ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಶೇಖರ ಕಂಬಾರ

ವಿಕಿಸೋರ್ಸ್ ಇಂದ
Jump to navigation Jump to search

ಚಂದ್ರಶೇಖರ ಕಂಬಾರ : - 1937- ಕನ್ನಡ ರಂಗಭೂಮಿ, ನಾಟಕ ಸಾಹಿತ್ಯ, ಕಾವ್ಯ, ಕತೆ, ಕಾದಂಬರಿ, ಜಾನಪದ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರು, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಕೀರ್ತಿಯನ್ನು ಕೊಂಡೊಯ್ದವರು ಡಾ|| ಚಂದ್ರಶೇಖರ ಕಂಬಾರ.

ಜನ್ಮ 1937ರ ಜನವರಿ 2ರಂದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ. ತಂದೆ ಬಸವಣ್ಣೆಪ್ಪ ಆರ್.ಕಂಬಾರ್, ತಾಯಿ ಚನ್ನಮ್ಮ. ಮನೆತನದ ವೃತ್ತಿ ಕಮ್ಮಾರಿಕೆ, ಇಂದಿಗೂ ಮುಂದುವರಿದಿದೆ. ಚಂದ್ರಶೇಖರರ ಪ್ರಾಥಮಿಕ ವಿದ್ಯಾಭ್ಯಾಸ ಘೋಡಗೇರಿಯಲ್ಲಿ. ಪ್ರೌಢಶಾಲಾ ವಿದ್ಯಾಭ್ಯಾಸ ಗೋಕಾಕದಲ್ಲಿ, ಖ್ಯಾತ ಕಾದಂಬರಿಕಾರರಾದ ಕೃಷ್ಣಮೂರ್ತಿ ಪುರಾಣಿಕರು ತಮ್ಮ ವಿದ್ಯಾರ್ಥಿ ಚಂದ್ರಶೇಖರನ ಪ್ರತಿಭೆಯನ್ನು ಗುರುತಿಸಿ ಪೋಷಿಸಿದರು, ಆರ್ಥಿಕ ಅಡಚಣೆಯಿಂದ ತಮ್ಮ ನೆಚ್ಚಿನ ವಿದ್ಯಾರ್ಥಿ ಶಾಲೆಗೆ ಬರುವುದನ್ನು ನಿಲ್ಲಿಸಿದಾಗ, ಆತನನ್ನು ಕರೆಸಿಕೊಂಡು ಸಾವಳಗಿ ಮಠದ ಹಾಸ್ಟೆಲ್‍ನಲ್ಲಿರಲು ವ್ಯವಸ್ಥೆ ಮಾಡಿದರು. ಕೃಷ್ಣಮೂರ್ತಿ ಪುರಾಣಿಕರ ಪ್ರೋತ್ಸಾಹದ ಮೇರೆಗೆ ನಾಟಕ ಬರೆದು ಓದಿದ್ದರು. ಕಥಾವಳಿ ಮಾಸಪತ್ರಿಕೆಯಲ್ಲಿ ಚಂದ್ರಶೇಖರ ರಚಿಸಿದ ಸ್ವಾತಂತ್ರ್ಯ ಹೋರಾಟದ ವಸ್ತುವುಳ್ಳ ಕವಿತೆಯೊಂದು ಪ್ರಕಟವಾಗಿತ್ತು. ಸಾವಳಗಿ ಮಠದ ಸ್ವಾಮಿಗಳು ಮೆಚ್ಚಿ - ತಮ್ಮ ಮಠದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಯ ಬರವಣಿಗೆಗೆ ಪ್ರೋತ್ಸಾಹ ನೀಡಿದರು. ಈ ಬಾಲಪ್ರತಿಭಾಶಾಲಿ ಬರೆದ ಕತೆಯೊಂದನ್ನು ಮೂಡಬಿದಿರೆಯ ಪ್ರಕಾಶನ ಸಂಸ್ಥೆಯೊಂದು ಕಿರು ಪುಸ್ತಿಕೆ ಮಾಲೆಯಲ್ಲಿ ಪ್ರಕಟಿಸಿತು.

ಮುಂದೆ ಚಂದ್ರಶೇಖರ ಕಂಬಾರರ ವಿದ್ಯಾಭ್ಯಾಸ ಬೆಳಗಾವಿಯ ಕಾಲೇಜಿನಲ್ಲಿ ಮುಂದುವರಿಯಿತು. ಭೂಸನೂರುಮಠರ ಮಾರ್ಗದರ್ಶನದಲ್ಲಿ ಜನಪದರಂಗಭೂಮಿ ಬಗ್ಗೆ ವಿಶೇಷ ಅಧ್ಯಯನ ಮಾಡಿ ರಚಿಸಿದ ಪ್ರೌಢ ಪ್ರಬಂಧಕ್ಕೆ ಪಿ.ಎಚ್.ಡಿ. ಲಭಿಸಿತು. ಅನಂತರ ಚಿಕಾಗೋ ವಿಶ್ವವಿದ್ಯಾಲಯದ ವಿಶೇಷ ಆಹ್ವಾನದ ಮೇರೆಗೆ ಅಮೆರಿಕೆಗೆ ತೆರಳಿ 1968ರಿಂದ 1970ರ ವರೆಗೆ ಜಾನಪದ ಕ್ಷೇತ್ರದ ತಜ್ಞರಾಗಿ ಕೆಲಸಮಾಡಿದರು. ಆಗ ಜೊತೆಗಾರರಾಗಿದ್ದ ಎ.ಕೆ. ರಾಮಾನುಜನ್ ಅವರೂ ಕಂಬಾರರ ಬರಹಗಳಿಗೆ ಪ್ರೇರಣೆಯಾದದ್ದುಂಟು. 1984-86ರ ಅವಧಿಯಲ್ಲಿ ಫೋರ್ಡ್ ಸಂಸ್ಥೆಯ ಫೆಲೋಶಿಪ್ ಪಡೆದು ಸಾಂಪ್ರದಾಯಿಕ ರಂಗಭೂಮಿ, ಜಾನಪದ ರಂಗಭೂಮಿಗಳೊಂದಿಗೆ ಆಧುನಿಕ ರಂಗಭೂಮಿಯ ಅಂತರ್‍ಸಂಬಂಧವನ್ನು ಕುರಿತು ವಿಶೇಷ ಅಧ್ಯಯನ ನಡೆಸಿದರು.

1970ರಿಂದ 1991ರವರೆಗೆ ಡಾ.ಕಂಬಾರರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಶ್ರಮಿಸಿದರು. ಅನಂತರ ಅವರ ಬಹುದೊಡ್ಡ ಕನಸಾಗಿದ್ದ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವ ಅವಕಾಶ ದೊರಕಿತು. ಕರ್ನಾಟಕ ಸರ್ಕಾರದ ನೆರವಿನಿಂದ ಹಲವು ಹುದ್ದೆಗಳಲ್ಲಿದ್ದುಕೊಂಡು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ, ಪ್ರಾಕೃತಿಕ ಪರಿಸರಕ್ಕೆ ಹೊಂದುವಂತಹ ವಿನ್ಯಾಸವನ್ನು ಒಳಗೂ ಹೊರಗೂ ಅಳವಡಿಸಿಕೊಳ್ಳುತ್ತ ರಚಿತವಾದ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಭಾರತದಲ್ಲೇ ಮೊದಲ ಹಾಗೂ ಯಶಸ್ವೀ ಪ್ರಯೋಗ. ಈ ವಿಶ್ವವಿದ್ಯಾಲಯದಲ್ಲಿ 1991-98ರ ಅವಧಿಯಲ್ಲಿ ಕುಲಪತಿಯಾಗಿ ಅನೇಕ ವಿನೂತನ ಕಾರ್ಯಗಳನ್ನು ಆಯೋಜಿಸಿ ಕಾರ್ಯಗತ ಮಾಡಿದವರು ಕಂಬಾರರು.

ಕವಿ, ನಾಟಕಕಾರ, ಜಾನಪದತಜ್ಞ ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಮನೀಯ, 21 ನಾಟಕಗಳು, ಎಂಟು ಕವಿತಾ ಸಂಕಲನಗಳು, ಮೂರು ಕಾದಂಬರಿಗಳು ಮತ್ತು ಜನಪದ, ರಂಗಭೂಮಿ, ಶಿಕ್ಷಣ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ 12 ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಡಾ. ಚಂದ್ರಶೇಖರ ಕಂಬಾರರು ಸ್ವತಃ ಉತ್ತಮ ನಟ, ಗಾಯಕ. ರಂಗಭೂಮಿ, ಚಲನಚಿತ್ರರಂಗಗಳಲ್ಲಿ ನಿರ್ದೇಶಕರೂ ಆಗಿದ್ದಾರೆ. ಬೆಂಗಳೂರಿನಲ್ಲಿ 70ರ ದಶಕದಲ್ಲಿ ನಡೆದ ಬಯಲು ನಾಟಕೋತ್ಸವದಲ್ಲಿ ಕಂಬಾರರ ಜೋಕುಮಾರಸ್ವಾಮಿ ನಾಟಕವನ್ನು ಬಿ.ವಿ.ಕಾರಂತರು ನಿರ್ದೇಶಿಸಿದ್ದರು. ಕಂಬಾರರು ಆ ನಾಟಕದಲ್ಲಿ ಸೂತ್ರಧಾರನಾಗಿ ಅಭಿನಯಿಸಿ, ಸಂಗೀತ ನಿರ್ದೇಶನವನ್ನು ಮಾಡಿದ್ದರು. ಚಂದ್ರಶೇಖರ ಕಂಬಾರರು ವಸಾಹತುಶಾಹಿಯನ್ನು ವಿರೋಧಿಸುವ ತಮ್ಮ ನಾಟಕಗಳಿಗೆ ಜನಪದದ ಎಲ್ಲ ಸತ್ವವನ್ನೂ ತುಂಬಿ ಪ್ರಸ್ತುತ ಪಡಿಸುವ ರೀತಿ ಅನನ್ಯ. ರಂಗಭೂಮಿಗೆ ಹೊಸ ಚೈತನ್ಯ, ಹೊಸ ಪರಂಪರೆ, ಹೊಸ ಆಯಾಮವನ್ನೇ ಹಾಕಿಕೊಟ್ಟವರು ಚಂದ್ರಶೇಖರ ಕಂಬಾರ.

ಕಂಬಾರರ ಬಹುತೇಕ ಕವಿತೆ, ನಾಟಕ ಕೃತಿಗಳಲ್ಲಿ ಶೃಂಗಾರ ಹಾಗೂ ಜನಪದ ಆಚರಣೆಗಳಿಗೆ ಹೊಸ ವ್ಯಾಖ್ಯಾನಗಳದ್ದು ಪ್ರಧಾನಗುಣ. ಇವರ ಭಾಷೆ, ರಂಗದ ಮೇಲೆ ತಂದ ಪದಗತಿ, ಸಂಗೀತ ಆ ದಿನಗಳಲ್ಲಿ ರಂಗೇತಿಹಾಸಕ್ಕೇ ಹೊಸ ತಿರುವನ್ನು ಕೊಟ್ಟವು. ಬಾಲ್ಯದಿಂದಲೂ ಬಯಲಾಟದ ಪರಿಚಯ, ಒಡನಾಟ ಇದ್ದುದರಿಂದ ಆಧುನಿಕ ಚಿಂತನೆಗೆ ಜನಪದ ಕಲೆಯನ್ನು ಕಸಿಮಾಡಿ ಹೊಸ ರಂಗತಂತ್ರವನ್ನು ರೂಪಿಸುವಲ್ಲಿ ಅತ್ಯಂತ ಯಶಸ್ವೀ ಎನ್ನಿಸಿದರು.

ಬಹುತೇಕ ನವ್ಯ ಸಾಹಿತಿಗಳೊಡನೆ ಗುರುತಿಸಿಕೊಂಡರೂ ಕಂಬಾರರು ತಮ್ಮದೇ ಆದ ಛಾಪನ್ನು ಉಳಿಸಿಕೊಂಡದ್ದೇ ಅವರ ಜನಪದ ಶೈಲಿ-ಭಾಷೆಗಳ ಶ್ರೀಮಂತ ಬಳಕೆಯಿಂದ, ರಂಗಭೂಮಿಯಲ್ಲಿ ಅಸಂಗತ ನಾಟಕಗಳು ವಿಜೃಂಭಿಸಿದ ದಿನಗಳಲ್ಲಿ ಕಂಬಾರರ ನಾರ್ಸಿಸಸ್ ಚಾಳೇಶ ಮೊದಲಾದ ಕೆಲವು ನಾಟಕಗಳನ್ನು ಅಸಂಗತ ಎನ್ನಲಾಯಿತು. ಆದರೆ ಭಾರತೀಯ ಪರಂಪರೆಯಲ್ಲಿ ಪಾಶ್ಚಾತ್ಯರ ಹಾಗೆ ಹಪಾಪಿತನವಿಲ್ಲ, ಇಲ್ಲಿಗೆ ಅಸಂಗತ ಸಲ್ಲುವುದಿಲ್ಲವೆಂದ ಕಂಬಾರರು ತಮ್ಮ ನಾಟಕಗಳಲ್ಲಿ ಆಧ್ಯಾತ್ಮವಿದೆ; ಅರವಿಂದರ ಚಿಂತನೆಗಳಿವೆ; ತನ್ನತನದ ಹುಡುಕಾಟವಿದೆ; ಮನುಷ್ಯನೊಳಗಿನ ದ್ವಿಧಾಭಾವವನ್ನು ಗುರುತಿಸಿ ನಿಜವನ್ನು ಧ್ಯಾನಿಸುವ ಹಂಬಲವಿದೆ ಎಂದು ವಾದಿಸಿದರು.

ಅವರ ಕವಿತೆ, ನಾಟಕಗಳಲ್ಲಿ ಈ ಮನುಷ್ಯನೊಳಗಿನ ದ್ವಿಧಾಭಾವ, ಸ್ವಂತದ ಹುಡುಕಾಟ ನಿರಂತರವಾಗಿದೆ. ಅವರ ಹೇಳತೇನ ಕೇಳ ಕವಿತೆ, ಋಷ್ಯಶೃಂಗ, ನಾರ್ಸಿಸಸ್ ಇತ್ತೀಚಿನ ಸಿರಿಸಂಪಿಗೆ ನಾಟಕಗಳಲ್ಲಿ ಕೂಡ ವ್ಯಕ್ತಿತ್ವವು ಸೀಳಿಕೊಳ್ಳುವ ಬಗೆಯನ್ನು ಕುರಿತು ಮಾತನಾಡುತ್ತಾರೆ. ಅವರ ಸಾಹಿತ್ಯ ರಚನೆಗೆ ಅಲ್ಲಮಪ್ರಭು, ಏಟ್ಸ್ ಕವಿ ಹಾಗೂ ಸ್ಪಾನಿಷ್ ನಾಟಕಕಾರ ಲೋರ್ಕಾನ ಪ್ರಭಾವ ಬಹಳವಾಗಿದೆ. ಚಂದ್ರಶೇಖರ ಕಂಬಾರರು ಎಲ್ಲ ಪ್ರಭಾವಗಳ ಆಚೆಗೂ ಅನನ್ಯತೆಯನ್ನು ಸಾಧಿಸಿದ ಸಾಹಿತಿ; ಕಲಾವಿದ.

ನಾಟಕ ಸಾಹಿತ್ಯದಲ್ಲಿ ಕಂಬಾರರ ಕೊಡುಗೆ ವಿಶಿಷ್ಟ. ಇವು ರಂಗಭೂಮಿಯಲ್ಲಿ ಹೊಸ ಸಂಚಲನವನ್ನೇ ಹುಟ್ಟಿಸಿದವು. ಬೆಂಬತ್ತಿದ ಕಣ್ಣು (1961), ನಾರ್ಸಿಸಸ್ (1969), ಋಷ್ಯಶೃಂಗ (1970), ಜೋಕುಮಾರಸ್ವಾಮಿ (1972), ಚಾಳೇಶ (1973), ಸಂಗ್ಯಾಬಾಳ್ಯ ಅನಬೇಕೊ ನಾಡೊಳಗ (1975), ಕಿಟ್ಟಿಯ ಕಥೆ (1974) ಜೈಸಿದ ನಾಯಕ (1075), ಅಲಿಬಾಬಾ (1980), ಕಾಡುಕುದುರೆ (1976), ನಾಯಿಕಥೆ (1976), ಖರೋಖರ (1977), ಮತಾಂತರ (1974), ಹರಕೆಯ ಕುರಿ (1953), ನಾಟಕಗಳ ಸಂಗ್ರಹ ಕಂಬಾರರ ನಾಟಕಗಳು (1984), ಸಾಂಬಶಿವ ಪ್ರಹಸನ (1987), ಸಿರಿಸಂಪಿಗೆ (1980), ಹುಲಿಯ ನೆರಳು (1990), ಭೋಳೆ ಶಂಕರ (1991), ಪುಷ್ಪರಾಣಿ (1990), ತುಕ್ರನ ಕನಸು (1989), ಮಹಾಮಾಯಿ (1999) ನೆಲಸಂಪಿಗೆ (2004), ರಾಕ್ಸ್ ಆಫ್ ಹಂಪಿ (2004) ಪ್ರಕಟವಾಗಿರುವ ನಾಟಕ ಕೃತಿಗಳು. ಇವು ರಚಿತವಾಗಿ ರಂಗಪ್ರಯೋಗವಾಗಿ ಕಾಲಕ್ಕೂ ಪ್ರಕಟವಾದ ಕಾಲಕ್ಕೂ ವ್ಯತ್ಯಾಸವಿದೆ.

ಇವುಗಳಲ್ಲಿ ಋಷ್ಯಶೃಂಗ, ಕಾಡುಕುದುರೆ, ನಾಯಿಕಥೆ (ಸಂಗೀತ), ಹರಕೆಯ ಕುರಿ, ಹುಲಿಯ ನೆರಳು, ಪುಷ್ಪರಾಣಿ ಚಲನಚಿತ್ರ ಮಾಧ್ಯಮಕ್ಕೂ ಹೋಗಿ ಪ್ರಶಸ್ತಿ ಪಡೆದಿವೆ.

ಜೋಕುಮಾರಸ್ವಾಮಿ ನಾಟಕವು ಇಂಗ್ಲಿಷ್, ಮರಾಠಿ, ಹಿಂದಿ, ತೆಲುಗು, ತಮಿಳು, ಪಂಜಾಬಿ, ಕೊಂಕಣಿ, ಮೊದಲಾದ ಭಾಷೆಗಳಿಗೆ ಅನುವಾದವಾಗಿದೆ. ಚಾಳೇಶ ನಾಟಕವು ಹಿಂದಿಗೆ ಭಾಷಾಂತರಗೊಂಡಿದೆ. ಜೈಸಿದ ನಾಯಕ ನಾಟಕವು ಹಿಂದಿ, ಇಂಗ್ಲಿಷ್ ಭಾಷೆಗೆ ಭಾಷಾಂತರವಾಗಿದೆ. ಅಲಿಬಾಬಾ ಮಕ್ಕಳ ನಾಟಕವು ಇಂಗ್ಲಿಷ್, ಹಿಂದಿಯಲ್ಲಿ ಅನುವಾದವಾಗಿದೆ.

ಸಾಂಬಶಿವ ಪ್ರಹಸನ (ವಿಡಂಬನೆ) ಹರಕೆಯ ಕುರಿ ನಾಟಕಗಳು ಹಿಂದಿ ಹಾಗೂ ಇಂಗ್ಲಿಷ್‍ಗೆ ಭಾಷಾಂತರವಾಗಿವೆ. ಸಿರಿಸಂಪಿಗೆ ನಾಟಕವು ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಬಹುತೇಕ ಎಲ್ಲ ಭಾರತೀಯ ಭಾಷೆಗಳಿಗೂ ಅನುವಾದವಾಗಿದೆ ಮತ್ತು ಈ ನಾಟಕದ ತಮಿಳು, ರಾಜಾಸ್ತಾನಿ, ಹಿಂದಿ, ಮರಾಠಿ, ಅನುವಾದಿತ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ.

ಹುಲಿಯ ನೆರಳು ನಾಟಕವು ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದಗೊಂಡಿದೆ. ತುಕ್ರನ ಕನಸು ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ. ಮಹಾಮಾಯಿ ನಾಟಕವು ಇಂಗ್ಲಿಷ್ ಹಾಗೂ ಹಿಂದಿಗೆ ಅನುವಾದವಾಗಿದೆ.

ಇವರ ಪ್ರಕಟಿತ ಗದ್ಯ ಕೃತಿಗಳಲ್ಲಿ ಅಣ್ಣ-ತಂಗಿ (1956), ಕರಿಮಾಯಿ (1975), ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ (1987), ಸಿಂಗಾರೆವ್ವಮತ್ತು ಅರಮನೆ (1982) ಕಾದಂಬರಿಗಳು ಮುಖ್ಯವಾದವು. ಕರಿಮಾಯಿ ಕಾದಂಬರಿ ಚಲನಚಿತ್ರವಾಗಿದೆ. ಮತ್ತು ಇದನ್ನು ಖ್ಯಾತ ರಂಗತಜ್ಞೆ ಬಿ.ಜಯಶ್ರೀ ಅವರು ರಂಗಭೂಮಿಗೆ ಅಳವಡಿಸಿ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಜಿ.ಕೆ. ಮಾಸ್ತರ ಪ್ರಣಯ ಪ್ರಸಂಗವು ದೂರದರ್ಶನಕ್ಕಾಗಿ ಚಿತ್ರತವಾಗಿತ್ತು. ಹಿಂದಿ ಭಾಷೆಗೆ ಅನುವಾದವಾಗಿದೆ. ಸಿಂಗಾರೆವ್ವ ಮತ್ತು ಅರಮನೆ ಚಲನಚಿತ್ರವಾಗಿ ಪ್ರಶಸ್ತಿ ಪಡೆದಿದೆ. ಏಕವ್ಯಕ್ತಿ ಪ್ರಸ್ತುತ್ತಿಗೆ ಅಳವಡಿಸಿಕೊಂಡು ಲಕ್ಷ್ಮೀ ಚಂದ್ರಶೇಖರ್ ಅವರು ಪ್ರದರ್ಶನ ನೀಡುತ್ತಿದ್ದಾರೆ. ಈ ರಂಗ ಕೃತಿಯು ಇಂಗ್ಲಿಷ್‍ಗೂ ಅನುವಾದಗೊಂಡಿದೆ. ಕಾದಂಬರಿಯು ಹಿಂದಿ, ಮಲೆಯಾಳ ಭಾಷೆಗಳಿಗೆ ಅನುವಾದಗೊಂಡಿದೆ.

ಕವಿತಾ ಸಂಕಲನಗಳಲ್ಲಿ ಕ್ರಮವಾಗಿ ಮುಗುಳು (1958), ಹೇಳತೇನ ಕೇಳ (1964), ತಕರಾರಿನವರು (1971), ಸಾವಿರದ ನೆರಳು (1979), ಆಯ್ದ ಕವನಗಳು (1980), ಬೆಳ್ಳಿ ಮೀನು (1980), ಅಕ್ಕಕ್ಕು ಹಾಡುಗಳೆ (1993), ಈವರೆಗಿನ ಹೇಳತನ ಕೇಳ (1003) ಪ್ರಕಟವಾಗಿವೆ. ಕಂಬಾರರು 1996ರಲ್ಲಿ ಪ್ರಕಟಿಸಿದ ಚಕೋರಿಯನ್ನು ಮಹಾಕಾವ್ಯ ಎನ್ನಲಾಗಿದೆ. ಈ ಕೃತಿಯನ್ನು ರಂಗಭೂಮಿಗೂ ಅಳವಡಿಸಿ ಪ್ರದರ್ಶಿಸಲಾಗಿತ್ತು. ಚಕೋರಿಯು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದ್ದು, ಅದನ್ನು ಪೆಂಗ್ವಿನ್ ಸಂಸ್ಥೆಯು ಪ್ರಕಟಿಸಿದೆ.

ಚಂದ್ರಶೇಖರ ಕಂಬಾರರ ಪ್ರೌಢ ಪ್ರಬಂಧ ಉತ್ತರ ಕರ್ನಾಟಕದ ಜನಪದ ರಂಗಭೂಮಿಯ 1965ರಲ್ಲಿ ಪ್ರಕಟವಾಯಿತು. ಇದಲ್ಲದೆ ಕಂಬಾರರು ಬಿಡಿ ಬಿಡಿಯಾಗಿ ರಚಿಸಿದ ಸಂಶೋಧನ ಪ್ರಬಂಧಗಳು ಪ್ರಕಟವಾಗಿವೆ. ಅವುಗಳಲ್ಲಿ, ಸಾಂಗ್ಯಾಬಾಳ್ಯಾ (1966), ಬಣ್ಣಿಸಿ ಹಾಡವ್ವ ನನ್ನ ಬಳಗಾ (1968), ಬಯಲಾಟಗಳು (1973), ಮತಾಡೋ ಲಿಂಗವೆ (1973), ನಮ್ಮ ಜಾನಪದ (1980), ಬಂದಿರೆ ನನ್ನ ಜಡೆಯೊಳಗೆ (1981), ಬೇಡರ ಹುಡುಗ ಮತ್ತು ಗಿಳಿ (1989), ಲಕ್ಷಾಪತಿ ರಾಜನ ಕಥೆ (1981), ಕಾಸಿಗೊಂದು ಸೇರು (1989), ನೆಲದ ಮರೆಯ ನಿದಾನ (1993), ಬೃಹದ್ದೇಶಿಯ ಚಿಂತನ (2001) ಮತ್ತು ಕಂಬಾರರು ಸಿದ್ಧಪಡಿಸಿ 1984ರಲ್ಲಿ ಪ್ರಕಟವಾದ ಕನ್ನಡ ಜಾನಪದ ನಿಘಂಟು ಹಾಗೂ ರಾಷ್ಟ್ರೀಯ ನಾಟಕ ಶಾಲೆಗಾಗಿ ಸಂಪಾದಿಸಿ 2000ನೇ ವರ್ಷದಲ್ಲಿ ಪ್ರಕಟವಾದ ಆಧುನಿಕ ಭಾರತೀಯ ನಾಟಕಗಳು ಮುಖ್ಯವಾದ ಕೃತಿಗಳು.

ಚಂದ್ರಶೇಖರ ಕಂಬಾರರು ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿವಿಧ ಹಂತಗಳಲ್ಲಿದ್ದು ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ (1980-83), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (1980-83), ಮೈಸೂರಿನಲ್ಲಿರುವ ಕರ್ನಾಟಕದ ರೆಪರ್ಟರಿ ರಂಗಾಯಣ (1987-91), ಕೇಂದ್ರ ಸಾಹಿತ್ಯ ಅಕಾಡೆಮಿ, 1992-98 ಕೇಂದ್ರ ಸಂಗೀತ ನಾಟಕ ಅಕಾಡೆಮಿ (1992-96 ಮತ್ತು 1998) ರಾಷ್ಟ್ರೀಯ ರಂಗಶಾಲೆ (1995-96), ಈ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.

ಪ್ರತಿಷ್ಠಿತ ಫೋರ್ಡ್ ಫೌಂಡೇಷನ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ (1998), ಭೂಪಾಲದ ಭಾರತ ಭವನಗಳಲ್ಲಿ ರಂಗತಜ್ಞರ ಸಮಿತಿಗಳಲ್ಲಿ ಸಕ್ರಿಯ ಸದಸ್ಯರಾಗಿದ್ದರು.

ದೆಹಲಿಯ ರಾಷ್ಟ್ರೀಯ ರಂಗಶಾಲೆಯ ಉಪಾಧ್ಯಕ್ಷರಾಗಿ, ಅನಂತರ ಅಧ್ಯಕ್ಷರಾಗಿ (1996-2000) ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು (1983-87). 2004ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಸದಸ್ಯರಾಗಿ (ಎಂ.ಎಲ್.ಸಿ.) ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ, ನಾಟಕ ಕೃತಿಗಳೂ ಹಲವು ಪ್ರಶಸ್ತಿಗಳನ್ನು ಪಡೆದಿವೆ. ಅವುಗಳಲ್ಲಿ ಮುಖ್ಯವಾಗಿ ಕೆಲವನ್ನು ಹೀಗೆ ಗುರುತಿಸಬಹುದು: ಭಾರತದಲ್ಲೇ ಅತ್ಯುತ್ತಮ ಕೃತಿಯೆಂದು 1975ರಲ್ಲಿ ಇವರ ಜೋಕುಮಾರಸ್ವಾಮಿ ನಾಟಕ ಕೃತಿಯನ್ನು ಆಯ್ಕೆಮಾಡಿ ನೀಡಿದ ನಾಟ್ಯಸಂಘದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಮತ್ತು ಇವರ ಜೈಸಿದ ನಾಯಕ ನಾಟಕ ಕೃತಿಯನ್ನು ವರ್ಷದ ಶ್ರೇಷ್ಠ ಕೃತಿಯೆಂದು ಮಾನ್ಯ ಮಾಡಿ ವರ್ಧಮಾನ ಪ್ರಶಸ್ತಿ ನೀಡಲಾಯಿತು. ಕೇರಳ ಕುಮರನ್ ಆಶಾನ್ ಪ್ರಶಸ್ತಿ ಸಮಿತಿಯು ಇವರ ಸಾವಿರದ ನೆರಳು ಕವಿತಾ ಸಂಕಲನವನ್ನು ಕರ್ನಾಟಕದ ಅತ್ಯುತ್ತಮ ಕೃತಿಯೆಂದು ಗುರುತಿಸಿ ಆಶಾನ್ ಪ್ರಶಸ್ತಿ ನೀಡಿ ಗೌರವಿಸಿತು. ಕೇಂದ್ರ ಸಾಹಿತ್ಯ ಅಕಾಡೆಮಿಯು ಕಂಬಾರರ ಸಿರಿಸಂಪಿಗೆ ನಾಟಕಕ್ಕೆ 1991ನೇ ಸಾಲಿನ ವರ್ಷದ ಶ್ರೇಷ್ಠ ಕೃತಿಯೆಂದು ಆಯ್ಕೆಮಾಡಿ ಪ್ರಶಸ್ತಿ ನೀಡಿ ಗೌರವಿಸಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು 5 ಬಾರಿ ಶ್ರೇಷ್ಠಕೃತಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಂಬಾರರ ತಕರಾರಿನವರು ಕವನ ಸಂಕಲನಕ್ಕೆ (1971), ಜೋಕುಮಾರಸ್ವಾಮಿ ನಾಟಕ ಕೃತಿ (1972), ಜೈಸಿದ ನಾಯಕ ನಾಟಕ ಕೃತಿ (1975), ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿ (1988) ಮತ್ತು ಬೇಡರ ಹುಡುಗ ಮತ್ತು ಗಿಳಿ ಎಂಬ ಸಂಶೋಧನ ಕೃತಿ (1989) ಇವು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿಗಳು.

ಡಾ.ಚಂದ್ರಶೇಖರ ಕಂಬಾರರಿಗೆ ಹಲವು ಸಂಸ್ಥೆಗಳು ಅವರ ರಂಗಭೂಮಿ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿಯ ಸೇವೆಯನ್ನು ಗುರುತಿಸಿ ಗೌರವಿಸಿವೆ. ಅವುಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಸಮಾರಂಭದಲ್ಲಿ (1975) ಸಂದ ಗೌರವ, ಕಲ್ಕತ್ತೆಯ ನಂದೀಕರ್ ಪ್ರಶಸ್ತಿ (1987), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1987), ರಾಜ್ಯ ಸರ್ಕಾರವು ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1988), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1989), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1983), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (1993), ಮಾಸ್ತಿ ಪ್ರಶಸ್ತಿ (1997), ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ (2001), ಕಬೀರ್ ಸಮ್ಮಾನ್ (2002), ರಾಜ್ಯ ಸರ್ಕಾರವು ಸಾಹಿತ್ಯ ಕ್ಷೇತ್ರಕ್ಕೆ ಕೊಡುವ ಅತ್ಯುನ್ನತ ಪ್ರಶಸ್ತಿಯಾದ ಪಂಪ ಪ್ರಶಸ್ತಿ (2004) ಹಾಗೂ ಆಂಧ್ರ ಪ್ರದೇಶದ ಜೋಷುವಾ ಸಾಹಿತ್ಯ ಪುರಸ್ಕಾರ (2005)ಗಳು ಮತ್ತು ಕಂಬಾರರ ನಿರಂತರ ರಂಗಸೇವೆಗಾಗಿ ಮಂಡ್ಯದ ಪ್ರತಿಷ್ಠಿತ ಶಂಕರೇಗೌಡ ಪ್ರಶಸ್ತಿಯನ್ನು 1982ರಲ್ಲಿ ನೀಡಿ ಗೌರವಿಸಿರುವುದು ಮುಖ್ಯವಾಗಿ ಹೆಸರಿಸುವಂಥವು.

ಡಾ.ಕಂಬಾರರು ಚಲನಚಿತ್ರ, ಕಿರುತೆರೆ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಲವಾರು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕಿರುತೆರೆಯ ಧಾರಾವಾಹಿಗಳು, ಚಲನಚಿತ್ರಗಳ ಕಿರುಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಇವರು ತಮ್ಮ ಕಾಡುಕುದುರೆ ನಾಟಕವನ್ನು 1987ರಲ್ಲಿ ಚಲನಚಿತ್ರ ಮಾಧ್ಯಮಕ್ಕೆ ನಿರ್ದೇಶಿಸಿದರು. ಚಿತ್ರವು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತ್ತು. ಚಿತ್ರವು ಹಲವು ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿತ್ತು. ಪ್ರಪ್ರಥಮ ಬಾರಿಗೆ ಈ ಚಿತ್ರದಲ್ಲಿ ಕಂಬಾರರ ಸಂಗೀತ ನಿರ್ದೇಶನದಲ್ಲಿ ಹಾಡಿದ ಗಾಯಕರಿಗೆ ರಾಷ್ಟ್ರಪ್ರಶಸ್ತಿ ಲಭಿಸಿ ಇತಿಹಾಸ ನಿರ್ಮಿಸಿತು. ಇವರು ತಮ್ಮ ಮತ್ತೊಂದು ನಾಟಕ ನಾಯಿಕತೆಯನ್ನು ಸಂಗೀತಾ ಎಂಬ ಚಲನಚಿತ್ರವಾಗಿ ನಿರ್ದೇಶಿಸಿದರು. ಇದಕ್ಕೆ 1981ರಲ್ಲಿ ತೃತೀಯ ಅತ್ಯುತ್ತಮ ಚಿತ್ರವೆಂದು ರಾಜ್ಯ ಸರ್ಕಾರವು ಪ್ರಶಸ್ತಿ ನೀಡಿತ್ತು. ಚಂದ್ರಶೇಖರ ಕಂಬಾರರು ಇತರರ ಚಿತ್ರಗಳಿಗೂ ಸಂಗೀತ ನಿರ್ದೇಶನ, ಸಾಹಿತ್ಯ ರಚನೆ ಮಾಡಿದ್ದಾರೆ. ಅವರಿಗೆ ಅತ್ಯುತ್ತಮ ಸಾಹಿತ್ಯ, ಸಂಭಾಷಣೆಗಾಗಿ ಪ್ರಶಸ್ತಿಗಳು ಬಂದಿವೆ. ಅವರು ಅತ್ಯುತ್ತಮ ಸಂಗೀತ ನಿರ್ದೇಶಕನಾಗಿ, ಚಿತ್ರ ನಿರ್ದೇಶಕನಾಗಿಯೂ ಪ್ರಶಸ್ತಿ ಪಡೆದಿದ್ದಾರೆ. (ಡಾ. ವಿಜಯಾ)