ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಂಗಮ

ವಿಕಿಸೋರ್ಸ್ದಿಂದ

ಜಂಗಮ-

	ಸ್ಥಾವರ ಮತ್ತು ಜಂಗಮ ಪದಗಳು ಸಾಮಾನ್ಯವಾಗಿ ಅಚರ ಮತ್ತು ಚರ ಎಂಬ ಶಬ್ದಗಳ ಪರ್ಯಾಯ ಪದಗಳು ಆದರೆ ವೀರಶೈವಧರ್ಮದಲ್ಲಿ ಬಳಕೆಯಲ್ಲಿರುವ ಜಂಗಮ ಪದ ಪಾರಿಭಾಷಿಕ.

ಅಂತರ್ಧಾಯ ಲಲಾಟಾಕ್ಷಿಂ ಶಶಾಂಕಂ ಸಂವಿಧಾಯ ಚ| ಅವಾಮಭಾಗಲಲನೋ ಜಂಗಮಃ ಪರಮೇಶ್ವರಃ || (ಸಿದ್ಧಾಂತ ಶಿಖಾಮಣಿ)

ಮಂಡೆಯ ಚಂದ್ರಕಲೆ, ಹಣೆಗಣ್ಣು ಮತ್ತು ಎಡಗಡೆಯ ಅಗಜೆಯರನ್ನು ಮರೆ ಮಾಚಿದ ಸಾಕ್ಷಾತ್ ಪರಮೇಶ್ವರನೇ ಜಂಗಮ ದೇಹಧರಿಸಿ-

ಅಹಮೇವ ಮಹೇಶಾನಿ ಧೃತ್ವಾ ಜಂಗಮವಿಗ್ರಹಂ| ಮದ್ಭಕ್ತಾನುಗ್ರಹಾರ್ಥಯ ಪರ್ಯಟಾಮಿ ಮಹೀತಲೇ || (ವೀರಾಗಮ)

ಭಕ್ತರನ್ನು ಅನುಗ್ರಹಿಸಲು ಭೂಲೋಕದಲ್ಲಿ ಸಂಚರಿಸುವನೆಂಬುದು ಆಗಮಗಳ ಹೇಳಿಕೆ, ಅಯ್ಯಾ, ನೀನೆನ್ನ ಭವವ ಕೊಂದಹನೆಂದು ಜಂಗಮಲಾಂಛನನಾಗಿ ಬಂದಲ್ಲಿ ನಾ ಭಕ್ತನೆಂಬ ವಾಹನವಾಗಿರ್ದೆ ಎಂಬ ಬಸವಣ್ಣನವರ ಮಾತು ಇದನ್ನು ಸಮರ್ಥಿಸುತ್ತದೆ.

ಐತಿಹಾಸಿಕವಾಗಿ ಕ್ರಿಸ್ತಶಕಾರಂಭದ ಸಮಯದಿಂದಲೂ ಜಂಗಮ ಮಠಗಳು ಭರತಖಂಡದಲ್ಲಿದ್ದಂತೆ ತಿಳಿದುಬರುತ್ತದೆ. ಕ್ರಿ.ಶ. ಒಂದನೆಯ ಶತಮಾನದ ಹೊತ್ತಿಗೆ ಶ್ರೀಶೈಲದಲ್ಲಿ ಶೈವಮಠವೊಂದು ಅಸ್ತಿತ್ವದಲ್ಲಿದ್ದ ಬಗೆಗೆ ಪರಿಶೋಧನೆಗಳು ನಡೆದಿವೆ (ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ). ಶ್ರೀಶೈಲದ ಜಂಗಮ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರಭಾವವನ್ನು ತನ್ನ ಚೋಡಕವಿ (ಕ್ರಿ.ಶ. 940) ತನ್ನ ತೆಲುಗು ಕಾವ್ಯ ಕುಮಾರಸಂಭವದ ಪ್ರಾರಂಭದಲ್ಲಿ ಮಾಡಿದ್ದಾನೆ. ಕ್ರಿ.ಶ. ಸುಮಾರು 800ರಲ್ಲಿದ್ದ ಆನಂದಗಿರಿ ತನ್ನ ಶಂಕರವಿಜಯದಲ್ಲಿ ಶಿರಸಿ ಪಾಷಾಣಲಿಂಗಂಚ ಧಾರಿಣಃ ಜಂಗಮಾಃ—ಎಂದು ಶಿರೋಲಿಂಗಧಾರಿ ಜಂಗಮರನ್ನು ಉಲ್ಲೇಖಿಸಿದ್ದಾನೆ. ವೀರಾಗಮದಲ್ಲಿ ಜಂಗಮನ ಸ್ವರೂಪವನ್ನು ಕುರಿತ- ಧಾರೆಯೇತ್ಸಮತಾಕಂಥಾಂ ಕ್ಷಮಾಖ್ಯಾಂ ಭಸ್ಮಘಂಟಿಕಾಂ| ದಯಾಕಮಂಡಲುಂ ವತ್ಸ ಜ್ಞಾನದಂಡಂ ಮನೋಹರಂ|| ವೈರಾಗ್ಯಭಿಕ್ಷಾಪಾತ್ರಂ ಚ ಭಕ್ತಿಭಿಕ್ಷಾಂ ಚ ಯಾಚತೆ| ಕಂಥಾಕಮಂಡಲುರ್ದಂಡಃ ಖರ್ಪರೋ ಭಸ್ಮಭಸ್ತ್ರಿಕಾ || ಎಂದು ಹೇಳಿರುವ ವರ್ಣನೆ ಪ್ರಭುದೇವರ-ಸಮತೆ ಎಂಬ ಕಂಥೆಯ (ಜೋಳಿಗೆ) ತೊಟ್ಟು, ಸುಬುದ್ಧಿ ಎಂಬ ಟೊಪ್ಪರವನಿಕ್ಕಿ, ವಿಷಯವೆಂಬ ಹಾವುಗೆಯ ಮೆಟ್ಟಿ, ಕಮಲಧವೆಂಬ ಕುಳಿಯ ಬಿಳದೆ, ವೈರಾಗ್ಯವೆಂಬ ಕೊರಡನೆಡಹದೆ, ಮರವೆ ಎಂಬ ಚಳಮೆಟ್ಟದೆ ಗುಹೇಶ್ವರನ ಶರಣ ಬಂದನೆನು ಭಕ್ತಿಭಿಕ್ಷೆಯನಿಕ್ಕು ಸಂಗನ ಬಸವಣ್ಣ ಎಂಬ ವಚನದಲ್ಲಿ ಪಡಿಮೂಡಿದೆ.

ವೀರಶೈವ ಸಿದ್ಧಾಂತದ ಅಷ್ಟಾವರಣಗಳಲ್ಲಿ ಉಕ್ತವಾದ ಜಂಗಮ ಉಪಾಸ್ಯತ್ರಯದಲ್ಲಿ ಒಂದು. ಗುರು ಲಿಂಗ ಜಂಗಮರು ಶಿವನ ಮೂರು ಅಂಶಗಳು (ಏಕಮೂರ್ತಿಸ್ತ್ರಿಧಾ ಭಕ್ತಃ ಗುರುರ್ಲಿಂಗಂ ತು ಜಂಗಮಃ). ವೀರ, ನಂದಿ, ಭೃಂಗಿ, ವೃಷಭ ಮತ್ತು ಸ್ಕಂದ ಎಂಬ ಐದು ಪ್ರಮಥ ಗೋತ್ರಗಳಿಗೆ ಸೇರಿದ ರೇಣುಕದಾರುಕ ಮುಂತಾದ ಐವರು ಆಚಾರ್ಯರಿಂದ ವೀರಮಾಹೇಶ್ವರ ದೀಕ್ಷೆ ಹೊಂದಿದ ಐದು ಆರಾಧ್ಯ ಸಂಪ್ರದಾಯಗಳಿಗೂ ಜಂಗಮ ಎಂಬ ಹೆಸರಿದೆ. ಇವರನ್ನು ವೀರಶೈವಗುರು ಮತ್ತು ಜಂಗಮರು (ವಿರಕ್ತ) ಪೀಠಗಳಿಗೆ ಕ್ರಮವಾಗಿ ಅಧಿಪತಿಗಳನ್ನಾಗಿ ಆರಿಸುವ ಸಂಪ್ರದಾಯ ಉಂಟು. ಇವರಲ್ಲಿ ಗುರು ಭಕ್ತನ ಶಕ್ತಿಪಾತವನ್ನು ಗುರ್ತಿಸಿ ಶಿವದೀಕ್ಷೆ ಎಸಗಿ ತತ್ತ್ವಗಳನ್ನು ಬೋಧಿಸುತ್ತಾನೆ. ಈ ದೃಷ್ಟಿಯಿಂದ ಗುರು, ಜಂಗಮರು ಕ್ರಮವಾಗಿ ಭಕ್ತರ ಬೋಧಕ ಮತ್ತು ಪರೀಕ್ಷಕರೆನಿಸುತ್ತಾರೆ. ಇವರಲ್ಲಿ ಕೆಲವರ ಗೃಹಸ್ಥರು, ಕೆಲವರು ದೇಶಿಕರು (ಬ್ರಹ್ಮಚಾರಿಗಳು). ಈ ಇಬ್ಬರೂ ಸಮಾಜಕ್ಕೆ ಪೂಜ್ಯರೆ.

ಯೋಗಿನೀಸಹಿತಾಃ ಕೇಚಿತ್ ಕೇಚಿತ್ ದೇಶಿಕಸಂಜ್ಞಿಕಜಾಃ | ಸ್ವೇಚ್ಛಾಶ್ರಮವಿಹಾರಾಸ್ತೇ ಲಿಂಗಭೋಗೋಪಭೋಗಿನಃ || ಶಿವಶರಣರು ಜಂಗಮರಲ್ಲಿ ಜಾತಿ ಕುಲ ಅಂತಸ್ತುಗಳನ್ನು ಎಣಿಸಬಾರದು ಎನ್ನುತ್ತಾರೆ. ಅರಿವು ಆಚಾರವುಳ್ಳವರೆ ಜಂಗಮ (ಚನ್ನಬಸವಣ್ಣ) ಎಂಬುದು ಸರಿಯಾದಿ ನಿಲುವು. (ಎಂ.ಜಿ.ಎನ್.)

ವೀರಶೈವ ಸಾಹಿತ್ಯದಲ್ಲಿ ಅಷ್ಟಾವರಣಾಂತರ್ಗತ ಜಂಗಮ, ವಂಶಾನುಗತ ಜಂಗಮ, ಅತಿಥಿರೂಪಿ ಜಂಗಮ ಎಂಬ ಮೂರು ರೂಪಗಳಲ್ಲಿ ಜಂಗಮ ಶಬ್ದವು ವ್ಯವಹರಿಸಲ್ಪಟ್ಟಿದೆ. ಶಿವಾಗಮಗಳಲ್ಲಿಯೂ ವೀರಶೈವ ಪುರಾಣಗಳಲ್ಲಿಯೂ ಅತಿಥಿಗಳನ್ನು ಜಂಗಮರೆಂದು ಕರೆಯಲಾಗಿದೆ. ವೃಷಭೇಂದ್ರ ವಿಜಯದಲ್ಲಿ ಶ್ರೀ ರೇಣುಕಾಚಾರ್ಯನನ್ನು ಜಂಗಮ ಕೋಟಿಗೆ ಮುಖ್ಯವಾದ ಭಾಸ್ವತ್ ಗುರು ಎಂದು ವರ್ಣಿತವಾಗಿದೆ. ಒಟ್ಟಿನಲ್ಲಿ ಜಂಗಮರು ಪೂಜ್ಯರು, ಪೂಜಾರ್ಹರು ಎಂದು ವ್ಯವಹರಿಸಲ್ಪಟ್ಟಿದೆ. ಭಕ್ತಭಂಡಾರಿ ಬಸವಣ್ಣನನ್ನು ಜಂಗಮ ಪ್ರಾಣಿ ಎಂದು ಕರೆದಿದ್ದಾರೆ. ಈಗಲೂ ವೀರಶೈವರಲ್ಲಿ ಜಂಗಮ ದಾಸೋಹಕ್ಕೆ ಬಹಳ ಪ್ರಾಮುಖ್ಯ ಇದೆ. (ಬಿ.ಎಸ್.)