ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೇರಿಕೆ, ಆಟ್ಟೋ ಫಾನ್
1602-86. ಜರ್ಮನಿಯ ಭೌತವಿಜ್ಞಾನಿ. 1602ನೆಯ ನವೆಂಬರ್ 20ರಂದು ಪ್ರಷ್ಯನ್ ಸ್ಯಾಕ್ಸನಿಯ ಮ್ಯಾಗ್ಡೆಬರ್ಗ್ ಎಂಬಲ್ಲಿ ಜನನ. ಜರ್ಮನಿಯ ಲೇಡನ್ನಲ್ಲಿ ನ್ಯಾಯ ಹಾಗೂ ಗಣಿತಶಾಸ್ತ್ರಗಳ ಅಭ್ಯಾಸ. ಎರ್ಫರ್ಟ್ ಎಂಬಲ್ಲಿ ಮುಖ್ಯ ಎಂಜಿನಿಯರ್ ಆಗಿ ನೇಮಕ (1626). ಮ್ಯಾಗ್ಡೆಬರ್ಗ್ನ ಉಪಮೇಯರ್ ಆಗಿ (1627) ಬಳಿಕ ಅದೇ ನಗರದ ಮೇಯರ್ ಆಗಿ (1646) ಆಯ್ಕೆ. ಮುಂದೆ ಬ್ರಾಂಡ್ನ್ಬರ್ಗ್ನ ಮ್ಯಾಜಿಸ್ಟ್ರೇಟ್ ಆಗಿ ಕೂಡ ನೇಮಕಗೊಂಡ. ತನ್ನ ವಿರಾಮ ಕಾಲವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಅದರಲ್ಲೂ ವಾಯುಶಾಸ್ತ್ರ ಅಭ್ಯಾಸ ಮತ್ತು ಸಂಶೋಧನೆಯಲ್ಲಿ ಕಳೆಯುತ್ತಿದ್ದ. ಗೆಲಿಲಿಯೊ, ಪಾಸ್ಕಲ್ ಮತ್ತು ಟಾರಿಸೆಲ್ಲಿ ಇವರ ಸಂಶೋಧನೆಗಳಿಂದ ಪ್ರಭಾವಿತನಾಗಿ ನಿರ್ವಾತ ಉಂಟುಮಾಡುವ ವಿಧಾನಗಳನ್ನು ಕುರಿತು ಪ್ರಯೋಗಗಳನ್ನು ಮಾಡಿದ. ಈ ದಿಶೆಯಲ್ಲಿ ಗೇರಿಕೆ ಅನೇಕ ವಿಫಲತೆಗಳನ್ನು ಅನುಭವಿಸಿದ. ತರುವಾಯ ವಾಯುರೇಚಕವನ್ನು ರಚಿಸುವುದರಲ್ಲಿ ಯಶಸ್ವಿಯಾದ (1650). ಇದರ ಜೊತೆಗೆ ಸುತ್ತುತ್ತಿರುವ ಗಂಧಕದ ಚಂಡಿನ ವಿದ್ಯುದೀಕರಣದ ಮೇಲೆ ಆಧಾರಗೊಂಡಿರುವ ಒಂದು ವಿದ್ಯುದ್ಯಂತ್ರವನ್ನು ಕೂಡ ರಚಿಸಿದ. ಧೂಮಕೇತುಗಳು ಕಾಣಿಸಿಕೊಳ್ಳುವ ಅವಧಿಕಾಲವನ್ನು ಗಣಿಸಿದ. ಗೇರಿಕೆ ಬರೆದ ಎಕ್ಸ್‌ಪೆರಿಮೆಂಟ ನೋವ ಮ್ಯಾಗ್ಡೆಬರ್ಗಿಕ ಡೀ ವ್ಯಾಕ್ಯು ಓ ಸ್ಪೇಶಿಯೋ ಎಂಬ ಪುಸ್ತಕ ಬಹು ಪ್ರಸಿದ್ಧವಾದದ್ದು. ಅದರಲ್ಲಿ ಮ್ಯಾಗ್ಡೆಬರ್ಗ್ ಪ್ರಯೋಗ ಎಂಬ ಒಂದು ಚಿತ್ರವಿದೆ. ಒಳಗೆ ನಿರ್ವಾತಗೊಳಿಸಿರುವ ಮತ್ತು ಪರಸ್ಪರ ಅಂಟಿಕೊಂಡಿರುವ ಟೊಳ್ಳಾದ ಎರಡು ಅರ್ಧಗೋಳಗಳನ್ನು ಕುದುರೆಗಳ ಎರಡು ಗುಂಪು ವಿರುದ್ಧ ದಿಕ್ಕಿನಲ್ಲಿ ಎಳೆದರೂ ಆ ಅರ್ಧಗೋಳಗಳನ್ನು ಬೇರ್ಪಡಿಸ ಲಾಗದು ಎಂಬುದನ್ನು ತೋರಿಸುವುದೇ ಆ ಚಿತ್ರ.
1686ರ ಮೇ11 ರಂದು ಗೇರಿಕೆ ಮೃತನಾದ.