ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಷ್ಠಿಗಾನ
ಹಲವರು ಒಟ್ಟುಗೂಡಿ ಒಮ್ಮೆಗೇ ಹಾಡಿ ನುಡಿಸುವುದಕ್ಕೆ ಈ ಹೆಸರಿದೆ. ಇಂಥ ಸಮುದಾಯದಲ್ಲಿ ಪ್ರತಿಯೊಬ್ಬರಿಗೂ ಪೂರ್ವ ನಿಶ್ಚಿತ ಧಾತು (ಗೇಯಾಂಶ) ಮತ್ತು ಮಾತುಗಳು ತಿಳಿದಿದ್ದು ಅವನ್ನು ನಿಯತಕಾಲದಲ್ಲಿ ಸ್ವತಂತ್ರವಾಗಿ ಹಾಡಿ ನುಡಿಸುತ್ತಾರೆ. ಪಾಶ್ಚಾತ್ಯರ ಆರ್ಕೆಸ್ಟ್ರ ಎಂಬ ಮಾತು ನಮ್ಮಲ್ಲಿ ಇದಕ್ಕೆ ಪರ್ಯಾಯವಾಗಿ ಇಂದು ಬಳಕೆಗೆ ಬಂದಿದೆ. ಕರ್ಣಾಟಕ ಸಂಗೀತ ಅಥವಾ ಹಿಂದೂಸ್ತಾನೀ ಸಂಗೀತಗಳಲ್ಲಿನ ಕಚೇರಿಗಳನ್ನು ಗೋಷ್ಠಿಗಾಯನವೆನ್ನಲಾಗದು. ಏಕೆಂದರೆ ಇವುಗಳಲ್ಲಿನ ಪ್ರಧಾನ ಗಾಯಕ ಅಥವಾ ವಾದಕ ಹಾಡಿ ನುಡಿಸುವುದನ್ನೇ ಪಕ್ಕವಾದ್ಯಗಳವರು ಅನುಸರಿಸಿ ಅನುಕರಿಸುತ್ತಾರೆ. ಸಂಗೀತದ ಧಾತುವಾದರೂ ಇಲ್ಲಿ ಪೂರ್ವನಿಶ್ಚಿತವಲ್ಲ. ಗಾಯಕ ವಾದಕರುಗಳ ಸ್ವತಂತ್ರ ಕಲ್ಪನಾಶಕ್ತಿಯೇ ಇದರ ಜೀವನಾಡಿ. ಅಲ್ಲದೆ ಗೋಷ್ಠಿಗಾನದ ಮೂಲತತ್ತ್ವವಾದ ಸಹಕಾಲಿಕ ಸ್ವತಂತ್ರ ಗಾನವಾದನಗಳು ಇಲ್ಲಿಲ್ಲ.
ಇತಿಹಾಸ
[ಸಂಪಾದಿಸಿ]ಗೋಷ್ಠಿಗಾನ ಎಂಬುದು ಆಧುನಿಕ ಪ್ರಯೋಗಸಿದ್ಧಿಯನ್ನು ಪಡೆದಿದ್ದರೂ ಅಶುದ್ಧವೇ ಎನ್ನಬೇಕು. ಗೋಷ್ಠಿ ಮತ್ತು ಗಾನ ಎಂಬ ಶಬ್ದಗಳಿಂದ ಆದ ಶಬ್ದವಿದು. ಇವೆರಡು ಮಾತುಗಳಿಗೂ ಭಾರತೀಯ ಸಂಗೀತಶಾಸ್ತ್ರದಲ್ಲಿ ನಿರ್ದಿಷ್ಟವೂ ಸ್ವತಂತ್ರವೂ ಆದ ಬೇರೆ ಬೇರೆ ಅರ್ಥಗಳೇ ಇವೆ. ಗೋಷ್ಠಿ ಎಂಬುದು ಗಾಯನವಿಲ್ಲದೆ ವಾದ್ಯಗಳು ಮಾತ್ರ ಸೇರಿ ಉತ್ಪತ್ತಿಮಾಡಿದ ಸಂಗೀತಕ್ಕೆ ಶಾಸ್ತ್ರವಿಟ್ಟ ಪಾರಿಭಾಷಿಕ ಸಂಜ್ಞೆ. ಇದನ್ನೇ ಪಂಪಾದಿ ಕನ್ನಡ ಕವಿಗಳು ಪ್ರಾಚೀನ ಕಾಲದಿಂದಲೂ ಗೊಟ್ಟಿ ಎಂಬ ತದ್ಭವ ರೂಪದಲ್ಲಿ ಹೇಳುತ್ತ ಬಂದಿದ್ದಾರೆ. ಇದಕ್ಕೆ ಶುಷ್ಕವೆಂಬ ಮತ್ತೊಂದು ಹೆಸರೂ ಉಂಟು. ಗಾನವೆಂದರೆ ಹಾಡುವುದು ಎಂದು ಅರ್ಥ. ಹಾಡು ಬಾಜನೆಗಳೆರಡೂ ಸೇರಿದ ಕೂಟವನ್ನು ಬೃಂದವೆಂಬ ಹೆಸರಿನಿಂದ ಶಾಸ್ತ್ರ ವ್ಯವಹರಿಸುತ್ತದೆ. ಒಬ್ಬರೇ ಹಾಡುವುದಕ್ಕೆ ಏಕಲವೆಂದೂ ಇಬ್ಬರು ಕೂಡಿ ಹಾಡುವ ದ್ವಂದ್ವಗಾಯನಕ್ಕೆ ಯಮಳವೆಂದೂ ಮೂವರು ಅಥವಾ ಹೆಚ್ಚು ಮಂದಿ ಕೂಡಿ ಹಾಡುವುದಕ್ಕೆ ಬೃಂದವೆಂದೂ ಶಾಸ್ತ್ರೀಯ ಪರಿಭಾಷೆ. ಬೃಂದವನ್ನು ಕನಿಷ್ಠ, ಮಧ್ಯಮ, ಉತ್ತಮ ಮತ್ತು ಕೋಲಾಹಲವೆಂದು ನಾಲ್ಕು ಬಗೆಯಾಗಿ ಸಂಗೀತರತ್ನಾಕರದಲ್ಲಿ ಶಾರ್ಙ್ಗದೇವ ವಿಂಗಡಿಸುತ್ತಾನೆ. ಇವುಗಳಲ್ಲಿ ಉತ್ತಮ ಗಾಯಕ ವೃಂದದಲ್ಲಿ ನಾಲ್ವರು ಗಾಯನರೂ ಎಂಟು ಅನುಗಾಯನರೂ (ಇವರಿಗೆ ಸಮಗಾಯನರೆಂದು ಹೆಸರು: ಗಾಯನ=ಹಾಡುಗಾರ ಎಂದು ಶಾಸ್ತ್ರಾರ್ಥ) ನಾಲ್ವರು ಕೊಳಲು ನುಡಿಸುವವರೂ ನಾಲ್ವರು ಮಾರ್ದಂಗಿಕರೂ ಇರುತ್ತಿದ್ದರು. ಮಧ್ಯಮ ಗಾಯನ ಬೃಂದದಲ್ಲಿ ಇದರ ಅರ್ಧದಷ್ಟು ಸಂಖ್ಯೆಯ ಗಾಯನ, ಸಮಗಾಯನ ಮುಂತಾದವರೂ ಕನಿಷ್ಠ ಗಾಯನ ಬೃಂದದಲ್ಲಿ ಒಬ್ಬ ಮುಖ್ಯ ಗಾಯನನೂ ಮೂವರು ಗಾಯನಿಯರೂ (ಹಾಡುಗಾರ್ತಿ) ಇಬ್ಬರು ವಾಂಶಿಕರೂ (ಕೊಳಲುಗಾರ) ಇಬ್ಬರು ಮಾರ್ದಂಗಿಕರೂ ಇರುತ್ತಿದ್ದರು. ಹಾಗೆಯೇ ಉತ್ತಮ ಗಾಯನೀ ಬೃಂದದಲ್ಲಿ ಇಬ್ಬರು ಮುಖ್ಯ ಗಾಯನಿಯರೂ ಹತ್ತು ಸಮಗಾಯನಿಯರೂ ಇಬ್ಬರು ವಾಂಶಿಕರೂ ಇಬ್ಬರು ಮದ್ದಳೆಗಾರರೂ ಇರುತ್ತಿದ್ದರು. ಮಧ್ಯಮ ಗಾಯನೀ ಬೃಂದದಲ್ಲಿ ಒಬ್ಬ ಮುಖ್ಯ ಗಾಯನಿಯೂ ನಾಲ್ವರು ಸಮಗಾಯನಿಯರೂ ನಾಲ್ವರು ವಾಂಶಿಕರೂ ಒಬ್ಬ ಮಾರ್ದಲಿಕನೂ ಕನಿಷ್ಠ ಗಾಯನೀ ಬೃಂದದಲ್ಲಿ ಇದಕ್ಕಿಂತ ಕಡಿಮೆ ಸಂಖ್ಯೆಯವರೂ ಇರುತ್ತಿದ್ದರು. ಉತ್ತಮ ಬೃಂದದಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಹಾಡುವವರು ನುಡಿಸುವವರು ಭಾಗವಹಿಸಿದರೆ ಅದನ್ನು ಕೋಲಾಹಲವೆಂದು ಕರೆಯುವರು. ಇದೆಲ್ಲವನ್ನೂ ರನ್ನ, ಅಭಿನವಪಂಪ, ಅಗ್ಗಳ, ಕಮಲಭವ ಮೊದಲಾದ ಕನ್ನಡ ಕವಿಗಳು ಹತ್ತನೆಯ ಶತಮಾನದಿಂದ ಹೇಳುತ್ತ ಬಂದಿರುವುದರಿಂದ, ಕನ್ನಡನಾಡಿನಲ್ಲಿ ಬೃಂದ ಸಂಗೀತ ಈ ವೇಳೆಗಾಗಲೇ ಪ್ರೌಢಾವಸ್ಥೆಯಲ್ಲಿ ಉತ್ಕರ್ಷವನ್ನು ಪಡೆದಿತ್ತೆಂದು ತಿಳಿಯಬಹುದು.
ವಾದ್ಯಗಳು ಮಾತ್ರವಿರುವ ಬೃಂದವಿಶೇಷಕ್ಕೆ ಕುತಪವೆಂದು ಸಂಜ್ಞೆ. ಶಾರ್ಙ್ಗದೇವ ಸಂಗೀತರತ್ನಾಕರದ ಪ್ರಕೀರ್ಣಕಾಧ್ಯಾಯದಲ್ಲಿ ಕುತಪವನ್ನು ತತ, ಅವನದ್ಧ ಮತ್ತು ನಾಟ್ಯವೆಂದು ಮೂರು ಬಗೆಯಾಗಿ ವರ್ಣಿಸಿದ್ದಾನೆ. ತತಕುತಪದಲ್ಲಿ ಘೋಷವತೀ, ಚಿತ್ರಾ, ವಿಪಂಚೀ, ಪರಿವಾದಿನೀ, ವಲ್ಲಕೀ, ಕುಬ್ಜಿಕಾ, ಜ್ಯೇಷ್ಠಾ, ನಕುಲೋಷ್ಠೀ, ಕಿನ್ನರೀ, ಜಯಾ, ಕೂರ್ಮಿಕಾ, ಪಿನಾಕೀ, ಹಸ್ತಿಕಾ, ಶತತಂತ್ರೀ, ಔದುಂಬರೀ, ಷಟ್ಕರ್ಣ, ಪೌಣ, ರಾವಣಹಸ್ತಾ, ಸಾರಂಗೀ, ಆಲಾಪಿನೀ ಮೊದಲಾದ ತಂತೀವಾದ್ಯಗಳು ಇರುತ್ತಿದ್ದವು. ಇವನ್ನು ಉಗುರಿನಿಂದ ಮಿಡಿದು ಅಥವಾ ಕಮಾನಿನಿಂದ ಎಳೆದು ನುಡಿಸಲಾಗುತ್ತಿತ್ತು. ಇವುಗಳಲ್ಲಿ ಕೆಲವಕ್ಕೆ ಮೆಟ್ಟುಗಳೂ ಇರುತ್ತಿದ್ದವು. ಇವೇ ಅಲ್ಲದೆ ತತಕುತಪದಲ್ಲಿ ವಾಂಶಿಕಾ, ಪಾವಿಕಾ, ಪಾವಕಾ, ಕಹಳೆ, ಶಂಖ, ಮಾರಿ, ಕೊಂಬು ಮೊದಲಾದ ಸುಷಿರ (ಗಾಳಿ) ವಾದ್ಯಗಳೂ ಕಂಚಿನ ತಾಳದಂಥ ಗಟ್ಟಿ (ಘನ) ವಾದ್ಯಗಳೂ ಇರುತ್ತಿದ್ದವು. ಅವನದ್ಧ ಕುತಪದಲ್ಲಿ ಮೃದಂಗ, ಪಣವ, ದರ್ದುರ, ಢಕ್ಕಾ, ಮಂಡಿಢಕ್ಕಾ, ಕಕ್ಕುಲಿ, ಪಟಹ, ಕರಟ, ಢವಸ, ಘಡಸ, ಹುಡುಕ್ಕಾ, ಡಮರು, ರುಂಜಾ, ಕುಡುಕ್ಕಾ, ಕುಡುವಾ, ನಿಃಸಾಣ, ತ್ರಿವಲೀ, ಭೇರೀ, ತುಂಬಕೀ, ಬೊಂಬಡೀ ಮೊದಲಾದ ಚರ್ಮವಾದ್ಯಗಳೂ ಪಿಟ್ಟ, ಪವೆ, ಕಮ್ರಾ, ಝಲ್ಲರೀ, ಬಾಣ, ಸೆಲ್ಲುಕಾ, ಜಾಗಟೆ, ಕಂಚಿನತಾಲ, ಘಂಟೆ, ಕಿರಿಕಿಟ್ಟ ಮೊದಲಾದ ಘನವಾದ್ಯಗಳೂ ಭಾಗವಹಿಸುತ್ತಿದ್ದುವು.
ನಾಟ್ಯಕ್ಕೆ ಪ್ರಯೋಜಕವಾದ ವಾದ್ಯಸಮೂಹವನ್ನು ಶಾಸ್ತ್ರಪರಿಭಾಷೆಯಲ್ಲಿ ಸಂಪ್ರದಾಯವೆಂದೂ ಆಡುಮಾತಿನಲ್ಲಿ ಮೇಳ ಅಥವಾ ಹಿಮ್ಮೇಳವೆಂದೂ ಕರೆಯಲಾಗಿದೆ. ಇದರ ವಿವರಗಳನ್ನು ಸಂಗೀತರತ್ನಾಕರಾದಿ ಶಾಸ್ತ್ರಗ್ರಂಥಗಳು ಕೊಡುತ್ತವೆ. ಇದಲ್ಲದೆ ನಾಟ್ಯ ಕುತಪದಲ್ಲಿ ವರಾಟ, ಲಾಟ, ಕರ್ಣಾಟ, ಗೌಡ, ಗುರ್ಜರ, ಕೊಂಕಣ, ಮಹಾರಾಷ್ಟ್ರ, ಆಂಧ್ರ, ಹಮ್ಮೀರ, ಚೋಳ, ಮಲಯ, ಮಾಲವ, ಅಂಗ, ವಂಗ, ಕಲಿಂಗ ಇತ್ಯಾದಿ ದೇಶಗಳ ಅಭಿನಯ ಕೋವಿದರೂ ಅಂಗಹಾರ ಕರಣಾದಿಗಳ ಪ್ರಯೋಗತಜ್ಞರೂ ಲಾಸ್ಯ ತಾಂಡವ ವಿಶಾರದರೂ ಚಿತ್ರ ವಿಚಿತ್ರ ಸ್ಥಾನಕ (ನಿಲುವು) ಪ್ರೌಢಗಳೂ ವಿಷಮಪ್ರಯೋಗ, ನಿಷ್ಣಾತರೂ ಉತ್ತಮ ಮಧ್ಯಮ ಪಾತ್ರಗಳೂ ಇರುತ್ತಿದ್ದರು.
ಕುತಪಗಳು ಅನುಸರಿಸಬೇಕಾದ ಪ್ರಯೋಗತಂತ್ರವನ್ನು ಭರತಮುನಿ ನಾಟ್ಯಶಾಸ್ತ್ರದ ನಾಲ್ಕನೆಯ ಅಧ್ಯಾಯದಲ್ಲಿ ಪುರ್ವರಂಗ ವಿಧಿವರ್ಣನ ಸಂದರ್ಭದಲ್ಲಿ ಕೊಡುತ್ತಾನೆ. ನಾಟ್ಯ ಸಂದರ್ಭದಲ್ಲಿ ಕರಣಗಳನ್ನು ಪ್ರಯೋಗಿಸುವಾಗ, ನೃತ್ಯ, ಹಸ್ತಾಭಿನಯ ಮತ್ತು ಗೀತಗಳನ್ನು ಒಟ್ಟಿಗೆ ಸಂಯೋಜಿಸುವಾಗ ವಿಲಂಬ ಲಯದಲ್ಲಿ ತತ್ತ್ವ ಎಂಬ ತಂತ್ರವನ್ನೂ ಮಧ್ಯಲಯದಲ್ಲಿ ಅನುಗತವನ್ನೂ ದ್ರುತಲಯದಲ್ಲಿ ಓಫೆವನ್ನೂ ಪ್ರಯೋಗಿಸಬೇಕು. ಬೃಂದಗಳಿಗೂ ಕುತಪಗಳಿಗೂ ಶಾರ್ಙ್ಗದೇವ ಹೇಳಿರುವ ಲಕ್ಷಣಗಳು ಸಾರ್ವಕಾಲಿಕಾನ್ವಯವನ್ನೂ ಸಮಗ್ರಸಮೀಚೀನ ಸೂಕ್ಷ್ಮದರ್ಶನವನ್ನೂ ಒಳಗೊಂಡು ಇಂದಿನ ವಾದ್ಯಮೇಳಗಳೂ ಬೃಂದಗಳೂ ಅನುಸಂಧಾನಮಾಡಿ ಅನುಷ್ಠಾನದಲ್ಲಿಟ್ಟುಕೊಳ್ಳಲು ಬಹುಯೋಗ್ಯವಾಗಿದೆ. ಮುಖ್ಯಾನುವೃತ್ತಿಯೆಂದರೆ ನಾಯಕನಾದ ಗಾಯನ ಅಥವಾ ವಾದಕನನ್ನು ನೆರಳಿನಂತೆ ಅನುಸರಿಸುವುದು; ಮುಖ್ಯರಸದ ಪೋಷಣೆಯಲ್ಲಿ ಸಾರ್ಥಕತೆಯನ್ನು ಸಾಧಿಸಲೆಳಸುವುದು. ಮಿಲನವೆಂದರೆ ಒಟ್ಟಿಗೆ ಕೂಡಿ ಹಾಡಿ ನುಡಿಸುವಾಗ ಭಿನ್ನತೆಯೇ ಗೋಚರಿಸದಂತೆ ಒಂದರಲ್ಲಿ ಇನ್ನೊಂದು ಸೇರಿಬಿಡುವುದು. ಕಾಲಲೀನಾನುವರ್ತನವೆಂದರೆ ತಾಳದ ಆವರ್ತ, ಪಾದಭಾಗ ಕ್ರಿಯೆ ಮುಂತಾದವುಗಳಲ್ಲಿ ಕರಗಿಹೋದಂತೆ ಒಂದಾಗುವುದು. ಮಿಥಸ್ತ್ರುಟಿತ ನಿರ್ವಾಹವೆಂದರೆ ಜೋಡಣೆಯಲ್ಲೂ ಮುನ್ನಡೆಯಲ್ಲೂ ಎಡೆಬಿಡದಂತೆ ಅಖಂಡ ವಾಗಿರುವುದು.
ತ್ರಿಸ್ಥಾನವ್ಯಾಪ್ತಿಶಕ್ತಿಯೆಂದರೆ ಮಂದ್ರ ಮಧ್ಯತಾರಗಳೆಂಬ ಮೂರು ಸ್ಥಾನಗಳಲ್ಲಿಯೂ ಒಂದೇ ರೀತಿಯ ಘನತೆ, ಸ್ನಿಗ್ಧತೆ, ಸಾಂದ್ರತೆ, ಪ್ರಸನ್ನತೆ ಮೊದಲಾದ ಸ್ವರಗುಣಗಳನ್ನು ಪಡೆದಿರುವುದು. ಶಬ್ದಸಾದೃಶ್ಯವೆಂದರೆ ವಿವಿಧ ವಾದ್ಯಗಳೂ ಕಂಠಗಳೂ ಗೀತದಲ್ಲಿ ತೊಡಗಿರುವಾಗ, ಒಂದೇ ಬಗೆಯ ಶಬ್ದಗಳು ಒಂದೇ ಕಾಲದಲ್ಲಿ ಬರುವಂತೆ ಏರ್ಪಡಿಸುವುದು. ಇಲ್ಲದಿದ್ದರೆ ವಿವಿಧ ರೀತಿಯ ಶಬ್ದಗಳು ತಮ್ಮಷ್ಟಕ್ಕೆ ಮಾತ್ರ ರಂಜನಾಸ್ವದಗಳಾಗಿದ್ದರೂ ಬೇರೆ ವಾದ್ಯಗಳ ಶಬ್ದಗಳೊಡನೆ ಬೆರೆತಾಗ ವಿರುದ್ಧ ಧರ್ಮದಿಂದ ಮುಖ್ಯರಸಾನುಭೂತಿಗಳು ಶ್ರವಣ ಲಾಲಿತ್ಯಕ್ಕೂ ಹಾನಿಯನ್ನುಂಟುಮಾಡುವುವು.
ಪಾಶ್ಚಾತ್ಯ ಸಂಗೀತದಲ್ಲಿ ವಾದ್ಯಗೋಷ್ಠಿಗಳು
[ಸಂಪಾದಿಸಿ]ಹೀಗೆ ಗಾನಗೋಷ್ಠಿಗಳೂ ವಾದ್ಯಗೋಷ್ಠಿಗಳೂ ಬಹು ಪ್ರಾಚೀನಕಾಲದಿಂದಲೂ ಇದ್ದೇ ಇವೆ. ಸಾಮಗಾನದಲ್ಲಿ ಬರುವ ಗ್ರಾಮೇಗೇಯಗಾನಗಳೂ ಉತ್ಸವಾದಿಗಳಲ್ಲಿ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ಸಾಮೂಹಿಕ ಭಜನಪದ್ಧತಿಯೂ ಜನಪದ ಗಾನನೃತ್ಯಗಳಲ್ಲಿ ಗೋಷ್ಠಿಗಳೂ ಚಿರಪರಿಚಿತವೇ ಆಗಿವೆ. ಆದರೆ ಭಾರತದ ಶಾಸ್ತ್ರೀಯ ಸಂಗೀತದಲ್ಲಿರುವ ವಾದ್ಯಮೇಳಗಳನ್ನು ಆರ್ಕೆಸ್ಟ್ರ ಎಂಬ ಪಾಶ್ಚಾತ್ಯ ವಾದ್ಯಮೇಳದೊಡನೆ ಸಮೀಕರಿಸಲಾಗದು. ಏಕೆಂದರೆ ಉದ್ದೇಶ, ವ್ಯಾಪ್ತಿ, ತಂತ್ರ, ಸಾಧನೆ-ಇವುಗಳಲ್ಲೆಲ್ಲ ಈ ಎರಡರಲ್ಲಿ ಸಂಪೂರ್ಣ ವೈದೃಶ್ಯವೇ ಸಿದ್ಧವಾಗುತ್ತದೆ. ಪಾಶ್ಚಾತ್ಯ ಸಂಗೀತದಲ್ಲಿ ಸಹಕಾಲಿಕ ಅನೇಕ ಸ್ವರಶ್ರೇಣಿ ಅದರ ಮೂಲ ತತ್ತ್ವಗಳಲ್ಲಿ ಒಂದಾದಾಗ, ಅದರ ಪರಿಣಾಮವಾಗಿ ಸ್ವರಸ್ಥಾನಗಳು ಸಮ ದೂರದಲ್ಲಿರುವಂತೆ ಪಲ್ಲಟಿತವಾದಾಗ, ಏಕಾಧಾರ ಸ್ವರಪದ್ಧತಿ ಗೌಣವಾದಾಗ ಅದರ ಸ್ವರೂಪವೇ ಬದಲಾಯಿಸಿತು. ಸುಮಾರು ಹದಿನಾರು ಹದಿನೇಳನೆಯ ಶತಮಾನಗಳಲ್ಲಿ ಇಟಲಿಯಿಂದ ಯುರೋಪಿನಲ್ಲೆಲ್ಲ ಹರಡಿ ನಿಂತ ಆಪೆರ ಎಂಬ ಗೀತನಾಟಕ ಪ್ರಕಾರದಲ್ಲಿಯೂ ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ ಜರ್ಮನ್ ವಾಗ್ಗೇಯಕಾರರಿಂದ ಬಲಿತು ಬೆಳೆದ ಸಿಂಫೊನಿ ಎಂಬ ಗೇಯಪ್ರಕಾರದಲ್ಲಿಯೂ ಮುಖ್ಯವಾಗಿ ಆರ್ಕೆಸ್ಟ್ರ ರೂಪುಗೊಂಡು ಬಲಿಯಿತು. ಇದರಲ್ಲಿ ಪ್ರತಿಯೊಂದು ವಾದ್ಯಕ್ಕೂ ನಿರ್ದಿಷ್ಟ ಕಾರ್ಯವುಂಟು. ಅದಿಲ್ಲದೆ ಕೃತಿ ಪೂರ್ಣವಾಗುವುದಿಲ್ಲ. ಆದರೆ ಅಲ್ಲಿ ಯಾರೊಬ್ಬರಿಗೂ ಸ್ವಂತಕಲ್ಪನೆಯ ಸ್ವಾತಂತ್ರ್ಯ ಎಳ್ಳಷ್ಟೂ ಇಲ್ಲ. ಸ್ವರಗುಣ ವೈವಿಧ್ಯ, ಅನೇಕ ಸ್ವರಗಳು ಒಟ್ಟಿನಲ್ಲಿ ಒಂದೇ ಕ್ಷಣದಲ್ಲಿ ಉಂಟುಮಾಡುವ ಸಂವೇದನೆ ಮತ್ತು ಸೌಂದರ್ಯಾನುಭೂತಿ, ನಾದಲಯಗಳ ಏಕಕಾಲಿಕ ತಿರ್ಯಗ್ಗಮನ ಹಾಗೂ ಊದಾರ್ವ್‌ಧೋಗಮನ, ಸೌಕರ್ಯಾನುಸಾರವಾಗಿ ಆಧಾರಸ್ವರದ ರೂಪಾಂತರ ಹಾಗೂ ತತ್ಫಲವಾದ ಮೂರ್ಛನಾಂತರ- ಇವೇ ಮುಂತಾದ ಹಲವು ಅಂಶಗಳು ಪಾಶ್ಚಾತ್ಯ ಸಂಗೀತದ ಆರ್ಕೆಸ್ಟ್ರದ ವೈಶಿಷ್ಟ್ಯಗಳು. ಇವುಗಳಲ್ಲಿ ಯಾವುದಿಲ್ಲದಿದ್ದರೂ ಅದರ ಸ್ವರೂಪಹಾನಿಯೇ ಆಗುತ್ತದೆ. ಭಾರತೀಯ ಸಂಗೀತದಲ್ಲಿ ಹಾಗಲ್ಲ.
ಆಧುನಿಕ ಆರ್ಕೆಸ್ಟ್ರಗಳು
[ಸಂಪಾದಿಸಿ]ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಡೆಯುತ್ತಿರುವ ಸಂಗೀತದ ಪುನರುಜ್ಜೀವನ ಪ್ರಯತ್ನಗಳಲ್ಲಿ ಗೋಷ್ಠಿಗಾನವೂ ಒಂದು. ಅಧಿಕೃತ ಕ್ಷೇತ್ರದಲ್ಲಿ ಅಖಿಲ ಭಾರತೀಯ ಆಕಾಶವಾಣಿ ಈ ದಿಕ್ಕಿನಲ್ಲಿ ಮಹತ್ತ್ವದ ಸೇವೆ ಸಲ್ಲಿಸುತ್ತಿದೆ. ಕಲ್ಪನೆ, ತಂತ್ರ, ಉಪಕರಣ, ದೃಷ್ಟಿ ಇತ್ಯಾದಿಗಳಲ್ಲಿ ಹೊಸತನ್ನು ಈ ದಿಕ್ಕಿನಲ್ಲಿ ಮೂಡಿಸ ಲಾಗುತ್ತಿದೆ. ಇದನ್ನು ಹಲವು ವಿಧಗಳಲ್ಲಿ ಉತ್ತಮಪಡಿಸಿ ಪಂಡಿತ ಪಾಮರರಿಬ್ಬರನ್ನೂ ರಂಜಿಸಬಲ್ಲ ಸಾಧನವನ್ನಾಗಿ ಮಾಡಿಕೊಳ್ಳಲವಕಾಶವಿದೆ. ಉದಾಹರಣೆಗೆ ತ್ರಿಸ್ಥಾಯಿ ಮಿತಿಯಲ್ಲಿ ಸ್ವರ ಸ್ಥಾನ ಪಲ್ಲಟವಿಲ್ಲದೆಯೇ ಬಹುಸ್ವರ ಶ್ರೇಣಿಯಲ್ಲಿ ಧಾತುವು ಗೀತದಲ್ಲಿ ಅನೇಕ ವೇಳೆ ಮುನ್ನಡೆಯಬಹುದು; ವೈಯಕ್ತಿಕ ಕಲ್ಪನೆಗೆ ಸ್ವಾತಂತ್ರ್ಯ ನೀಡಿ ಗೀತದ ನಿರ್ದಿಷ್ಟ ತಾಳಭಾಗಗಳಲ್ಲಿ ಅವಕಾಶವನ್ನು ಕಲ್ಪಿಸಿಕೊಡಬಹುದು. ಇಂಥ ಸಂದರ್ಭಗಳಲ್ಲಿ ಗಮಕ ಪ್ರಯುಕ್ತಿಗೆ ಅವಕಾಶವಿರುವುದರಿಂದ ಶಾಸ್ತ್ರೀಯ ಚೌಕಟ್ಟಿನಲ್ಲಿ ರಾಗಭಾವಗಳ ಗಾಂಭೀರ್ಯ, ಆಳಗಳನ್ನು ಸಾಧಿಸಬಹುದು; ವಾದ್ಯಗಳ ಸಂಖ್ಯೆ, ವೈವಿಧ್ಯಗಳನ್ನು ಹೆಚ್ಚಿಸಿ ಸ್ವರಗುಣದಲ್ಲಿ ವ್ಯಾಪ್ತಿ ವಿಸ್ತಾರವನ್ನೇ ಪಡೆಯಬಹುದು. ಶ್ರುತಿಭೇದ, ನಡೆ, ಲಯ, ಇವುಗಳ ಪ್ರತಿಭಾಯುಕ್ತ ಸಂಯೋಜನೆಯಿಂದ ಹೊಸ ಸೃಷ್ಟಿಯನ್ನೇ ಮಾಡಬಹುದು; ಸ್ವರಸಾಂದ್ರತೆ ಮತ್ತು ಲಾವಣ್ಯ (ಟೆಕ್ಸ್‌ಚರ್), ಸ್ವರಗತಿ (ಡೈನ್ಯಮಿಕ್ಸ್) ಮೊದಲಾದ ಕಲ್ಪನೆಗಳನ್ನು ಪರಿಷ್ಕರಿಸಿ ಅಳವಡಿಸಿಕೊಳ್ಳಬಹುದು.
ಅಂತೆಯೇ ಪಾಶ್ಚಾತ್ಯ ದೇಶಗಳಲ್ಲಿರುವಂತೆ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳಲ್ಲಿಯೂ ಶಾಲಾ ಕಾಲೇಜುಗಳಲ್ಲಿಯೂ ಸಂಗೀತ ಸಂಘಗಳನ್ನು ಗ್ಲೀಕ್ ಲಬ್ಗಳ ಮಾದರಿಯಲ್ಲಿ ಏರ್ಪಡಿಸಿಕೊಂಡು ನಡೆಸುವುದು ತುಂಬಾ ಅಪೇಕ್ಷಣೀಯವಾಗಿದೆ. ಹೀಗೆ ಮಾಡುವುದರಿಂದ ಪುರ್ವನಿಯೋಜಿತ ಕಾರ್ಯಕ್ರಮದ ಮೂಲಕ ಸಾಮೂಹಿಕ ಸಂಗೀತವನ್ನು ದೇಶದಲ್ಲಿ ಬೆಳೆಸಿ ಅದನ್ನು ರಾಷ್ಟ್ರಪ್ರಜ್ಞೆಯ ಪ್ರಮುಖಾಭಿವ್ಯಕ್ತಿ ಸಾಧನವನ್ನಾಗಿಯೂ ಭಾವೈಕ್ಯ ಸಾಧನವನ್ನಾಗಿಯೂ ಸಂಸ್ಕೃತಿ ಪ್ರಸಾರ ಸಾಧನವನ್ನಾಗಿಯೂ ಮಾಡಲು ಸಾಧ್ಯವಿದೆ. ಕೇವಲ ಅಂಧಾನುಕರಣೆಯಿಂದ ವಿವಿಧ ಅಹಿತಶಬ್ದಗಳ ಅವ್ಯವಸ್ಥಿತ ಸಂಯೋಜನೆಯಿಂದ ಗದ್ದಲವನ್ನೇ ಪರಿಣಾಮವೆಂದು ಭ್ರಮಿಸಿ ಭಾರತೀಯ ಸಂಗೀತ, ಸಂಸ್ಕೃತಿಗಳ ಚಿರಂತನ ಮೌಲ್ಯಗಳಿಗೆ ಕುಠಾರಪ್ರಾಯವಾಗಿರುವ ಆಧುನಿಕ ಆರ್ಕೆಸ್ಟ್ರ ಪಾರ್ಟಿಗಳ ಹಾವಳಿಯನ್ನಡಗಿಸಲು ಇದರಿಂದ ಸಾಧ್ಯವಾಗುತ್ತದೆ. ಭಾರತದಲ್ಲಿ ಸಾಮೂಹಿಕ ಸಂಗೀತದ ಕನಸನ್ನು ಮೊದಲ ಬಾರಿಗೆ ಕಂಡು ಅದಕ್ಕೊಂದು ಸುವ್ಯವಸ್ಥಿತ ಶಾಸ್ತ್ರೀಯ ಬುನಾದಿಯನ್ನು ನಿರ್ಮಿಸಿದ ಕೀರ್ತಿ ಮೈಸೂರಿನ ವರಲಕ್ಷ್ಮೀ ಅಕಾಡೆಮಿಗೆ ಸಲ್ಲುತ್ತದೆ. ಈ ಸಂಸ್ಥೆ 1956ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಡೆಸಿದ ಅಖಿಲ ಭಾರತೀಯ ಸಾಮೂಹಿಕ ಸಂಗೀತ ವಿಚಾರಗೋಷ್ಠಿ ಮೌಲಿಕವಾದ ಸಂಶೋಧನ ಫಲಿತಾಂಶಗಳನ್ನು ಹೊರಗೆಡಹಿದೆ.