ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ

ವಿಕಿಸೋರ್ಸ್ದಿಂದ

ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ-

	ಕರ್ನಾಟಕದ ಪ್ರಸಿದ್ಧ ವೃತ್ತಿ ತರಬೇತಿ ಶಾಲೆಗೆ ಹೆಸರಾದ ಕಲಾಕೇಂದ್ರ. ಕಾವಾ ಎಂದೂ ಪ್ರಸಿದ್ಧ. ಅನೇಕ ಮೇಧಾವಿ ಕುಶಲಕೈಗಾರಿಕಾ ಪಟುಗಳನ್ನು ಕಲಾವಿದರನ್ನು ಮತ್ತು ಶಿಲ್ಪಿಗಳನ್ನು ರೂಪಿಸಿರುವ ಈ ಶಾಲೆ ಭಾರತದಲ್ಲಿಯೂ ಹೆಸರಾಗಿದೆ. ಇಲ್ಲಿನ ಕಲಾವಸ್ತುಗಳೂ ಕಲಾಕೃತಿಗಳೂ ವಿಶ್ವಾದ್ಯಂತ ಪ್ರಸರಿಸಿವೆ. ದೇಶವಿದೇಶಗಳಿಂದ ಗಣ್ಯ ಅತಿಥಿಗಳು ಬಂದಾಗ ಸರ್ಕಾರ ಈ ಕಲಾಶಾಲೆಯಿಂದ ಅಪೂರ್ವ ಕಲಾಕೃತಿಗಳನ್ನು ಪಡೆದು ಅವರಿಗೆ ಅರ್ಪಿಸುವ ಪರಿಪಾಠ ಇದೆ.

ಈ ಸಂಸ್ಥೆ 1906ರಲ್ಲಿ ಮೈಸೂರು ನಗರದಲ್ಲಿ ಸ್ಥಾಪಿತವಾಯಿತು. ಸಯ್ಯಾಜಿರಾವ್ ರಸ್ತೆಯಲ್ಲಿ ಈಗಿರುವ ಭವ್ಯಕಟ್ಟಡದ ಸ್ಥಳ ಹಿಂದೆ ವಿಶ್ವಕರ್ಮ ಜನಾಂಗದ ಬೀದಿಯಾಗಿತ್ತೆಂದು ತಿಳಿದುಬರುತ್ತದೆ. ಅನಂತರ ಅವರಿಗೆ ಬೇರೆ ಕಡೆಯಲ್ಲಿ ನಿವೇಶನವನ್ನು ನೀಡಿ ಈ ಕಟ್ಟಡಕ್ಕೆ ಉಚಿತ ಸ್ಥಳವನ್ನು ಪಡೆದುಕೊಳ್ಳಲಾಯಿತು. ಈ ನೂತನ ಕಟ್ಟಡಕ್ಕೆ ಬರುವ ಮೊದಲು ವೃತ್ತಿಶಿಕ್ಷಣ ಶಾಲೆ ನಜರಬಾದಿನ ಪುಟ್ಟ ಕಟ್ಟಡವೊಂದರಲ್ಲಿತ್ತು. ಅಲ್ಲಿ ಚಿತ್ರಕಲೆ, ಮರದ ಕೆತ್ತನೆ, ಗಂಧದ ಕೆತ್ತನೆ, ನೇಯ್ಗೆ, ಬೆತ್ತದ ಕೈಗಾರಿಕೆ, ಪುಸ್ತಕಕ್ಕೆ ರಟ್ಟು ಕಟ್ಟುವಿಕೆ ಮುಂತಾದ ಕರಕುಶಲ ಕಲಾಶಿಕ್ಷಣ ನೀಡಲಾಗುತ್ತಿತ್ತು. ಒಮ್ಮೆ ಈ ಪುಟ್ಟ ಕಲಾ ಶಾಲೆಗೆ ಭೇಟಿ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ ಸಲಹೆಯಂತೆ ಈಗಿನ ಸ್ಥಳಕ್ಕೆ ಆ ಶಾಲೆಯನ್ನು ವರ್ಗಾಯಿಸಲಾಯಿತು.

ವೃತ್ತಿ ಶಿಕ್ಷಣದ ಪ್ರಗತಿಗೆ ಸರ್.ಎಂ.ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಸಲಹಾ ಸಮಿತಿಯನ್ನು 1910ರಲ್ಲಿ ನೇಮಿಸಿತು. ಸಮಿತಿಯ ಸಲಹೆಗಳ ಮೇರೆಗೆ ಮೈಸೂರು ನಗರದ ಇಟ್ಟಿಗೆಗೂಡಿನಲ್ಲಿದ್ದ ಎಂಜಿನಿಯರಿಂಗ್ ಶಾಲೆ ಮತ್ತು ನಜರಬಾದಿನಲ್ಲಿದ್ದ ಕೈಗಾರಿಕಾ ಶಾಲೆ ಇವೆರಡನ್ನು ಸಮಾವೇಶಗೊಳಿಸಿ ಶ್ರೀಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಾಗಿ ಪರಿವರ್ತನೆ ಮಾಡಲಾಯಿತು (1913). ಆರಂಭದಲ್ಲಿದ್ದ ಶಾಲೆಗಳಲ್ಲಿ ಎಂಜಿನಿಯರಿಂಗ್, ಕೈಗಾರಿಕೆ ಮತ್ತ ವಾಣಿಜ್ಯ ಶಾಲೆಗಳು ಮುಖ್ಯವಾದವು. ಅನಂತರ ಸಂಸ್ಥೆಯ ಆಡಳಿತವನ್ನು ವಿದ್ಯಾ ಇಲಾಖೆಯಿಂದ ಕೈಗಾರಿಕಾ ಇಲಾಖೆಗೆ 1920-21ರಲ್ಲಿ ವರ್ಗಾಯಿಸಲಾಯಿತಲ್ಲದೆ, ಶಿಕ್ಷಣ ಪದ್ಧತಿಯಲ್ಲಿಯೂ ಸುಧಾರಣೆಗಳನ್ನು ಮಾಡಲಾಯಿತು. ಚಿತ್ರಕಲೆ, ಮಾದರಿಗಳ ತಯಾರಿಕೆ, ಮರಗೆಲಸ, ಮರದ ಕೆತ್ತನೆ, ಲೋಹಗೆಲಸ, ಕೆತ್ತನೆ ತರಗತಿಗಳನ್ನು ತೆರೆಯಲಾಯಿತು. ಈ ಶಿಕ್ಷಣ ಐದು ವರ್ಷಗಳ ಅವಧಿಯಲ್ಲಿ ಮುಗಿಯುವಂತೆಯೂ ಪಠ್ಯಕ್ರಮವನ್ನು ರೂಪಿಸಲಾಯಿತು. ಕ್ರಮೇಣ ಎನ್‍ಗ್ರೇವಿಂಗ್, ಪ್ಲೇಟಿಂಗ್, ಗಂಧ, ದಂತದ ಕೆತ್ತನೆ ಮತ್ತು ಶಿಲ್ಪ ಮುಂತಾದ ಶಾಖೆಗಳನ್ನು ತೆರೆಯಲಾಯಿತು.

ಶಿಕ್ಷಣ ಪಡೆದ ಅಭ್ಯರ್ಥಿಗಳಲ್ಲಿ ಕೆಲವರನ್ನು ಆರಿಸಿಕೊಂಡು, ಅವರಿಗೆ ನಿಯಮಿತ ವೇತನ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಅವಕಾಶವೂ ಇಲ್ಲಿದೆ. ಇವರಿಂದ ರಚಿತವಾದ ಕೃತಿಗಳನ್ನು ಮಾರಾಟ ಮಾಡಲು ಶಾಖೆಯಲ್ಲಿಯೇ ಒಂದು ಪ್ರದರ್ಶನ ಕೇಂದ್ರವನ್ನು ಆರಂಭಿಸಲಾಗಿದೆ. ಶಾಲೆಯ ಹೊರಗೆ ಉಳಿದು ಕಲಾವಿದರು ರೂಪಿಸಿ ತಂದ ಕೃತಿಗಳನ್ನೂ ಆ ಮಾರಾಟದ ಪ್ರದರ್ಶನಾಲಯದಲ್ಲಿರಿಸುವ ಅವಕಾಶವೂ ಇದೆ. ಸರ್ಕಾರ ಇಂಥ ಕಸಬುದಾರರಿಗೆ ರಿಯಾಯಿತಿ ದರದಲ್ಲಿ ಗಂಧದ ಮರ, ದಂತ ಮುಂತಾದ ಸಾಮಗ್ರಿಗಳನ್ನು ಒದಗಿಸಿ ಪ್ರೋತ್ಸಾಹಿಸುತ್ತಿದೆ. ಈ ನೂತನ ಯೋಜನೆಯಿಂದಾಗಿ ಕರಕುಶಲಿಗರ ಸಂಖ್ಯೆ ಬೆಳೆಯುತ್ತಿದೆ.

ಶಾಲೆಯ ಅಭಿವೃದ್ಧಿಗಾಗಿ ಈ ತನಕ ದುಡಿದ ಮುಖ್ಯಾಧಿಕಾರಿಗಳ ಸೇವೆ ಸ್ಮರಣೀಯ. ಒಬ್ಬೊಬ್ಬರ ಕಾಲದಲ್ಲೂ ಒಂದೊಂದು ರೀತಿಯಲ್ಲಿ ಶಾಲೆ ಅಭಿವೃದ್ಧಿಹೊಂದುತ್ತ ಬಂದಿದೆ. ಇಲ್ಲಿಯವರೆಗೆ ಹದಿಮೂರು ಜನ ಸೂಪರಿಂಟೆಂಡೆಂಟರುಗಳು ಆಗಿಹೋಗಿದ್ದಾರೆ. ಮೊಟ್ಟಮೊದಲ ಅಧಿಕಾರಿ ಸುಬ್ಬಸ್ವಾಮಿ ಅಯ್ಯರ್. ಇವರ ಅನಂತರ 1917ರಲ್ಲಿ ಜೆರಾಲ್ಡ್ ಆಲಪಿರ್‍ಟನ್ ಅವರು ಲಂಡನ್ನಿನಿಂದ ಬಂದು ಶಾಲೆಯ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಇವರಿಗೆ ಸಹಾಯಕರಾಗಿ ಬಂಗಾಲದ ಕಲಾವಿದ ಎಸ್.ಕೆ.ದೇವಾಲ್ ಅವರು ಕಲಾವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಆರ್.ಟಿ.ರಾಮಕೃಷ್ಣ, ಆರ್.ವೇಣುಗೋಪಾಲ್ ನಾಯುಡು, ಡಿ.ಕೃಷ್ಣಯ್ಯ, ಬಾಲಸುಬ್ರಹ್ಮಣ್ಯಂ, ಕೆ.ಕೇಶವಯ್ಯ, ಎಸ್.ಜಿ.ಟಂಕಸಾಲಿ ಮುಂತಾದವರು ಆ ಸಮಯದಲ್ಲಿ ಶಾಲೆಯ ಕಲಾಧ್ಯಾಪಕರಾಗಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎಸ್.ರಾಮಸ್ವಾಮಿ ಅಯ್ಯಂಗಾರ್, ಎನ್.ಜಿ.ಪಾವಂಜೆ, ಎಂ.ವೀರಪ್ಪ ಮೊದಲಾದವರೂ ಶಾಲೆಯ ಕೀರ್ತಿಗೆ ಶ್ರಮಿಸಿದ್ದಾರೆ. ಶಿಲ್ಪಿ ತಿನ್ನಾಚಾರ್ಯ, ಮತ್ತು ಇವರ ಸಹೋದರರು, ಖ್ಯಾತ ದಂತಶಿಲ್ಪಿ ಎಚ್.ವೆಂಕಪ್ಪ, ಎಸ್.ನಂಜುಂಡಸ್ವಾಮಿ, ವೈ.ಸುಬ್ರಹ್ಮಣ್ಯರಾಜು, ಬಸವಯ್ಯ, ಸೂಫಿ ಮುಂತಾದ ಪ್ರತಿಭಾವಂತ ಕಲಾಕೋವಿದರ ಕರಕುಶಲತೆಗೆ ಹೆಚ್ಚಿನ ಪ್ರೋತ್ಸಾಹ ಸಂಸ್ಥೆಯಿಂದ ದೊರೆಯಿತು.

ಮರಗೆಲಸದಲ್ಲೂ ಈ ಶಾಲೆ ಹೆಸರಾಗಿದೆ. ಇದಕ್ಕೆ ಕಾರಣ ಜರ್ಮನಿಯ ಯು.ಜಿ.ಎಕ್ನರ್‍ರಂಥ ನಿಪುಣರ ಸೇವೆಯನ್ನು ಶಾಲೆ ಉಪಯೋಗಿಸಿಕೊಂಡಿದ್ದು. ಆಶೀರ್ವಾದಂ ಮೊದಲಾದವರು ಆ ವಿಭಾಗದಲ್ಲಿ ಮತ್ತೂ ಪ್ರಗತಿಯನ್ನು ತಂದುಕೊಟ್ಟರು.

ಶಾಲೆಯ ಎಲ್ಲ ವಿಭಾಗಗಳ ವಿದ್ಯಾಥಿಗಳಿಗೂ ಚಿತ್ರಕಲೆಯ ವಿಷಯವನ್ನು ತಿಳಿಯುವ ಅವಕಾಶ ಇದೆ. ವಿದ್ಯಾರ್ಥಿಗಳು ಆಗಾಗ ಮೃಗಾಲಯಕ್ಕೂ ಶ್ರೀ ಜಯಚಾಮರಾಜೇಂದ್ರ ಚಿತ್ರಶಾಲೆಗೂ ಹೋಗಿ ಬರುವ ಅವಕಾಶವನ್ನು ಮಾಡಿಕೊಡಲಾಗಿದೆ.

ಈಗ್ಗೆ ಈ ಸಂಸ್ಥೆಯಿಂದ ಸುಮಾರು ಮೂವತ್ತೈದು ಸಾವಿರ ಮಂದಿ ಶಿಕ್ಷಣ ಪಡೆದಿದ್ದಾರೆ. ಪ್ರತಿಭಾವಂತ ಹಳೆಯ ವಿದ್ಯಾರ್ಥಿಗಳಲ್ಲಿ ಕೆ.ವೆಂಕಟಪ್ಪ, ಕೆ.ಕೆ.ಹೆಬಾಪಿರ್, ಎಸ್.ನಂಜುಂಡಸ್ವಾಮಿ, ಎಸ್.ಎ.ಸ್ವಾಮಿ, ಎಂ.ವೀರಪ್ಪ, ವೈ.ನಾಗರಾಜು, ವೈ.ಸುಬ್ರಹ್ಮಣ್ಯರಾಜು, ಎಸ್.ಆರ್.ಅಯ್ಯಂಗಾರ್, ಮೀರ್‍ಶೌಕತ್‍ಆಲಿ, ಸೂಫಿ, ಬಿ.ಎಚ್.ರಾಮಚಂದ್ರ, ಎನ್.ಹನುಮಯ್ಯ, ರುಮಾಲೆ, ಶುದ್ಧೋದನ, ಚಂದ್ರಶೇಖರ, ಸೋಮಸುಂದರ, ಕುಕ್ಕೆ, ಎಂ.ಟಿ.ವಿ.ಆಚಾರ್ಯ, ಪಿ.ಆರ್.ತಿಪ್ಪೇಸ್ವಾಮಿ, ಕಾಳಪ್ಪ, ಶೆಣೈ, ಮರಿಸ್ವಾಮಿ, ಗೋವಿಂದಪ್ಪ, ಕೆ.ಎಲ್.ವೆಂಕಟೇಶ್ ಮುಂತಾದವರನ್ನು ಇಲ್ಲಿ ಹೆಸರಿಸಬಹುದು.

1970ರಲ್ಲಿ ಶಾಲೆ ತನ್ನ ಅರವತ್ತು ವರ್ಷದ ವಜ್ರ ಮಹೋತ್ಸವವನ್ನು ಆಚರಿಸಿತು. ಇದರ ನೆನಪಿಗಾಗಿ ಆರು ಲಕ್ಷ ರೂ.ಗಳ ಅಂದಾಜಿನಲ್ಲಿ ಚಿತ್ರಕಲಾ ವಿಭಾಗದ ಒಂದು ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಲೆಯ ಆವರಣದಲ್ಲಿ ಆಗಿನ ರಾಜ್ಯಪಾಲರು ನೆರವೇರಿಸಿದರು (1970). ತರುವಾಯ ಈ ಸಂಸ್ಥೆಯ ಚಿತ್ರಕಲಾ ವಿಭಾಗವು ಬೇರ್ಪಡೆಗೊಂಡು `ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ ಎಂಬ ಹೆಸರಿನಲ್ಲಿ ಪ್ರತ್ಯೇಕ ಅಸ್ತಿತ್ವಹೊಂದಿ ನಡೆದುಕೊಂಡು ಬರುತ್ತಿದೆ. ಅದು `ಕಾವ ಎಂಬ ಹೆಸರಿನಿಂದಲೂ ಪರಿಚಿತವಾಗಿದೆ.

ತಾಂತ್ರಿಕ ಸಂಸ್ಥೆಯು ಕರಕುಶಲ ಕಸಬನ್ನು ಆಧುನಿಕಗೊಳಿಸುವುದು ಹಾಗೂ ಗ್ರಾಮಾಂತರ ಕುಶಲಕರ್ಮಿಗಳಿಗೆ ಆಧುನಿಕ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಿ, ತರಬೇತಿ ನೀಡಿ ಅವರ ಕಸಬನ್ನು ಆರ್ಥಿಕವಾಗಿ ಸಬಲವಾಗುವಂತೆ ಮಾಡುವುದನ್ನು ಮುಖ್ಯ ಚಟುವಟಿಕೆಯಾಗಿ ಹೊಂದಿದೆ. ಇಲ್ಲಿ ತರಬೇತಿ ಪಡೆದ ಅನೇಕ ಪ್ರತಿಭಾವಂತರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕರು ಸ್ವಂತ ಉದ್ಯಮಗಳನ್ನೂ ನಡೆಸುತ್ತಿದ್ದಾರೆ.

ಸಂಸ್ಥೆಯು ಹಿಂದೆ 12 ವಿವಿಧ ಕಸಬುಗಳಲ್ಲಿ ತರಬೇತಿ ನೀಡುತ್ತಿತ್ತು. ಈಗ ಮರಗೆಲಸ, ಯಂತ್ರಾಗಾರ, ಲೋಹದ ಶಿಲ್ಪ ಕಲೆ, ಬೆತ್ತದ ಕೆಲಸ, ಮಾಡಲಿಂಗ್‍ಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಈ ಸಂಸ್ಥೆಯ ಆಧುನೀಕರಣಕ್ಕೆ ಸರ್ಕಾರದಿಂದ ಯೋಜನೆ ಮಂಜೂರಾಗಿದೆ. ಅದರಂತೆ ಕರಕುಶಲಕಲೆ, ಮಾನವ ಸಂಪನ್ಮೂಲ ಅಭಿವೃದ್ಧಿಯ ಬಗ್ಗೆ ತರಬೇತಿ, ಅಪ್ಲೈಡ್ ಡಿಸೈನ್ ಕ್ರಾಫ್ಟ್, ಶಿಲ್ಪ ಕಲೆ, ಆಭರಣಗಳು ಮುಂತಾದ ವಿಷಯಗಳನ್ನು ಹೊಸದಾಗಿ ಸೇರಿಸುವ ಉದ್ದೇಶ ಹೊಂದಲಾಗಿದೆ. ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣವಾಗಿದೆ. ಈಗ ಸಂಸ್ಥೆಯನ್ನು ಕೈಗಾರಿಕಾ ಇಲಾಖೆಯ ಅಧೀನದಲ್ಲಿ ಉಪನಿರ್ದೇಶಕ ಅಧಿಕಾರಿ ನೋಡಿಕೊಳ್ಳುತ್ತಿದ್ದಾರೆ. (ಐ.)