ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ನೃತ್ಯಗಳು

ವಿಕಿಸೋರ್ಸ್ದಿಂದ

ಜನಪದ ನೃತ್ಯಗಳು - ಮನುಷ್ಯನ ಬದುಕನ್ನು ತೀವ್ರ ಸಂವೇದನೆಗೊಳಗಾಗಿಸುವ ಹುಟ್ಟು, ಸಾವು ಮತ್ತು ಇವುಗಳ ನಡುವೆ ಅವನಿಗೆ ಉಂಟಾಗುವ ನಾನಾ ತರಹದ ಅನುಭವಗಳಿಗೆ ಒಂದು ಜನಾಂಗ ಚಲನೆಯ ಮೂಲಕ ವ್ಯಕ್ತಪಡಿಸುವ ಒಂದು ಪ್ರತಿಕ್ರಿಯೆಯಾಗಿ ನೃತ್ಯ ಹುಟ್ಟಿತೆನ್ನಬಹುದು. ಮೂಲಭೂತವಾಗಿ ಅದು ಅವನ ಅತೀವ ಆನಂದದ, ತೃಪ್ತಿಯ ಸರಳ ಅಭಿವ್ಯಕ್ತಿ. ಜನಾಂಗದ ಆಚರಣೆ, ಸಂಪ್ರದಾಯ, ನಂಬಿಕೆ, ಮೂಢನಂಬಿಕೆ, ವೃತ್ತಿ ಮುಂತಾದವನ್ನೂ ಅದು ಪ್ರತಿ ಬಿಂಬಿಸುತ್ತದೆ. ಜನಪದ ನೃತ್ಯ ಆದಿಮಾನವನ ಅನಿಸಿಕೆಗಳನ್ನು ಅಭಿವ್ಯಕ್ತಪಡಿಸುವ ಮೊದಲ, ಮತ್ತು ಏಕಮಾತ್ರ ಮಾಧ್ಯಮ ಆಗಿತ್ತೆಂಬ ಅಭಿಪ್ರಾಯವಿದೆ. ಅವನು ತನಗೂ ತನ್ನ ದೇವರಿಗೂ ಇರುವ ಸಂಬಂಧವನ್ನು ವ್ಯಕ್ತಪಡಿಸುವುದಕ್ಕಾಗಿ, ಬದುಕಿನಲ್ಲಿ ಬರುವ ಕೆಡಕುಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ, ಋತುಮಾನಗಳಲ್ಲಾಗುವ ಬದಲಾವಣೆಗಳನ್ನು ಗಮನಿಸುವುದಕ್ಕಾಗಿ, ಸೂರ್ಯನ ಉದಯ ಮತ್ತು ಅಸ್ತಮಗಳನ್ನು ಸೂಚಿಸುವುದಕ್ಕಾಗಿ, ಚಂದ್ರನ ಆಕಾರದಲ್ಲಾಗುವ ವ್ಯತ್ಯಾಸಗಳನ್ನು ಗುರುತಿಸುವುದಕ್ಕಾಗಿ, ಬದುಕಿನಲ್ಲಿ ಬೇರೆ ಬೇರೆ ಕೆಲಸಗಳನ್ನು ಅರಸುವುದರ ಪ್ರತೀಕವಾಗಿ, ಪ್ರಕೃತಿ, ಪ್ರಾಣಿಪಕ್ಷಿ ಇವುಗಳ ಚಲನವಲನಗಳನ್ನು ಅಭಿನಯನದ ಮೂಲಕ ಹಿಡಿದಿಡುವುದಕ್ಕಾಗಿ ನೃತ್ಯವನ್ನು ಅಭಿನಯಿಸಲಾರಂಭಿಸಿದ. ಪ್ರತಿಯೊಂದು ದೇಶವೂ ತನ್ನದೇ ಆದ ಜನಪದ ನೃತ್ಯ ಸಂಪ್ರದಾಯಗಳನ್ನು ಹೊಂದಿದ್ದರೂ ಬಹುಪಾಲು ನೃತ್ಯಗಳ ಮೂಲ ಉದ್ದೇಶ ಮರೆತುಹೋಗಿದೆ. ಆದರೂ ನೃತ್ಯಗಳ ಮೂಲ ಉದ್ದೇಶಗಳನ್ನು ಪ್ರಯತ್ನದಿಂದ ಸ್ವಲ್ಪಮಟ್ಟಿಗೆ ಸಂಶೋಧಿಸಲಾಗಿದೆ.

ಸಾಮಾನ್ಯವಾಗಿ ಪ್ರತಿಯೊಂದು ಜನಪದ ನೃತ್ಯವೂ ಆಯಾ ಪ್ರದೇಶದ ಭೌಗೋಳಿಕ ಹಿನ್ನೆಲೆಯ ಮೇಲೆ ಬೆಳೆದಿರುತ್ತದೆ. ಚುರುಕಾದ, ಶ್ರಮಸಾಧ್ಯವಾದ ಮತ್ತು ಕಟ್ಟುನಿಟ್ಟಾದ ಚಲನೆಯ ನೃತ್ಯಗಳು ಉತ್ತರ ರಷ್ಯ, ಸ್ಕ್ಯಾಂಡಿನೇವಿಯ ಮತ್ತು ಸ್ಕಾಟ್ಲೆಂಡಿನಂಥ ಚಳಿ ಪ್ರದೇಶಗಳ ನೃತ್ಯಗಳಾದರೆ, ಆವೇಶಪೂರಿತವಾದ ಮತ್ತು ಭಾವೋದ್ರೇಕದ ನೃತ್ಯಗಳು ಅಧಿಕ ಉಷ್ಣಾಂಶಗಳಿರುವ ಸ್ಪೇನ್, ಮೆಕ್ಸಿಕೋ ಆಫ್ರಿಕ, ದಕ್ಷಿಣ ಇಟಲಿಯಂಥ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜನಪದ ನೃತ್ಯಗಳ ಅಸಂಖ್ಯ ಶೈಲಿಗೆ ಆಯಾ ಜನಾಂಗ ವಾಸಮಾಡುವ ಭೂಮಿಯ ವ್ಯವಸ್ಥೆಯೂ ಕಾರಣವಾಗಿರುತ್ತದೆ. ಮರಳ ಗಾಡಿನಲ್ಲಿ ಬದುಕುವ ಜನ ನೃತ್ಯಮಾಡುವಾಗ ಒಂದೇ ಸಮನೆ ತಮ್ಮ ದೇಹದ ಭಾರವನ್ನು ಕಾಲಿನಿಂದ ಕಾಲಿಗೆ ಬದಲಾಯಿಸುತ್ತಿರುತ್ತಾರೆ. ಇದಕ್ಕೆ ಕಾರಣ-ಮರಳುಗಾಡಿನಲ್ಲಿ ನೆಲ ವಿಪರೀತವಾಗಿ ಕಾಯುವುದರಿಂದ ಒಂದೇ ಸ್ಥಳದಲ್ಲಿ ಒಂದು ಕಾಲನ್ನು ಹೆಚ್ಚು ಹೊತ್ತು ಇಡಲಾಗುವುದಿಲ್ಲ. ಏಷ್ಯದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬೇಟೆಗಾರರು ಮತ್ತು ಕುದುರೆ ಸಾಕುವವರು ವಿಭಿನ್ನ ರೀತಿಯ ನೃತ್ಯ ಸಂಪ್ರದಾಯಗಳನ್ನು ಹೊಂದಿದ್ದಾರೆ. ಇಲ್ಲಿನ ನೃತ್ಯಗಳಲ್ಲಿ ಲಯಬದ್ಧವಾದ ಚಲನೆಗಳು ಕಂಡುಬರುವುದಿಲ್ಲ. ಆದರು ಕೆಲವು ಸಾರಿ ಬೇಟೆಯ ಯಾವುದಾದರೊಂದು ಅನಿರೀಕ್ಷಿತವಾದ ಅಂಶವನ್ನು ಪ್ರದರ್ಶಿಸಬಹುದು; ಕುದುರೆಯ ಚಲನೆವಲನೆಗಳನ್ನು ಅನುಕರಿಸಬಹುದು; ಅಥವಾ ಕುಣಿಯುವಾಗ ಹೆಚ್ಚು ಉದ್ದಕ್ಕೆ ಹಾರುವುದರಿಂದ ತಾವು ಎಷ್ಟು ಮೈಲಿ ಪ್ರಯಾಣ ನಡೆಸಿದೆವು ಎಂಬುದನ್ನು ತೋರಿಸಬಹುದು. ಫಲವತ್ತಾದ ಬಯಲು ಪ್ರದೇಶಗಳಲ್ಲಿ ವಾಸಿಸುವ ಅಥವಾ ನದೀತಟಾಕಗಳಲ್ಲಿ ವಾಸಿಸುವ ಜನ ದೊಡ್ಡ ದೊಡ್ಡ ಗುಂಪುಗಳಾಗಿ ಸೇರಿ, ಮದುವೆ, ಹಬ್ಬ, ಸಾವು, ಚೈತ್ರ, ವಸಂತ, ಚಳಿಗಾಲ ಇಂಥ ಸಂದರ್ಭಗಳಲ್ಲಿ ನೃತ್ಯಮಾಡುತ್ತಾರೆ. ಆದರೆ ಈಗ ಯೂರೋಪ್ ಖಂಡದಲ್ಲಿ ಈ ಬಗೆಯ ನೃತ್ಯಗಳೆಲ್ಲ ಕ್ರೈಸ್ತರ ಹಬ್ಬಗಳೊಂದಿಗೆ ಸಂಬಂಧವನ್ನು ಹೊಂದಿವೆ. ಇಲ್ಲಿನ ನೃತ್ಯಗಳಲ್ಲಿ ನೆಗೆತಗಳು ಕಡಿಮೆ. ಹೆಜ್ಜೆಗಳನ್ನು ಕರಾರುವಾಕ್ಕಾಗಿ ಇಡುವುದಿಲ್ಲ. ನೃತ್ಯಗಳು ಮಂದಗತಿಯಿಂದ ಪ್ರಾರಂಭವಾಗಿ ಉದ್ವೇಗ ಹೆಚ್ಚಿದಂತೆಲ್ಲ ವೇಗವಾಗಿ ಸಾಗುತ್ತವೆ. ಅಭಿನಯಕಾರರು ಆವೇಶಪೂರಿತರಾದಾಗ ಬೆಂಕಿ ಕತ್ತಿ ಮೊದಲಾದವನ್ನು ಹಿಡಿದು ಬಳುಕಿಸಿ ನೃತ್ಯವಾಡುತ್ತಾರೆ. ಚೆಕೊಸ್ಲೊವಾಕಿಯ ಮತ್ತು ಭಾರತಗಳಲ್ಲಿ ಈ ಬಗೆಯ ನೃತ್ಯಗಳನ್ನು ಕಾಣಬಹುದು. ಪರ್ವತಗಳ ಮೇಲೆ ವಾಸಮಾಡುವ ಜನರ ನೃತ್ಯಗಳನ್ನು ಸುಲಭವಾಗಿ ಗುರುತಿಸಬಹುದು. ಅಲ್ಲಿನ ನೃತ್ಯಕಾರರು, ಪರ್ವತಗಳ ಮೇಲಿನ ನೆಲ ಸಮತಟ್ಟಾಗಿರುವುದಿಲ್ಲವಾದ ಕಾರಣ, ಸಮತಟ್ಟಾಗಿ ಸಿಗುವ ಕಡಿಮೆ ಪ್ರದೇಶಗಳಲ್ಲೆ ನೃತ್ಯ ಮಾಡಬೇಕಾಗುತ್ತದೆ. ಆದುದರಿಂದ ಅಭಿನಯಕಾರರು ಚಿಕ್ಕಚಿಕ್ಕ ಹೆಜ್ಜೆಗಳನ್ನು ಇಡುತ್ತ ಸಿಗುವ ಚೂರು ಜಾಗವನ್ನೂ ಬಳಸಿಕೊಳ್ಳುತ್ತ ಆವೇಶಪೂರಿತವಾಗಿ ಕುಣಿಯುತ್ತಾರೆ. ನೃತ್ಯಕ್ರಿಯೆ ಬಹುಪಾಲು ಮೇಲ್ಮುಖವಾದದ್ದಾಗಿರುತ್ತದೆ. ಹೆಜ್ಜೆಗಳನ್ನಿಡುವುದು ತೊಡಕಿನ ಕೆಲಸವಾದರೂ ಅಲ್ಲಿನ ನೃತ್ಯಕ್ರಿಯೆ ಸರಳವಾಗಿದ್ದು, ಪರ್ವತಗಳ ತಣ್ಣನೆಯ ಗಾಳಿಯಂತೆ ಚೇತೋಹಾರಿಯಾಗಿರುತ್ತದೆ. ಬಹುಪಾಲು ಜನಪದ ನೃತ್ಯಗಳು ವಾದ್ಯಗಳ ಸಂಗೀತದ ಹಿನ್ನೆಲೆಯಲ್ಲೇ ಜರುಗುತ್ತವೆ.

ಜನಪದ ನೃತ್ಯಗಳು ಸುಲಭದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಸಾರವಾಗುವುದಿಲ್ಲ. ಆದರೆ ವಸಾಹತುಗಳು ನಿರ್ಮಾಣವಾದಾಗಲೋ ಇಲ್ಲವೆ ಯುದ್ಧಗಳು ನಡೆದಾಗಲೋ ಇವು ದೇಶದಿಂದ ದೇಶಕ್ಕೆ ಪ್ರಯಾಣ ಮಾಡುತ್ತವೆ.

ಜನಪದ ನೃತ್ಯಗಳ ಮೂಲಸಾಮಗ್ರಿ ಮನುಷ್ಯನ ಬದುಕು ಮತ್ತು ಅವನ ಸುತ್ತಮುತ್ತಲಿನಲ್ಲಿರುವ ಪ್ರಕೃತಿಯೇ ಆಗಿರುವುದರಿಂದ ಅವುಗಳಲ್ಲಿ ವೈವಿಧ್ಯ ಹೆಚ್ಚು. ಒಟ್ಟು ಜನಪದ ನೃತ್ಯಗಳನ್ನು ನಾವು ಎರಡು ರೀತಿಯಲ್ಲಿ ಅವುಗಳ ವಸ್ತುಗಳಿಗನುಗುಣವಾಗಿ ವಿಭಾಗಿಸಬಹುದು : ಧಾರ್ಮಿಕ ಆಚರಣೆಗಳೊಂದಿಗೆ ಹುಟ್ಟಿಕೊಂಡ ನೃತ್ಯಗಳು ಧಾರ್ಮಿಕ ನೃತ್ಯಗಳು. ಸ್ವಸಂತೋಷಕ್ಕಾಗಿ ಇಲ್ಲವೆ ಲೌಕಿಕವಾದ ಕಾರಣಗಳಿಂದ ಹುಟ್ಟಿಕೊಂಡ ನೃತ್ಯಗಳು ಲೌಕಿಕ ನೃತ್ಯಗಳು. ಪ್ರಪಂಚಾದ್ಯಂತವಿರುವ ಬೇರೆ ಬೇರೆಯ ಜನಪದ ನೃತ್ಯ ಪ್ರಕಾರಗಳನ್ನು ಈ ಕೆಳಗೆ ಅವಲೋಕಿಸಲಾಗಿದೆ. ಧಾರ್ಮಿಕ ನೃತ್ಯಗಳು : ಮನುಷ್ಯನ ತೀವ್ರವಾದ ಅನಿಸಿಕೆಗಳಿಗೆ ತಾತ್ತ್ವಿಕ ಹಿನ್ನೆಲೆ ಸಿಕ್ಕಾಗ ಹುಟ್ಟುವ ನೃತ್ಯಗಳು ಇವು. ದೇವರು, ಭಯ, ಭಕ್ತಿ ಇಂಥವು ಈ ಬಗೆಯ ನೃತ್ಯಗಳ ಮೂಲವಸ್ತು. ಪ್ರಪಂಚಾದ್ಯಂತ ಕಂಡಬರುವ ರೈತರ ನೃತ್ಯಗಳು ಅವರ ಬದುಕಿನ ಪ್ರತೀಕವಾಗಿ ಉಳಿದಿವೆ. ಸೈಬೀರಿಯ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ದೇವರ ಉತ್ಸವಗಳನ್ನು ಅಲ್ಲಿನ ನೃತ್ಯಗಳು ಪ್ರತಿನಿಧಿಸುತ್ತವೆ. ಅಮೆರಿದ ರೆಡ್ ಇಂಡಿಯವರು ಅನೇಕ ಬಗೆಯ ಧಾರ್ಮಿಕ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಪ್ರಪಂಚದಾದ್ಯಂತವಿರುವ ಆದಿವಾಸಿ ಜನ ಮನುಷ್ಯನ ಹುಟ್ಟು, ಸಾವು, ಋತುಮಾನ ಇವುಗಳಿಗೆ ಸಂಬಂಧಿಸಿದ ಹಾಗೆ ನೃತ್ಯ ಮಾಡುತ್ತಾರೆ. ಯೂರೋಪಿನ ಹಬ್ಬದ ದಿನಗಳಲ್ಲಿ ಆಚರಿಸುವ ನೃತ್ಯಗಳಲ್ಲಿಯೂ ಬಹುಪಾಲು ಈ ಬಗೆಯವೇ ಆಗಿವೆ. ಬಾಲ್ಕನ್ ಪ್ರದೇಶಗಳಲ್ಲಿ ಈ ಬಗೆಯ ನೃತ್ಯಗಳನ್ನು ಕುಲೂಸ್ ಎಂದು ಕರೆಯುತ್ತಾರೆ. ಅಭಿನಯಕಾರರು ಒಬ್ಬರಿಗೊಬ್ಬರು ಕೈ ಮಿಲಾಯಿಸಿಕೊಂಡು ವೃತ್ತಾಕಾರವಾಗಿ ನಿಂತು ಪ್ರದಕ್ಷಿಣದಿಶೆಯಾಗಿ ಇಲ್ಲವೆ ಅಪ್ರದಕ್ಷಿಣದಿಶೆಯಾಗಿ ಚಲಿಸುತ್ತಾರೆ. ಪ್ರದಕ್ಷಿಣದಿಶೆಯಲ್ಲಿ ಚಲಿಸುವುದು ಮದುವೆ, ಹಬ್ಬ ಮತ್ತು ಸುಗ್ಗಿ ಇಂಥ ಸಂತೋಷ ಸಂದರ್ಭಗಳಲ್ಲಿ ಮಾತ್ರ. ದುಃಖಸೂಚಕವಾದ ಅಂತ್ಯಕ್ರಿಯೆಯಂಥ ಸಂದರ್ಭಗಳಲ್ಲಿ ಅಪ್ರದಕ್ಷಿಣ ದಿಶೆಯಲ್ಲಿ ಸುತ್ತುತ್ತಾರೆ. ಸ್ಕಾಟ್‍ಲೆಂಡಿನ ತೀರ ಹಳೆಯ ದುಃಖಸೂಚಕವಾದ ನೃತ್ಯಗಳಲ್ಲಿ ನೃತ್ಯಕಾರರು ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತಾರೆ. ಕುಲೂಸ್ ನೃತ್ಯದಲ್ಲಿ ಪದಗಳು ತುಂಬ ಸರಳವಾದುವು. ಮುಸ್ಲಿಂ ರಾಷ್ಟ್ರಗಳಲ್ಲಿ ಆಚರಿಸುವ ಕುಲುವಿಗೆ ನಿರ್ದಿಷ್ಟವಾದ ಸಂಗೀತದ ಹಿನ್ನಲೆ ಇರುವುದಿಲ್ಲ. ರೂಮೇನಿಯದ ಕುಲೂಸ್ ನೃತ್ಯ ತುಂಬ ಮೋಹಕವಾದದ್ದಾದರೆ, ಚಿಕೊಸ್ಲೊವಾಕಿಯದ ನೃತ್ಯ ಗಂಭೀರವಾದದ್ದು. ಕೆಲವು ಸಾರಿ ಬರೀ ಗಂಡಸರೇ ಇನ್ನು ಕೆಲವು ಬಾರಿ ಹೆಂಗಸರು ಮಾತ್ರವೇ ಈ ನೃತ್ಯವನ್ನು ಅಭಿನಯಿಸಿದರೆ, ಇನ್ನು ಕೆಲವೊಮ್ಮೆ ಕೆಲವು ಗೊತ್ತಾದ ಗುಂಪುಗಳು ನೃತ್ಯಮಾಡುತ್ತವೆ. ಯೂರೋಪಿನ ಬೇರೆ ಬೇರೆ ಭಾಗಗಳಲ್ಲಿ ಕಂಡುಬರುವ ಮೇ ಡೇ (ಮೇ ದಿನಾಚರಣೆ) ನೃತ್ಯಗಳು ಪುರಾತನ ಕಾಲದ ಆಚರಣೆಗಳಿಂದ ಹುಟ್ಟಿದವುಗಳಾಗಿವೆ. ಇಂಗ್ಲೆಂಡಿನ ಖಡ್ಗನೃತ್ಯ ಕ್ರೈಸ್ತೇತರ ಆಚರಣೆಗಳೊಂದಿಗೆ ಸಂಬಂಧಿಸಿದ ಒಂದು ಪುರಾತನ ನೃತ್ಯ, ಆದರೆ ಇಂದು ಇದು ಧಾರ್ಮಿಕ ಹಿನ್ನೆಲೆಯನ್ನುಳ್ಳ ಒಂದು ನೃತ್ಯವಾಗಿದೆ.

ಧಾರ್ಮಿಕ ನೃತ್ಯಗಳಿಗೆ ಭಾರತ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಬಂಗಾಳದ ಕಾಠೀ, ಹಿಮಾಚಲದ ಸಾಂಗಲ, ಕರ್ನಾಟಕದ ವೀರಗಾಸೆ ಕುಣಿತ, ಗೊರವರ (ಕಡಬಡ್ಡರ) ಕುಣಿತ, ಬೀಸುಕಂಸಾಳೆ ನೃತ್ಯ ಶೈವ ಸಂಬಂಧಿಯಾದದ್ದು. ಗೊರವರ ನೃತ್ಯ. ಮೈಲಾರಲಿಂಗನ ಗುಡ್ಡರಾದ ಗೊರವರು ತಲೆಯ ಮೇಲೆ ಕರಡಿಯ ಕೂದಲ ಟೊಪ್ಪಿಗೆ, ಮೈಮೇಲೆ ಕಪ್ಪು ನಿಲುವಂಗಿ, ಕವಡೆಯ ಸರಗಳು, ಕೈಯಲ್ಲಿ ಡಮರುಗ ತ್ರಿಶೂಲಗಳನ್ನು ಹಿಡಿದು ವೃತ್ತಾಕಾರವಾಗಿ ನರ್ತಿಸುತ್ತಾರೆ. ಪ್ರಕೃತಿಗೆ ಸಂಬಂಧಿಸಿದ ನೃತ್ಯಗಳು : ಪ್ರಕೃತಿ ಮತ್ತು ಮನುಷ್ಯನ ಸಂಬಂಧಗಳು ಹತ್ತಿರವಾದವು ಮತ್ತು ಪ್ರಕೃತಿ ಮನುಷ್ಯನ ಮೇಲೆ ತೀವ್ರವಾದ ಪರಿಣಾಮಗಳನ್ನುಂಟು ಮಾಡುತ್ತದೆ. ಮನುಷ್ಯ ತನ್ನ ದೈನಂದಿನ ಬಹುಪಾಲು ಅವಶ್ಯಕತೆಗಳನ್ನು ಪ್ರಕೃತಿಯಿಂದಲೇ ಪೂರೈಸಿಕೊಳ್ಳುವುದಲ್ಲದೆ. ಪ್ರಕೃತಿಯನ್ನು ತಾನೂ ಅನುಕರಿಸಲು ಪ್ರಯತ್ನಿಸುತ್ತಾನೆ. ಆಫ್ರಿಕದ ಗಂಟೆ ನೃತ್ಯ (ಬೆಲ್ ಡಾನ್ಸ್) ಮಳೆಗಾಗಿ ಆಚರಿಸುವಂಥದು. ಮಂಜು, ಗಾಳಿ, ನೀರು ಮತ್ತು ಸೂರ್ಯನ ಮೇಲೆ ಪ್ರಭಾವ ಬೀರುವುದರ ಉದ್ದೇಶವಾಗಿ ಎಕ್ವಡಾರಿನಲ್ಲಿ ವೇಯಾರ ಎಂಬ ನೃತ್ಯವನ್ನು ಮಾಡುತ್ತಾರೆ. ಭಾರತದಲ್ಲಿ ಪ್ರಕೃತಿಗೆ ಸಂಬಂಧಿಸಿದ ನೃತ್ಯಗಳು ಅಷ್ಟಾಗಿ ಕಂಡುಬರುವುದಿಲ್ಲ.

ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ನೃತ್ಯಗಳು : ಸೂರ್ಯ, ಚಂದ್ರ, ನಕ್ಷತ್ರಗಳನ್ನು ಜಗತ್ತಿನ ರೈತ ಜನಾಂಗ ಮತ್ತು ಅಲೆಮಾರಿ ಜನಾಂಗಗಳು ಮೊದಲಿನಿಂದಲೂ ಪೂಜಿಸುತ್ತ ಬಂದಿದ್ದಾರೆ. ಇಂಥ ಜನಾಂಗದವರು ಬೋಲಿವೀಯ ಸೂರ್ಯನೃತ್ಯವನ್ನು ಇಂದಿಗೂ ಮಾಡುತ್ತಾರೆ. ರಾಮಧನ್ ಎಂಬ, ಚಂದ್ರನಿಗೆ ಸಂಬಂಧಿಸಿದ ನೃತ್ಯವನ್ನು ಉತ್ತರ ಆಫ್ರಿಕ ಮುಂತಾದ ಕಡೆ ಅಭಿನಯಿಸುತ್ತಾರೆ. ಸೂರ್ಯ ಮುಂತಾದ ಖಗೋಳ ವಸ್ತುಗಳ ಬಗ್ಗೆ ಇರುವ ಗೌರವ, ಕೃತಜ್ಞತೆಗಳೇ ಈ ನೃತ್ಯಕ್ಕೆ ಪ್ರೇರಕವಾಗಿದೆ.

ವೃತ್ತಿ ನೃತ್ಯಗಳು : ಫಲವತ್ತಾದ ಬಯಲು ಪ್ರದೇಶಗಳಲ್ಲಿ ಮತ್ತು ನದೀತೀರದ ಪ್ರದೇಶಗಳಲ್ಲಿ ವಾಸಿಸಲು ಪ್ರಾರಂಭಿಸಿದಾಗಿನಿಂದಲೂ ಮನುಷ್ಯ ವ್ಯವಸಾಯವನ್ನು ಮಾಡಿ ಬದುಕಲು ಪ್ರಾರಂಭಿಸಿದ : ಪ್ರಾಣಿಗಳನ್ನು ಸಾಕಿದ. ಆ ತರಹದ ಬದುಕಿನ ಬಗ್ಗೆ ಇದ್ದ ಕುತೂಹಲ ಆತನ ನೃತ್ಯಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು. ಮಾಂತ್ರಿಕತೆಯನ್ನು ನಂಬಿದ ಆತ ನೃತ್ಯಮಾಡುವುದರಿಂದ ತನ್ನ ವ್ಯವಸಾಯ ಹುಲುಸಾಗುವುದೆಂದು ನಂಬಿದ. ಯಾವುದೇ ಒಂದು ದೇಶದಲ್ಲಿ ಕಾಣಬರುವ ಸುಗ್ಗಿ ಕುಣಿತ ತನ್ನ ಕ್ರಿಯೆಯಲ್ಲಿ ಉಳಿದ ದೇಶಗಳ ಸುಗ್ಗಿಕುಣಿತದೊಂದಿಗೆ ತಾದಾತ್ಮ್ಯ ಹೊಂದಿರುತ್ತದೆ. ಮರ ಕಡಿಯುವ ನೃತ್ಯ ಫ್ರಾನ್ಸ್, ಕರೇಲ್ಯ ಮತ್ತು ಸೈಬಿರಿಯದ ಕೆಲವು ಭಾಗಗಳಲ್ಲಿ ಕಾಣಬರುತ್ತವೆ. ಚಮ್ಮಾರರ ನೃತ್ಯಗಳು ಸ್ಕ್ಯಾಂಡಿನೇವಿಯ, ಪೋಲೆಂಡ್ ಮತ್ತು ಭಾರತದ ಉತ್ತರ ಪ್ರದೇಶ, ಪೋಲೆಂಡುಗಳಲ್ಲಿ ಕಂಡು ಬರುತ್ತದೆ. ಪಶು ಸಂಗೋಪನ ನೃತ್ಯ ಫಿನ್ಲೆಂಡ್ ಮತ್ತು ಉಕ್ರೇನ್‍ಗಳಲ್ಲಿ ಕಂಡುಬಂದರೆ, ಬತ್ತ ತುಂಬುವ ನೃತ್ಯಗಳು ಮಲಯ, ಚೀನ ಮುಂತಾದ ಕಡೆ ಇವೆ.

ಭಾರತದ ಸೌರಾಷ್ಟ್ರದಲ್ಲಿ ಟಿಪ್ಪನೀ ಎಂಬುದು ವೃತ್ತಿ ನೃತ್ಯಸಂಪ್ರದಾಯಕ್ಕೆ ಸೇರಿದುದಾಗಿದೆ. ಬಿಡುವಿನ ವೇಳೆಯಲ್ಲಿ ಕೆಲವು ಜಾತಿಯ ಹೆಣ್ಣು ಕೂಲಿ ಆಳುಗಳು ಕಟ್ಟಡಗಳಿಗೆ ಗಾರೆಗಚ್ಚನ್ನು ಹಾಕುವ ಮತ್ತು ಮುಗಿಸುವ ಸಂದರ್ಭದಲ್ಲಿ ಈ ನೃತ್ಯವನ್ನು ಮಾಡುತ್ತಾರೆ. ಪ್ರತಿ ಹೆಂಗಸೂ ಉದ್ದವಾದ ಹಿಡಿಯುಳ್ಳ ಮರದ ತುಂಡೊಂದನ್ನು (ದಂಸವನ್ನು) ಹಿಡಿದು ನೆಲವನ್ನು ಬಡಿಯುತ್ತಿರುವಾಗಲೇ ಹಾಡುಹಾಡುತ್ತ ಒಂದು ಬಗೆಯ ನೃತ್ಯ ಮಾಡುತ್ತಾಳೆ.

ದಿನ ಕಳೆದಂತೆ, ಬದುಕು ಹೆಚ್ಚು ಹೆಚ್ಚು ನಾಗರಿಕವಾದಂತೆ ಈ ಬಗೆಯ ನೃತ್ಯಗಳು ಕ್ಷೀಣಿಸುತ್ತಿವೆ. ಯೂರೋಪಿನ ಬಹುಪಾಲು ವೃತ್ತಿ ನೃತ್ಯಗಳು ಮಕ್ಕಳ ಆಟಗಳಾಗಿ ಪರಿವರ್ತನೆಗೊಂಡಿವೆ. ಪ್ರಾಣಿ ನೃತ್ಯಗಳು : ಆದಿಮಾನವ ಪ್ರಾಣಿಗಳನ್ನು ಪಕ್ಷಿಗಳನ್ನು ಮತ್ತು ಮೀನುಗಳನ್ನು ಪೂಜಿಸಿದ. ಅವುಗಳ ಚಲನೆಗಳನ್ನು ಅನುಕರಿಸುವುದರ ಮೂಲಕ ಅವುಗಳ ಶಕ್ತಿ, ಹಾರುವ ವೇಗ ಮತ್ತು ಕುತಂತ್ರಗಳನ್ನು ಅರಿತುಕೊಂಡು, ಅವನ್ನು ಸುಲಭವಾಗಿ ಹಿಡಿಯಲು ಸಾಧ್ಯವಾಗುತ್ತದೆ ಎಂದು ನಂಬಿದ. ಈ ಕಾರಣದಿಂದ ಅನೇಕ ಬಗೆಯ ಪ್ರಾಣಿನೃತ್ಯಗಳು ಅಸ್ತಿತ್ವಕ್ಕೆ ಬಂದವು. ಆಸ್ಟ್ರೇಲಿಯ, ಆಫ್ರಿಕ ಮತ್ತು ಅಮೆರಿಕಗಳ ಬುಡಕಟ್ಟುಗಳಲ್ಲಿ ಮೊಸಳೆ ನೃತ್ಯ, ಆಮೆ ನೃತ್ಯ ಮತ್ತು ಲೈರ್ ಹಕ್ಕಿಯ ನೃತ್ಯಗಳಿವೆ. ಉತ್ತರ ಅಮೆರಿಕದ ರೆಡ್ ಇಂಡಿಯನ್ನರು ಕರಡಿಗಳ, ಕತ್ತೆಕಿರುಬಗಳ ಮತ್ತು ನರಿಗಳ ಚಲನೆಗಳನ್ನು ಅನುಕರಿಸುತ್ತಾರೆ. ಭಾರತದಲ್ಲಿ ಮಯೂರ ನೃತ್ಯ, ಸರ್ಪ ನೃತ್ಯ ಮುಂತಾದ ಪ್ರಕಾರಗಳಿವೆ. ಜಾರ್ಜಿಯದ ಕೋಸ್ಯಾಕ್ ಜನಾಂಗದ ರಣಹದ್ದಿನ ನೃತ್ಯ ತುಂಬ ಕುತೂಹಲಕಾರಿಯಾಗಿದೆ. ಕೋಸ್ಯಾಕ್ ನೃತ್ಯಗಾರ ತನ್ನ ಹೆಬ್ಬೆರಳಿನ ತುದಿಯ ಮೇಲೆ ನಿಂತು ಅಭಿನಯಿಸುವ ನೃತ್ಯ ನೋಡುವವರಿಗೆ ರೋಮಾಂಚಕವಾಗಿರುತ್ತದೆ. ಬಹಳ ಹಿಂದೆ ಈ ಜನ ರಣಹದ್ದನ್ನು ಪೂಜಿಸುತ್ತಿದ್ದರು. ರಣಹದ್ದೊಂದು ತನಗೆ ಬಲಿಯಾಗುವ ಪ್ರಾಣಿಯನ್ನು ಸದೆಬಡಿಯುವ ಎಲ್ಲ ಬಗೆಯನ್ನೂ ಈ ನೃತ್ಯಕಾರ ಅಭಿನಯಿಸುತ್ತಾನೆ. ಅವನು ತನ್ನ ಹೆಬ್ಬೆರಳ ಮೇಲೆಯೇ ನಿಂತು, ಗಿರಿಗಿರನೆ ಸುತ್ತಿ, ತನ್ನ ಮುಂದಿರುವ ಖಡ್ಗವನ್ನೇ ತನಗೆ ಬಲಿಯಾಗುವ ಪ್ರಾಣಿಯೆಂದು ಭಾವಿಸಿ, ಅದರ ಮೇಲೆ ಎರಗುತ್ತಾನೆ. ಅನಂತರ ಮಂಡಿಗಳ ಮೇಲೆ ಕುಳಿತು ಹಲ್ಲಿನಿಂದ ಖಡ್ಗವನ್ನು ಕಚ್ಚಿ, ರಣಹದ್ದು ತನಗೆ ಬಲಿಯಾದ ಪ್ರಾಣಿಯನ್ನು ಹಿಡಿದು ಮೇಲಕ್ಕೆ ಹಾರುವಂತೆ, ಮೇಲಕ್ಕೆ ಚಂಗನೆ ನೆಗೆಯುತ್ತಾನೆ. ಹಂಗೇರಿಯನ್ನರಂತೆಯೇ ಕುದುರೆ ಸಾಕುವುದರಲ್ಲಿ ಪ್ರಸಿದ್ಧಿ ಹೊಂದಿದ ಕೋಸ್ಯಾಕ್ ಜನಾಂಗ ನೃತ್ಯಗಳಲ್ಲಿ ಕುದುರೆಯಂತೆ ನೆಗೆಯುವುದೂ, ದೌಡಾಯಿಸುವುದೂ ಉಂಟು.

ಸೌರಾಷ್ಟ್ರದಲ್ಲಿರುವ ಸಿದ್ಧಿ ಎಂಬ ಜನಾಂಗ ಧಮಾಲ್ ಎಂಬ ಪಕ್ಷಿಪ್ರಾಣಿಗಳಿಗೆ ಸಂಬಂಧಿಸಿದ ನೃತ್ಯವನ್ನು ಅಭಿನಯಿಸುತ್ತಾರೆ. ಧಮಾಲ್‍ನಲ್ಲಿ ವಕ್ರವಕ್ರವಾದ ಚಲನೆಯೇ ಹೆಚ್ಚು. ಅವರು ಕೆಲವು ಪ್ರಾಣಿಗಳ ಮತ್ತು ಪಕ್ಷಿಗಳ ಚಲನೆ, ಭಂಗಿ ಮತ್ತು ಧ್ವನಿಯನ್ನು ಅನುಕರಿಸುತ್ತಾರೆ. ಭಾರತದಲ್ಲಿ ಪೊರೋಜ ಎಂಬ ಆದಿ ವಾಸಿಗಳು ಒಂದು ದೊಡ್ಡ ಸಾಲಿನಲ್ಲಿ ನಿಂತು ಒಂದು ದೊಡ್ಡ ಹಾವಿನಂತೆ ಚಲಿಸುತ್ತಾರೆ. ಬೇಟೆಗಾರರ ಮತ್ತು ಬೆಸ್ತರ ನೃತ್ಯಗಳು : ಪ್ರಾಣಿಗಳು ನಡೆಯುವುದು, ಬೇಟೆಗಾಗಿ ನಿರೀಕ್ಷಿಸುವುದು, ವೇಗವಾಗಿ ಬಂದು ಹಾರಿ ಪ್ರಾಣಿಗಳನ್ನು ಕೊಲ್ಲುವುದು-ಈ ಕ್ರಿಯೆಗಳನ್ನು ಈ ನೃತ್ಯಗಳು ಒಳಗೊಳ್ಳುತ್ತವೆ. ಆಫ್ರಿಕದ ಮೂಲ ನಿವಾಸಿಗಳಲ್ಲಿ ಮಾತ್ರ ಪ್ರಪಂಚದ ಅನೇಕ ಬುಡಕಟ್ಟುಗಳಲ್ಲಿ ಈ ಬಗೆಯ ನೃತ್ಯಗಳನ್ನು ಕಾಣಬಹುದು. ಯೂರೋಪಿನಲ್ಲಿ ಒಂದು ಹೆಣ್ಣನ್ನು ಒಂದು ಗಂಡು ಅಟ್ಟಿಸಿಕೊಂಡು ಹೋಗುವುದರ ಮೂಲಕ ಇದನ್ನು ಅಭಿನಯಿಸುತ್ತಾರೆ. ಅಮೆರಿಕದ ಇಂಡಿಯನ್ನರಲ್ಲಿ ಜಿಂಕೆನೃತ್ಯ, ಬಿಲ್ಲುಬಾಣಗಳ ನೃತ್ಯ ಕಂಡುಬರುತ್ತವೆ. ಭಾರತದಲ್ಲಿ ಸಂತಾಲ ಆದಿವಾಸಿಗಳು ಷಿಕಾರ್ ಎಂಬ ನೃತ್ಯವನ್ನು ಅಭಿನಯಿಸುತ್ತಾರೆ. ಇದರಲ್ಲಿ ಅವರು ಕಾಡುಪ್ರಾಣಿಗಳ ಬೇಟೆಗೆ ಹೋಗುವುದನ್ನು ಮತ್ತು ಬೇಟೆಯೊಂದಿಗೆ ಹಿಂತಿರುಗುವುದನ್ನು ಅಭಿನಯಿಸುತ್ತಾರೆ. ಬೆಸ್ತರ ನೃತ್ಯಗಳಲ್ಲಿ ಕೈ ಮತ್ತು ತೋಳುಗಳು ಪ್ರಮುಖ ಪಾತ್ರವಹಿಸುತ್ತವೆ. ಹಗ್ಗದಿಂದ ಗಂಟುಗಳನ್ನು ಮಾಡುವುದು, ಬಲೆ ಹೆಣೆಯುವುದು ಮತ್ತು ಮೀನಿನ ಚಲನೆ-ಇವನ್ನು ಇದರಲ್ಲಿ ಅಭಿನಯಿಸಲಾಗುತ್ತದೆ. ಭಾರತ, ಫಿನ್ಲೆಂಡ್, ಕಪ್ಪು ಸಮುದ್ರ ಹಾಗೂ ಮೆಡಿಟರೇನಿಯನ್ ತೀರಪ್ರದೇಶ-ಮುಂತಾದ ಭಾಗಗಳಲ್ಲಿ ಈ ಬಗೆಯ ನೃತ್ಯ ಕಂಡುಬರುತ್ತದೆ. ದೋಣಿ ನೃತ್ಯ, ನಾವಿಕರ ನೃತ್ಯ ನ್ಯೂಜೀóಲೆಂಡ್ ಮತ್ತು ಇತರ ಕೆಲವು ದೇಶದಲ್ಲಿ ಪ್ರಚಾರದಲ್ಲಿವೆ.

ಪಢಾರ ಎಂಬ ನೃತ್ಯವನ್ನು ಸೌರಾಷ್ಟ್ರದ ಬೆಸ್ತರು ಅಭಿನಯಿಸುತ್ತಾರೆ. ಅವರು ದೋಣಿಯೊಂದರ ನಡೆಯನ್ನು ಅನುಕರಿಸುತ್ತ ಚಿಕ್ಕ ಕೋಲುಗಳನ್ನು ಬಡಿಯುತ್ತ ನೃತ್ಯ ಮಾಡುತ್ತಾರೆ.

ಯುದ್ಧ ಮತ್ತು ಆಯುಧಗಳ ನೃತ್ಯಗಳು : ಯುದ್ಧನೃತ್ಯಗಳು ಬಹುಪಾಲು ಯುದ್ಧಗಳನ್ನು ಅನುಕರಿಸುವುದರಿಂದ ಆವಿರ್ಭವಿಸಿದಂಥವು. ಇಂದಿಗೂ ಅನೇಕ ಆದಿವಾಸಿಗಳಲ್ಲಿ ಈ ನೃತ್ಯದ ಪ್ರಖರತೆಯನ್ನು ಕಾಣಬಹುದು. ನೃತ್ಯಕಾರರು ವೃತ್ತಾಕಾರವಾಗಿ ಒಂದೆಡೆ ಸೇರುವುದು ಅನಂತರ ಗುಂಪು ಒಡೆದು ಬೇರೆ ಬೇರೆಯಾಗಿ ಹೊಡೆದಾಡುವುದು-ಇಲ್ಲಿ ಕಂಡುಬರುತ್ತದೆ. ಗ್ರೀಸಿನ ಸೈನಿಕರ ನೃತ್ಯಗಳಲ್ಲಿ ಇಂದಿಗೂ ಯುದ್ಧದ ಕೆಚ್ಚನ್ನು ಕಾಣಬಹುದು.

ಕಚ್ವಿಘೋಡಿ ಎಂಬುದು ರಾಜಸ್ಥಾನದ ಗಂಡಸರು ಅಭಿನಯಿಸುವ ಒಂದು ನೃತ್ಯ. ಅಭಿನಯಕಾರರು ಬೊಂಬು ಮತ್ತು ಬಟ್ಟೆಗಳಿಂದ ಮಾಡಿದ ವೇಷದ ಕುದುರೆಗಳ ಮೇಲೆ ಕುಳಿತುಕೊಂಡು ಅಣಕು ಹೊಡೆದಾಟ ನಡೆಸುತ್ತಾರೆ. ಒರಿಸ್ಸದ ಅತಿ ಹಳೆಯ ಮತ್ತು ಜನಪ್ರಿಯ ನೃತ್ಯ ಪಯಕ. ಪಯಕ ಸೈನಿಕರು ಅಂಗಸಾಧನೆಗಾಗಿ ಪಡೆಯುತ್ತಿದ್ದ ಶಿಕ್ಷಣದಿಂದ ಇದು ಹುಟ್ಟಿದೆ. ಈ ನೃತ್ಯದಲ್ಲಿ ನೃತ್ಯಕಾರರು ಕತ್ತಿ ಮತ್ತು ಗುರಾಣಿಗಳನ್ನು ಹಿಡಿದು, ಅಣಕು ಹೋರಾಟದಲ್ಲಿ ತೊಡಗುತ್ತಾರೆ. ನೀಫದ ಆದಿವಾಸಿಗಳ ಆದಿಗಲೋಂಗ್ ಒಂದು ಯುದ್ಧನೃತ್ಯ. ಇದರಲ್ಲಿ ನೃತ್ಯಕಾರರು ಬರ್ಜಿಗಳನ್ನೂ ಗುರಾಣಿಗಳನ್ನೂ ಹಿಡಿದುಕೊಂಡು ಮಲ್ಲಯುದ್ಧದ ಗತಿಯನ್ನು ಮುಂದುವರಿಸುತ್ತಾರೆ.

ಆಯುಧಗಳ ನೃತ್ಯಗಳಲ್ಲಿ ಖಡ್ಗ ವಿಶೇಷವಾಗಿ ಬಳಕೆಯಾಗುತ್ತದೆ. ಬ್ರಿಟನ್ನಿನ ಮೋರಿಸ್ ನೃತ್ಯ ಮೂಲದಲ್ಲಿ ಅಲ್ಲಿನ ಖಡ್ಗನೃತ್ಯಗಳಿಂದಲೇ ಹುಟ್ಟಿದುದು ಎಂಬ ಮತವಿದೆ. ಪೂರ್ವಯೂರೋಪಿನ ಪಿರಿನೀಸ್ ಪರ್ವತಗಳ ನೃತ್ಯಕಾರರು ಮೋಹಕವಾದ ನೃತ್ಯವನ್ನು ಮಂಜಿನ ಕೊಡಲಿಗಳ ಮೇಲೆ ಅಭಿನಯಿಸುತ್ತಾರೆ. ಬಾಸ್ಕ್ ಮತ್ತು ಸ್ಲೋವ್ಕ ಪ್ರದೇಶಗಳ ನೃತ್ಯಗಳಲ್ಲಿ ನೃತ್ಯಕಾರರು ತಮ್ಮ ಗುಂಪಿನ ಯಜಮಾನನನ್ನು ಕತ್ತಿಯಿಂದ ಕೊಲ್ಲುವುದನ್ನು ಅಭಿನಯಿಸುವುದರ ಮೂಲಕ ನೃತ್ಯ ಮುಗಿಯುತ್ತದೆ.

ಭಾರತದಲ್ಲೂ ಕೆಲವು ಬಗೆಯ ಆಯುಧನೃತ್ಯಗಳಿವೆ. ಕೇರಳದ ನಾಯರ್ ಜನಾಂಗ ಅಭಿನಯಿಸುವ ವೆಳಕ್ಕಳಿ ಎಂಬ ನೃತ್ಯದಲ್ಲಿ ನೃತ್ಯಗಾರರು ಕತ್ತಿ ಮತ್ತು ಗುರಾಣಿಗಳನ್ನು ಬಳಸುತ್ತಾರೆ. ರಾಜಸ್ಥಾನದಲ್ಲಿ ತೇರತಾಲಿ ಎಂಬ ಹೆಂಗಸರ ನೃತ್ಯದಲ್ಲಿ ಕತ್ತಿಯ ಬಳಕೆ ಇದೆ. ಅವರು ಚಿಕ್ಕದಾದ ಒಂದು ಕತ್ತಿಯನ್ನು ಹಲ್ಲಿನಿಂದ ಕಚ್ಚಿಕೊಂಡು ಕುಣಿಯುತ್ತಾರೆ. ಮದುವೆಯ ನೃತ್ಯಗಳು : ಸಾಮಾಜಿಕ ನೃತ್ಯಗಳು ಮದುವೆಯ ಕಾಲಗಳಲ್ಲಿ ನಡೆಯುವುದು ಸರ್ವೇಸಾಮಾನ್ಯ. ಹಂಗರಿಯಲ್ಲಿ ವಧುನೃತ್ಯ ಮತ್ತು ಅಡಿಗೆಯವನ ನೃತ್ಯ ಎಂಬ ಬೇರೆ ಬೇರೆ ಪ್ರಕಾರಗಳಿವೆ.

ಗೆಳೆತನದ ನೃತ್ಯಗಳು : ಗೆಳೆತನವನ್ನು ಕುರಿತಂಥ ನೃತ್ಯಗಳು ಅಷ್ಟಾಗಿ ಕಂಡುಬರುವುದಿಲ್ಲ. ಅಮೆರಿಕದ ರೆಡ್ ಇಂಡಿಯನ್ನರ ನರಿಯ ಗೆಳೆತನ ಒಂದು ಪ್ರಸಿದ್ಧವಾದ ನೃತ್ಯ. ಪ್ರಣಯನೃತ್ಯಗಳು : ಗಂಡು ಹೆಣ್ಣಿಗೆ ಸಂಬಂಧಿಸಿದ ಬಗೆಬಗೆಯ ನೃತ್ಯಗಳು ಅನೇಕ ದೇಶಗಳಲ್ಲಿ ಅನೇಕ ತರಹದಲ್ಲಿವೆ. ಈ ಬಗೆಯ ನೃತ್ಯಗಳಲ್ಲಿ ಅರಸುವುದು, ಪಡೆಯುವುದು ಮತ್ತು ವಿರಹ ಸಾಮಾನ್ಯವಾಗಿರುತ್ತದೆ. ಇದರಲ್ಲಿ ಗಂಡು ಹೆಣ್ಣು ಕೂಡಿಯೇ ನೃತ್ಯವಾಡುತ್ತಾರೆ. ಪ್ರೇಮಿಗಳು ಒಟ್ಟಿಗೆ ಸೇರುವುದು, ಅಪ್ಪಿಕೊಳ್ಳುವುದು ಮತ್ತು ಸಂಕೀರ್ಣ ಚಲನೆಗಳಿಂದ ನೃತ್ಯಮಾಡುವುದು-ಇದರ ಲಕ್ಷಣಗಳು. ಕೇವಲ ಗಂಡಸೇ ನೃತ್ಯಮಾಡುವಾಗ ಹೆಣ್ಣಿನ ಮುಂದೆ ನಿಂತು ಅತ್ಯಾಕರ್ಷಕವಾಗಿ ಕುಣಿಯುತ್ತಾನೆ. ಸ್ಪೇನಿನಲ್ಲಿ ಹೆಂಗಸು ತನ್ನ ಸೌಂದರ್ಯವನ್ನು ಪ್ರದರ್ಶಿಸುವುದರ ಮೂಲಕ ಈ ನೃತ್ಯಮಾಡುತ್ತಾಳೆ. ಲಿತೂಏನೀಯದ ನೃತ್ಯದಲ್ಲಿ ಪ್ರಣಯಿಗಳು ತಮ್ಮ ಟೋಪಿಗಳನ್ನು ಅದಲು ಬದಲು ಮಾಡಿಕೊಳ್ಳುತ್ತಾರೆ.

ಯಾವುದೇ ಒಂದು ಬಗೆಯ ಜನಪದ ನೃತ್ಯವನ್ನು ಜಗತ್ತಿನಾದ್ಯಂತ ಕಾಣಲು ಸಾಧ್ಯವಾಗುವುದಿಲ್ಲ. ಅದಕ್ಕೆ ಆಯಾ ಪ್ರದೇಶಗಳ ಮಿತಿ ಇರುತ್ತದೆ. ಜನಪದ ನಿರತವಾಯಿತು, ಹೇಗೆ ಯುದ್ಧ ಮಾಡಿತು-ಮುಂತಾದ ವಿಷಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಭಾರತದಂಥ ಪ್ರಗತಿ ಹೊಂದುತ್ತಿರುವ ಹಾಗೂ ಪ್ರಗತಿ ಹೊಂದದೇ ಇರುವ ಇತರ ದೇಶಗಳಲ್ಲಿ ಜನಪದ ನೃತ್ಯಗಳು ತಮ್ಮ ಮೂಲ ಉದ್ದೇಶವನ್ನು ಇನ್ನೂ ಉಳಿಸಿಕೊಂಡಿರುವ ಸಾಧ್ಯತೆ ಹೆಚ್ಚು ಇದೆ. ಬದುಕು ಹೆಚ್ಚು ನಾಗರಿಕವಾದಂತೆಲ್ಲ ಜನಪದ ನೃತ್ಯಗಳ ಅಸ್ತಿತ್ವ ಕಡಿಮೆಯಾಗಬಹುದೆಂಬ ಶಂಕೆಯುಂಟಾಗುತ್ತದೆ. ಆದರೆ, ಜನತೆ ಇಚ್ಛೆಪಡುವಲ್ಲಿ, ತಮ್ಮ ಹಿಂದಿನ ಸಂಪ್ರದಾಯಗಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡಲ್ಲಿ ಜನಪದ ನೃತ್ಯವನ್ನು ಮೂಲದಲ್ಲಿ ಇದ್ದಹಾಗೆಯೇ ಉಳಿಸಿಕೊಳ್ಳುವ ಎಲ್ಲ ಸಾಧ್ಯತೆಯೂ ಇದೆ. (ಎಚ್.ಆರ್.ಡಿಒ.)

ಕರ್ನಾಟಕದ ಜನಪದ ನೃತ್ಯಗಳನ್ನು ಪ್ರಾದೇಶಿಕವಾಗಿ ಹೀಗೆ ವರ್ಗೀಕರಿಸಬಹುದು-ಉತ್ತರ ಕರ್ನಾಟಕ; ಕರಡಿ ಮಜಲು, ಡೊಳ್ಳು ಕುಣಿತ, ಗೊಂದಲಿಗರ ಮೇಳ, ಕೋಲಾಟ. ಜೊಗಿತೀರ ಕುಣಿತ, ವಾಘೇ ಮುರುಳಿ, ಭೂತೇರು ಕುಣಿತ, ದಟ್ಟಿ ಕುಣಿತ, ಕೀಲು ಕುದುರೆ ನೃತ್ಯ. ದಕ್ಷಿಣ ಕರ್ನಾಟಕ : ವೀರಗಾಸೆ ಕುಣಿತ, ಸೋಮನ ಕುಣಿತ, ಲಿಂಗದ ಬೀರರ ಕುಣಿತ, ಗುಡ್ಡರ ಕುಣಿತ, ರಂಗದ ಕುಣಿತ, ಗಾರುಡಿ ಕುಣಿತ, ಬೀಸು ಕಂಸಾಳೆ ಕುಣಿತ, ಭಾಗವಂತಿಗೆ ಮೇಳ, ಕರಪಾಲ ಮೇಳ, ಚೌಡಿಕೆ ಮೇಳ, ಪಟಕುಣಿತ, ಪೂಜಾಕುಣಿತ, ಚಿಟ್‍ಮೇಳ, ಗೊರವರ ಕುಣಿತ, ನಂದಿಕೋಲು ಕುಣಿತ, ಕೋಲಾಟ, ಈರಮಕ್ಕಳ ಕುಣಿತ, ಫಲಕದ ಕುಣಿತ, ಕಾಡೆಮ್ಮೆ ದೊಡ್ಡಿ ಕುಣಿತ, ಸೋಲಿಗ ಕುಣಿತ. ಕೊಡಗು : ಹುತ್ತರಿ ಕುಣಿತ, ಬಳುಕಾಟ, ಉಮ್ಮತ್ತಾಟ, ಕೋಲಾಟ.

ದಕ್ಷಿಣ ಕನ್ನಡ ಜಿಲ್ಲೆ : ದುಡಿ ಕುಣಿತ, ಡೋಲಿನ ಕುಣಿತ, ವೈದ್ಯನೃತ್ಯ, ಭೂತನೃತ್ಯ, ಹೋಲಿನೃತ್ಯ, ಆಟಿಕೊಡೆಂಜ, ಕೋರತನಿಯ, ಕೋಲಾಟ.

ಉತ್ತರ ಕನ್ನಡ ಜಿಲ್ಲೆ : ಹಾಲಕ್ಕಿ ಗೌಡರ ಸುಗ್ಗಿ ಕುಣಿತ, ಕೋಲಾಟ, ಕರಡಿ ಕುಣಿತ, ಸಿಂಹ ನೃತ್ಯ, ಹೂವಿನ ಮಕ್ಕಳ ಕುಣಿತ, ಗುಮ್ಮಟೆ ವಾದ್ಯದೊಡನೆ ಕುಡುಬಿಗಳ ನೃತ್ಯ, ಸಿದ್ಧಿಯರ ನೃತ್ಯ.

ಸಾಹಿತ್ಯ ಪ್ರಧಾನವಾದ ಯಕ್ಷಗಾನ ಬಯಲಾಟಗಳಲ್ಲೂ ಕರಪಾಲಮೇಳ, ಚೌಡಿಕೆ ಮೇಳ, ಜೋಗಿಗಳ ಮೇಳ ಮುಂತಾದುವುಗಳಲ್ಲೂ ನೃತ್ಯ ಪ್ರಮುಖವಾಗಿಯೇ ಬರುತ್ತದೆ. ಉತ್ತರ ಕರ್ನಾಟಕದ ಗೊಂದಲಿಗರ ಮೇಳ ಕಥಾಪ್ರಧಾನವಾದುದು. ಕರಪಾಲ ಚೌಡಿಕೆಮೇಳಗಳಂತೆ ಸಾಹಿತ್ಯ, ಸಂಗೀತ, ಕುಣಿತಗಳು ಇಲ್ಲಿ ಮುಪ್ಪುರಿಗೊಂಡಿರುತ್ತವೆ. ಕಥಾನಿರೂಪಣೆ, ನಡುವೆ ಹಾಡು, ಕುಣಿತ, ಸಮಗ್ರರಾತ್ರಿ ಜನರ ಆಸಕ್ತಿಯನ್ನು ಹಿಡಿದಿಡಬೇಕಾದ ಹೊಣೆಗಾರಿಕೆ ಈ ಕಲೆಗಳದು. ಆದುದರಿಂದಲೇ ಕಥಾಮಾಧ್ಯಮ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಯಕ್ಷಗಾನ ಬಯಲಾಟಗಳು, ತೊಗಲುಬೊಂಬೆಯಾಟ, ಸೂತ್ರದ ಗೊಂಬೆಯಾಟ, ಶ್ರೀಕೃಷ್ಣಪಾರಿಜಾತ, ರಾಧಾನಾಟಕ, ಸಂಗ್ಯಾ ಬಾಳ್ಯ ಮುಂತಾದ ಮೇಳಗಳಲ್ಲೂ ನೃತ್ಯ ಮತ್ತು ಸಂಗೀತ ಕಥೆಗೆ ಅಧೀನ. ಚಿತ್ರ, ಶಿಲ್ಪ, ಸಂಗೀತ ಸಾಹಿತ್ಯ, ನೃತ್ಯ-ಹೀಗೆ ಲಲಿತಕಲೆಗಳೆಲ್ಲ ಕೂಡಿ ಬರುವ ಜನಪದ ನಾಟಕಗಳು ತಮ್ಮದೇ ಆದ ಪ್ರತ್ಯೇಕ ವಿಭಜನೆಗೆ ಒಳಪಡಬೇಕು. ಇಲ್ಲಿನ ಬಣ್ಣಗಾರಿಕೆಯಲ್ಲಿ ಜನಪದ ಚಿತ್ರಕಲೆಯ ಶ್ರೇಷ್ಠತೆಯನ್ನು ಗುರುತಿಸಬಹುದು. ವೇಷಧಾರಿಗಳು ವಿವಿಧ ವರ್ಣಗಳಲ್ಲಿ ತಮ್ಮ ಮುಖವನ್ನು ಅಲಂಕರಿಸಿಕೊಳ್ಳುತ್ತಾರೆ. ದೈತ್ಯ ಪಾತ್ರಗಳು, ರಾಜಪಾತ್ರಗಳು, ಸ್ತ್ರೀಪಾತ್ರಗಳು, ಬೇರೆ ಬೇರೆ ರೀತಿಯ ಅಲಂಕರಣವನ್ನೇ ಅನುಸರಿಸುವುದು ಕಾಣಬರುತ್ತದೆ. ಘೋರಪಾತ್ರಗಳಲ್ಲಿ ಕೆಂಪು ಬಣ್ಣವನ್ನು ಹೆಚ್ಚಾಗಿ ಬಳಸಲಾಗುತ್ತದೆ. ರಾಜಪಾತ್ರಗಳಲ್ಲಿ ಹಳದಿ ಪ್ರಮುಖ ವರ್ಣ. ಈ ಪ್ರಧಾನ ವರ್ಣಗಳ ಜೊತೆಗೆ ಘೋರಪಾತ್ರಗಳ ಮುಖ ಹೆಚ್ಚು ಭಯಂಕರವಾಗುವಂತೆ ಮೂಡಲಪಾಯದಲ್ಲಿ ಕಣ್ಣು, ಮೂಗು, ಬಾಯಿ ಮುಂತಾದ ಕಡೆಗಳಲ್ಲಿ ಕಪ್ಪು ಮತ್ತು ಬಿಳಿಯ ಬಣ್ಣಗಳನ್ನು ಬಳಸಿ ಚಿಕ್ಕೆಗಳನ್ನಿಡಲಾಗುತ್ತದೆ. ಅತ್ಯಂತ ಕಲಾತ್ಮಕವಾದ ಈ ಬಣ್ಣಗಾರಿಕೆ ತನ್ನ ಉನ್ನತಿಯನ್ನು ಸಾಧಿಸಿರುವುದು ತೊಗಲು ಗೊಂಬೆ ಮತ್ತು ಸೂತ್ರದ ಗೊಂಬೆಗಳಲ್ಲಿ. ತೊಗಲುಗೊಂಬೆಗಳಂತೂ ಜನಪದ ಚಿತ್ರಕಲೆಯ ಅತ್ಯುತ್ತಮ ಮಾದರಿಗಳು. ಅವುಗಳ ಪ್ರದರ್ಶನದಲ್ಲಿ ಮುಖ್ಯ ವರ್ಣಗಳೇ ಎದ್ದು ತೋರಬೇಕಾದುದರಿಂದ ಸಮಗ್ರ ಶರೀರದಲ್ಲಿ ಚಿತ್ರದ ಕುಸುರಿ ಕೆಲಸ ನಡೆದಿರುತ್ತದೆ. ಗೊಂಬೆಗಳನ್ನು ಮಾಡುವುದರಲ್ಲಿ ಕಿರೀಟ, ಭುಜಕೀರ್ತಿ, ಎದೆಹಾರ, ವೀರಗಾಸೆ, ನಡುಪಟ್ಟಿ-ಮುಂತಾದವುಗಳ ರಚನೆಯಲ್ಲಿ ಜನಪದ ಶಿಲ್ಪಕಲೆಯ ಅಪೂರ್ವಸಿದ್ಧಿಯನ್ನು ಕಾಣಬಹುದು.

ಜನಪದ ನಾಟಕಗಳ ಸಂಗೀತ, ಸಾಹಿತ್ಯ, ಹಾಗೂ ಇತರ ಅಂಶಗಳಂತೆಯೇ ನೃತ್ಯವೂ ಗಣ್ಯವಾದುದೇ. ದೈತ್ಯಪಾತ್ರಗಳ ರೌದ್ರನೃತ್ಯ. ಸ್ತ್ರೀಪಾತ್ರಗಳ ಲಲಿತ ನೃತ್ಯ. ರಾಜಪಾತ್ರಗಳ ಗಂಭೀರನೃತ್ಯ ಇವು ಮೂಡಲ ಪಾಯದಲ್ಲಿ ಅಪಾರ ವೈವಿಧ್ಯವನ್ನು ಸಾಧಿಸಿಕೊಂಡಿದೆ. ದಕ್ಷಿಣ ಕನ್ನಡದ ತೆಂಕತಿಟ್ಟು ಬಡಗತಿಟ್ಟು, ಉತ್ತರ ಕರ್ನಾಟಕದ ದೊಡ್ಡಾಟ, ದಕ್ಷಿಣ ಕರ್ನಾಟಕದ ಮೂಡಲಪಾಯ, ಘಟ್ಟದ ಕೋರೆ ಯಕ್ಷಗಾನ ಸಂಪ್ರದಾಯಗಳ ಮೂಲಭೂತ ಗುಣ ಒಂದೇ ಆದರೂ ನೃತ್ಯದಲ್ಲಿ ಸಾಕಷ್ಟು ವೈವಿಧ್ಯ ಕಂಡುಬರುತ್ತದೆ. ತೆಂಕತಿಟ್ಟಿನ ತೀವ್ರವೇಗದ ಸುತ್ತು ಹಾಕುವ ವೈಖರಿ, ಬಡಗತಿಟ್ಟಿನ ಮಂಡಿಯಸುತ್ತು. ಮೂಡಲಪಾಯದ ಉಡಂಗ್ ಆಯಾ ಕಲೆಗಳಿಗೆ ಮಾತ್ರ ಮೀಸಲಾದುವು. ಮೂಡಲಪಾಯದ ಸ್ತ್ರೀಪಾತ್ರ ಕುಳಿತ ಭಂಗಿಯಲ್ಲಿ ನೃತ್ಯವನ್ನು ಆರಂಭಿಸಿ ಕ್ರಮೇಣ ಮೇಲೆದ್ದು ನರ್ತಿಸ ತೊಡಗಿದರೆ, ಪಡುವಲಪಾಯದ ಸ್ತ್ರೀಪಾತ್ರಗಳು ನೇರವಾಗಿಯೇ ನೃತ್ಯವನ್ನು ಆರಂಭಿಸುತ್ತವೆ. ಇಂಥ ಕಥಾಪ್ರಧಾನ ನೃತ್ಯಗಳನ್ನು ಬಿಟ್ಟರೆ ಉಳಿದ ಕಲೆಗಳ ಸಾಲಿನಲ್ಲಿ ಉತ್ತರ ಕರ್ನಾಟಕದ ಕರಡಿಮಜಲು ಜಗ್ಗಲಿಗೆ ಮೇಳ, ತಮಟೆ ಮೇಳ ಕೂಡ ಪ್ರತ್ಯೇಕ ವರ್ಗೀಕರಣಕ್ಕೆ ಒಳಪಡುತ್ತದೆ. ಅಲ್ಲಿ ಕುಣಿತ ಗೌಣ, ಇಲ್ಲವೇ ಇಲ್ಲ ಎನ್ನಬಹುದು. ಕರಡೆ, ಸಮ್ಮೇಳ ಜಗ್ಗಲಿಗೆ ಮೇಳ, ತಮಟೆ ಮೇಳ ವಾದ್ಯವೈಖರಿಯನ್ನು ಮೆರೆಯುವುದೇ ಇಲ್ಲಿನ ವೈಶಿಷ್ಟ್ಯ. ಇಷ್ಟು ಹೊರತು, ಇನ್ನುಳಿದ ಕಲೆಗಳೆಲ್ಲ ಪ್ರಧಾನವಾಗಿ ಕುಣಿತಗಳು; ಇಲ್ಲಿ ಕೆಲವು ಕಡೆ ಸಾಹಿತ್ಯದ ಹಿನ್ನೆಲೆ ಬಂದರೂ ಅದು ಪ್ರಮುಖವಲ್ಲ.

ಕರ್ನಾಟಕದ ಜನಪದ ನೃತ್ಯಗಳಲ್ಲಿ ಕೋಲಾಟ ಅತ್ಯಂತ ಜನಪ್ರಿಯವಾದುದು. ನಾಡಿನ ಎಲ್ಲ ಕಡೆಗಳಲ್ಲೂ ಕಾಣಬರುವ ಏಕಮಾತ್ರ ಕಲೆಯಿದು. ಉಳಿದುವು ಪ್ರಾದೇಶಿಕ ಹಿನ್ನೆಲೆಯಲ್ಲಿ ಬರುತ್ತವೆ. ಕೋಲಾಟಕ್ಕೆ ಹೆಸರಾದ ಜನಾಂಗ ಕಾಡುಗೊಲ್ಲರದು. ಇವರ ಗೆಜ್ಜೆಯ ಕೋಲಾಟ ಅತ್ಯಂತ ಪ್ರಾಚೀನವಾದುದು. ಕೋಲಾಟಗಳಲ್ಲಿ ಹತ್ತಾರು ಬಗೆಗಳಿರುವಂತೆಯೇ ಸಾಕಷ್ಟು ಪ್ರಾದೇಶಿಕ ವೈವಿಧ್ಯವೂ ಕಾಣಬರುತ್ತದೆ. ದಕ್ಷಿಣ ಕರ್ನಾಟಕದ ಕೋಲಾಟದ ತಂಡಗಳಲ್ಲಿ ಯಾವ ವಿಶಿಷ್ಟ ರೀತಿಯ ವೇಷಭೂಷಣವೂ ಕಾಣಬರುವುದಿಲ್ಲ. ಉತ್ತರ ಕರ್ನಾಟಕಕ್ಕೂ ಈ ಮಾತು ಅನ್ವಯಿಸುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಗೌಡರ ಸುಗ್ಗಿಯ ಕುಣಿತ ದಕ್ಷಿಣ ಕನ್ನಡ ಜಿಲ್ಲೆಯ ಮರಾಟಿ ನೃತ್ಯಗಳಲ್ಲಿ ಕೋಲಾಟದ ವೈವಿಧ್ಯದಂತೆಯೇ ಆಕರ್ಷಕ ವೇಷಗಾರಿಕೆಯೂ ತೋರಿಬರುತ್ತದೆ. ಹಾಲಕ್ಕಿಗೌಡರು ತಮ್ಮ ಕುಣಿತದಲ್ಲಿ ತಲೆಗೆ ಕಟ್ಟುವ ಬಣ್ಣಬಣ್ಣದ ತುರಾಯಿ ಮೋಹಕವಾದುದು. ಮರಾಟಿ ನೃತ್ಯದಲ್ಲಿ ತಲೆಗೆ ರುಮಾಲು, ನಿಲುವಂಗಿ, ಕಚ್ಚೆಯ ಪಂಚೆ, ನಡುವಿಗೆ ಹಳದಿಯ ವಸ್ತ್ರ-ಇವು ಗಮನಾರ್ಹ. ಕೊಡಗಿನ ಹುತ್ತರಿ ಕುಣಿತದಲ್ಲಿ ಕೋಲಾಟದ ಪಾತ್ರವೂ ಪ್ರಧಾನವಾದುದೇ. ಕೊಡವರ ಸಾಂಪ್ರದಾಯಿಕ ರೀತಿಯ ವೇಷಭೂಷಣ ಇಲ್ಲಿನ ಒಂದು ವೈವಿಧ್ಯ ಎನ್ನಬಹುದು. ಬಿಳಿಯ ಪಾಯಿಜಾಮ, ಕರಿಯ ನಿಲುವಂಗಿ, ನಡುವಿಗೆ ಕೆಂಪು ಅಥವಾ ಬಿಳಿಯ ನಡುಪಟ್ಟಿ, ಸೊಂಟಕ್ಕೆ ಪೀಚುಕತ್ತಿ, ತಲೆಯ ಮೇಲೆ ರುಮಾಲು ಇವುಗಳಿಂದ ಅಲಂಕೃತರಾಗಿರುವವರು ರಂಗಕ್ಕೆ ಇಳಿಯುತ್ತಾರೆ. ಕೊಡವರು ಬಳಸುವ ಕೋಲುಗಳು ಉದ್ದವಾಗಿರುತ್ತವೆ. ಎರಡು ಮೂರು ಅಡಿ ಉದ್ದದ ಬೆರಳುಗಾತ್ರದ ಜೋಡಿಬೆತ್ತವನ್ನು ಇಲ್ಲಿ ಬಳಸಲಾಗುತ್ತದೆ. ಹಾಲಕ್ಕಿಗೌಡರ ಕುಣಿತ, ಹುತ್ತರಿ ಕುಣಿತಗಳಲ್ಲಿ ಕೆಲವು ವಾದ್ಯಗಳನ್ನು ಹಿನ್ನೆಲೆಗೆ ಬಳಸಲಾಗುವುದು. ಇವು ಪ್ರಧಾನವಾಗಿ ಕೋಲಾಟಗಳಲ್ಲ. ಕೋಲಾಟಗಳಲ್ಲಿ ಕೋಲಿನ ಕಣಿಕಣಿನಾದವೇ ಕಾಲಗೆಜ್ಜೆಯ ಜಣತ್ಕಾರವೇ ವಾದ್ಯದ ಪರಿಣಾಮವನ್ನು ತರುತ್ತವೆ. ಕುಣಿತದ ವೈಖರಿ, ತಾಳದ ಗತ್ತು, ಕೋಲಾಟದ ಪದಗಳ ವೈವಿಧ್ಯ ಅತ್ಯಂತ ಗಮನಾರ್ಹವಾದುವು.

ಕೋಲಾಟದಂತೆಯೇ ಲೌಕಿಕ ಕಲೆಯಾಗಿ ಉಳಿದು ಬಂದಿರುವ ಚಿಟ್ ಮೇಳ ಹಾಸನ ಹಾಗೂ ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಕರಡೆ ಮೇಳದಂತೆ ವಾದ್ಯಗಳ ವೈಭವ ಇಲ್ಲಿಯೂ ಪ್ರಮುಖವಾದುದೇ. ಕರಡೆ, ಸಮೇಳ, ಢುಮ್ಕಿ, ಮೌರಿ ಮೊದಲಾದ ವಾದ್ಯಗಳನ್ನು ಇಲ್ಲಿಯೂ ಬಳಸಲಾಗುತ್ತದೆ. ಆದರೆ ಇಲ್ಲಿ ನೃತ್ಯದ ಪಾತ್ರ ದೊಡ್ಡದು. ಯಕ್ಷಗಾನದ ವಿವಿಧ ಮಟ್ಟುಗಳನ್ನು ಮೌರಿಯಲ್ಲಿ ನುಡಿಸುವ ತಂಡದ ನಾಯಕ, ವಿವಿಧ ವಾದ್ಯಗಳ ಗತ್ತಿನಲ್ಲಿ ಕರಡೆ, ಸಮ್ಮೇಳ, ಡುಮ್ಕಿಗಳ ವಾದ್ಯಪಟುಗಳನ್ನು ಕುಣಿಸುತ್ತಾನೆ. ಈ ವಾದ್ಯಗಳನ್ನು ಬಡಿಯುತ್ತ ಬಯಲಾಟದ ನೃತ್ಯಗಳನ್ನೇ ಈ ಕಲಾವಿದರು ಪ್ರದರ್ಶಿಸುತ್ತಾರೆ. ಜಲ್ಲರಿಯನ್ನು ಬಡಿಯುವ ಮತ್ತೊಬ್ಬ ಕಲಾವಿದ ಮೃದು ನೃತ್ಯವನ್ನು ಪ್ರದರ್ಶಿಸುತ್ತ ಇವೆ ನಡುವೆ ಅತ್ತಿಂದಿತ್ತ ಚಲಿಸುತ್ತ ಆ ಕಲೆಗೆ ಇನ್ನಷ್ಟು ಆಕರ್ಷಣೆಯನ್ನು ತರುತ್ತಾನೆ. ಬಯಲಾಟ ದೊಡ್ಡ ಮೇಳ. ಅದೇ ಮಟ್ಟುಗಳಿಗೆ ಇಲ್ಲಿ ಕುಣಿತಗಳು ನಡೆಯುವುದರಿಂದ ಇದು ಚಿಟ್ ಮೇಳ ಆಗಿರಬಹುದು. ಚಿಟ್ ಎಂದರೆ ಕಿರಿದು. ಚಿಕ್ಕದು ಎಂಬ ಅರ್ಥದಲ್ಲಿ ಈ ಮೇಳದ ಹೆಸರು ಉಳಿದು ಬಂದಿರಬೇಕು.

ಈ ಲೌಕಿಕ ಕಲೆಗಳನ್ನು ಬಿಟ್ಟರೆ ಉಳಿದಲ್ಲೆಲ್ಲ ಜನಪದ ನೃತ್ಯಗಳೂ ಒಂದಲ್ಲ ಒಂದು ವಿಧದಲ್ಲಿ ಧಾರ್ಮಿಕ ಸಂಬಂಧವನ್ನು ಉಳಿಸಿಕೊಂಡೇ ಬಂದಿವೆ. ವೀರಗಾಸೆ ಕುಣಿತ, ಶೈವ ಸಂಪ್ರದಾಯದ ಕುಣಿತ : ವೀರಭದ್ರನ ಖಡ್ಗವನ್ನು ಹೇಳುತ್ತ ನಾಲ್ಕಾರು ಮಂದಿ ಕರಡೆಯ ಹಾಗೂ ಇತರ ವಾದ್ಯಗಳ ಗತ್ತಿಗೆ ನರ್ತಿಸುತ್ತಾರೆ. ಕುಣಿತ, ಅನಂತರ ಕರಡೆಯನ್ನು ಬಡಿಯುವ ಮುಂದಾಳು ವೀರಭದ್ರನ ಅವತ್ತಾರೆ. ಕುಣಿತ, ಅನಂತರ ಕರಡೆಯನ್ನು ಬಡಿಯುವ ಮುಂದಾಳು ವೀರಭದ್ರನ ಅವತಾರದ ಹಿನ್ನೆಲೆಯನ್ನು ಬಣ್ಣಿಸುವುದು ಮತ್ತೆ ಕುಣಿತ-ಹೀಗೆ ಸಾಗುವ ವೀರಗಾಸೆ ಕುಣಿತ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನಪ್ರಿಯವಾಗಿದೆ. ಇದೇ ಹಿನ್ನೆಲೆಯಲ್ಲಿ ಬರುವ ಲಿಂಗದ ಬೀರರ ಉತ್ತರ ಕರ್ನಾಟಕದ ಪುರವಂತರ ಕುಣಿತ ಸಾಮೂಹಿಕ ನೃತ್ಯವಲ್ಲ. ಇಲ್ಲಿ ಒಬ್ಬ ಅಥವಾ ಇಬ್ಬರು ವೀರಭದ್ರನ ಬಿರುದುಗಳನ್ನು ಧರಿಸಿ ಕುಣಿಯುತ್ತಾರೆ. ಒಬ್ಬರು ಖಡ್ಗ ಹೇಳುವುದು ಮತ್ತೊಬ್ಬರು ಲಾಂಛನಗಳನ್ನು ಧರಿಸಿ ಭಲರೇ ವೀರ ಎಂದು ಸುತ್ತಲೂ ಕುಣಿಯುವುದು ಇಲ್ಲಿನ ವೈಶಿಷ್ಟ್ಯ. ತಲೆಗೆ ಚಾಮರ, ನೂರೊಂದು ಲಿಂಗಗಳು, ಕೊರಳಿಗೆ ರುದ್ರಾಕ್ಷಿ, ಮೈಮೇಲೆ ಕಾವಿಯ ನಿಲುವಂಗಿ, ಕಾವಿಯ ಇಜಾರ, ದಕ್ಷಬ್ರಹ್ಮನ ಶಿರಸ್ಸು, ಸಿಂಹಲಲಾಟ ಮುಂತಾದ ಹಿತ್ತಾಳೆಯ ಬಿರುದುಗಳನ್ನು ಧರಿಸಲಾಗುತ್ತದೆ. ಕಾಲಿಗೆ ಗಗ್ಗರ ಮತ್ತು ಜಂಗುಗಳನ್ನು, ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಎದೆಗೆ ಅಂಟಿದಂತೆ ವೀರಭದ್ರನ ಹಲಗೆ ಮುಂತಾದುವನ್ನು ಧರಿಸಿ ಕುಣಿಯಲಾಗುತ್ತದೆ. ನಡುವಿಗೆ ಧರಿಸುವ ಹಿತ್ತಾಳೆ, ಶಿರಸ್ಸುಗಳನ್ನು ರುಂಡಮಾಲೆ ಎನ್ನಲಾಗುತ್ತದೆ. ನಮ್ಮ ರುದ್ರ ನೃತ್ಯಗಳಲ್ಲಿ ಲಿಂಗದ ಬೀರರ ಕುಣಿತವೂ ಒಂದು. ದೇವರ ಉತ್ಸವಗಳಲ್ಲಿ, ಮೆರವಣಿಗೆಗಳಲ್ಲಿ, ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಈ ನೃತ್ಯವನ್ನು ಏರ್ಪಡಿಸಲಾಗುತ್ತದೆ. ಬಯಲುಸೀಮೆಯ ಎಲ್ಲ ಕಡೆಗಳಲ್ಲೂ ಈ ನೃತ್ಯ ಕಾಣಬರುತ್ತದೆ.

ಶೈವಮೂಲದ ನೃತ್ಯಗಳಲ್ಲಿ ನಂದಿಕೋಲು ಕುಣಿತವೂ ಪ್ರಸಿದ್ಧವಾದುದು. ನಂದಿಯ ಮೂರ್ತಿಯನ್ನೂ ಹಿತ್ತಾಳೆಯ ಬಿರುದಾವಳಿಗಳನ್ನೂ ಗಗ್ಗರ ಬಳೆಗಳನ್ನೂ ಬಣ್ಣದ ವಸ್ತ್ರಗಳನ್ನೂ ಬಳಸಿ ಅಲಂಕರಿಸಿದ ಹತ್ತು ಹದಿನೈದು ಮಾರು ಉದ್ದದ ಭಾರವಾದ ಬಿದಿರುಗಳುಗಳನ್ನು ನಂದಿಕೋಲು ಎಂದು ಕರೆಯಲಾಗುತ್ತದೆ. ನಡುವಿಗೆ ಕಟ್ಟಿದ ಒಂದು ಸಣ್ಣ ಚೀಲದಲ್ಲಿ ಈ ಕೋಲಿನ ತಳವನ್ನು ಕೂರಿಸಿ ತಮ್ಮಟೆಯ ಗತ್ತಿಗೆ ಕುಣಿಯುವ ಸಾಹಸ ಮೆಚ್ಚುವಂತಿರುತ್ತದೆ. ಅತ್ಯಂತ ಕಷ್ಟಸಾಧ್ಯವಾದ ಈ ನೃತ್ಯ ದೇವರ ಉತ್ಸವಗಳಲ್ಲಿ ಮೆರವಣಿಗೆಯ ಮುಂದೆ ಸಾಗುತ್ತದೆ. ಭಾರವಾದ ಈ ನಂದಿಕೋಲನ್ನು ಹಿಡಿತಕ್ಕೆ ತೆಗೆದುಕೊಂಡು ಕುಣಿಯುವುದರ ಜೊತೆಗೆ ಹೆಗಲ ಮೇಲೆ ಒಬ್ಬೊಬ್ಬರನ್ನು ನಿಲ್ಲಿಸಿಕೊಂಡು ತಮ್ಮ ಸಾಹಸವನ್ನು ಪ್ರದರ್ಶಿಸುವ ಕಲಿಗಳೂ ಉಂಟು. ಮೈಸೂರು ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಬೀಸು ಕಂಸಾಳೆ ನೃತ್ಯವೂ ಶೈವಮೂಲಕ್ಕೆ ಸಂಬಂಧಪಡುತ್ತದೆ. ಮಲೆಯ ಮಾದೇಶ್ವರರ ಆರಾಧಕರಾದ ದೇವರ ಗುಡ್ಡರು, ಕಂಸಾಳೆ ವಾದ್ಯವನ್ನು ಬಡಿದುಕೊಂಡು ವಿವಿಧ ಭಂಗಿಯಲ್ಲಿ ಬಾಗಿ, ಬಳುಕಿ, ಕುಣಿದು ಕುಪ್ಪಳಿಸಿ ಕೌಶಲವನ್ನು ಪ್ರದರ್ಶಿಸುವ ವೈಖರಿ ಆಶ್ಚರ್ಯಕರವಾಗಿರುತ್ತದೆ. ಮಾದೇಶ್ವರರ ಪದಗಳೂ ಕಂಸಾಳೆಯ ನಾದವೂ ಈ ಕುಣಿತಕ್ಕೆ ಮೆರುಗನ್ನು ತರುತ್ತವೆ. ಗೊರವ ಸಂಪ್ರದಾಯದ ಕುಣಿತವೂ ಶೈವ ಸಂಬಂಧಿಯಾದುದೇ. ಮೈಲಾರ ಲಿಂಗನ ಮತ್ತು ಮುಡುಕು ತೊರೆ ಮಲ್ಲಿಕಾರ್ಜುನ ಗುಡ್ಡರಾದ ಗೊರವರು ತಲೆಯ ಮೇಲೆ ಕರಡಿಯ ಕೂದಲ ಟೊಪ್ಪಿಗೆ, ಮೈಮೇಲೆ ಕಪ್ಪು ನಿಲುವಂಗಿ, ಕವಡೆಯ ಸರಗಳು, ಕೈಯಲ್ಲಿ ಡಮರುಗ ತ್ರಿಶೂಲಗಳನ್ನು ಹಿಡಿದು ವೃತ್ತಾಕಾರವಾಗಿ ನರ್ತಿಸುತ್ತಾರೆ. ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಈ ಕುಣಿತವನ್ನು ಹೆಚ್ಚಾಗಿ ಕಾಣಬಹುದು.

ಗಾರುಡಿ ಕುಣಿತ ಎಂಬುದು ಗಾರುಡಿಗೆ ಶಬ್ದದಿಂದ ಬಂದದ್ದು, ಗಾಡಿಗ ಮತ್ತು ತಟ್ಟಿರಾಯ ಕುಣಿತ ಎಂದೂ ಇದನ್ನು ಕರೆಯಲಾಗುತ್ತದೆ. ವೈಷ್ಣವ ಸಂಪ್ರದಾಯದ ಈ ಕುಣಿತ ಅಪೂರ್ವ ರೀತಿಯದು. ಎರಡು ಮೂರು ಆಳೆತ್ತರದ ಬಿದಿರ ತಡಿಕೆಯ ಆಕೃತಿಯನ್ನು ಮಾಡಿ, ಮೇಲೆ ಮರದ ತಲೆಯನ್ನು ಕೂರಿಸಿ ಮರದ ಕೈ ಮತ್ತು ಪುಂಗಿಯನ್ನು ಅಳವಡಿಸಿ, ಮೈಮೇಲೆ ವಸ್ತ್ರಗಳನ್ನು ಜೋಡಿಸಿ ಗಾರುಡಿಗನ ಆಕೃತಿಯನ್ನು ಸಿದ್ಧಗೊಳಿಸಿಕೊಳ್ಳಲಾಗುತ್ತದೆ. ಕುಣಿಯುವ ವ್ಯಕ್ತಿ ಆ ಆಕೃತಿಯ ಒಳಗೆ ಸೇರಿಕೊಳ್ಳುತ್ತಾನೆ. ತುಂಬ ಹಗುರವಾದ ಆ ದೊಡ್ಡ ಆಕೃತಿಯನ್ನು ಧರಿಸಿ ಒಳಗೆ ಅವನು ನೃತ್ಯ ಮಾಡುತ್ತಾನೆ, ಬಾಗುತ್ತಾನೆ-ದೊಡ್ಡ ಆಕೃತಿಯ ಈ ನೃತ್ಯವಿನ್ಯಾಸ ನೋಡುವವರಿಗೆ ಬೆರಗನ್ನು ತರುತ್ತದೆ. ಪುರುಷ ಮತ್ತು ಸ್ತ್ರೀ ಆಕೃತಿಗಳಿರುತ್ತದೆ.

ವೈಷ್ಣವ ಸಂಪ್ರದಾಯದ ನೃತ್ಯಗಳಲ್ಲಿ ಪಟಕುಣಿತ, ಭಾಗವಂತಿಕೆ ಮೇಳಗಳೂ ಮುಖ್ಯವಾದುವೇ. ಭಾಗವಂತಿಕೆ ಪದಗಳನ್ನು ಎರಡು ಸಾಲಿನಲ್ಲಿ ನಿಂತು ಕೆಲವರು ಹಾಡುತ್ತಾ ಸಾಗುತ್ತಾರೆ. ಅವರ ನಡುವೆ ಕೋಡಂಗಿಯ ವೇಷವನ್ನು ಧರಿಸಿದ ವ್ಯಕ್ತಿಯೊಬ್ಬ ಮೃದುವಾಗಿ ನರ್ತಿಸುತ್ತಾನೆ. ಪಟಕುಣಿತ ನಂದಿ ಕೋಲಿನ ನೃತ್ಯವನ್ನೇ ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಆದರೆ ಇಲ್ಲಿನ ಕೋಲುಗಳು ಅಷ್ಟು ಎತ್ತರವಾದುದಲ್ಲ. ಭಾರವಾದುವಲ್ಲ. ಆದರೂ ಸಾಕಷ್ಟು ಉದ್ದವಾಗಿರುತ್ತವೆ. ನಂದಿಯ ಕೋಲಿನ ಕುಣಿತದಲ್ಲಿ ಇಬ್ಬರು ಅಥವಾ ಒಬ್ಬರೇ ಭಾಗವಹಿಸುವುದು ಹೆಚ್ಚು. ಆದರೆ ಪಟ ಕುಣಿತದಲ್ಲಿ ಹತ್ತಾರು ಮಂದಿ ಭಾಗವಹಿಸುತ್ತಾರೆ. ಬಣ್ಣದ ಬಟ್ಟೆಗಳನ್ನು ಸುತ್ತಿ ಅಲಂಕರಿಸಿದ, ತುದಿಯಲ್ಲಿ ಲೋಹದ ಛತ್ರಿಯನ್ನು ಕಟ್ಟಿದ ಈ ಉದ್ದವಾದ ಕೋಲುಗಳನ್ನು ಪಟ ಎಂದು ಕರೆಯಲಾಗುತ್ತದೆ. ಬಹುಶಃ ಇವು ವೈಷ್ಣವ ಸಂಪ್ರದಾಯದ ಈ ಭಕ್ತರ ನಿಶಾನೆಗಳು, ಬಾವುಟಗಳು, ಅವನ್ನು ಹಿಡಿದು ಸಾಲುಸಾಲಾಗಿ ವಿವಿಧ ವೈಖರಿಯಲ್ಲಿ ತಮ್ಮಟೆ, ಹೆಬ್ಬರೆಗಳ ಗತ್ತಿಗೆ ನರ್ತಿಸುವ ಸೊಗಸು ಅಪೂರ್ವವಾದುದು. ಶಕ್ತಿದೇವತೆಗಳಿಗೆ ಸಂಬಂಧಿಸಿದ ನೃತ್ಯಗಳಲ್ಲಿ ಸೋಮನ ಕುಣಿತ, ಗುಡ್ಡರ ಕುಣಿತ, ಪೂಜಾಕುಣಿತ, ಕರಗಕುಣಿತ ಮುಂತಾದುವು ಬರುತ್ತವೆ. ಸೋಮನ ಕುಣಿತ ಕರ್ನಾಟಕದ ಮುಖವಾಡ ನೃತ್ಯಗಳಲ್ಲಿ ಮುಖ್ಯವಾದುದು. ಮುಖವಾಡ ಉಳ್ಳ ಇತರ ನೃತ್ಯಗಳು ಹೆಚ್ಚು ಬೆಳಕಿಗೆ ಬಂದಿಲ್ಲ. ಸೋಮಗಳನ್ನು ಕೆಂಚರಾಯ, ಕರಿರಾಯ ಮುಂತಾದ ಹೆಸರುಗಳಲ್ಲಿ ಕರೆಯಲಾಗುತ್ತದೆ. ದೊಡ್ಡ ಆಕಾರದ ಮುಖವಾಡ, ಕಮಾನಿನ ಆಕಾರದಲ್ಲಿ ವಿವಿಧ ಅಲಂಕಾರಗಳಿಂದ ಅದನ್ನು ಸಿದ್ಧಗೊಳಿಸುವ ಬಗೆ, ಬಣ್ಣಬಣ್ಣದ ದೇವರ ಸೀರೆಗಳನ್ನು ಮುಡಿಯಿಂದ ಹಿಮ್ಮಡಿಯವರೆಗೆ ಬೆನ್ನ ಮೇಲೆ ಇಳಿ ಬಿಟ್ಟುಕೊಳ್ಳುವ ವೈಖರಿ ಮನಸೆಳೆಯುವಂತಿರುತ್ತವೆ. ಬಣ್ಣದ ವಸ್ತ್ರದಲ್ಲಿ ಕಚ್ಚೆಯನ್ನು ಹಾಕಿ ಕೈಯಲ್ಲಿ ಬೆಳ್ಳಿಬೆತ್ತ ಹಿಡಿದು, ಸಾಮಾನ್ಯವಾಗಿ ಬರಿಮೈಯಲ್ಲಿ ಮುಖವಾಡ ಧರಿಸಿ ಕುಣಿಯಲಾಗುತ್ತದೆ. ಕೊರಳಲ್ಲಿ ದೇವರ ತಾಲಿಯನ್ನೂ ಧರಿಸಲಾಗುತ್ತದೆ. ಗ್ರಾಮದೇವತೆಯ ಉತ್ಸವ ಮೂರ್ತಿಯ ಮುಂದೆ ಎರಡು ಅಥವಾ ಮೂರು ಸೋಮಗಳು, ತಮ್ಮಟೆ, ಹರೆ, ಡೋಲು, ಮೌರಿಗಳ ಹಿನ್ನೆಲೆಗೆ ನರ್ತಿಸುತ್ತವೆ. ಪೂಜಾರಿ ಕೈಯಲ್ಲಿ ಚಾಟಿಯನ್ನು ಹಿಡಿದು ನಡುವೆ ಸೇರಿಸಿಕೊಳ್ಳುತ್ತಾನೆ. ತಮ್ಮಟೆಯನ್ನು ಬಡಿಯುವ ಕಲಾವಿದ ನಡುವಡುವೆ ದೇವರನ್ನು ಕರೆಯುವ ಅಪೂರ್ವ ತ್ರಿಪದಿಗಳನ್ನು ಹಾಡುತ್ತಾನೆ. ಹೆಜ್ಜೆಹೆಜ್ಜೆಗೆ ಹಾಡು, ಕುಣಿತ, ಜೈಕಾರಗಳು ಸೋಮನ ಕುಣಿತವನ್ನು ವಿಶೇಷವಾಗಿ ಕಳೆಗಟ್ಟಿಸುತ್ತವೆ.

ರಂಗದ ಕುಣಿತ ಕರ್ನಾಟಕದ ಅನೇಕ ಕಡೆಗಳಲ್ಲಿ ಕಾಣಬರುತ್ತದೆ. ಊರ ದೇವತೆಯ ಹಬ್ಬಕ್ಕೆ ಸಂಬಂಧಿಸಿದ ಈ ನೃತ್ಯ ಹಬ್ಬಕ್ಕೆ ಹದಿನೈದು ದಿನಗಳ ಮುಂಚೆಯೇ ಆರಂಭವಾಗುತ್ತದೆ. ಊರ ರಂಗದಲ್ಲಿ ಬೆಂಕಿಯನ್ನು ಹಾಕಿ, ಕೈಯಲ್ಲಿ ವಸ್ತ್ರವೊಂದನ್ನು ಹಿಡಿದು, ಜನಪದ ಗೀತೆಗಳನ್ನು ನಡುನಡುವೆ ಹಾಡುತ್ತ, ತಮ್ಮಟೆ ಗತ್ತಿಗೆ ಊರಿನ ಕಲಿಗಳೆಲ್ಲ ವಿವಿಧ ಭಂಗಿಗಳಲ್ಲಿ ನರ್ತಿಸುತ್ತಾರೆ.

ಗುಡ್ಡರ ಕುಣಿತ ಬಹುಮಟ್ಟಿಗೆ ರಂಗದ ಕುಣಿತವನ್ನೇ ಹೋಲುತ್ತದೆ. ಇಲ್ಲಿ ತಮ್ಮಟೆಗೆ ಬದಲಾಗಿ ಚಕ್ರವಾದ್ಯ ಎಂಬ ವಿಶಿಷ್ಟ ರೀತಿಯ ತಾಸೆಯನ್ನು ಬಳಸಲಾಗುತ್ತದೆ. ಕುಣಿರೋ ಗುಡ್ಡರು ಎಂದು ಇವರನ್ನೇ ಕರೆಯುವುದು. ಮಾರಿಕುಣಿತ ಎಂದು ಈ ನೃತ್ಯವನ್ನು ಹೆಸರಿಸಲಾಗುತ್ತದೆ. ದೇವರನ್ನು ಕರೆಯುವ ಹಿನ್ನೆಲೆಯಲ್ಲಿ ಭಕ್ತರು ವಿವಿಧ ಭಂಗಿಗಳಲ್ಲಿ ಮಾಡುವ ನೃತ್ಯವೇ ಗುಡ್ಡರ ಕುಣಿತ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಈ ಕುಣಿತ ಹೆಚ್ಚಾಗಿ ಉಳಿದು ಬಂದಿದೆ. ಪೂಜಾಕುಣಿತ ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಯ ವಿಶಿಷ್ಟ ಕಾಣಿಕೆ. ಏಳು ಅಥವಾ ಒಂಬತ್ತು ಕಳಸಗಳಿಂದ ಅಲಂಕರಿಸಿ ದೇವಿಯ ಪೂಜೆಯನ್ನು ನೆತ್ತಿಯ ಮೇಲಿನ ಕಳಸದ ಮೇಲಿರಿಸಿ ಕೈಬಿಟ್ಟು ತಮ್ಮಟೆಯ ಗತ್ತಿಗೆ ನರ್ತಿಸುವ ವೈಖರಿ ಅದ್ಭುತವಾದುದು. ಪೂಜೆಯ ಜೊತೆಯಲ್ಲಿ ಒನಕೆಯ ಕುಣಿತವೂ ಕೆಲವು ಕಡೆ ಸೇರಿಕೊಂಡಿದೆ. ತಲೆಯ ಮೇಲೆ ಒನಕೆಯೊಂದನ್ನು ಹೊತ್ತು ಕೈಬಿಟ್ಟು ಕುಣಿಯುವುದು ಇಲ್ಲಿನ ಆಕರ್ಷಣೆ. ಕರಗಕುಣಿತ ಬೆಂಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕರಗ ಒಂದು ರೀತಿಯ ಮಣ್ಣಿನ ಕುಲಶವೇ. ಅದನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ ನೆತ್ತಿಯಲ್ಲಿ ಧರಿಸಿ ಕೈಬಿಟ್ಟು ಕುಣಿಯುವ ಕುಶಲಿಗಳಾದ ಕಲಾವಿದರು ನೋಡುವವರನ್ನು ಬೆರಗುಗೊಳಿಸುತ್ತಾರೆ. ಡೊಳ್ಳುಕುಣಿತ, ಬೀರೇಶ್ವರ ಸಂಪ್ರದಾಯಕ್ಕೆ ಸೇರಿದುದು : ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕುರುಬ ಜನಾಂಗದ ಈ ನೃತ್ಯ ಒಂದು ಗಂಡು ಕಲೆ. ದೊಡ್ಡ ಆಕಾರದ ಡೊಳ್ಳುಗಳನ್ನು ನಡುವಿಗೆ ಕಟ್ಟಿ ಅದನ್ನು ಶಕ್ತಿಮೀರಿ ಬಡಿಯುತ್ತ ವಿವಿಧ ಭಂಗಿಗಳಲ್ಲಿ ಬೀರರು ಕುಣಿಯುತ್ತಾರೆ. ನಡುವೆ ಒಬ್ಬ ಜಲ್ಲರಿಯವನೂ ಸೇರಿಕೊಳ್ಳುತ್ತಾನೆ. ಬಡಿಯುವ ಕೋಲು ಮುರಿಯುವಂತೆ, ಕೇಳುವವರ ಕಿವಿ ಬಿರಿಯುವಂತೆ ಡೊಳ್ಳನ್ನು ಬಡಿಯುವ ಮೋಜು, ಕುಣಿಯುವ ಗತ್ತು ಆ ಕಲಿಗಳಿಗೆ ಮಾತ್ರ ಸಾಧ್ಯವಾದುದು.

ದಕ್ಷಿಣ ಕನ್ನಡ ಜಿಲ್ಲೆಯ ಭೂತನೃತ್ಯಗಳಾದ ಆಟಿ ಕೊಡೆಂಜ, ಕೋರತನಯ ಅಲ್ಲಿನ ವಿಶಿಷ್ಟ ಸಂಸ್ಕøತಿಯನ್ನು ಸಾರುತ್ತವೆ. ಭೂತಾರಾಧನೆಯ ಸಂದರ್ಭದಲ್ಲಿ ಮನುಷ್ಯನ ಮೇಲೆ ಆವೇಶ ಬರಿಸಿಕೊಂಡು ಮಾಡುವ ನೃತ್ಯವೈಖರಿ ಅಪೂರ್ವವಾದುದು. ಪ್ರಭಾವಳಿಯಂತೆ ತೆಂಗಿನ ಹಾಳೆಯಲ್ಲಿ ಕಟ್ಟಿಕೊಳ್ಳುವ ಅಣಿ ವೈವಿಧ್ಯಮಯ ಆಭರಣ ವಿಶೇಷಗಳು, ಮುಖದಲ್ಲಿ ಬಣ್ಣಗಾರಿಕೆ, ಕಾಲಗಗ್ಗರ ಮೊದಲಾದುವು ಭೂತವೇಷದ ಆಕರ್ಷಣೆಗಳು. ಚಂಡೆ ಮೊದಲಾದ ವಾದ್ಯಗಳ ಗತ್ತಿಗೆ ಭೂತದ ಪಾತ್ರ ನರ್ತಿಸುವುದರ ಜೊತೆಗೆ, ಇಲ್ಲಿನ ಪಾಡ್ದನ ಸಾಹಿತ್ಯವೂ ಗಮನಾರ್ಹವಾದುದೇ.

ನಲ್ಕೆಯವರಲ್ಲಿ ಪ್ರಚಲಿತವಾಗಿರುವ ಆಟಿಕೊಡೆಂಜ ತುಳು ಆಟಿ ತಿಂಗಳಲ್ಲಿ ಬರುತ್ತದೆ. ತೆಂಬರೆಯಗತ್ತಿಗೆ ಈ ನೃತ್ಯ ಕೂಡಿಬರುತ್ತದೆ. ಕೋರತನಿಯ ಕೂಡ ನಲ್ಕೆಯವರಲ್ಲಿ ಇರುವ ನೃತ್ಯವಿಶೇಷ. ಕೋರತನಿಯ ವೇಷ ಹಾಕಿಕೊಂಡು ರೈತರ ಮನೆಯ ಬಾಗಿಲಲ್ಲಿ ನರ್ತಿಸಿ, ದವಸಧಾನ್ಯಗಳನ್ನು ಸಂಗ್ರಹಿಸಲಾಗುತ್ತದೆ. ಮಾದಿರ, ದುಡಿನೃತ್ಯ, ಡೋಲಿನ ಕುಣಿತ ಮುಂತಾದ ವೈವಿಧ್ಯಮಯ ನೃತ್ಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಬರುತ್ತವೆ. (ಜೆ.ಎಸ್.ಪಿ.) ಪರಿಷ್ಕರಣೆ: ಡಾ|| ಟಿ. ಎಸ್. ರಾಜಪ್ಪ