ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಿದಂಬರಯ್ಯ ಹೊಸಕೆರೆ

ವಿಕಿಸೋರ್ಸ್ದಿಂದ

ಚಿದಂಬರಯ್ಯ ಹೊಸಕೆರೆ - 1870-1938. ಧರ್ಮಪ್ರಚಾರಕರು, ಧಾರ್ಮಿಕ ಗ್ರಂಥ ಕರ್ತೃಗಳು. ಅಂದಿನ ಲೋಯರ್ ಸೆಕಂಡರಿ ಪರೀಕ್ಷೆ ಮುಗಿಸಿ, ದಾವಣಗೆರೆ ಮುಂತಾದ ಸ್ಥಳಗಳಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರೂ ಮುಖ್ಯಾಧ್ಯಾಪಕರೂ ಆಗಿ ಕೆಲಸ ಮಾಡಿದರು. ತುಂಬ ದೈವಭಕ್ತರು. ಆಧ್ಯಾತ್ಮಿಗಳು, ಉಪಾಧ್ಯಾಯ ವೃತ್ತಿಗೆ ರಾಜೀನಾಮೆ ಸಲ್ಲಿಸಿ ಸಾಧುಗಳಾದ ಗೋಂದಾವಲಿ ಮಹಾರಾಜರ ಮತ್ತು ಕುರ್ತುಕೋಟಿ ಮಹಾಭಾಗವತರಲ್ಲಿ ಸೇವಾ ನಿರತರಾದರು. ಕನ್ನಡ, ಸಂಸ್ಕøತ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ ಇವರಿಗೆ ಪರಿಶ್ರಮವಿತ್ತು. ಭಾರತೀಯ ತರುಣರನ್ನು ಪರಧರ್ಮ, ಪರಭಾಷಾ ವ್ಯಾಮೋಹದಿಂದ ಮುಕ್ತರನ್ನಾಗಿಸಿ ಸ್ವಧರ್ಮ ಸ್ವಭಾಷ ಪ್ರೇಮಿಗಳನ್ನಾಗಿಸಲು ಧಾರವಾಡದಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಶಿಕ್ಷಣ ಸಮಿತಿಯಲ್ಲಿ ಶಿಕ್ಷಕರಾಗಿ ನೇಮಕಗೊಂಡು ಮಕ್ಕಳಿಗೆ ಧರ್ಮಬೋಧೆ ಮಾಡತೊಡಗಿದರು. ಆಗ್ಗೆ ಧಾರ್ಮಿಕ ಗ್ರಂಥಗಳು ಕನ್ನಡದಲ್ಲಿ ತುಂಬ ವಿರಳವಾಗಿದ್ದುವು. ಸಂಸ್ಕøತದಲ್ಲಿದ್ದ ಧಾರ್ಮಿಕಪ್ರೌಢಗ್ರಂಥಗಳ ವ್ಯಾಸಂಗ ನಡೆಸಿ ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡುವುದು ಕಠಿಣ ಕಾರ್ಯವೇ ಆಗಿದ್ದ ಅಂಥ ಸಮಯದಲ್ಲಿ ಧರ್ಮಕ್ಕೆ ಸಂಬಂಧಿಸಿದಂತೆ ಮೂವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದರು. ಕೆಲವು ಭಾಷಾಂತರಗಳು, ಕೆಲವು ಟೀಕೆಗಳು, ಮತ್ತೆ ಕೆಲವು ಸ್ವತಂತ್ರ ಕೃತಿಗಳು, ಗೀತೆ, ವೇದ, ಉಪನಿಷತ್ತು ಮತ್ತು ಪುರಾಣಗಳ ಧರ್ಮಸೂತ್ರಗಳನ್ನು ಸರಳವಾಗಿ ಹಲವಾರು ಉಪಕತೆಯೊಂದಿಗೆ, ಕನ್ನಡ ಪ್ರಾಚೀನ ಕವಿಗಳ, ಕಾವ್ಯಗಳ ಉದಾಹರಣೆಗಳೊಂದಿಗೆ ಕನ್ನಡಕ್ಕೆ ತಂದರು. ಇವರು ವ್ಯಾಖ್ಯಾನ ಅಬಾಲವೃದ್ಧರಿಗೂ ತಿಳಿಯುವಂಥದು. ಶೈಲಿ ಸರಳ, ಗ್ರಂಥರಚನೆ, ಪ್ರಕಾಶನಗಳ ಜೊತೆಗೆ ಪರಮಾರ್ಥ ಮತ್ತು ಭಕ್ತಬಂಧು ಎಂಬ ಎರಡು ಮಾಸಪತ್ರಿಕೆಗಳನ್ನು ಇವರು ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ಕೀರ್ತನಕಾರರ ಸಮ್ಮೇಳನ ನಡೆಸಿ, ಕೀರ್ತನ ಕಾರ್ಯವನ್ನು ಶಾಸ್ತ್ರೀಯಗೊಳಿಸಲು ಪ್ರಯತ್ನಿಸಿದರು. ಮಾದರಿಯಾಗಿ ಹಲವು ಕೀರ್ತನ ಗ್ರಂಥಗಳನ್ನು ರಚಿಸಿದರು. ಇವರ ಧಾರ್ಮಿಕ ಶ್ರದ್ಧೆ ಮತ್ತು ಕರ್ತವ್ಯ ಇವರಿಗೆ ಕರ್ನಾಟಕ ಇವರಿಗೆ ಕವಿರತ್ನ ಎಂಬ ಬಿರುದನ್ನು ತಂದುಕೊಟ್ಟಿತು. ಶಾಲೆಗಳಲ್ಲಿ ಕಲಿತದ್ದು ಅಲ್ಪವಾದರೂ ಸ್ವಂತ ಪರಿಶ್ರಮದಿಂದ ಮಹಾಜ್ಞಾನಿಗಳೆನಿಸಿಕೊಂಡು ಜ್ಞಾನದಾನದಲ್ಲೇ ತಮ್ಮ ಬಹುಭಾಗ ಜೀವನವನ್ನು ಕಳೆದ ಇವರು ತಮ್ಮ 68ನೆಯ ವಯಸ್ಸಿನವರೆಗೂ ತಿರುಮಕೂಡಲು ನರಸೀಪುರದ ನದೀತೀರದಲ್ಲಿ ಇದ್ದುಕೊಂಡು ಗ್ರಂಥರಚನೆ ನಡೆಸುತ್ತ 1938ರಲ್ಲಿ ವೈಕುಂಟವಾಸಿಗಳಾದರು.

ಚಿದಂಬರಯ್ಯನವರು ರಚಿಸಿದ ಗ್ರಂಥಗಳ ಸಂಖ್ಯೆ ಅಪಾರ, ಅಂತೆಯೇ ವೈವಿಧ್ಯಮಯ. ಗದ್ಯ, ಪದ್ಯ, ನಾಟಕ, ಟೀಕೆ ಮುಂತಾದವುಗಳಲ್ಲೆಲ್ಲ ಇವರು ಕೈಯಾಡಿಸಿದ್ದಾರೆ. ಉಪಾಧ್ಯಾಯ ವೃತ್ತಿಯ ತಮ್ಮ ಅನುಭವಗಳನ್ನು, ಆ ಕ್ಷೇತ್ರದ ಕುಂದುಕೊರತೆಗಳನ್ನು ಆಧರಿಸಿಕೊಂಡು ಕೆಲವು ಗ್ರಂಥ ರಚಿಸಿದ್ದಾರೆ. ಮನಃ ಶಿಕ್ಷಣ, ಬೋಧನ ಸ್ವಭಾವ, ಬೋಧನಕ್ರಮ, ಉಪಾಧ್ಯಾಯರ ಯೋಗ್ಯತೆಗಳು, ಗಣಿತಾಬ್ಜ ಭಾಸ್ಕರ — ಇವು ಅವುಗಳಲ್ಲಿ ಕೆಲವು. ಕುರ್ತಕೋಟಿ ಮಹಾಭಾಗವತರ ಉಪನ್ಯಾಸಗಳನ್ನೆಲ್ಲ ಸಂಗ್ರಹಿಸಿ ಭಗವದ್ಗೀತಾಸಾರವೆಂಬ ಗ್ರಂಥವನ್ನೂ, ಮರಾಠಿಯ ಮನಾಜೇ ಶ್ಲೋಕವೆಂಬ ಗ್ರಂಥವನ್ನು ಆಧರಿಸಿ ಮನಸ್ಸಿಗುಪದೇಶವೆಂಬ ಕನ್ನಡ ಗ್ರಂಥವನ್ನೂ ಪ್ರಕಟಿಸಿದ್ದಾರೆ. ನೀತಿಗಳ ನೆಲಗಟ್ಟು, ಗುಣನಿರೂಪಣೆ, ಭರತನ ಬಂಧುಪ್ರೇಮ-ಮುಂತಾದ ನೀತಿಗ್ರಂಥಗಳನ್ನೂ ಸುಧರ್ಮ ಪ್ರಭಾವ, ಕಲಿಸಂಕರಣ, ಕೃಷ್ಣಮಹೇಶ್ವರಿ, ನವೀನಕಲ್ಪ, ಚೂಡಾಲೆ-ಮುಂತಾದ ನಾಟಕಗಳನ್ನೂ ವಿದ್ಯಾರಣ್ಯ ಕಾವ್ಯ, ಪರಮಾತ್ಮ ಸ್ತುತಿ, ಗುರುಸ್ತುತಿ-ಮುಂತಾದ ಸ್ತೋತ್ರ ಗ್ರಂಥಗಳನ್ನೂ ಅನೇಕ ಕೀರ್ತನೆಗಳನ್ನು ಸಂಗೀತಕ್ಕೆ ಅಳವಡಿಸಿ ಭಕ್ತಗೀತಾವಳಿ ಗ್ರಂಥವನ್ನೂ ಹರಿಕಥೆ ನಡೆಸುವವರಿಗೆ ಮಾರ್ಗದರ್ಶನವಾಗುವಂತೆ ಕೀರ್ತನೆ ಕಂಠಾಭರಣ ಮುಂತಾದ ಕೀರ್ತನ ಗ್ರಂಥಗಳನ್ನೂ ಇವರು ರಚಿಸಿದ್ದಾರೆ. ಜ್ಞಾನ ಪ್ರಧಾನವಾದ ಗೀತಾರ್ಥ ಚಂದ್ರಿಕೆ, ಪಂಚದಶೀ ತತ್ತ್ವಾರ್ಥ, ವೇದಾಂತ ರೂಪರೇಖೆ, ಮಾಂಡೂಕ್ಯ ಸಂವಾದ, ವೇದಾಂತ ಜೀವನ ಇವೇ ಮೊದಲಾದ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅನುಭವಾಮೃತಕ್ಕೆ ಸಂದರ್ಶನೀ ಎಂಬ ಕನ್ನಡ ಟೀಕೆಯನ್ನೂ ಮಲ್ಲಾರಿ ಮಹಾತ್ಮೆ ಟೀಕಾ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳೇ ಅಲ್ಲದೆ ಭರತಖಂಡದ ಜೀವಜ್ಯೋತಿಗಳು. ಮಕ್ಕಳ ಗೀತೆ, ಜೀವನ್ಮುಕ್ತಿ ವಿವೇಕ, ಆರ್ಯಧರ್ಮ ಪ್ರದೀಪ, ಆತ್ಮಶಕ್ತಿಯ ತೇಜಸ್ಸು-ಮುಂತಾದವೂ ಇವರ ಕೃತಿಗಳು. ಆರ್ಯಧರ್ಮ ಪ್ರದೀಪ ಇವರ ಶ್ರೇಷ್ಠ ಗ್ರಂಥಗಳಲ್ಲೊಂದು. ಸುಮಾರು 550 ಪುಟಗಳ ಈ ಗ್ರಂಥ 1924ರಲ್ಲಿ ಮೊದಲ ಮುದ್ರಣಗೊಂಡು ಈಗಾಗಲೇ ಮೂರು ಬಾರಿ ಪುನರ್‍ಮುದ್ರಣಗೊಂಡಿದೆ. ದೇವರು, ಜಗತ್ತು ಧರ್ಮ, ಅವತಾರ ಮತ್ತು ಜನ್ಮಾಂತರ, ವಿದ್ಯಾರ್ಥಿ ವೃತ್ತಿ, ಕರ್ಮಯೋಗ, ರಾಜಯೋಗ, ಭಕ್ತಿಯೋಗ, ಜ್ಞಾನಯೋಗ, ಇವನ್ನು ಸೋದಾಹರಣವಾಗಿ, ಹಲವು ಆಕರ್ಷಕ ಕಥೆಗಳೊಂದಿಗೆ ಇಲ್ಲಿ ವಿವರಿಸಿದ್ದಾರೆ. ಪರಿಶಿಷ್ಟವಾಗಿ ವೈದಿಕ ಧರ್ಮದ ಪರಮ ಗ್ರಂಥಗಳಾದ ವೇದಗಳು, ವೇದಾಂಗಗಳು, ಮೀಮಾಂಸೆ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ ಮತ್ತು ಪುರಾಣಗಳ ಹಾಗೂ ಕೆಲವು ಮುಖ್ಯ ಮತಭೇದಗಳಾದ ಭೌದ್ಧ, ಜೈನ, ಅದ್ವೈತ, ವಿಶಿಷ್ಟಾದ್ವೈತ , ವೀರಶೈವ, ದ್ವೈತ, ಸಿಖ್ ಮತಗಳ ಬಗ್ಗೆಯೂ ಆರ್ಯಸಮಾಜ, ಯಹೂದೀ, ಪಾರ್ಸಿ, ಇಸ್ಲಾಮ್ ಮತ್ತು ಕ್ರೈಸ್ತ ಮತಗಳ ಬಗ್ಗೆಯೂ ಸ್ಥೂಲ ವಿವರಣೆ ನಿಡಿದ್ದಾರೆ.

1929ರಲ್ಲಿ ಪ್ರಕಟವಾದ ಗೀತಾಥ್ ಚಂದ್ರಿಕೆ ಇವರ ಮತ್ತೊಂದು ಜನಪ್ರಿಯ ಗ್ರಂಥ. ಗೀತೆಯ ಬಗ್ಗೆ ಹಲವು ಕನ್ನಡ ವ್ಯಾಖ್ಯಾನ ಗ್ರಂಥಗಳಿದ್ದರೂ ನೂತನ ಮಾದರಿಯಲ್ಲಿ ರಚಿತವಾದ ಈ ಗ್ರಂಥ ತುಂಬ ಜನಪ್ರಿಯವಾಗಿದೆ. ಗೀತೆಯ ಒಂದೊಂದು ಶಬ್ದಕ್ಕೂ ಸೂಕ್ತ ಅರ್ಥ ನೀಡಿ, ವಿವರಣೆ, ಉದಾಹರಣೆಗಳಿಗಿಂತ ಗೀತೆಯನ್ನು ಸುಲಭ ಗ್ರಾಹ್ಯವಾಗಿ ಮಾಡಿದ್ದಾರೆ. ಅವರ ಕೀರ್ತನ ಗ್ರಂಥಗಳಲ್ಲಿ ಕೀರ್ತನ ಕಂಠಾಭರಣ-ರಾಮಾಯಣ ತುಂಬ ಪ್ರಸಿದ್ಧ ಗ್ರಂಥ. ಸುಮಾರು 225 ಪುಟಗಳ ಈ ಗ್ರಂಥ 1928ರಲ್ಲಿ ಪ್ರಕಟವಾಗಿದೆ. ಇಂದಿಗೂ ಅದು ಕೀರ್ತನಕಾರರಿಗೆ ಕೈದೀಪವಾಗಿದೆ. ಇವರ ಗ್ರಂಥಗಳಲ್ಲಿರುವ ವೈಶಿಷ್ಟ್ಯವೆಂದರೆ ಸಂಸ್ಕøತ ಕಾವ್ಯಭಾಗಗಳ ಜೊತೆಗೆ ಕನ್ನಡ ಪ್ರಾಚೀನ ಸಾಹಿತ್ಯ ಹಾಗೂ ಕವಿಗಳ ಪದ್ಯಗಳನ್ನು ಧಾರಾಳವಾಗಿ ಉಪಯೋಗಿಸಿಕೊಂಡಿರುವುದು. ಹಲವು ಕನ್ನಡ, ಕವಿಗಳ ವಚನಕಾರರ ಪದ್ಯಗಳಿಗೆ ಸಂಗೀತ ಸ್ವರ ಸಂಯೋಜನೆ ಮಾಡಿದ್ದಾರೆ. ತಾವೇ ಸ್ವತಃ ಕೆಲವು ಗೀತೆಗಳನ್ನು ರಚಿಸಿದ್ದಾರೆ. ಮರಾಠಿಯಿಂದ ಸಾಕಿ, ದಿಂಡಿ ಛಂದಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಒಟ್ಟಿನಲ್ಲಿ 20ನೆಯ ಶತಮಾನದ ಪೂರ್ವಾರ್ಧದಲ್ಲಿ ಚಿದಂಬರಯ್ಯನವರು ಮಾಡಿರುವ ಸಾಹಿತ್ಯಕೃಷಿ ಅಪಾರವಾದುದು. ಓದು ಬಲ್ಲವರೆಲ್ಲರೂ ಇಂಗ್ಲಿಷಿನತ್ತ ವಾಲಿ, ಇಂಗ್ಲಿಷ್ ಶಿಕ್ಷಣ ಪಡೆದು ಸರ್ಕಾರಿ ಹುದ್ದೆಗಳತ್ತ ಹಂಬಲಿಸಿ ಹೋಗುತ್ತಿದ್ದ ಸಮಯದಲ್ಲಿ ತಮ್ಮ ಪಾಲಿಗೆ ದೊರೆತಿದ್ದ ಅಧ್ಯಾಪಕ ವೃತ್ತಿಗೂ ರಾಜೀನಾಮೆಯಿತ್ತು ಆಧ್ಯಾತ್ಮಿಕ ಸಾಧನೆಯತ್ತ ಚಿದಂಬರಯ್ಯನವರು ಮನಸ್ಸನ್ನು ಹರಿಸಿದರು. (ಜೆ.ಎಸ್.ಪಿ.ಎಂ.)