ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಚಂದ್ರ
ಗೋಪಚಂದ್ರ - ಗುಪ್ತರ ಕಾಲದಲ್ಲಿ ಸಮತಟ ಎಂದು ಪ್ರಸಿದ್ಧವಾಗಿದ್ದ (ಈಗಿನ ಪಶ್ಚಿಮ ಬಂಗಾಳ) ಪ್ರದೇಶವನ್ನು ಗುಪ್ತರ ಅನಂತರ ಆಳಿದ ಅರಸರಲ್ಲಿ ಒಬ್ಬ. ಕ್ರಿ.ಶ. 6ನೆಯ ಶತಮಾನದಲ್ಲಿ ಬಂಗಾಳದ ತಲೆಯೆತ್ತಿದ ಗೌಡ ಮತ್ತು ವಂಗ ಎಂಬ ಎರಡು ರಾಜ್ಯಗಳಲ್ಲಿ ವಂಗ ರಾಜ್ಯ ಬಂಗಾಳದ ದಕ್ಷಿಣ ಮತ್ತು ಪಶ್ಚಿಮ ಭಾಗಗಳನ್ನೊಳಗೊಂಡಿತ್ತು.
ಗುಪ್ತರ ವೈನ್ಯಗುಪ್ತ 507ರ ವರೆಗೂ ಆಳುತ್ತಿದ್ದನೆಂಬುದು ಆ ವರ್ಷದ ಅವನ ಗುಣೈಘರ್ ತಾಮ್ರಶಾಸನದಿಂದ ತಿಳಿದಿದೆ. ಈತನ ಸಾಮಂತನೂ ಅಧಿಕಾರಿಯೂ ಆಗಿ ಮಹಾಪ್ರತೀಹಾರ, ಪಂಚಾಧಿಕರಣೋಪರಿಕ ಮುಂತಾದ ಬಿರುದುಗಳನ್ನು ಪಡೆದಿದ್ದ ವಿಜಯಸೇನನೆಂಬವನೂ ಗೋಪಚಂದ್ರನ ಕಾಲಕ್ಕೆ ಸೇರಿದ, ಬದ್ರ್ವಾನ್ ಜಿಲ್ಲೆಯ ಮಲ್ಲಾಸರುಲ್‍ನಲ್ಲಿ ದೊರೆತ ತಾಮ್ರಶಾಸನದಲ್ಲಿ ಉಕ್ತನಾದ ವಿಜಯಸೇನನೂ ಒಬ್ಬನೇ ಎಂದು ಊಹಿಸಲಾಗಿದೆ. ವೈನ್ಯಗುಪ್ತನ ಅನಂತರ (507ರ ಅನಂತರ) ವಂಗದೇಶವನ್ನು ಗೋಪಚಂದ್ರ ಸ್ವತಂತ್ರವಾಗಿ ಆಳತೊಡಗಿದನೆಂದೂ ವಿಜಯಸೇನ ಮೊದಲು ಗುಪ್ತರ, ಅನಂತರ ಗೋಪಚಂದ್ರನ ಅಧೀನದಲ್ಲಿದ್ದ ಮಾಂಡಲಿಕನೆಂದೂ ಹೇಳಲಾಗಿದೆ.
ಗೋಪಚಂದ್ರನ ಆಳ್ವಿಕೆ ಮಧ್ಯ ಬಂಗಾಲದ ಫರೀದ್‍ಪುರ್ ಜಿಲ್ಲೆಯನ್ನೂ ನೈಋತ್ಯದಲ್ಲಿಯ ಬದ್ರ್ವಾನ್ ಜಿಲ್ಲೆಯನ್ನೂ ಒಳಗೊಂಡಿತ್ತು. ಫರೀದ್‍ಪುರದಲ್ಲಿ ಈತನ ಆಳ್ವಿಕೆಯ 18ನೆಯ ವರ್ಷದ ತಾಮ್ರಶಾಸನ ಲಭ್ಯವಾಗಿದೆ. ದಂಡಭುಕ್ತಿ ಪ್ರದೇಶ ಸಹ ಅವನ ರಾಜ್ಯದಲ್ಲಿ ಸೇರಿತ್ತೆಂಬ ಅಂಶ ಇತ್ತೀಚೆಗೆ ಒರಿಸ್ಸ ರಾಜ್ಯದ ಬಲಸೋರ್ ಜಿಲ್ಲೆಯ ಜಯರಾಮಪುರದಲ್ಲಿ ದೊರೆತ ಗೋಪಚಂದ್ರನ ಆಳ್ವಿಕೆಯ ಮೊದಲನೆಯ ವರ್ಷದ ಶಾಸನದಿಂದ ತಿಳಿದುಬಂದಿದೆ. ಆಯ್ರ್ಯಮಂಜುಶ್ರೀಮೂಲ ಕಲ್ಪದಲ್ಲಿ ನಮೂದಿಸಲಾದ, ಆ ಕಾಲದ ಪಶ್ಚಿಮದ ಅರಸನಾದ, ಗೋಪನೆಂಬವನು ಈ ಗೋಪಚಂದ್ರನೇ ಎಂದೂ ಹೇಳಲಾಗಿದೆ.
ಇವನ ಮನೆತನಕ್ಕೆ ಸೇರಿದವರು ಧರ್ಮಾದಿತ್ಯ ಮತ್ತು ಸಮಾಚಾರದೇವ. ಧರ್ಮಾದಿತ್ಯನ ತಾಮ್ರಶಾಸನಗಳೆರಡು ಕೂಡ ಫರೀದ್‍ಪುರದಲ್ಲೇ ದೊರೆತಿವೆ. ಅವುಗಳಲ್ಲಿ ಉಕ್ತವಾದ ಘೋಷಚಂದ್ರ, ಅನಾಚಾರ, ಶಿವಚಂದ್ರ ಇತ್ಯಾದಿಗಳು ಗೋಪಚಂದ್ರನ ಶಾಸನದಲ್ಲೂ ಕಂಡುಬಂದಿರುವುದರಿಂದ ಧರ್ಮಾದಿತ್ಯ ಹಾಗೂ ಗೋಪಚಂದ್ರರ ಈ ಶಾಸನಗಳ ನಡುವಣ ಕಾಲ ಬಹಳ ಹೆಚ್ಚಾಗಿರಲಾರದು. ಗೋಪಚಂದ್ರ ಸುಮಾರು 20 ವರ್ಷಗಳ ಕಾಲ ಆಳಿ, ಅನಂತರ ಧರ್ಮಾದಿತ್ಯ ಆಳತೊಡಗಿರಬಹುದು. ಸಮಾಚಾರದೇವ ಇವರಿಬ್ಬರ ಅನಂತರ ಆಳಿದ್ದಿರಬೇಕು. ಈತ 14 ವರ್ಷಗಳ ಕಾಲವಾದರೂ ಆಳಿರಬಹುದೆಂದು ಇವನ ನಾಣ್ಯಗಳಿಂದ ತಿಳಿಯುತ್ತದೆ. ಆದರೆ ಈ ಮೂವರ ಆಳ್ವಿಕೆಯ ಕಾಲಾನುಪೂರ್ವಿ ಅಥವಾ ಅವರ ನಡುವಣ ಸಂಬಂಧಗಳನ್ನು ಕುರಿತು ಭಿನ್ನಾಭಿಪ್ರಾಯಗಳಿವೆ. ಖಚಿತವಾಗಿ ಏನನ್ನೂ ಹೇಳಲು ಪ್ರಸ್ತುತ ದೊರಕಿರುವ ಆಧಾರಗಳಿಂದ ಸಾಧ್ಯವಿಲ್ಲ. (ಜಿ.ಬಿ.ಆರ್.)