ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೇರುಸೊಪ್ಪೆ ಜಲಪಾತ

ವಿಕಿಸೋರ್ಸ್ದಿಂದ
ಗೇರುಸೊಪ್ಪೆ ಜಲಪಾತ

ಶರಾವತೀ ನದಿಯ ಜಲಪಾತ. ಜೋಗ್ (ಜಲಪಾತ) ಎಂದೂ ಪ್ರಸಿದ್ಧ. ಕರ್ನಾಟಕದಲ್ಲಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಉ.ಅ. 140 141 ಮತ್ತು ಪು.ರೇ. 740 501 ಮೇಲಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತೀ ನದಿ ಫತ್ತೀಪೆಟ್ ಬಳಿ ವಾಯವ್ಯಕ್ಕೆ ತಿರುಗಿ, ಹರಿದ್ರಾವತಿ ಮತ್ತು ಎಣ್ಣೆಹೊಳೆಗಳನ್ನು ಕೂಡಿಕೊಂಡು ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಗಡಿಯ ಬಳಿ ಪಶ್ಚಿಮಕ್ಕೆ ತಿರುಗಿ, ಗೇರುಸೊಪ್ಪೆ ಪ್ರಪಾತದಲ್ಲಿ ಧುಮುಕುತ್ತದೆ. ಅನಂತರ ನದಿ 29 ಕಿಮೀ ದೂರದಲ್ಲಿರುವ ಗೇರುಸೊಪ್ಪೆ ಗ್ರಾಮದತ್ತ ಸಾಗಿ ಮುಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ಜಲಪಾತ ಶಿವಮೊಗ್ಗದಿಂದ 100 ಕಿಮೀ ಹಾಗೂ ಹೊನ್ನಾವರದಿಂದ 58 ಕಿಮೀ ದೂರದಲ್ಲಿದೆ.


ಸೌಂದರ್ಯ ತುಂಬಿದ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ. ಆಲ್ಪ್‌ಸ್ ಪರ್ವತದಲ್ಲಿರುವ ಸೆರೊಸೊಲಿ (2400 ಅಡಿ 732ಮೀ), ಎವಾನ್ಸನ್ (1200 ಅಡಿ 366ಮೀ) ಮತ್ತು ಆರ್ವೆ (1100 ಅಡಿ 335ಮೀ) ಜಲಪಾತಗಳು. ಜೋಗ್ ಜಲಪಾತಕ್ಕಿಂತ (829 ಅಡಿ 252.6ಮೀ) ಎತ್ತರವಾಗಿವೆ ಯಾದರೂ ಅವುಗಳಲ್ಲಿ ಜೋಗದಷ್ಟು ನೀರಿಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕ. ಆದರೆ ಆ ಜಲಪಾತ (164 ಅಡಿ 50ಮೀ) ಗೇರುಸೊಪ್ಪೆಯಷ್ಟು ಎತ್ತರವಿಲ್ಲ. ಶರಾವತೀ ನದಿ ಹರಿದು ಧುಮುಕುವ ಕಮರಿಯ ಬಂಡೆ 250 ಗಜಗಳಷ್ಟು (228.6ಮೀ) ಉದ್ದವಾಗಿದೆ. ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸು. 829 ಅಡಿ (252.6ಮೀ) ಆಳಕ್ಕೆ ಧುಮುಕುತ್ತದೆ. ಈ ಕವಲು ಸಿರಸಿಯ ಸೋದೆ ರಾಜನ ಹೆಸರನ್ನು ತಾಳಿ ರಾಜಾ ಎನಿಸಿಕೊಂಡಿದೆ. ಸೋದೆ ರಾಜ ಈ ಕವಲಿರುವ ಕಡೆಯಲ್ಲಿ ಕಟ್ಟಿಸಲು ಉದ್ದೇಶಿಸಿದ್ದ ಮಂಟಪದ ತಳಪಾಯದ ಗುರುತುಗಳನ್ನು ಈಗಲೂ ಕಾಣಬಹುದು. ರಾಜಾ ಜಲಪಾತ ಬೀಳುತ್ತಿರುವಂತೆಯೇ, ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ಜಲಪಾತ ರಾಣಿ (ಲೇಡಿಬ್ಲಾಂಚೆ) ತಾನು ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ.


ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿರುತ್ತದೆ. ಆಗ ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ. ಜಲಪಾತದ ಪುರ್ಣದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ಕಾಣಬಹುದು. ಜಲಪಾತದ ಕಡಿದಾದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆಮಾಡಿಕೊಂಡು ಪ್ರಪಾತದ ಬಳಿ ಗುಂಪು ಗುಂಪಾಗಿ ಹಾರುತ್ತಿರುತ್ತವೆ. ಸೂರ್ಯಕಿರಣಗಳಿಂದ ಜಲಪಾತ ದಿನದ ವಿವಿಧ ಕಾಲಗಳಲ್ಲಿ ವೈವಿಧ್ಯ ತಾಳುತ್ತದೆ. ನಿತ್ಯ ಹಸುರಿನ ಹೆಮ್ಮರಗಾಡಿನ ನಡುವೆ ಧುಮುಕುವ ಶರಾವತಿಯ ಸದ್ದನ್ನು ಕೇಳಿ ಬ್ರಿಟಿಷ್ ಸೈನಿಕರು ಟಿಪ್ಪುಸುಲ್ತಾನನ ಸೈನ್ಯದ ಆರ್ಭಟವೆಂದು ತಿಳಿದು ಮೋಸ ಹೋಗಿದ್ದರೆಂದು ಪ್ರತೀತಿಯಿದೆ. ಆದರೆ ಈಗ ಪ್ರವಾಹದ ಪರಿಮಾಣ ಇಳಿದಿರುವುದರಿಂದ ಅಂಥ ಗರ್ಜನೆ ಕೇಳಿಸದು. ಆದರೂ ಅದರ ಏಕತಾನದ ನಾದ ಹತ್ತಿರ ನಿಂತು ನೋಡುವವರ ಕಿವಿಗಳಿಗೆ ಘನಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ.

ಮೌನವನ್ನು ಸೀಳುವ ಆ ನಿತ್ಯನಾದವನ್ನು ಆಲಿಸುತ್ತ ನಿಂತವರಿಗೆ ಒಮ್ಮೆ ನಾದಸಮಾಧಿಯನ್ನುಂಟುಮಾಡಬಹುದು. ಜೊತೆಗೆ ಬಿಸಿಲು ಹರಿದಂತೆ ಜಲಧಾರೆಗಳ ಮೇಲೆ ಹರಿದು ನಿಂತಿರುವ ಕಾಮನಬಿಲ್ಲುಗಳು ನಿತ್ಯನವ್ಯವಾಗಿ ಕಾಣಿಸುವುವು; ಬೆಳದಿಂಗಳು ತುಂಬಿದ್ದಾಗ ರಾತ್ರಿಯ ವೇಳೆಯೂ ಕಾಮನಬಿಲ್ಲು ಕಾಣಿಸುವುದುಂಟು. ಈ ಜೀವಂತ ಪ್ರವಾಹದ ಸೌಮ್ಯ-ಭೀಕರತೆಗಳ ವರ್ಣನೆ ಮಾತಿಗೆ ನಿಲುಕುವುದಿಲ್ಲ.


ಗೇರುಸೊಪ್ಪೆ ಜಲಪಾತವನ್ನು ಅಳೆದು ಮಾಹಿತಿಯನ್ನು ಸಂಗ್ರಹಿಸಲು ಮಾರ್ಚ್ 1856ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳು ಜಲಪಾತದ ಬಗ್ಗೆ ಗಮನಾರ್ಹ ವರದಿಯನ್ನು ಒಪ್ಪಿಸಿದ್ದಾರೆ. ಪ್ರಪಾತದ ಆಳ 829' ಎಂದು ಇವರು ಖಚಿತಪಡಿಸಿದರು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ 132' (40ಮೀ). ನದಿಯ ಅಡ್ಡಗಲ ಉತ್ತರ ಕನ್ನಡ ಮತ್ತು ಶಿವಮೊಗ್ಗ ದಂಡೆಗಳ ಮೇಲಿರುವ ಬಂಗಲೆಗಳ ನಡುವೆ 710 ಗಜ (649ಮೀ).


1869ರ ಜನವರಿಯಲ್ಲಿ ಜಲಪಾತವನ್ನು ಕಂಡ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತು. ಈಗ ಅಲ್ಲಿ, ಶರಾವತಿ ಧುಮುಕುವ ಪ್ರಪಾತದ ಎದುರಿಗೆ, ನದಿ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ, ಪ್ರವಾಸಿ ಬಂಗಲೆ, ಹೋಟೆಲು, ಸರ್ಕಾರಿಭವನ ಮತ್ತು ಸಣ್ಣ ಅಂಚೆ ಕಚೇರಿ ಇವೆ. ಅಕ್ಟೋಬರಿನಿಂದ ಫೆಬ್ರವರಿಯ ವರೆಗೆ ಸಹಸ್ರಾರು ಪ್ರವಾಸಿಗರು ಜಗತ್ಪ್ರಸಿದ್ಧವಾದ ಈ ಮನೋಹರ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಜಲಪಾತದ ಬಳಿ ಜೋಗ್ ಎಂಬ ಕಿರುಗ್ರಾಮ 1948ರಲ್ಲಿ ಪ್ರಾರಂಭವಾದ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆಯ ಚಟುವಟಿಕೆಗಳಿಂದ ದೊಡ್ಡದಾಗಿ ಬೆಳೆದುಕೊಂಡಿದೆ.