ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೂಂಚ್ ಮೀನು
ಸೈಲ್ಯೂರಿಫಾರ್ಮೀಸ್ ಗಣದ ಸಿಸೋರಿಡೀ ಕುಟುಂಬಕ್ಕೆ ಸೇರಿದ ಒಂದು ಸಿಹಿನೀರು ಮೀನು. ಮೀಸೆ ಮೀನುಗಳ ಸಂಬಂಧಿ. ಎಲ್ಲ ಮೀಸೆ ಮೀನುಗಳಿಗಿರುವಂತೆ ಬಾಯಿಯ ಸುತ್ತ ಚೆನ್ನಾಗಿ ಬೆಳದೆ ಸ್ಪರ್ಶಾಂಗಗಳಿವೆ. ಇದರ ಶಾಸ್ತ್ರೀಯ ನಾಮ ಬಗೇರಿಯಸ್ ಬಗೇರಿಯಸ್. ನೈರುತ್ಯ ಏಷ್ಯದ ಕೆರೆ, ಕೊಳ ನದಿಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಗಂಗಾನದಿ ಮತ್ತು ಮಣಿಪುರದ ಕಣಿವೆಗಳಲ್ಲಿನ ಝರಿಗಳಲ್ಲಿ ಇವುಗಳನ್ನು ಕಾಣಬಹುದು. ಇದರ ಉಗ್ರ ಸ್ವಭಾವ ಮತ್ತು ತಲೆಯ ಅಧೋಭಾಗದಲ್ಲಿರುವ ಬಾಯಿಯಿಂದಾಗಿ ಇದನ್ನು ಸಿಹಿನೀರಿನ ಶಾರ್ಕ್ ಎಂದೂ ಕರೆಯಲಾಗುತ್ತದೆ. ಇದರ ತಲೆ ತಟ್ಟೆಯಂತೆ ಅಗಲವಾಗಿದೆ. ಬಾಲ ನೀಳವಾಗಿಯೂ ಕರಿದಾಗಿಯೂ ಇದೆ. ಬಾಲದ ಈಜು ರೆಕ್ಕೆ ಆಳವಾಗಿ ಸೀಳಿದೆ. ಈಜು ರೆಕ್ಕೆಗಳ ಬುಡ ಕಪ್ಪಾಗಿರುವುದಲ್ಲದೆ ಅವುಗಳ ಮೇಲೆ ಕಪ್ಪು ಬಣ್ಣದ ಪಟ್ಟೆಯೊಂದಿದೆ. ಗೂಂಚ್ ಮೀನಿನ ಬಣ್ಣ ಕಂದು ಇಲ್ಲವೆ ನಸುಗೆಂಪು ಮಿಶ್ರಿತ ಆಲಿವ್. ಮೈಯ ಮೇಲ್ಭಾಗದಲ್ಲಿ ಚಿತ್ತಾದ ಕಂದು ಬಣ್ಣದ ಪಟ್ಟೆಗಳೂ ಇರಬಹುದು. ಸಾಮಾನ್ಯವಾಗಿ ಇದು ಚಿಕ್ಕಗಾತ್ರದ್ದು. ಕೆಲವು ವೇಳೆ 6 ಅಡಿವರೆಗೆ ಬೆಳೆಯುವುದುಂಟು.
ಗೂಂಚ್ ಮೀನನ್ನು ಈಟಿಯಿಂದ ತಿವಿದು ಬೇಟೆಯಾಡುತ್ತಾರೆ. ದೊಡ್ಡ ಗಾತ್ರದ ಮೀನುಗಳು ಬಲು ಜಡ ಸ್ವಭಾವದವಾದ್ದರಿಂದ ಇವನ್ನು ಬೇಟೆಯಾಡುವುದು ಸುಲಭ. ಬೆಸ್ತರು ನೀರಲ್ಲಿ ಮುಳುಗಿ ಇವುಗಳ ಬಾಲಕ್ಕೆ ಹಗ್ಗ ಕಟ್ಟಿ ಹೊರಗೆಳೆದು ಹಿಡಿಯುವುದೂ ಉಂಟು.