ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ಲೋಕ
ಜನಪದ ಲೋಕ -
ಬೆಂಗಳೂರುಮೈಸೂರು ಹೆದ್ದಾರಿಯಲ್ಲಿ ಸು.15 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ (1994) ಒಂದು ಸಾಂಸ್ಕøತಿಕ ಕೇಂದ್ರ. ಹೆಸರಾಂತ ಜಾನಪದ ವಿದ್ವಾಂಸ ಎಚ್.ಎಲ್.ನಾಗೇಗೌಡ ಇದರ ಸ್ಥಾಪಕರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ (1979) ತಮ್ಮ ಅಭಿಮಾನಿಗಳು ಬೆಂಗಳೂರಿನಲ್ಲಿ ತಮಗೆ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಅರ್ಪಿಸಿದ ಒಂದು ಲಕ್ಷ ಹದಿನೈದು ಸಾವಿರ ರೂಪಾಯಿ ನಿಧಿಯಿಂದ ಕರ್ನಾಟಕ ಜಾನಪದ ಟ್ರಸ್ಟ್ (ರಿ) ಸಂಸ್ಥೆಯನ್ನು ಪ್ರಾರಂಭಿಸಿದರು. ಜನಪದ ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಕುಶಲಕಲೆ, ಚಿತ್ರಕಲೆ ಮುಂತಾದವುಗಳ ಸಂರಕ್ಷಣೆ ಇದರ ಮೂಲ ಉದ್ದೇಶ. ಜಾನಪದ ಲೋಕ ಈ ಟ್ರಸ್ಟಿನ ನಿರ್ಮಾಣ. ನಿರ್ಭಾಗ್ಯ ಜನಪದ ಕಲಾವಿದರ ಬಾಳಿಗೆ ಭರವಸೆ ತುಂಬುವ ಕೆಲಸ ಜಾನಪದ ಲೋಕದ ಆಶಯ. ಜನಪದ ಸಂಸ್ಕøತಿಯ ಸೌರಭವನ್ನು ನಾಡಿನಾದ್ಯಂತ ಹರಡುವುದು, ಜನಪದರ ಬದುಕು, ಕಲೆ, ಆಚರಣೆ, ಹಬ್ಬ ಹರಿದಿನ, ಕುಣಿತ ಮೆರೆತ, ಹಾಡು ಪಾಡುಗಳ ಸಂಗ್ರಹ ಹಾಗೂ ಸಂಶೋಧನೆ ಜಾನಪದ ಲೋಕದ ಗುರಿ.
ಈ ಕೇಂದ್ರದಲ್ಲಿ ಹನ್ನೆರಡು ಘಟಕಗಳಿವೆ. ಇವುಗಳಿಗೆ ಅರ್ಥಪೂರ್ಣವಾದ ಹೆಸರುಗಳನ್ನು ಕೊಡಲಾಗಿದೆ.
ಜಾನಪದ ಲೋಕದ ಪ್ರವೇಶದ್ವಾರ
ಲೋಕಮಾತಾಮಂದಿರ : ಗ್ರಾಮೀಣ ಮಹಿಳೆಯರ ಚಿತ್ರಕಲೆ, ಮನೆಬಳಕೆ ವಸ್ತುಗಳಿಗೆ ಮೀಸಲಾದ ಕಟ್ಟಡ. ಗ್ರಾಮೀಣ ಮಹಿಳೆಯರ ಕರಕುಶಲತೆಯನ್ನು ಇಲ್ಲಿನ ಹೆಚ್ಚಿನ ವಸ್ತುಗಳು ಪ್ರತಿಬಿಂಬಿಸುತ್ತವೆ. ಚಿತ್ತಾರಗಳು, ಪಟಗಳು ಮನ ಸೆಳೆಯುತ್ತವೆ. ಸಾಗರದ ದೀವರ ಸಮುದಾಯದ ಮನೆಯ ಹಸೆಗೋಡೆ ಚಿತ್ತಾರಗಳು, ಬುಟ್ಟಿ ಚಿತ್ತಾರಗಳು, ಕುಸರಿ ಕೆಲಸಗಳು ಚಿತ್ತಾಕರ್ಷಕವಾಗಿವೆ. ಹಾಲಕ್ಕಿ ಒಕ್ಕಲಿಗರು, ಗೊಂಡರು, ಮುಕ್ರಿಯರು, ಕುಡುಬಿಯರು, ಗೌಳಿಗರು ಬಳಸುವ ಬಿದಿರು, ಬೆತ್ತ, ಮರದಿಂದ ಮಾಡಿದ ಅಡುಗೆ ಮನೆ ಸಲಕರಣೆಗಳು ಅವರ ಕುಶಲ ಕಲೆಯ ಉತ್ಕøಷ್ಟ ಉದಾಹರಣೆಗಳಾಗಿವೆ. ವಾಡೆ, ಗುಡಾಣ, ಮಡಕೆಗಳೂ ಮರದ ಪೆಠಾರಿ ಪೆಟ್ಟಿಗೆಗಳೂ ತೊಟ್ಟಿಲುಗಳೂ ಗಮನ ಸೆಳೆಯುತ್ತವೆ.
ಚಿತ್ರಕುಟೀರ : ಇಲ್ಲಿ ಧ್ವನಿಮುದ್ರಿಕೆಗಳ ಆಡಿಯೊ, ವಿಡಿಯೊ ಕ್ಯಾಸೆಟ್‍ಗಳೂ ಸ್ಲೈಡುಗಳೂ bsÁಯಾಚಿತ್ರಗಳೂ ವಸ್ತುಗಳೂ ಪುಸ್ತಕಗಳೂ ಹಸ್ತಪ್ರತಿಗಳೂ ಅಪರೂಪದ ಗ್ರಂಥಗಳ ಸಂಗ್ರಹವೂ ಪ್ರದರ್ಶನಗೊಂಡಿವೆ. ನಾಡಿನ ಹಬ್ಬ, ಕಲೆ, ಆಚರಣೆ, ಜಾತ್ರೆಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸುವ ಆಕರ್ಷಕ ವರ್ಣಚಿತ್ರಗಳಿವೆ.
ಲೋಕಮಹಲ್ : ಇದು ವಸ್ತು ಸಂಗ್ರಹಾಲಯ. ಎರಡಂತಸ್ತಿನ ಕಟ್ಟಡ. ಇದರ ವಿನ್ಯಾಸ ಮನಮೋಹಕವಾಗಿದೆ. ಮದುವೆಯಲ್ಲಿ ಬಳಸುವ ಚಿತ್ತಾರದ ಹಸೆಮಣೆ, ತೇವಟಿಗೆಮಣೆ, ಬಳುವಳಿ ಸಟ್ಟುಗ, ನಾನಾ ಬಗೆಯ ಬಾಸಿಂಗಗಳು, ಬೇಸಾಯದ ಉಪಕರಣಗಳು, ಮೆಕ್ಕೆಕಟ್ಟೆಯ 15 ಅಡಿ ಎತ್ತರದ ಬೃಹತ್ ವಿಗ್ರಹಗಳ ಮಿನಿಮಾದರಿ ವಿಗ್ರಹಗಳು, ತೊಗಲು ಗೊಂಬೆಗಳು ಮೊದಲಾದ ವಸ್ತುಗಳ ವೈವಿಧ್ಯಮಯ ಸಂಗ್ರಹ ಇಲ್ಲಿದೆ. ಸೂತ್ರದ ಗೊಂಬೆಗಳು, ಯಕ್ಷಗಾನ ವೇಷಗಳ ಮಾದರಿಗಳು, ಕರ್ನಾಟಕ ಜನಪದ ವಾದ್ಯಗಳ ಸಂಗ್ರಹ ಅಪಾರವಾಗಿದೆ. ಹೆರಳು, ಕೊರಳು, ಕೈಗಳ ಆಭರಣಗಳನ್ನೂ ಪ್ರದರ್ಶಿಸಲಾಗಿದೆ. ತೂಕ, ಅಳತೆ ಮಾಪನಗಳೂ, ಇಲ್ಲಿವೆ. ಗಂಜೀಫ ಕಲೆಯ ಚಿತ್ರಗಳು, ಮಕ್ಕಳ ಆಟಿಕೆಗಳೂ, ಸೋಮನ ಮುಖವಾಡಗಳು, ಹರಿಗೆ, ಮರದ ಆಳೆತ್ತರದ ಭೂತದ ವಿಗ್ರಹಗಳು ಆಕರ್ಷಕವಾಗಿವೆ.
ಶಿಲ್ಪಮೇಳ : ಇಲ್ಲಿರುವ ವೀರಗಲ್ಲು, ಸತೀಕಲ್ಲುಗಳು, ಶಾಸನ ಕಲ್ಲುಗಳು, ರಥ, ಫಿರಂಗಿ ಮೊದಲಾದವು ಗತಕಾಲದ ಚರಿತ್ರೆಯನ್ನು ಸಾರುತ್ತವೆ. ರಾಜ ಮಹಾರಾಜರುಗಳ ಕಾಲದ ಬೃಹದಾಕಾರದ ಕಲ್ಲಿನ ತೊಟ್ಟಿಗಳೂ ಇಲ್ಲಿವೆ. ಆಯಗಾರರಮೇಳ : ಕಣ್ಮರೆಯಾಗುತ್ತಿರುವ ಹಳ್ಳಿಯ ಹನ್ನೆರಡು ಬಗೆಯ ಕಸಬುಗಳಾದ ಕುಂಬಾರಿಕೆ, ಕಮ್ಮಾರಿಕೆಯ ಉಪಕರಣಗಳು, ಮರದ ಹಾಗೂ ಕಬ್ಬಿನ ಗಾಣ, ಎಣ್ಣೆಗಾಣ, ಕೊಟ್ಟಣ, ಬೇಸಾಯದ ಸಲಕರಣೆಗಳು ಇಲ್ಲಿ ಪ್ರದರ್ಶನಗೊಂಡಿವೆ. ಬಲೆಗಳು, ನಾಡದೋಣಿಗಳು, ಮೀನು ಕುಣಿಗಳು, ಬೇಟೆಯ ಸಲಕರಣೆಗಳು ಮುಂತಾದ ವಸ್ತುಗಳಿವೆ. ದೊಡ್ಡಮನೆ : ಇದೊಂದು ತೊಟ್ಟಿ ಮನೆ. ಇದು ಎಚ್.ಎಲ್. ನಾಗೇಗೌಡರ ವಂಶದ ದೊಡ್ಡ ಮನೆಯನ್ನು ನೆನಪಿಗೆ ತರುವಂಥ ಪ್ರಯತ್ನ. ಸಭೆಗಳಿಗೆ, ಕಮ್ಮಟ, ಶಿಬಿರಗಳಿಗೆ, ಅತಿಥಿಗಳ ಊಟ ವಸತಿಗೆ ಅತ್ಯಂತ ಅನುಕೂಲಕರವಾಗಿದೆ. ಮಹಾದ್ವಾರ : ಇದು ಬೃಹದಾಕಾರವಾದ ಕೊಂಬುಕಹಳೆ ಹಾಗೂ ಹರಿಗೆಗಳಿಂದ ಅಲಂಕೃತವಾದ ಇಪ್ಪತ್ತು ಅಡಿ ವಿಶಾಲವಾದ ಮಹಾದ್ವಾರ. ದ್ವಾರದ ಎರಡೂ ಬದಿಯಲ್ಲಿ, ಆಕಾಶಕ್ಕೆ ಚಾಚಿನಿಂತ 26 ಅಡಿ ಎತ್ತರದ ಹಿತ್ತಾಳೆಯ ನಂದಿ ಧ್ವಜಗಳಿವೆ. ಮುಖವಾಡದ ಹರಿಗೆ ವೈಷ್ಣವ ಸಂಪ್ರದಾಯವನ್ನು ಪ್ರತಿನಿಧಿಸಿದರೆ, ನಂದಿಧ್ವಜಗಳು ಶೈವ ಸಂಪ್ರದಾಯದ ಪ್ರತೀಕ. ಕಹಳೆಗಳು ಜನಪದ ಸಂಸ್ಕøತಿಯ ಪ್ರತಿರೂಪ. ಮಹಾದ್ವಾರ ಮುಚ್ಚಿದರೆ, ಎದುರು ಮತ್ತು ಹಿಂಬದಿ ಎರಡರಲ್ಲೂ ಒಂದೇ ಬಗೆಯ ವಿನ್ಯಾಸವನ್ನು ಕಾಣಬಹುದಾಗಿದೆ. ಲಾಂbsÀನ : ಬೀಸುವ ಕಲ್ಲಿನ ಮುಂದೆ ಕೂತ ಹಳ್ಳಿಯ ಹೆಣ್ಣಿನ ಚಿತ್ರ ಜಾನಪದ ಲೋಕದ ಲಾಂಛನವಾಗಿದೆ. ಗ್ರಾಮೀಣ ಬದುಕಿನಲ್ಲಿ ಬೀಸುವ ಕಲ್ಲು ನಿರಂತರ ಕಾಯಕಕ್ಕೆ ಸಂಕೇತ. ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗೀಯ ಜಲ್ಲ ಜಲ್ಲಾನೆ ಉದುರಮ್ಮ ಎಂದು ಹಳ್ಳಿಯ ಹೆಣ್ಣುಮಗಳು ರಾಗಿಕಲ್ಲನ್ನು ಸ್ತುತಿಸುತ್ತಾಳೆ. ಬೀಸುವಕಲ್ಲಿನಿಂದ ಉದುರುವುದು ನುರಿದ ರಾಗಿ ಹಿಟ್ಟು ಮಾತ್ರವಲ್ಲ ಇಡೀ ಜನಪದ ಕಾವ್ಯ ಭಂಡಾರ. ಈ ಅಂಶವನ್ನು ಸಂಕೇತಿಸುವಂತೆ ಎಪ್ಪತ್ತೈದು ವರ್ಷ ಹಳೆಯದಾದ ಒಂದು ಬೃಹತ್ತಾದ ಬೀಸುವ ಕಲ್ಲು ಲೋಕಮಾತಾ ಮಂದಿರದ ಮುಂದೆ ಸ್ಥಾಪಿತವಾಗಿದೆ. ಎರಡು ಎತ್ತು ಅಥವಾ ಕೋಣಗಳನ್ನು ಕಟ್ಟಿ ತಿರುಗಿಸಬೇಕಾದಷ್ಟು ದೊಡ್ಡದಾದ ಬೀಸುವ ಕಲ್ಲು ಜಾನಪದ ಲೋಕದ ವಿಸ್ಮಯಗಳಲ್ಲೊಂದು.
ಲೋಕನಿವಾಸ : ಇದು ಜಾನಪದ ಲೋಕದ ಕಚೇರಿ.
ಬಯಲು ರಂಗಮಂದಿರ : ಗ್ರೀಕ್ ರಂಗಭೂಮಿ ಮಾದರಿಯಲ್ಲಿ 800 ಪ್ರೇಕ್ಷಕರು ಕುಳಿತುಕೊಳ್ಳಬಹುದಾದಷ್ಟು ವಿಶಾಲವಾದ ಬಯಲು ರಂಗಮಂದಿರ. ಜಾನಪದ ಲೋಕದ ಸಮಸ್ತ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ. (ಎನ್.ಎಚ್.ಎಂ.)