ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಳಗುಮ್ಮಟ

ವಿಕಿಸೋರ್ಸ್ದಿಂದ
ಗೋಳಗುಮ್ಮಟ

ಬಿಜಾಪುರದಲ್ಲಿ ಆದಿಲ್ಷಾಹಿ ದೊರೆ ಮಹಮ್ಮದ್ (1627-56) ತನಗಾಗಿ ಕಟ್ಟಿಸಿಕೊಂಡ ಸ್ಮಾರಕ. ಜಗತ್‍ಪ್ರಸಿದ್ಧವಾದುದು. ಇದೊಂದು ಸರಳ ವಿನ್ಯಾಸದ ದೈತ್ಯಾಕಾರದ ಕಟ್ಟಡ. ಹೊರ ತಳ ಅಳತೆ 205 X 205’, ಎತ್ತರ 198' 6'’. ಈ ಕಟ್ಟಡದಲ್ಲಿ ನಾಲ್ಕು ಗೋಡೆಗಳಿಂದ ಆವೃತವಾಗಿ ಮೇಲು ಗುಮ್ಮಟದಿಂದ ಆಚ್ಛಾದಿತವಾಗಿರುವ ಒಂದು ದೊಡ್ಡ ಹಜಾರ ಮಾತ್ರ ಇದೆ. 135' 5'’ ಚೌಕವಾಗಿದ್ದು, 18,337,67 ಚ. ಅ. ಪ್ರದೇಶವನ್ನು ಆಕ್ರಮಿಸಿರುವ ಈ ಹಜಾರ, ಕಂಬಗಳಿಲ್ಲದೆ ಆಚ್ಛಾದಿತವಾಗಿರುವ ಹಜಾರಗಳಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡದು. ಹಜಾರದ ಸುತ್ತಲಿನ ನಾಲ್ಕು ಗೋಡೆಗಳು ಮೊದಲು ಮೂರು ಮೂರು ಕಮಾನುಗಳನ್ನೊಳಗೊಂಡಿದ್ದವು. ಅನಂತರದಲ್ಲಿ ಉತ್ತರದ ಗೋಡೆಯ ಮಧ್ಯದ್ದೊಂದನ್ನು ಬಿಟ್ಟು ಉಳಿದ ಕಮಾನುಗಳನ್ನು ಗೋಡೆಗಳಿಂದ ಮುಚ್ಚಲಾಗಿದ್ದು, ದಕ್ಷಿಣದ ಮಧ್ಯ ಕಮಾನಿನಲ್ಲಿ ಮಾತ್ರ ಒಂದು ಪ್ರವೇಶದ್ವಾರಕ್ಕೆ ಅವಕಾಶ ಮಾಡಲಾಗಿದೆ. ಒಳಭಾಗದಲ್ಲಿ ಈ ಗೋಡೆಗಳಿಗೆ ಒತ್ತಿದಂತೆಯೇ ಮೇಲೆದ್ದು, ಅಡ್ಡಡ್ಡವಾಗಿ ಪರಸ್ಪರ ಛೇದಿಸುವ ಎಂಟು ಕಮಾನುಗಳನ್ನು ಅಳವಡಿಸಲಾಗಿದೆ. ನೆಲದಿಂದ ಸುಮಾರು 109' ಎತ್ತರದಲ್ಲಿ ಇವುಗಳ ತಲೆಬಿಂದುಗಳಿಂದ ಒಂದು ಅಷ್ಟಕೋನ ನಿರ್ಮಾಣವಾಗಿದೆ. ಇವುಗಳ ಮೇಲೆ ದುಂಡು ಗುಮ್ಮಟವನ್ನು ಕೂರಿಸಲಾಗಿದೆ. ನೆಲ ಚೌಕವಾಗಿದ್ದರೂ ಮೇಲೆ, ದುಂಡುಗುಮ್ಮಟವನ್ನಿಡಲು ಪರಸ್ಪರ ಛೇದಿಸುವ ಕಮಾನುಗಳನ್ನು ನಿರ್ಮಿಸಿರುವ ತಂತ್ರ ವಾಸ್ತುರಚನಾ ರೀತಿಯಿಂದ ವಿಶಿಷ್ಟವಾದ್ದು. ಈ ಕಮಾನುಗಳ ಮೇಲೆ ಗುಮ್ಮಟದ ಬುಡದಲ್ಲಿ ಅದರ ದುಂಡು ಒಳಗೋಡೆಗೆ ಹೊಂದಿಕೊಂಡಂತೆ ವರ್ತುಲಾಕರದಲ್ಲಿ ಹಬ್ಬಿರುವ 11' ಅಗಲದ ಒಂದು ಚಾಚು ಗ್ಯಾಲರಿ ಇದೆ. ಈ ಗ್ಯಾಲರಿ ನೆಲದಿಂದ 109' 6'’ ಮೇಲಿದೆ. ಈ ಮಟ್ಟದಿಂದ ಗುಮ್ಮಟದ ತಲೆ 68' 6'’ ಎತ್ತರದಲ್ಲಿದೆ. ಎಂದರೆ ಹಜಾರದ ಒಳಗೆ ನೆಲದಿಂದ ಗುಮ್ಮಟದ ನೆತ್ತಿಯ ವರೆಗಿನ ಎತ್ತರ 178'. ಗುಮ್ಮಟದ ವ್ಯಾಸ 124' 5'’. ಏಷ್ಯ ಖಂಡದಲ್ಲೇ ಅತಿ ದೊಡ್ಡದಾದ, ವಿಶ್ವದಲ್ಲಿ ಎರಡನೆಯದಾದ, ಗುಮ್ಮಟವಿದು. ಗೋಡೆಗಳ ರಚನೆಯಲ್ಲಿ ಸಾಮಾನ್ಯ ಕಲ್ಲುತುಂಡುಗಳನ್ನು ಗಾರೆಯೊಡನೆ ಹುದುಗಿಸಿ, ಒಳ ಹೊರಮೈಗಳಲ್ಲಿ ಹಲವೆಡೆ ತೆಳು ಚಪ್ಪಡಿಗಳನ್ನು ಅಂಟಿಸಿ ಮೇಲೆ ಗಾರೆ ಬಳಿಯಲಾಗಿದೆ. ಮೇಲೆ ಹೋದಂತೆ ಸ್ವಲ್ಪ ಸ್ವಲ್ಪವಾಗಿ ಒಳ ಚಾಚುವ ಇಟ್ಟಿಗೆಯ ವರ್ತುಲಗಳನ್ನು ಒಂದರ ಮೇಲೊಂದರಂತೆ ಪೇರಿಸಿ ಗುಮ್ಮಟವನ್ನು ರಚಿಸಲಾಗಿದೆ. ಇಲ್ಲಿ ಉಪಯೋಗಿಸಿರುವ ಬಿಗಿ ಗಾರೆಯಿಂದಾಗಿ ಗುಮ್ಮಟ ಕಾಂಕ್ರೀಟಿನಲ್ಲಿ ಮಾಡಿದ ಬೋರಲಿಟ್ಟ ದೊಡ್ಡ ಬಟ್ಟಲಿನಂತೆ ಒಂದೇ ಘನವಾಗಿ ಭದ್ರವಾಗಿ ನಿಂತಿದೆ. ಗುಮ್ಮಟದ ಗೋಡೆಯ ದಪ್ಪ 10'; ಅದರ ಹೊರ ವ್ಯಾಸ 144'. ಕಟ್ಟಡದ ಹೊರಗಿನ ನಾಲ್ಕು ಮೂಲೆಗಳಿಗೆ ಸೇರಿದಂತಿರುವ ಷಟ್ಕೋಣಾಕೃತಿಯ ಗೋಪುರಗಳ ಒಳಗಿರುವ ಮೆಟ್ಟಿಲುಗಳಿಂದ ಚಾವಣಿಯ ಮೇಲೇರಿ, ಗುಮ್ಮಟದಲ್ಲಿ ಕೊರೆದಿರುವ ಎಂಟು ಸಣ್ಣ ದ್ವಾರಗಳ ಮೂಲಕ ಒಳಗಿನ ಚಾಚು ಗ್ಯಾಲರಿಗೆ ಹೋಗಬಹುದು. ಇಲ್ಲಿ ವಿಶಾಲವಾದ ಆಚ್ಛಾದನ ಗುಮ್ಮಟದಿಂದ ಶಬ್ದತರಂಗಗಳು ಪ್ರತಿಧ್ವನಿಸಿ ವಿಶಿಷ್ಟ ಪರಿಣಾಮ ಉಂಟುಮಾಡುತ್ತವೆ. ಮಾತು, ಚಪ್ಪಾಳೆ ಅಥವಾ ಯಾವುದೇ ಶಬ್ದವನ್ನು ಇಲ್ಲಿ ಒಮ್ಮೆ ಹೊಮ್ಮಿಸಿದರೆ ಸುಮಾರು ಹತ್ತಕ್ಕೂ ಹೆಚ್ಚು ಸಲ ಅದು ಸ್ಪಷ್ಟವಾಗಿ ಪ್ರತಿಫಲಿಸುವುದಲ್ಲದೆ ಎಷ್ಟೇ ಸಣ್ಣ ಶಬ್ದವನ್ನು ಒಂದೆಡೆ ಉಂಟುಮಾಡಿದರೂ, ಈ ಗ್ಯಾಲರಿಯ ಯಾವುದೇ ಭಾಗದಲ್ಲಿರುವವರಿಗೂ ಅದೇ ಶಬ್ದ ಸ್ಪಷ್ಟವಾಗಿ ಗೋಡೆಯಿಂದ ಹೊರ ಬೀಳುವಂತೆ ಕೇಳುತ್ತದೆ. ಈ ಆಶ್ಚರ್ಯಕರ ವೈಶಿಷ್ಟ್ಯದಿಂದಾಗಿ ಇದು ಪಿಸುಗುಟ್ಟುವ ಗ್ಯಾಲರಿ ಎಂದು ಪ್ರಸಿದ್ಧವಾಗಿದೆ.


ಕಟ್ಟಡದ ಹೊರಮೈಯ ವಿನ್ಯಾಸ ಸುಂದರವಾಗಿ ರೂಪಿತವಾಗಿದೆ. ಕಮಾನುಗಳ ನ್ನೊಳಗೊಂಡ ಎತ್ತರದ ಗೋಡೆಗಳ ಮೇಲೆ ಚಾವಣಿಯ ಮಟ್ಟದಲ್ಲಿ ಚಾಚು ಕಪೋತವಿದೆ. ಅದರ ಅಡಿಯಲ್ಲಿ ತೂಗಾಡುವ ಬಾಳೆಮೋತೆಗಳಿಂದ ಅಲಂಕೃತವಾಗಿರುವ ಗಂಧವಾರಣಗಳುಂಟು. ಎತ್ತರದಲ್ಲಿ ಕಟ್ಟಡದ ಸುತ್ತ ಹಬ್ಬಿರುವ ಈ ಅಲಂಕರಣ, ಗೋಡೆಗಳ ಬರಿಮೈ ವೈಶಾಲ್ಯವನ್ನು ಖಂಡಿಸಿ ಅಲಂಕೃತ ಕಂಠಹಾರದಂತೆ ಸುಂದರವಾಗಿ ಜೋಡಣೆಗೊಂಡಿದೆ. ಅದರ ಮೇಲೆ ಸಣ್ಣ ಕಮಾನುಗಳ ಸಾಲೂ, ಅದಕ್ಕೂ ಮೇಲೆ ಚೂಪು ಪಟ್ಟೆಗಂಬಗಳ ಸಾಲೂ ಇವೆ. ಕಟ್ಟಡದ ನಾಲ್ಕೂ ಮೂಲೆಗಳಿಗೆ ಹೊಂದಿಕೊಂಡಂತಿರುವ ಷಡ್ಭುಜ ಗೋಪುರಗಳನ್ನು ಏಳು ಅಂತಸ್ತುಗಳಲ್ಲಿ ಎತ್ತಲಾಗಿದೆ. ಒಂದೊಂದು ಮುಖದಲ್ಲೂ ಚೂಪು ತುದಿಯ ಕಮಾನಿನ ಕಿಟಕಿಗಳನ್ನಿಡಲಾಗಿದೆ. ಈ ಗೋಪುರದ ಮೇಲ್ಭಾಗದಲ್ಲಿ ಚಿಕ್ಕ ಗುಮ್ಮಟಗಳಿವೆ. ಇವು ಚಾವಣಿಯ ಮಟ್ಟಕ್ಕಿಂತಲೂ ಮೇಲಿವೆ. ವಿಶಾಲ ಚಾವಣಿಯ ಮೇಲೆ ಮಧ್ಯದಲ್ಲಿರುವ ಬೃಹತ್ ಗುಮ್ಮಟ ಅರೆಗೋಳಾಕಾರದ್ದು. ಇದರ ತಳ ಕೂಡ ಮೀನಾರುಗಳ ಮೇಲಿರುವ ಚಿಕ್ಕ ಗುಮ್ಮಟಗಳಂತೆ ಪದ್ಮದಳಗಳಿಂದ ಸುತ್ತುವರಿಯಲ್ಪಟ್ಟಿದೆ. ಅಲ್ಲದೆ ಗೋಡೆಗಳ ಮೇಲೆಲ್ಲ ಗಾರೆಯಲ್ಲಿ ಅನೇಕ ಬಗೆಯ ವಿನ್ಯಾಸಗಳ ಅಲಂಕಾರವಿದೆ. ಈ ವಾಸ್ತು ಮತ್ತು ಅಲಂಕರಣ ಪರಸ್ಪರ ಪೂರಕವಾಗಿ,


ಗೋಳಗುಮ್ಮಟವನ್ನು ಮೋಹಕ ಕೃತಿಯನ್ನಾಗಿ ಮಾಡಿವೆ. ಈ ಕಟ್ಟಡವನ್ನು ಹತ್ತಿರದಿಂದ ನೋಡುವವರಿಗೆ, ಇದರ ದೈತ್ಯಾಕಾರದ ಎದುರು ತಮ್ಮ ವಾಮನತ್ವದ ಅನುಭವವಷ್ಟೇ ಆದರೂ ದೂರದಿಂದ ನೋಡಿದಲ್ಲಿ ಈ ಸೌಂದರ್ಯದ ಸ್ವರೂಪ ಸ್ಪಷ್ಟವಾಗುತ್ತದೆ.


ಗೋಳಗುಮ್ಮಟದ ಒಳಹಜಾರದ ಮಧ್ಯೆ ದೊಡ್ಡ ಚೌಕ ಕಟ್ಟೆಯ ಮೇಲೆ ಮುಹಮ್ಮದನ ಮತ್ತು ಅವನ ಸಮೀಪ ಸಂಬಂಧಿಗಳ ಕೃತಕ ಗೋರಿಗಳಿವೆ. ನಿಜವಾದ ಗೋರಿಗಳು ಇದರ ಕೆಳಗೆ ನೆಲಮಾಳಿಗೆಯಲ್ಲಿವೆ. ಮುಹಮ್ಮದ ತನ್ನ ಆಳಿಕೆಯ ಉತ್ತರಾರ್ಧದಲ್ಲಿ ಈ ಕಟ್ಟಡವನ್ನು ಕಟ್ಟಲಾರಂಭಿಸಿ, ತನ್ನ ಕೊನೆಗಾಲದವರೆಗೂ ಮುಂದುವರಿಸಿದ. ಆದರೆ ಆ ಹೊತ್ತಿಗೂ ಕಟ್ಟಡದ ಗಾರೆಯ ಅಲಂಕರಣ ಮುಗಿದಿರಲಿಲ್ಲವಾಗಿ ಆ ಭಾಗಗಳು ಇಂದೂ ಅಪೂರ್ಣವಾಗಿಯೇ ಉಳಿದಿವೆ. ಮುಹಮ್ಮದ್ ತನ್ನ ಗೋರಿಗಾಗಿ ಬಹಳ ಆಸ್ಥೆ ವಹಿಸಿದ್ದನೆಂದೂ, ತನ್ನ ದೇಹವನ್ನು ಪವಿತ್ರ ಸ್ಥಳದಲ್ಲಿ ಹುಗಿಯಬೇಕೆಂಬ ಉದ್ದಿಶ್ಯದಿಂದ ಇರಾಕಿನಲ್ಲಿ ಹುಸೇನನ ಸಮಾಧಿ ಇರುವ ಕರ್ಬಲಾದಿಂದ ಮಣ್ಣನ್ನು ತರಿಸಿಕೊಂಡಿದ್ದನೆಂದೂ ತಿಳಿದುಬಂದಿದೆ. ತನ್ನ ಸಮಾಧಿಗಾಗಿ ಈ ದೊರೆ ತಳೆದಿದ್ದ ಅಸೀಮ ಆಸಕ್ತಿಯಿಂದಾಗಿ ಜಗತ್ತಿನ ಉತ್ತಮ ವಾಸ್ತುರಚನೆಯೊಂದು ಮೈತಳೆಯಿತು.


ವಿನ್ಯಾಸದಲ್ಲಿ ಗೋಳಗುಮ್ಮಟ ಬಹಳ ಸರಳವಾಗಿದ್ದರೂ ಇದರ ಬೃಹದಾಕಾರ, ವಿವಿಧ ಭಾಗಗಳ ಹಿತಪ್ರಮಾಣ, ಮಿತ ಅಲಂಕರಣ ಮತ್ತು ಚತುರ ರಚನಾ ತಂತ್ರ - ಇವುಗಳಿಂದಾಗಿ ಆದಿಲ್ಷಾಹಿ ವಾಸ್ತುಶಿಲ್ಪದ ಉಚ್ಚತಮ ಸಾಹಸದ ಸಾಧನೆಯೆಂದು ಇದು ಪರಿಗಣಿತವಾಗಿದೆ.