ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚದುರಂಗ 1

ವಿಕಿಸೋರ್ಸ್ದಿಂದ

ಚದುರಂಗ (1916-98). ಚದುರಂಗ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕನ್ನಡ ಸಾಹಿತಿ, ಸಣ್ಣಕಥೆಗಾರ, ಕಾದಂಬರಿಕಾರ, ನಾಟಕಕಾರ. ಇವರ ನಿಜನಾಮ ಎಂ.ಎಸ್. ಸುಬ್ರಹ್ಮಣ್ಯರಾಜೇ ಅರಸ್. ಇವರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಲ್ಲಹಳ್ಳಿಯಲ್ಲಿ 1916 ಜನವರಿ 1ರಂದು ಜನಿಸಿದರು. ಜಯನೃಪಕಾವ್ಯ, ಸೂಪಶಾಸ್ತ್ರ - ಮುಂತಾದ ಕೃತಿಗಳನ್ನು ರಚಿಸಿದ ಮಂಗರಸ ಕವಿ ಚದುರಂಗರ ವಂಶದ ಪೂರ್ವಿಕರಲ್ಲಿ ಒಬ್ಬನೆಂದು ಹೇಳಲಾಗುತ್ತದೆ. ಇವರ ಹಿರಿಯ ಅಣ್ಣನವರಿಗೆ ಮೈಸೂರು ರಾಜಮನೆತನದ ಸಂಬಂಧವಿದ್ದದ್ದರಿಂದ ಇವರಿಗೆ ಸಹಜವಾಗಿಯೇ ಅರಮನೆಯ ಸಂಪರ್ಕ ಒದಗಿತ್ತು. ಮೈಸೂರಿನ ರಾಯಲ್‍ಶಾಲೆ, ಬೆಂಗಳೂರಿನ ಇಂಟರ್‍ಮೀಡಿಯಟ್ ಕಾಲೇಜು, ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದ ಇವರು ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಆದರೆ ಶಿಕ್ಷಣವನ್ನು ಪೂರ್ಣಗೊಳಿಸಲಿಲ್ಲ.

ಸ್ವಾತಂತ್ರ್ಯ ಚಳವಳಿ, ಗಾಂದೀವಾದ, ಮಾಕ್ರ್ಸ್‍ವಾದ, ಎಂ.ಎನ್. ರಾಯ್ ವಿಚಾರಧಾರೆ, ಡೋಂಗಿ ಬಾಬಾಗಳ ವಿರುದ್ಧದ ಚಳವಳಿಗಳು ಮುಂತಾದ ಸಂಘಟನೆಗಳೂ ತತ್ವಗಳೂ ಇವರ ಮೇಲೆ ತುಂಬ ಪ್ರಭಾವ ಬೀರಿದವು. ಇವರು ಖಾದಿ ಪ್ರೇಮಿಯಾಗಿ ಅರಮನೆಯ ಪರಿಸರದ ಅಸಮಾಧಾನಕ್ಕೂ ಕಾರಣರಾದರು. ಸಂಪ್ರದಾಯಕ್ಕೆ ವಿರುದ್ಧವಾಗಿ ರೀತಿಯಲ್ಲಿ ತಾವು ಮೆಚ್ಚಿದವರನ್ನು ವಿವಾಹವಾದರು. ಮೈಸೂರನ್ನು ಬಿಟ್ಟು ಸ್ವಂತಸ್ಥಳ ಕಲ್ಲಹಳ್ಳಿಯನ್ನು ಸೇರಿ (1952) ಕೃಷಿಕ ಜೀವನವನ್ನು ಆರಂಬಿಸಿದರು.

ಬಾಲ್ಯದ ದಿನಗಳಲ್ಲಿ ಅರಮನೆಯ ಮಹಿಳಾ ಕಾರ್ಯಕರ್ತೆಯರು ಹೇಳುತ್ತಿದ್ದ ಕಥೆಗಳನ್ನು ಆಲಿಸುತ್ತಿದ್ದ ಇವರಿಗೆ ಕಥೆಗಾರಿಕೆ ಸಹಜವಾಗಿಯೇ ಸಿದ್ಧಿಸಿತು. ಇವರ ತಾಯಿಯವರೂ ಇವರಿಗೆ ಎಷ್ಟೋ ಕಥೆಗಳನ್ನು ಹೇಳುತ್ತಿದ್ದರು. ಚದುರಂಗರು ಮೊದಮೊದಲು ಕವಿತೆಗಳನ್ನು ಬರೆದರು. ಕಾಲೇಜು ಪತ್ರಿಕೆಗಳಲ್ಲಿ ಇವರ ಕವಿತೆಗಳು ಬೆಳಕು ಕಂಡವು. ನವೋದಯದ ಪ್ರಸಿದ್ಧ ಬರೆಹಗಾರರಾದ ಮಾಸ್ತಿವೆಂಕಟೇಶ ಅಯ್ಯಂಗಾರ್ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಭಾವದಿಂದಾಗಿ ಇವರ ಮನಸ್ಸು ಗದ್ಯದತ್ತ ತಿರುಗಿತು. ಗ್ರಾಮೀಣ ಪರಿಸರದ ಬದುಕಿನ ಬಗ್ಗೆ ವಿಶೇಷ ಒಲವು ಉಂಟಾಯಿತು. ಮುಖ್ಯವಾಗಿ ಟಾಲ್‍ಸ್ಟಾಯ್, ಮ್ಯಾಕ್ಸಿಂಗಾರ್ಕಿ, ದಾಸ್ತೋವಸ್ಕಿ, ಬಾಲ್ಜಾಕ್, ಆಲ್ಬರ್ಟ್ ಕಾಮೂ ಮೊದಲಾದ ಬರೆಹಗಾರರೂ ಪ್ರಭಾವ ಬೀರಿದರು.

ಬೆಂಗಳೂರಿನ `ಛಾಯಾ ಪತ್ರಿಕೆಯಲ್ಲಿ ಕಥೆಗಳನ್ನು ಪ್ರಕಟಿಸುವುದರ ಮೂಲಕ ಚದುರಂಗರು ಕನ್ನಡಿಗರ ಗಮನ ಸೆಳೆದರು. ಸ್ವಪ್ನಸುಂದರಿ ಕಥಾಸಂಕಲನ 1948ರಲ್ಲಿ ಪ್ರಕಟವಾಯಿತು. ಶವದಮನೆ (1950), ಇಣುಕುನೋಟ (1950), ಬಂಗಾರದ ಗೆಜ್ಜೆ (1951), ಮೀನಿನ ಹೆಜ್ಜೆ (1958), ಕ್ವಾಟೆ (1992), ಮೃಗಯಾ (1998), ಬಣ್ಣದ ಬೊಂಬೆ - ಇವು ಇವರ ಇತರ ಕಥಾ ಸಂಕಲನಗಳು. ನವೋದಯದಿಂದ ಹಿಡಿದು ದಲಿತ ಬಂಡಾಯದವರೆಗಿನ ಸಾಹಿತ್ಯದ ಎಲ್ಲ ಪಂಥಗಳನ್ನೂ ಚಳವಳಿಗಳನ್ನೂ ಚದುರಂಗರು ಕಂಡಿದ್ದರಾದರೂ ಇವರು ಯಾವೊಂದುನಿರ್ದಿಷ್ಟ ಪಂಥಕ್ಕೆ ಕಟ್ಟುಬೀಳಲಿಲ್ಲ. ಆ ಎಲ್ಲ ಪ್ರಭಾವಗಳನ್ನೂ ಜೀರ್ಣಿಸಿ ಕೊಂಡರು. `ಶವದ ಮನೆ ಇವರ ಅತ್ಯಂತ ಜನಪ್ರಿಯ ಕಥೆಗಳಲ್ಲಿ ಒಂದು. ಆಸ್ಪತ್ರೆಗಳು ಬಡವರ ಪಾಲಿಗೆ ಶವದ ಮನೆಗಳಾಗಿಬಿಟ್ಟಿರುವುದರಿಂದ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂಬ ನಿರ್ಧಾರಕ್ಕೆ ಬರುವಂತೆ ಪರಿಸ್ಥಿತಿ ಉಂಟಾಗುತ್ತದೆ. ಹಾಸ್ಯದ ಹೊನಲಿನಲ್ಲಿ ತೀವ್ರ ವಿಡಂಬನೆ ಇಲ್ಲಿ ಸಾಧ್ಯವಾಗಿದೆ. `ನಾಲ್ಕು ಮೊಳಭೂಮಿ ಕಥೆಯೂ ಕಥೆಯೊಳಗೊಂದು ಕಥೆಯ ತಂತ್ರದಿಂದ ಆಕರ್ಷಕವಾಗಿದೆ.

ಕಾದಂಬರಿ ಕ್ಷೇತ್ರದಲ್ಲೂ ಇವರ ಸಾಧನೆ ಗಣನೀಯವಾದುದು. ಸರ್ವಮಂಗಳ (1950), ಉಯ್ಯಾಲೆ (1960), ವೈಶಾಖ (1981), ಹೆಜ್ಜಾಲ (1998) - ಈ ಕಾದಂಬರಿಗಳು ಇವರಿಗೆ ಕೀರ್ತಿಯನ್ನು ತಂದುಕೊಟ್ಟವು. ಮಾನವೀಯ ಸಂಬಂಧದ ವಸ್ತುವಿನಿಂದಾಗಿ ಪ್ರಾದೇಶಿಕ ಹಿನ್ನೆಲೆಯನ್ನೊಳಗೊಂಡ `ಸರ್ವಮಂಗಳ ಹೊಸಅಲೆಯ ಕಾದಂಬರಿ ಎನಿಸಿ ಅದ್ಭುತ ಪ್ರಚಾರ ಪಡೆದುಕೊಂಡಿತು. ಇದರಲ್ಲಿನ ನಾಯಕಿ ಸರ್ವಮಂಗಳ ತನ್ನ ಇಚ್ಫೆಗೆ ವಿರುದ್ಧವಾಗಿ ವಿವಾಹವಾದ ಮುಗ್ಧ ಗಂಡನ ಅಬಿವೃದ್ಧಿಯನ್ನೂ ಬಯಸುತ್ತಾಳೆ. ಅದೇ ರೀತಿಯಲ್ಲಿ ತಾನು ಪ್ರೀತಿಸಿದ ನಟರಾಜನನ್ನು ವಿವಾಹವಾದ ದುರ್ಗಿಯ ಶ್ರೇಯಸ್ಸನ್ನೂ ಬಯಸುವುದರಿಂದ ಅವಳ ಪಾತ್ರ ಉದಾತ್ತವಾಗಿ ಕಾಣಿಸುತ್ತದೆ. ಜೊತೆಗೆ ಅವಳ ಸ್ವಭಾವ ಉಳಿದೆಲ್ಲ ಪಾತ್ರಗಳ ಮೇಲೂ ಬೆಳಕುಚೆಲ್ಲುತ್ತದೆ. ಕೇಂದ್ರ ಪಾತ್ರವಾದ ಸರ್ವಮಂಗಳೆಯ ಉದಾತ್ತ ವ್ಯಕ್ತಿತ್ವವನ್ನು ಎತ್ತಿಹಿಡಿಯುವ ಈ ಕಾದಂಬರಿಯಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತಿತರ ಹೋರಾಟಗಳ ನಿರೂಪಣೆಯೂ ಇದೆ. ಅಂತಿಮವಾಗಿ ಸರ್ವಮಂಗಳೆ ಮತ್ತು ನಟರಾಜನ ಬದುಕಿನ ದುರಂತವನ್ನು ನಿರೂಪಿಸುವುದೇ ಕಾದಂಬರಿಯ ಮುಖ್ಯ ಉದ್ದೇಶ ಎನ್ನಬಹುದು.

ರವೀಂದ್ರನಾಥ ಠಾಕೂರರ `ಚಾರುಲತಾ ಕಾದಂಬರಿಯನ್ನು ಹೋಲುವ 'ಉಯ್ಯಾಲೆ' ಕನ್ನಡದ ಶ್ರೇಷವಿ ಕಾದಂಬರಿಗಳಲ್ಲಿ ಒಂದು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಗಂಡು ಹೆಣ್ಣುಗಳ ಸೂಕ್ಷ್ಮ ಚಿತ್ರಣವಾಗಿರುವ ಉಯ್ಯಾಲೆ ಎಂಬ ಶೀರ್ಷಿಕೆ ಮಾನಸಿಕ ತುಯ್ದಾಟದ ಸಂಕೇತವಾಗಿದೆ. `ವೈಶಾಖ' ಹೆಚ್ಚು ವಿಮರ್ಶೆಗೆ ಗುರಿಯಾದ ಕಾದಂಬರಿ. ಹೊಲೆಯರ ಲಕ್ಕ ಮತ್ತು ವೈದಿಕರ ರುಕ್ಮಿಣಿ - ಇವರ ಮೂಲಕ ಸಾಗುವ ಕಾದಂಬರಿಯ ಕಥೆ ವಿಶಿಷ್ಟ ತಂತ್ರದಿಂದ ಕೂಡಿದುದಾಗಿದೆ. ವಸ್ತುವನ್ನು ನಿರ್ವಹಿಸುವಲ್ಲಿ, ನಿರೂಪಿಸುವಲ್ಲಿ ವಿಶಿಷ್ಟವೆನಿಸುವ ಈ ಕಾದಂಬರಿ ಭಾಷಾದೃಷ್ಟಿಯಿಂದಲೂ ಗಣನೀಯವಾದುದು.

ಹೆಜ್ಜಾಲ ಕಾದಂಬರಿಯಲ್ಲಿ ತಂದೆಯಿಲ್ಲದ ಕಾಲೂರನ ಹುಟ್ಟಿನ ಅನ್ವೇಷಣೆ ನಡೆಯುತ್ತಿದೆಯೋ ಎಂಬಂತೆ ಕಥೆಯ ಘಟನಾವಳಿಗಳು ಹರಡಿಕೊಂಡಿವೆ. ಈ ಅನ್ವೇಷಣೆ ಲೇಖಕರ ಜೀವಪರ ದೃಷ್ಟಿಯ ಸಂಕೇತವಾಗಿದೆ. ಇದು ಚದುರಂಗರ ಕೊನೆಯ ಕಾದಂಬರಿ. ಇದರಲ್ಲಿ ಇವರ ಅನುಭವಗಳು ಪರಿಪಕ್ವಗೊಂಡ ಸ್ಥಿತಿಯನ್ನು ಕಾಣಲು ಸಾಧ್ಯವಿದೆ. ಮಾದೇವಮ್ಮ, ಪುಟ್ಟೀರಿ ಮೊದಲಾದ ಪಾತ್ರಗಳ ಮೂಲಕ ವ್ಯವಸ್ಥೆಯ ಕ್ರೌರ್ಯ ಮತ್ತು ಅಹಂಕಾರವನ್ನು ಪ್ರಶ್ನಿಸುವ ಕಲಾತ್ಮಕತೆಯ ಸೃಜನಶೀಲತೆ ಕಾದಂಬರಿಯ ಆಂತರ್ಯದಲ್ಲಿದೆ. ಮಾಯಮ್ಮ, ಅಜ್ಜಮ್ಮ, ಕಾಲೂರ ಯಾವ ಪಾತ್ರವೂ ಕಾಲ್ಪನಿಕ ಎನಿಸುವುದಿಲ್ಲ. ಅಜ್ಜಮ್ಮನ ಮರಣ, ನಾಯಿಯ ಬಗೆಗೆ ಕಾಲೂರ ತೋರುವ ಪ್ರೀತಿ, ಹಾವಿನಿಂದ ಕಚ್ಚಿಸಿಕೊಂಡ ಮಾದೇವಮ್ಮನನ್ನು ನಾಟಿಔಷದಿಯಿಂದ ಗುಣಪಡಿಸುವುದು - ಅಖಂಡ ಜೀವನ ಪ್ರೀತಿಯ ಅಬಿವ್ಯಕ್ತಿ ಮೂಡಿಸುವಂಥವು. ಗ್ರಾಮ ಜೀವನದ ಇಂಥ ದಟ್ಟ ಅನುಭವಗಳು ಕಲೆಯಾಗಿ ಅರಳಿರುವುದರಿಂದ ಕಾದಂಬರಿಗೆ ವಿಶಿಷ್ಟಸ್ಥಾನ ಸಂದಿದೆ.

ಕುಮಾರರಾಮ (1966), ಇಲಿಬೋನು (1972), ಬಿಂಬ (1990) - ಈ ನಾಟಕಗಳನ್ನು ಬರೆಯುವುದರ ಮೂಲಕ ಚದುರಂಗರು ನಾಟಕಕಾರರೆನಿಸಿದರು. ಇಲಿಬೋನು ಒಂದು ಅಸಂಗತ ನಾಟಕ. ಚದುರಂಗರು ಉತ್ತರ ರಾಮಾಯಣದ ವಸ್ತುವನ್ನು ಪ್ರತ್ಯೇಕ ನೆಲೆಯಲ್ಲಿ ಸೃಜಿಸುವ ಕೆಲಸವನ್ನು `ಬಿಂಬ ನಾಟಕದಲ್ಲಿ ಮಾಡಿದ್ದಾರೆ. 1951ರಲ್ಲಿ ಪ್ರಕಟವಾದ `ನನ್ನ ರಸಿಕ ಚದುರಂಗರ ಗದ್ಯಗೀತೆಯಾದರೆ, ಅಲೆಗಳು (1981) ಹನಿಗವನಗಳ ಸಂಗ್ರಹವಾಗಿದೆ. ಚದುರಂಗರಿಗೆ ಚಲನಚಿತ್ರ ಕ್ಷೇತ್ರದಲ್ಲಿಯೂ ಪ್ರವೇಶವಿತ್ತು. ಪುಣೆಯಲ್ಲಿ ಸಿನಿಮಾ ತಂತ್ರದ ಬಗ್ಗೆ ಅಧ್ಯಯನ ಮಾಡಿದ್ದರು. 1948ರಲ್ಲಿ ಸಿದ್ಧವಾದ `ಭಕ್ತಕುಂಬಾರ ಚಿತ್ರಕ್ಕೆ ಕಥಾಲೇಖಕರಾಗಿದ್ದರು. ವಿದೇಶಿ ಚಿತ್ರ ಸಂಸ್ಥೆ ಎಂ.ಜಿ.ಎಂ. ತಯಾರಿಸಿದ ಇಂಗ್ಲಿಷಿನ `ಮಾಯಾ ಚಿತ್ರದ ಸಹನಿರ್ದೇಶಕರಾಗಿದ್ದರು. ಇವರೆ ನಿರ್ಮಿಸಿದ `ಸರ್ವಮಂಗಳಾ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿತ್ತು (1967-68). `ಉಯ್ಯಾಲೆ ಚಿತ್ರಕ್ಕಾಗಿ ಇವರಿಗೆ ಉತ್ತಮ ಚಿತ್ರಕಥಾಲೇಖಕ ಪ್ರಶಸ್ತಿಯೂ ದೊರಕಿತು.

ಸಾಹಿತ್ಯಕ ಸಾಧನೆಗಾಗಿ ಇವರಿಗೆ ದೊರಕಿದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1978 ಮತ್ತು 1994), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1982, ವೈಶಾಖ ಕಾದಂಬರಿಗೆ), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -ಇವು ಮುಖ್ಯವಾದುವು. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ (1993). ಇವರು 63ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು (1994). ಇವರು 1998 ಅಕ್ಟೋಬರ್ 19ರಂದು ನಿಧನಹೊಂದಿದರು. (ಜಿ.ಆರ್.ಟಿ.)