ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೂಡುಗಳು

ವಿಕಿಸೋರ್ಸ್ದಿಂದ
ಗೂಡು
ಗೂಡು

ತಮ್ಮ ವಾಸಕ್ಕೆ, ಮೊಟ್ಟೆಗಳನ್ನಿಡುವುದಕ್ಕೆ, ಮರಿಗಳ ಪಾಲನೆಗೆ ಹಕ್ಕಿ, ಇರುವೆ, ಕಣಜ, ಜೇನುನೊಣ ಮುಂತಾದ ಅನೇಕ ಬಗೆಯ ಪ್ರಾಣಿಗಳು ಕಟ್ಟುವ ಸುರಕ್ಷಿತ ನೆಲೆಗಳು (ನೆಸ್ಟ್ಸ್). ಪ್ರಸಕ್ತ ಲೇಖನದಲ್ಲಿ ಹಕ್ಕಿಯ ಗೂಡುಗಳನ್ನು ಮಾತ್ರ ಪ್ರಸ್ತಾಪಿಸಲಾಗಿದೆ. (ಗೂಡುಗಳ ರಚನೆ) ಅವುಗಳನ್ನು ಕಟ್ಟುವ ಜಾಗವನ್ನು ಆರಿಸುವುದು, ಗೂಡನ್ನು ಕಟ್ಟುವ ವಿಧಾನ, ಇವೆಲ್ಲದರಲ್ಲೂ ಹಕ್ಕಿಗಳು ವೈಶಿಷ್ಟ್ಯವನ್ನು ತೋರಿಸುತ್ತವೆ.


ಮೊಟ್ಟೆಗಳನ್ನು ಗೂಡಿನಲ್ಲಿಟ್ಟು, ಅವುಗಳನ್ನು ಶತ್ರುಗಳಿಂದ ರಕ್ಷಿಸಿ, ಕಾವಿಗೆ ಕುಳಿತು ಮರಿ ಮಾಡಿ ಅವುಗಳನ್ನು ಪೋಷಿಸುವುದು ಸಾಮಾನ್ಯವಾಗಿ ಹೆಣ್ಣುಹಕ್ಕಿಯ ಕೆಲಸವಾದರೂ ಗಂಡುಹಕ್ಕಿಯೂ ಹೆಣ್ಣಿನೊಡನೆ ಸಹಕರಿಸಿ, ಸಂತಾನವನ್ನು ಕಾಪಾಡುವುದರಲ್ಲಿ ಸಮಭಾಗಿಯಾಗುತ್ತದೆ. ಮೊಟ್ಟೆಗಳನ್ನಿಡುವ ಕಾಲಕ್ಕೆ ಮುಂಚಿತವಾಗಿಯೇ, ಒಂದು ಸಂಸಾರದ ಗಂಡು ಹೆಣ್ಣು ಹಕ್ಕಿಗಳೆರಡೂ ಕೂಡಿ ಗೂಡನ್ನು ಕಟ್ಟಲು ತೊಡಗುವುದನ್ನು ಕಾಗೆ, ಗುಬ್ಬಚ್ಚಿ, ಕಾಡುಪಾರಿವಾಳ, ಹದ್ದು ಮುಂತಾದವುಗಳಲ್ಲಿ ಕಾಣಬಹುದು.


ಗೂಡುಗಳಲ್ಲಿ ಸಾಮಾನ್ಯ ವಾದ ಪೊಟರೆಗಳಂತೆ ಕಾಣುವ ಒರಟಾದ ಗೂಡು ಗಳಿಂದ ಹಿಡಿದು ಕುಶಲತೆ ಯಿಂದ ನೇಯ್ದ ಗೀಜಗನ ಸುಂದರವಾದ ಗೂಡುಗಳವರೆಗೆ ವಿವಿಧ ಬಗೆಗಳನ್ನು ಕಾಣಬಹುದು. ಹಕ್ಕಿಗಳು ಪ್ರಕೃತಿಯಲ್ಲಿ ಸಹಜವಾಗಿ ಕಾಣಬರುವ ವಾಸಕ್ಕೆ ಯೋಗ್ಯವಾದ ಸ್ಥಳಗಳನ್ನೇ ಗೂಡುಗಳಾಗಿ ಉಪಯೋಗಿಸಬಹುದು ಅಥವಾ ತಮ್ಮ ತಮ್ಮ ಅರ್ಹತೆ ಮತ್ತು ರೀತಿ ನೀತಿಗನುಗುಣ ವಾದ ಗೂಡುಗಳನ್ನು ಬೇರೆ ಬೇರೆ ವಸ್ತುಗಳಿಂದ ಕಟ್ಟಬಹುದು.


ಕೆಲವು ಹಕ್ಕಿಗಳು ಪ್ರಕೃತಿ ಯಲ್ಲಿ ಸಹಜವಾಗಿರುವ ನೆಲದ ತೂತುಗಳನ್ನೇ ಗೂಡುಗಳನ್ನಾಗಿ ಉಪಯೋಗಿಸಿಕೊಳ್ಳುತ್ತವೆ. ಇನ್ನು ಕೆಲವು ಹಕ್ಕಿಗಳು ಎಲೆಗಳ ರಾಶಿಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಗೂಬೆಗಳು, ಗಿಳಿಗಳು ಮರದ ಪೊಟರೆಗಳಲ್ಲಿ ಮೊಟ್ಟೆಗಳನ್ನಿಡುತ್ತವೆ. ಇವುಗಳಲ್ಲಿ ಗೂಡುಕಟ್ಟುವ ಕುಶಲತೆಯೂ ಕಂಡುಬರುವುದಿಲ್ಲ. ಆದರೆ ಕೆಲವು ಹಕ್ಕಿಗಳು ಸಹಜವಾಗಿ ಇರುವ ಗೂಡುಗಳನ್ನೇ ಅಲ್ಪಸ್ವಲ್ಪವಾಗಿ ಕೊರೆದೋ, ಬೇರೆ ಸಾಮಗ್ರಿಗಳನ್ನು ಸೇರಿಸಿಯೋ ರಚಿಸುತ್ತವೆ. ಇದು ಗೂಡು ನಿರ್ಮಾಣದ ವಿಕಾಸದ ಮೊದಲ ಹೆಜ್ಜೆ.


ಮರುಕುಟಿಗ ಹಕ್ಕಿಗಳು ಗೂಡು ಕಟ್ಟುವುದರಲ್ಲಿ ಈ ವಿಧಾನವನ್ನು ಅನುಸರಿಸುತ್ತವೆ. ಕೆಲವೊಮ್ಮೆ ಪೊಟರೆಗಳನ್ನು ಹುಡುಕಿಕೊಂಡು ಹೋಗುವ ಬದಲು, ತಾವೇ ಸ್ವತಃ ತಮ್ಮ ಕೊಕ್ಕಿನಿಂದ ಗೂಡನ್ನು ಕೊರೆಯುತ್ತವೆ.


ಹಾರನ್ಬಿಲ್ (ಮಂಗಟ್ಟೆ ಹಕ್ಕಿ)ಎಂಬ ಹಕ್ಕಿ ಮರದ ಪೊಟರೆಗಳಲ್ಲಿ ಮೊಟ್ಟೆಯನ್ನು ಇಡುತ್ತದೆ. ಹೆಣ್ಣುಹಕ್ಕಿ ಕಾವಿಗೆ ಕೂಡುತ್ತಲೇ ಒಂದು ಸಣ್ಣ ರಂಧ್ರವನ್ನು ಮಾತ್ರ ಬಿಟ್ಟು ಪೊಟರೆಯ ಬಾಯನ್ನು ಮುಚ್ಚಿಬಿಡುತ್ತದೆ. ಈ ತೂತಿನಿಂದ ಗಂಡು ಹಕ್ಕಿ, ಒಳಗಿರುವ ಹೆಣ್ಣುಹಕ್ಕಿಗೆ ಆಹಾರವನ್ನು ಒದಗಿಸುತ್ತದೆ. ಮೊಟ್ಟೆಗಳು ಒಡೆದು ಮರಿಗಳಾಗಿ, ಅವು ಬಲಿತ ಮೇಲೆ ಮುಚ್ಚಳವನ್ನು ಒಡೆದುಕೊಂಡು, ಹೆಣ್ಣುಹಕ್ಕಿ ಹೊರಗೆ ಬರುತ್ತದೆ. ಈ ರೀತಿ ಗೂಡಿನ ಬಾಯನ್ನು ಮುಚ್ಚುವುದು, ಹಾವು ಮುಂತಾದ ಶತ್ರುಗಳು, ಗೂಡಿನ ಒಳಹೊಕ್ಕು, ಮೊಟ್ಟೆ, ಮರಿಗಳನ್ನು ತಿನ್ನದಂತೆ ತಡೆಯಲು ಇರುವ ಉಪಾಯ. ಗೂಡಿಗೆ ಯೋಗ್ಯವಾದ ಸಹಜವಾದ ಪೊಟರೆಗಳು ಮುಂತಾದ ಸ್ಥಳಗಳು ಎಲ್ಲ ಹಕ್ಕಿಗಳಿಗೂ ಸಿಗುವುದು ಸ್ವಲ್ಪ ಕಷ್ಟ. ಈ ರೀತಿಯ ಅಭಾವವನ್ನು ಕೆಲವು ಹಕ್ಕಿಗಳು ತಾವೇ ಗೂಡನ್ನು ಕಟ್ಟುವುದರಿಂದ ಹೋಗಲಾಡಿ ಸುತ್ತವೆ. ಹೀಗೆ ಸರಳರೀತಿಯಲ್ಲಿ ರಚಿಸಿದ ಗೂಡುಗಳಲ್ಲಿ ಸಾಮಾನ್ಯ ವಾದುದೆಂದರೆ, ಮರಗಳ ಮೇಲೆ ಬರಿಯ ಕಡ್ಡಿಗಳಿಂದ ಕಟ್ಟಿದಂಥವು. ಇಂಥ ಗೂಡುಗಳನ್ನು ಕಾಡು ಪಾರಿವಾಳ, ಕಾಗೆ, ಹದ್ದುಗಳು ಕಟ್ಟುತ್ತವೆ. ಈ ಗೂಡುಗಳು ಎಷ್ಟು ಒರಟಾಗಿರುತ್ತವೆಂದರೆ ಕಡ್ಡಿಗಳ ಸಂದಿನಿಂದ ಮೊಟ್ಟೆಗಳು ಹೊರಕ್ಕೆ ಕಾಣುತ್ತಿರುತ್ತವೆ. ಅಲ್ಲದೆ ಮಳೆ, ಬಿಸಿಲು, ಗಾಳಿಗಳಿಂದ ಮೊಟ್ಟೆಗಳಿಗೆ ರಕ್ಷಣೆಯಿರುವುದಿಲ್ಲ. ಗೂಡು ಕಟ್ಟುವುದರಲ್ಲಿ ಇದಕ್ಕಿಂತ ಮುಂದುವರಿದ ಹಕ್ಕಿಗಳು ಗೂಡುಗಳಿಗೆ ವಿಶಿಷ್ಟವಾದ ಆಕಾರವನ್ನು ಕೊಡುತ್ತವೆ. ಇಂಥ ಗೂಡುಗಳಲ್ಲಿ, ಕಡ್ಡಿಗಳ ನಡುವೆ ಮೊಟ್ಟೆಗಳು ಸುರಕ್ಷಿತವಾಗಿರಲು ಸಾಕಷ್ಟು ತಗ್ಗಾದ ಸ್ಥಳವಿರುತ್ತದೆ. ಕೆಲವು ಸಣ್ಣ ಪುಟ್ಟ ಹಕ್ಕಿಗಳು ಸಣ್ಣ ಕಡ್ಡಿಗಳು, ಗಿಡದ ಬೇರುಗಳು, ಹುಲ್ಲು ಮುಂತಾದ ನಯವಾದ ವಸ್ತುಗಳನ್ನು ಗೂಡು ಕಟ್ಟಲು ಉಪಯೋಗಿಸುತ್ತವೆ. ಹೀಗೆ ಹುಲ್ಲುಗಳಿಂದ ಕಟ್ಟಿದ ಗೂಡುಗಳನ್ನು ಗುಬ್ಬಚ್ಚಿ ಮುಂತಾದ ಹಕ್ಕಿಗಳಲ್ಲಿ ಕಾಣಬಹುದು. ಕೆಲವು ಪಕ್ಷಿಗಳು ಈ ವಸ್ತುಗಳನ್ನು ಕುಶಲವಾಗಿ ನೇಯ್ದು ಬಟ್ಟಲಿನಂತಹ ಗೂಡುಗಳನ್ನು ಮರದ ಮೇಲೋ ಗಿಡಗಳ ಪೊದರಿನಲ್ಲಿಯೋ ಕಟ್ಟುತ್ತವೆ. ಅಲ್ಲದೆ ಗೂಡುಗಳ ಒಳಗೆ ಮೃದುವಾದ ನಾರು, ಕೂದಲು, ಹತ್ತಿ, ಉಣ್ಣೆ ಮುಂತಾದ ವಸ್ತುಗಳಿಂದೊಡಗೂಡಿದ ಮೆತ್ತೆಗಳನ್ನು ರಚಿಸುತ್ತವೆ.


ಹಾಡುವ ಥ್ರಶ್ (ಸಾಂಗ್ ಥ್ರಶ್) ಹಕ್ಕಿ ತನ್ನ ಗೂಡಿನ ಒಳಭಾಗವನ್ನು ಜೇಡಿಯ ಮಣ್ಣಿನಿಂದ ಮೆತ್ತಿ ಗಟ್ಟಿಯಾದ ಮಣ್ಣಿನ ಬಟ್ಟಲಿನಂತಿರುವ ಗೂಡನ್ನು ಕಟ್ಟುತ್ತದೆ.


ಇದಕ್ಕಿಂತಲೂ ಹೆಚ್ಚು ಕುಶಲತೆಯನ್ನು ತೋರಿಸುವ ಹಕ್ಕಿಗಳು, ಗೂಡಿಗೆ ಮೇಲ್ಛಾವಣಿಯನ್ನು ಕಟ್ಟಿ, ಒಂದು ಪಕ್ಕಕ್ಕೆ ಸಣ್ಣದೊಂದು ಬಾಗಿಲನ್ನು ರಚಿಸುತ್ತವೆ.


ಈ ರೀತಿಯ ಕುಶಲತೆಯನ್ನು ಉದ್ದನೆಯ ಬಾಲದ ಟಿಟ್ ಹಕ್ಕಿಯ ಗುಂಡನೆಯ ಗೂಡಿನಲ್ಲಿ ನೋಡಬಹುದು. ಈ ಗೂಡಿನ ಒಳಭಾಗದಲ್ಲಿ ಹಕ್ಕಿ ಆಯ್ದು ತಂದ ಪುಕ್ಕಗಳ ಮೆತ್ತೆ ಇರುತ್ತದೆ.


ಇವೆಲ್ಲಕ್ಕಿಂತಲೂ ಹೆಚ್ಚು ಕುಶಲತೆಯನ್ನು ತೋರುವ ಹಾಗೂ ಸುಂದರವಾದ ಗೂಡುಗಳನ್ನು ಕಟ್ಟುವ ಹಕ್ಕಿಗಳೆಂದರೆ ಗೀಜಗನ ಜಾತಿಗೆ ಸೇರಿದ ಹಕ್ಕಿಗಳು. ಅವುಗಳ ಗೂಡಿನ ರಚನೆಯನ್ನನುಸರಿಸಿ ಅವನ್ನು ಗೀಜುಗ (ವೀವರ್ ಬರ್ಡ್) ಮತ್ತು ದರ್ಜಿ ಹಕ್ಕಿ (ಟೇಲರ್ ಬರ್ಡ್) ಎಂದು ಕರೆಯುತ್ತಾರೆ. ಗೂಡು ಕಟ್ಟುವುದರಲ್ಲಿ ಇವುಗಳ ಚಮತ್ಕಾರ ನಿಜವಾಗಿಯೂ ಪ್ರಶಂಸನೀಯವಾದುದು. ಇವು ಗೂಡು ಕಟ್ಟುವ ಸ್ಥಳವನ್ನು ಹುಡುಕುವುದರಲ್ಲೂ ನಿಜವಾದ ಜಾಣ್ಮೆಯನ್ನು ತೋರಿಸುತ್ತವೆ.


ದಟ್ಟವಾದ ಎಲೆಗಳುಳ್ಳ ಮರಗಳಲ್ಲಿ, ಗಿಡಗಳಲ್ಲಿ, ಪೊದೆಗಳಲ್ಲಿ, ಎಲೆಗಳನ್ನೇ ಹೊಲಿದು ಕಟ್ಟಿರುವ ದರ್ಜಿಹಕ್ಕಿಯ ಗೂಡನ್ನು ಸುತ್ತಲ ಸನ್ನಿವೇಶದಿಂದ ಪ್ರತ್ಯೇಕಿಸಿ ಪತ್ತೆಹಚ್ಚುವುದು ಬಹಳ ಕಷ್ಟ. ಎಲೆಗಳ ನಡುವೆ, ಅದರ ಗೂಡು ಸಹ ಒಂದು ಎಲೆಯಂತೆ ಕೊಂಬೆಯಿಂದ ತೂಗಾಡುತ್ತಿರುತ್ತದೆ. ಒಂದೇ ಒಂದು ಎಲೆಯಿಂದ ಗೂಡು ಕಟ್ಟಬಹುದು ಅಥವಾ ಎರಡು ಎಲೆಗಳನ್ನು ಸೇರಿಸಿ ಹೊಲಿದು ಕಟ್ಟಬಹುದು. ಜೇಡರ ಹುಳುಗಳ ಬಲೆಯಲ್ಲಿರುವ ದಾರಗಳನ್ನು ತಂದು, ದರ್ಜಿ ಹಕ್ಕಿ ತನ್ನ ಗೂಡನ್ನು ಎಲೆಗಳನ್ನು ಸೇರಿಸಿ, ದರ್ಜಿಯಂತೆ ಹೊಲಿದು ಕಟ್ಟುತ್ತದೆ. ಗೂಡಿನ ಒಳಗೆ ಹತ್ತಿ, ಉಣ್ಣೆ ಮುಂತಾದ ಮೆತ್ತನೆಯ ವಸ್ತುಗಳಿಂದ ಮೆತ್ತೆಗಳನ್ನು ಮಾಡಿ ಮೊಟ್ಟೆ ಗಳನ್ನಿಡುತ್ತವೆ. ಗೀಜಗ ಹಕ್ಕಿ ಸಣ್ಣ ಸಣ್ಣ ನಾರಿನ ತುಂಡುಗಳನ್ನು ಶೇಖರಿಸಿ ತಂದು, ಅದನ್ನು ಗೂಡಿನಂತೆ ನೇಯುತ್ತದೆ. ಕೆರೆಕುಂಟೆಗಳ ದಡದಲ್ಲಿ ಬೆಳೆದಿರುವ ಮರಗಿಡಗಳ ರೆಂಬೆಗಳಿಂದ ಇಂಥ ಗೂಡುಗಳು ತೂಗುಬಿದ್ದಿರುವುದನ್ನು ಕಾಣ ಬಹುದು. ಈ ಎರಡು ಜಾತಿಯ ಹಕ್ಕಿಗಳೂ ಗೂಡನ್ನು ಕಟ್ಟುವಾಗ ನೋಡಲು ಬಹಳ ಮೋಜೆನಿಸುತ್ತದೆ. ಗೂಡಿನ ಒಳಗೊಂದು, ಹೊರ ಗೊಂದು ಹಕ್ಕಿ ಕುಳಿತು, ಕೊಕ್ಕಿನ ಸಹಾಯದಿಂದ, ದಾರ ಅಥವಾ ನಾರನ್ನು ಹೊರಗಿನ ಹಕ್ಕಿ ಹೊರಗಿನಿಂದ ಒಳಕ್ಕೂ ಒಳಗಿರುವ ಹಕ್ಕಿ ಹೊರಕ್ಕೂ ಗಂಟೆಗಟ್ಟಲೆ ಆಹಾರ ಸೇವನೆಯನ್ನು ಮರೆತು, ಹೊಲಿಯು ವುದನ್ನೂ ನೇಯುವುದನ್ನೂ ನೋಡಲು ಬಲು ಸೊಗಸು. ಹೀಗೆ ನೇಯ್ದ ಗೂಡುಗಳಲ್ಲಿ, ಶತ್ರುಗಳನ್ನು ಮೋಸಪಡಿಸಲು, ಎಲ್ಲಿಗೋ ದಾರಿತೋರುವ ಸುಳ್ಳು ಬಾಗಿಲನ್ನೂ ಮಾಡುವುದುಂಟು. ಈ ರೀತಿಯ ಗೂಡುಗಳನ್ನು ಪೆಂಡ್ಯು ಲೈನ್ ಟಿಟ್ ಎಂಬ ಹಕ್ಕಿಗಳಲ್ಲಿ ಕಾಣಬಹುದು. ಗೂಡನ್ನು ಕೇವಲ ಒಂದು ಸಂಸಾರದ ಎರಡು ಹಕ್ಕಿಗಳೇ ಅಲ್ಲದೆ, ಆ ಜಾತಿಯ ಇತರ ಹಲವಾರು ಹಕ್ಕಿಗಳೂ ಸೇರಿ ಕಟ್ಟಬಹುದು. ಆದರೆ ಇದು ಬಹಳ ಅಪರೂಪ.


ಕೆಲವು ಹಕ್ಕಿಗಳು ಗೂಡು ಕಟ್ಟುವುದಿಲ್ಲ. ಬದಲಾಗಿ, ತಮ್ಮ ಮೊಟ್ಟೆಗಳನ್ನು ಬೇರೆ ಹಕ್ಕಿಗಳ ಗೂಡಿನಲ್ಲಿಟ್ಟು ಮರಿ ಮಾಡುತ್ತವೆ. ಇಲ್ಲಿ ಎರಡು ಬಗೆಯ ಹಕ್ಕಿಗಳ ಮೊಟ್ಟೆಗಳೂ ತಮ್ಮ ಗಾತ್ರ, ಆಕಾರ ಮತ್ತು ಬಣ್ಣದಲ್ಲಿ ಒಂದೇ ರೀತಿ ಇರುವುದರಿಂದ ಮೋಸಹೋಗುವ ಹಕ್ಕಿಗೆ ತನ್ನ ಮೂಢತ್ವ ತಿಳಿಯುವುದಿಲ್ಲ. ಕೋಗಿಲೆಗಳು ಹೀಗೆ ಕಾಗೆಯ ಗೂಡಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಕಾಗೆಯ ಮೊಟ್ಟೆಗೂ ಕೋಗಿಲೆಯ ಮೊಟ್ಟೆಗೂ ವ್ಯತ್ಯಾಸವೇ ಇರುವುದಿಲ್ಲ. ಮೊಟ್ಟೆಯೊಡೆದು ಮರಿ ಹೊರಬೀಳುವವರೆಗೂ ಕಾಗೆ ಅದನ್ನು ಪೋಷಿಸುತ್ತದೆ. ಮರಿ ಕೂಗಲು ತೊಡಗಿದಾಗಲೇ ಕಾಗೆಗೆ ತನ್ನ ತಪ್ಪು ತಿಳಿಯುವುದು. ಇಷ್ಟು ಹೊತ್ತಿಗಾಗಲೇ ಕೋಗಿಲೆಯ ಮರಿಗೆ ಹಾರುವ ಶಕ್ತಿ ಬಂದಿರುವುದರಿಂದ ಕಾಗೆಗೆ ಸಿಗದಂತೆ ಹಾರಿ ಹೋಗುತ್ತದೆ.


ಗೂಡು ಕಟ್ಟುವ ಹಕ್ಕಿಗಳು ಗೂಡು ಕಟ್ಟುವುದರಲ್ಲಿ ತೋರಿಸುವ ಕುಶಲತೆಗೆ ಮೇರೆಯೇ ಇಲ್ಲ. ಕೆಲವು ಹಕ್ಕಿಗಳು ಗೂಡಿನ ಒಳಭಾಗದಲ್ಲಿ ರಾತ್ರಿಯ ಹೊತ್ತು ಬೆಳಕಿಗಾಗಿ ಮಿಣುಕು ಹುಳುಗಳನ್ನು ಹಿಡಿದು ತಂದು ಜೇಡಿಯ ಮಣ್ಣಿನ ಮಂಟಪ ಕಟ್ಟಿ ಅದಕ್ಕೆ ಅಂಟಿಸಿಕೊಂಡು ಆ ಮಿಣುಕು ಹುಳುವನ್ನೂ ಪೋಷಿಸುತ್ತವೆ ಎಂದು ಹೇಳುವುದುಂಟು.


ಗೂಡು ಕಟ್ಟುವುದರಲ್ಲಿ ಗಂಡು ಹಕ್ಕಿ ಯಾವ ಪಾತ್ರವನ್ನೂ ವಹಿಸದಿರಬಹುದು. ಇಲ್ಲವೆ ಅದರದೇ ಮುಖ್ಯ ಪಾತ್ರವಾಗಬಹುದು. ಕೆಲವು ಹಕ್ಕಿಗಳು ಒಂದು ವರ್ಷ ಉಪಯೋಗಿಸಿದ ಅಥವಾ ವಾಸಿಸಿದ ಗೂಡುಗಳಲ್ಲಿ ಮರು ವರ್ಷ ವಾಸಿಸದಿರಬಹುದು. ಆದರೂ ಕೆಲವು ಪಕ್ಷಿಗಳು, ಒಂದು ಸಾರಿ ಕಟ್ಟಿದ ಗೂಡುಗಳನ್ನು ಪ್ರತಿವರ್ಷವೂ ಸರಿಪಡಿಸಿಕೊಂಡು ಉಪಯೋಗಿಸುತ್ತವೆ. ಮೊಟ್ಟೆಯಿಂದ ಹೊರಬಿದ್ದ ಹೊಸ ಮರಿಗಳು ಕೂಡ, ದೊಡ್ಡವಾಗಿ ಮೊಟ್ಟೆ ಇಡುವ ಕಾಲ ಬಂದಾಗ, ತಾಯಿ ತಂದೆಗಳ ನೆರವು ಇಲ್ಲದೆ, ಕಲಿಯದೆ ತಮ್ಮ ಜಾತಿಗನುಗುಣವಾದ ಗೂಡನ್ನು ಕಟ್ಟುತ್ತವೆ. ಇದು ಪಕ್ಷಿಗಳಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ಹುಟ್ಟುಗುಣ.