ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೊಬ್ಬರ
ಗೋಚರ
ಸಸ್ಯಕ್ಕೆ ಅವಶ್ಯವಿರುವ ಯಾವುದೋ ಒಂದು ಅಥವಾ ಅಧಿಕ ಪೋಷಕಗಳನ್ನು ಒದಗಿಸುವ ಉದ್ದೇಶದಿಂದ ಮತ್ತು ಅಗತ್ಯವಿದ್ದಲ್ಲಿ ಮಣ್ಣಿನ ಭೌತಗುಣವನ್ನು ಉತ್ತಮಗೊಳಿಸುವ ಸಲುವಾಗಿ ಉಪಯೋಗಿಸುವ ಪದಾರ್ಥ. ಸಸ್ಯದ ಉತ್ತಮ ಬೆಳೆವಣಿಗೆಗೆ ಹಲವಾರು ಮೂಲವಸ್ತಗಳು ಅವಶ್ಯ. ಇವುಗಳ ಪೈಕಿ ಕೆಲವನ್ನು ಅದು ಮಣ್ಣಿನಿಂದಲೂ ಉಳಿದವನ್ನು ನೀರು ಮತ್ತು ವಾಯುವಿನಿಂದಲೂ ಪಡೆಯುತ್ತದೆ. ಈ ಮೂಲವಸ್ತುಗಳಿಗೆ ಸಸ್ಯಪೋಷಕಗಳು (ಪ್ಲಾಂಟ್ ನ್ಯೂಟ್ರಿಯೆಂಟ್ಸ್) ಎಂದು ಹೆಸರು. ಇವನ್ನು ಪ್ರಧಾನ ಸಸ್ಯಪೋಷಕಗಳು ಮತ್ತು ಗೌಣ ಸಸ್ಯಪೋಷಕಗಳು ಎಂಬುದಾಗಿ ವಿಭಾಗಿಸಬಹುದು. ಕಾರ್ಬನ್, ಹೈಡ್ರೊಜನ್, ಆಕ್ಸಿಜನ್, ನೈಟ್ರೊಜನ್, ಫಾಸ್ಫರಸ್, ಪೊಟ್ಯಾಸಿಯಮ್, ಸಲ್ಫರ್, ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಪ್ರಧಾನ ಸಸ್ಯಪೋಷಕಗಳು. ಕಬ್ಬಿಣ, ಮ್ಯಾಂಗನೀಸ್, ಬೊರಾನ್, ಸತು, ತಾಮ್ರ ಮತ್ತು ಮಾಲಿಬ್ಡಿನಮ್ ಗೌಣ ಸಸ್ಯಪೋಷಕಗಳು. ಪೋಷಕಗಳ ಪೈಕಿ ಹೆಚ್ಚಿನವು ಮಣ್ಣಿನಿಂದಲೇ ಸಸ್ಯಕ್ಕೆ ಒದಗುತ್ತವೆ. ಆದರೆ ಮಣ್ಣಿನಲ್ಲಿ ಇವು ಸಾಕಷ್ಟು ಪರಿಮಾಣದಲ್ಲಿ ಇಲ್ಲದಾಗ