ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚನ್ನಮ್ಮ, ಸರ್ವಶೀಲೆ
ಗೋಚರ
ಚನ್ನಮ್ಮ, ಸರ್ವಶೀಲೆ
ಹನ್ನೆರಡನೆಯ ಶತಮಾನದ ಕೊನೆಯ ಭಾಗದಲ್ಲಿ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕು ಕಳ್ಳೆಯದ ಬೆಟ್ಟದಲ್ಲಿ ವಾಸವಾಗಿದ್ದಳು ಎನ್ನಲಾದ ಒಬ್ಬ ಶಿವಶರಣೆ. ವೀರಶೈವಧರ್ಮದಲ್ಲಿ ಉಕ್ತವಾಗಿರುವ 63 ಶೀಲಗಳನ್ನು ಚಾಚೂ ತಪ್ಪದಂತೆ ಈಕೆ ಆಚರಿಸಿದುದರಿಂದ ಸರ್ವಶೀಲೆಯಾದಳು. ಕವಿ ಪಾಲ್ಕುರಿಕೆ ಸೋಮನಾಥ ಆಂಧ್ರದಿಂದ ಇಲ್ಲಿಗೆ ಬಂದು ಈಕೆಯ ಆಶೀರ್ವಾದಕ್ಕೆ ಪಾತ್ರನಾಗಿ ಈಕೆಯಿಂದ ಅನುಭವ ಬೋಧಿಕೆಯನ್ನು ಪಡೆದು ಕಳ್ಳೆಯದಲ್ಲೇ ಐಕ್ಯನಾದನೆಂದು ಪಾಲ್ಕುರಿಕೆ ಸೋಮೇಶ್ವರ ಪುರಾಣದಿಂದ ತಿಳಿದುಬರುತ್ತದೆ. ಈಕೆಯ ಸಮಾಧಿ ಮಾಗಡಿ ತಾಲ್ಲೂಕು ಗುಡೇಮಾರನಹಳ್ಳಿ ಹತ್ತಿರ ಎರಡು ಹಳ್ಳಗಳು ಕೂಡುವ ಸಂಗಮ ಸ್ಥಳದಲ್ಲಿದೆ. ಅದನ್ನು ಚನ್ನಮ್ಮನ ಮಂಟಪ ಎಂದು ಹೇಳುತ್ತಾರೆ. (ಬಿ.ಎಸ್.)