ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಘನಪಾಠ

ವಿಕಿಸೋರ್ಸ್ದಿಂದ

ವೇದಪಾಠದ ಅಷ್ಟ ವಿಕೃತಿಗಳಲ್ಲಿ 8ನೆಯದು. ವೇದವಾಙ್ಮಯವನ್ನು ಕಾಂಡ-ಪ್ರಶ್ನ ಅಥವಾ ಮಂಡಲ-ವರ್ಗ-ಸೂಕ್ತ-ಅನುವಾಕ-ಮಂತ್ರ-ಪದ-ವರ್ಣ-ಸ್ವರ ಇವೆಲ್ಲದರಲ್ಲಿಯೂ ಸ್ವಲ್ಪ ಮಾತ್ರವೂ ಸ್ವರೂಪ ಭ್ರಂಶವಾಗದಂತೆ ರಕ್ಷಿಸಿಕೊಂಡು, ಶಬ್ದ ಮತ್ತು ಅರ್ಥದ ಮೂಲಕ ದೃಷ್ಟಾದೃಷ್ಟ ಫಲಗಳನ್ನು ಹೊಂದಿ ಪುಣ್ಯ ಪುರುಷಾರ್ಥಮಯವಾಗಿ ಜೀವಿ ಬಾಳಿ ಬದುಕುವಂತಾಗಬೇಕೆಂದು ಋಷಿಗಳು ಆಶಿಸಿ ಅದಕ್ಕಾಗಿ ಶಬ್ದಸ್ವರೂಪರಕ್ಷಣೆಯನ್ನುದ್ದೇಶಿಸಿ ಎಂಟು ವಿಶ್ರತಿಗಳನ್ನು ಹೇಳಿದ್ದಾರೆ (ವ್ಯಾಳಿ-ವ್ಯಾಸಾದಿ ಶಿಕ್ಷಾ ಗ್ರಂಥಗಳು).

ಜಟಾ ಮಾಲಾ ದಂಡ ರೇಖಾ ರಥ ಧ್ವಜ ಶಿಖಾ ಘನಾಃ |
ಕ್ರಮಮಾಶ್ರಿತ್ಯ ನಿವೃತ್ತಾಃ ವಿಕಾರಾಃ ಅಷ್ಟವಿಶ್ರುತಾಃ ||

ಪಾಣಿನೀಯ ಶಿಕ್ಷೆಯಲ್ಲಿ-ಈ ಸ್ವರವರ್ಣಾದಿಗಳ ರಕ್ಷಣೆಯ ಮುಖ್ಯೋದ್ದೇಶ ಅದರಿಂದಾಗುವ ವಾಸ್ತವವಾದ ಅರ್ಥಾಭಿವ್ಯಕ್ತಿಯ ಸಂರಕ್ಷಣೆಯೇ ಹೊರತು ಮತ್ತಾವುದೂ ಅಲ್ಲವೆಂದೂ ಅಲ್ಲಿ ವಾಚಿತವಾದ ಅಪಚಾರದಿಂದ ಪ್ರಯೋಜನ ಭಂಗವಷ್ಟೇ ಅಲ್ಲದೆ ಅನಿಷ್ಟವೂ ತೀವ್ರವಾಗಿದೆಯೆಂದೂ ಹೇಳಿ ಎಚ್ಚರಿಸಿದೆ.

ಮಂತ್ರೋ ಹಿ ನಃ ಸ್ವರತೋ ವರ್ಣತೋ ವಾ ಮಿಥ್ಯಾಪ್ರಯುಕ್ತೋ ನ ತಮರ್ಧಮಾಹ | ಸವಾಗ್ವಜ್ರೋ ಯಜಮಾನಂ ಹಿನಸ್ತಿ ಯಥೇನ್ದ್ರಶತ್ರುಃ ಸ್ವರತೋಪರಾಧಾತ್ || - ಎಂದು. ಈ ಎಂಟು ಬಗೆಯ ವಿಕೃತಿಗಳೂ ಕ್ರಮಪಾಠವನ್ನೇ ಆಶ್ರಯಿಸಿ ರೂಪಗೊಂಡಿವೆ. ಘನಪಾಠದ ಲಕ್ಷಣ ಈ ರೀತಿ ಇದೆ-

ಶಿಖಾ ಮುಕ್ತ್ವಾ ವಿಪರ್ಯಸ್ಯ ತತ್ಪದಾನಿ ಪುನಃ ಪಠೇತ್ |
ಅಯಂ ಘನಃ ಇತಿ ಪ್ರೋಕ್ತಃ . . . . . . . . .| (ವ್ಯಾಳಿಶಿಕ್ಷಾ)

ಉದಾಹರಣೆಗೆ-

ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ |
ಹೋತಾರಂ ರತ್ನಧಾತಮಮ್ ||

ಇದರಲ್ಲಿ ಶಿಖಾಪಾಠ-ಅಗ್ನಿಮೀಳಈಳೇಗ್ನಿಮಗ್ನಿಮೀಳೇಪುರೋಹಿತಮ್- ಇಷ್ಟು ಹೇಳಿ ಅದನ್ನು ವಿಲೋಮವಾಗಿ ಒಮ್ಮೆ ಹೇಳಿ ಮತ್ತೆ ಅನುಲೋಮವಾಗಿ ಹೇಳುವುದು ಘನಪಾಠ. ಹೀಗೆ-

1. ಅಗ್ನಿಮೀಳೇ ಈಳೇಗ್ನಿಮಗ್ನಿಮೀಳೇ ಪುರೋಹಿತಂ ಪುರೋಹಿತ-ಮೀಳೇಗ್ನಿಮಗ್ನಿಮೀಳೇ ಪುರೋಹಿತಮ್ |
2. ಈಳೇ ಪುರೋಹಿತಂ ಪುರೋಹಿತಮೀಳ ಈಳೇ ಪುರೋಹಿತಂ ಯಜ್ಞಸ್ಯ ಯಜ್ಞಸ್ಯ ಪುರೋಹಿತಮೀಳ ಈಳೇ ಪುರೋಹಿತಂ ಯಜ್ಞಸ್ಯ |
3. ಪುರೋಹಿತಂ ಯಜ್ಞಸ್ಯ ಯಜ್ಞಸ್ಯ ಪುರೋಹಿತಂ ಪುರೋಹಿತಂ ಯಜ್ಞಸ್ಯ ದೇವಂ ದೇವಂ ಯಜ್ಞಸ್ಯ ಪುರೋಹಿತಂ ಪುರೋಹಿತಂ ಯಜ್ಞಸ್ಯ ದೇವಮ್ | ಪುರೋಹಿತಮಿತಿ ಪುರಃ ಹಿತಮ್ |
4. ಯಜ್ಞಸ್ಯ ದೇವಂ ದೇವಂ ಯಜ್ಞಸ್ಯ ಯಜ್ಞಸ್ಯ ದೇವಮೃತ್ವಿಜಮೃತ್ವಿಜಂ ದೇವಂ ಯಜ್ಞಸ್ಯ ಯಜ್ಞಸ್ಯ ದೇವಮೃತ್ವಿಜಮ್ |
5. ದೇವಮೃತ್ವಿಜಮೃತ್ವಿಜಂ ದೇವಂ ದೇವಮೃತ್ವಿಜಮ್ | ಋತ್ವಿಜಮಿತ್ಯೃ ತ್ವಿಜಮ್
6. ಹೋತಾರಂ ರತ್ನಧಾತಮಂ ರತ್ನಧಾತಮಂ ಹೋತಾರಂ ರತ್ನಧಾತಮಮ್ ರತ್ನಧಾತಮಮಿತಿ ರತ್ನಧಾsತಮಮ್.

ಇದು ಈಗ ಬಳಕೆಯಲ್ಲಿರುವ ಘನಪಾಠದ ಪ್ರಕಾರವೆಂಬುದಾಗಿಯೂ ಮತ್ತೊಂದು ಪ್ರಕಾರ ಇರುವುದೆಂಬುದಾಗಿಯೂ ವ್ಯಾಳಿಶಿಕ್ಷಾ ವ್ಯಾಖ್ಯಾನಕಾರರು ಹೇಳಿ ಅದರ ಲಕ್ಷಣವನ್ನು ಹೀಗೆ ವಿವರಿಸಿದ್ದಾರೆ-

ಅನ್ತಾತ್ ಕ್ರಮಂ ಪಠೇತ್ ಪುರ್ವಂ ಆದಿಪರ್ಯನ್ತಮಾನಯೇತ್ |
ಆದಿಕ್ರಮಂ ನಯೇದಂತಂ ಘನಮಾಹುರ್ಮನೀಷಿಣಃ ||

ಅದರಂತೆ-

1. ಋತ್ವಿಜಮಿತ್ಯೃತ್ವಿಜಮ್ | ದೇವಮೃತ್ವಿಜಮ್ | ಯಜ್ಞಸ್ಯ ದೇವಮ್ |
ಪುರೋಹಿತಂ ಯಜ್ಞಸ್ಯ | ಪುರೋಹಿತಮಿತಿ ಪುರಃ ಹಿತಮ್ |
2. ಈಳೇ ಪುರೋಹಿತಮ್ | ಅಗ್ನಿಮೀಳೇ |
ಈಳೇ ಪುರೋಹಿತಮ್ | ಪುರೋಹಿತಂ ಯಜ್ಞಸ್ಯ | ಪುರೋಹಿತಮಿತಿ
ಪುರಃ ಹಿತಮ್ | ಯಜ್ಞಸ್ಯ ದೇವಮ್ | ದೇವಮೃತ್ವಿಜಮ್ |
ಋತ್ವಿಜಮಿತ್ಯೃತ್ವಿಜಮ್ |
3. ರತ್ನಧಾತಮಮಿತಿ ರತ್ನsಧಾತಮಮ್ | ಹೋತಾರಂ ರತ್ನಧಾತಮಮ್ | ರತ್ನಧಾತಮಮಿತಿ ರತ್ನsSಧಾತಮಮ್ |
ಎಂದು ಆಗುವುದು.

ಈ ಬಗೆಯ ಅಭ್ಯಾಸಗಳಿಂದ ಪ್ರಕೃತಿ ಪ್ರತ್ಯಯ ವಿಭಾಗ, ಅವುಗಳಲ್ಲಿಯ ವ್ಯಾಕರಣವಿಶೇಷ, ಪ್ರತ್ಯೇಕಪದ-ಸಂಹಿತೆಗಳ ಸ್ವರನಿರ್ಣಯ, ಧಾತು-ಉಪಸರ್ಗ ವಿವೇಕ, ಅದರ ಸ್ವರವಿಶೇಷ, ಸಮಾಸಜ್ಞಾನ, ಅದರ ಸ್ವರ; ಇತ್ಯಾದಿಯಾಗಿ ವೇದಾಕ್ಷರಗಳಲ್ಲಿ ಬಂದು ಮಾತ್ರಾಕಾಲದಲ್ಲೂ ಹೆಚ್ಚು ಕಡಿಮೆಯಾಗದ ಸಂರಕ್ಷಣೆ, ಇದರಿಂದ ಶಿಕ್ಷಾ ನಿರುಕ್ತಾದಿಗಳಿಂದ ಒದಗಿದ ಅರ್ಥಪರಿಜ್ಞಾನ, ಧ್ಯಾನ ಸ್ಥಾನಗಳ ಜವಾಬ್ದಾರಿ, ಕರ್ಮಗಳಲ್ಲಿ ಉಪಯೋಗಿಸುವಾಗ ವರ್ಣ ಪದಾದಿ ದೇವತೆಗಳ ಪ್ರಕೋಪಕ್ಕೆ ಈಡಾಗದೆ ಅವರ ಪ್ರಸನ್ನತೆ ಹೊಂದುವುದು. ಅದರ ಮೂಲಕ ಧಾತು ಪ್ರಸನ್ನತೆಯಿಂದ ಪರಮ ಶಾಂತಿ-ಇವೆಲ್ಲ ಪ್ರಯೋಜನಗಳೂ ಸಿದ್ಧಿಸುವುವೆಂಬುದು ವೇದರಹಸ್ಯವನ್ನು ಅಂಗೈನೆಲ್ಲಿಯಂತೆ ಅರಿತ ಮಹರ್ಷಿಗಳ ನಿರ್ಣಯ. ಸಂಹಿತಾಪಾಠತಃ ಪುಣ್ಯಂ, ದ್ವಿಗುಣಂ ಪದಪಾಠತಃ ಎಂಬುದೂ ಜಟಾದಿ ವಿಕೃತೀನಾಂ ಯೇ ಪರಾಯಣಪಾರಾಯಣಾಃ | ಮಹಾತ್ಮಾನೋ ದ್ವಿಜಶ್ರೇಷ್ಠಾಃ ತೇ ಜ್ಞೇಯಾಃ ಪಙ್ಕ್ತಪಾವನಾಃ-ಎಂಬ ಮಾತೂ ಪಾಠಕ್ರಮದ ಉಪಯೋಗಗಳನ್ನು ಎತ್ತಿ ತೋರುತ್ತವೆ. ಅಧ್ಯಯನದ ಅವಧಿಯನ್ನು ಸಲಕ್ಷಣ-ಘನಾಂತ ಎಂಬುದಾಗಿಯೂ ಹಾಗೆ ಅಧ್ಯಯನ ಮಾಡಿದವರನ್ನು ಘನಪಾಠಿ ಎಂಬುದಾಗಿಯೂ ಗೌರವಿಸುವ ಸಂಪ್ರದಾಯ ಹಿಂದಿನಿಂದ ನಡೆದುಬಂದಿದೆ. (ಎನ್.ಎಸ್.ಆರ್.ಬಿ.)