ (1469-70) ಉಲ್ಲೇಖಾರ್ಹವಾದವು. ಈ ಕಾಲದ ಬಹಮನೀ, ಆದಿಲ್ಶಾಹೀ, ಕುತುಬ್ಶಾಹೀ, ಮೊಗಲ್ ಮತ್ತು ನಿಜಾಮ್ ಶಾಹಿ ಅರಸರ ನಾಣ್ಯಗಳು ಗುಲ್ಬರ್ಗ ಜಿಲ್ಲೆಯಲ್ಲಿ ದೊರಕಿವೆ.


ತಾಲ್ಲೂಕು: ಜಿಲ್ಲೆಯ ಮಧ್ಯ ಮತ್ತು ಉತ್ತರ ಭಾಗದಲ್ಲಿರುವ ಈ ತಾಲ್ಲೂಕನ್ನು ಪೂರ್ವದಲ್ಲಿ ಚಿಂಚೋಳಿ, ಚಿತ್ತಾಪುರ ತಾಲ್ಲೂಕುಗಳೂ ದಕ್ಷಿಣದಲ್ಲಿ ಜೇವರಗಿ, ಪಶ್ಚಿಮದಲ್ಲಿ ಅಳಂದ ಮತ್ತು ಅಫಜಲಪುರ ತಾಲ್ಲೂಕುಗಳೂ ಉತ್ತರದಲ್ಲಿ ಬೀದರ್ ಜಿಲ್ಲೆಯೂ ಸುತ್ತುವರೆದಿವೆ. ಈ ತಾಲ್ಲೂಕಿನ ದಕ್ಷಿಣದಲ್ಲಿ ಹರಿಯುವ ಭೀಮಾ ನದಿ ಈ ತಾಲ್ಲೂಕನ್ನು ಜೇವರಗಿ ತಾಲ್ಲೂಕಿನಿಂದ ಬೇರ್ಪಡಿಸಿದೆ. ಔರಾದ, ಗುಲ್ಬರ್ಗ, ಕಮಲಾಪುರ, ಮಹಗಾಂವ್, ಪರ್ವತಾಬಾದ್ ಮತ್ತು ಪಟ್ಟಣ ಈ ಆರು ಹೋಬಳಿಗಳೂ 144 ಗ್ರಾಮಗಳೂ ಇವೆ. ಈ ತಾಲ್ಲೂಕಿನ ವಿಸ್ತೀರ್ಣ 1,731.6ಚ.ಕಿಮೀ. ಜನಸಂಖ್ಯೆ 4,26,398 (2011). ತಾಲ್ಲೂಕಿನ ಹೆಚ್ಚು ಭಾಗ ಬೂದು ಮತ್ತು ಕಪ್ಪುಮಿಶ್ರಿತ ಅಥವಾ ಆಳವಾದ ಕಪ್ಪುಮಣ್ಣು ಇರುವ ಮಟ್ಟಸ ಪ್ರದೇಶ. ಹೆಚ್ಚಿನ ಬೆಟ್ಟಗಳಾಗಲಿ ಏರುತಗ್ಗುಗಳಾಗಲೀ ಇಲ್ಲ. ಕೆಲವು ಭಾಗಗಳಲ್ಲಿ ಮರಳು ಮಿಶ್ರಿತ ಕೆಂಪುಮಣ್ಣಿನ ಭೂಮಿ ಕಂಡುಬರುತ್ತದೆ. ತಾಲ್ಲೂಕಿನ ಸರಾಸರಿ ವಾರ್ಷಿಕ ಮಳೆ 753.30ಮಿಮೀ. ತಾಲ್ಲೂಕಿನಲ್ಲಿ ಜೋಳ, ಸೇಂಗಾ, ಸಜ್ಜೆ, ಗೋದಿ, ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಯುತ್ತಾರೆ. ವ್ಯವಸಾಯದ ಜೊತೆಗೆ ಪಶುಪಾಲನೆಯೂ ಇದ್ದು ಅವುಗಳ ರಕ್ಷಣೆಗೆ ಸರ್ಕಾರಿ ಪಶುವೈದ್ಯಾಲಯಗಳಿವೆ.


ತಾಲ್ಲೂಕಿಗೆ ರೈಲು ಸಂಪರ್ಕವೂ ಇವೆ, ಜಿಲ್ಲೆಯ ಎಲ್ಲ ಭಾಗಗಳೂ ವಾಹನ ಸಂಪರ್ಕ ಪಡೆದಿವೆ. ತಾಲ್ಲೂಕಿನಲ್ಲಿ ಬ್ಯಾಂಕ್, ವಿದ್ಯುತ್, ಅಂಚೆ-ತಂತಿ, ದೂರವಾಣಿ ಮುಂತಾದ ಸೌಲಭ್ಯಗಳಿವೆ.


ಪಟ್ಟಣ[ಸಂಪಾದಿಸಿ]

ಗುಲ್ಬರ್ಗ ವಿಭಾಗದ, ಜಿಲ್ಲೆಯ, ತಾಲ್ಲೂಕಿನ ಮತ್ತು ಹೋಬಳಿಯ ಆಡಳಿತ ಕೇಂದ್ರ. ಇತಿಹಾಸಪ್ರಸಿದ್ಧ ನಗರ, ವಿದ್ಯಾಕೇಂದ್ರ; ಚೆನ್ನೈ-ಮುಂಬಯಿ ಬ್ರಾಡ್ಗೇಜ್ ರೈಲು ಮಾರ್ಗದಲ್ಲಿದ್ದು ಬೆಂಗಳೂರಿನಿಂದ 626ಕಿಮೀ ದೂರದಲ್ಲಿದೆ.


ಗುಲ್ಬರ್ಗ ನಗರಕ್ಕೆ ಕಲ್ಬುರ್ಗಿ ಎಂಬ ಹೆಸರು ಸ್ಥಳೀಕರಲ್ಲಿ ಹೆಚ್ಚು ಪ್ರಚಾರದಲ್ಲಿದೆ. 11ನೆಯ ಶತಮಾನದ ಶಾಸನಗಳಲ್ಲಿ ಕಲುಂಬರಗೆ ಎಂದು ಹೆಸರಿಸಲಾಗಿದೆ. ರಾಯವಾಚಕಮು ಎಂಬ ತೆಲುಗು ಗ್ರಂಥದಲ್ಲಿ ಮತ್ತು ಕೆಳದಿನೃಪವಿಜಯದಲ್ಲಿ ಕಲುಬರಿಗ ಎಂಬ ರೂಪ ಕಾಣಿಸಿಕೊಳ್ಳುತ್ತದೆ. ಕಲುಂಬರಗ ಎಂಬ ಪ್ರಾಚೀನ ರೂಪವೇ ಕಲ್ಬುರ್ಗಿಯಾಗಿ ರೂಪಾಂತರಗೊಂಡಿರಬೇಕು. ಗುಲ್ಬರ್ಗ ಎಂಬ ಪದ ಮಹಮ್ಮದಿಯರ ಆಳಿಕೆಯಲ್ಲಿ ಪ್ರಚಾರಕ್ಕೆ ಬಂತು. ಗುಲ್ಬರ್ಗ ಎಂದರೆ ಹೂದೋಟ.


ಗುಲ್ಬರ್ಗ ನಗರ ಅಲೆಯಂತೆ ಏರಿಳಿತಗಳಿಂದ ಕೂಡಿದ ಕರಿ ಎರೆ ಮಣ್ಣಿನ ಪ್ರದೇಶದಲ್ಲಿ ಸು.16ಚ.ಕಿಮೀ ವಿಸ್ತಾರದಲ್ಲಿ ಹಬ್ಬಿದೆ. ಇಲ್ಲಿರುವ ಮನೆಗಳಲ್ಲಿ ಹೆಚ್ಚಿನವು ಕಲ್ಲುಕಟ್ಟಡಗಳು. ರೈಲ್ವೆ ನಿಲ್ದಾಣ ಹಳೆಯ ನಗರದಿಂದ ಸ್ವಲ್ಪ ದೂರದಲ್ಲಿದೆ. ರೈಲ್ವೆ ನಿಲ್ದಾಣದಿಂದ ಒಂದೂವರೆ ಕಿಮೀ ದೂರದೊಳಗೆ ಐವಾನ್ ಎ ಶಾಹೀ ಬಂಗಲೇ ಇದೆ. ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜು ಮತ್ತು ವಿದ್ಯಾರ್ಥಿನಿಲಯ ಕಟ್ಟಡಗಳು ರೈಲು ನಿಲ್ದಾಣದ ಬಳಿಯಲ್ಲೇ ಇವೆ. ಶಾಹಪುರ ರಸ್ತೆಯ ಬಳಿಯಲ್ಲಿ ಸರ್ಕಾರಿ ಕಚೇರಿಗಳೂ ಸರ್ಕಾರಿ ನೌಕರರ ವಸತಿಗೃಹಗಳೂ ಇವೆ.


ರೈಲ್ವೆ ನಿಲ್ದಾಣದಿಂದ 4ಕಿಮೀ ದೂರದಲ್ಲಿರುವ ನೆಹ್ರೂಗಂಜ್ ಮುಖ್ಯ ವ್ಯಾಪಾರ ಕೇಂದ್ರ. ಇಲ್ಲಿ ಅನೇಕ ಅಂಗಡಿಗಳೂ ಉಪಾಹಾರಗೃಹಗಳೂ ಇವೆ. ಕಾರಾಗೃಹ ಇರುವುದು ಮುಖ್ಯ ಪೇಟೆಬೀದಿಯ ರಸ್ತೆಯ ಬದಿಯಲ್ಲಿ. ಸ್ಟೇಷನ್ ಬಜಾರ್ ಸುತ್ತ ಮತ್ತು ಜಗತ್ ವಿಭಾಗದಲ್ಲಿ (ಚಾಳ್ಗಳು) ವಾಸಗೃಹಗಳು ಇವೆ. ಈಚೆಗೆ ಹೊಸಹೊಸ ಬಡಾವಣೆಗಳು ಬೆಳೆಯುತ್ತಿವೆ. ರೈಲ್ವೆ ನಿಲ್ದಾಣದಿಂದ ಮುಖ್ಯ ಪೇಟೆಬೀದಿಗೆ ಹೋಗುವ ಮಾರ್ಗದಲ್ಲಿರುವ ಮಹಬೂಬ್ ಗುಲ್ಷನ್ ಒಂದು ಸುಂದರ ಉದ್ಯಾನ. ಐವಾನ್ ಎ ಶಾಹೀಯ ಸುತ್ತ ಒಂದು ಉದ್ಯಾನವಿದೆ.


ನಗರ ಔದ್ಯಮಿಕವಾಗಿಯೂ ಬೆಳೆಯಲಾರಂಬಿsಸಿದೆ. ಇಲ್ಲಿನ ಎಂ.ಎಸ್.ಕೆ ಮಿಲ್ಸ್‌ ಎಂಬ ಹತ್ತಿ ಗಿರಣಿ ಕಾರ್ಖಾನೆಗಳಲ್ಲಿ ದೊಡ್ಡದು. ಅಲ್ಲದೆ ಬೇಳೆ ತಯಾರಿಸುವುದು, ಮರ ಕುಯ್ಯುವುದು, ಎಣ್ಣೆ ತೆಗೆಯುವುದು, ಬೀಡಿ ತಯಾರಿಕೆ ಮೊದಲಾದ ಇತರ ಉದ್ಯಮಗಳೂ ಇಲ್ಲಿವೆ.


ಗುಲ್ಬರ್ಗ ರೈಲು ನಿಲ್ದಾಣದ ಬಳಿಯಲ್ಲೇ ಬಸ್ ನಿಲ್ದಾಣ ಇದೆ. ಇಲ್ಲಿಂದ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೂ ರಾಜ್ಯದ ಮತ್ತು ಹೊರಗಿನ ಮುಖ್ಯ ಸ್ಥಳಗಳಿಗೂ ವಾಹನ ಸಂಪರ್ಕವಿದೆ. ಸುತ್ತಣ ಪ್ರದೇಶದೊಳಗಿನ ಉತ್ತಮ ಸಂಪರ್ಕ ದಿಂದಾಗಿ ಗುಲ್ಬರ್ಗ ವ್ಯಾಪಾರ ಕೇಂದ್ರವೂ ಆಗಿದೆ. ಗುಲ್ಬರ್ಗದಲ್ಲಿ ಅನೇಕ ಶಾಲಾಕಾಲೇಜುಗಳೂ ಆಸ್ಪತ್ರೆ ಮುಂತಾದವೂ ಉಂಟು. ಸರ್ಕಾರಿ ಆಟ್ರ್ಸ್‌ ಮತ್ತು ಸೈನ್ಸ್‌ ಕಾಲೇಜು, ಶರಣಬಸವೇಶ್ವರ ಕಾಲೇಜು, ಸೇಠ್ ಶಂಕರಲಾಲ್ ಲಾಹೋಟಿ ಲಾ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು - ಇವು ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು. ಗುಲ್ಬರ್ಗ ವಿಶ್ವವಿದ್ಯಾಲಯ ಇಲ್ಲಿ ಸ್ಥಾಪಿತವಾಗಿದೆ (1980). ಇಲ್ಲಿ ಕೇಂದ್ರ ವಿಶ್ವವಿದ್ಯಾಲಯವೂ ಇದೆ. ಗುಲ್ಬರ್ಗ ನಗರ ಎಲ್ಲ ಆಧುನಿಕ ಸೌಕರ್ಯಗಳನ್ನೂ ಹೊಂದಿದೆ.


ಶರಣಬಸವೇಶ್ವರ ದೇವಾಲಯ ಮತ್ತು ಖ್ವಾಜಾ ಬಂದೇ ನವಾಜರ ದರ್ಗಾ ಗುಲ್ಬರ್ಗದ ಪ್ರಮುಖ ಧಾರ್ಮಿಕ ಕೇಂದ್ರಗಳು. ಶರಣಬಸವೇಶ್ವರ ದೇವಾಲಯ ಇತ್ತೀಚಿನದಾದರೂ ಬಹು ಸುಂದರವಾಗಿ ರಚಿತವಾಗಿರುವ ವಾಸ್ತುಕೃತಿ. ಇಲ್ಲಿ ಪ್ರಸಿದ್ಧ ವೀರಶೈವ ಸಂತರಾದ ಶರಣಬಸವೇಶ್ವರರ ಗೌರವಾರ್ಥ ವರ್ಷಂಪ್ರತಿ ಚೈತ್ರ ಬಹುಳ ಪಂಚಮಿಯಿಂದ ಹದಿನೈದು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಖ್ವಾಜಾ ಬಂದೇ ನವಾಜರ ದರ್ಗಾದಲ್ಲಿ ಪ್ರತಿವರ್ಷ ಜಿಕೈದಾ ತಿಂಗಳಿನಲ್ಲಿ ಮೂರು ದಿನಗಳ ಕಾಲ ಉರುಸ್ ನಡೆಯುತ್ತದೆ. ಈ ಎರಡು ಸಂದರ್ಭಗಳಲ್ಲೂ ಲಕ್ಷ ಲಕ್ಷಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ.


ಸಾಹಿತ್ಯ ಮತ್ತು ಜಾನಪದ ಕ್ಷೇತ್ರಕ್ಕೆ ಈ ಜಿಲ್ಲೆ ಅಪೂರ್ವ ಕೊಡುಗೆ ನೀಡಿದೆ. ಕಡಿದಾಳ ಕೃಷ್ಣರಾವ್, ಎಂ.ಎಸ್.ಲಠ್ಠೆ, ಪಿ.ಕೆ.ಖಂಡೋಬ, ಚೆನ್ನಣ್ಣ ವಾಲೀಕಾರ, ತವಗ ಭೀಮಸೇನರಾವ್, ಗೀತಾ ನಾಗಭೂಷಣ, ಶೈಲಜಾ ಉಡಚಣ, ಎ.ಕೆ.ರಾಮೇಶ್ವರ, ಸೀತಾರಾಮ ಜಾಗೀರದಾರ ಇವರನ್ನು ಹೆಸರಿಸಬಹುದು.


ಗುಲ್ಬರ್ಗದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳಿವೆ. ಇದು ಬಹಮನೀ ಅರಸರ ಮೊದಲ ರಾಜಧಾನಿಯಾಗಿದ್ದರಿಂದ ಕರ್ನಾಟಕದಲ್ಲಿರುವ ಭಾರತೀಯ ಇಸ್ಲಾಮೀ ಸಂಪ್ರದಾಯದಲ್ಲಿರುವ ಮೊದಲ ಕೃತಿಗಳೆಲ್ಲ ಈ ನಗರದಲ್ಲೇ ಇವೆ. ಆ ಕಾಲದಲ್ಲಿ ಕಟ್ಟಲಾದ ಗುಲ್ಬರ್ಗ ನಗರದ ಕೋಟೆ 15 ಬುರುಜುಗಳನ್ನೂ 20 ತುಪಾಕಿ ಗೋಪುರಗಳನ್ನೂ ಅಳವಡಿಸಿಕೊಂಡು ನಗರವನ್ನು ಸುತ್ತುವರಿದಿರುವ ಬೃಹತ್ ಕಲ್ಲುಕಟ್ಟಡ. ರಾಜ ಗುಲ್ಚಂದ್ ಎಂಬ ಹಿಂದು ದೊರೆ ಇದನ್ನು ಮೊದಲು ಕಟ್ಟಿದನೆಂಬುದು ಸ್ಥಳಪ್ರತೀತಿ. ಈತ ಚರಿತ್ರೆಗೆ ತಿಳಿಯದಿರುವ ವ್ಯಕ್ತಿಯಾದರೂ ಗುಲ್ಬರ್ಗ ನಗರ ಇಸ್ಲಾಮೀ ಆಳಿಕೆಯ ಪೂರ್ವದಲ್ಲೂ ಒಂದು ಮುಖ್ಯ ನಗರ ವಾಗಿದ್ದಿರ ಬೇಕೆಂಬುದು ಅಲ್ಲಿ ಕಂಡುಬಂದಿರುವ ಅನೇಕ ಹಿಂದು ದೇವಾಲಯಗಳ ಅವಶೇಷಗಳಿಂದಲೂ ಒಂದೆರಡು ಶಾಸನಗಳಿಂದಲೂ ತಿಳಿಯುತ್ತದೆ. ಇಲ್ಲಿಯ ಕೋಟೆ ಅಲಾಉದ್ದೀನ್ ಹಸನ್ ಬಹಮನೀಯ (1347-58) ಕಾಲದಲ್ಲಿ ವಿಸ್ತಾರಗೊಂಡಿತ್ತು. ಗುಲ್ಬರ್ಗ ಕೋಟೆಯೊಳಗಿರುವ ದೊಡ್ಡ ಮಸೀದಿ ಅಪರೂಪ ಶೈಲಿಯಲ್ಲಿರುವ ದೊಡ್ಡ ಕಟ್ಟಡ. 216' ಉದ್ದ ಮತ್ತು 176' ಅಗಲದ ಈ ಕಟ್ಟಡವು 6 ಕಂಬಗಳು ಮೇಲೆ ಎತ್ತಿದ ಅನೇಕ ಗುಮ್ಮಟಗಳಿಂದ ಪೂರ್ಣವಾಗಿ ಆಚ್ಫಾದಿತವಾಗಿದೆ. ಈ ಮಸೀದಿಯನ್ನು ಮಹಮದ್ ಷಾ ಬಹಮನೀಯ ಆಳಿಕೆಯಲ್ಲಿ 1376ರಲ್ಲಿ ಕಟ್ಟಲಾಯಿತೆಂದೂ ಇದರ ಶಿಲ್ಪಿ ಇರಾನಿನ ಕ್ವಾಸ್ವಿನ್ನ ನಿವಾಸಿ ರಫಿ ಎಂಬವನೆಂದೂ ಇಲ್ಲಿಯ ಒಂದು ಶಾಸನದಿಂದ ಗೊತ್ತಾಗುತ್ತದೆ. ಈ ಮಸೀದಿಯ ವಿಶಿಷ್ಟ ವಿನ್ಯಾಸವನ್ನು ಆಧರಿಸಿ ಇದು ಸ್ಪೇನಿನ ಕಾರ್ಡೋವದ ಪ್ರಸಿದ್ಧ ಮಸೀದಿಯನ್ನು ಹೋಲುತ್ತದೆ ಎಂದು ಹೇಳುವುದು ರೂಢಿ. ಈ ಮಸೀದಿಯಲ್ಲಿ ಪ್ರಾರ್ಥನಾ ಕೊಠಡಿ ಇರುವ ಪಶ್ಚಿಮ ಭಾಗ ಉಳಿದ ಭಾಗಕ್ಕಿಂತ ಎತ್ತರವಾಗಿದ್ದು ಅದರ ಮೇಲೆ ದೊಡ್ಡ ಗುಮ್ಮಟಗಳಿವೆ. ಮುಂಭಾಗದ ಹಜಾರದ ಗುಮ್ಮಟಗಳು ಇವಕ್ಕಿಂತ ಕುಳ್ಳು. ಇಲ್ಲಿ ಉಪಯೋಗಿಸಿರುವ ಗುಮ್ಮಟಗಳು ಪಾರಸೀ ಮಾದರಿಯವು.ಗುಲ್ಬರ್ಗ ನಗರದ ಷಾ ಬಜಾರ್ ಮಸೀದಿ ಈ ಕಾಲದ ಇನ್ನೊಂದು ಉಲ್ಲೇಖಾರ್ಹ ಕಟ್ಟಡ. ಇದನ್ನು ಒಂದನೆಯ ಮಹಮ್ಮದ್ ಷಾ ಬಹಮನೀಯ (1358-75) ಕಾಲದಲ್ಲಿ ಕಟ್ಟಿರಬೇಕೆಂದು ಊಹಿಸಲಾಗಿದೆ. ಈ ಮಸೀದಿಯ ಮುಂಭಾಗದ ಇಕ್ಕಡೆಗಳಲ್ಲಿ ಒಂದೊಂದು ಎತ್ತರವಾದ ಮಿನಾರುಗಳೂ ಕಮಾನಿನ ಪ್ರವೇಶ ದ್ವಾರವೂ ಒಳಗೆ ತೆರೆದ ಅಂಗಳವೂ ಅದರ ಹಿಂದೆ ಪ್ರಾರ್ಥನಾ ಹಜಾರವೂ ಇವೆ.


ಗುಲ್ಬರ್ಗ ಕೋಟೆಯ ದಕ್ಷಿಣ ದ್ವಾರದ ಬಳಿ ತುಗಲಕ್ ಶೈಲಿಯಲ್ಲಿ ಕಟ್ಟಿದ ಕೆಲವು ಸಮಾದಿsಗಳು ಉಳಿದಿವೆ. ಅವುಗಳಲ್ಲಿ ಮೂರನ್ನು ಬಹಮನೀ ವಂಶದ ಮೊದಲ ಮೂವರು ಅರಸರವೆಂದು ಗುರುತಿಸಲಾಗಿದೆ. ಅಲಾ ಉದ್ದೀನ್ ಹಸನ್ ಬಹಮನೀಯ (1347-58) ಸಮಾಧಿ ಈ ಗುಂಪಿನ ಪಶ್ಚಿಮದ ಕೊನೆಯಲ್ಲಿದೆ. ಇದು 4' ಎತ್ತರದ ಜಗತಿಯ ಮೇಲೆ ಕಟ್ಟಲಾಗಿರುವ 40' 6 ಚೌಕದ ಕಟ್ಟಡ. ಇದು ಕಲ್ಲು ಮತ್ತು ಗಾರೆಯಿಂದ ಎತ್ತಲಾದ ಹಜಾರ. ಇದರ ಗೋಡೆಗಳು 20' ಎತ್ತರವಾಗಿವೆ. ಮೇಲೆ ಹೋದಂತೆ ಒಳಬಾಗುವ ರೀತಿಯ ಓರೆಯ ಹೊರಮೈಯನ್ನುಳ್ಳವಾಗಿವೆ. ಚಾವಣಿಯ ಗುಮ್ಮಟ ಸುಮಾರು ಮಟ್ಟಸವಾದ್ದು. ಒಳ ಹಜಾರದಲ್ಲಿ ಗುಮ್ಮಟದ ನೇರ ಕೆಳಗೆ ಮೂರು ಸಮಾಧಿಶಿಲೆಗಳಿವೆ. ಅವುಗಳಲ್ಲಿ ಒಂದು ಅಲಾ ಉದ್ದೀನನದೆಂದು ಹೇಳಲಾಗುತ್ತದೆ. ಅಲಾ ಉದ್ದೀನನ ಮಗ 1ನೆಯ ಮಹಮ್ಮದ್ ಷಾ ಮತ್ತು ಮುಂದಿನ ಅರಸ 2ನೆಯ ಮಹಮ್ಮದ್ ಷಾ ಇವರ ಸಮಾದಿsಗಳೂ ಇಲ್ಲಿವೆ. ಗುಲ್ಬರ್ಗದ ಬಳಿ ಇರುವ ಹಫ್ತ್‌ ಗುಂಬಜ್ ಎಂಬ ಏಳು ಸಮಾಧಿಗಳ ಸಮೂಹ, ಊರ ಒಳಗಿರುವ ಖ್ವಾಜಾ ಬಂದೇ ನವಾಜ್ ದರ್ಗಾ ಮತ್ತು ಚೋರ್ ಗುಂಬಜ್ ಈ ಕಾಲದ ಇಲ್ಲಿಯ ಇತರ ಗಮನಾರ್ಹ ಕಟ್ಟಡಗಳು. 15ನೆಯ ಶತಮಾನದ ಖಲಂದರ್ ಖಾನನ ಮಸೀದಿ ಉತ್ತಮ ಪ್ರಮಾಣ, ಸರಳ ಅಲಂಕರಣ ಇವುಗಳಿಂದಾಗಿ ಸುಂದರವಾಗಿ ಎದ್ದುಕಾಣುವ ಕಟ್ಟಡ. ಇದು ಚಿಕ್ಕದಾದರೂ ವಿನ್ಯಾಸ ಮತ್ತು ಸೌಂದರ್ಯದಲ್ಲಿ ಕೈರೋದ ಜಾಮಿ ಅಜರ್ ಮಸೀದಿಯನ್ನು ಹೋಲುತ್ತದೆಯೆಂದು ಹೇಳಲಾಗಿದೆ. ಗುಲ್ಬರ್ಗದಲ್ಲಿ ಈಗ ಹಿರಾಪುರ್ ಮಸೀದಿ ಎನಿಸಿಕೊಂಡಿರುವ ಮಸೀದಿಯನ್ನು ಚಾಂದಬೀಬಿ 1585ರಲ್ಲಿ ಕಟ್ಟಿಸಿದಳು. ವಿಶಿಷ್ಟ ಶೈಲಿಯ ಕಮಾನುಗಳನ್ನುಳ್ಳ ಒಂದು ಮನೋಹರ ಕೃತಿ ಇದು. 1687ರಲ್ಲಿ ಔರಂಗಜೇಬ್ ಖ್ವಾಜಾ ಬಂದೇ ನವಾಜ್ ದರ್ಗಾದ ಬಳಿ ಒಂದು ಮಸೀದಿಯನ್ನು ಕಟ್ಟಿಸಿದ. ಇಲ್ಲಿ ಉಪಯೋಗಿಸ ಲಾಗಿರುವ ಉದ್ದನೆಯ ಅಲಂಕೃತ ಮಿನಾರುಗಳು, ಶಿಲ್ಪಿತ ಚಜ್ಜಾಗಳು ಮುಂತಾದ ವಾಸ್ತು ಅಂಶಗಳಿಂದ ಈ ಕಟ್ಟಡ ದಕ್ಷಿಣ ಭಾರತದಲ್ಲಿ ಹಿಂದು ಶೈಲಿಗಳ ಕೈಯಲ್ಲಿ ಬೆಳೆದ ಇಸ್ಲಾಮೀ ಸಂಪ್ರದಾಯದ ಶೈಲಿಯ ಉತ್ತಮ ಉದಾಹರಣೆಯಾಗಿದೆಯೆಂದು ಹೇಳಲಾಗಿದೆ.