ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋವಿಂದ ಪಂತ
ಸು. 1710-61. ಮಹಾರಾಷ್ಟ್ರದ ಪೇಷ್ವೆ ರಾಜ್ಯದ ಒಬ್ಬ ಸರ್ದಾರ. ಈತನ ಮೂಲಸ್ಥಳ ರತ್ನಗಿರಿ ಜಿಲ್ಲೆಯ ನೇವರೆ. ಗೋವಿಂದ ಪಂತ ಆ ಊರಿನ ಕುಲಕರ್ಣಿ; ಜಾತಿಯಿಂದ ಕರ್ಹಾಡ ಬ್ರಾಹ್ಮಣ. ಈತನ ಪೂರ್ಣ ಹೆಸರು ಗೋವಿಂದ ಬಲ್ಲಾಳ ಖರೆ. ಪಂತನಿಗೆ ಸಂಸಾರದಲ್ಲಿ ವಿಪತ್ತುಗಳೂ ಜಾತಿಯ ಜನರಿಂದ ಕಿರುಕುಳಗಳೂ ಉಂಟಾಗಲು ಈತ ತನ್ನ ಊರನ್ನು ಬಿಟ್ಟು ಪುಣೆಗೆ ಹೋದ. ಅಲ್ಲಿ ಈತ ಪೇಷ್ವೆ ಬಾಜಿರಾಯನ ಮನೆಯಲ್ಲಿ ನೌಕರಿಯಲ್ಲಿದ್ದ. ಪಂತನ ಉತ್ತಮ ಗುಣಗಳಿಗೆ ಮೆಚ್ಚಿದ ಬಾಜಿರಾಯ ಅದೇ ತಾನೆ ತನ್ನ ರಾಜ್ಯಕ್ಕೆ ಸೇರಿದ ಬುಂದೇಲ್ಖಂಡ ಪ್ರಾಂತಕ್ಕೆ ಇವನನ್ನು ಕಾರಭಾರಿಯನ್ನಾಗಿ ನೇಮಿಸಿದ (1733). ಆಗ ಇವನಿಗೆ ಗೋವಿಂದ ಪಂತ ಬುಂದೇಲ್ ಎಂಬ ಹೆಸರು ಪ್ರಾಪ್ತವಾಯಿತು. ಈತ ತನ್ನ ಶೌರ್ಯ ಧೈರ್ಯಗಳಿಂದ, ಧೂರ್ತತೆಯಿಂದ ರಜಪುತ ರಾಜರ ಮೇಲೆ ಮರಾಠರ ವರ್ಚಸ್ಸನ್ನು ಬೆಳೆಸಿದ. ಇದರಿಂದಾಗಿ ಈತ ಒಬ್ಬ ಪ್ರಬಲ ಹಾಗೂ ಪ್ರಮುಖ ಸರ್ದಾರನೆಂದೂ ಗಣಿಸಲ್ಪಟ್ಟ. ಕುರಇ ನವಾಬನಿಂದ ಈತ ಗೆದ್ದ ಪ್ರಾಂತದಲ್ಲಿ ಸಾಗರ ಎಂಬ ದೊಡ್ಡ ಕೆರೆಯಿತ್ತು. ಅದರ ಹತ್ತಿರದಲ್ಲಿ ಅದೇ ಹೆಸರಿನ ಒಂದು ನಗರವನ್ನು ಕಟ್ಟಿ ಅದನ್ನು ತನ್ನ ಆಡಳಿತಕೇಂದ್ರವನ್ನಾಗಿ ಮಾಡಿಕೊಂಡ (1736-37).
1751ರಲ್ಲಿ ನಡೆದ ಫರೂಕಾಬಾದ್ ಸಮರದಲ್ಲಿ ರೋಹಿಲರನ್ನು ಸೋಲಿಸಿ ದಿಲ್ಲಿಯ ಮೊಗಲ್ ಬಾದಶಹನ ಮೇಲೆ ತಮ್ಮ ಪ್ರತಿಷ್ಠೆಯನ್ನು ಪ್ರಕಟಿಸಿದ ಮರಾಠಾ ಸರದಾರರಲ್ಲಿ ಗೋವಿಂದ ಪಂತನೂ ಒಬ್ಬ. ಪಂತ ಬಕ್ರುಲ್ಲಾಖಾನ್ನನ್ನು ಸೋಲಿಸಿ ಸ್ಥಾನಭ್ರಷ್ಟನನ್ನಾಗಿ ಮಾಡಿ ಆತನ ಪ್ರಾಂತವನ್ನು ತನ್ನ ಸೀಮೆಗೆ ಸೇರಿಸಿದ. ಅನಂತರ ಅಂತರವೇದಿ ಪ್ರಾಂತವನ್ನು ಗೆದ್ದು ಇಟಾವಾ ಬಳಿಯಲ್ಲಿ ಘೋರ ಕದನ ನಡೆಸಿ 1756ರಲ್ಲಿ ಅಸ್ಗರ್ ಅಲಿ ಎಂಬ ಸರ್ದಾರನನ್ನು ಕೊಂದ (1756). 1760-61ರಲ್ಲಿ ನಡೆದ 3ನೆಯ ಪಾಣಿಪತ್ ಯುದ್ಧದಲ್ಲಿ ಈತ ಮಹಾನ್ ಶೌರ್ಯವನ್ನು ಪ್ರದರ್ಶಿಸಿದ. ಈತ ಅಹ್ಮದ್ ಷಾ ಅಬ್ದಾಲಿಯನ್ನು ಎದುರಿಸಿ ಅವನ ಸೈನ್ಯಕ್ಕೆ ಹೋಗುತ್ತಿದ್ದ ಸರಕುಗಳನ್ನು ದಾರಿಯಲ್ಲೇ ತಡೆಹಿಡಿದ. ಆದರೆ ಅಬ್ದಾಲಿ ಹೋಳ್ಕರನ ಬಾವುಟವೇ ಮುಂತಾದ ರಾಜ ಚಿಹ್ನೆಗಳನ್ನು ಬಳಸಿ ಬೇಟೆಯ ನಿಮಿತ್ತ ಹೊರಟಹಾಗೆ ಮಾಡಿ ಮೋಸದಿಂದ ಪಂತನನ್ನು ಕೊಂದ. ಈತನ ಸಾವಿನಿಂದ ಅಬ್ದಾಲಿಗೆ ಮುಂದಿನ ಯುದ್ಧ ಸುಗಮವಾಯಿತು.