ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೌಡ, ಕೆ.ಸಿ.ಎನ್.

ವಿಕಿಸೋರ್ಸ್ದಿಂದ

1928-2012. ಕನ್ನಡ ಚಲನಚಿತ್ರ ನಿರ್ಮಾಣ, ಹಂಚಿಕೆ ಮತ್ತು ಪ್ರದರ್ಶನ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಕೆ.ಸಿ.ಎನ್. ಸಂಸ್ಥೆಯ ನಿರ್ಮಾತೃ. ದೊಡ್ಡಬಳ್ಳಾಪುರದ ಸಮೀಪದ ಕೊನೇನಹಳ್ಳಿ ಹಳ್ಳಿಯ ರೈತ ಕುಟುಂಬದಲ್ಲಿ ಕೆ.ಸಿ. ನಂಜುಂಡೇಗೌಡರು 1926ರ ಜನವರಿ 6 ರಂದು ಜನಿಸಿದರು. ತಂದೆ ಕೆ.ಚವಡಯ್ಯ, ತಾಯಿ ಮುದ್ದಮ್ಮ. ಹಿರಿಯರ ಕಾಲದಿಂದಲೂ ಇವರದು ರೇಷ್ಮೆ ಉದ್ಯಮ. ಇವರ ರೇಷ್ಮೆ ಜವಳಿಗೆ ಭಾರಿ ಬೇಡಿಕೆ. ವ್ಯಾಪಾರವೂ ಅಷ್ಟೇ ಭಾರಿ. ಈ ಉದ್ಯಮದ ಜೊತೆಗೆ ಬಣ್ಣದ ಲೋಕದ ವ್ಯಾಪಾರಕ್ಕೂ ಇಳಿದರು. ದೊಡ್ಡಬಳ್ಳಾಪುರದಲ್ಲಿ ಸೌಂದರ್ಯಮಹಲ್, ಬೆಂಗಳೂರಿ ನಲ್ಲಿ ನವರಂಗ್, ಊರ್ವಶಿ ಚಿತ್ರ ಮಂದಿರಗಳನ್ನು ನಿರ್ಮಿಸಿ ಪ್ರದರ್ಶಕ ರಾದರು. ಕೆ.ಸಿ.ಎನ್.ಸಂಸ್ಥೆ ಸ್ಥಾಪಿಸಿ, ಚಲನಚಿತ್ರ ವಿತರಕರಾಗಿ ಕನ್ನಡ ಚಿತ್ರೋದ್ಯಮದ ಬೆಳೆವಣಿಗೆಗೆ ನೆರವಾದರು. ರಾಜಕಮಲ್ ಆಟ್ರ್ಸ್‌ ಸಂಸ್ಥೆ ಆರಂಭಿಸಿ ದೊಡ್ಡ ಮಟ್ಟದಲ್ಲಿ ಚಿತ್ರನಿರ್ಮಾಪಕರೂ ಆದರು. ಜೊತೆಗೆ ತಮ್ಮ ಇಬ್ಬರು ಪುತ್ರರನ್ನು-ಕೆ.ಸಿ.ಎನ್. ಚಂದ್ರಶೇಖರ್ ಮತ್ತು ಕೆ.ಸಿ.ಎನ್.ಮೋಹನ್-ಇವರನ್ನು ಚಿತ್ರೋದ್ಯಮದಲ್ಲಿ ತೊಡಗಿಸಿದರು. ಕೆ.ಸಿ.ಎನ್.ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗಳ ಅಧ್ಯಕ್ಷರಾಗಿ ಉದ್ಯಮದ ಬೆಳೆವಣಿಗೆಗೆ ನೆರವಾಗಿದ್ದಾರೆ. ಇವರೀರ್ವರು ಶ್ರೇಷ್ಠ ನಿರ್ಮಾಪಕರು ಹಾಗೂ ವಿತರಕರೆಂದೂ ಹೆಸರು ಪಡೆದಿದ್ದಾರೆ.


ಕೆ.ಸಿ.ಎನ್.ಗೌಡರು, ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ ಚಿತ್ರದ ನಿರ್ಮಾಪಕರಿಗೆ ನೆರವು ನೀಡಿ, ಆ ಚಿತ್ರದ ವಿತರಣೆಯನ್ನೂ ಮಾಡಿದರು. ಹುಲಿಯ ಹಾಲಿನ ಮೇವು, ಬಬ್ರುವಾಹನದಂತಹ ಅದ್ದೂರಿಯ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದರಲ್ಲದೆ, ಉತ್ತಮ ಅಭಿರುಚಿಯ ಯಶಸ್ವಿ ಚಿತ್ರಗಳಾದ ಶರಪಂಜರ, ಭಲೇಜೋಡಿ ಮುಂತಾದ ನೂರಕ್ಕೂ ಹೆಚ್ಚು ಚಿತ್ರಗಳ ಹಂಚಿಕೆದಾರರು. ಕಸ್ತೂರಿ ನಿವಾಸ, ತಾಯಿ ದೇವರು, ಬಭ್ರುವಾಹನ, ದಾರಿ ತಪ್ಪಿದಮಗ, ದೂರದ ಬೆಟ್ಟ, ಹುಲಿಯ ಹಾಲಿನಮೇವು, ಸನಾದಿ ಅಪ್ಪಣ್ಣ, ಭಕ್ತ ಸಿರಿಯಾಳ, ರಂಗನಾಯಕಿ ಮೊದಲಾದ ಚಿತ್ರಗಳನ್ನು ತೆರೆಗಿತ್ತರು. ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ವಿಜಯಾರೆಡ್ಡಿ ಮೊದಲಾದ ಪ್ರತಿಭಾವಂತ ನಿರ್ದೇಶಕರಿಗೆ ಪ್ರೋತ್ಸಾಹಿಸಿ, ಉತ್ತಮ ಚಿತ್ರಗಳ ನಿರ್ಮಾಣಕ್ಕೆ ನೀರೆರೆದರು.


ಚಲನಚಿತ್ರ ವಹಿವಾಟು ಕೇಂದ್ರವಾದ ಗಾಂಧಿನಗರದಲ್ಲಿ ಕೆ.ಸಿ.ಎನ್.ಸಂಸ್ಥೆ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಹಲವು ದಶಕಗಳ ಕಾಲ ಮೆರೆಯಿತು. ನವರಂಗ್ ಚಿತ್ರಮಂದಿರ ಕನ್ನಡ ಚಿತ್ರಗಳಿಗೇ ಮೀಸಲಾಗಿರುವುದು ಗಮನಾರ್ಹ.


ಕರ್ನಾಟಕ ರಾಜ್ಯಸರ್ಕಾರ ಚಿತ್ರೋದ್ಯಮಕ್ಕೆ ಕೆ.ಸಿ.ಎನ್.ಗೌಡರ ವಿಶಿಷ್ಟ ಸೇವೆಗಾಗಿ 2002-2003ನೆಯ ಸಾಲಿನ ರಾಜಕುಮಾರ್ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇವರು 2012ರ ಅಕ್ಟೋಬರ್ 4 ರಂದು ನಿಧನರಾದರು.