ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಲನಚಿತ್ರ

ವಿಕಿಸೋರ್ಸ್ದಿಂದ

ಚಲನಚಿತ್ರ ಆಧುನಿಕ ಅಭಿವ್ಯಕ್ತಿ ತಂತ್ರಗಳಲ್ಲಿ ಒಂದು (ಮೋಷನ್ ಪಿಕ್ಚರ್). ಪ್ರಾರಂಭದಲ್ಲಿ ಇದನ್ನು ಬಯೊಸ್ಕೋಪ್ ಎಂದೂ ಅನಂತರ ಸಿನಿಮಾ ಫಿಲ್ಮ್, ಪಿಕ್ಚರ್ ಎಂದೂ ಕರೆಯತೊಡಗಿದರು. ಮೊದಲಿಗೆ ಮೂಕಚಿತ್ರವಾಗಿ (ಸೈಲೆಂಟ್ ಪಿಕ್ಚರ್) ತೆರೆಕಂಡ ಚಲನಚಿತ್ರ ಕ್ರಮೇಣ ವಾಕ್‍ಚಿತ್ರವಾಗಿ (ಟಾಕಿ) ವರ್ಣರಂಜನೆ ಪಡೆದು ಹೇಗೆ ವೈವಿಧ್ಯಮಯವಾಗಿ ಬೆಳೆಯಿತು ಎಂಬ ವಿಷಯ ಇಲ್ಲಿ ಪ್ರಸ್ತಾಪಿಸಿದೆ. ಇಪ್ಪತ್ತನೆಯ ಶತಮಾನದ ಆದಿಯ ವರೆಗೂ ಪ್ರದರ್ಶನ ಉದ್ಯಮಗಳಲ್ಲಿ (ಷೋ ಬಿಸನೆಸ್) ಪ್ರಮುಖವೆನಿಸಿದ್ದ ನಾಟಕ, ಆಪೆರ ಮೊದಲಾದುವನ್ನು ಹಿನ್ನೆಲೆಗೆ ಸರಿಸಿ ಚಲನಚಿತ್ರ ಹೇಗೆ ಪ್ರಾಮುಖ್ಯಕ್ಕೆ ಬಂತು ಎಂಬ ವಿಷಯ ಆಶ್ಚರ್ಯ ಜನಕವೂ ಕುತೂಹಲಕಾರಿಯೂ ಆಗಿದೆ. ಪ್ರಸ್ತುತ ಲೇಖನದ ವಿನ್ಯಾಸ ಹೀಗಿದೆ: I ಚಲನಚಿತ್ರದ ಚರಿತ್ರೆ (ಂ) ಹುಟ್ಟು ಮತ್ತು ಮೊದಲ ದಿನಗಳು (ಃ) ಬೆಳವಣಿಗೆ 1914-18 (ಅ) ಬೆಳವಣಿಗೆ 1919-29 (ಆ) ವಾಕ್‍ಚಿತ್ರಗಳು: II ಸಣ್ಣ ಪರಿಮಾಣದ ಚಿತ್ರಗಳು 1 ವಾರ್ತಾಚಿತ್ರಗಳು 2 ದಾಖಲೆಚಿತ್ರಗಳು 3 ಶೈಕ್ಷಣಿಕ ಚಿತ್ರಗಳು 4 ಪ್ರಚಾರ ಚಿತ್ರಗಳು 5 ಶುದ್ಧ ಡಾಕ್ಯುಮೆಂಟರಿ ಚಿತ್ರಗಳು 6 ಕಾರ್ಟೂನ್ ಚಿತ್ರಗಳು 7 ಮಕ್ಕಳ ಚಿತ್ರಗಳು III ಚಲನಚಿತ್ರ ನಿರ್ಮಾಣ ತಂತ್ರ I ಚಲನಚಿತ್ರದ ಚರಿತ್ರೆ (ಂ) ಹುಟ್ಟು ಮತ್ತು ಮೊದಲ ದಿನಗಳು : ನಮ್ಮ ಕಣ್ಣುಗಳಿಗೆ ಒಂದು ವಿಶೇಷ ಗುಣ ಇದೆ. ಒಂದು ವಸ್ತುವನ್ನು ನಾವು ನೋಡಿದ ಮೇಲೆ ಅದರ ಚಿತ್ರಣ ನಮ್ಮ ಕಣ್ಣುಗಳ ಮುಂದೆ ಒಂದು ಅರೆಕ್ಷಣವಾದರೂ ಉಳಿಯುತ್ತದೆ. ಆದ್ದರಿಂದ ಒಂದು ಘಟನೆಯ ವಿವರಗಳನ್ನು ಬಿಡಿಬಿಡಿಯಾಗಿ ರಚಿಸಿ ಅವನ್ನು ಸಕ್ರಮವಾಗಿ, ಸಾಕಷ್ಟು ವೇಗವಾಗಿ ನಮ್ಮ ಮುಂದೆ ಹಾಯಿಸಿದರೆ ಘಟನೆ ಸಹಜವಾಗಿ ನಮ್ಮ ಮುಂದೆ ನಡೆದಂತೆ ಭಾಸವಾಗುತ್ತದೆ. ಇದರ ಮೂಲವನ್ನು ಹಲವು ಶತಮಾನಗಳ ಹಿಂದೆ ಕಾಣಿಸಿಕೊಂಡ, ಮಕ್ಕಳಾಟದ ಗಿರ್ರನೆ ತಿರುಗುವ ಬುಗುರಿಯಲ್ಲಿಯೂ ಮುಂದೆ 1830ರಲ್ಲಿ ಪ್ರಚಾರಕ್ಕೆ ಬಂದ ಇನ್ನೊಂದು ಮಕ್ಕಳಾಟದ ವಸ್ತುವಾದ eóÉೂೀಯಿಟ್ರೋಪ್‍ನಲ್ಲಿಯೂ ಕಾಣಬಹುದು. ವಿಲಿಯಂ ಹಾರ್ನರ್ ಎಂಬಾತ ರೂಪಿಸಿದ ಡೀಡಲಿಯಮ್ ಎಂಬುದು ಇಂಥದೇ ಮತ್ತೊಂದು ಉಪಕರಣ. ಚಲನಚಿತ್ರಗಳಿಗೂ ಇದೇ ವೈಜ್ಞಾನಿಕ ಸತ್ಯ ಮೂಲಾಧಾರವಾಗಿದೆ. ಮುಂದೆ ಛಾಯಾಗ್ರಹಣದ ವಿಧಾನ ಬಳಕೆಗೆ ಬಂದ ಮೇಲೆ ಮಾಯಾಲಾಂದ್ರದ ಮುಖಾಂತರ ಪರದೆಯ ಮೇಲೆ ಚಲನಚಿತ್ರಗಳನ್ನು ತೋರಿಸಲು ಎಡ್ವರ್ಡ್ ಮ್ಯೂಬ್ರಿಜ್ 7ಭಗೀರಥ ಪ್ರಯತ್ನ ಮಾಡಿದ. 1872ರಲ್ಲಿ ಅವನು ಇದಕ್ಕಾಗಿ ಛಾಯಾಗ್ರಹಣದ ಶೀಘ್ರ ವಿಧಾನಗಳನ್ನು ಕಂಡುಹಿಡಿದು, 1880ರಲ್ಲಿ ಪರದೆಯ ಮೇಲೆ ಕುದುರೆಗಳ ಓಡಾಟವನ್ನೂ ಜಟ್ಟಿಗಳ ಮಲ್ಲಯುದ್ಧವನ್ನೂ ತೋರಿಸಿದ. ಲೋಕದಲ್ಲೇ ಇವು ಮೊದಲ ಚಲನಚಿತ್ರಗಳಾದವು. ಆದರೆ ಆ ಕಾಲದಲ್ಲಿ ಛಾಯಾಗ್ರಹಣಕ್ಕೂ ಛಾಯಾಪ್ರತೀಕಕ್ಕೂ ಗಾಜಿನ ಫಲಕಗಳನ್ನು ಉಪಯೋಗಿಸುತ್ತಿದ್ದುದರಿಂದ ಈ ಸಾಧನೆ ಚಲನಚಿತ್ರಗಳ ಬೆಳವಣಿಗೆಗೆ ತುಂಬ ಗಡುಸಾಗಿ ಪರಿಣಮಿಸಿತು. ಮುಂದೆ 1890ರ ಸುಮಾರಿಗೆ ಛಾಯಾಗ್ರಹಣಕ್ಕೆ ಗಾಜಿನ ಬದಲು ಸೆಲ್ಯುಲಾಯ್ಡಿನ ಪಟಲವನ್ನು ಉಪಯೋಗಿಸಲು ಸಾಧ್ಯವಿದೆಯೆಂದು ತಿಳಿದು ಬಂದ ಮೇಲೆ, ಎಡಿಸನ್, ಮಾರೇ, ರೈನೋ, ಫ್ರೀಸೀಗ್ರೀನ್, ಟೂರ್ನಿಯರ್ ಮೊದಲಾದ ಪ್ರಸಿದ್ಧ ವಿಜ್ಞಾನಿಗಳು ಮ್ಯೂಬ್ರಿಜ್‍ನ ಸಾಹಸಗಳನ್ನು ಮುಂದುವರಿಸಿ, ಚಲನಚಿತ್ರಗಳಿಗೆ ಒಂದು ಭದ್ರವಾದ ಅಸ್ತಿವಾರ ಹಾಕಿದರು. ಚಲನಚಿತ್ರಗಳ ಮುಂದಿನ 70 ವರ್ಷಗಳ ತಾಂತ್ರಿಕ ಬೆಳವಣಿಗೆ, ವಿಜ್ಞಾನಿಗಳೂ ಶಾಸ್ತ್ರ ತಂತ್ರಜ್ಞರೂ ಕೂಡಿ ಅವಿಶ್ರಾಂತವಾಗಿ ದುಡಿದುದರ ಫಲವಾಗಿದೆ. ಬೆಂಕಿ ಶೀಘ್ರವೇ ತಗಲುವ ಸೆಲ್ಯುಲಾಯ್ಡಿನ ಪಟಲದ ಬದಲು ಬೆಂಕಿ ತಗಲದ ಪಟಲದ ಪ್ರಯೋಗದಿಂದ (1910) ಹಿಡಿದು, ಈಗಿನ ಶಬ್ದಚಿತ್ರ, ವರ್ಣಚಿತ್ರ, 3 ಆಯಾಮಗಳ ಚಿತ್ರ (3ಡಿ ಚಿತ್ರ), ಅಗಲ ಪರದೆ ಚಿತ್ರ (ಸಿನಿಮಾಸ್ಕೋಪ್), ಸಿನೇರಮ (ವಿಸ್ಟಾವಿಷನ್), ಪರ್ಸ್‍ಪೆಕ್ಟಾ-ಸ್ಟೀರಿಯೊಫೋನಿಕ್ ವಿಧಾನ, ಅಲ್ಟ್ರಾಫೆಕ್ಸ್- ಇತ್ಯಾದಿಗಳ ವರೆಗೆ ಈ ಬೆಳವಣಿಗೆ ನಡೆದಿದೆ. ಅಮೆರಿಕ ಚಲನಚಿತ್ರಗಳ ತಾಯಿನಾಡೆಂಬ ಭಾವನೆ ನಮ್ಮಲ್ಲಿ ಸಾಮಾನ್ಯವಾಗಿದ್ದರೂ ಅಲ್ಲಿ ಚಲನಚಿತ್ರದ ಸಾರ್ವತ್ರಿಕ ತಯಾರಿಕೆ ಮತ್ತು ಪ್ರದರ್ಶನ 1905ರ ವರೆಗೆ ಆಗಿದ್ದಿಲ್ಲ. ಆದರೆ ಇಂಗ್ಲೆಂಡಿನಲ್ಲಿ 1896ರಲ್ಲೇ ಸಿಸಿಲ್ ಹೆಪ್‍ವರ್ತ್ ಈ ಉದ್ಯಮವನ್ನು ಪ್ರಾರಂಭಿಸಿ ಸಮಾಚಾರ ಚಿತ್ರಗಳನ್ನು ತೆಗೆಯುವುದರಲ್ಲಿ ಮೊದಲಿಗ. 1904ರಲ್ಲಿ ಆತ 7 ಮಿನಿಟು ಪ್ರದರ್ಶಿಸಬಹುದಾದ ಒಂದು ಚಿಕ್ಕ ಮನೋರಂಜನೆಯ ಚಿತ್ರವನ್ನೂ ನಿರ್ಮಿಸಿದ. ಫ್ರಾನ್ಸಿನಲ್ಲಿಯೂ ಜೋರ್ಜಸ್ ಮೆಲಿಯ ಎಂಬಾತ 1896ರಲ್ಲೇ ಚಲನಚಿತ್ರ ಉದ್ಯಮವನ್ನು ಪ್ರಾರಂಭಿಸಿದ್ದ. ಮುಖ್ಯವಾಗಿ ಆತ ಚಮತ್ಕಾರ ಭರಿತವಾದ ಛಾಯಾಚಿತ್ರಗಳನ್ನೊಳಗೊಂಡ, ಕಾಲ್ಪನಿಕ ಹಾಗೂ ಮನೋರಂಜಕ ಚಿತ್ರಗಳನ್ನು ನಿರ್ಮಿಸಿದ. ಇವುಗಳಲ್ಲಿ ಚಂದ್ರಲೋಕಕ್ಕೆ ಪ್ರಯಾಣ, ಸೈತಾನನ ವಿನೋದ ಲೀಲೆಗಳು, ಧ್ರುವವಿಜಯ-ಮುಖ್ಯವಾಗಿದ್ದುವು. ಚಲನಚಿತ್ರ ಕ್ಷೇತ್ರದಲ್ಲಿ ಕಲ್ಪನಾಶಕ್ತಿಯೊಂದಿಗೆ ಪ್ರತಿಭೆಯನ್ನೂ ತೋರಿದ ಮೊದಲ ನಿರ್ಮಾಪಕನೆಂದರೆ ಇವನೇ. ಚಿತ್ರಗಳ ತಯಾರಿಕೆ ಮಾತ್ರವಲ್ಲ, ಅವುಗಳ ಸಾರ್ವತ್ರಿಕ ಪ್ರದರ್ಶನವೂ ಇವೆರೆಡು ದೇಶಗಳಲ್ಲಿ 1896ರಲ್ಲೇ ಪ್ರಾರಂಭವಾಯಿತು. ಇದಕ್ಕೆ ಸಾಹಸಿಗಳಾದ ಲುಮಿಯೇರ ಸಹೋದರರು ಕಾರಣರಾದರು. ಭಾರತಕ್ಕೂ ಚಲನಚಿತ್ರಗಳ ಮೊದಲ ಪರಿಚಯವನ್ನು ಇವರೇ ಮಾಡಿಕೊಟ್ಟರು. 1896ನೆಯ ಜುಲೈ 13ರಂದು ಇವರ ಸಹಾಯಕರು ಮುಂಬಯಿಯ ವಾಟ್‍ಸನ್ಸ್ ಹೊಟೆಲಿನಲ್ಲಿ ಮೊದಲ ಪ್ರದರ್ಶನವನ್ನೇರ್ಪಡಿಸಿ ಪ್ರೇಕ್ಷಕರನ್ನೆಲ್ಲ ದಂಗುಬಡಿಸಿದರು. ಒಂದೆರಡು ದಿನಕ್ಕೆಂದು ಏರ್ಪಡಿಸಿದ ಪ್ರದರ್ಶನ ಜನರ ಆಗ್ರಹದ ಮೇರೆಗೆ ಏಳೆಂಟು ದಿನಗಳ ವರೆಗೆ ನಡೆಯಬೇಕಾಯಿತು. ಪ್ರದರ್ಶನದಲ್ಲಿ ಮುಖ್ಯವಾಗಿ ಬೆಂಕಿ ಆರಿಸುವ ಯಂತ್ರಗಳ ಓಡಾಟ, ಹರಿವ ನೀರಿನ ಓಟ, ಬಿಸಿಲಿನಲ್ಲಿ ಜನರ ಅಲೆದಾಟ, ರೈಲುಬಂಡಿ ನಿಲ್ದಾಣದಲ್ಲಿ ಬಂದು ನಿಲ್ಲುವುದು ಇತ್ಯಾದಿ ದೃಶ್ಯಗಳಿದ್ದುವು. ವಾಟ್ಸನ್ ಹೋಟೆಲಿನಲ್ಲಿ ಲ್ಯುಮಿಯೇರರ ಪ್ರದರ್ಶನವನ್ನು ಪ್ರತಿದಿನವೂ ತಪ್ಪದೆ ನೋಡುತ್ತಿದ್ದ ಸಾವೆ ದಾದಾ (ಹರಿಶ್ಚಂದ್ರ ಸಖಾರಾಮ ಭಟ್ವಾಡೇಕರ್) ಅದರಿಂದ ವಿಶೇಷವಾಗಿ ಪ್ರಚೋದಿಸಲ್ಪಟ್ಟು, 1897ರಲ್ಲೇ ಲಂಡನ್ನಿನಿಂದ ಒಂದು ಚಲನಚಿತ್ರ ಕ್ಯಾಮರವನ್ನು ತರಿಸಿಕೊಂಡು, ಅದರ ಮೂಲಕ ಜಟ್ಟಿಗಳ ಮಲ್ಲಯುದ್ಧದ ಒಂದು ಚಿತ್ರವನ್ನೂ ಕೋತಿಗಳ ತರಬೇತು ಎಂಬ ಹಾಸ್ಯಮಯ ಚಿತ್ರವೊಂದನ್ನೂ ತೆಗೆದು, ಸಂಸ್ಕರಣಕ್ಕಾಗಿ ಅವನ್ನು ಲಂಡನ್ನಿಗೆ ಕಳುಹಿಸಿ, ವರ್ಷ ಕೊನೆಯಾಗುವುದರೊಳಗಾಗಿಯೇ ಅವನ್ನು ಭಾರತದಲ್ಲಿ ಪ್ರದರ್ಶಿಸುವ ಸಾಹಸ ಮಾಡಿದರು. ಅಲ್ಲದೆ ಲ್ಯುಮಿಯೇರ್ ಸಹೋದರರು ಒದಗಿಸಬಹುದಾದ ಚಿತ್ರಗಳ ಪ್ರದರ್ಶನಕಾರ್ಯವನ್ನೂ ಕೈಕೊಂಡರು. ಮುಂದೆ 1901ರಲ್ಲಿ, ದೇಶದ ಮೊದಲ ಸೀನಿಯರ್ ರ್ಯಾಂಗ್ಲರ್ ಆದ ಆರ್. ಪಿ. ಪರಾಂಜಪೆಗೋಸ್ಕರ ಏರ್ಪಡಿಸಿದ ಸತ್ಕಾರ ಸಮಾರಂಭದ ಚಿತ್ರವನ್ನು ತೆಗೆದರು. ಸಾಕ್ಷ್ಯ ಚಿತ್ರಗಳನ್ನು ತೆಗೆಯುವುದರಲ್ಲಿ ದಾದಾ ಮೊದಲಿಗರಾದರು. ದಾದಾಸಾಹೇಬ ಫಾಲ್ಕೆ ಚಲನಚಿತ್ರ ಕ್ಯಾಮರವನ್ನು ಕೈಯಲ್ಲಿ ಹಿಡಿಯುವ 11 ವರ್ಷಗಳ ಮೋದಲೇ ಇದು ನಡೆದುದು ಎಂಬುದನ್ನು ಮರೆಯಲಾಗದು. ಅಮೆರಿಕದಲ್ಲಿ ಚಲನಚಿತ್ರೋದ್ಯಮ 1905ರ ಸುಮಾರಿಗೆ ಪ್ರಾರಂಭವಾಗಿ ರಭಸದಿಂದ ಪ್ರಗತಿಹೊಂದಿತು. ಆಗಿನ ಚಿತ್ರಗಳಲ್ಲಿ ಕಥಾವಸ್ತು ವಿಶೇಷವಾಗಿದ್ದಿಲ್ಲ. ಪರದೆಯ ಮೇಲೆ ಬೀಳುವ ಚಿತ್ರಗಳ ಚಲನೆಯೇ ಆಗಿನ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತಿತ್ತು. ಮೂಲಕಥೆ ಸತ್ತ್ವಹೀನವಾಗಿದ್ದರೂ ನೀರಿನ ಹರಿದಾಟ, ರೈಲುಬಂಡಿಯ ಓಟ, ಜನರ ಹುಚ್ಚುಹುಚ್ಚು ಹಾರಾಟ, ಒಬ್ಬರನ್ನೊಬ್ಬರು ಅಟ್ಟಿಕೊಂಡು ಹೋಗುವುದು, ಹಾಸ್ಯಕ್ಕಾಗಿ ಒಬ್ಬರ ಮೇಲೊಬ್ಬರು ಕಡುಬನ್ನು ಎಸೆಯುವುದು ಇವೇ ಮೊದಲಾದುವು ಪೋಷಕವಾಗಿರುತ್ತಿದ್ದುವು. ಛಾಯಾಚಿತ್ರಗ್ರಹಣ ಬಿಸಿಲಿದ್ದಾಗ ಮಾತ್ರ, ಮಾಡುಗಳಿಲ್ಲದ ದೊಡ್ಡ ಪಡಸಾಲೆಗಳಲ್ಲಾಗಲಿ ಬಯಲು ಪ್ರದೇಶಗಳಲ್ಲಾಗಲಿ ನಡೆಯುತ್ತಿತ್ತು. ಕ್ಯಾಮರದಲ್ಲಿಯೂ ಪ್ರಕ್ಷೇಪಕ ಯಂತ್ರದಲ್ಲಿಯೂ ಚಿತ್ರಪಟಲವನ್ನು ಕೈಯಿಂದಲೇ ತಿರುಗಿಸಬೇಕಾಗಿತ್ತು. ಅಂದಿನ ಕಾಲದಲ್ಲಿ ರಂಗಭೂಮಿಯ ಪ್ರಭಾವ ಜನತೆಯ ಮೇಲೆ ವಿಶೇಷವಾಗಿದ್ದುದರಿಂದ ರಸಿಕ ಜನರೆಲ್ಲ ಮನೋರಂಜನೆಯ ಈ ನೂತನ ವಿಧಾನವನ್ನು ಬಹು ಹೀನಾಯವಾಗಿ ನೋಡುತ್ತಿದ್ದರು. ಆದರೂ ಚಲನಚಿತ್ರಗಳ ಪ್ರೇಕ್ಷಕರ ಸಂಖ್ಯೆ ದಿನೇದಿನೇ ಹೆಚ್ಚುತ್ತ ಬಂತು. ಚಿತ್ರನಿರ್ಮಾಪಕರು ಕಥೆಗಳಿಗೆ ಹೆಚ್ಚು ಪ್ರಾಧಾನ್ಯ ಕೊಡುತ್ತ ಬಂದು, ಜನತೆಯನ್ನು ಚಲನಚಿತ್ರಗಳತ್ತ ಮತ್ತಷ್ಟು ಆಕರ್ಷಿಸಿದರು. ಕ್ಯಾಮರಾದಲ್ಲಿಯೂ ಪ್ರಕ್ಷೇಪಕದಲ್ಲಿಯೂ (ಪ್ರೊಜೆಕ್ಟರ್) ತಾಂತ್ರಿಕ ಸುಧಾರಣೆಗಳು ತಲೆದೋರಿದವು. ಹೀಗಾಗಿ 1910ರೊಳಗೆ ಚಲನಚಿತ್ರಗಳನ್ನು ಕಡೆಗಾಣಿಸುತ್ತಿದ್ದವರೂ ಅವನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಆಗ ಷಿಕಾಗೋದಲ್ಲಿನ ಎರಡು ದೊಡ್ಡ ಚಲನಚಿತ್ರ ಸಂಸ್ಥೆಗಳು ವಾರಕ್ಕೆ 10ರಂತೆ ಚಿತ್ರಗಳನ್ನು ತಯಾರಿಸುತ್ತಿದ್ದುವು. 1913ರ ಒಳಗೆ ಅಮೆರಿಕದಲ್ಲಿ 30,000ಕ್ಕಿಂತಲೂ ಹೆಚ್ಚಾಗಿ ನಿಕಲೋಡೀಯನ್‍ಗಳು (ಚಲನಚಿತ್ರ ಪ್ರದರ್ಶನಮಂದಿರಗಳು) ಇದ್ದುವು. ಈ ಸುಮಾರಿಗೆ ಅಲ್ಲಿ ಹೆಸರಾಂತ ಚಿತ್ರಗಳು ಯಾವುವೆಂದರೆ ಯೂನಿವರ್ಸಲ್ ಸಂಸ್ಥೆಯ ಟ್ರ್ಯಾಫಿಕ್ ಇನ್‍ಸೋಲ್ಸ್, ವಿಟಾಗ್ರಾಫ್ ಸಂಸ್ಥೆಯ ದಿ ಕ್ರಿಶ್ಚನ್, ಎಕ್ಲರ್ ಸಂಸ್ಥೆಯ ಯೋಧನ ಮಕ್ಕಳು-ಇತ್ಯಾದಿ. ಚಲನಚಿತ್ರ ನಿರ್ಮಾಣಸಂಸ್ಥೆಗಳು ಶ್ರೇಷ್ಠ ಕಥೆಗಾರರನ್ನೂ ಕಾದಂಬರಿಕಾರರನ್ನೂ ಒತ್ತಾಯಪಡಿಸಿ ಅವರಿಂದ ತಮ್ಮ ಚಿತ್ರಗಳಿಗಾಗಿ ಒಳ್ಳೆಯ ಕಥೆಗಳನ್ನು ಬರೆಸಲು ಮೊದಲು ಮಾಡಿದಂದಿನಿಂದ ಚಲನಚಿತ್ರದ ಭವಿಷ್ಯಕ್ಕೆ ಕಳೆಯೇರಿತು. ಈ ಅವಧಿಯಲ್ಲಿ ಇಂಗ್ಲೆಂಡ್, ಫ್ರಾನ್ಸ್‍ಗಳಲ್ಲದೆ, ಜರ್ಮನಿ, ಇಟಲಿ, ಸ್ವೀಡನ್ ಮೊದಲಾದ ದೇಶಗಳಲ್ಲಿಯೂ ಚಲನಚಿತ್ರ ಉದ್ಯಮ ಸಾಕಷ್ಟು ಬೆಳೆದು, ಅನೇಕ ಉತ್ತಮ ಚಿತ್ರಗಳು ನಿರ್ಮಿತವಾಗಿದ್ದುವು. ಪ್ರಸಿದ್ಧ ಆಭಿನಯಗಾರ್ತಿ ಸಾರಾಬರ್ನ್‍ಹಾರ್ಟಳು ಅಭಿನಯಿಸಿದ ರಾಣಿ ಎಲಿಜûಬೆತ್ (4 ರೀಲು) ಪ್ರಸಿದ್ಧ ಚಿತ್ರವಾಗಿತ್ತು (1912). ಇದೇ ಸುಮಾರಿಗೆ ಇಟಲಿಯಲ್ಲಿ ತಯಾರಾದ ಕೋ ವಾಡಿಸ್ ಎಂಬ ಚಿತ್ರ (8 ರೀಲುಗಳು) ವಿಶೇಷ ಪ್ರಶಸ್ತಿಯನ್ನು ಪಡೆಯಿತು. ಜರ್ಮನಿಯ ಪಾಲ್ ವೆಗೆನರ್ 1913ರಲ್ಲಿ ಸೃಷ್ಟಿಸಿದ ದಿ ಸ್ಟೂಡೆಂಟ್ ಆಫ್ ಪ್ರಾಗ್ ಎಂಬುದು ಚಲನಚಿತ್ರದಲ್ಲಿ ಕಲೆಯ ಸ್ಥಾನವೇನು ಎಂಬುದನ್ನು ಮೊದಲ ಬಾರಿ ತೋರಿಸಿತು. ದೆಹಲಿಯಲ್ಲಿ ಜರುಗಿದ ಐದನೆಯ ಜಾರ್ಜ್ ಅರಸನ ಪಟ್ಟಾಭಿಷೇಕದ ವರ್ಣಚಿತ್ರ (ಇಂಗ್ಲೆಂಡಿನ ತಯಾರಿಕೆ, ಪ್ರದರ್ಶನಕಾಲ 3 ತಾಸು) ಯೂರೋಪಿನಲ್ಲೆಲ್ಲ ತುಂಬ ಜನಾದರವನ್ನು ಪಡೆಯಿತು. ಈ ಹಿನ್ನೆಲೆಯಲ್ಲಿಯೇ 1912ರ ಸುಮಾರಿನಲ್ಲಿ ಭಾರತ ಚಲನಚಿತ್ರ ತಯಾರಿಕೆಯ ಉದ್ಯಮವನ್ನು ಶ್ರದ್ಧಾಯುಕ್ತವಾಗಿ ಕೈಗೊಂಡಿತು. ಮುಂಬಯಿ ಪ್ರಾಂತ್ಯದ ದಾದಾಸಾಹೇಬ ಫಾಲ್ಕೆ ಭಾರತದ ಮನೋರಂಜಕ ಚಲನಚಿತ್ರೋದ್ಯಮಕ್ಕೆ ಮೂಲಪುರುಷನ್ನೆನ್ನಬಹುದು. ಅವರು ಸಂಸ್ಕøತ ಪಂಡಿತರೊಬ್ಬರ ಮಗ. ಚಿತ್ರ ಬರೆಯುವ, ಚಿತ್ರ ಕೆತ್ತುವ ಕಲೆಗಳ ನೈಪುಣ್ಯ ಪಡೆದವರು. 1912ರಲ್ಲಿ ನಾಸಿಕದಲ್ಲಿ ಆಡಂಬರವಿಲ್ಲದ ಒಂದು ಚಿಕ್ಕ ಚಲನಚಿತ್ರ ಸ್ಟೂಡಿಯೊವನ್ನು ಮಾಡಿಕೊಂಡು, 18 ತಿಂಗಳು ಅವಿಶ್ರಾಂತವಾಗಿ ದುಡಿದು 1913ರಲ್ಲಿ ರಾಜಾ ಹರಿಶ್ಚಂದ್ರ ಚಿತ್ರವನ್ನು ಅವರು ಪ್ರದರ್ಶನಕ್ಕಾಗಿ ಸಿದ್ಧಪಡಿಸಿದರು. (ಃ) ಬೆಳವಣಿಗೆ (1914-18) : ಮೊದಲ ಮಹಾಯುದ್ಧದ ಈ ಕಾಲದಲ್ಲಿ ಚಲನಚಿತ್ರ ಪ್ರಪಂಚದಲ್ಲಿ ಅನೇಕ ಮಹತ್ತ್ವದ ಬದಲಾವಣೆಗಳಾದವು. ಐರೋಪ್ಯ ದೇಶಗಳಲ್ಲೆಲ್ಲ ಯುದ್ಧದ ಅವಾಂತರದಿಂದಾಗಿ ಚಲನಚಿತ್ರ ಉದ್ಯಮ ಹಿಮ್ಮೆಟ್ಟಿತು. ಈ ಸಂದರ್ಭ ಅಮೆರಿಕದ ಚಲನಚಿತ್ರ ಉದ್ಯಮಕ್ಕೆ ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಲು ಅನುಕೂಲವಾಯಿತು. ಚಿತ್ರ ಕಾರ್ಯಕ್ಷೇತ್ರ ಷಿಕಾಗೋದಿಂದ ಕ್ಯಾಲಿಫೋರ್ನಿಯದ ಹಾಲಿವುಡ್ (ನೋಡಿ- ಹಾಲಿವುಡ್) ಆಯಿತು. ಅಂದಿನವರೆಗೆ ಇಲ್ಲದ ಒಂದು ಉಲ್ಬಣ ಅಲ್ಲಿ ಕಾಣತೊಡಗಿತು. ತಾರೆಯರು, ನಿರ್ದೇಶಕರು ಪ್ರಾಮುಖ್ಯಕ್ಕೆ ಬಂದರು. ಬಡಕಲಾಗಿದ್ದ ಚಿತ್ರಮಂದಿರಗಳು ಅರಮನೆಗಳಾದವು. ಪ್ರತಿಭಾವಂತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಜಗದ್ವಿಖ್ಯಾತಿಯನ್ನು ಪಡೆದದ್ದು ಈ ಅವಧಿಯಲ್ಲೇ, ಫ್ಲೋರ್ ವಾಕರ್, ಟೆಲ್ಲೀಸ್ ಪಂಕ್ಚರ್ಡ್ ರೊಮಾನ್ಸ್ ದಿ ಟ್ರ್ಯಾಂಪ್, ಕಾರ್ಮೆನ್, ದಿ ಪಾನ್‍ಷಾಪ್ ಷೋಲ್ಡರ್, ಆರಮ್ಸ್-ಇವೇ ಮೊದಲಾದವು ಅವನ ಆಗಿನ ಪ್ರಸಿದ್ಧ ಚಿತ್ರಗಳು (1918ರಿಂದ ಆಚಿಗೆ ಅವರ ದಿ ಗೋಲ್ಡ್‍ರಷ್, ದಿ ಗ್ರೇಟ್ ಡಿಕ್ಟೇಟರ್ ಮೊದಲಾದ ಚಿತ್ರಗಳು ತಯಾರಾದವು). ಆಗ್ಗೆ ಚಿತ್ರಗಳಿಗೆ ಈಗಿರುವಂತೆ ಒಂದು ನಿಶ್ಚಿತವಾದ ಉದ್ದವಿರಲಿಲ್ಲ. ಕಥೆಗನುಸಾರವಾಗಿ ಸಾಮಾನ್ಯವಾಗಿ ಒಂದು ರೀಲಿನಿಂದ ಐದು ರೀಲುಗಳವರೆಗೆ ಅವುಗಳ ಉದ್ದವಿರುತ್ತಿತ್ತು. ಅವುಗಳ ಕತೆಯಲ್ಲಿ ಧಾರಾವಾಹೀ ಚಲನಚಿತ್ರಗಳೂ ಅನುಕ್ರಮ ಭಾಗಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದವು. ಇವು ಜನತೆಯನ್ನು ವಿಶೇಷವಾಗಿ ಆಕರ್ಷಿಸುತ್ತಿದ್ದುವು. ಇವುಗಳಲ್ಲಿ ಪರ್ಲ್ ಹ್ವೈಟ್ ಅಭಿನಯಿಸಿದ ಪೆರಿಲ್ಸ್ ಆಫ್ ಪಾಲಿನ್ ಎಂಬುದು ವಿಶೇಷ ಪ್ರಸಿದ್ಧಿಪಡೆಯಿತು. ವಿನ್ಸರ್ ಮೆಕೇಯ ಗರ್ಟಿ ಕಾರ್ಟೂನ್ ಚಿತ್ರಗಳೂ ಜಾನಿ ವೀಸ್‍ಮುಲ್ಲರ್ ಅಭಿನಯಿಸಿದ ಮೊದಲಿನ ಟಾeóರ್Áನ್ (ನೋಡಿ- ಟಾeóರ್Áನ್) ಚಿತ್ರವೂ ಮಕ್ಕಳನ್ನೇ ಪಾತ್ರವರ್ಗದಲ್ಲಿ ಕೂಡಿಸಿ ಕೊಂಡು ತೆಗೆದ ಅವರ್ ಗ್ಯಾಂಗ್ ಕಾಮೆಡೀಸ್ ಎಂಬ ಒಂದೊಂದು ರೀಲಿನ ಹಾಸ್ಯಮಯ ಚಿತ್ರಗಳೂ ಈ ಅವಧಿಯಲ್ಲಿ ಪ್ರಸಿದ್ಧವಾಗಿದ್ದುವು. ಆದರೆ ಎಲ್ಲಕ್ಕೂ ಮಿಗಿಲಾಗಿ, ಚಲನಚಿತ್ರಕಲೆಯ ದೃಷ್ಟಿಯಿಂದಲೂ ಚಲನಚಿತ್ರಕ್ಕೆ ಆರಿಸುವ ಕಥೆಯ ದೃಷ್ಟಿಯಿಂದಲೂ ಡಿ. ಡಬ್ಲ್ಯೂ. ಗ್ರಿಫಿತ್ 1915ರಲ್ಲಿ ನಿರ್ದೇಶಿಸಿದ ದಿ ಬರ್ತ್ ಆಫ್ ಎ ನೇಷನ್ ಮತ್ತು 1916ರಲ್ಲಿ ನಿರ್ದೇಶಿಸಿದ ಇನ್‍ಟಾಲರೆನ್ಸ್ ಎಂಬ ಚಿತ್ರಗಳೂ ತುಂಬ ಕ್ರಾಂತಿಕಾರಿಯಾದವು. ಈ ಚಿತ್ರಗಳ ಪರಿಣಾಮ ಪ್ರೇಕ್ಷಕರ ಮೇಲೆ ವಿಶೇಷವಾಗಿ ಸಫಲವಾಗುವಂತೆ, ಚಿತ್ರನಿರ್ಮಾಣದಲ್ಲಿ ಅಂದಿನವರೆಗೆ ಯಾರೂ ಸಾಧಿಸದಿರುವ ಎರಡು ಮುಖ್ಯ ಪ್ರಯೋಗಗಳನ್ನು ಗ್ರಿಫಿತ್ ಈ ಚಿತ್ರಗಳಲ್ಲಿ ಪ್ರಥಮತಃ ಕಲ್ಪಿಸಿ ಉಪಯೋಗಿಸಿದ್ದರು. ಇವುಗಳಲ್ಲಿ ಒಂದು ಕ್ಲೋಸ್ ಅಪ್ ಪದ್ಧತಿ. ಹತ್ತಿರದಿಂದ ತೆಗೆದ ಛಾಯಾಚಿತ್ರ ತೆರೆಯ ಮೇಲೆ ಬೃಹದಾಕಾರ ಪಡೆಯುವಂತೆ ಮಾಡುವುದು. ಇದರಿಂದ ಪ್ರೇಕ್ಷಕರ ಅವಧಾನ ಚಿತ್ರದ ಯಾವ ವಸ್ತುವಿಗೆ ಹೋಗಬೇಕೋ ಆ ವಸ್ತುವಿಗೇ ಸೆಳೆಯಲ್ಪಟ್ಟು ಚಿತ್ರದಲ್ಲಿನ ರಂಜಕತೆ ಮತ್ತಷ್ಟು ಹೆಚ್ಚುವುದು. ಅಂದಿನಿಂದ ಎಲ್ಲ ಚಿತ್ರಗಳಲ್ಲಿ ಈ ಕ್ಲೋಸ್‍ಅಪ್ ರೀತಿ ಸರ್ವತ್ರವಾಗಿ ರೂಢಿಗೆ ಬಂತು. ಗ್ರಿಫಿತ್‍ನ ಎರಡನೆಯ ಪ್ರಯೋಗ ಯಾವುದೆಂದರೆ, ಚಿತ್ರ ಪ್ರದರ್ಶಿಸುವ ಭಾವನೆಗೆ ಸರಿಯಾಗಿ ಪ್ರೇಕ್ಷಕರಲ್ಲಿ ಕನಿಕರ, ವ್ಯಾಕುಲ, ಉತ್ಸುಕತೆ, ಉದ್ವೇಗ, ಆವೇಶ ಮೊದಲಾದ ರಸಭಾವಗಳನ್ನು ಆದಷ್ಟು ಹೆಚ್ಚಿಸಲು ಚಿತ್ರಸಂಪಾದನೆಯಲ್ಲಿ ಅವರು ಸಾಧಿಸಿದ ಅದ್ಭುತ ಚಾತುರ್ಯ, ಗ್ರಿಫಿತ್ ದಾರಿ ತೋರಿಸಿದ ಈ ಪದ್ಧತಿಯನ್ನೇ ಮುಂದೆ 1925-30ರಲ್ಲಿ ರಷ್ಯದ ಸುಪ್ರಸಿದ್ಧ ಚಿತ್ರನಿರ್ಮಾಪಕರಾದ ಪುಡೊವ್‍ಕಿನ್, ಐಸೆನ್‍ಸ್ಟೈನ್ ಮೊದಲಾದವರು ವಿಶೇಷವಾಗಿ ಬೆಳೆಸಿಕೊಂಡು ಉತ್ಕøಷ್ಟವಾದ ಕೆಲವು ಚಿತ್ರಗಳನ್ನು ನಿರ್ಮಿಸಿದರು. ಚಿತ್ರಸಂಪಾದನೆಯು ಈ ವಿಶಿಷ್ಟ ರೀತಿಗೆ ಮಾಂಟೇಜ್ ಎಂಬ ಹೆಸರಿದೆ. ಕ್ಯಾಮರದಲ್ಲಿ ತೆಗೆದ ಪ್ರತಿಯೊಂದು ಪ್ರತ್ಯೇಕ ಚಿತ್ರವನ್ನೂ ಬೇರೆ ಬೇರೆಯಾಗಿರಿಸಿ, ಅವುಗಳಲ್ಲಿ ಬೇಕಾದವನ್ನು ಆರಿಸಿ, ಪ್ರದರ್ಶನದಲ್ಲಿ ಆದಷ್ಟು ಹೆಚ್ಚು ಪರಿಣಾಮಕಾರಿಯಾಗುವ ರೀತಿಯಲ್ಲಿ ಅವನ್ನು ಪುನಃ ಜೋಡಿಸುವ ವಿಧಾನವೇ ಇದು. ಚಿತ್ರಗಳಲ್ಲಿ ಕಥೆಯನ್ನಾರಿಸುವ ವಿಷಯದಲ್ಲಿಯೂ ಗ್ರಿಫಿತ್ ಇತರರಿಗೆ ಒಂದು ದೊಡ್ಡ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು. ತನ್ನೆರಡು ಚಿತ್ರಗಳಲ್ಲಿಯೂ ಅವರು ಸಾಮಾಜಿಕ ಪ್ರಶ್ನೆಗಳನ್ನೇ ನಿರೂಪಿಸಿ, ಇಂಥ ಚಿತ್ರಗಳ ರಚನೆಯಲ್ಲಿಯೂ ಮೊದಲಿಗರಾದರು. ದಾದಾಸಾಹೇಬ ಫಾಲ್ಕೆ ಭಾರತದಲ್ಲಿ 1918ರೊಳಗೆ 23 ಚಿತ್ರಗಳನ್ನು ನಿರ್ಮಿಸಿದರು. ಇವೆಲ್ಲವೂ ಜನರ ಪ್ರೀತಿಯ ಪೌರಾಣಿಕ ಕಥೆಗಳಾಗಿದ್ದುವು. ಶ್ರೀಕೃಷ್ಣಜನ್ಮ, ಭಸ್ಮಾಸುರಮೋಹಿನಿ, ಸತಿ ಸಾವಿತ್ರಿ, ಕಾಳೀಯಮರ್ದನ-ಮೊದಲಾದವು ತುಂಬ ಆದರಣೀಯವಾದುವು. ಇವೆಲ್ಲ ಪುರಾಣ ಕಥೆಗಳಾದುದರಿಂದ ಇವುಗಳಲ್ಲಿ ಚಮತ್ಕಾರದ ಛಾಯಾಚಿತ್ರಗ್ರಹಣವನ್ನು ಧಾರಾಳವಾಗಿ ಉಪಯೋಗಿಸಲಿಕ್ಕೂ ಫಾಲ್ಕೆಗೆ ಅನುಕೂಲವಾಯಿತು. ಈ ಚಿತ್ರಗಳ ಯಶಸ್ವಿನಿಂದಾಗಿ ಹಣವಂತರಲ್ಲಿ ಕೆಲವರು ಧೈರ್ಯದಿಂದ ಮುಂದೆ ಬಂದು ಚಲನಚಿತ್ರ ತಯಾರಿಕೆಯ ಸಂಸ್ಥೆಗಳನ್ನು ಸ್ಥಾಪಿಸುವಂತಾದರು. ಕಲ್ಕತ್ತದ ಶ್ರೀಮಂತ ಜೆ. ಎಫ್. ಮದನ್ ಒಂದು ಕೋಟಿ ರೂಪಾಯಿ ಬಂಡವಾಳವಿರುವ ಮದನ್ ಥಿಯೇಟರ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ದೇಶದ ಪ್ರಮುಖ ನಗರಗಳಲ್ಲಿ ಚಿತ್ರಮಂದಿರಗಳನ್ನು ಸ್ಥಾಪಿಸಿದುದೂ ಅಲ್ಲದೆ ಈ ಕಂಪನಿ ಮುಂದೆ ಶ್ರೀಲಂಕ, ಬರ್ಮ, ಮಲಯ. ಸಿಂಗಪುರದವರೆಗೂ ತನ್ನ ಕಾರ್ಯಭಾರವನ್ನು ವಿಸ್ತರಿಸಿತು. ಈ ಕಂಪನಿಯ ಮೊದಲ ಚಿತ್ರ ನಳದಮಯಂತಿ. ಹೀಗೆ ಈ ಅವಧಿಯಲ್ಲಿ ಸಂಸ್ಕøತಿ ಮತ್ತು ಕಲೆಯ ದೃಷ್ಟಿಯಿಂದ ದಾದಾಸಾಹೇಬ ಫಾಲ್ಕೆ, ವ್ಯಾಪಾರೀ ದೃಷ್ಟಿಯಿಂದ ಜೆ. ಎಫ್. ಮದನ್ ಇವರು ಭಾರತದಲ್ಲಿ ಚಲನಚಿತ್ರ ಉದ್ಯಮದ ತಳಹದಿಯನ್ನು ಭದ್ರವಾಗಿ ಹಾಕಿದರು. (ಅ) ಬೆಳವಣಿಗೆ (1919-29) : 1920ರ ಒಳಗೆ ಚಲನಚಿತ್ರ ಪ್ರಪಂಚ ಇಡೀಲೋಕದಲ್ಲಿ ಇತರ ಎಲ್ಲ ಮನೋರಂಜನೆಯ ವಿಧಾನಗಳನ್ನು ಹಿಮ್ಮೆಟ್ಟಿಸಿ ಜನರ ಪ್ರೋತ್ಸಾಹದಲ್ಲಿ ಅಗ್ರಗಣ್ಯಸ್ಥಾನವನ್ನು ಪಡೆಯಿತು. ಛಾಯಾಗ್ರಹಣದಲ್ಲಿಯೂ ಛಾಯಾಪ್ರಕ್ಷೇಪಣದಲ್ಲಿಯೂ (ಪ್ರೊಜೆಕ್ಷನ್) ಮತ್ತಷ್ಟು ತಾಂತ್ರಿಕ ಸುಧಾರಣೆಗಳುಂಟಾಗಿ, ಹೊರಬಿದ್ದ ನೂರಾರು ಚಿತ್ರಗಳು ಆ ದೃಷ್ಟಿಯಿಂದಲೂ ಬಹು ಉತ್ತಮವಾದುವು. ಚಲನಚಿತ್ರ ಛಾಯಾಗ್ರಹಣ ಕೂಡ ಒಂದು ಶ್ರೇಷ್ಠಕಲೆಯೆಂದು ಎನ್ನಿಸಿಕೊಂಡುದು ಈ ಅವಧಿಯಲ್ಲಿಯೇ. ಚಿತ್ರಗಳ ದೃಶ್ಯಸಂವಿಧಾನಕಲೆಯೂ ಪ್ರಮುಖ ಸ್ಥಾನವನ್ನು ಪಡೆಯಿತು. ಕಥಾವಸ್ತುಗಳಲ್ಲಿ ಹೆಚ್ಚು ಹೆಚ್ಚಾದ ನಾವೀನ್ಯ ಬಂದು, ಚಿತ್ರಿಸಲ್ಪಡುವ ವಿಷಯಗಳ ಕ್ಷೇತ್ರ ಎಲ್ಲ ದಿಕ್ಕಿಗೂ ವ್ಯಾಪಿಸಿತು. ಅನೇಕ ಪ್ರತಿಭಾವಂತ ಚಿತ್ರನಿರ್ಮಾಪಕರೂ ನಿರ್ದೇಶಕರೂ ಕೂಡಿ ಹೊಸ ಹೊಸ ರೀತಿ, ಕಲ್ಪನೆಗಳಿಂದ ಚಿತ್ರಕಲೆಯ ಬಹುತರವಾದ ಪ್ರಗತಿಯನ್ನು ಸಾಧಿಸಿದರು. ಈ ದಿಶೆ ಅಂತ್ಯಗೊಳ್ಳುವುದರೊಳಗೆ ಪಾಶ್ಚಾತ್ಯ ದೇಶಗಳಲ್ಲಿ ಮೂಕ ಚಿತ್ರಗಳು ಮಾಯವಾಗಿ ವಾಕ್ ಚಿತ್ರಗಳು ತಲೆದೋರಿದುವು. ಈ ದಿಶೆಯಲ್ಲಿ ಹಾಲಿವುಡ್ಡಿನಿಂದ, ಎಂದಿನಂತೆ, ಶುಭ್ರವಾದ, ಸುಂದರವಾದ, ಉತ್ತಮ ತಂತ್ರವುಳ್ಳ ತುಂಬ ಆಕರ್ಷಕವಾದ ಚಿತ್ರಗಳು ಒಂದೇ ಸಮನೆ ಹೊರ ಬರಲಾರಂಭಿಸಿದುವು. ಮೆಟ್ರೋ ಗೋಲ್ಡ್ ವಿನ್-ಮೇಯರ್, ಯುನೈಟೆಡ್ ಆರ್ಟಿಸ್ಟ್ಸ್, ಯೂನಿವರ್ಸಲ್, ಫಸ್ಟ್ ನ್ಯಾಷನಲ್, ವಾರ್ನರ್ ಬ್ರದರ್ಸ್, ಫಾಕ್ಸ್,ಪ್ಯಾರಾಮೌಂಟ್, ಕೊಲಂಬಿಯ-ಇತ್ಯಾದಿ ಚಿತ್ರಸಂಸ್ಥೆಗಳು ತಮ್ಮತಮ್ಮೊಳಗೆ ತುಂಬ ಪೈಪೋಟಿಯಿಂದ ಕೆಲಸ ಮಾಡಿದುವು. ಕಥೆ ಕಾದಂಬರಿಗಳ ಚಿತ್ರಣಸ್ವಾಮ್ಯಕ್ಕಾಗಿ ಹೇರಳ ಹಣವನ್ನು ಸುರಿದುವು. ಪ್ರತಿಯೊಂದು ಸಂಸ್ಥೆ ತನ್ನದೇ ಆದ, ಜನ ಪ್ರಿಯ ತಾರಾಗಣ ಸಮೂಹವೊಂದನ್ನು ನಂಬಲಾಗದ ವೇತನದ ಮೇಲೆ ಇಟ್ಟುಕೊಂಡಿತು. ಈ ತಾರಾಗಣದಲ್ಲಿ, ಪ್ರಖ್ಯಾತ ನಟಿ ಗ್ರೀಟಾ ಗಾರ್ಬೊ ಎದುರು ನಟಿಸುತ್ತಿದ್ದ ಜಾನ್ ಗಿಲ್ಬರ್ಟ್ ಒಂದು ಕಾಲದಲ್ಲಿ ವಾರಕ್ಕೆ 10,000 ಡಾಲರು ವೇತನ ಪಡೆಯುತ್ತಿದ್ದ. ಹಾಲಿವುಡ್ಡಿನ ಇತರ ಕಾರ್ಯಕಲಾಪಗಳೂ ಇದೇ ಅದ್ದೂರಿಯ ರೀತಿಯಲ್ಲಿದ್ದು, ಹಾಲಿವುಡ್ಡೆಂಬುದು ಇಂದ್ರಲೋಕವೊ ಚಂದ್ರಲೋಕವೊ ಎಂಬ ಭ್ರಾಂತಿಯನ್ನು ಲೋಕಾದ್ಯಂತ ಹುಟ್ಟಿಸಿತು. ಒಂದನೆಯ ಮಹಾಯುದ್ಧದ ಅನಂತರ ಜರ್ಮನಿ, ರಷ್ಯ, ಫ್ರಾನ್ಸ್ ಮೊದಲಾದ ಐರೋಪ್ಯದ ದೇಶಗಳು ಚಲನಚಿತ್ರ ಉದ್ಯಮದಲ್ಲಿ ಪುನಃ ತಲೆಯೆತ್ತಿ ವಿಶಿಷ್ಟ ಯೋಗ್ಯತೆಯುಳ್ಳ ಅನೇಕ ಚಿತ್ರಗಳನ್ನು ನಿರ್ಮಿಸಲಾರಂಭಿಸಿದುವು. ಇದರಿಂದ ಹಾಲಿವುಡ್ಡಿನ ಚಿತ್ರಸಂಸ್ಥೆಗಳು ತಮ್ಮ ಉದ್ಯಮಕ್ಕೆ ಧಕ್ಕೆ ತಗಲಬಹುದೆಂದು ಭೀತಿಗೊಂಡೋ ಇಲ್ಲವೆ ತಮ್ಮ ಚಿತ್ರಗಳು ಐರೋಪ್ಯದ ಚಿತ್ರಗಳಿಗಿಂತ ಮೇಲ್ಮೆಯನ್ನು ಸಾಧಿಸಲೆಂದೊ ಯೂರೋಪಿನ ಪ್ರಸಿದ್ಧ ನಿರ್ದೇಶಕರನ್ನೂ ನಟನಟಿಯರನ್ನೂ ವಿಶೇಷ ವೇತನದ ಮೇಲೆ ತಮ್ಮ ಬಳಿ ಬರುವಂತೆ ಮಾಡಿದುವು. ಈ ರೀತಿ ಹಾಲಿವುಡ್ಡಿಗೆ ಆಗಮಿಸುವುದರಲ್ಲಿ ಪ್ರಸಿದ್ಧ ನಿರ್ದೇಶಕರಾಗಿದ್ದ ಪಾಲ್ ಲೆನಿ, ಲೂಯಿಸ್ ಮೈಲ್‍ಸ್ಟೋನ್, ಎರಿಕ್ ಫಾನ್ ಸ್ಟ್ರೋಹೈಮ್, ಅರ್ನ್‍ಸ್ಟ್ ಲ್ಯೂಬಿಚ್ ಮೊದಲಾದವರೂ ಪ್ರಸಿದ್ಧ ನಟನಟಿಯರಲ್ಲಿ ಗ್ರೀಟಾ ಗಾರ್ಬೊ, ಮಾರ್ಲೇನ್ ಡೀಟ್ರಿಕ್, ಕಾನ್ರಾಡ್ ಹ್ವೈಟ್, ಎಮಿಲ್ ಜೆನಿಂಗ್ಸ್, ಮೊರಿಸ್ ಷೆಲ್ಯಾ-ಮೊದಲಾದವರೂ ಇದ್ದರು. ಹಾಲಿವುಡ್ಡಿನ ಇವೆಲ್ಲ ಸಾಧನೆಗಳಿಂದಾಗಿ ಈ 10-12 ವರ್ಷಗಳಲ್ಲಿ ಸಾವಿರಕ್ಕೂ ಮೇಲಾಗಿ ಉತ್ತಮ ಚಿತ್ರಗಳು ಹೊರಬಂದವು. ಅವುಗಳಲ್ಲಿ ಮುಖ್ಯವಾದವು ಹೀಗಿವೆ. 1 ಹಾಸ್ಯ ಚಿತ್ರಗಳು : ಹೆರಾಲ್ಡ್ ಲಾಯ್ಡ್‍ನ ಅವರ ಗ್ರ್ಯಾಂಡ್ ಮಾಸ್ ಬಾಯ್, ದಿ ಫ್ರೆಷ್ ಮೆನ್, ಸೇಫ್ಟಿ ಲಾಸ್ಟ್, ಇತ್ಯಾದಿ ; ಅಚಲ ಮುಖಭಂಗಿಯ ಬಸ್ಟರ್ ಕೀಟನ್, ಕೂಸುಮುಖದ ಎಚ್. ಲ್ಯಾಂಗ್‍ಡನ್ ಮೊದಲಾದವರ ಚಿತ್ರಗಳು. 2. ಚಾರ್ಲಿ ಚಾಪ್ಲಿನ್ನನ ಮಹೋತ್ತರವಾದ ಹಾಸ್ಯಕರುಣರಸಭರಿತ ಚಿತ್ರಗಳು-ದಿ ಕಿಡ್ಡ್, ದಿ ಪಿಲ್ಗ್ರಿಮ್, ದಿ ಗೋಲ್ಡ್ ರಷ್, ದಿ ಸರ್ಕಸ್-ಇತ್ಯಾದಿ ಇವುಗಳೆಲ್ಲ ಅವನೇ ಬರೆದು, ಅಭಿನಯಿಸಿ, ನಿರ್ದೇಶಿಸಿದ ಚಿತ್ರಗಳು. 3 ಗ್ರಿಫಿತ್‍ನ ಬ್ರೋಕನ್ ಬ್ಲಾಸಮ್ಸ್, ದಿ ಆರ್ಫನ್ ಆಫ್ ದಿ ಸ್ಟಾರಮ್, 4 ದೃಶ್ಯದೇಖಾವೆಗಳ ಮತ್ತು ವೇಷಭೂಷಣಗಳ ಚಿತ್ರಗಳು-ಡಗ್ಲಾಸ್ ಫೇರ್‍ಬ್ಯಾಂಕ್ಸ್ ಅಭಿನಯಿಸಿದ ದಿ ಮಾರ್ಕ್ ಆಫ್ eóÉೂೀರೊ, ದಿ ಸನ್ ಆಫ್ eóÉೂೀರೊ, ರಾಬಿನ್‍ಹುಡ್, ತೀಫ್ ಆಫ್ ಬಾಗ್‍ದಾದ್; ರೇಮನ್ ನೊವಾರೋ ಅಭಿನಯಿಸಿದ ಬೆನ್‍ಹರ್, ಪ್ರಸಿದ್ಧ ನಿರ್ದೇಶಕ ಸಿಸಿಲ್ ಡಿ. ಡಿ ಮಿಲ್ ಅವರ ಟೆನ್ ಕಮ್ಯಾಂಡ್ಮೆಂಟ್ಸ್, ದಿ ಕಿಂಗ್ ಆಫ್ ಕಿಂಗ್ಸ್-ಇತ್ಯಾದಿ. 5 ಅರ್ನಸ್ಟ್ ಲೂಬಿಚ್ ನಿರ್ದೇಶಿಸಿದ ಮನೋರಂಜನೆಯ ಸರಳ ವಿಡಂಬನೆಯ, ಹರ್ಷಚಿತ್ರಗಳು-ದಿ ಫರ್ಬಿಡನ್ ಪ್ಯಾರಡೈಸ್, ದಿ ಮ್ಯಾರಿಯೇಜ್ ಸರ್ಕಲ್, ಲೇಡಿ ವಿಂಡರ್‍ಮಿಯರ್ಸ್ ಫನ್, ದಿ ಸ್ಟೂಡೆಂಟ್ ಪ್ರಿನ್ಸ್- ಇತ್ಯಾದಿ. 6 ವಾಲ್ ಡಿಸ್ನೆಯ ಮಿಕ್ಕಿ ಮೌಸ್ ಮತ್ತು ಇತರ ಚಲನಚಿತ್ರ ಕಾರ್ಟೂನುಗಳು. 7 ಸಾವಿರ ಮುಖದವ ಎನಿಸಿಕೊಂಡ ಲಾನ್ ಚಾನಿ ಅಭಿನಯಿಸಿದ ಫ್ಯಾಂಟಮ್ ಆಫ್ ದಿ ಆಪೆರ, ದಿ ಹಂಚ್‍ಬ್ಯಾಕ್ ಆಫ್ ನಾಟ್ರಡೇಮ್, ಲಾಫ್ ಕ್ಲೌನ್ ಲಾಫ್-ಇತ್ಯಾದಿ. 8 ಜರ್ಮನಿಯ ಪ್ರಸಿದ್ಧ ನಟರಾದ ಎಮಿಲ್ ಜೆನಿಂಗ್ಸ್ ಮತ್ತು ಕಾನ್ರಾಡ್ ಹ್ವೈಟ್‍ರ ಚಿತ್ರಗಳು. 9 ಗ್ರೀಟ ಗಾರ್ಬೊ ಮತ್ತು ಜಾನ್ ಗಿಲ್ಬರ್ಟ್ ಕೂಡಿ ಅಭಿನಯಿಸಿದ ಚಿತ್ರಗಳು. 10 ಕಿಂಗ್ ವಿಡೋರ್ ನಿರ್ದೇಶಿಸಿದ ದಿ ಬಿಗ್ ಪೆರೇಡ್, ಒಂದನೆಯ ಮಹಾಯುದ್ಧವನ್ನು ಕುರಿತು ರಚಿಸಲ್ಪಟ್ಟ ಎಲ್ಲ ಶಬ್ದರಹಿತ ಚಿತ್ರಗಳಲ್ಲಿ ಇದು ಅತ್ಯಂತ ಶ್ರೇಷ್ಠವಾದುದು ಇದೇ, ನಿರ್ದೇಶಕರ ದಿ ಕ್ರೌಡ್. 11 ಎರಿಕ್ ಫಾನ್ ಸ್ಟ್ರೋಹೈಮ್ ನಿರ್ದೇಶಿಸಿದ ಗ್ರೀಡ್ ಮತ್ತು ದಿ ವೆಡ್ಡಿಂಗ್ ಮಾರ್ಚ್. 12 ಅಮೆರಿಕದಲ್ಲಿನ ದಾಸ್ಯ ಪದ್ಧತಿಯನ್ನು ನಿಲ್ಲಿಸಲು ಪ್ರಚೋದಿಸಿದ ಅಂಕಲ್ ಟಾಮ್ಸ್ ಕ್ಯಾಬಿನ್ ಎಂಬ ಮಹಾಕಾದಂಬರಿಯ ಚಲಚ್ಚಿತ್ರ ರೂಪಾಂತರ. 13 ಹಾಲಿವುಡ್ಡಿನ ವಿಶಿಷ್ಟ ಕೃತಿಗಳಾದ ವೆಸ್ಟರ್ನರ್ಸ್. 14 ಒಂದೆರಡು ರೀಲಿನ ಲೆಕ್ಕವಿಲ್ಲದಷ್ಟು ಚುಟಕಚಿತ್ರಗಳು ಇವೆಲ್ಲ ಮನೋರಂಜನೆಯ ಚಿತ್ರಗಳಾಗಿ ಹಾಸ್ಯಪ್ರಾಧಾನವಾಗಿದ್ದುವು. ಯೂನಿವರ್ಸಲ್ ಸಂಸ್ಥೆಯ ಸೆಂಚುರಿ ಕಾಮಿಕ್ಸ್, ಸ್ನೂಕಮ್ಸ್, ಬಸ್ಟರ್ ಬ್ರೌನ್ ಚಿತ್ರಗಳು ವಿಶೇಷ ಜನಪ್ರಿಯವಾಗಿದ್ದುವು. 1919ರಲ್ಲಿ ಜರ್ಮನಿಯಲ್ಲಿ ಕಾನ್ರಾಡ್ ಹ್ವೈಟ ಅವರ ಅದ್ಭುತ ಅಭಿನಯದಿಂದಾಗಿ ರಾಬರ್ಟ್ ವಿಯೆನ ನಿರ್ಮಿಸಿದ ದಿ ಕ್ಯಾಬಿನೆಟ್ ಆಫ್ ಡಾ ಕ್ಯಾಲಿಗಾರಿ ಎಂಬ ಚಲನಚಿತ್ರ ಇಡೀ ಜಗತ್ತನ್ನೇ ಬೆರಗುಗೊಳಿಸಿತು. ಈ ಚಿತ್ರದ ಅನಂತರ ಜರ್ಮನಿಯಲ್ಲಿ ನಿರ್ಮಿತವಾದ ಮುಖ್ಯ ಚಿತ್ರಗಳು ಯಾವುವೆಂದರೆ-ಪಾಲ್ ಲೆನಿಯ ವ್ಯಾಕ್ ವಕ್ರ್ಸ್(1924), ಮರ್ನೊನ ದಿ ಲಾಸ್ಟ್ ಲಾಫ್ (1925), ಡೂಪೊಂಟರವಾದವಿಲ್ (1925), ಗೆಲೀನ ಅವರ ದಿ ಸ್ಟೂಡೆಂಟ್ ಆಫ್ ಪ್ರಾಗ್ (1926), ಪೆಬ್ಸ್ಟನ ಸೀಕ್ರೆಟ್ಸ್ ಆಫ್ ದಿ ಸೋಲ್ (1926), ಫ್ರಿಟ್ಸ್ ಲ್ಯಾಂಗ್ ಅವರ ಮೆಟ್ರೋ ಪೋಲಿಸ್ (1926) ಮೊದಲಾದವು. ಇವೆಲ್ಲವೂ ಜರ್ಮನಿಯ ಪ್ರಸಿದ್ಧ ಚಲನಚಿತ್ರ ಉಫಾದ(Uಈಂ) ತಯಾರಿಕೆ. ಇವುಗಳಲ್ಲಿ ಮಾಂಟೇಜ್ ಪದ್ಧತಿಯ ಉಪಯೋಗ ವಿಶೇಷವಿಲ್ಲದಿದ್ದರೂ ಇವೆಲ್ಲ ಶ್ರೇಷ್ಠ ದೃಶ್ಯಸಂವಿಧಾನ ಕಲೆಯಿಂದಲೂ ಉತ್ತಮ ನಿರ್ದೇಶನದಿಂದಲೂ ನಟವರ್ಗದ ಅತ್ಯುತ್ತಮ ಅಭಿನಯದಿಂದಲೂ ಚಲನಚಿತ್ರ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿವೆ. 1919 ರಲ್ಲಿ ರಷ್ಯದ ಹಳೆಯ ರಾಜ್ಯಾಡಳಿತ ಪೂರ್ಣ ಅಳಿದು ಹೋಗಿ ಪ್ರಜಾಸ್ವಾಮ್ಯದ ಆಡಳಿತ ಏರ್ಪಡತೊಡಗಿತು. ಹೀಗಾಗಿ 1919ರಲ್ಲೇ ಅಲ್ಲಿ ಚಲಚ್ಚಿತ್ರ ಉದ್ಯಮ ರಾಷ್ರೀಯ ಉದ್ಯಮವಾಗಿ ಪರಿವರ್ತಿಸಲ್ಪಟ್ಟಿತು. ರಾಜ್ಯದ ಹೊಸ ಆಡಳಿತ ಪ್ರತಿಭಾವಂತ ನಿರ್ದೇಶಕರಿಗೆಲ್ಲ ಚಲಚ್ಚಿತ್ರ ಕಲೆಯಲ್ಲಿ ಬೇಕಾದಷ್ಟು ಪ್ರಯೋಗಗಳನ್ನು ಮಾಡಿ, ಇಚ್ಛೆಯಂತೆ ವಿಹರಿಸಲು ಪೂರ್ಣ ಸ್ವಾತಂತ್ರ್ಯ ಕೊಟ್ಟಿತು. ಮುಂದಿನ ನಾಲ್ಕೈದು ವರ್ಷ ಅಲ್ಲಿಯ ಚಲಚ್ಚಿತ್ರ ಕಲಾವಿದರು ಕಲೆಯ ನಾನಾ ಬಗೆಯ ಶೋಧನೆಯ ಕೆಲಸದಲ್ಲಿ ಮಗ್ನರಾದರು. ವರ್ಟೊಫ್ ಎಂಬಾತ ಚಲಚ್ಚಿತ್ರ ಕ್ಯಾಮರದ ಹಲವಾರು ದೃಷ್ಟಿಕೋನಗಳ ಪ್ರಯೋಗಮಾಡಿ ನೋಡಿದ ಕುಲೆಶೊಫ್ ಚಿತ್ರಸಂಪಾದನೆಯ ವಿಧಾನಗಳನ್ನು ಶೋಧನೆ ಮಾಡುತ್ತ, ಗ್ರಿಫಿತ್ ಸೂಚಿಸಿದ ಮಾಂಟೇಜ್ ಪದ್ಧತಿಯನ್ನು ಮುಂದೆ ಸಾಗಿಸಿ ಅದರಿಂದ ಆಶ್ರ್ಚರ್ಯಕರವಾದ ಪರಿಣಾಮಗಳನ್ನುಂಟುಮಾಡುವ ಎಷ್ಟೋ ನವೀನ ರೀತಿವಿಧಾನಗಳನ್ನು ಕಂಡುಹಿಡಿದರು. ಈ ತೆರನ ಮಾಂಟೇಜ್ ವಿಧಾನವೇ ರಷ್ಯದ ಮುಂದಿನ ಎಲ್ಲ ಚಿತ್ರಗಳ ಒಂದು ಪ್ರಮುಖ ವೈಶಿಷ್ಟ್ಯವಾಯಿತು. ಇಂಥ ವೈಶಿಷ್ಟ್ಯವನ್ನೊಳಗೊಂಡ ರಷ್ಯದ ಮೊದಲ ಪ್ರಮುಖ ಚಿತ್ರವೆಂದರೆ ಸುಪ್ರಸಿದ್ಧ ನಿರ್ದೇಶಕ ಐಸೆನ್‍ಸ್ಸ್ಟೈನನ ದಿ ಬ್ಯಾಟಲ್‍ಷಿಪ್ ಪೊಟೆಮ್‍ಕಿನ್ (1925). ಇದು ರಷ್ಯದ 1905ರ ಕ್ರಾಂತಿಯ ಒಂದು ಚಿತ್ರ. ಇದರಲ್ಲಿ ಬರುವ ಒಡೆಸ್ಸಾ ಮೆಟ್ಟಲು ಶ್ರೇಣಿಯಲ್ಲಿ ನಡೆಯುವ ಆರು ಮಿನಿಟಿನ ದೃಶ್ಯ ಚಲಚ್ಚಿತ್ರ ಚರಿತ್ರೆಯಲ್ಲೇ, ಅತ್ಯಂತ ಪರಿಣಾಮಕಾರಿಯಾದ 'ಆರು ಮಿನಿಟುಗಳು ಎಂದು ಹೆಸರಾಗಿದೆ. ಐಸೆನಸ್ಟೈನರ ಅಕ್ಟೋಬರ್ (1928) ಮತ್ತು ದಿ ಓಲ್ಡ್ ಅಂಡ್ ನ್ಯೂ (1929), ಕೂಡ ಕಲೆಯಲ್ಲಿ ತುಂಬ ಮೇಲ್ಮೆಯನ್ನು ಸಾಧಿಸಿದ ಚಿತ್ರಗಳಾಗಿವೆ. ರಷ್ಯದ ಮತ್ತೊಬ್ಬ ಪ್ರತಿಭಾಶಾಲಿ ನಿರ್ದೇಶಕ ಪ್ರಖ್ಯಾತ ವಿ. ಐ. ಪುಡೋವ್‍ಕೆನ್. ಇವರ ಮದರ್ (1926), ದಿ ಎಂಡ್ ಆಫ್ ಸೇಂಟ್ ಪೀಟರ್ಟ್ ಬರ್ಗ್ (1927), ಸ್ಟಾರ್ಮ್ ಓವರ್ ಏಷ್ಯ (1929) ಮೊದಲಾದ ಚಿತ್ರಗಳು ಚಲಚ್ಚಿತ್ರ ಚರಿತ್ರೆಯನ್ನು ನಿರ್ಮಿಸಿವೆ. ಇವರು ಫಿಲ್ಮ್ ಟೆಕ್ನಿಕ್ ಮತ್ತು ಫಿಲ್ಮ್ ಆಕ್ಟಿಂಗ್ ಎಂಬ ಪುಸ್ತಕಗಳನ್ನು ಬರೆದರು. ರಷ್ಯದ ಮೂಲಕ ಚಲಚ್ಚಿತ್ರರಂಗದಲ್ಲಿ ಹೀಗೆಯೇ ಪ್ರಸಿದ್ಧಿ ಪಡೆದ ಇನ್ನಿತರ ನಿರ್ದೇಶಕರೆಂದರೆ ವರ್ಟೊಫ್, ಕುಲೆಶೊಫ್, ಡೊವ್‍ಜೆಂಕೊ, ಟೂರಿನ್, ಅಲೆಕ್ಸಾಂಡ್ರೊಫ್, ಆಮ್ರ್ಲರ್ ಟ್ರೊಬರ್ಗ್ ಮೊದಲಾದವರು. ಭಾರತದಲ್ಲಿ 1919ರ ಸುಮಾರಿಗೆ ಬಾಬುರಾವ್ ಪೆಯಿಂಟರ್ ಕೊಲ್ಹಾಪುರದಲ್ಲಿ ತಮ್ಮದೇ ಆದ ಮಹಾರಾಷ್ಟ್ರ ಫಿಲ್ಮ್ ಕಂಪನಿಯನ್ನು ಸ್ಥಾಪಿಸಿ, ಸೈರಂಧ್ರಿ, ಸಿಂಹಗಡ (ಶಿವಾಜಿಯ ವೀರಸಾಹಸಗಳ ಚಿತ್ರ), ಸತೀ ಪದ್ಮಿನಿ, ಸಾವ್ಕಾರಿ ಪಾಶ ಇತ್ಯಾದಿ 16 ಚಿತ್ರಗಳನ್ನು ನಿರ್ಮಿಸಿದರು. ಇವೆಲ್ಲ ಶ್ರದ್ಧಾಪೂರ್ವಕ ಕಾರ್ಯನಿರ್ವಹಣೆಯಿಂದಾಗಿ ಉತ್ತಮ ಚಿತ್ರಗಳಾಗಿದ್ದುವು. ಚರಿತ್ರೆಯ ವೀರಸಾಹಸಗಳನ್ನು ಚಿತ್ರಿಸಿದ್ದುದರಿಂದ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅವು ಕಂಡೂ ಕಾಣದಂತೆ ಬೆಂಬಲವನ್ನು ನೀಡಿದುವು. ಉದ್ಯಮದಲ್ಲಿ ಬಾಬುರಾವ್ ಇತರ ಸುಧಾರಣೆಗಳನ್ನೂ ಸಾಧಿಸಿದರು : ಕಥೆಯ ಕಾಲಕ್ಕೆ ಒಪ್ಪುವಂತೆ ಪಾತ್ರಧಾರಿಗಳ ಪೋಷಾಕು ಮತ್ತು ಹಿನ್ನಲೆ ದೃಶ್ಯಗಳ ವ್ಯವಸ್ಥೆ, ಬಣ್ಣದ ಪರದೆಗಳ ಬದಲು ಕಟ್ಟಿದ ಆವರಣಗಳ ಉಪಯೋಗ, ಯುದ್ಧ ಮೊದಲಾದ ಜನರ ಗುಂಪಿನ ದೃಶ್ಯಗಳಲ್ಲಿ ನೂರಾರು ಉಪ ಅಭಿನಯಕಾರರ ಉಪಯೋಗ-ಇತ್ಯಾದಿ. ಇವರಿಂದ ತರಬೇತು ಪಡೆದ ವಿ. ಶಾಂತರಾಮ್, ಬಾಬುರಾವ್ ಪೆಂಡಾರ್‍ಕರ್, ಫತೇಲಾಲ್ ಮತ್ತು ದಾಮ್ಲೆ ಇವರು ಮುಂದೆ 1929ರಲ್ಲಿ ದಿ ಪ್ರಭಾತ ಫಿಲ್ಮ್ ಕಂಪನಿ ಎಂಬ ಸಂಸ್ಥೆಯನ್ನು ಕೊಲ್ಹಾಪುರದಲ್ಲಿಯೇ ಸ್ಥಾಪಿಸಿ, ಗೋಪಾಲಕೃಷ್ಣ, ಚಂದ್ರಸೇನಾ, ಉದಯಕಾಲ್ ಮೊದಲಾದ ಉತ್ತಮ ಚಿತ್ರಗಳನ್ನು ನಿರ್ಮಿಸಿದರು. ಚಲನಚಿತ್ರ ಉದ್ಯಮ ಮುಂಬಯಿ, ಕಲ್ಕತ್ತ, ಲಾಹೋರ್ ಮೊದಲಾದ ಶಹರಗಳಿಗೂ ಹರಡಿತು. 1925ರ ಸುಮಾರಿಗೆ ಲಾಹೋರಿನ ದಿ ಗ್ರೇಟ್ ಈಸ್ಟರ್ನ್ ಕಾರ್ಪೊರೇಷನ್ ಸಂಸ್ಥೆ ಜರ್ಮನಿಯ ಎಮೆಲ್ಕಾ ಫಿಲ್ಮ್ ಕಂಪನಿಯ ಸಹಾಯದಿಂದ ಲೈಟ್ ಆಫ್ ಏಷ್ಯ ಎಂಬ ಚಿತ್ರವನ್ನು ನಿರ್ಮಿಸಿತು. ಇದು ಎಡ್ವಿನ್ ಆರ್ನಲ್ಡರ ಪ್ರಖ್ಯಾತ ಕವಿತೆಯನ್ನು ಆಧರಿಸಿಕೊಂಡು ಬುದ್ಧನ ಜೀವನವನ್ನು ಚಿತ್ರಿಸುತ್ತದೆ. ಈ ಚಿತ್ರ 10 ವಾರ ಲಂಡನ್ನಿನಲ್ಲಿ ಪ್ರದರ್ಶಿಸಲ್ಪಟ್ಟು, ಆ ವರ್ಷದ ಚಿತ್ರಗಳಲ್ಲಿ ಅತ್ಯುತ್ತಮವಾದುದೆಂದು ಚಿತ್ರವಿಮರ್ಶಕರಿಂದ ಪ್ರಶಸ್ತಿ ಪಡೆಯಿತು. ಈ ಚಿತ್ರದಲ್ಲಿ ಹಿಮಾಂಶುರಾಯ್ ಸಹನಿರ್ದೇಶಕರಾಗಿ ಬುದ್ಧನ ಪಾತ್ರವನ್ನು ವಹಿಸಿದ್ದರು. ಆದರೆ ಇಷ್ಟರೊಳಗೆ ಸ್ಥಾಪಿತವಾದ ಅನೇಕ ವ್ಯಾಪಾರೀ ಸಂಸ್ಥೆಗಳು ಭಾರತೀಯ ಚಲಚ್ಚಿತ್ರೋದ್ಯಮದಲ್ಲಿ ಸಾಧಿಸಲ್ಪಟ್ಟ ಈ ಸುಧಾರಣೆಗಳನ್ನೆಲ್ಲ ಅಲಕ್ಷಿಸಿ, ಶೀಘ್ರ ಲಾಭಗಳಿಕೆ ಮತ್ತು ಕೈಗೆ ಎಟಕಿದ ಘಟಕಾಂಶಗಳ ತ್ವರಿತ ಬಳಕೆ ಇವೆ ಮೊದಲಾದ ಮಾರ್ಗಗಳಿಂದ ಜನತೆಯ ಮೇಲೆ ಯಾವ ಉಚ್ಚ ಪರಿಣಾಮವನ್ನೂ ಮಾಡದೆ ಹೋದುವು. ಇಂಥ ಸನ್ನಿವೇಶದಲ್ಲಿಯೂ ಪ್ರಸಿದ್ಧ ಬರೆಹಗಾರರ ಕತೆಗಳನ್ನು ಚಿತ್ರಿಸಲು ಯತ್ನ ಮತ್ತು ಭಾರತೀಯ ಜೀವನದಲ್ಲಿನ ವಿಷಯಗಳನ್ನು ಪ್ರತಿಪಾದಿಸಲು ಆತುರ, ಇವುಗಳ ಫಲವಾಗಿ ರವೀಂದ್ರನಾಥ ಠಾಕೂರರ ಕತೆಯೊಂದರ ಆಧಾರದ ಮೇಲೆ ಬಲಿದಾನ, ಹಾಗೆಯೇ ಶರತ್‍ಚಂದ್ರ ಚಟರ್ಜಿಯವರ ಕತೆಯೊಂದರ ಆಧಾರದ ಮೇಲೆ ಅಂಧಾರೆ ಆಲೋ ಮೊದಲಾದ ಉತ್ತಮ ಚಿತ್ರಗಳು ನಿರ್ಮಿತವಾದವು. 1926ರಲ್ಲಿ ಕಲ್ಕತ್ತದಲ್ಲಿ ಧೀರೇಂದ್ರನಾಥ ಗಂಗೋಪಾಧ್ಯಾಯ ಇಂಗ್ಲೆಂಡ್ ರಿಟನ್ರ್ಡ್ ಎಂಬ ಉತ್ತಮ ಚಿತ್ರವೊಂದನ್ನು ನಿರ್ಮಿಸಿದರು. 1928ರೊಳಗೆ ಮಹಾತ್ಮ ಗಾಂಧೀಜಿಯವರ ಉಪದೇಶಗಳು ದೇಶದಲ್ಲೆಲ್ಲ ವ್ಯಾಪಿಸಿದ್ದವು. ಮುಖ್ಯವಾಗಿ ಹಿಂದೂ ಮುಸ್ಲಿಮರ ಬಾಂಧವ್ಯಕ್ಕಾಗಿ ಅವರು ಆಗ್ಗೆ ಅಸಾಧಾರಣವಾಗಿ ಶ್ರಮಪಡುತ್ತಿದ್ದರು. ಈ ವಿಷಯವನ್ನೇ ಮುಂಬಯಿಯ ಇಂಪೀರಿಯಲ್ ಫಿಲ್ಮ್ ಕಂಪನಿ ಧೈರ್ಯದಿಂದ ಆರಿಸಿ, ಕ್ರೋಧ್ ಎಂಬ ಚಿತ್ರವನ್ನೂ ಪ್ರಭಾತ್ ಸಂಸ್ಥೆ ಅದೇ ಸುಮಾರಿಗೆ ಸ್ವರಾಜ್ಯ ತೋರಣ್ ಎಂಬ ಚಿತ್ರವನ್ನೂ ನಿರ್ಮಿಸಿದುವು. ಇದೇ ಅವಧಿಯಲ್ಲಿ ಮೋಹನ ಭವನಾನಿ ಪ್ರಖ್ಯಾತ ಸಂಸ್ಕøತ ನಾಟಕ ಮೃಚ್ಛಕಟಿಕವನ್ನು ವಸಂತಸೇನಾ ಎಂಬ ಹೆಸರಿನಲ್ಲಿ ಉತ್ತಮ ಚಿತ್ರವನ್ನಾಗಿ ನಿರ್ಮಿಸಿದರು. ಇದರಲ್ಲಿ ಪ್ರಸಿದ್ಧ ಕನ್ನಡ ನಾಟಕಕಾರರ ಟಿ. ಪಿ. ಕೈಲಾಸಂ ಸಂಸ್ಥಾನಕನ ಪಾತ್ರದಲ್ಲಿ ಶ್ರೇಷ್ಠ ಅಭಿನಯ ನೀಡಿದರು. ಚಿತ್ರ ಯೂರೋಪಿನಲ್ಲಿ ಅನೇಕ ಕಡೆ ಪ್ರದರ್ಶಿಸಲ್ಪಟ್ಟು, ಫ್ರಾನ್ಸಿನಲ್ಲಿಯೂ ಜರ್ಮನಿಯಲ್ಲಿಯೂ ತುಂಬ ಜನಾದರಣೆಯನ್ನು ಪಡೆಯಿತು. (ಆ) ವಾಕ್ ಚಿತ್ರಗಳು : 1930ರಿಂದ 1940ರ ವರೆಗೆ : 1923ರ ಆದಿಯಲ್ಲೇ ಲಿ. ಡಿ. ಫಾರೆಸ್ಟ್ ಎಂಬ ವಿಜ್ಞಾನಿ, ಚಲಚ್ಚಿತ್ರಪಟಲದಲ್ಲಿ ಶಬ್ದಜೋಡಣೆಯ ವಿಧಾನದ ಮೂಲಕ ಮೂಕ ಹಾಲಿವುಡ್ ಇನ್ನು ಹೇಗೆ ಮಾತಾಡಲು ಪ್ರಾರಂಭಿಸಬಹುದೆಂಬುದನ್ನು ಪ್ರತ್ಯಕ್ಷ ಪ್ರಯೋಗದಿಂದ ತೋರಿಸಿಕೊಟ್ಟರು. ಮುಂದಿನ ಎರಡು ವರ್ಷಗಳಲ್ಲಿ ಈ ಪ್ರಯೋಗವನ್ನು ದೋಷರಹಿತವಾಗುವಂತೆ ಸಂಸ್ಕರಿಸಲಾಯಿತು. ಹಾಲಿವುಡ್ಡಿನ ವಾರ್ನರ್ ಸಹೋದರರು ಈ ಅದ್ಭುತ ಪ್ರಯೋಗದಿಂದ ವಿಟಾಫೋನ್ ಕಂಪನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಈ ಪ್ರಯೋಗದ ಸ್ವಾಮ್ಯವನ್ನು ಪಡೆದ ವೆಸ್ಟರ್ನ್ ಎಲೆಕ್ಟ್ರಿಕ್ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡು, 1926ರ ಆಗಸ್ಟ್ 6ರಂದು ತಮ್ಮ ಮೊದಲ ವಾಕ್‍ಚಿತ್ರ ಪ್ರದರ್ಶನವನ್ನು ನಡೆಸಿದರು. ಅದರಲ್ಲಿ ಜಾನ್ ಬ್ಯಾರಿಮೋರನ ಡಾನ್‍ವಾನ್ ಚಿತ್ರವಲ್ಲದೆ ಅನೇಕ ಸಂಗೀತ ದೃಶ್ಯಗಳೂ ಇದ್ದುವು. ಪ್ರದರ್ಶನ ಪ್ರೇಕ್ಷಕರಲ್ಲಿ ವಿಪರೀತ ಉತ್ಸಾಹವನ್ನುಂಟುಮಾಡಿತು. ಮುಂದಿನ ಎರಡು ವರ್ಷ, ಹಾಲಿವುಡ್ ಮೂಕ ಚಿತ್ರಗಳನ್ನು ಬಿಡಲಾರದೆ, ವಾಕ್‍ಚಿತ್ರಗಳನ್ನು ಅಲಕ್ಷಿಸಲಾರದೆ, ಒಂದು ವಿಶೇಷ ಗೊಂದಲದಲ್ಲಿ ಸಿಕ್ಕಿಕೊಂಡಿತು. ಕಟ್ಟಕಡೆಗೆ ಪ್ರಗತಿಯ ಒತ್ತಡವನ್ನು ತಡೆಯಲಾರದೆ, 1929 ಮುಗಿಯುವುದರೊಳಗೆ ಮೂಕ ಹಾಲಿವುಡ್ಡಿಗೆ ಪೂರ್ಣ ಮಾತು ಬಂದು, ವಾಕ್‍ಚಿತ್ರಗಳ ತಯಾರಿಕೆಯಲ್ಲಿಯೇ ಅದು ಪೂರ್ಣ ನಿರತವಾಯಿತು. ಇದರ ಪರಿಣಾಮವಾಗಿ ಮೂಕಚಿತ್ರಗಳ ಪ್ರಥಮ ಶ್ರೇಣಿಯ ಅನೇಕ ನಟನಟಿಯರು ಭಾಷೆಯ ಪರಿಚಯವಿಲ್ಲದೆ, ಇಲ್ಲವೆ ಮಾತಿನ ಸ್ಪಷ್ಟತೆಯಿಲ್ಲದೆ, ಇಲ್ಲವೆ ಮಾತಿನ ಸ್ವರ ಮೈಕಿಗೆ ಯೋಗ್ಯವಾಗದೆ ಚಲಚ್ಚಿತ್ರರಂಗದಿಂದ ಅದೃಶ್ಯರಾದರು. ಇಂಥವರಲ್ಲಿ ಹೆರಾಲ್ಡ್ ಲಾಯ್ಡ್, ಬಸ್ಟರ್ ಕೀಟನ್, ಜಾನ್ ಗಿಲ್ಬರ್ಟ್, ಗ್ಲೊರಿಯಾಸ್ಟೊನ್‍ಸನ್, ಗ್ರೀಟಾ ಗಾರ್ಬೊ(ಒಂದೆರಡು ಚಿತ್ರಗಳ ಅನಂತರ), ಲೋರಾ ಲಾ ಪ್ಲಾಂಟ, ಸಾವಿರ ಮುಖಗಳ ಲಾನ್ ಜಾನಿ (ನಾನು ಸಾವಿರ ಮುಖಗಳನ್ನು ಧರಿಸಬಲ್ಲೆ, ಆದರೆ ಸ್ವರಗಳಿಂದ ಮಾತನಾಡಲಾರೆ) ಮೊದಲಾದವರಿದ್ದರು. ಚಿತ್ರಗಳಿಗೆ ಸೇರುವ ಮೊದಲೇ ನಾಟಕರಂಗದಲ್ಲಿ ಅಲ್ಪಸ್ವಲ್ಪ ಅನಭವವಿದ್ದವರು ಮಾತ್ರ ವಾಕ್‍ಚಿತ್ರಗಳ ನಟವರ್ಗದಲ್ಲಿ ಉಳಿದರು. ಚಾರ್ಲಿ ಚಾಪ್ಲಿನ್‍ನ ವೈಶಿಷ್ಟ್ಯ ಮೂಕ ನಟನೆಯ ಕಲೆಯೇ ಆಗಿದ್ದುದರಿಂದ ಅವರ ಶಬ್ದಚಿತ್ರಗಳ ಆಗಮನವನ್ನು ಮೆಚ್ಚಲಿಲ್ಲ. ಆದರೆ ತಮ್ಮ ಅದ್ಭುತ ಪ್ರತಿಭೆಯಿಂದಾಗಿ ಮುಂದೆ ಶಬ್ದವನ್ನೂ ತಮ್ಮ ಕಲೆಗೆ, ಒಂದಿಷ್ಟೂ ಚ್ಯುತಿಯಿಲ್ಲದಂತೆ ಬಳಸಲು ಶಕ್ತರಾದರು. ಮೂಕಚಿತ್ರ ನಾಟಕವನ್ನು ಮೆಟ್ಟಿತ್ತು. ಈಗ ಶಬ್ದಚಿತ್ರ ತನ್ನ ಯಶಸ್ವಿಗಾಗಿ ನಾಟಕರಂಗವನ್ನೇ ಮರೆಹೊಗಬೇಕಾಯಿತು. ನಾಟಕರಂಗದ ಅಭಿನಯಕಾರರೇ ಅದರ ಯಶಸ್ಸನ್ನು ಕಾಪಾಡಬೇಕಾಯಿತು. ನಾಟಕರಂಗದ ನಾಟಕಗಳೇ ಅದರ ಆಹಾರವಾಗಬೇಕಾಯಿತು. ಇದರಿಂದ ಚಲಚ್ಚಿತ್ರ ಕಲೆಗೆ ಮೊದಮೊದಲು ವಿಶೇಷ ಕೆಡುಕೇ ಉಂಟಾಯಿತು. ಚಲಚ್ಚಿತ್ರಗಳಲ್ಲಿ ಚಲನ ಮಾಯವಾಗಿ ಅವು ಬರೀ ರಂಗಭೂಮಿಯ ನಾಟಕಗಳ ಪ್ರತೀಕಗಳಾದವು. ಹೀಗಾಗದಂತೆ ಅಲ್ಲಿಯ ಕೆಲವು ನಿರ್ದೇಶಕರಾದರೂ ಪ್ರಯಾಸಪಟ್ಟು ವಾಕ್‍ಚಿತ್ರ ರಂಗಭೂಮಿಯ ನಾಟಕವಾಗದೆ ಚಲಚ್ಚಿತ್ರ ನಾಟಕವಾಗಲು ದುಡಿದರು. ಚಿತ್ರಗಳಿಗೆ ಶಬ್ದದ ಜೋಡಣೆ ಸಂಗೀತವೂ ಒಂದೇ ಸಮನೆ ರಭಸದಿಂದ ಅವುಗಳಲ್ಲಿ ಸೇರುವಂತಾಯಿತು. ಪ್ರತಿಚಿತ್ರದಲ್ಲಿ ಹಾಡುಗಳನ್ನು ಅವಶ್ಯವಾಗಿ ಸೇರಿಸಬೇಕಾಗಿ ಬಂತು. ಸಂಗೀತ ಪ್ರಧಾನವಾದ ವಿಷಯಗಳಲ್ಲಿ ಮಾತ್ರ ಅವು ಸಹಜವಾಗಿ ವಿಶೇಷವಾಗಿದ್ದವು. ಇಲ್ಲಿಯೂ ಹದವಿತ್ತು. ಚಿತ್ರಗಳಲ್ಲಿನ ನಾಲ್ಕೈದು ಹಾಡುಗಳೂ ಕ್ರಮೇಣ ಕಡಿಮೆಯಾಗುತ್ತ ಬಂದು, ಸ್ವಲ್ಪ ಸಮಯ ಥೀಮ್‍ಸಾಂಗ್ ಅಥವಾ ವಿಷಯವನ್ನು ಸಂಕೇತವಾಗಿ ಸೂಚಿಸುವ ಹಾಡು ಮಾತ್ರ ಉಳಿಯಿತು. ಇದೂ ಸ್ವಲ್ಪ ಸಮಯದಲ್ಲೇ ಮಾಯವಾಗಿ, ಚಿತ್ರ ಪ್ರಚೋದಿಸುತ್ತಿರುವ ಭಾವಗಳಿಗೆ ರಸಪುಷ್ಟಿ ಕೊಡುವಂತೆ ಮಾತ್ರ ಸಂಗೀತದ ಪ್ರಯೋಗ ಪ್ರಚಾರಕ್ಕೆ ಬಂತು-ಅಂದರೆ, ಸಂಗೀತ ಹಿನ್ನೆಲೆಯಲ್ಲಿ ಮಾತ್ರ ಉಳಿಯಿತು. ಸಹಜವಾಗಿ ಹೀಗೆ ಆಗಬೇಕಾದುದೇ, ಏಕೆಂದರೆ ಚಿಲಚ್ಚಿತ್ರ ಪ್ರಥಮತಃ ದೃಶ್ಯಕಲೆಯೇ. ಈ ದಿಶೆಯ 10 ವರ್ಷಗಳಲ್ಲಿ ಹಾಲಿವುಡ್ 2,000ಕ್ಕೂ ಮೀರಿದ ಚಿತ್ರಗಳನ್ನು ನಿರ್ಮಿಸಿರಬಹುದು. ಅವುಗಳಲ್ಲಿ 1,000 ಚಿತ್ರಗಳಾದರೂ ತುಂಬ ಜನಾದರಣೆಯನ್ನು ಪಡೆದಿದ್ದಿರಬೇಕು. ನೂರಿನ್ನೂರು ಆದರೂ ಪ್ರಥಮ ಶ್ರೇಣಿಯ ಚಿತ್ರಗಳಾಗಿದ್ದಿರಬೇಕು. ಇವುಗಳ ವಿಷಯ ಸ್ಥೂಲವಾಗಿ ಕೂಡ ಇಲ್ಲಿ ಹೇಳುವುದು ಕಷ್ಟ. ಮುಖ್ಯವಾಗಿ ಶಬ್ದ ಬಂದ ಅನಂತರ, ಹಾಲಿವುಡ್ಡಿನ ಚಿತ್ರಗಳು ಹೆಚ್ಚುಹೆಚ್ಚಾಗಿ ಸಾಮಾಜಿಕವಾಗಿದ್ದು ಜೀವನದ ಎಲ್ಲ ಅಂತಸ್ತುಗಳನ್ನೂ ಬಹುತರವಾಗಿ ಚಿತ್ರಿಸಲು ಪ್ರಯತ್ನಿಸಿದವು. ಈ ಬಹುಮುಖತೆ ಅವುಗಳ ಹೆಸರುಗಳಿಂದಲಾದರೂ ವಿದಿತವಾಗಲಿ ಎಂದು ಕೆಲವೇ ಪ್ರಮುಖ ಚಿತ್ರಗಳ ಹೆಸರುಗಳನ್ನು ಇಲ್ಲಿ ಕೊಡಲಾಗಿದೆ. ಲೂಯಿಸ್ ಮೈಲ್‍ಸ್ಟೋನ್ ಅವರ ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್ (1930ರಲ್ಲಿ ಹೊರಬಂದ ಈ ಅಮೋಘ ಚಿತ್ರ ಇಂದಿಗೂ ಯುದ್ಧಚಿತ್ರಗಳಲ್ಲೆಲ್ಲ ಅತಿ ಶ್ರೇಷ್ಟಚಿತ್ರವೆಂದು ಪರಿಗಣಿಸಲ್ಪಟಿದೆ). ಅವರದೇ ಆದ ಫ್ರಂಟ್ ಪೇಜ್ (1931) ಮತ್ತು ಆಫ್ ಮೈಸ್ ಅಂಡ್ ಮೆನ್ (1940), ವೆಸ್ಲಿ ರಗ್ಗಲ್ಸರ ಸಿಮರನ್ (1930). ಚಾರ್ಲಿ ಚಾಪ್ಲಿನ್ನರ ಸಿಟಿ ಲೈಟ್ಸ್ (1931), ಮಾಡರ್ನ್ ಟೈಮ್ಸ್ (1936) ಮತ್ತು ದಿ ಗ್ರೇಟ್ ಡಿಕ್ಟೇಟರ್ (1940) ಅರ್ನಸ್ಟ್ ಲೂಬಿಚ್‍ರ ಲವ್ ಪೆರೇಡ್ (1930), ವನ್ ಅವರ್ ವಿದ್ ಯೂ (1932), ಟ್ರಬಲ್ ಇನ್ ಪ್ಯಾರಡೈಸ್ (1932) ಮತ್ತು ದಿ ಮೆರಿ ವಿಡೊ (1934) (ಇವೆಲ್ಲ ಕೆಲವು ಜೀವನರೀತಿಗಳ ಲಘು ವಿಮರ್ಶೆಗಳಾಗಿದ್ದು ಹರ್ಷದಾಯಕ ಚಿತ್ರಗಳಾಗಿವೆ). ಗ್ರೆಗರಿ ಲಾ ಕಾವಾ ಅವರ ಗೇಬ್ರಿಯಲ್ ಓವರ್ ದಿ ಹ್ವೈಟ್ ಹೌಸ್ (1932). ಮೆರ್ವಿನ್ ಲ ರಾಯ್ ಅವರ ಐ ಆ್ಯಮ್ ಎ ಫ್ಯೂಜಿಟಿವ್ ಫ್ರಮ್ ಎ ಚೇನ್ ಗ್ಯಾಂಗ್ (1932). ರೊಬನ್ ಮೆಮೌಲಿಯನ್ ಅವರ ಡಾಕ್ಟರ್ ಜೆಕಿಲ್ ಅಂಡ್ ಮಿಸ್ಟರ್ ಹೈಡ್ (1933). ಫ್ರಾಂಕ್ ಕಾಪ್ರಾ ಅವರ ಲೇಡಿ ಫಾರ್ ಎ ಡೇ (1933), ಇಟ್ ಹ್ಯಾಪನ್ಡ್ ಒನ್ ನೈಟ್ (1934), ಮಿಸ್ಟರ್ ಡೀಡ್ಸ್ ಗೋಸ್ ಟು ಟೌನ್ (1936) ಮತ್ತು ಲಾಸ್ಟ್ ಹೊರೈಜನ್ (1937). ಸಿಸಿಲ್ ಡಿ ಮಿಲ್ಸ್‍ನ ಸೈನ್ ಆಫ್ ದಿಕ್ರಾಸ್ (1932) ಮತ್ತು ದಿ ಪ್ಲೇನ್ಸ್‍ಮನ್ (1937), ಮೈಕೇಲ್ ಕರ್ಟಿಸ್ ಅವರ ಬ್ಲ್ಯಾಕ್ ಫ್ಯೂರಿ (1935). ವಿಲಿಯಂ ಡಿಯೆಟರ್ಲನ ಲ್ಯೂಯಿ ಪಾಸ್ತರ್ (1936). ಮತ್ತು ಎಮಲಿ eóÉೂೀಲ (1937). ಫ್ರಿಟ್ಸ್ ಲ್ಯಾಂಗನ ಫ್ಯೂರಿ (1936). ಸಿಡ್ನಿ ಫ್ರಾಂಕ್ಲಿನ್ನನ ಗುಡ್ ಅರ್ತ್ (1937). ಎರಿಕ್ ಫಾನ್ ಸ್ಟ್ರೋಹಿಮನ ಗ್ರೀಡ್ (1923), ಕಿಂಗ್ ವಿಡೋರನ ಅವರ್ ಡೆಯ್ಲಿ ಬ್ರೆಡ್ (1934) ಮತ್ತು ದಿ ಸಿಟ್ಯಾಡಲ್ (1938). ಮಾಕ್ರ್ಸ್ ಸಹೋದರರ ನೈಟ್ ಎಟ್ ದಿ ಆಪೇರ (1936) ಮತ್ತು ರೂಮ್ ಸರ್ವಿಸ್ (1938). ವಾಲ್ಟ್ ಡಿಸ್ನೆಯ ಸ್ನೊ ಹ್ವೈಟ್ ಅಂಡ್ ದಿ ಸೆವೆನ್ ಡ್ವಾಫ್ರ್ಸ್ (1938) ಮತ್ತು ಪಿನೋಕಿಯೊ (1940). ಈ ನಿರ್ದೇಶಕರಲ್ಲಿ ಹಲವರು ಮೂಕಚಿತ್ರಗಳ ಕಾಲದಲ್ಲಿ ವಿಶೇಷ ಪ್ರಸಿದ್ಧಿ ಪಡೆದವರಾಗಿದ್ದರು. ಅಮೆರಿಕದ ಯುನಿವರ್ಸಲ್ ಕಂಪನಿಯ ಮೆಲಡಿ ಆಫ್ ಲವ್ ಎಂಬ ಚಿತ್ರ ಮೊದಲ ವಾಕ್‍ಚಿತ್ರವಾಗಿ ಭಾರತದಲ್ಲಿ 1929ರಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಭಾರತದಲ್ಲಿ ಮೊದಲು ಚಿತ್ರಕ್ಕೆ ಶಬ್ದ ಜೋಡಿಸಿದ್ದು ಕಲ್ಕತ್ತದ ಮದನ್ ಥಿಯೇಟರ್ಸ್ ಅವರು. 1931ನೆಯ ಫೆಬ್ರುವರಿ 4ರಂದು ಈ ಸಂಸ್ಥೆ ಮುಂಬಯಿಯ ಎಂಪೈರ್ ಸಿನೆಮ ಮಂದಿರದಲ್ಲಿ ಎರಡು ಚಿಕ್ಕ ಶಬ್ದಚಿತ್ರಗಳನ್ನು ಪ್ರದರ್ಶಿಸಿತು. ಇವುಗಳಲ್ಲಿ ಪ್ರಸಿದ್ಧ ಗಾಯಕಿ ಮುನ್ನಿಬಾಯಿ ಹಾಡಿದ ಅಪ್ನಾ ಮೌಲಾ ಕಿ ಜಗನ್ ಬನಿ ಎಂಬ ಹಾಡೂ ಮಾಸ್ಟರ್ ಮೋಹನ್, ಮಾಸ್ಟರ್ ನಿಸ್ಸಾರ್ ಮೊದಲಾದವರು ಹಾಡಿದ ಹಾಡುಗಳೂ ಇದ್ದುವು. ಅಲ್ಲದೆ ಕೆಲವು ನೃತ್ಯಗಳು, ನಾಟಕ ದೃಶ್ಯಗಳು. ತಬಲವಾದನ, ಸಿತಾರವಾದನ ಮೊದಲಾದುವೂ ಇದ್ದುವು. ಆದರೆ ಭಾರತದಲ್ಲಿ ಪೂರ್ಣ ಉದ್ದದ ವಾಕ್‍ಚಿತ್ರವನ್ನು ಮೊದಲು ತಯಾರಿಸಿ ಪ್ರದರ್ಶಿಸಿದ ಪ್ರಶಸ್ತಿ ಮುಂಬಯಿಯ ಇಂಪೀರಿಯಲ್ ಫಿಲ್ಮ್ ಸಂಸ್ಥೆಗೆ ಸೇರುತ್ತದೆ. ಈ ಸಂಸ್ಥೆ 1931ರ ಮಾರ್ಚ್ 14ರಂದು ವೆಸ್ಟರ್ನ್ ಎಲೆಕ್ಟ್ರಿಕ್ ಸೌಂಡ್ ಸಿಸ್ಟಮನ್ನು ಉಪಯೋಗಿಸಿ ತಯಾರಿಸಿದ ತನ್ನ ಮೊದಲ ವಾಕ್‍ಚಿತ್ರವಾದ ಆಲಂ ಆರಾವನ್ನು ಮುಂಬಯಿಯ ಮೆಜಸ್ಟಿಕ್ ಸಿನೆಮ ಮಂದಿರದಲ್ಲಿ ಪ್ರದರ್ಶಿಸಿತು. ಇದರಲ್ಲಿ ಮಿಸ್ ಜûುಬೇದ ಮಾಸ್ಟರ್ ವಿಠಲ್, ಪೃಥ್ವೀರಾಜ್, ಜಿಲ್ಲೂಬಾಯಿ, ಜಗದೀಶ ಶೇಠಿ ಮೊದಲಾದವರು ಅಭಿನಯಿಸಿದ್ದರು. ಛಾಯಾಗ್ರಹಣವನ್ನು ಆದಿ ಇರಾನಿ, ಶಬ್ದಸಂಯೋಜನೆಯನ್ನು ಅರ್ದೇಶಿರ್ ಇರಾನಿ ನಿರ್ವಹಿಸಿದ್ದರು. ಕಥೆಯಲ್ಲಿ ವಿಶೇಷ ಹುರುಳಿಲ್ಲದಿದ್ದು, ಬರೀ ಹಾಡುಗಳನ್ನು ಮತ್ತು ದೃಶ್ಯಗಳನ್ನು ಪೋಣಿಸಲು ಮಾತ್ರ ಅದನ್ನು ಬಳಸಲಾಗಿತ್ತು. ಭಾರತದ ಮೊದಲ ವಾಕ್‍ಚಿತ್ರವಾದುದರಿಂದ ಅದು ಅಪಾರವಾದ ಪ್ರಶಸ್ತಿಯನ್ನೂ ಹಣವನ್ನೂ ಗಳಿಸಿತು. ದೇಶದ ಹೊರಗೂ ಹೋಗಿ ನೆರೆದೇಶಗಳ ಜನರ ಆದರವನ್ನೂ ಪಡೆಯಿತು. ಆಲಂ ಆರಾವನ್ನು ಶೀಘ್ರವೇ ಹಿಂಬಾಲಿಸಿ ಮದನ್ ಥಿಯೇಟರ್ಸ್ ಅವರ ಮೊದಲ ಪೂರ್ಣ ಉದ್ದದ ವಾಕ್‍ಚಿತ್ರ ಷಿರಿನ್ ಫರ್‍ಹಾದ್ ಬಂತು. ಇದರಲ್ಲಿ ಮಿಸ್ ಜಹಾನರಾ ಕಜ್ಜನ್ ಮತ್ತು ಮಾಸ್ಟರ್ ನಿಸ್ಸಾರ್ ಅಭಿನಯಿಸಿದ್ದರು. ಕಥೆ ಪರ್ಷಿಯದ ಪುರಾತನ ಪ್ರಣಯಕಥೆಯೊಂದನ್ನು ಅವಲಂಬಿಸಿದ್ದು ; ಚಿತ್ರದಲ್ಲಿ 42 ಹಾಡುಗಳಿದ್ದವು. ತಾಂತ್ರಿಕ ದೃಷ್ಟಿಯಿಂದ ಇದು ಆಲಂ ಆರಾಗಿಂತ ಉತ್ತಮವಾಗಿತ್ತು. ಪ್ರಾಂತೀಯ ಭಾಷೆಗಳಲ್ಲೂ ವಾಕ್‍ಚಿತ್ರಗಳ ನಿರ್ಮಾಣಕ್ಕೆ ವಿಳಂಬವಾಗಲಿಲ್ಲ. ಮುಂಬಯಿ, ಕಲ್ಕತ್ತ, ಲಾಹೋರ್, ಮದ್ರಾಸು, ಪೂನ, ಕೊಯಮತ್ತೂರು, ಸೇಲಂ ಮೊದಲಾದ ಶಹರುಗಳಲ್ಲಿ ಅಂಥ ಚಿತ್ರಗಳನ್ನು ತಯಾರಿಸಲು ಸಂಸ್ಥೆಗಳು ಸ್ಥಾಪಿತವಾದವು. ಮೊದಲು ಬಂದ ಚಿತ್ರಗಳು ಯಾವುವೆಂದರೆ-ಮರಾಠಿಯಲ್ಲಿ ಪ್ರಭಾತ್ ಸಂಸ್ಥೆಯ ಅಯೋಧ್ಯಾಚಾ ರಾಜಾ, ಗುಜರಾತಿಯಲ್ಲಿ ಸಾಗರ್ ಸಂಸ್ಥೆಯ ನರಸೀ ಮೆಹತಾ, ಕನ್ನಡದಲ್ಲಿ ಸೌತ್ ಇಂಡಿಯಾ ಮೂವಿಟೋನ್ ಅವರ ಸತೀ ಸುಲೋಚನಾ, ತಮಿಳಿನಲ್ಲಿ ಇಂಪೀರಿಯಲ್ ಸಂಸ್ಥೆಯ ಕಾಳಿದಾಸ, ಬಂಗಾಳಿಯಲ್ಲಿ ಮದನ್ ಸಂಸ್ಥೆಯ ಜಮಾಯ್ ಶಷ್ಟಿ, ಮತ್ತು ಪಂಜಾಬಿಯಲ್ಲಿ ಹಿಂದ್ ಮಾತಾ ಸಿನೆಟೋನ್‍ರವರ ಮಿಜಾರ್ó ಸಾಹಿಬಾ. ವ್ಯಾಪಾರ ದೃಷ್ಟಿಯಿಂದ ಚಲಚ್ಚಿತ್ರ ಉದ್ಯಮ ಮುಂದಿನ ಕೆಲವು ವರ್ಷಗಳಲ್ಲಿ ವಿಶೇಷ ಪ್ರಗತಿಯನ್ನು ಹೊಂದಿತು. ಅನೇಕ ಹೊಸ ಚಲಚ್ಚಿತ್ರ ಸ್ಟೂಡಿಯೋಗಳು ಪ್ರದರ್ಶನಮಂದಿರಗಳೂ ನಿರ್ಮಿತವಾದವು. 1934ರೊಳಗೆ ದೇಶದಲ್ಲಿ 50ಕ್ಕಿಂತ ಹೆಚ್ಚು ವಾಕ್‍ಚಿತ್ರ ನಿರ್ಮಾಪಕ ಸಂಸ್ಥೆಗಳಿದ್ದುವು. ಅದೇ ವರ್ಷ ಹಿಮಾಂಶುರಾಯ್ ಬಾಂಬೆ ಟಾಕೀಸ್ ಸಂಸ್ಥೆಯನ್ನು 25 ಲಕ್ಷ ರೂಪಾಯಿ ಬಂಡವಾಳ ಹಾಕಿ ಸ್ಥಾಪಿಸಿದರು. 1931ರಲ್ಲಿ 28 ವಾಕ್‍ಚಿತ್ರಗಳು ನಿರ್ಮಿತವಾದವು; ಅವನ್ನು ಪ್ರದರ್ಶಿಸಲು 400 ಪ್ರದರ್ಶನ ಮಂದಿರಗಳಾದುವು. 1935ರಲ್ಲಿ ಇವುಗಳ ಸಂಖ್ಯೆ ಕ್ರಮವಾಗಿ 233 ಮತ್ತು 700ಕ್ಕೆ ಏರಿತು. ಅಂದಿನವರೆಗೆ ಯಾವ ವರ್ಷವೂ ಭಾರತದಲ್ಲಿ ಅಷ್ಟು ಚಿತ್ರಗಳು ನಿರ್ಮಿತವಾಗಿರಲಿಲ್ಲ. ಒಂದಿಷ್ಟೂ ಸಾಮಾಜಿಕ ಧ್ಯೇಯ ಅಥವಾ ಕಲಾವಂತಿಕೆಯಿಲ್ಲದ ಚಿತ್ರಗಳ ಬಿಗಿತದಿಂದ ಉದ್ಯಮವನ್ನು ಸ್ವಲ್ಪಮಟ್ಟಿಗೆ ತಪ್ಪಿಸಿ ಮೇಲಂತಸ್ತಿಗೆ ಕೊಂಡು ಹೋದವರು ಮುಖ್ಯವಾಗಿ ನಮ್ಮ ನಾಲ್ಕು ಮಂದಿ ಹೆಸರಾಂತ ಚಿತ್ರನಿರ್ಮಾಪಕರು, ವಿ. ಶಾಂತರಾಮ್, ದೇವಕಿಬೋಸ್, ಪಿ, ಸಿ ಬರುವ ಮತ್ತು ನಿತಿನ್ ಬೋಸ್. ವಿ. ಶಾಂತರಾಮ್ 1934ರಲ್ಲಿ ಅಮೃತ್ ಮಂಥನ್ ಚಿತ್ರವನ್ನು ನಿರ್ಮಿಸಿ ಭಾರತದ ವಾಕ್‍ಚಿತ್ರಗಳಿಗೆ ಅಂಟಿದ ರಂಗಭೂಮಿಯ ಜಾಡ್ಯವನ್ನು ದೂರಮಾಡಿದರು. ಆಮೇಲೆ ಕೆಲವು ಸಾಮಾಜಿಕ ಸಮಸ್ಯೆಗಳ ನೋವು ಕಾವುಗಳನ್ನು ತಮ್ಮ ಚಿತ್ರಗಳಲ್ಲಿ ನಿವೇದಿಸಿ, ಚಿತ್ರಕಲೆಯ ಒಂದು ಮುಖ್ಯ ಉದ್ದೇಶವನ್ನು ಸಾಧಿಸಿದರು. 1936ರಲ್ಲಿ ನಿರ್ಮಿಸಿದ ಅಮರ್‍ಜ್ಯೋತಿ, 1937ರ ದುನಿಯಾ ನ ಮಾನೆ, 1939ರ ಆದ್ಮೀ 1940-41ರ ಪಡೋಸಿ-ಇವು ಚಿತ್ರಕಲೆಯ ಉತ್ತಮ ಕೃತಿಗಳು. ಶಾಂತರಾಮ್‍ನ ಮೇಲ್ವಿಚಾರಿಕೆಯಲ್ಲಿ ದಾಮ್ಲೆ ಮತ್ತು ಫತೇ ಲಾಲ್ 1936ರಲ್ಲಿ ನಿರ್ಮಿಸಿದ ಸಂತ ತುಕಾರಾಮ್ ಸಾಧುಸಂತರ ಜೀವನಚರಿತ್ರೆಯನ್ನು ನಿರೂಪಿಸಿರುವ ಚಿತ್ರಗಳಲ್ಲೆಲ್ಲ ಅತಿ ಶ್ರೇಷ್ಠವಾದುದು. ದಾಮ್ಲೆ ಮತ್ತು ಫತೇ ಲಾಲ್ 1940ರಲ್ಲಿ ರಚಿಸಿದ ಇನ್ನೊಂದು ಮಹಾಚಿತ್ರವೆಂದರೆ ಸಂತ ಜ್ಞಾನೇಶ್ವರ್. ಬಂಗಾಳದ ದೇವಕಿ ಬೋಸ್ 1932ರಲ್ಲಿ ಸುಮಾರಿಗೆ ಬಂಗಾಳೀಯಲ್ಲಿ ಚಂಡೀದಾಸ್ 1933ರಲ್ಲಿ ಪೂರಣ್ ಭಗತ್ ಚಿತ್ರಗಳನ್ನು ನಿರ್ಮಿಸಿ ದೇಶದಲ್ಲೆಲ್ಲ ಪ್ರಸಿದ್ಧಿ ಪಡೆದ ಅವನು ತನ್ನ ಚಿತ್ರಗಳ ಕಥಾವಸ್ತುಗಳಾಗಿ ಭಾರತದ ಸಂಸ್ಕøತಿಯನ್ನೂ ಧರ್ಮವನ್ನೂ ಬೆಳಗಿಸಿದ ಕೆಲವು ಪ್ರಸಿದ್ಧ ವಿಷಯಗಳನ್ನೇ ಹೆಚ್ಚಾಗಿ ಆರಿಸುತ್ತಿದ್ದ. ಆತ 1934ರಲ್ಲಿ ರಚಿಸಿದ ಸೀತಾ ಪೌರಾಣಿಕ ಚಿತ್ರಗಳಲ್ಲೆಲ್ಲ ಅತ್ಯುತ್ತಮವೆನಿಸಿತು. ಅವನ ಇನ್ನೊಂದು ಪ್ರಸಿದ್ಧ ಚಿತ್ರವೆಂದರೆ, 1937ರಲ್ಲಿ ರಚನೆಗೊಂಡ ವಿದ್ಯಾಪತಿ 1939ರಲ್ಲಿ ಸಪೇರಾ ಚಿತ್ರದಲ್ಲಿ ಅರಣ್ಯವಾಸಿಗಳಾದ ಹಾವಾಡಿಗರ ಜೀವನ ಕಥಾವಸ್ತುವನ್ನು ವಿವರಿಸಿದ್ದಾರೆ. ಪಿ. ಸಿ ಬರುವ 1935ರಲ್ಲಿ ಶರತ್ ಚಂದ್ರ ಚಟರ್ಜಿಯವರ ಕಾದಂಬರಿಯ ಆಧಾರದ ಮೇಲೆ ದೇವದಾಸ್ ಚಿತ್ರವನ್ನು ರಚಿಸಿ ಖ್ಯಾತಿಗೊಂಡರು. ಅವರ ಇತರ ಚಿತ್ರಗಳಾದ ಜಿóಂದಗಿ, ಮುಕ್ತಿ, ಮಂಜಿóಲ್ ಮತ್ತು ಅಧಿಕಾರ್ ಭಾರತದ ಚಲಚ್ಚಿತ್ರ ರಂಗದಲ್ಲಿ ಒಂದು ಹೊಸ ದೃಷ್ಟಿಯನ್ನು ಮೂಡಿಸಿದುವು. ದೇವದಾಸದಲ್ಲಿಯೂ ಅವರ ಇತರ ಚಿತ್ರಗಳಲ್ಲಿಯೂ ಅಭಿನಯಿಸಿ ಹಾಡಿದ ಸೈಗಲ್ ದೇಶದಲ್ಲೆಲ್ಲ ಅನುಪಮ ಖ್ಯಾತಿಯನ್ನು ಪಡೆದರು. ದೇವಕಿ ಬೋಸ್ ಮತ್ತು ಬರುವರವರ ಚಿತ್ರಗಳಲ್ಲಿನ ಉತ್ತಮ ವೈಶಿಷ್ಟ್ಯಗಳನ್ನು ನಿತಿನ್ ಬೋಸ್ ತಮ್ಮ ಚಿತ್ರಗಳಲ್ಲಿ ಅನುಸರಿಸಿದರು. 1935ರಲ್ಲಿ ಅವರ ಹಿಂದೀ ಚಿತ್ರ ಚಂಡೀದಾಸ್ ಪ್ರದರ್ಶನಕ್ಕೆ ಬಂದು ತುಂಬ ಜನಪ್ರಿಯವಾಯಿತು. 1937ರಲ್ಲಿ ಬಂದ ಪ್ರೆಸಿಡೆಂಟ್ ಎಂಬ ಚಿತ್ರ ಕ್ಷಯರೋಗದ ಭೀಕರತೆಯನ್ನು ವರ್ಣಿಸಿ ವಿಶೇಷ ಜನನಾದರಣೆಗೆ ಪಾತ್ರವಾಯಿತು. ಮಾಸ್ಟರ್ ವಿನಾಯಕನ ಹಂಸ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿದ ಛಾಯಾ (1936), ಜ್ವಾಲಾ (1938), ಬ್ರಹ್ಮಚಾರಿ ಮತ್ತು ಬ್ರಾಂಡಿ ಚಿ ಬಾತಲ್ (1939) ಒಳ್ಳೆಯ ಚಿತ್ರಗಳಾಗಿದ್ದವು. ಇದೇ ಸಮಯ ಕಲ್ಕತ್ತದ ನ್ಯೂ ಥಿಯೇಟರ್ಸ್ ಸಂಸ್ಥೆಯಲ್ಲಿ ಕೆಲವು ತರುಣ ನಿರ್ದೇಶಕರು ಮುಂದೆ ಬಂದು ಕೋಟ್ಯಾಧಿಪತಿ ಮತ್ತು ಅನಾಥಾಶ್ರಮ, (ಹೇಮಚಂದ್ರ, 1937), ಬಡಿ ದೀದಿ, (ಅಮರ ಮಲ್ಲಿಕ್ 1939) ಮತ್ತು ಸ್ಟ್ರೀಟ್ ಸಿಂಗರ್ (ಪಿ. ಮಂಜುಂದಾರ್, 1938) ಎಂಬ ಒಳ್ಳೆಯ ಚಿತ್ರಗಳನ್ನು ತಯಾರಿಸಿದರು. ಅಲ್ಲದೆ ಮುಂಬಯಿಯ ಬಾಂಬೆ ಟಾಕೀಸ್ ಸಂಸ್ಥೆಯಿಂದ 1936ರಲ್ಲಿ ಅಚ್ಯುತ್ ಕನ್ಯಾ ಎಂಬ ಉತ್ತಮ ಚಿತ್ರ ಹೊರಬಂತು. ವ್ಯಾಪಾರೀ ಸಂಸ್ಥೆಗಳಲ್ಲಿಯೂ ಕುಶಲರಾದ ಕೆಲವರು ಚಿತ್ರನಿರ್ಮಾಪಕರಿದ್ದು, ಅವರಿಂದಲೂ ತುಂಬ ಯೋಗ್ಯತೆಯುಳ್ಳ ಕೆಲವು ಚಿತ್ರಗಳು ಹೊರಬಂದವು. ನ್ಯಾಷನಲ್ ಸ್ಟುಡಿಯೋಗಾಗಿ ಮಹಬೂಬ್ ಖಾನ್ 1940ರಲ್ಲಿ ರಚಿಸಿದ ಔರತ್ ವಿಶೇಷವಾಗಿ ಭಾವೋದ್ರೇಕದ ಚಿತ್ರವಾಗಿತ್ತು. ಷೇಕ್ಸ್‍ಪಿಯರನ ನಾಟಕಗಳಲ್ಲಿ ಪ್ರಸಿದ್ಧ ಅಭಿನಯಕಾರನಾದ ಸೊಹ್ರಾಬ್ ಮೋದಿ 1939ರಲ್ಲಿ ಪುಕಾರ್ ಎಂಬ ಮಹತ್ತರವಾದ ಚಿತ್ರವನ್ನು ರಚಿಸಿ, ಚಾರಿತ್ರಿಕ ಚಿತ್ರಗಳ ನಿರ್ಮಾಣದಲ್ಲಿ ಇಡೀ ಭಾರತದಲ್ಲಿ ಅದ್ವಿತೀಯನಾದ. ಎ. ಆರ್. ಕಾರ್ದಾರ್ ಕೂಡ ಈ ದಿಶೆಯಲ್ಲಿ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದರು. ವಾಕ್‍ಚಿತ್ರಗಳು 1940-1960 : ಎರಡನೆಯ ಮಹಾಯುದ್ಧ ಲೋಕದಲ್ಲೆಲ್ಲ ತಂದೊಡ್ಡಿದ ಅಪ್ರತಿಮ ಕಷ್ಟನಷ್ಟಗಳನ್ನು ಕೊಂಚ ಸಮಯಕ್ಕಾದರೂ ಮರೆಯಲು ಜನಸಾಮಾನ್ಯರು ವಿಶೇಷವಾಗಿ ಮನೋರಂಜನೆಗೆ ಹಾತೊರೆಯಲಾರಂಭಿಸಿದರು. ಅಮೆರಿಕದಲ್ಲೂ ಭಾರತದಲ್ಲೂ ಈ ಅವಧಿಯಲ್ಲಿ ಜನ ನೋಡಿದಷ್ಟು ಚಲಚ್ಚಿತ್ರಗಳನ್ನು ಮತ್ತಾವಾಗಲೂ ನೋಡಿದಿಲ್ಲ. ಅಮೆರಿಕದಲ್ಲಿ ಇದರಿಂದಾಗಿ ಕೇವಲ ಲಘು ವಿನೋದ ಚಿತ್ರಗಳು ವಿಶೇಷ ಜನದಾರಣೆಯನ್ನು ಪಡೆಯುವಂತಾದುವು. ಇಂಥ ಚಿತ್ರಗಳಲ್ಲಿ ಅಭಿನಯಿಸಿದ ಬಡ್ ಆಬಟ್ ಮತ್ತು ಲೂ ಕಾಸ್ಟೆಲೊ, ಬಾಬ್ ಹೋಪ್, ಮಿಕ್ಕಿ ರೂನಿ ಮೊದಲಾದವರು ಕನಸಾಮಾನ್ಯರ ಮೆಚ್ಚಿನ ಅಭಿನಯಕಾರರಾದರು. 1943ರೊಳಗೆ ಉದ್ಯಮದಲ್ಲಿದ್ದ ಅನೇಕ ಪ್ರಮುಖ ಅಭಿನಯಕಾರರು ಸೇನೆಯನ್ನು ಸೇರುವಂತಾದರು. ಆದರೂ ಈ ಅವಧಿಯಲ್ಲಿ ಹಾಲಿವುಡ್ ಅನೇಕ ಮೊದಲ ಶ್ರೇಣಿಯ ಚಿತ್ರಗಳನ್ನು ತಯಾರಿಸಿತು. ಅವುಗಳಲ್ಲಿ ಇವು ಕೆಲವು ಮುಖ್ಯವಾಗಿದ್ದುವು :1 ಜಾನ್ ಫೋರ್ಡ್ ಅವರ ಗ್ರೇಪ್ಸ್ ಆಫ್ ರಾತ್ (1940), ಮತ್ತು ಹೌಗ್ರೀನ್ ವಾಸ್ ಮೈ ವ್ಯಾಲಿ (1942), 2 ಆರ್ಸನ್ ವೆಲ್ಸ್‍ನ ಸಿಟಿಜûನ್ ಕೇನ್ (1941), 3 ವಿಲಿಯಂ ವೆಲ್‍ಮನನ ದಿ ಆಕ್ಸ್‍ಬೊ ಇನ್ಸಿಡೆಂಟ್ (1943), ಅಮೆರಿಕದಲ್ಲಿ ಕಾನೂನು ವಿರುದ್ಧ ಇರುವ ಲಿಂಚಿಂಗ್ ಪದ್ಧತಿಯನ್ನು ಖಂಡಿಸಿದ ಚಿತ್ರದಲ್ಲಿ ಬಿಲ್ಲಿ ವೈಲ್ಡರ್ ಅವರ ದಿ ಲಾಸ್ಟ್ ವೀಕ್‍ಎಂಡ್ (1945. ಕುಡಿತದ ವಿರುದ್ಧ ಬಂದ ಪ್ರಮುಖ ಚಿತ್ರ). 5 ಜಿನಿಫರ್ ಜೋನ್ಸ್ ಅಭಿನಯಿಸಿದ ಸಾಂಗ್ ಆಫ್ ಬರ್ನಡೆಟ್. 6 ಪಾಲ್ ಲ್ಯುಕಾಸ್ ಅಭಿನಯಿಸಿದ ವಾಚ್ ಆನ್ ದಿ ರೈನ್. 7 ಆರ್ನಸ್ಟ್ ಹೆಮಿಂಗ್ ವೇ ಕೃತಿಯಾದ ಫಾರ್ ಹೂಮ್ ದಿ ಬೆಲ್ ಟೋಲ್ಸ್. 8 ಫ್ರಾಂಕ್ ಕಾಪ್ರಾ ಅವರ ಆರ್ಸೆನಿಕ್ ಎಂಡ್ ಓಲ್ಡ್ ಲೇಸ್ (1944). 9 ಆರ್ನೆಸ್ಟ್ ಲೂಬಿಚ್ ಅವರ ಹೆವನ್ ಕೆನ್ ವೇಯ್ಟ್ (1943). 10 ಜೇಮ್ಸ್ ಡನ್ ಅಭಿನಯಿಸಿದ ಎ ಟ್ರೀ ಗ್ರೋಸ್ ಇನ್ ಬ್ರೂಕ್‍ಲಿನ್ (1945). 11 ವಾಲ್ಟ್ ಡಿಸ್ನೆಯ ಫ್ಯಾಂಟಸಿಯ (1941), ಬ್ಯಾಂಬಿ (1942), ಡಂಬೊ (1942), 12 ಗ್ರೀರ್ ಗಾರ್ಸನ್ ಅಭಿನಯಿಸಿದ ಮಿಸೆಸ್ ಮಿನೀವರ್. ಮೇಲೆ ಹೇಳಿದವರಲ್ಲದೆ ಈ ಸಮಯದಲ್ಲಿ ಅಮೆರಿಕದಲ್ಲಿ ಪ್ರಸಿದ್ಧರಾಗಿದ್ದ ಕೆಲವು ನಟರ ಹೆಸರುಗಳಿವು : ಗ್ಯಾರಿ ಕೂಪರ್, ಬೆಟಿ ಡೇವಿಸ್, ಡೊರೊತಿ ಲ್ಯಾಮರ್, ಸ್ಪನ್ಸರ್ ಟ್ರೇಸಿ, ಬಿಂಗ್ ಕ್ರಾಸ್‍ಬಿ, ರೇ ಮಿಲ್ಯಾಂಡ್, ಡ್ಯಾನಿ ಕೇ, ಕ್ಲಾರ್ಕ್ ಗೇಬಲ್, ಫ್ರಾಂಕ್ ಸಿನಾತ್ರ. ಭಾರತ 1941ರಲ್ಲಿ ಚಿತ್ರ ತಯಾರಿಕೆಯ ಪ್ರಪಂಚದಲ್ಲಿ ಮೂರನೆಯ ಸ್ಥಾನವನ್ನು ಗಳಿಸಿತು. 1941ರಲ್ಲಿ ಭಾರತದಲ್ಲಿ ಹೊರಬಂದ ಚಿತ್ರಗಳಲ್ಲಿ ಅಹಿಂಸಾತತ್ತ್ವಗಳನ್ನು ವಿವೇಚಿಸಿ ದೇವಕಿ ಬೋಸ್ ನಿರ್ಮಿಸಿದ ಅಪ್ನಾಘರ್ ಮತ್ತು ಸೊಹ್ರಾಬ್ ಮೋದಿಯವರ ಚಾರಿತ್ರಿಕ ಚಿತ್ರ ಸಿಕಂದರ್ ಗಮನಾರ್ಹವಾಗಿದ್ದುವು. ಎರಡನೆಯ ಮಹಾಯುದ್ಧದ ದೆಸೆಯಿಂದಾಗಿ ಸರ್ಕಾರದವರು ಯಾವ ಚಿತ್ರದ ಉದ್ದವಾದರೂ 11,000 ಮೀರಬಾರದೆಂದು ಕಟ್ಟಪ್ಪಣೆ ಮಾಡಿದರು. ಇದರಿಂದ ಚಿತ್ರಗಳಿಗೆ ಕ್ಷೇಮವೇ ಆಯಿತು. ಮೂರು ನಾಲ್ಕು ತಾಸು ಚಿತ್ರ ನಡೆಯಬೇಕೆಂಬ ದುರಭಿಲಾಷೆಯಿಂದ ಚಿತ್ರನಿರ್ಮಾಪಕರು ಅದರಲ್ಲಿ ತುಂಬಿಸುತ್ತಿದ್ದ ಅನಾವಶ್ಯಕವಾದ ಸಂಗತಿಗಳು ಮಾಯವಾಗಿ, ಚಿತ್ರಗಳಲ್ಲಿ ಒಂದು ಹೊಸ ಬಿಗುಪು, ತೀಷ್ಣತೆ ಬರಲು ಅನುಕೂಲವಾಯಿತು. ಅಲ್ಲದೆ 1940ರಲ್ಲಿ, ಪ್ರತಿಯೊಂದು ಪ್ರದರ್ಶನಮಂದಿರವೂ ತನ್ನ ಚಿತ್ರಪ್ರದರ್ಶನಗಳಲ್ಲಿ, ಸರ್ಕಾರ ಆಗತಾನೇ ಯುದ್ಧ ಪ್ರಚಾರದ ಒಂದು ಸಂಸ್ಥೆಯಾಗಿ ಸ್ಥಾಪಿಸಿದ ಫಿಲ್ಮ್ ಅಡ್ವೈಸರಿ ಬೋರ್ಡ್ ಮತ್ತು ಇನ್‍ಫರ್ಮೇಷನ್ ಫಿಲ್ಮ್ಸ್ ಆಫ್ ಇಂಡಿಯ ತಯಾರಿಸಿದ ಯುದ್ಧ ಪ್ರಚಾರ ಚಿತ್ರಗಳ 2,000ಅಡಿ ದೃಶ್ಯಗಳನ್ನಾದರೂ ತೋರಿಸಬೇಕೆಂದು ಕಾನೂನು ಜಾರಿಗೆ ಬಂತು. ಈ ಕಾನೂನು ಮುಂದೆ ಭಾರತೀಯ ಸಾಕ್ಷ್ಯಚಿತ್ರಗಳ ಬೆಳವಣಿಗೆಗೆ ತುಂಬ ಸಹಕಾರಿಯಾಯಿತು. 1943ರಲ್ಲಿ ಚಿತ್ರನಿರ್ಮಾಪಕರು ಚಿತ್ರತಯಾರಿಕೆಗೆ ಸರ್ಕಾರದ ಪರವಾನೆ ಪಡೆಯಬೇಕೆಂದೂ ಅವರು ಒಂದು ವರ್ಷದಲ್ಲಿ ಮೂರಕ್ಕಿಂತ ಹೆಚ್ಚು ಚಿತ್ರಗಳನ್ನು ನಿರ್ಮಿಸಬಾರದೆಂದೂ ಅವುಗಳಲ್ಲೊಂದಾದರೂ ಯುದ್ಧ ಪ್ರಚಾರದ ಚಿತ್ರವಾಗಬೇಕೆಂದೂ ಸರ್ಕಾರ ಕಟ್ಟಾಜ್ಞೆ ಹೊರಡಿಸಿತು. ವಾಹಿನಿಯವರ ಪೋತನ ಮತ್ತು ಸ್ವರ್ಗಸೀಮಾ ಪ್ರಸಿದ್ಧಿ ಪಡೆದುವು. 1944ರಲ್ಲಿ ನ್ಯೂ ಥಿಯೇಟರ್ಸ್ ಪರವಾಗಿ ಬಿಮಲ್ ರಾಯ್ ನಿರ್ದೇಶಿಸಿದ ಹಮ್‍ರಾಹೀ ಮುಂಬೆಳಗಿನ ಒಂದು ಆಶಾಕಿರಣವಾಗಿ ಮೂಡಿತು. ಪ್ರಭಾತ್ ಸಂಸ್ಥೆ ನಿರ್ಮಿಸಿದ ರಾಮಾಶಾಸ್ತ್ರೀ ಚಿತ್ರವೂ ವಿಖ್ಯಾತಿ ಪಡೆಯಿತು. 1942ರಲ್ಲಿ ಬಂಗಾಳದಲ್ಲಿ ಸಂಭವಿಸಿದ ಮಾನವ ಕೃತ ಭೀಕರ ಕ್ಷಾಮವನ್ನು ಯೋಗ್ಯರೀತಿಯಿಂದ ವರ್ಣಿಸಿ ಕಥಾವಸ್ತುವನ್ನಾಗಿ ಮಾಡಿದ ಧರ್ತಿ ಕೆ ಲಾಲ್ ಎಂಬ ಚಿತ್ರ IPಖಿಂ ಅವರ ಹೊಣೆಗಾರಿಕೆಯಲ್ಲಿ 1946ರಲ್ಲಿ ಹೊರಬಂತು. ಅದೇ ವರ್ಷ ಚೇತನ್ ಆನಂದರ ನೀಚಾನಗರ್ ಪ್ರದರ್ಶಿಸಲ್ಪಟ್ಟಿತು. ಇದು ಆ ವರ್ಷದ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಗ್ರಾಂಡ್ ಫ್ರೀ ಪಾರಿತೋಷಕವನ್ನು ಗಳಿಸಿ, ಭಾರತದ ಚಲಚ್ಚಿತ್ರ ಉದ್ಯಮಕ್ಕೆ ಲೋಕದಲ್ಲಿ ಒಂದು ಗಣ್ಯಸ್ಥಾನವನ್ನು ದೊರಕಿಸಿಕೊಟ್ಟಿತು. ಪೌರಾಣಿಕ ಚಿತ್ರಗಳಲ್ಲಿ ವಿಜಯಭಟ್ಟ ಅವರ ಭರತ್ ಮಿಲಾಪ್, ರಾಮರಾಜ್ಯ ಮೊದಲಾದುವು ಉತ್ತಮ ಚಿತ್ರಗಳಾಗಿದ್ದುವು. ಎರಡನೆ ಮಹಾಯುದ್ಧ ಮುಗಿದ ಅನಂತರ ಅಮೆರಿಕದ ಚಲಚ್ಚಿತ್ರ ಪ್ರೇಕ್ಷಕರ ಒಲವು ಹೆಚ್ಚಾಗಿ ಮನೋವಿಶ್ಲೇಷಣದ ರೋಮಾಂಚನಕಾರಿ ಕಥೆಗಳ ಕಡೆಗೆ ಬಾಗಿತ್ತು. ಆದುದರಿಂದ ಇಂಥ ಕಥೆಗಳಿಗಿರುವ ಚಿತ್ರಗಳನ್ನೇ ಹಾಲಿವುಡ್ ನಿರ್ಮಿಸಲು ಪ್ರಾರಂಭಿಸಿತು. ಇಂಥ ಅನೇಕ ಚಿತ್ರಗಳಲ್ಲಿ ಎರಡರ ಹೆಸರನ್ನು ಇಲ್ಲಿ ಉದಾಹರಣೆಯಾಗಿ ಕೊಡಬಹುದು : ಲೀವ್ ಹರ್ ಟು ಹೆವನ್ ಮತ್ತು ಸ್ನೇಕ್ ಪಿಟ್, ಮೊದಲನೆಯ ಚಿತ್ರದಲ್ಲಿ ಒಬ್ಬ ಕೆಟ್ಟ ಹೆಂಗಸಿನ ಕೆಟ್ಟತನವನ್ನೂ ಅದರ ಹಿಂದಿನ ಮನೋಭಾವವನ್ನೂ ಚಿತ್ರಿಸಲಾಗಿತ್ತು. ಎರಡನೆಯ ಚಿತ್ರದಲ್ಲಿ ಉನ್ಮಾದ ಸ್ಥಿತಿಗೆ ಎಳೆದೊಯ್ಯುವ ಮಾನಸಿಕ ದೌರ್ಬಲ್ಯದ ಭೀಕರ ಚಿತ್ರಣವಿತ್ತು. ಇಂಥ ಚಿತ್ರಗಳಲ್ಲದೆ ಹಾಲಿವುಡ್ ಇತರ ಜಾತಿಯ ಕೆಲವು ಶ್ರೇಷ್ಠ ಚಿತ್ರಗಳನ್ನೂ ನಿರ್ಮಿಸಿತು. ಇವುಗಳಲ್ಲಿ ಗಾನ್ ವಿದ್ ದಿ ವಿಂಡ್, ದಿ ಬೆಸ್ಟ್ ಇಯರ್ಸ್ ಆಫ್ ಅವರ್ ಲೈವ್ಸ್, ಅನಾ ಅಂಡ್ ದಿ ಕಿಂಗ್ ಆಫ್ ಸಯಾಮ್, ದಿ ಯೀರ್ಲಿಂಗ್, ದಿ ಔಟ್ಲಾ, ಬೆಲ್ಸ್ ಆಫ್ ಸೇಂಟ್ ಮೇರಿ, ಫರ್ ಎವರ್ ಆಂಬರ್-ಮೊದಲಾದುವು ತುಂಬ ಪ್ರಖ್ಯಾತಿಗೊಂಡವು. ಈ ಅವಧಿಯಲ್ಲಿ ಹಾಲಿವುಡ್ಡಿನ ಚಲಚ್ಚಿತ್ರೋದ್ಯಮಕ್ಕೆ ಧಕ್ಕೆ ಬರಲಾರಂಭಿಸಿತು. ಅಮೆರಿಕದಲ್ಲಂತೂ ಚಿತ್ರೋದ್ಯಮಕ್ಕೆ ಸರಿ ದೊರೆಯಾಗಿ ಸ್ವರ್ಧಿಸಲು ಪ್ರಾರಂಭಿಸಿದ್ದು ಟೆಲಿವಿಷನ್ ಉದ್ಯಮ. ಇದನ್ನು ನಿವಾರಿಸಲು ಅಮೆರಿಕ ಚಿತ್ರರಂಗದಲ್ಲಿ ಹೊಸ ಹೊಸ ವಿಧಾನಗಳನ್ನೂ ಆಕರ್ಷಣೆಗಳನ್ನೂ ಬಳಕೆಗೆ ತರಬೇಕಾಯಿತು. ಹೊರಗಿನ ದೇಶಗಳಲ್ಲಿ ತನ್ನ ಉದ್ಯಮ ಪುನಃ ಪ್ರತಿಷ್ಠೆಗೊಳ್ಳುವಂತೆ ಹಾಲಿವುಡ್ ಭಗೀರಥ ಪ್ರಯತ್ನ ಮಾಡಿ, ತನ್ನ ಚಿತ್ರಗಳನ್ನೆಲ್ಲ ವರ್ಣ ಚಿತ್ರಗಳನ್ನಾಗಿಯೂ ಅಗಲ ಪರದೆ ಚಿತ್ರಗಳನ್ನಾಗಿಯೂ (ಸಿನೆರಮಾ, ವಿಸ್ಟಾವಿಷನ್, ಸಿನೆಮಾ-ಸ್ಕೋಪ್ ಇತ್ಯಾದಿ) ಮಾಡಲಿಕ್ಕೆ ಪ್ರಾರಂಭಿಸಿತು. ಹಾಲಿವುಡ್ ಸಾಧಿಸುದುದನ್ನು-ಇತರ ದೇಶಗಳೂ ಸಾಧಿಸಲು ತೊಡಗಿದುವು. ವರ್ಣಚಿತ್ರ ಮತ್ತು ಅಗಲಪರದೆಯ ಚಿತ್ರ ಈಗ ಎಲ್ಲ ದೇಶಗಳಲ್ಲಿ ಎಂಬಂತೆ ಚಲಚ್ಚಿತ್ರ ಪ್ರಪಂಚದ ವೈಶಿಷ್ಟ್ಯಗಳಾಗಿವೆ. ಈ 10-12 ವರ್ಷಗಳಲ್ಲಿ ಚಲಚ್ಚಿತ್ರ ಸಂಗೀತಕ್ಕೆ ಎಂದೂ ಇಲ್ಲದ ಪ್ರಧಾನ್ಯ ಬಂದಿದೆ. ಮೂಕಚಿತ್ರಗಳು ವಾಕ್‍ಚಿತ್ರಗಳಾದೊಡನೆ ಅವುಗಳಲ್ಲಿ ಸಂಗೀತ ತುಂಬಿ ಹೋದುದರಲ್ಲಿ ಆಶ್ಚರ್ಯವಿಲ್ಲ. ಈಗಿನ ಚಿತ್ರಗಳಲ್ಲಿ ಐದಾರು ಹಾಡುಗಳಿರುವುದು ಸರ್ವ ಸಾಮಾನ್ಯವಾಗಿದೆ. ಮೊದ ಮೊದಲು, ಹಾಡಲು ಬರುವ ನಟನಟಿಯರೇ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. ಆದರೆ ಬರಬರುತ್ತ ಅಭಿನಯ, ಹಾಡುಗಾರಿಕೆ ಮತ್ತು ರೂಪಲಾವಣ್ಯ ಒಂದೇ ವ್ಯಕ್ತಿಯಲ್ಲಿ ಕೂಡಿಬರುವುದು ಅಪರೂಪವಾಗುತ್ತ ಬಂದು ಚಿತ್ರದಲ್ಲಿನ ಹಾಡಿನ ಪೂರೈಕೆಗಾಗಿ ಬೇರೊಂದು ವಿಧಾನವನ್ನೇ ಸಾಧಿಸಬೇಕಾಯಿತು. ಇದೇ ಪ್ಲೇಬ್ಲ್ಯಾಕ್ ವಿಧಾನ. ಇದನ್ನು ಮೊದಲು ನಿತಿನ್ ಬೋಸ್ ಸೂಚಿಸಿದರು ; ಪ್ರಸಿದ್ಧ ಸಂಗೀತ ನಿರ್ದೇಶಕ ಆರ್. ಸಿ ಬೊರಾಲ್ ಮೊದಲು ಕಾರ್ಯರೂಪಕ್ಕೆ ತಂದ. ಕೂಡಲೇ ಈ ವಿಧಾನ ದೇಶದ ಆದ್ಯಂತ ಚಲಚ್ಚಿತ್ರ ಉದ್ಯಮಕ್ಕೆ ವ್ಯಾಪಿಸಿ, ಹಿನ್ನೆಲೆ ಗಾಯಕರ ಕೂಟವೊಂದೂ ನಿರ್ಮಾಣವಾಯಿತು. ಇವರಲ್ಲಿ ಜನದರಣೆಯ ಶಿಕರವನ್ನು ಮುಟ್ಟಿದವರು ಯಾರೆಂದರೆ, ಚಲಚ್ಚಿತ್ರ ಉದ್ಯಮದಲ್ಲೇ ಒಂದು ಘಟನೆಯಾಗಿ ಪರಿಣಮಿಸಿದ ಲತಾ ಮಂಗೇಶ್ಕರ್. ದೇಶದ ಆದ್ಯಂತ ಈಕೆಯ ಕೋಕಿಲಸ್ವರವನ್ನು ಕೇಳಿದವರಿಲ್ಲ. ಸಾಧಾರಣ ಈಕೆಯಷ್ಟೇ ಪ್ರಸಿದ್ದಿಗೆ ಬಂದ ಇನ್ನೊಬ್ಬ ಹಾಡುಗಾರ್ತಿ ಗೀತಾ ದತ್ತ (ಮೊದಲು ಗೀತಾ ರಾಯ್). ಸರಸ್ವತಿ, ಪಿ. ಲೀಲಾ, ಮಹಮ್ಮದ್ ರಫೀ, ಪಂಕಜ್ ಮಲ್ಲಿಕ್, ಮುಕೇಶ್, ತಲತ್ ಮುಹಮ್ಮದ್ ಇವರು ಇತರ ಪ್ರಸಿದ್ಧರು.

	1949ರಲ್ಲಿ ಭಾರತ ಸರ್ಕಾರ ಚಲಚ್ಚಿತ್ರ ಉದ್ಯಮದ ಹಲವು ಸಮಸ್ಯೆಗಳನ್ನು ವಿಚಾರಿಸಲು ಒಂದು ಸಮಿತಿಯನ್ನು ಏರ್ಪಡಿಸಿತು. ಇದು ಎರಡು ವರ್ಷ ದೇಶದಲ್ಲೆಲ್ಲ ವಿಚಾರಣೆ ನಡೆಸಿ, ಅಕ್ಟೋಬರ್ 1951ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತು. ಇದರಲ್ಲಿ ಸರ್ಕಾರದ ಪರಿಶೀಲನೆಗೆ ಸೂಚಿಸಿದ್ದ ಹಲವು ಸಲಹೆಗಳಲ್ಲಿ ಇವು ಕೆಲವು ಮುಖ್ಯವಾಗಿದ್ದವು : 1 ಉದ್ಯಮದ ಸರ್ವ ಕಲ್ಯಾಣವನ್ನು ಸಾಧಿಸಲು ಸರ್ಕಾರ ಒಂದು ಚಲಚ್ಚಿತ್ರ ಮಂತ್ರಾಲೋಚನ ಸಂಸ್ಥೆಯನ್ನು ರಚಿಸಬೇಕು. 2 ಚಿತ್ರ ನಿರ್ಮಾಪಕರಿಗೆ ಹಣಸಹಾಯ ಕೊಡಲು ಕೇಂದ್ರ ಸರ್ಕಾರ, ಪ್ರಾಂತೀಯ ಸರ್ಕಾರಗಳು ಮತ್ತು ಚಲಚ್ಚಿತ್ರ ಉದ್ಯಮದ ಸಂಸ್ಥೆಗಳು ಕೂಡಿ, ಒಂದು ಕೋಟಿ ರೂಪಾಯಿ ಪ್ರಾರಂಭ ಬಂಡವಾಳವಿರುವ ಹಣಕಾಸಿನ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕು. 3 ದೇಶದಲ್ಲಿ ನಿರ್ಮಿತವಾಗುವ ಚಿತ್ರಗಳ ಹೊರ ಮಾರಾಟವನ್ನು ಉತ್ತೇಜಿಸಲಿಕ್ಕೂ ಅದನ್ನು ನಿರ್ವಹಿಸಲಿಕ್ಕೂ ಒಂದು ಹೊರ ಮಾರಾಟದೆ ಸಂಸ್ಥೆಯನ್ನು ಸ್ಥಾಪಿಸಬೇಕು. 4 ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ಫಿಲ್ಮ್ ಮತ್ತು ಇತರ ಸಲಕರಣೆಗಳ ತಯಾರಿಕೆ ದೇಶದಲ್ಲೇ ಆಗುವಂತೆ ಸರ್ಕಾರ ಏರ್ಪಾಡು ಮಾಡಬೇಕು. 5 ಹೊರಗಿನಿಂದ ಬರುವ ಚಿತ್ರಗಳ ಸಂಖ್ಯೆಗೆ ಸರ್ಕಾರ ಒಂದು ನಿರ್ದಿಷ್ಟ ಮಿತಿಯನ್ನು ಇಡಬೇಕು. ಮತ್ತು 6 ಚಲಚ್ಚಿತ್ರ ಉದ್ಯಮಕ್ಕೆ ಬೇಕಾಗಿರುವ ಶಾಸ್ತ್ರ ತಂತ್ರಜ್ಞರನ್ನೂ ಕಲೆಗಾರರನ್ನೂ ತರಬೇತು ಮಾಡುವ ಸಂಸ್ಥೆಗಳನ್ನು ಸರ್ಕಾರ ಸ್ಥಾಪಿಸಬೇಕು. ಉಳಿದ ಸಲಹೆಗಳು ಮನೋರಂಜನೆಯ ತೆರಿಗೆ, ಪರವಾನೆಯ ತೆರ, ಚಿತ್ರಗಳ ಉದ್ದ, ಪ್ರದರ್ಶನ ಮಂದಿರಗಳ ನಿರ್ಮಾಣಕ್ಕೆ ಸೌಕರ್ಯಗಳು, ಉತ್ತಮ ಚಿತ್ರಗಳಿಗೆ ಬಹುಮಾನ ಕೊಡುವ ವ್ಯವಸ್ಥೆಗಳು-ಇತ್ಯಾದಿಗಳನ್ನು ಕುರಿತು ಇದ್ದುವು. ಇವುಗಳಲ್ಲಿ ಅನೇಕ ಸಲಹೆಗಳನ್ನು ಸರ್ಕಾರ ಅಲ್ಪಸ್ವಲ್ಪ ಬದಲಾವಣೆಗಳೊಡನೆ ಸ್ವೀಕರಿಸಿ ಕ್ರಮೇಣ ಜಾರಿಗೆ ತಂದಿತು.

1955ರ ಫೆಬ್ರುವರಿ 27ರಂದು ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಆಶ್ರಯದಲ್ಲಿ ದೇಶದ ಪ್ರಸಿದ್ಧ ಚಲಚ್ಚಿತ್ರ ನಿರ್ಮಾಪಕರು, ನಿರ್ದೇಶಕರು, ಅಭಿನಯಕಾರರು, ಶಾಸ್ತ್ರತಂತ್ರಜ್ಞರು, ಪ್ರದರ್ಶನಕಾರರು, ಸಂಸ್ಥೆಗಳ ಮಾಲಿಕರು ಮೊದಲಾದವರೆಲ್ಲ ಕೂಡಿ ಒಂದು ಚಲಚ್ಚಿತ್ರ ಮಂತ್ರಾಲೋಚನಾ ಸಭೆಯನ್ನು ಏಳು ದಿನಗಳವರೆಗೆ ಜರುಗಿಸಿ, ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನೂ ಮುಚ್ಚುಮರೆಯಿಲ್ಲದೆ ಕೂಲಂಕಷವಾಗಿ ಚರ್ಚಿಸಿದರು. ಈ ಸಭೆ ಹೊರಡಿಸಿದ ಸುಮಾರು 350 ಪುಟಗಳ ವರದಿ ಭಾರತದ ಚಲಚ್ಚಿತ್ರ ಉದ್ಯಮದ ಎಲ್ಲ ಸಮಸ್ಯೆಗಳನ್ನೂ ಸರ್ಕಾರಕ್ಕೂ ಜನಸಾಮಾನ್ಯರಿಗೂ ವಿಶದಗೊಳಿಸುವ ಒಂದು ಅಮೂಲ್ಯ ಗ್ರಂಥವಾಗಿದೆ. ಈ 10-12 ವರ್ಷಗಳಲ್ಲಿ ನಿರ್ಮಿತವಾದ ಮುಖ್ಯ ಚಲಚ್ಚಿತ್ರಗಳನ್ನು ವೀಕ್ಷಿಸುವಾಗ ಪ್ರಸಿದ್ಧ ನರ್ತಕ ಉದಯಶಂಕರ್ ನೃತ್ಯವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡು ರಚಿಸಿದ ಕಲ್ಪನಾ (1948) ಎಂಬ ಚಿತ್ರ ನಮಗೆ ಮೊದಲು ಕಾಣಬರುವುದು. ಸಾಧಾರಣ ಇದೇ ಸಮಯ ವಿ. ಶಾಂತಾರಾಮ್, ಮಹಾರಾಷ್ಟ್ರದ 19ನೆಯ ಶತಮಾನದ ಪ್ರಸಿದ್ಧ ಕವಿ ಹೋಣಾಜಿಯನ್ನು ಕುರಿತು, ಅಮರ ಭೂಪಾಲಿ ಎಂಬ ಉತ್ತಮ ದರ್ಜೆಯ ಚಿತ್ರವನ್ನು ನಿರ್ಮಿಸಿದರು. ಪ್ರೇಕ್ಷಣೀಯವಾದ ಹಲವಾರು ಇಂಥ ಚಿತ್ರಗಳಲ್ಲಿ ದೃಶ್ಯಗಾಂಭೀರ್ಯದ ದೃಷ್ಟಿಯಿಂದ ಜೆಮಿನಿಯ ಚಂದ್ರಲೇಖಾ ಶ್ರೇಷ್ಠವಾಗಿತ್ತು. ಈ ಚಿತ್ರದ ಅನುಕರಣದಿಂದ ಮುಂದೆ ಮೆಹಬೂಬ ಅವರ ಆನ್ ಮತ್ತು ಫಿಲ್ಮಿಸ್ತಾನದ ಶಬ್ನಂ ಹುಟ್ಟಿದುವು. ಇಟಲಿ ದೇಶದ ಪ್ರಸಿದ್ಧ ಚಿತ್ರ ಬೈಸಿಕಲ್ ತೀಫ್ ಭಾರತದಲ್ಲಿ ಸಾರ್ವತ್ರಿಕವಾಗಿ ಪ್ರದರ್ಶನಗೊಂಡ ಕೂಡಲೇ ಅಂಥ ಅನೇಕ ಚಿತ್ರಗಳ ತಯಾರಿಕೆ ಪ್ರಾರಂಭವಾಯಿತು. ಆದರೆ ಸಾಮಾಜಿಕ ಸಮಸ್ಯೆಗಳನ್ನು ನೇರವಾಗಿ, ಸತ್ಯತೆಯ ದೃಷ್ಟಿಯಿಂದಲೂ ಕಲಾತ್ಮಕವಾಗಿಯೂ ಪರಿಣಾಮಕಾರಿಯಾಗಿಯೂ ಆ ಬೈಸಿಕಲ್ ತೀಫ್‍ನಂತೆ ಚಿತ್ರಿಸುವ ಬದಲು, ಈ ಸಮಸ್ಯೆಗಳಿಗೆ ಅತ್ಯುತ್ಪ್ರೇಕ್ಷೆಯ ಒಂದು ಕೃತಕ ಆವರಣವನ್ನು ಕಲ್ಪಿಸಿಕೊಟ್ಟು, ಅವು ಮನೋರಂಜನೆಯನ್ನು ಸಾಧಿಸುವಂತೆ ಚಿತ್ರಗಳ ನಿರ್ಮಾಣವಾಯಿತು. ಇದಲ್ಲದೆ ಇದೇ ಸಮಯ ಭಾರತೀಯ ಸಂಸ್ಕøತಿಗೆ ವಿಲಕ್ಷಣವಾದ ಲೈಂಗಿಕ ರಂಜನೆಯ ಮತ್ತು ದುಷ್ಕಾರ್ಯ ಪ್ರವೃತ್ತಿಯ ಚಿತ್ರಗಳೂ ನಿರ್ಮಿತವಾಗಲಿಕ್ಕೆ ತೊಡಗಿದವು. ಹಮ್ ಲೋಗ್, ಫುಟ್‍ಪಾತ್, ಹಮ್‍ಸಫರ್, ಸಂಸಾರ್, ಬೂಟ್ ಪಾಲಿಷ್, ಟ್ಯಾಕ್ಸಿ ಡ್ರೈವರ್, ರಿಕ್ಷಾವಾಲಾ, ಬಾಜೀ, ಜಾಲ್ ಮೊದಲಾದುವು ಇವೆರಡು ಜಾತಿಯ ಚಿತ್ರಗಳಿಗೆ ಉದಾಹರಣೆಗಳಾಗಿವೆ. ಸಾಮಾನ್ಯ ವ್ಯಕ್ತಿಗಳ ಸಹಜವಾದ ಜೀವನವನ್ನೂ ಅವರ ಜೀವನದಲ್ಲಿರುವ ಸಮಸ್ಯೆಗಳನ್ನೂ ಸಾಕಷ್ಟು ಯಥಾರ್ಥವಾಗಿ, ಪರಿಣಾಮಕಾರಿಯಾಗಿ, ಚಿತ್ರಿಸುವ ಮನಃಪೂರ್ವಕ ಪ್ರಯತ್ನಗಳೂ ನಡೆದಿವೆ. ಉದಾಹರಣೆ ರಾಜಕಪೂರರ ಜಾಗ್ತೆರಹೋ, ಕೆ. ಎ. ಅಬ್ಬಾಸ್ ಅವರ ರಾಹೀ ಮತ್ತು ಮುನ್ನಾ, ಗುರುದತ್ತ ಅವರ ಚೌದ್‍ವಿನ್ ಕಾ ಚಾಂದ್ ಮತ್ತು ಬಿಮಲ್ ರಾಯ್ ಅವರ ದೋ ಬಿಘಾ ಜಮೀನ್, ಗುರುದತ್ತ ಅವರ ಕಾಗಜ್ ಕೆ ಫೂಲ್, ಭಾರತದ ಮೊದಲ ಸಿನಿಮಾಸ್ಕೋಪ್ ಚಿತ್ರವಾಗಿದೆ. ಅನುರಾಧಾ, ವಿ. ಶಾಂತಾರಾಮ ಅವರ ದೋ ಆಂಖೇ ಬಾರಾ ಹಾತ್, ರಾಜಕಪೂರ ಅವರ ಜಿಸ್ ದೇಶಮೇ ಗಂಗಾ ಬಹತೀ ಹೈ-ಈ ಚಿತ್ರಗಳಲ್ಲಿ ಸಾಮಾಜಿಕ ವಿಷಯಗಳನ್ನು ಹೃದಯಂಗಮವಾಗಿ ನಿರೂಪಿಸಲಾಗಿದೆ. ಈ ಪ್ರಸಂಗದಲ್ಲಿ ಸಾಮಾಜಿಕ ಚಿತ್ರವಲ್ಲವಾದರೂ ಬಹು ಉತ್ತಮ ಚಾರಿತ್ರಿಕ ಚಿತ್ರವಾದ ಪ್ರಸಿದ್ಧ ನಿರ್ದೇಶಕ ಸೊಹ್ರಾಬ್ ಮೋದಿಯ ಝಾನ್ಸಿ ಕೀ ರಾಣಿಯನ್ನು ಉಲ್ಲೇಖಿಸದೆ ನಿರ್ವಾಹವಿಲ್ಲ. ಇದು ವರ್ಣರಂಜಿತ ಚಿತ್ರವಾಗಿ (ಟೆಕ್ನಿಕಲರ್) ಇಡೀ ದೇಶದಲ್ಲಿ ವಿಶೇಷ ಜನಾದರಣೆ ಪಡೆದಿದೆ. ಎಲ್ಲಕ್ಕೂ ಮಿಗಿಲಾಗಿ 1955ರಲ್ಲಿ ಸತ್ಯಜಿತ್ ರಾಯ್ ಬಂಗಾಳಿ ಭಾಷೆಯಲ್ಲಿ ನಿರ್ಮಿಸಿದ ಪಥೇರ್ ಪಾಂಚಾಲಿ ಇಡೀ ಪ್ರಪಂಚದ ಚಲಚ್ಚಿತ್ರ ಉದ್ಯಮವನ್ನೇ ತನ್ನ ಅಪ್ರತಿಮ ಕಲಾಶಕ್ತಿಯಿಂದ ಬೆರಗುಗೊಳಿಸಿತು. 1956ನೆಯ ಕ್ಯಾನ್ ಚಿತ್ರೋತ್ಸವದಲ್ಲಿ ಅದು ಪ್ರದರ್ಶಿಸಲ್ಪಟ್ಟಾಗ ಜಗತ್ತಿನಲ್ಲೇ ಅದು ಅತ್ಯುತ್ತಮವಾದುದೆಂದು ಎಲ್ಲರೂ ಸಾರಿದರು. ಅಂದಿನವರೆಗೆ ಅಮೆರಿಕದಲ್ಲಿ ಪರಭಾಷೆಯ ಯಾವ ಚಿತ್ರವೂ ಅಷ್ಟು ದೀರ್ಘಕಾಲದ ಪ್ರದರ್ಶನಯೋಗ್ಯತೆ ಹೊಂದಿದ್ದಿಲ್ಲ. ಪಥೇರ್ ಪಾಂಚಾಲಿ ಸತ್ಯಜಿತ್ ರಾಯ್‍ನ ಮೊದಲನೆಯ ಚಿತ್ರವಾದ ಕಾರಣ ಆತನ ಪರಿಚಯ ಯಾರಿಗೂ ಇದ್ದಿಲ್ಲ. ಚಿತ್ರ ನಿರ್ಮಾಣಕ್ಕಾಗಿ ಆತ ಹೇರಳ ಹಣವನ್ನು ವೆಚ್ಚ ಮಾಡಿರಲಿಲ್ಲ. ಚಿತ್ರದಲ್ಲಿ ಪ್ರಣಯ ಕಥೆಯಾಗಲಿ, ಲೈಂಗಿಕ ರಂಜನೆಯ ದೃಶ್ಯಗಳಾಗಲಿ ಇದ್ದಿಲ್ಲ. ಒಂದು ನೃತ್ಯ, ಒಂದು ಹಾಡು ಕೂಡ ಇದ್ದಿಲ್ಲ. ಪಾತ್ರವರ್ಗದಲ್ಲಿ ಹೆಸರಾದ ಒಬ್ಬರಾದರೂ ಅಭಿನಯಕಾರರಿದ್ದಿಲ್ಲ. ಅಭಿನಯಿಸಿದವರಲ್ಲಿ ಹೆಚ್ಚು ಮಂದಿ ಈ ಚಿತ್ರದಲ್ಲೇ ಮೊಟ್ಟ ಮೊದಲು ಕ್ಯಾಮರವನ್ನು ಎದುರಿಸಿದುದು. ಅಭಿನಯಕಾರರಿಗೆ ಚಿತ್ರಣಕ್ಕಾಗಿ ಪ್ರಸಾಧನಗಳ (ಮೇಕ್ ಅಪ್) ಉಪಯೋಗ ಕೂಡ ಇದ್ದಿಲ್ಲ. ಅವರೆಲ್ಲ ತಮ್ಮ ನೈಜ ಸ್ಥಿತಿಯಲ್ಲೇ ತಮ್ಮ ಎಂದಿನ ಪೋಷಾಕಿನಲ್ಲೇ ಅಭಿನಯಿಸಿದ್ದರು. ಚಿತ್ರದಲ್ಲಿ ಕಥೆ ಕೂಡ ವಿಶೇಷವಾಗಿದ್ದಿಲ್ಲ. ಅದು, ಬಂಗಾಳದ ಒಂದು ಬಡ ಕುಟುಂಬ ನೈಜ ಜೀವನದ ಒಂದು ಚಿತ್ರಣವಷ್ಟೆ. ಛಾಯಾಗ್ರಹಣದ ಪ್ರತಿಯೊಂದು ಚಿತ್ರವೂ ಅಭಿನಯಕಾರರ ಬಾಹ್ಯಾಭಿನಯನವನ್ನು ಮಾತ್ರವಲ್ಲ, ಅವರ ಆಂತರಿಕವನ್ನೇ ಸೀಳಿ ತೆರೆದು ತೋರಿಸುವಂತಿತ್ತು. ರವಿಶಂಕರರ ಸಂಗೀತ, ಇತರ ಅನೇಕ ಚಿತ್ರಗಳಲ್ಲಿರುವಂತೆ ನಿಸ್ತೇಜಕವಾಗಿ ಹಿನ್ನೆಲೆಯಲ್ಲಿಯೇ ಇರದೆ, ಚಿತ್ರದ ಸನ್ನಿವೇಶಗಳಿಗೆ ಕ್ಷಣ ಕ್ಷಣಕ್ಕೂ ಮಹತ್ತರವಾದ ಪುಷ್ಟಿಯನ್ನು ಕೊಡುತ್ತಿತ್ತು. ಸತ್ಯಜಿತ್ ರಾಯ್ ತಮ್ಮ ಈ ಚಿತ್ರವನ್ನು ಒಂದು ಚಿತ್ರತ್ರಯದ ಮೊದಲನೆಯ ಭಾಗವನ್ನಾಗಿ ರಚಿಸಿದ್ದರು. 1956ರ ತಮ್ಮ ಅಪರಾಜಿತೋ ಚಿತ್ರದಲ್ಲಿ ಈ ಕಥೆಯನ್ನು ಮುಂದುವರಿಸಿದರು. ಅದನ್ನೂ ಮುಂದುವರಿಸಿ 1959ರಲ್ಲಿ ಅಪೂರ ಸಂಸಾರ್ ಚಿತ್ರವನ್ನು ನಿರ್ಮಿಸಿ ಚಿತ್ರತ್ರಯವನ್ನು ಮುಕ್ತಾಯಗೊಳಿಸಿದರು. ಅಶಿತ್ ಸೆನ್, ತಪನ್ ಸಿನ್ಹ, ರಿತ್ವಿಕ್ ಘಾಟಕ್ ಮುಂತಾದ ಹೊಸಬರು ಒಳ್ಳೆಯ ಹೊಸ ಕೆಲಸ ಮಾಡುತ್ತಿದ್ದಾರೆ. ಅವರ ಚಲಾಚಲ್, ಕಾಬೂಲಿವಾಲಾ, ಅಚಾಂತ್ರಿಕ್ ಮೊದಲಾದ ಚಿತ್ರಗಳು ಭಾರತದ ಚಲಚ್ಚಿತ್ರಗಳು ಮುಂದಿನ ಬೆಳವಣಿಗೆಗೆ ಸಹಾಯವಾಗಿವೆ. ಈಗ ದೇಶದ 13-14 ಮುಖ್ಯ ಪ್ರಾದೇಶಿಕ ಭಾಷೆಗಳಲ್ಲಾಗುತ್ತಿರುವ ಚಿತ್ರಗಳು ದಿನೇದಿನೇ ಯೋಗ್ಯತೆಯಲ್ಲಿ ಉತ್ತಮವಾಗುತ್ತ ಹಿಂದೀ, ಹಿಂದುಸ್ತಾನಿ ಚಿತ್ರಗಳ ಪ್ರಾಮುಖ್ಯವನ್ನು ಅಪಹರಿಸುತ್ತ ಬಂದಿವೆ. ಬಂಗಾಳಿಯಲ್ಲಿ ಪಥೇರ್ ಪಾಂಚಾಲಿಯ ಮೊದಲೇ ಅನೇಕಾನೇಕ ಉತ್ತಮ ಚಿತ್ರಗಳಾಗಿವೆ. ಹಾಗೆಯೇ ಮರಾಠಿಯಲ್ಲಿ ಸಂತ ತುಕಾರಾಮ್, ಜ್ಞಾನೇಶ್ವರ, ಅಮರ ಭೂಪಾಲಿ, ಇತ್ಯಾದಿ ಚಿತ್ರಗಳು ಅವುಗಳ ಹಿಂದುಸ್ತಾನಿ ರೂಪಾಂತರಗಳಿಂದ ಎಷ್ಟೋ ಉತ್ತಮವಾಗಿದ್ದುವು. ಇತ್ತೀಚೆಗೆ ಮರಾಠಿಯಲ್ಲಿ ರಚಿಸಲ್ಪಟ್ಟ ವಹನೀಂಚ್ಯಾ ಬಾಂಗ್ಡ್ಯಾ, ಸೇವ್ಗ್ಯಾ ಚಾ ಶೇಂಗಾ, ಶಾಮ್‍ಚೀ ಆಯೀ, ಮಹಾತ್ಮಾ ಫುಲೆ ಮೊದಲಾದುವು ಬಹು ಉತ್ತಮ ಚಿತ್ರಗಳಾಗಿವೆ. ಇತ್ತೀಚೆಗೆ ಕನ್ನಡ ಚಿತ್ರಗಳೂ ಆಶಾಜನಕವಾದ ಮೇಲ್ಮೈಯನ್ನು ಸಾಧಿಸುತ್ತಿವೆ. ಬೇಡರ ಕಣ್ಣಪ್ಪ, ಸ್ಕೂಲ್ ಮಾಸ್ಟರ್, ಭಕ್ತ ಕನಕದಾಸ, ಕಿತ್ತೂರು ಚೆನ್ನಮ್ಮ ಮೊದಲಾದುವು ಉತ್ತಮ ಚಿತ್ರಗಳಾಗಿವೆ. ಇದೇ ರೀತಿ ಮಲಯಾಳಿಯಲ್ಲೂ ಚಿತ್ರಗಳ ತಯಾರಿಕೆ ಭರದಿಂದ ಸಾಗುತ್ತಿದೆ. ತೆಲುಗು ತಮಿಳಿನಲ್ಲಿ ಚಲನಚಿತ್ರ ಉದ್ಯಮ ಈ ಮೊದಲೇ ಭದ್ರವಾಗಿ ಬೇರೂರಿದೆ. 1 ಇಟಲಿ ಈ ಶತಮಾನದ ಆದಿಯಿಂದಲೇ ಚಲಚ್ಚಿತ್ರ ಉದ್ಯಮವನ್ನು ಪ್ರಾರಂಭಿಸಿತ್ತು. 1912ರ ಸುಮಾರಿಗೆ ಅಮೇರಿಕ ಮತ್ತು ಇತರ ದೇಶಗಳು ಎರಡು ಮೂರು ರೀಲಿನ ಚಿತ್ರಗಳನ್ನು ನಿರ್ಮಿಸುತ್ತಿದ್ದಾಗ, ಇಟಲಿ 8 ರೀಲಿನ ಕೋ ವಾಡಿಸ್ ಎಂಬ ಪ್ರಸಿದ್ಧ ಚಿತ್ರಗಳನ್ನು ನಿರ್ಮಿಸಿತ್ತು. ಯುದ್ಧ ಮುಗಿದ ಅನಂತರ ಉದ್ಯಮ ಮೆಲ್ಲಗೆ ತಲೆಯೆತ್ತಲು ಪ್ರಾರಂಭಿಸಿ, ಈಗ ಅಮೆರಿಕ, ಭಾರತ, ಜಪಾನ್ ದೇಶಗಳೊಡನೆ ಸರಿದೊರೆಯಾಗಿ ನಿಂತಿದೆ. 1960ರಲ್ಲಿ ಅದು ಜಗತ್ತಿನಲ್ಲಿ ಎರಡನೆಯ ಸ್ಥಾನವನ್ನು ಪಡೆಯಿತು. ಬೈಸಿಕಲ್ ತೀಫ್ ಅಲ್ಲಿಯ ಉದ್ಯಮದ ಒಂದು ಮುಖವಾಗಿತ್ತು. ಈಗ ಆ ಮುಖ ಬಹುಮಟ್ಟಿಗೆ ಮಾಯವಾಗಿ, ಉದ್ಯಮ ಮತ್ತೊಂದು ಪ್ರಬಲವಾದ ಮುಖವನ್ನು ತಾಳಿದೆ. ಬೈಬಲ್ ಕಥೆಗಳ ಮತ್ತು ಪುರಾತನ ಚಾರಿತ್ರಿಕ ಸಂಗತಿಗಳ ಅದ್ದೂರಿ ಚಿತ್ರಗಳ ತಯಾರಿಕೆಯಲ್ಲಿ ಅದೀಗ ಮಗ್ನವಾಗಿದೆ. ಅಮೆರಿಕದ ಸಿಸಿಲ್ ಬಿ. ಡಿ ಮಿಲೆ ಅವರ ಸಾಹಸಗಳನ್ನೂ ಮೀರಿಸುವ ಪ್ರಯತ್ನದಲ್ಲಿದೆ. ರೋಮನ್ನರ ಹಳೆ ಖಡ್ಗಮಲ್ಲರ ಸಾಹಸಗಳು, ಟ್ಯೂಟಾನ್ ಜನಾಂಗದವರ ಅನಾಗರಿಕ ಕೃತ್ಯಗಳು, ಮಧ್ಯಯುಗದ ದರೋಡೆಕಾರರ ದುಷ್ಕøತ್ಯಗಳು, ಈಜಿಪ್ಟಿನ ರಾಣಿಯರ ವೈಭವಗಳು, ಫ್ರಾನ್ಸ್ ದೇಶದ ಅರಸರ ಕಾರುಬಾರುಗಳು, ಮಂಗೋಲಿಯ, ಬ್ಯಾಬಿಲೊನಿಯ ಮೊದಲಾದ ದೇಶಗಳ ಪ್ರಾಚೀನ ವೈಭವಗಳು, ಗ್ರೀಕರ ಆರ್ಗೊನಾಟರ ಮತ್ತು ಫಿನೀಷಿಯನ್ನರ ಸಾಹಸ ಕಾರ್ಯಗಳು-ಇವೇ ಮೊದಲಾದವು. ಈಗ ಅಲ್ಲಿಯ ಚಲಚ್ಚಿತ್ರಗಳ ವಿಷಯಗಳಾಗಿವೆ. ಈಗಿನ ಅಗಲ ಪರದೆ ಮತ್ತು ವರ್ಣ ಇಂಥ ಚಿತ್ರಗಳಿಗೆ ವಿಶೇಷ ಶೋಭೆಯನ್ನು ಕೊಡುತ್ತವೆ. ಆದರೆ ವಿಷಯವೇನಿದ್ದರೂ ಕಥೆಯೇನಿದ್ದರೂ ಇಂಥ ಚಿತ್ರಗಳ ರೂಪಾಕೃತಿ ಒಂದೇ ಆಗಿದೆ-ರಣರಂಗದಲ್ಲಿ ಹೊಡೆದಾಟ, ಸ್ವಚ್ಛಂದ ಸಂಭ್ರಮದ ದೃಶ್ಯಗಳು ಮತ್ತು ಕಥಾನಾಯಕಿಗೆ ಒಂದಾದರು ಹಾಲಿನ ಸ್ನಾನ (ಆಕೆಯ ಅಭಿನಯಕ್ಕಾಗಿಯಲ್ಲ ಅಂಗಪ್ರದರ್ಶನಕ್ಕಾಗಿ) ಇಂಥ ದೃಶ್ಯಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಚೆಲೊ ಅಲೆನ್ಸೊ ಎಂಬಾಕೆ ಇಂಥ 14 ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸಿದ್ದಾಳೆ. ಅನೇಕ ವರ್ಷಗಳಿಂದ ಕುಸಿದು ಬಿದ್ದಿರುವ ಉದ್ಯಮ ಇಂಥ ಚಿತ್ರಗಳ ತಯಾರಿಕೆಯಿಂದ ಪುನರುಜ್ಜೀವನಹೊಂದಿದೆ. ಹಕ್ರ್ಯೂಲಿಸ್, ಕ್ಲಿಯೋಪಾತ್ರಾಳ ಸೈನ್ಯಗಳು, ರಾತ್ರಿ-ಮೊದಲಾದವು ಇಂಥ ಚಿತ್ರಗಳಿಗೆ ಉದಾಹರಣೆಗಳಾಗಿವೆ. ಇವುಗಳಲ್ಲಿ ರಾತ್ರಿ ಎಂಬುದು ಪ್ರತಿಭೆಯಿಂದ ಕೂಡಿದ ಚಿತ್ರವಾಗಿ, ವಿಮರ್ಶಕರ ಮತ್ತು ಪ್ರೇಕ್ಷಕರ ವಿಶೇಷ ಆದರಣೆಗೆ ಪಾತ್ರವಾಗಿದೆ. 2 ಮಾನವತೆ ಮತ್ತು ಯರ್ಥಾರ್ಥತೆಗಳ ಯೋಗ್ಯ ಮಿಲನದಿಂದ ತನ್ನದೇ ಆದ ಒಂದು ವೈಶಿಷ್ಟ್ಯವನ್ನು ಸಾಧಿಸಿ, ಫ್ರಾನ್ಸ್ ಎರಡನೆಯ ಮಹಾಯುದ್ಧದ ಮೊದಲೇ ಲೋಕದಲ್ಲೆಲ್ಲ ಚಲಚ್ಚಿತ್ರ ಉದ್ಯಮದಲ್ಲಿ ಪ್ರಸಿದ್ಧಿಗೊಂಡಿತ್ತು. ಈ ಪ್ರಸಿದ್ಧಿಗೆ ಮುಖ್ಯ ಕಾರಣರು ಯಾರೆಂದರೆ, ಜಾನ್ ಬೆನ್ವಾಲೆವಿ, ಜಾನ್ ರೆನ್ವಾರ್, ಮಾರ್ಸೆಲ್ ಕಾರ್ನೇ, ರೆನೆ ಕ್ಲೇರ್, ಜೂಲಿಯಾ ದುವಿವಿಯೆ, ಜಾಕ್ ಪ್ರೆವರ್ ಮೊದಲಾದ ಮೇಧಾವಿ ನಿರ್ದೇಶಕರು. ಮತ್ತು ರ್ಯಾಮೂ, ಲೂವಿ ಜುವೇ, ಜಾನ್ ಲೂವಿ ಬಾರೋಮಿಶೆಲ್ ಸಿಮೊ, ಜಾನ್ ಗಾಬೇ, ಹೆರ್ರಿಬೋರ್, ಪಿಯರ್ ಬ್ರಾಸರ್ ಮೊದಲಾದ ಉತ್ತಮ ಅಭಿನಯಕಾರರು. ಕಾರ್ನೇ ಮತ್ತು ಜಾಕ್ ಪ್ರೆವರ್ ಇವರ ಕೆ ದೆ ಬ್ರೂಮ್, ಲಜಾರ್ ಸಲೆವ್, ಲೆ ಜಾಂಫಾ ದ್ಯೂ ಪಾರಾದಿ ಮತ್ತು ಲೆವಿಸೀತರ್ ದ್ಯೂ ಸ್ವಾರ್, ರೆನ್ವೊರನ ಲಾ ಗ್ರಾಂಡ್ ಇಲ್ಯೂಸೊ ಮತ್ತು ದುವಿವಿಯೇ ಅವರ ಲಾ ಬೆಲ್ ಎಕ್ವಿಪ್-ಮೊದಲಾದವು ಇಂಥ ಚಿತ್ರಗಳಿಗೆ ಒಳ್ಳೆಯ ಉದಾಹರಣೆಗಳಾಗಿವೆ. 3 ಇಂಗ್ಲೆಂಡಿನಲ್ಲಿ: ಚಲಚ್ಚಿತ್ರದ ಮೊದಲ ದಿನಗಳಲ್ಲಿ ಇಂಗ್ಲೆಂಡಿನ ಚಿತ್ರಗಳೇ ಇತರ ದೇಶಗಳಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುತ್ತಿದ್ದವು. 1940ರ ಅನಂತರ ಉದ್ಯಮ ಸರಿಯಾಗಿ ತಲೆಯೆತ್ತಿ ಒಳ್ಳೆಯ ಚಿತ್ರಗಳನ್ನು ತಯಾರಿಸಲು ಪ್ರಾರಂಭಿತು. ಮಹಾಯುದ್ಧದ ಮೊದಲೇ ಹೆಸರುವಾಸಿಯಾದ ಕೆಲವು ನಿರ್ದೇಶಕರು- ಆಂತೋನಿ ಆಸ್ಕ್ವಿತ್, ಆಲ್ಬರ್ಟೊ ಕ್ಯಾವಲ್ಕ್ಯಾಂಟಿ, ಲೆಸ್ಲೀ ಹೊವಾರ್ಡ, ಮೈಕೆಲ್ ಬೊಲ್ಕನ್, ಆಲ್ ಫ್ರೆಡ್ ಹಿಚ್‍ಕಾಕ್ ಮೊದಲಾದವರು-ಹೊಸ ಹುರುಪಿನಿಂದ ಕೆಲಸ ಮಾಡತೊಡಗಿದರು. ಮೈಕೆಲ್ ಪೊವೆಲ್, ಕೆರೊಲ್ ರೀಡ್, ಡೆವಿಡ್ ಲೀನ್, ಜಾನ್ ಮತ್ತು ರಾಯ್ ಬೌಲ್ಟಿಂಗ್, ಫ್ರ್ಯಾಂಕ್ ಲಾಂಡರ್ ಮೊದಲಾದ ಹೊಸ ನಿರ್ದೇಶಕರು ಉದ್ಯಮವನ್ನು ಸೇರಿ, ಅದರ ಪ್ರಗತಿಯನ್ನು ಸಾಧಿಸಿದರು. ಸಾಕ್ಷ್ಯ ಮತ್ತು ಶೈಕ್ಷಣಿಕ ಚಿತ್ರಗಳ ನಿರ್ಮಾಣದಲ್ಲಿ ಬ್ರಿಟನ್ನಿಗೆ ಲೋಕದಲ್ಲಿ ಅಗ್ರಗಣ್ಯ ಸ್ಥಾನವಿದೆಯೆಂಬುದನ್ನು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ. 4 ರಷ್ಯದಲ್ಲಿ: ಚಲಚ್ಚಿತ್ರ ಕಲೆ ಎಲ್ಲ ಲಲಿತಕಲೆಗಳಿಂದ ಶ್ರೇಷ್ಠವಾದುದು ಎಂದು ಲೆನಿನ್ ಹೇಳಿದ. ಚಲಚ್ಚಿತ್ರ ಕಲೆ, ನಮ್ಮ ಕೈಯಲ್ಲಿ ಒಂದು ಮಹತ್ತರವಾದ ಶಕ್ತಿಸಾಧನೆಯಾಗಿದೆ ಎಂದು ಸ್ಟಾಲಿನ್ ಹೇಳಿದ. ಈ ಮಾತುಗಳನ್ನನುಸರಿಸಿಯೇ ಅಲ್ಲಿನ ಚಿತ್ರೋದ್ಯಮ ಮುಂದೆ ಸಾಗುತ್ತಿದೆ. ಇತರ ದೇಶಗಳಲ್ಲಿರುವಂತೆ ಚಲಚ್ಚಿತ್ರ ಅಲ್ಲಿ ಬರೇ ಮನೋರಂಜನೆಯ ಒಂದು ಸಾಧನವಲ್ಲ. ಅದೊಂದು ಸಾಂಸ್ಕøತಿಕ ಕಾರ್ಯವಾಗಿದೆ; ಜನರ ಮೇಲ್ಮೈಯನ್ನು ಸಾಧಿಸುವ ಒಂದು ಪ್ರಚಾರ ಸಾಧನವಾಗಿದೆ. ಈ ಉದ್ದೇಶದಿಂದಾಗಿ ಉದ್ಯಮ ರಾಷ್ಟ್ರದ ಒಂದು ಸ್ವತ್ತಾಗಿದೆ. ಚಲಚ್ಚಿತ್ರ ಉದ್ಯಮಕ್ಕೆ ಅಗತ್ಯವಿರುವ ನಿರ್ಮಾಪಕರು, ನಿರ್ದೇಶಕರು, ಅಭಿನಯಕಾರರು, ತಂತ್ರಜ್ಞರು ಮೊದಲಾದವರಿಗೆಲ್ಲ ತರಬೇತು ಕೊಡಲು ಅಲ್ಲಿ ಉತ್ತಮ ಸರ್ಕಾರೀ ಸಂಸ್ಥೆಗಳಿವೆ. ಈ ತರಬೇತನ್ನು ಕುಶಲರಾದ ತರುಣ ತರುಣಿಯರು ಉಚಿತವಾಗಿ ಪಡೆಯಬಹುದಲ್ಲದೆ, ತರಬೇತಿನ ಅವಧಿಯಲ್ಲಿ ನಿರ್ದಿಷ್ಟ ವೇತನವನ್ನೂ ಪಡೆಯಬಹುದಾಗಿದೆ. ತರಬೇತಿಯ ಅನಂತರ ಉದ್ಯಮದಲ್ಲಿ ಕೆಲಸ ಮಾಡಲು ಅವರಿಗೆ ಸಾಕಷ್ಟು ಅನುಕೂಲತೆಗಳನ್ನೂ ಆಡಳಿತ ಒದಗಿಸಿಕೊಡುತ್ತದೆ. ರಾಷ್ಟ್ರದ ಆಡಳಿತೆಯ ಒಂದು ಪ್ರಮುಖ ಅಂಗವಾದ ಕುಶಲ ವಿದ್ಯೆಗಳ ಮಂಡಲಿ ಅಲ್ಲಿಯ ಚಲಚ್ಚಿತ್ರ ಉದ್ಯಮದ ಮೇಲ್ವಿಚಾರಣೆಯನ್ನು ನಡೆಸುತ್ತದೆ. 5 ಸ್ವೀಡನಿನಲ್ಲಿ : ಸ್ವೀಡನ್ ತನ್ನ ವಿಸ್ತೀರ್ಣಕ್ಕೂ ಜನಸಂಖ್ಯೆಗೂ ಮೀರಿ ಚಲಚ್ಚಿತ್ರಕಲೆಗೆ ಕಾಣಿಕೆ ಸಲ್ಲಿಸಿವೆ. ಉದ್ಯಮ ಅಲ್ಲಿ 1912ರಲ್ಲೇ ನಿಶ್ಚಿತತೆಯಿಂದ ಪ್ರಾರಂಭವಾಗಿ 1925ರ ವರೆಗೆ ಸರಾಗವಾಗಿ ನಡೆಯಿತು. 1942ರಲ್ಲಿ ಸ್ಯೊಬರ್ಗ ಎಂಬ ನಿರ್ದೇಶಕ ಫ್ರೆಂಜಿó ಎಂಬ ಶಕ್ತಿಯುತ ಚಿತ್ರವನ್ನು ನಿರ್ಮಿಸಿ, ಉದ್ಯಮ ಪುನಃ ಎಚ್ಚರಗೊಳ್ಳುವಂತೆ ಮಾಡಿದರು. ಅನಂತರ ಅವರು ಬಾರಬ್ಬಾಸ್, ಕಾರಿನ್ ಮಾನ್ಸ್ ಡೊಟರ್, ಮಿಸ್ ಜ್ಯೂಲಿ ಮೊದಲಾದ ಚಿತ್ರಗಳನ್ನು ತಯಾರಿಸಿ, ಲೋಕದ ಚಲಚ್ಚಿತ್ರರಂಗದಲ್ಲಿ ಸ್ವೀಡನ್ನಿಗೂ ಒಂದು ಪ್ರಮುಖ ಸ್ಥಾನವನ್ನು ಮಾಡಿಕೊಟ್ಟರು. ಇವರ ಸಾಹಸಗಳನ್ನು ಇಂಗ್ಮಾರ್ ಬರ್ಗ್‍ಮನ್ ಮತ್ತಷ್ಟು ಮುಂದುವರೆಸಿಕೊಂಡು ಹೋದರು. ಬರ್ಗ್‍ಮನ್ ರಚಿಸಿದ ಸೆವೆನ್ತ್ ಸೀಲ್, ದಿ ಫೇಸ್ ತುಂಬ ಪ್ರಸಿದ್ಧಿ ಹೊಂದಿವೆ. ಮಾನವನ ಆಂತರಿಕ ಜೀವನ ಮತ್ತು ಅವನ ಆಧ್ಯಾತ್ಮಿಕ ಶೋಧನೆಯ ಪ್ರವೃತ್ತಿಗಳನ್ನು ಬರ್ಗ್‍ಮನ್ನನ ಚಿತ್ರಗಳಲ್ಲಿ ವಿಶೇಷವಾಗಿ ಕಾಣಬಹುದು. ಚಲಚ್ಚಿತ್ರಗಳಿಗೆ ಹೀಗೆ ಒಂದು ಆಧ್ಯಾತ್ಮಿಕದ ಒಲವನ್ನು ಕೊಟ್ಟಿರುವುದು ಸ್ವೀಡನ್ನಿನ ಮುಖ್ಯ ವೈಶಿಷ್ಟ್ಯವೆಂದು ಹೇಳಬಹುದು. ಸಾಕ್ಷ್ಯ ಚಿತ್ರದ ರೀತಿಯನ್ನು ತಮ್ಮ ಚಿತ್ರಗಳಲ್ಲಿ ಫಲದಾಯಕವಾಗಿ ಉಪಯೋಗಿಸುವುದರಲ್ಲಿ ಗೊಸ್ಟಾ ವರ್ನರ್ ಮತ್ತು ಆರ್ನೆ ಸ್ಯಾಕ್ಸಡಾರ್ಫ ತುಂಬ ಪ್ರಸಿದ್ಧಿ ಹೊಂದಿದ್ದಾರೆ. ಸ್ಯಾಕ್ಸಡಾರ್ಫ 1950ರಲ್ಲಿ ಗಾಳಿ ಮತ್ತು ನದಿ (ಕಾಶ್ಮಿರದ ಚಿತ್ರ) ಮತ್ತು ಹಿಂದೂದೇಶದ ಒಂದು ಹಳ್ಳಿ ಎಂಬ ಎರಡು ಸಣ್ಣ ಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಿದರು. ಇಂಥ 17 ಸಣ್ಣ ಚಿತ್ರಗಳ ನಿರ್ಮಾಣದ ಅನಂತರ ತನ್ನ ದೊಡ್ಡ ಚಿತ್ರವಾದ 'ಮಹತ್ತರ ಸಾಹಸವನ್ನು ರಚಿಸಿ ಲೋಕ ಮನ್ನಣೆಯನ್ನು ಪಡೆದರು. ಅವರ ಒಂದು ನಗರದ ಸೌಂದರ್ಯ ಲಹರಿ' ಎಂಬುದು ಮುತ್ತೊಂದು ಪ್ರಖ್ಯಾತವಾದ ಚಿತ್ರವಾಗಿದೆ. 1956ರಲ್ಲಿ ಅವರು ಭಾರತದ ಬಸ್ತಾರ ಪ್ರಾಂತ್ಯದ ಮರಿಯ ಆದಿವಾಸಿಗಳನ್ನು ಕುರಿತು ಒಂದು ಚಿತ್ರವನ್ನು ತಯಾರಿಸಿ ಅದಕ್ಕೆ 'ಮುರಲಿ ಮತ್ತು ಬಾಣ'ವೆಂದು ಹೆಸರಿಟ್ಟ. ಇದು ಅನುಕಂಪವನ್ನು ಹುಟ್ಟಿಸುವ ಬಹು ಸುಂದರವಾದೊಂದು ಚಿತ್ರವಾಗಿದೆ. ಚಲಚ್ಚಿತ್ರದಲ್ಲಿ ಕೆಲವು ಆಧುನಿಕ ಸುಧಾರಣೆಗಳು: 1 ವರ್ಣಚಿತ್ರಗಳು : ನೀಲಿ, ಹಸಿರು ಮತ್ತು ಕೆಂಪು-ಈ ಮೂರು ಮೂಲ ಬಣ್ಣಗಳ ಮಿಶ್ರಣದಿಂದ ಬೆಳಕಿನ ಎಲ್ಲ ಬಣ್ಣಗಳನ್ನೂ ಪಡೆಯಬಹುದು. ಈ ವೈಜ್ಞಾನಿಕ ಸತ್ಯದ ಮೂಲಕ ಚಲಚ್ಚಿತ್ರಗಳಿಗೆ ನೈಜಬಣ್ಣವಿರುವಂತೆ ಮಾಡಲು ಉದ್ಯಮದ ಮೊದಲ ದಿನಗಳಿಂದಲೂ ವಿಜ್ಞಾನಿಗಳು ಪ್ರಯತ್ನಿಸಿ, ಎರಡು ರೀತಿಯ ವಿಧಾನಗಳನ್ನು ಕಂಡುಹಿಡಿದಿದ್ದಾರೆ : ಒಂದು-ಸಂಕಲನ ವಿಧಾನ, ಇನೊಂದು-ವ್ಯವಕಲನ ವಿಧಾನ. ಸಂಕಲನ ವಿಧಾನದಲ್ಲಿ ಚಿತ್ರ ತೆಗೆಯುವ ಕ್ಯಾಮರದಲ್ಲಿಯೂ ಚಿತ್ರ ಪ್ರಕ್ಷೇಪಕದಲ್ಲಿಯೂ ಸಹಜವಾಗಿರುವ ಮಸೂರಗಳ ಜೊತೆಯಲ್ಲಿ ಬಣ್ಣದ ಮಸೂರಗಳನ್ನು ಉಪಯೋಗಿಬೇಕಾಗಿದೆ. ವ್ಯವಕಲನ ವಿಧಾನದಲ್ಲಿ ಬಣ್ಣವನ್ನು ಚಿತ್ರಪಟಲದಲ್ಲಿಯೇ ಬರುವಂತೆ ಮಾಡುತ್ತಾರೆ. ಮೊದಲ ವಿಧಾನ ಬಹು ಜಟಿಲವಾಗಿರುವುದರಿಂದ ಎರಡನೆಯ ವಿಧಾನವನ್ನೇ ಈಗ ಹೆಚ್ಚಾಗಿ ಉಪಯೋಗಿಸುತ್ತಾರೆ. ಈ ವಿಧಾನದಲ್ಲಿ ಟೆಕ್ನಿಕಲರ್ ರೀತಿ ಬಹು ಯಶಸ್ವಿಯಾಗಿದೆ. 1913 ರಿಂದ 1933ರವರೆಗೆ ಅಮೆರಿಕದ ವಿಜ್ಞಾನಿಗಳಾದ ಡಿ. ಎಫ್. ಕೊಮ್‍ಸ್ಟೊಕ್, ಎಚ್. ಟಿ. ಕಾಲ್ಮಸ್ ಮತ್ತು ಡಬ್ಲ್ಯು. ಬಿ. ವೆಸ್ಟ್‍ಕಟ್ ನಡೆಸಿದ ಶೋಧನೆಯ ಫಲವಾಗಿ ಈ ವಿಧಾನ ಈಗ ಯಶಸ್ವಿಯಾಗಿದೆ. ಅವರು ಈ ಶೋಧನೆಯನ್ನು ಮ್ಯಾಸಚೂಸೆಟ್ಸ್ ಟೆಕ್ನಾಲಾಜಿಕಲ್ ಇನ್ಸ್ಟಿಟ್ಯೂಟಿನಲ್ಲಿ ಮಾಡಿರುವುದರಿಂದ ಅದಕ್ಕೆ ಟೆಕ್ನಿಕಲರ್ ಎಂಬ ಹೆಸರು ಬಂದಿದೆ. ವಾಲ್ಟ್ ಡಿಸ್ನೆ ಈ ವಿಧಾನವನ್ನು 1933ರಲ್ಲಿ ತಮ್ಮದೊಂದು ಬಣ್ಣದ ಕಾರ್ಟೂನ್ ಚಿತ್ರಕ್ಕೆ ಮೊದಲು ಉಪಯೋಗಿಸಿದರು. ಈ ವಿಧಾನದಲ್ಲಿ ಛಾಯಾಗ್ರಹಣಕ್ಕೆ ಟೆಕ್ನಿಕಲರ್ ಕ್ಯಾಮರವನ್ನು ಉಪಯೋಗಿಸಬೇಕಾಗುವುದು. ಈ ಕ್ಯಾಮರದಲ್ಲಿರಿಸಿದ ಬಂಗಾರದ ಒಂದು ಅರ್ಧಪಾರದರ್ಶಕ ಪ್ರಿಸ್ಮ್ ಕ್ಯಾಮರದೊಳಗೆ ಹೋಗುವ ಕಿರಣಜಾಲವನ್ನು ವಕ್ರೀಭವನಗೊಳಿಸುವುದು. ಹೀಗೆ ವಕ್ರೀಭವನಗೊಂಡ ಕಿರಣಜಾಲಕ್ಕೆ ಮೂರು ಫಿಲ್ಮ್ ಪಟಲಗಳು ಸಮಕಾಲಿಕವಾಗಿ ಒಡ್ಡಲ್ಪಡುತ್ತವೆ. ಇವುಗಳಲ್ಲೊಂದರ ಪಟಲ ನೀಲಿವರ್ಣಸಮೂಹವನ್ನೂ ಇನ್ನೊಂದು ಪಟಲ ಹಸಿರುವರ್ಣಸಮೂಹವನ್ನೂ ಮೂರನೆಯದು ಕೆಂಪುವರ್ಣ ಸಮೂಹವನ್ನೂ ದಾಖಲೆಮಾಡಿಕೊಳ್ಳುತ್ತದೆ. ಆಮೇಲೆ ಈ ಮೂರು ಪಟಲಗಳನ್ನೂ ಅನೇಕ ರಾಸಾಯನಿಕ ಸಂಸ್ಕಾರ ಪರಂಪರೆಗಳಿಗೆ ಒಳಪಡಿಸಿ, ಅವುಗಳಲ್ಲಿ ದಾಖಲೆಗೊಂಡ ವರ್ಣಗಳೆಲ್ಲ ಒಂದೇ ಪಟಲದಲ್ಲಿ ಬರುವಂತೆ ಮಾಡುತ್ತಾರೆ. ಈ ರೀತಿ ತಯಾರಿಸಲ್ಪಟ್ಟ ಪಟಲ ಸಾಮಾನ್ಯ ಚಿತ್ರ ಪ್ರಕ್ಷೇಪಕದಲ್ಲಿ ನೇರವಾಗಿ ಉಪಯೋಗಿಸಲು ಬರುತ್ತದೆ. ಪ್ರಕ್ಷೇಪದಿಂದ ಹೊರಡುವ ಚಿತ್ರ ಮೂಲದೃಶ್ಯಗಳಲ್ಲಿದ್ದ ಬಣ್ಣಗಳನ್ನೆಲ್ಲ ಪರದೆಯ ಮೇಲೆ ತೋರಿಸುವುದು. ಟೆಕ್ನಿಕಲರಿನಲ್ಲಿ ಚಿತ್ರ ತೆಗೆಯುವ ವಿಧಾನ ಭಾರತದಲ್ಲಿ ಇನ್ನೂ ರೂಢಿಯಾಗಿ ಬಂದಿಲ್ಲ. ಚಿತ್ರ ತೆಗೆಯಲಿಕ್ಕೆ ಟೆಕ್ನಿಕಲರ್ ಕ್ಯಾಮರಗಳನ್ನೇ ಉಪಯೋಗಿಸಬೇಕಾಗಿದೆ. ಅಲ್ಲದೆ, ದೇಶದಲ್ಲಿನ ರಾಸಾಯನಿಕ ಸಂಸ್ಕರಣ ಪ್ರಯೋಗ ಶಾಲೆಗಳಲ್ಲಿ ಟೆಕ್ನಿಕಲರ್ ಚಿತ್ರಗಳ ತಯಾರಿಕೆಗೆ ಅವಶ್ಯವಿದ್ದ ರಾಸಾಯನಿಕ ಸಂಸ್ಕಾರಗಳನ್ನು ಮಾಡಲು ಸಾಕಷ್ಟು ಸಲಕರಣೆಗಳೂ ಸದ್ಯದಲ್ಲಿಲ್ಲ. ಇತೀಚೆಗೆ ಆಗ್ಫಾ ಕಲರ್ ಇಲ್ಲವೆ ಗೇವಾ ಕಲರ್ ವಿಧಾನ ವರ್ಣ ಚಿತ್ರಗಳ ತಯಾರಿಕೆಯಲ್ಲಿ ಹೆಚ್ಚು ಹೆಚ್ಚಾಗಿ ಉಪಯೋಗಿಸಲ್ಪಡುತ್ತದೆ. ಈ ವಿಧಾನವನ್ನು ಕಳೆದ ಎರಡನೆಯ ಮಹಾಯುದ್ಧದ ಸಮಯ ಜರ್ಮನಿಯ ವಿಜ್ಞಾನಿಗಳು ಮೊದಲು ಕಂಡುಹಿಡಿದಿದ್ದರು. ಅನಂತರ ಅಮೆರಿಕ ಮತ್ತು ಸೋವಿಯೆತ್ ಒಕ್ಕೂಟಗಳ ವಿಜ್ಞಾನಿಗಳು ಅದನ್ನು ಮೇಲ್ಪಡಿಸಿ, ಅದಕ್ಕೊಂದು ಪರಿಪೂರ್ಣತೆ ಬರುವಂತೆ ಮಾಡಿದರು. ಇದೂ ಟೆಕ್ನಿಕಲರ್‍ನಂತೆ ಒಂದು ವ್ಯವಕಲನ ವಿಧಾನವಾಗಿದೆ. ಇದರಲ್ಲಿ ಚಿತ್ರ ತೆಗೆಯಲು ಸಾಮಾನ್ಯ ಚಲಚ್ಚಿತ್ರ ಕ್ಯಾಮರವನ್ನು ಮಾತ್ರವಲ್ಲದೆ ಒಂದೇ ಛಾಯಾಗ್ರಾಹಕ ಋಣಪಟಲವನ್ನೂ ಉಪಯೋಗಿಸಬಹುದಾಗಿದೆ. ಈ ಪಟಲದಲ್ಲಿ ಮಾತ್ರ ಛಾಯಗ್ರಾಹಣಕ್ಕಾಗಿ ನಾಲ್ಕು ಪದರಗಳು ಒಂದರ ಮೇಲೊಂದು ಇರುತ್ತವೆ-ನೀಲಿ, ಹಸುರು, ಕೆಂಪು ಮತ್ತು ನೀಲಿ ಮತ್ತು ಹಸುರು ಪದರಗಳ ನಡುವೆ ಒಂದು ಹಳದಿ ಪದರು. ಈ ಋಣಪಟಲದ ರಾಸಾಯನಿಕ ಸಂಸ್ಕಾರಗಳೂ ಸುಲಭವಿದೆ. ಆದುದರಿಂದ ಭಾರತದಲ್ಲಿ ವರ್ಣಚಿತ್ರಗಳ ತಯಾರಿಕೆಗೆ ಈ ವಿಧಾನವೇ ಈಗ ಹೆಚ್ಚಾಗಿ ಬಳಕೆಯಲ್ಲಿದೆ. 2 ಅಗಲ ಪರದೆಯ ಚಿತ್ರಗಳು : (ಚಿ) ಸಿನೆರಾಮಾ : ದೃಶ್ಯವೈಶಾಲ್ಯವನ್ನು ತೋರಿಸುವ ವಕ್ರಾಕೃತಿಯ ದೊಡ್ಡ ಪರದೆ ಇದರ ಒಂದು ಮುಖ್ಯ ವೈಶಿಷ್ಟ್ಯವಾಗಿದೆ. ಲಂಡನ್ನಿನ ಕ್ಯಾಸಿನೊ ಚಿತ್ರ ಮಂದಿರದಲ್ಲಿನ ವಕ್ರಾಕೃತಿಯ ಪರದೆ 64 ಅಡಿ ಅಗಲ 23 ಅಡಿ ಎತ್ತರವಿದೆ. ಮಂದಿರದೊಳಗೆ ಎಲ್ಲಿ ಕುಳಿತರೂ ಕಣ್ಣಿನ ದೃಶ್ಯ ಕ್ಷೇತ್ರವನ್ನು ಈ ದೊಡ್ಡ ಪರದೆ ಪೂರ್ಣವಾಗಿ ಆವರಿಸಿಕಂಡು ಪ್ರೇಕ್ಷಕರೇ ದೃಶ್ಯದೊಳಗೆ ಸೇರಿಕೊಂಡಿರುವಂತೆ ಭಾಸವಾಗುತ್ತದೆ. ಚಿತ್ರದ ಘನನಾದದ ವ್ಯವಸ್ಥೆ ಪ್ರೇಕ್ಷಕರಲ್ಲಿ ಈ ಭಾವನೆಯನ್ನು ಮತ್ತಷ್ಟು ಪ್ರಬಲಗೊಳಿಸುತ್ತದೆ. ಇಷ್ಟು ದೊಡ್ಡ ಪರದೆಯನ್ನು ತುಂಬಿಸತಕ್ಕ ಚಿತ್ರಗಳನ್ನು ತೆಗೆಯಲು ಸಾಮಾನ್ಯ ಚಲಚ್ಚಿತ್ರ ಕ್ಯಾಮರ ಸಾಕಾಗದೆ ವಿಶಿಷ್ಟವಾದ ಒಂದು ಕ್ಯಾಮರವನ್ನು ನಿರ್ಮಿಸಬೇಕಾಯಿತು. ಇದನ್ನು ಫ್ರೆಡ್ ವ್ಯಾಲರ್ ಎಂಬ ತಂತ್ರಜ್ಞ ಸಾಧಿಸಿದ. ಇದರಲ್ಲಿ ಮೂರು ಸಾಮಾನ್ಯ ಚಲಚ್ಚಿತ್ರ ಕ್ಯಾಮರಗಳು ಒಟ್ಟಿಗೆ ಸೇರಿದಂತಾಗಿ, ಮೂರು ಬೇರೆ ಬೇರೆ ಮಸೂರಗಳ ಮೂಲಕ ಮೂರು ಬೇರೆ ಬೇರೆ ಪಟಲಗಳ ಮೇಲೆ ಏಕಕಾಲದಲ್ಲಿ ಚಿತ್ರ ತೆಗೆಯಲು ಸಾಧ್ಯವಿದೆ. ಈಮೂರು ಮಸೂರಗಳೂ ಒಂದಕ್ಕೊಂದು 48º ಅಂತರದಲ್ಲಿದ್ದು ದೃಶ್ಯದ ಮೂರನೆಯ ಒಂದು ಭಾಗವನ್ನಷ್ಟೇ ಒಂದೊಂದು ಮಸೂರವು ತೆಗೆಯುವುದು. ನಮ್ಮ ಎಡದಿಕ್ಕಿನ ಮಸೂರ ದೃಶ್ಯದ ಎಡಭಾಗವನ್ನೂ ನಮ್ಮ ಬಲದಿಕ್ಕಿನದು ದೃಶ್ಯದ ಬಲಭಾಗವನ್ನೂ ಮಧ್ಯದ್ದು ದೃಶ್ಯದ ಮಧ್ಯ ಭಾಗವನ್ನು ಗ್ರಹಿಸುವುದು. ಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಲು ಏಕಕಾಲದಲ್ಲಿ ಮೂರು ಬೇರೆ ಬೇರೆ ಪ್ರಕ್ಷೇಪಕಗಳು ಬೇಕಾಗುವುವು. ಒಂದೊಂದು ಪ್ರಕ್ಷೇಪಕ ಚಿತ್ರದ ಮೂರನೆಯ ಒಂದೊಂದು ಅಂಶವನ್ನು ಪರದೆಯ ಮೇಲೆ ಬೀಳಿಸಿ, ಮೂರು ಪ್ರಕ್ಷೇಪಕಗಳೂ ಕೂಡಿ ಪೂರ್ಣದೃಶ್ಯವನ್ನು ಒದಗಿಸಿಕೊಡುವುವು. ಪರದೆಗೆ ವಕ್ರಾಕಾರವಿರುವುದರಿಂದ, ಅದರ ಒಂದು ಭಾಗದ ಮೇಲೆ ಬೀಳುವ ಚಿತ್ರ ಇನ್ನೊಂದು ಭಾಗದ ಮೇಲೆ ಪ್ರತಿಚ್ಛಾಯೆಯನ್ನು ಬೀರಿ, ಇಡೀ ಚಿತ್ರದ ಪರಿಣಾಮ ಕೆಟ್ಟುಹೋಗುವ ಸಂಭವವಿದೆ. ಹೀಗೆ ಆಗದ ಹಾಗೆ ಈ ಬೃಹದಾಕಾರದ ಪರದೆಯನ್ನು ಒಂದೇ ಬಟ್ಟೆಯಿಂದ ಮಾಡದೆ, ಸಾಲು ರಂಧ್ರಗಳಿರುವ ಸಾವಿರಾರು ಕಿರಿ ಅಗಲದ ಪಟ್ಟೆಗಳನ್ನು ಲಂಬವಾಗಿ ಒಂದರ ಹಿಂದೆ ಇನ್ನೊಂದನ್ನು ನಿಲ್ಲಿಸಿ ಮಾಡಿರುತ್ತಾರೆ. ಹೀಗೆ ಮಾಡಿರುವುದರಿಂದ ಬೆಳಕಿನ ಪ್ರತಿಚ್ಛಾಯೆ ಒಂದು ಪಟ್ಟೆಯಿಂದ ಇನ್ನೊಂದು ಪಟ್ಟೆಯ ಹಿಂದುಗಡೆ ಹಾರಿಹೋಗಿ, ಒಟ್ಟು ಚಿತ್ರ ಪರದೆಯ ಮೇಲೆ ಸ್ವಷ್ಟವಾಗಿ ಕಾಣುತ್ತದೆ. ದೂರದಿಂದ ಇಂಥ ಪರದೆ ಒಂದೇ ಬಟ್ಟೆಯಿಂದ ಮಾಡಿದ ಪರದೆಯ ಹಾಗೆ ಕಾಣುತ್ತದೆ. ಪ್ರವಾಸ ದೃಶ್ಯಗಳಂಥ ದೊಡ್ಡ ದೊಡ್ಡ ದೃಶ್ಯಗಳನ್ನು ತೋರಿಸಲು ಸಿನೇರಾಮಾ ಅತ್ಯುತ್ಕøಷ್ಟ ಸಾಧನೆಯಾಗಿದೆ. ಆದರೆ ಅದರಲ್ಲಿ ಕ್ಲೋಸ್ ಅಪ್ ರೀತಿ ಸಾಧ್ಯವಿಲ್ಲ. ಮಾತ್ರವಲ್ಲ, ಅಂಥ ಚಿತ್ರಗಳನ್ನು ನಿರ್ಮಿಸಲಿಕ್ಕೂ ಪ್ರದರ್ಶಿಸಲಿಕ್ಕೂ ವಿಶೇಷ ತೊಂದರೆ ತೊಡರುಗಳಿರುವುದರಿಂದ ಅವು ಸರ್ವಸಾಮಾನ್ಯವಾಗುವುದು ಅಸಂಭವ. (b) ಸಿನೆಮಾಸ್ಕೋಪ್: ಈ ಅಗಲ ಪರದೆಯ ವಿಧಾನ ಎಲ್ಲ ದೇಶಗಳಲ್ಲಿ ಸರ್ವಸಾಮಾನ್ಯವಾಗಿದೆ. ಟ್ವೆಂಟಿಯತ್ ಸೆಂಚುರಿ ಫಾಕ್ಸ್ ಸಂಸ್ಥೆ ಇದನ್ನು ತನ್ನ ಚಿತ್ರಗಳಲ್ಲಿ ಮೊದಲು ಬಳಕೆಗೆ ತಂದಿತು. ಸಾಮಾನ್ಯ ಚಲಚ್ಚಿತ್ರ ಪರದೆಯ ದರ್ಶನ ಪ್ರಮಾಣ 1.33:1 ಆಗಿರುತ್ತದೆ. ಅಂದರೆ, ಪರದೆಯ ಎತ್ತರ 12 ಅಡಿ ಇದ್ದರೆ, ಅದರ ಅಗಲ 1.33 x 12. ಅಂದರೆ 16 ಅಡಿ ಆಗುವುದು. ಸಿನೆಮಸ್ಕೋಪ್ ದೃಶ್ಯದ ಪ್ರಮಾಣ 2.55:1 ಇರುತ್ತದೆ. ಅಂದರೆ ಪರದೆಯ ಎತ್ತರ ಅದೇ 12 ಅಡಿಯಿದ್ದರೆ, ಅದರ ಅಗಲ 2.55 x12 ಅಂದರೆ 30 ಅಡಿ 7 ಇಂಚು ಆಗುವುದು. ಇಂಥ ಚಿತ್ರಗಳಿಗೆ ಸಾಮಾನ್ಯವಾಗಿ ಉಪಯೋಗಿಸುವ 35 ಮಿಮಿ. ಪಟಲವನ್ನೇ ಛಾಯಾಗ್ರಹಣಕ್ಕೂ ಛಾಯಾಪ್ರಕ್ಷೇಪಕ್ಕೂ ಉಪಯೋಗಿಸಬಹುದಾಗಿದೆ. ಆದುದರಿಂದ ಇಂಥ ಚಿತ್ರಗಳನ್ನು ನಿರ್ಮಿಸಲಿಕ್ಕೂ ಪ್ರದರ್ಶಿಸಲಿಕ್ಕೂ ವಿಶೇಷ ತೊಂದರೆ ತೊಡರುಗಳಿಲ್ಲ. ಪ್ರದರ್ಶನ ಮಂದಿರಗಳು ಮಾತ್ರ ಅಗಲ ಪರದೆಯನ್ನು ಉಪಯೋಗಿಸಬೇಕಾಗಿದೆ. ಈ ಪರದೆ ಸಾಮಾನ್ಯವಾಗಿ ಹತ್ತಿಬಟ್ಟೆಯದ್ದೇ ಆಗಿದ್ದು, ಅದರ ಮೇಲೆ ಪ್ಲಾಸ್ಟಿಕ್ಕಿನ ಒಂದು ಲೇಪವನ್ನು ಸವರಿರುತ್ತಾರೆ. ಪರದೆಯ ಮೇಲೆ ಚಿತ್ರಕ್ಕೆ ಇರಬಹುದಾದ ಪ್ರತಿಚ್ಛಾಯೆಯನ್ನು ಪ್ರೇಕ್ಷಕರ ಕಡೆಗೇನೇ ತಿರುಗಿಸಲು, ಪರದೆಗೆ ಲೋಹದ ಒಂದು ತೆಳ್ಳನೆಯ ಉಬ್ಬುಲೇಪವನ್ನೂ ಕೊಡುತ್ತಾರೆ. ಛಾಯಾಗ್ರಹಣಕ್ಕೆ ಸಾಮಾನ್ಯ ಚಲಚ್ಚಿತ್ರ ಕ್ಯಾಮರವನ್ನು ಉಪಯೋಗಿಸಬಹುದಾದರೂ ಕ್ಯಾಮರದೊಳಗೆ ಒಂದು ಅನಮಾರ್ಫಿಕ್ ಉಪಯೋಗಿಸಬೇಕಾಗಿದೆ. ಇದು ರೂಢಿಯಲ್ಲಿರುವ ಗೋಳಾಕಾರದ ಮಸೂರವಾಗದೆ, ವರ್ತುಲ ಸ್ತಂಭಾಕೃತಿಯದಾಗಿರುತ್ತದೆ. ಇದರ ಉಪಯೋಗವನ್ನು ಫ್ರೆಂಚ್ ವಿಜ್ಞಾನಿ ಹೆನ್ರಿ ಕ್ರೆಟಿಯೆ ಕಂಡುಹಿಡಿದ. ಈ ಮಸೂರ ವಿಶಾಲದೃಶ್ಯವನ್ನು ಒತ್ತುಗುಂಪಾಗಿ ಅಂದರೆ ಸಂಕೋಚಸ್ಥಿತಿಯಲ್ಲಿ, ಪಟಲದಲ್ಲಿ ಸೇರಿಸುತ್ತದೆ. ಉದಾಹರಣೆಗಾಗಿ, 7 ಅಡಿ ಎತ್ತರ 11/2 ಅಡಿ ಅಗಲದ ಬಾಗಿಲಾಗಿ ಚಿತ್ರಪಟದಲ್ಲಿ ತೋರಿಸುವುದು. ಆದುದರಿಂದ ವಿಶಾಲವಾದ ದೃಶ್ಯಗಳ ಅಂಚು ಕೂಡ ಸ್ವಲ್ಪವೂ ಅಸ್ಪಷ್ಟತೆಯಿಲ್ಲದೆ 35 ಮಿಮಿ.ನ ಪಟಲದೊಳಗೆ ಸೇರಿಬಿಡುವುದು. ಚಿತ್ರ ಪ್ರಕ್ಷೇಪಕ್ಕೆ, ಪ್ರಕ್ಷೇಪಕದೊಳಗೆ ಚಿತ್ರವನ್ನು ವಿಸ್ತರಿಸುವ ಇನ್ನೊಂದು ರೀತಿಯ ಅನಮಾರ್ಫಿಕ್ ಮಸೂರ ಇರಬೇಕಾಗುತ್ತದೆ. ಇದು ಸಂಕೋಚಸ್ಥಿತಿಗೊಂಡಿರುವ ಚಿತ್ರವನ್ನು ವಿಸ್ತರಿಸಿ, ಅದಕ್ಕಿರುವ ನೈಜ ಪರಿಣಾಮವನ್ನು ಪರದೆಯ ಮೇಲೆ ಕೊಡುತ್ರದೆ. ಅಂದರೆ ವಿಶಾಲದೃಶ್ಯ ಪರದೆಯ ಮೇಲೆ ವಿಶಾಲವಾಗಿಯೇ ಶುಭ್ರವಾಗಿ ಕಾಣಬರುವುದು. ಈಗೀಗ ಸಿನೆಮಾಸ್ಕೋಪ್ ಚಿತ್ರಗಳಿಗೆ 35 ಮಿಮಿ. ಪಟಲದ ಬದಲು 55.625ಮಿಮಿ. ಅಗಲದ ಪಟಲವನ್ನು ಉಪಯೋಗಿಸಿಲಿಕ್ಕೆ ಪ್ರಾರಂಭಿಸಿದ್ದಾರೆ. ಇದರಿಂದ ಪರದೆಯ ಮೇಲಿನ ಚಿತ್ರ ಮತ್ತಷ್ಟು ನಿರ್ದುಷ್ಟವಾಗಿಯೂ ಶುಭ್ರವಾಗಿಯೂ ಕಾಣುವುದು. (ಛಿ) ವಿಸ್ಟಾವಿಷನ್ : ಈ ವಿಧಾನವನ್ನು ಪಾರಾಮೌಂಟ್ ಫಿಲ್ಮ್ ಸಂಸ್ಥೆ ಮೊದಲು ಬಳಕೆಗೆ ತಂದಿತು. ಈ ವಿಧಾನದಲ್ಲಿ ಛಾಯಾಗ್ರಾಹಕದಲ್ಲಿಯೂ ಛಾಯಾಪ್ರಕ್ಷೇಪಕದಲ್ಲಿಯೂ 35 ಮಿಮಿ.ನ ಪಟಲವನ್ನು ಲಂಬವಾಗಿ ಉಪಯೋಗಿಸದೆ, ಸಮತಲವಾಗಿ ಹಾದುಹೋಗುವಂತೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಚಿತ್ರಕ್ಕೆ 21/2 ಪಾಲಷ್ಟು ಹೆಚ್ಚಿನ ಪರಿಮಾಣ ಸಿದ್ಧಿಸುತ್ತದೆ. ಪ್ರದರ್ಶನದ ಸಮಯ ಚಿತ್ರಕ್ಕೆ ವಿಶೇಷ ವಿಸ್ತರಣೆ ಅಗತ್ಯವಿಲ್ಲದೆ, ಪರದೆಯ ಮೇಲಿನ ಚಿತ್ರ ವಿಶೇಷವಾಗಿ ಸ್ಪಷ್ಟವಾಗಿಯೂ ಶುಭ್ರವಾಗಿಯೂ ಕಾಣಬರುತ್ತದೆ. ಈಗೀಗ ಈ ವಿಧಾನದಲ್ಲಿಯೂ 55.625 ಮಿ.ಮಿ. ಅಗಲದ ಪಟಲವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಿ ಅಗಲ ಪರದೆಯ ಮೇಲಿನ ಚಿತ್ರಕ್ಕೆ ಇನ್ನಷ್ಟು ಸ್ವಚ್ಛತೆ ಬರುವಂತೆ ಮಾಡುತ್ತಿದ್ದಾರೆ. ಆದರೆ ಈ ವಿಧಾನಕ್ಕೆ ಪಟಲ ಸಮತಲವಾಗಿ ಹಾದುಹೋಗುವಂತೆ ಅನುಕೂಲಿಸುವ ಹೊಸ ಮಾದರಿಯ ಛಾಯಗ್ರಾಹಕಗಳೂ ಛಾಯಾಪ್ರಕ್ಷೇಪಕಗಳು ಬೇಕಾಗಿವೆ. (ಜ) ಟಾಡ್-ಏ ಓ (ಖಿoಜಜ-ಂಔ) : ಇದು ಅಗಲ ಪರದೆಯ ಚಿತ್ರಗಳಲ್ಲಿ ಮತ್ತೊಂದು ವಿಧಾನ. ಇದರಲ್ಲಿ 65 ಮಿಮಿ. ಅಗಲದ ಪಟಲವನ್ನು ಉಪಯೋಗಿಸುತ್ತಾರೆ. ಸಿನೆಮಾಸ್ಕೋಪ್ ಮತ್ತು ವಿಸ್ಟಾವಿಷನ್ ವಿಧಾನಗಳಲ್ಲಿರುವ ಇಲ್ಲಿಯೂ ಛಾಯಾಗ್ರಹಣಕ್ಕೆ ಮತ್ತು ಚಿತ್ರ ಪ್ರದರ್ಶನಕ್ಕೆ ಒಂದೇ ಕ್ಯಾಮರ ಮತ್ತು ಒಂದೇ ಪ್ರಕ್ಷೇಪಕ ಸಾಕಾಗುತ್ತದೆ. ಆದರೆ ಅವುಗಳಲ್ಲಿ 65 ಮಿಮೀ. ಅಗಲದ ಪಟಲ ಹಾದುಹೋಗಲು ಅನುಕೂಲವಾಗುವಂತೆ ಅವುಗಳ ನಿರ್ಮಾಣ ಆಗಬೇಕಾಗಿದೆ. ಪರದೆ ಸಿನೇರಾಮಾದಲ್ಲಿದ್ದಂತೆ ವಕ್ರಾಕೃತಿಯುಳ್ಳದ್ದಾಗಿದೆ. ಅದು 25 ಅಡಿ ಎತ್ತರವಾಗಿದ್ದು, ಅದರ ಅಗಲ, ಒಂದು ಬದಿಯಿಂದ ಇನ್ನೊಂದು ಬದಿಗೆ ನೇರವಾಗಿ 56 ಅಡಿ ಇರುತ್ತದೆ. ವಕ್ರಾಕಾರದ ರೇಖೆಯ ಪ್ರಕಾರ ಅದರ ಅಗಲ 65 ಅಡಿ ಇರುತ್ತದೆ. ಮಧ್ಯದಲ್ಲಿ 15 ಅಡಿ ಆಳವಿರುತ್ತದೆ. ವರ್ಣಚಿತ್ರಕ್ಕೆ ಈಸ್ಟ್‍ಮನ್ ಧನ ಮತ್ತು ಋಣ ವರ್ಣಪಟಲಗಳನ್ನು ಉಪಯೋಗಿಸುತ್ತಾರೆ. ಘನನಾದದ ಹೆಚ್ಚಿನ ಸಾಲುಗಳು ಪಟಲದಲ್ಲಿ ಸೇರುವಂತೆ 70 ಮಿಮಿ.ನ ಪಟಲವನ್ನು ಉಪಯೋಗಿಸಬೇಕಾಗಿದೆ. ಈ ವಿಧಾನದಲ್ಲಿ ಪರದೆಯ ಮೇಲೆ ಬೀಳುವ ವರ್ಣಚಿತ್ರಗಳು ವಿಶೇಷವಾಗಿ ಸ್ಪಷ್ಟವಾಗಿಯೂ ಶುಭ್ರವಾಗಿಯೂ ಕಾಣುತ್ತವೆ. 3 3-ಡಿ ಚಿತ್ರಗಳು : ಇವು ಮೂರು ಆಯಾಮಗಳ ಚಿತ್ರಗಳು. ನಾವು ಬಲಗಣ್ಣನ್ನು ಮುಚ್ಚಿ ಒಂದು ದೃಶ್ಯವನ್ನು ನೋಡಿ, ಆಮೇಲೆ ನಮ್ಮ ಎಡಗಣ್ಣನ್ನು ಮುಚ್ಚಿ ನಮ್ಮ ಬಲಗಣ್ಣಿಂದ ಆ ದೃಶ್ಯವನ್ನು ನೋಡಿದರೆ, ಆ ಎರಡು ದೃಶ್ಯಗಳೂ ಒಂದೇ ಆದರೂ ಅವುಗಳಲ್ಲಿ ಸ್ವಲ್ಪಮಟ್ಟಿನ ಸ್ಥಾನಪಲ್ಲಟದ ವ್ಯತ್ಯಾಸವಿರುವುದು. ಈ ಸ್ಥಾನಪಲ್ಲಟ ನಮ್ಮ ಕಣ್ಣುಗಳ ಮಧ್ಯವಿರುವ ಅಂತರವನ್ನು ಹೊಂದಿಕೊಂಡಿದೆ. ಈ ಅಂತರವನ್ನಷ್ಟೇ ಇಟ್ಟುಕೊಂಡಿರುವ ಎರಡು ಮಸೂರಗಳ ಮೂಲಕ ಆ ದೃಶ್ಯದ ಛಾಯಾಗ್ರಾಹಕವನ್ನು ಮಾಡಿದರೆ, ನಮಗೆ ಆ ದೃಶ್ಯದ ಎರಡು ಚಿತ್ರಗಳು ದೊರಕುವುವು. ಈ ಚಿತ್ರಗಳಲ್ಲಿ ಒಂದು ನಾವು ಎಡಗಣ್ಣಿಂದ ಮಾತ್ರ ನೋಡಿದಂತೆಯೂ ಇನ್ನೊಂದು ಬಲಗಣ್ಣಿಂದ ಮಾತ್ರ ನೋಡಿದಂತೆಯೂ ಇರುತ್ತದೆ. ಈ ಎರಡೂ ಚಿತ್ರಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು, ಅವನ್ನು ಎರಡು ಮಸೂರಗಳ ಮುಖಾಂತರ ಒಂದೊಂದು ಕಣ್ಣಿಗೂ ಚಿತ್ರಕ್ಕೂ ಒಂದೊಂದು ಲೆನ್ಸಿನ ಪ್ರಕಾರ-ನೋಡಿದರೆ, ಆ ಎರಡು ಚಿತ್ರಗಳೂ ಮಿಲನವಾಗಿ, ಆ ದೃಶ್ಯ ನೈಜದಲ್ಲಿದ್ದಂತೆ ಮೂರು ಆಯಾಮಗಳುಳ್ಳ ಚಿತ್ರವಾಗಿ ಕಾಣುತ್ತದೆ. ಇದು ನಮಗೆಲ್ಲರಿಗೂ ಪರಿಚಿತವಾದ ಸ್ಟೀರಿಯೋಸ್ಕೋಪ್ ಅಥವಾ ಘನರೂಪದರ್ಶಕವಾಗಿದೆ. ಇದನ್ನು ಸರ್ ಚಾಲ್ರ್ಸ ವ್ಹೀಟ್‍ಸ್ಟೋನ್ 1838ರಲ್ಲಿ ಮೊದಲು ಕಂಡುಹಿಡಿದ. ಈ ಸ್ಥಾಯಿಕ ದೃಶ್ಯದಂತೆಯೇ ಚಲಿಸುವ ದೃಶ್ಯಗಳನ್ನೂ ನಮ್ಮ ಕಣ್ಣುಗಳ ಮಧ್ಯದಲ್ಲಿರುವ ಅಂತರವಷ್ಟನ್ನೇ ಇಟ್ಟುಕೊಂಡಿರುವ ಎರಡು ಮಸೂರಗಳ ಮುಖಾಂತರ ಎರಡು ಚಲಚ್ಚಿತ್ರ ಛಾಯಗ್ರಾಹಕಗಳಿಂದ ಚಿತ್ರರೂಪವಾಗಿ ತೆಗೆಯಬಹುದು. ಆದರೆ ಹೀಗೆ ತೆಗೆಯಲ್ಪಟ್ಟ ಎರಡು ಚಿತ್ರಗಳನ್ನೂ ಪರದೆಯ ಮೇಲೆ ಒಂದಾಗಿ ಬೀಳಿಸಿದರೆ, ಅದೊಂದು ಅಸ್ಪಷ್ಟವಾದ ಮುದ್ದೆ ಚಿತ್ರವಾಗಿ ನಮಗೆ ಕಾಣಿಸುವುದು. ಆದರೆ ಈ ಮುದ್ದೆ ಚಿತ್ರದಲ್ಲಿ ಕೂಡಿರುವ ಎರಡು ಚಿತ್ರಗಳನ್ನು ನಮ್ಮ ಕಣ್ಣುಗಳು ಬೇರ್ಪಡಿಸಿ, ಅವನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡಲು ಸಾಧ್ಯವಿದ್ದರೆ, ಅವು ಸ್ವಚ್ಛತೆಯನ್ನು ತಾಳಿ ನಮಗೆ ಘನರೂಪದ ನಾವು ಕಾಣಬೇಕಾದರೆ, ಪರದೆಯ ಮೇಲಿನ ಮುದ್ದೆಚಿತ್ರವನ್ನು ನಮ್ಮ ಕಣ್ಣುಗಳು ಬೇರ್ಪಡಿಸುವ ವಿಧಾನವೊಂದು ಬೇಕಾಗಿದೆ. ಅದನ್ನು ಅನಗ್ಲಿಫ್ ಎನ್ನುತ್ತಾರೆ. ಈ ವಿಧಾನದಲ್ಲಿ, ಎರಡು ಚಲಚ್ಚಿತ್ರ ಕ್ಯಾಮರಗಳಿಂದ, ಮೇಲೆ ಹೇಳಿದಂತೆ ತೆಗೆದ ಎರಡು ಚಿತ್ರಪಟಲದಲ್ಲಿ ಒಂದಕ್ಕೆ ಹಸಿರು ಬಣ್ಣವನ್ನೂ ಮತ್ತೊಂದಕ್ಕೆ ಕೆಂಪು ಬಣ್ಣವನ್ನೂ ಕೊಟ್ಟು, ಆಮೇಲೆ ಅವೆರಡನ್ನೂ ಎರಡು ಪ್ರಕ್ಷೇಪಕಗಳ ಮೂಲಕ ಪರದೆಯ ಮೇಲೆ ಬೀಳಿಸುತ್ತಾರೆ. ನಾವು ಆ ಚಲಚ್ಚಿತ್ರವನ್ನು ಬರಿಯ ಕಣ್ಣಿಂದ ನೋಡಿದರೆ ಅದೊಂದು ಕೆಂಪು, ಹಸುರು ಮಿಶ್ರಿತ ಒಂದು ಮುದ್ದೆಚಿತ್ರವಾಗಿ ಕಾಣುವುದು. ಆದರೆ ಒಂದು ಕಣ್ಣಿಗೆ ಹಸುರು ವರ್ಣದ ಮಸೂರ, ಇನ್ನೊಂದು ಕಣ್ಣಿಗೆ ಕೆಂಪು ವರ್ಣದ ಮಸೂರ ಇರುವ ಕನ್ನಡಕವನ್ನಿಟ್ಟುಕೊಂಡು ಅದೇ ಚಿತ್ರವನ್ನು ನೋಡಿದರೆ, ಚಿತ್ರ ಆ ಕ್ಷಣವೇ ಶುಭ್ರವಾಗಿ, ನೈಜಸ್ಥಿತಿಯಲ್ಲಿರುವಂತೆಯೇ ಘನರೂಪವನ್ನು ತಾಳಿದಂತೆ ಕಾಣಿಸುವುದು. ಇದೇಕೆಂದರೆ, ನಮ್ಮ ಕನ್ನಡಕದ ಎಡದಿಕ್ಕಿನ ಹಸಿರುವರ್ಣ, ಮುದ್ದೆಚಿತ್ರದಲ್ಲಿರುವ ಹಸಿರುಭಾಗವನ್ನು ಸೋಸಿಬಿಡುತ್ತದಾಗಿ ಎಡದಿಕ್ಕಿನ ಕ್ಯಾಮರ ತೆಗೆದ ಚಿತ್ರವನ್ನೇ ನಾವು ಕಾಣುವೆವು. ಹಾಗೆಯೇ ನಮ್ಮ ಕನ್ನಡಕದ ಬಲ ದಿಕ್ಕಿನ ಕೆಂಪುವರ್ಣ, ಆ ಕೆಂಪುವರ್ಣದ ಚಿತ್ರವನ್ನು ಸೋಸಿಬಿಡುತ್ತದಾಗಿ ಬಲದಿಕ್ಕಿನ ಕ್ಯಾಮರ ತೆಗೆದ ಚಿತ್ರವನ್ನೇ ನಾವು ಕಾಣುತ್ತೇವೆ. ಹೀಗೆ ಆ ಮುದ್ದೆ ಚಿತ್ರದಲ್ಲಿನ ಎರಡು ಚಿತ್ರಗಳೂ ನಮ್ಮ ಕಣ್ಣುಗಳಿಗೆ ಬೇರೆ ಬೇರೆಯಾಗಿ ಒಂದೇ ಸಲ ಕಾಣಬರುತ್ತವೆ. ಈ ಸ್ಥಿತಿ ನಾವು ಎಲ್ಲ ವಸ್ತುಗಳನ್ನು ನೋಡುವಂತೆಯೇ ಆಗಿದ್ದು, ನಾವು ನೋಡುತ್ತಿರುವ ಚಲಚ್ಚಿತ್ರ ಘನರೂಪವನ್ನು ತಾಳಿದಂತೆ ನಮಗೆ ಭಾಸವಾಗುವುದು. ಕೆಂಪು ಮತ್ತು ಹಸಿರು ವರ್ಣಗಳ ಅನಗ್ಲಿಫ್ ವಿಧಾನದ ಬದಲು ಈಗೀಗ 3-ಡಿ ಚಿತ್ರಗಳನ್ನು ತೆಗೆಯಲು ಪೋಲರೈಸ್ಡ್ ಬೆಳಕನ್ನು, ಅಂದರೆ ಬೆಳಕಿನ ಕಿರಣಗಳ ತರಂಗ ಕಂಪನಗಳಿಗೆ ಒಂದು ನಿರ್ದಿಷ್ಟ ರೂಪ ಕೊಡುವ ಕಾರ್ಯರೀತಿಯನ್ನು, ಉಪಯೋಗಿಸುತ್ತಾರೆ. ದೃಶ್ಯದ ಎರಡು ಚಿತ್ರಗಳನ್ನೂ ಪರದೆಯ ಮೇಲೆ ಬೀಳಿಸುವಾಗ, ಅವುಗಳಲೊಂದರ ಬೆಳಕಿನ ತರಂಗ ಕಂಪನಗಳು ಪರದೆಯ ಮೇಲ್ಭಾಗದ ಬಲದಿಕ್ಕಿನಿಂದ ಕೆಳಗಿನ ಎಡಭಾಗಕ್ಕೆ ಅಡ್ಡ ಹಾಯುವಂತೆಯೂ ಇನ್ನೊಂದರ ಬೆಳಕಿನ ತರಂಗ ಕಂಪನಗಳು ಇದಕ್ಕೆ ವಿರುದ್ಧ ರೀತಿಯಲ್ಲಿ, ಅಂದರೆ ಪರದೆಯ ಮೇಲ್ಭಾಗದ ಎಡದಿಕ್ಕಿನಿಂದ ಕೆಳಗಿನ ಬಲಭಾಗಕ್ಕೆ ಅಡ್ಡ ಹಾಯುವಂತೆಯೂ ಮಾಡುತ್ತಾರೆ. ಪ್ರಕ್ಷೇಪಕಗಳಲ್ಲಿ ವೋಲರೈಸಿಂಗ್ ಸೋಸುಕಗಳನ್ನಿಟ್ಟು ಈ ರೀತಿ ಮಾಡಲು ಸಾಧ್ಯವಿದೆ. ಪರದೆಯ ಮೇಲೆ ಬಿದ್ದ ತರಂಗ ಕಂಪನಗಳಿಗನುಸಾರವಾಗಿ ಮಸೂರಗಳಿರುವ ಕನ್ನಡಕವನ್ನು (ವೋಲರೈಸ್ಡ್ ಗ್ಲ್ಯಾಸಸ್) ಇಟ್ಟುಕೊಂಡರೆ, ಪರದೆಯ ಮೇಲೆ ಮಿಲನಗೊಂಡಿದ್ದ ಎರಡು ಚಿತ್ರಗಳು ಬೇರೆಬೇರೆಯಾಗಿ ಒಂದೇ ಸಮಯ ಕಾಣಬಂದು ಅವು ಘನರೂಪವನ್ನು ತಾಳಿಕೊಂಡ ಒಂದೇ ಚಿತ್ರವಾಗಿ ತೋರುವುದು. ಈ ವಿಧಾನ ಹಳೆಯ ಅನಗ್ಲಿಫ್ ವಿಧಾನ ಕೊಡುವುದಕ್ಕಿಂತ ಹೆಚ್ಚು ಶುಭ್ರವಾದ ಚಿತ್ರಗಳನ್ನು ನಮಗೆ ಒದಗಿಸಿಕೊಡುತ್ತದೆ. ಅಲ್ಲದೆ, ಅನಗ್ಲಿಫ್ ವಿಧಾನದಲ್ಲಿ ವರ್ಣ ಚಿತ್ರಗಳು ಸಾಧ್ಯವಿಲ್ಲ. ಈ ವಿಧಾನದಲ್ಲಿ ಅವು ಸಾಧ್ಯವಾಗಿವೆ ಚಲಚ್ಚಿತ್ರದ ಇತರ ಯಾವ ಸುಧಾರಣೆಯೂ ತೀರ ಬೆಡಗಿನ ಅನುಭವವನ್ನು ಪ್ರೇಕ್ಷಕರು 3-ಡಿ ಚಿತ್ರಗಳಿಂದ ಪಡೆಯುತ್ತಾರೆ. ಈ ಚಿತ್ರಗಳು ಎಷ್ಟು ನೈಜವಾಗಿ ಕಾಣುತ್ತವೆಯೆಂದರೆ ಚಿತ್ರಗಳಲ್ಲಿರುವ ಒಂದು ಹಾವು ಇಲ್ಲವೆ ಓಡುವ ಕುದುರೆ ಪ್ರೇಕ್ಷಕರ ಕಡೆಗೆ ಬರುವಂತಾದರೆ, ಅವರು ಹೆದರಿಕೊಂಡು ಚೀರಿ, ಕುಳಿತಲ್ಲಿಂದ ಎದ್ದು ಹೋಗಲು ಪ್ರಯತ್ನಿಸುತ್ತಾರೆ; ಈ 3-ಡಿ ವಿಧಾನವೇನು ಹೊಸತಲ್ಲ. 30-40 ವರ್ಷಗಳ ಹಿಂದೆಯೇ ಅದು ಕಂಡುಹಿಡಿಯಲ್ಪಟ್ಟಿತ್ತು. ಆದರೆ ಅವನ್ನು ನೋಡಲು ಪ್ರತಿಯೊಬ್ಬ ಪ್ರೇಕ್ಷಕನಿಗೆ ಆ ಹಸುರು ಮತ್ತು ಕೆಂಪು ಲೆನ್ಸುಗಳಿರುವ ಇಲ್ಲವೆ ಪೋಲರೈಸ್ಡ್ ಮಸೂರಗಳಿರುವ ಕನ್ನಡಕವನ್ನು ಒದಗಿಸಿ ಕೊಡಬೇಕಾಗಿದೆ. ಇದೊಂದು ವಿಪರೀತ ತೊಂದರೆಯ ಕೆಲಸವಾಗಿ ಈಗ 3-ಡಿ ಚಿತ್ರಗಳು ರೂಢಿಯಲ್ಲಿಲ್ಲ. ಅಲ್ಲದೆ ಈ ಚಿತ್ರಗಳು ಸಾಧಿಸುವ ಪರಿಣಾಮವನ್ನು ಬಹುಮಟ್ಟಿಗೆ ಈಗಿನ ಅಗಲ ಪರದೆ ಚಿತ್ರಗಳು ಸಾಧಿಸುತ್ತಿವೆ. 4 ಪರ್ಸಪೆಕ್ಟಾ-ಸ್ಟಿರಿಯೊಫೋನಿಕ್ ಸೌಂಡ್ : ನಮ್ಮ ಎರಡೂ ಕಣ್ಣುಗಳಿಂದ ನಾವೊಂದು ದೃಶ್ಯವನ್ನು ನೋಡಿದರೆ, ಆ ದೃಶ್ಯಕ್ಕೆ ಹೇಗೆ ಘನರೂಪ ಬರುವುದೋ ಹಾಗೆಯೇ ನಮ್ಮ ಎರಡೂ ಕಿವಿಗಳು ಒಂದು ಸದ್ದನ್ನು ಕೇಳಿದರೆ ಆ ಸದ್ದಿಗೆ ಒಂದು ವಿಶೇಷ ಪುಷ್ಟಿ ಬರುವುದು. ಆದುದರಿಂದ ಚಲಚ್ಚಿತ್ರ ಪಟಲದ ಬದಿಯಲ್ಲಿರುವ ಶಬ್ದಜಾಡಿನಿಂದ ಹೊರಡುವ ಸದ್ದನ್ನು ಒಂದು ಕೃತಕ ಮೂಲದಿಂದ ಎರಡು ಪ್ರವಾಹಮಾರ್ಗಗಳಿಂದ ಹೋಗುವಂತೆ ಮಾಡಿ, ಅವುಗಳಲ್ಲೊಂದು ಪರದೆಯ ಹಿಂದೆ ಒಂದು ಪಕ್ಕದಲ್ಲಿಟ್ಟಿರುವ ಧ್ವನಿವರ್ಧಕವನ್ನು ಸೇರುವಂತೆಯೂ ಇನ್ನೊಂದು ಹಾಗೆಯೇ ಪರದೆಯ ಇನ್ನೊಂದು ಪಕ್ಕದಲ್ಲಿಟ್ಟಿರುವ ಧ್ವನಿವರ್ಧಕವನ್ನು ಸೇರುವಂತೆಯೂ ಮಾಡಿದರೆ, ಆ ಎರಡು ಧ್ವನಿವರ್ಧಕಗಳಿಂದ ಹೊರಡುವ ಸದ್ದು ವಿಶೇಷ ಪುಷ್ಟಿಯನ್ನು ತಾಳುವುದು. ಏಕೆಂದರೆ ಆ ಸದ್ದಿನ ಪ್ರವಾಹ ಮಾರ್ಗಗಳಲ್ಲೊಂದು ನಮ್ಮ ಬಲಕಿವಿಯ ಆಚೆಯಿಂದಲೂ ಇನ್ನೊಂದು ನಮ್ಮ ಎಡಕಿವಿಯ ಆಚೆಯಿಂದಲೂ ಬರುವಂತಾಗುವುದು. ಈ ಧ್ವನಿವರ್ಧಕಗಳ ಅಂತರ ಆದಷ್ಟು ಹೆಚ್ಚು ಇರುವುದು ಒಳ್ಳೆಯದು ಪಟಲದ ಶಬ್ದಜಾಡಿನ ಕೃತಕ ಮೂಲದಿಂದ ಮತ್ತೊಂದು ಪ್ರವಾಹ ಮಾರ್ಗ ಸಾಧ್ಯವಾದರೆ, ಅದನ್ನು ಪರದೆಯ ಹಿಂದುಗಡೆ ಮಧ್ಯದಲ್ಲಿಟ್ಟಿರುವ ಧ್ವನಿವರ್ಧಕವನ್ನು ಸೇರುವಂತೆ ಮಾಡಬಹುದು. ಹೀಗೆ ಉಂಟುಮಾಡುವ ಸದ್ದಿಗೆ ಸ್ಟೀರಿಯೋಫೋನಿಕ್ ನಾದ ಅಥವಾ ಘನನಾದವೆಂದು ಕರೆಯುತ್ತಾರೆ. ಇದು ಬರೇ ದೊಡ್ಡ ಸದ್ದು ಅಥವಾ ಗಟ್ಟಿ ಶಬ್ದವಲ್ಲ; ಇದು ಪುಷ್ಟಿಹೊಂದಿದ ಸದ್ದು, ಘನ ಗುಣವನ್ನು ಪಡೆದ ಸದ್ದು. ಸದ್ದಿಗೆ ಇನ್ನಷ್ಟು ಪುಷ್ಟಿ ಬರುವಂತೆ, ಪ್ರೇಕ್ಷಕರ ಮೇಲ್ಗಡೆಯಲ್ಲಿಯೂ ಹಿಂದುಗಡೆಯಲ್ಲಿಯೂ ಧ್ವನಿವರ್ಧಕಗಳನ್ನಿಡುವುದುಂಟು. ಆದರೆ ಇವನ್ನು ಹೆಚ್ಚಾಗಿ ಭೂಕಂಪ, ಯುದ್ಧ, ಜಂಝಾಮಾರುತ, ಕೋಲಾಹಲ ಮೊದಲಾದುವನ್ನು ಚಲಚ್ಚಿತ್ರದಲ್ಲಿ ತೋರಿಸುವಾಗ ಮಾತ್ರ ಚೇತನಗೊಳಿಸುತ್ತಾರೆ. ಚಲಚ್ಚಿತ್ರಗಳಿಗೆ ಅಗಲ ಪರದೆ ಬಂದಾಗ ಶಬ್ದವ್ಯವಸ್ಥೆಯಲ್ಲಿ ಮತ್ತೊಂದು ಸುಧಾರಣೆಯನ್ನು ಕೈಕೊಳ್ಳಬೇಕಾಯಿತು. ಪರದೆ ಸಣ್ಣದಿರುವಾಗ ಚಿತ್ರದ ಯಾವ ಭಾಗದಿಂದ ಒಂದು ಸದ್ದು ಬಂದರೂ ಅದು ಆ ಭಾಗದಿಂದಲೇ ಬರುವಂತಾಗಿದೆ ಎಂಬ ಭಾವನೆ ನಮ್ಮಲ್ಲಿ ಉಂಟಾಗುತ್ತದೆ. ಆದರೆ ಅಗಲ ಪರದೆಯ ಚಿತ್ರಗಳಲ್ಲಿ ನಾವು ಈ ರೀತಿ ಭ್ರಮೆಗೊಳ್ಳುವುದು ಕಷ್ಟವಾಗುತ್ತದೆ. ವಿಶಾಲವಾದ ಅಗಲ ಪರದೆಯ ಚಿತ್ರದ ಬಲದಿಕ್ಕಿನ ಒಂದು ಮೂಲೆಯಿಂದ ಒಂದು ಸದ್ದು ಅಥವಾ ಮಾತು ಬರುವಂತಾದರೆ, ಅದು ಚಿತ್ರದ ಆ ಕಡೆಯಿಂದಲೇ ಬರುವಂತೆ ನಮಗೆ ಭಾಸವಾಗುತ್ತದೆ. ಇಡೀ ಚಿತ್ರದೊಳಗಿನ ಆ ಸದ್ದು ಬಂದ ಹಾಗೆ ನಮಗೆ ಕಂಡರೆ, ಚಿತ್ರದ ಇಡೀ ಪರಿಣಾಮ ಕೆಟ್ಟುಹಾಗುತ್ತದೆ. ಆದುದರಿಂದ ಈಗ ಅಗಲ ಪರದೆಯ ಚಿತ್ರಗಳಿಗೆ ಮುಂಚಿನ ಚಿತ್ರಪಟಲಗಳಿದ್ದಂತೆ ಒಂದು ಇಲ್ಲವೆ ಎರಡು ಶಬ್ದ ಜಾಡುಗಳು ಮಾತ್ರ ಇರುವುದಿಲ್ಲ. ಅವು 4 ರಿಂದ 7ರ ವರೆಗೂ ಇರುತ್ತವೆ. ಇವುಗಳಲ್ಲಿನ ಒಂದೊಂದು ಜಾಡೂ, ಪರದೆಯ ಹಿಂದುಗಡೆ, ಇಲ್ಲವೆ ಬಳಿಯಲ್ಲಿ, ಇಲ್ಲವೆ ಪ್ರೇಕ್ಷಾಗೃಹದೊಳಗೆ ಇರಿಸಿದ, ಮತ್ತು ಅದಕ್ಕೆ ಸರಿಹೋಗುವ, ಧ್ವನಿವರ್ಧಕಗಳನ್ನು ಮಾತ್ರ ಚೇತನಗೊಳಿಸುತ್ತದೆ. ಹೀಗೆ ಪರದೆಯ ಮೇಲೆ ಚಿತ್ರದ ಯಾವ ಕಡೆಯಿಂದ ಸದ್ದು ಬರಬೇಕಾಗುವುದೋ ಅದೇ ಕಡೆಯಿಂದ ಅದು ಬರುವಂತೆ ಮಾಡಲು ಸಾಧ್ಯವಿದೆ. ಈ ರೀತಿ ಮಾಡುವುದರಿಂದ ಚಿತ್ರದ ನೈಜತೆ ಮತ್ತಷ್ಟು ಹೆಚ್ಚುತ್ತದೆ. ಈ ರೀತಿ ಸಾಧಿಸಲ್ಪಡುವ ಸದ್ದನ್ನು ಪರ್ಸ್‍ಪೆಕ್ಟಾ ಸದ್ದು ಎಂತಲೂ ಡೈರೆಕ್ಷನಲ್ ಸದ್ದು ಎಂತಲೂ ಕರೆಯುತ್ತಾರೆ. ಈ ದಿಸೆಯಲ್ಲಿನ ಮುಂದಿನ ಹೆಜ್ಜೆ. ಡಾಲ್ಬಿ, ಡಿ.ಟಿ.ಎಸ್ ವ್ಯಾಪಾರಿ ನಾಮಗಳಿಂದ ಬಳಕೆಯಲ್ಲಿರುವ ಡಿಜಿಟಲ್ ತಂತ್ರಜ್ಞಾನದ ಉಪಕರಣಗಳು. 5 ಅಲ್ಟ್ರಾಫೆಕ್ಸ್ : ಚಲಚ್ಚಿತ್ರ ಉದ್ಯಮದಲ್ಲಿ ಮತ್ತೊಂದು ವಿಶೇಷವಾದ ಸುಧಾರಣೆ ಎಷ್ಟೋ ವರ್ಷಗಳಿಂದ (1951-52ರಿಂದ) ಪ್ರಯೋಗಕ್ಕೆ ಸಿದ್ದವಿದೆ. ಟೆಲಿವಿಷನ್ ಪಾಶ್ಚಾತ್ಯದೇಶಗಳಲ್ಲಿ ಈಗ ಸರ್ವಸಾಮಾನ್ಯವಾಗಿದೆ. ಭಾರತದಲ್ಲೂ ಇದೀಗ ಕಾಲಿಟ್ಟಿದೆಯಷ್ಟೆ. ಆದರೆ ಟೆಲಿವಿಷನ್‍ನಲ್ಲಿ ಬರುವ ದೃಶ್ಯಗಳು ತೀರ ಚಿಕ್ಕ ಪರಿಮಾಣಗಳುಳ್ಳವು. 1951-52ರ ಸುಮಾರಿಗೆ ಅಮೆರಿಕದ ವಾಷಿಂಗ್ಟನಿನಲ್ಲಿ ಮುಚ್ಚುಮರೆಯಿಂದ ನಡೆಯಿಸಿದ ಒಂದು ಪ್ರಯೋಗದಲ್ಲಿ ಒಂದು ಚಲಚ್ಚಿತ್ರ ಸ್ಟೂಡಿಯೊ ತನ್ನದೊಂದು ಇಡೀ ಚಿತ್ರವನ್ನು ಶಬ್ದಪೂರ್ಣವಾಗಿಯೂ ಪೂರ್ಣಪರಿಮಾಣವುಳ್ಳದ್ದಾಗಿಯೂ ಒಂದು ಮಂದಿರದಲ್ಲಿ ಟಿಲಿವಿಷನಿನಂತೆ ಶ್ರೇಯಸ್ಕರವಾಗಿ ಬಿತ್ತರಿಸಿತು. ಚಲಚ್ಚಿತ್ರಗಳು ತಯಾರಾಗುವ ಸ್ಟೂಡಿಯೋಗಳಿಂದಲೇ ಅವನ್ನು ನೇರವಾಗಿ ಸಾವಿರಾರು ಚಲಚ್ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಪೂರ್ಣಪರಿಣಾಮದಲ್ಲಿ ಬಿತ್ತರಿಸಲು ಸಾಧ್ಯವಿದೆಯೆಂದು ಈ ಪ್ರಯೋಗ ನಿಸ್ಸಂಶಯವಾಗಿ ತೋರಿಸಿಕೊಟ್ಟಿತು. ಈ ಪ್ರಯೋಗ ಇನ್ನೂ ರೂಢಿಯಲ್ಲಿ ಬಾರದಿರುವುದರಿಂದ ಅದಕ್ಕೆ ನಿರ್ದಿಷ್ಟವಾದುದೊಂದು ಹೆಸರಿಲ್ಲ. ಅದಕ್ಕೆ ತಾತ್ಕಾಲಿಕವಾಗಿ ಅಲ್ಟ್ರಾಫೆಕ್ಸ್ ಎಂದು ಹೆಸರಿಟ್ಟಿದ್ದಾರಷ್ಟೇ. ಈ ಪ್ರಯೋಗ ನಡೆದು ನಾಲ್ಕು ದಶಕಗಳಾದರೂ ಅದು ಇನ್ನೂ ಪ್ರಚಾರಕ್ಕೆ ಬಾರದಿರವ ಕಾರಣ ಇಷ್ಟೇ-ಚಲಚ್ಚಿತ್ರ ಉದ್ಯಮ ಈ ಸುಧಾರಣೆಯನ್ನು ಈಗ ಕೈಕೊಂಡರೆ, ಉದ್ಯಮದಲ್ಲಿರುವ ಲೋಕದ ಸಾವಿರಾರು ಚಿತ್ರ ಹಂಚಿಕೆಗಾರರ ಗತಿಯೇನು ಹಾಗೆಯೇ ಪ್ರತಿ ದೇಶದಲ್ಲಿರುವ ಅನೇಕಾನೇಕ ಚಲಚ್ಚಿತ್ರ ರಾಸಾಯನಿಕ ಪ್ರಯೋಗ ಶಾಲೆಗಳ ಗತಿಯೇನು? ಉದ್ಯಮದಲ್ಲಿ ಈ ಸುಧಾರಣೆ ಮಹಾಕ್ರಾಂತಿಕಾರಕ ಬದಲಾವಣೆಗಳನ್ನು ತಂದೊಡ್ಡುವುದರಲ್ಲಿ ಸಂಶಯವಿಲ್ಲ. ಹಾಯಾಗಿ ಸಾಗಿಹೋಗುತ್ತಿರುವ ನಾವೆಯನ್ನು ಅಲುಗಾಡಿಸಲೇಕೆ? ಇಂಥ ವಿಚಾರಗಳಿಂದಲೇ ಚಲಚ್ಚಿತ್ರ ಉದ್ಯಮ 1924-25 ರಲ್ಲಿ ವಾಕ್ ಚಿತ್ರದ ಆಗಮನವನ್ನು ಐದು ವರ್ಷಗಳವರೆಗೆ ಅದುಮಿ ಇಟ್ಟುಕೊಂಡಿತ್ತು. ಏನಿದ್ದರೂ ಈ ಪ್ರಯೋಗ ಚಲಚ್ಚಿತ್ರ ಉದ್ಯಮದ ಮುಂದಿನ ಪ್ರಗತಿಯ ರೇಖಾರೂಪವನ್ನು ನಿಸ್ಸಂಶಯವಾಗಿ ತೋರಿಸುತ್ತದೆ. 1960 ರಿಂದ ಈಚೆಗೆ: 1960ರಿಂದ ಈಚೆಗೆ ಚಲಚಿತ್ರರಂಗದಲ್ಲಿ ಹಿಂದೊಂದೂ ಕಾಣದ ಉತ್ಕರ್ಷವನ್ನು ನೋಡಬಹುದಾಗಿದೆ. ಅಮೆರಿಕ ಮತ್ತು ಇಂಗ್ಲೆಂಡುಗಳ ಜೊತೆ ಇತರ ಐರೋಪ್ಯ ರಾಷ್ಟ್ರಗಳಾದ ಫ್ರಾನ್ಸು, ಇಟಲಿ, ಜರ್ಮನಿ, ಸೋವಿಯೆತ್ ದೇಶ, ಸ್ವೀಡನ್, ಸ್ಪೇನ್, ಗ್ರೀಸ್, ಡೆನ್‍ಮಾರ್ಕ, ಹಂಗರಿ, ಪೋಲೆಂಡ್, ಚೆಕೊಸ್ಲೊವಾಕಿಯ, ಆಸ್ಟ್ರಿಯ, ಸ್ವಿಟ್ಜರ್ ಲೆಂಡ್, ಮೊದಲಾದವೂ ಜಪಾನ್, ಕೆನಡ, ಭಾರತ, ಬ್ರಜಿಲ್ ಮೊದಲಾದವೂ ಚಲನಚಿತ್ರ ಪ್ರಪಂಚದಲ್ಲಿ ಗಮನಾರ್ಹವಾದ ಕೆಲಸ ಮಾಡುತ್ತಿವೆ. ಭಾರತದ ಚಿತ್ರಗಳಿಗೆ ಅಂತರರಾಷ್ಟ್ರೀಯ ಪ್ರಶಂಸೆಯೂ ಮಾರುಕಟ್ಟೆಯೂ ದೊರೆಯುತ್ತಿದೆ. ಮುಂಬಯಿ ಭಾರತದ ಹಾಲಿವುಡ್ ಎಂಬ ಖ್ಯಾತಿಯನ್ನು ಗಳಿಸಿದೆ. ಇದರೊಡನೆ ಸ್ಪರ್ಧಿಸಬಲ್ಲ ಇನ್ನೊಂದು ಕ್ಷೇತ್ರವೆಂದರೆ ಮದ್ರಾಸು. ಒಟ್ಟಿನಲ್ಲಿ ಪ್ರಪಂಚದ ಇಂದಿನ ಚಿತ್ರರಂಗದ ಮುಖ್ಯ ರೂಪರೇಷೆಗಳನ್ನು ಹೀಗೆ ಸಂಗ್ರಹಿಸಬಹುದು. ಲೈಂಗಿಕ ವಿಷಯಗಳು, ಗೂಢಚರ್ಯೆ, ಕೊಲೆ ದರೋಡೆಗಳು, ಸಾಂಸಾರಿಕ ಜೀವನದ ನಿಗೂಢ ಸಮಸ್ಯೆಗಳು, ಸಪ್ತಮಾನಸದ ವಿಚಿತ್ರ ವರ್ತನೆಗಳ ಚಿತ್ರಣ, ನಿರಂಕುಶಾಧಿಕಾರದ ವಿರುದ್ಧ ಬಂಡಾಯ ಹೂಡಿದ ಮಹಾ ಪುರುಷರ ಜೀವನವೃತ್ತಾಂತ- ಈ ವಿಷಯಗಳನ್ನೊಳಗೊಂಡ ಚಿತ್ರಗಳಿಗೆ ಪ್ರಾಶಸ್ತ್ಯ ಬರುತ್ತಿದೆ. ಮೂರು ಆಯಾಮಗಳ ಚಿತ್ರ ಅನೇಕ ಕಾರಣಗಳಿಂದಾಗಿ ಚಾಲನೆ ಕಳೆದುಕೊಂಡಿದೆ. ಅಗಲಪರದೆ, ಟೆಕ್ನಿಕಲರ್ ಚಿತ್ರಗಳು ಅಪಾರ ಯಶಸ್ಸುಗಳಿಸುತ್ತಿವೆ. ನಗ್ನತೆ, ಪ್ರಣಯ, ಸಂಭೋಗ, ವಿಕೃತರತಿ, ಪ್ರಣಯದಲ್ಲಿ ಕ್ರೌರ್ಯ, ಮಾತ್ಸರ್ಯ-ಇವನ್ನು ನೋಡಬೇಕೆಂಬ ಜನಚಾಪಲ್ಯವನ್ನು ತೃಪ್ತಿಪಡಿಸಲು ಚಲನಚಿತ್ರ ದಿನಕ್ಕೊಂದು ಬಗೆಯ ಹೊಸ ಚಿತ್ರವನ್ನು, ತಂತ್ರವನ್ನು ಹುಡುಕುವಂತೆ ಕಾಣುತ್ತಿದೆ. (ನೋಡಿ- ಕನ್ನಡ-ಚಲನಚಿತ್ರ) (ನೋಡಿ- ಭಾರತೀಯ-ಚಲನಚಿತ್ರ) (ನೋಡಿ- ಜಾಗತಿಕ-ಚಲನಚಿತ್ರ) II ಸಣ್ಣ ಪರಿಮಾಣದ ಚಿತ್ರಗಳು ಚಲಚ್ಚಿತ್ರ ಕ್ಷೇತ್ರ ಬರವಣಿಗೆಯ ಕ್ಷೇತ್ರದಂತೆ ಬಲು ವಿಸ್ತಾರವಾದುದು. ಅದು ಈ ವರೆಗೆ ಸಾಧಿಸಿದ ಮತ್ತು ಸಾಧಿಸುತ್ತಿರುವ ಕಾರ್ಯ ಸಂಪತ್ತನ್ನು sssಸ್ಥೂಲವಾಗಿ ಮೂರು ವಿಧವಾಗಿ ವಿಂಗಡಿಸಬಹುದು : 1 ಮನೋರಂಜನೆಗಾಗಿ ಪ್ರಯೋಗ, 2 ದಾಖಲೆ ಕಾರ್ಯಗಳಿಗಾಗಿ ಪ್ರಯೋಗ ಮತ್ತು 3 ವಾಸ್ತವತೆಯನ್ನು ಸೃಷ್ಟಿಕಾರಕ ರೀತಿಯಲ್ಲಿ ಪ್ರತಿಪಾದನೆ ಮಾಡುವ ಪ್ರಯೋಗ ಚಲಚ್ಚಿತ್ರ ವಾಹಕದ ಮೊದಲ ಪ್ರಯೋಗವನ್ನು ಕುರಿತು ಒಂದನೆಯ ಭಾಗದಲ್ಲಿ ಹೇಳಿದೆ. ಎರಡನೆ ಮತ್ತು ಮೂರನೆಯ ಪ್ರಯೋಗಗಳು ಈ ಬಗೆಯಚಿತ್ರಗಳನ್ನು ಒಳಗೊಂಡಿವೆ : 1 ವಾರ್ತಾ ಚಿತ್ರಗಳು, 2 ದಾಖಲೆ ಚಿತ್ರಗಳು, 3 ಶೈಕ್ಷಣಿಕ ಚಿತ್ರಗಳು, 4 ಪ್ರಚಾರ ಚಿತ್ರಗಳು ಮತ್ತು 5 ಶುದ್ಧ ಡಾಕ್ಯುಮೆಂಟರಿಗಳು. ಇವೆಲ್ಲವೂ ಹೆಚ್ಚಾಗಿ ಸಣ್ಣ ಪರಿಮಾಣದ ಚಿತ್ರಗಳು. ಒಂದು ಅಥವಾ ಎರಡು ರೀಲು ಇರುತ್ತವೆ; ತಪ್ಪಿದರೆ, ಮೂರು ರೀಲು. ಇವುಗಳಲ್ಲಿ ಶುದ್ಧ ಡಾಕ್ಯುಮೆಂಟರಿಗಳು ಮಾತ್ರ ಒಂದೊಂದು ಸಲ ಪೂರ್ಣ ಉದ್ದದ ಚಿತ್ರಗಳಾಗಿ 8ರಿಂದ 12 ರೀಲುಗಳವರೆಗೆ ಹೋಗಬಹುದು ; ಹೆಚ್ಚಾಗಿ ಒಂದೆರೆಡು ರೀಲು ಮಾತ್ರ ಇರುವುವು, ಸಣ್ಣ ಪರಿಮಾಣದ ಚಿತ್ರಗಳಲ್ಲಿ 6 ಕಾರ್ಟೂನ್ ಚಿತ್ರಗಳನ್ನೂ 8 ಮಕ್ಕಳ ಚಿತ್ರಗಳನ್ನೂ ಸೇರಿಸಬಹುದು. ಇವೆರೆಡು ಹೆಚ್ಚಾಗಿ ಮನೋರಂಜನೆಯ ಚಿತ್ರಗಳಾಗಿವೆ. ಆದರೆ ಅವುಗಳ ಚಿಕ್ಕ ಪರಿಮಾಣದ ದೆಸೆಯಿಂದ ಅವನ್ನು ಕುರಿತು ಇಲ್ಲಿ ಹೇಳಲಾಗಿದೆ. ಮೊದಲಿನ ಆರು ಬಗೆಯ ಚಿತ್ರಗಳನ್ನು ಒಟ್ಟಿಗೇ ಪ್ರಚಲಿತ ವಿಷಯಕ ಚಿತ್ರಗಳು (ಟಾಪಿಕಲ್ ಫಿಲ್ಮ್ಸ್) ಎಂದು ಹಿಂದೆ ಕರೆಯುತ್ತಿದ್ದರು. ಆಮೇಲೆ ಅವುಗಳಿಗೆ ಡಾಕ್ಯುಮೆಂಟರಿಗಳು ಎಂಬ ಹೆಸರು ರೂಢಿಗೆ ಬಂತು. ಇಲ್ಲವೇ ಅವೆಲ್ಲವನ್ನೂ ಸಣ್ಣ ಚಿತ್ರಗಳು ಎಂದೂ ಕರೆಯುತ್ತಾರೆ. ಈ ದೃಷ್ಟಿಯಲ್ಲಿ ಡಾಕ್ಯುಮೆಂಟರಿ ಎಂಬುದು ಒಂದು ಪಾರಿಭಾಷಿಕ ಶಬ್ದವಾಗುತ್ತದಾಗಿ, ಅದಕ್ಕೆ ಸಮಾನಪದವಾಗಿ ದಾಖಲೆ ಅಥವಾ ಸಾಕ್ಷಿ ಎಂಬ ಪದವನ್ನೂ ಬಳಸುತ್ತೇವೆ. 1 ವಾರ್ತಾ ಚಿತ್ರಗಳು : ಇಂಗ್ಲೆಂಡಿನಲ್ಲಿ ಚಲಚ್ಚಿತ್ರ ಉದ್ಯಮ 1896 ರಲ್ಲಿ ಮೊದಲಾದುದೇ ವಾರ್ತಾಚಿತ್ರಗಳ ತಯಾರಿಕೆಯಿಂದ. ಮೊದಮೊದಲು ಕೆಲವು ನಿರ್ದಿಷ್ಟ ಸನ್ನಿವೇಶಗಳ ಚಿತ್ರಗಳು ಮಾತ್ರ ತೆಗೆಯಲ್ಪಡುತ್ತಿದ್ದುವು-1897ರಲ್ಲಿ ವಿಕ್ಟೋರಿಯ ರಾಣಿಯ ಆಳ್ವಿಕೆಯ 60ನೆಯ ವಾರ್ಷಿಕೋತ್ಸವ, 1901ರಲ್ಲಿ ಆಕೆಯ ಶವಸಂಸ್ಕಾರ-ಇತ್ಯಾದಿ. 1910ರಲ್ಲಿ ಚಾಲ್ರ್ಸ್ ಪಾತೆ ವಾರದ ವಾರ್ತಾಚಿತ್ರಗಳನ್ನು ಕ್ರಮವಾಗಿ ತೆಗೆದು ಪ್ರದರ್ಶಿಸಲಾರಂಭಿಸಿದ. ಅಂದಿನಿಂದ ವಾರ್ತಾಚಿತ್ರಗಳ ಪ್ರಸಾರ, ಎಲ್ಲ ದೇಶಗಳಲ್ಲಿ ಸರಾಗವಾಗಿ ನಡೆದಿದೆ. ಯೂನಿವರ್ಸಲ್ ನ್ಯೂಸ್, ಬ್ರಿಟಿಷ್ ನ್ಯೂಸ್, ಪಾತೆ ನ್ಯೂಸ್, ಫಾಕ್ಸ್ ಮೂವಿಟೋನ್ ನ್ಯೂಸ್, ಪ್ಯಾರಾಮೌಂಟ್ ನ್ಯೂಸ್ ಮೊದಲಾದ ವಾರ್ತಾಚಿತ್ರ ತಯಾರಿಕೆಯ ಸಂಸ್ಥೆಗಳು ಲೋಕಕ್ಕೆಲ್ಲ ಕ್ಲುಪ್ತ ಸಮಯದಲ್ಲಿ ವಾರ್ತಾಚಿತ್ರಗಳನ್ನು ಒದಗಿಸಿಕೊಡುತ್ತವೆ. ಭಾರತದಲ್ಲಿ 1940ರ ವರೆಗೆ ಈಸಂಸ್ಥೆಗಳ ವಾರ್ತಾಚಿತ್ರಗಳನ್ನೇ ಮುಖ್ಯವಾಗಿ ನೋಡುತ್ತಿದ್ದೆವು. 1940ರಲ್ಲಿ ಭಾರತದ ಆಗಿನ ಬ್ರಿಟಿಷ್ ಸರ್ಕಾರ ಫಿಲ್ಮ್ ಅಡ್ವೈಸರಿ ಬೋರ್ಡ್ ಮತ್ತು ಇನ್ಫರ್ಮೆಷನ್ ಫಿಲ್ಮ್ಸ್ ಆಫ್ ಇಂಡಿಯಾಗಳು ವಾರ್ತಾಚಿತ್ರಗಳನ್ನೂ ಯುದ್ಧ ಪ್ರಚಾರವನ್ನು ಕುರಿತು ಸಣ್ಣ ಚಿತ್ರಗಳನ್ನೂ ತಯಾರಿಸಲು ಪ್ರಾರಂಭಿಸಿದವು. ಹೀಗೆ ತಯಾರಿಸಲ್ಪಟ್ಟ ಚಿತ್ರಗಳನ್ನಾಗಲಿ ಇಲ್ಲವೆ ಸರ್ಕಾರದ ಶಿಫಾರಸು ಪಡೆದ ಚಿತ್ರಗಳನ್ನಾಗಲಿ, 200 ಅಡಿಗೆ ಕಡಿಮೆಯಾಗದಂತೆ ಪ್ರತಿಯೊಂದು ಪ್ರದರ್ಶನ ಮಂದಿರ ಕಡ್ಡಾಯವಾಗಿ ತೋರಿಸಬೇಕಾಯಿತು. ದೇಶ ಸ್ವಾತಂತ್ರ್ಯವನ್ನು ಪಡೆದ ಮರುವರ್ಷದಲ್ಲಿ ಸರ್ಕಾರ ಈ ಸಂಸ್ಥೆಯನ್ನು ಪುನರ್ರಚಿಸಿ ಅದನ್ನು ತನ್ನ ಸಮಾಚಾರ ಮತ್ತು ಆಕಾಶವಾಣಿ ಇಲಾಖೆಯ ಒಂದು ಅಂಗವನ್ನಾಗಿ ಮಾಡಿತು. ಅಂದಿನಿಂದ ಸರ್ಕಾರದ ಈ ಚಲಚ್ಚಿತ್ರ ಅಂಗ ವಾರಕ್ಕೆ ಸರಾಸರಿ ಎರಡರಂತೆ ವಾರ್ತಾಚಿತ್ರಗಳನ್ನೂ ತಿಂಗಳಿಗೆ ಎರಡು ಮೂರು ಸಣ್ಣ ಚಿತ್ರಗಳನ್ನೂ ತಯಾರಿಸಿ, ದೇಶದ 4,500 ಚಿತ್ರಪ್ರದರ್ಶನ ಮಂದಿರಗಳಿಗೆ ಒದಗಿಸಿಕೊಡುತ್ತಿದೆ. ಈ ಚಿತ್ರಗಳಿಗೆ ಈಗ ದೇಶದ ಎಲ್ಲ ಮುಖ್ಯ ಭಾಷೆಗಳಲ್ಲಿ ವ್ಯಾಖ್ಯೆಯಿದೆ. ಕರ್ನಾಟಕ ರಾಜ್ಯ ಸರಕಾರದ ವಾರ್ತಾ ಇಲಾಖೆ ಕೂಡ ವಾರ್ತಾ ಚಿತ್ರಗಳನ್ನೂ, ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸುತ್ತಾರೆ. 2 ದಾಖಲೆ ಚಿತ್ರಗಳು : ಇವು ಹೆಸರೇ ಸೂಚಿಸುವಂತೆ, ನೆನಪಿಗಾಗಿ ಅಥವಾ ಪರಾಮರ್ಶೆಗಾಗಿ, ಅಥವಾ ಯಾವುದಾದರೊಂದು ವಿಷಯವನ್ನು ಶಾಶ್ವತ ರೂಪದಲ್ಲಿಡುವುದಕ್ಕಾಗಿ ತೆಗೆಯಲ್ಪಡುವ ಚಿತ್ರಗಳು. ಒಂದು ದೃಷ್ಟಿಯಿಂದ ನೋಡಿದರೆ ಎಲ್ಲ ವಾರ್ತಾಚಿತ್ರಗಳು ದಾಖಲೆ ಚಿತ್ರಗಳೇ. ಆದರೆ ವಾರ್ತಾಚಿತ್ರಗಳ ಪ್ರಯೋಜನ ಕ್ಷಣಿಕ (ದೈನಂದಿನ ವಾರ್ತಾಪತ್ರಿಕೆಯಂತೆ), ದಾಖಲೆ ಚಿತ್ರಗಳ ಉಪಯೋಗ ಬಹುಕಾಲದವರೆಗೆ. 1910ರ ಸುಮಾರಿಗೇನೇ ಡಾ. ಡಾಯನ್ಸ್ ತೆಗೆದ ಕೆಲವು ಶಸ್ತ್ರಚಿಕಿತ್ಸೆಗಳ ಚಿತ್ರಗಳೂ 1924ರಿಂದ ಡಾ. ಆರ್. ಜಿ. ಕಾಂಟಿ ಸೂಕ್ಷ್ಮದರ್ಶಕವನ್ನು ಚಲಚ್ಚಿತ್ರ ಛಾಯಾಗ್ರಾಹಕರೊಂದಿಗೆ ಸೇರಿಸಿ ತೆಗೆದ ಜೀವಂತ ಅಂಗಾಂಶಗಳ ಬೆಳವಣಿಗೆಯ ಚಿತ್ರಗಳೂ ಇಂಗ್ಲೆಂಡಿನ ಬ್ರಿಟಿಷ್ ಕೌನ್ಸಿಲ್ ತೆಗೆದ ಎದೆರೋಗದಲ್ಲಿ ಶಸ್ತ್ರಚಿಕಿತ್ಸೆ ಎಂಬ ಚಿತ್ರದಲ್ಲಿ ಬರುವ ಶ್ವಾಸಕೋಶದ ಶಸ್ತ್ರಚಿಕಿತ್ಸೆಯ ಭಾಗವೂ ಹೀಗೆಯೇ ಅನೇಕ ವೈಜ್ಞಾನಿಕ ಪ್ರಯೋಗಗಳ ಚಿತ್ರಗಳೂ ರಾಕೆಟ್ ತನ್ನ ಪ್ರಯಾಣದಲ್ಲಿ ತಾನೇ ತಾನಾಗಿ ತೆಗೆಯುವಂತೆ ಮಾಡಬಹುದಾದ ಚಿತ್ರಗಳೂ ಹಾಗೆಯೇ ರಷ್ಯದವರ ಕೃತಕ ಉಪಗ್ರಹಗಳು ವಿಶ್ವದಲ್ಲಿ ಭೂಮಿಯ ಸುತ್ತಲೂ ಬಹು ಎತ್ತರದಲ್ಲಿ ತಿರುಗುತ್ತಿರುವಾಗ ತೆಗೆದು ಭೂಮಿಗೆ ಮರುಕಳುಹಿಸಿದ ಚಿತ್ರಗಳೂ-ಎಲ್ಲಕ್ಕೂ ಮೇಲಾಗಿ, ರಷ್ಯದ ವಿಜ್ಞಾನಿಗಳ ಅದ್ಭುತ ಸಾಹಸಗಳ ಫಲವಾಗಿ ನಗೆಂದೆಂದಿಗೂ ವಿಮುಖವಾಗಿರುವ ಚಂದ್ರನ ಮತ್ತೊಂದು ಅರ್ಧಭಾಗದ ಪರಿಚಯವನ್ನು ಮಾಡಿಕೊಟ್ಟಿರುವ ಚಿತ್ರಗಳೂ ದಾಖಲೆ ಚಿತ್ರಗಳಿಗೆ ಶ್ರೇಷ್ಠ ಉದಾಹರಣೆಗಳಾಗಿವೆ. ಹಾಗೆಯೇ ಡಾ. ಕಾಂಟೆ ಮಾಡಿದಂತೆ ಸೂಕ್ಷ್ಮದರ್ಶಕದೊಂದಿಗೆ ಚಲಚ್ಚಿತ್ರ ಕ್ಯಾಮರವನ್ನು (ಮುಖ್ಯವಾಗಿ 16 ಮಿ.ಮಿ. ಚಿತ್ರಗಳದ್ದು) ಜೋಡಿಸಿ ಅಗೋಚರವಾದರೂ ಅದ್ಭುತವಾಗಿರುವ ಜಗತ್ತನ್ನೂ ಗೋಚರವಾದರೂ ಬಹುಸೂಕ್ಷ್ಮವಾಗಿರುವ ವಸ್ತುಗಳನ್ನೂ ಸರಿಯಾಗಿ ಮತ್ತು ದೊಡ್ಡದಾಗಿ ನಮಗೆ ಕಾಣಿಸುವಂತೆ ತೆಗೆಯುವ ಚಲಚ್ಚಿತ್ರಗಳೂ ದಾಖಲೆ ಚಿತ್ರಗಳು. ಸಸ್ಯ ಮತ್ತು ಪ್ರಾಣಿಶಾಸ್ತ್ರಗಳಲ್ಲಿಯೂ ಭೌತ ಮತ್ರು ರಸಾಯನ ಶಾಸ್ತ್ರಗಳಲ್ಲಿಯೂ ಕೈಗಾರಿಕೆ ಮತ್ತು ಯಂತ್ರಸಾಧನಗಳಲ್ಲಿಯೂ ಈ ರೀತಿ ತೆಗೆಯಲ್ಪಟ್ಟ ದಾಖಲೆ ಚಿತ್ರಗಳೂ ಅನೇಕ ವೈಜ್ಞಾನಿಕ ಸಂಗತಿಗಳನ್ನು ವಿಶೇಷವಾಗಿ ಸ್ಪಷ್ಟೀಕರಿಸುತ್ತವೆ, ಇಲ್ಲವೆ ಹೊಸತಾಗಿ ಸೂಚಿಸುತ್ತವೆ. ಜನಸಾಮಾನ್ಯ ಜೀವನದಲ್ಲಿ ದಾಖಲೆ ಚಿತ್ರಗಳನ್ನು ನಿರ್ಮಿಸಲು ಬೇಕಾದಷ್ಟು ಸನ್ನಿವೇಶಗಳಿವೆ. ಒಬ್ಬ ತನ್ನ ಚಿಕ್ಕ ಮಗುವಿನ ಓಡಾಟದ ಚಿತ್ರಗಳನ್ನು, ಇಲ್ಲವೇ ತನ್ನ ಮಗಳ ಮದುವೆ ಸಮಾರಂಭದ ಚಿತ್ರಗಳನ್ನು ತೆಗೆದರೆ- ಇದಕ್ಕೆ ಹೆಚ್ಚಾಗಿ 16 ಮಿ.ಮಿ. ಚಲಚ್ಚಿತ್ರ ಕ್ಯಾಮರ ಉಪಯೋಗಿಸಲ್ಪಡುತ್ತದೆ. ಅವು ದಾಖಲೆ ಚಿತ್ರಗಳಾವುವು-ಮುಂದಿನ ನೆನಪಿಗಾಗಿ. ಸಾರ್ವತ್ರಿಕ ಪ್ರದರ್ಶನಕ್ಕಾಗಿಯೂ ದಾಖಲೆ ಚಿತ್ರಗಳನ್ನು ತೆಗೆಯುವ ರೂಢಿ ಸರ್ವಸಾಮಾನ್ಯವಾಗಿದೆ. ಭಾರತ ಸರ್ಕಾರದ ಫಿಲ್ಮ್ಸ್ ಡಿವಿಷನ್ ಅನೇಕ ಅಂಥ ದಾಖಲೆ ಚಿತ್ರಗಳನ್ನು ತೆಗೆದಿದೆ. ಉದಾಹರಣೆಗೆ ಪಂಡಿತ ಜವಾಹರಲಾಲ್ ನೆಹರೂರವರ ಅಮೆರಿಕದ ಪ್ರವಾಸ ಚಿತ್ರಗಳು, ಹಾಗೂ ಅವರ ಚೀನಾದೇಶ, ಇಂಡೋನೇಷ್ಯ, ಸೋವಿಯೇತ್ ಒಕ್ಕೂಟ, ಸೌದಿ ಅರೇಬಿಯ ಮೊದಲಾದ ದೇಶಗಳಲ್ಲಿ ಮಾಡಿದ ಪ್ರವಾಸದ ಬೇರೆ ಬೇರೆ ಚಿತ್ರಗಳು, ಹೊರದೇಶಗಳ ಪ್ರಭೃತಿಗಳು ಭಾರತಕ್ಕೆ ಆಗಮಿಸಿದಾಗ ಅವರ ಪ್ರವಾಸ ಚಿತ್ರಗಳು, ಜಯಪುರದ ಕಾಂಗ್ರೆಸ್ ಅಧಿವೇಶನದ ಚಿತ್ರ, ಏರ್ ಇಂಡಿಯ ಇಂಟರ್‍ನ್ಯಾಷನಲ್ ಸಂಸ್ಥೆಯ ಬೆಂಗಾಲ್ ಪ್ರಿನ್ಸೆಸ್ ಎಂಬ ವಿಮಾನದ ಮೊದಲನೆಯ ಟೋಕಿಯೊ ಪ್ರಯಾಣದ ಚಿತ್ರ. ಭಾರತ ಚಲಚ್ಚಿತ್ರ ಉದ್ಯಮದ ಜನಕರಾದ ದಾದಾಸಾಹೇಬ ಫಾಲ್ಕೆಯವರ ಸಾಹಸಗಳನ್ನು ಕುರಿತು ಅವರೇ ದಾಖಲೆ ಚಿತ್ರಗಳನ್ನಾಗಿಟ್ಟುಕೊಂಡಿದ್ದ ಕೆಲವು ಚಿತ್ರಗಳು ಆಧಾರದಿಂದ ರಚಿಸಲ್ಪಟ್ಟ ಮೂಕಚಿತ್ರದಿಂದ ಶಬ್ದಚಿತ್ರಕ್ಕೆ ಎಂಬ ದಾಖಲೆ ಚಿತ್ರ-ಮೊದಲಾದವು. ಭಾರತದಲ್ಲಿ 1901ರಲ್ಲೇ ಸಾವೆ ದಾದಾ ತೆಗೆದ ದಾಖಲೆ ಚಿತ್ರವನ್ನು ತೆಗೆದರು. 1920ರಲ್ಲಿ ಸುಚೇತ ಸಿಂಗ್ ಲೋಕಮಾನ್ಯ ತಿಲಕರ ಶವ ಸಂಸ್ಕಾರದ ಚಿತ್ರವನ್ನು ತೆಗೆದ. ಅದೇ ಸಮಯ ಪಾಟಣಕರ್ ಚಲಚ್ಚಿತ್ರ ಸಂಸ್ಥೆಯ ಪಾಟಣಕರ್ ಮತ್ತು ದೇವಾರೆಯವರು ಅನೇಕ ಸಣ್ಣಪುಟ್ಟ ದಾಖಲೆ ಚಿತ್ರಗಳನ್ನು ತೆಗೆಯಲಾರಂಭಿಸಿದರು. ಮದನ್ ಥಿಯೇಟರ್ಸಿನ ಜೆ.ಎಫ್.ಮದನ್, ಮದ್ರಾಸಿನ ಡಾ. ಪಿ.ವಿ.ಪತಿ., ಆರ್ ಪ್ರಕಾಶ ಮತ್ತು ರಂಗಯ್ಯ ಇವರೂ ಅನೇಕ ದಾಖಲೆ ಚಿತ್ರಗಳನ್ನೂ ತೆಗೆದು ತಮ್ಮ ಬಳಿ ಸುರಕ್ಷಿತವಾಗಿಟ್ಟುಕೊಂಡರು. ಈ ಎಲ್ಲ ದಾಖಲೆ ಚಿತ್ರಗಳನ್ನೂ ಲೋಕದಲ್ಲಿ ಇತರ ಕಡೆಗಳಲ್ಲಿ ತೆಗೆದಿರಿಸಿದ ಕೆಲವು ಪ್ರಾಸಂಗಿಕ ದಾಖಲೆ ಚಿತ್ರಗಳನ್ನೂ ಡಾ. ಪಿ.ವಿ.ಪತಿ ಮತ್ತು ಎ.ಕೆ. ಚೆಟ್ಟಿಯಾರರು 1945ರ ಸುಮಾರಿಗೆ ಶೇಖರಿಸಿ. ಅವನ್ನು ಯೋಗ್ಯ ರೀತಿಯಿಂದ ಸಂಪಾದಿಸಿ, ಮಹಾತ್ಮಗಾಂಧೀಜಿಯವರ ಜೀವನಚರಿತ್ತೆಯನ್ನು 11 ರೀಲುಗಳಲ್ಲಿ ಘನೀಕರಿಸಿ, ಒಂದು ಶ್ರೇಷ್ಠ ದಾಖಲೆ ಚಿತ್ರವನ್ನು ನಿರ್ಮಿಸಿದರು. ಇದರಂತೆಯೇ 1947ರಲ್ಲಿ ನೇತಾಜಿ ಸುಭಾಷ್‍ಚಂದ್ರ ಬೋಸರ ಜೀವನ ಚರಿತ್ರೆಯನ್ನು ಚಲಚ್ಚಿತ್ರ ರೂಪದಲ್ಲಿ ಭಾರತದ ಚಲಚ್ಚಿತ್ರ ನಿರ್ಮಾಪಕರ ಸಂಘ ತೆಗೆದಿದೆ. ಇದರಲ್ಲಿ ಬೋಸರು ಬರ್ಮಾದಲ್ಲಿ ಭಾರತ ಸ್ವಾತಂತ್ರ್ಯದ ಯುದ್ಧಕ್ಕಾಗಿ ರಚಿಸಿದ ಪ್ರಸಿದ್ದ ರಾಷ್ಟ್ರೀಯ ಸೈನ್ಯದ ಅನೇಕ ಚಿತ್ರಿತ ದಾಖಲೆಗಳು ಅನುಪಮವಾಗಿದೆ. 3 ಶೈಕ್ಷಣಿಕ ಚಿತ್ರಗಳು : ಕಲಿಯುವವರಿಗೆ ಅನುಕೂಲವಾಗುವಂತೆ ಪಾಕವಿಧಾನದಿಂದ ಹಿಡಿದು ಅಟಾಮಿಕ್ ರಿಯಾಕ್ಟರ್‍ವರೆಗಿನ ಯಾವುದೇ ವಿಷಯವನ್ನು ಕುರಿತ ಚಿತ್ರಗಳಿವು. ಉದಾಹರಣೆಗೆ ಒಂದು ಯಂತ್ರದ ವಿವಿಧ ಭಾಗಗಳ, ಅವುಗಳ ಬಿಡಿಯಾದ ಕಾರ್ಯಸಾಧನೆ ಮತ್ತು ಉಪಯೋಗ, ಯಂತ್ರದಲ್ಲಿ ಅವುಗಳ ಸಂಘಟನೆ, ಇಡೀ ಯಂತ್ರದ ಕಾರ್ಯಗತಿ, ಯಂತ್ರ ನಡೆಯುದಿದ್ದರೆ ಅದನ್ನು ಸರಿಪಡಿಸುವ ವಿಧಾನ ಇವೆಲ್ಲವುಗಳ ಸೂಕ್ಷ್ಮಪರಿಚಯ. ಇಂಥ ಚಿತ್ರಗಳು ಅಯಾಯ ಕಸಬಿನವರಿಗೆ ರುಚಿಸುವದಲ್ಲದೆ ಇತರರಿಗೆ ರುಚಿಸದು. ಚಿತ್ರವನ್ನು ನೋಡಿದ ಮೇಲೆ ಚಿತ್ರ ಕೊಟ್ಟ ಅನುಭವವನ್ನು ಪ್ರೇಕ್ಷಕ ತಾನೇ ಪ್ರತ್ಯಕ್ಷವಾಗಿ ಕಾರ್ಯರೂಪದಲ್ಲಿ ಸಾಧಿಸುವಂತಾಗಬೇಕು. ಪಾಶ್ಚಾತ್ಯ ದೇಶಗಳ ಯುದ್ಧಖಾತೆಗಳಲ್ಲಿ ಸೈನ್ಯದ ತರಬೇತಿಗಾಗಿಯೂ ಇಂಥ ಚಿತ್ರಗಳು ತಯಾರಿಸಲ್ಪಟ್ಟು ಪ್ರಚಾರದಲ್ಲಿವೆ. ಈ ಚಿತ್ರಗಳ ಪ್ರಯೋಗದಿಂದಾಗಿ ಅಲ್ಲಿ ಸೈನ್ಯದ ತರಬೇತಿಯ ಅವಧಿ ಅರ್ಧಕ್ಕರ್ಧ ಕಡಿಮೆಯಾಗಿರುವುದಂತೆ. ಭಾರತದಲ್ಲೂ ಸೈನ್ಯದ ತರಬೇತಿಗಾಗಿ ಇಂಥ ಚಿತ್ರಗಳು ಪ್ರಚಾರದಲ್ಲಿದ್ದು ಎರಡು ವರ್ಷಗಳ ತರಬೇತಿನ ಅವಧಿಯನ್ನು 10 ತಿಂಗಳಿಗೆ ಇಳಿಸಲಾಗಿದೆಯಂತೆ. ವಿಷಯಗಳ ಸೂಕ್ಷ್ಮ ಮಾಹಿತಿ ಅಲ್ಲದಿದ್ದರೂ ಅವುಗಳ ಸಾಮಾನ್ಯ ತಿಳಿವಳಿಕೆಯನ್ನು ಕೊಡುವ ಚಿತ್ರಗಳನ್ನೂ ಈ ವರ್ಗದಲ್ಲಿ ಸೇರಿಸಬಹುದು. ಜನಜೀವನಕ್ಕೆ ಸಂಬಂಧಪಟ್ಟ ಅನೇಕಾನೇಕ ವಿಷಯಗಳನ್ನು ಇವು ಅಳವಡಿಸಿಕೊಂಡಿರುವುದರಿಂದ ಜನಸಾಮಾನ್ಯರು ಇವನ್ನು ಕುತೂಹಲದಿಂದ ನೋಡಿ ಸಂತೋಷಪಡುತ್ತಾರೆ. ಆದುದರಿಂದ ಅವರ ಸಾಮಾನ್ಯಜ್ಞಾನದ ಮಟ್ಟವನ್ನು ಏರಿಸಲು ಇವು ಸುಲಭ ಸಾಧನಗಳಾಗಿವೆ. ಈ ಕಾರಣದಿಂದ ಭಾರತದ ಫಿಲ್ಮ್ಸ್ ಡಿವಿಷನ್ ತಯಾರಿಸುವ ಚಿತ್ರಗಳಲ್ಲಿ ಮುಕ್ಕಾಲು ಪಾಲಿಗಿಂತ ಹೆಚ್ಚು ಇಂಥ ಚಿತ್ರಗಳೇ ಆಗಿವೆ. ಉದಾಹರಣೆಗೆ ರೇಶ್ಮೆ ಹುಳುವಿನ ಬಾಳಿನ ಗುಟ್ಟು ಲಾಕ್ಷಾದಿಂದ ಲಕ್ಷ (ಅರಗಿನ ಉತ್ಪತ್ತಿ ಮತ್ತು ಕೈಗಾರಿಕೆ). ನಮ್ಮ ದೇಶದ ಸಂಗೀತ ವಾದ್ಯಗಳು, ಮಹಾರಾಷ್ಟ್ರದ ಜನಪದ ಗೀತೆಗಳು, ಕಲ್ಪವೃಕ್ಷ (ತೆಂಗಿನ ಮರದ ವಿಷಯ), ಕೊಡವರ ಬೀಡು (ಕೊಡಗಿನ ಜನಜೀವನವನ್ನು ಕುರಿತದ್ದು), ಪವಿತ್ರ ಹಿಮಾಲಯ, ಸುವರ್ಣನದಿ (ಕಾವೇರಿ ನದಿಯನ್ನು ಕುರಿತದ್ದು), ಕೈಗಾರಿಕೆಗಳ ಮೈಸೂರು, ಹೆಂಗಸರ ವೇಷಭೂಷಣಗಳು-ಇತ್ಯಾದಿ. ಫಿಲ್ಮ್ಸ್ ಡಿವಿಷನ್ ತಯಾರಿಸಿದ ಇಂಥ ಅನೇಕ ಚಿತ್ರಗಳು ಉತ್ತಮ ಡಾಕ್ಯುಮೆಂಟರಿಗಳೂ ಆಗಿದ್ದು ಹೊರದೇಶಗಳಲ್ಲೂ ಪ್ರಶಸ್ತಿ ಪಡೆದಿವೆ. ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮಾತ್ರ ಉಪಯೋಗಿಸಲ್ಪಡುವ ಚಿತ್ರಗಳು ಅನೇಕ ಇವೆ. ಇವು ಕೇವಲ ಅವರ ಮನೋರಂಜನೆಗಾಗಿ ಅಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಪ್ರದರ್ಶನದ ಅನುಕೂಲತೆಗಾಗಿ. ಇವು ಹೆಚ್ಚಾಗಿ 16 ಮಿ.ಮಿ. ನ ಚಿತ್ರಗಳಾಗಿವೆ. ಶಿಕ್ಷಣ ಕಾರ್ಯದಲ್ಲಿ ಇವು ಶಿಕ್ಷಕನಿಗೆ ನೆರವಾಗಬಲ್ಲವೇ ಹೊರತು ಶಿಕ್ಷಕನ ಸ್ಥಾನವನ್ನು ಅಪಹರಿಸುವುದಿಲ್ಲ. ಇವುUಳ ಪ್ರದರ್ಶನ ಸಮಯದಲ್ಲಿ ಇವು ಹೇಳುವ ಪಾಠವನ್ನು ವಿದ್ಯಾರ್ಥಿಗಳು ಸರಿಯಾಗಿ ಗ್ರಹಿಸಿಕೊಳ್ಳಲು ವ್ಯಾಖ್ಯಾನದ ಅಗತ್ಯವಿದ್ದಲ್ಲಿ ಶಿಕ್ಷಕ ಅನಿವಾರ್ಯವಾಗುತ್ತಾನೆ. ಶಿಕ್ಷಕರ ಬಳಿ ಕರಿಹಲಗೆ ಮತ್ತು ಸೀಮೆಸುಣ್ಣದ ಕಡ್ಡಿ ಇದ್ದಂತೆ. ಈ ಚಿತ್ರಗಳು. ಸಾಮಾನ್ಯವಾಗಿ ಇಂಥ ಒಂದೊಂದು ಚಿತ್ರದ ಪ್ರದರ್ಶನ ಕಾಲ 10-12 ಮಿನಿಟುಗಳಿದ್ದು, ಅವನ್ನು ಆಯಾಯ ಪಾಠಕ್ಕನುಸಾರವಾಗಿ ಆರಿಸಿ, ಆಯಾಯ ಪಾಠದ ಸಮಯದಲ್ಲಿಯೇ ಪ್ರದರ್ಶಿಸಬೇಕಾಗುವುದು. ಇಂಗ್ಲೆಂಡು, ಜರ್ಮನಿ, ಸೋವಿಯತ್ ದೇಶ, ಅಮೆರಿಕ (ಯು.ಎಸ್.ಎ.) ಕೆನಡ ಮುಂತಾದ ಮುಂದುವರಿದ ಅನೇಕ ದೇಶಗಳಲ್ಲಿ, ಆಯಾಯ ದೇಶದ ಸರ್ಕಾರ ಇಲ್ಲವೆ ಸರ್ಕಾರದ ಆರ್ಥಿಕ ಬೆಂಬಲ ಪಡೆದ ಚಲಚ್ಚಿತ್ರ ಸಂಸ್ಥೆಗಳು, ಶಾಲಾಕಾಲೇಜುಗಳಲ್ಲಿ ಕೊಡುವ ಶಿಕ್ಷಣದ ಪಾಠಗಳಿಗನುಸಾರವಾಗಿ ಎಲ್ಲ ವಿಷಯಗಳ ಮೇಲೆ ಶೈಕ್ಷಣಿಕ ಚಿತ್ರಗಳನ್ನು ತಯಾರಿಸುತ್ತವೆ. ಎಲ್ಲ ಹಂತದ ಎಲ್ಲ ವಿಷಯಗಳನ್ನು ಕುರಿತ ಅಸಂಖ್ಯಾತ ಚಿತ್ರಗಳು ಆ ದೇಶಗಳಲ್ಲಿ ಪ್ರಚಲಿತವಿದೆ. ಭಾರತದಲ್ಲಿ ಇಂಥ ಚಿತ್ರಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಸದ್ಯಕ್ಕೆ ಅಲ್ಪ ಪರಿಮಾಣದಲ್ಲಿ ಒದಗಿಸಲು ಕೆಲವು ಸಂಸ್ಥೆಗಳಿವೆ. ಸರ್ಕಾರದ ಕೇಂದ್ರ ಶೈಕ್ಷಣಿಕ ಚಲಚ್ಚಿತ್ರಾಲಯ, ಫಿಲ್ಮ್ಸ್ ಡಿವಿಷನ್ನಿನ ಚಿತ್ರಾಲಯ, ಯು. ಎನ್. ಒ. ಚಿತ್ರಾಲಯ, ದೇಶದ ಅನೇಕ ಮುಖ್ಯ ಶಹರುಗಳಲ್ಲಿರುವ ಬ್ರಿಟಿಷ್ ಕೌನ್ಸಿಲ್, ಯುನೈಟೆಡ್ ಸ್ಟೇಟ್ಸ್ ಇನ್ ಫರ್ಮೇಷನ್, ಬರ್ಮಾಷೆಲ್ ಮೊದಲಾದ ಸಂಸ್ಥೆಗಳು-ಇವೆಲ್ಲ ತೀರ ಮಿತ ಬಾಡಿಗೆಯ ಮೇಲೆ, ಇಲ್ಲವೆ ಯಾವ ಪ್ರತಿಫಲವನ್ನೂ ಆಪೇಕ್ಷಿಸಿದೆ. ದೇಶದ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಚಿತ್ರಗಳನ್ನು ಒದಗಿಸಲು ಯಾವಾಗಲೂ ಸಿದ್ಧವಿವೆ. 4 ಪ್ರಚಾರ ಚಿತ್ರಗಳು : ಬರೆದ ಇಲ್ಲವೆ ಹೇಳಿದ ನೂರು ಮಾತುಗಳಿಗಿಂತ ಒಂದು ಚಿತ್ರ ಲೇಸು ಎಂದು ಚೀನಿಯರ ಒಂದು ಹಳೆಯ ನಾಣ್ಣುಡಿ ಇದೆ. ಇದು ಚಲಚ್ಚಿತ್ರಗಳಿಗೆ ಅಕ್ಷರಶಃ ಅನ್ವಯಿಸುತ್ತದೆ. ಆದುದರಿಂದಲೇ ಒಂದು ಕಥೆಯನ್ನು ಹೇಳುವುದಕ್ಕಾಗಲಿ, ಒಂದು ಸಂಗತಿಯನ್ನು ತಿಳಿಸುವುದಕ್ಕಾಗಲಿ, ಒಂದು ಘಟನೆಯನ್ನು ದಾಖಲೆ ಮಾಡುವುದಕ್ಕಾಗಲಿ, ಒಂದು ವಿಷಯವನ್ನು ಕುರಿತು ಜ್ಞಾನವನ್ನು ಕೊಡುವುದಕ್ಕಾಗಲಿ, ಇಲ್ಲವೆ ಜನಜೀವನದ ಒಂದು ಚಿತ್ರವನ್ನು ತಮ್ಮ ಕಣ್ಣ ಮುಂದೆ ಕಟ್ಟಿ ನಿಲ್ಲಿಸುವುದಕ್ಕಾಗಲಿ, ಚಲಚ್ಚಿತ್ರಗಳು ಅಷ್ಟು ಶಕ್ತಿಯುತವಾಗಿವೆ. ಹೀಗಿರುವಾಗ ಪ್ರಚಾರ ಕಾರ್ಯದಲ್ಲಿಯೂ ಚಲಚ್ಚಿತ್ರಗಳು ಇತರ ಎಲ್ಲ ಸಾಧನ ವಿಧಾನಗಳಿಗಿಂತ ಅತ್ಯಧಿಕ ಪರಿಣಾಮವನ್ನುಂಟು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನರಿತೇ ಲೋಕದ ಅನೇಕ ಸರ್ಕಾರಗಳೂ ಸಮಾಜ ಹಿತೈಷಿ ಸಂಸ್ಥೆಗಳೂ ವ್ಯಾಪಾರಿಗಳೂ ತಮ್ಮ ತಮ್ಮ ಪ್ರಚಾರ ಕಾರ್ಯಕ್ಕಾಗಿ ಚಲಚ್ಚಿತ್ರ ಮಾಧ್ಯಮವನ್ನು ಬಹಳವಾಗಿ ಬಳಸುತ್ತಿದ್ದಾರೆ. ಚಲಚ್ಚಿತ್ರಗಳು ಎರಡು ರೀತಿಯಿಂದ ಪ್ರಚಾರ ಕೆಲಸವನ್ನು ಮಾಡಬಲ್ಲವು ; ಒಂದು-ನೇರವಾಗಿ, ಇನ್ನೊಂದು -ಗಮ್ಯವಾಗಿ ನೇರವಾದ ಪ್ರಚಾರ ಪ್ರೇಕ್ಷಕನ ಮನಸ್ಸಿನಲ್ಲಿ ತಾತ್ಕಾಲಿಕ ಪರಿಣಾಮವನ್ನುಂಟು ಮಾಡಬಹುದು. ಅಲ್ಲದೆ ನೇರವಾದ ಪ್ರಚಾರ ಪ್ರೇಕ್ಷಕರಲ್ಲಿ ಅನೇಕ ವೇಳೆ ಜುಗುಪ್ಸೆಯನ್ನು ತಂದರೂ ಆಶ್ಚರ್ಯವಿಲ್ಲ. ಆದರೆ ಪ್ರೇಕ್ಷಕರಿಗೆ ತಮ್ಮ ಮುಂದೆ ಒಂದು ಪ್ರಚಾರ ಕಾರ್ಯ ನಡೆಯುತ್ತಿದೆಯೆಂದು ತಿಳಿಯದ ಹಾಗೆ ಗಮ್ಯ ಮಾರ್ಗದಿಂದ ಅಂಥ ಪ್ರಚಾರ ಕಾರ್ಯವನ್ನು ನಡೆಸಿದರೆ ಅದು ಅವರಲ್ಲಿ ವಿಶೇಷವಾದ ಪರಿಣಾಮವನ್ನುಂಟು ಮಾಡುವ ಸಂಭವವಿದೆ. ಸರ್ಕಾರಗಳು ಚಲಚ್ಚಿತ್ರಗಳ ಮುಖಾಂತರ ಎರಡು ಬಗೆಯ ಪ್ರಚಾರ ಕಾರ್ಯಗಳನ್ನು ಮುಖ್ಯವಾಗಿ ಸಾಧಿಸುತ್ತವೆ. ಒಂದು-ರಾಜಕೀಯ ; ಇನ್ನೊಂದು-ಸಾಮಾಜಿಕ, ಸೋವಿಯೆತ್ ದೇಶದ ಜಸ್ಟೀಸ್ ಇಸ್ ಕಮಿಂಗ್ ಎಂಬ ಚಿತ್ರ ಇಂಥದಾಗಿತ್ತು. ಜರ್ಮನಿಯಲ್ಲಿ ನಾಟ್ಜೀಗಳು ತಮ್ಮ ರಾಜಕೀಯಕ್ಕಾಗಿಯೂ ಯುದ್ಧ ಪ್ರಚಾರಕ್ಕಾಗಿಯೂ ಅನೇಕ ಪ್ರಬಲ ಪರಿಣಾಮದ ಚಿತ್ರಗಳನ್ನು ಹೊರಗೆಡುತ್ತಿದ್ದರು. ಅವುಗಳಲ್ಲಿ ಬ್ಯಾಪ್ಟಿಸಂ ಆಫ್ ಫೈರ್, ಇಂಗ್ಲೆಂಡಿನ ಬ್ರಿಟನ್ ಕೆನ್ ಟೇಕ್ ಇಟ್ ಎಂಬುವು ಅತ್ಯಂತ ಪರಿಣಾಮಕಾರಿಯಾದ ಚಿತ್ರಗಳು. ಶಾಂತದಿನಗಳಲ್ಲಿ ಸರ್ಕಾರಗಳ ಪ್ರಚಾರ ಚಿತ್ರಗಳು ಸಹಜವಾಗಿ ಸಮಾಜಕಲ್ಯಾಣವನ್ನು ಸಾಧಿಸುತ್ತವೆ. ಬೇಸಾಯ, ಜಾನುವಾರುಗಳ ಆರೈಕೆ ಮತ್ತು ಅಭಿವೃದ್ಧಿ, ಆರೋಗ್ಯಪಾಲನೆ, ರೋಗನಿವಾರಣೆ, ಕೈಗಾರಿಕೆ, ದೇಶದ ಕಲೆ ಮತ್ತು ಸಾಂಸ್ಕøತಿಕ ಸಂಪತ್ತು, ಸಾಹಚರ್ಯಕಾರ್ಯಗಳ ಮೇಲ್ಮೆನದೀ ಯೋಜನೆಗಳು, ವಿದ್ಯಾಪ್ರಸಾರ ಮೊದಲಾದುವನ್ನು ಕುರಿತು ಎಲ್ಲ ದೇಶಗಳೂ ಅನೇಕ ಉತ್ತಮ ಪ್ರಚಾರ ಚಿತ್ರಗಳನ್ನು ತಯಾರಿಸಿವೆ. ಇಂಥ ಅನೇಕ ಚಿತ್ರಗಳಲ್ಲದೆ, ಭಾರತ ಸರ್ಕಾರ ತನ್ನ ಫಿಲ್ಮ್ಸ್ ಡಿವಿಷನ್ನಿನ ಮೂಲಕ ಭಾರತದ ಪಂಚವಾರ್ಷಿಕ ಯೋಜನೆಗಳನ್ನು ಕುರಿತೂ ಕೆಲವು ಚಿತ್ರಗಳನ್ನು ಹೊರಡಿಸಿದೆ. ಅಲ್ಲದೆ, ಯುವಕರು ಸೇನೆಯ ಮೂರು ವಿಭಾಗಗಳಲ್ಲಿಯೂ ಹೆಚ್ಚುಹೆಚ್ಚಾಗಿ ಸೇರುವಂತೆ ಅನೇಕ ಪ್ರಚಾರ ಚಿತ್ರಗಳನ್ನು ತಯಾರಿಸಿದೆ. ಭಾರತ ಸರ್ಕಾರದ ಪ್ರಚಾರ ಚಿತ್ರಗಳಿಗೆ ಕೆಲವು ಉದಾಹರಣೆಗಳು ; ನಮ್ಮ ಜಾನುವಾರ ಸಂಪತ್ತು, ತುಂಗಭದ್ರಾ, ನಳಿಗೆ ಬಾವಿಗಳು, ಸಮೃದ್ಧಿಗಾಗಿ ಸಾಧನೆ, ವೈರಿಯನ್ನು ನಿರ್ಮೂಲಗೊಳಿಸಿ(ಕ್ಷಯರೋಗ ನಿವಾರಣೆ), ಕತ್ತಲೆಯಲ್ಲಿ ಬೆಳಕು (ಕುರಡರಿಗೆ ವೃತ್ತಿಶಿಕ್ಷಣ), ನಮ್ಮ ನೌಕಾಬಲ, ನ್ಯಾಷನಲ್ ಡಿಫೆನ್ಸ್ ಅಕಾಡಮಿ ಇತ್ಯಾದಿ. ಸರ್ಕಾರವಲ್ಲದೆ ದೇಶದಲ್ಲಿ ಅನೇಕ ಖಾಸಗೀ ಸಂಸ್ಥೆಗಳೂ-ಬರ್ಮಾಷೆಲ್, ಆರ್ಟ್ ಫಿಲ್ಮ್ಸ್ ಆಫ್ ಏಷ್ಯ, ಹನ್ನಾರ್ ಫಿಲ್ಮ್ಸ್ ಮೊದಲಾದವು-ಪ್ರಚಾರ ಚಿತ್ರಗಳನ್ನು ತಯಾರಿಸುತ್ತವೆ. ಇವುಗಳಲ್ಲಿ ಮಗು. ಜೀವನಕ್ಕಾಗಿ ಶಿಕ್ಷಣ, ತ್ಯಜಿಸಲ್ಪಟ್ಟ ಅನಾಥೆಯರು, ಲಾರಿ ಡ್ರೈವರ್ (ಬರ್ಮಾಷೆಲ್ಲಿನ ಸೀಮೆಎಣ್ಣೆಯ ಪ್ರಚಾರ) ತಾಯಿ (ಮದುವೆಯಾಗದೆ ತಾಯಿಯಾದ ಮಹಿಳೆಯ ಜೀವನ), ನೇಯ್ಗೆ ಉದ್ಯಮ, ಸಂತಪುರುಷ ಮತ್ತು ಒಕ್ಕಲಿಗ (ಭೂದಾನ ಮತ್ತು ಸರ್ವೋದಯವನ್ನು ಕುರಿತು) ಮೊದಲಾದುವು ತಮ್ಮ ಯೋಗ್ಯತೆಯಿಂದ ದೇಶದಲ್ಲಿ ಮಾತ್ರವಲ್ಲ. ಹೊರದೇಶಗಳಲ್ಲೂ ಪ್ರಖ್ಯಾತಿಗಳಿಸಿವೆ. ಆದರೆ ಭಾರತದಲ್ಲಿ ಹೀಗೆ ಖಾಸಗಿಯಾಗಿ ನಿರ್ಮಿಸಲ್ಪಟ್ಟ ಚಿತ್ರಗಳಿಗೆ ಸರ್ಕಾರದ ಚಿತ್ರಗಳಿಗಿರುವಷ್ಟು ಪ್ರದರ್ಶನ ಸೌಕರ್ಯಗಳಿಲ್ಲ. ಪ್ರಚಾರ ಕೆಲಸಗಳಿಗೆ ಅಂಥ ಅದ್ಭುತ ಶಕ್ತಿಯುಳ್ಳ ಚಲಚ್ಚಿತ್ರ ಮಾಧ್ಯಮವನ್ನು ಸರಕು ನಿರ್ಮಾಪಕರೂ ವ್ಯಾಪಾರಿಗಳೂ ಮರೆಯುವಂತಿಲ್ಲ ; ಒಂದು ವಾರದಲ್ಲಿ ಎರಡು ಕೋಟಿ ಜನರಾದರೂ ಸಿನೆಮಾ ನೋಡುತ್ತಾರೆಂದು ಎಣಿಸಲಾಗಿದೆ. ಹೀಗಿರುವಾಗ, ಒಂದರ್ಧ ನಿಮಿಷದ ಚಲಚ್ಚಿತ್ರ ಜಾಹೀರಾತಾದರೂ ಲಕ್ಷಗಟ್ಟಲೆ ಭಾವೀ ಗಿರಾಕಿಗಳ ಲಕ್ಷ್ಯವನ್ನು ಸೆಳೆಯಬಲ್ಲುದು. ಇಂಥ ಚತುರ ಜಾಹೀರಾತು ಚಲಚ್ಚಿತ್ರಗಳು ಹೆಚ್ಚಾಗಿ ಉಡಿಗೆತೊಡಿಗೆ, ದೈಹಿಕ ಅಲಂಕಾರ, ಗೃಹಾಲಂಕಾರ ಮೊದಲಾದವುಗಳಿಗೆ ಸಂಬಂಧಪಟ್ಟ ಸರಕುಗಳ ಗುಣಗಾನವನ್ನು ಮಾಡುತ್ತಿರುವುದರಿಂದಲೂ ಚಲಚ್ಚಿತ್ರ ತಾರಾಗಣದ ಆಕರ್ಷಕ ವೇಷಭೂಷಣಗಳು ಪ್ರತಿದಿನ ಪ್ರೇಕ್ಷಕರ ಮುಂದೆ ತಾಂಡವಾಡುತ್ತಿರುವುದರಿಂದಲೂ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆಗಳು ಆಗುತ್ತಲೇ ಇವೆ. ಹೀಗೆಲ್ಲ ಆಗಬೇಕಾದುದೇ. ಚಲಚ್ಚಿತ್ರಗಳ ಪ್ರಭಾವ ಅಷ್ಟಿದೆ. ಬಾಹ್ಯದಲ್ಲಿ ಆದಂತೆ ಆಂತರಿಕದಲ್ಲಿಯೂ ಜನಸಾಮಾನ್ಯರಲ್ಲಿ ಚಲಚ್ಚಿತ್ರಗಳ ದೆಸೆಯಿಂದ ಅನೇಕ ಬದಲಾವಣೆಗಳು ಆಗುತ್ತಿವೆ. ಒಂದು ಜನಾಂಗದಲ್ಲಿ ಚಲಚ್ಚಿತ್ರಗಳು ಎಂಥ ಮೇಲ್ಮೈಯನ್ನೂ ಸಾಧಿಸಬಹುದು. ಹಾಗೆಯೇ ಅವು ಎಂಥ ಕೀಳಮಟ್ಟಕ್ಕೂ ಒಂದು ಜನಾಂಗವನ್ನು ಇಳಿಸಬಹುದು. ಆದುದರಿಂದ ಚಲಚ್ಚಿತ್ರ ನಿರ್ಮಾಪಕರ ಮೇಲೆ ಯಾವಾಗಲೂ ಒಂದು ಬಹು ದೊಡ್ಡದಾದ ಹೊಣೆಗಾರಿಕೆ ಇದೆ. 5 ಶುದ್ಧ ಡಾಕ್ಯುಮೆಂಟರಿ ಚಿತ್ರಗಳು : 1922ರಲ್ಲಿ ನ್ಯೂಯಾರ್ಕಿನ ಫರ್ ಕಂಪನಿಯೊಂದರ ಹೊಣೆಗಾರಿಕೆಯ ಮೇಲೆ ರಾಬರ್ಟ್ ಫ್ಲ್ಯಾಹರ್ಟಿ (ನೋಡಿ- ಫ್ಲ್ಯಾಹರ್ಟಿ,-ರಾಬರ್ಟ್) ಸ್ಪಷ್ಟಿಸಿದ ನಾನೂಕ್ ಆಫ್ ದಿ ನಾರ್ತ್ ಎಂಬ ಚಲಚ್ಚಿತ್ರದ ಪ್ರದರ್ಶನವಾಯಿತು. ಚಿತ್ರ ಉತ್ತರದ ಹಿಮಗಡ್ಡೆಯ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಎಸ್ಕಿಮೋ ಕುಟುಂಬ ಆಹಾರಕ್ಕಾಗಿ ಪಡುವ ಒದ್ದಾಟವನ್ನು ಚಿತ್ರಿಸಿತ್ತು. ಇಷ್ಟು ಮಾತ್ರ ಹೇಳಿದರೆ ಅದೊಂದು ಬರೇ ವಾರ್ತಾ ಚಿತ್ರವೊ ದಾಖಲೆ ಚಿತ್ರವೂ ಆಗಿರಬೇಕೆಂದು ಯಾರಿಗಾದರೂ ಅನ್ನಿಸಬಹುದು. ಆದರೆ ವಿಷಯ ಪ್ರತಿಪಾದನೆಯ ನಾವೀನ್ಯದಿಂದಾಗಿ ಅದು ಎಲ್ಲ ವಿಧದಿಂದಲೂ ಇತರ ಮನೋರಂಜನೆ ಚಿತ್ರಗಳಿಂದ ಬೇರೆಯಾಗಿತ್ತು. ಪ್ರೇಕ್ಷಕರನ್ನು ವಿಶೇಷವಾಗಿ ಕೌತುಕಗೊಳಿಸಿತ್ತು. ಚಿತ್ರ ವಿಮರ್ಶಕರು ಅದೊಂದು ಚಿತ್ರಕಲೆಯ ಹೊಸಮುಖವೆಂದು ಹೊಗಳಿದರು. ಕಾರಣವಿಷ್ಟೇ. ಚಿತ್ರಣಕ್ಕಾಗಿ ಆ ಎಸ್ಕಿಮೋ ಕುಟುಂಬದ ದಿನನಿತ್ಯದ ಜೀವನದ ಸನ್ನಿವೇಶಗಳನ್ನು ಬಹು ಎಚ್ಚರಿಕೆಯಿಂದ ಆರಿಸಲಾಗಿತ್ತು. ಅವುಗಳ ಕ್ರಮಾನುಗತಿಯ ವಿವರದಲ್ಲಿ ಒಂದು ವಿಶಿಷ್ಟ ರೀತಿಯ ಆತ್ಮೀಯತೆ ಇತ್ತು. ಒಂದು ವಾರ್ತೆ ಅಥವಾ ದಾಖಲೆ ಚಿತ್ರಕ್ಕೂ ಈ ನಾನೂಕ್ ಚಿತ್ರಕ್ಕೂ ಇರುವ ಭೇದವಿಷ್ಟೆ-ಎರಡೂ ವಾಸ್ತವಿಕ ಚಿತ್ರಗಳನ್ನು ಒದಗಿಸುತ್ತವೆ ; ಆದರೆ ವಾರ್ತೆ ಅಥವಾ ದಾಖಲೆ ಚಿತ್ರ ವಾಸ್ತವತೆಯನ್ನು ಇದ್ದಂತೆ ದಾಖಲೆ ಮಾಡುತ್ತದೆ. ನಾನೂಕ್ ಒಂದು ವಾಸ್ತವಿಕ ಸಂಗತಿಯ ಜೀವಾಳವನ್ನೇ ನಮ್ಮ ಮುಂದೆ ತರೆದಿಡುತ್ತದೆ. ಇಂಥ ಪರಿಣಾಮವನ್ನು ತನ್ನ ಚಿತ್ರದಲ್ಲಿ ಸಾಧಿಸಲು, ಚಿತ್ರ ತೆಗೆಯುವ ಎರಡು ವರ್ಷ ಮೊದಲೇ ರಾಬರ್ಟ್ ಫ್ಲ್ಯಾಹರ್ಟಿ ಆ ಎಸ್ಕಿಮೋ ಜನರೊಡನೆ ವಾಸಿಸಲಿಕ್ಕೆ ತೊಡಗಿದ್ದರು. ಅವರೊಡನೆ ತೀರ ಆತ್ಮೀಯತೆಯಿಂದ ಕಲೆತು, ಅವರೊಡನೆ ಅವರಂತೆಯೇ ದುಡಿದು, ಅವರ ಕಷ್ಟಸುಖಗಳಲ್ಲೆಲ್ಲ ಭಾಗಿಯಾಗಿ, ಅವರ ಜೀವನದ ಸರ್ವತೋಮುಖಗಳ ಪ್ರತ್ಯಕ್ಷ ಅನುಭವವನ್ನು ಪಡೆದುಕೊಂಡಿದ್ದರು. ಇಂಥ ಸಾಹಸದ ಫಲವೇ ನಾನೂಕ್ ಆಯಿತು. ಆಮೇಲೆ ಫ್ಲ್ಯಾಹರ್ಟಿ ಭಾರತದ ಆಗ್ನೇಯದಲ್ಲಿರುವ ದ್ವೀಪಗಳಿಗೆ ಹೋಗಿ, ಅಲ್ಲಿ ಎರಡು ವರ್ಷ ನಿಂತಿದ್ದರ ಫಲವಾಗಿ, ಅಲ್ಲಿಯ ಮುಖವನ್ನು ಟಾಬೂ ಎಂಬ ಚಿತ್ರದಲ್ಲೂ ನಿರೂಪಿಸಿದರು. 1934ರಲ್ಲಿ ಒಂದು ಬ್ರಿಟಿಷ್ ಕಂಪನಿಗಾಗಿ ಮೆನ್ ಆಫ್ ಆರಾನ್ ಎಂಬ ಚಿತ್ರವನ್ನು ನಿರ್ಮಿಸಿ. ಅದೇ ಕಂಪನಿಯ ಪರವಾಗಿ ಭಾರತಕ್ಕೆ ಬಂದು, ಬೆಂಗಳೂರು ಮೈಸೂರುಗಳಲ್ಲಿದ್ದು, ಮೈಸೂರಿನ ಸಾಬೂ ಎಂಬ ನಟನನ್ನು ತಮ್ಮ ಎಲಿಫೆಂಟ್ ಬಾಯ್ ಚಿತ್ರಕ್ಕಾಗಿ ಕರೆದುಕೊಂಡು ಹೋದರು. ಚಲಚ್ಚಿತ್ರ ಪ್ರಪಂಚದಲ್ಲಿ ಫ್ಲ್ಯಾಹರ್ಟಿ ನಡೆಸಿದ ಈ ಸಾಹಸಗಳು ಶುದ್ಧ ಡಾಕ್ಯುಮೆಂಟರಿಗಳಿಗೆ ಒಂದು ರೂಪವನ್ನು ಕೊಟ್ಟವು. ಇಂಗ್ಲೆಂಡಿನ ಜಾನ್ ಗ್ರೀಯರ್ಸನ್ ಇನ್ನೊಬ್ಬ ಪ್ರಖ್ಯಾತ ಡಾಕ್ಯುಮೆಂಟರಿ ಚಿತ್ರಗಾರ. ಅವರು 1929ರಲ್ಲಿ ತಮ್ಮ ಮೊದಲನೆಯ ಡಾಕ್ಯುಮೆಂಟರಿಯಾದ ಡ್ರಿಫ್ಟರ್ಸ್ (ಕೊಚ್ಚುಬಲೆ ಹಾಕಿ ಮೀನು ಹಿಡಿಯುವ ದೋಣಿಗಳು) ಎಂಬ ಚಿತ್ರವನ್ನು ಇಂಗ್ಲೆಂಡಿನ ಎಂಪೈರ್ ಮಾರ್ಕೆಟಿಂಗ್ ಬೋರ್ಡಿಗಾಗಿ ನಿರ್ಮಿಸಿದರು. ಇದು ಹೆರಿಂಗ್ ಮೀನು ಹಿಡಿಯುವವರ ಸಾಹಸದ ಚಿತ್ರ. ಇದೊಂದು ಕೇವಲ ದಾಖಲೆ ಚಿತ್ರವಾಗಿರದೆ ಫ್ಲ್ಯಾಹರ್ಟಿಯ ಚಿತ್ರಗಳಂತೆ ಮೀನುಗಾರರ ಒಂದು ಆತ್ಮೀಯ ಚಿತ್ರಣವಾಗಿದ್ದು, ಸಮಾಜಕ್ಕೂ ಅವರಿಗೂ ಇರುವ ನಿಕಟಸಂಬಂಧವನ್ನು ಒತ್ತಿಹೇಳುತ್ತಿತ್ತು. ಈ ಚಿತ್ರದಲ್ಲಿ ಮಾಂಟಾಜ್ ರೀತಿಯನ್ನು ಗ್ರಿಯರ್ಸನ್ ವಿಶೇಷವಾಗಿ ಅನುಸರಿಸಿ ಚಿತ್ರದ ಪರಿಣಾಮ ಪ್ರಬಲವಾಗುವಂತೆ ಮಾಡಿದರು. ಈ ಚಿತ್ರ ಬ್ರಿಟಿಷರ ಡಾಕ್ಯುಮೆಂಟರಿ ಸಾಹಸದಲ್ಲಿ ಮೊದಲನೆಯದಾಯಿತು. ಆಮೇಲೆ ಗ್ರಿಯರ್ಸನ್ ಇಂಗ್ಲೆಂಡಿನ ಮಾರ್ಕೆಟಿಂಗ್ ಬೋರ್ಡಿನ ಪರವಾಗಿಯೂ ಹಲವಾರು ಉತ್ತಮ ಡಾಕ್ಯುಮೆಂಟರಿಗಳನ್ನು ನಿರ್ಮಿಸಿದರು. 1933ರಲ್ಲಿ ಫ್ಲ್ಯಾಹರ್ಟಿಯ ಜೊತೆಯಲ್ಲಿ ಇಂಡಸ್ಟ್ರಿಯಲ್ ಬ್ರಿಟನ್ ಎಂಬ ಚಿತ್ರವನ್ನೂ ತಯಾರಿಸಿದರು. ಡಾಕ್ಯುಮೆಂಟರಿ ಎಂಬ ಪದವನ್ನು ಹಲವರು ಹಲವಾರು ರೀತಿಯಿಂದ ತಿಳಿದುಕೊಳ್ಳುತ್ತಿದ್ದರು. ಈ ಪದಕ್ಕೆ ಗ್ರಿಯರ್ಸನ್ ಒಂದು ನಿರ್ದಿಷ್ಟ ಲಕ್ಷಣನಿರೂಪಣೆಯನ್ನು ಕೊಟ್ಟು, ವಾಸ್ತವತೆಯ ಸೃಷ್ಟಿಕಾರಿ ಪ್ರತಿಪಾದನೆ ಮಾಡುವ ಚಿತ್ರವೇ ಡಾಕ್ಯುಮೆಂಟರಿ, ಸೃಷ್ಟಿಕಾರಿ ಪ್ರತಿಪಾದನೆಯಿಲ್ಲದ ವಾಸ್ತವದ ಚಿತ್ರ ಕೇವಲ ದಾಖಲೆ ಚಿತ್ರ ಅಥವಾ ವಾರ್ತಾಚಿತ್ರವಾಗುತ್ತದೆ-ಎಂದು ಸಾರಿದರು. ಈ ಭಾವನೆಯನ್ನೇ ಇಂಗ್ಲೆಂಡಿನ ಮತ್ತೊಬ್ಬ ಪ್ರಖ್ಯಾತ ಡಾಕ್ಯುಮೆಂಟರಿ ಚಿತ್ರತಯಾರಿಕರೂ ಚಲಚ್ಚಿತ್ರ ವಿಮರ್ಶಕರೂ ಆದ ಪಾಲ್ ರೋದ ವಿಶೇಷವಾಗಿ ಪುಷ್ಟೀಕರಿಸಿದರು. ಅವರು ನಿರ್ಮಿಸಿದ ಕೆಲವು ಉತ್ತಮ ಡಾಕ್ಯುಮೆಂಟರಿಗಳಲ್ಲಿ ದಿ ಫೇಸ್ ಆಫ್ ಬ್ರಿಟನ್, ಷಿಪ್ ಯಾರ್ಡ್ ಕಾಂಟ್ಯಾಕ್ಟ್-ಮೊದಲಾದವು ಇವೆ. ಹೀಗೆ ಫ್ಲ್ಯಾಹರ್ಟಿ ಗ್ರೀಯರ್ಸನ್, ಪಾಲ್ ರೋದ ಮತ್ತು ಇಂಗ್ಲೆಂಡಿನ ಇತರ ಕೆಲವು ಪ್ರಖ್ಯಾತ ಚಿತ್ರನಿರ್ಮಾಪಕರು ಡಾಕ್ಯುಮೆಂಟರಿಗಳಿಗೆ ಚಲಚ್ಚಿತ್ರರಂಗದಲ್ಲಿ ಒಂದು ಭದ್ರವಾದ ತಳಹದಿಯನ್ನು ಹಾಕಿದರು. ಭಾರತದಲ್ಲಿ ಡಾಕ್ಯುಮೆಂಟರಿಗಳ ಉತ್ಸಾಹಕಾರೀ ನಿರ್ಮಾಪಕ ಪಾಲ್ ಜಿಲ್ಸ್. ಜರ್ಮನಿಯಿಂದ ಬಂದು ಭಾರತದಲ್ಲಿ ನೆಲೆಸಿದವರು. ದೇಶದ ಆದಿ ದಾಖಲೆ ಚಿತ್ರಗಾರರಲ್ಲಿ ಪ್ರಖ್ಯಾತವೆನಿಸಿದ ಡಾ. ಪಿ. ವಿಶ್ವಕೋಶ ಪತಿಯ ಉತ್ಸಾಹಪೂರ್ವ ಬೆಂಬಲದಿಂದ ನೌಕಾಭಿವೃದ್ಧಿಗಾಗಿ ಇಂಡಿಯದ ಸಾಹಸ ಎಂಬ ಅರ್ಧ ತಾಸು ಪ್ರದರ್ಶಕಾಲದ ಚಿತ್ರವನ್ನು ಸಿಂಧಿಯಾ ಸ್ಟೀಮ್ ನ್ಯಾವಿಗೇಷನ್ ಸಂಸ್ಥೆಗಾಗಿ ನಿರ್ಮಿಸಿದರು. ಇದು 1947ರ ಸ್ವಾತಂತ್ರ್ಯದಿನದಲ್ಲಿ ಪಂಡಿತ ಜವಹಾರಲಾಲ್ ನೆಹರೂ ಮತ್ತು ಇತರ ಧುರೀಣರ ಸಮಕ್ಷಮದಲ್ಲಿ ಪ್ರದರ್ಶಿಸಲ್ಪಟ್ಟು, ದೇಶದಲ್ಲಿ ತುಂಬ ಮನ್ನಣೆ ಪಡೆಯಿತು. 1949ರ ಸುಮಾರಿಗೆ ಮೀನೂ ಮಸಾನಿಯವರ ಪ್ರಖ್ಯಾತ ಗ್ರಂಥವಾದ ಅವರ್ ಇಂಡಿಯಾದ ಚಿತ್ರಣಸ್ವಾಮ್ಯವನ್ನು ಪಡೆದು ಅದರ ಪೂರ್ಣ ಉದ್ದದ ಚಿತ್ರಣವನ್ನು ಜಿಲ್ಸ್ ಪ್ರಾರಂಭಿಸಿದರು. ಅನಂತರ ಆರ್ಟ್ ಫಿಲ್ಮ್ ಆಫ್ ಏಷ್ಯ (ಂಈಂ) ಎಂಬ ತಮ್ಮ ಚಿಕ್ಕ ಸಂಸ್ಥೆಯನ್ನು ಸಣ್ಣ ಪ್ರಮಾಣದ ಡಾಕ್ಯುಮೆಂಟರಿ ಚಿತ್ರಗಳಿಗಾಗಿಯೇ ಮೀಸಲಾಗಿರಿಸಿದರು, ಯು.ಎನ್.ಓ.ದ ಡಾಕ್ಯುಮೆಂಟರಿ ವಿಭಾಗದ ಪರವಾಗಿಯೂ ಬರ್ಮಾಷೆಲ್ ಮತ್ತು ಇನ್ನಿತರ ಖಾಸಗೀ ಸಂಸ್ಥೆಗಳ ಪರವಾಗಿಯೂ ತಾವೇ ಸ್ವಂತವಾಗಿಯೂ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿ ಸಕಾರದ ಫಿಲ್ಮ್ಸ್ ಡಿವಿಷನಿನ ಜೊತೆಯಲ್ಲಿ ಭಾರತದಲ್ಲಿ ಡಾಕ್ಯುಮೆಂಟರಿ ಚಿತ್ರಗಳ ಭದ್ರ ವಾತಾವರಣವನ್ನು ನಿರ್ಮಿಸಿದರು. ಮಗು, ಕುರವಂಡಿ ರಸ್ತೆ, ಒಂದು ಅಲ್ಪಜೀವಿಯಿಂದ ಮರಣ (ಮಲೇರಿಯ ರೋಗವನ್ನು ಕುರಿತು), ಉಜಲ (ಗೊಂಬೆಯಾಟದ ನೃತ್ಯನಾಟಕ), ನೇಯ್ಗೆ ಉದ್ಯಮ, ತಾಯಿ, ಸ್ಥಾನಾಂತರಗೊಂಡ ಅನಾಥರು, ಶಾಲೆ, ಅಳಿದುಹೋಗುತ್ತಿರುವ ಜನ (ನೀಲಗಿರಿಯ ತೋಡರು), ತಿರುವಾಂಕೂರಿನ ಒಂದು ಹಳ್ಳಿ, ಬೆಂಗಳೂರಿನ ಒಂದು ಕುಟುಂಬ-ಮೊದಲಾದವು ಅವರ ಮುಖ್ಯ ಚಿತ್ರಗಳು. ಇವುಗಳಲ್ಲಿ ಅನೇಕವು ಲೋಕದ ಅನೇಕ ಕಡೆಗಳಲ್ಲಾಗುವ ಚಲಚ್ಚಿತ್ರೋತ್ಸವಗಳಲ್ಲಿ ಪಾರಿತೋಷಕಗಳನ್ನೂ ಮನ್ನಣೆಯನ್ನೂ ಪಡೆದಿವೆ. ತಿರುವಾಂಕೂರಿನ ಒಂದು ಹಳ್ಳಿಗೆ ಕೊರ್ಕ್‍ಶಹರದ ಚಲಚ್ಚಿತ್ರೋತ್ಸವದಲ್ಲಿ 1956ರ ಅತ್ಯುತ್ತಮ ಡಾಕ್ಯುಮೆಂಟರಿಯೆಂದು ಪಾರಿತೋಷಕ ಸಿಕ್ಕಿದೆ. ಭಾರತ ಸರ್ಕಾರದ ಫಿಲ್ಮ್ಸ್ ಡಿವಿಷನ್ 1949ರಲ್ಲಿ ಡಾಕ್ಯುಮೆಂಟರಿಗಳನ್ನು ತೆಗೆಯಲು ಪ್ರಾರಂಭಿಸಿತು. ಅಂದಿನಿಂದ ಇಂದಿನ ವರೆಗೆ ಹಲವಾರು ಸಣ್ಣ ಚಿತ್ರಗಳನ್ನು ಅದು ನಿರ್ಮಿಸಿದೆ. ನಮ್ಮ ಜನಜೀವನ, ಪ್ರಕೃತಿಜೀವನ, ಸಾಂಸ್ಕøತಿಕ ಜೀವನಗಳ ಅನೇಕ ಮುಖಗಳು ಈ ಚಿತ್ರಗಳಲ್ಲಿ ಕಾಣಬರುತ್ತವೆ. ಉಚ್ಚರೀತಿಯ ಪ್ರತಿಪಾದನೆಯಿಂದ ಇವುಗಳಲ್ಲಿ ಅನೇಕವು ಡಾಕ್ಯುಮೆಂಟರಿಗಳಾಗಿವೆ; ಲೋಕದ ಅನೇಕ ಚಿತ್ರೋತ್ಸವಗಳಲ್ಲಿಯೂ ಇತರ ಕಡೆಗಳಲ್ಲಿಯೂ ಪಾರಿತೋಷಕಗಳನ್ನೂ ಜನದರಣೆಯನ್ನೂ ಪಡೆದಿವೆ. ಈ ರೀತಿ ಹೆಸರು ಗಳಿಸಿದ ಚಿತ್ರಗಳಲ್ಲಿ ಕೆಲವು ; ಅಮ್ಮೆಂಬಳ ಭಾಸ್ಕರರಾಯರ ಕಲ್ಪವೃಕ್ಷ ಮತ್ತು ಧರ್ತಿ ಕೀ ಝಂಕಾರ್ ಟಿ.ಎ. ಏಬ್ರಹಾಮರ ದಿ ಸಿಂಫೊನಿ ಆಫ್ ಲೈಫ್ (ಇದಕ್ಕೆ ಯಾವ ರೀತಿಯ ಭಾಷ್ಯವೂ ಇಲ್ಲ), ರವಿಪ್ರಕಾಶರ ಕಾಶ್ಮೀರದಲ್ಲಿ ವಸಂತಾಗಮನ, ಎಂ. ವಾಧ್ವಾನಿಯವರ ಖುಜುರಾಹೋ ಮತ್ತು ಕಥಕಳಿ, ಎಂ. ಭವನಾನಿಯವರ ಖೆಡ್ಡಾ ಆಪರೇಷನ್, ಹಿಮಾಲಯನ್ ಟೇಪಸ್ಟ್ರೀ ಮತ್ತು ಕಾಶ್ಮೀರದ ನೇಯ್ಗೆಗಾರರ ಕೌಶಲ ತೋರಿಸುವ ಚಿತ್ರ ; ಜೆ. ಎಸ್, ಭವನಾಶಗ್ರಿಯವರ ರಾಧಾಕೃಷ್ಣ (ಇದು ಪ್ರಸಿದ್ಧ ರಜಪೂತ ವರ್ಣಚಿತ್ರಗಳಿಂದಲೇ ಪೋಣಿಸಿದ ಕಥೆ), ಅರುಣಕುಮಾರ ಚೌಧ್ರಿಯವರ ಬೆಟ್ಟದ ಕರೆ, ಮುಶೀರ್ ಅಹಮ್ಮದ್‍ರ ತಾಜಮಹಲ್, ಎಫ್. ಆರ್. ಎಸ್. ಪಿಳ್ಳೆಯವರ ಮಲಬಾರಿನ ಸಮರ ನೃತ್ಯಗಳು-ಮೊದಲಾದವು. ಫಿಲ್ಮ್ಸ್ ಡಿವಿಷನ್ ಚಿತ್ರಗಳನ್ನು ತಯಾರಿಸುವುದಲ್ಲದೆ, ಚಲಚ್ಚಿತ್ರ ಉದ್ಯಮದಲ್ಲಿ ಆಸಕ್ತಿಯಿರುವವರಿಗೆ ಉದ್ಯಮದ ಎಲ್ಲ ವಿಷಯಗಳಲ್ಲಿಯೂ ಅವಶ್ಯಕವಾದ ತರಬೇತಿಯನ್ನು ಕೊಟ್ಟು ಉದ್ಯಮದ ಮುಂದಿನ ಪ್ರಗತಿಯನ್ನು ಸಾಧಿಸುತ್ತಿದೆ. ಡಾಕ್ಯುಮೆಂಟರಿ ಚಿತ್ರಗಳು ಸಾಮಾಜಿಕ ಸಮಸ್ಯೆಗಳ ಯಥಾವತ್ತಾದ ಅರಿವನ್ನು ಕೊಡಬಲ್ಲವು, ಅದನ್ನು ಸೂಕ್ಷ್ಮರೀತಿಯಿಂದಲೂ ವಿವೇಚಿಸಬಲ್ಲವು. ತನ್ನ ಮತ್ತು ತನ್ನ ದೇಶದ ಕಲ್ಯಾಣಕ್ಕಾಗಿ ಮಾಡುವ ಸಾಹಸಗಳನ್ನು ಶಕ್ತಿಯುತವಾಗಿ ಚಿತ್ರಿಸಬಲ್ಲವು, ನೈಸರ್ಗಿಕ ದೃಶ್ಯಗಳನ್ನು ಅವರ್ಣಿನೀಯವಾಗಿ ನಮ್ಮ ಕಣ್ಣು ಮುಂದೆ ತಂದು ನಿಲ್ಲಿಸಬಲ್ಲವು. ಅನೇಕ ವಿಷಯಗಳಿಗೆ ಭಾವಗೀತೆಯಂಥ ರಮ್ಯತೆಯನ್ನು ಕೊಡಬಲ್ಲವು, ಜನಜೀವನದ ಪ್ರಕೃತಿ ಜೀವನದ ಸಾಂಸ್ಕøತಿಕ ಜೀವನ ಯಾವತ್ತೂ ಅಂಶವನ್ನು ಉಜ್ವಲವಾಗಿ ಸ್ಫುಟಗೊಳಿಸಬಲ್ಲವು. ಹೀಗಾಗಿ ಚಲನಚಿತ್ರರಂಗದಲ್ಲಿ ಡಾಕ್ಯುಮೆಂಟರಿಗಳಿಗೆ ಒಂದು ಉನ್ನತ ಸ್ಥಾನವಿದೆ. ಭಾರತ ಸರ್ಕಾರದ ಚಲನಚಿತ್ರ ವಿಭಾಗದ ಚಿತ್ರ ಭಂಡಾರದಲ್ಲಿ ಸುದ್ದಿ ಚಿತ್ರಗಳು, ಸಾಕ್ಷ್ಯ ಚಿತ್ರಗಳು, ಕಥಾ ಚಿತ್ರಗಳು ಅನಿಮೇಷನ್ ಚಿತ್ರಗಳು ಸೇರಿದಂತೆ, 8000 ಉಪಯುಕ್ತ ಚಲನಚಿತ್ರಗಳ ಸಂಗ್ರಹವಿದೆ. ಕೆಲವು ಶೈಕ್ಷಣಿಕ ಚಿತ್ರಗಳು, ವಿಡಿಯೋ ಹಾಗೂ ಅಡಕ ಮುದ್ರಿಕೆಗಳ ರೂಪದಲ್ಲಿ ಲಭ್ಯವಿದೆ. ಸಾಕ್ಷ್ಯ ಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪ್ರತಿವರ್ಷ ಮುಂಬೈನಲ್ಲಿ ಡಾಕ್ಯುಮೆಂಟರಿ ಫಿಲ್ಮ್ ಮತ್ತು ವಿಡಿಯೋ ಚಿತ್ರಗಳ ಉತ್ಸವ ನಡೆಸುತ್ತಿದೆ. ಉತ್ತಮ ಚಿತ್ರಗಳಿಗಾಗಿ 26ಲಕ್ಷ ರೂಪಾಯಿಗಳಷ್ಟು ನಗದು ಬಹುಮಾನ ನೀಡುತ್ತಿದೆ. ಸುದ್ದಿ ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ಜೀವಿತಾವಧಿ ಸಾಧನೆಗಾಗಿ ನೀಡುವ ಪ್ರಶಸ್ತಿಯ ಮೊತ್ತ 2ಲಕ್ಷ 60ಸಾವಿರ ರೂಪಾಯಿ. ಕಾರ್ಟೂನ್ ಚಿತ್ರಗಳು : ಪ್ರತಿಯೊಂದು ಚಲಚ್ಚಿತ್ರ ಪ್ರದರ್ಶನದ ಮೊದಲಲ್ಲಿ ಸಾಧಾರಣವಾಗಿ ಒಂದಾದರು ಕಾರ್ಟೂನ್ ಚಿತ್ರ ಇರುತ್ತದೆ. ನೋಟಕ್ಕೆ ಅದೊಂದು ತೀರಾ ಸರಳವಾದ, ಸುಲಭವಾದ, ಹರ್ಷದಾಯಕ ಚಿತ್ರವಾದರೂ ಅದನ್ನು ತಯಾರಿಸುವ ವಿಧಾನದಲ್ಲಿ ಅತ್ಯಧಿಕ ಶ್ರಮವನ್ನೂ ತಾಳ್ಮೆಯನ್ನೂ ವಹಿಸಬೇಕಾಗಿದೆ. ಹತ್ತು ನಿಮಿಷ ಪ್ರದರ್ಶನಕಾಲದ ಚಿತ್ರಕ್ಕೆ 6 x 8" ಅಳತೆಯಿರುವ 12,000- 16,000 ಚಿತ್ರಗಳನ್ನೂ ಬಿಡಿಸಲಾಗುತ್ತದೆ. ಕಾರ್ಟೂನ್ ಚಿತ್ರಗಳ ತಯಾರಿಕೆಯಲ್ಲಿ ಅನೇಕ ಯಂತ್ರಸಾಮಾಗ್ರಿಗಳ ಉಪಯೋಗವಿದ್ದರೂ ಈ 12,000-16000 ಚಿತ್ರಗಳನ್ನು ಕೈಯಿಂದಲೇ ಬಿಡಿಸಲಾಗುತ್ತದೆ. ಇಷ್ಟೂ ಚಿತ್ರಗಳನ್ನು ಬಿಡಿಸಿದ ಮೇಲೆ ಅವುಗಳನ್ನು ಒಂದೊಂದಾಗಿ ಪಾರದರ್ಶಕ ಸೆಲ್ಯುಲಾಯ್ಡಿನ ಫಲಕಗಳ ಮೇಲೆ ರೇಖಿಸಿ ಅವುಗಳ ಪ್ರತಿಗಳನ್ನು ಮಾಡುತ್ತಾರೆ. ಆಮೇಲೆ ಪ್ರತಿಯೊಂದು ಚಿತ್ರಕ್ಕೆ ಬಣ್ಣ ಕೊಡುವುದಲ್ಲದೆ, ಚಲಿಸುವ ಈ ಚಿತ್ರಗಳಿಗೆ 80-100 ಹಿನ್ನೆಲೆ ದೃಶ್ಯಗಳನ್ನು ಬೇರೆಬೇರೆಯಾಗಿ ಬಿಡಿಸಿ ಒದಗಿಸಿಕೊಡುತ್ತಾರೆ. ಈ ಹಿನ್ನೆಲೆ ದೃಶ್ಯಗಳು ಸ್ಥಾಯಿಕವಾಗಿರುತ್ತವಾಗಿ ಅವುಗಳಿಗೆ ಕೊಡುವ ಬಣ್ಣವನ್ನು ಬಹಳ ಜಾಗರೂಕತೆಯಿಂದ ನಿಶ್ಚಯಿಸಬೇಕಾಗುತ್ತದೆ. ಏಕೆಂದರೆ ಈ ಹಿನ್ನೆಲೆಯ ಚಿತ್ರಗಳ ಮುಂದೆ ಚಲಿಸಿವ ಬಣ್ಣದ ವ್ಯಕ್ತಿಗಳು ಯಾವ ಆವರಣದಲ್ಲಿದ್ದರೂ ಅವು ಸ್ಪಷ್ಟವಾಗಿ ಕಾಣಿಸಬೇಕು. ಆಮೇಲೆ ಪ್ರತಿಯೊಂದು ಸೆಲ್ಯುಲಾಯ್ಡ್ ಚಿತ್ರಪ್ರತಿಯ ಕೆಳಗೆ ಅದಕ್ಕೆ ತಕ್ಕುದಾದ ಹಿನ್ನೆಲೆ ದೃಶ್ಯದ ಚಿತ್ರವನ್ನಿಟ್ಟು, ಈ ರೀತಿ ಸಂಯೋಜನೆಗೊಂಡ ಚಿತ್ರದ ಛಾಯಾಪ್ರತೀಕವನ್ನು ಕಾರ್ಟೂನ್ ಕ್ಯಾಮರದ ಮೂಲಕ ಚಿತ್ರ ಪಟಲದಲ್ಲಿ ತೆಗೆಯಬೇಕು. ಈ ಕ್ಯಾಮರ ವಿಶಿಷ್ಟ ರೀತಿಯದಾಗಿದ್ದು ಅದರಲ್ಲಿ ಒಂದೊಂದು ಸಲ ಒಂದೊಂದೇ ಛಾಯಾಚಿತ್ರವನ್ನು ತೆಗೆಯಲು ಬರುವುದು. ಆದುದರಿಂದ ಇದನ್ನು ಸ್ಥಾಯಿಕವಾಗಿಟ್ಟು, ಸಂಯೋಜನೆ ಹೊಂದಿದ ಚಿತ್ರಗಳು ಒಂದೊಂದಾಗಿ ಕ್ರಮವಾಗಿ ಅದರ ಮುಂದೆ ಹಾದುಹೋಗುವಂತೆ ಮಾಡುತ್ತಾರೆ. ಇಷ್ಟೆಲ್ಲ ಒಂದೇ ವ್ಯಕ್ತಿ ಮಾಡುವುದಾದರೆ ಅವನಿಗೆ 6 ತಿಂಗಳ ಅವಕಾಶವಾದರೂ ಬೇಕಾಗುವುದು. ಒಮ್ಮೆ ಕ್ಯಾಮರದ ಚಲಚ್ಚಿತ್ರಪಟಲದಲ್ಲಿ ಈ 12,000-16,000 ಚಿತ್ರಗಳ ಛಾಯಾಪ್ರತೀಕಗಳು ಬಂದುವೆಂದಾದರೆ, ಆಮೇಲೆ ಅವುಗಳಿಗೆ ಇತರ ಚಲಚ್ಚಿತ್ರಗಳಂತೆ ರಾಸಾಯನಿಕ ಮತ್ತು ಇತರ ಎಲ್ಲ ಸಂಸ್ಕಾರಗಳೂ ಆಗಬೇಕು. ಶಬ್ದಬಂದ ಅನಂತರ ಚಿತ್ರಗಳಿಗೆ ಶಬ್ದವನ್ನೂ ಮಾತನ್ನೂ ಸಂಗೀತವನ್ನೂ ಸೇರಿಸುವುದು ಅತ್ಯಂತ ಬಿಕ್ಕಟ್ಟಿನ ಕೆಲಸ. ಹೆಚ್ಚಾಗಿ, ಚಿತ್ರದಲ್ಲಿ ಯಾವ ಶಬ್ದ, ಮಾತು, ಸಂಗೀತ ಯಾವ ಸಂದರ್ಭದಲ್ಲಿ ಬರಬೇಕು ಎಂದು ಮೊದಲೇ ಜಾಗ್ರತೆಯಿಂದ ನಿಶ್ಚಯಿಸಿ, ಆಮೇಲೆ ಚಿತ್ರಗಳನ್ನು ಬಿಡಿಸುವುದು ರೂಢಿ. ಇಷ್ಟೆಲ್ಲ ಕಠಿಣ ಸಾಧನೆಗಳಿದ ಹುಟ್ಟಿದ ಚಲಚ್ಚಿತ್ರ ಪರದೆಯ ಮೇಲೆ ಕೇವಲ 10 ಮಿನಿಟುಗಳೊಳಗೆ ಸಾಗಿಹೋಗುವುದು. ಕಾರ್ಟೂನ್ ಚಿತ್ರಗಳನ್ನು ನಿರ್ಮಿಸಿದ ಈ ವಿಧಾನವನ್ನು ಎಮಿಲ್ ಕೊಹ್ಲ್ 1904ರಲ್ಲೇ ಕಂಡುಹಿಡಿದಿದ್ದರು. ಚಿತ್ರದ ಎಲ್ಲ ಅವಸ್ಥೆಗಳನ್ನೂ ಆವರೊಬ್ಬನೇ ಸಾಧಿಸಿದ್ದ. ಒಂದು ಮೂರು ನಿಮಿಷದ ಚಿತ್ರನಿರ್ಮಾಣಕ್ಕೆ ಅವರಿಗೆ ಮೂರು ತಿಂಗಳು ತಾಗಿದವು. ಆಗ ಚಿತ್ರವೂ ತುಂಬ ಸರಳವಾಗಿದ್ದು, ಶಬ್ದರಹಿತವೂ ಆಗಿತ್ತು. ಈಗ ಒಂದು ಕಾರ್ಟೂನ್ ಚಿತ್ರ ಸ್ಟೂಡಿಯೋದಲ್ಲಿ 20 ರಿಂದ 40ರ ವರೆಗಾದರೂ ಚಿತ್ರಗಾರರೂ ಯಂತ್ರತಂತ್ರಜ್ಞರೂ ಇರುತ್ತಾರೆ. ಚಿತ್ರ ತಯಾರಿಕೆಯ ಪ್ರತಿಯೊಂದು ವಿಭಾಗ-ಕಥೆ, ಚಲಿಸುವ ವ್ಯಕ್ತಿಗಳ ಸೃಷ್ಟಿ ಮತ್ತು ಚಲನೆಯ ರೀತಿ, ಚಿತ್ರ ಬಿಡಿಸುವಿಕೆ, ಸೆಲ್ಯುಲಾಯ್ಡಿನ ಫಲಕಗಳ ಮೇಲೆ ಅವುಗಳ ಪ್ರತಿ ತೆಗೆಯುವಿಕೆ, ಬಣ್ಣದ ಪ್ರಯೋಗ, ಹಿನ್ನೆಲೆ ದೃಶ್ಯಗಳ ಚಿತ್ರಗಳು, ಛಾಯಾಪ್ರತೀಕ, ಶಬ್ದ ಜೋಡಣೆ ಇತ್ಯಾದಿ-ಆಯಾ ವಿಭಾಗದಲ್ಲಿ ನುರಿತ ಕಲೆಗಾರರ ವಶದಲ್ಲಿರುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಈಗ 10 ನಿಮಿಷದ ಚಿತ್ರವನ್ನು 2-3 ತಿಂಗಳೊಳಗೆ ಮುಗಿಸಬಹುದಾಗಿದೆ. ಮಾತ್ರವಲ್ಲ, ಅದೇ ಸಮಯ 3-4 ಬೇರೆ ಬೇರೆ ಚಿತ್ರಗಳ ತಯಾರಿಕೆಯನ್ನೂ ಕೈಗೊಳ್ಳಬಹುದಾಗಿದೆ. ಅಮೆರಿಕದಲ್ಲಿ ವಿನ್ಸರ್ ಮೆಕೆ 1911ರಲ್ಲಿ ಕಾರ್ಟೂನ್ ಚಿತ್ರ ತೆಗೆಯುವ ವಿಧಾನವನ್ನು ಸ್ವತಂತ್ರವಾಗಿ ಕಂಡುಹಿಡಿದು, ಗರ್ಟೀ ಎಂಬ ಕಾರ್ಟುನ್ ನಾಯಕ ವ್ಯಕ್ತಿಯನ್ನು ನಿರ್ಮಿಸಿ ಕಾರ್ಟೂನ್ ಚಿತ್ರಗಳನ್ನು ಮಾಡಿ ಪ್ರಖ್ಯಾತರಾದರು. ಅನಂತರ ಈ ರಂಗದಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿದ ವ್ಯಕ್ತಿಯೆಂದರೆ ಮಿಕ್ಕಿ ಮೌಸ್ ಸೃಷ್ಟಿಕಾರ ವಾಲ್ಟ್ ಡಿಸ್ನೆ. ಇವರು ಈ ಶತಮಾನದ ಮೂರರಿಂದ ಏಳನೆಯ ದಶಕದ ವರೆಗೂ ಈ ರಂಗದಲ್ಲಿ ಅದ್ವಿತೀಯ ಕಲೆಗಾರನಾಗಿ ಮೆರೆದ. 1914-18ರಲ್ಲಿ ಚಾರ್ಲಿ ಚಾಪ್ಲಿನ್ ಹುಚ್ಚು ಲೋಕದಲ್ಲೆಲ್ಲ ಹರಡಿಕೊಂಡಂತೆ ಮಿಕ್ಕಿ ಮೌಸಿನ ಹುಚ್ಚು ಲೋಕದಲ್ಲೆಲ್ಲ ಹರಡಿತು. ಡಿಸ್ನೆ 1938ರಲ್ಲಿ ಸ್ನೋಹ್ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್ ಎಂಬ ದೊಡ್ಡ ಕಾರ್ಟೂನ್ ಚಿತ್ರವನ್ನು ರಚಿಸಿ ಲೋಕದ ಮಕ್ಕಳನ್ನೆಲ್ಲ (ಜೊತೆಗೆ ವಯಸ್ಕರನ್ನೂ) ಸಂತಸಗೊಳಿಸಿದರು. ಹಾಗೆಯೇ 1940ರಲ್ಲಿ ಪಿನೋಕಿಯೊವನ್ನೂ 1941ರಲ್ಲಿ ರೆಲಕ್ಟೆಂಟ್ ಡ್ರ್ಯಾಗನ್ ಅನ್ನೂ 1942ರಲ್ಲಿ ಬ್ಯಾಂಬಿ ಮತ್ತು ಡಂಬೊ ಚಿತ್ರಗಳನ್ನೂ ನಿರ್ಮಿಸಿ, ಚಲಚ್ಚಿತ್ರರಂಗದಲ್ಲಿ ಕಾರ್ಟೂನ್ ಚಿತ್ರಗಳಿಗೆ ಒಂದು ಮಹತ್ತರ ಸ್ಥಾನವನ್ನು ಕಲ್ಪಿಸಿಕೊಟ್ಟರು. 1941ರಲ್ಲಿ ಅವರು ನಿರ್ಮಿಸಿದ ಫ್ಯಾಂಟಾಸಿಯ ಚಿತ್ರ ಒಂದು ಅಪೂರ್ವವಾದ ಕಲಾಸಾಹಸವೆನಿಸಿತು. ಅದರಲ್ಲವರು ಪ್ರಸಿದ್ಧ ಪಾಶ್ಚಾತ್ಯ ಸಂಗೀತ ಕೃತಿಗಳನ್ನು ದೃಗ್ಗೋಚರವಾಗುವಂತೆ ಮಾಡಿದ್ದಾರೆ. ಅವರೇ ಹೇಳುವಂತೆ ಅದರಲ್ಲಿ ಪ್ರೇಕ್ಷಕರು 'ಸಂಗೀತವನ್ನು ನೋಡುತ್ತಾರೆ, ಚಿತ್ರಗಳನ್ನು ಕೇಳುತ್ತಾರೆ.' ಇತ್ತೀಚೆಗೆ ಡಿಸ್ನೆ ಪ್ರವಾಸ ಚಿತ್ರಗಳನ್ನೂ ಶೈಕ್ಷಣಿಕ ಚಿತ್ರಗಳನ್ನೂ ಪ್ರಾಣಿಜೀವನ ಚಿತ್ರಗಳನ್ನೂ (ಉದಾ : ದಿ ಲಿವಿಂಗ್ ಡೆಸರ್ಟ್), ಡಾಕ್ಯುಮೆಂಟರಿಗಳನ್ನೂ ನಿರ್ಮಿಸಿದ್ದಾರೆ. ಇವೆಲ್ಲವೂ ಬಹು ಸುಂದರವಾದ, ಉತ್ತಮವಾದ ಚಿತ್ರಗಳಾಗಿವೆ. ಕಲಾವಿಮರ್ಶಕರು ಡಿಸ್ನೆಯನ್ನು ಆಧುನಿಕ ಜಾನಪದ ಸಂಪತ್ತಿನ ನಿರ್ಮಾಪಕನೆಂದು ಕರೆದಿದ್ದಾರೆ. ಭಾರತದಲ್ಲಿ ಸಾಧಾರಣ 20-30 ವರ್ಷಗಳ ಹಿಂದೆ ಕಾರ್ಟೂನ್ ಚಿತ್ರಗಳನ್ನು ತಯಾರಿಸಲು ಕೆಲವು ಸಾಹಸಗಳು ನಡೆದವು. ಆದರೆ ಅವು ಯಾವುವೂ ಯಶಸ್ವಿಯಾಗಲಿಲ್ಲ. ಈಚೆಗೆ ಫಿಲ್ಮ್ಸ್ ಡಿವಿಷನ್ನಿನಲ್ಲಿ ಕಾರ್ಟೂನ್ ಚಿತ್ರಗಳ ಶಾಖೆಯೊಂದು ತೆರೆಯಲ್ಪಟ್ಟು, ಅದರಲ್ಲಿ ಪ್ರಮೋದಪತಿ, ವಿಟ್ಲ ಮೋಹನ್ ರಾವ್ ಮೊದಲಾದವರಿಂದ ಕೂಡಿದ 15-20 ಮಂದಿ ಕಲೆಗಾರರ ಉತ್ಸಾಹೀ ತಂಡವೊಂದು ಕೆಲಸ ಮಾಡಿತು. ಮೊದಮೊದಲು ಫಿಲ್ಮ್ಸ್ ಡಿವಿಷನ್ನಿನ ಚಿತ್ರಗಳಲ್ಲಿ ಬರುವ ರೇಖಾಚಿತ್ರಗಳಿಗೂ ಅಂಕಿಅಂಶಗಳಿಗೂ ಚಲನೆಯನ್ನು ಕೊಡುವ ಕೆಲಸ ಮಾತ್ರ ಈ ಶಾಖೆಯವರಿಗಿತ್ರು. ಈಗ ಈ ಶಾಖೆ, ಈ ಕೆಲಸದ ಜೊತೆಯಲ್ಲಿ, ಒಂದು ಇಲ್ಲವೆ ಎರಡು ರೀಲಿನ ಪೂರ್ಣ ಕಾರ್ಟೂನ್ ಚಿತ್ರಗಳನ್ನು ತಯಾರಿಸಲು ಪ್ರಾರಂಭಿಸಿತು. ಈವರೆಗೆ ಅಂಥ ನಾಲ್ಕಾರು ಚಿತ್ರಗಳನ್ನು ಸಂಸ್ಥೆ ನಿರ್ಮಿಸಿದೆ : 1 ಮೆಟ್ರಕ್ ಪದ್ಧತಿ, 2 ಆಲದ ಮರ ಮತ್ತು ಜಿಂಕೆ (ಬೌದ್ಧ ಸಾಹಿತ್ಯದಲ್ಲಿರುವ ಒಂದು ಜಾತಕ ಕಥೆ), 3 ಕನಸುಗಳು ನನಸಾದಾಗ (ಪಂಚವಾರ್ಷಿಕ ಯೋಜನೆಗಳನ್ನು ಕುರಿತು) ಮತ್ತು 4 ಒಂದು ದೊಡ್ಡ ಸಮಸ್ಯೆ (ಕುಟುಂಬ ಯೋಜನೆಯನ್ನು ಕುರಿತು). ಕಂಪ್ಯೂಟರ್ ಯುಗಾರಂಭವಾದ ಮೇಲೆ, ಕಾರ್ಟೂನ್ ಚಿತ್ರಗಳಿಗೆ ಹೊಸ ಆಯಾಮ ಬಂದಿದೆ. ಅನಿಮೇಷನ್ ತಂತ್ರಜ್ಞಾನ ಬಳಸಿದ ಕಾರ್ಟೂನ್ ಚಿತ್ರಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಹಾಲಿವುಡ್‍ನಲ್ಲಿರುವ ಅನಿಮೇಷನ್ ತಂತ್ರಜ್ಞದಲ್ಲಿ ಭಾರತೀಯರೇ ಅರ್ಧ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲೇ ಮೊದಲ ತಯಾರಾದ ಅನಿಮೇಷನ್ ಚಿತ್ರ ಹನುಮಾನ್. 7 ಮಕ್ಕಳ ಚಿತ್ರಗಳು : ಇವು ಶೈಕ್ಷಣಿಕ ಚಿತ್ರಗಳಲ್ಲ, ಮಕ್ಕಳ ಮನೋರಂಜನೆಯ ಚಿತ್ರಗಳು. ದೊಡ್ಡವರು ಆನಂದ ಪಡುವ ಚಿತ್ರಗಳು ಮಕ್ಕಳ ರಂಜನೆಗೆ ಯೋಗ್ಯವಲ್ಲ. ಅಂಥ ಚಿತ್ರಗಳಲ್ಲಿರುವ ಕಥೆಯೂ ಸನ್ನಿವೇಶಗಳೂ ಮಕ್ಕಳಿಗೆ ಅರ್ಥವಾಗದೆ, ಅವು ವಿಶೇಷವಾಗಿ ಬೇಸರಗೊಳ್ಳುತ್ತವೆ. ಅಲ್ಲದೆ, ದೊಡ್ಡವರ ಅನೇಕ ಚಿತ್ರಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ತುಂಬ ಹಾನಿಕಾರಕವಾಗಿರುತ್ತವೆ. ಆದ್ದರಿಂದ ಮಕ್ಕಳಿಗಾಗಿಯೇ ಪ್ರತ್ಯೇಕ ರಂಜನೆಯನ್ನು ಕೊಡುವ ಚಿತ್ರಗಳನ್ನು ನಿರ್ಮಿಸುವುದು ಅವಶ್ಯವಾಯಿತು. ಇಂಥ ಚಿತ್ರಗಳ ತಯಾರಿಕೆಯಲ್ಲಿ ಇಂಗ್ಲೆಂಡು ಮೊದಲ ದೇಶವಾಗಿ ಇತರ ದೇಶಗಳಿಗೆ ಮಾರ್ಗದರ್ಶಕವಾಗಿದೆ. ಅಲ್ಲಿಯ ಚಿತ್ರೋದ್ಯಮದಲ್ಲಿ ಪ್ರಮುಖ ಚಿತ್ರನಿರ್ಮಾಪಕನೂ ಪ್ರದರ್ಶನಕಾರನೂ ಆಗಿರುವ ಜೆ. ಆರ್ಥರ್ ರ್ಯಾಂಕ್ 1944ರಲ್ಲಿ ತಮ್ಮ ಚಿತ್ರಕಾರ್ಯಾಲಯದಲ್ಲಿ ಮಕ್ಕಳಿಗಾಗಿ ಚಿತ್ರಗಳನ್ನು ತಯಾರಿಸಲಿಕ್ಕೆಂದೇ ಒಂದು ದೊಡ್ಡ ಶಾಖೆಯನ್ನು ತೆರೆದು, ಅದರ ಮೂಲಕ ಹೊರಡುವ ಚಿತ್ರಗಳೆಲ್ಲ ದೇಶದಲ್ಲಿ ತನ್ನ ಅಧೀನದಲ್ಲಿರುವ 400 ಪ್ರದರ್ಶನ ಮಂದಿರಗಳಲ್ಲಿ ಪ್ರತ್ಯೇಕವಾಗಿ ಪ್ರದರ್ಶಿಸಲ್ಪಡುವಂತೆ ಅವಕಾಶ ಕಲ್ಪಿಸಿದರು. ಇಂಗ್ಲೆಂಡಿನಲ್ಲಿ ಆಗಲೇ ಅನೇಕ ಉತ್ತಮ ಡಾಕ್ಯುಮೆಂಟರಿಗಳನ್ನು ನಿರ್ಮಿಸಿ ಪ್ರಸಿದ್ಧರಾಗಿದ್ದ ಮಿಸ್ ಮೇರಿ ಫೀಲ್ಡ್ ಈ ಶಾಖೆಯ ಮುಖ್ಯಸ್ಥರಾಗಿ, ಈ ರಂಗದಲ್ಲಿ ಅನೇಕ ಶೋಧನೆಗಳನ್ನು ನಡೆಸಿ, 181 ಚಿತ್ರಗಳನ್ನು ನಿರ್ಮಿಸಿದರು. ಇವುಗಳಲ್ಲಿ 27 ನಾಟಕಗಳೂ 27 ಧಾರಾವಾಹೀ ಕಥೆಗಳೂ 9 ಮಾಹಿತಿ ಚಿತ್ರಗಳೂ 60 ಚಿತ್ರಸಂಕೀರ್ಣಗಳೂ 17 ಪ್ರವಾಸ ಚಿತ್ರಗಳೂ 27 ಪ್ರಕೃತಿ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳೂ ಇವೆ. 1951ರಲ್ಲಿ ಆರ್ಥರ್ ರ್ಯಾಂಕನೆ ಮಕ್ಕಳ ಚಿತ್ರಗಳ ಶಾಖೆ ರದ್ದುಗೊಂಡು, ಅದರ ಸ್ಥಾನದಲ್ಲಿ ಚಿಲ್ಡ್ರನ್ಸ್ ಫಿಲ್ಮ್ ಫೌಂಡೇಶನ್ ಎಂಬ ಸಂಸ್ಥೆ ಹುಟ್ಟಿಕೊಂಡಿತು. ಇದು ಲಾಭ ನಿರೀಕ್ಷಣೆಯಿಲ್ಲದ ಸಂಸ್ಥೆಯಾಗಿದ್ದು, ಚಿತ್ರಗಳ ತಯಾರಿಕೆ, ಹಂಚಿಕೆ, ದೇಶವಿದೇಶಗಳಲ್ಲಿ ಅವುಗಳ ಪ್ರದರ್ಶನ, ಮೊದಲಾದವುಗಳ ಪೂರ್ಣ ಹೊಣೆಯನ್ನು ವಹಿಸಿಕೊಂಡಿದೆ. ಆರ್ಥಿಕ ಕಾರಣಗಳಿಂದ ಸಂಸ್ಥೆ ಕಷ್ಟಪಡದಂತೆ, ಬ್ರಿಟಿಷ್ ಫಿಲ್ಮ್ ಫಂಡ್ ಇದಕ್ಕೆ ಧಾರಾಳ ಹಣಕಾಸಿನ ಸಹಾಯವನ್ನು ಒದಗಿಸುತ್ತದೆ. ಮೊದಲನೆಯ 4 ವರ್ಷಗಳಲ್ಲಿ ಇದು 15 ಪೂರ್ಣ ಚಿತ್ರಗಳನ್ನೂ 12 ಎರಡೆರಡು ರೀಲುಗಳ ಚಿತ್ರಗಳನ್ನೂ 4 ಪ್ರವಾಸ ಚಿತ್ರಗಳನ್ನೂ 12 ಒಂದೊಂದು ರೀಲಿನ ಚಿತ್ರಸಂಕೀರ್ಣಗಳನ್ನೂ ನಿರ್ಮಿಸಿ ಪ್ರದರ್ಶನಕಾರರಿಗೆ ಒದಗಿಸಿ ಕೊಟ್ಟಿತು. ಈ ಸಂಸ್ಥೆ ತನ್ನ ಅನುಭವವನ್ನು ಇತರ ದೇಶಗಳಿಗೆ ಕೊಡಲು ಸಿದ್ಧವಿದೆ. ಸೋವಿಯೆತ್ ದೇಶದಲ್ಲೂ ಮಕ್ಕಳಿಗಾಗಿ ಚಲನಚಿತ್ರಗಳ ತಯಾರಿಕೆ ರಭಸದಿಂದ ಸಾಗುತ್ತಿದೆ. ಭಾರತದಲ್ಲಿ ಮಾತ್ರ ಇದು ಇನ್ನೂ ಹೇಳಿಕೊಳ್ಳುವಷ್ಟೂ ಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ. ಇಂಥ ಉದ್ಯಮ ಸುಲಭವಲ್ಲ. ಮಕ್ಕಳಿಗೆ ರುಚಿಸುವಂಥ ಇಲ್ಲವೆ ಯೋಗ್ಯವಾಗಿರುವ ವಿಷಯಗಳ ಆಯ್ಕೆ ಮತ್ತು ಮಕ್ಕಳ ಮನಸ್ಸಿಗೆ ಒಪ್ಪುವಂಥ ರೀತಿಯಲ್ಲಿ ಆರಿಸಿದ ವಿಷಯಗಳ ಯೋಗ್ಯ ನಿರೂಪಣೆ ಆಗಬೇಕಾದರೆ ಮಕ್ಕಳ ಮನಶಾಸ್ತ್ರದ ವಿಶೇಷ ಜ್ಞಾನ ಅಗತ್ಯ. ದೆಹಲಿಯ ಸಾಂಸ್ಕøತಿಕ ಚಲನಚಿತ್ರ ಸಂಸ್ಥೆ (ಇದೊಂದು ಖಾಸಗಿ ಸಂಸ್ಥೆ) 1952ರಲ್ಲಿ ಮಕ್ಕಳ ಚಿತ್ರಗಳ ಒಂದು ಉತ್ಸವವನ್ನು ಮೊದಲು ನೆರವೇರಿಸಿತು. ಇದರ ಫಲವಾಗಿ ದೆಹಲಿ, ಮದ್ರಾಸು, ಮುಂಬಯಿಗಳಲ್ಲಿ ಮಕ್ಕಳ ಚಿತ್ರಮಂದಿರಗಳು ಸ್ಥಾಪಿತವಾದುವು. (ಇವುಗಳಲ್ಲಿ ಒಳ್ಳೆಯ ಡಾಕ್ಯುಮೆಂಟರಿಗಳೂ ಪ್ರದರ್ಶಿಸಲ್ಪಡುತ್ತವೆ). ಅನಂತರ ಇನ್ನೆರೆಡು ಮಕ್ಕಳ ಚಲನಚಿತ್ರೋತ್ಸವಗಳು ನಡೆದವು. ಮಕ್ಕಳ ಚಿತ್ರಗಳ ತಯಾರಿಕೆಯನ್ನು ಸಹಜವಾಗಿ ಫಿಲ್ಮ್ಸ್ ಡಿವಿಷನ್ನು ಕೈಕೊಳ್ಳಬಹುದಾಗಿತ್ತು. ಆದರೆ ಅದರ ಕಾರ್ಯವಿಸ್ತಾರ ಆಗಲೇ ಹೆಚ್ಚಿದ್ದುದರಿಂದ ಸರ್ಕಾರ 1955ರಲ್ಲಿ ಈ ಕಾರ್ಯಕ್ಕಾಗಿ ಬಾಲ ಚಿತ್ರ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ಮಾತ್ರವಲ್ಲ, ಈ ಕ್ಷೇತ್ರದಲ್ಲಿ ತುಂಬ ಕೆಲಸ ಮಾಡಿ ಹೆಸರು ಪಡೆದ ಇಂಗ್ಲೆಂಡಿನ ಮಿಸ್ ಮೇರಿ ಫೀಲ್ಡರನ್ನು ಈ ದೇಶಕ್ಕೆ ಬರಮಾಡಿಕೊಂಡು ಅವರಿಂದ ಅನೇಕ ಉತ್ತಮ ಸಲಹೆಗಳನ್ನು ಪಡೆದುಕೊಂಡಿತು. ಬಾಲಚಿತ್ರ ಸಮಿತಿ ಈಗ 6 ರಿಂದ 11 ವರ್ಷದ ಮಕ್ಕಳಿಗೂ 11ರಿಂದ 16 ವರ್ಷದ ಮಕ್ಕಳಿಗೂ ಸರಿಹೋಗುವಂತೆ ಎರಡು ಅಂತಸ್ತಿನ ಚಿತ್ರಗಳನ್ನು ತಯಾರಿಸುವ ಹೊಣೆ ಹೊತ್ತಿದೆ. ಈವರೆಗೆ ದೇಶದಲ್ಲಿ ನಿರ್ಮಿಸಲ್ಪಟ್ಟ ಇಂಥ ಚಿತ್ರಗಳು ಯಾವುವೆಂದರೆ-ಚಾರ್ ದೋಸ್ತ್ (ಇಬ್ಬರು ಹುಡುಗರೂ ಇಬ್ಬರು ಹುಡುಗಿಯರೂ ಕೂಡಿ ಒಂದು ಕರಡಿಯ ಮೇಲಿಟ್ಟ ಮಮತೆಯನ್ನು ಕುರಿತು), ಬಾಲರಾಮಾಯಣ (ದೊಡ್ಡವರ ಚಲನಚಿತ್ರಗಳಿಂದ ರಾಮಾಯಣಕಥೆಯ ಸನ್ನಿವೇಷಗಳನ್ನು ಆರಿಸಿ ಸಂಯೋಜಿಸಿದ ಚಿತ್ರ), ರಾಮಾಶಾಸ್ತ್ರೀ ಕಾ ನ್ಯಾಯ್ (ಒಬ್ಬ ಹಳ್ಳಿಯ ಹುಡುಗ ಬೆಳೆದು ಪೇಶ್ವೆಯರ ಆಳಿಕೆಯಲ್ಲಿ ಶ್ರೇಷ್ಠ ನ್ಯಾಯಾಧೀಶನಾಗಿ ನ್ಯಾಯವಿತರಣೆಯನ್ನು ಹೇಗೆ ಮಾಡುತ್ತಿದ್ದನೆಂದು ವಿವರಿಸುವ ಚಿತ್ರ. ಇದು ವೆನಿಸಿನ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಬಹುಮಾನ ಪಡೆದಿದೆ), ಮತ್ತು ಸ್ಕೌಟ್ ಕ್ಯಾಂಪ್, ಅಕ್ಬರನ ಬಾಲ್ಯವನ್ನು ಚಿತ್ರಿಸುವ ಗುಲಾಬ್ ಕಾ ಫೂಲ್ ಚಿತ್ರ, ಮತ್ತು ಹರಿಯಾ, ಗಂಗಾಕೀ ಲಹರೇ ಎಂಬ ಚಿತ್ರಗಳು ಸಿದ್ಧವಿವೆ. ವಿ. ಶಾಂತಾರಾಮ್ ಫೂಲ್ ಔರ್ ಕಲಿಯಾ (ಹೂ ಮತ್ತು ಮೊಗ್ಗೆಗಳು) ಎಂಬ ಮಕ್ಕಳ ಚಿತ್ರವನ್ನು ನಿರ್ಮಿಸಿದ್ದಾರೆ. ಈಚೆಗೆ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಮಕ್ಕಳಿಗಾಗಿಯೇ ಬಾಲಭವನದಲ್ಲಿ ಚಿತ್ರಗಳನ್ನು ತರಸಿ ಪ್ರದರ್ಶಿಸುವ ವ್ಯವಸ್ಥೆ ಏರ್ಪಟ್ಟಿದೆ. (ಪಿ.ಆರ್‍ಎ.) III ಚಲನಚಿತ್ರ ನಿರ್ಮಾಣ ತಂತ್ರ ಚಲನಚಿತ್ರಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು : 1 ಕಥಾ ನಿರೂಪಣೆ ಉಳ್ಳವು, 2 ಕಥೆಯನ್ನೇ ಪ್ರಧಾನವಾಗಿ ಅವಲಂಬಿಸದೆ ಇರುವಂಥವು. ಸಾಕ್ಷಿಚಿತ್ರಗಳು, ಶೈಕ್ಷಣಿಕ ಚಿತ್ರಗಳು, ವಾರ್ತಾಚಿತ್ರಗಳು ಇಂಥವು ಎರಡನೆಯ ವರ್ಗಕ್ಕೆ ಸೇರಿದುವು. ಕಥಾನಿರೂಪಣೆಯುಳ್ಳ ಚಲನಚಿತ್ರಗಳ ಪ್ರಧಾನ ಉದ್ದೇಶ ಮನೋರಂಜನೆಯಾದರೆ ಎರಡನೆಯ ವರ್ಗದ ಚಿತ್ರಗಳ ಮುಖ್ಯ ಗುರಿ, ಜ್ಞಾನಪ್ರಸಾರ, ಉದ್ದೇಶ ಭಿನ್ನತೆಯಿಂದಾಗಿ ಇವುಗಳ ರಚನಾತಂತ್ರದಲ್ಲೂ ವ್ಯತ್ಯಾಸಗಳು ಏರ್ಪಟ್ಟಿವೆ. ಕಥಾಚಿತ್ರದಲ್ಲಿ - ಅದರ ಹೆಸರೇ ಸೂಚಿಸುವಂತೆ-ಕಥೆ ಪ್ರಧಾನ ಅಂಶ : ಯಾವುದಾದರೊಂದು ಕಥಾವಸ್ತುವನ್ನು ಅವಲಂಬಿಸಿ ಅದರ ನಿರ್ಮಾಣ. ಇಂಥ ಚಿತ್ರದ ಕಥೆ ಹೊಸದಾಗಿ ಕಲ್ಪಿಸಿದ್ದಿರಬಹುದು ಇಲ್ಲವೆ ಪೂರ್ವಪ್ರಚಲಿತ ಕಥೆಯಾಗಿರಬಹುದು. ಆಂದರೆ ಪರಂಪರಾಗತ ಪುರಾಣ, ದಂತಕಥೆಗಳನ್ನವಲಂಬಿಸಿರಬಹುದು, ಅಥವಾ ಪ್ರಕಟಿತ ಕಥೆ ಕಾದಂಬರಿ, ನಾಟಕ, ಕಥಾಕವನ, ಪ್ರಸಿದ್ಧ ವ್ಯಕ್ತಿಯ ಜೀವನ ಚರಿತ್ರೆ ಆಗಿರಬಹುದು. ಹೀಗೆ ಯಾವ ವರ್ಗಕ್ಕೇ ಸೇರಿದ್ದಾಗಿರಲಿ ಅದು ಚಲನಚಿತ್ರಕ್ಕೆ ಆಕರವಾಗಬಹುದು : ಅಷ್ಟೆಯೆ. ಈ ಆಕರದ ಮೇಲೆ ಆಧಾರಪಟ್ಟು ಕಥೆಯ ಹಂದರವನ್ನು ಚಲನಚಿತ್ರ ನಿರ್ಮಾಣಕ್ಕೆ ಒದಗುವಂತೆ ಅಳವಡಿಸಿಕೊಳ್ಳಬೇಕಾಗುತ್ತದೆ. ಚಲನಚಿತ್ರ ನಿರ್ಮಾಣದಲ್ಲಿ ಕಥೆಯ ಆಯ್ಕೆ ಒಂದು ಮುಖ್ಯ ಘಟ್ಟ. ಚಿತ್ರಕ್ಕೆ ಆರಿಸಿಕೊಳ್ಳುವ ಕಥೆ ಇಂಥ ರೀತಿಯದೇ ಆಗಿರಬೇಕೆಂಬ ನಿಯಮವೇನೂ ಇಲ್ಲ. ಆದರೂ ತಾನು ನಿರ್ಮಿಸಲಿರುವ ಚಿತ್ರಕ್ಕೆ ಕಥೆಯನ್ನು ಆರಿಸುವಾಗ ಚಲನಚಿತ್ರ ನಿರ್ಮಾಪಕ ಕೆಲವು ಅಂಶಗಳನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಕಥಾಚಿತ್ರಗಳನ್ನು ತಯಾರಿಸುವುದು ಪ್ರಧಾನವಾಗಿ ಲಾಭಾರ್ಜನೆಯ ದೃಷ್ಟಿಯಿಂದ ಇದು ಸಹಜವೇ. ಕಾರಣ ಇಂಥ ಚಲನಚಿತ್ರದ ತಯಾರಿಕೆಗಾಗಿ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಬೇಕಾಗುತ್ತದೆ. ಆದ್ದರಿಂದ ಚಲನಚಿತ್ರ ನಿರ್ಮಾಪಕ ಆ ಬಂಡವಾಳ ಮತ್ತು ಅದರ ಮೇಲೆ ತಕ್ಕಷ್ಟು ಲಾಭ ದೊರೆಯುವುದಕ್ಕೆ ಸಹಾಯಕವಾದ ಅಂಶಗಳನ್ನು ಲಕ್ಷ್ಯದಲ್ಲಿಟ್ಟುಕೊಂಡೇ ಮುಂದುವರಿಯುತ್ತಾನೆ. ಆದ್ದರಿಂದ ಅವನು ತನ್ನ ಚಿತ್ರ ಪ್ರದರ್ಶಿತವಾಗಲಿರುವ ಪ್ರದೇಶದಲ್ಲಿನ ಜನರ ಅಭಿರುಚಿ ಮನೋವೃತ್ತಿ, ಅವರಿಗೆ ಪ್ರಿಯವಾದ, ಅಪ್ರಿಯವಾದ ಅಂಶಗಳು ಮುಂತಾದುವನ್ನು ಗಮನಿಸಿ ಅವರಿಗೆ ಹಿಡಿಸಬಹುದಾದ ಕಥೆಯನ್ನು ಆರಿಸಿಕೊಳ್ಳುತ್ತಾನೆ. ಇದು ಸಾಮಾನ್ಯ ನಿಯಮವಾದರೂ ಇದಕ್ಕೆ ಅಪವಾದವೆನಿಸುವಂಥ ಕಥೆಗಳ ಆಯ್ಕೆಯೂ ಒಮ್ಮೊಮ್ಮೆ ನಡೆಯುವುದುಂಟು. ಇಂಥ ಕಥೆಗಳ ಮೇಲೆ ಆಧಾರಪಟ್ಟ ಚಲನಚಿತ್ರಗಳು ಒಮ್ಮೊಮ್ಮೆ ಲಾಭದಾಯಕವಾಗುವುದೂ ಉಂಟು. ಕಥೆಯನ್ನು ಆರಿಸಿದ ಮೇಲೆ ಮುಂದಿನ ಕಾರ್ಯ ಅದನ್ನು ಚಲನಚಿತ್ರಕ್ಕೆ ಅಳವಡಿಸುವುದು. ಈ ಅಳವಡಿಕೆಯನ್ನು ಚಲನಚಿತ್ರನಾಟಕ (ಸ್ಕ್ರೀನ್ ಪ್ಲೇ) ಎಂದು ಕರೆಯುತ್ತಾರೆ. ಚಲನಚಿತ್ರ ರಚನೆಯಲ್ಲಿ ಇದರ ಸ್ಥಾನ-ಒಂದು ಕಟ್ಟಡದ ನಿರ್ಮಾಣದಲ್ಲಿ ನೀಲನಕಾಶೆಗೆ ಇರುವ ಸ್ಥಾನಕ್ಕೆ ಸಮಾನವಾದುದು. ಅಂತಿಮ ರೂಪದಲ್ಲಿ ಚಲನಚಿತ್ರ ಹೇಗೆ ಇರಬೇಕು ಎಂಬುದರ ಸ್ಪಷ್ಟನಿರೂಪಣೆ ಇದರಲ್ಲಿ ಇರುತ್ತದೆ. ಇದನ್ನು ಸಿದ್ಧಗೊಳಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ಚಲನಚಿತ್ರ ನಿರ್ಮಾಣಕ್ಕಾಗಿ ತೊಡಗಿಸಬಹುದಾದ ಒಟ್ಟು ಬಂಡವಾಳದ ಮೊತ್ತ; ಇನ್ನೊಂದು ಅಂಶ-ಚಿತ್ರನಿರ್ಮಾಣದ ಸಂಬಂಧದಲ್ಲಿ ಒದಗಿಸಬಹುದಾದ ತಾಂತ್ರಿಕ ಸೌಲಭ್ಯಗಳು; ಹಾಗೆಯೇ ದೊರೆಯಬಹುದಾದ ನಟನಟಿಯರ ವ್ಯಕ್ತಿತ್ವ, ಕಲಾನೈಪುಣ್ಯ. ಚಲನಚಿತ್ರನಾಟಕ ರಚನೆ ಸಾಮಾನ್ಯವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ. ಅದರ ರೂಪರೇಖೆಯನ್ನು ನಿರ್ಧರಿಸುವುದು ಮೊದಲ ಹಂತ. ಅಂದರೆ ಚಲನಚಿತ್ರಕ್ಕಾಗಿ ಆರಿಸಿದ ಕಥಾವಸ್ತುವನ್ನು ಆಧಾರವಾಗಿಟ್ಟುಕೊಂಡು ಕಥೆಯ ಕ್ರಿಯೆ, ಘಟನಾವಳಿಗಳಿಗೆ ವಿಶೇಷ ಲಕ್ಷ್ಯ ಕೊಟ್ಟು ಚಲನಚಿತ್ರನಾಟಕದ ಸ್ವರೂಪ- ಇವನ್ನು ನಿರ್ಧರಿಸಬೇಕು.

ಎರಡನೆಯ ಹಂತ- ಈ ರೂಪರೇಖೆಯ ವಿವರವಾದ ನಿರೂಪಣೆ. ಅಂತಿಮವಾಗಿ ಚಿತ್ರ ಯಾವ ರೂಪವನ್ನು ತಾಳುತ್ತದೆ ಎಂಬುದರ ಮುನ್ನೋಟ ಇದರಲ್ಲಿರುತ್ತದೆ.

ಮೂರನೆಯ ಹಂತವೇ ಸಿದ್ಧ ಚಲನಚಿತ್ರನಾಟಕ. ನಿರೂಪಣೆಯಲ್ಲಿರುವ ಅಂಶಗಳ ಚಿತ್ರಣ ಹೇಗೆ ನಡೆಯಬೇಕು ಎಂಬುದರ ವಿವರವೆಲ್ಲ ಇದರಲ್ಲಿರುತ್ತದೆ. ಅಂದರೆ ದೃಶ್ಯ, ಉಪದೃಶ್ಯ ವಿಭಜನೆ, ಕ್ರಿಯಾಸ್ಥಾನಗಳ ವಿವರ, ಅವುಗಳಲ್ಲಿ ಬರುವ ಪಾತ್ರಗಳು, ಆ ಪಾತ್ರಗಳ ಸಂಭಾಷಣೆ, ರಂಗಚಲನೆ, ಪಾತ್ರಗಳ ಅಭಿನಯಕ್ಕೆ ಸಂಬಂಧಿಸಿದ ಸೂಚನೆಗಳು, ಚಿತ್ರೀಕರಣದ ಸ್ವರೂಪ, ಘಟನೆಗಳ ಭಾವಪೋಷಣೆಗೆ ಸಹಕಾರಿಯಾದ ಅಂಶಗಳು ಮುಂತಾದ ನಾನಾ ಅಂಶಗಳ ಸ್ಪಷ್ಟ ಉಲ್ಲೇಖ ಇದರಲ್ಲಿ ಇರುತ್ತವೆ. ಅಂದರೆ ಚಿತ್ರ ನಿರ್ಮಾಣ ಹೇಗೆ ನಡೆಯಬೇಕೆಂಬುದರ ಬಗೆಗೆ ಅದರ ವಿವಿಧ ಶಾಖೆಗಳಿಗೆ ಉಪಯುಕ್ತವಾದ ಸೂಚನೆಗಳೆಲ್ಲವೂ ಇದರಲ್ಲಿ ಅಡಕವಾಗಿರುತ್ತದೆ. ಆದ್ದರಿಂದ ಇದನ್ನ ಚಿತ್ರನಿರ್ಮಾಣ ಕೈಪಿಡಿ ಅಥವಾ ಚಿತ್ರನಿರ್ಮಾಣ ಸೂಚಿ ಎನ್ನಬಹುದು.

ಇದರ ರಚನೆ ಸುಲಭವಾದ ಕೆಲಸವಲ್ಲ. ಇದೊಂದು ಕಲ್ಪನಾಶೀಲ ಕಲಾಸೃಷ್ಟಿ. ಸಂಭಾಷಣೆ, ಅಭಿನಯ, ಚಲನೆ, ಕ್ರಿಯಾಕ್ಷೇತ್ರ ಸಜ್ಜಿಕೆ, ದೀಪ್ತಿ, ಚಿತ್ರೀಕರಣ, ಧ್ವನಿ ಮುದ್ರಣ ಮುಂತಾದ ಹಲವಾರು ಅಂಶಗಳ ಪರಸ್ಪರ ಸಮನ್ವಯವನ್ನು ಪರಿಭಾವಿಸಿಕೊಂಡು ಚಲನಚಿತ್ರನಾಟಕವನ್ನು ರಚಿಸಬೇಕಾಗುತ್ತದೆ. ಆದ್ದರಿಂದ ಇದನ್ನು ರಚಿಸುವವನಿಗೆ ಸಾಹಿತ್ಯದಲ್ಲಿ ಪರಿಣಿತಿ, ಚಲನಚಿತ್ರ ಕಲೆ, ತಂತ್ರಗಳ ತಿಳಿವಳಿಕೆಗಳು ಮಾತ್ರವಲ್ಲದೆ, ಕಲ್ಪನಾಶಕ್ತಿಯೂ ಇರಬೇಕಾಗುತ್ತದೆ. ಈ ಎಲ್ಲ ಅರ್ಹತೆಗಳು ಇದ್ದರೂ ಚಲನಚಿತ್ರ ನಾಟಕವನ್ನು ರಚಿಸುವವನು ತನ್ನ ಕಾರ್ಯ ನಿರ್ವಹಣೆಯಲ್ಲಿ ನಿರ್ಮಾಪಕ, ನಿರ್ದೇಶಕ ಮತ್ತು ವಿವಿಧ ತಾಂತ್ರಿಕ ಶಾಖೆಗಳ ನೆರವನ್ನು ಪಡೆಯುವುದು ಅನೇಕ ಸಂದರ್ಭಗಳಲ್ಲಿ ಅನಿವಾರ್ಯವಾಗುತ್ತದೆ.

ಕಥಾಚಿತ್ರ ನಿರ್ಮಾಣದ ಸಂಬಂಧದಲ್ಲಿ, ಪೂರ್ವಭಾವಿಯಾಗಿ, ಚಲನಚಿತ್ರ ನಾಟಕವನ್ನು ಸಿದ್ಧಪಡಿಸುವುದು ಪದ್ಧತಿ. ಆದರೆ ಸಾಕ್ಷ್ಯ ಚಿತ್ರಗಳ ನಿರ್ಮಾಣದ ವೈಖರಿಯೇ ಬೇರೆ. ಅವುಗಳ ನಿರ್ಮಾಪಕ, ನಿರ್ದೇಶಕ ತಂತ್ರಜ್ಞರು ತಮ್ಮ ಚಿತ್ರವಸ್ತುವಿಗೆ ಸಂಬಂಧಿಸಿದ ಸ್ಥಳಗಳಿಗೆ ಹೋಗಿ ಅಲ್ಲಿ ತಾವು ಕಂಡ ದೃಶ್ಯ, ಸನ್ನಿವೇಶ, ಜನ ಜೀವನ ಪರಿಸ್ಥಿತಿ ಮುಂತಾದುವನ್ನು ಚಿತ್ರಿಸಿಕೊಂಡು, ಅವಶ್ಯವೆನಿಸಿಸುವ ಧ್ವನಿ, ಮಾತುಗಳನ್ನು ಮುದ್ರಿಸಿಕೊಂಡು ಬರುತ್ತಾರೆ. ಅನಂತರ ತಮಗೆ ದೊರೆತ ಎಲ್ಲ ಸರಕನ್ನೂ ಪರಿಶೀಲಿಸಿ, ಅದಕ್ಕೆ ಇಂದು ರೂಪ ಕೊಟ್ಟು, ಸಂದರ್ಭೋಚಿತವಾದ ವ್ಯಾಖ್ಯಾನವನ್ನು ಸೇರಿಸಿ ಚಿತ್ರವನ್ನು ರೂಪಿಸುತ್ರಾರೆ. ಇಂಥ ಚಿತ್ರಗಳಿಗೆ ಪ್ರಕೃತಿಸಿದ್ಧ ನ್ಯೆಜತೆಗೆ ಪ್ರಾಧಾನ್ಯವಿದೆ.

ಕಥಾಚಿತ್ರಗಳಲ್ಲಿ ಮೂಲಕಥಾನಕವನ್ನು ಅಥವಾ ಕಥಾವಸ್ತುವನ್ನು ಚಲನಚಿತ್ರಕ್ಕೆ ಅಳವಡಿಸುವಾಗ ಲಕ್ಷ್ಯದಲ್ಲಿಟ್ಟುಕೊಂಡಿರಬೇಕಾದ ಕೆಲವು ಅಂಶಗಳಿವೆ. ಅವುಗಳಲ್ಲಿ ಮುಖ್ಯವಾದುವು ಎಂದರೆ ಚಲನಚಿತ್ರದಲ್ಲಿ ನಿರಂತರ ಕ್ರಿಯೆಗೆ ಅವಕಾಶವಿರಬೇಕು, ಕಥೆಯ ಬೆಳವಣಿಗೆಯ ಧಾಟಿ ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸುತ್ತಿರಬೇಕು ಎಂಬ ಎರಡು ಅಂಶಗಳು. ಪ್ರೇಕ್ಷಕರ ಗಮನವನ್ನು ಸೆಳೆದು ಹಿಡಿದಿಟ್ಟಿರಲು ಈ ಲಕ್ಷಣಗಳು ಸಹಕಾರಿಯಾಗುತ್ತವೆ.

ಚಿತ್ರನಿರ್ಮಾಣದಲ್ಲಿ ನಿರ್ದೇಶಕ ಕೇಂದ್ರವ್ಯಕ್ತಿ, ಅಷ್ಟು ಮಾತ್ರವಲ್ಲ ಅವನು ಚಲನಚಿತ್ರಬ್ರಹ್ಮ, ಪ್ರದರ್ಶನಕ್ಕೆ ಸಿದ್ಧವಾದಾಗ ತನ್ನ ಚಿತ್ರ ಯಾವ ಅಂತಿಮ ರೂಪವನ್ನು ತಾಳಿರುತ್ತದೆ ಎಂಬುದರ ಕಲ್ಪನೆಯನ್ನು ಅವನು ಸ್ಪಷ್ಟವಾಗಿ ಖಚಿತವಾಗಿ ರೂಪಿಸಿಕೊಂಡಿರುತ್ತಾನೆ. ಚಿತ್ರ ಖಂಡ ಖಂಡವಾಗಿ ರೂಪುಗೊಳ್ಳುತ್ತಿರುವಾಗಲೇ ಇಡೀ ಚಿತ್ರದಲ್ಲಿ ಆ ಖಂಡದ ಸ್ಥಾನವೇನು, ಪ್ರಾಶಸ್ತ್ಯವೇನು ಎಂಬುದರ ಅರಿವು ಅವನಿಗೆ ಇರುತ್ತದೆ. ಆದ್ದರಿಂದ ಒಂದೊಂದು ಚಿತ್ರಖಂಡವನ್ನೂ ಧ್ವನಿ ಖಂಡವನ್ನೂ ತನ್ನ ಇಡೀ ಚಿತ್ರದ ಕಲ್ಪನೆಗೆ ಹೊಂದಿಕೊಳ್ಳುವಂತೆ ರೂಪಿಸುವುದು ಅವನ ಕೆಲಸ. ಇದರಿಂದಾಗಿ ಇಡೀ ಚಿತ್ರನಿರ್ಮಾಣಕಾರ್ಯ, ಅದರ ವಿವಿಧ ಹಂತಗಳಲ್ಲಿ ವಿವಿಧ ಶಾಖೆಗಳಲ್ಲಿ ಅವನ ನಿರ್ದೇಶನ, ನಿಯಂತ್ರಣಗಳಿಗೆ ಒಳಪಟ್ಟು ನಡೆಯುತ್ತದೆ.

ಚಲನಚಿತ್ರ ನಾಟಕ ಸಿದ್ಧವಾಗುತ್ತಿರುವಾಗ ಅಥವಾ ಅದು ಸಿದ್ಧವಾದ ಮೇಲೆ ಚಿತ್ರದಲ್ಲಿ ಬರುವ ವಿವಿಧ ಪಾತ್ರಗಳಿಗೆ ನಟನಟಿಯರನ್ನು ಆರಿಸುವುದರಲ್ಲಿ ನಿರ್ದೇಶಕನ ಪಾತ್ರ ಹಿರಿದು, ಚಿತ್ರನಿರ್ಮಾಪಕನೂ ಈ ಸಂಬಂಧದಲ್ಲಿ ತನ್ನ ಪ್ರಭಾವವನ್ನು ಬೀರುತ್ತಾನೆ.

ಚಿತ್ರಕ್ಕೆ ಸಂಬಂಧಿಸಿದಂತೆ ನಟನಟಿಯರಿಗೆ ಆಂಗಿಕ ವಾಚಿಕಾಭಿನಯಗಳಲ್ಲಿ ತರಬೇತಿ ಕೊಡುವುದು ; ಚಿತ್ರಕಥೆಯ ಕಾಲ ಸ್ಥಳ ಸನ್ನಿವೇಶಗಳಿಗೆ ಅನುಗುಣವಾಗಿರುವಂತೆ ಕ್ಷೇತ್ರಸಜ್ಜಿಕೆ, ನಿರ್ಮಾಣಕ್ಕೆ ಸೂಚನೆ ಕೊಡುವುದು, ಹೊರಾಂಗಣ ಕ್ಷೇತ್ರ ಚುನಾವಣೆ, ಪಾತ್ರಧಾರಿಗಳು ಸಂದರ್ಭೋಚಿತವಾಗಿ ಧರಿಸಬೇಕಾದ ಉಡುಗೆ ತೊಡಿಗೆ, ಆಭರಣ, ಅಲಂಕಾರ ಮುಂತಾದುವುಗಳ ವಿವರಗಳ ನಿರ್ಣಯ-ಇವೆಲ್ಲ ನಿರ್ದೇಶಕನ ಕಾರ್ಯರಂಗಕ್ಕೆ ಸೇರಿದ ಕರ್ತವ್ಯಗಳು.

ಹಾಗೆಯೇ ಚಲನಚಿತ್ರದ ವಿವಿಧ ಭಾಗಗಳಲ್ಲಿ ಪ್ರೇಕ್ಷಕರ ಮೇಲೆ ತಾನು ಉಂಟು ಮಾಡಬಯಸುವ ಪರಿಣಾಮ ಏನು ಎಂಬುದನ್ನು ನಟನಟಿಯರಿಗೂ ತಂತ್ರಜ್ಞರಿಗೂ ಸ್ಪಷ್ಟವಾಗಿ ತಿಳಿಯ ಹೇಳಿ ಅವರು ಅಂಥ ಪರಿಣಾಮ ಸಾಧನೆಯಲ್ಲಿ ತನ್ನೊಡನೆ ಸಹಕರಿಸುವಂತೆ ಮಾಡುವುದೂ ನಿರ್ದೇಶಕನ ಕರ್ತವ್ಯ. ಹೀಗೆ ವಿವಿಧ ವೃತ್ತಿ ಮನೋವೃತ್ತಿಗಳ ಹಲವಾರು ಜನ ತಮ್ಮ ತಮ್ಮ ಕೆಲಸಗಳನ್ನು ತಾನು ಅಪೇಕ್ಷಿಸುವ ರೀತಿಯಲ್ಲಿ ಸಕಾಲದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಪ್ರೇರೇಪಿಸುವ ವ್ಯಕ್ತಿತ್ವ, ಚಾಕಚಕ್ಯ ನಿರ್ದೇಶಕನಿಗೆ ಇರಬೇಕು. ಹಾಗೆಯೇ ತನ್ನ ತಂಡದ ವಿವಿಧ ವ್ಯಕ್ತಿಗಳಲ್ಲಿ ಪರಸ್ಪರ ಸಹಕಾರ, ಸಾಮರಸ್ಯಗಳನ್ನು ಸಾಧಿಸುವ ಶಕ್ತಿ ದಕ್ಷತೆಗಳು ಕೂಡ ಅವನಲ್ಲಿ ಇರಬೇಕಾದ್ದು ಅಗತ್ಯ.

ನಿರ್ದೇಶಕ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಅವನಿಗೆ ನೆರವು ನೀಡಲು ಹಲವಾರು ಜನರಿರುತ್ತಾರೆ : ಕ್ಷೇತ್ರ ಸಜ್ಜಿಕೆ ನಕ್ಷೆಗಳನ್ನು ರಚಿಸಿ ಸಜ್ಜಿಕೆಗಳನ್ನು ರಚಿಸಲು ಕಲಾನಿರ್ದೇಶಕ, ಚಿತ್ರಣಕ್ಕೆ ಕ್ಯಾಮರಾಮ್ಯಾನ್, ಸಂಗೀತ ನಿರ್ವಹಣೆಗೆ ಸಂಗೀತ ನಿರ್ದೇಶಕ ; ಪ್ರಸಾಧನ ನಿರ್ವಹಣಕ್ಕಾಗಿ ಮೇಕಪ್ ಮ್ಯಾನ್, ಆಹಾರ್ಯಕಗಳ ಸಂಬಂಧದಲ್ಲಿ ಕಾಸ್ಟ್ಯೂಮ್ ಮ್ಯಾನ್-ಹೀಗೆ. ಆದರೂ ಇವರೆಲ್ಲರ ಕೆಲಸದ ಬಗ್ಗೆ ಸರಿಯಾದ ಸಲಹೆಸೂಚನೆಗಳನ್ನೂ ಕೊಡುವುದು, ಮೇಲ್ವಿಚಾರಣೆ ನಡೆಸುವುದು ಕೂಡ ನಿರ್ದೇಶಕನ ಹೊಣೆ.

ಆದ್ದರಿಂದ ಚಿತ್ರನಿರ್ಮಾಣದ ವಿವಿಧ ಶಾಖೆಗಳಲ್ಲಿ, ವಿವಿಧ ಹಂತಗಳಲ್ಲಿ ಯಾವ ಕೆಲಸ ಹೇಗೆ ಆಗಬೇಕು ಎಂಬುದರ ಸ್ಪಷ್ಟ, ಖಚಿತ ತಿಳಿವಳಿಕೆಯೂ ಎಲ್ಲ ಕಾರ್ಯಗಳನ್ನೂ ತಾನು ನಿರ್ಧರಿಸಿದ ರೀತಿಯಲ್ಲಿ ರೂಪುಗೊಳಿಸುವ ಶಕ್ತಿಸಾಮಥ್ರ್ಯಗಳೂ ನಿರ್ದೇಶಕನಿಗಿರಬೇಕು.

ಚಿತ್ರಣ, ಧ್ವನಿಮುದ್ರಣಗಳು ನಡೆಯುವಾಗ ಹಾಗೂ ಚಿತ್ರದ ಪ್ರದರ್ಶನ ಪ್ರತಿಯನ್ನು ಸಿದ್ಧಗೊಳಿಸಲು ಚಿತ್ರ ಮತ್ತು ಧ್ವನಿಖಂಡಗಳ ಸಂಕಲನ ನಡೆಯುವಾಗ, ಧ್ವನಿಪಟ್ಟಿಕೆಗಳ ಪುನರ್‍ಧ್ವನಿಲೇಖನ ನಡೆಯುವಾಗ ನಿರ್ದೇಶಕ ಅವುಗಳ ಮೇಲ್ವಿಚಾರಣೆ ನಡೆಸುವುದೂ ಅವಶ್ಯ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡುವುದೂ ಅಗತ್ಯ.

ಹೀಗೆ ಚಿತ್ರದ ಮೂಲಕಥೆಯನ್ನು ಆರಿಸುವುದರಿಂದ ಆರಂಭಿಸಿ ಚಿತ್ರ ಮೂಲ ಪ್ರದರ್ಶನ ಪ್ರತಿ ಸಿದ್ಧವಾಗುವ ವರೆಗೆ ಎಲ್ಲ ಹಂತಗಳಲ್ಲೂ ವಿವಿಧ ಕಾರ್ಯಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ನಿರ್ದೇಶಕನ ಕರ್ತವ್ಯವಾಗುತ್ತದೆ.

ಎರಡು ಮುಖಗಳ ವ್ಯಕ್ತಿತ್ವ ನಿರ್ದೇಶಕನದು. ಮೊದಲನೆಯದಾಗಿ ಅವನು ಸೃಜನಶೀಲ ಕಲಾವಿದ. ಈ ನಿಲುವಿನಲ್ಲಿ ಅವನು ತಾನು ರೂಪಿಸಬೇಕಾದ ಚಿತ್ರದ ಪೂರ್ಣಸ್ವರೂಪವನ್ನು ಕುರಿತು ಸ್ಪಷ್ಟಕಲ್ಪನೆಯನ್ನು ರೂಢಿಸಿಕೊಳ್ಳುತ್ತಾನೆ. ಚಲನಚಿತ್ರದ ರೂಪದಲ್ಲಿ ಆ ಕಲ್ಪನೆಗೆ ಮೂರ್ತರೂಪ ಕೊಡುತ್ತಾನೆ. ಎರಡನೆಯದಾಗಿ ಅವನು ಹರಿತವಾದ ವಿಮರ್ಶಕ ಶಕ್ತಿಯುಳ್ಳ ಹಾಗೂ ರಸಜ್ಞನಾದ ಪ್ರೇಕ್ಷಕ; ಚಲನಚಿತ್ರದ ಭಾವೀಪ್ರೇಕ್ಷಕವರ್ಗದ ಉತ್ತಮ ಪ್ರತಿನಿಧಿ. ಈ ಪಾತ್ರದಲ್ಲಿ ಅವನು ಚಿತ್ರದ ವಿವಿಧ ಭಾಗಗಳು, ವಿವಿಧ ಅಂಗಗಳು ಪ್ರೇಕ್ಷಕ ವರ್ಗದ ಮೇಲೆ ಉಂಟು ಮಾಡಬಹುದಾದ ಪರಿಣಾಮವೇನು, ಪ್ರತಿಕ್ರಿಯೆಯೇನು ಎಂಬುದನ್ನು ಆಲೋಚಿಸಿ ಅದು ತನ್ನ ಮೂಲ ಕಲ್ಪನೆಗೆ, ನಿರೀಕ್ಷೆಗೆ ಸರಿಯಾಗಿದೆಯೇ, ಇಲ್ಲವೆ ಎಂಬುದನ್ನು ವಿವೇಚಿಸುತ್ತಾನೆ. ಅಸಮರ್ಪಕವೆನಿಸಿದಾಗ ಅದನ್ನು ಮತ್ತೆ ಸಮರ್ಪಕವಾಗಿ ರೂಪಿಸಲು ಪ್ರಯತ್ನಿಸುತ್ತಾನೆ.

ನಿರ್ದೇಶಕನನ್ನು ಕುರಿತು ಈವರೆಗೆ ಹೇಳಿರುವ ವಿವರಣೆಯಿಂದ ಅವನು ಬಹುಶ್ರುತನೂ ಕಲಾಭಿಜ್ಞನೂ ವಿಮರ್ಶಕ ಮನೋವೃತ್ತಿಯವನೂ ಕಾರ್ಯದಕ್ಷನೂ ಆಗಿರಬೇಕೆಂಬುದು ಸ್ಪಷ್ಟ.


ಚಿತ್ರರಚನೆಗೆ ಸಂಬಂಧಿಸಿದ ಪೂರ್ವಭಾವಿ ವ್ಯವಸ್ಥೆಗಳಾದ ಮೇಲೆ, ಚಿತ್ರೀಕರಣ ಅಂದರೆ ಚಿತ್ರನಾಟಕದ ದೃಶ್ಯ, ಉಪದೃಶ್ಯಗಳನ್ನು ಚಿತ್ರಕ್ಯಾಮರದ ಮೂಲಕ ಚಿತ್ರಿಸಿಕೊಳ್ಳುವುದು-ಆರಂಭವಾಗುತ್ತದೆ. ಈ ಚಿತ್ರೀಕರಣ ನಡೆಯುತ್ತಿರುವಾಗಲೇ ಸಂಬಂಧಿಸಿದ ದೃಶ್ಯ, ಉಪದೃಶ್ಯಗಳಲ್ಲಿ ಬರುವ ಮಾತುಗಳ ಧ್ವನಿ ಮುದ್ರಣವೂ ನಡೆಯುತ್ತದೆ.

ಚಿತ್ರಗ್ರಹಣ ಯಂತ್ರ, ಧ್ವನಿಮುದ್ರಣ ಯಂತ್ರ ಇವೆರಡನ್ನೂ ಏಕಕಾಲದಲ್ಲಿ ಚಾಲು ಮಾಡಿದಾಗ ಇವುಗಳಲ್ಲಿರುವ ಫಿಲ್ಮ್ ಸುರುಳಿಗಳು ಏಕವೇಗದಲ್ಲಿ ನಡೆಯುತ್ತವೆ. ಇದರಿಂದಾಗಿ ನಟನಟಿಯರು ಮಾತಾನಾಡುವಾಗ ಉಂಟಾಗುವ ತುಟಿಗಳ ಚಲನೆ ಮತ್ತು ಅವರ ಬಾಯಿಂದ ಹೊರಬೀಳುವ ಮಾತುಗಳ ಉಚ್ಛಾರ ಶಬ್ದಕ್ಕೂ ಸಾಮರಸ್ಯ ಏರ್ಪಡುತ್ತದೆ. ಇವೆರೆಡು ಫಿಲ್ಮ್‍ಗಳನ್ನೂ ಸರಿಯಾಗಿ ಜೋಡಿಸಿ ತಯಾರಿಸಿದ ಸಂಲಗ್ನಪ್ರತಿಯನ್ನು ತೆರೆಯ ಮೇಲೆ ಪ್ರದರ್ಶಿಸಿದಾಗ ಅಭಿನಯಿಸುತ್ತಿರುವವರು ಮಾತನಾಡಿದಂತೆ ಪ್ರೇಕ್ಷಕರಿಗೆ ತೋರುತ್ತದೆ.

ಚಲನಚಿತ್ರಗಳಲ್ಲಿ ನಟನಟಿಯರು ಅಭಿನಯಿಸುತ್ತ ಓಡಾಡುತ್ತ ಹಾಡುವುದನ್ನೂ ನಾವು ನೋಡುತ್ತೇವೆ. ಇಂಥ ದೃಶ್ಯಗಳ ಚಿತ್ರಣ ಸಂಭಾಷಣಾ ದೃಶ್ಯಗಳಿಂದ ಸ್ವಲ್ಪ ಭಿನ್ನವಾಗಿರುತ್ತದೆ. ಸಂಭಾಷಣಾ ದೃಶ್ಯಗಳಲ್ಲಿ ನಟನಟಿಯರ ಮಾತು ಅಭಿನಯ ಒಟ್ಟಿಗೆ ನಡೆಯುತ್ತದೆ. ಆದರೆ ಹಾಡುಗಾರಿಕೆಯನ್ನುಳ್ಳ ದೃಶ್ಯಗಳಲ್ಲಿ ಹಾಗಲ್ಲ, ಪಾತ್ರಧಾರಿ ಅಥವಾ ಹಿನ್ನೆಲೆಯ ಗಾಯಕರಿಂದ ಹಾಡನ್ನು ಪೂರ್ವಭಾವಿಯಾಗಿ ಹಾಡಿಸಿ ಅದರ ಧ್ವನಿಮುದ್ರಿಕೆಯನ್ನು ರಚಿಸಿಕೊಳ್ಳುತ್ತಾರೆ. ದೃಶ್ಯದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಆ ಧ್ವನಿಮುದ್ರಿಕೆಯನ್ನು ನುಡಿಸುತ್ತಾರೆ. ಹಾಡಿನ ಸಾಹಿತ್ಯವನ್ನು ಬಾಯಿಪಾಠ ಮಾಡಿಕೊಂಡಿರುವ ಪಾತ್ರಧಾರಿ ಅಭಿನಯಿಸುತ್ತ ಆ ಹಾಡನ್ನು, ಧ್ವನಿಮುದ್ರಿಕೆಯಲ್ಲಿ ಮೂಡಿರುವ ರೀತಿಯಲ್ಲಿ ಉಚ್ಛರಿಸುತ್ತಾನೆ. ಆಗ ಪಾತ್ರಧಾರಿಯ ಅಭಿನಯದ ಚಿತ್ರಣ ಮಾತ್ರ ನಡೆಯುತ್ತದೆ ಆಮೇಲೆ ಹಾಡಿನ ಧ್ವನಿಮುದ್ರಿಕೆ ಮತ್ತು ದೃಶ್ಯ ಚಿತ್ರಣಗಳ ಸಂಲಗ್ನಪ್ರತಿಯನ್ನು ರೂಪಿಸಿಕೊಳ್ಳುತ್ತಾರೆ.

ದೃಶ್ಯ ಚಿತ್ರಣ ಮಾಡಿಕೊಳ್ಳುವುದಕ್ಕಾಗಿ ಉಪಯೋಗಿಸುವ ಯಂತ್ರ, ಸಿನಿ ಕ್ಯಾಮರ. ಅದರ ಚಾಲನೆ ನಿಯಂತ್ರಣ ಚಿತ್ರಗ್ರಾಹಕನ ಕೆಲಸ. ಈ ಕಾರ್ಯ ನಿರ್ವಹಣೆಯಲ್ಲಿ ಅವನು ನಿರ್ದೇಶಕನ ಸಲಹೆ ಸೂಚನೆಗಳನ್ನು ಅನುಸರಿಸಿ ನಡೆಯುತ್ತಾನೆ.

ಒಂದು ದೃಶ್ಯದ ಚಿತ್ರಣ ಹೇಗೆ ನಡೆಯುತ್ತದೆ ಎಂಬುದನ್ನು ಕುರಿತು ನಾಲ್ಕು ಮಾತುಗಳನ್ನು ಈ ಸಂದರ್ಭದಲ್ಲಿ ಹೇಳುವುದು ಉಚಿತ.

ಒಂದು ದೃಶ್ಯದ ಕಥಾಭಾಗ ಒಂದು ಕೊಠಡಿಯಲ್ಲಿ ನಡೆಯುತ್ತದೆಯೆಂದು ಇಟ್ಟುಕೊಳ್ಳೋಣ. ಅದು ಶ್ರೀಮಂತರೊಬ್ಬರ ಮನೆಯ ಕೊಠಡಿ; ಶ್ರೀಮಂತನ ಮಗನಾದ ಕಥಾನಾಯಕನ ಉಪಯೋಗಕ್ಕೆ ಮೀಸಲಾದದ್ದು ಎನ್ನಿ.

ಚಿತ್ರನಿರ್ಮಾಣ ಕೇಂದ್ರದ ವಿಶಾಲ ಅಂಗಣದಲ್ಲಿ ಇಂಥ ಕೊಠಡಿಯನ್ನು ನಿರ್ಮಿಸುತ್ತಾರೆ-ಚಿತ್ರಣದ ಅವಶ್ಯಕತೆಗಳನ್ನು ಅನುಸರಿಸಿ. ಸಾಮಾನ್ಯವಾಗಿ ಇಂಥ ಕೊಠಡಿಗೆ ಸೂರು ಇರುವುದಿಲ್ಲ. ಮೂರು ಭಾಗದ ಗೋಡೆಗಳು ಮಾತ್ರ ಇರುತ್ತವೆ. ನಾಲ್ಕನೆಯ ಗೋಡೆ ಇರಬೇಕಾದ ಸ್ಥಳ ತೆರವಾಗಿದ್ದು ಆ ಪಕ್ಕದಲ್ಲಿ ಕ್ಯಾಮರವನ್ನಿಟ್ಟು ಕೊಠಡಿಯಲ್ಲಿ ನಡೆಯುವ ಅಭಿನಯವನ್ನು ಆ ಬದಿಯಿಂದ ಚಿತ್ರಿಸಿಕೊಳ್ಳುತ್ತಾರೆ. ಚಿತ್ರಣಕ್ಕಾಗಿ ಉಪಯೋಗಿಸುವ ಇಂಥ ನಿರ್ಮಾಣಗಳನ್ನು ಸಜ್ಜಿಕೆ (ಸೆಟ್) ಎನ್ನುತ್ತಾರೆ. ಇದು ಕೊಠಡಿಯದಾಗಿರಬಹುದು, ನಾಟ್ಯ ಗೃಹದ್ದಾಗಿರಬಹುದು, ಉದ್ಯಾನದ ಒಂದು ಭಾಗದ್ದಾಗಿರಬಹುದು ಅಥವಾ ಮತ್ತಿನ್ನಾವುದಾದರೂ ಸ್ಥಳದ ಅನುಕರಣೆಯಾಗಿರಬಹುದು-ದೃಶ್ಯದ ಅವಶ್ಯಕತೆಗೆ ಅನುಸಾರವಾಗಿ.

ಚಿತ್ರಣವನ್ನು ಆರಂಭಿಸುವುದಕ್ಕೆ ಮೊದಲು ಸಜ್ಜಿತ ಸ್ಥಳದ ಮೇಲೆ ಹಲವಾರು ದಿಕ್ಕುಗಳಿಂದ ಬೆಳಕನ್ನು ಬಿಡುತ್ತಾರೆ. ಕಥಾಕ್ರಿಯೆ ನಡೆಯುವ ಕಾಲ (ಹಗಲು ರಾತ್ರಿ ಹೀಗೆ), ಸಂದರ್ಭಗಳಿಗೆ ಅನುಗುಣವಾಗಿ ಬೆಳಕಿನ ವ್ಯವಸ್ಥೆಯಿರುತ್ತದೆ.

ಸಜ್ಜಿಕೆ ಮತ್ತು ಬೆಳಕಿನ ವ್ಯವಸ್ಥೆ ಸಮರ್ಪಕವಾಗಿದೆಯೆಂದೆನಿಸಿದ ಮೇಲೆ ನಿರ್ದೇಶಕ ದೃಶ್ಯದ ಚಿತ್ರಣವನ್ನು ಕೈಗೊಳ್ಳುತ್ತಾನೆ. ಆ ದೃಶ್ಯದಲ್ಲಿ ಆಭಿನಯಿಸ ಬೇಕಾಗಿರುವ ನಟನಟಿಯರನ್ನು ಬರಮಾಡಿಕೊಳ್ಳುತ್ತಾನೆ. ಅವರೆಲ್ಲರೂ ತಮ್ಮ ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳನ್ನು ಧರಿಸಿರುತ್ತಾರೆ. ಅವರು ಚಿತ್ರಣ ಕ್ಷೇತ್ರವನ್ನು ಹೇಗೆ ಪ್ರವೇಶಿಸಬೇಕು. ಅಥವಾ ಚಿತ್ರಣ ಆರಂಭವಾಗುವಾಗ ಎಲ್ಲಿರಬೇಕು ಹೇಗೆ ಚಲಿಸಬೇಕು ಹೇಗೆ ಅಭಿನಯಿಸಬೇಕು, ತಮ್ಮ ಮಾತುಗಳನ್ನು ಹೇಗೆ ನುಡಿಯಬೇಕು ಮುಂತಾದುವುಗಳ ವಿಚಾರವಾಗಿ ನಿರ್ದೇಶಕ ಅವರಿಗೆ ಸೂಚನೆ ಕೊಡುತ್ತಾನೆ. ಅವರು ಆ ಸೂಚನೆಗಳಂತೆ ನಡೆಯುವರೆಂಬುದನ್ನು ಖಚಿತ ಮಾಡಿಕೊಳ್ಳಲು ಕೆಲವು ಬಾರಿ ಅಭ್ಯಾಸ ನಡೆಯುತ್ತದೆ. ಅಭಿನಯಕ್ಕೆ ಸಂಬಂಧಿಸಿದ ಎಲ್ಲ ಅಂಶಗಳೂ ಸಮರ್ಪಕವಾಗಿ ರೂಪುಗೊಂಡಿವೆ ಎಂದು ಎನಿಸಿದ ಮೇಲೆ ಚಿತ್ರಣ ಅಥವಾ ಚಿತ್ರೀಕರಣ (ಷೂಟಿಂಗ್) ಆರಂಭವಾಗುತ್ತದೆ. ಅವಶ್ಯವಾದ ದೀಪಗಳನ್ನೆಲ್ಲ ಬೆಳಗಿಸಿ, ಕ್ಯಾಮರ ಮತ್ತು ಧ್ವನಿಮುದ್ರಣ ಯಂತ್ರಗಳ ಚಾಲನೆಯನ್ನು ಆರಂಭಿಸುವಂತೆ ನಿರ್ದೇಶಕ ಆಜ್ಞೆ ಮಾಡುತ್ತಾನೆ. ದೃಶ್ಯಾಭಿನಯ ನಡೆಯುತ್ತಿದ್ದಂತೆ ಚಿತ್ರಣ, ಧ್ವನಿಮುದ್ರಣಗಳು ನಡೆಯುತ್ತವೆ. ಪ್ರದರ್ಶನ ಪ್ರತಿಯಲ್ಲಿ ಒಂದು ದೃಶ್ಯ ಸುಮಾರು ಎರಡು ನಿಮಿಷದಷ್ಟು ಕಾಲ ನಡೆಯುತ್ತದೆಯೆಂದಿಟ್ಟುಕೊಳ್ಳೋಣ. ಇದಿಷ್ಟನ್ನೂ ನಿರಂತರವಾಗಿ ಒಮ್ಮೆ ಚಿತ್ರಿಸಿಕೊಳ್ಳುವುದಿಲ್ಲ. ಒಂದು ದೀರ್ಘದೃಶ್ಯವನ್ನು ಉಪದೃಶ್ಯಗಳನ್ನಾಗಿ ವಿಂಗಡಿಸಿಕೊಂಡು ಖಂಡ ಖಂಡವಾಗಿ ಚಿತ್ರಿಸಿಕೊಳ್ಳುತ್ತಾರೆ ಧ್ವನಿಮುದ್ರಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ, ಒಂದೇ ದೃಶ್ಯವನ್ನು ಬೇರೆ ಬೇರೆ ನಿಲುವಿನಿಂದ, ಕೋನದಿಂದ, ಹತ್ತಿರದಿಂದ ದೂರದಿಂದ ಇವೆರಡಕ್ಕೂ ನಡುವಣ ಸ್ಥಾನದಿಂದ ಚಿತ್ರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಚಿತ್ರಣದಲ್ಲಿ ವೈವಿಧ್ಯ ಮೂಡುತ್ತದೆ. ಅತಿಸಮೀಪದಿಂದ ಚಿತ್ರಿಸಿಕೊಳ್ಳುವಾಗ, ಪಾತ್ರದ ಭಾವ ಪ್ರತಿಕ್ರಿಯೆಗಳನ್ನು ಸ್ಪುಟವಾಗಿ ತೋರಿಸಬಹುದಾದ ಅವಕಾಶ ಏರ್ಪಡುತ್ತದೆ ; ದೂರ ಮತ್ತು ನಡುವಣ ಸ್ಥಾನದಿಂದ ಚಿತ್ರಗ್ರಹಣ ಮಾಡಿದಾಗ, ಹಿನ್ನೆಲೆಯೂ ಸೇರಿದಂತೆ ಇಡೀ ದೃಶ್ಯದ ಸಮಗ್ರ ಚಿತ್ರ ಪ್ರೇಕ್ಷಕನಿಗೆ ದೊರೆಯುತ್ತದೆ ; ಕ್ಯಾಮರ ದೂರದಿಂದ ದೃಶ್ಯದ ಸಮೀಪಕ್ಕೆ ನಡೆದಾಗ ಪ್ರೇಕ್ಷಕ ತಾನೇ ದೃಶ್ಯದ ಹತ್ತಿರಕ್ಕೆ ಬಂದ ಭಾವನೆ ಮೂಡುತ್ತದೆ ; ಇದು ದೃಶ್ಯದ ವಿವರಗಳನ್ನು ಗಮನಿಸುವುದಕ್ಕೆ ಸಹಾಯವಾಗುತ್ತದೆ. ಚಲನಚಿತ್ರದ ಚಿತ್ರಭಾಗದಲ್ಲಿ ಏಕತಾನವೂ ಬೇಸರವೂ ತಲೆದೋರದಂತೆ ಮಾಡಲು ಇಂಥ ಚಿತ್ರಣ ವೈವಿಧ್ಯ ಸಹಕಾರಿ.

ಈ ವರೆಗೆ ಹೇಳಿರುವ ವಿವರಗಳಿಂದ, ಒಂದು ಚಲನಚಿತ್ರ ಮೊದಲು ಸಿದ್ಧವಾಗುವುದು ಸಾವಿರಾರು ಖಂಡಗಳಲ್ಲಿ-ಚಿತ್ರಖಂಡ, ಧ್ವನಿಮುದ್ರಣ ಖಂಡಗಳಲ್ಲಿ-ಎಂಬುದು ವ್ಯಕ್ತವಾಗುತ್ತದೆ. ಚಿತ್ರನಿರ್ಮಾಣಸೂಚಿಯಲ್ಲಿ ಯಾವ ಯಾವ ದೃಶ್ಯ, ಉಪದೃಶ್ಯಗಳಲ್ಲಿ ಎಷ್ಟು ಖಂಡಗಳು ಇರುತ್ತವೆ, ಅವುಗಳಲ್ಲಿ ನಡೆಯುವ ಕ್ರಿಯೆ ಏನು, ಸಂಭಾಷಣೆ ಏನು ಅವನ್ನು ಯಾವ ರೀತಿ ಚಿತ್ರಿಸಿಕೊಳ್ಳಬೇಕು ಮುಂತಾದುವನ್ನು ನಿರೂಪಿಸಿರುತ್ತಾರೆ ಮತ್ತು ಈ ಖಂಡಗಳಿಗೆ ಅನುಕ್ರಮ ಸಂಖ್ಯೆಯನ್ನೂ ಕೊಟ್ಟಿರುತ್ತಾರೆ. ಒಂದೊಂದು ಖಂಡದ ಚಿತ್ರಣ ಮತ್ತು ಧ್ವನಿಮುದ್ರಣವನ್ನು ಮಾಡಿಕೊಳ್ಳುವ ಮೊದಲು, ಚಿತ್ರದ ಹೆಸರು, ದೃಶ್ಯ, ಉಪದೃಶ್ಯಗಳ ಸಂಖ್ಯೆ ಮುಂತಾದ ವಿವರಗಳನ್ನು ಒಂದು ಹಲಗೆಯ ಮೇಲೆ ಬರೆದು ಇಟ್ಟುಕೊಂಡಿರುತ್ತಾರೆ. ಈ ಹಲಗೆಗೆ ಕೀಲಿನಿಂದ ಜೋಡಿಸಿದ ಒಂದು ಮರದ ತುಂಡು ಇರುತ್ತದೆ. ಇದನ್ನು ಹಲಗೆಯ ಅಂಚಿಗೆ ಬಡಿದಾಗ ಶಬ್ದವಾಗುತ್ತದೆ. ಚಲನಚಿತ್ರ ಕ್ಯಾಮರ ಮತ್ತು ಧ್ವನಿಮುದ್ರಣ ಯಂತ್ರಗಳ ಚಾಲನೆಯಾದೊಡನೆಯೇ ಈ ಶಬ್ದಫಲಕವನ್ನು ಆ ದೃಶ್ಯ ಅಥವಾ ಉಪದೃಶ್ಯಗಳಲ್ಲಿ ಅಭಿನಯಿಸಲಿರುವ ನಟ ಅಥವಾ ನಟಿಯ ಮಂದೆ ಹಿಡಿದು, ಅದನ್ನು ಬಡಿದು ಶಬ್ದಮಾಡುತ್ತಾರೆ. ಫಲಕದ ಚಿತ್ರಣ ಹಾಗು ಅದನ್ನು ಬಡಿದ ಶಬ್ದದ ಧ್ವನಿಮುದ್ರಣ ಎರಡೂ ನಡೆಯುತ್ತದೆ. ಅನಂತರ ಫಲಕವನ್ನು ಕ್ಯಾಮರ ಕ್ಷೇತ್ರದಿಂದ ಹೊರಗೆ ಹಾಕಲಾಗುತ್ತದೆ. ಆಮೇಲೆ ನಟನಟಿಯರು ಅಭಿನಯನವನ್ನಾರಂಭಿಸುತ್ತಾರೆ. ಇದರಿಂದ ಚಿತ್ರಣ ಯಾವ ದೃಶ್ಯ, ಉಪದೃಶ್ಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಗುರುತಿಸಲು ತುಟಿಗಳ ಚಲನೆಗೆ ಸರಿಯಾಗಿ ಶಬ್ದಾರಂಭವನ್ನು ಜೋಡಿಸಲು ಅನುಕೂಲವಾಗುತ್ತದೆ. ಚಲನಚಿತ್ರನಿರ್ಮಾಣ ಖಂಡಖಂಡವಾಗಿ ನಡೆಯುವುದಾದರೂ ಪ್ರೇಕ್ಷಕರು ಅದನ್ನು ಅಖಂಡವಾಗಿ ನೋಡುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಣದಲ್ಲಿ ಅಭಾಸಗಳು ತಲೆದೋರದಂತೆ ನೋಡಿಕೊಳ್ಳುವುದು ಅವಶ್ಯಕ. ಇಂಥ ಅಭ್ಯಾಸಗಳು ಹೇಗೆ ಏರ್ಪಡಬಹುದೆಂಬುದಕ್ಕೆ ಒಂದು ಉದಾಹರಣೆ ಕೊಡಬಹುದು. ಗಂಡ ಹೆಂಡತಿಯರ ನಡುವೆ ಬಿರುಸಾದ ಮಾತು ನಡೆದು, ಆಕೆ ಕೋಪಗೊಂಡು ಕೊಠಡಿಯಿಂದ ಸರ್ರನೆ ಹೊರಟು ಹೋಗುತ್ತಾಳೆ; ಅನಂತರ ಗಂಡ ಅವಳನ್ನು ಹಿಂಬಾಲಿಸುತ್ತಾನೆ. ಕೊಠಡಿಯಿಂದ ಹೊರಗೆ ಬಂದು ನೋಡಿದಾಗ ಹೆಂಡತಿ ಮನೆ ಮುಂದಿನ ತೋಟದಲ್ಲಿ ಆಲೋಚನಾಮಗ್ನಳಾಗಿ ನಿಂತಿರುವುದು ಕಾಣುತ್ತದೆ. ಅವಳನ್ನು ಸಮಾಧಾನಪಡಿಸಲು ಅಲ್ಲಿಗೆ ಹೋಗುತ್ತಾನೆ ಎಂದಿಟ್ಟುಕೊಳ್ಳೋಣ. ಇಲ್ಲಿ ಕಥಾಕ್ರಿಯೆ ನಡೆಯುವುದು ನಿರಂತರವಾಗಿ ಆದರೂ ಅದು ಎರಡು ಕ್ಷೇತ್ರಗಳಲ್ಲಿ ನಡೆಯುತ್ತದೆ ಕೊಠಡಿಯೊಳಗೆ ಮತ್ತು ಕೈದೋಟದಲ್ಲಿ. ಈ ಎರಡೂ ಕ್ಷೇತ್ರಗಳಲ್ಲಿನ ಕ್ರಿಯಾಚಿತ್ರಣ ಬೇರೆ ಬೇರೆ ದಿನಗಳಲ್ಲಿ ನಡೆಯಬಹುದು. ಏಕೆಂದರೆ ಕೊಠಡಿಯ ಸಜ್ಜಿಕೆಯನ್ನು ಸಿದ್ದಪಡಿಸಿದ ಮೇಲೆ, ಕಥೆಗೆ ಸಂಬಂಧಿಸಿದಂತೆ ಆ ಕೊಠಡಿಯಲ್ಲಿ ನಡೆಯುವ ಎಲ್ಲಾ ಕ್ರಿಯೆಗಳನ್ನು ಅವು ಬೇರೆ ಬೇರೆ ಕಾಲಗಳಲ್ಲಿ ನಡೆಯುವುದಾದರೂ-ಒಂದಾದ ಮೇಲೆ ಒಂದರಂತೆ ಚಿತ್ರಿಸಿಕೊಂಡು ಅನಂತರ ಕೊಠಡಿಯ ಸಜ್ಜಿಕೆಯನ್ನು ಕಿತ್ತಿಹಾಕಿಬಿಡುತ್ತಾರೆ. ಹಾಗೆಯೇ ಕೈದೋಟದ ಇಲ್ಲವೆ ಹೊರಾಂಗಣ ಕ್ಷೇತ್ರದಲ್ಲಿ ಅಲ್ಲಿ ನಡೆಯುವ ಭಿನ್ನ ಭಿನ್ನ ಕ್ರಿಯೆಗಳನ್ನು ಒಂದಾದಮೇಲೊಂದರಂತೆ ಚಿತ್ರಿಸಿಕೊಳ್ಳುತ್ತಾರೆ- ಅದು ಬೇರೆ ಇನ್ನೊಂದು ದಿನ, ಎನ್ನೋಣ. ಆದರೆ ಚಿತ್ರ ಪ್ರೇಕ್ಷಕನಿಗೆ ಮೇಲೆ ಹೇಳಿದ ಕೊಠಡಿಯ ಘಟನೆಯ ಮುಂದುವರಿಕೆಯೇ ಕೈದೋಟದ ಘಟನೆ. ಅವೆರಡು ಘಟನೆಗಳ ನಡುವೆ ಸಾಕಷ್ಟು ಕಾಲ ಗತಿಸಿಲ್ಲ; ಆದ್ದರಿಂದ ಉಡುಪು ಅಲಂಕಾರ ಬದಲಾವಣೆಗೂ ಅವಕಾಶವಿಲ್ಲ. ಅಂದರೆ ಪಾತ್ರಗಳು ಕೊಠಡಿಯ ದೃಶ್ಯದಲ್ಲಿ ಯಾವ ವೇಷಭೂಷಣಗಳನ್ನು ಧರಿಸಿದ್ದರೋ ಕೈತೋಟದ ದೃಶ್ಯದಲ್ಲೂ ಅದೇ ವೇಷಭೂಷಣಗಳನ್ನು ಹೊಂದಿರುವುದು ಸಹಜ, ಅವಶ್ಯಕ. ಹಾಗಲ್ಲದೆ ಅವುಗಳಲ್ಲಿ ಬದಲಾವಣೆಯಾದಲ್ಲಿ ಅಭಾಸವಾಗುತ್ತದೆ. ಕೊಠಡಿಯಲ್ಲಿದ್ದಾಗ ಗಂಡ ಹಾಕಿಕೊಂಡ್ಡಿದ್ದ ಬಿಳಿ ಬುಷ್ ಕೋಟು ಕೊಠಡಿಯ ಬಾಗಿಲು ದಾಟಿದೊಡನೆಯೇ ಥಟ್ಟನೆ ಚೆಕ್‍ಬಟ್ಟೆಯ ಷರಟು ಆಗುವುದನ್ನೂ ಕೊಠಡಿಯಲ್ಲಿದ್ದಾಗ ಹೆರಳಾಗಿದ್ದ ಹೆಂಡತಿಯ ಕೇಶಾಲಂಖಾರ ಕೈತೋಟದಲ್ಲಿ ಥಟ್ಟನೆ ತುರುಬಾಗಿ ಬದಲಾಗುವುದನ್ನು ತೆರೆಯ ಮೇಲೆ ಕಂಡಾಗ ಪ್ರೇಕ್ಷಕರು ಅಚ್ಚರಿಗೊಳ್ಳುತ್ತಾರೆ, ನಗುತ್ತಾರೆ. ಇದು ರಸಾಭಾಸಕ್ಕೆ ಎಡೆಕೊಡುತ್ತದೆ. ಆದ್ದರಿಂದ ಒಂದೊಂದು ದೃಶ್ಯದಲ್ಲಿಯೂ ನಟನಟಿಯರು ಉಪಯೋಗಿಸುವ ಬಟ್ಟೆಬರೆ, ಆಭರಣ, ಗಡ್ಡ, ಮೀಸೆ ಮುಂತಾದವುಗಳ ವಿವರಗಳನೆಲ್ಲಾ ಬರೆದಿಟ್ಟುಕೊಂಡು ಅಥವಾ ಪೋಟೋ ತೆಗೆದಿಟ್ಟುಕೊಂಡು ಸಂಬಂಧಪಟ್ಟ ದೃಶ್ಯಗಳಲೆಲ್ಲಾ ಅವನ್ನೇ ಉಪಯೋಗಿಸುತ್ತಾರೆ.

ಖಂಡಖಂಡವಾಗಿ ರಚಿಸಿಕೊಂಡ ಚಿತ್ರ ಮತ್ತು ಧ್ವನಿಮುದ್ರಿಕೆಗಳ ಪಟ್ಟಿಕೆಯನ್ನು ಕಥಾಸರಣಿಗೆ ಅನುಗುಣವಾಗಿ, ಕಲಾತ್ಮಕವಾಗಿ ಜೋಡಿಸುವವನು ಚಿತ್ರಸಂಪಾದಕ ಇವನ ಕೆಲಸ ಕೇವಲ ಯಾಂತ್ರಿಕವಾದದಲ್ಲ. ಇದು ಒಂದು ಕಲಾ ಸೃಷ್ಟಿ. ಇವನು ದಕ್ಷನಲ್ಲದೆ ಇದ್ದು ಇವನ ಕೆಲಸ ಅಸಮರ್ಪಕವಾದಲ್ಲಿ ನಿರ್ದೇಶಕ ಮತ್ತು ನಟನಟಿಯರ ಉತ್ತಮ ಸಾಧನೆ ವಿಫಲವಾಗಬಹುದು. ಇವನು ಪ್ರತಿಭಾವಂತನೂ ತಂತ್ರಕುಶಲಿಯೂ ಆಗಿದ್ದಲ್ಲಿ ಸಾಧಾರಣ ಚಿತ್ರಣ, ಅಭಿನಯಗಳು ಕೂಡ ಇವನ ಕೈಯಲ್ಲಿ ಉತ್ತಮ ಗುಣಮಟ್ಟಕ್ಕೇರುವುದು ಸಾಧ್ಯ.

ಒಂದು ಚಲನಚಿತ್ರದ ಪ್ರದರ್ಶನ ಪ್ರತಿಯ ಉದ್ದ ಸುಮಾರು ಹನ್ನೆರಡು ಹದಿಮೂರು ಸಾವಿರ ಅಡಿಯಷ್ಟು ಇದೆಯೆಂದುಕೊಳ್ಳೋಣ. ಈ ಚಿತ್ರದ ಸಂಬಂಧದಲ್ಲಿ ರಚಿಸಿಕೊಂಡ ಚಿತ್ರಪಟ್ಟಿಕೆ ಮತ್ತು ಧ್ವನಿಪಟ್ಟಿಕೆಗಳ ಉದ್ದ ಅದಕ್ಕಿಂತ ತುಂಬ ಹೆಚ್ಚು ದೀರ್ಘವಾಗಿರುತ್ತದೆ. ಅಂದರೆ ಅದು ಪ್ರದರ್ಶನ ಚಿತ್ರದ ಮೂರು ನಾಲ್ಕು ಪಟ್ಟಾದರೂ ಉದ್ದವಾಗಿರುತ್ತದೆ. ಇನ್ನೂ ಉದ್ದವಾಗಿರುವುದೂ ಉಂಟು. ಒಂದು ದೃಶ್ಯ ಅಥವಾ ಉಪದೃಶ್ಯದ ಚಿತ್ರೀಕರಣ ತಾನು ಅಪೇಕ್ಷಿಸುವಷ್ಟು ಸಮರ್ಪಕವಾಗಲಿಲ್ಲ ಎನಿಸಿದಾಗ ನಿರ್ದೇಶಕ ಅದೇ ದೃಶ್ಯ ಅಥವಾ ಉಪದೃಶ್ಯವನ್ನು ಮತ್ತೆ ಚಿತ್ರಿಸಿಕೊಳ್ಳುತ್ತಾರೆ. ಧ್ವನಿಮುದ್ರಿಕೆ ಮಾಡಿಕೊಳ್ಳುತ್ತಾನೆ. ಚಿತ್ರನಿರ್ಮಾಣ ಸೂಚಿಯನ್ನನುಸರಿಸಿ ಒಂದು ದೃಶ್ಯ ಅಥವಾ ಉಪದೃಶ್ಯದ ಚಿತ್ರೀಕರಣ ನಡೆದ ಮೇಲೆ ಅದರಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿ ಇನ್ನೊಂದು ರೀತಿಯಲ್ಲಿ ಅದನ್ನು ಚಿತ್ರಿಸಿಕೊಂಡರೆ ಪರಿಣಾಮ ಉತ್ತಮಗೊಳ್ಳಬಹುದು ಎಂದು ನಿರ್ದೇಶಕನಿಗೆ ಅನಿಸಬಹುದು. ಅಂಥ ಸಂದರ್ಭಗಳಲ್ಲಿ ಕೂಡ ಅವನು ಪುನಃ ಚಿತ್ರೀಕರಣ, ಧ್ವನಿ ಮುದ್ರಣ ನಡೆಸುತ್ತಾನೆ. ಹೀಗೆ ತೆಗೆದ ಎಲ್ಲಾ ಚಿತ್ರಪಟ್ಟಿಕೆಗಳು ಧ್ವನಿಪಟ್ಟಿಕೆಗಳು ಮುದ್ರಿತ ಪ್ರತಿಗಳು ಸಂಪಾದಕನ ಕಡೆಗೆ ಬರುತ್ತದೆ. ನಿರ್ದೇಶಕನ ಸಲಹೆ ಸೂಚನೆಗಳನ್ನು ಲಕ್ಷದಲ್ಲಿಟ್ಟುಕೊಂಡು, ಅಭಿನಯ ಮತ್ತು ತಾಂತ್ರಿಕತೆಯ ದೃಷ್ಟಿಯಿಂದ ಉತ್ತಮವಾದುದೆಂದು ತೋರುವ ಪಟ್ಟಿಗಳನ್ನು ಆರಿಸುವುದು, ಬೇರೆ ಬೇರೆ ಪಟ್ಟಿಕೆಗಳಲ್ಲಿ ಉತ್ತಮವಾಗಿ ಮೂಡಿರುವ ಭಾಗಗಳನ್ನು ಆರಿಸಿಕೊಂಡು ಅವನ್ನು ಒಡ್ಡುಗೂಡಿಸಿ ಹೆಚ್ಚು ಪರಿಣಾಮಕಾರಿಯಾದ ಪಟ್ಟಿಕೆಯನ್ನು ಸಿಧ್ದಗೊಳಿಸುವುದು ಸಂಪಾದಕನ ಕೆಲಸ. ಚಲನಚಿತ್ರ ನಿರ್ಮಾಣ ಸೂಚಿಯಿಂದ ಸಂಪಾದಕನಿಗೆ ಪ್ರಧಾನ ಮಾರ್ಗದರ್ಶನ ದೊರೆಯುತ್ತಾದರೂ ಅವನ ರಸಜ್ಞತೆ, ಕಲಾಭಿಜ್ಞತೆ, ವಿಮರ್ಶಕನ ದೃಷ್ಟಿಗಳು ಅವನ ಕೆಲಸ ಸಮರ್ಪಕವಾಗಲು ನೆರವಾಗುತ್ತವೆ. ತೀರ ಸಪ್ಪೆ, ಪರಿಣಾಮಹೀನವೆನಿಸುವಂಥ ಅಭಿನಯವೂಳ್ಳ ಚಿತ್ರಪಟ್ಟಿಕೆ ಕೂಡ ಅವನ ಸಂಸ್ಕರಣ ಚಾತುರ್ಯದಿಂದ ಚಿತ್ರಕಂಡಗಳ ಜೋಡಣೆಯ ಕ್ರಮದಲ್ಲಿ ಅವನು ತೋರುವ ಚಾತುರ್ಯದಿಂದ ಹೊಸ ಚೈತನ್ಯ, ಪುಷ್ಟಿ, ಅರ್ಥಗಳನ್ನು ಪಡೆಯುತ್ತದೆ, ಕಲಾತ್ಮಕವಾಗುತ್ತದೆ. ಮುದ್ದೆ ಮುದ್ದೆಯಾದ ಆಕಾರದಲ್ಲಿರುವ ವಿಗ್ರಹವನ್ನು ತನ್ನ ಕಲ್ಪನಾಚಾತುರ್ಯ ಕ್ಯೆಚಳಕಗಳಂದ ಶಿಲ್ಪಿ ಸುಂದರವಿಗ್ರಹವನ್ನಾಗಿ ಮಾಡುವಂತೆ, ಪ್ರತಿಭಾವಂತನೂ ತಂತ್ರಕುಶಲನೂ ಆದ ಚಲನಚಿತ್ರ ಸಂಪಾದಕ ಕಚ್ಚಾಚಿತ್ರಪಟ್ಟಿಕೆಗಳಿಂದ ಸುಂದರ ಚಲನಚಿತ್ರವನ್ನು ರೂಪಿಸಬಲ್ಲ.

ಭಾರತೀಯ ಚಲನಚಿತ್ರಗಳಲ್ಲಿ ಸಂಗೀತಕ್ಕೆ ಪ್ರಾಧಾನ್ಯವಿದೆ. ಚಲನಚಿತ್ರ ಸಂಗೀತ ಎರಡು ಬಗೆಯದು. ಒಂದು ಪಾತ್ರಗಳ ಹಾಡುಗಾರಿಕೆ, ಎರಡನೆಯದು ಹಿನ್ನಲೆ ಸಂಗೀತ: ಇದು ಪ್ರಧಾನವಾಗಿ ವಾದ್ಯಸಂಗೀತ. ಪಾತ್ರಗಳ ಹಾಡುಗಾರಿಕೆ, ನಾಟಕಗಳಿಂದ ಚಲನಚಿತ್ರಕ್ಕೆ ಬಂದ ಬಳುವಳಿ. ಪಾತ್ರಧಾರರಿಗೆ ಒಳ್ಳೆ ಕಂಠಸಂಪತ್ತಿ, ಸಂಗೀತ ಜ್ಞಾನ ಇದ್ದರೆ ಆತ ಆಥವಾ ಆಕೆ ತನ್ನ ಪಾತ್ರದ ಹಾಡುಗಳನ್ನು ತಾನೇ ಹಾಡಬಹುದು. ಹಾಗಿಲ್ಲದಿದ್ದಲ್ಲಿ ಆ ಹಾಡುಗಳನ್ನು ಬೇರೆಯವರು ಹಾಡುತ್ತಾರೆ. ಇವರನ್ನು ಹಿನ್ನಲೆಯ ಗಾಯಕರು ಎನ್ನುತ್ತಾರೆ. ಚಲನಚಿತ್ರದ ಸಂಗೀತ ನಿರ್ದೇಶಕನ ಸೂಚನೆಯನ್ನನುಸರಿಸಿ ಇವರು ಹಾಡುಗಳನ್ನು ಅಭ್ಯಾಸ ಮಾಡಿ ಹಾಡುತ್ತಾರೆ. ಅನಂತರ ಅದರ ಧ್ವನಿಮುದ್ರಣ ನಡೆಯುತ್ತದೆ. ಈ ಮೊದಲು ಸೂಚಿಸಿರುವ ರೀತಿಯಲ್ಲಿ ಅದನ್ನು ಚಿತ್ರಕ್ಕೆ ಸೇರಿಸಿದಾಗ ಪಾತ್ರಧಾರಿಯೇ ಹಾಡುತ್ತಿರುವಂತೆ ಭಾಸವಾಗುತ್ತದೆ.

ಹಿನ್ನಲೆ ಸಂಗೀತದ ಪ್ರಧಾನ ಉದ್ದೇಶ ರಸಪೋಷಣೆ ಹಾಗು ಕಥಾ ಸನ್ನಿವೇಶಕ್ಕೆ ಅನುಗುಣವಾದ ವಾತಾವರಣ ಸೃಷ್ಡಿ ಔಚಿತ್ಯವರಿತು ಜೋಡಿಸುವ ಹಿನ್ನಲೆ ಸಂಗೀತ ಪ್ರೇಕ್ಷಕರಲ್ಲಿ ಭಾವಪ್ರಚೋದನೆ ಮಾಡಲು ಸಹಕಾರಿ. ಹಿನ್ನಲೆ ಸಂಗೀತವನ್ನು ರಚಿಸುವುದು ಕೂಡ ಸಂಗೀತ ನಿರ್ದೇಶಕನ ಜವಾಬ್ದಾರಿ. ಹಿನ್ನಲೆ ಸಂಗೀತದ ಸ್ವರ ಸಂಯೋಜನೆ, ವಾದ್ಯವೃಂದದ ವಿವಿಧ ವಾದ್ಯಗಳು ಅವನ್ನು ಹೇಗೆ ಯಾವಾಗ ಎಷ್ಟು ಹೊತ್ತು ನುಡಿಸಬೇಕು ಎಂಬುದು ನಿರ್ಧಾರವಾದ ಮೇಲೆ ಅಭಾಸ ನಡೆಯುತ್ತದೆ. ಚಲನಚಿತ್ರದ ಯಾವ ಭಾಗಕ್ಕೆ ಹಿನ್ನಲೆ ಸಂಗೀತವನ್ನು ಸೇರಿಸಬೇಕೋ ಆ ಭಾಗದ ಸಂಪಾದಿತ ಚಿತ್ರಭಾಗವನ್ನು ಧ್ವನಿಮುದ್ರಣಶಾಲೆಯ ತೆರೆಯ ಮೇಲೆ ಪ್ರದರ್ಶಿಸುತ್ತಾರೆ. ವಾದ್ಯವಾದಕರು ಚಿತ್ರಪ್ರದರ್ಶನವನ್ನು ನೋಡುತ್ತಾ ಸಂಬಂಧಿಸಿದ ಹಿನ್ನಲೆ ಸಂಗೀತವನ್ನು ನುಡಿಸುತ್ತಾರೆ. ದೃಶ್ಯದ ವಾತಾವರಣ ಕ್ರಿಯೆಗಳಿಗೂ ಹಿನ್ನಲೆ ಸಂಗೀತಕ್ಕೂ ಹೊಂದಾಣಿಕೆ ಸಾಧಿತವಾದ ಮೇಲೆ ಅದನ್ನು ಧ್ವನಿಮುದ್ರಿಸಿ ಕೊಳ್ಳುತ್ತಾರೆ.

ಖಂಡಖಂಡವಾಗಿ ರಚಿಸಿಕೊಂಡ ಚಿತ್ರಪಟ್ಟಿಕೆಗಳನ್ನು ಅನುಕ್ರಮವಾಗಿ ಜೋಡಿಸಿವಂತೆ ಖಂಡಖಂಡವಾಗಿ ಮುದ್ರಿಸಿಕೊಂಡ ಧ್ವನಿಪಟ್ಟಿಕೆಗಳನ್ನು ಅನುಕ್ರಮವಾಗಿ ಜೋಡಿಸಬೇಕಾಗುತ್ತದೆ. ಈ ಧ್ವನಿಪಟ್ಟಿಕೆಗಳಲ್ಲಿ ಸಂಭಾಷಣೆ, ಹಾಡುಗಾರಿಕೆ, ಹಿನ್ನಲೆ ಸಂಗೀತ ಹಾಗು ಶಬ್ದ ವಿಶೇಷದ(ಕಾರ್ ಬಂದ ಸದ್ದು, ನಾಯಿ ಬೊಗಳಿದ ಸದ್ದು, ಗುಂಪುಗಳ ಗದ್ದಲ, ಕೋಲಾಹಲ ಇತ್ಯಾದಿ) ಪಟ್ಟಿಕೆಗಳು ಇರುತ್ತವೆ. ಇವನ್ನು ಅನುಕ್ರಮವಾಗಿ ಜೋಡಿಸಿದ ಮಾತ್ರಕ್ಕೆ ಇವುಗಳಿಗೆ ಸಂಬಂಧಿಸಿದ ಕೆಲಸ ಮುಗಿಯುವುದಿಲ್ಲ. ಇದಕ್ಕೆ ಒಂದು ವಿಶೇಷ ಪರಿಷ್ಕರಣೆ ಅಗತ್ಯ ಸಾಮರಸ್ಯ ಸಾಧನೆ ಈ ಪರಿಷ್ಕರಣದ ಉದ್ದೇಶ. ಪ್ರದರ್ಶನ ಪ್ರತಿಯಲ್ಲಿ ಒಂದು ಧ್ವನಿಖಂಡ ಎಲ್ಲಿ ಬರುತ್ತದೆ, ಆ ಸಂದರ್ಭದಲ್ಲಿ ಅದರ ಘಾತ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಿ ಈ ಪರಿಷ್ಕರಣವನ್ನು ನಡೆಸಬೇಕಾಗುತ್ತದೆ. ಒಂದು ಉದಾಹರಣೆ ಹೇಳುವುದಾದರೆ, ಒಂದು ದೃಶ್ಯದಲ್ಲಿ ಸಂಭಾಷಣೆ, ಹಿನ್ನೆಲೆ ಸಂಗೀತ ಎರಡೂ ಇರಬೇಕು ಎಂದಿಟ್ಟುಕೊಳ್ಳೋಣ. ಇಂಥ ಸಂದರ್ಭದಲ್ಲಿ ಸಂಭಾಷಣೆ ಪ್ರಮುಖವಾದದ್ದಾದರೆ ಹಿನ್ನೆಲೆ ಸಂಗೀತ, ಸಂಭಾಷಣೆಯನ್ನು ಮುಳುಗಿಸದಂತೆ ಇರಬೇಕಾಗುತ್ತದೆ. ಹೀಗೆ ಯಾವ ದೃಶ್ಯದಲ್ಲಿ ಯಾವ ಧ್ವನಿಗೆ ಎಷ್ಟು ಪ್ರಾಧಾನ್ಯ ಇರಬೇಕೆಂಬುದನ್ನು ನಿರ್ಣಯಿಸಿ ಅದರಂತೆ ಧ್ವನಿಪರಿಷ್ಕರಣ ನಡೆಯುತ್ತದೆ. ಇಂಥ ಪರಿಷ್ಕøತ, ಸಂಪಾದಿತ ಧ್ವನಿವಾಹಿನಿ ಸಿದ್ಧವಾದ ಮೇಲೆ ಅದನ್ನು ಅನುಕ್ರಮ ಚಿತ್ರಮಾಲೆಯೊಂದಿಗೆ ಸರಿಯಾಗಿ ಜೋಡಿಸಿ ಚಿತ್ರ, ಧ್ವನಿಗಳೆರಡನ್ನೂ ಉಳ್ಳ ಸಂಲಗ್ನ ಪ್ರತಿಯನ್ನು ರೂಪಿಸಿಕೊಳ್ಳುತ್ತಾರೆ. ಇದೇ ಪ್ರದರ್ಶನ ಪ್ರತಿ ಇದನ್ನು ಮಾದರಿಯಾಗಿಟ್ಟುಕೊಂಡು, ಚಿತ್ರ ಮತ್ತು ಧ್ವನಿಗಳ ಮೂಲಪಟ್ಟಿಕೆಯನ್ನು (ನೆಗೆಟಿವ್) ಸಂಸ್ಕರಿಸಿ ಅದರಿಂದ ತಮಗೆ ಬೇಕಾದಷ್ಟು ಪ್ರದರ್ಶನ ಪ್ರತಿಗಳನ್ನು ಮುದ್ರಿಸಿಕೊಳ್ಳುತ್ತಾರೆ.

ಈ ಪ್ರತಿಗಳನ್ನು ಚಿತ್ರಮಂದಿರಲ್ಲಿ ಸಾರ್ವಜನಿಕರಿಗೆ ತೋರಿಸುವ ಮೊದಲು ಅದನ್ನು ದೋಷವಿಮರ್ಶನ ಮಂಡಳಿಯ (ಸೆನ್ಸಾರ್ ಬೋರ್ಡ) ಮುಂದೆ ಪ್ರದರ್ಶಿಸಿ ಅವರ ಒಪ್ಪಿಗೆ ಪಡೆಯಬೇಕೆಂಬ ನಿಯಮವು ಭಾರತದಲ್ಲಿದೆ. ಚಿತ್ರದ ಯಾವ ಭಾಗ ಅಥವಾ ಮಾತು ಅಸಭ್ಯ, ಸಾರ್ವಜನಿಕ ಹಿತದೃಷ್ಟಿಯಿಂದ ನಿಷಿದ್ಧ ಎಂದು ಮಂಡಳಿ ಸೂಚಿಸಿದರೆ ಅದನ್ನು ಪ್ರದರ್ಶನ ಪ್ರತಿಯಿಂದ ಕತ್ತರಿಸಿ ಹಾಕಬೇಕಾಗುತ್ತದೆ. ಚಿತ್ರದ ವಸ್ತು ಸಾರ್ವಜನಿಕ ಶಾಂತಿಗೆ ಭಂಗ ತರುವಂಥಾದಲ್ಲಿ ಕೂಡ ಇಡೀ ಚಿತ್ರದ ಪ್ರದರ್ಶನವನ್ನು ಮಂಡಳಿ ನಿಷೇದಿಸಬಹುದು.

ಚಲನಚಿತ್ರ ನಿರ್ಮಾಣ ಒಂದು ವಿಶಿಷ್ಟ ಕಲೆ, ಪ್ರತಿಭೆ, ತಂತ್ರಜ್ಞಾನಗಳೆರಡಕ್ಕೂ ಅದರಲ್ಲಿ ಸಮಾನ ಸ್ಥಾನವಿದೆ. ಅವು ಒಂದಕ್ಕೊಂದಕ್ಕೆ ಪೋಷಕವಾದಾಗ ಉತ್ತಮ ಚಲನಚಿತ್ರ ನಿರ್ಮಾಣ ಸಾಧ್ಯ. (ಎಂ.ಎನ್.ಸಿ.ಎಚ್.)