ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚೆನ್ನಬಸವಣ್ಣ

ವಿಕಿಸೋರ್ಸ್ದಿಂದ

ಚೆನ್ನಬಸವಣ್ಣ ಸು. 1143-1167. ಬಸವಣ್ಣನವರ ಸೋದರಳಿಯ. ನಾಗಲಾಂಬಿಕೆಯ ಪುತ್ರ. ಬಸವಣ್ಣನವರು ಈತನ ದೀಕ್ಷಾಗುರುವೂ ಹೌದು. ಶಿವಪ್ರಸಾದೋದ್ಭವನೆಂದೂ ಬಸವಪ್ರಸಾದೋದ್ಭವನೆಂದು ಕಕ್ಕಯ್ಯ ಪ್ರಸಾದೋದ್ಯಮವನೆಂದೂ ಈತನ ಜನನ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಸಿಂಗಿರಾಜ ಪುರಾಣದ ಪ್ರಕಾರ ಈತನನ್ನು ಶಿವದೇವರ ಪುತ್ರನೆಂದು ಹೇಳಬಹುದು. ತಾಯಿ ನಾಗಲಾಂಬಿಕೆಯ ಹುಟ್ಟೂರು ಇಂಗಳೇಶ್ವರವಾದರೂ ಈತ ಹುಟ್ಟಿದುದು ಕಲ್ಯಾಣದಲ್ಲಿ. ಈತನ ಹುಟ್ಟು, ಬಾಲ್ಯ, ಬೆಳೆವಣಿಗೆಗಳೆಲ್ಲ ಬಸವಣ್ಣ, ನಾಗಲಾಂಬಿಕೆ, ಗಂಗಾಂಬಿಕೆ ಮತ್ತು ಅಸಂಖ್ಯಾತ ಶರಣರ ಪರಿಸರದಲ್ಲಿಯೆ ಸಾಗಿಕೊಂಡು ಬಂದುದರಿಂದ ಈತ ಮಹಾಜ್ಞಾನಿ, ಕ್ರಿಯಾಜ್ಞಾನಿ, ದಿವ್ಯಜ್ಞಾನಿಯಾಗಿ ಪರಿಣಮಿಸಿದ. ಅಲ್ಲದೆ ವೀರಶೈವ ಷಟ್‍ಸ್ಥಳಶಾಸ್ತ್ರವನ್ನು ಕ್ರಮಬದ್ಧವಾಗಿ, ಸಶಾಸ್ತ್ರೀಯವಾಗಿ ಅಳವಡಿಸಿ ವಚನಗಳನ್ನು ರಚಿಸಿದುದರಿಂದ ಈತನನ್ನು ಷಟ್‍ಸ್ಥಲ ಚಕ್ರವರ್ತಿ, ಷಡುಸ್ಥಲ ಸಮ್ರಾಟ ಮೊದಲಾದ ಅಭಿಧಾನಗಳಿಂದ ಕರೆಯಲಾಗಿದೆ. ಈತನ ಜೀವಿತದ ಅವಧಿ ಕೇವಲ ಇಪ್ಪತ್ನಾಲ್ಕು ವರ್ಷಗಳಿದ್ದರೂ ಈತನ ಕಾರ್ಯಕ್ಷೇತ್ರ ಅಪರಿಮಿತವಾಗಿತ್ತು. ಈತ ತನ್ನ ಅತುಲ ಪ್ರತಿಭೆ, ಅಪಾರ ಪಾಂಡಿತ್ಯಗಳಿಂದ ಹೆಚ್ಚಿನ ಮನ್ನಣೆ ಪಡೆದ. ಅಂದಿನ ಶರಣ ಸಮೂಹದಲ್ಲಿ ಈತ ಅತಿ ಕಿರಿಯನಾದರೂ ಪ್ರಭುದೇವರು ಏರಿದ ಶೂನ್ಯ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗುವ ಹಿರಿಮೆಯನ್ನು ತೋರಿದ. ಬಿಜ್ಜಳನ ರಾಜ್ಯದಲ್ಲಿ ಚಿಕ್ಕದಣ್ಣಾಯಕ ಪದವಿಯಲ್ಲಿದ್ದುದರಿಂದ ರಾಜಕೀಯ ಕ್ಷೇತ್ರದಲ್ಲಿಯೂ ಈತ ಉಲ್ಲೇಖನೀಯನಾಗಿದ್ದಾನೆ. ಅನುಭವಮಂಟಪದ ಚಟುವಟಿಕೆಗಳ ಕೇಂದ್ರಬಿಂದುವಾದ ಬಸವಣ್ಣನವರ ಬಲಗೈಯಂತಿದ್ದ ಈತ ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮನಿಗೆ ಇಷ್ಟ ಲಿಂಗಧಾರಣೆ ಮಾಡಿ, ವೀರಶೈವ ಧಾರ್ಮಿಕ ಇತಿಹಾಸದಲ್ಲಿ ಸ್ಮರಣೀಯನಾಗಿದ್ದಾನೆ. ಅಂತೆಯೇ ಪ್ರಭುದೇವ, ಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ ಮೊದಲಾದ ತನ್ನ ಸಮಕಾಲೀನರಾದ ಅಸಂಖ್ಯಾತ ಶರಣರಿಂದಲೂ ಮಹಾಜ್ಞಾನಿ ಎಂದು ಹೊಗಳಿಸಿಕೊಂಡಿದ್ದಾನೆ. ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಗಣ್ಯನಾದ ಈತ ಅದೇ ಸ್ಥಾನವನ್ನು ಸಾಹಿತ್ಯದಲ್ಲಿಯೂ ಪಡೆದಿದ್ದಾನೆ. ಕೂಡಲ ಚೆನ್ನಸಂಗಮನಾಥ ಈತನ ವಚನಗಳ ಅಂಕಿತ. ಇಂದು ಈತನ 1,503 ವಚನಗಳು ಉಪಲಬ್ಧವಿವೆ. ಅಲ್ಲದೆ, ಕರಣಹಸಿಗೆ, ಮಿಶ್ರಾರ್ಪಣ, ಹಿರಿಯ ಮಂತ್ರ ಗೋಪ್ಯ, ಪದಮಂತ್ರ ಗೋಪ್ಯ ಸಕೀಲದ ವಚನಗಳು ಎಂಬ ಗ್ರಂಥಗಳನ್ನೂ ಈತ ರಚಿಸಿದ್ದಾನೆ. ಈತನ ವಚನಗಳು ಪಾಂಡಿತ್ಯಪೂರ್ಣವಾಗಿ ವಿಚಾರಪರಿಪ್ಲುತವೂ ಆಗಿವೆ. ಇಲ್ಲಿ ಕೆಲವು ವಚನಗಳನ್ನು ನೋಡಬಹುದು.

ಕಟಕ ಸೂತ್ರದ ಗೂಡು ಮಾಡಿಕೊಂಡಿಪ್ಪಲ್ಲಿ,
ಸೂತ್ರಕ್ಕೆ ನೂಲನು ಅದೆಲ್ಲಿಂದ ತಂದಿತ್ತು?
ರಾಟಿ ಇಲ್ಲ; ಹಂಜಿ ಇಲ್ಲ
ತನ್ನಲ್ಲಿಯೇ ನೂಲ ಕಲ್ಪಿಸಿ, ತಾನದನು ಅಂಟಿಸಿಕೊಂಡು ಆಡಿ,
ಅಡಗಿಸಿಕೊಂಡು ಹೋಹಂತೆ,
ತನ್ನ ಲೀಲೆಗೆ ತಾನೇ ಮಾಡಿಕೊಂಡ ವಿಶ್ವಪ್ರಪಂಚದ
ತನ್ನಲ್ಲಿಯೇ ಲಯವನೈದಿಸಿಕೊಂಡು,
ಕೂಡಲ ಚನ್ನಸಂಗಯ್ಯ ನಿರ್ವಯಲಾದನು.

ಗುಬ್ಬಿ ಹೆ¾ರ ಮನೆಯ ತನ್ನ ಮನೆಯೆಂಬಂತೆ
ಧರೆ, ಧನ, ವನಿತೆಯರು ಎನ್ನವರು ತನ್ನವರೆಂದು,
ಹೋರಿ ಹೋರಿ ಸಾಯುತ್ತಿದೆ ಜೀವ

ಅರಸನ ಭಕ್ತಿ ಅಹಂಕಾರದಿಂದ ಕೆಟ್ಟಿತ್ತು
ಸೂಳೆಯ ಭಕ್ತಿ ಎಂಜಲ ತಿಂದಾಗಲೆ ಹೋಯಿತ್ತು.
ನಂಟುತನದ ಭಕ್ತಿ ನಾಯಕ ನರಕ,
ಬಡವನ ಭಕ್ತಿ ನಿಧಾನ,
ಇದು ಕಾರಣ, ಕೂಡಲ ಚನ್ನಸಂಗಮ ದೇವಾ,
ನಿಮ್ಮ ಭಕ್ತಂಗೆ ಬಡತನವೇ ಕೊಡು.

ದಾಸಿಯ ಸಂಗ ಕಸನೀರ ಹೊರಸಿತ್ತು,
ವೇಸಿಯ ಸಂಗ ಎಂಜಲ ತಿನಿಸಿತ್ತು.

ಆಚಾರವೆಂಬ ಬಿಲ್ಲಿಗೆ ವಿಚಾರವೆಂಬ ನಾರಿ
ಸಮತೆಯೆಂಬ ತಿರುವ ಮೆಟ್ಟಿ ಜೇವಡೆಗೈದು,
ಶಿಷ್ಯನೆಂಬ ಅಂಬ ತೊಡಚಿ
ಗುರುವೆಂಬ ವ್ಯಾಧನು ಲಿಂಗವೆಂಬ ಬಯಲ ಗು¾Âಯನೆಚ್ಚಡೆ
ಗ¾Âದೋ¾Âದಂತೆ ಮುಳುಗಿಯಡಗಿತ್ತು.
ಆ ಗು¾Âಯನು ಬಾಣವನು ಅ¾ಸಲುಂಟೆ
ಕೂಡಲ ಚನ್ನಸಂಗಾ, ನಿಮ್ಮಲ್ಲಿ

ಇನ್ನುಳಿದ ಗ್ರಂಥಗಳು ಈತನಿಗೆ ತತ್ತ್ವಶಾಸ್ತ್ರಗಳಲ್ಲಿರುವ ಅಪಾರವಾದ ಶಕ್ತಿಯನ್ನು ವ್ಯಕ್ತಪಡಿಸುತ್ತವೆ. ಇವಲ್ಲದೆ, ರುದ್ರಭಾರತ, ಮೇಘಚಕ್ರ, ಭೂಚಕ್ರ, ಜಪದ ಸಕೀಲ ಮುಂತಾದ ಅನೇಕ ಚಿಕ್ಕ ಗ್ರಂಥಗಳು ಈತನ ಹೆಸರಿಗೆ ಅಂಟಿಕೊಂಡಿವೆ. ಅವನ್ನು ನೋಡಿದಾಗ ಇವು ಈತನ ಗ್ರಂಥಗಳಲ್ಲವೆನಿಸುತ್ತದೆ. ಒಟ್ಟಿನಲ್ಲಿ ವಚನಕರ್ತೃವಾಗಿ, ಶಾಸ್ತ್ರ ಗ್ರಂಥಗಳ ನಿರ್ಮಾಪಕನಾಗಿ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ರಾಜಕೀಯ ಕ್ರಾಂತಿಗಳ ಮುಖಾಂತರ ಲೋಕೋದ್ಧಾರಕನಾಗಿ ಬೆಳಗಿದ ಚೆನ್ನಬಸವಣ್ಣನ ಹೆಸರು ವಿಶೇಷವಾಗಿ ಕರ್ನಾಟಕದಲ್ಲಿ ಸ್ಮರಣಾರ್ಹವಾಗಿದೆ.

ಎಲ್ಲ ವೀರಶೈವ ಕವಿಗಳೂ ಕಾವ್ಯಾರಂಭದಲ್ಲಿ ಈತನನ್ನು ಸ್ಮರಿಸಿದ್ದಾರೆ. ವಿರೂಪಾಕ್ಷ ಪಂಡಿತ ಈತನನ್ನು ಕುರಿತು ಚನ್ನಬಸವೇಶ್ವರ ಪುರಾಣವನ್ನು ಬರೆದಿದ್ದಾನೆ. ಅಕ್ಕನಾಗಮ್ಮ, ಹಡಪದ ರೇಚಣ್ಣ, ಪ್ರಸಾದಿ ಬೋಗಣ್ಣ, ಏಲೇಶ್ವರದ ಕೇತಯ್ಯ, ಕನ್ನಡಿ ಕಾಯಕದ ಅಮುಗಿದೇವಯ್ಯ, ನುಲಿಯ ಚಂದಯ್ಯ ಮೊದಲಾದ ಶರಣರು ಈತನ ಅಂಕಿತನಾಮವನ್ನಿಟ್ಟುಕೊಂಡು ವಚನ ರಚಿಸಿದ್ದಾರೆ. ಪ್ರಭುದೇವ, ಬಸವಣ್ಣ, ಸಿದ್ಧರಾಮ, ಮಹಾದೇವಿಯಕ್ಕ, ನಾಗಲಾಂಬಿಕೆ, ಆಯ್ದಕ್ಕಿ ಮಹಾದೇವಿ, ಮೋಳಿಗೆಯ ಮಹಾದೇವಿ, ಮೋಳಿಗೆಯ ಮಾರಯ್ಯ, ಮಡಿವಾಳ ಮಾಚಿದೇವ, ಸಕಲೇಶ ಮಾದರಸ, ಮರುಳ ಶಂಕರದೇವ, ಆದಯ್ಯ, ಉರಿಲಿಂಗ ಪೆದ್ದಿ, ಬಹುರೂಪಿ ಚೌಡಯ್ಯ, ಕೆಂಭಾವಿ ಭೋಗಣ್ಣ, ತೋಂಟದ ಸಿದ್ಧಲಿಂಗ, ಢಕ್ಕೆಯ ಬೊಮ್ಮಣ್ಣ, ಉಗ್ಗಡಿವು ಗಬ್ಬಿದೇವ, ಬಾಹೂರ ಬೊಮ್ಮಣ್ಣ, ತುರುಗಾಹಿ ರಾಮಣ್ಣ, ಕಂಬದ ಮಾರಿತಂದೆ, ಭರಿತಾರ್ಪಣದ ಚನ್ನಸಂಗಣ್ಣ, ಬೊಕ್ಕಸ ಚಿಕ್ಕಣ್ಣ ಗಣದಾಸಿವೀರಣ್ಣ, ಷಣ್ಮುಖಸ್ವಾಮಿ ಮೊದಲಾದ ವಚನಕಾರರು ಚೆನ್ನಬಸವಣ್ಣನ ಪಾಂಡಿತ್ಯ, ಪ್ರತಿಭೆ, ಮುಂತಾದವನ್ನು ತಮ್ಮ ವಚನಗಳಲ್ಲಿ ಬಣ್ಣಿಸಿ ಈತನ ಉನ್ನತ ವ್ಯಕ್ತಿತ್ವಕ್ಕೆ ಸತ್ಯದ ಸಾಕ್ಷಿಯನ್ನಿತ್ತಿದ್ದಾರೆ. ಈತ ಉಳಿವೆಯಲ್ಲಿ ಲಿಂಗೈಕ್ಯನಾದ; ಅಲ್ಲಿ ಈತನ ಸಮಾಧಿಯಿದೆ. ವರ್ಷಕ್ಕೊಮ್ಮೆ ಅಲ್ಲಿ ಜಾತ್ರೆ ಸೇರುತ್ತದೆ; ರಥೋತ್ಸವ ನಡೆಯುತ್ತದೆ. (ಎಸ್.ಜಿ.ಎಚ್.)