ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿತ್ತರಂಜನ್

ವಿಕಿಸೋರ್ಸ್ದಿಂದ

ಚಿತ್ತರಂಜನ್ ಪಶ್ಚಿಮ ಬಂಗಾಳದ ಬದ್ರ್ವಾನ್ ಜಿಲ್ಲೆಯ ಆಸನ್ಸೋಲ್ ಉಪವಿಭಾಗದ ವಾಯುವ್ಯ ಮೂಲೆಯಲ್ಲಿರುವ ಕೈಗಾರಿಕಾ ಪಟ್ಟಣ. ಉ.ಅ.23.33 ಮತ್ತು ಪೂ.ರೇ.87 54 ಮೇಲಿದೆ. ಇದರ ಉತ್ತರಕ್ಕೆ ಸಿಂಜುರಿ. ಪೂರ್ವಕ್ಕೆ ಅಜಯ, ದಕ್ಷಿಣಕ್ಕೆ ನಾಮಕೇಶಿಯಾ ಮತ್ತು ಉಪರಕೇಶಿಯಾ ನದಿಗಳು, ಪಶ್ಚಿಮಕ್ಕೆ ಹಿಂದೂಸ್ತಾನ್ ಕೇಬಲ್ ಕಾರ್ಖಾನೆಯ ನಿವೇಶನ ಇವೆ. ವಿಸ್ತೀರ್ಣ 7 1/2 ಚ.ಮೈ. ಜನಸಂಖ್ಯೆ 40,736 (1971).

ಈ ಪಟ್ಟಣ ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ಒಳಪಟ್ಟಿದೆ. ತಗ್ಗು-ದಿಣ್ಣೆಗಳಿಂದ ತುಂಬಿದ ಪಟ್ಟಣದ ಭೂಭಾಗ ಸ್ಥೂಲವಾಗಿ ಪೂರ್ವದಿಕ್ಕಿಗೆ ಇಳಿಜಾರಾಗಿದೆ. ಅಜಯ, ಬಾರಾತಾರ್, ದಾಮೋದರ ಮತ್ತು ಭಾಗೀರಥಿ ನದಿಗಳ ಪ್ರವಾಹಗಳು ಇದಕ್ಕೆ ನಿದರ್ಶನ. ಪಶ್ಚಿಮದ ಕಡೆಗೆ ಮಾತ್ರ ಹಸಿರು ಗಿಡಮರಗಳು ಒಡೆದು ಕಾಣುತ್ತವೆ. ಪಟ್ಟಣದ ಪೂರ್ವಸೀಮೆಯುದ್ದಕ್ಕೆ ಹರಿಯುವ ಅಜಯ ನದಿ 600-900 ಅಗಲವೂ 15-20 ಆಳವೂ ಆಗಿದ್ದು ಪಟ್ಟಣದ ತಗ್ಗು-ದಿಣ್ಣೆಗಳಿಂದ ಬರುವ ನೀರನ್ನು ಕೊಂಡೊಯ್ಯತ್ತದೆ. ಮಳೆಗಾಲದಲ್ಲಿ ದೋಣಿಗಳ ಮೂಲಕ ಹತ್ತಿರದ ಹಳ್ಳಿಗಳ ಜನರು ಈ ಪಟ್ಟಣಕ್ಕೆ ಬರುತ್ತಾರೆ.

ತಜ್ಞರ ಸಮಿತಿಯೊಂದರ ಶಿಫಾರಸಿನ ಮೇರೆಗೆ 1947ರ ಸೆಪ್ಟೆಂಬರಿನಲ್ಲಿ ಆಯ್ಕೆಯಾದ ಇಲ್ಲಿಯ ನಿವೇಶನದಲ್ಲಿ ನಿರ್ಮಿಸಲಾದ ರೈಲ್ವೆ ಎಂಜಿನ್ ಕಾರ್ಖಾನೆ 1950ರ ನವೆಂಬರ್ 1ರಂದು ಪ್ರಾರಂಭವಾಯಿತು. ಮೊದಮೊದಲು ಇಂಗ್ಲೆಂಡಿನಿಂದ ಆಮದು ಮಾಡಿಕೊಂಡ ಬಿಡಿಭಾಗಗಳನ್ನು ಕೂಡಿಸಿ ರೈಲ್ವೆ ಎಂಜಿನ್ ತಯಾರಿಸಲಾಗುತ್ತಿತ್ತು. 1954ರ ಹೊತ್ತಿಗೆ ಅದಕ್ಕೆ ಅಗತ್ಯವಾದ ಬಿಡಿಭಾಗಗಳಲ್ಲಿ ಶೇ.90 ರಷ್ಟನ್ನು ಕಾರ್ಖಾನೆಯೇ ಉತ್ಪಾದಿಸಲಾರಂಭಿಸಿತು. 1954ರ ಜನವರಿ 6ರಂದು ತನ್ನ ನೂರನೆಯ ಎಂಜಿನನ್ನು ಭಾರತದ ರೈಲ್ವೆಗೆ ಒಪ್ಪಿಸಿತು. 1961ರಲ್ಲಿ ಇದು ವಿದ್ಯುತ್ ಚಾಲಿತ ರೈಲ್ವೆ ಎಂಜಿನುಗಳ ಉತ್ಪಾದನೆಯನ್ನಾರಂಭಿಸಿತು. 1972ರಿಂದ ಉಗಿಯ ಎಂಜಿನಗಳ ಉತ್ಪಾದನೆಯನ್ನು ನಿಲ್ಲಿಸಲಾಯಿತು. 1950ರಿಂದ 1972ರ ವರೆಗೆ ಒಟ್ಟು 2,351 ಉಗಿ ರೈಲ್ವೆ ಎಂಜಿನ್‍ಗಳನ್ನು ಉತ್ಪಾದಿಸಿದ ಈ ಕಾರ್ಖಾನೆ ತದನಂತರ ದೇಶದ ವಿದ್ಯುತ್ ಉತ್ಪಾದನೆಯ ಪ್ರಗತಿ ಮತ್ತು ತ್ವರಿತಗತಿಯ ಸಾಗಾಣಿಕೆಯ ಆವಶ್ಯಕತೆಗಳಿಗೆ ಅನುಗುಣವಾಗಿ ವಿದ್ಯುತ್ ಚಾಲಿತ ಎಂಜಿನ್‍ಗಳ ಉತ್ಪಾದನೆಗೆ ವಿಶೇಷ ಗಮನ ನೀಡಲಾರಂಭಿಸಿತು. ದೇಶದ ಯೋಜಿತ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ತ್ವದ ಪಾತ್ರ ವಹಿಸುತ್ತಿರುವ ಪಟ್ಟಣಗಳಲ್ಲಿ ಚಿತ್ತರಂಜನ್ ಒಂದು. (ಬಿ.ಎ.ಎಸ್.)