ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೀನೀ ತತ್ತ್ವ

ವಿಕಿಸೋರ್ಸ್ದಿಂದ

ಚೀನೀ ತತ್ತ್ವ

ಚೀನೀತತ್ತ್ವ ಭಾರತದ ತತ್ತ್ವದಂತೆಯೇ ತುಂಬ ಪ್ರಾಚೀನವಾದ್ದು. ಬೌದ್ಧ ತತ್ತ್ವ ಚೀನಕ್ಕೆ ಹರಡಿ ಅಲ್ಲಿನ ತತ್ತ್ವಗಳಲ್ಲಿ ಒಂದು ಮುಖ್ಯ ತತ್ತ್ವವಾಗಿ, ಭಾರತದಲ್ಲಿ ಕ್ಷೀಣಗೊಂಡ ಮೇಲೂ ಅಲ್ಲಿ ಅದು ಸ್ಥಿರವಾಗಿ ನೆಲೆಸಿತು. ಕ್ರಿ.ಶ. ಆರನೆಯ ಶತಮಾನದಲ್ಲಿ ಬೌದ್ಧನಾದ ಪರಮಾರ್ಥ ಭಾರತೀಯ ನ್ಯಾಯ ಗ್ರಂಥಗಳನ್ನು ಚೀನೀಭಾಷೆಗೆ ಪರಿವರ್ತಿಸಿದ. ಕ್ರಿ.ಶ. ಏಳನೆಯ ಶತಮಾನದಲ್ಲಿ ಹ್ಯುಯೆನ್‍ತ್ಸಾಂಗ್ ತರ್ಕಗ್ರಂಥಗಳನ್ನು ಚೀನೀಭಾಷೆಗೆ ಭಾಷಾಂತರಿಸಿ ಚೀನಕ್ಕೆ ತೆಗೆದುಕೊಂಡು ಹೋದ. ಹ್ಯುಯೆನ್‍ತ್ಸಾಂಗನ ಶಿಷ್ಯ ಕ್ವ್ಯೆ-ಚಿ ಶಂಕರಸ್ವಾಮಿ 'ನ್ಯಾಯಪ್ರವೇಶದ ಮೇಲೆ ಆರು ಸಂಪುಟಗಳ ಮಹಾವ್ಯಾಖ್ಯಾನವನ್ನು ಬರೆದ. ಇದು ಚೀನೀಯರಲ್ಲಿ ತರ್ಕವಿಚಾರವಾಗಿ ತುಂಬ ಆಸಕ್ತಿ ಹುಟ್ಟಿಸಿತು. ಚೀನೀ ತತ್ತ್ವವೆಂದರೆ ನಾವು ತಿಳಿದಿರುವುದು ಕೂಂಗ್ ಫೂಟ್ಸೆ ಮತ್ತು ಲಾವೋಟ್ಸು ತತ್ತ್ವವೆಂದೇ. ಅವೆರೆಡು ಅದರ ಪ್ರಧಾನ ತತ್ತ್ವಗಳಾದರೂ ಅವು ಬಹು ರೂಪಾಂತರ ಪಡೆದಿವೆ. ನವೀನ ಕೂಂಗ್ ಫೂಟ್ಸೆ ತತ್ತ್ವವೆಂದು ಕ್ರಿ.ಶ. ಹನ್ನೆರಡನೆಯ ಶತಮಾನದ ಚು ಷೀ ಪ್ರತಿಪಾದಿಸಿದ ತತ್ತ್ವವನ್ನು ಕೂಂಗ್ ಫೂಟ್ಸೆ ಪುನರ್ಜನ್ಮ ತಾಳಿ ನೋಡಿದ್ದರೆ ಬಹುಶಃ ಅದು ತನ್ನದೆಂದು ಗುರುತು ಹಿಡಿಯಲಾಗುತ್ತಿರಲಿಲ್ಲ. ಹಾಗೆಯೇ ನೂತನ ಲಾವೋ ಟ್ಸು ತತ್ತ್ವವೂ ಹಿಂದಿನ ಲಾವೋ ಟ್ಸು ತತ್ತ್ವದಿಂದ ಬಹುದೂರ ಸಾಗಿದೆ.

ಚೀನೀತತ್ತ್ವದ ಮುಖ್ಯ ಘಟ್ಟಗಳು ಇವು ; ಇತಿಹಾಸಪೂರ್ವ ತತ್ತ್ವ ಕ್ರಿ. ಪೂ. 3000ದಿಂದ ಕ್ರಿ.ಪೂ. 1800ದ ವರೆಗಿನದು. ಈ ತತ್ತ್ವ ಪೌರಾಣಿಕ ಸಂತ ದೊರೆಗಳದು. ಇದು ಕತೆಯ ರೂಪದಲ್ಲಿದೆ. ಈ ಕತೆಗಳು ಬಹುಶಃ. ಕ್ರಿ.ಪೂ. 1800ರ ಆಚೆ ಹುಟ್ಟಿದವು. ಕ್ರಿ.;ಪೂ. 1766 ರಿಂದ ಕ್ರಿ.ಪೂ. 1123ರ ವರೆಗಿನ ಕಾಲ ಷಾನ್‍ವಂಶದ ಅರಸರ ಕಾಲ. ಈ ಕಾಲದ್ದು ಮಂತ್ರವಾದಿಗಳ ತತ್ತ್ವ. ನಿಜವಾಗಿ ತತ್ತ್ವಚಿಂತನೆ ಪ್ರಾರಂಭವಾದದ್ದು ಚೌ ವಂಶದ ಅರಸರ ಕಾಲದಲ್ಲಿ (ಕ್ರಿ.ಪೂ. 1100 ರಿಂದ ಕ್ರಿ.ಪೂ. 256) ಕೂಂಗ್ ಫೂಟ್ಸೆ, ತಾಓ ತತ್ತ್ವದ ಪ್ರಥಮ ಪ್ರತಿಪಾದಕ ಯಾಂಗ್ ಚು, ಕೂಂಗ್ ಫೂಟ್ಸೆಯ ಪಂಥದ ಮೆನ್ಸಿಯಸ್, ನಾಮತತ್ತ್ವ ಪಂಥದ ಟೆಂಗ್ ಷೀ, ಹ್ಯೂಯಿ ಷಿಷ್ ಮತ್ತು ಕುಂಗ್ ಸುಂಗ್ ಲಂಗ್, ತಾಓ ತತ್ತ್ವದ ದ್ವೀತಿಯ ಪ್ರತಿಪಾದಕ ಲಾವೋ ಟ್ಸು, ತಾಓ ತತ್ತ್ವದ ತೃತೀಯ ಪ್ರತಿಪಾದಕ ಚ್ವಾಂಗ್ ಟ್ಸು, ಕೂಂಗ್ ಫೂಟ್ಸೆ ಅನುಯಾಯಿಯಾದ ಹುಸನ್ ಟ್ಸು, ಕಾನೂನಿನ ತತ್ತ್ವವನ್ನು ಪ್ರತಿಪಾದಿಸಿದ ಹ್ಯಾನ್ - ಫೈ - ಟ್ಸು ಈ ಕಾಲದವರು. ಕ್ರಿ.ಶ. 221-589 ರವರೆಗೆ ಹಾನ್ ವಂಶದ ರಾಜರ ಕಾಲದಲ್ಲಿ ಚೀನದಲ್ಲಿ ಬೌದ್ಧತತ್ತ್ವ ಮುಂದಕ್ಕೆ ಬಂತು. ಕ್ರಿ.ಶ. 590-617 ರ ಸೂಯಿ ಸಂತತಿಯ ಕಾಲದಲ್ಲೂ ಕ್ರಿ.ಶ. 618-906ರವರೆಗಿನ ಟಾನ್ ಸಂತತಿಯವರ ಕಾಲದಲ್ಲೂ ಬೌದ್ಧತತ್ತ್ವ ಚೀನದ ತುಂಬ ಪ್ರಬಲ ತತ್ತ್ವವಾಗಿತ್ತು. ಅಲ್ಲಿಂದಾಚೆಗೆ ಅದು ಕ್ಷೀಣದೆಶೆಗೆ ಇಳಿಯಿತು. ಕ್ರಿ..ಶ. 960-1279ರವರೆಗೆ ಸೂಂಗ್ ಮನೆತನದ ಆಳಿಕೆಯಲ್ಲಿ ಕೂಂಗ್ ಫೂಟ್ಸೆ ತತ್ತ್ವ ಹೊಸ ರೂಪ ತಾಳಿ ಪ್ರಾಬಲ್ಯಕ್ಕೆ ಬಂತು. ಕ್ರಿ.ಶ. 1280-1267ರ ವರೆಗಿನ ಯೂಅನ್ ಎಂಬ ಮಂಗೋಲಿಯ ವಂಶದ ಆಳಿಕೆಯಲ್ಲಿ ತತ್ತ್ವದಲ್ಲಿ ಆಸಕ್ತಿ ಕಡಿಮೆಯಾಯಿತು. 1368ರಲ್ಲಿ ಮಿಂಗ್ ವಂಶದವರು ಚೀನದ ಪ್ರಭುಗಳಾದಾಗ ಕುಂಗ್ ಫೂಟ್ಸೆ ತತ್ತ್ವ, 'ವಿಶ್ವಚೇತನ ತತ್ತ್ವ.' ಎಂಬ ಹೊಸ ರೂಪದಲ್ಲಿ ಪುನರುತ್ಥಾನಗೊಂಡಿತು. ಕ್ರಿ.ಶ. 1644-1611ರ ವರೆಗೆ ಚೀನಾ ಪರಕೀಯರಾದ ವ್ಯೂಂಚೂ ವಂಶದವರ ಆಳ್ವಿಕೆಗೆ ಒಳಪಟ್ಟಿತು. ಈ ಕಾಲದಲ್ಲಿ ಚೀನಕ್ಕೆ ಪಾಶ್ಚಾತ್ಯರ ಸಂಪರ್ಕ ಉಂಟಾಯಿತು. ಕ್ರಿ.ಶ. 16-17ನೆಯ ಶತಮಾನಗಳಲ್ಲಿ ಚೀನೀಯರು ಜೆಸ್ಯುಯಿಟ್ ಕ್ರೈಸ್ತಮತ ಪ್ರಚಾರಕರಿಂದ ಪಾಶ್ಚಾತ್ಯರ ಗಣಿತ ಮತ್ತು ಖಗೋಳಶಾಸ್ತ್ರಗಳನ್ನು ಕಲಿತರು. 19ನೆಯ ಶತಮಾನದಲ್ಲಿ ಚೀನದಲ್ಲಿ ಕ್ರೈಸ್ತಮತ ಪ್ರಚಾರ ಹೆಚ್ಚಿದಾಗ ಟಾನ್ ಸು-ಟ್ಸುಂಗ್ ಎಂಬಾತ ಕುಂಗ್ ಫೂಟ್ಸೆಯ ತತ್ತ್ವವನ್ನು ಆಧುನಿಕ ಭಾವನೆಗಳಿಗನುಸಾರವಾಗಿ ಬೆಳೆಸಿದ. ಎನ್‍ಫೂ ಎಂಬಾತ ಇಂಗ್ಲೆಂಡಿಗೆ ಹೋಗಿ ಹಕ್ಸ್ಲೇ. ಆ್ಯಡಮ್ ಸ್ಮಿತ್, ಹರ್ಬಟ್ ಸ್ಟೆನ್ಸರ್, ಜೆ. ಎಸ್. ಮಿಲ್ ಮುಂತಾದವರ ತತ್ತ್ವಗಳನ್ನು ಅಧ್ಯಯನ ಮಾಡಿ ಅವರ ಕೆಲವು ಗ್ರಂಥಗಳನ್ನು 1864-1895ರ ವರೆಗೆ ಚೀನೀ ಭಾಷೆಗೆ ಪರಿವರ್ತಿಸಿದ. ಆದರೂ ಚೀನೀಯರಿಗೆ 1919ರ ವರೆಗೆ ಅತ್ಯಂತ ಪ್ರಭಾವಶಾಲಿಗಳಾದ ಪಾಶ್ಚಾತ್ಯ ತತ್ತ್ವಜ್ಞರ ಪರಿಚಯವಾಗಲಿಲ್ಲ. 1919ರಲ್ಲಿ ಜಾನ್ ಡ್ಯೂಯಿ ಮತ್ತು ಬರ್‍ಟ್ರಂಡ್ ರಸೆಲ್ ಅವರು ಚೀನದಲ್ಲಿ ಕೊಟ್ಟ ಉಪನ್ಯಾಸಗಳಿಂದ ಚೀನೀಯರಿಗೆ ಸ್ವಲ್ಪಮಟ್ಟಿಗೆ ಪಾಶ್ಚಾತ್ಯ ತತ್ತ್ವದ ಪರಿಚಯವಾಯಿತು. ಆದರೂ ಇವರಿಬ್ಬರೂ ತಮ್ಮ ಸ್ವಂತ ತತ್ತ್ವವನ್ನು ಬೋಧಿಸಿದರೇ ಹೊರತು, ಉಳಿದವರ ತತ್ತ್ವವನ್ನು ತಿಳಿಸಲಿಲ್ಲ. ಪಾಶ್ಚಾತ್ಯ ತತ್ತ್ವಚರಿತ್ರೆಯ ಪರಿಚಯ ಮಾಡಿಕೊಡಲಿಲ್ಲ. ಇಪ್ಪತ್ತನೆಯ ಶತಮಾನದಲ್ಲಿ ಅವರಿಗೆ ಪಾಶ್ಚಾತ್ಯ ತತ್ತ್ವ ಹೆಚ್ಚಾಗಿ ಪರಿಚಯವಾಯಿತು. ಅದರ ರೀತಿಯನ್ನು ಅನುಸರಿಸಿ ಅವರೂ ತಮ್ಮ ತತ್ತ್ವಗಳನ್ನು ಹೊಸರೀತಿಯಲ್ಲಿ ವಿಮರ್ಶಾತ್ಮಕವಾಗಿ ರೂಪಿಸುತ್ತಿದ್ದಾರೆ. ಪೂಂಗ್ ಯು-ಲಾನ್ ಎಂಬುವನು ಚೀನಿ ತತ್ತ್ವವನ್ನು ಕುರಿತು ಬರೆದ ಗ್ರಂಥವನ್ನು ಆಧರಿಸಿ ಇಲ್ಲಿ ವಿಷಯ ಸಂಗ್ರಹ ಮಾಡಲಾಗಿದೆ.

ಚೀನೀತತ್ತ್ವದ ಮನೋಭಾವವನ್ನು ಕುರಿತು ಅವನು ಹೀಗೆ ಹೇಳುತ್ತಾನೆ. ತಾತ್ತ್ವಿಕರನ್ನು ಎರಡು ಬಗೆಯಾಗಿ ವಿಂಗಡಿಸುವುದುಂಟು. ಇಹದಲ್ಲಿ, ಸಾಮಾಜಿಕ ಸಂಸಾರಿಕ ಜೀವನದಲ್ಲಿ ಆಸಕ್ತರಾದವರು ಒಂದು ಗುಂಪಿನವರು. ಸಾಂಸಾರಿಕ ಜೀವನದಿಂದ ಹೊರಚ್ಚಾಗಿ ನಿಂತು, ಲೋಕಾತೀತ ವಸ್ತುಗಳಲ್ಲಿ ಆಸಕ್ತರಾಗಿರುವವರು ಇನ್ನೊಂದು ಗುಂಪಿನವರು ಸಂನ್ಯಾಸಿಗಳು. ಸಾಮಾನ್ಯವಾಗಿ ಇವರಿಬ್ಬರ ತತ್ತ್ವ ಪರಸ್ಪರ ವಿರುದ್ಧವೆಂದು ಹೇಳುವುದುಂಟು. ಇವೆರಡನ್ನೂ ವಿರೋಧವಿಲ್ಲದೆ ಸಮನ್ವಯಗೊಳಿಸಲು ಚೀನೀ ತತ್ತ್ವ ಪ್ರಯತ್ನಿಸುತ್ತದೆ. ಇಹದಲ್ಲಿ ಪರವನ್ನೂ ಪರದಲ್ಲಿ ಇಹವನ್ನೂ ಕಾಣಬಯಸುತ್ತದೆ. ಹೀಗೆ ಬಯಸುವವರನ್ನು ಚೀನೀಯರು ಮಹಾಪ್ರಜ್ಞರೆಂದು, ಅಂದರೆ ತಾತ್ತ್ವಿಕರೆಂದು ಕರೆಯುತ್ತಾರೆ. ಅವರು ಒಳಗೆ ಪ್ರಾಜ್ಞ ಚಕ್ರವರ್ತಿಗಳು, ಹೊರಗೆ ಲೌಕಿಕ ಸಾರ್ವಭೌಮನಂತೆ ಲೋಕಹಿತದಲ್ಲಿ ಆಸಕ್ತರು. ಇಂಥ ಚಾರಿತ್ರ್ಯವನ್ನು ಬೆಳೆಸುವುದೇ ಚೀನೀತಾತ್ತ್ವಿಕರ ಮುಖ್ಯಧ್ಯೇಯ. ಚೀನೀ ತಾತ್ತ್ವಿಕ ಕುಟುಂಬಿ ಹಾಗೂ ವಿಶ್ವಕುಂಟುಂಬಿ ಬರಿಯ ಕುಟುಂಬಿಯಾದವ ಸ್ವಾರ್ಥಿ. ವಿಶ್ವಕುಟುಂಬಿಯಾದವ ಎಲ್ಲವನ್ನೂ ಸಮದೃಷ್ಟಿಯಿಂದ ನೋಡುತ್ತಾನೆ. ಇಂಥ ವಿಶ್ವಕುಟುಂಬಿಯಾದವ ರಾಜಕೀಯದಲ್ಲಿ ಆಸಕ್ತಿ ವಹಿಸಲೇಬೇಕು. ಸಾರ್ವತ್ರಿಕ ಜನಜೀವನವನ್ನು ನಿಸ್ವಾರ್ಥ ಜೀವನವನ್ನಾಗಿ ಪರಿವರ್ತಿಸಬೇಕು. ಅವನ ತತ್ತ್ವ ಕೇವಲ ಸ್ವರ್ಗದಲ್ಲಿರುವ ಪವಿತ್ರ ತತ್ತ್ವವಾಗಿರದೆ ಅದು ಸಾರ್ವತ್ರಿಕ ಜನಜೀವನಕ್ಕೆ ಇಳಿದು, ಅದನ್ನು ವ್ಯಾಪಿಸಿ ಅದನ್ನು ಇಹದ ಸ್ವರ್ಗೀಯ ಜೀವನವನ್ನಾಗಿ ಪರಿವರ್ತಿಸಬೇಕು. ಆದ್ದರಿಂದ ಚೀನೀತತ್ತ್ವರಾಜಕೀಯ ತತ್ತ್ವಕ್ಕೆ ಆಂತರಿಕವಾದದ್ದು. ಪ್ರತಿಯೊಬ್ಬ ಚೀನೀ ತಾತ್ತ್ವಿಕನೂ ತನ್ನ ಆಧ್ಯಾತ್ಮಕ್ಕೆ ಸಂಗತವಾದ ರಾಜಕೀಯ ತತ್ತ್ವವನ್ನು ರೂಪಿಸಿರುತ್ತಾನೆ. ಚೀನೀಯರ ನಾಮತತ್ತ್ವ ಮೇಲ್ನೋಟಕ್ಕೆ ಕೇವಲ ಮಾತಿನ ಮೋಡಿಯಾಗಿ ಕಂಡರೂ ಅದನ್ನು ಕುಂಗ್-ಸನ್-ಲುಂಗ್ ರಾಜ ಮತ್ತು ಪ್ರಜೆಗಳ ವಿವಿಧ ಸಂಬಂಧಗಳಿಗೆ ಅನ್ವಯಿಸಿರುತ್ತಾನೆ. ಆದ್ದರಿಂದ ಚೀನೀ ತತ್ತ್ವ ಕೇವಲ ಒಣತತ್ತ್ವ ವಿವೇಚನೆಯಲ್ಲ. ಕಾರ್ಯರೂಪವಾದ ಅನುಭವ ತತ್ತ್ವ, ಜ್ಞಾನ ವಿವೇಕವಾಗಿ ಸದ್ಗುಣದಲ್ಲಿ ಪೂರ್ಣವಾಗಬೇಕು. ಒಬ್ಬನ ತತ್ತ್ವಕ್ಕೆ ಅವನ ಚಾರಿತ್ಯ್ರ ಒರೆಗಲ್ಲು. ಕೆಲವು ತಾತ್ತ್ವಿಕರಲ್ಲಿ, ಉದಾಹರಣೆಗೆ ಕೂಂಗ್ ಫೂಟ್ಸೆಯಲ್ಲಿ ಅವನ ಜೀವನಚರಿತ್ರೆಯೇ ಅವನ ತತ್ತ್ವವಾಗಿ ಪರಿಣಮಿಸಿದೆ.

ಚೀನೀತತ್ತ್ವ ಭಾರತೀಯ ದರ್ಶನಗಳಂತೆ, ಪ್ರಮಾಣ, ಪ್ರಮೇಯ, ಪ್ರಮಿತಿ, ಪ್ರಾಮಾಣ್ಯಗಳೆಂಬ ಚತುರಂಗಸಮೇತವಾಗಿ ತರ್ಕಬದ್ಧವಾಗಿ ನಿರೂಪಣೆಯಾದ ವ್ಯವಸ್ಥಿತ ತತ್ತ್ವವಲ್ಲ. ಚೀನೀ ತಾತ್ತ್ವಿಕರ ಬರೆವಣಿಗೆಯಲ್ಲಿ ಬಿಡಿಬಿಡಿ ಉಕ್ತಿಗಳು, ಉದಾಹರಣೆಗಳು, ಉಪಮಾನಗಳು ಕತೆಗಳು ಸೇರಿವೆ. ಕೆಲವು ವೇಳೆ ಆ ಉಕ್ತಿಗಳು ಪರಸ್ಪರ ವಿರೋಧಿಗಳಂತೆ ತೋರುತ್ತವೆ. ಅವುಗಳ ವಾಚ್ಯಾರ್ಥ ಅಪೂರ್ಣವಾದರೂ ಸೂಚ್ಯಾರ್ಥ ಅಪಾರವಾದದ್ದು, ಚೀನೀ ಕಲೆಯಲ್ಲಿ ವಾಚ್ಯಾರ್ಥಕ್ಕಿಂತಲೂ ಧ್ವನ್ಯರ್ಥಕ್ಕೆ ಹೆಚ್ಚು ಬೆಲೆ. ಹಾಗೆಯೇ ಅವರ ತತ್ತ್ವದ ಉಕ್ತಿಗಳಲ್ಲೂ ಸೂಚ್ಯಾರ್ಥಕ್ಕೆ ಪ್ರಾಧಾನ್ಯ. ಮಾತು ಮುಖ್ಯವಲ್ಲ. ಅದರ ಇಂಗಿತ ಮುಖ್ಯ. ಅದು ತಿಳಿದಾಗ ಅರ್ಥ ಮುಂದಾಗುತ್ತದೆ, ಮಾತು ಹಿಂದಕ್ಕೆ ಸರಿಯುತ್ತದೆ. ಕೆಲವು ವೇಳೆ ಚೀನೀ ತಾತ್ತ್ವಿಕರು ಕೇವಲ ಮೌನದಿಂದಲೇ ತಮ್ಮ ತತ್ತ್ವವನ್ನು ಧ್ವನಿಸುತ್ತಿದ್ದುದುಂಟು. ತಾಓ ತತ್ತ್ವದಲ್ಲಂತೂ ಈ ಸೂಚ್ಯಾರ್ಥಕ್ಕೆ ಹೆಚ್ಚು ಬೆಲೆ. ತಾಓ ಮಾತಿನಿಂದ ವರ್ಣಿಸಲಾಗದ್ದು. ಮೌನದಿಂದಲೇ ಅದನ್ನು ಧ್ವನಿಸಬೇಕು. ತಾವೋ ತತ್ತ್ವವನ್ನು ಕುರಿತು ಸಾವಿರ ಪುಟಗಳ ವಿವರಣ ಗ್ರಂಥವನ್ನು ರಚಿಸಬಹುದು. ಆದರೂ ಅದು ಲಾವೋಟ್ಸುವಿನ ಕಾರಿಕೆಗಳ ಸೂಚ್ಯಾರ್ಥವನ್ನು ಪೂರ್ಣವಾಗಿ ತಿಳಿಸಲಾರದು.

ಚೀನೀತತ್ತ್ವ ತುಂಬ ದೀರ್ಘಕಾಲದ್ದು, ಅದರ ಚರಿತ್ರೆಯನ್ನು ಬರೆದವರು ಅದರಲ್ಲಿ ನೂರು ಶಾಖೆಗಳಿದ್ದುವೆಂದೆ ಹೇಳುತ್ತಾರೆ. ಅದರ ಮೊದಲ ಚರಿತ್ರೆಯನ್ನು ಬರೆದ ಸ್ಸು-ಮಾ ಟ್ಯಾನ್ (ಕ್ರಿ.ಪೂ. 1ನೆಯ ಶತಮಾನ) ಅವನ್ನು ಆರಾಗಿ ವಿಂಗಡಿಸಿರುತ್ತಾನೆ. ಮೊದಲನೆಯದು ಲುನ್-ಯಾಂಗ್ ಶಾಖೆ. ಅದು ವಿಶ್ವದ ಸೃಷ್ಟಿಗೆ ಸ್ತ್ರೀ ಮತ್ತು ಪುಂ ತತ್ವಗಳ ಸಂಗಮ ಕಾರಣವೆಂದು ತಿಳಿಸುತ್ತದೆ. ಇದು ಇತಿಹಾಸ ಪೂರ್ವತತ್ತ್ವ. ಎರಡನೆಯದು ಜೂಚಿಯ ಶಾಖೆ. ಈ ಶಾಖೆಯವರು ಪುರಾತನ ಸಂಸ್ಕøತಿಯ ಬೋಧಕರು. ಈ ಶಾಖೆಯ ಮುಖಂಡ ಕೂಮಗ್ ಫೂಟ್ಸೆ ಮೂರನೆಯದು ಮೋ-ಚಿ ಅಥವಾ ಮೋಹಿಶಾಖೆ. ಅದರ ಮುಖಂಡ ಮೋಟ್ಸು. ನಾಲ್ಕನೆಯದು ಮಿಂಗ್-ಚಿಯ ಅಥವಾ ನಾಮತತ್ತ್ವ ಶಾಖೆ. ಶಬ್ದಗಳಿಗೂ ವಾಸ್ತವ ವಿಷಯಗಳಿಗೂ ಇರುವ ಸಂಬಂಧವೇ ಇವರ ತತ್ತ್ವದ ವಿಚಾರ ವಿಷಯ. ಐದನೆಯದು ಫಾ ಚಿಯ ಅಥವಾ ಕಾನೂನಿನ ಶಾಖೆ. ಈ ಶಾಖೆಯ ತಾತ್ತ್ವಿಕರು ಸರ್ಕಾರಕ್ಕೆ ಕಾನೂನೇ ಆಧಾರ, ಧಾರ್ಮಿಕ ನೀತಿಯಲ್ಲವೆಂದು ವಾದಿಸಿದರು. ಆರನೆಯದು ತಾಓ-ಟಿ-ಚಿಯ ಶಾಖೆ. ತಾಓ ಎಂದರೆ ಪಥ. ಈ ಶಾಖೆಯವರ ಧ್ಯೇಯವನ್ನು ಮುಟ್ಟುವ ದಾರಿಗೆ, ಹೆಚ್ಚು ಗಮನ ಕೊಡುತ್ತಾರೆ. ಇದರ ಮುಖಂಡ ಲಾವೋ ಟ್ಸು.

ಚೀನೀ ತತ್ತ್ವ ಚರಿತ್ರೆಯನ್ನು ಬರೆದವರಲ್ಲಿ ಲ್ಯೂ ಹಸಿನ್ (ಕ್ರಿ.ಪೂ. 46) ಎರಡನೆಯವ. ಇವನು ನೂರು ಶಾಖೆಗಳನ್ನು ಹತ್ತಾಗಿ ವಿಭಾಗ ಮಾಡುತ್ತಾನೆ. ಈಗಾಗಲೇ ತಿಳಿಸಿರುವ ಆರು ಶಾಖೆಗಳಿಗೆ ನಾಲ್ಕು ಶಾಖೆಗಳನ್ನು ಸೇರಿಸುತ್ತಾನೆ. ಇವು (1) ತ್ಸೂಂಗ್-ಹೆಂಗ್ ಚಿಯ ಅಥವಾ ರಾಯಭಾರಿ ಶಾಖೆ, (2) ಟಸುಚಿಯ ಅಥವಾ ಸಾರಸಂಗ್ರಹ ಶಾಖೆ, (3) ನುಂಗ್ ಚಿಯ ಅಥವಾ ಭೂ ವ್ಯವಸಾಯ ಶಾಖೆ ಮತ್ತು (4) ಹಷಿಯೋ-ಷೌ ಚಿಯ ಅಥವಾ ಕತೆಗಾರ ಶಾಖೆ. ಈ ಎಲ್ಲ ಶಾಖೆಗಳ ಹೆಸರುಗಳೂ ಚೀನೀ ತತ್ತ್ವದ ಒಂದು ಪ್ರಧಾನ ಲಕ್ಷಣವನ್ನು ನಮ್ಮ ಗಮನಕ್ಕೆ ತರುತ್ತವೆ. ಅವರ ತತ್ತ್ವಕ್ಕೂ ಅವರ ಸಂಸ್ಕøತಿಗೂ ರಾಜಕೀಯಕ್ಕೂ ಮತ್ತು ಆರ್ಥಿಕ ಜೀವನಕ್ಕೂ ತುಂಬ ನಿಕಟ ಸಂಬಂಧವಿದೆ. ಕೌಟಿಲ್ಯನ ಕಾಲದಲ್ಲಿ ಭಾರತದದ ತತ್ತ್ವಕ್ಕೂ ಇಂಥ ವಿಶಾಲ ವ್ಯಾಪಕತೆಯಿದ್ದು ಈಚಿನ ಕಾಲದಲ್ಲಿ ಅದಕ್ಕೂ ಆರ್ಥಿಕಕ್ಕೆ ರಾಜಕೀಯಕ್ಕೆ ಇದ್ದ ಸಂಬಂಧ ತಪ್ಪಿ ಕೇವಲ ಸಂಕುಚಿತಪರ ತತ್ತ್ವವಾಯಿತು. ಆರ್ಥಿಕಕ್ಕೂ ರಾಜಕೀಯಕ್ಕೂ ಹೆಚ್ಚು ಪ್ರಾಶಸ್ತ್ರ ಕೊಟ್ಟಿರುವ ಕಮ್ಯೂನಿಸ್ಟ್ ತತ್ತ್ವವನ್ನು ಚೀನೀಯರು ಈಗ ವಿಶೇಷವಾಗಿ ಆದರಿಸುತ್ತಿರುವುದಕ್ಕೆ ಅವರು ಹಿಂದಿನಿಂದ ಆರ್ಥಿಕಕ್ಕೂ ರಾಜಕೀಯಕ್ಕೂ ಕೊಟ್ಟ ಬೆಲೆ ಕಾರಣವೆಂದು ಹೇಳಬಹುದು.

ಇಲ್ಲಿ ಮುಖ್ಯವಾಗಿ ಆರು ಶಾಖೆಗಳಲ್ಲಿ ಇತಿಹಾಸಪೂರ್ವ ಯಿನ್-ಯಾಂಗ್ ಚಿಯ ಶಾಖೆಯನ್ನು ಕಾನೂನಿನ ಶಾಖೆಯನ್ನು ಬಿಟ್ಟು ಉಳಿದ ಶಾಖೆಗಳನ್ನು ಮಾತ್ರ ತುಂಬ ಸಂಗ್ರಹವಾಗಿ ವಿವರಿಸಿದೆ.

ಕೂಂಗ್ ಫೂಟ್ಸೆ : ಕ್ರಿ.ಪೂ. 551-470. ಪೌರಾಣಿಕ ಸಂತ ರಾಜರ ತತ್ತ್ವವನ್ನು ಬಿಟ್ಟರೆ ಕೂಂಗ್ ಫೂಟ್ಸೆಯ ತತ್ತ್ವ ಚೀನದ ಮೊಟ್ಟ ಮೊದಲನೆಯದು. ಕೂಂಗ್ ಫೂಟ್ಸೆಗೆ ಮುಂಚೆ ತತ್ತ್ವವನ್ನು ಬೋಧಿಸುತ್ತಿದ್ದವರು ರಾಜ್ಯದ ನ್ಯಾಯ ನೀತಿ ಮತ್ತು ಆರ್ಥಿಕಕ್ಕೆ ಸಂಬಂಧಪಟ್ಟ ರಾಷ್ಟ್ರದ ಅಧಿಕಾರಿಗಳು, ಖಾಸಗಿಯಾಗಿ ತತ್ತ್ವವನ್ನು ಬೋಧಿಸಲು ಮೊಟ್ಟ ಮೊದಲಿಗೆ ಪ್ರಾರಂಭಿಸಿದವ ಕೂಂಗ್ ಫೂಟ್ಸೆ. ಅವನು ಒಂದು ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ ಅವಕ್ಕೆ ಸಮವಯಸ್ಕರದ ಮತ್ತು ತನ್ನಂತೆ ಚೀನಿ ಸಂಸ್ಕøತಿಯಲ್ಲಿ ಆಸಕ್ತರಾದ ಸಹಾಧ್ಯಾಯಿಗಳನ್ನು ಸೇರಿಸಿಕೊಂಡು, ಪುರಾತನರ ಆರು ವಿದ್ಯೆಗಳನ್ನು ಅಧ್ಯಯನ ಮಾಡಿದ. ಈ ಆರು ವಿದ್ಯೆಗಳಿಗೆ ಲಿಯ ಯಿ ಎಂದು ಹೆಸರು. ಮೊದಲನೆಯ ವಿದ್ಯೆಯ ಗ್ರಂಥಕ್ಕೆ 'ಯಿ ಎಂದು ಹೆಸರು, ಯಿ ಎಂದರೆ ಬದಲಾವಣೆಗಳನ್ನು ತಿಳಿಸುವ ಗ್ರಂಥ, ಎರಡನೆಯದು 'ಷಿಹ್-ಕಾವ್ಯಗಳ ಗ್ರಂಥ ಮೂರನೆಯದು 'ಷು-ಚರಿತ್ರೆಯ ಗ್ರಂಥ, ನಾಲ್ಕನೆಯದು 'ಲಿ-ಮತ ಸಂಸ್ಕಾರಗಳ ಗ್ರಂಥ. ಐದನೆಯದಾದ ಯೂಚ್-ಸಂಗೀತದ ಗ್ರಂಥ. ಆರನೆಯದಾದ 'ಚುನ್ ಚಿಯು-ಲು ಅರಸರ ವಂಶವೃತ್ತಾಂತ. ಅವನು ಈ ಎಲ್ಲ ವಿದ್ಯೆಗಳನ್ನೂ ಹೊಸದೃಷ್ಟಿಯಿಂದ ವಿವೇಚಿಸಿ ಇವುಗಳಿಗೆ ಸಂಬಂಧಪಟ್ಟ ತತ್ತ್ವವನ್ನು ಸಂದರ್ಭೋಚಿತವಾಗಿ ವಚನಗಳ ಮೂಲಕ ಹೊರಗೆಡಹಿದ. ಇವನ್ನು ಕೂಂಗ್ ಪೂಟ್ಸೆ ಶಿಷ್ಯರು ಸೇರಿಸಿ ಅನಲೆಕ್ಟ್ಸ್ ಎಂಬ ವಚನ ಸಂಪುಟವನ್ನು ರೂಪಿಸಿದರು. ಇದೇ ಕೂಂಗ್ ಫೂಟ್ಸೆ ತತ್ತ್ವಕ್ಕೆ ಆಧಾರ ಗ್ರಂಥ.

1 ಈ ಆರು ವಿದ್ಯೆಗಳನ್ನು ಹಿಂದಿನ ಪಂಡಿತರಂತೆ ಅವನು ವ್ಯಾಸಂಗ ಮಾಡಲಿಲ್ಲ. ಅವನ್ನು ತಾನೇ ಸ್ವಾನುಭವದಿಂದ ಏರ್ಪಡಿಸಿಕೊಂಡ; ಹೊಸ ತತ್ತ್ವದೃಷ್ಟಿಯಿಂದ ಭಾಷ್ಯ ಮಾಡಿ ಅವುಗಳಿಗೆ ಹೊಸ ವರ್ಚಸ್ಸನ್ನು ಕೊಟ್ಟ. ಅವನು ಅವುಗಳಲ್ಲಿ ಉಪಯೋಗಿಸಿದ ಪದಗಳಿಗೆ ಹೊಸ ಅರ್ಥವನ್ನು ಕೊಟ್ಟು ಪುಷ್ಟಿಗೊಳಿಸಿದ. ಈ ವಿಧಾನವನ್ನು ತಾರ್ಕಿಕ ಪರಿಭಾಷೆಯಲ್ಲಿ ಲಕ್ಷಣ ನಿರೂಪಣೆ ಎಂದು ಕರೆಯಬಹುದು. ಒಂದು ಪದದ ಸಾರಾರ್ಥವೇನೆಂಬುದನ್ನು ನಿಷ್ಕಷಿಸಲು ಪ್ರಾರಂಭಿಸಿದಾಗ ಜ್ಞಾನ ಪ್ರಾರಂಭವಾಗುತ್ತದೆ. ಆ ಅರ್ಥ ನಿರೂಪಣೆ ಪೂರ್ಣವಾದಾಗ ಜ್ಞಾನ ಪೂರ್ಣವಾಗುತ್ತದೆ. ರಾಜ್ಯ ಶಾಸ್ತ್ರದ ಮಾತುಗಳನ್ನೂ ಸಮಾಜದ ಅಂಗಗಳನ್ನು ಅವುಗಳ ಸಂಬಂಧಸೂಚಕ ಸಂಬಂಧಪಟ್ಟ ಪದಗಳ ಅರ್ಥವನ್ನೂ ನೀತಿ, ಕಾನೂನು, ಸಂಸ್ಕಾರಗಳಿಗೆ ಸಂಬಂಧಪಟ್ಟ ಪದಗಳ ಅರ್ಥವನ್ನೂ ಸಾಕ್ರಟೀಸ್ ಮತ್ತು ಪ್ಲೇಟೋಗಳಂತೆ ನಿರ್ಧರಿಸಲು ಆತ ಪ್ರಯತ್ನಿಸಿದ. ಹೆಸರಿಗೆ ತಕ್ಕಂತೆ ಒಬ್ಬ ವ್ಯಕ್ತಿಯ ನಡತೆ (ಉದಾಹರಣೆಗೆ ರಾಜ, ತಂದೆ, ಮಗ, ಸೋದರ, ಸ್ನೇಹಿತ, ಅಧಿಕಾರಿ) ಸಂಗತವಾಗಿದ್ದರೆ ಆಗ ಅವನಿಗೆ ಆ ಹೆಸರು ಒಪ್ಪುತ್ತದೆ. ಇಲ್ಲದಿದ್ದರೆ ಅವನು ಆ ಹೆಸರನ್ನು ಪಡೆಯಲು ಯೋಗ್ಯನಲ್ಲ. ಹಾಗೆಯೇ ಹೆಸರಿಗೆ ತಕ್ಕಂತೆ, ಕಾನೂನು, ಸದ್ಗುಣಗಳು, ಆಚಾರ, ವ್ಯವಹಾರಗಳು ವಾಸ್ತವಾದಾಗ, ಕಾರ್ಯಕಾರಿಯಾದಾಗ, ಅವು ಆ ಹೆಸರನ್ನು ಪಡೆಯಲು ಯೋಗ್ಯವಾಗುತ್ತವೆ. ಸಾರ್ಥಕವಾಗುತ್ತವೆ. ಇಲ್ಲದಿದ್ದರೆ ವ್ಯರ್ಥಾಲಾಪವಾಗುತ್ತವೆ. ಇದು ಅವನ ಮಾತಿನ ತತ್ತ್ವ. ಅದು ಮುಂದೆ ಹುಟ್ಟಿದ ನಾಮ ತತ್ತ್ವಕ್ಕೆ ಅಂಕುರಪ್ರಾಯವೆಂದು ಹೇಳಬಹುದು.

2 ಕೂಂಗ್ ಫೂಟ್ಸೆ ಶೀಲ ಶ್ರೀಮಂತಿಕೆಗೆ ತುಂಬ ಬೆಲೆ ಕೊಟ್ಟಿದ್ದಾನೆ. ಶೀಲ ಶ್ರೀಮಂತ ಎಂದರೆ ಶೀಲವನ್ನೇ ತನ್ನ ಉತ್ತಮೋತ್ತಮ ನಿಧಿಯಾಗಿ ಅಪೇಕ್ಷಿಸುವಾಗ, ಆ ಶೀಲ ಎರಡಕ್ಕೆ ಸಂಬಂಧಿಸುತ್ತದೆ. ಒಂದು ಮತ ಸಂಪ್ರದಾಯಗಳಿಗೆ, ಎರಡು ಮಾನವರೊಡನೆ ನಡೆದುಕೊಳ್ಳುವ ರೀತಿ, ಈ ಎರಡಕ್ಕೂ ತಳಹದಿ ಕರ್ತವ್ಯ ಭಾವನೆ. ಕರ್ತವ್ಯ ಎಂದರೆ ಕಡ್ಡಾಯವಾಗಿ ಮಾಡಬೇಕಾದದ್ದು. ಸಂಸ್ಕಾರಗಳನ್ನೂ ಪಿತೃಕಾರ್ಯಗಳನ್ನೂ ಮಾಡುವುದು ಸ್ವರ್ಗಲಾಭಕ್ಕಾಗಿ ಅಲ್ಲ; ಗತಿಸಿದವರಿಗೆ ಗೌರವ ಸೂಚಿಸುವುದಕ್ಕಾಗಿ ಮತ್ತು ಆತ್ಮಶುದ್ಧಿಗಾಗಿ, ನೇಮನಿಷ್ಠೆಗಳನ್ನು ಆಚರಿಸುವುದರಿಂದ ಸಂಯಮಶೀಲ ಏರ್ಪಡುತ್ತದೆ. ನಿಷ್ಠೆಯಿಂದ ಕರ್ಮ ಮಾಡುವುದನ್ನು ಕಲಿತವನಿಗೆ ಇತರ ಲೌಕಿಕ ಕಾರ್ಯಗಳಲ್ಲೂ ನಿಷ್ಠೆ ಸ್ವಾಭಾವಿಕವಾಗುತ್ತದೆ. ಹಿಂದಿನ ಮತಾನುಯಾಯಿಗಳು ಒಂದು ಹಂದಿಯನ್ನು ಬಲಿಕೊಟ್ಟು ನೂರು ವರಹಗಳನ್ನು ಕೇಳುತ್ತಿದ್ದರು. ಈ ಮನೋಭಾವ ಸರ್ಕಾರೀ ನೌಕರರ ನಡತೆಯಲ್ಲೂ ಕಾಣುತ್ತಿತ್ತು. ಒಂದು ಸಣ್ಣ ಕೆಲಸ ಮಾಡಿಕೊಟ್ಟು ನೂರು ವರಹಗಳನ್ನು ಕೇಳುತ್ತಿದ್ದರು. ಮತಾಚಾರಗಳಲ್ಲಿ ವಿನಿಮಯ ಬುದ್ಧಿಯನ್ನು ನಿರ್ಮೂಲಗೊಳಿಸಿದರೆ ಲೋಕ ವ್ಯವಹಾರದಲ್ಲೂ ಈ ಬುದ್ಧಿ ನಿಮೂಲವಾಗುತ್ತದೆ. ಯಾವುದೊಂದು ಫಲಾಪೇಕ್ಷೆಯೂ ಇಲ್ಲದೆ ಕೇವಲ ಕರ್ತವ್ಯವನ್ನೇ ಆಚರಿಸಿ ಅದಕ್ಕಾಗಿಯೇ ಅದನ್ನು ಮಾಡುವುದು ಸತ್‍ಶೀಲ. ಕೂಂಗ್ ಫೂಟ್ಸೆಯ ಕರ್ತವ್ಯ ಭಾವನೆ ಕಾಂಟನ ಕರ್ತವ್ಯ ಭಾವನೆಯನ್ನೂ ಭಗವದ್ಗೀತೆಯ ನಿಷ್ಕಾಮ ಕರ್ಮವನ್ನೂ ಹೋಲುತ್ತದೆ. ಲಾಭ ಪಡೆಯಬೇಕೆಂಬ ಉದ್ದೇಶದಿಂದ ಮಾಡಿದ ಕೆಲಸ ಕರ್ತವ್ಯವಲ್ಲ. ಲಾಭವನ್ನು ನಿರೀಕ್ಷಿಸದೆ ಮಾಡಿದ ಕರ್ತವ್ಯವನ್ನು ಅವನು 'ಯಿ ಎಂದು ಕರೆದಿರುತ್ತಾನೆ. ಇದೇ ಶೀಲ ಶ್ರೀಮಂತಿಕೆ.

3 ಈ ಶೀಲ ಶ್ರೀಮಂತಿಕೆಯ ದಾರಿಯನ್ನು ಅವನು ತಾಓ ಎಂದು ಕರೆದಿದ್ದಾನೆ. ತಾಓ ಬಿಡಿಬಿಡಿ ಕರ್ತವ್ಯಗಳಲ್ಲ. ಅವೆಲ್ಲವನ್ನೂ ಸಮನ್ವಯಗೊಳಿಸುವ ತತ್ತ್ವ. ಎಲ್ಲ ಕರ್ತವ್ಯಗಳಿಗೂ ತಾಓ ಆಧಾರ. ಇದು ಹೊರಗಿನಿಂದ ಬಂದುದಲ್ಲ. ಇದು ಮಾನವನ ಹೃದಯದಲ್ಲಿ ಅಂತರ್ಗತವಾಗಿರುವಂಥದ್ದು. ತನ್ನೊಳಗಿರುವುದನ್ನು ಬೆಳೆಸುವುದು ಶೀಲಶ್ರೀಮಂತಿಕೆ.

4 ಕರ್ತವ್ಯ ನಿಯಮವನ್ನು ಎರಡು ವಿಧವಾಗಿ ಸೂತ್ರಿಸಬಹುದು. ನಿನಗೆ ಬೇಡವಾದ್ದನ್ನು ಇತರರಿಗೆ ಮಾಡಬೇಡ. ಇದು ಅಭಾವಸೂಚಕ ಕರ್ತವ್ಯ ಸೂತ್ರ. ಇದೆ 'ಯಿ ಸೂತ್ರ. ನೀನು ಇಚ್ಛಿಸುವುದನ್ನು ಇತರರಿಗೂ ಲಭಿಸಲೆಂದು ಇಚ್ಛಿಸು. ಇದು ಭಾವಸೂಚಕ ಕರ್ತವ್ಯಸೂತ್ರ., ತನ್ನ ಆತ್ಮೋದ್ಧಾರಕ್ಕೆ ಅಗತ್ಯವಾದುದು ಇತರರ ಆತ್ಮೋದ್ಧಾರಕ್ಕೂ ಅಗತ್ಯ. ಇತರರು ಉದ್ಧಾರವಾದ ಹೊರತು ತನ್ನ ಉದ್ಗಾರವಿಲ್ಲ. ತನ್ನ ಸೌಖ್ಯ ಇತರರ ಸೌಖ್ಯ, ಇವೆರಡು ಅವಿಭಾಜ್ಯ. ಒಂದನ್ನು ಬಿಟ್ಟು ಇನ್ನೊಂದು ಇರುವುದಿಲ್ಲ.

5 ಕೇವಲ ಕರ್ತವ್ಯ ಭಾವನೆ ಒಣತತ್ತ್ವವಾಗುತ್ತದೆ. ಪೂರ್ಣವಾಗಬೇಕಾದರೆ ಅದು ಮಾನವ ಪ್ರೀತಿಯಿಂದ ಪ್ರೇರಿತವಾಗಿರಬೇಕು. ಪ್ರೀತಿ ಹುಟ್ಟಿದಾಗ ಪರಸ್ಪರತೆ ಬೆಳೆಯುತ್ತದೆ. ಪ್ರೀತಿಯಿಂದ ಪರಿಪೂರ್ಣವಾದ ಶೀಲವನ್ನು ಕೊಂಗ್ ಪೂಟ್ಸೆ ಜೆನ್ ಎಂದು ಕರೆದಿರುತ್ತಾರೆ.

6 ಕೂಂಗ್ ಫೂಟ್ಸೆ ಶೀಲದ ಇನ್ನೊಂದು ಅಂಶವನ್ನು 'ಐ' ಎಂದು ಕರೆದಿರುತ್ತಾನೆ. ಐ ಎಂದರ ಔಚಿತ್ತಯ. ಪರಸ್ಪರತೆಯದು ಸಾಮಾನ್ಯ ಸೂತ್ರ. ಸಾಮಾನ್ಯವಾಗಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅದು ತಿಳಿಸುತ್ತದೆ. ಆದರೆ ಒಂದೊಂದು ಸಂದರ್ಭದಲ್ಲೂ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅದು ತಿಳಿಸುವುದಿಲ್ಲ. ಕಾಂಟನ ಕರ್ತವ್ಯ ತತ್ತ್ವದಂತೆ ಅದು ತೀರ ವಿಶಾಲ ; ಎಲ್ಲಕ್ಕೂ ಒಂದೇ ಮಂತ್ರವನ್ನು ಅನ್ವಯಿಸುವುದು ಅಪಾಯಕಾರಿ. ಸಂದರ್ಭಕ್ಕೆ ಅನುಗುಣವಾಗಿ ವರ್ತಿಸಬೆಕಾದರೆ, ಔಚಿತ್ಯಜ್ಞಾನ ಅಗತ್ಯ.

7 ಒಂದೊಂದು ಸಂದರ್ಭಕ್ಕೂ ಉಚಿತವಾದದ್ದು ಯಾವುದು ಎಂಬುದನ್ನು ಕಂಡು ಹಿಡಿಯುವುದು ಹೇಗೆ ಎಂಬುದು ಮುಂದಿನ ಪ್ರಶ್ನೆ. ಅದಕ್ಕೆ ತನ್ನ ಸ್ವಂತ ಅನುಭವದಿಂದ ಅವರು ಕೊಟ್ಟ ಉತ್ತರ ಇದು. ನಾನು ಅನ್ನನೀರಿಲ್ಲದೆ ಹಗಲು ರಾತ್ರಿ ಧ್ಯಾನದಲ್ಲಿ ಕಳೆದೆ. ಅದರಿಂದ ನನ್ನ ಸಮಸ್ಯೆ ಬಗೆಹರಿಯಲಿಲ್ಲ ಅಂಥ ಸಂದರ್ಭಗಳಲ್ಲಿ ಓದಿದರೆ ಉತ್ತಮ. ಆದರೆ ಆಲೋಚನೆ ಇಲ್ಲದ ಓದು ವ್ಯರ್ಥಾಲಾಪ, ಅಧ್ಯಯನವಿಲ್ಲದ ಧ್ಯಾನ ಅಪಾಯಕರ. ಎಷ್ಟು ಯೋಚಿಸಿದರೂ ಸ್ವಲ್ಪ ಸಂಶಯ ಇದ್ದೇ ಇರುತ್ತದೆ. ಆಗ ನಾವು ಸಂಶಯಾಸ್ಪದವಾದ ಅಂಶವನ್ನು ಬಿಟ್ಟು ನಿಸ್ಸಂದೇಹವಾದ ಅಂಶದ ಆಧಾರದ ಮೇಲೆ ಯುಕ್ತವಾದುದನ್ನು ನಿರ್ಧರಿಸುವುದು ಹೆಚ್ಚು ಅಪಾಯಕರವಲ್ಲ. ಈ ನೀತಿಯನ್ನು ಕೂಡ ತಾತ್ಕಾಲಿಕ ನೀತಿಯೆಂದು ಭಾವಿಸಬೇಕು ; ಪರಮನೀತಿಯೆಂದು ಭಾವಿಸಬಾರದು.

ಔಚಿತ್ಯ ತತ್ತ್ವಕ್ಕೆ ಬಲ ಕೊಡುವ ಇನ್ನೊಂದು ಸಹಾಯಕ ಸೂತ್ರವಿದೆ. ಅದು ಮಾಧ್ಯಮಿಕ ಸೂತ್ರ. ಎರಡು ಅತಿಗಳನ್ನು ಬಿಟ್ಟು ಮಿತವಾದದ್ದನ್ನು ಅನುಸರಿಸಿದಾಗ ನಮ್ಮ ನಡತೆ ಸತ್ಯಕ್ಕೆ ಸಮೀಪವಾಗಿರುವ ಸಂಭವ ಹೆಚ್ಚು. ಮಾಧ್ಯಮಿಕ ಸೂತ್ರವನ್ನು ಅನುಸರಿಸಿದಾಗ ಒಬ್ಬ ಸ್ವಲ್ಪ ತಪ್ಪಿ ನಡೆಯಬಹುದು. ಆದರೆ ಅವನು ಮೂರ್ಖನಾಗುವುದಿಲ್ಲ. ಒಬ್ಬ ನಿನ್ನ ಎಡಕೆನ್ನೆಗೆ ಏಟು ಕೊಟ್ಟರೆ ಬಲಕೆನ್ನೆಯನ್ನು ತೋರಿಸು-ಎಂಬ ಕ್ರೈಸ್ತ ತತ್ತ್ವವನ್ನು ಕೂಂಗ್ ಪೂಟ್ಸೆ ಒಪ್ಪಲಿಲ್ಲ. ಅದನ್ನು ಅವನು ಔಚಿತ್ಯ ಸೂತ್ರಕ್ಕೆ ಒಳಪಡಿಸಿ ಈ ರೀತಿ ಮಾರ್ಪಡಿಸಿದ. ಕೇಡಿಗೆ ಕೇಡನ್ನೂ ಮಾಡಬೇಡ. ಒಳ್ಳೆಯದನ್ನೂ ಮಾಡಬೇಡ, ನ್ಯಾಯವಾದ ದಾರಿ ತೋರಿಸು ಕೇಡಿಗನನ್ನು ಶಿಕ್ಷಿಸದೆ ಕ್ಷಮಿಸಿ ಅವನಿಗೆ ಸರಿಯಾದ ದಾರಿಯನ್ನು ತೋರಿರುವುದು ವಿವೇಕಯುತವಾದ ಪ್ರೀತಿಯಲ್ಲವೆ?

ಶೀಲ ತತ್ತ್ವವೇ ಅವನಿಗೆ ಸಾರ್ವಭೌಮ ತತ್ತ್ವ ಆದರೆ ಹೆದ್ದಾರಿಗಳನ್ನೂ ಸೀಳುದಾರಿಗಳನ್ನೂ ಕೂಡು ದಾರಿಗಳನ್ನೂ ಅವನಂತೆ ಇಷ್ಟು ಸಮಗ್ರವಾಗಿ ವಿವೇಚಿಸಿದ ತತ್ತ್ವಜ್ಞಾನಿಗಳು ಅತಿ ವಿರಳ. ಅರಿಸ್ಟಾಟಲನ ಮಾಧ್ಯಮಿಕ ತತ್ತ್ವ , ಕ್ರಿಸ್ತನ ಪರಸ್ಪರತೆಯ ತತ್ತ್ವ ; ಕಾಂಟನ ನಿಷ್ಕಾಮ ಕರ್ತವ್ಯತತ್ತ್ವ ಇವೆಲ್ಲವೂ ಸಮರಸವಾಗಿ ಸೇರಿರುವುದು ಕೂಂಗ್ ಫೂಟ್ಸೆಯೊಬ್ಬನಲ್ಲೇ.

9 ತಾಓ ತಾತ್ತ್ವಿಕರು ಕೂಂಗ್ ಫೂಟ್ಸೆ ಕೇವಲ ನೀತಿಗೆ, ಶೀಲಕ್ಕೆ ಮಾತ್ರ ಬೆಲೆ ಕೊಟ್ಟಿರುತ್ತಾನೆ. ಧರ್ಮಕ್ಕೆ ಮಿಗಿಲಾದ ಅಧ್ಯಾತ್ಮಕ್ಕೆ ಗಮನ ಕೊಡಲಿಲ್ಲ-ಎಂದು ಟೀಕಿಸುತ್ತಾರೆ. ಶೀಲಕ್ಕೆ ಅವನು ಹೆಚ್ಚು ಗಮನ ಕೊಟ್ಟದ್ದು ನಿಜ. ಆದರೆ ಶೀಲಾತೀತ ಬೆಲೆಗಳನ್ನು ಅವನು ನಿರಾಕರಿಸಲಿಲ್ಲ. ಶೀಲ ಅದಕ್ಕೆ ಅಗತ್ಯ ಸೋಪಾನ. ಜೀವನದ ಮುಕ್ಕಾಲು ಭಾಗ ಶೀಲ, ಕಾಲುಭಾಗ ಶೀಲಾತೀತ ಬೆಲೆ. ಅದು ಶೀಲದ ಮೂಲಕ ಕೊನೆಯಲ್ಲಿ ಸಿದ್ಧಿಸುವಂಥದ್ದು. ಕೂಂಗ್ ಫೂಟ್ಸೆ ತನ್ನ ಜೀವನದಲ್ಲಿ ಆದ ಪರಿವರ್ತನೆಯನ್ನು ಈ ರೀತಿ ವರ್ಣಿಸಿರುತ್ತಾನೆ ; 'ಮೊದಲು ಹದಿನೈದು ವರ್ಷಗಳಲ್ಲಿ ನಾನು ಅಧ್ಯಯನದಲ್ಲಿ ಮುಳುಗಿದ್ದೆ. ಮೂವತ್ತನ್ನು ಮುಟ್ಟಿದ್ದಾಗ ನಾನು ಶೀಲವನ್ನು ಕುದುರಿಸಿಕೊಂಡು ನನ್ನ ಕಾಲಿನ ಮೇಲೆ ನಾನು ನಿಂತೆ. ನಲವತ್ತನ್ನು ಮುಟ್ಟಿದಾಗ ನನಗೆ ಸಂದೇಹ ಪರಿಹಾರವಾಯಿತು. ಐವತ್ತನ್ನು ಮುಟ್ಟಿದಾಗ ಪರಿಚೇತನದ (ಸ್ವರ್ಗ) ನಿಯಮ ತಿಳಿಯಿತು. ಅರವತ್ತನ್ನು ಮುಟ್ಟಿದ್ದಾಗ ಆ ನಿಯಮಗಳಿಗೆ ವಿಧೇಯನಾಗಿದ್ದೆ ಎಪ್ಪತ್ತನ್ನು ಮುಟ್ಟಿದ್ದಾಗ ನನಗೆ ಯಾವ ನಿಯಮವನ್ನೂ ಮೀರದೆ ಸ್ವೇಚ್ಛ್ಚೆಯಾಗಿ ವರ್ತಿಸಲು ಸಾಧ್ಯವಾಯಿತು.' ಅವನು ಎಪ್ಪತ್ತನ್ನು ಮುಟ್ಟಿದಾಗ ಜೀವನ್ಮುಕ್ತನಂತೆ ನಡೆದುಕೊಂಡ. ಆಗ ಅವನಿಗೆ ಪೂರ್ಣ ಸ್ವಾತಂತ್ರ್ಯ (ಬಿಡುಗಡೆ) ದೊರೆಯಿತು; ಶೀಲಾತೀತ ಪುರುಷಾರ್ಥ ಅವನಿಗೆ ಎಪ್ಪತ್ತರಲ್ಲಿ ಸಿದ್ಧಿಸಿತು. ಕೂಂಗ್ ಪೂಟ್ಸೆ ತತ್ತ್ವವನ್ನು ಖಂಡಿಸಿದ ಮೋಟ್ಸು ಅವನ ಪ್ರೀತಿ ತತ್ತ್ವವನ್ನು ಅಂಗೀಕರಿಸಿದ. ಆದರೆ ಅದಕ್ಕೆ ದೈವಭಕ್ತಿ ಅಗತ್ಯವೆಂದು ಹೇಳಿದ; ಕೂಂಗ್ ಪೂಟ್ಸೆ ಪುರುಷರೂಪವಾದ ದೈವವನ್ನು ಒಪ್ಪಲಿಲ್ಲ. ಅವನ ಅತೀತ ತತ್ತ್ವ , ಕೇವಲ ಚೇತನ (ಸ್ವರ್ಗ) ಅದು ಪುರುಷರೂಪವಲ್ಲ.

10 ಅವನ ಅನಂತರ ಬಂದ ಅವನ ಅನುಯಾಯಿ ಮೆನ್ಸಿಯಸ್ (ಕ್ರಿ.ಪೂ. 371-289) ಶೀಲಾತೀತ ತತ್ತ್ವವನ್ನು ಬೆಳೆಸಿದ. ಅವನು ಅದನ್ನು ಹಾವೋಜಿನ್ ಚಿಃ ಚಈ' ಎಂದು ಕರೆದಿದ್ದಾನೆ. ಅದು ಮಹತ್ತರವಾದದ್ದು. ಸರ್ವಶಕ್ತಿಯುತವಾದದ್ದು. ಅದು ಸ್ವರ್ಗಮತ್ರ್ಯಗಳೆರಡನ್ನೂ ವ್ಯಾಪಿಸಿದೆ. ಮಾನವರೊಡನೆ ಬಾಳುವುದನ್ನು ಕಲಿಯುವುದು ಶೀಲ ಶ್ರೀಮಂತಿಕೆ. ಅಂತಿಮ ಧ್ಯೇಯ ಅದಕ್ಕಿಂತ ಮೇಲಿನದು ; ಅದು ವಿಶ್ವವ್ಯಾಪ್ತಿಯಾದೊಡನೆ ತಾದಾತ್ಮ್ಯ ಪಡೆಯುವುದು. ಶೀಲ ಶ್ರೀಮಂತಿಕೆಯನ್ನು ಪಡೆದ ಅನಂತರ ಅದು ವಿಶ್ವದ ಎಲ್ಲದರೊಡನೆ ಐಕ್ಯ ಭಾವವನ್ನು ಹೊಂದಲು ಸಹಾಯ ಮಾಡುತ್ತದೆ. ಐಕ್ಯಭಾವನೆಯೇ ಜೀವನದ ಅಂತಿಮಗತಿ. ಮೆನ್ಸಿಯಸ್ ಕೂಂಗ್ ಫೂಟ್ಸೆ ತತ್ತ್ವವನ್ನು ಅನುಭಾವೀ ತತ್ತ್ವವನ್ನಾಗಿ ಪರಿವರ್ತಿಸಿದ.

11 ಕೂಂಗ್ ಪೂಟ್ಸೆಯ ಇನ್ನೊಬ್ಬ ಅನುಯಾಯಿ ಹುಸುನ್ ಟ್ಸುವಿನ (ಕ್ರಿ.ಪೂ. 551-470) ತತ್ತ್ವ ಮೆನ್ಸಿಯಸ್ಸನ ತತ್ತ್ವಕ್ಕೆ ಪ್ರತಿಯಾದದ್ದು. ಅವನದು ವಾಸ್ತವವಾದ. ಮೆನ್ಸಿಯಸ್ ಮಾನವ ಸ್ವಭಾವ ಒಳ್ಳೆಯದು ಎಂದು ಭಾವಿಸಿದರೆ, ಹುಸುನ್ ಟ್ಸು ಮಾನವ ಸ್ವಭಾವತಃ ಕೆಟ್ಟವನು, ಸ್ವಾರ್ಥಿ, ವಿಷಯಲಂಪಟ ಎಂದು ಭಾವಿಸಿದ. ಮಾನವನಲ್ಲಿ ಬುದ್ಧಿ ಅಂಕುರಿಸಿದಾಗ ಅವನಲ್ಲಿ ಸದ್ಭಾವನೆ ಹುಟ್ಟುತ್ತದೆ; ತಾನು ಸ್ವಾರ್ಥಿಯಾಗಿ ಉಳಿದಾಗ ತನಗೆ ಕೇಡು ಸಂಭವಿಸುತ್ತದೆ. ಕೇಡಿನಿಂದ ಪಾರಾಗಲು ಇತರರ ಸಹಾಯ ಅಗತ್ಯ-ಎಂದು ಅವನಿಗೆ ಅರಿವಾಗುತ್ತದೆ. ಅವನು ಇತರರೊಡನೆ ಸಹಕರಿಸಿ ಶೀಲವಂತನಾಗಿ ಬಲಪಡೆಯುತ್ತಾನೆ. ಹುಸುನ್ ಟ್ಸುವಿನ ನೀತಿತತ್ತ್ವ ಉಪಯೋಗ ತತ್ತ್ವ. ನಿಷ್ಕಾಮ ಕರ್ಮವೇ, ಫಲಾಪೇಕ್ಷೆ ಇಲ್ಲದೆ ಮಾಡಿದ ಕರ್ಮವೇ ಕರ್ತವ್ಯ, ಲಾಭಕ್ಕಾಗಿ ಮಾಡಿದ್ದಲ್ಲ-ಎಂದು ಕೂಂಗ್ ಫೂಟ್ಸೆ ಬೋಧಿಸಿದ. ಹುಸುನ್ ಟ್ಸು ಲಾಭಕ್ಕಾಗಿ ಶಕ್ತಿಯನ್ನು ಪಡೆಯುವುದಕ್ಕಾಗಿ ಮಾಡಿದ ಕರ್ಮವೇ ಕರ್ತವ್ಯವೆಂದು ಬೋಧಿಸಿದ.

ಅವನು ಕೂಂಗ್ ಪೂಟ್ಸೆ ನಾಮತತ್ತ್ವನ್ನೂ ತನ್ನದೇ ಆದ ರೀತಿಯಲ್ಲಿ ಬೆಳೆಸಿದ. ಹೆಸರುಗಳು ಕೃತಕ ಸಂಕೇತಗಳು. ಜೀವನದ ಅಗತ್ಯಗಳು ಹೆಚ್ಚಿದಾಗ ಹೊಸ ಪದಗಳು ಹುಟ್ಟುತ್ತವೆ. ಹುಸುನ್ ಟ್ಸು ತನಗೆ ಮುಂಚೆ ಇದ್ದ ನಾಮ ತತ್ತ್ವ ಪಂಥವನ್ನು ಖಂಡಿಸಿದ್ದಾನೆ. ಆ ಪಂಥದವರು ಎರಡೆರಡು ಅರ್ಥಗಳಲ್ಲಿ ಉಪಯೋಗಿಸಿ ಸತ್ಯವನ್ನು ಅಸತ್ಯವಾಗಿಯೂ ಅಸತ್ಯವನ್ನು ಸತ್ಯವಾಗಿಯೂ ಕಾಣುವಂತೆ ವಾದಿಸಿ ಜನರ ಕಣ್ಣಿಗೆ ಮಣ್ಣೆರುಚುತ್ತಿದ್ದರು. ಹುಸುನ್ ಟ್ಸು ಅವರ ವಾದಗಳಲ್ಲಿ ಕಂಡುಬರುವ ಮೂರು ಬಗೆಯ ಅಭಾಸಗಳನ್ನು ತೋರಿಸಿದ ; (1) ಬಿಳಿ ಕುದುರೆಗಳಲ್ಲಿ ಒಂದು ಬಗೆಯದ್ದು. ಕುದುರೆಯಲ್ಲದೆ ಬಿಳಿಯ ಕುದುರೆಯಾಗಲಾರದು. (2) ಬೆಟ್ಟದ ಶಿಖರಗಳೂ ಕಂದಕಗಳೂ ಒಂದೇ ಮಟ್ಟದಲ್ಲಿರುತ್ತವೆ- ಎಂಬುದು ಇನ್ನೊಂದು ಅಭಾಸ, ಒಂದು ಬೆಟ್ಟದ ಮೇಲಿರುವ ಕಂದಕ, ಅದಕ್ಕಿಂತ ಕಡಿಮೆ ಎತ್ತರದ ಬೆಟ್ಟದ, ಮಟ್ಟದಲ್ಲಿರಬಹುದು. ಆದರೆ ಬೆಟ್ಟದ ಕೆಳಭಾಗದಲ್ಲಿರುವ ಕಂದಕವೂ ಅದರ ಮೇಲ್ಭಾಗವೂ ಒಂದೇ ಮಟ್ಟದಲ್ಲಿರಲಾರವು. (3) ಹೇಸರಕತ್ತೆ ಕುದುರೆಯಲ್ಲ, ಇದು ಇನ್ನೊಂದು ಅಭಾಸ. ಕತ್ತೆ ಕುದುರೆಯಲ್ಲದಿರಬಹುದು, ಆದರೆ ಹೇಸರಕತ್ತೆ ಒಂದು ಬಗೆಯ ಕುದುರೆ, ಏಕೆಂದರೆ ಅದು ಕತ್ತೆಯಲ್ಲಿ ಕುದುರೆಗೆ ಹುಟ್ಟಿದ ಕುದುರೆಯ ತಳಿ.

12 ಲಾವೋ ಟ್ಸು ತತ್ತ್ವ ಪ್ರಬಲವಾದ ಕಾಲದಲ್ಲಿ ಕೂಂಗ್ ಫೂಟ್ಸೆ ತತ್ತ್ವಕ್ಕೆ ಬಲವಾದ ಪೆಟ್ಟುಬಿತ್ತು. ಲಾವೋ ಟ್ಸು ತತ್ತ್ವದ ಅಭಿಮಾನಿಯಾದ ಚಿನ್ ವಂಶದ ರಾಜ ಕೂಂಗ್ ಫೊಟ್ಸೆಯ ಗ್ರಂಥಗಳನ್ನು ಸುಟ್ಟು 20,000 ಕೂಂಗ್ ಫೂಟ್ಸೆ ಅನುಯಾಯಿಗಳನ್ನು ಕೊಲ್ಲಿಸಿದ. ಆದರೆ ಹಾನ್ ವಂಶದ ಸಾರ್ವಭೌಮನ ಕಾಲದಲ್ಲಿ (ಕ್ರಿ.ಪೂ. 140-87) ಆ ತತ್ತ್ವ ಅತ್ಯಂತ ಗೌರವಕ್ಕೆ ಪಾತ್ರವಾಗಿ ರಾಷ್ಟ್ರಮತವಾಗಿ ಪೋಷಿಸಲ್ಪಟ್ಟಿತು. ಕೂಂಗ್ ಫೂಟ್ಸೆಗೆ ದೇವರಪಟ್ಟ ದೊರೆಯಿತು. ಅಷ್ಟು ಹೊತ್ತಿಗೆ ಕೂಂಗ್ ಫೂಟ್ಸೆ ಅನುಯಾಯಿಗಳು ಲಾವೋ ಟ್ಸು ತತ್ತ್ವದ ಸಾರವನ್ನು ತಮ್ಮ ತತ್ತ್ವದಲ್ಲಿ ಸೇರಿಸಿಕೊಂಡಿದ್ದರು. ಆದರೆ ಸಾಂಪ್ರದಾಯಿಕ ಕೂಂಗ್ ಫೂಟ್ಸೆ ಶಾಖೆಯ ಮುಖಂಡನಾದ ವ್ಯಾಂಗ್‍ಚುಂಗ್ (ಕ್ರಿ.ಶ. 27-100) ಕೂಂಗ್ ಫೂಟ್ಸೆ ದೇವಪುತ್ರನಲ್ಲ, ಕೇವಲ ಮಾನವಸಂತ ಎಂದು ಸಾರಿದ.

13 ಕ್ರಿ.ಶ. ಎಂಟನೆಯ ಮತ್ತು ಒಂಬತ್ತನೆಯ ಶತಮಾನಗಳಲ್ಲಿ ಹ್ಯಾನ್ ಯು ಮತ್ತು ಲಿ ಆವೋ ಎಂಬ ಇಬ್ಬರು ಕೂಂಗ್ ಫೂಟ್ಸೆ ಅನುಯಾಯಿಗಳು ನೂತನ ಕೂಂಗ್ ಫೂಟ್ಸೆ ಗ್ರಂಥವನ್ನು ಹೂಡಿದರು. ಇವರು ಮುಖ್ಯವಾಗಿ ಬದಲಾವಣೆಗಳ ಪುಸ್ತಕದ ಅನುಬಂಧಗಳಲ್ಲಿ ಕಂಡುಬರುವ ವಿಶ್ವಸೃಷ್ಟಿ ತತ್ತ್ವವನ್ನು ಬೆಳೆಸಿದರು. ಟ್ವೈಚಿ ಎಂಬ ಪರತತ್ತ್ವದ ಚಲಸ್ಥಿತಿ 'ಯಾಂಗ್ ಚಲನೆ ತನ್ನ ಅಂತಿಮ ಗತಿಯನ್ನು ಮುಟ್ಟಿದಾಗ ಲಯಸ್ಥಿತಿ ಪ್ರಾರಂಭವಾಗುತ್ತದೆ. ಈ ಲಯ ಸ್ಥಿತಿಗೆ 'ಯಿನ್ ಎಂದು ಹೆಸರು. ಲಯಸ್ಥಿತಿ ಅಂತಿಮಗತಿಯನ್ನು ಮುಟ್ಟಿದಾಗ ಪುನಃ ಚಲಸ್ಥಿತಿ ಪ್ರಾರಂಭವಾಗುತ್ತದೆ. ಹೀಗೆ ಸೃಷ್ಟಿ ಲಯವನ್ನೂ ಲಯ ಸೃಷ್ಟಿಯನ್ನೂ ಒಂದಕ್ಕೊಂದು ಕಾರಣವಾಗಿ ಒಂದನ್ನೊಂದು ಹಿಂಬಾಲಿಸುತ್ತವೆ. ಯಾಂಗ್ ಮತ್ತು ಯಿಂಗ್ ಇವೆರಡರ ಸಂಯೋಗದಿಂದ ಪಂಚಭೂತಗಳೂ ಋತುಗಳೂ ಹುಟ್ಟುತ್ತವೆ. ಯಾಂಗ್ ಪುರುಷತತ್ತ್ವ , ಯಿನ್ ಸ್ತ್ರೀ ತ್ತ್ವ. ಇವೆರಡರ ಕೂಡಿಕೆಯಿಂದ ವಿಶ್ವದ ಎಲ್ಲ ವಸ್ತುಗಳೂ ಪ್ರಾಣಿಗಳೂ ಉದ್ಭವವಾಗುತ್ತವೆ. ಮಾನವನಲ್ಲಿ ಈ ಎರಡು ತತ್ತ್ವಗಳೂ ಅತ್ಯಂತ ಉಚ್ಛ ರೂಪದಲ್ಲಿ ವಿಕಾಸವಾಗುತ್ತವೆ. ಸಂತನಾದವ ತನ್ನ ಶೀಲವನ್ನು ಬೆಳೆಸಿಕೊಂಡು ಯಾವ ಬಗೆಯ ಆಸೆಯೂ ಇಲ್ಲದವನಾಗಿ ಶಾಂತ ಸ್ಥಿತಿಯನ್ನು ಮುಟ್ಟುತ್ತಾನೆ. ಮಾನವರಿಗೆ ಆದರ್ಶಪ್ರಾಯವಾಗಿ ಅತಿಮಾನವನಾಗುತ್ತಾನೆ.

ಅತಿಮಾನವನಾಗುವುದು ಹೇಗೆ ಎಂಬ ಪ್ರಶ್ನೆಗೆ ನೂತನ ಕೂಂಗ್ ಪೂಟ್ಸೆ ತಾತ್ತ್ವಿಕರು ವಿಶೇಷ ಗಮನಕೊಟ್ಟರು. ಇವರು ಈ ಅತಿಮಾನುಷ ಸಂತಸ್ಥಿತಿಯನ್ನು ಮುಟ್ಟುವ ವಿಧಾನವನ್ನು ಬೌದ್ಧರಿಂದ ಕಲಿತರು. ಆದರೆ ಒಂದಂಶದಲ್ಲಿ ಇವರಿಗೂ ಬೌದ್ಧರಿಗೂ ಭೇದವಿದೆ. ಬೌದ್ಧರು ಅರ್ಹಂತನಾಗಲು ಸಂಸಾರವನ್ನು ತೊರೆದು ಸಂನ್ಯಾಸವನ್ನು ಅನುಸರಿಸಬೇಕೆಂದು ಹೇಳಿದರು. ಇವರಾದರೊ ಸಂಸಾರದಲ್ಲಿದ್ದುಕೊಂಡೇ ಸಂನ್ಯಾಸವನ್ನು ಸ್ವೀಕರಿಸದೆಯೇ ಮುಕ್ತರಾಗಬಹುದೆಂದು ವಾದಿಸಿದರು. ನಿಷ್ಪಕ್ಷಪಾತಬುದ್ಧಿ, ಸಮತಾಬುದ್ಧಿ, ಸಮತಾಭಾವನೆ, ವಿವೇಕ-ಈ ಮೂರನ್ನು ಮಾನವರ ಮಧ್ಯೆ ಇದ್ದುಕೊಂಡು ಬೆಳೆಸಿದವ ಸಂತನಾಗುತ್ತಾನೆ. ನಿಷ್ಪಕ್ಷಪಾತದಿಂದ ಸಮತಾಭಾವನೆಯೂ ಸಮತಾಭಾವನೆಯಿಂದ ವಿವೇಕವೂ ವಿವೇಕದಿಂದ ಶಾಂತಿಯೂ ಲಭಿಸುತ್ತದೆ. ಈ ರೀತಿ ಇಹದಲ್ಲೇ ಶಾಂತ ಸ್ಥಿತಿಯನ್ನು ಮುಟ್ಟಿದವ ಅತಿಮಾನುಷ ಸಂತನಾಗುತ್ತಾನೆ.

14 ಕ್ರಿ.ಶ. 1011-1077 ರ ವರೆಗೆ ಬಾಳಿದ ಪಾವೋ ಯೂಂಗ್, 'ಯಂಗ್ ಮತ್ತು 'ಯಿನ್ ತತ್ತ್ವಗಳ ಏರಿಳಿತಗಳನ್ನು ಅರವತ್ತುನಾಲ್ಕು ರೇಖಾ ಸಂಕೇತಗಳ ಮೂಲಕ ತೋರಿಸುತ್ತಾನೆ. ಗೆರೆಗಳಲ್ಲಿ ತುಂಡುಗೆರೆ ಉದ್ದನೆಯ ಗೆರೆಗಳಿಗೆ ಅರ್ಥ ವ್ಯತ್ಯಾಸವುಂಟು. ಈ ವ್ಯತ್ಯಾಸ ಅವುಗಳ ಸಂಖ್ಯೆಯನ್ನೂ ಅವಲಂಬಿಸಿತ್ತದೆ.

ಒಂದರಿಂದ ಆರರವರೆಗೆ ತುಂಡುಗೆರೆ ಮತ್ತು ಉದ್ದನೆಯ ಗೆರೆಗಳನ್ನು ಸೇರಿಸುವುದುರಿಂದ ಭೂಮಿ, ಸೂರ್ಯ, ಚಂದ್ರ, ಆಕಾಶ ನಕ್ಷತ್ರ-ಇವುಗಳ ಚಲನೆಯ ಗತಿಯನ್ನೂ ಶಾಖೋಷ್ಣಗಳನ್ನೂ ಮೆತು ಗಡುಸುಗಳನ್ನೂ ತೋರಿಸಬಹುದು. ಪರಮವಾದುದನ್ನೂ ಚಲಿಸಲಾರದುದನ್ನೂ ನಿರಾಕಾರವಾದುದನ್ನೂ ಯಾವ ಸಂಕೇತದಿಂದಲೂ ತೋರಿಸಲಾಗುವುದಿಲ್ಲ. ಆ ಪರಮತತ್ತ್ವ ಎರಡಾದಾಗ ವಿವಿಧ ಸಂಖ್ಯೆಗಳನ್ನು ಹುಟ್ಟಿಸುತ್ತದೆ. ಆ ಸಂಖ್ಯೆಗಳು ವಿವಿಧ ಪದಾರ್ಥಗಳನ್ನು ಹುಟ್ಟಿಸುತ್ತವೆ. ತುಂಡು ಮತ್ತು ಉದ್ದಗೆರೆಗ¼ನ್ನು ವಿವಿಧ ರೀತಿಗಳಲ್ಲಿ ಸೇರಿಸಿ ಹನ್ನೆರಡು ಸಂಕೇತಗಳನ್ನು ಮಾಡಿಕೊಳ್ಳಲಾಗಿದೆ. ಸೃಷ್ಟಿಯ ಪೂರ್ಣಸ್ಥಿತಿಯಲ್ಲಿ ಮಾನವ ಉದ್ಭವಿಸುತ್ತಾನೆ. ವಿಶ್ವಸೃಷ್ಟಿ ಮತ್ತು ಲಯಗಳ ಅವಧಿ 1,29,600 ವರ್ಷಗಳು.

15 ಕ್ರಿ.ಶ. 1020-1077ರ ವರೆಗೆ ಬಾಳಿದ ಚಾಂಗ್ ಟ್ಸೈ ಎಂಬ ನೂತನ ಕೂಂಗ್ ಪೂಟ್ಸೆವಾದಿಯ ಸೃಷ್ಟಿತತ್ತ್ವ ಅರಿಸ್ಟಾಟಲ್ ತತ್ತ್ವವನ್ನು ಹೋಲುತ್ತದೆ. ದ್ರವ್ಯದ ಪರಮಸ್ಥಿತಿಯಲ್ಲಿ ಚಲನೆ ಮತ್ತು ಜಡತೆ ಸಮಸ್ಥಿತಿಯಲ್ಲಿರುತ್ತವೆ. ಸಮಸ್ಥಿತಿ ತಪ್ಪಿದಾಗ ನಾನಾರೂಪಗಳು ಹುಟ್ಟುತ್ತವೆ. ಪರಿಣಾಮಗೊಳ್ಳುವ ಪರತತ್ತ್ವವೇ ತಾಓ, ಅದರ ನಿಯಮವನ್ನು ಪಾಲಿಸುವುದೇ ಸದ್ವರ್ತನೆ. ಎಲ್ಲದರಲ್ಲೂ ಈ ಪರವಸ್ತು ಅಭಿವ್ಯಕ್ತವಾಗಿದೆ. ನಾವೆಲ್ಲ ಅದರ ಭಾಗಗಳು. ಆದ್ದರಿಂದ ನಾವು ಸೋದರರು ಈ ಪರತತ್ತ್ವವನ್ನು ಪಿತೃವಿನಂತೆಯೂ ಉಳಿದೆಲ್ಲವನ್ನು ಭ್ರಾತೃಗಳೆಂದೂ ಭಾವಿಸಿ ಪ್ರೀತಿಸಬೇಕು. ಎಲ್ಲರನ್ನೂ ಪ್ರೀತಿಸಿದಾಗ ನಾವು ತಂದೆಯಂತಿರುವ ಪರತತ್ತ್ವವನ್ನೂ ಪ್ರೀತಿಸುತ್ತೇವೆ ; ಈ ಮೂಲಕ ನಮ್ಮ ಲೋಕಧರ್ಮ, ಅತೀತ ವಿಶ್ವಧರ್ಮವಾಗುತ್ತದೆ. ವಿಶ್ವಧರ್ಮವನ್ನು ಸಾಧಿಸಿದವರ ಪರ ತತ್ತ್ವದಲ್ಲಿ ಐಕ್ಯಹೊಂದುತ್ತಾನೆ. ಅದೇ ಮುಕ್ತಿ, ಅದೇ ಶಾಶ್ವತ ಶಾಂತಿ.

16 ನೂತನ ಕೂಂಗ್ ಫೂಟ್ಸೆ ಪಂಥ ಮುಂದೆ ಕ್ರಿ.ಶ. 1529ರ ವರೆಗೆ ಎರಡು ಪಕ್ಷಗಳಾಗಿ ಬೆಳೆಯಿತು. ಈ ಎರಡು ಪಕ್ಷಗಳಲ್ಲಿ ಒಂದು ಪಕ್ಷ ಚೆಂಗ್ ಯಿ (1033-1108) ಎಂಬುವನಿಂದಲೂ ಇನ್ನೊಂದು ಪಕ್ಷ ಅವನ ಅಣ್ಣ ಚೆಂಗ್ ಹಾವೋ (1032-1085) ಎಂಬುವನಿಂದಲೂ ಪ್ರಾರಂಭವಾದುವು. ಚೆಂಗ್ ಯಿ ಮತ್ತು ಅವನ ಅನುಯಾಯಿ ಚುಹಿಸಿ (1130-1200), ಇವರಿಬ್ಬರ ತತ್ತ್ವಗಳು ಬಹು ಮಟ್ಟಿಗೆ ಪ್ಲೇಟೊವಿನ ತತ್ತ್ವನ್ನು ಹೋಲುತ್ತದೆ. ಆಕಾರವಿಲ್ಲದ ಸಾಮಾನ್ಯಕ್ಕೆ 'ಲಿ ಎಂದು ಹೆಸರು. ಆಕಾರ ಮತ್ತು ದೇಹವಿರುವ ಎಲ್ಲ ವಾಸ್ತವ ವಸ್ತುಗಳಿಗೂ 'ಹಿಸಿಂಗ್ ಹಿಸಿಯ ಎಂದು ಹೆಸರು. ಪ್ರತಿಯೊಂದು ವಸ್ತುವೂ ಸಾರ ರೂಪವಾದ 'ಲಿ ಯನ್ನು ಒಳಗೊಂಡಿದೆ. 'ಲಿ ಸಾಮಾನ್ಯಗಳು, 'ಹಿಸಿಂಗ್ ಹಿಸಿಯ ಪ್ರತ್ಯೇಕ ವಸ್ತುಗಳು. ಪ್ಲೇಟೋ ಹೇಳಿರುವಂತೆ ಪ್ರತ್ಯೇಕ ವಸ್ತುಗಳು ತಮಗೆ ಸಂಭವಿಸಿದ ಸಾಮಾನ್ಯದಲ್ಲಿ ಭಾಗವಹಿಸಿ ಇರುತ್ತವೆ. ಈ ಸಮಾನ್ಯಗಳು ಆದರ್ಶರೂಪಗಳು. ಒಂದು ವಸ್ತುವು ಅದರ ಸತ್ತ್ವವಾದ ಸಾಮಾನ್ಯವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಫಲಿಸಿದಾಗ ಅದು ಆದರ್ಶರೂಪವನ್ನು ಸಮಿಪಿಸುತ್ತದೆ. ಪ್ರತಿಯೊಂದು ವಸ್ತುವೂ ಆದರ್ಶ ಸ್ವರ್ಗದಲ್ಲಿರುತ್ತದೆ. ಎಂದು ಪ್ಲೇಟೋ ಹೇಳಿರುತ್ತಾನೆ. ಉದಾಹರಣೆ : ಹಾಸಿಗೆ, ಹಡಗು, ಗಾಡಿ-ಇವುಗಳಿಗೆ ಸಮಾಂತರವಾಗಿ ಸ್ವರ್ಗದಲ್ಲಿ ಧ್ಯೇಯರೂಪದ ಹಾಸಿಗೆ, ಹಡಗು, ಗಾಡಿ ಇವೆ. ಒಂದೊಂದು ಧ್ಯೇಯರೂಪವೂ ಸ್ಥಿರವಾದದ್ದು. ಈ ಧ್ಯೇಯರೂಪವಾದ 'ಲಿಗೆ 'ಚಿ' ಎಂದು ಹೆಸರು. ವಾಸ್ತವ ವಸ್ತುಗಳು ಬದಲಾವಣೆಗೆ ಒಳಪಟ್ಟವು. ಅವು ಸ್ಥಿರವಲ್ಲ. ವಾಸ್ತವ ವಸ್ತುಗಳು ಧ್ಯೇಯರೂಪವಾದ ಸಾಮಾನ್ಯಗಳನ್ನು ಬಿಟ್ಟು ಇರಲಾರವು. ಆದರೆ ವಾಸ್ತವ ವಸ್ತುಗಳಲ್ಲಿಯೇ ಧ್ಯೇಯರೂಪ ಇರಬಹುದು. ಸಾಂಸಾರಿಕ ಪ್ರಪಂಚದಲ್ಲಿ ಕಾಲದೇಶಗಳಿಗೆ ಒಳಪಟ್ಟ ಇವು ಒಂದನ್ನು ಬಿಟ್ಟು ಇನ್ನೊಂದು ಇಲ್ಲದಿದ್ದರೂ ತಾರ್ಕಿಕ ದೃಷ್ಟಿಯಿಂದ ಧ್ಯೇಯರೂಪಗಳು ವಾಸ್ತವ ವಸ್ತುಗಳಿಗೆ ಮುಂಚಿನವು. ಏಕೆಂದರೆ ಅವು ಅನಾದಿಯಾದಿ ಅನಂತರೂಪಗಳು. ಈ ಧ್ಯೇಯರೂಪಗಳು ನಿರ್ಜೀವವಸ್ತುಗಳಲ್ಲೂ ಇವೆ. 'ಲಿ ಎಂದರೆ ಸ್ವಭಾವ. ಇಲ್ಲಿ ಸ್ವಭಾವ ಎಂದರೆ ಪ್ರಕೃತಿ ಎಂದು ತಿಳಿಯಕೂಡದು. ಯಾವುದಕ್ಕೆ ಅನುಸಾರವಾಗಿ ಯಾವುದರಿಂದ ಪ್ರೇರಿತವಾಗಿ ಒಂದು ವಸ್ತು ವರ್ತಿಸುತ್ತದೆಯೋ ಅದು ಅದರ ಸ್ವಭಾವ. ಸ್ವಭಾವಕ್ಕನುಗುಣವಾಗಿ ಬಾಳುವುದೇ ಶೀಲ. ಒಂದು ಹಡಗು ತನ್ನ ಪ್ರಭಾವಕ್ಕನುಗುಣವಾಗಿ ವರ್ತಿಸುವುದೇ ಅದರ ಶೀಲ ಆಗ ಅದನ್ನು ಒಳ್ಳೆಯ ಹಡಗೆಂದು ಕರೆಯುತ್ತೇವೆ. ಹಾಗೆಯೇ ಮಾನವನಲ್ಲಿರುವ 'ಲಿಗೆ ಅನುಗುಣವಾಗಿ ನಡೆದವ ಸತ್ಪುರುಷ. ಪ್ಲೇಟೋವಿನ ತತ್ತ್ವದಲ್ಲಿ ದಿ ಐಡಿಯ ಆಫ್ ದಿ ಗುಡ್ ಎಲ್ಲಕ್ಕೂ ಮೇಲಿನ ಆದರ್ಶರೂಪವಾಗಿರುವಂತೆಯೇ ಇವನ ತತ್ತ್ವದಲ್ಲೂ ಟೈ ಚಿ ಎಲ್ಲ ಆದರ್ಶರೂಪಗಳನ್ನೂ ಒಳಗೊಂಡ ಏಕೈಕ ಆದರ್ಶರೂಪ. ಅದು ಬದಲಾವಣೆಗೆ ಮೀರಿದ್ದು ; ಮನಸ್ಸು ಮತ್ತು ಅಲೋಚನೆಗೆ ಮೀರಿದ್ದು. ಭೌತವಸ್ತು ಲಿಯ ಒಂದು ವಾಸ್ತವರೂಪವಾದರೆ, ಮನಸ್ಸು ಲಿ ಯ ಇನ್ನೊಂದು ವಾಸ್ತವ ರೂಪ. ಎಲ್ಲಕ್ಕಿಂತ ಮೇಲಿನದಾದ ಲಿ ಅಥವಾ ಟಯ ಚಿ ಭೌತ ಮತ್ತು ಮಾನಸಿಕ ಭೇದಗಳಿಗೆ ಅತೀತವಾದದ್ದು ಇದನ್ನು ಬೌದ್ಧರ ಶೂನ್ಯಕ್ಕೆ ಹೋಲಿಸಬಹುದು. ಈ ಪಕ್ಷದವರು ಆ ಬೌದ್ಧ ತತ್ತ್ವವನ್ನು ತಮ್ಮ ತತ್ತ್ವದಲ್ಲಿ ಸೇರಿಸಿಕೊಂಡಿರುತ್ತಾರೆ.

ಈ ನೂತನ ಕೂಂಗ್ ಪೂಟ್ಸೆ ಪಂಥದ ರಾಜಕೀಯ ತತ್ತ್ವವೂ ಪ್ಲೇಟೋವಿನ ತತ್ತ್ವವನ್ನು ಹೋಲುತ್ತದೆ. ಧ್ಯೇಯರೂಪವಾದ 'ಚಿ' ಸಂಪೂರ್ಣವಾಗಿ ಒಬ್ಬನಲ್ಲಿ ಅಭಿವ್ಯಕ್ತವಾದಾಗ ಅವನ ಸಾಧು ಅಥವಾ ಸಂತನಾಗುತ್ತಾನೆ. ಅಂಥ ಸಂತರು ರಾಜರಾದಾಗ ಒಂದು ದೇಶದ ರಾಜಕೀಯ ಉನ್ನತಿ ಪಡೆಯುತ್ತದೆ. ರಾಜರಲ್ಲಿ ಈ 'ಚಿ' ಕಡಿಮೆಯಾದಾಗ ರಾಜಕೀಯದಲ್ಲಿ ಅವನತಿ ತೋರುತ್ತದೆ.

17 ಚೆಂಗ್ ಹಾವೋ ಪ್ರಾರಂಭಿಸಿದ ಇನ್ನೊಂದು ನೂತನ ಕೂಂಗ್ ಫೂಟ್ಸೆ ಪಂಥ ವ್ಯಾಂಗ್ ಷಾ-ಜೆನ್ ತತ್ತ್ವದ ಮೂಲಕ ಮುಗಿಲನ್ನು ಮುಟ್ಟಿತು. ಟೆಂಗ್ ಯಿ ಮನಸ್ಸು ಲಿ ಯ ಒಂದು ವಾಸ್ತವರೂಪವೆಂದೂ ಅದು ಚೇತನಾತೀತವಾದದ್ದೆಂದೂ ಹೇಳಿದ. ಚೆಂಗ್ ಹಾವೋ ಮತ್ತು ಷಾ-ಜೆನರ ಪ್ರಕಾರ ಅದು ಚೇತನ ರೂಪವಾದದ್ದು. ಮಾನವನ ಮನಸ್ಸು ಅದರ ಸಂಕುಚಿತ ಅಥವಾ ಮೇಲಿನ ರೂಪ, ಲಿ ಯ ಚೇತನ ಸ್ವಚ್ಛವಾದದ್ದು, ಮಿತಿ ಇಲ್ಲದ್ದು. ಸ್ವಲ್ಪವಾಗಿ ಆಗಲಿ ಅಥವಾ ಹೆಚ್ಚಾಗಿ ಆಗಲಿ ಈ ಚೇತನ ಎಲ್ಲ ಮಾನವರಲ್ಲೂ ಇದೆ. ಸಂಕುಚಿತ ಚೇತನಗಳಲ್ಲಿ ಅದು ಆಜ್ಞಾನದಿಂದ ಮುಚ್ಚಿದೆ. ಜ್ಞಾನಿಯಾದವ ತನ್ನ ಜ್ಞಾನದಿಂದ ಆ ಅಜ್ಞಾನದ ಮೋಡವನ್ನು ಚದರಿಸಿ ತನ್ನ ಅಂತಃಕರಣವನ್ನು ಶುದ್ಧ ಕನ್ನಡಿಯಂತೆ ಪ್ರಕಾಶಮಾನವಾಗಿ ಮಾಡುತ್ತಾನೆ. ಮಾನವರಿಂದ ಹಿಡಿದು ಮೃಗಪಕ್ಷಿಗಳು, ಬೆಟ್ಟಗುಡ್ಡಗಳು, ನದಿಗಳು ವೃಕ್ಷಗಳು-ಎಲ್ಲವನ್ನೂ ಪ್ರೀತಿಸುವುದರಿಂದ ಒಬ್ಬನ ಪ್ರೀತಿ ವಿóಶಾಲವಾಗಿ ಆ ಶುದ್ಧ ಚೇತನ ಅವನಲ್ಲಿ ಸ್ಥಿರವಾಗಿ ನಿಲ್ಲುತ್ತದೆ. ಕೊನೆಯಲ್ಲಿ ಅವನು ಆ ಚೇತನದಲ್ಲೇ ಐಕ್ಯವಾಗುತ್ತಾನೆ. ಆಜ್ಞಾನದಿಂದ ಮತ್ತು ಸ್ವಾರ್ಥದಿಂದ ಮಸುಕಾದ ಮನಸ್ಸುಳ್ಳವನು ತಾನು ಆ ಪರಮಚೇತನವೇ ಎಂಬುದನ್ನು ಮರೆತಿರುತ್ತಾನೆ. ಜ್ಞಾನವನ್ನೂ ಪ್ರೀತಿಯನ್ನೂ ಅವನು ಬೆಳಸಿಕೊಂಡಾಗ ಅವನಿಗೆ ಆ ಚೇತನವೇ ತಾನು ಎಂಬ ಸ್ಮರಣೆಯುಂಟಾಗುತ್ತದೆ. ಮರೆತಿದ್ದನ್ನೂ ಜ್ಞಾಪಿಸಿಕೊಳ್ಳುವುದೇ, ಪ್ರತ್ಯಭಿಜ್ಞೆಯೇ, ಜೀವನದ ಅಂತಿಮ ಗುರಿ. ವ್ಯಾಂಗ್ ಕ್ಷಾ ಜೆನ್ ಪರಮಚೇತನ ಶೂನ್ಯವಲ್ಲ, ಲಾವೋ ಟ್ಸು ಪಂಥದವರ ನಿರ್ಗುಣ ತತ್ತ್ವವಲ್ಲ ಅದು ಭಾವಪ್ರದವಾದದ್ದು ಎಂದು ತೋರಿಸಿ ಆ ಎರಡು ತತ್ತ್ವಗಳನ್ನೂ ತಿದ್ದಿ ಪರಿಪೂರ್ಣ ಭಾವತತ್ತ್ವವನ್ನಾಗಿ ಮಾರ್ಪಡಿಸಿರುತ್ತಾನೆ. ಸುನ್-ಯಾತ್-ಸೆನ್ ಈ ತತ್ತ್ವವನ್ನು ಅನುಸರಿಸಿ ಅದನ್ನು ತನ್ನ ಅಂತರಾಷ್ಟ್ರೀಯ ತತ್ತ್ವಕ್ಕೆ ಆಧಾರವಾಗಿ ಮಾಡಿಕೊಂಡ. ಈಗ ಮಾಕ್ರ್ಸ್‍ವಾದ ಪ್ರಬಲಗೊಂಡುದರಿಂದ ಅದು ಮೂಲೆಗುಂಪಾಗಿದೆ. II

ನಾಮ ತತ್ತ್ವಪಂಥ : ಹೆಸರುಗಳನ್ನು ಸರಿಪಡಿಸುವುದನ್ನು ಕೂಂಗ್ ಫೂಟ್ಸೆ ತನ್ನ ಒಂದು ಕರ್ತವ್ಯವಾಗಿ ಎಣಿಸಿದ್ದ. ಆದರೆ ಹೆಸರುಗಳ ತತ್ತ್ವವೇ ಅವನ ಮುಖ್ಯ ತತ್ತ್ವವಲ್ಲ. ಅವನಿಂದಾಚೆ ಬಂದ ಕೆಲವು ತಾರ್ಕಿಕರು ನಾಮತತ್ತ್ವವನ್ನೇ ಮುಖ್ಯ ತತ್ತ್ವವನ್ನಾಗಿ ಮಾಡಿಕೊಂಡರು. ಇವರಿಗೆ 'ಮಿಂಗ್ ಚಿಯಿ ಎಂದು ಹೆಸರು ಬಂತು. ಮಿಂಗ್ ಚಿಯ ಎಂದರೆ ಕುವಾದಿಗಳು. ಇವರು ಗ್ರೀಕರ ಸೊಪಿಸ್ಟರನ್ನು ಹೋಲುತ್ತಾರೆ. ಈ ಪಂಥವನ್ನು ಆರಂಭಿಸಿದವರು. ಟೆಂಗ್ ಷೀ (ಕ್ರಿ.ಪೂ. 500), ಮತ್ತು ಹುಯಿ ಷಿಷ್ (ಕ್ರಿ.ಪೂ. 350-260). ಹುಯಿಫಿಷ್‍ನ ಗ್ರಂಥಗಳು ದೊರೆತಿಲ್ಲ. ಅವನ ವಾದ ಚ್ವಾಂಗ್-ಟ್ಸು ಎಂಬ ಗ್ರಂಥದ ಒಂದು ಅಧ್ಯಾಯದಲ್ಲಿ ವರ್ಣಿತವಾಗಿದೆ. ಪದಗಳ ಅರ್ಥ ಪರಮವಲ್ಲ. ಅದು ಸಾಪೇಕ್ಷವಾದುದು ಎಂಬುದು ಅವನ ಮೂಲ ಸಿದ್ಧಾಂತ. ರೇಖಾಗಣಿತದ ಒಂದು ನೇರವಾದ ಗೆರೆಗೆ ದಪ್ಪವಿಲ್ಲ. ತುಂಬ ತೆಳುವಾದ ರೇಷ್ಮೆಯ ನೂಲಿಗೂ ದಪ್ಪವಿದೆ. ನೇರವಾದ ಗೆರೆ ಅತ್ಯಂತ ಸಣ್ಣದರಲ್ಲಿ ಸಣ್ಣದಾದರೂ ಆ ಗೆರೆಗೆ ಕೊನೆಯಿಲ್ಲ. ಆದ್ದರಿಂದ ಅದು ದೊಡ್ಡದು. ಹೀಗೇ ಒಂದೇ ವಿಷಯ ಒಂದು ದೃಷ್ಟಿಯಿಂದ ಅಲ್ಪವಾದದ್ದಾಗಿಯೂ ಇರಬಹುದು. ಇನ್ನೊಂದು ದೃಷ್ಟಿಯಿಂದ ಮಹತ್ತರವಾದುದಾಗಿಯೂ ಇರಬಹುದು. ಹಾಗೆಯೇ ಎತ್ತರವಾದದ್ದೂ ತಗ್ಗಾದದ್ದೂ ಸಾಪೇಕ್ಷ ಅರ್ಥವುಳ್ಳಪದಗಳು. ಎತ್ತರವೆಂದು ಹೇಳುವ ಪ್ರಸ್ಥಭೂಮಿಯನ್ನು ಹಿಮಾಲಯಕ್ಕೆ ಹೋಲಿಸಿದರೆ ಅದು ತಗ್ಗಿನದು. ನೆತ್ತಿಯ ಮೇಲಿನ ಸೂರ್ಯನನ್ನು ಅರುಣೋದಯ ಸೂರ್ಯನಿಗೆ ಹೋಲಿಸಿದಾಗ ಅವನು ಏರುವ ಸೂರ್ಯ, ಆದರೆ ಅದೇ ನೆತ್ತಿಯ ಮೇಲಿನ ಸೂರ್ಯನನ್ನು ಅಸ್ತಮಿಸುವ ಸೂರ್ಯನಿಗೆ ಹೋಲಿಸಿದರೆ ಅವನು ಇಳಿಯುವ ಸೂರ್ಯನಾಗುತ್ತಾನೆ. ಎಲ್ಲಾ ವಸ್ತುಗಳೂ ಒಂದು ದೃಷ್ಟಿಯಿಂದ ಒಂದೇ; ಏಕೆಂದರೆ ಎಲ್ಲವೂ ಇವೆ. ಇನ್ನೊಂದು ದೃಷ್ಟಿಯಿಂದ ಎಲ್ಲವೂ ಭಿನ್ನಭಿನ್ನ. ಭಿನ್ನತೆ ಎಲ್ಲಕ್ಕೂ ಸಾಮಾನ್ಯ. ಎಲ್ಲವೂ ಒಂದೇ ಎಂಬ ಪ್ರತಿಜ್ಞೆಗೆ ಎರಡು ವಿರುದ್ಧ ಅರ್ಥಗಳನ್ನು ಕೊಡಬಹುದು. ಎಲ್ಲವೂ ಇವೆ ಆದ್ದರಿಂದ ಎಲ್ಲವೂ ಒಂದೇ ; ಎಲ್ಲವೂ ಭಿನ್ನ ಅದರಿಂದ ಅವೆಲ್ಲ ಒಂದೇ. ಹೋಲಿಕೆಯ ದೃಷ್ಟಿಯಿಂದ ಎಲ್ಲವೂ ಒಂದಕ್ಕೊಂದು ಸಮೀಪ. ವ್ಯತ್ಯಾಸದ ದೃಷ್ಟಿಯಿಂದ ಒಂದಕ್ಕೊಂದು ಬಹುದೂರ. ವ್ಯತ್ಯಾಸದ ದೃಷ್ಟಿಯಿಂದ ಒಬ್ಬನ ಪಿತ್ತಕೋಶಕ್ಕೂ ಮೂತ್ರಕೋಶಕ್ಕೂ ಚು ಮತ್ತು ಯುಯೆ ದೇಶಗಳಿಗಿರುವಷ್ಟು ಅಂತರವಿದೆ.

ನಾಮತತ್ತ್ವದ ಇನ್ನೊಬ್ಬ ಮುಖಂಡ ಕುಂಗ್-ಸುಂಗ್-ಲಂಗ್ (ಕ್ರಿ.ಪೂ. 284-259) ಅವನು ಒಂದು ದೇಶದ ಗಡಿಯನ್ನು ಕುದುರೆಯ ಮೇಲೆ ಏರಿ ದಾಟುತ್ತಿದ್ದಾಗ, ಅಲ್ಲಿಯ ಕಾವಲುಗಾರರು ಕುದುರೆಗಳಿಗೆ ಈ ಮಾರ್ಗದಲ್ಲಿ ಪ್ರವೇಶವಿಲ್ಲ ಎಂದರಂತೆ. ಕುಂಗ್-ಸುಂಗ್-ಲಂಗ್ ತನ್ನ ಕುದುರೆ ಬಿಳುಪು, ಬಿಳುಪು ಕುದುರೆ ಕುದುರೆಯಲ್ಲ ಎಂದು ಹೇಳುತ್ತ ಗಡಿಯನ್ನು ದಾಟಿ ಹೊರಟೇ ಹೋದನಂತೆ ಬಿಳಿಯ ಕುದುರೆ ಕುದುರೆಯಲ್ಲ ಎಂಬುದು ಅವನ ವಾದದ ಒಂದು ಪ್ರಖ್ಯಾತ ದೃಷ್ಟಾಂತ. ಕುಂಗ್-ಸುಂಗ್-ಲಂಗ್‍ಟ್ಸು ಎಂಬ ಅವನ ಗ್ರಂಥದಲ್ಲಿ ಅದಕ್ಕಾಗಿಯೆ ಒಂದು ಅಧ್ಯಾಯ ಮೀಸಲಾಗಿದೆ. ಬಿಳುಪು ಕುದುರೆ ಕುದುರೆಯಲ್ಲ ಎಂಬ ಪ್ರತಿಜ್ಞೆಯನ್ನು ಅವನು ಈ ರೀತಿ ಸಮರ್ಥಿಸುತ್ತಾನೆ. ಕುದುರೆ ಎಂಬ ಪದ ಒಂದು ಆಕೃತಿಯನ್ನು ನಿರ್ದೇಶಿಸುತ್ತದೆ. ಬಿಳುಪು ಎಂಬ ಪದ ಬಣ್ಣವನ್ನು ನಿರ್ದೇಶಿಸುತ್ತದೆ. ಆಕೃತಿ ಬಣ್ಣವಲ್ಲ. ಆಕೃತಿ ಕುದುರೆಗೆ ಸಂಬಂಧಿಸಿದ್ದು. ಬಿಳುಪು ಬಣ್ಣಕ್ಕೆ ಸಂಬಂಧಿಸಿದ್ದು. ಆದ್ದರಿಂದ ಬಿಳುಪು ಕುದುರೆಯೇ ಬೇರೆ ಕುದುರೆಯೇ ಬೇರೆ. ಕುದುರೆಯನ್ನು ತೆಗೆದುಕೊಂಡು ಬಾ ಎಂದರೆ ಬಿಳುಪು ಕುದುರೆಯನ್ನೇ ತರಬೇಕಾಗಿದ್ದಿಲ್ಲ. ಬಣ್ಣ ಅಪ್ರಸಕ್ತ. ಇಲ್ಲಿ ಕುದುರೆ ಎಂಬ ಪದ ಬಿಳಿಯ ಕುದುರೆಯನ್ನು ನಿರ್ದೇಶಿಸುವುದಿಲ್ಲ. ಕುದುರೆ ಎಂಬ ಪದದ ನಿರ್ದೇಶನ ವಿಸ್ತಾರ, ಬಿಳಿಯ ಕುದುರೆ ಎಂಬ ಪದದ ನಿರ್ದೇಶನ ಸಂಕುಚಿತ. ಆದ್ದರಿಂದ ವಿಶಾಲ ನಿರ್ದೇಶನವುಳ್ಳ ಕುದುರೆ ಬೇರೆ, ಸಂಕುಚಿತ ನಿರ್ದೇಶನವುಳ್ಳ ಬಿಳಿಯ ಕುದುರೆ ಬೇರೆ. ಕುದುರೆ ಅಶ್ವತ್ವವೆಂಬ ಸಾಮಾನ್ಯ ; ಬಿಳಿಕುದುರೆ ಶ್ವೇತ ಅಶ್ವತ್ಥವೆಂಬ ಸಾಮಾನ್ಯ. ಈ ಸಾಮಾನ್ಯಗಳು ಭಿನ್ನ. ಆದ್ದರಿಂದ ಬಿಳಿಯ ಕುದುರೆ ಕುದುರೆ ಅಲ್ಲ. ಈ ವಾದಗಳನ್ನು ತರ್ಕಾಭಾಸಗಳು ಎಂದು ತೋರಿಸಬಹುದು. ಅವು ಹೇಗೆ ಅಭಾಸಗಳು ಎಂಬುದನ್ನು ಹುಸೇನ್ ಟ್ಸು ತೋರಿಸಿದ್ದನ್ನು ಈಗಾಗಲೇ ನೋಡಿರುತ್ತೇವೆ.

ಇನ್ನೊಂದು ಅಧ್ಯಾಯದಲ್ಲಿ ಬಿಳಿಯಕಲ್ಲು ಮತ್ತು ಕಲ್ಲು ಬೇರೆ ಬೇರೆ ಆದ್ದರಿಂದ ಬಿಳಿಯ ಕಲ್ಲು ಕಲ್ಲಲ್ಲ ಎಂದು ವಾದಿಸಿರುತ್ತಾನೆ. ಕಲ್ಲಿಗೆ ಕಾಠಿಣ್ಯ ಸ್ವಾಭಾವಿಕ. ಕಲ್ಲಾಗಲು ಕಾಠಿಣ್ಯವಿದ್ದೇ ಇರಬೇಕು. ಕಲ್ಲಾಗಲು ಅದು ಬಿಳಿಯದೇ ಆಗಿರಬೇಕಾದ್ದಿಲ್ಲ. ಬಿಳಿಯದ್ದೆಲ್ಲವೂ ಕಲ್ಲಾಗಿರಬೇಕಾಗಿಲ್ಲ. ಕಾಠಿಣ್ಯ ಸ್ಪರ್ಶೇಂದ್ರಿಯದ ವಿಷಯ. ಬಿಳುಪು ಕಣ್ಣಿನ ವಿಷಯ. ಕಣ್ಣು ಕಾಠಿಣ್ಯವನ್ನು ತಿಳಿಯಲಾರದು. ಸ್ಪರ್ಶ ಬಣ್ಣವನ್ನು ತಿಳಿಯಲಾರದು. ಆದ್ದರಿಂದ ಕಣ್ಣು ತೋರಿಸುವ ಬಿಳಿಯದೇ ಬೇರೆ ಸ್ಪರ್ಶ ತೋರಿಸುವ ಕಲ್ಲೇ ಬೇರೆ. ಆದ್ದರಿಂದ ಬಿಳಿಯ ಕಲ್ಲು ಕಲ್ಲಲ್ಲ. ಇನ್ನೊಂದು ಅಧ್ಯಾಯನದಲ್ಲಿ ಅವನು ಪ್ರತ್ಯೇಕಗಳಿಗೂ ಅಂದರೆ ವಿಶೇಷಗಳಿಗೂ ಸಾಮಾನ್ಯಗಳಿಗೂ ಇರುವ ಭೇದಗಳನ್ನು ತೋರಿಸುತ್ತಾನೆ. ಅವನು ಸಾಮಾನ್ಯಗಳನ್ನು ವಾಸ್ತವ ವಸ್ತುಗಳು ನಮ್ಮ ಕಣ್ಣಿಗೆ ಗೋಚರವಾಗುವಂಥವು. ಸಾಮಾನ್ಯಗಳು ಕಣ್ಣಿಗೆ ಗೋಚರವಲ್ಲ. ಆದ್ದರಿಂದ ಅವು ಬೇರೆ ಬೇರೆ 'ಚಿಹ್ ಎಂದೂ ವಾಸ್ತವ ವಸ್ತುಗಳನ್ನು 'ವು ಎಂದು ಕರೆದಿದ್ದಾನೆ.

ಕೊನೆಯ ಅಧ್ಯಾಯದಲ್ಲಿ ಮೂರ್ತ ಮತ್ತು ಅಮೂರ್ತಗಳಿಗಿರುವ ಭೇದವನ್ನು ವಿವರಿಸಿದ್ದಾನೆ. ಅಮೂರ್ತವಾದ ಇರವಿಗೆ ರೂಪವಿಲ್ಲ. ಮೂರ್ತನಾದ ಇರವಿಗೆ ರೂಪವಿದೆ. ಮೂರ್ತವಾದವು ಕಾಲದೇಶ ಮತ್ತು ಬದಲಾವಣೆಗಳಿಗೆ ಒಳಪಟ್ಟ ವಾಸ್ತವಸ್ತುಗಳು. ಅಮೂರ್ತವಾದ ಇರವು ರೂಪರಹಿತವಾದದ್ದು; ಕಾಲ, ದೇಶ, ಬದಲಾವಣೆಗಳಿಗೆ ಮೀರಿದ್ದು, ಅಮೂರ್ತವಾದದ್ದು ಎಲ್ಲಕ್ಕೂ ಮೇಲಿನದು. ಅದಕ್ಕಿಂತ ಮೇಲಿನದಿಲ್ಲ. ಈ ಆಕಾರವಿಲ್ಲದ ಅಮೂರ್ತತತ್ತ್ವವನ್ನು ಇವನು ಬೆಳೆಸಲಿಲ್ಲ. ಅದನ್ನು ಲಾವೋಟ್ಸು ಬೆಳೆಸಿ ಅದನ್ನು ತನ್ನ ತತ್ತ್ವದ ಪ್ರಥಮ ತತ್ತ್ವವನ್ನಾಗಿ ಮಾಡಿಕೊಂಡ. III ತಾಓ ತತ್ತ್ವ : ಸಾಮಾನ್ಯವಾಗಿ ಲಾವೋ ಟ್ಸು ತತ್ತ್ವವನ್ನು ತಾಓ ತತ್ತ್ವೆಂದು ಭಾವಿಸಲಾಗಿದೆ. ತಾಓ ಅಂದರೆ ಪಥ ಎಂದು ಅರ್ಥ. ಈ ಅರ್ಥದಲ್ಲಿ ಕೂಂಗ್ ಫೂಟ್ಸೆಯೂ ತಾಓವನ್ನು ಅಂಗೀಕರಿಸಿರುತ್ತಾನೆ. ಲಾವೋ ಟ್ಸು ತತ್ತ್ವದಲ್ಲಿ ತಾಓ ಕೇವಲ ಪಥವಲ್ಲ ; ಅದು ಪರವಸ್ತು. ಕೂಂಗ್ ಫೂಟ್ಸೆ ಪರತತ್ತ್ವಕ್ಕೆ ಹೆಚ್ಚು ಗಮನ ಕೊಡಲಿಲ್ಲ. ಲಾವೋ ಟ್ಸು ಪರತತ್ತ್ವಕ್ಕೆ ಹೆಚ್ಚು ಗಮನ ಕೊಟ್ಟಿದ್ದಾನೆ. ಅವನು ತೋರಿಸಿದ ಪಥ ಅದಕ್ಕೆ ಸಂಬಂಧಿಸಿದ್ದು. ಶೀಲ ಶ್ರೀಮಂತಿಕೆಯನ್ನು ಬೆಳೆಸುವುದೇ ಜೀವನದ ಪಥವೆಂದು ಕೂಂಗ್ ಫೂಟ್ಸೆ ಬೋಧಿಸಿದ. ಪರವಸ್ತುವಿನಲ್ಲಿ ಐಕ್ಯವಾಗುವುದೇ ಜೀವನದ ಪಥವೆಂದು ಲಾವೋ ಟ್ಸು ಸಾರಿದ. ನೂತನ ಕೂಂಗ್ ಫೂಟ್ಸೆ ಪಂಥದವರೂ ನೂತನ ಲಾವೋ ಟ್ಸು ತಾತ್ತ್ವಿಕರಂತೆ ಬೌದ್ಧ ವಿಜ್ಞಾನವಾದದಿಂದ ಸ್ಪೂರ್ತಿ ಪಡೆದು ತಾಓ ಎಂಬ ಪರ ಚೇತನದಲ್ಲಿ ಐಕ್ಯವಾಗುವುದೇ ಪರಮಮುಕ್ತಿಯೆಂದು ಭಾವಿಸಿದರು.

ತಾಓ ಪಂಥದಲ್ಲಿ ಮೂರು ಮುಖ್ಯ ಘಟ್ಟಗಳಿವೆ. ಲಾವೋ ಟ್ಸುಗೆ ಮುಂಚಿನ ತರುಣಾವಸ್ಥೆಯ ತಾಓ ಪಂಥ, ಮಧ್ಯಕಾಲದ ಲಾವೋಟ್ಸು ಪಂಥ, ವ್ಯಾಖ್ಯಾನಕಾರರ ತಾಓ ಪಂಥ. ಅಲ್ಲಿಂದಾಚೆಗೆ ಬೆಳೆದದ್ದು ನೂತನ ತಾಓ ಪಂಥ.

1 ಲಾವೋ ಟ್ಸು ಎಂಬ ತಾಓ ತತ್ತ್ವಗ್ರಂಥದಲ್ಲಿ ಯಾಂಗ್ ಚುವಿನ (ಕ್ರಿ.ಪೂ. 470-381) ತತ್ತ್ವವನ್ನು ಕುರಿತ ಒಂದು ಅಧ್ಯಾಯವಿದೆ. ಆದರೆ ಇದರಲ್ಲಿ ಚಾರ್ವಾಕ ಜೀವತತ್ತ್ವದಂತೆ. ಇಂದ್ರಿಯ ಸುಖವೇ ಜೀವನದ ಪರಮೋದ್ಧೇಶವೆಂದು ಹೇಳಿರುತ್ತದೆ. ಯಾಂಗ್ ಚುವಿನ ತತ್ತ್ವ ಇದಕ್ಕೆ ತೀರ ವಿರುದ್ಧವಾದದ್ದು. ಈ ಗ್ರಂಥ ಪ್ರಮಾಣಿಕವಲ್ಲವೆಂದು ಆಧುನಿಕ ಚೀನೀ ವಿದ್ವಾಂಸರ ಅಭಿಪ್ರಾಯ. ಆದ್ದರಿಂದ ಇವನ ತತ್ತ್ವವನ್ನು ಇತರ ಗ್ರಂಥಗಳ ಆಧಾರದಮೇಲೆ ರೂಪಿಸಿದೆ.

ಯಾಂಗ್ ಚುವಿನದು ಕೂಂಗ್ ಫೂಟ್ಸೆ ತತ್ತ್ವದಂತೆ ಲೋಕ ಸಂಗ್ರಹ ತತ್ತ್ವವಲ್ಲ. ಅವನದು ಲೋಕನಿರಾಕರಣೆಯ ತತ್ತ್ವ. ಲೋಕದಲ್ಲಿದ್ದು ಶಾಂತಿಯನ್ನು ಬಯಸುವುದೂ ಸಂತೆಯಲ್ಲಿದ್ದು ನಿಶ್ಯಬ್ಧವನ್ನು ಬಯಸುವುದೂ ಒಂದೇ. ಸಂಸಾರ ಒಂದು ಮುಳ್ಳಿನ ಪೊದೆ. ಅದರಲ್ಲಿ ಸಿಕ್ಕಿದವನಿಗೆ ಶ್ರಮವೇ ಫಲ; ಅದರಿಂದ ಬಿಡಿಸಿಕೊಳ್ಳುವ ಹೊತ್ತಿಗೆ ಅವನ ಜೀವವೇ ಹಾರಿಹೋಗುತ್ತದೆ. ಸಂಸಾರ ಹಳೆಯ ಎಕ್ಕಡದಂತೆ; ಅದಕ್ಕೆ ಎಷ್ಟು ತೇಪೆ ಹಾಕಿದರೂ ನಿಲ್ಲುವುದಿಲ್ಲ. ಆದ್ದರಿಂದ ಜನರ ಸಂಪರ್ಕದಿಂದ ಸರಿದು ಏಕಾಕಿಯಾಗಿ ಬೆಟ್ಟದ ಗುಹೆಯಲ್ಲಿ ವಾಸಿಸಿದಾಗಲೇ ಸಂಸಾರದ ಸೆರೆಯಿಂದ ಬಿಡುಗಡೆ ಮತ್ತು ಶಾಂತಿ. ಒಬ್ಬನ ಬಿಡುಗಡೆಗೆ ಅವನು ತನ್ನಷ್ಟಕ್ಕೆ ತಾನು ಹೊರಚ್ಚಾಗಿ ಬಾಳಬೇಕು. ಕಾಲಿನ ಒಂದು ಕೂದಲನ್ನು ಕಿತ್ತುಕೊಟ್ಟ ಮಾತ್ರಕ್ಕೆ ಲೋಕ ಉದ್ಧಾರವಾಗುತ್ತದೆಂದು ಭರವಸೆ ಕೊಟ್ಟರೂ ನಾನು ಒಂದು ಕೂದಲನ್ನೂ ಕಿತ್ತುಕೊಡಲಾರೆ ಎಂದು ಅವನು ಹೇಳಿರುತ್ತಾನೆ. ಈ ಲೋಕವನ್ನು ಪುಗಸಟ್ಟೆ ನನಗೆ ಕೊಡುತ್ತೇನೆಂದರೂ ಅದು ನನಗೆ ಬೇಡ. ಸರ್ಕಾರದ ಸುಧಾರಣೆ ಸಮಾಜಸುಧಾರಣೆ, ಆರ್ಥಿಕದ ಸುಧಾರಣೆ-ಇವೆಲ್ಲ ಹಗಲು ಗನಸುಗಳು. ಒಬ್ಬೊಬ್ಬನೂ ಈ ಲೋಕದ ಲಾಭಗಳನ್ನು ನಿರಾಕರಿಸಿ ತನ್ನಷ್ಟಕ್ಕೆ ತಾನು ಬಾಳುವುದನ್ನು ಕಲಿತರೆ ಎಲ್ಲವೂ ತನ್ನಷ್ಟಕ್ಕೆ ತಾನೆ ಸರಿಹೋಗುತ್ತದೆ. ಯಾವ ಸರ್ಕಾರ ಹೆಚ್ಚು ಕಾಯದೆಗಳನ್ನು ಜನರ ಮೇಲೆ ಹೇರುವುದಿಲ್ಲವೋ ಅದೇ ಒಳ್ಳೆಯ ಸರ್ಕಾರ. ಯಾವ ಸಮಾಜ ಹೆಚ್ಚು ಕಟ್ಟುಗಳನ್ನು ನಿಯಮಿಸುವುದಿಲ್ಲವೋ ಅದು ಒಳ್ಳೆಯ ಸಮಾಜ. ನನ್ನಂತೆ ಪ್ರತಿಯೊಬ್ಬನೂ ಒಂದು ರೋಮ ಮಾತ್ರಕ್ಕೆ ಈ ಲೋಕದ ನಿಧಿಯನ್ನೆಲ್ಲ ಕೊಟ್ಟರೂ ಬೇಡವೆಂದು ನಿರಾಕರಿಸಿದರೆ ಸಮಾಜ ತನ್ನಷ್ಟಕ್ಕೆ ತಾನೇ ಸ್ವರ್ಗಲೋಕವಾಗುತ್ತದೆ. ಹೀಗೆ ಯಾಂಗ್ ಚು ತನ್ನ ವಾದವನ್ನು ಮುಕ್ತಾಯಗೊಳಿಸುತ್ತಾನೆ.

2 ಲಾವೋ ಟ್ಸು (ಕ್ರಿ.ಪೂ. 361-289) ಯಾಂಗ್ ಚುವಿನ ಈ ಭಾವನೆಗಳನ್ನು ಬೆಳೆಸಿದನಲ್ಲದೆ, ಪರತತ್ತ್ವವನ್ನು ಮೊಟ್ಟಮೊದಲಿಗೆ ಸ್ಥಾಪಿಸಿದ. ಲಾವೋ ಟ್ಸು ಎಂಬ ಹೆಸರಿನವನು ಕೂಂಗ್ ಪೂಟ್ಸೆ ಕಾಲದಲ್ಲಿದ್ದಿರಬಹುದು. ಆದರೆ ಲಾವೋ ಟ್ಸು ಎಂಬ ಗ್ರಂಥ ಮಾತ್ರ ತುಂಬ ಈಚಿನ ಕಾಲದ್ದಾದುದರಿಂದ ಲಾವೋ ಟ್ಸು ಅದರ ಕರ್ತೃವಾಗಿರಲಾರ. ಆ ಗ್ರಂಥದಲ್ಲಿ ಲಾವೋ ಟ್ಸು ಎಂಬುವನ ಹೇಳಿಕೆಗಳನ್ನು ಅವನ ಅನುಯಾಯಿಗಳು ಸೇರಿಸಿರಬಹುದು.

ಲಾವೋ ಟ್ಸು ಪ್ರಕಾರ ತಾಓ ಅನಂತವಾದ, ನಿರಾಕಾರವಾದ ಹೆಸರಿಲ್ಲದ ತತ್ತ್ವ. ಈ ದರ್ಶನದಲ್ಲಿ 'ಯು ಎಂದರೆ ಶುದ್ಧ ಇರವು; 'ವು ಎಂದರೆ ಶುದ್ಧ ಶೂನ್ಯ, ಇವೆರಡೂ ಒಂದೇ. ಏಕೆಂದರೆ ಎರಡೂ ನಿರಾಕಾರವಾದವು ನಾಮರಹಿತವಾದವು. ಸ್ವರ್ಗ ಮತ್ತು ಭೂಮಿ ಇವೂ ನಾಮಸಹಿತವಾದವು. ಉಳಿದೆಲ್ಲ ವಸ್ತುಗಳೂ ಆ ಸ್ವರ್ಗ ಮತ್ತು ಭೂಮಿಯ ಬಗೆಬಗೆಯ ನಾಮಾಂತರಗಳು.

ನಾಮರಹಿತವಾದ ಸ್ವತ್ತನ್ನು ನಿರ್ದೇಶಿಸಬೇಕಾಗಿರುವುದರಿಂದ ವ್ಯವಹಾರ ಸೌಕರ್ಯಕ್ಕಾಗಿ ಅದನ್ನು ತಾಓ ಎಂದು ಕರೆಯಲಾಗಿದೆ. ಇತರ ಹೆಸರುಗಳು ಬದಲಾಯಿಸುತ್ತವೆ. ಆದರೆ ತಾಓ ಎಂಬ ಸಂಕೇತ ಬದಲಾಯಿಸುವುದಿಲ್ಲ. ಅದು ಅನಾದಿನಿತ್ಯ ನಾಮ. ಅದು ನಿಜವಾಗಿ ನಾಮರಹಿತವಾದುದುರಿಂದ ಅದನ್ನು ಅಭಾವವೆಂದು ಕರೆಯಬಹುದು. ಯಾವುದು ಇರಬೇಕಾದರೂ ಅದಕ್ಕೆ ಅಧಾರವಾಗಿ ಅದರ ಅಭಾವವಿರಬೆಕು. ಅಭಾವವೇ ಎಲ್ಲ ಭಾವಗಳಿಗೂ ಕಾರಣ. ಅಭಾವ 'ಯು ಭಾವ 'ವು ; ವು ಗೆ 'ಯು ಆಧಾರ. 'ಯು ಬದಲಾಯಿಸುವುದಿಲ್ಲ. ಅದು ಅಚಲ ಆದರೂ ಅದು ಚಲನೆಯುಳ್ಳ ಬದಲಾಯಿಸುವ ಎಲ್ಲಕ್ಕೂ ಆಧಾರ. ತಾಓ ಎಲ್ಲ ಚಲಿಸುವ ವಸ್ತುಗಳ ಚಲನೆಯನ್ನೂ ತನ್ನ ಹಿಡಿತದಲ್ಲಿಟ್ಟು ಕೊಂಡಿದೆ.

ತಾಓ ನಿಯಮದ ಪ್ರಕಾರ ಒಂದು ವಸ್ತುವಾಗಲಿ ಕ್ರಿಯೆಯಾಗಲಿ ಅತಿಯಾದಾಗ ಅದಕ್ಕೆ ವ್ಯತಿರಿಕ್ತವಾದುದರಲ್ಲಿ ಪರ್ಯವಸಾನಗೊಳ್ಳುತ್ತದೆ. ದುರಂತ ದಾರುಣವಾದಾಗ ಮಂಗಳಕರವಾದ ವಿವೇಕ ಅದರಿಂದ ಹುಟ್ಟುತ್ತದೆ. ಬಡತನದ ಅಂತಿಮ ಘಟ್ಟವನ್ನು ಮುಟ್ಟಿದವನಿಗೆ ಬುದ್ಧಿ ಬಂದು ಐಶ್ವರ್ಯ ಲಭಿಸುತ್ತದೆ. ಐಶ್ವರ್ಯದ ಮುಗಿಲನ್ನು ಮುಟ್ಟಿದವನಿಗೆ ದುರ್ಬುದ್ಧಿ ಹುಟ್ಟಿ ತಪ್ಪುದಾರಿ ಹಿಡಿದು ದಿವಾಳಿಯಾಗುತ್ತಾನೆ. ಅಪಾಯ ಹೆಚ್ಚಿದಾಗ ಅಶಕ್ತರು ಬಲಶಾಲಿಗಳನ್ನು ನಿಗ್ರಹಿಸುತ್ತಾರೆ. ಒಂದನ್ನು ಹೆಚ್ಚು ಮಾಡಿದರೆ ಅದು ಕಡಿಮೆಯಾಗುತ್ತದೆ. ಒಂದನ್ನು ಕಡಿಮೆ ಮಾಡಿದಾಗ ಅದು ಹೆಚ್ಚುತ್ತದೆ. ಇವು ಮೇಲ್ನೋಟಕ್ಕೆ ವಿರೋಧಾಭಾಸಗಳಾಗಿ ಕಾಣುತ್ತವೆ. ಆದರೆ ವಿರೋಧಾಭಾಸಗಳಲ್ಲಿ ಮೀತಿಮೀರಿದ್ದು ಅತಿಯಾದದ್ದು ತನ್ನನ್ನು ತಾನೇ ನಾಶಗೊಳಿಸುತ್ತದೆ. ಅತಿ ಸರ್ವತ್ರ ವರ್ಜಯೇತ್ ಎಂಬುದೇ ಈ ತಾಓ ನಿಯಮದ ಅರ್ಥ.

ಈ ನಿಯಮವನ್ನು ತಿಳಿಯುವುದೇ ವಿವೇಕ. ಈ ವಿವೇಕ ಪಡೆದವ ಉದಾರ ಚರಿತನಾಗುತ್ತಾನೆ. ಉದಾರಿಯಾದವನಿಗೆ ಪಕ್ಷಪಾತಬುದ್ಧಿ ಬಿಟ್ಟು ಹೋಗುತ್ತದೆ. ಪಕ್ಷಪಾತ ಬುದ್ಧಿ ತೊಲಗಿದಾಗ ಅವನು ಸರ್ವಗ್ರಾಹಿಯಾಗುತ್ತಾನೆ. ಸರ್ವಗ್ರಾಹಿಯಾದವ ವಿಶಾಲ ಹೃದಯಿಯಾಗುತ್ತಾನೆ ; ಸತ್ಯದಲ್ಲಿ ಸೇರಿಹೋಗುತ್ತಾನೆ ; ಪುನಃ ಜೀವನದಲ್ಲಿ ಆ ಸತ್ಯದಿಂದ ಜಾರುವುದಿಲ್ಲ. ಈ ಐಕ್ಯವನ್ನು ಜೀವನ್ಮುಕ್ತಿಗೆ ಹೋಲಿಸಬಹುದು.

ತಾಓವನ್ನು ಅರಿತವ ಯಾವುದನ್ನಾದರೂ ಸಾಧಿಸಬೇಕಾದರೆ ಅದಕ್ಕೆ ವಿರುದ್ಧವಾದುದರಿಂದ ಪ್ರಾರಂಭಿಸುತ್ತಾನೆ. ಪ್ರಬಲನಾಗಬೇಕೆಂಬಾತ ಅದಕ್ಕೆ ವಿರುದ್ಧವಾದ ವಿನೀತಭಾವವನ್ನು ತಳೆಯುತ್ತಾನೆ. ಮುಂದಕ್ಕೆ ಬರಬೇಕಾದರೆ ಎಲ್ಲರಿಗಿಂತಲೂ ಹಿಂದಿನವನಾಗುತ್ತಾನೆ. ಎಲ್ಲವನ್ನು ವರ್ಜಿಸಿದಾಗ ಅವನಿಗೆ ಎಲ್ಲವೂ ವಶವಾಗುತ್ತವೆ. ಎಲ್ಲರ ಕಣ್ಣು ತಪ್ಪಿಸಿಕೊಂಡು ಏಕಾಂಕಿಯಾದಾಗ ಅವನ ಖ್ಯಾತಿ ಎಲ್ಲೆಲ್ಲೂ ಹರಡುತ್ತದೆ. ವಿವೇಕಿಯಾದವ ವಿನೀತನಾಗಿ ನಮ್ರತೆಯಿಂದ ಸ್ವಲ್ಪದರಿಂದಲೇ ತೃಪ್ತನಾಗಿ ಬಾಳಬೇಕು. ಹೀಗೆ ಬಾಳುವುದು ಸಹಜವಾದ ತಾಓ ನಿಯಮ. ಈ ಸಹಜ ನಿಯಮ ಎಲ್ಲರಲ್ಲೂ ಇದ್ದೇ ಇದೆ. ಅದೇ ಸದ್ಗುಣ, ತಾಓದಿಂದ ಎಲ್ಲರೂ ಸ್ವಾಭಾವಿಕವಾಗಿ ಪಡೆದಿರುವ ಸದ್ಗುಣವನ್ನು ಲಾವೋ ಟ್ಸು 'ಟಿ' ಎಂದು ಕರೆದಿರುತ್ತಾನೆ. ಸ್ವಾಭಾವಿಕ ಸದ್ಗುಣಕ್ಕನುಸಾರವಾಗಿ ಬಾಳುವವನ ಜೀವನ ಸರಳ; ಸ್ವತಹ ಪ್ರೇರಿತವಾದ್ದು. ಅದಕ್ಕೆ ಪಾಂಡಿತ್ಯ ಬೇಕಿಲ್ಲ. ಪಾಂಡಿತ್ಯದಿಂದ ಜೀವನ ಕೃತಕವಾಗುತ್ತದೆ. ಕರ್ಮಾಡಂಬರ ಹೆಚ್ಚುತ್ತದೆ, ತಾಓವಿನ ಸರಳತೆ ಮರೆಯಾಗುತ್ತದೆ. ಒಳ್ಳೆಯದು, ಕೆಟ್ಟದ್ದು ಸುಂದರವಾದದ್ದು ಕುರೂಪಿಯಾದದ್ದು ಎಂಬ ದ್ವೈತಭಾವ ಹೆಚ್ಚಿ ಎಲ್ಲೆಲ್ಲೂ ತಾಂಡವಮಾಡುತ್ತದೆ. ಹಸುಳೆಯ ನಿಷ್ಕಳಂಕ ಬುದ್ಧಿ ಹೋಗಿ ಎಲ್ಲದರಲ್ಲೂ ಪಾಪ, ಕಳಂಕ, ಕೊಳೆ ಕಾಣಿಸಿಕೊಳ್ಳುತ್ತವೆ. 'ಟಿ' ನಿಯಮದಂತೆ ಬಾಳಬೇಕೆಂಬಾತ ನಿಷ್ಕಳಂಕ ಹಸುಳೆಯಂತೆ ಬಾಳಬೇಕು. ನಿಷ್ಕಳಂಕ ಸರಳಸ್ವಭಾವವನ್ನು ಬೆಳೆಸಿಕೊಂಡವನೇ ಸಾಧು, ಸಂತ.

ಕೂಂಗ್ ಫೂಟ್ಸೆಯಂತೆ ಲಾವೋ ಟ್ಸು ಕೂಡ ಸಂತರು ರಾಜರಾದಾಗ ರಾಜ್ಯ ಸುಖೀರಾಜ್ಯವಾಗುತ್ತದೆ ಎಂದು ಹೇಳಿದ್ದಾನೆ. ಆದರೆ ಲಾವೋ ಟ್ಸುವಿನ ಸಂತ ಆಳುವ ಬಗೆ ಬೇರೆ. ಕೂಂಗ್ ಫೂಟ್ಸೆಯ ಸಂತ ಆಳುವ ಬಗೆ ಬೇರೆ. ಲಾವೋ ಟ್ಸುವಿನ ಸಂತ ಅಳದೆಯೆ ಆಳುತ್ತಾನೆ. ಕಾನೂನು ಹೆಚ್ಚಿದ್ದೇ ಅಪರಾಧ ಹೆಚ್ಚಿದಕ್ಕೆ ಕಾರಣ. ಆದ್ದರಿಂದ ಕಾನೂನುಗಳನ್ನು ಅವನು ಕಡಿಮೆ ಮಾಡುತ್ತಾನೆ. ಸಮಾಜದಲ್ಲಿ ಕಂಡುಬರುವ ಏರುಪೇರುಗಳನ್ನು ತೊಡೆದುಹಾಕಿ ಸಮಾನತೆಯನ್ನು ಏರ್ಪಡಿಸುತ್ತಾನೆ. ಅವನು ಅನುಸರಿಸಿದ ಸರಳ ನೀತಿ ಏನೂ ತಿಳಿಯದ ಮಗುವಿನ ನೀತಿಯೆಂದೆಯೇ ಭಾವಿಸಕೂಡದು. ಅದು ವಿವೇಕದಿಂದ ಕೃಷಿಮಾಡಿ ಅರ್ಜಿಸಿದ್ದು : ಪಾಂಡಿತ್ಯದ ವಿವೇಕದಿಂದ ಪಾರಾಗಿ ಆರ್ಷಜ್ಞಾನವನ್ನು ಹೆಚ್ಚಿಸುವುದಿಲ್ಲ. ಪಾರಮಾರ್ಥಿಕ ಜ್ಞಾನವನ್ನು ಹೆಚ್ಚಿಸುತ್ತದೆ.

3. ಚ್ವಾಂಗ್ ಟ್ಸು ವಿನ (ಕ್ರಿ.ಪೂ. 360-286) ತತ್ತ್ವದ ಮೂರನೆಯ ಘಟ್ಟ. ಸಾಧಾರಣವಾಗಿ ಇವನೆಂದು ಭಾವಿಸಿರುವ 'ಚ್ವಾಂಗ್ ಟ್ಸು ಗ್ರಂಥ ಬಹುಶಃ ಕ್ರಿ. ಶ. ಮೂರನೆಯ ಶತಮಾನದಲ್ಲಿ ಕುವೋ ಷಿಯಾಂಗ್ ಕೂಡಿಸಿಟ್ಟ ಅನೇಕರ ಬರವಣಿಗೆಗಳ ಸಂಕಲನ. ಅದರಲ್ಲಿ ಮೊದಲನೆಯ ಎರಡನೆಯ ಮತ್ತು ಮೂರನೆಯ ಘಟ್ಟಗಳ ತಾಓ ತತ್ತ್ವ ಸೇರಿದೆ. ಮೂರನೆಯ ಘಟ್ಟದ ತಾಓ ತತ್ತ್ವವನ್ನು ವಿವರಿಸಿದ ಅಧ್ಯಾಯಗಳಲ್ಲಿ ಬಹುಶಃ ಹೆಚ್ಚು ಭಾಗ ಚ್ವಾಂಗ್ ಟ್ಸುವಿನದಿರಬಹುದು. ಸ್ವಲ್ಪ ಭಾಗ ಇತರರಿಂದ ರಚಿತವಾಗಿರಬಹುದು.

ಇದರಲ್ಲಿ ಸೌಖ್ಯ ಪಡೆಯುವುದು ಹೇಗೆ ಎಂಬುದು ಒಂದು ಮುಖ್ಯ ವಿಷಯ. ಸ್ವಾಭಾವಿಕವಾಗಿ ಬಾಳುವುದೇ ಸೌಖ್ಯಕ್ಕೆ ಕಾರಣ: ಕೃತಕವಾಗಿ ಬಾಳುವುದು ದುಃಖಕ್ಕೆ ಕಾರಣ. ಪ್ರಕೃತಿ ಜನ್ಯವಾದದ್ದು ಸ್ವಾಭಾವಿಕ. ಮಾನವನಿಂದ ಕಲ್ಪನೆಯಾದುದ್ದು ಕೃತಕ. ಲೋಕದ ವಿವಿಧ ಪ್ರಾಣಿಗಳ ಸ್ವಾಭಾವಿಕಶಕ್ತಿ ಭಿನ್ನ. ಆ ಭಿನ್ನ ಸ್ವಭಾವಕ್ಕೆ ಅನುಗುಣವಾಗಿ ಒಂದೊಂದು ತನ್ನ ಶಕ್ತಿಯನ್ನು ಬೆಳೆಸಿ ಕೊಂಡಾಗ ಅವೆಲ್ಲವೂ ಒಂದೇ ಸಮವಾಗಿ ಸುಖವಾಗಿರುತ್ತವೆ. ಒಂದು ಪಕ್ಷಿ ದೂರ ಹಾರಿಹೋಗಬಲ್ಲದು; ಇನ್ನೊಂದು ಸ್ವಲ್ಪ ದೂರ ಮಾತ್ರ ಕುಪ್ಪಳಿಸಬಲ್ಲುದು. ಅವರೆಡೂ ತಮ್ಮ ಶಕ್ತಿಗೆ ತಕ್ಕಂತೆ ಬಾಳಿದರೆ ಎರಡೂ ಸಮ ಸುಖ ಪಡೆಯುತ್ತವೆ. ಒಂದು ಸರಾಗವಾಗಿ ಮಾಡಬಲ್ಲದನ್ನು ಇನ್ನೊಂದು ಮಾಡಲು ಯತ್ನಿಸಿದರೆ ದುಃಖಕ್ಕೆ ಈಡಾಗುತ್ತದೆ. ಬಾತುಕೋಳಿಯ ಕಾಲು ಮೋಟು. ಕೊಕ್ಕರೆಯ ಕಾಲು ಉದ್ದ. ಒಂದರ ಕಾಲನ್ನು ಉದ್ದವಾಗುವಂತೆಯೂ ಇನ್ನೊಂದರನ್ನು ಮೋಟವಾಗುವಂತೆಯೂ ಮಾಡಿದರೆ ಎರಡಕ್ಕೂ ಸಂಕಟ ತಪ್ಪಿದಲ್ಲ. ಪಕ್ಷಿಗಳನ್ನು ಪಕ್ಷಿಗಳಂತೆ ಕಾಣಬೇಕು. ಅದರ ಬದಲು ಮಾನವರಿಗೆ ನಡೆಸುವ ಆದರಾಥಿತ್ಯವನ್ನು ಪಕ್ಷಿಗೆ ನಡೆಸಿದರೆ ಅವು ಸಂಕಟಕ್ಕೆ ಈಡಾಗುತ್ತವೆ. ಈ ವಿಚಾರದಲ್ಲಿ ಒಂದು ಕಥೆ ಇದೆ. ಲು ಪ್ರಾಂತ್ಯದ ರಾಜಧಾನಿಗೆ ಒಂದು ಹೊಸ ಬಗೆಯ ಸಮುದ್ರಪಕ್ಷಿ ಬಂದು ಇಳಿದಾಗ ಆ ಅಪೂರ್ವ ಪಕ್ಷಿಯನ್ನು ನೋಡಿ, ಅಲ್ಲಿಯ ಶ್ರೀಮಂತನೊಬ್ಬ ಅದಕ್ಕೆ ಮಾನವನಿಗೆ ಅತಿಥ್ಯ ನಡೆಸುವಂತೆ ಮೊದಲು ದ್ರಾಕ್ಷಾರಸವನ್ನು ಕೊಟ್ಟು ಅನಂತರ ಅದನ್ನು ಸಂತೋಷಗೊಳಿಸಲು ಸಂಗೀತವನ್ನು ಏರ್ಪಡಿಸಿದ. ಒಂದು ಗೂಳಿಯನ್ನು ಕೊಂದು ಅದರ ಮಾಂಸದಿಂದ ಭಕ್ಷ್ಯಗಳನ್ನು ಮಾಡಿಸಿ ಅದರ ಮುಂದಿಟ್ಟ , ದ್ರಾಕ್ಷಾರಸವನ್ನು ಕುಡಿದು ಸಂಗೀತವನ್ನು ಕೇಳಿದ ಆ ಪಕ್ಷಿಗೆ ಪ್ರಜ್ಞೆ ತಪ್ಪಿತು. ಅದು ಏನನ್ನೂ ತಿನ್ನಲಾರದೆ ಮೂರೇ ದಿವಸಗಳಲ್ಲಿ ಮರಣಹೊಂದಿತು. ಒಂದಕ್ಕೆ ಅಮೃತವಾದದ್ದು ಇನ್ನೊಂದಕ್ಕೆ ವಿಷ. ಮೀನಿಗೆ ನೀರಿನಲ್ಲಿ ಮುಳುಗಿದ್ದಾಗ ಸೌಖ್ಯ, ಮಾನವನಿಗೆ ಅದು ಮರಣ.

ಈ ತತ್ತ್ವವನ್ನು ಚ್ವಾಂಗ್ ಟ್ಸು ರಾಜಕೀಯಕ್ಕೂ ಅನ್ವಯಿಸಿರುತ್ತಾನೆ. ವ್ಯಕ್ತಿವೈಶಿಷ್ಟ್ಯವನ್ನು ಗಣಿಸದೆ ಸರ್ಕಾರ ಎಲ್ಲರ ಮೇಲೂ ಒಂದೇ ಕಾನೂನನ್ನು ಹೇರುತ್ತದೆ. ಇದರಿಂದ ಉದ್ದವಾದ ಕಾಲನ್ನು ಮೊಟಕು ಮಾಡಿದಾಗ ಮೊಟಕಾದಾದನ್ನು ಉದ್ದವಾಗುವಂತೆ ಎಳೆದಾಗ ಹೇಗೋ ಹಾಗೆ ರಾಜ್ಯದಲ್ಲೂ ಪ್ರಜೆಗಳಿಗೆ ಹಿಂಸೆಯಾಗುತ್ತದೆ. ಕಾನೂನುಗಳ ಕಡತ ದೊಡ್ಡದಾಗಿ ಬೆಳೆದಾಗ ಜನರ ಜೀವನದ ಮಟ್ಟ ಇಳಿಯುತ್ತದೆ. ಕಟ್ಟುಗಳು ಹೆಚ್ಚಿದಷ್ಟು ಕಳವು ಮೋಸ ಅಪರಾಧಗಳು ಹೆಚ್ಚುತ್ತವೆ. ಕಾನೂನುಗಳು ಕಡಿಮೆಯಾಗಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಂಖ್ಯೆ ಕಡಿಮೆಯಾದಾಗ ಆ ರಾಜ್ಯ ಸುಖೀರಾಜ್ಯವಾಗುತ್ತದೆ.

ಆದರೂ ಸ್ವತಂತ್ರವಾದ ಸುಖೀರಾಜ್ಯದಲ್ಲಿ ಸ್ವತಂತ್ರವಾದ ಸುಖೀಸಮಾಜದಲ್ಲಿ ದೊರಕುವ ಸೌಖ್ಯ ಸಾಪೇಕ್ಷವಾದ್ದು. ಅದು ಪರುಮಸೌಖ್ಯವಲ್ಲ. ಸರಳ ಕಾನೂನುಗಳ ಮೂಲಕ ಸರಳ ನೀತಿಯ ಮೂಲಕ ದೊರೆಯುವ ಸೌಖ್ಯಕ್ಕೆ ಮಿತಿ ಇದೆ. ಅದು ಶಾಶ್ವತ ಸೌಖ್ಯವೂ ಅಲ್ಲ. ಪರಮ ಸ್ವತಂತ್ರಜೀವನವೂ ಅಲ್ಲ. ಶಾಶ್ವತಸುಖವನ್ನು ಪಡೆಯುವುದಕ್ಕೆ ಎರಡು ಮಾರ್ಗಗಳಿವೆ. ಒಂದು ತಿಳಿವಿನಿಂದ ಭಾವೋದ್ರೇಕಗಳನ್ನು ತಡೆದಿಡುವುದು. ಮಗು ಹುಟ್ಟಿದಾಗ ಮಾನವರು ಕುಡಿದವರಂತೆ ಭಾವೋದ್ರೇಕದಂತೆ ಕುಣಿದಾಡುತ್ತಾರೆ. ಅದು ಸತ್ತಾಗ ವ್ಯಸನದಿಂದ ರೋದಿಸುತ್ತಾರೆ. ಹುಟ್ಟುಸಾವುಗಳು ಸ್ವಾಭಾವಿಕ, ಅನಿವಾರ್ಯ, ಜೀವನ ರೀತಿಯೇ ಇದು ಎಂದು ತಿಳಿದವನು ಹುಟ್ಟಿದ್ದನ್ನು ನೋಡಿ ಹಿಗ್ಗುವುದಿಲ್ಲ. ಸಾವನ್ನು ಕಂಡು ಕುಗ್ಗುವುದಿಲ್ಲ. ಹುಟ್ಟು ಸಾವುಗಳು ವಸಂತ, ಹೇಮಂತ ಋತುಗಳಂತೆ ಒಂದನ್ನೊಂದು ಅನಿವಾರ್ಯವಾಗಿ ಹಿಂಬಾಲಿಸುತ್ತವೆ. ಇದು ಅನಿವಾರ್ಯವೆಂದು ತಿಳಿಯದವನು ಭಾವೋದ್ರೇಕಗಳಿಗೆ ತುತ್ತಾಗುತ್ತಾನೆ. ಅದನ್ನು ತಿಳಿದವನು ಉದ್ರೇಕಗೊಳ್ಳುವುದಿಲ್ಲ. ಇದು ವಿಧಿನಿಯಮವೆಂದು ಸಮಾಧಾನದಿಂದ ಇರುತ್ತಾನೆ. ಈ ವಾದ ಸ್ಟೋಯಿಕ್ ಪಂಥದ ಸರ್ವಸಹಿಷ್ಣುಭಾವವನ್ನು ಹೋಲುತ್ತದೆ.

ಶಾಶ್ವತಸೌಖ್ಯ ಪಡೆಯಲು ಚ್ವಾಂಗ್ ಟ್ಸು ಇನ್ನೊಂದು ಮಾರ್ಗವನ್ನು ತಿಳಿಸಿರುತ್ತಾನೆ. ಈ ಮಾರ್ಗವನ್ನು ಅನುಸರಿಸಿದವನೂ ಲೋಕಸುಖಗಳನ್ನು ಸಾಪೇಕ್ಷ ಸುಖಗಳೆಂದು ತಿಳಿಯುತ್ತಾನೆ. ಆದರೆ ಅವನ ದ್ವಂದ್ವಗಳನ್ನು ದಾಟಿ ನಿದ್ರ್ವಂದ್ವದಲ್ಲಿ ಐಕ್ಯವಾಗಲು ಪ್ರಯತ್ನಿಸುತ್ತಾನೆ. ಆತ್ಮ-ದೇಹ, ತಿಳಿಯುವವನು-ತಿಳಿವಿನ ವಸ್ತು, ನಾನು-ಪರರು ಎಂಬ ಭೇದಗಳು ದುಃಖಕ್ಕೆ ಕಾರಣ ನಿದ್ರ್ವದ್ವವಾದ. ಸದಾ ಒಂದೇ ಅದ ತಾಓ ಸದಾನಂದಮಯ. ಅದು ಏನನ್ನೂ ಬಯಸುವುದಿಲ್ಲ. ಆದ್ದರಿಂದ ಅದು ಏನನ್ನೂ ಮಾಡುವುದಿಲ್ಲ. ಮಾನವ ಆ ತಾಓದೊಂದಿಗೆ ಐಕ್ಯವಾದಾಗ ಸರ್ವದಾ ಸುಖಿಯಾಗಿರುತ್ತಾನೆ. ಅವನು ಅದನ್ನು ಬಿಟ್ಟು ಬೇರೆ ಯಾವುದನ್ನೂ ಬಯಸುವುದಿಲ್ಲ. ಅದರ ಧ್ಯಾನದಲ್ಲಿ ಮುಳುಗಿರುತ್ತಾನಲ್ಲದೆ ಯಾವುದೊಂದು ಕರ್ಮದಲ್ಲೂ ಪ್ರವೃತ್ತನಾಗುವುದಿಲ್ಲ. ಇದು ನಿವೃತ್ತಿಮಾರ್ಗ,

4 ಕ್ರಿ.ಶ. ಮೂರನೆಯ ಮತ್ತು ನಾಲ್ಕನೆಯ ಶತಮಾನಗಳಲ್ಲಿ ತಾಓ ಪಂಥ ನೂತನ ತಾಓ ಪಂಥವಾಗಿ ಮಾರ್ಪಟ್ಟಿತು. ಈ ಪಂಥದಲ್ಲಿ ಎರಡು ಶಾಖೆಗಳಿವೆ. ಒಂದು ವಿಚಾರಶಾಖೆ, ಇನ್ನೊಂದು ಭಾವಾಭಿವ್ಯಕ್ತಿ ಶಾಖೆ. ಮೊದಲನೆಯ ಶಾಖೆಯವರು ಭಾವಗಳನ್ನು ವಿಚಾರಬುದ್ದಿಯಿಂದ ತಡೆದಿಡಬೇಕೆಂದು ವಾದಿಸುತ್ತಾರೆ. ಎರಡನೆಯ ಶಾಖೆಯವರು ಯಾವ ತಡೆಯೂ ಇಲ್ಲದೆ ಭಾವವನ್ನು ಅಭಿವ್ಯಕ್ತಗೊಳಿಸಬೇಕೆಂದು ವಾದಿಸುತ್ತಾರೆ.

(ಅ) ನಾಮಶಾಖೆಯವರು ಹೆಸರಿನಿಂದ ತಿಳಿಯಲಾಗುವಂಥಾದ್ದು. ಹೆಸರಿನಿಂದ ತಿಳಿಯಲಾಗದ್ದು ಎಂದು ಎರಡು ಭೇದಗಳನ್ನು ಕಲ್ಪಿಸಿದ್ದರು. ವಿಚಾರ ಶಾಖೆಯ ನೂತನ ತಾಓ ಪಂಥದವರು ಹೆಸರಿನಿಂದ ತಿಳಿಯಲಾಗದ್ದರ ತತ್ತ್ವವನ್ನು ಬೆಳೆಸಿದರು. ತಾಓ ಲೌಕಿಕವಾದ ಯಾವ ಹೆಸರಿನಿಂದಲೂ ವರ್ಣಿಸಲಾಗದ್ದು. ಆದ್ದರಿಂದ ಅವರು ತಾಓ ಅನಿರ್ವಚನೀಯವೆಂದು ಹೇಳಿದರು. ಈ ಅನಿರ್ವಚನೀಯವಾದಕ್ಕೆ ಬಹುಶಃ ಆಗ್ಗೆ ಚೀನದಲ್ಲಿ ಪ್ರಚಾರದಲ್ಲಿದ್ದ ಮಾಧ್ಯಮಿಕದ ಅನಿರ್ವಚನೀಯವಾದ ಪ್ರೇರಕವಿರಬಹುದು.

ತಾಓ ಪಂಥದವರಿಗೂ ಕೂಮಗ್ ಪೂಟ್ಸೆಪಂಥದವರಿಗೂ ವಿರೋಧವಿತ್ತು. ಆದರೆ ಈ ಪಂಥದವರು ಕೂಂಗ್ ಪೂಟ್ಸೆ ತತ್ತ್ವಕ್ಕೆ ವಿರೋಧಿಗಳಲ್ಲ. ಬದಲು ಅವಿಗೆ ಕೂಂಗ್ ಫೂಟ್ಸೆ ಲಾವೋ ಟ್ಸುವಿಗಿಂತ ಮೆಚ್ಚಿನವನು. ಅವರಲ್ಲಿ ಕೆಲವರು ಲಾವೋ ಟ್ಸುಗಿಂಗ ಕೂಂಗ್ ಫೂಟ್ಸೆಯೆ ತಾಓವನ್ನು ಚೆನ್ನಾಗಿ ತಿಳಿದವನು ಎಂದು ಹೇಳಿರುತ್ತಾರೆ. ಇದು ಈ ಪಂಥದ ಪ್ರಸಿದ್ಧ ಮುಖಂಡನಾದ ವ್ಯಾಂಗ್ ಪಿ (ಕ್ರಿ.ಶ. 226-249) ಮತ್ತು ಪ್ಯೆ ಹುಯಿ ಸಂವಾದದಿಂದ ಸ್ಪಷ್ಟ ಪಡುತ್ತದೆ. ವ್ಯಾಂಗ್ ಪಿಯನ್ನು ಹುಯಿ ಹೀಗೆ ಕೇಳಿದ. ; 'ವು ಅಂದರೆ ಕಾಲದಲ್ಲಿ ಇಲ್ಲದ್ದು, ಅಥವಾ ಕಾಲಕ್ಕೆ ಮೀರಿದ್ದು, ಎಲ್ಲಕ್ಕೂ ಆಧಾರವಾದದ್ದು ಆದ್ದರಿಂದ ಕೂಂಗ್ ಫೂಟ್ಸೆ ಅದರ ವಿಚಾರ ಏಕೆ ಬೆಳಸಲಿಲ್ಲ ? ಲಾವೊಟ್ಸು ಅದರ ವಿಚಾರವಾಗಿ ಬಿಡುವಿಲ್ಲದೆ ಏಕೆ ಮಾತನಾಡಿದ?É ಈ ಪ್ರಶ್ನೆಗಳಿಗೆ ಉತ್ತರವಾಗಿ ವ್ಯಾಂಗ್ ಪಿ ಹೀಗೆ ಹೇಳಿದ : "ಸಂತ ಕೂಂಗ್ ಫೂಟ್ಸೆ 'ವು ವಿನಲ್ಲಿ ಐಕ್ಯವಾಗಿದ್ದುದರಿಂದ, ಅದು ಅನಿರ್ವಚನೀಯ ಭಾವರೂಪವಾದ 'ಯು ವಿಚಾರವಾಗಿ ಅವನು ಮಾತನಾಡಲಿಲ್ಲ. ಅದ್ದರಿಂದ ಅವನು ಭಾವರೂಪವಾದ 'ಯು ವಿಚಾರವಾಗಿ ಮಾತನಾಡಿದ. ಆದರೆ ಲಾವೋ ಟ್ಸು ಮತ್ತು ಅವನ ಅನುಯಾಯಿ ಚ್ವಾಂಗ್ ಟ್ಸು ಇವರಿಬ್ಬರೂ ಆ 'ವು ದೊಡನೆ ಐಕ್ಯವಾಗಲಿಲ್ಲವಾಗಿ ಅವನ ಜ್ಞಾನ ಕೊರೆಯಾಗಿತ್ತು. ಆದ್ದರಿಂದ ತಮ್ಮ ಕೊರತೆಯನ್ನು ಕುರಿತು ನಿರಂತರವಾಗಿ ಅಪಲಾಪಿಸಿದರು. ಅದನ್ನು ತಿಳಿದವರು (ಅದರ ವಿಚಾರವಾಗಿ) ಮಾತನಾಡುವುದಿಲ್ಲ. (ಅದರ ವಿಚಾರವಾಗಿ) ಮಾತನಾಡಿದವನಿಗೆ (ಅದು) ತಿಳಿದಿಲ್ಲ ಎಂಬ ವಚನವಿದೆ. ವ್ಯಾಂಗ್ ಪಿ ಆ ವಚನವನ್ನು ಲವೋ ಟ್ಸು ಮತ್ತು ಕೂಂಗ್ ಪೂಟ್ಸೆಗೆ ಅನ್ವಯಿಸಿ, ಕೂಂಗ್ ಫೂಟ್ಸೆ ತಿಳಿದವನು, ಲಾವೋ ಟ್ಸು ತಿಳಿಯದವನು ಎಂದು ಸ್ಪಷ್ಟಪಡಿಸಿದ್ದಾನೆ.

ಲಾವೋ ಟ್ಸು ಅನುಯಾಯಿಗಳು ಕೂಂಗ್ ಪೂಟ್ಸೆ ನಿರೀಶ್ವರವಾದಿಯೆಂದು ಅಪಾದಿಸುತ್ತಿದ್ದರು. ಈ ಪಂಥದವರು ಈ ವಿಶ್ವ ಸೃಷ್ಟಿಯಾದ್ದಲ್ಲ. ಅದು ತಾಓನ ಪರಿವರ್ತನೆ ಎಂದು ವಾದಿಸಿದರು. ಇಲ್ಲಿರುವುದೆಲ್ಲ ಅನಿವರ್ಚನೀಯವಾದುದುರ ಪರಿಣಾಮ. ಅದು ವಚನೀಯವಾದುದೆಲ್ಲದರಲ್ಲೂ ಇದೆ. ಆದರೆ ವಚನೀಯವಾದುವು ಅದರಲ್ಲಿಲ್ಲ, ಇಲ್ಲಿರುವುದೆಲ್ಲ ಒಂದಕ್ಕೊಂದು ಹೆಣೆದುಕೊಂಡಿವೆ. ಆ ಪರಸ್ಪರ ಸಂಬಂಧ ಒಂದೊಂದರ ಪರಿಣಾಮವನ್ನೂ ನಿರ್ಧರಿಸುತ್ತದೆ. ಈ ಪರಸ್ಪರ ಸಂಬಂಧವನ್ನು ಅವರು ಸ್ವಭಾವವೆಂದು ಕರೆದಿದ್ದಾರೆ. ನಮ್ಮ ಜೀವನ ಸಂದರ್ಭಕ್ಕನುಸಾರವಾಗಿ ನಿರಂತರವಾಗಿ ಬದಲಾಯಿಸುತ್ತಿದೆ . ಹಿಂದಿನ ಪರಿಸ್ಥಿತಿಯೇ ಬೇರೆ, ಇಂದಿನ ಹೊಸ ಪರಿಸ್ಥಿತಿಯೇ ಬೇರೆ. ಹಿಂದಿನ ಪರಿಸ್ಥಿತಿಗೆ ತಕ್ಕಂತೆ ಕೆಲವು ಸಂಸ್ಥೆಗಳೂ ನೀತಿ ನಡವಳಿಕೆಗಳು ಹುಟ್ಟಿಕೊಂಡವು. ಅವು ಇಂದಿನ ಹೊಸ ಪರಿಸ್ಥಿತಿಗೆ ಅನುಪಯುಕ್ತ. ಅವುಗಳಿಗೆ ತಕ್ಕಂತೆ ಹೊಸ ಸಂಸ್ಥೆಗಳೂ ಹೊಸ ನೀತಿ ನಡವಳಿಕೆಗಳೂ ಹುಟ್ಟಬೇಕು. ಹಾಗೆ ಹುಟ್ಟದಿದ್ದರೆ ಹಳೆಯವು ಕೃತಕವಾಗುವುತ್ತವೆ. ನಾವು ಸ್ವಭಾವಕ್ಕೆ ವ್ಯತಿರಿಕ್ತವಾಗಿ ನಡೆಯುತ್ತೇವೆ. ಸ್ವಾತಂತ್ರ್ಯ ಅಂದರೆ ಸ್ವೇಚೆಯಲ್ಲ, ಸರಳತೆ ಅಂದರೆ ಏನೂ ಅರಿಯದ ಶಿಶುವಿನಂತಿರುವುದಿಲ್ಲ. ಅಕ್ರಿಯೆಯೆಂದರೆ ಏನೂ ಮಾಡದೆ ನಿದ್ರಿಸುವುದಿಲ್ಲ. ಆಯಾ ಸಂದರ್ಭೋಚಿತವಾಗಿ ಹೊಂದಿಕೊಳ್ಳುವುದು ಸ್ವಾತಂತ್ರ್ಯ, À್ವಭಾವೋಚಿತವಾಗಿ ನಡೆಯುವುದು ಸರಳತೆ, ಕಾಲದ ಪ್ರವಾಹ ಸುಳಿವನ್ನು ತಿಳಿದು ಅದರಲ್ಲಿ ತೇಲಿ ಹೋಗುವುದೂ ತನ್ನ ಸ್ವಭಾವವನ್ನು ಮೀರದಂತೆ ನಡೆದುಕೊಳ್ಳುವುದೂ ಅಕ್ರಿಯೆ. ಕಾಲದ ಸುಳಿವನ್ನು ಅರಿತು ಸಂತ ಅದರೊಂದಿಗೆ ಸೇರಿ ಪಾರಾಗುತ್ತಾನೆ. ಅವನು ಸಾವಿರ ಕೆಲಸಗಳನ್ನು ಮಾಡಿದರೂ ಏನನ್ನೂ ಮಾಡದವನಂತೆ ಅವನಿಗೆ ಸ್ವಲ್ಪವೂ ಶ್ರಮವಿರುವುದಿಲ್ಲ. ಒಬ್ಬೊಬ್ಬ ಸಂತನೂ ತನ್ನ ಸ್ಥಿತಿಯನ್ನು ಅರಿತು ಸಹಜವಾಗಿ ವರ್ತಿಸುತ್ತಾನೆ. ಒಬ್ಬ ಸಂತ ಇನ್ನೊಬ್ಬನನ್ನು ಅನುಕರಿಸುವುದಿಲ್ಲ. ಹಾಗೆಯೇ ಪ್ರತಿಯೊಬ್ಬನೂ ತನ್ನ ಸ್ವಂತ ಸ್ವಭಾವದಂತೆ ವರ್ತಿಸಬೇಕು. ಹಿಂದಿನ ಸಂತರನ್ನು ಅನುಕರಿಸಬಾರದು. ಅನುಕರಣೆಯನ್ನು ಜನರು ಜ್ಞಾನವೆಂದು ತಿಳಿದಿರುತ್ತಾರೆ. ಇದು ಜ್ಞಾನವಲ್ಲ. ತಾನೇ ತಾನಾಗಿ ನೇರವಾಗಿ ಹುಟ್ಟಿದ ಅರಿವೇ ನಿಜವಾದ ಜ್ಞಾನ. ಅಂಥ ಜ್ಞಾನ ಪಡೆದವನು ಅನುಕರಿಸುವವನಂತೆ ಹರಟುವುದಿಲ್ಲ. ಅಜ್ಞಾನಿಯಂತೆ ಮೌನವಾಗಿ ಇರುತ್ತಾನೆ. ಈ ಮೌನ ಅವನ ಒಳತಿಳಿವಿನ ಕುರುಹು. ಆ ಒಳತಿಳಿವಿರುವವನು ಏನು ಮಾಡಿದರೂ ಅದು ಇತರರು ಮಾಡಿದ ಅನುಕರಣ ಕ್ರಿಯೆಯಂತೆ ಕ್ರಿಯೆಯಾಗುವುದಿಲ್ಲ. ಈ ಅರ್ಥದಲ್ಲಿ ಅದು ಅಕ್ರಿಯೆ.

ಅಂಥವನದು ಸರ್ವಸಮತಾದೃಷ್ಟಿ, ಒಂದನ್ನು ಉತೃಷ್ಟವಾದುದೆಂದು ಇನ್ನೊಂದನ್ನು ನಿಕೃಷ್ಟವಾದುದುದೆಂದು ಅವನು ಭೇದವೆಣಿಸುವುದಿಲ್ಲ. ಭೇದಭಾವನೆ ಸಂಕುಚಿತಭಾವನೆ, ತಾನು ಪರರು ಎಂಬ ಭೇದ ಸಂಕುಚಿತಭಾವನೆಯಿಂದ ಹುಟ್ಟಿದ್ದು. ಪರಮ ವಿರಾಗಿ ಪರಮಸುಖಿ ; ತಾನು ಬೇರೆಯವನು ಎಂಬ ಭೇದವನ್ನು ಮರೆತು ಬಿಡುತ್ತಾನೆ. ಅವನಿಗೆ ಆಗ ಯಾವುದರ ಹಂಗೂ ಇಲ್ಲ. ಆದ್ದರಿಂದ ಸದಾಸುಖಿ. ಸ್ವಭಾವದ ರಥವೇರಿ ಅವನು ಜೀವನದ ಆಚೆಯ ದಡವನ್ನು ಮುಟ್ಟುತ್ತಾನೆ. ಸ್ವಭಾವದ ರಥವನ್ನೇರಿ ಎಲ್ಲರನ್ನು ಸಮವಾಗಿ ನೋಡುವುದು., ಆನಂತವಾದುದುರ ನಿಟ್ಟಿನಿಂದ ಎಲ್ಲವನ್ನೂ ಅವಲೋಕಿಸುವುದು 'ಟಿಯೆನ್.

(ಆ) ಭಾವಾಭಿವ್ಯಕ್ತಿತತ್ತ್ವ ಈ ವಿಚಾರಶಾಖೆಗೆ ಪ್ರತಿಯಾದದ್ದು. ಈ ಶಾಖೆಯ ಮುಖಂಡರು ಲಿಯು ಯಿ ಚಿಂಗ್ (ಕ್ರಿ.ಶ. 403-444), ಲಿಯು ಚುನ್ (ಕ್ರಿ.ಶ. 463-521). ವಿಚಾರವಾದಿಗಳು ತಮ್ಮೊಳಗಿನ ವಿಚಾರಚೇತನಕ್ಕನುಗುಣವಾಗಿ ನಡೆಯುವುದೇ ಜೀವನದ ಗುರಿ ಎಂದು ವಾದಿಸಿದರು. ಭಾವಾಭಿವ್ಯಕ್ತಿವಾದಿಗಳಾದರೂ ತಮ್ಮೊಳಗೆ ಹುದುಗಿರುವ ಭಾವಗಳನ್ನು ಅಭಿವ್ಯಕ್ತಿಗೊಳಿಸುವುದೇ ಜೀವನದ ಗುರಿ ಎಂದು ವಾದಿಸಿದರು. ಭಾವಾಭಿವ್ಯಕ್ತಿಗೆ ಅವರು 'ಪೆಂಗ್ ಲಿಯ ಎಂದು ಹೆಸರು ಕೊಟ್ಟರು. ಭಾವಾಭಿವ್ಯಕ್ತಿಯೆಂದರೆ, ಕಿವಿಯಿಂದ ಸಂಗೀತವನ್ನು ಸವಿಯುವುದು, ಕಣ್ಣಿನಿಂದ ಸೌಂದರ್ಯವನ್ನು ಸವಿಯುವುದು, ಮೂಗಿನಿಂದ ವಿವಿಧ ಪರಿಮಳಗಳನ್ನು ಸವಿಯುವುದು, ಬಾಯಿಮಾತಿನಿಂದ ಹರಟೆ ಹೊಡೆಯುವುದು-ಇವು ಅವರ ದಿನಚರಿಯ ಹವ್ಯಾಸವಾಗಿತ್ತು. ಒಟ್ಟಿನಲ್ಲಿ ಇವರನ್ನು ರಸಾಭಿಜ್ಞರೆಂದು ಕರೆಯಬಹುದು. ಕಲೆ ಮತ್ತು ಪ್ರಕೃತಿಯ ಸೌಂದರ್ಯ ಆರಾಧನೆಯೇ ಇವರಿಗೆ ಜೀವನದ ಪರಮಸೌಖ್ಯಕ್ಕೆ ದಾರಿ, ಇವರೂ ವಿಚಾರಶಾಖೆಯವರಂತೆ ಹಳೆಯ ಸಂಪ್ರದಾಯಗಳನ್ನು ತೀವ್ರವಾಗಿ ಪ್ರತಿಭಟಿಸಿದರು.

ಈ ಶಾಖೆಯವರು ರಸಿಕರೆಂದರೆ ಕೇವಲ ಇಂದ್ರಿಯ ಸುಖವನ್ನು ಸ್ವೇಚ್ಛೆಯಾಗಿ ಬಯಸಿದವರೆಂದು ಭಾವಿಸಕೂಡದು. ವಿಚಾರಶಾಖೆಯವರು ಭಾವೋದ್ರೇಕವನ್ನು ವಿಚಾರಬುದ್ಧಿಯಿಂದ ತಡೆದಿಡುತ್ತಿದ್ದರು. ಇವರೂ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡರೂ ಇಂದ್ರಿಯ ಭಾವಗಳನ್ನು ತಮ್ಮ ಮನಸ್ಸಿನಿಂದ ತೊಡೆದು ಹಾಕಲಿಲ್ಲ. ಅವನ್ನು ಕವಿಗಳಂತೆ ಉದಾತ್ತಗೊಳಿಸಿದರು. ಸ್ತ್ರೀಪುರುಷರ ಎಲ್ಲ ಭಾವಗಳಲ್ಲೂ ಇವರು ಆಸಕ್ತರು. ಆದರೆ ಅವುಗಳಲ್ಲಿ ಪ್ರವೃತ್ತರಾಗಿ ನಿಷ್ಪಕ್ಷಪಾತದೃಷ್ಟಿಯಿಂದ, ಕವಿಯಂತೆ ಅವಲೋಕಿಸಿ ರಸಾಭಿಜ್ಞರಾಗುವುದೇ ಇವರ ಉದ್ದೇಶವಾಗಿತ್ತು. ಸ್ತ್ರೀರೂಪದಲ್ಲಿ ಮೋಹವಿಲ್ಲದೆ ಅದರ ಸೌಂದರ್ಯವನ್ನು ಸವಿಯುವುದೇ ಇವರ ಉದ್ದೇಶ. 'ಷಿಃಪುವೋ ಎಂಬ ಈ ಶಾಖೆಯವರ ಗ್ರಂಥದಲ್ಲಿರುವ ಒಂದು ಕತೆ ಇದನ್ನು ಸ್ಪಷ್ಟಗೊಳಿಸುತ್ತದೆ. ಜುವಾನ್ ಚೂ ಎಂಬ ಈ ಶಾಖೆಯ ಒಬ್ಬ ತಾತ್ತ್ವಿಕ ತನ್ನ ನೆರೆಯವನಾದ ಒಬ್ಬ ಮದ್ಯದ ವ್ಯಾಪಾರಿಯ ಮನೆಗೆ ಹೋಗಿ ಸುಂದರಿಯಾದ ಆ ವರ್ತಕನ ಹೆಂಡತಿಯೊಡನೆ ದ್ರಾಕ್ಷಾರಸವನ್ನು ಸೇವಿಸುತ್ತಿದ್ದ. ಮತ್ತೇರಿದಾಗ ಅವನು ಅವಳನ್ನು ಬೆತ್ತಲೆಯಾಗಿ ನಿಲ್ಲಿಸಿ ಅವಳನ್ನು ಅವಲೋಕಿಸುವುದರಲ್ಲಿ ತಲ್ಲೀನನಾಗುತ್ತಿದ್ದ. ಇವರಿಬ್ಬರ ನಡತೆಯ ವಿಚಾರವಾಗಿ ಆ ಸುಂದರಿಯ ಗಂಡನಿಗೆ ಅನುಮಾನ ಹುಟ್ಟಿತು. ಅವನು ಹಲವು ಬಾರಿ ಜಾಗರೂಕನಾಗಿ ಪರೀಕ್ಷಿಸಿದ. ಈ ಪರೀಕ್ಷೆಯಿಂದ ಅವನಿಗೆ ಜುವಾನ್ ಚೂ ಕೇವಲ ಸೌಂದರ್ಯರಾಧಕನೆಂದೂ ಶರೀರ ಸಂಬಂಧ ವಿಚಾರವಾಗಿ ಅವನು ನಿರ್ವಿಣ್ಣನಾಗಿದ್ದನೆಂದೂ ಸ್ಪಷ್ಟವಾಯಿತು. ಹೀಗೆ ಸ್ಪಷ್ಟಪಡಿಸಿಕೊಂಡ ಈ ಮದ್ಯ ವ್ಯಾಪಾರಿ ತುಂಬ ತಾಳ್ಮೆಯವನಾಗಿರಬೇಕು. Iಗಿ

ಮೋ ತತ್ತ್ವ: ಇದರಲ್ಲಿ ಎರಡು ಶಾಖೆಗಳಿವೆ. ಒಂದು ಪ್ರಾಚೀನ, ಈ ಪಂಥದವರನ್ನು ಮೋಹಿಗಳೆಂದು ಕರೆಯುವುದುಂಟು. ಈ ತತ್ತ್ವಕ್ಕೆ ಮೋ ತತ್ತ್ವವೆಂದು ಹೆಸರು ಬಂದದ್ದು ಅವರ ಪ್ರಥಮ ಪ್ರತಿಪಾದಕನಾದ ಮೋಟ್ಸು (ಕ್ರಿ.ಪೂ.470-381) ಎಂಬುವನಿಂದ. ಮೋ ಎಂಬುದು ಅವನ ವಂಶದ ಹೆಸರು. ಟ್ಸು ಎಂಬುದು ಅವನ ಸ್ವಂತ ಹೆಸರು. ಇವನು 'ಮೋ-ಟ್ಸು ಎಂಬ ಐವತ್ತು ಮೂರು ಆಧ್ಯಾಯಗಳ ಒಂದು ದೊಡ್ಡ ಗ್ರಂಥವನ್ನು ಬರೆದಿರುತ್ತಾನೆ. ಈಗಿನವರು ಆ ಗ್ರಂಥದ ಹೆಸರನ್ನೇ ಇವನಿಗೆ ಕೊಟ್ಟಿರುತ್ತಾರೆ. ಇವನು ಕೂಂಗ್ ಫೂಟ್ಸೆ ತತ್ತ್ವವನ್ನೂ ನಾಮತತ್ತ್ವವನ್ನೂ ಖಂಡಿಸಿದ್ದಾನೆ. ಇಲ್ಲಿ ಪ್ರಸಕ್ತವಾದದ್ದು ಅದರ ನಲವತ್ತರಿಂದ ನಲವತ್ತೈದನೆಯದರವರೆಗಿನ ಆರು ಅಧ್ಯಾಯಗಳು. ಇವು ನೂತನ ಮೋಹಿ ತತ್ತ್ವಕ್ಕೆ ಆಧಾರಗಳು, ಮೋಹಿತತ್ತ್ವ ಗೋತಮನ ನ್ಯಾಯದರ್ಶನವನ್ನು ಹೋಲುತ್ತದೆ. ಮೋಹಿತಾತ್ತ್ವಿಕರನ್ನು ಚೀನದ ನೈಯ್ಯಾಯಿಕರೆಂದು ಕರೆಯಬಹುದು.

ಇವರು ನೈಯಾಯಿಕರಂತೆ ವಾಸ್ತವವಾದಿಗಳು. ತಿಳಿವಿನ ವಿಷಯಗಳನ್ನು ಅಂದರೆ ಪ್ರಮೇಯಗಳನ್ನು ನಾಲ್ಕಾಗಿ ಇವು ವಿಭಾಗ ಮಾಡಿರುತ್ತಾರೆ. ಹೆಸರುಗಳು, ಹೆಸರುಗಳಿಗೆ ಸಂವಾದಿಯಾದ ವಾಸ್ತವ ವಸ್ತುಗಳು, ಹೆಸರುಗಳು ಮತ್ತು ವಾಸ್ತವ ವಿಷಯಗಳ ಸಂವಾದ, ಹೆಸರುಗಳು ಮತ್ತು ಕ್ರಿಯೆಗಳ ಸಂವಾದ, ತಿಳಿವಿನ ಕರಣಗಳನ್ನು ಅಂದರೆ ಪ್ರಮಾಣಗಳನ್ನು ಮೂರಾಗಿ ವಿಭಾಗಿಸಿರುತ್ತಾರೆ. ಪ್ರತ್ಯಕ್ಷ, ಶಬ್ದ ಮತ್ತು ಅನುಮಾನ, ಪ್ರತ್ಯಕ್ಷಾನುಭಾವಕ್ಕೆ ಇಂದ್ರಿಯಗಳು ಆಧಾರ. ಮನಸ್ಸು ಅನುಮಾನಕ್ಕೆ ಆಧಾರ. ಅನುಮಾನ ಎರಡು ಬಗೆಯಾಗಿದೆ. ನಿಗಮನ ಮತ್ತು ಅನುಗಮನ, ಹೆಸರುಗಳು ಮೂರು ವಿಧವಾಗಿವೆ ಸರ್ವನಾಮಗಳು, ಅಂಕಿತನಾಮಗಳು ಮತ್ತು ಜಾತಿವಾಚಕಗಳು.

ವೈಚಾರಿಕ ವಿಧಾನವನ್ನು ಕುರಿತು ನಲವತ್ತನಾಲ್ಕನೆಯ ಮತ್ತು ನಲವತ್ತೈದನೆಯ ಅಧ್ಯಾಯಗಳಲ್ಲಿ ವಿವರಣೆಗಳೂ ಉದಾಹರಣೆಗಳೂ ಇವೆ. ಸಂಶಯ ನಿವಾರಣೆ, ಸತ್ಯ ಸ್ಥಾಪನೆಯ ಉದ್ದೇಶ. ವೈಚಾರಿಕ ವಿಧಾನಗಳನ್ನು ಏಳಾಗಿ ವಿಂಗಡಿಸಿದೆ. ಮೊದಲನೆಯದು ವಾಸ್ತವವಿಧಾನ. ಅದು ವಾಸ್ತವ ವಿಷಯಗಳನ್ನು ವಿವರಿಸುತ್ತದೆ. ಊಹಾತ್ಮಾಕ ವಿಧಾನ ಇರಬಹುದಾದುದನ್ನು ವಿಚಾರ ಮಾಡುತ್ತದೆ. ಅನುಕರಣ ವಿಧಾನ ಒಂದು ವಿಷಯ ಒಂದು ಧ್ಯೇಯರೂಪಕ್ಕೆ ಅನುಗುಣವಾಗಿದೆಯೇ ಎಂಬುದನ್ನು ವಿಚಾರ ಮಾಡುತ್ತದೆ. ಹೋಲಿಕೆಯ ಆಧಾರದ ಮೇಲೆ ವಿಷಯವನ್ನು ವಿವೇಚಿಸುತ್ತದೆ. ಸಮಾಂತರ ವಿಧಾನ ಎರಡು ಪ್ರತಿಜ್ಞೆಗಳು ಎಲ್ಲ ಸಂದರ್ಭಗಳಲ್ಲೂ ಸಂಗತವಾಗಿವೆಯೇ ಎಂಬುದನ್ನು ವಿಚಾರ ಮಾಡುತ್ತದೆ. ವಿಸ್ತರಣೆಯ ವಿಧಾನ ಹಿಂದೆ ತಿಳಿದುದರ ಆಧಾರದ ಮೇಲೆ ಮುಂದೆ ತಿಳಿಯಬಹುದಾದ್ದನ್ನು ನಿರ್ಧರಿಸುತ್ತದೆ. ಅನುಕರಣೆಯ ವಿಧಾನ ನಿಗಮನ ವಿಧಾನವನ್ನೂ ವಿಸ್ತರಣೆಯ ವಿಧಾನ ಅನುಗಮನ ವಿಧಾನವನ್ನೂ ಹೋಲುತ್ತದೆ.

ಮೋಹಿತಾತ್ತ್ವಿಕರು ಕಾರಣತತ್ತ್ವವನ್ನೂ ವಿಚಾರಮಾಡಿರುತ್ತಾರೆ. ಇನ್ನೊಂದರ ಹುಟ್ಟಿಗೆ ಯಾವುದು ಆಧಾರವೋ ಅದು ಅದಕ್ಕೆ ಕಾರಣ. ಕಾರಣಗಳನ್ನೂ ಎರಡು ಬಗೆಯಾಗಿ ವಿಂಗಡಿಸುತ್ತಾರೆ. 'ಹಸು ಒಂದು ಪ್ರಾಣಿ ಎಂದು ಹೇಳಿದಾಗ, ಹಸುವಿಗೆ ಅಗತ್ಯವಾದ ಒಂದು ಅಂಶವನ್ನು ತಿಳಿಸುತ್ತದೆ. ಆದರೆ ಅಷ್ಟು ಮಾತ್ರ ಹೇಳಿದ್ದರಿಂದ ಕಾರಣ ಪೂರ್ಣವಾಗುವುದಿಲ್ಲ. ಅದು ಸೀಳು ಗೊರಸು ಮತ್ತು ಗಂಗೆದೊಗಲು ಉಳ್ಳ ಸಸ್ತನಿ ಎಂದು ಹೇಳಿದಾಗ ಕಾರಣ ನಿರೂಪಣೆ ಪೂರ್ಣವಾಗುತ್ತದೆ.

ನೀತಿ ವಿಚಾರದಲ್ಲಿ ಮೋಹಿತಾತ್ತ್ವಿಕರು ಜಾನ್ ಸ್ಟೂಅರ್ಟ್ ಮಿಲ್ಲಿನಂತೆ ಉಪಯೋಗವಾದಿಗಳು, ಉಪಯೋಗಕರವಾದುದನ್ನೂ ಸಂತೋಷಕರವಾದುದನ್ನೂ ಆಯ್ದುಕೊಳ್ಳುವುದೂ ಅನುಪಯುಕ್ತವಾದುದನ್ನೂ ಹಾನಿಕಾರಕವಾದುದನ್ನೂ ದುಃಖಕರವಾದುದನ್ನೂ ಬಿಡುವುದೂ ಮಾನವನಿಗೆ ಸಹಜವಾದ ಧರ್ಮ. ಕೆಲವು ವೇಳೆ ಒಂದು ಸನ್ನಿವೇಶ ಸುಖದುಃಖಗಳೆರಡರಿಂದಲೂ ಕೂಡಿರುತ್ತದೆ. ವಿವೇಕಿಯಾದವ ಆಗ ಯಾವುದರಲ್ಲಿ ದುಃಖಕ್ಕಿಂತ ಸುಖದ ಪ್ರಮಾಣ ಹೆಚ್ಚಾಗಿರುತ್ತದೆಯೇ ಅದನ್ನು ಆಯ್ದುಕೊಳ್ಳಬೇಕು. ವಿವಿಧ ಸದ್ಗುಣಗಳನ್ನು ಉಪಯುಕ್ತತೆಯ ನಿಯಮಾನುಸಾರ ಅವರ ವರ್ಗಿಕರಿಸುತ್ತಾರೆ. ಸರಿಯಾದದುದನ್ನು ಮಾಡುವುದೆಂದರೆ ಉಪಯೋಗಕರವಾದದ್ದನ್ನು ಮಾಡುವುದು. ಪರೋಪಕಾರವೆಂದರೆ ಜನರಿಗೆ ಉಪಯುಕ್ತವಾದುದನ್ನು ಮಾಡುವುದು. ಜನರಿಗೆ ಉಪಯುಕ್ತವಾದುದೆಂದರೆ ಹೆಚ್ಚು ಜನರಿಗೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸುಖವನ್ನು ಏರ್ಪಡಿಸುವುದು. ಒಬ್ಬೊಬ್ಬನೂ ತನ್ನ ಸುಖವನ್ನು ಬಯಸಿದರೆ ಎಲ್ಲರೂ ಎಲ್ಲರ ಸುಖವನ್ನೂ ಬಯಸಿದಂತಾಗುತ್ತದೆ.

ಈ ತಾರ್ಕಿಕರು ನಾಮವಾದಿಗಳ ವಾದವನ್ನು ಖಂಡಿಸಿರುತ್ತಾರೆ. ಆದರೆ ನಾಮವಾದಿಗಳ ವಾದ ಎಷ್ಟು ಕೃತಕವಾಗಿದೆಯೋ ಇವರದೂ ಅಷ್ಟೇ ಕೃತಕ. ಗಿ ಚೀನೀ ಬೌದ್ಧ ತತ್ತ್ವ : ಚೀನದಲ್ಲಿ ಬೌದ್ಧ ತತ್ತ್ವ ಬಹುವಾಗಿ ಬೆಳೆಯಿತು. ಭಾರತದಲ್ಲೇ ಅದರ ಹದಿನೆಂಟು ಶಾಖೆಗಳಿದ್ದುವು. ಚೀನದಲ್ಲಿ ಅದರ ಕೆಲವು ಶಾಖೆಗಳು ಬೇರೆ ಬೇರೆ ಹೆಸರುಗಳಲ್ಲಿ ರೂಪಗೊಂಡವು. ಇವುಗಳ ಹೆಚ್ಚಿನ ವಿವರಣೆಗೆ ವುಂಗ್ ಯು ಲನ್ನನ ಗ್ರಂಥವಲ್ಲದೆ ಪಿ.ಸಿ. ಬಗ್ಚಿ, ಜಿ.ಎ. ಎದ್. ಸುಜೂóಕಿ ಅವರ ಲೇಖನಗಳು ಆಧಾರ. ಕ್ರಿ.ಪೂ. 240ರ ವೇಳೆಗೆ ಬೌದ್ಧತತ್ತ್ವ ಭೂತಾನಕ್ಕೆ ಹಬ್ಬಿತ್ತು. ಎಲ್ಲಿಂದ ಅದು ಕ್ರಿ.ಶ. ಒಂದನೆಯ ಶತಮಾನದಲ್ಲಿ ಉತ್ತರಕ್ಕೆ ಹರಡಿತು. ನಾವು ಇಲ್ಲಿ ಚೀನೀ ಬೌದ್ಧತತ್ತ್ವ ಮತ್ತು ಚೀನದಲ್ಲಿ ಬೌದ್ಧತತ್ತ್ವ ಇವೆರಡರ ವ್ಯತ್ಯಾಸವನ್ನು ಗಮನಿಸಬೇಕು. ಚೀನದಲ್ಲಿ ಕೆಲವು ಕಡೆ ಬೌದ್ಧತತ್ತ್ವ ಚೀನೀ ತತ್ತ್ವದ ಸಂಪರ್ಕವಿಲ್ಲದೆ ಬೌದ್ಧತತ್ತ್ವವಾಗಿಯೇ ಬೆಳೆಯಿತು. ಅದರ ವ್ಯಾಪ್ತಿ ತುಂಬ ಸಂಕುಚಿತ. ಹೆಚ್ಚು ಜನರಲ್ಲಿ ಹರಡಿದ ಬೌದ್ಧತತ್ತ್ವ ಚೀನೀತತ್ತ್ವದೊಂದಿಗೆ ಸೇರಿಕೊಂಡು ಬೆಳೆದ ತತ್ತ್ವ. ಬೌದ್ಧತತ್ತ್ವ ತಾಓ ತತ್ತ್ವದೊಡನೆ ಬೆರೆತು ತುಂಬ ಜನಪ್ರಿಯಾವಾದ ಚಾನ್ (ಧ್ಯಾನ) ಬೌದ್ಧತತ್ತ್ವವೆಂಬ ಹೆಸರು ಪಡೆಯಿತು. ಇದನ್ನು ಚೀನದಿಂದ ಪಡೆದ ಜಪಾನೀಯರು ಜೆóನ್‍ಬೌದ್ಧ ತತ್ತ್ವವೆಂದು ಕರೆಯುತ್ತಾರೆ. ಇಲ್ಲಿ ವಿವರಿಸುವುದು ಈ ತತ್ತ್ವವನ್ನೇ. ಇದಲ್ಲದೆ ಚೀನದಲ್ಲಿ ಇತರ ಬೌದ್ಧತತ್ತ್ವಶಾಖೆಗಳಿದ್ದುವು ತಾಓ ಹುಸು ಆನ್ (ಏಳನೆಯ ಶತಮಾನ) ವಿನಯ ಶಾಖೆಯನ್ನು ಸ್ಥಾಪಿಸಿದ. ತಾಂತ್ರಿಕ ಬೌದ್ಧತತ್ತ್ವವನ್ನು ಕ್ರಿ.ಶ. 720ರಲ್ಲಿ ಷಾನ್-ವು-ವೈ ಸ್ಥಾಪಿಸಿದ. ವಿಜ್ಞಾನವಾದವನ್ನು ಯುವಾನ್ ಚ್ಚಾಂಗ್ ಬಹುಶಃ ಇದೇ ಕಾಲದಲ್ಲಿ ಸ್ಥಾಪಿಸಿದ. ಸುಖಾವ್ರತಿ ವ್ಯೂಹ ಬೌದ್ಧತತ್ತ್ವವನ್ನು ಟನ್-ಲನ್ ಅದೇ ಕಾಲದಲ್ಲಿ ಸ್ಥಾಪಿಸಿದ. ಅವತಂಸಕ ಬೌದ್ಧ ಶಾಖೆಯನ್ನು ಸ್ಥಾಪಿಸದವ ಫ-ಟ್ಸಾನ್ (699-712). ಚೀನದಲ್ಲಿ ಮಾಧ್ಯಮಿಕ ತತ್ತ್ವದ ಎರಡು ಶಾಖೆಗಳಿವೆ. ಇವು ಕುಮಾರಜೀವನ ಇಬ್ಬರು ಶಿಷ್ಯರಿಂದ ಸ್ಥಾಪಿತವಾದವು. ಮೊದಲನೆಯದಾದ ಹಳೆಯ ಶಾಖೆ ಕ್ರಿ.ಶ. 5ನೆಯ ಮತ್ತು ಕ್ರಿ.ಶ. 6ನೆಯ ಶತಮಾನಗಳಲ್ಲಿ ಪ್ರಬಲವಾಗಿತ್ತು. ಎರಡನೆಯದಾದ ನೂತನ ಶಾಖೆ ಕ್ರಿ.ಶ. 549 ರಿಂದ 623ರವರೆಗೆ ಪ್ರಬಲವಾಯಿತು. ಟಿ. ಯಂಟೈ ಶಾಖೆಯನ್ನು ಸ್ಥಾಪಿಸಿದವ ಚಿ ಕೈ (ಕ್ರಿ.ಶ. 6ನೆಯ ಶತಮಾನ). ಇದೊಂದೇ ಈಗಲೂ ಜೀವಂತವಾಗಿ ಉಳಿದಿರುವ ಶಾಖೆ.

ಈ ಎಲ್ಲ ವಿಧವಾದ ಬೌದ್ಧ ಪಂಥಗಳಲ್ಲಿ ವ್ಯತ್ಯಾಸಗಳಿದ್ದರೂ ಕರ್ಮ ಮತ್ತು ಪುನರ್ಜನ್ಮ, ದುಃಖ, ವಿವೇಕದಿಂದ ದುಃಖನಿವಾರಣೆ, ನಿರ್ವಾಣ- ಇವು ಎಲ್ಲ ಪಂಥಗಳ ಸಾಮಾನ್ಯ ಆಧಾರಭಾವನೆಗಳು. ಚೀನದಲ್ಲಿ ವಿಶೇಷವಾಗಿ ಪ್ರಚಾರಕ್ಕೆ ಬಂದ ಪಂಥ ಮಹಾಯನ ಬೌದ್ಧಪಂಥ. ಇದರಲ್ಲಿ ಎರಡು ಶಾಖೆಗಳಿವೆ. ವಿಜ್ಞಾನವಾದ ಶಾಖೆ, ಮಾಧ್ಯಮಿಕ ಶಾಖೆ. ವಿಜ್ಞಾನವಾದ ಎಲ್ಲವೂ ಚೇತನವೆಂದೂ ಆ ಚೇತನದೊಂದಿಗೆ ಒಂದಾಗುವುದೇ ನಿರ್ವಾಣವೆಂದು ವಾದಿಸುತ್ತದೆ. ಮಾಧ್ಯಮಿಕವಾದ ಸತ್ಯವನ್ನು ಸಂವೃತಿ ಸತ್ಯ ಮತ್ತು ಪಾಮಾರ್ಥಿಕ ಸತ್ಯ ಎಂದು ಎರಡಾಗಿ ವಿಭಾಗಿಸುತ್ತದೆ. ಸಂವೃತಿಸತ್ಯ ಸಾಪೇಕ್ಷತತ್ತ್ವ. ಅದು ಒಂದು ದೃಷ್ಟಿಯಿಂದ ವಸ್ತುಗಳು ಇವೆ (ಯು) ಎಂದು ಹೇಳುತ್ತದೆ. ಇನ್ನೊಂದು ದೃಷ್ಟಿಯಿಂದ ಅವು ಇಲ್ಲ (ವು) ಎಂದು ಹೇಳುತ್ತದೆ. ಇದೆ ಎಂದು ಹೇಳುವುದೂ ಏಕಪಕ್ಷೀಯ ಸತ್ಯ. ಇಲ್ಲ ಎಂದೂ ಹೇಳುವುದೂ ಏಕಪಕ್ಷೀಯ. ಪರಮಾರ್ಥ ಸತ್ಯ ಈ ಎರಡು ಬೇಧಗಳನ್ನೂ ನಿರಾಕರಿಸುತ್ತದೆ. ಅದು 'ಯು ಅಲ್ಲ, 'ವು ಅಲ್ಲ. 'ಯು ಮತ್ತು ವು ನಾವು ಈಗಾಗಲೇ ನೋಡಿರುವಂತೆ ತಾಓ ತತ್ತ್ವದ ಪಾರಿಭಾಷಿಕ ಪದಗಳು. ಚೀನೀ ಮಾಧ್ಯಮಿಕರು ಮಾಧ್ಯಮಿಕತತ್ತ್ವವನ್ನೂ ಚ್ವಾಂಗ್ ಟ್ಸು ತಾಓ ತತ್ತ್ವಕ್ಕೆ ಅಳವಡಿಸಿಕೊಂಡಿರುತ್ತಾರೆ.

ಹೀಗೆ ಚ್ವಾಂಗ್ ಟ್ಸುನ ತಾಓ ತತ್ತ್ವವನ್ನು ಮಾಧ್ಯಮಿಕ ತತ್ತ್ವವಾಗಿ ಪರಿವರ್ತಿಸಿದವರಲ್ಲಿ ಮುಖ್ಯರಾದವರು ಸೆಂಗೆ ಚಾವೋ (ಕ್ರಿ.ಶ. 384-414) ಮತ್ತು ತಾಓ ಷೆಂಗ್ (ಕ್ರಿ.ಶ. 401-434). ಇವರು ಕುಮಾರಜೀವನ ಶಿಷ್ಯರು. ಇವರು ಸತ್ಯವನ್ನು ಮೂರು ಅಂತಸ್ತುಗಳಲ್ಲಿ ತಿಳಿಯಬಹುದೆಂದು ತೋರಿಸಿದರು. 'ಯು ಇದೆ. ಅದು ಭಾವರೂಪವಾದದ್ದು ಎಂದು ತಿಳಿಯುವುದು ಮೊದಲನೆಯ ಅಂತಸ್ತಿನ ಸತ್ಯ. 'ವು ಅಭಾವರೂಪವಾದದ್ದೆಂದು ತಿಳಿಯುವುದು ಎರಡನೆಯ ಅಂತಸ್ತಿನ ಸತ್ಯ. ಸತ್ಯ 'ಯು ಅಲ್ಲ ; ಎರಡೂ ಅಲ್ಲ ಎಂದು ತಿಳಿಯುವುದು. ಮೂರನೆಯ ಅಂತಸ್ತಿನ ಸತ್ಯ. ಇದೇ ಶೂನ್ಯ. ಇದೇ ತಾಓ. ಈ ತಾಓ ಚೇತನರೂಪವಾದದ್ದು ಎಂಬುದನ್ನು ಲಾವೋ ಟ್ಸು ಮತ್ತು ಚಾಂಗ್ ಟ್ಸು ಹೇಳಿರಲಿಲ್ಲ. ಅದು ಪರಮಚೇತನವೆಂದು ಕುಮಾರಜೀವನ ಇಬ್ಬರು ಶಿಷ್ಯರಲ್ಲಿ ಒಬ್ಬ ಸೃಷ್ಟಿಪಡಿಸಿದ.

ಇದೇ ಕಾಲದಲ್ಲಿ ನವೀನ ಕೂಂಗ್ ಪೂಟ್ಸೆ ಪಂಥದವರೂ ಈ ಭಾವನೆಯನ್ನು ಕೂಂಗ್ ಪೂಟ್ಸೆ ತತ್ತ್ವಕ್ಕೆ ಅಳವಡಿಸಿಕೊಂಡರು. ಎಲ್ಲರಲ್ಲೂ ಸಂತನ ಪ್ರಭಾವ (ಯೋ ಅಥವಾ ಷುನ್) ಇದೆ. ಅದನ್ನು ಬೆಳೆಸಿಕೊಂಡು ಎಲ್ಲರೂ ಸಂತರಾಗಬಹುದು. ಎಂದು ಇವರು ಹೇಳಿದರು. ನೂತನ ಕೂಂಗ್ ಫೂಟ್ಸೆ ಪಂಥದವರು ಮೆನ್ಸಿಯಸ್ಸನ ಹೇಳಿಕೆಯನ್ನು ಬೌದ್ಧ ತತ್ತ್ವಕ್ಕನುಗುಣವಾಗಿ ಪರಿವರ್ತಿಸಿದರು. ಎಲ್ಲರಲ್ಲೂ ಬುದ್ಧ ಚೇತನವಿದೆ. ಅದನ್ನು ಎಲ್ಲರೂ ಬೆಳೆಸಿಕೊಂಡರು ಬುದ್ಧ ಸ್ಥಿತಿಯನ್ನು ಮುಟ್ಟಬಹುದು. ಸುಖವತೀ ಎಂಬ ಸ್ವರ್ಗಲೋಕ ಬೇರೆ ಎಲ್ಲೋ ಇಲ್ಲ. ಅದು ಇಲ್ಲೇ ಇದೆ. ಸಾಮಾನ್ಯರೂ ಸಂತನೂ ನೋಡುವ ವಿಶ್ವ ಒಂದೇ. ಸಾಮಾನ್ಯ ತೋರಿಕೆಯಾದ ಇದನ್ನು ಸತ್ಯವೆಂದು ಭಾವಿಸಿ ಸತ್ಯವನ್ನು ಕಾಣದೇ ಹೋಗುತ್ತಾನೆ. ಸಂತನ ಬೇರೆ ಬೇರೆ ಒಡವೆಗಳು ಚಿನ್ನದ ಭಿನ್ನರೂಪಗಳು ಮಾತ್ರವೆ ಅವು ಚಿನ್ನದಿಂದ ಬೇರೆಯಲ್ಲವೆಂದು ತಿಳಿಯುವಂತೆ, ಭೇದಗಳು ತೋರಿಕೆಗಳೆಂದೂ ಅವುಗಳಲ್ಲಿ ಅಡಗಿರುವ ಸತ್ಯ ಒಂದೇ ಎಂದು ತಿಳಿದು ವಿವೇಕಿಯಾಗುತ್ತಾನೆ.

ಹೀಗೆ ತಾಓ ಮತ್ತು ಕೂಂಗ್ ಫೂಟ್ಸೆ ಪಂಥಗಳೊಡನೆ ಸೇರಿಕೊಂಡ ಬೌದ್ಧ ತತ್ತ್ವ ಮುಂದೆ ಚಾನ್(ಧ್ಯಾನ) ಬೌದ್ಧ ತತ್ತ್ವಕ್ಕೆ ದಾರಿಮಾಡಿಕೊಟ್ಟಿತು. ಇನನ್ನು ಚೀನದಲ್ಲಿ ಕ್ರಿ. ಶ. 520 ಮತ್ತು 526ರ ಮಧ್ಯೆ ಸ್ಥಾಪಿಸಿದ ಬೋಧಿ ಧರ್ಮ. ಇದು ಕ್ರಿ.ಶ. ಎಂಟನೆಯ ಶತಮಾನದಲ್ಲಿ ಉತ್ತರಶಾಖೆ. ದಕ್ಷಿಣಶಾಖೆಗಳಿಗಾಗಿ ಒಡೆಯಿತು. ಷೆನ್-ಷೀಯ ಔತ್ತರೇಯ ಶಾಖೆಯ ಮುಖಂಡ. ಹುಯಿ-ಚಿಂಗ್ ದಾಕ್ಷಿಣಾತ್ಯಶಾಖೆಯ ಮುಖಂಡ.

ಈ ಶರೀರ ಬೋಧಿ ವೃಕ್ಷದಂತಿದೆ. ಮನಸ್ಸು ಕನ್ನಡಿಯಂತಿದೆ. ಕನ್ನಡಿಯ ಮೇಲೆ ಧೂಳು ಕವಿಯದಂತೆ ಪ್ರತಿನಿಮಿಷದಲ್ಲೂ ಅದನ್ನು ಜಾಗರೂಕನಾಗಿ ಶುಚಿಗೊಳಿಸು. ಇದು ಷೆನ್-ಷೀಯ ಒಂದು ಕವನದ ಭಾವ. ಮೊದಲೆಲ್ಲ ಬೋಧಿ ವೃಕ್ಷವಿರಲಿಲ್ಲ. ಕನ್ನಡಿಯೂ ಇರಲಿಲ್ಲ. ಮೊದಲಲ್ಲಿ ಯಾವುದೂ ಇರಲಿಲ್ಲವಾದ್ದರಿಂದ ಧೂಳು ಯಾವುದರ ಮೇಲೆ ಕವಿಯುತ್ತದೆ? ಇದು ಹುಯಿ-ಚಿಂಗನ ಕವನದ ಭಾವ. ಮನಸ್ಸೇ ಬುದ್ಧ ಎಂಬುದು ಮೊದಲನೆಯ ಪಕ್ಷದ ವಾದ, ಶೂನ್ಯವೇ ಸತ್ಯ ಎಂಬುದು ಪಕ್ಷದ ವಾದ. ಶೂನ್ಯವೇ ಸತ್ಯ ಎಂಬುದು ಎರಡನೆಯ ಪಕ್ಷದ ವಾದ.

ಎರಡನೆಯ ಪಕ್ಷ ಕ್ರಿ.ಶ. ಒಂಬತ್ತು ಮತ್ತು ಹತ್ತನೆಯ ಶತಮಾನಗಳಲ್ಲಿ ವಿಶೇಷವಾಗಿ ಬೆಳೆಯಿತು. ಮಾತಿನಿಂದ ಪರಮಾರ್ಥವನ್ನು ತಿಳಿಸಲಾಗುವುದಿಲ್ಲ. ಅದು ಮೌನವಾದ ಧ್ಯಾನದಿಂದಲೇ ತಿಳಿಯಬಹುದಾದದ್ದು. ಧ್ಯಾನಪಂಥದ ವೆನ್-ಯಿ ಎಂಬುವನನ್ನು ಶಿಷ್ಯನೊಬ್ಬ ಪ್ರಥಮ ತತ್ತ್ವ ಯಾವುದು ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಇದು ; ನಾನು ಅದನ್ನು ವಿವರಿಸಿದರೆ ಅದು ಪ್ರಥಮ ತತ್ತ್ವವಾಗಿ ಉಳಿಯುವುದಿಲ್ಲ ; ಅದು ಆ ಕೂಡಲೇ ಎರಡನೆಯ ತತ್ತ್ವವಾಗುತ್ತದೆ. ಅದನ್ನು, ಮನಸ್ಸು, ಚೇತನ ಎಂದು ಯಾವ ರೀತಿಯಲ್ಲಿ ವಿವರಿಸಿದರೂ ಅದನ್ನು ವಿರೂಪಗೊಳಿಸದಂತಾಗುತ್ತದೆ. ಅದನ್ನು ಚೇತನವೆಂದು ಮಾತಿನ ಮೂಲಕ ತಿಳಿಯಬಹುದು., ಅಲ್ಲೇ ನಿಂತರ ಪರಮಾರ್ಥ ಸಿದ್ದಿಸುವುದಿಲ್ಲ. ಆ ಎತ್ತರದಿಂದ ನೆಗೆದು ಧ್ಯಾನದ ಮೂಲಕ ಶೂನ್ಯದಲ್ಲಿ ಮುಳುಗಿ ಹೋಗುವುದೇ ಪರಮಾರ್ಥ. ಬುದ್ಧನ ಮಾತು ಮತ್ತು ಬೌದ್ಧ ಸಾಹಿತ್ಯ-ಇವನ್ನು ದಾಟಿಮುಂದೆ ಹೋಗಬೇಕು.

ಇಂದಿನ ಚೀನಿತತ್ತ್ವ : ಇಂದು ಚೀನದಲ್ಲಿ ಕೂಂಗ್ ಪೂಟ್ಸೆ, ಲವೋ ಟ್ಸು ಮತ್ತು ಬೌದ್ಧತತ್ತ್ವಗಳು ಹಿಮ್ಮೆಟ್ಟಿವೆ . ಅವನ್ನು ಈಗ ಅಧ್ಯಯನ ಮಾಡುವುದು ಅವನ್ನು ಖಂಡಿಸುವುದಕ್ಕಾಗಿಯೇ. ಚೀನದಲ್ಲಿ ಇಂದು ಪ್ರಬಲವಾಗಿರುವುದು ಕಾರ್ಲ್ ಮಾಕ್ರ್ಸ್, ಎಂಗೆಲ್ಸ್, ಲೆನಿನ್ ಮತ್ತು ಮಾವೋ ತ್ಸೆ-ಡುಂಗ್ ಇವರ ಕಮ್ಯೂನಿಸ್ಟ್ ತತ್ತ್ವ. ಕಾರ್ಲ್ ಮಾಕ್ರ್ಸ್‍ನ ಭೌತ ವೈಚಾರಿಕತತ್ತ್ವದ ದೃಷ್ಟಿಯಿಂದ ಮಾವೋ ಚೀನೀತತ್ತ್ವದ ಬೆಳವಣಿಗೆಯನ್ನು ವಿಮರ್ಶಿಸಿರುತ್ತಾನೆ. ಯಾವುದಾದರೂ ಒಂದು ಚಳವಳಿ ಅದರ ಅಂತಿಮ ಘಟ್ಟವನ್ನು ಮುಟ್ಟಿದಾಗ, ಅದು ಅದಕ್ಕೆ ವ್ಯತಿರಿಕ್ತವಾದ ಚಳವಳಿಗೆ ದಾರಿ ಮಾಡಿಕೊಡುತ್ತದೆ. ಹೀಗೆ ಪರಸ್ಪರ ವಿರೋಧಗಳು ಒಂದನ್ನೊಂದು ಪೂರ್ಣಗೊಳಿಸುತ್ತವೆ. ಮಾವೋ ಹೊಸ ಪ್ರಜಾಸರ್ಕಾರ ಎಂಬ ತನ್ನ ಗ್ರಂಥದಲ್ಲಿ ಹಿಂದಿನ ಸಂಸ್ಕøತಿಯಲ್ಲಿ ಸಾರವತ್ತಾದುದನ್ನು ಗ್ರಹಿಸಿ ಗಸಿಯನ್ನು ಬಿಸಾಡಬೇಕೆಂದು ಹೇಳಿರುತ್ತಾನೆ. ಆ ಸಾರವತ್ತಾದ್ದು ಯಾವುದು, ಗಸಿಯಾವುದು ಎಂಬ ಪ್ರಶ್ನೆಗಳಿಗೆ ಈ ರೀತಿ ಉತ್ತರ ಕೊಟ್ಟಿರುತ್ತಾನೆ. ಪ್ರಜಾಸರ್ಕಾರಕ್ಕೆ, ವಿಜ್ಞಾನಕ್ಕೆ ವಿರುದ್ಧವಾದ ಶ್ರೀಮಂತರ ತತ್ತ್ವಗಸಿ, ಸಾಮಾನ್ಯರ ಮತ್ತು ಬಹುಸಂಖ್ಯಾತರ ಹಿತಕ್ಕೆ ಅನುಕೂಲವಾದದ್ದು ಮತ್ತು ವಿಜ್ಞಾನಕ್ಕೆ ಸಂಗತವಾದದ್ದು ಸಾರವತ್ತಾದ ತತ್ತ್ವ. ಈ ದೃಷ್ಟಿಯಿಂದ ಈಗ ಚೀನಿಯರು ತಮ್ಮ ಹಿಂದಿನ ತತ್ತ್ವವನ್ನು ವಿಮರ್ಶಿಸುತ್ತಿದ್ದಾರೆ. (ನೋಡಿ- ಕಮ್ಯೂನಿಸಂ) (ಜಿ.ಎಚ್.)