ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ವಾನಾಕೋ

ವಿಕಿಸೋರ್ಸ್ದಿಂದ

ಆರ್ಟಿಯೊಡ್ಯಾಕ್ಟಿಲ ಗಣದ ಕಮೆಲಿಡೀ ಕುಟುಂಬಕ್ಕೆ ಸೇರಿದ ಒಂದು ಸ್ತನಿ. ಅಲ್ಪಾಕ, ಲಾಮಗಳ ಹತ್ತಿರ ಸಂಬಂಧಿ. ಲಾಮಗ್ವಾನಕೀ ಇದರ ವ್ಶೆಜ್ಞಾನಿಕ ನಾಮ. ದಕ್ಷಿಣ ಅಮೆರಿಕದ ಪಶ್ವಿಮ ಮತ್ತು ದಕ್ಷಿಣ ಭಾಗಗಳ ಬೆಟ್ಟಗಳಲ್ಲಿ ಕಾಣಬರುತ್ತದೆ. ಪೆರುವಿನಿಂದ ಹಿಡಿದು ಕೇಪ್ ಹಾರ್ನ್ವರೆಗೆ ಇದರ ವ್ಯಾಪ್ತಿ ಇದೆ. ಸುಮಾರು 1.2 ಮೀ ಎತ್ತರದ ಪ್ರಾಣಿಯದು. ದೇಹದ ಉದ್ದ 1.2-1.5 ಮೀ. ತೂಕ 48-96 ಕೆ.ಜಿ. ದೇಹದ ಮೇಲೆಲ್ಲಾ ತುಪ್ಪಳದಂಥ ಹೊದಿಕೆಯಿದೆ. ಇದರ ಬಣ್ಣ ತಿಳಿ ಕಂದಿನಿಂದ ಕಡುಕಂದುವರೆಗೆ ಉದರ ಭಾಗ ಬಿಳಿ. ಮುಖ ಮಾತ್ರ ಸ್ವಲ್ಪ ಕಪ್ಪು ಬಣ್ಣದ್ದು. ಕತ್ತು ಒಂಟೆ ಲಾಮಗಳಿಗಿರುವಂತೆ. ಕಾಲುಗಳು ತೆಳುವಾಗಿಯೂ ಉದ್ದವಾಗಿಯೂ ಇವೆ. ಕಿವಿಗಳು ನೇರ ಹಾಗೂ ಸಣ್ಣ ಕಣ್ಣುಗಳು ಅಗಲವಾಗಿದ್ದು ಕಂದು ಬಣ್ಣದಿಂದ ಕೂಡಿದ್ದು ಆಕರ್ಷವಾಗಿವೆ. ಎಳೆಯ ಗ್ವಾನಾಕೋಗಳನ್ನು ಚುರೆಂಗೊ ಎಂದು ಕರೆಯಲಾಗುತ್ತದೆ. ಹುಲ್ಲು ಇದರ ಪ್ರಧಾನ ಆಹಾರ.

ಗ್ವಾನಾಕೋ ಸಂಘಜೀವಿ. 10-30ರ ಗುಂಪುಗಳಲ್ಲಿ ವಾಸಿಸುತ್ತವೆ. ಗುಂಪಿನಲ್ಲಿ ಒಂದೇ ಒಂದು ಗಂಡು ಇರುತ್ತದೆ. ಇವು ವೇಗದಲ್ಲಿ ಗಂಟೆಗೆ 50 ಕಿ.ಮೀ ಓಡಬಲ್ಲವು ಚೆನ್ನಾಗಿ ಈಜಲೂ ಬಲ್ಲವು. ಇವು ಬಹಳ ಸೂಕ್ಷ್ಮಗ್ರಾಹಿಗಳಾದುದರಿಂದ ಇವನ್ನು ಸಮೀಪಿಸುವುದು ಕಷ್ಟ. ಇವು ಎರಡು ವರ್ಷಕ್ಕೊಮ್ಮೆ ಮರಿ ಹಾಕುತ್ತವೆ. ಗರ್ಭಾವಸ್ಥೆಯ ಅವಧಿ 10-11 ತಿಂಗಳುಗಳು. ಒಂದು ಬಾರಿಗೆ ಒಂದೇ ಒಂದು ಮರಿ ಹಾಕುತ್ತದೆ. ಗ್ವಾನಾಕೋಗಳ ಆಯಸ್ಸು ಸುಮಾರು 20 ವರ್ಷಗಳು. ಗ್ವಾನಾಕೋಗಳನ್ನು ಮಾಂಸಕ್ಕಾಗಿ, ಚರ್ಮಕ್ಕಾಗಿ ಬೇಟೆಯಾಡುತ್ತಾರೆೆ. ಇವನ್ನು ಸಾಕಲೂಬಹುದು. ಪಟಗೋನಿಯದ ಇಂಡಿಯನರು ಇವುಗಳ ಸಗಣಿಯನ್ನು ಬೆರಣಿಮಾಡಿ ಉರುವಲಾಗಿ ಬಳಸುತ್ತಾರೆ.