ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರೀಕ್ ಸಾಹಿತ್ಯ

ವಿಕಿಸೋರ್ಸ್ದಿಂದ

ಗ್ರೀಕ್ ಸಾಹಿತ್ಯ - ಗ್ರೀಕ್ ಸಾಹಿತ್ಯ ಇಲಿಯಡ್ ಮತ್ತು ಆಡಿಸಿ ಮಹಾ ಕಾವ್ಯಗಳಿಂದಲೇ ಪ್ರಾರಂಭವಾಯಿತೆನ್ನಬಹುದಾದರೂ ಮಹಾ ಕಾವ್ಯಗಳಿಗಿಂತ ಪೂರ್ವದಲ್ಲಿ ಕಾವ್ಯದ ಒಂದು ಜೀವಂತ ಪಾಠಕ (ಓರಲ್)ಪರಂಪರೆ ಪುರಾತನ ಗ್ರೀಸಿನಲ್ಲಿತ್ತೆಂಬುದು ಖಚಿತ. ಆ ಪರಂಪರೆ ಎಷ್ಟು ಪುರಾತನವೆಂದು ನಿಷ್ಕøಷ್ಟವಾಗಿ ಹೇಳಲಾಗುವುದಿಲ್ಲ. ಆದರೆ ಕ್ರಿ.ಪೂ. 16ನೆಯ ಶತಮಾನದ ಜನಜೀವನಕ್ಕೆ ಸಂಬಂಧಿಸಿದ ವಿವರಗಳೂ ಮಹಾಕಾವ್ಯಗಳಲ್ಲಿ ಬಂದಿರುವುದರಿಂದ ಪಾಠಕಕಾವ್ಯದ ಪರಂಪರೆ ಆ ಕಾಲಕ್ಕೂ ಹಿಂದಿನದೆನ್ನಬಹುದು. ರಾಜಾಧಿರಾಜರು ನಡೆಸಿದ ಯುದ್ಧಗಳ ವರ್ಣನೆಗಳು, ಮದುವೆಯ ಹಾಡುಗಳು, ಸುಗ್ಗಿಯ ಪದಗಳು, ಪ್ರಾರ್ಥನಾಗೀತಗಳು ಪುರಾತನ ಗ್ರೀಕ್ ಕಾವ್ಯರಾಶಿಯಲ್ಲಿ ಸೇರಿವೆ. ಅವು ಮಹಾಕಾವ್ಯದ ಸೃಷ್ಟಿಗೆ ಸಾಮಗ್ರಿ ಒದಗಿಸಿರಬೇಕು. ಈಚಿನ ವಿದ್ವಾಂಸರ ಅಭಿಪ್ರಾಯದಂತೆ ಇಲಿಯಡ್, ಆಡಿಸಿ ಕಾವ್ಯಗಳ ಇಂದಿನ ರೂಪ, ಕ್ರಿ.ಪೂ. 8ನೆಯ ಶತಮಾನದ ಮಧ್ಯದಿಂದೀಚಿನದು. ಹಬ್ಬಹರಿದಿನಗಳ ಸಂದರ್ಭದಲ್ಲಿ ಕವಿ ಗಾಯಕರು (ಬಾಡ್ರ್ಸ್) ಸಾಮುದಾಯಿಕ ಆಚರಣೆಯ ಭಾಗವಾಗಿ ಈ ಮಹಾಕಾವ್ಯಗಳನ್ನು ಜನಸಂದಣಿಯ ಎದುರಿಗೆ ಹಾಡುತ್ತಿದ್ದರು. ಈ ಸಭೆಗಳಿಗೆ ಏಷ್ಯ ಮೈನರ್ ಪ್ರದೇಶದ ಇತರ ನಗರ ರಾಜ್ಯಗಳಿಂದಲೂ ಜನ ಬಂದು ಸೇರುತ್ತಿದ್ದರು. ಕವಿ ಗಾಯಕರು ತಂಡ ತಂಡವಾಗಿ ಒಬ್ಬರಾದಮೇಲೆ ಇನ್ನೊಬ್ಬರಂತೆ. ಒಬ್ಬ ನಿಲ್ಲಿಸಿದ ನಿರೂಪಣ ಸನ್ನಿವೇಶವನ್ನು ಮುಂದಿನವ ಎತ್ತಿಕೊಂಡು ಮುಂದುವರಿಸಿ ಹಾಡುತ್ತಿದ್ದರು. ಹೋಮರ್ ಪರಂಪರೆಯ ಈ ಕವಿಗಾಯಕರು ಸಮಗ್ರ ಗ್ರೀಕ್ ದೇಶದ ಉದ್ದಗಲದಲ್ಲಿ ಸಂಚರಿಸುತ್ತಿದ್ದು ಸಾರ್ವಜನಿಕ ಸಭೆಗಳಲ್ಲಿ ಪರಸ್ಪರ ಪೈಪೋಟಿಯಿಂದ ಹಾಡುತ್ತ ನಿಕಟ ಜನಸಂಪರ್ಕ ಪಡೆದಿದ್ದರೆಂದು ಕ್ರಿ.ಪೂ. 8ನೆಯ ಶತಮಾನದ ಗ್ರೀಕ್ ಕವಿ ಹೆಸಿಯಡ್ ಹೇಳಿದ್ದಾನೆ. ಅಂಥ ಕಾವ್ಯವಾಚನ ಸಂಪ್ರದಾಯದಿಂದ ತಾನು ಪಡೆದ ಋಣವನ್ನು ಸ್ಮರಿಸಿದ್ದಾನೆ. ಹೋಮರನ ಕಾವ್ಯದಲ್ಲಿ ಬರುವ ಮೈಸೀನಿಯನ್ ಚಕ್ರಾಧಿಪತ್ಯದ ಗತವೈಭವದ ವರ್ಣನೆಯನ್ನು ಹೀಗೆ ಸಾಮುದಾಯಿಕವಾಗಿ ಹಾಡಿ, ಹಾಡಿಸಿ ನಲಿಯುತ್ತಿದ್ದರು. ಗ್ರೀಕ್ ರಾಜ್ಯಗಳ ಅಧಿಪತಿಗಳೆಲ್ಲ ದೊರೆ ಆಗಮೆಮ್ಮಾನನ ನಾಯಕತ್ವದಲ್ಲಿ ಒಟ್ಟಾಗಿ ಕಲೆತು ಟ್ರಾಯ್‍ನಗರಕ್ಕೆ ಮುತ್ತಿಗೆ ಹಾಕಿ ವಿಜಯ ದುಂದುಭಿ ಮೊಳಗಿಸಿದ ವೀರಸಾಹಸ ಕಥೆಯನ್ನು ಜನಸಾಮಾನ್ಯರು ಕೇಳಿ ಮೈಮರೆಯುತ್ತಿದ್ದ ಕಾಲ ಅದು. ಆಥೆನ್ಸ್ ಪಟ್ಟಣದಲ್ಲಿ ಆಚರಿಸಲಾಗುತ್ತಿದ್ದ ಪ್ಯಾನ್ ಆಥಿನ ಹಬ್ಬದಲ್ಲಿ ಕ್ರಿ.ಪೂ. 6ನೆಯ ಶತಮಾನದಿಂದಲೂ ಮಹಾಕಾವ್ಯಗಳನ್ನು ವಾಚಿಸುತ್ತಿದ್ದ ರೂಢಿ. ಈ ಕಾವ್ಯಗಳು ಜನಸ್ತೋಮದ ಮೇಲೆ ಅತ್ಯಂತ ವ್ಯಾಪಕ ಪರಿಣಾಮ ಬೀರುವುದರ ಜೊತೆಗೆ ಅನಂತರದ ಗ್ರೀಕ್ ಸಾಹಿತ್ಯದ ಉತ್ಕರ್ಷಕ್ಕೂ ಪ್ರೇರಣೆ ಒದಗಿಸಿದುವು.

ಹಾಡುಗವಿಗಳ ಪಾಠಕ ಪರಂಪರೆಯಿಂದ ಮೈದಾಳಿದ ಕೃತಿಗಳಲ್ಲಿ ಹೋಮರನ ಕಾವ್ಯಗಳಂತೆ ಇನ್ನೂ ಹಲವು ಸೇರಿದ್ದುವು. ಬೊಯೀಷಿಯನ್ ಪರಂಪರೆಯ ಎಪಿಕ್ ಸೈಕಲ್ ಎಂದು ಕರೆಯುವ ಪುರಾಣ ಕಾವ್ಯಚಕ್ರದಲ್ಲಿ ಅಪೂರ್ಣವೂ ಪರಸ್ಪರ ಅಸಂಬದ್ಧವೂ ಆದ ಹಲವು ಖಂಡಕಾವ್ಯಗಳು ಉಪಲಬ್ಧವಿವೆ. ಇವುಗಳಲ್ಲಿ ಪ್ರಮುಖವಾಗಿ ಹೋಮರಿಕ್ ಹಿಮ್ಸ್ ಮತ್ತು (ಹೆಸಿಯಡ್ ಬರೆದನೆನ್ನಲಾದ) ವಕ್ರ್ಸ್ ಅಂಡ್ ಡೇಸ್‍ಗಳನ್ನು ಹೆಸರಿಸಬಹುದು. ಹೋಮರನ ಕಾವ್ಯ ರಾಜರ ಶ್ರೀಮಂತರ ಜೀವನವನ್ನು ಚಿತ್ರಿಸಿರುವಂತೆ, ವಕ್ರ್ಸ್ ಅಂಡ್ ಡೇಸ್ ಹೋಮರಿಕ್ ಯುಗದ ಜನಸಾಮಾನ್ಯರ ವಾಸ್ತವಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಅಯೋನಿಯನ್ ಪಂಥದ ಹೋಮರ್ ಕಾವ್ಯದಲ್ಲಿ ಅದ್ಭುತರಮ್ಯ ಜೀವನ ಚಿತ್ರಿತವಾಗಿರುವಂತೆ ಹೆಸಿಯಡ್‍ನ ಕಾವ್ಯದಲ್ಲಿ ಆಗಿನ ಕಾಲದ ನಿತ್ಯಜೀವನದ ಕಷ್ಟಕಾರ್ಪಣ್ಯಗಳು ವರ್ಣಿತವಾಗಿವೆ. ಕ್ರಿ.ಪೂ. 700ರ ಸುಮಾರಿನ ಥಿಯೋಗನಿ ಎಂಬ ಇನ್ನೊಂದು ಅವಶಿಷ್ಟ ಕೃತಿಯಲ್ಲಿ ಪ್ರಕೃತಿಶಕ್ತಿಯ ಪ್ರತೀಕವಾದ ಗ್ರೀಕ್ ದೇವತೆಗಳ ಹುಟ್ಟುಬದುಕು, ವಂಶವೃಕ್ಷಗಳನ್ನು ಕ್ರೋಡೀಕರಿಸಲಾಗಿದೆ. ಈ ಕೃತಿಯ ದೆಸೆಯಿಂದ ಗ್ರೀಕ್ ದೇವತೆಗಳ ವಿಷಯವಾಗಿ ಹೆಚ್ಚು ವಿಚಾರಬದ್ಧವೂ ವಿಮರ್ಶಾತ್ಮಕವೂ ಆದ ರೀತಿಯಲ್ಲಿ ಚಿಂತಿಸುವುದು ಅನಂತರ ಬಂದ 6ನೆಯ ಶತಮಾನದ ಅಯೋನಿಯನರಿಗೆ ಸಾಧ್ಯವಾಯಿತು.

ಕ್ರಿ.ಪೂ. 7 ಮತ್ತು 6ನೆಯ ಶತಮಾನದ ಅಳಿದುಳಿದ ಹಾಡುಗಳಲ್ಲಿ, ಸಮಾಧಿ ಲೇಖನಗಳಲ್ಲಿ (ಎಪಿಟ್ಯಾಫ್ಸ್) ಗ್ರೀಕ್ ನಗರರಾಜ್ಯಗಳ ಶ್ರೀಮಂತರ ಜೀವನದ ವರ್ಣನೆಗಳು ಹಾಸುಹೊಕ್ಕಾಗಿ ಬಂದಿವೆ. ಆ ಯುಗದ ಕಾವ್ಯಗಳನ್ನು ಅವುಗಳ ಛಂದಸ್ಸಿಗನುಸಾರವಾಗಿ ಹೀಗೆ ವಿಂಗಡಿಸಬಹುದು; 1 ಹೋಮರ್ ಕಾವ್ಯದಲ್ಲಿ ಬಹುತೇಕ ಬಳಸುವ, ಎಲಿಜಿಯಾಕ್ ಛಂದಸ್ಸಿನಲ್ಲಿ ರಚಿತವಾದ, ಕುಡಿತದ ಹಾಡುಗಳು, ಪ್ರೇಮಗೀತೆಗಳು, ಪ್ರಶಸ್ತಿ ಕವನಗಳು, ಚರಮವಾಕ್ಯಗಳು, ಇವುಗಳಲ್ಲಿ ರಾಜಕೀಯ ಪ್ರಚಾರವೂ ಬೆರೆತುಹೋಗಿದೆ. ಅಭಿಜಾತಯುಗದ ಉದ್ದಕ್ಕೂ ಈ ಛಂದಸ್ಸನ್ನು ಬಳಸಿ ಸಣ್ಣ ಸಣ್ಣ ಕವನಗಳನ್ನು ರಚಿಸಲಾಗುತ್ತಿತ್ತು. 2 ಅಯಾಂಬಿಕ್ ಮತ್ತು ಟ್ರೋಕೇಯಿಕ್ ಛಂದಸ್ಸಿನಲ್ಲಿ ಬರೆದ ಪ್ರಚಾರಾತ್ಮಕ ಹಾಡುಗಳು, ವೈಯಕ್ತಿಕ ವಿಡಂಬನೆಗಳು. ಬಹುಕಾಲದ ಅನಂತರ ರಚಿತವಾದ ಗ್ರೀಕ್ ಗಂಭೀರ ಹಾಗೂ ಹರ್ಷನಾಟಕಗಳಲ್ಲಿ ಸಂಭಾಷಣೆಗಳನ್ನು ಹೆಣೆಯಲು ಈ ಛಂದಸ್ಸಿನ ಕೆಲವು ರೂಪಗಳನ್ನು ಬಳಸಿದ್ದುಂಟು. 3 ಲಿರಿಕ್ ಅಥವಾ ಭಾವಪ್ರಧಾನವಾದ ಹಾಡುಗಬ್ಬದ ಛಂದಸ್ಸಿನಲ್ಲಿ ಬರೆದ ಕುಡಿತದ ಹಾಡುಗಳು, ಮೇಳಗೀತೆಗಳು, ಪ್ರಾರ್ಥನಾಗೀತೆಗಳು, ಯುದ್ಧದಲ್ಲಿ, ಆಟಪಾಟಗಳಲ್ಲಿ ಜಯಗಳಿಸಿದ ವೀರರನ್ನೂ ಕ್ರೀಡಾಪಟುಗಳನ್ನೂ ಹೊಗಳುವ ಪ್ರಶಸ್ತಿ ಕವನಗಳು, ಶೋಕಗೀತೆಗಳು, ಈ ಎಲ್ಲ ಛಂದಸ್ಸುಗಳನ್ನೂ ಆಮೇಲೆ ನಾಟಕಗಳ ಮೇಳಗೀತೆಗಳ ರಚನೆಗಾಗಿ ಬಳಸಲಾಯಿತು. ಸ್ಪಾರ್ಟ ಪಟ್ಟಣದ ಯುದ್ಧಕವಿ ಟೈರ್‍ಷಿಯಸ್, ವಿಡಂಬನಕಾರ ಆರ್ಕಿಲೋಕಸ್, ಲೆಸ್‍ಬಾಸಿನ ಆಲ್‍ಕೇಯಸ್, ಕವಿ ಪಿಂಡಾರ್ ಮತ್ತು ಕವಯತ್ರಿ ಸ್ಯಾಫೊ ಇವರು ಆ ಕಾಲದ ಕೆಲವು ಪ್ರಮುಖ ಕವಿಗಳು. ಕ್ರಿ.ಪೂ. ಸು. 5ನೆಯ ಶತಮಾನದಲ್ಲಿದ್ದನೆನ್ನಲಾದ ಪಿಂಡಾರ್ ರಚಿಸಿದ ಪ್ರಶಸ್ತಿಪ್ರಗಾಥಗಳಲ್ಲಿ ಗ್ರೀಕ್ ಶ್ರೀಮಂತರ ನೀತಿಚಿಂತನೆ, ಧಾರ್ಮಿಕಜಿಜ್ಞಾಸೆಗಳು ಸೂಚಿತವಾಗಿವೆ. ಪಿಂಡಾರನದು ಬಹು ವ್ಯಾಪಕ ಧ್ವನಿಶಕ್ತಿಯುಳ್ಳ ಪದಸಂಪತ್ತು ಹಾಗೂ ಪ್ರತಿಮಾಪೂರ್ಣ ಕಾವ್ಯಶೈಲಿ.

ಅಭಿಜಾತ ಯುಗದ ನಾಟಕ: ಗಂಭೀರ ಹಾಗೂ ಹರ್ಷ ನಾಟಕಗಳು ಪುರಾತನ ಗ್ರೀಸಿನಲ್ಲಿ ಯಾವಾಗ ಉಗಮವಾದುವೋ ನಿಶ್ಚಿತವಾಗಿ ಹೇಳವುದು ಕಷ್ಟ. ಹೋಮರನ ಕಾಲಕ್ಕೆ ಮತ್ತು ಅದಕ್ಕೂ ಹಿಂದೆ ಕೆಲವು ಮತಪ್ರಕ್ರಿಯೆಗಳಿಗೆ ಸಂಬಂಧಿಸಿದ ಕುಣಿತಗಳಲ್ಲಿ ಮುಖವಾಡ ಧರಿಸುವ ಪದ್ಧತಿ ಇತ್ತು. ಹರ್ಷ ನಾಟಕಕ್ಕೆ ಪ್ರಕೃತವಾದ ಒರಟು, ಅಶ್ಲೀಲ. ವೇಷಗಳನ್ನೂ ಮೆತ್ತೆ ತುಂಬಿದ ಬಟ್ಟೆಗಳನ್ನೂ ಧರಿಸಿ, ಮುಖವಾಡ ಹಾಕಿಕೊಂಡು ನೃತ್ಯಮಾಡುವ ಪದ್ಧತಿ ಕ್ರಿ.ಪೂ. 700ರ ಸುಮಾರಿನ ಕಾರಿಂತ್‍ನಲ್ಲಿ ಪ್ರಚಲಿತವಾಗಿತ್ತೆಂದು ಖಚಿತವಾಗಿದೆ. ಅದೇನೇ ಇರಲಿ, ಕಾರಿಂತ್‍ನ ನೃತ್ಯೋತ್ಸವಗಳಲ್ಲಿ ವೀರ, ಗಂಭೀರವಿಚಾರಗಳನ್ನು ಕುರಿತು ಹಾಡುತ್ತಿದ್ದ ವೃಂದಗೀತೆಯೇ ಗಂಭೀರ ನಾಟಕದ (ಟ್ರ್ಯಾಜಡಿ) ಮೂಲಬೀಜವೆನ್ನಬಹುದು. ಪುರಾತನ ಗ್ರೀಸಿನಲ್ಲಿ ಗಂಭೀರ ನಾಟಕದ ಪ್ರದರ್ಶನ ಕೇವಲ ಯಾವುದೊಂದು ವಿಶಿಷ್ಟ ಮತಧರ್ಮಗಳಿಗೆ ಸೇರಿದವರ ಮನೋರಂಜನೆಗೆ ಮಾತ್ರ ಉದ್ದೇಶಿತವಾಗಿರಲಿಲ್ಲ. ಇಡೀ ಸಮಾಜಸಮುದಾಯವೇ ನಾಟಕವನ್ನು ನೋಡುವ ಪರಿಪಾಠವನ್ನು ರೂಢಿಸಿಕೊಂಡಿತ್ತು. ಕ್ರಿ.ಪೂ 534ರ ಸುಮಾರಿನಲ್ಲಿ ಗಂಭೀರನಾಟಕ ಡೈಯೊನೈಸಸ್ ಉತ್ಸವದ ಅವಿಭಾಜ್ಯ ಅಂಗವಾಗಿದ್ದಿರಬೇಕು. ಕುದುರೆಯ ಬಾಲ ಮತ್ತು ಕಿವಿಗಳನ್ನುಳ್ಳ, ಮನುಷ್ಯ ಸ್ವರೂಪದ, ಸ್ಯಾಟಿರ್ಸ್ ಎಂಬ ಅರೆಪ್ರಾಣಿ ವೇಷಧರಿಸಿದವರೇ ಮೇಳದವರಾಗಿರುತ್ತಿದ್ದ ಕುಣಿತಗಳು ಕ್ರಿ.ಪೂ. 501ರ ವೇಳೆಗೆ ರೂಢಿಗೆ ಬಂತು. ಹರ್ಷನಾಟಕ ಕ್ರಿ.ಪೂ. 486ರಲ್ಲಿ ರೂಪ ತಾಳಿರಬೇಕು. ಅಲ್ಲಿಂದ ಮುಂದೆ ಸುಮಾರು ನೂರು ವರ್ಷಗಳ ಕಾಲ ಈಸ್ಕಿಲಸ್, ಸಾಫೋಕ್ಲೀಸ್ ಮತ್ತು ಯುರಿಪಿಡೀಸ್-ಈ ನಾಟಕಕಾರರ ಗಂಭೀರ ನಾಟಕಗಳು. ಬೇರೆ ಐವರು ಹರ್ಷನಾಟಕಕಾರರ ಕೃತಿಗಳು, ಗ್ರೀಕ್ ಜನಮನವನ್ನು ಸೂರೆಗೊಂಡಂತೆ ಕಾಣುತ್ತದೆ. ಪ್ರತಿವರ್ಷವೂ ಡೈಯೊನೈಸಸ್ ಉತ್ಸವದ ನಾಟಕಸ್ಪರ್ಧೆಗಳಲ್ಲಿ ಮತ್ತೆ ಮತ್ತೆ ಈ ಮೂವರು ಗಂಭೀರನಾಟಕಕಾರರೇ ಸ್ಪರ್ಧಿ ಪ್ರತಿಸ್ಪರ್ಧಿಗಳಾಗಿರುತ್ತಿದ್ದರೆಂದು ತಿಳಿದುಬರುತ್ತದೆ. ಈ ಸ್ಪರ್ಧೆಗಾಗಿ ಮೂವರೂ ಒಂದೊಂದು ನಾಟಕಚಕ್ರವನ್ನೂ (3) ನಾಟಕಗಳು ಒಂದೊಂದು ಸ್ಯಾಟಿರ್ ನಾಟಕವನ್ನೂ (ವಿನೋ ಪ್ರಧಾನ ನಾಟಕ) ಬರೆಯುತ್ತಿದ್ದರಂತೆ. ಐವರು ವಿನೋದನಾಟಕಕಾರರು ಐದು ವೈನೋದಿಕಗಳನ್ನು ಬರೆಯುತ್ತಿದ್ದರಂತೆ. ಒಟ್ಟಿನಲ್ಲಿ ಗಂಭೀರ ನಾಟಕಕಾರರು ಗ್ರೀಕ್ ಸಾಹಿತ್ಯಕ್ಕೆ ಮಹೌನ್ನತ್ಯವನ್ನು ತಂದುಕೊಟ್ಟರು. ಕೇವಲ ಧಾರ್ಮಿಕ ಜಿಜ್ಞಾಸೆ, ಮತಪ್ರಕ್ರಿಯೆಗಳನ್ನು ವಸ್ತುವಾಗುಳ್ಳ ಅನಾದಿಯುಗದ ಗೀತನೃತ್ಯವನ್ನು ಗ್ರೀಕ್ ನಾಟಕಕಾರರು ಸಂಕೀರ್ಣಾನುಭವವನ್ನು ಒಳಗೊಂಡ ಸಮಸ್ಯಾತ್ಮಕವಾದ, ಮಾನವೀಯವಾದ ದುರಂತ ನಾಟಕವನ್ನಾಗಿ ಮಾರ್ಪಡಿಸಿದುದು ಅವರ ಸಾಧನೆ. ಈಸ್ಕಿಲಸ್ ತನ್ನ ನಾಟಕಚಕ್ರದಲ್ಲಿ ಪಾತ್ರಗಳು ಮತ್ತು ಕಥಾ ವಸ್ತುವಿನ ವಿಭಿನ್ನ ಮುಖಗಳು ಒಂದು ನಾಟಕದಿಂದ ಇನ್ನೊಂದಕ್ಕೆ ಹೇಗೆ ಬೆಳೆಯುತ್ತ ಹೋಗುತ್ತವೆಂದು ಚಿತ್ರಿಸುತ್ತಾನೆ. ಅವನು ಕಣ್ಣು ಕೋರೈಸುವಂಥ ದೃಶ್ಯಾವಳಿಗಳನ್ನೂ ಭವ್ಯವಾದ ಸಂಗೀತವನ್ನೂ ಉನ್ನತವಾದ ಕಾವ್ಯ ಶೈಲಿಯನ್ನೂ ಬೇಕಾದಂತೆ ಬಳಸಿಕೊಂಡ. ಉದಾತ್ತವೂ ಗಹನಗಂಭೀರವೂ ಆದ ಮನುಷ್ಯನ ಬದುಕು ಧರ್ಮತತ್ತ್ವಗಳ ನೀತಿನೇತಿಗಳ ನೆಲಗಟ್ಟಿನ ಮೇಲೆ ರಚಿತವಾಗಬೇಕೆನ್ನುವ ವಿಚಾರ ಪರಂಪರೆ ಅವನ ಒರೆಸ್ಟಿಯಾ ನಾಟಕಚಕ್ರದಲ್ಲಿ ರೂಪಿತವಾಗಿದೆ. ಈಸ್ಕಿಲಸನ ನಾಟಕದ ಮೇಳ ಪಾತ್ರಗಳು ಯಾರೇ ಆಗಲಿ, ಯಾವುದೇ ಸಾಮಾಜಿಕ ವರ್ಗವನ್ನು ಪ್ರತಿನಿಧಿಸಲಿ, ಅವನ ಚಿಂತನೆ ಒಂದೇ ಗುರಿಯತ್ತ ಸಾಗುವಂಥದು. ಪ್ರತಿಮಾಪೂರ್ಣ ಮೇಳಗೀತಗಳ ಪ್ರಗಾಥಗಳ ಮೂಲಕ ಇಡೀ ನಾಟಕದ ಜೀವಾಳವನ್ನು ಅರ್ಥವಿಸುತ್ತ ನಾಟಕಕಾರ ತನ್ನ ಜೀವನದರ್ಶನಕ್ಕೆ ಆಕಾರ ನೀಡುತ್ತಾನೆ. ಸಾಫೊಕ್ಲೀಸ್ ತನ್ನ ನಾಟಕಗಳಲ್ಲಿ ಮೇಳ ಪ್ರಗಾಥಗಳ ವ್ಯಾಪ್ತಿಯನ್ನು ಕಡಿಮೆ ಮಡಿ ಸಂಭಾಷಣೆಯನ್ನು ಹೆಚ್ಚು ಜೀವಂತಗೊಳಿಸುತ್ತಾನೆ. ಆದರೆ ನಡುವೆ ಅಲ್ಲಲ್ಲಿ ಸಣ್ಣ ಸಣ್ಣ ಪ್ರಗಾಥಗಳನ್ನು ಹೆಣೆದು ಅವುಗಳಲ್ಲಿ ಮನುಷ್ಯ ಹಾಗೂ ಅವನ ಜೀವನದ ನೀತಿ ನಿಯಮಗಳ ನಡುವಣ ಸಂಘರ್ಷ ಕುರಿತು ವ್ಯಾಖ್ಯಾನ ಮಾಡುತ್ತಾನೆ. ಈಸ್ಕಿಲಸ್, ಸಾಫೊಕ್ಲೀಸರ ತಾತ್ತ್ವಿಕ ವಿಚಾರಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ದುರಂತಮಯವಾದ ಮನುಷ್ಯನ ಬಾಳು ಅಧೋಗತಿಗೆ ಇಳಿಯಲು ದೈವೀಶಕ್ತಿಗಳು ಎಷ್ಟುಕಾರಣವೋ ಅವನ ಕ್ಷುದ್ರ ಮನೋವೈಕಲ್ಯ, ದೌರ್ಬಲ್ಯಗಳು ಅಷ್ಟೆ ಕಾರಣ ಎನ್ನುವ ಮಾತಿನ ಮೇಲೆ ಸಾಫೊಕ್ಲೀಸ್ ಹೆಚ್ಚು ಒತ್ತು ಹಾಕುತ್ತಾನೆ. ಅವನು ಮಾನವೀಯವಾದ ಒಂದೋ ಎರಡೋ ಮುಖ್ಯ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕ ಕಥೆಯ ಹಲವಾರು ಮುಖಗಳು ಹೇಗೆ ವಿಕಾಸವಾಗುತ್ತವೆಂದು ತೋರಿಸುತ್ತಾನೆ. ಗಂಭೀರ ನಾಟಕಕಾರರಲ್ಲಿ ಮೂರನೆಯವನಾದ ಯುರಿಪಿಡೀಸ್ ಅನನ್ಯ ಪ್ರತಿಭಾವಂತ. ಅವನದು ಅತ್ಯಂತ ಆಧುನಿಕ ಪ್ರಜ್ಞೆ ಎನ್ನುವುದುಂಟು. ಆತ ಅತ್ಯಂತ ಸಮಸ್ಯಾತ್ಮಕ ಪಾತ್ರಗಳನ್ನು ಸೃಷ್ಟಿಸಿದ್ದಾನೆ. ಅವನ ನಾಟಕದಲ್ಲಿ ಮೇಳ, ನಾಟಕದ ವಸ್ತುವಿನಿಂದ ಪ್ರತ್ಯೇಕವಾಗಿ ಉಳಿದು ತೀರ ಗೌಣವಾದ ಅಂಶವಾಗುತ್ತದೆ. ಪ್ರಕೃತಿಯ ಚೈತನ್ಯ ಶಕ್ತಿಗಳನ್ನು ಪ್ರತೀಕಿಸುತ್ತವೆ ಎನ್ನುವ ಅರ್ಥದಲ್ಲಿ ಮಾತ್ರ ಅವನ ದೇವತೆಗಳು ವಾಸ್ತವಿಕ ಪಾತ್ರಗಳು. ಕಟ್ಟಕಡೆಯ ಅವನ ನಾಟಕಗಳಲ್ಲಿ ರೋಮಾಂಚಕ ಘಟನೆಗಳೂ ವೀರಸಾಹಸಗಳೂ ತುಂಬಿವೆ. ಇವು ಅವನ ಕಾಲಾನಂತರದ ಗದ್ಯ ನಾಟಕಗಳು ಮತ್ತು ವಿನೋದ ನಾಟಕಗಳ ಮೇಲೆ ತುಂಬ ಪ್ರಭಾವ ಬೀರಿದವೆನ್ನಬಹುದು.

ಕ್ರಿ.ಪೂ. 5ನೆಯ ಶತಮಾನದ ಹರ್ಷ ನಾಟಕದಲ್ಲಿ ಒರಟಾದ ಅಶ್ಲೀಲ ಹಾಸ್ಯ, ಅತ್ಯಂತ ವಿಭಾವನಾತ್ಮಕವಾದ ಕಾವ್ಯಶೈಲಿ, ರಾಜಕೀಯ ವಿಡಂಬನೆ, ಪೌರಾಣಿಕ ವ್ಯಕ್ತಿಗಳನ್ನು ಕುರಿತ ಲೇವಡಿ-ಎಲ್ಲವೂ ಬೆರೆತು ಹೋಗಿವೆ. ಆರಿಸ್ಟೊಫನೀಸನ ಕೆಲವು ಪೂರ್ಣ ಕೃತಿಗಳು ಮಾತ್ರ ಈಗ ಸಿಕ್ಕಿರುವುದರಿಂದ ಪುರಾತನ ಗ್ರೀಕ್ ವಿನೋದನಾಟಕದ ಕಲ್ಪನೆಯನ್ನು ನಾವು ಅವನ ಕೃತಿಗಳಿಂದ ಮಾತ್ರ ಗ್ರಹಿಸಬೇಕಾಗಿದೆ. ಪುರಾತನ ಸ್ಯಾಟಿರ್ ನಾಟಕದ ಅಂಶಗಳೂ ಈ ನಾಟಕಗಳಲ್ಲಿ ಸೇರಿಕೊಂಡು ಇವು ಒಂದೇ ರೀತಿಯ ಕಲ್ಪನೆ ಹಾಗೂ ರಚನಾ ವಿಧಾನಕ್ಕೆ ಅನುಗುಣವಾಗಿ ಸೃಷ್ಟಿಯಾಗಿದೆ. ಒಂದು ಹುಚ್ಚು ಆದರ್ಶವನ್ನು ಕಾರ್ಯೋನ್ಮುಖಗೊಳಿಸಲು ಹೊರಟಾಗ ಅದು ವಾಸ್ತವಿಕ ಬದುಕಿನ ಹಿನ್ನೆಲೆಯಲ್ಲಿ ಎಷ್ಟೊಂದು ಹಾಸ್ಯಾಸ್ಪದವಾಗುತ್ತದೆಂದು ತೋರಿಸುವುದು ಆರಿಸ್ಟಾಫನೀಸನ ರೀತಿ. ಅವನ ಮೇಳಗೀತೆಗಳು ಅತ್ಯಂತ ಕಾವ್ಯಾತ್ಮಕತೆಯಿಂದ ತುಂಬಿ ನಾಟಕಕ್ಕೆ ಬೇಕಾದ ಪರಿಸರವನ್ನು ಸೃಜಿಸಲು ಪ್ರೇರಕವಾಗುತ್ತವೆ.

ಗದ್ಯ: ತಮ್ಮ ಕಾಲದ ಲೌಕಿಕ ಹಾಗೂ ಧಾರ್ಮಿಕ ಚಿಂತನೆಗಳನ್ನು ಅತ್ಯಂತ ಕಾವ್ಯಾತ್ಮಕವಾಗಿ ಅಭಿವ್ಯಕ್ತಿಗೊಳಿಸಿದ ಮಹಾ ನಾಟಕಕಾರ-ಕವಿಗಳ ಅನಂತರ ಗ್ರೀಕ್ ಸಾಹಿತ್ಯದ ಗದ್ಯಯುಗ ಪ್ರಾರಂಭವಾಯಿತು. ಕ್ರಿ.ಪೂ. 5ನೆಯ ಶತಮಾನದವರೆಗೆ ಸೃಷ್ಟ್ಯಾತ್ಮಕ ಚಿಂತನೆಗಳ ಅಭಿವ್ಯಕ್ತಿಗಾಗಿ ಕಾವ್ಯ ಹಾಗೂ ಗದ್ಯ ಮಾಧ್ಯಮಗಳೆರಡನ್ನೂ ಪ್ರಯೋಗಿಸುತ್ತಿದ್ದರು. ಸೋಲನ್, ಕ್ಸಿನೋಫೇನಸ್, ಫಾರ್ಮೆನೈಡಿಸ್, ಎಂಪಿಡಾಕ್ಲಿಸ್-ಮುಂತಾದವರೆಲ್ಲರೂ ಕಾವ್ಯ ಮಾಧ್ಯಮವನ್ನು ಬಳಸಿದರು. ಅವರು ಪ್ರಥಮತಃ ಪ್ರಚಾರಕರಾಗಿದ್ದುರಿಂದ ತಮ್ಮ ಭಾವನೆಗಳು, ವಿದಾರಗಳು ಹೆಚ್ಚು ಸ್ಮರಣೀಯವಾಗುವಂತೆ ಕಾವ್ಯಶೈಲಿಯನ್ನು ಉಪಯೋಗಿಸಿದರು. ಆದರೆ ಕಾಲಕ್ರಮೇಣ ಗದ್ಯದ ಬಳಕೆ ಅನಿವಾರ್ಯವಾಯಿತು. ಅಕ್ಷರಸ್ಥರಾದ, ಹೆಚ್ಚು ತಿಳಿವಳಿಕೆ ಇರುವ ಜನರಿಗಾಗಿ ಬರೆಯಬೇಕಾಗಿ ಬಂದಾಗ ಅಭಿವ್ಯಕ್ತಿಯ ಮಾಧ್ಯಮ ಹೆಚ್ಚು ಪರಿಷ್ಕಾರಗೊಂಡಿತು-ಜಾನಪದ ಕಥೆಗಳು ಕಾವ್ಯಮಯವಾದ ಗಂಭೀರ, ಉನ್ನತ ಶೈಲಿಯನ್ನು ಬಿಟ್ಟು ಗದ್ಯದತ್ತ ಹೊರಳಿದುವು. ಕಾನೂನುಸೂತ್ರಗಳು, ಉದಂತಗಳು, ತಾತ್ತ್ವಿಕ ಚಿಂತನೆಗಳು-ಇವನ್ನು ಸಾಧ್ಯವಾದಷ್ಟು ಸಹಜವಾಗಿ, ಆಡುಮಾತಿನ ಗತಿಲಯಗಳಿಗೆ ಹತ್ತಿರವಾಗುವಂತೆ, ಹಿಡಿದಿಡಲು ಗದ್ಯವೇ ಹೆಚ್ಚು ಉಚಿತವೆನಿಸಿರಬೇಕು. ಕಾವ್ಯದ ಛಂದೋನಿಯಮಗಳಿಗೆ ಅಳವಡಿಸಲಾರದ, ಸಂಕೀರ್ಣ ಆಲೋಚನೆಗಳನ್ನು ಗದ್ಯವಾಕ್ಯಗಳಲ್ಲೇ ಹೇಳಬೇಕೆಂದು ಕಾರ್ಯಸೃಷ್ಟಿಯುಳ್ಳ ಪುರಾತನ ಗ್ರೀಕರಿಗೆ ಹೊಳೆದಿರಬೇಕು. ಪ್ರವಾಸಿ ಹೆಕ್‍ಟಾಯಿಸ್, ವೈದ್ಯಶಾಸ್ತ್ರಜ್ಞ ಹಿಪ್ಪೋಕ್ರಿಟಿಸ್ ಮತ್ತು ತಮ್ಮ ವಿಚಾರಗಳನ್ನು ಸರಳ ನೇರ ಶೈಲಿಯಲ್ಲಿ ಹೇಳಬೇಕೆಂದು ಉದ್ದೇಶಿಸಿದ ಇತರ ತಾತ್ತ್ವಿಕರು, ವಿಜ್ಞಾನಿಗಳು, ವಿಚಾರಶೀಲರು ಗದ್ಯವನ್ನೇ ಬಳಸಿದರು. ಕಾವ್ಯಾಭ್ಯಾಸ ಪಂಡಿತರಾಗಿದ್ದ ಓದುಗರ ಸಲುವಾಗಿ ಬರೆಯುವಾಗ, ಗದ್ಯಶೈಲಿಯನ್ನು ಹೆಚ್ಚು ಪರಿಷ್ಕಾರವಾಗಿ, ನಯಗಾರಿಕೆಯಿಂದ ಬಳಸಬೇಕಾಯಿತು. ಹೋಮರ್ ಕಾವ್ಯದ ಪರಿಚಯವುಳ್ಳ ಸುಸಂಸ್ಕøತರಿಗಾಗಿ ಹಿರಾಕ್ಲಿಟಿಸ್ ದರ್ಶನಶಾಸ್ತ್ರವನ್ನು ಈಸ್ಕಿಲಸ್ ಕವಿಯ ಸುಭಗ ಮೇಳ ಗೀತಗಳೋಪಾದಿಯಲ್ಲಿ ಬರೆದ. ಇತಿಹಾಸಕಾರ ಹೀರಡಟಸ್ ಪರ್ಷಿಯನ್ ಯುದ್ಧದ ಚರಿತ್ರೆ ನಿರೂಪಿಸಲು ಹೋಮರನ ಭವ್ಯಕಾವ್ಯದ ಶೈಲಿಯನ್ನೂ ಕಥಾನಕ ರೀತಿಯನ್ನೂ ಅನುಕರಿಸಿದ. ಹೀರಡಟಸನ ಚಿತ್ರಯುಕ್ತವಾದ ಪದಪುಂಜಗಳು, ಸಮತೋಲವಿರುವ ವಾಕ್ಯಾಂಶಗಳು, ಅಂತ್ಯಪ್ರಾಸಬದ್ಧವಾದ ವಾಕ್ಯಗಳು ಗದ್ಯಕ್ಕೆ ಕಾವ್ಯದ ಚೆಲುವನ್ನು ತಂದುಕೊಟ್ಟವು. ಪ್ರಕಾಂಡ ಪಂಡಿತರೆನಿಸಿಕೊಂಡಿದ್ದ ಆ ಕಾಲದ ಸಾಫಿಸ್ಟ್ ಪಂಥದ ಲೇಖಕರು, ಎಲ್ಲ ವೈಚಾರಿಕ ಸಾಹಿತ್ಯವನ್ನೂ ಚೆನ್ನಾಗಿ ಅಧ್ಯಯನ ಮಾಡಿ, ತಮ್ಮ ಗದ್ಯಶೈಲಿಯನ್ನು ಅಚ್ಚುಕಟ್ಟಾಗಿ ರೂಢಿಸಿಕೊಂಡರು. ಸಾಮ್ರಾಜ್ಯಶಾಹಿ ಅಥೆನ್ಸ್ ನಗರದಲ್ಲಿನ ನ್ಯಾಯಾಲಯಗಳು ಮುಂತಾದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಚರ್ಚೆ, ವಾದ, ವಾಗ್ಮಿತೆಗಳಲ್ಲಿ ಆಸ್ಥೆ ಅಭಿರುಚಿ ತಳೆದ ಆ ನಗರದ ಸುಶಿಕ್ಷಿತ ಜನಸಮುದಾಯ-ಇವು ಉತ್ತಮ ಗದ್ಯಶೈಲಿಯ ವಿಕಾಸಕ್ಕೆ ಅಗತ್ಯವಾದ ಪರಿಸರ ಒದಗಿಸಿದುವು. ಪರ್ಷಿಯ ದೇಶ ಏಷ್ಯ ಮೈನರ್ ಪ್ರದೇಶದ ನಗರ ರಾಜ್ಯಗಳ ಮೇಲೆ ಆಕ್ರಮಣ ನಡೆಸಿದಾಗ ಹಲವು ವಿಚಾರವಂತರು, ಪಂಡಿತ ಪರಿಣಿತರು ದೇಶ ಬಿಟ್ಟು ಓಡಿಬಂದು ಆಥೆನ್ಸ್, ಸಿಸಿಲಿ, ದಕ್ಷಿಣ ಇಟಲಿ ಮುಂತಾದ ಕಡೆ ನೆಲೆಸಿದರು. ದಕ್ಷಿಣ ಇಟಲಿ ಪೈಥಾಗೊರಸ್ ಪಂಥಕ್ಕೆ ಸೇರಿದ ಗಣಿತಶಾಸ್ತ್ರಜ್ಞರ ನೆಲೆವೀಡಾಯಿತು. ವಾಗ್ಮಿ ಕಲೆ, ಭಾಷಾ ವಿಜ್ಞಾನಗಳಲ್ಲಿ ಪರಿಣತರಾದವರು ಸಿಸಿಲಿಯಲ್ಲಿ ನೆಲೆಸಿದರು. ಇತಿಹಾಸ ರಚನೆಯಂತೂ ಸಾಫಿಸ್ಟ್ ಚಳವಳಿಯ ಅಂಗವಾಗಿಯೇ ಹುಟ್ಟಿತೆನ್ನಬಹುದು. ಕಟಾಯಿಸ್ ಎಂಬವನ ಪ್ರವಾಸಿ ಕಥನಗಳನ್ನು ಓದಿ ಪ್ರಭಾವಿತನಾಗಿದ್ದ ಹೀರಡಟಸ್ ಪ್ರವಾಸಕಥನವನ್ನೇ ಪರ್ಷಿಯನ್ ಯುದ್ಧದ ಚರಿತ್ರೆಯನ್ನಾಗಿ ಬರೆದ. ಅವನ ಗ್ರಂಥದಲ್ಲಿ ಸಾಫಿಸ್ಟ್ ಪಂಥದವರ ವಿಚಾರಗಳು, ಹೋಮರನ ಹಾಗೂ ಗ್ರೀಕ್ ಗಂಭೀರನಾಟಕಕಾರರನ್ನು ಕುರಿತ ನೆನಪುಗಳು, ಸವಿವರವಾಗಿ ಬಂದಿವೆ. ಆ ಕಾಲದ ಇನ್ನೊಬ್ಬ ಖ್ಯಾತ ಇತಿಹಾಸಕಾರ ತುಸಿಡಿಡೀಸ್-ಪೆಲೊಪೆನೀಷಿಯನ್ ಯುದ್ಧ ಚರಿತ್ರೆಯನ್ನು ಸಂಗ್ರಹಿಸಿದ. ಆ ಮಹಾಯುದ್ಧ ಒಂದು ಭಯಂಕರ ವ್ಯಾಧಿಯಂತೆ ಹಬ್ಬಿ ಗ್ರೀಕ್ ನಗರರಾಜ್ಯಗಳನ್ನು ಪೀಡಿಸಿತೆಂದು ವರ್ಣಿಸಿ ಅಧಿಕಾರಲಾಲಸೆ-ಅಧಿಕಾರಭಯ ಈ ವ್ಯಾಧಿಯ ಉಗ್ರ ರೋಗಲಕ್ಷಣಗಳು ಎಂದು ತನ್ನ ಇತಿಹಾಸಗ್ರಂಥದಲ್ಲಿ ವಿಶ್ಲೇಷಿಸಿದ್ದಾನೆ. ಆ ಶತಮಾನದ ಗ್ರೀಕ್ ಇತಿಹಾಸದಲ್ಲಿ ಯುದ್ಧದ ಪಿಡುಗು ಬಂದಾಗಲೆಲ್ಲ ಈ ರೋಗಚಿಹ್ನೆಗಳು ಕಾಣಿಸಿಕೊಂಡುವು. ಈ ಚಿಹ್ನೆಗಳನ್ನು ಆ ದೇಶದವರು ಸರಿಯಾಗಿ ಗ್ರಹಿಸಬೇಕಾಗಿತ್ತು. ಹಾಗೆ ಗ್ರಹಿಸಿದ್ದರೆ ಅವರು ತಮ್ಮನ್ನು ಕಾಡಿದ ಆ ಪಿಡುಗನ್ನು ನಿವಾರಿಸಿಕೊಳ್ಳಬಹುದಾಗಿತ್ತು ಎನ್ನುವುದು ತುಸಿಡಿಡೀಸನ ಅಭಿಮತ. ಆತನದು ಹೋಮರನ ಕಾವ್ಯಶೈಲಿ. ಮನೋರಂಜಕವಾಗಿ ಕಥೆ ಹೇಳುವುದರಲ್ಲಿ, ಘಟನೆಗಳನ್ನು ಜೀವಂತಗೊಳಿಸುವುದರಲ್ಲಿ ಅವನದು ನಾಟಕಕಾರನಿಗೆ ಸಹಜವಾದ ಕಲ್ಪನಾಶೀಲತೆ. ಆತನ ಇತಿಹಾಸಗ್ರಂಥದ ಪುಟಗಳು ಮತ್ತೆ ಮತ್ತೆ ಗಂಭೀರ ನಾಟಕಕಾರರ ನಾಟ್ಯಪ್ರಜ್ಞೆಯನ್ನೂ ಸಾಫಿಸ್ಟರ ಶಬ್ದ ವೈಖರಿಯನ್ನೂ ನೆನಪಿಗೆತರುತ್ತವೆ.

ಸಾಕ್ರಟೀಸ್ ಸಾಫಿಸ್ಟ್ ಚಳವಳಿಯ ಒಂದು ಉನ್ನತ ಶಿಖರವನ್ನು ಪ್ರತಿನಿಧಿಸುವಂತಿದ್ದರೂ ಅವನ ವ್ಯಕ್ತಿತ್ವ ಸಾಫಿಸ್ಟ್ ಪಂಥದವರಿಗಿಂತ ತೀರ ಭಿನ್ನ. ನಾಗರಿಕ ಸಮಾಜದಲ್ಲಿ ವ್ಯಕ್ತಿ ಹೇಗೆ ಬದುಕಿ ಬಾಳಬೇಕೆನ್ನುವುದೇ ಸಾಫಿಸ್ಟ್ ತತ್ತ್ವಗಳ ಮೂಲ ಪ್ರಶ್ನೆ. ಈ ಪ್ರಶ್ನೆ ಸಾಕ್ರಟೀಸನ ವಿಚಾರಶಕ್ತಿಯನ್ನು ಹೆಚ್ಚು ಉಗ್ರವಾಗಿ, ಆದರೆ ತೀರ ಭಿನ್ನವಾದ ರೀತಿಯಲ್ಲಿ ಪ್ರಚೋದಿಸಿತು. ಜಯಾಪಜಯಗಳೇನೇ ಬರಲಿ ಋಜುಮಾರ್ಗದಲ್ಲಿ ಬದುಕಬೇಕೆನ್ನುವುದು ಸಾಕ್ರಟೀಸನ ತತ್ತ್ವ. ಆದರೆ ಹೇಗೋ ಯಶಸ್ವಿಯಾಗಿ ಬದುಕಿದರೆ ಸಾಕೆನ್ನುವುದು ಸಾಫಿಸ್ಟರ ರೀತಿ. ಆರಿಸ್ಟಾಫನೀಸ್ ಸಾಕ್ರಟೀಸನನ್ನು ಸಾಫಿಸ್ಟ್ ಎಂದು ಕರೆದು ಲೇವಡಿ ಮಾಡಿದ್ದರೂ ನಮಗೆ ಸಾಕ್ರಟೀಸನ ನಿಜವಾದ ವ್ಯಕ್ತಿಚಿತ್ರಣ ದೊರೆಯುವುದು ಇತಿಹಾಸಜ್ಞ ಕ್ಸಿನೋಫಾನನ ಗ್ರಂಥಗಳಲ್ಲಿ. ತುಸಿಡಿಡೀಸ್ ಸಂಪೂರ್ಣಗೊಳಿಸದೆ ಬಿಟ್ಟು ಪೆಲೋಪೊನೀಷಿಯನ್ ಯುದ್ಧದ ಚರಿತ್ರೆಯನ್ನು ಕ್ಸಿನೋಫಾನ್ ತನ್ನ ಹೆಲೆನಿಕಾ ಎಂಬ ಗ್ರಂಥದಲ್ಲಿ ಮುಂದುವರಿಸಿದ್ದಾನೆ. ಇವರಲ್ಲಿ ಹೀರಡಟಸನ ದೃಷ್ಟಿವೈಶಾಲ್ಯವಾಗಲಿ ವಿಭಾವನೆಯ ಭವ್ಯತೆಯಾಗಲಿ ಇಲ್ಲ. ಕ್ಸಿನೋಫಾಲನನ ಚರಿತ್ರೆಯ ವ್ಯಾಪ್ತಿ ಕಿರಿದಾದ್ದು. ಇತಿಹಾಸಕಾರನ ಶೈಲಿಯ ಔನ್ನತ್ಯಕ್ಕಿಂತ ಹೆಚ್ಚಾಗಿ ನಿರೂಪಣೆಯ ಸರಳತೆ, ನೇರಕಥನಶೈಲಿ, ವಸ್ತುನಿಷ್ಠವಾದ ದೃಷ್ಟಿ ನಮ್ಮನ್ನು ಸೆಳೆಯುತ್ತವೆ. ನಿಜವಾಗಿ ನೋಡಿದರೆ ಕ್ಸಿನೋಫಾನ್ ಪ್ರಸಿದ್ಧನಾಗಿರುವುದು ಜೀವನಚರಿತ್ರಕಾರನೆಂದು. ಅವನು ಬರೆದ ಜೀವನಚರಿತ್ರೆಗಳಿಂದಾಗಿ ಪ್ಲೂಟಾರ್ಕ್ ಮುಂತಾದವರಿಗೆ ಪೂರ್ವಸೂಚಿ ಒದಗಿತು.

ಗದ್ಯಪ್ರಕಾರಕ್ಕೆ ನಾಲ್ಕನೆಯ ಶತಮಾನದ ಗ್ರೀಕ್ ಸಾಹಿತ್ಯದ ಮುಖ್ಯ ಕೊಡುಗೆ-ಗದ್ಯ ಸಂವಾದ. ಇದರ ಮೂಲವನ್ನು ತುಸಿಡಿಡೀಸ್ ಮತ್ತು ಯುರಿಪಿಡೀಸರ ಕೃತಿಗಳಲ್ಲಿ ಬರುವ ಭಾಷಣಗಳಲ್ಲಿ, ಸಂಭಾಷಣೆಗಳಲ್ಲಿ, ಸೊಫ್ರಾನ್ ಬರೆದ ಮೂಕನಾಟಕಗಳಲ್ಲಿ (ಮೈಮ್) ಕಾಣಬಹುದು. ನಾಲ್ಕೈದು ಭಾಷಣಕಾರರು ಒಟ್ಟಿಗೆ ಕುಳಿತು ಒಂದು ವಿಷಯ ಕುರಿತು ಮಾತನಾಡುವಾಗ, ಮಾತು ಮಥಿಸಿ ವಿಚಾರಗಳು ವಿಕಾಸವಾಗುವುದನ್ನು ತೋರಿಸುವುದು ಗದ್ಯ ಸಂವಾದದ ಉದ್ದೇಶ. ಪ್ಲೇಟೊವಿನ ರಿಪಬ್ಲಿಕ್, ಆರಿಸ್ಟಾಟಲನ ಪೊಯೆಟಿಕ್ಸ್ (ಕಾವ್ಯಮೀಮಾಂಸೆ), ಗದ್ಯಸಂವಾದವೆನ್ನುವ ಪ್ರಕಾರದ ಮೇರುಕೃತಿಗಳು. ಪ್ರಪಂಚದ ಸೃಷ್ಟಿಗೆ ಒಂದು ಉದ್ದೇಶವಿದೆ. ಮುನುಷ್ಯ ಒಳ್ಳೆಯದನ್ನು ಸಾಧಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇದು ಪ್ಲೇಟೊವಿನ ಆದರ್ಶ. ಪ್ಲೇಟೊವಿನ ಗ್ರಂಥ ಆದರ್ಶರಾಜ್ಯವನ್ನೂ ಆದರ್ಶಪ್ರಜೆಯನ್ನೂ ಚಿತ್ರಿಸುವುದರ ಜೊತೆಗೆ ಅವರ ಏಳುಬೀಳುಗಳನ್ನೂ ಎತ್ತಿ ತೋರಿಸುತ್ತದೆ. ಇದರಲ್ಲಿ ಪ್ಲೇಟೊಗಿಂತ ಹಿಂದಿನ ಯುಗಗಳ ತತ್ತ್ವಚಿಂತನೆಯ ಸಾರ ಸಮ್ಮಿಳನವೂ ಸಿಕ್ಕುತ್ತದೆ. ಉಳಿದ ಸಂವಾದಗಳಲ್ಲಿ ಪ್ಲೇಟೊ ವಸ್ತುವಿಗಿಂತ ಹೆಚ್ಚಾಗಿ ನಿರೂಪಣಾತಂತ್ರಕ್ಕೆ ಹೆಚ್ಚು ಗಮನವಿತ್ತಿದ್ದಾನೆ. ವಿಚಾರಪ್ರತಿಪಾದನೆಯ ಬದಲು ರೀತಿನೀತಿಗಳ ಗೋಜಿಲ್ಲದ ಪೌರಾಣಿಕ ಕಥೆಗಳನ್ನು ಎತ್ತಿಕೊಂಡು ಕಥೆ ಹೆಣೆಯುವುದರಲ್ಲಿ ತೊಡಗಿದ್ದಾನೆ. ಕವಿಗಳನ್ನು ಆದರ್ಶ ರಾಜ್ಯದಿಂದಾಚೆಗೆ ಅಟ್ಟಿಬಿಡಬೇಕೆಂದು ವಾದಿಸಿದ ಪ್ಲೇಟೊ ಮಹಾಶಯ ಫೀಡ್ರಸ್, ಸಿಂಪೋಸಿಯಮ್ ಮುಂತಾದ ಗ್ರಂಥಗಳಲ್ಲಿ ತಾನೇ ಒಬ್ಬ ಉತ್ಕøಷ್ಟ ಕವಿಯಾಗಿ ವಿಜೃಂಭಿಸಿದ್ದಾನೆ. ಪ್ಲೇಟೊವಿನ ಅನಂತರ, ಸಂವಾದಗಳನ್ನೂ ಭಾಷಣಗಳನ್ನೂ ಬರೆದ ವಾಗ್ಮಿಗಳು ಕೇವಲ ವಿಚಾರಗಳ ಪ್ರಚಾರಕ್ಕಾಗಿಯೇ ಬರೆದಂತೆ ತೋರುತ್ತದೆ. ಹೀಗೆ ಯಾವುದೊಂದು ಶ್ರೋತೃವರ್ಗಕ್ಕಾಗಿ ಉದ್ದೇಶಿಸದೆ, ಕೇವಲ ಪ್ರಚಾರಕ್ಕಾಗಿಯೇ ಬರೆದವರಲ್ಲಿ ಐಸೋಕ್ರಟೀಸ್ ಬಹುಮುಖ್ಯನಾದವ. ಪ್ಲೇಟೊ ತನ್ನ ಅಕಾಡಮಿಯ ಸಲುವಾಗಿ ಸಂವಾದಗಳನ್ನು ರಚಿಸಿದಂತೆ ಐಸೋಕ್ರಟೀಸ್ ರಾಜನೀತಿಶಾಸ್ತ್ರವನ್ನು ಬೋಧಿಸುವ ತನ್ನ ಸಂಸ್ಥೆಯಲ್ಲಿ ರಾಜನೀತಿಜ್ಞರನ್ನು ತರಬೇತಿಗೊಳಿಸಲೆಂದೇ ತನ್ನ ಭಾಷಣಗಳನ್ನು ಬರೆದ. ತನ್ನ ವಿದ್ಯಾರ್ಥಿಗಳಿಗೆ ಗಂಭೀರ ನಾಟಕಗಳನ್ನೂ ಚರಿತ್ರೆ. ವಾಗ್ಮಿತೆ ಮುಂತಾದವನ್ನೂ ಬೋಧಿಸಿದ. ಸಾರ್ವಜನಿಕ ಸಭೆಗಳಲ್ಲಿ ಪ್ರಸ್ತುತಪಡಿಸಲೆಂದೇ ಭಾಷಣ ರಚಿಸಿದವರಲ್ಲಿ ಡೆಮಾಸ್ತೆನೀಸನ ಹೆಸರು ಲೋಕಮಾನ್ಯವಾಗಿದೆ. ಅವನು ಗ್ರೀಕರ ವಿರುದ್ಧ ಬೆಳೆಯುತ್ತಿದ್ದ ಮ್ಯಾಸಿಡೋನಿಯದ ಸಾಮ್ರಾಜ್ಯಶಾಹಿಯನ್ನು ಪ್ರತಿಭಟಿಸಿ, ಅಥೆನ್ಸ್ ಪ್ರಜಾಪ್ರಭುತ್ವದ ಧೋರಣೆಗಳನ್ನು ಎತ್ತಿಹಿಡಿದ.

ಪ್ಲೇಟೊವಿನ ಅಕಾಡಮಿಯಲ್ಲಿ ಅಧ್ಯಯನ ನಡೆಸುತ್ತಿದ್ದ ಅವನ ಶಿಷ್ಯರಲ್ಲಿ ಆರಿಸ್ಟಾಟಲ್ ಅತ್ಯಂತ ಪ್ರತಿಭಾವಂತ. ಗುರುವಿನ ಸಂವಾದಗಳ ಮಾದರಿಯಲ್ಲೇ ಈತ ರಚಿಸಿದನೆನ್ನಲಾದ ಕೃತಿಗಳು ಯಾವುವೂ ಸಿಕ್ಕಿಲ್ಲ. ಆದರೆ ಸಿಕ್ಕಿರುವ ಚೂರುಪಾರು ಲೇಖನಗಳಲ್ಲಿ ಯಾವ ಹೆಚ್ಚುಗಾರಿಕೆ ಇಲ್ಲವೆಂದರೂ ಆರಿಸ್ಟಾಟಲನ ಉಪನ್ಯಾಸಗಳಲ್ಲಿ ಅವನ ನಿಜವಾದ ಸ್ವೋಪಜ್ಞತೆಯನ್ನು ಕಾಣಬಹುದು. ಸಂವಾದಗಳ ಪ್ರಶ್ನೋತ್ತರ ಶೈಲಿಯನ್ನು ಬಿಟ್ಟು ಆರಿಸ್ಟಾಟಲ್ ಪ್ರವಚನದ ಶೈಲಿಯನ್ನು ಪ್ರಯೋಗಿಸಿದ. ಆದರೆ ಇವನ ಉಪನ್ಯಾಸಗಳು ಸಹ ಈಗ ಉಪಲಬ್ಧವಾಗಿಲ್ಲ. ನಮಗೆ ಉಳಿದಿರುವುದು. ಈತ ಭಾಷಣ ಮಾಡಲು ಗುರುತು ಹಾಕಿಟ್ಟುಕೊಂಡಿದ್ದ ಟಿಪ್ಪಣಿಗಳು. ಅವುಗಳಿಂದಲೇ ನಾವು ಇವನ ಸಾಧನೆಯನ್ನು ಅಳೆಯಬೇಕಾಗಿದೆ. ಇವನ ಮುಖ್ಯಕೃತಿಗಳಲ್ಲೊಂದಾದ ಪಾಲಿಟಿಕ್ಸ್‍ಅನ್ನು (ರಾಜ್ಯಶಾಸ್ತ್ರ) ರಚಿಸಿದ್ದು ಆಥೆನ್ಸಿನ ರಾಜ್ಯಾಂಗದ ಆಧಾರದ ಮೇಲೆ, ಅವನು ತನ್ನ ಸ್ವಂತ ಅಧ್ಯಯನದಿಂದ ಸಂಗ್ರಹಿಸಿದ್ದ ಪ್ರಕೃತಿ ವಿಜ್ಞಾನದ ತತ್ತ್ವಗಳನ್ನು ಪೊಯೆಟಿಕ್ಸ್ (ಕಾವ್ಯಮೀಮಾಂಸೆ) ಗ್ರಂಥದಲ್ಲಿ ಸಾಹಿತ್ಯಚರಿತ್ರೆಯ ಸೂತ್ರಗಳಿಗೆ ಅನ್ವಯಿಸಿದ್ದಾನೆ. ತನಗಿಂತ ನೂರು ವರ್ಷ ಮುಂಚೆ ಕಣ್ಮರೆಯಾಗಿದ್ದ ಗಂಭೀರ ನಾಟಕಕಾರರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಕಾವ್ಯನಾಟಕ ಸೂತ್ರಗಳನ್ನು ಪ್ರತಿಪಾದಿಸಿದ್ದಾನೆ. ಆರಿಸ್ಟಾಟಲನ ವಿಚಾರಧಾರೆಯಿಂದ ಆ ಮೇಲಿನ ಪರಂಪರೆಯ ಗಂಭೀರ ನಾಟಕ ಹಾಗೂ ಹರ್ಷ ನಾಟಕಗಳು ಬೇರೆಬೇರೆ ರೀತಿಯಲ್ಲಿ ಪ್ರಭಾವ ಪಡೆದವು. ಆರಿಸ್ಟಾಟಲ್ ಗ್ರೀಕ್ ಗಂಭೀರನಾಟಕದ ರತ್ನತ್ರಯರಿಗೆ ಅನನ್ಯ ಪ್ರಶಂಸೆ ಸಲ್ಲಿಸಿ ಅವರ ಕೃತಿಗಳು ಆ ಪ್ರಕಾರದಲ್ಲಿ ಎಣೆಯಿಲ್ಲದ ಪರಿಪೂರ್ಣ ಕೃತಿಗಳು ಎಂದು ಹೇಳಿದ. ಲೈಕರ್ಗಸ್ ಎಂಬ ರಾಜಕಾರಣಿ ಗಂಭೀರ ನಾಟಕಕಾರತ್ರಯರ ಪ್ರತಿಮೆಗಳನ್ನು ರಂಗಮಂದಿರದಲ್ಲಿ ಸ್ಥಾಪಿಸಿದ ಮತ್ತು ನಾಟಕಗಳ ಗ್ರಂಥಪಾಠವನ್ನು ಖಚಿತಗೊಳಿಸುವ ಪ್ರಯತ್ನ ಮಾಡಿದ. ಗಂಭೀರ ನಾಟಕ ಇಷ್ಟೊಂದು ಉಚ್ಛ್ರಾಯಸ್ಥಿತಿಗೆ ತಲುಪಿದ ಅನಂತರ ಗ್ರೀಕ್ ಗಂಭೀರ ನಾಟಕ ಪರಂಪರೆಯೇ ಕುಂಠಿತವಾಗುವಂತಾಯಿತು. ಈಸ್ಕಿಲಸ್, ಸಾಫೊಕ್ಲೀಸರಂಥ ಗಂಭೀರ ನಾಟಕಕಾರರ ಕೀರ್ತಿಯ ಪ್ರಖರ ಬೆಳಕಿನಲ್ಲ್ಲಿ ಹೊಸ ನಾಟಕಕರರ ಕಣ್ಣು ಕೋರೈಸಿದಂತಾಗಿ ಗ್ರೀಕ್ ರುದ್ರನಾಟಕ ಅಲೆಗ್ಸಾಂಡ್ರಿಯದಲ್ಲಿ ಅತ್ಯಲ್ಪಕಾಲ ಮಾತ್ರ ಮಿಂಚಿ ಅವನತಿಗೊಂಡಿತು. ಆದರೆ ಇದರ ಫಲವಾಗಿ ಆ ಮೇಲಿನ ಹರ್ಷನಾಟಕಕ್ಕೆ ಉತ್ತಮ ಪ್ರೇರಣೆ ದೊರೆಯುತ್ತ ಬಂತು.

ಹೊಸ ವೈನೋದಿಕಗಳು: 4ನೆಯ ಶತಮಾನದ ಪ್ರಾರಂಭದಲ್ಲಿ ರಚಿಸಲಾದ ಗಂಭೀರ ಹಾಗೂ ಹರ್ಷ ನಾಟಕಗಳಲ್ಲಿ ಯುರಿಪಿಡೀಸನ ಮೆಲೋಡ್ರಾಮಗಳ (ಗಂಭೀರ ಸಂಗೀತ ರೂಪಕ) ಪ್ರಭಾವ ಸ್ಪಷ್ಟವಾಗಿ ತೋರುತ್ತದೆ. ಆ ಕಾಲದ ಹರ್ಷ ನಾಟಕಗಳಲ್ಲಿ ಅಂಕಗಳ ನಡುವೆ ಮೇಳಗೀತಗಳು ಬರುವುದಿಲ್ಲ. ಸಂಗೀತವನ್ನು ಬಿಟ್ಟು ಪಾತ್ರವಿನ್ಯಾಸಕ್ಕೆ ಅವರು ಹೆಚ್ಚು ಗಮನವಿತ್ತಂತೆ ಕಾಣುತ್ತದೆ. ಹರ್ಷ ನಾಟಕಗಳಲ್ಲಿ ಸಮಕಾಲೀನ ಯುಗದ ರಾಜಕೀಯ ವ್ಯಕ್ತಿಗಳ, ತತ್ತ್ವಗಳ ವಿಡಂಬನೆಯೂ ಬೇಕಾದಷ್ಟಿದೆ. ಆದರೆ ಮುಖ್ಯವಾಗಿ ಬೊಗಳೆ ಸಿಪಾಯಿ, ಸೂಳೆಯರು, ವಿಟರು, ತಲೆಹಿಡುಕರು, ಅಡುಗೆಯವರು ಮುಂತಾದ ಮಾಮೂಲು ಪ್ರರೂಪಗಳೇ ಹೆಚ್ಚು. ಕಾಮೆಡಿ ಆಫ್ ಮ್ಯಾನರ್ಸ್ ಪ್ರಕಾರದ ಉಗಮವನ್ನು ಪ್ರಪ್ರಥಮವಾಗಿ ಇಲ್ಲಿ ನೋಡಬಹುದು.

ಹರ್ಷನಾಟಕ ಆರಿಸ್ಟಾಟಲನ ಕಾವ್ಯಮೀಮಾಂಸೆಯಿಂದ, ನೀತಿಶಾಸ್ತ್ರದ ಸೂತ್ರಗಳ ಪ್ರಭಾವದಿಂದ, ತನ್ನ ಹಳೆಯ ಕಾಲದ ಒರಟುತನವನ್ನೂ ಅಶ್ಲೀಲ ಹಾಸ್ಯವನ್ನೂ ಕಳಚಿ ಒಗೆದು ಮುಪ್ಪುರಿಗೊಂಡಿತು. ಅದು ರಾಜಕೀಯ ವಿಡಂಬನ ಹಾಗೂ ಒರಟು ಪ್ರಹಸನದ ಅಂಶಗಳನ್ನು ಬಿಟ್ಟು, ವಾಸ್ತವಿಕ ಸಾಮಾಜಿಕ ಚಿತ್ರಣ ನೀಡುವುದನ್ನೇ ಗುರಿಯಾಗಿಟ್ಟುಕೊಂಡಿತು. ಹೀಗೆ ಅಸ್ತಿತ್ವಕ್ಕೆ ಬಂದ ಯೂರೋಪಿನ ಹರ್ಷ ನಾಟಕದ ಸಂಪ್ರದಾಯ ರೋಮನ್ ನಾಟಕಕಾರರಾದ ಪ್ಲಾಟೆಸ್ ಮತ್ತು ಟೆರೆನ್ಸರಿಂದ ಹಿಡಿದು ಇಂಗ್ಲೆಂಡಿನ ಷೇಕ್ಸ್‍ಪಿಯರ್, ಷೆರಿಡನ್ನರ ವರೆಗೆ ಪೂರ್ಣ ರಸವಾಹಿನಿಯಾಗಿ ಪ್ರವಹಿಸಿತು. ಗ್ರೀಸಿನ ಹೊಸ ಹರ್ಷನಾಟಕ ಉಚ್ಛ್ರಾಯಸ್ಥಿತಿ ಕಂಡದ್ದು ಕ್ರಿ.ಪೂ. 4ನೆಯ ಶತಮಾನದಲ್ಲಿ ಹೊಸ ವೈನೋದಿಕಗಳನ್ನು ಬರೆದವರಲ್ಲಿ ಮಿನಾಂಡರ್, ಡಿಫೈಲಸ್, ಫಿಲೆಮಾನ್ ಮುಂತಾದವರ ಹೆಸರುಗಳಿದ್ದರೂ ಮಿನಾಂಡರನ ಕೆಲವು ನಾಟಕಗಳ ತುಣುಕುಗಳನ್ನು ಬಿಟ್ಟರೆ ಯಾವೊಂದು ಪೂರ್ಣ ಕೃತಿಯೂ ದೊರೆತಿಲ್ಲ. ಆತನ ನಾಟಕಗಳಲ್ಲಿನ ಅತ್ಯಂತ ಕಲಾತ್ಮಕವೂ ಸೂಕ್ಷ್ಮವೂ ಆದ ಪಾತ್ರ ವಿನ್ಯಾಸ. ನವುರಾದ ಹಾಸ್ಯ-ಇವು ಸುಸಂಸ್ಕøತ ಆಥೆನ್ಸ್ ನಗರದ ಶಿಷ್ಟವರ್ಗದ ಅಭಿರುಚಿಯನ್ನು ಸೂಚಿಸುತ್ತದೆ.

ಹೊಸ ಗದ್ಯಪದ್ಯ ಪ್ರಭೇದಗಳು: ಆರಿಸ್ಟಾಟಲನ ತಾತ್ತ್ವಿಕ ಪರಂಪರೆಯನ್ನು ಮುಂದುವರಿಸಿದವರಲ್ಲಿ ಕ್ಯಾರೆಕ್ಟರ್ಸ್ ಎಂಬ ವಿಶಿಷ್ಟತೆರನಾದ (ನಾಗರಿಕ) ವ್ಯಕ್ತಿಚಿತ್ರಣಗಳನ್ನೂ ಸಸ್ಯವಿಜ್ಞಾನ ಗ್ರಂಥವನ್ನೂ ಬರೆದು ಪ್ರಸಿದ್ಧನಾದ ಥಿಯೋಫ್ರಾಸ್ಟಸ್ ಮುಖ್ಯನಾದವ. ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಗ್ರೀಸಿನ ಹಳೆಯ ತಾತ್ತ್ವಿಕ ಸಂಪ್ರದಾಯದ ಜೊತೆಯಲ್ಲೇ ಸ್ಟೋಯಿಕ್ಸ್ ಮತ್ತು ಎಪಿಕ್ಯೂರಿಯನ್ಸ್ ಎಂಬ ಎರಡು ಹೊಸ ವೈಚಾರಿಕ ಪಂಥಗಳು ಹುಟ್ಟಿ ಜನಪ್ರಿಯವಾದುವು. ಥಿಯೋಫ್ರಾಸ್ಟಸನ ಶಿಷ್ಯ ಫಾಲೆರೆಮ್ಮಿನ ಡೆಮಿಟ್ರಿಯಸ್ ಕ್ರಿ.ಪೂ. 307ರಲ್ಲಿ ದೇಶಭ್ರಷ್ಟನಾಗಿ ಅಲೆಗ್ಸಾಂಡ್ರಿಯದ ಟಾಲಿಮಿಯ ಆಶ್ರಯ ಪಡೆದ. ಅಲೆಗ್ಸಾಂಡ್ರಿಯದಲ್ಲಿ ಜಗದ್ವಿಖ್ಯಾತ ಪುಸ್ತಕ ಭಂಡಾರವನ್ನು ಸ್ಥಾಪಿಸಿದವ ಅವನೇ. ಅವನ ಪ್ರಯತ್ನದಿಂದಾಗಿ ಆರಿಸ್ಟಾಟಲನ ವೈಜ್ಞಾನಿಕ ವಿಚಾರಗಳೂ ಶಾಸ್ತ್ರಪದ್ಧತಿಗಳೂ ಅಲೆಗ್ಸಾಂಡ್ರಿಯದಲ್ಲಿ ಬೇರೂರಿದುವು. ಅಲೆಗ್ಸಾಂಡ್ರಿಯದಿಂದ ಹಲವು ಮಂದಿ ವಿದ್ವಾಂಸರು ರೋಮ್ ನಗರಕ್ಕೆ ವಲಸೆ ಬಂದಾಗ ಅವರು ತಮ್ಮ ಜೊತೆಯಲ್ಲಿ ಗ್ರೀಕ್ ಅಭಿಜಾತ ಪರಂಪರೆಯ ಸಾರಸರ್ವಸ್ವವನ್ನೂ ಹೊತ್ತು ತಂದರು. ಅಲೆಗ್ಸಾಂಡ್ರಿಯದಲ್ಲಿ ಸ್ಥಾಪಿತವಾದ ಗ್ರೀಕ್ ಸಾಹಿತ್ಯ ಸಂಪ್ರದಾಯದಲ್ಲೂ ಹಲವು ಕವಿಗಳು ಹುಟ್ಟಿಕೊಂಡರು. ಅಲೆಗ್ಸಾಂಡ್ರಿಯದ ಕವಿಗಳಿಂದ ರಚಿತವಾದ ಕಾವ್ಯ ಪಾಂಡಿತ್ಯಪೂರ್ಣವಾಗಿದ್ದು, ಮನೋವಿಶ್ಲೇಷಣಾತ್ಮಕ ಅಂಶಗಳಿಂದ ಕೂಡಿದೆ. ಹಿಂದಿನ ಪರಂಪರೆಯನ್ನು ಬಿಡಬಾರದೆಂಬ ಹಂಬಲದಿಂದ ಇವರು ಹಳೆಯ ಛಂದೋನಿಯಮಗಳನ್ನು, ಭಾಷೆಯನ್ನು ಅನುಕರಿಸಲೆತ್ನಿಸಿದರು. ನಾಗರಿಕ ಓದುಗರಿಗಾಗಿ ಇವರು ಹಳ್ಳಿಗಾಡಿನ ಪ್ರಶಾಂತ ಬದುಕಿನ ಚೆಲುವನ್ನು ನವಿರಾಗಿ ಬಣ್ಣಿಸಿದರು. ಈ ಶಿಷ್ಟಕವಿಗಳು ತಾವು ಕಂಡುಂಡ ವೈಜ್ಞಾನಿಕ ವಿಚಾರಗಳನ್ನು ಹಳೆಯ ಸಂಪ್ರದಾಯದ ರೀತಿಯಲ್ಲೇ ಹೇಳಲು ಪ್ರಯತ್ನಿಸುವುದರಿಂದ ಇವರ ಕಾವ್ಯ ಹಳತು ಹೊಸತುಗಳ ಮಿಶ್ರಣವಾಗಿದೆ. ಅಲೆಗ್ಸಾಂಡ್ರಿಯದ ಕವಿಗಳಲ್ಲಿ ಮೊದಲಿಗರೆಂದರೆ; ಗ್ರಾಮಜೀವನವನ್ನು ಚಿತ್ರಿಸುವ ಪ್ಯಾಸ್ಟೊರಲ್ ಕವಿ ಥಿಯೋಕ್ರಟಿಸ್, ಪುರಾಣಕಾವ್ಯಶೈಲಿಯಲ್ಲಿ ಬರೆದ ರೋಡ್ಸ್ ಪ್ರಾಂತದ ಅಪೊಲೋನಿಯಸ್, ಪುರಾಣಗಳ ಮತಪ್ರಕ್ರಿಯೆಗಳ ಉಗಮವನ್ನು ವಿವರಿಸುವ ಐಷಿಯಾ ಎಂಬ ಗ್ರಂಥ ಬರೆದ ಕ್ಯಾಲಿಮಾಕಸ್ ಮುಂತಾದವರು. ಶೋಕಾತ್ಮಕವಾದ ಎಪಿಗ್ರಾಮ್‍ಗಳನ್ನು (ನಾಟುನುಡಿ) ಬರೆದ ಹೆರಾಕ್ಲಿಟಸ್ ಹೊಸದೊಂದು ಕಾವ್ಯಪ್ರಕಾರವನ್ನೇ ಪ್ರಾರಂಭಿಸದನೆನ್ನಬಹುದು.

ಗ್ರೀಕರನ್ನು ಗೆದ್ದ ರೋಮನ್ನರಿಗೆ ಗ್ರೀಕರ ಹೊಸ ಗ್ರೀಕ್ ವೈನೋದಿಕಗಳ, ಅಲೆಗ್ಸಾಂಡ್ರಿಯನ್ ಕಾವ್ಯ, ವಿಜ್ಞಾನ, ಭೂಗೋಳಶಾಸ್ತ್ರ, ಇತಿಹಾಸ, ವಿಮರ್ಶೆ ಪಾಂಡಿತ್ಯ ಪದ್ಧತಿಗಳೆಲ್ಲದರ ಫಲಶ್ರುತಿ ದೊರೆಯುವಂತಾಗಿ ರೋಮನ್ ಸಾಹಿತ್ಯದ ನಿರ್ಮಾಣಕ್ಕೆ ಬೇಕಾದ ಸ್ಫೂರ್ತಿ, ಮಾದರಿಗಳು ಒದಗಿದುವು. ಅಭಿಜಾತ ಯುಗದ ಕಟ್ಟಕಡೆಯ ಘಟ್ಟದಲ್ಲಿ ಇತಿಹಾಸಗ್ರಂಥಗಳನ್ನು ಬರೆದವರಲ್ಲಿ ಪಾಲಿಬಿಯಸ್‍ನ ಹೆಸರು ಉಲ್ಲೇಖಾರ್ಹ. ಅವನ ವಿಶಿಷ್ಟ ತಾತ್ತ್ವಿಕಚಿಂತನೆ. ವಿಚಿತ್ರ ಶೈಲಿ ಅನಂತರದ ಸಾಹಿತಿಗಳ ಮೆಲೆ ಪ್ರಭಾವ ಬೀರಿ, ಹೊಸ ಮಾರ್ಗ ಸ್ಥಾಪಿಸಿದುವು.

ಕ್ರಿ.ಪೂ. ಎರಡನೆಯ ಶತಮಾನದಲ್ಲಿ ರೂಪ ತಳೆದ (ಅದ್ಭುತಕಥೆಗಳು) ಗದ್ಯ ರೊಮಾನ್ಸುಗಳು ಸಮಗ್ರ ಯೂರೋಪಿನ ಸಾಹಿತ್ಯದ ಬಹುಮುಖ ಬೆಳೆವಣಿಗೆಗೆ ಕಾರಣವಾದವು. ರೋಮಾನ್ಸ್‍ಗಳು ಗ್ರೀಸಿನ ಅವಿಚ್ಛಿನ್ನ ಕಥಾನಕ ಪರಂಪರೆಯಿಂದ ಉದ್ಭವಿಸಿದರೂ ಅವುಗಳ ಮೇಲೆ ಗ್ರೀಕ್ ನಾಟಕಗಳೂ ತಮ್ಮ ಪ್ರಭಾವವನ್ನು ಅಚ್ಚೊತ್ತಿದೆವೆಂಬುದನ್ನು ಗಮನಿಸಬೇಕು. ಕ್ರಿ.ಪೂ. ಎರಡನೆಯ ಶತಮಾನದ ಅನಂತರ ಗ್ರೀಕ್ ಸಾಹಿತ್ಯದ ಇಳಿಗತಿ ಪ್ರಾರಂಭಾಯಿತು. ಆಮೇಲೆ ಬಂದ ಸಾಹಿತಿಗಳು ಆರ್ಷೇಯವಾದ ಸಾಹಿತ್ಯಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರಲ್ಲೇ ಹೆಚ್ಚಾಗಿ ಆಸಕ್ತಿ ವಹಿಸಿದರು. ಪ್ಲೂಟಾರ್ಕನ ನೀತಿಪ್ರಧಾನವಾದ ಜೀವನಚರಿತ್ರೆಗಳಲ್ಲಿ (ಲೈವ್ಸ್) ಲೂಸಿಯನ್ನನ ಗದ್ಯ ಸಂವಾದಗಳಲ್ಲಿ ಸಾಕ್ರಟೀಸನ ತಾತ್ತ್ವಿಕ ವಿಚಾರಗಳು ಮತ್ತೆಮತ್ತೆ ಅಭಿವ್ಯಕ್ತಿ ಪಡೆದಿವೆ. ಲೂಸಿಯನ್ನನ ವಿಚಿತ್ರ ಲಘುಕಲ್ಪನೆ ಆರಿಸ್ಟಾಫನೀಸನ ನಾಟಕಗಳ ನೆನಪು ತರುತ್ತದೆ. ಪ್ಲೇಟೊ, ಆರಿಸ್ಟಾಟಲರ ವಿಚಾರಗಳು ಇಲ್ಲಿ ಚರ್ವಿತಚರ್ವಣವಾದಂತೆ ಭಾಸವಾಗುತ್ತದೆ. ಆಲ್ಸಿಪ್ರಾನ್ ಬರೆದ ಪತ್ರಗಳಲ್ಲಿ ಮಿನಾಂಡರನ ನಾಟಕಗಳ ವಾತಾವರಣ, ವಸ್ತು, ಶೈಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಹೀಗೆ ಪುನಃಪುನಃ ಹಳೆಯ ಪರಂಪರೆಯತ್ತ ವಾಲುವ ಈ ಸಾಹಿತಿಗಳು ಅಭಿಜಾತಯುಗದ ಇಳಿಗತಿಯನ್ನು ಸೂಚಿಸುತ್ತಾರೆ. ಇವರಲ್ಲಿ ಯಾರು ಸಂಪ್ರದಾಯವನ್ನು ಅರಗಿಸಿಕೊಂಡು ತಮ್ಮ ಶೈಲಿವಸ್ತುಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಕೊಂಡರೋ ಅವರು ಬಾಳಬಲ್ಲ ಕೃತಿಗಳನ್ನು ರಚಿಸುವುದು ಸಾಧ್ಯವಾಯಿತು.

ಪೂರ್ವ ಕ್ರಿಶ್ಚನ್ ಯುಗ : ಅಭಿಜಾತ ಗ್ರೀಕ್ ಸಂಪ್ರದಾಯ ಮಧ್ಯಯುಗದ ಗ್ರೀಕ್ ಸಾಹಿತ್ಯಕ್ಕೂ ಅನಂತರದ ರೋಮನ್ ಸಾಹಿತ್ಯಕ್ಕೂ ಮುಖ್ಯ ಪ್ರೇರಕಶಕ್ತಿಯಾಗಿ ಮುಂದುವರಿಯಿತು. ಕ್ರೈಸ್ತಧರ್ಮ ಸ್ಥಾಪಿತವಾದ ಮೇಲೆ ಅದರ ಚೈತನ್ಯದಾಯಕ ಪ್ರಬಲಶಕ್ತಿಗಳಿಂದಾಗಿ ಹೊಸಹೊಸ ಪ್ರಕಾರಗಳು, ವೈವಿಧ್ಯಮಯ ವಿಚಾರಗಳು ರೂಪುಗೊಂಡವು. ಹೊಸ ಒಡಂಬಡಿಕೆಯ ಸೃಷ್ಟಿಕರ್ತರಲ್ಲೊಬ್ಬನಾದ ಸೇಂಟ್ ಪಾಲ್ ಪ್ಯಾಲಸ್ಟೀನ್ ಸುವಾರ್ತೆಯನ್ನು ಗ್ರೀಕ್ ಲೋಕಕ್ಕೆ ಅರ್ಥವತ್ತಾಗಿ ಪರಿಚಯ ಮಾಡಿಕೊಟ್ಟು ಹೊಸ ಅಭಿವ್ಯಕ್ತಿಯ ಮಾರ್ಗಗಳನ್ನು ಸೂಚಿಸಿದ. ಆದರೆ ಪಾಲ್‍ಗೆ ಪ್ರೇರಣೆಯಾದ ಸೃಜನಶೀಲ ಶಕ್ತಿಗಳು ಅನಂತರದ ಕ್ರಿಶ್ಚನ್ ಅಪಾಸಲರ ತಲೆಮಾರಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾದಂತೆ ಕಾಣಿಸುವುದಿಲ್ಲ. ಇದಕ್ಕೆ ನಿದರ್ಶನವಾಗಿ (ಹೊಸ ಒಡಂಬಡಿಕೆಯಲ್ಲಿ ಸೇರದೆ ಉಳಿದಿರುವ) ಪೂರ್ವ ಕ್ರಿಶ್ಚನ್ ಚರ್ಚಿನ ಧರ್ಮಪ್ರವರ್ತಕರ ಗ್ರೀಕ್ ಲೇಖನಗಳನ್ನು ನೋಡಬಹುದು. ಫಸ್ಟ್ ಎಪಿಸಲ್ ಆಫ್ ಕ್ಲೆಮಂಟ್ ಎನ್ನುವ ಪತ್ರದಲ್ಲಿ ಕಾರಿಂತಿಯನ್ ಚರ್ಚನ್ನು ಕುರಿತ ಖಂಡನೆ ಇದೆ. ಚರ್ಚಿನ ನಿಯಮಕ್ಕನುಸಾರವಾಗಿ ನೇಮಿತವಾಗಿದ್ದ ಪ್ರವಚನಾಧಿಕಾರಿಗಳನ್ನು ತೆಗೆದುಹಾಕಿದರೆಂಬುದೇ ಈ ಖಂಡನಾಪತ್ರಕ್ಕೆ ಮುಖ್ಯ ಪ್ರೇರಣೆ. ಈ ಚಿತ್ರ ಮೊದಲ ಕ್ರಿಶ್ಚನ್ ಶತಮಾನದ ಚರ್ಚುಗಳ ಇತಿಹಾಸದ ಮೇಲೆ ಬೆಳಕು ಹರಿಸುತ್ತದೆ. ಪಾಪದೋಷ, ತಪ್ಪೊಪ್ಪಿಗೆ, ಕ್ಷಮೆ, ಮುಂತಾದ ಕ್ರೈಸ್ತಧರ್ಮ ಸಮಸ್ಯೆಗಳನ್ನು ಕುರಿತ ಲೇಖನಗಳು ಆ ಕಾಲದ ಕೆಲವು ಗ್ರಂಥಗಳಲ್ಲಿ ಕಾಣಸಿಗುತ್ತವೆ. ಕ್ರಿ.ಪೂ. 130ರಲ್ಲಿ ಬರೆದ ಸೆಕಂಡ್ ಎಪಿಸಲ್ ಆಫ್ ಕ್ಲೆಮೆಂಟ್ ಎಂಬ ಪ್ರವಚನದ ದಿ ಷಪರ್ಡ್ ಆಫ್ ಹೆರ್ಮಾಸ್ ಎಂಬ ಭಾಗದಲ್ಲಿ ಕ್ರಿಸ್ತಪೂರ್ವಯುಗದ ಪೇಗನ್ ಕಾದಂಬರಿಗಳಿಂದಲೂ ಹಲವು ಬೇರೆಬೇರೆ ಲೌಕಿಕ ಗ್ರಂಥಗಳಿಂದಲೂ ಆರಿಸಿ ಸೇರಿಸಿದ ಕಲಬೆರಕೆಯ ಅಂಶಗಳಿವೆ. ಈ ರೀತಿಯ (ಎಪಿಸಲ್ಸ್) ಧಾರ್ಮಿಕ ಪತ್ರಗಳು, ಪ್ರವಚನಗಳು (ಸರ್ಮನ್ಸ್) ಮತ್ತು ಬೈಬಲಿನ ವ್ಯಾಖ್ಯಾನಗಳು, ಪೂರ್ವ ಕ್ರಿಶ್ಚನ್ ಚರ್ಚಿನ ಇತಿಹಾಸ ತಿಳಿಯಬೇಕೆನ್ನುವವರಿಗೆ ಸಾಕ್ಷ್ಯಾಧಾರವಾಗಿವೆ. ಆ ಕಾಲದಲ್ಲಿ ರಚಿತವಾದ ಅಪಾಲಜಿ ಎಂಬ ಧಾರ್ಮಿಕ ಲೇಖನಗಳಲ್ಲಿ ಕ್ರೈಸ್ತಧರ್ಮವನ್ನು ಸಕಾರಣವಾಗಿ ಸಮರ್ಥಿಸಲಾಗಿದೆ. ಅಂಥ ಲೇಖನಗಳನ್ನು ಬರೆದವರಲ್ಲಿ ಆರಿಸ್ಟಿಡೀಸ್ (ಕ್ರಿ.ಶ. 140), ಹುತಾತ್ಮ ಜಸ್ಟಿಸ್ (150), ಅವನ ಶಿಷ್ಯ ಟೇಷಿಯನ್ (160), ಅಥೀನಾಗೊರಸ್ (177), ಓರೆಗಾನ್ ಮತ್ತು ಆಂಟಿಯೋಕಿನ ಥಿಯಾಫೈಲಸ್ ಮುಂತಾದವರ ಹೆಸರು ಹೇಳಬಹುದು. ಕ್ರೈಸ್ತಧರ್ಮವನ್ನು ಸಮರ್ಥಿಸಲು ಧರ್ಮಪ್ರವರ್ತಕರು ಹಲವೊಮ್ಮೆ ಯಹೂದ್ಯರ ಧರ್ಮಗ್ರಂಥಗಳಿಂದಲೇ ವಸ್ತುವನ್ನು ಆರಿಸಿಕೊಂಡರು. ಮೋಸೆ ರಚಿಸಿದನೆಂದು ಹೇಳಲಾದ ಹಳೆಯ ಒಡಂಬಡಿಕೆಯ ಮೊದಲ ಭಾಗದಿಂದ ಅವರು ತಮಗೆ ಬೇಕಾದ ಭಾಗಗಳನ್ನು ಬೇಕಾದಂತೆ ಬಳಸಿಕೊಂಡರು. ಸಿಸಿರೋ, ಲೂಸಿಯಾನ್ ಮುಂತಾದವರ ವಿಡಂಬನಾತ್ಮಕ ಲೌಕಿಕ ಬರೆಹಗಳನ್ನು ತಮ್ಮ ಧರ್ಮಜಿಜ್ಞಾಸೆಗಳಿಗೆ ಉಪಯೋಗಿಸಿಕೊಂಡರು. ಕ್ರಿ.ಪೂ. 2ನೆಯ ಶತಮಾನದ ವೇಳೆಗೆ ಅಪಾಲಜಿ ಎನ್ನುವ ಈ ಪ್ರಕಾರದ ಬರೆವಣಿಗೆ ಸ್ಪಷ್ಟವಾದ ಸಾಹಿತ್ಯಕ ಅಂಶಗಳನ್ನು ಮೈಗೂಡಿಸಿಕೊಂಡಿತೆನ್ನಬಹುದು. ಐರಿನೇಯಸ್, ಹಿಪ್ಪಾಲಿಟಸ್, ಅಲೆಗ್ಸಾಂಡ್ರಿಯದ ಕ್ಲೆಮಂಟ್ ಮುಂತಾದವರ ಬರೆಹಗಳಲ್ಲಿ ಬೌದ್ಧಿಕತೆ, ನೇರ ನಿಶಿತ ಶೈಲಿ ಮುಂತಾದ ಉತ್ತಮ ಸಾಹಿತ್ಯಕ ಅಂಶಗಳಿವೆ. 339ರಲ್ಲಿ ಯೂಸಿಬಿಯಸ್ ಆಫ್ ಸಿಸಾರಿಯೋ ರಚಿಸಿದ ಎಕ್ಲೀಸಿಯಾಸ್ಟಿಕಲ್ ಹಿಸ್ಟೊರಿ ಕ್ರಿಶ್ಚನ್ ಧಾರ್ಮಿಕ ಸಾಹಿತ್ಯದ ಹಾಗೂ ಚರ್ಚಿನ ಚರಿತ್ರೆಯ ಒಂದು ಮುಖ್ಯ ಆಕರ ಗ್ರಂಥ. ಕ್ರಿಶ್ಚನ್ ಚರ್ಚಿನ ಅಧಿಕಾರವನ್ನು ಸಮರ್ಥಿಸುವ ಈ ಗ್ರಂಥಕ್ಕೆ ಪುರಾತನ ಗ್ರೀಕರ ಸಾಮ್ರಾಜ್ಯಶಾಹಿ ತತ್ತ್ವಗಳು ಸ್ಫೂರ್ತಿ ನೀಡಿದುವೆಂಬ ಮಾತು ಗಮನಾರ್ಹ.

ಮಧ್ಯ ಕ್ರಿಶ್ಚನ್ ಯುಗ : ಮಧ್ಯಯುಗದ ಕ್ರೈಸ್ತಸಾಹಿತಿಗಳು, ಪೂರ್ವ ಕ್ರಿಶ್ಚನ್ ಯುಗದ ಓರೆಗಾನ್ ಮತ್ತು ಕ್ಲೆಮಂಟರಂತೆ ಗ್ರೀಕ್ ಮತ್ತು ರೋಮನ್ ಅಭಿಜಾತ ಸಾಹಿತ್ಯ ಹಾಗೂ ಶಿಕ್ಷಣಪರಂಪರೆಯಿಂದ ಗ್ರಹಿಸಿದ ತತ್ತ್ವಗಳನ್ನು ಧರ್ಮಗ್ರಂಥಗಳ ರಚನೆಗಾಗಿ ಅಳವಡಿಸಿಕೊಂಡರು. ಕ್ರಿ.ಶ. 4ನೆಯ ಶತಮಾನದಲ್ಲಿ ಬರೆದ ದಿ ಬ್ಯಾಂಕ್ವೆಟ್ ಆಫ್ ಸೇಂಟ್ ಮೆಥೋಡಿಯಸ್ ಎಂಬ ಗ್ರಂಥ ಪ್ಲೇಟೊವಿನ ಸಂವಾದಗಳನ್ನೂ 3ನೆಯ ಶತಮಾನದ ಗ್ರೀಕ್ ರೊಮಾನ್ಸ್‍ಗಳನ್ನೂ ಹೋಲುತ್ತದೆ. ಅಥೆನೇಷಿಯನ್ ಎಂಬಾತ ಗ್ರೀಕ್ ಅಭಿಜಾತ ಸಾಹಿತ್ಯದಿಂದ ಆರಿಸಿದ ಉಲ್ಲೇಖಗಳ ಮೂಲಕ ದೈವೀಕರಣದ ತತ್ತ್ವವನ್ನು ಪಂಡಿತ ಪಾಮರರಿಗೆ ಅರ್ಥವಾಗುವಂತೆ ವಿವರಿಸಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ, ಮಧ್ಯಯುಗದ ಧಾರ್ಮಿಕ ಅನುಯಾಯಿಗಳು ಗ್ರೀಕ್ ಅಭಿಜಾತಯುಗದ ವಾಗ್ಮಿಕಲೆ, ದರ್ಶನ, ಶಾಸ್ತ್ರಗಳಲ್ಲಿ ವಿಶೇಷ ಪಾಂಡಿತ್ಯ ಪಡೆದಿದ್ದರು. ಕ್ರಿ.ಶ. 5ನೆಯ ಶತಮಾನದಿಂದ 11ನೆಯ ಶತಮಾನದ ವರೆಗೆ ತಾತ್ತ್ವಿಕ ಜಿಜ್ಞಾಸೆ ಹಾಗೂ ಧಾರ್ಮಿಕ ಪ್ರವಚನಗಳನ್ನುಳ್ಳ ವ್ಯಾಖ್ಯಾನಗಳೂ ಉಪನ್ಯಾಸಗಳೂ ರಚಿತವಾಗುತ್ತಲೆ ಇದ್ದವು. ಜಿಜಾóಂಟಿಯನ್ ತಾತ್ತ್ವಿಕರಲ್ಲಿ 11ನೆಯ ಶತಮಾನದ ಸಿಮಿಯನ್ ಎಂಬಾತ ತನ್ನ ಪ್ರವಚನಗಳಲ್ಲಿ 15 ಮಾತ್ರಾಗಣದ ಕಾವ್ಯ ಛಂದಸ್ಸನ್ನು ಅತ್ಯಂತ ಪರಿಣಾಮಯುತವಾಗಿ ಪ್ರಯೋಗಿಸಿದ್ದಾನೆ. ಕ್ರೈಸ್ತ ಪ್ರಾರ್ಥನಾ ವಿಧಿಗೆ ಸಂಬಂಧಿಸಿದ ಉತ್ತಮ ಗೀತೆಗಳ ಪ್ರವಚನಗಳ ರಚನೆಯನ್ನು ಅಭಿಜಾತ ಯುಗದ ಗ್ರೀಕರ ಧರ್ಮಶ್ರದ್ಧೆ ಹಾಗೂ ಕಲಾವಂತಿಕೆಗಳೇ ನೇರವಾಗಿ ನಿರ್ದೇಶಿಸಿದುವು. ಬಿಜಾóಂಟಿಯನ್ ಪ್ರಾರ್ಥನಾ ಗೀತೆಗಳಲ್ಲಂತೂ ಉತ್ತಮ ಶಬ್ದಸಂಯೋಜನೆಯಿಂದ ಹೇಗೆ ಸಂಗೀತಮಯ ಕಾವ್ಯ ನಿರ್ಮಾಣವಾಯಿತೆಂದು ನೋಡಬಹುದು. ಬಿಜಾóಂಟಿಯನ್ ಚರ್ಚಿನ ಲೇಖಕರು ಸಾಮಾನ್ಯ ಜನರಿಗೆ ಧರ್ಮಬೋಧೆ ಮಾಡಲು ನೀತಿಕಥೆ ಮುಂತಾದ ಮನೋರಂಜನೆಯ ಸಾಧನೆಗಳನ್ನು ಬಳಸಿಕೊಂಡರು. ಆ ದೃಷ್ಟಿಯಿಂದಲೇ ಹಲವಾರು ಸಂತರ ಜೀವನಚರಿತ್ರೆಗಳನ್ನು ಬರೆದರು. ಇವುಗಳಲ್ಲಿ 4ನೆಯ ಶತಮಾನದಲ್ಲಿ ಜೀವಿಸಿದ್ದ ಈಜಿಪ್ಟಿನ ಸೇಂಟ್ ಆಂಟೊನಿಯನ್ನು ಕುರಿತ ಜೀವನ ಚರಿತ್ರೆ ತುಂಬ ಪ್ರಖ್ಯಾತವಾದುದು.

ಎಲ್ಲಕ್ಕಿಂತ ಹೆಚ್ಚಾಗಿ ಮಧ್ಯಯುಗದ ಜನರ ಆಸಕ್ತಿಯನ್ನು ಸೆಳೆದ ಸಾಹಿತ್ಯ ಪ್ರಕಾರವೆಂದರೆ ಚರಿತ್ರೆ, ಲಿಯೋ, ಮೈಕಲ್ ಸೆಲ್ಲಸ್, ಅನಾಕಾಮ್ ನೀನಾ ಮುಂತಾದ ಬಿಜಾóಂಟಿಯನ್ ಇತಿಹಾಸಕಾರರು ಪುರಾತನ ಗ್ರೀಸಿನ ತುಸಿಡಿಡೀಸ್ ಮುಂತಾದವರಿಂದಲೇ ಸ್ಫೂರ್ತಿ ಪಡೆದು ಕ್ರಾನಿಕಲ್ಸ್ ಎಂಬ ಒಂದು ವಿಶಿಷ್ಟ ರೀತಿಯ ಐತಿಹಾಸಿಕ ವೃತ್ತಾಂತಗಳನ್ನು ಬರೆದರು. ಸುಶಿಕ್ಷಿತ ಸಮುದಾಯದ ಸಲುವಾಗಿ ಬರೆದ ಈ ಶಾಸ್ತ್ರೀಯ ಆಕರಗ್ರಂಥಗಳು ಹೆಚ್ಚು ಮಾನ್ಯತೆ ಪಡೆದುವು. ಮಧ್ಯಯುಗದ ಬಿಜಾóಂಟಿಯನ್ ಸಾಹಿತ್ಯದಲ್ಲಿ ಡೈಜೀನಸ್ ಆಕ್ರಿಟಾಸ್ ಎಂಬ ಕಥನಕವನ ತುಂಬ ಜನಪ್ರಿಯವಾಯಿತು. ಎಪಿಗ್ರಾಮ್ ಎಂಬ ವಿಶಿಷ್ಟರೀತಿಯ ಕಾವ್ಯರಚನೆ ಆ ಯುಗದ ಲೌಕಿಕ ಸಾಹಿತ್ಯದ ಕೊಡುಗೆ. ಇವು ಗ್ರೀಕ್ ಅಭಿಜಾತ ಛಂದಸ್ಸಿನಲ್ಲಿ ರಚಿತವಾದ ಭಾವಗೀತಾತ್ಮಕ ಪ್ರೇಮಕವನಗಳು. 10ನೆಯ ಶತಮಾನದ ಜಾನ್ ಜಿಯೋಮಿಟ್ರಸ್‍ನ ರಚನೆಗಳು ಇದಕ್ಕೆ ಉತ್ತಮ ನಿದರ್ಶನವಾಗಿವೆ. ಬಿಜಾóಂಟಿಯನ್ ಯುಗದ ರಾಜ್ಯಾಡಳಿತಕ್ಕೆ ಸಂಬಂಧಿಸಿದ ದಸ್ತಾವೇಜುಗಳು ಆ ಕಾಲದಲ್ಲಿ ಗದ್ಯಶೈಲಿ ಹೇಗೆ ವಿಕಾಸವಾಯಿತೆಂಬುದಕ್ಕೆ ಮುಖ್ಯ ನಿದರ್ಶನವಾಗಿವೆ.

ಆಧುನಿಕ ಗ್ರೀಕ್ ಸಾಹಿತ್ಯ : ಜನ ಆಡುವ ಜೀವಂತ ಭಾಷೆಯಲ್ಲಿಯ ಕೃತಿಗಳನ್ನು ಅಭಿಜಾತ ಯುಗದ ಜಾನಪದ ಶೈಲಿಯ ಕೃತಿಗಳನ್ನೂ ಸೇರಿಸಿಕೊಂಡು ಆಧುನಿಕ ಗ್ರೀಕ್ ಸಾಹಿತ್ಯ ಎಂದು ಕರೆಯುವ ವಾಡಿಕೆ. ಜಾನಪದ ಸಾಹಿತ್ಯ ಮುಖ್ಯವಾಗಿ ಕಾವ್ಯಾತ್ಮಕವಾಗಿದ್ದು, 19ನೆಯ ಶತಮಾನದ ವರೆಗಿನ ಬಿಜಾóಂಟಿಯನ್ ಸಾಹಿತ್ಯ ಅಭಿಜಾತ ಶೈಲಿಯ ಅನುಕರಣೆಯಾಗಿದ್ದುದರಿಂದ ಬಹುಕಾಲ ಗದ್ಯಶೈಲಿಯೆಂಬುದೇ ಬಳಕೆಗೆ ಬರಲಿಲ್ಲ.

ಆಧುನಿಕ ಗ್ರೀಕ್ ಸಾಹಿತ್ಯವನ್ನು ಮೂರು ಭಾಗಗಳಾಗಿ ವಿಭಜಿಸುವ ಸಂಪ್ರದಾಯವಿದೆ : 1 ಪುರಾತನ ಅಭಿಜಾತ ಯುಗದಿಂದಲೂ ಬೆಳೆದು ಬಂದ ಜಾನಪದ ಕಾವ್ಯ. ಇದು ಇಂದಿಗೂ ವಿಶೇಷ ಪ್ರಭಾವಯುತವಾಗಿ ಉಳಿದುಕೊಂಡಿದೆ. 2 ಕ್ರಿ.ಶ. 13ನೆಯ ಶತಮಾನದಿಂದ 18ನೆಯ ಶತಮಾನದ ವರೆಗಿನ ಅವಧಿಯಲ್ಲಿ ಗ್ರೀಕ್ ಸಂಸ್ಕøತಿ ಫ್ರೆಂಚ್ ಹಾಗೂ ಇಟಾಲಿಯನ್ ಸಂಸ್ಕøತಿಗಳೊಂದಿಗೆ ಸಂಯೋಗವಾದಾಗ ರಚಿತವಾದ ಶಿಷ್ಟಕಾವ್ಯ. 3 ಕ್ರಿ.ಶ. 18ನೆಯ ಶತಮಾನದಿಂದ 20ನೆಯ ಶತಮಾನದವರೆಗಿನ ಆಧುನಿಕ ಗ್ರೀಸಿನ ಶಿಷ್ಟ ಸಾಹಿತ್ಯ.

1 ಜಾನಪದ ಕಾವ್ಯ : ಗ್ರೀಕ್ ಭಾಷೆ ಜಾನಪದ ಕಾವ್ಯಶೈಲಿ ಎರಡೂ ಗ್ರೀಕ್ ಸಂಸ್ಕøತಿಯ ಪ್ರಮುಖ ಅಂಶಗಳಾಗಿವೆ. ಗ್ರೀಸಿನ ಜಾನಪದ ಕಾವ್ಯ ವಸ್ತುತಃ ಕ್ರೈಸ್ತಪೂರ್ವಯುಗದ ಪೇಗನ್ ಜೀವನವನ್ನೇ ಚಿತ್ರಿಸುತ್ತದೆ. ಯೌವನಸಹಜವಾದ ಜೀವನಾಸಕ್ತಿ, ಮಾನವ ಪ್ರೇಮ, ಪ್ರಕೃತಿಯತ್ತ ಒಲುಮೆ, ಜೀವನದ ಕಷ್ಟಕಾರ್ಪಣ್ಯಗಳನ್ನು ಕುರಿತ ವ್ಯಥೆ, ಸತ್ತ ಮೇಲೆ ಆತ್ಮ ಅಧೋಲೋಕದ ಕತ್ತಲೆಯಲ್ಲಿ ಕರಗಿ ವಿಲೀನವಾಗುವುದೆಂಬ ನಂಬಿಕೆ-ಇವು ಗ್ರೀಕ್ ಜಾನಪದ ಕಾವ್ಯದ ಪ್ರಮುಖ ಅಂಶಗಳು. ಇವು ಅಭಿಜಾತ ಯುಗಧರ್ಮವನ್ನೇ ಪಡಿಮೂಡಿಸುವಂತೆ ಕಾಣುವ ಗುಣಲಕ್ಷಣಗಳು. ಈ ಕವನಗಳ ಕಾಲನಿರ್ಣಯ ತೀರ ಕಷ್ಟ. ಇವು ಬಹುತೇಕ 15 ಮಾತ್ರಾಗಣದ ರಾಜಕೀಯ ಈ ಛಂದಸ್ಸಿನಲ್ಲಿವೆ-ಆರನೆಯ ಶತಮಾನದಿಂದಲೂ ಬಿಜಾóಂಟಿಯನ್ ಕವಿಗಳು ರಾಜಕೀಯ ವಸ್ತುವನ್ನುಳ್ಳ ಪ್ರಶಸ್ತಿ ಪ್ರತಿಭಟನೆ, ವಿಡಂಬನೆಗಳನ್ನು ಈ ಛಂದಸ್ಸಿನಲ್ಲೇ ಬರೆಯುತ್ತಿದ್ದುದರಿಂದ ಈ ಹೆಸರು ಬಂತು. ಪುರಾಣೇತಿಹಾಸದ ನಾಯಕರನ್ನು ಕುರಿತ, ಕಾನ್‍ಸ್ಟಾಂಟಿನೋಪಲ್ ಪತನ ಮುಂತಾದ ಕಥನಕವನಗಳು ಕ್ರಿ.ಶ. 9ನೆಯ ಶತಮಾನಕ್ಕಿಂತ ಈಚಿನವು. ಇವು ಆಯಾ ಕಾಲದ ಸಮಾಜಗಳನ್ನು ಯಥಾವತ್ತಾಗಿ ಚಿತ್ರಿಸುವುದರಿಂದ ಜನರ ಆಸಕ್ತಿಯನ್ನು ಅರಳಿಸಿ ಬಹು ಬೇಗ ಜನಪ್ರಿಯವಾದುವು.

2 ಶಿಷ್ಟಕಾವ್ಯ : ಗ್ರೀಕ್ ಮಾತಾಡುವ ಜನರಿಗೆ ಫ್ರೆಂಚ್ ಸಂಸ್ಕøತಿಯೊಂದಿಗೆ ಹೆಚ್ಚು ಸಂಪರ್ಕ ಬೆಳೆದದ್ದು ಯೂರೋಪಿನ ಧರ್ಮಯುದ್ಧಗಳ (ಕ್ರೂಸೇಡ್ಸ್) ಕಾಲದಲ್ಲಿ. ಮಧ್ಯಯುಗದ ಬಿಜಾóಂಟಿಯಮ್‍ನಲ್ಲಿ ರೊಮ್ಯಾಂಟಿಕ್ ಸಂಪ್ರದಾಯದ ಹಿನ್ನೆಲೆಯಲ್ಲಿ ಹಲವು ಕಥಾನಕಗಳು ಹುಟ್ಟಿದುವು. ಜನಸಾಮಾನ್ಯರನ್ನು ರಂಜಿಸಲೆಂದು ಶಿಷ್ಟಕವಿಗಳೇ ಇವನ್ನು ರಚಿಸುತ್ತಿದ್ದುದರಿಂದ ಅವರು ಪ್ರೇಮ, ಸಾಹಸ, ಅದ್ಭುತ ಘಟನೆಗಳು ಮುಂತಾದ ವಸ್ತುಗಳನ್ನೆ ಆರಿಸಿಕೊಂಡರು. ಆದರೆ ಇವು ಬಹುಮಟ್ಟಿಗೆ ಫ್ರೆಂಚ್ ರೊಮಾನ್ಸ್‍ಗಳನ್ನೇ ಅನುಕರಿಸುವುದರಿಂದ ನೀರಸವೆನಿಸಿದುವು. ಗ್ರೀಕ್ ಸಂಸ್ಕøತಿಗೆ ಫ್ರಾನ್ಸ್ ಹಾಗೂ ಇಟಲಿಯ ನೈಜ ಸಂಪರ್ಕವುಂಟಾದದ್ದು (ನಾಲ್ಕು ಶತಮಾನಗಳ ಕಾಲ ವೆನಿಸ್ಸಿನ ಆಕ್ರಮಣಕ್ಕೆ ಒಳಗಾಗಿದ್ದ) ಕ್ರೀಟ್ ದ್ವೀಪದಲ್ಲಿ. ಯೂರೋಪಿನ ಸಂಸ್ಕøತಿಯನ್ನು ಸಮನ್ವಯಗೊಳಿಸಿಕೊಂಡ ಕ್ರೀಟ್ ಪ್ರದೇಶದ ಮಧ್ಯಮ ವರ್ಗದ ಸಮಾಜವೇ ಹೊಸ ಸಾಹಿತ್ಯದ ಆವಿಷ್ಕಾರಕ್ಕೆ ಕಾರಣವಾಯಿತು. ಕ್ರಮೇಣ ಅಲ್ಲಿಯ ಸಾಹಿತಿಗಳು ಇಟಲಿಯ ಸಾಹಿತ್ಯದಿಂದ ಸ್ಫೂರ್ತಿ ಪಡೆದು ಗಂಭೀರ ಹಾಗೂ ವಿನೋದ ನಾಟಕಗಳನ್ನು ಬರೆದರು. ಗ್ರಾಮೀಣ ಜೀವನ ಹಾಗೂ ಐತಿಹಾಸಿಕ ವಸ್ತುಗಳ ಆಧಾರದ ಮೇಲೆ ಕ್ರೀಟನ್ ಉಪಭಾಷೆಗಳಲ್ಲಿ ನಾಟಕಗಳನ್ನು ರಚಿಸಲಾಯಿತು. ಅವುಗಳಲ್ಲಿ ಮುಖ್ಯವಾಗಿ ಹಾಟ್ರ್ಯಾಟ್ಸೆಸ್ ಬರೆದ ಇರೋಫಿಲ್ ಎಂಬ ಗಂಭೀರ ನಾಟಕ ಮತ್ತು ಅಜ್ಞಾತ ಕವಿ ವಿರಚಿತ ಯಿಪಾರಿಸ್ ಎಂಬ ಗ್ರಾಮೀಣ ವಿನೋದ ನಾಟಕ ಜೀವಂತ ಕೃತಿಗಳಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ, 1665ರಲ್ಲಿ ಕಾರ್ನರೋಸ್ ಬರೆದ ಏಬ್ರಾಹಿಮ್ಸ್ ಸ್ಯಾಕ್ರಿಫೈಸ್ ತುಂಬ ಪ್ರಸಿದ್ಧ ಕೃತಿ. ಇದರಲ್ಲಿ ಮಧ್ಯಯುಗದ ಮಿಸ್ಟರಿ ನಾಟಕವನ್ನು ಪುರುಜ್ಜೀವನ ಯುಗದ ಮಾನವತಾ ಧರ್ಮಕ್ಕನುಸಾರವಾಗಿ ಅಳವಡಿಸಿಕೊಳ್ಳಲಾಗಿದೆ. ಕಾರ್ನರೋಸ್‍ನ ರೋಟಾಕ್ರೀಟಾಸ್ ಎಂಬ ಕಥನ ಕವನವಂತೂ ಗ್ರೀಕ್ ಭಾಷೆಯಲ್ಲಿ ಅತ್ಯಂತ ಜನಪ್ರಿಯ ಕೃತಿ. ಇದರಲ್ಲಿ ಮಧ್ಯಯುಗದ ಅದ್ಭುತ ಪ್ರೇಮಕಥೆಯೊಂದನ್ನು ಆಧುನಿಕ ಮಾನವೀಯ ಹಾಗೂ ಯಥಾರ್ಥ ಜೀವನ ರುಚಿಗೆ ಒಪ್ಪುವಂತೆ ಚಿತ್ರಿಸಿದ್ದಾನೆ.

ಇಷ್ಟೆಲ್ಲ ಹೇಳಿದರೂ ಕ್ರೀಟನ್ ಸಾಹಿತ್ಯದ ಉಜ್ಜ್ವಲ ಪುನರುಜ್ಜೀವನ ಕೇವಲ 70 ವರ್ಷಗಳ ಅವಧಿಗೆ ಮಾತ್ರ ಸೀಮಿತವಾಯಿತೆಂಬುದನ್ನು ಮರೆಯಲಾಗದು. 1669ರಲ್ಲಿ ಕ್ರೀಟ್ ದ್ವೀಪ ತುರ್ಕಿಯ ಕೈವಶವಾದಾಗ ಅಲ್ಲಿಯ ಸಾಹಿತ್ಯದ ಉತ್ಕರ್ಷ ಕೊನೆಯಾಯಿತು. ಇದರ ಫಲವಾಗಿ ಗ್ರೀಕ್ ಸಂಸ್ಕøತಿ ತನ್ನ ಪ್ರತ್ಯೇಕತೆಯನ್ನು ಬಿಟ್ಟು ಸಮಗ್ರ ಯೂರೋಪಿನ ಸಂಪ್ರದಾಯದ ಪ್ರವಾಹವನ್ನು ಸೇರುವಂತಾಯಿತು. ಗ್ರೀಕ್ ಭಾಷೆ ಹಲವು ಕಡೆಗಳಿಂದ ಬೇರೆ ಬೇರೆ ಪ್ರಭಾವಗಳನ್ನು ಮೈಗೂಡಿಸಿಕೊಂಡು ಶ್ರೀಮಂತವಾಯಿತು. ಕಾವ್ಯಾತ್ಮಕವಾದ ಆಧುನಿಕ ಶೈಲಿಯ ನಿರ್ಮಾಣಕ್ಕೂ ಪ್ರೇರಣೆ ಸಿಕ್ಕಿದಂತಾಯಿತು. ಕ್ರೀಟನ್ ಸಂಸ್ಕøತಿಯ ಸಮನ್ವಯ ಲಕ್ಷಣಗಳು ಹೇಗೆ ಹೊಸ ಸಾಹಿತ್ಯ ನಿರ್ಮಾಣಕ್ಕೆ ಕಾರಣವಾದವೆಂಬ ಅಂಶವನ್ನು 19ನೆಯ ಶತಮಾನದಲ್ಲಿ ನೋಡಬಹುದು.

ಆದರೆ ಅದಕ್ಕೆ ಪೂರ್ವಭಾವಿಯಾಗಿ ಕೆಲವು ಅಂಶಗಳನ್ನು ಗಮನಿಸಬೇಕು. 18ನೆಯ ಶತಮಾನ ಗ್ರೀಕ್ ಸಾಹಿತ್ಯದಲ್ಲಿ ತೀರ ಶುಷ್ಕವಾದ ಕಾಲ. ಕೆಲವು ಜಾನಪದ ಕವನಗಳನ್ನುಳಿದು ಗಮನಾರ್ಹ ಸಾಹಿತ್ಯವೇ ಹೊಮ್ಮಲಿಲ್ಲವೆನ್ನಬಹುದು. ಆದರೆ ಆ ಶತಮಾನದ ಉತ್ತರಾರ್ಧದಲ್ಲಿ ಭಾಷೆಗೆ ಸಂಬಂಧಿಸಿದ ಒಂದು ಸ್ವಾರಸ್ಯ ಆಂದೋಳನವುಂಟಾಯಿತು. ಗ್ರೀಕ್ ದೇಶ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭಿಸಿದಾಗ ಯಾವುದು ದೇಶಭಾಷೆಯಾಗಬೇಕೆಂಬ ಬಗೆಗೆ ಪ್ರಬಲವಾದ ಚಳವಳಿ ಪ್ರಾರಂಭವಾಯಿತು. ಸುಶಿಕ್ಷಿತ ಯೂರೋಪಿಯನ್ ಪಂಗಡದವರು ಕ್ಲಾಸಿಕಲ್ ಗ್ರೀಕ್ ಭಾಷೆಯನ್ನು ರೂಢಿಸಿಕೊಂಡು ಆದರಿಂದ ಸ್ವಾತಂತ್ರ್ಯ ಸಮರಕ್ಕೆ ಸ್ಫೂರ್ತಿ ಪಡೆಯಬೇಕೆಂದು ವಾದಿಸಿದರು. ಆದರೆ ಇನ್ನು ಕೆಲವರಿಗೆ, ಚರ್ಚುಗಳಲ್ಲಿ ಬಳಸುತ್ತಿದ್ದ ಫಾನಾರಿಯಟ್ ಎಂಬ ಬಿಜಾóಂಟಿಯನ್ ಪರಿಶುದ್ಧ ಭಾಷೆಯಲ್ಲಿ ಆಸಕ್ತಿ ಹುಟ್ಟಿತು.

ಈ ಎರಡು ವಿರೋಧ ಪಂಗಡಗಳ ನಡುವೆ ಸಾಮರಸ್ಯ ಸಾಧಿಸಹೊರಟವರಲ್ಲಿ ಅಡಮ್ಯಾಷಿಯೋಸ್ ಕೋರೆ ಮುಖ್ಯನಾದವ. ಆದರೆ ಅಭಿಜಾತ ಗ್ರೀಕ್ ಸಾಹಿತ್ಯದಲ್ಲೇ ಅವನಿಗೆ ಹೆಚ್ಚು ಆಸಕ್ತಿಯಿದ್ದುದರಿಂದ ಜೀವಂತವಾದ ಅಭಿವ್ಯಕ್ತಿಯನ್ನು ರೂಪಿಸುವುದು ಅವನಿಂದ ಸಾಧ್ಯವಾಗಲಿಲ್ಲ. ಅವನಿಂದ ರೂಪಿತವಾದ ಪರಿಷ್ಕøತ ಶಿಷ್ಟ ಭಾಷೆ ಸಾಮಾನ್ಯರಿಗೆ ಎಟುಕಲಿಲ್ಲ. ಇಟಲಿಯ ಕ್ಲಾಸಿಕಲ್ ಕಾವ್ಯಗಳಿಂದ ಪ್ರೇರಣೆ ಪಡೆದು ಆ್ಯಂಡ್ರಿಯಾಸ್ ಕ್ಯಾಲ್ವೊಸ್ ಅತಿಕೃತಕ ಪ್ರಗಾಥಗಳನ್ನು ಬರೆದ. ಸಾಹಿತ್ಯದ ಜೀವಾಳವನ್ನು ಅರ್ಥಮಾಡಿಕೊಂಡು ಬರೆದ ಐಯೋನಿಯನ್ ದ್ವೀಪದ ಸಾಹಿತಿಗಳು ಮಾತ್ರ ಗಟ್ಟಿ ಭದ್ರ ಕೃತಿಗಳನ್ನು ರಚಿಸಿದರು. ಐಯೋನ್ಸ್ ವಿಲರಾನ್ (1771-1823) ರೊಮೈಕಾಗ್ಲೋಸಾ ಎಂಬ ಗ್ರಂಥ ಬರೆದು ಜಾನಪದ ಗ್ರೀಕ್ ಶೈಲಿಯ ಮಹತ್ತ್ವವನ್ನು ಎತ್ತಿಹಿಡಿದ. ಆತ ಜಾನಪದ ಶೈಲಿಯಲ್ಲಿ ಬರೆದ ಕವನಗಳು ನೀರಸವಾಗಿದ್ದರೂ ಅವು ಮುಂದಿನ ಕವಿಗಳಿಗೆ ಸ್ಫೂರ್ತಿ ನೀಡಿವೆ. ಡೈಯೊನೈಸಸ್ ಸಾಲೋಮಾಸ್ ಆಧುನಿಕ ಗ್ರೀಸಿನ ಅತ್ಯಂತ ಶ್ರೇಷ್ಠ ಕವಿ. ಐಯೋನಿಯನ್ ಜನಪದ ಕಥನಕವನಗಳಿಂದ ಸ್ಫೂರ್ತಿ ಪಡೆದು ಆ ಶೈಲಿಯಲ್ಲಿ ಆತ ಸೊಗಸಾದ, ಕವನಗಳನ್ನು ಬರೆದಿದ್ದಾನೆ. ಇವನ ಓಡ್ ಟು ಲಿಬರ್ಟಿ ಎಂಬ ಕವನವನ್ನು ಸಂಗೀತಕ್ಕೆ ಅಳವಡಿಸಿ ಗ್ರೀಸಿನ ರಾಷ್ಟ್ರಗೀತೆಯಾಗಿ ಹಾಡುತ್ತಾರೆ. ಇವನು ಮಾಡಿದ ಸಾಹಿತ್ಯಕೃಷಿಯಿಂದಾಗಿ ಗ್ರೀಸ್ ದೇಶ ಮುಂದಿನ ಪೀಳಿಗೆಯ ಜಿಯಾನಿಸ್ ಸೈಕಾರಿಸರಂಥ ಶ್ರೇಷ್ಠ ಕವಿಗಳನ್ನು ಕಾಣುವಂತಾಯಿತು. ಸ್ವಾತಂತ್ರ್ಯೋತ್ತರ ಆಥೆನ್ಸ್‍ನಲ್ಲಿ ಫಾನೆರಿಯಟ್ ಪಂಥದ ಪರಿಶುದ್ಧತಾವಾದಿಗಳು ಹತ್ತೊಂಬತ್ತನೆಯ ಶತಮಾನದ ಕೊನೆಯ ವರೆಗೂ ಕಾವ್ಯ ಹಾಗೂ ಗದ್ಯ ಪ್ರಕಾರಗಳಲ್ಲಿ ಕೃಷಿ ನಡೆಸಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡರು. ಅವರ ಕಾವ್ಯ ಸುಸ್ವನಪೂರ್ಣವಾಗಿದ್ದರೂ ಅದರಲ್ಲಿ ಸಹಜ ಸ್ಫೂರ್ತಿಯ ಕಾವಿಲ್ಲ. ಲೆಫ್‍ಕಾಸಿನ ನಿವಾಸಿ ಆರಿಸ್ಟೋಟೆಲೀಸ್ ಏಲ್ಯೋರೈಟ್ಸ್ ದಕ್ಷಿಣ ಗ್ರೀಕ್ ಭಾಷೆಯಲ್ಲಿ ಸಾಲೋಮಾಸ್ ಕವಿಯ ಶೈಲಿಯನ್ನು ಚೆನ್ನಾಗಿ ದುಡಿಸಿಕೊಂಡ.

ಕಳೆದ ಶತಮಾನದ ಕೊನೆಯಲ್ಲಿ ಗ್ರೀಕ್ ಭಾಷೆ-ಸಾಹಿತ್ಯಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನುಂಟು ಮಾಡಿದವರು ಜಿಯಾನಿಸ್ ಸೈಕಾರಿಸ್ ಮತ್ತು ಕೋಸ್ಟೆಸ್ ಪಲಾಮಸ್ ಎಂಬ ಇಬ್ಬರು ವರಕವಿಗಳು. ತನ್ನದೇ ಆದ ಗದ್ಯ ಶೈಲಿಯನ್ನು ರೂಢಿಸಿಕೊಳ್ಳಬೇಕೆಂದು ಸೈಕಾರಿಸ್ ಗ್ರೀಸಿನ ಜಾನಪದ ಸಾಹಿತ್ಯ ಮತ್ತು ಭಾಷೆಗಳೆರಡನ್ನೂ ಶಾಸ್ತ್ರೀಯವಾಗಿ ತಳ ಸ್ಪರ್ಶಿಯಾಗಿ ಅಧ್ಯಯನ ಮಾಡಿದ. ಈ ಪ್ರಯತ್ನದ ಫಲವೇ ಅವನ ಮಹಾಗ್ರಂಥ ಟಾಕ್ಸಿ ಡಿ ಮೌ (ನನ್ನ ಪಯಣ-1888). ಆತ ಈ ಗ್ರಂಥದಲ್ಲಿ ಪ್ರತಿಪಾದಿಸಿದ ವಿಚಾರಗಳನ್ನು ಪಲಾಮಸ್ ತನ್ನ ಕವನಗಳಲ್ಲೂ ಐಯಾನ್ ಡ್ರಗೋಮಸ್ ತನ್ನ ಗದ್ಯ ಬರೆಹಗಳಲ್ಲೂ ಯಶಸ್ವಿಯಾಗಿ ಪ್ರಯೋಗಿಸಿ ಪ್ರಸಿದ್ಧರಾಗಿದ್ದಾರೆ.

ಆಧುನಿಕ ಗ್ರೀಸಿನಲ್ಲಿ ನಾಟಕವನ್ನು ಪುನರುಜ್ಜೀವಗೊಳಿಸಬೇಕೆಂದು ನಿರಂತರ ಪ್ರಯತ್ನಗಳು ನಡೆದರೂ ನಿಜವಾಗಿ ಯಶಸ್ಸು ಗಳಿಸಿದವನೆಂದರೆ ಯಾನಿಸ್ ಕ್ಯಾಂಬಿಸಿಸ್ (1872-1902). ಇವನನ್ನು ಗ್ರೀಸಿನ ಇಬ್ಸೆನ್ ಎಂದು ಕರೆಯಲಾಗಿದೆ. ಸ್ವೈರಾಸ್ ಮಿಲಾಸ್ ಎಂಬಾತ ರಷ್ಯನ್ ಸಾಹಿತಿ ಗಾರ್ಕಿಯಿಂದ ಪ್ರಭಾವಿತನಾಗಿ ಒಳ್ಳೆಯ ನಾಟಕಗಳನ್ನು ಬರೆದಿದ್ದಾನೆ. ಗ್ರಿಗೇರಿಯಸ್ ಕ್ಸಿನೋಫೌಲಸ್‍ನನ್ನು ಒಬ್ಬ ಪ್ರಮುಖ ನಾಟಕಕಾರನೆಂದು ಹೇಳುವುದುಂಟು. ಡೆಮಿಟ್ರಿಯೋಸ್ ಟ್ಯಾಂಗೋಪೌಲಸನ (1867-1926) ನಾಟಕಗಳಲ್ಲಿ ಆಧುನಿಕರಿಗೆ ರಚಿಸುವಂಥ ಸಂಕೀರ್ಣ ಸಾಂಕೇತಿಕ ರಚನೆ ಇದೆ.

ಇಪ್ಪತ್ತನೆಯ ಶತಮಾನದ ಪ್ರಾರಂಭದಿಂದಲೂ ಆಧುನಿಕ ಗ್ರೀಕ್ ಸಾಹಿತ್ಯ ಹೆಚ್ಚುಹೆಚ್ಚಾಗಿ ಜಾನಪದ ಶೈಲಿಯಿಂದ ಪ್ರೇರಣೆ ಪಡೆಯುತ್ತಲೇ ಇದೆ. ಹಳೆಯ ಅಭಿಜಾತ ಸಾಹಿತ್ಯದ ಪ್ರಾಚೀನ ಪ್ರಯೋಗಗಳನ್ನು ಬಳಸಿಕೊಂಡ ಒಬ್ಬನೇ ಒಬ್ಬ ಶ್ರೇಷ್ಠ ಸಾಹಿತಿ-ಅಲೆಗ್ಸಾಂಡ್ರಿಯಕ್ಕೆ ಸೇರಿದ ಕಾನ್‍ಸ್ಟಂಟೈನ್ ಕಾವಾಫಿ-ಸರ್ವ ವಿಧದಲ್ಲೂ ಸ್ವೋಪಜ್ಞನೆನಿಸಿದ್ದಾನೆ. ಎರಡು ಮಹಾಯುದ್ಧಗಳ ನಡುವಣ ಅವಧಿಯಲ್ಲಿ ಗದ್ಯಶೈಲಿಯನ್ನು ಯಶಸ್ವಿಯಾಗಿ ಬಳಸಿದವರಲ್ಲಿ ಕಾದಂಬರಿಕಾರರಾದ ಸ್ಟ್ರಾಟಿಸ್ ಮಿರಿವ್ಹೆಸ್ ಮತ್ತು ಜ್ಯಾರ್ಗೊಸ್ ಥಿಯೋಟಾಕಾಸ್ ಮುಖ್ಯರು. ಇವರಲ್ಲದೆ ಏಂಜೆಲೋಸ್ ಸೈಕಲಿಯಾನಸ್ (1884-1951), ಜ್ಯಾರ್ಗೊಸ್ ಸೆಫೆರಿಸ್, ಓಡಿಸ್ಸೆಫ್ ಇಲೈಟಿಸ್-ಈ ಮೂವರು ಕವಿಗಳು ಆಧುನಿಕ ಗ್ರೀಕ್ ಸಾಹಿತ್ಯದಲ್ಲಿ ಅಗ್ರಗಣ್ಯರಾಗಿದ್ದಾರೆ. ಪುರಾತನ ಗ್ರೀಕ್ ನಾಟಕಗಳನ್ನು ಆಧುನಿಕ ರಂಗಭೂಮಿಯ ಮೇಲೆ ಪ್ರದರ್ಶಿಸಿ ಅಪಾರ ಯಶಸ್ಸಿಗೆ ಭಾಗಿಯಾದವ ಏಂಜೆಲೋಸ್ ಸೈಕಾಲಿಯಾನಸ್. (ಎಚ್.ಕೆ.ಆರ್.)

ಹೋಮರನ ರಚನೆಗಳು ಸುಮಾರು ನಾಲ್ಕು ಶತಮಾನಗಳ ಕಾಲ ಮೌಖಿಕ ಪರಂಪರೆಯಲ್ಲಿ ಉಳಿದವು. `ಥಿಯೋಜನಿ, ಅವ್ಯವಸ್ಥೆಯಿಂದ ವ್ಯವಸ್ಥೆ ಮಾಡಿದುದನ್ನು ದೇವತೆಗಳ ಜನನವನ್ನು ಬಿತ್ತರಿಸುತ್ತದೆ. ಪ್ರಾಯಶಃ ಎಲಿಜಿಯಾಕ್‍ಗಳನ್ನು ಮೊದಲು ಬರೆದ ಕವಿ ಎಫೀಸಸ್‍ನ ಕ್ಯಾಲಿನಸ್. ಇತರ ಖ್ಯಾತ ಎಲಿಜಯಕ್ ಕವಿಗಳು, ಸ್ಪಾರ್ಟದ ಟರ್ಟೆಅಸ್, ಕೊಲೊಫಾನ್‍ನ ಮಿಮ್ಮೆರ್ ಮಸ್, ಪರೋಸ್‍ನ ಆರ್ಕಿಲೋಕಸ್, ಅಥೆನ್ಸ್‍ನ ಮೊದಲ ಕವಿ ಸೋಲನ್ ಮತ್ತು ಮೆಗರದ ಥಿಯೋಗ್ಮಿಸ್ ಆರ್ಕಿಲೋಕಸ್ ಆಯಾಂಬಿಕ್ ಛಂದಸ್ಸನ್ನು ರೂಪಿಸಿದ, ಇದನ್ನು ಕಟುವಾದ ವಿಡಂಬನೆಗೆ ಬಳಸಿದ ಎಂದು ಹೇಳಲಾಗಿದೆ ಸೋಲನ್ ಮತ್ತು ಇತರರು ಇವನ್ನು ಚಿಂತನಶೀಲ ಕಾವ್ಯಕ್ಕೆ ಬಳಸಿದರು. ಪ್ರಾಚೀನ ಗ್ರೀಸಿನ ಆಡು ಮಾತಿನ ಲಯಕ್ಕೆ ವಿಶಿಷ್ಟವಾಗಿ ಇದು ಹೊಂದಿಕೊಂಡದ್ದರಿಂದ ಟ್ರ್ಯಾಜೆಡಿಗಳಲ್ಲಿ ಸಂಭಾಷಣೆಗೆ ಬಳಕೆಯಾಯಿತು.

ಪ್ರಾರಂಭದಲ್ಲಿ `ಲಿಂಕ್ ಅನ್ನು ರಚಿಸಿದ್ದು ಲೈರ್ ಎನ್ನುವ ವಾದ್ಯದೊಂದಿಗೆ ಹಾಡಲು. ಪ್ರಾಚೀನ ಗ್ರೀಸಿನಲ್ಲಿ ಎರಡು ಬಗೆಯ ಲಿರಿಕ್‍ಗಳು ರಚಿತವಾದವು ವೈಯಕ್ತಿಕ ಲಿರಿಕ್ ಮತ್ತು ಮೇಳದ ಲಿರಿಕ್. ಲೆಸ್‍ವಾಸ್ ಅಥವಾ ಲೆಸ್‍ಬಾಸ್ ದ್ವೀಪದಲ್ಲಿ ವೈಯಕ್ತಿಕ ಲಿರಿಕ್ ಬೆಳೆಯಿತು. ಸ್ವತಃ ಸಂಗೀತಗಾರನಾಗಿದ್ದ ಟರ್‍ಪಾಂಡರ್ ಗ್ರೀಕ್ ಭಾಷೆಯ ಮೊದಲನೆಯ ಲಿರಿಕ್ ಕವಿ ಎಂದು ಹೇಳಲಾಗಿದೆ. ಕವನವನ್ನು ಸಂಗೀತಕ್ಕೆ ಮೊಟ್ಟಮೊದಲು ಅಳವಡಿಸಿದವನು ಇವನೇ ಇವನ ನಂತರ ಲೆಸ್‍ವಾಸ್‍ನಲ್ಲಿ ಹಲವರು ಶ್ರೇಷ್ಠ ಕವಿಗಳು ಅರಿಕೆಗಳನ್ನು ರಚಿಸಿದರು. ಅಲ್‍ಕೇಲಿಸ್ ಈ ವೈಯಕ್ತಿಕ ವಿಷಯಗಳನ್ನಲ್ಲದೆ ರಾಜಕೀಯ ಮತ್ತು ಧಾರ್ಮಿಕ ವಸ್ತುಗಳನ್ನು ತನ್ನ ಲಿಂಕ್‍ಗಳಿಗೆ ಆರಿಸಿಕೊಂಡ. ಪ್ರಾಚೀನ ಗ್ರೀಸಿನ ಶ್ರೇಷ್ಠ ಕವಯಿತ್ರಿ. ಸಾಫೊ, ಸ್ಯಾಫೊ ಸ್ಟ್ರೋಫಿಯನ್ನು ರೂಪಿಸಿದಳು. ಪ್ರೇಮ ಸ್ನೇಹಗಳನ್ನು ಕುರಿತ ಅವಳ ಲಿರಿಕ್‍ಗಳು ಪಾಶ್ಚಾತ್ಯ ಪರಂಪರೆಯಲ್ಲಿ ಅತ್ಯಂತ ತೀವ್ರ ಭಾವಗಳನ್ನು ಕ್ರಿ.ಪೂ 6ನೆಯ ಶತಮಾನದಲ್ಲಿ ಅನಾಕ್ರಿಯನ್ ಲಘುಮನೋಭಾವದಲ್ಲಿ ಸ್ತ್ರೀ ಮತ್ತು ಮಧುವನ್ನು ಕುರಿತ ಕವನಗಳನ್ನು ಬರೆದ.

ಕೋರಲ್ ಅಥವಾ ಮೇಳದ ಲಿರಿಕ್‍ಅನ್ನು ಮೊದಲು ರಚಿಸಿದವನು ಕ್ರೀಟ್‍ನಿಂದ ಸ್ಪಾರ್ಟಕ್ಕೆ ಬಂದ ಥಟ್ಟೆಸ್ ಎಂಬ ಕವಿ ಎಂದು ಭಾವಿಸಲಾಗಿದೆ. ಇವನು ದೇವತೆ ಅನಂತರ ಟರ್ಪಾಂಡರ್, ಆಲ್ಕ್‍ಮನ್ ಮತ್ತು ಏರಿಯನ್ ಕವಿಗಳು ಬಂದರು. ಸಿಸಿಲಿಯ ಸೈಸಿಕೊರಸ್ ಎನ್ನುವ ಕವಿ ಮೂರ ಮೂರು ಭಾಗಗಳ ಘಟಕಗಳ `ಕೋರಲ್ ಓಡ್ (ಮೇಳದ ಪ್ರಗಾಥ) ತನ್ನ ರೂಪಿಸಿದ. ಸಿಮೊನೈಡಿಸ್ ಮತ್ತು ಅವನ ಸೋದರಳಿಯ ಬ್ಯಾಕಿಲೈಡಿಸ್ ಇದನ್ನು ಮುಂದುವರೆಸಿ ಮಾರ್ಪಡಿಸಿದರು. ಕೋರಲ್ ಓಡ್‍ಗಳ ಮೇರು ಶಿಖರ ಕ್ರಿ.ಪೂ. ಐದನೆಯ ಶತಮಾನದ ಪಿಂಡಾರನ ರಚನೆಗಳು. ಇವುಗಳಲ್ಲಿ ಕಾಲು ಭಾಗ ಮಾತ್ರ ಉಳಿದು ಬಂದಿವೆ.

ಪ್ರಾಚೀನ ಗ್ರೀಕ್ ನಾಟಕದಲ್ಲಿ ಕೋರಲ್ ಓಡ್ ಅದ್ಭುತವಾಗಿ ಬೆಳೆಯಿತು.

ಯೋಧ ಇತಿಹಾಸಕಾರ ಕ್ಲಿನೊಫಾನ್ ಮೂರು ಮುಖ್ಯ ಕೃತಿಗಳನ್ನು ಬರೆದ; ಅನಬೇಸಿಸ್ ಮತ್ತು ಮೆಸೊರಬಿಲಿಯ ಮೊದಲನೆಯ ಕೃತಿಯು ಗ್ರೀಕ್ ಕೂಲಿ ಯೋಧರು ಪರ್ಷಿಯದಿಂದ ತಪ್ಪಿಸಿಕೊಂಡು ಹೋಗಲು ಮಾಡಿದ ಪ್ರಯತ್ನಗಳ ವೃತ್ತಾಂತ, ಎರಡನೆಯದು ಸಾಕ್ರೆಟೀಸನ ವಿರುದ್ಧ ಬಂದ ಆಪಾದನೆಗಳಿಗೆ ಉತ್ತರ ಮೂರನೆಯದು, ಹೆಲೆನಿಕ ಇದರಲ್ಲಿ ತುಸಿಡಿಡೀಸ್‍ನ ಇತಿಹಾಸ ವೃತ್ತಾಂತವನ್ನು ಮುಂದುವರೆಸಿದ.

ಪ್ಲೇಟೋವಿನ ಸಂಭಾಷಣೆಗಳು ತತ್ವಶಾಸ್ತ್ರದ ಶ್ರೇಷ್ಠ ಕೃತಿಗಳಷ್ಟೇ ಅಲ್ಲ, ಅವು ಶ್ರೇಷ್ಠ ಸಾಹಿತ್ಯ ಕೃತಿಗಳು. ಅವನ ಗದ್ಯ ಅತ್ಯಂತ ಸ್ಪಷ್ಟ ಸುಂದರ.

ಅಲೆಕ್ಸಾಂಡ್ರಿಯದ ಅತ್ಯುತ್ತಮ ಕವಿ ಕ್ಯಾಲಿಮಾಕಸ್ ಇವನು ಅಲ್ಲಿನ ಗ್ರಂಥಾಲಯದ ಪ್ರಧಾನ ಗ್ರಂಥ ಪಾಲಕ. 800ಕ್ಕಿಂತ ಹೆಚ್ಚು ಕೃತಿಗಳನ್ನು ಇವನು ಬರೆದನೆಂದು ಹೇಳಲಾಗಿದೆ. ಉಳಿದುಬಂದಿರುವುದು ಆರು ಸ್ತೋತ್ರಗಳು 64 ಚಾಟೂಕ್ತಿಗಳು ಮತ್ತು ಕೆಲವು ಎಲಿಜಿಗಳು ಮತ್ತೊಬ್ಬ ಶ್ರೇಷ್ಠ ಕವಿ ಥಿಯಾಕ್ವಿಟಸ್; ಇವನು `ಇಂಟ್ ಗಳನ್ನು ಬರೆದನು. ಇವು ಗೊಲ್ಲ ಕವನಗಳು. ಅನಂತರ ಬಂದ ಬಿಯಾನ್, ಮಾಸ್ಕಸ್ ಮೊದಲಾದವರು ಇವನನ್ನು ಅನುಸರಿಸಿದರು. ಬಿಯಾನ್ ಬರೆದ `ಅಡೋನಿನ್ ಎಂಬ ಶೋಕಗೀತ ಪ್ರಸಿದ್ಧವಾಗಿದೆ.

ಹೆಲಿನಿಸ್ಟಿಕ್ ಯುಗದ ವಿದ್ವಾಂಸರು ಮತ್ತು ವಿಜ್ಞಾನಿಗಳು ಅದ್ಭುತ ಕೆಲಸವನ್ನು ಮಾಡಿದರು. ಇವರಲ್ಲಿ ವೈದ್ಯ ಫಿರೊಲಸ್, ಖಗೋಳ ಶಾಸ್ತ್ರಜ್ಞವಾದ ಹಿಪಾರ್ಕಸ್, ಟಾಲೆಮಿ, (ಭೂಮಿಯ ಸೂರ್ಯನ ಸುತ್ತ ಸತ್ತುತ್ತದೆ ಎಂದು ಮೊದಲ ಬಾರಿಗೆ ಹೇಳಿದ) ಸಮೋಸ್‍ನ ಅರಿಸಾರ್ಕಸ್ ಮತ್ತು ಭೂಮಿಯ ಸುತ್ತಳತೆಯನ್ನು ನಿರ್ಧರಿಸಿದ ಗಣಿತಶಾಸ್ತ್ರಜ್ಞ ಮತ್ತು ಭೂಗೋಳ ಶಾಸ್ತ್ರಜ್ಞ ಎರ್ಯಾಟೊ ಸ್ರೆನೀಸ್ ಇವರನ್ನು ಹೆಸರಿಸಬೇಕು.

ಅಭಿಜಾತ ಗ್ರೀಕ್ ಸಾಹಿತ್ಯವನ್ನು ಅನುಕರಿಸಿದವರಲ್ಲಿ ಹೆಸರಿಸಬೆಕಾದವನು ವಿಡಂಬನಕಾರ ಲೂಸಿಯನ್, ಇವನ ಕೃತಿಗಳು `ಸತ್ತವರ ಸಂವಾದಗಳು, `ದೇವತೆಗಳ ಸಂವಾದಗಳು ಮತ್ತು ನಿಜವಾದ ಇತಿಹಾಸ.

ಆಧುನಿಕ ವಿದ್ವಾಂಸರ ಅಭಿಪ್ರಾಯದಲ್ಲಿ, ಕಾದಂಬರಿಯ ಪ್ರಾರಂಭದ ಮಾದರಿಯನ್ನು ಕ್ರಿಶ 2ನೆ ಶತಮಾನಕ್ಕೆ ಮೊದಲೇ ಗ್ರೀಸಿನಲ್ಲಿ ಕಾಣಬಹುದು. `ನಿನಾನ್ಸ್ ರೊಮಾನ್ಸ್ ಎಂದು ಕರೆಯುವ ಗ್ರೀಕ್ ಕಾದಂಬರಿಯ ಭಾಗಗಳು ಉಳಿದು ಬಂದಿವೆ. ಇದು ನೀನಾಸ್ ಎನ್ನುತ ವೀರನ ಪ್ರೇಮದ ಕಥೆಯನ್ನು ಹೇಳುತ್ತದೆ, ಇದನ್ನು ಕ್ರಿ.ಪೂ. ಒಂದನೆಯ ಶತಮಾನದಲ್ಲಿ ಬರೆದಿರಬೇಕು. ಕ್ರಿ.ಶ ಎರಡನೆಯ ಮತ್ತು ಮೂರನೆಯ ಶತಮಾನಗಳಲ್ಲಿ ಬರೆದ ಐದು ಕಾದಂಬರಿಗಳು ಈಚೆಗೆ ಲಭ್ಯವಾಗಿದೆ. ಇವೆಲ್ಲ ಪ್ರಣಯದ ಮತ್ತು ಸಾಹಸರ ಕಥೆಗಳನ್ನು ಹೇಳುತ್ತವೆ. ಕಷ್ಟಗಳನ್ನು ಅನುಭವಿಸಿದ ನಂತರ ಪ್ರಣಯಗಳು ಅಥವಾ ಗಂಡ ಹೆಂಡತಿಯರು ಮತ್ತೆ ಸೇರುತ್ತಾರೆ.

ಎಪಿಕ್ವೆಟನ್ ಮತ್ತು ಮಾರ್ಕಸ್ ಅರೀಲಿಯನರು `ಸ್ಟೋಯಿಕ್ ತತ್ವಶಾಸ್ತ್ರ ಪಂಥವನ್ನು ಪ್ಲಾಟಿನಸ್ `ನಿಯೊಪ್ಲೆಟಾನಿಸಂ ಅನ್ನು ತಮ್ಮ ಬರಹಗಳಲ್ಲಿ ನಿರೂಪಿಸಿದರು.

ಕ್ರಿ.ಶ 323ರಲ್ಲಿ ಕಾನ್‍ಸ್ಟಾಂಟೈನನ ಆಳ್ವಿಕೆ ಪ್ರಾರಂಭವಾಯಿತು. ಅಲ್ಲಿಂದ 1453ರಲ್ಲಿ ಪೂರ್ವ ಸಾಮ್ರಾಜ್ಯವು ಕುಸಿಯುವವರೆಗೆ ಗ್ರೀಕ್ ಸಾಹಿತ್ಯದ ಮೇಲೆ ಲ್ಯಾಟಿನ್ ಸಾಹಿತ್ಯ ಮತ್ತು ಪೂರ್ವ ದೇಶಗಳ ಸಾಹಿತ್ಯಗಳು ಪ್ರಭಾವ ಬೀರಿದವು. ಈ ಕಾಲದ ಬರಹಗಳು ಬಹು ಮಟ್ಟಿಗೆ ಧಾರ್ಮಿಕ. ಧಾರ್ಮಿಕ ಅಭಿಪ್ರಾಯಗಳ ವಾದ ವಿವಾದಗಳು ಪ್ರಮುಖವಾದವು. ರಚಿತವಾದ ಕವನಗಳೂ ಬಹುಮಟ್ಟಿಗೆ ಸ್ತೋತ್ರಗಳೇ.

1832ರಲ್ಲಿ ಗ್ರೀಸ್ ಸ್ವಾತಂತ್ರ್ಯವನ್ನು ಪಡೆದುಕೊಂಡ ನಂತರ ಸಾಹಿತ್ಯದಲ್ಲಿ ಹೊಸ ಚೈತನ್ಯವು ಮೂಡಿತು. ಇಮ್ಯಾನ್ಯುಎಲ್ ರಾಯ್‍ಡಿಸ್ ಗಣನೀಯ ಕಾದಂಬರಿಕಾರ ಇವನು ವಿಮರ್ಶಕ ಮತ್ತು ಅನುವಾದಕ. ಅಲೆಕ್ಸಾಂಡ್ರಾಸ್ ಪಡಿಲಿಮಾಂಟಿಸ್ ಗ್ರಾಮ ಜೀವನವನ್ನು ಕಾವ್ಯಮಯವಾಗಿ ನಿರೂಪಿಸುವ ಕಾದಂಬರಿಗಳನ್ನು ಬರೆದ ಆರ್ಜೆನಿಸ್ ಇಫ್ಯಾಲಿರ್ಯೊಸ್‍ನ `ದ್ವೀಪದ ಕಥೆಗಳು ಒಂದು ಪ್ರಸಿದ್ಧ ಸಂಗ್ರಹ.

19ನೆಯ ಶತಮಾನದ ಪ್ರಾರಂಭದ ನಾಟಕಕಾರರು ಅಭಿಜಾತ ನಾಟಕವನ್ನು ಮಾದರಿಯಾಗಿ ಅನುಸರಿಸಿದರು. ಪಿಯನಿಸ್ ಕಾಂಬಿಸಿನ್ ವಾಸ್ತವ ಮಾರ್ಗದ ನಾಟಕಗಳನ್ನು ವಿಡಂಬನಾತ್ಮಕ ನಾಟಕಗಳನ್ನೂ ಬರೆದ ಅನಂತರದ ನಾಟಕಕಾರರ ಮೇಲೆ ರಷ್ಯದ ನಾಟಕದ ಮತ್ತು ಇಬ್ಬನನ ಪ್ರಭಾವವಾಯಿತು.

20ನೆಯ ಶತಮಾನದ ಪ್ರಾರಂಭದಲ್ಲಿ ವಿಶೇಷ ಜನಪ್ರಿಯತೆಯನ್ನು ಗಳಿಸಿದ ಕವಿ ಜಾರ್ಜಿಯಾನ್ ಡ್ರೊಸೈನೆಸ್, ಇವನ ಸಮಕಾಲೀನ ಕೋನಸ್ ಪಲಾಮಸ್ ಯೂರೋಪಿನ ಶ್ರೇಷ್ಠ ಕವಿಗಳ ಪಂಕ್ತಿಗೆ ಸೇರಿದವನು. ಇವನ `ಅರಸನ ಕೊಳಲು (1910) ಕವನವು ಬೈಜಾನ್‍ಟಿಯಂನ ಇತಿಹಾಸದ ವೈಭವವನ್ನು ನಿರೂಪಿಸುತ್ತದೆ. ಈಪ್ಸಿಯ ಹನ್ನೆರಡು ಪದಗಳು (1907) ಒಂದು ಮಹಾಕಾವ್ಯ. ಗ್ರೀಕ್ ಜನತೆಯ ಆಸೆಗಳಿಗೆ, ಭರವಸೆಗಳಿಗೆ ದನಿ ನೀಡುತ್ತದೆ. ಮತ್ತೊಬ್ಬ ಶ್ರೇಷ್ಠ ಕವಿ ಕಾನ್‍ಸ್ಟ್ಯಾನ್‍ಟೈನ್ ಕನಫಿ. ಇವನು ತನ್ನ ಬದುಕಿನ ಬಹು ಭಾಗವನ್ನು ಈಜಿಪ್ಟಿನ ಅಲೆಕ್ಸಾಂಡ್ರಿಯದಲ್ಲಿ ಕಳೆದ ಇವನ ಬಹು ಕವನಗಳ ಹಿನ್ನೆಲೆ ಈ ನಗರವೇ. ಇವನ ಕವನಗಳಲ್ಲಿ ಗಾಢವಾದ ಖಿನ್ನತೆ ಇದೆ.


20ನೆಯ ಶತಮಾನದ ಪ್ರಸಿದ್ಧ ಬರಹಗಾರರಲ್ಲಿ ಒಬ್ಬ ಕವಿ, ಕಾದಂಬರಿಕಾರ ನಿಕಾಸ್ ಕeóÁನ್ ನೆಟ್ eóÁಕಿಸ್. ಇವನ ಪ್ರಸಿದ್ಧ ಕವನ ದಿ ಆಡಿಸಿ ಎ ಮಾಡರ್ನ್ ಸೀಕೈಲ್ ನಲ್ಲಿ ಹೋಮರನ ಪ್ರಸಿದ್ಧ ಮಹಾಕಾವ್ಯವನ್ನು ಮುಂದುವರೆಸುತ್ತಾನೆ. ಜೋಬ್ರದ ಗ್ರೀಕ್ (1943) ಇವನ ಪ್ರಸಿದ್ಧ ಕಾದಂಬರಿ; ಇದು ಚಲನಚಿತ್ರವೂ ಆಗಿದೆ. ಜಾರ್ಜ್ ಐರ್ಯೊಕಾಸ್‍ನ ದಿ ಡೀಮನ್ (1934) ಆಧುನಿಕ ಗ್ರೀಕ್ ಮನೋಧರ್ಮದ ವಿಶ್ಲೇಷಣೆ.

ಎರಡನೆಯ ಮಹಾಯುದ್ಧದಲ್ಲಿ ಗ್ರೀಕರು ಬಹಳ ಪಾಡುಪಟ್ಟರು. ಯುದ್ಧ ಮುಗಿದ ನಂತರ ಗ್ರೀಕರ ಯಾತನೆಯನ್ನು ನಿರೂಪಿಸುವ ಹಲವು ಕೃತಿಗಳು ರಚಿತವಾದವು. ತಿಮಾಸ್ ಕಾರ್‍ನರಾಸ್ `ಹೈದರಿ (1946) ಎನ್ನುವ ಕೃತಿಯಲ್ಲಿ ಯುದ್ಧಕಾಲದಲ್ಲಿ ಗ್ರೀಕ್ ಯೋಧರ ಮನಸ್ಥೈರ್ಯವನ್ನು ಮುರಿಯಲು ಜರ್ಮನ್ ಅಧಿಕಾರಿಗಳು ಗ್ರೀಕ್ ಕೈದಿಗಳ ಮೇಲೆ ನಡೆಸಿದ ಕ್ರೌರ್ಯವನ್ನು ನಿರೂಪಿಸಿದ. ಜರ್ಮನಿಯನ್ನು ವಿರೋಧಿಸಿದ ಗ್ರೀಕರ ವ್ಯವಸ್ಥೆಯನ್ನು ಕುರಿತ ಕೃತಿಗಳು ಬಂದವು.

ವ್ಯಾಸಿಲಿಸ್ ವಾಸಿಲಿಕಸ್, ನಿಕಾಸ್ ಕಜಾನ್‍ಟ್ eóÁಕಿಸನ ಕಾರ್ಯವನ್ನು ಮುಂದುವರೆಸಿದ. ಅವನ `ಜûಡ್ (1966) ಎನ್ನುವ ಪ್ರತಿಭಟನೆಯ ಕಾದಂಬರಿ ಹಲವು ಭಾಷೆಗಳಿಗೆ ಅನುವಾದಿತವಾಯಿತು, ಚಲನಚಿತ್ರವೂ ಆಯಿತು. ಗ್ರೀಸಿನಲ್ಲಿ ರಾಜರ ಆಡಳಿತವನ್ನು ರಕ್ಷಿಸಿದ ರಾಜಕಾರಣಿಗಳ ಮತ್ತು ಸೈನ್ಯದ ಅಧಿಕಾರಿಗಳ ಭ್ರಷ್ಟಾಚಾರದ ವಿಶ್ಲೇಷಣೆ ಇಲ್ಲಿದೆ. `ಕ್ಯೂಪ್ ಎಲಾನ್ (1976) ಎನ್ನುವ ಕಾದಂಬರಿತ್ರಯದಲ್ಲಿ ಈ ಕಾದಂಬರಿಕಾರನು ಯುದ್ಧದಲ್ಲಿ ಸಾವುಗಳಿಗೆ ಕಾರಣವಾದ ಶಸ್ತ್ರಾಸ್ತ್ರಗಳ ಕಾರ್ಖಾನೆಯ ಕಥೆಯನ್ನು ಬಿತ್ತರಿಸುತ್ತಾನೆ.

1960ರ ದಶಕದಿಂದ ಹಲವರು ಗ್ರೀಕ್ ಕಾದಂಬರಿಕಾರರು ಸಮಕಾಲೀನ ಬದುಕಿನ ವಿಶ್ಲೇಷಣೆಯಲ್ಲಿ ತೊಡಗಿಕೊಂಡರು.

ಯುದ್ಧಾನಂತರ ಕವಿಗಳು ತಮ್ಮ ನಾಡಿನ ಪರಂಪರೆಯ ಅರಿವಿನೊಂದಿಗೆ ಆಧುನಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದಾರೆ. ಭಾವನೆಗಳನ್ನು ಉದ್ದೀಪನಗೊಳಿಸುವ ಸಾಂಕೇತಿಕತೆ, ನ್ಯೂನೋಕ್ತಿ (ಅಂಡರ್ ಸ್ಟೇಟ್‍ಮೆಂಟ್) ಮತ್ತು ಹಳೆಯ ನೆನಪಿನ ಹಂಬಲಗಳ ತ್ರಿವೇಣಿ ಸಂಗಮ ಆದ ಕಾವ್ಯದ ಕವಿ ಜಾರ್ಜ್ ಸೆಫೆರಿಸನಿಗೆ 1963ರಲ್ಲಿ ನೊಬೆಲ್ ಪ್ರಶಸ್ತಿ ಲಭ್ಯವಾಯಿತು. ಯೂನಿಸ್ ರಿಟ್‍ಸಾಸ್ ರಾಜಕೀಯವಾಗಿ ಕ್ರಾಂತಿಕಾರಿ ಕವಿ.

ಸಿಕೆಲಿಯಸ್ ಮತ್ತು ಕeóÁನ್‍ಟೆ eóÁಕಿನ್ ಟ್ರ್ಯಾಜೆಡಿಗಳನ್ನು ಬರೆದಿದ್ದರು, ಇವುಗಳ ಕ್ರಿಯೆ ದೂರ ಗತಕಾಲಕ್ಕೆ ಸೇರಿದ್ದು. 1950ರ ನಂತರದ ನಾಟಕಕಾರರು ಸಮಕಾಲೀನ ಸಮಸ್ಯೆಗಳತ್ತ ಗಮನ ಹರಿಸಿದರು. ಪರಿಷ್ಕರಣೆ ಪ್ರೊ.ಎಲ್.ಎಸ್.ಎಸ್.