ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋರ್ಗಸ್ ವಿಲಿಯಂ ಕ್ರಾಫರ್ಡ್

ವಿಕಿಸೋರ್ಸ್ದಿಂದ
ಗೋರ್ಗಸ್ ವಿಲಿಯಂ ಕ್ರಾಫರ್ಡ್

1854-1920. ಅಮೆರಿಕ ಸಂಯುಕ್ತ ಸಂಸ್ಥಾನಗಳ ಸೈನ್ಯದಲ್ಲಿ ಶಸ್ತ್ರವೈದ್ಯ. ಪನಾಮ ಕಾಲುವೆಯ ಕೆಲಸಗಾರರು ಮಲೇರಿಯ ಮತ್ತು ಹಳದಿಜ್ವರಗಳಿಂದ ಪೀಡಿತರಾಗಿ ಆ ಕಾಲುವೆ ನಿರ್ಮಾಣಕಾರ್ಯ ಸ್ಥಗಿತವಾಗಿದ್ದಾಗ ಈ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣದಿಂದ ನಿರ್ಮಾಣಕಾರ್ಯ ಮುಂದುವರಿಯುವಂತೆ ಮಾಡಿದವನೀತ.


ಗೋರ್ಗಸ್ 1854ರ ಅಕ್ಟೋಬರ್ 3ರಂದು ಅಲಬಾಮ ರಾಜ್ಯದ ಮೊಬೈಲ್ ಎಂಬಲ್ಲಿ ಜನಿಸಿದ. ದಕ್ಷಿಣ ವಿಶ್ವವಿದ್ಯಾಲಯ ಸೆವಾನಿ-ಟೆನಿಸಿಯಲ್ಲಿ ವ್ಯಾಸಂಗ ಮುಗಿಸಿ ನ್ಯೂಯಾರ್ಕಿನ ಬೆಲ್ವ್ಯೂ ಆಸ್ಪತ್ರೆ ಪ್ರೌಢ ವಿದ್ಯಾಶಾಲೆಯ ಎಂ.ಡಿ. ಪದವೀಧರನಾದ (1879). ಮರುವರ್ಷ ಅಮೆರಿಕ ಸಂಯುಕ್ತಸಂಸ್ಥಾನಗಳ ಸೈನ್ಯದ ವೈದ್ಯಕೀಯ ಪಡೆಗೆ ಸೇರಿ ಸ್ಪೇನ್ ಮತ್ತು ಅಮೆರಿಕ ನಡುವಣ ಯುದ್ಧದಲ್ಲಿ ಭಾಗವಹಿಸಿ ಮೇಜರ್ ಹುದ್ದೆಗೆ ಬಡ್ತಿ ಪಡೆದ. ಸ್ಯಾನ್ಟಿಯಾಗೋ ದಂಡಯಾತ್ರೆಯ ತರುವಾಯ ಈತನನ್ನು ಹವಾನದಲ್ಲಿ ಹಳದಿಜ್ವರ ಪೀಡಿತರಾದವರನ್ನು ನೋಡಿಕೊಳ್ಳಲು ಕಳುಹಿಸಿದರು. 1898ರಿಂದ 1902ರ ವರೆಗೆ ಹವಾನ ದಲ್ಲಿ ಬಾಹ್ಯ ಪರಿಸರ ನಿರ್ಮಲೀಕರಣ ಕಾರ್ಯ ಕ್ರಮದ ಅಧಿಕಾರಿ ಯಾಗಿದ್ದು ಸೊಳ್ಳೆಗಳು ಹಳದಿಜ್ವರವನ್ನು ಒಬ್ಬನಿಂದ ಇನ್ನೊಬ್ಬನಿಗೆ ಹರಡುವ ವಿಧಾನದ ವಿಚಾರವಾಗಿ ಅನೇಕ ಸಂಶೋಧನೆಗಳನ್ನೂ ಅಧ್ಯಯನಗಳನ್ನೂ ನಡೆಸಿದ. ತತ್ಪರಿಣಾಮವಾಗಿ ಹವಾನದಲ್ಲಿ ನೆಲೆ ಗೊಂಡಿದ್ದ ಹಳದಿಜ್ವರದ ಮೂಲೋಚ್ಚಾಟನೆ ಸಾಧ್ಯವಾಯಿತು. ಇದನ್ನು ಸರ್ಕಾರ ಮೆಚ್ಚಿ 1903ರಲ್ಲಿ ಗೋರ್ಗಸ್ ನಿಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸೈನ್ಯದಲ್ಲಿ ಸಹಾಯಕ ಸರ್ಜನ್ ಜನರಲ್ ಆಗಿ ನೇಮಿಸಿ ಕರ್ನಲ್ ಪದವಿಗೆ ಬಡ್ತಿ ನೀಡಿತು. ಅನಂತರ ಈತ ಪನಾಮ ಕಾಲುವೆ ನಿರ್ಮಾಣಕ್ಷೇತ್ರದ ನಿರ್ಮಲೀಕರಣ ಮುಖ್ಯಾಧಿಕಾರಿಯಾಗಿ 1904ರಲ್ಲಿ ನೇಮಿಸಲ್ಪಟ್ಟ. ಕಾಲುವೆಯ ನಿರ್ಮಾಣ ಕ್ಕೆ ಮಲೇರಿಯ ಹಾಗೂ ಹಳದಿಜ್ವರ ಮುಖ್ಯ ಅಡಚಣೆಗಳಾಗಿದ್ದವು. ಅವನ್ನು ನಿರ್ಮೂಲನೆ ಮಾಡಿ, ಕಾಲುವೆ ಕೆಲಸ ಅವಿಚ್ಛಿನ್ನವಾಗಿ ಮುಂದುವರಿಯುವಂತೆ ಮಾಡಿದ್ದು ಗೋರ್ಗಸನ ಪರಮಸಿದ್ಧಿ. 1907ರಲ್ಲಿ ಈತ ಪನಾಮ ಭೂಸಂಧಿ ಕಾಲುವೆ ನಿಯೋಜಿತ ಮಂಡಲಿಯ ಸದಸ್ಯನಾಗಿ ನೇಮಕಗೊಂಡ. 1908ರಲ್ಲಿ ಮೊತ್ತಮೊದಲು ಕೂಡಿದ ಅಖಿಲ ಅಮೆರಿಕದ ವೈದ್ಯರ ಸಮ್ಮೇಳನದಲ್ಲಿ ಸಂಯುಕ್ತಸಂಸ್ಥಾನಗಳ ಪ್ರತಿನಿಧಿಯಾಗಿ ಭಾಗವಹಿಸಿದ. 1908-1909ರಲ್ಲಿ ಅಮೆರಿಕ ವೈದ್ಯರ ಸಂಘಕ್ಕೆ ಅಧ್ಯಕ್ಷನಾದ.


ದಕ್ಷಿಣ ಆಫ್ರಿಕದ ಚಿನ್ನದ ಗಣಿ ಪ್ರದೇಶಗಳಲ್ಲೊಂದಾದ ರ್ಯಾಂಡ್ ಎಂಬಲ್ಲಿ ಆಗಾಗ ತಲೆದೋರುತ್ತಿದ್ದ ಇನ್‍ಫ್ಲುಯೆನ್‍ಜ಼ಾ ಪಿಡುಗನ್ನು ಹತೋಟಿಗೆ ತರಲು ಸೂಕ್ತವಾದ ಸಲಹೆ ಕೊಡಬೇಕೆಂದು ಗೋರ್ಗಸನಿಗೆ ಕರೆಬಂತು (1913). ಗಣಿ ಕೂಲಿಗಾರರ ಪಾಳೆಯಗಳಲ್ಲಿ ತುಂಬಿ ತುಳುಕಾಡುತ್ತಿದ್ದ ಹೊಲಸುರಾಡಿಗಳೇ ಈ ಪಿಡುಗುಗಳಿಗೆ ಕಾರಣವೆಂಬುದನ್ನು ಈತ ಕಂಡುಕೊಂಡು ಪಿಡುಗಿನ ವಿರುದ್ಧ ಯಶಸ್ವೀ ಸಮರ ಹೂಡಿದ. 1914ರಲ್ಲಿ ಈತನಿಗೆ ಅಮೆರಿಕದ ಸರ್ಜನ್-ಜನರಲ್ ಪದವಿ ದೊರೆಯಿತು. ಮರುವರ್ಷ ಮೇಜರ್-ಜನರಲ್ ಆಗಿ 1918ರಲ್ಲಿ ಕೆಲಸದಿಂದ ನಿವೃತ್ತನಾದ. ತರುವಾಯ ರಾಕ್ಫೆಲರ್ ಸಂಸ್ಥೆಯ ಅಂತಾರಾಷ್ಟ್ರೀಯ ಆರೋಗ್ಯ ಸಮಿತಿಯ ಹಳದಿಜ್ವರ ವಿಚಾರ ಮಂಡಲಿಯ ಖಾಯಂ ನಿರ್ದೇಶಕನಾಗಿ ಸೇವೆ ಸಲ್ಲಿಸಿದ. ಮಧ್ಯ ಅಮೆರಿಕದ ಗ್ವಯಾಕ್ವಿಲ್, ಈಕ್ವಡಾರ್ ಮತ್ತು ಗ್ವಾಟಿಮಾಲಗಳಲ್ಲಿ ಹಳದಿಜ್ವರದ ವಿಚಾರವಾಗಿ ಸಂಶೋಧನೆ ನಡೆಸಿದ. 1919ರಲ್ಲಿ ಪೆರು ದೇಶದಲ್ಲಿ ನಿರ್ಮಲೀಕರಣ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡ.


ಈತ 1920ರ ಜುಲೈ 3ರಂದು ಲಂಡನಿನಲ್ಲಿ ಗತಿಸಿದ. ಈತನ ಸ್ಮರಣಾರ್ಥವಾಗಿ ವಾಷಿಂಗ್ಟನ್ನಿನಲ್ಲಿ ಗೋರ್ಗಸ್ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್ ಇನ್ಕ್‌ ಎಂಬ ಸಂಸ್ಥೆಯನ್ನೂ ಪನಾಮದಲ್ಲಿ ಗೋರ್ಗಸ್ ಮೆಮೋರಿಯಲ್ ಲ್ಯಾಬೊರೇಟರಿ ಆಫ್ ಟ್ರಾಪಿಕಲ್ ರಿಸರ್ಚ್ ಎಂಬ ಸಂಸ್ಥೆಯನ್ನೂ ಸ್ಥಾಪಿಸಲಾಗಿದೆ.


ಸೊಳ್ಳೆಗಳ ಮೇಲೂ ಹಳದಿಜ್ವರದ ಮೇಲೂ ಕೆಲಸ ಮಾಡಿದ ಇನ್ನೊಬ್ಬನೆಂದರೆ ಗೋರ್ಗಸನ ಸಮಕಾಲೀನನಾದ ವಾಲ್ಟರ್ ರೀಡ್ ರೀಡ್, ವಾಲ್ಟರ್.