ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋವರ್ಧನ
ಗೋಚರ
ಒಂದು ಪರ್ವತ. ಯಮುನಾ ನದೀತೀರದಲ್ಲಿ ಬೃಂದಾವನದ ಹತ್ತಿರವಿದೆ. ಒಮ್ಮೆ ನಂದಗೋಕುಲದ ಗೊಲ್ಲರು ಇಂದ್ರನಿಗಾಗಿ ಒಂದು ಯಾಗವನ್ನು ಏರ್ಪಡಿಸಬೇಕೆಂದು ಸಂಕಲ್ಪಿಸಿದ್ದರು. ಯಾಗದ ಬದಲು ಗೋವರ್ಧನ ಗಿರಿಯನ್ನೇ ಪೂಜಿಸಬೇಕೆಂದು ಶ್ರೀಕೃಷ್ಣ ಗೊಲ್ಲರಿಗೆ ಸೂಚಿಸಿದ. ಅವರು ಕೃಷ್ಣನ ಸೂಚನೆಯಂತೆ ಗಿರಿಯನ್ನು ಪೂಜಿಸಲು ಅಣಿಯಾದರು. ಆಗ ಇಂದ್ರ ಕ್ರುದ್ಧನಾಗಿ ಗೋಕುಲ ಮುಳುಗಿಹೋಗುವಂತೆ ಮಳೆ ಸುರಿಸಲಾರಂಭಿಸಿದ. ಆಗ ಕೃಷ್ಣ ತನ್ನ ಕಿರಿಬೆರಳಿನಿಂದ ಆ ಪರ್ವತವನ್ನು ಎತ್ತಿ ಕೊಡೆಯಂತೆ ಹಿಡಿದು ಅದರ ಕೆಳಗೆ ಗೊಲ್ಲರು ಮತ್ತು ಅವರ ದನಕರುಗಳು ರಕ್ಷಣೆ ಪಡೆವಂತೆ ಮಾಡಿದ. ಇದು ಕೃಷ್ಣ ಎಸಗಿದ ಪವಾಡಗಳಲ್ಲಿ ಒಂದು. ಇದರಿಂದಾಗಿ ಕೃಷ್ಣನನ್ನು ಗೋವರ್ಧನ ಗಿರಿಧಾರಿ, ಗಿರಿಧರ ಮುಂತಾಗಿ ಭಕ್ತರು ಸ್ತುತಿಸಿದ್ದಾರೆ. ಈ ವಿಚಾರವಾಗಿ ಹರಿವಂಶ, ವಿಷ್ಣು ಪುರಾಣ, ಭಾಗವತ ಮತ್ತು ಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ.