ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋರಾ ಕುಂಬಾರ
1267-1312. ಮಹಾರಾಷ್ಟ್ರದ ಒಬ್ಬ ಪ್ರಸಿದ್ಧ ಸಂತ. ಆ ಕಾಲದ ಸಂತರಲ್ಲಿ ಈತ ಹಿರಿಯನಿದ್ದುದರಿಂದ ಇವನನ್ನು ಎಲ್ಲರೂ ಗೋರಾ ತಾತಾ ಎನ್ನುತ್ತಿದ್ದರು. ಈತನ ಹುಟ್ಟೂರು ತೇರಢೋಕೆ. ಇದು ಪಂಡರಾಪುರಕ್ಕೆ 128 ಕಿಮೀ ದೂರದಲ್ಲಿದೆ. ಇಲ್ಲಿಯೇ ಈ ಸಂತನ ಸಮಾಧಿಯೂ ಇದೆ. ಗೋರಾ ನಾಮದೇವನನ್ನು ಪರೀಕ್ಷಿಸಿ ಅವನನ್ನು ಹಸಿಗಡಿಗೆ ಎಂದನಂತೆ. ನಾಮದೇವ, ಜ್ಞಾನದೇವರ ತೀರ್ಥಯಾತ್ರೆಯ ಕಾಲಕ್ಕೆ ಈತನೂ ಅವರೊಟ್ಟಿಗೆ ಇದ್ದ. ಈತನ ಕೆಲವು ಅಭಂಗಗಳು ಅನುಭವಪೂರ್ಣವಾಗಿವೆ.
ದೇವನ ಆದಿರೂಪ ತನ್ನ ದೇಹದಲ್ಲಿ ಪ್ರವೇಶಿಸಿದಾಗ ಭೂತಬಾಧೆಯಾದಂತೆನಿಸಿ ತೆಂದು ಗೋರಾ ಹೇಳಿಕೊಂಡಿದ್ದಾನೆ. ಕರ್ಮದ ಹೆಸರಿನಿಂದಲೂ ಪಾಪ ಪುಣ್ಯಗಳ ಮಲದಿಂದಲೂ ಅಲಿಪ್ತನಾಗಿ ಈ ಭಕ್ತ ಜೀವನ್ಮುಕ್ತಿಯನ್ನು ಹೊಂದಿದ. ಅನುಭಾವದ ಸುಖ ಮೇರೆ ಮೀರಿದಾಗ ಮೌನ ಆವರಿಸುತ್ತದೆ. ಇಂಥ ಆಧ್ಯಾತ್ಮಿಕ ಮೌನದಿಂದ ಮಾತ್ರ ಅನುಭಾವದ ದಿವ್ಯಾನಂದವನ್ನು ಸವಿಯಲು ಬರುತ್ತದೆ ಎಂದು ಇವನ ಅಭಿಪ್ರಾಯ. ಮೂಕನಿಗೆ ತಾನುಂಡ ಸಕ್ಕರೆಯ ಸವಿಯನ್ನು ಬಣ್ಣಿಸಲು ಬರುವುದಿಲ್ಲ. ಹಾಗೆ ಅನುಭಾವದಿಂದ ಬರುವ ಆನಂದವನ್ನು ಬಣ್ಣಿಸಲು ಬಾರದು. ತಿಳಿದವರು ಅದನ್ನು ಜಗತ್ತಿಗೆ ಸಾರುತ್ತ ಹೋಗಬಾರದು. ಅನುಭಾವದ ರಹಸ್ಯವನ್ನರಿಯುವ ಯೋಗ್ಯತೆ ಎಲ್ಲರಲ್ಲಿಯೂ ಇರುವುದಿಲ್ಲ ಎಂದು ಇವನ ಅಭಿಪ್ರಾಯ. ಆಕಾಶವನ್ನು ದಿಟ್ಟಿಸಿದಾಗ ಸುಖ ಸುಖವನ್ನಪ್ಪಲು ಹೋದಂತೆ ಇವನಿಗೆ ಅನಿಸಿತಂತೆ. ಜಯ ಜಯ ಝನತನ್ ಎಂಬ ಅನಾಹತ ಧ್ವನಿ ಕೇಳಿಸಿತಂತೆ. ಇವು ಗೋರಾ ಕುಂಭಾರನ ಅನುಭಾವದ ಮಾತುಗಳು.
ಗೋರಾ ಕುಂಬಾರನ ವಿಷಯದಲ್ಲೊಂದು ಪವಾಡದ ಕತೆ ಇದೆ. ಭಕ್ತಿಯ ಆವೇಶದಲ್ಲಿ ನರ್ತನಮಾಡುತ್ತಿದ್ದ ಗೋರಾ ಅರಿವಿಲ್ಲದೆ ತನ್ನ ಮಗುವನ್ನು ತುಳಿದುಬಿಟ್ಟ. ಮಗು ಸತ್ತಿತು. ಹೆಂಡತಿ ವಿಹ್ವಲೆಯಾಗಿ ಗಂಡನನ್ನು ದೂರಿದಳು. ಗಂಡ ಹೆಂಡತಿಯನ್ನು ಹೊಡೆಯಹೋದ. ಹೆಂಡತಿ ದೇವರ ಮೇಲೆ ಆಣೆ ಇಟ್ಟಳು. ಗಂಡ ಹಿಂದೆ ಸರಿದ. ಯಾವತ್ತಿಗೂ ಹೆಂಡತಿಯನ್ನು ಮುಟ್ಟುವುದಿಲ್ಲವೆಂದು ಪ್ರತಿಜ್ಞೆ ಮಾಡಿದ. ಮನೆತನದ ಅಭಿವೃದ್ಧಿಯಲ್ಲಿ ಆಸಕ್ತಳಾದ ಹೆಂಡತಿ ದೂರೋದ್ದೇಶದಿಂದ ತನ್ನ ತಂಗಿಯನ್ನೇ ಸವತಿಯನ್ನಾಗಿ ಮನೆಗೆ ತಂದಳು. ಗೋರಾ ಅವಳನ್ನೂ ಮುಟ್ಟಲಿಲ್ಲ. ಬೇಸರಗೊಂಡ ಸೋದರಿಯರು ಒಮ್ಮೆ ಮಲಗಿದ್ದ ಗಂಡನ ಕೈಗಳನ್ನು ಹಿಡಿದುಬಿಟ್ಟರು. ತನ್ನ ವ್ರತಕ್ಕೆ ಭಂಗಬಂದಿತೆಂದು ತಿಳಿದ ಗೋರಾ ತನ್ನ ಎರಡೂ ಮುಂಗೈಗಳನ್ನು ಕತ್ತರಿಸಿಕೊಂಡ. ಮುಂದೊಂದು ದಿನ ಪಂಡರಪುರದಲ್ಲಿ ಭಕ್ತರೆಲ್ಲ ತಾಳ ಹಾಕುತ್ತಿರಲಾಗಿ ಉತ್ಸಾಹಗೊಂಡ ಈತ ತನ್ನ ಮೋಟುಗೈಗಳಲ್ಲೆ ತಾಳಹಾಕಲು ಮೊದಲುಮಾಡಿದ. ಹೀಗೆ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಈತನ ಮೋಟುಗೈಗಳು ಮೊದಲಿನಂತೆ ಬೆಳೆದುವು. ಸತ್ತ ಮಗು ಮತ್ತೆ ದಕ್ಕಿತು ಎಂಬ ಕತೆ ಇದೆ.