ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ಸಂಗೀತ

ವಿಕಿಸೋರ್ಸ್ ಇಂದ
Jump to navigation Jump to search


ಜನಪದ ಸಂಗೀತ

ಜನತೆಯ ನಾಲಗೆಯ ಮೇಲೆ ಉಳಿದು ಬಂದಿರುವ ಜನತಾ ಸಂಗೀತ. ಯಾವ ಒಬ್ಬನೂ ಕರ್ತೃವಲ್ಲದಿರುವುದು ಇದರ ಒಂದು ವೈಶಿಷ್ಟ್ಯ. ಇದರಲ್ಲಿ ಸಾಕಷ್ಟು ವೈವಿಧ್ಯವಿದ್ದು ಕೇಳಲು ಇಂಪಾಗಿದ್ದರೂ ಇದರ ರೂಪು ನಡೆ ಎಲ್ಲ ತುಂಬ ಸರಳವೇ. ಶಾಸ್ತ್ರೀಯ ಸಂಗೀತಕ್ಕೆ ಅಂತರರಾಷ್ಟ್ರೀಯವೆನ್ನಬಹುದಾದ ಒಂದು ಪದ್ದತಿ ಇರುತ್ತದೆ. ಇದರಲ್ಲಾದರೋ ಪ್ರಾದೇಶಿಕವೆನ್ನಬಹುದಾದ ಹಲವು ಪದ್ಧತಿಗಳಿರುತ್ತವೆ. ಜನಪದ ಸಂಗೀತವನ್ನು ಮೂರು ಭಾಗಗಳಾಗಿ ನೋಡಬಹುದು. ಒಂದು ವಾದ್ಯಸಂಗೀತ, ಇನ್ನೊಂದು ಹಾಡುಗಾರಿಕೆ, ಮತ್ತೊಂದು ಅದರ ಸಾಹಿತ್ಯ. ಜನಪದದಲ್ಲಿ ಮೊದಲು ಹುಟ್ಟಿದ್ದು ಸಂಗೀತ ಹಾಗೂ ನೃತ್ಯ. ಇವೆರಡಕ್ಕೂ ಬಹು ಹತ್ತಿರದ ಬಾಂಧವ್ಯ ಉಂಟು. ಅನಂತರ ಹುಟ್ಟಿದ್ದು ಸಾಹಿತ್ಯ. ಕುಣಿತ ಜನತೆಯ ಜೀವನದ ಮುಖ್ಯ ಅಂಗ. ಸಂತೋಷ ಉಕ್ಕಿದಾಗ, ಮಳೆ ಬೆಳೆಚೆನ್ನಾಗಿ ಆದಾಗ, ಮದುವೆ ಮೊದಲಾದ ಶುಭಗಳು ಉಂಟಾದಾಗ ಕುಣಿಯುವುದು ವಾಡಿಕೆಯಾಗಿತ್ತು. ಧಾರ್ಮಿಕ ಆಚರಣೆಗಳು, ಗ್ರಾಮದೇವತೆಯ ಹಬ್ಬಗಳು, ಮುಂತಾದ ಸಂದರ್ಭಗಳಲ್ಲಿ ಸಂಗೀತಕ್ಕೆ ತಕ್ಕ ನೃತ್ಯಗಳೂ ಇರುತ್ತಿದ್ದುವು. ಜನಪದ ಭಾಷೆಯಲ್ಲಿ ಅವನ್ನು ಕುಣಿತಗಳು ಎನ್ನುತ್ತಿದ್ದರು. ಒಬ್ಬ ಹಾಡುವುದು, ಉಳಿದವರು ಅನುಸರಿಸುವುದು-ಇದು ನೃತ್ಯಪ್ರಧಾನವಾದ ಜನಪದ ಸಂಗೀತದ ಮಾದರಿ. ಹಾಡು ಹಾಡುತ್ತ ಸಂಗೀತದ ಗತ್ತು, ಸಾಹಿತ್ಯದ ನಡೆ ಬದಲಾಗಲಾರಂಭಿಸಿದವು. ವಿವಿಧ ವರಸೆಗಳು ಬಳಕೆಗೆ ಬಂದವು. ವಾದ್ಯಗಳಲ್ಲಿ ವೈಶಿಷ್ಟ್ಯಗಳೇರ್ಪಟ್ಟವು. ಸುಖ, ದುಃಖ, ಭಕ್ತಿ ಭಯ ಗೌರವಗಳನ್ನು ಪ್ರೀತಿ ವಿಶ್ವಾಸ ಪ್ರಣಯಗಳನ್ನು ಸೂಚಿಸುವ ಕೃತಿಗಳು ಹೊಮ್ಮಿದುವು. ಶ್ರಮ ನಿವಾರಣೆಗಾಗಿ ಮೋಜಿನ ಪದಗಳು ಹುಟ್ಟಿದುವು. ಕೆಲಸದ ಹಾಡುಗಳು ತಲೆದೋರಿದವು. ಹೀಗೆ ರಾಗಭಾವ ಮಿಶ್ರಿತವಾದ ವೈವಿಧ್ಯಮಯ ಸಾಹಿತ್ಯ ಬೆಳೆಯಿತು. ದೇವರನ್ನು ಕುರಿತಂತೆ ವೀರರನ್ನು ಕುರಿತಂತೆ ಕಥಾಸ್ವರೂಪದ ಲಾವಣಿಗಳು ತಲೆದೋರಿದವು. ಒಂದು ಕಾಲಕ್ಕೆ ಸಾಮಾನ್ಯವಾಗಿ ಸಂಗೀತ ಎನ್ನಿಸಿಕೊಂಡಿದ್ದು ವಿಕಾಸಗೊಂಡು ನಾಟಕ ಮೇಲೆದ್ದಿತು. ಇದು ಸ್ಥೂಲವಾಗಿ ಜನಪದ ಸಂಗೀತದ ಚರಿತ್ರೆ.

ಜನಪದ ಸಂಗೀತ ಬಹಳ ಸುಲಭ ಮಾದರಿಯದು. ಹೆಚ್ಚು ವಾದ್ಯಗಳ ಬಳಕೆಯೂ ಇಲ್ಲಿ ಅನಗತ್ಯ. ಒಂದು ತಂತೀವಾದ್ಯ, ಒಂದು ಧರ್ಮವಾದ್ಯ ಇದ್ದರಾಯಿತು. ಯಾವುದೋ ಒಂದು ರಾಗದ ಒಂದು ಸ್ಥಾಯಿಯಲ್ಲಿ ಗಾಯನ ನಡೆಯುತ್ತದೆ. ಕೇವಲ ಮೂರು ನಾಲ್ಕು ಸ್ವರದಲ್ಲೇ ಇಡೀ ಸಂಚಾರ. ತಾಳದ ಲಯವೂ ಸುಲಭ. ಮೂರು ನಾಲ್ಕು ಮಾತ್ರೆಯ ಏಕತಾಳದ ಗತಿ ನೃತ್ಯಕ್ಕೆ ಚೆನ್ನಾಗಿ ಒಗ್ಗುತ್ತದೆ.

ಊದುವ ವಾದ್ಯಗಳಲ್ಲಿ ಪಿಳ್ಳಂಗೋವಿ, ಓಲಗ, ಮುಖ ವೀಣೆ ಮೊದಲಾದವು ಇರುತ್ತವೆ. ತಂತೀವಾದ್ಯಗಳಲ್ಲಿ ಏಕನಾದ, ಚೌಡಿಕೆ, ಇರುತ್ತವೆ. ತಾಳವಾದ್ಯಗಳಲ್ಲಿ ಕಂಚಿನ ತಾಳ, ಮದ್ದಳೆ, ಡೋಲು, ಡಮರು, ಢಕ್ಕೆ, ಕಂಜೀರ, ತಮಟೆ, ಚಂಡೆ, ಚಂದ್ವಾದ್ಯ, ತಬಲ ಮೊದಲಾದುವಲ್ಲಿ ಒಂದೆರಡು ಇರುತ್ತವೆ. ಇವೆಲ್ಲ ಅಲ್ಲಲ್ಲಿನ ಜನ ಕೈಯಿಂದ ಮಾಡಿ ಬಳಸುವ ವಾದ್ಯಗಳು. ಯಂತ್ರದಲ್ಲಿ ಮಾಡಿದವಲ್ಲ. ಆಫ್ರಿಕದ ಜನ ತಮ್ಮ ನೃತ್ಯಸಂಗೀತಗಳಲ್ಲಿ ಬಹುಹೆಚ್ಚಿನ ವಾದ್ಯಗಳನ್ನು ಬಳಸುತ್ತಾರೆ. ಅವರ ಸಂಗೀತದಿಂದ ಹುಟ್ಟಿ ಬಂದ ಜಾeóï (ನೋಡಿ- ಜಾಜ್ó) ಸಂಗೀತದಲ್ಲಿ ಇದನ್ನು ನಾವು ಕಾಣಬಹುದು. ಮರದ ತುಂಡು, ಲೋಹದ ದಪ್ಪ ಸರಳು ಮೊದಲಾದುವನ್ನು ಕೋಲಿನಿಂದ ಬಡಿದು ತಾಳ ಹಾಕುವ ಪದ್ಧತಿಯೂ ಉಂಟು. ತಾಳಕ್ಕೆ ಗೆಜ್ಜೆ ಕುಚ್ಚನ್ನು ಬಳಸುವವರೂ ಇದ್ದಾರೆ.

ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ಜನಪದ ಸಂಗೀತ ತನ್ನದೇ ಆದ ವೈಶಿಷ್ಟ್ಯದಿಂದ ಬೆಳೆದು ಬಂದಿದೆ. ರೂಮೇನಿಯ ಕ್ರಿಸ್‍ಮಸ್ ಕೆರೋಲಿಗೆ ಪ್ರಸಿದ್ಧ. ಅಮೇರಿಕದಲ್ಲಿ ಜಾಜ್, ಕೌಬಾಯ್ ಸಾಂಗ್ಸ್ ಪ್ರಖ್ಯಾತ. ಬ್ರಿಟನ್ ಮತ್ರು ಫ್ರಾನ್ಸ್ ಭಾವಗೀತಾತ್ಮಕ ಲಾವಣಿಗಳ ತವರು. ಸ್ಕಾಟ್‍ಲೆಂಡ್ ಮತ್ತು ವೇಲ್ಸ್ ದೇಶದ ಹಳ್ಳಿಯ ಪದ ಅಲ್ಲಿನ ಹಿರಿಯ ಕವಿಯಾದ ರಾಬರ್ಟ್ ಬನ್ರ್ಸ್‍ಗೂ ಮಾರ್ಗದರ್ಶನ ನೀಡಿತು ಎಂಬುದನ್ನು ಮರೆಯಲಾಗದು. ಕನ್ನಡ ನಾಡಲ್ಲಿ ಕವಿ ಬೇಂದ್ರೆಯವರಿಗೂ ಜನಪದ ಗೀತೆಗಳಿಂದಲೂ ಸ್ಫೂರ್ತಿ ಬಂತು. ಯೂರೋಪಿನ ಆದಿವಾಸಿಗಳಾದ ಬಾಸ್ಕೊ ಜನಾಂಗ ಹೇರಳವಾಗಿ ಭಾವಗೀತೆ, ಶೃಂಗಾರ ಗೀತೆಗಳನ್ನು ಹಾಡುತ್ತಾರೆ. ರೋಮನ್ ಚರ್ಚಿನ ಪ್ರಾರ್ಥನಾ ಗೀತೆಗಳು ಹಳೆಯ ಸಂಪ್ರದಾಯದ ಮಾದರಿಯಾಗಿವೆ. ಐರ್ಲೆಂಡಿನ ಜನ ತಮ್ಮ ಹಳ್ಳಿ ಹಾಡನ್ನು ನಾಜೂಕಾಗಿ ಕಾಪಾಡಿದ್ದಾರೆ. ಅನೇಕ ಕಡೆ ಸಂಚಾರ ಮಾಡುವ ಜಿಪ್ಸಿಗಳಿಂದ ಜನಪದ ಸಂಗೀತಪ್ರಸರಣಕ್ಕೆ ತುಂಬ ಸಹಾಯವಾಗಿದೆ. ಇಟಲಿ, ಜಪಾನ್, ಚೀನಗಳಲ್ಲಿ ಹಾಗೆಯೆ ಇರಾನ್, ಅರೇಬಿಯಗಳಲ್ಲಿ ಗ್ರೀಸ್ ಮತ್ತು ರೋಮ್‍ಗಳಲ್ಲಿ ಜನಪದ ಗೀತೆಗಳ ಗಾಯನ ಅಭಿವೃದ್ಧಿ ಪಡೆದಿದೆ. ಸೋವಿಯೆತ್ ದೇಶದ ಜನಪದ ಸಂಗೀತ ಹತ್ತೊಂಬತ್ತನೆಯ ಶತಮಾನದ ಮೇಲೆ ರಾಷ್ಟ್ರೀಯತಾ ಭಾವನೆಗೆ ಹೆಚ್ಚು ಬೆಲೆ ಕೊಟ್ಟಿದೆ. ಅಲ್ಲಿ ಗೀತೆಗಳ ಏರಿಳಿತ, ಲಯ, ವಾದ್ಯಮೇಳಗಳಲ್ಲಿ ಹೊಸ ರೂಪ ಬಂದಿದೆ. ಸ್ಪೇನ್ ಮತ್ತು ಪೋರ್ಚುಗಲ್ಲಿನ ಜನ ವೀರಗೀತೆಗೆ ಹೆಸರುವಾಸಿಯಾಗಿದ್ದಾರೆ. ಇಂಗ್ಲೆಂಡ್ ಐರ್ಲೆಂಡ್ ಗಳಲ್ಲಿ ಭಾರಿ ಜನಪದ ಗೀತೆಗಳ ಸಂಘಗಳೇ ಸ್ಥಾಪನೆಯಾಗಿವೆ. ಅಮೆರಿಕದಲ್ಲೂ ಅಂತೆಯೇ. ಚೆನ್ನಾಗಿ ಪ್ರಕಟಿಸಿ, ಪ್ರಚಾರ ಮಾಡಿ, ಬಾನುಲಿಗಳಲ್ಲಿ ಟೆಲಿವಿಷನ್‍ಗಳಲ್ಲಿ ಜನಪದ ಗೀತೆಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಗೀತಗಳ ಧ್ವನಿಮುದ್ರಣ ಹಾಗೂ ಪ್ರಕಟಣೆಯ ಕೆಲಸ ಭರದಿಂದ ಸಾಗಿದೆ.

ಭಾರತದಲ್ಲೂ ಇತರ ದೇಶಗಳಲ್ಲಿನಂತೆ ಸಾಕಷ್ಟು ವೈವಿಧ್ಯ ಉಳ್ಳ ಜನಪದ ಸಂಗೀತ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ಈ ಸಂಗೀತದ ರುಚಿ ಕಂಡ ವೆರಿಯರ್ ಎಲ್ವಿನ್, ಆರ್ಚರ್, ದೇವೆಂಧ್ರ ಸತ್ಯಾರ್ಥಿ, ಡುಬೆ, ಹಟನ್, ಫಾನ್ ಫ್ಯೂರರ್ ಹಿಮೆಂಟ್ರಾಫ್ ಮೊದಲಾದ ಮಹನೀಯರು ಗೀತಗಳನ್ನು ಹಾಡಿಸಿ, ಶೇಖರಿಸಿ, ಧ್ವನಿಮುದ್ರಿಸಿಕೊಂಡು ತುಂಬ ಉಪಕಾರ ಮಾಡಿದ್ದಾರೆ. ದಕ್ಷಿಣ ಭಾರತದಲ್ಲೂ ಇಂಥ ಮಹನೀಯರು ಹಲವಾರು ಇದ್ದಾರೆ. ಕನ್ನಡಕ್ಕೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತುಸಂಗ್ರಹಾಲಯದವರು, ಜನಪದ ಸಾಹಿತ್ಯ ಬಳಗದವರು ಮಾಡಿರುವ ಕೆಲಸ ಸ್ತುತ್ಯರ್ಹವಾದುದು.

ಈ ಭಾಗದಲ್ಲಿನ ವೈವಿಧ್ಯಕ್ಕೂ ರಂಜನೆಗೂ ಉದಾಹರಣೆಯಾಗಿ ಇವನ್ನು ನೋಡಬಹುದು. ಬಂಗಾಳದ ಭಟಿಯಾಲಿ, ಬಾವುಲ್ ಹಾಡು, ದೋಣಿಗರ ಹಾಡು-ಇವು ಅದ್ಭುತ. ರಾಜಪುಟಾಣದ ಮದುವೆ ಹಾಡು, ಯುದ್ಧವರ್ಣನೆಯ ವೀರಗತೆಗಳೂ ಪ್ರಸಿದ್ಧ. ಆಂಧ್ರದೇಶದ ಬುರ್ರ ಕಥೆ, ಕೇರಳದ ಕುಮ್ಮಿ ಹಾಡು, ದೋಣಿ ಹಾಡು, ಗುಜರಾತಿನ ಗರ್ಭಹಾಡು, ತಮಿಳುನಾಡಿನ ಕಾವಟಿ ಹಾಡು, ಕನ್ನಡನಾಡಿನ ಗರತಿಹಾಡು, ಬಂಡಿ ಹಾಡು, ಹೆಚ್ಚು ಮನೋರಂಜಕ. ಮೈಮರೆತು ಒರಟಾಗಿ ಹಾಡಿದರೂ ಗಂಟೆಗಳ ಕಾಲ ಹಾಡಿದರೂ ಬೇಸರ ಬಾರದು.

ಮಧ್ಯ ಪ್ರದೇದ ಛತ್ತೀಸ್‍ಗಢದ ಬಾನ್ ಭಜನೆಗಳು, ಅಸ್ಸಾಮಿನ ಬ್ರಹ್ಮಪುತ್ರಾ ಕಣಿವೆಯ ಬಾನ್ ಗೀತೆಗಳು, ನೀಲಗಿರಿಯ ತೋಡರ ಹಾಡುಗಳು, ಕೊಡಗಿನ ಕೊಡವರ ಹಾಡು, ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಾಡುಗಳು ಪ್ರಕೃತಿಯ ವರ್ಣನೆಗಳು ನಿಬಿಡವಾಗಿ ಸುಂದರವಾಗಿವೆ. (ಆರ್.ಬಿ.ಎಸ್.)

ಕನ್ನಡ ಜನಪದ ಹಾಡಿಕೆಯಲ್ಲಿ ಕನ್ನಡನಾಡಿಗೇ ವಿಶಿಷ್ಟವಾದ ಗುಣಗಳನ್ನೂ ವಿಶ್ವಮಾನ್ಯವಾದ ಸಂಗೀತಿಕ ಅಂಶಗಳನ್ನೂ ಗುರುತಿಸಬಹುದು.

ಭಾರತದ ಜನಪದ ಗೀತೆಗಳ ಸಂಗೀತಾಂಶವನ್ನು ಎಂದರೆ ಅವುಗಳ ದನಿ, ಲಯಗಳನ್ನು ಪರಿಶೀಲಿಸಿದಾಗ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಜನಪದ ಸಂಗೀತ ಅಡಿಪಾಯವಾಗಿದೆ ಎಂಬುದು ಕಂಡುಬರುತ್ತದೆ. ನಾಗರಿಕರ ಸಂಪರ್ಕವೇ ಇಲ್ಲದೆ ಗುಡ್ಡಗಾಡುಗಳಲ್ಲಿ ಇಂದಿಗೂ ವಾಸಿಸುವ ಅನೇಕ ಬುಡಕಟ್ಟುಗಳವರು ಹಾಡಿಕೊಳ್ಳುವ ಹಾಡುಗಳಲ್ಲಿ ಇಂದಿನ ಕರ್ನಾಟಕ ಹಾಗೂ ಹಿಂದೂಸ್ಥಾನಿ ಗಾನ ಪದ್ಧತಿಯ ರಾಗಪದ್ಧತಿಯ ರಾಗಗಳಿಗೆ ಅಡಿಪಾಯವಾಗಬಲ್ಲ ಧ್ವನಿಮಾಧುರ್ಯಗಳು ಕೇಳಿ ಬರುತ್ತವೆ. ಉದಾಹರಣೆಗೆ ಕರ್ನಾಟಕದ ನಾಗರಹೊಳೆಯ ಬೆಟ್ಟಕುರುಬರ ಹಾಡುಗಳಲ್ಲಿ ಖರಹರಪ್ರಿಯ ರಾಗದ ಅನೇಕ ಸ್ವರಸಂಚಾರಗಳನ್ನು ಕಾಣಬಹುದು.

ಪ್ರಪಂಚದಲ್ಲಿ ಬಳಕೆಯಲ್ಲಿರುವ ಎಲ್ಲ ಜನಪದ ಗೀತೆಗಳಲ್ಲಿಯೂ ಐದು ಸ್ವರಗಳ ಸ್ವರಶ್ರೇಣಿಗಳೇ (ಪೆಂಟಟೋನಿಕ್ ಸ್ಕೇಲ್) ಅಧಿಕವಾಗಿ ಉಪಯೋಗಿಸಲ್ಪಡುತ್ತವೆ. ಐದಕ್ಕಿಂತ ಕಡಿಮೆಯೂ ಇರಬಹುದು. ಐದು ಅತ್ಯಧಿಕ ಸ್ವರಸಂಖ್ಯೆ. ಈ ಅಂಶವನ್ನು ಭಾರತೀಯ ಜನಪದ ಹಾಡುಗಳಲ್ಲೂ ಕಾಣಬಹುದು. ಭಾರತದ ಶಾಸ್ತ್ರೀಯ ಸಂಗೀತದಲ್ಲಿ ಉಪಯೋಗಿಸಲ್ಪಡುವ ರಾಗಗಳಲ್ಲಿ ಸಂಪೂರ್ಣ ರಾಗಗಳಿಗೆ ಆರೋಹಣಾವರೋಹಣಗಳಲ್ಲಿ ಏಳು ಸ್ವರಗಳೂ ಷಾಢವ ರಾಗಗಳಿಗೆ ಆರು ಸ್ವರಗಳೂ ಔಢವ ರಾಗಗಳಿಗೆ ಐದು ಸ್ವರಗಳೂ ಇರುವುದನ್ನು ಇಲ್ಲಿ ನೆನೆಯಬಹುದು. ಎಂದ ಮೇಲೆ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಬಳಕೆಯಲ್ಲಿರುವ ರಾಗಗಳಿಗೆ ಆರೋಹಣದಲ್ಲಿಯಾಗಲಿ ಅವರೋಹಣದಲ್ಲಿಯಾಗಲಿ ಉಪಯೋಗಿಸಲ್ಪಡುವ ಅತ್ಯಂತ ಕಡಿಮೆಯ ಸ್ವರಸಂಖ್ಯೆ ಐದೆಂಬುದು ಇದರಿಂದ ವಿದಿತವಾಗುತ್ತದೆ. ಈ ನಿಯಮಕ್ಕೆ ಅಪವಾದಗಳು ಅಪರೂಪ. ಆದರೆ ಅದಕ್ಕಿಂತ ಹೆಚ್ಚು ಸ್ವರಗಳು ಒಂದು ಶ್ರೇಣಿಯಲ್ಲಿ ಬಳಕೆಯಾಗಿರುವ ಜನಪದ ದನಿಗಳು ಅಪರೂಪ.

ಪ್ರಪಂಚದ ಹಾಗೂ ಭಾರತದ ಎಲ್ಲ ಕಡೆಯ ಜನಪದ ಹಾಡುಗಾರರೂ ಹೋ. ಹಾ, ಭಲೆ, ಐಸಾ ಇತ್ಯಾದಿಯಾಗಿ ತಮ್ಮ ತಮ್ಮ ಭಾಷೆಗೆ ಸಹಜವಾಗಿ ಹೊಂದಿಕೊಂಡು ಬರುವ ಉದ್ಗಾರಗಳನ್ನು ಹಾಡಿಗೆ ಸೇರಿಸಿ ಹಾಡಿಬಿಡುತ್ತಾರೆ. ಸಂಗೀತದ ನಡುವೆ ಗದ್ಯವಾಗಿಯೇ ಮೂಡುವ ಈ ಉದ್ಗಾರಗಳು ಲಯಕ್ಕೆ ಒಂದು ನಿಲುಗಡೆಯನ್ನೋ ಬಿರುಸನ್ನೋ ಮುಕ್ತಿಯನ್ನೋ ಒದಗಿಸಿಕೊಡುವುದರಲ್ಲಿ ಯಶಸ್ವಿಯಾಗಿವೆ.

ಭಾರತದ ಅತ್ಯಂತ ಉತ್ತರದ ನಾಗಾ ಜನಪದಗಳು ತಮ್ಮ ಜನಪದ ಹಾಡುಗಳಲ್ಲಿ ಒಂದು ಸಾಧಾರಣ ಮಟ್ಟದ ಪದ್ಧತಿಯನ್ನು (ಹಾರ್ಮೊನಿಕ್ ಮ್ಯೂಸಿಕ್) ಒಡಗೂಡಿಸಿಕೊಂಡಿರುವುದು ಕಂಡುಬಂದಿದೆ. ಭಾರತದ ಸಂಗೀತವೆಲ್ಲ-ಜನಪದ ಸಂಗೀತ ಕೂಡ-ರಾಗಪ್ರಧಾನವಾದ (ಮೆಲೊಡಿಕ್) ಸಂಗೀತ, ಪ್ರಾಯಶಃ ನಾಗಜನ ವಾಸಿಸುವ ಸ್ಥಳಗಳಲ್ಲಿ ಪಾಶ್ಚಾತ್ಯದ ಪ್ರಭಾವ ಹೆಚ್ಚಾಗಿದ್ದುದೇ ಕಾರಣವಾಗಿ ಅವರ ಸಂಗೀತದಲ್ಲೋ ಪಾಶ್ಚಾತ್ಯ ಸಂಗೀತದ ಮುಖ್ಯಗುಣವಾದ ಸಾಂಗತ್ಯ ಪದ್ಧತಿ ಕಾಣಿಸುತ್ತಿರಬೇಕು.

ಇನ್ನು ಭಾರತದ ಜನಪದ ಗಾಯನ ಪದ್ಧತಿಯಲ್ಲಿನ ಸಾಮ್ಯವನ್ನು ಕುರಿತು ಒಂದು ಮಾತು. ಗುಜರಾತಿನ ದುಹಾ ಛಂದಗಳು, ಮಹಾರಾಷ್ಟ್ರದ ಲಾವಣಿಗಳು ಒರಿಸ್ಸದ ಹಾಡುಗಬ್ಬಗಳು, ಉತ್ತರ ಕರ್ನಾಟಕದ ಗೀಗೀ ಪದಗಳು, ಹಳೆಯ ಮೈಸೂರು ಲಾವಣಿಗಳು- ಇವಕ್ಕೆಲ್ಲ ನಾದರೂಪದಲ್ಲಿರುವ ಹೋಲಿಕೆ ಅದ್ಭುತವಾದದ್ದು. ಇದು ಒಂದು ಉದಾಹರಣೆ ಮಾತ್ರ. ಮದುವೆ ಸಂಪ್ರದಾಯದಲ್ಲಿ ಹಾಡುಗಳೇ ದೇವದಿಂಡರುಗಳ ಮುಂದೆ ಕುಣಿಯುವಾಗ ನುಡಿಸುವ ವಾದ್ಯಗಳೇ ಹೀಗೆ ವಿಮರ್ಶೆ ಮಾಡುತ್ತ ಹೊರಟರೆ ಭಾರತದ ವಿವಿಧ ಪ್ರಾಂತ್ಯಗಳ ಜನಪದ ಗೀತೆಗಳಲ್ಲಿ ನಾದರೀತಿಯಾಗಿ ದನಿ (ಟ್ಯೂನ್) ಲಯ (ರಿದಮ್) ಗಳಲ್ಲಿ ಅದ್ಭುತವಾದ ಸಾಮ್ಯ ಕಾಣುತ್ತದೆ. ಉದಾಹರಣೆಗೆ, ಒರಿಸ್ಸಾದ ಕೆಲವು ಜನಪದ ಗೀತೆಗಳ ದನಿಗಳನ್ನುಳಿಸಿಕೊಂಡು ಅವಕ್ಕೆ ಕನ್ನಡ ಮಾತನ್ನೊದಗಿಸಿದರೆ ಇದು ಕನ್ನಡ ನಾಡಿನ ಹಾಡಲ್ಲ ಎಂದು ಹೇಳುವುದು ಕಷ್ಟವಾಗುತ್ತದೆ. ಅಷ್ಟು ಮಟ್ಟಿನ ನಾದಸಾಮ್ಯ ಇಲ್ಲಿ ಕಾಣುತ್ತದೆ. ಆದರೆ ಭಾರತದ ಇಂದಿನ ಶಾಸ್ತ್ರೀಯ ಸಂಗೀತವನ್ನು ಗಮನಿಸಿದರೆ ಉತ್ತರದ ಹಿಂದೂಸ್ತಾನಿ ಪದ್ಧತಿಗೂ ದಕ್ಷಿಣದ ಕರ್ನಾಟಕ ಸಂಗೀತ ಪದ್ಧತಿಗೂ ಇಂಥ ನಾದಸಾಮ್ಯ ಉಳಿದುಬಂದಿಲ್ಲ. ಏಕೆಂದರೆ, ಭರತನ ಕಾಲದಲ್ಲಿ ಇಡೀ ಭಾರತದಲ್ಲಿ ಒಂದೇ ಸಂಗೀತ ಪದ್ಧತಿ ರೂಢಿಯಲ್ಲಿತ್ತು. ಆದರೆ 14ನೆಯ ಶತಮಾನದ ಹೊತ್ತಿಗೆ ದಕ್ಷಿಣೋತ್ತರ ಭೇದಗಳನ್ನು ಹರಪಾಲದೇವ ಎತ್ತಿ ಹೇಳಿದ್ದಾನೆ. ಇಂದಿಗೂ ಇಡೀ ಭಾರತದಲ್ಲಿ ಒಂದೇ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವ ಜನಪದ ಗೀತಪದ್ಧತಿಯ ತುಲನಾತ್ಮಕ ಅಭ್ಯಾಸದಿಂದ ಶಾಸ್ತ್ರೀಯ ಸಂಗೀತ ಉತ್ತರದಕ್ಷಿಣಗಳಲ್ಲಿ ಭಿನ್ನರೂಪ ತಳೆದದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕೀತು.

ಕನ್ನಡದ ಮೂಲದ ಛಂದಸ್ಸು ತ್ರಿಪದಿ. ತ್ರಿಪದ ಹಾಡಾಗಿಯೇ ಮೂಡಿಬಂದದ್ದು. ನಾಡಹಾಡುಗಳಲ್ಲಿ ಬಹು ಹೆಚ್ಚು ಭಾಗ ತ್ರಿಪದಿಗಳೇ. ಸಣ್ಣ ಸರಳ ಭಾವನೆಗಳ ಅಭಿವ್ಯಕ್ತಿಗಾಗಲಿ ದೊಡ್ಡ ಕತೆಗಳನ್ನು ಹೇಳಲು ಆಗಲಿ ತ್ರಿಪದಿಗಳ ಬಳಕೆಯಾಗಿದೆ. ಈ ಎಲ್ಲ ಸಂದರ್ಭದಗಳಲ್ಲೂ ತ್ರಿಪದಿ ಸಹಜವಾಗಿ ಸುಂದರವಾಗಿ ಹಾಡಿಕೆಗೆ ಒಗ್ಗಿಕೊಂಡು ಬಂದಿರುವುದು ಸ್ವಾರಸ್ಯಕರ ಅಂಶ. ತ್ರಿಪದಿಯನ್ನು ವಿವಿಧ ಲಯಗಳಿಗೆ ಯಶಸ್ವಿಯಾಗಿ ಹೊಂದಿಸಿಕೊಂಡಿರುವುದು. ಲಯಬದ್ಧ ಹಾಡುಗಳಲ್ಲಿ ಕಂಡುಬಂದಿದೆ. ಲಯ ವಿರಹಿತ ಧ್ವನಿಮಾಧುರ್ಯಗಳಲ್ಲಿ ತ್ರಿಪದಿಯನ್ನು ಎಳೆದೆಳೆದು ಹಾಡುವಲ್ಲಿ ವಿಧವಿಧವಾದ ದನಿಗಳನ್ನು ಬಳಕೆ ಮಾಡಿರುವುದು ಕಾಣುತ್ತದೆ. ಹಲವಾರು ಮಟ್ಟುಗಳಿಗೆ ಅರ್ಥಪೂರ್ಣವಾಗಿ ಹೊಂದಿಕೊಳ್ಳುವ ಗುಣವು ಕನ್ನಡ ತ್ರಿಪದಿಗಳಿವೆ. ತ್ರಿಪದಿಗಳೇ ಅಲ್ಲದೆ ದ್ವಿಪದಿಗಳು, ಚೌಪದಿಗಳು, ರಗಳೆಯ ಧಾಟಿಯ ಚಂಪೂ ರೀತಿಯ ಕಥನಕವನಗಳೆಲ್ಲ ಕನ್ನಡ ಜನಪದದ ಬಾಯಲ್ಲಿ ಹಾಡಾಗಿಯೇ ಮೂಡಿಬಂದಿದೆ. ನಾಡಹಾಡುಗಾರರು ಈ ಎಲ್ಲ ಛಂದಸುಗಳನ್ನೂ ನಾದಕ್ಕೆ ಒಗ್ಗಿಸಿಕೊಂಡಿರುವ ರೀತಿ ಅಪೂರ್ವವಾದದ್ದು. ಸಂಗೀತ ಸಾಹಿತ್ಯದ ಅರ್ಥವನ್ನು ಮುಚ್ಚದೆ ಒಂದಕ್ಕೊಂದು ಪೂರಕವಾಗಿ ಕೂಡಿಕೊಂಡು ಬರುವಂತೆ ಹಾಡಿರುವುದು ಇವರ ಮುಖ್ಯ ಸಾಧನೆ. ಈ ಸಿದ್ಧಿಯ ದೆಸೆಯಿಂದಲೇ ನಮ್ಮ ಜನಪದ ಸಂಗೀತ ಲಗು ಸಂಗೀತಕ್ಕೆ ಜನ್ಮದಾತೆಯಾಯಿತು. ಈ ಕ್ರಿಯೆ ಭಾರತದ ಆದ್ಯಂತ ನಡೆದಿದೆ.

ನೃತ್ಯದ ಗತಿಬೇದಗಳಿಗೆ ಸರಳ ರಾಗಗಳನ್ನು ಹೊಂದಿಸಿಕೊಳ್ಳುವಲ್ಲೂ ಜನಪದ ಸಂಗೀತದ ಸಾಧನೆ ಗಮನಾರ್ಹವಾದದ್ದು. ಈ ಅಂಶವನ್ನು ಕೋಲಾಟ, ಗಂಗೆ ಕುಣಿತ, ಕಂಸಾಳೆ ನೃತ್ಯಗಳು, ವೀರಗಾಸೆ ಕುಣಿತ, ಮುಂತಾದವುಗಳಲ್ಲಿ ಕಾಣಬಹುದು. ಈ ಸಂದರ್ಭದಲ್ಲೇ ಲಯವಾದ್ಯಗಳನ್ನು ಜನಪದ ಸಂಗೀತ ವಿಸ್ತಾರವಾಗಿ ಬಳಸಿಕೊಂಡಿದೆ ಎಂಬುದನ್ನು ಕಾಣುತ್ತೇವೆ.

ದುಡಿ, ತಮಟೆ, ಡೋಲು, ಗುಮ್ಮಟೆ, ಛಡ, ಚಂಡೆ ಇತ್ಯಾದಿ ಲಯವಾದ್ಯಗಳು ಕರ್ನಾಟಕದ ಮೂಲೆಮೂಲೆಯಲ್ಲೂ ಒಂದಲ್ಲ ಒಂದು ಹೆಸರಿನಲ್ಲಿ ರೂಪದಲ್ಲಿ ಸಿಕ್ಕುತ್ತವೆ. ಅನೇಕ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮಾಡಿಕೊಂಡು ವಿವಿಧ ರೂಪಗಳಲ್ಲಿ ಈ ವಾದ್ಯಗಳನ್ನು ರಚಿಸಿದ್ದಾರೆ. ಕನ್ನಡ ಜನಪದ ವಾದ್ಯಗಾರರು.

ತಂತೀ ವಾದ್ಯದಲ್ಲಿ ಇಷ್ಟೊಂದು ವೈವಿಧ್ಯ ಕಾಣಬರುವುದಿಲ್ಲವಾದರೂ ಹಲವಾರು ತಂತೀವಾದ್ಯಗಳನ್ನು ಬಳಸುತ್ತಾರೆ, ಕನ್ನಡನಾಡಿನ ಹಾಡುಗಾರರು. ಖಾಲಿಬುರುಡೆಯನ್ನು ವಾದ್ಯರಚನೆಯಲ್ಲಿ ಉಪಯೋಗಿಸಿ ಆ ಬುರಡೆಯೊಳಗಿನ ಗಾಳಿಯ ಒತ್ತಡವನ್ನು ಸರಳ ನಿಯಂತ್ರಣಕ್ಕೊಳಗಾಗಿಸಿ ಹೆಚ್ಚು ಕಡಿಮೆ ಮಾಡುತ್ತ ಬುರುಡೆಯ ಒಂದು ಅಥವಾ ಎರಡು ಮುಖಗಳಿಗೆ ಹೊದಿಸಿದ ಚರ್ಮದ ಹೊದಿಕೆಯನ್ನು ಬಡಿಯುವುದರಿಂದ ಕೆಲವಾರು ಸ್ವರಗಳನ್ನು ಹೊರಡಿಸುವ ತಂತ್ರವನ್ನೂ ಜನಪದ ವಾದ್ಯಗಾರರು ಬಹಳವಾಗಿ ಬಳಸಿರುವುದು ಕಾಣುತ್ತದೆ.

ಉತ್ತರ ಕರ್ನಾಟಕದ ಕರಡಿಮಜಲು, ಕಂಸಾಳೆಯ ಗರಿ ಮತ್ತು ಬಟ್ಟಲು, ತಾಳ, ಗುಮ್ಮಟೆ, ಚಕ್ರಾಜಿ ಬಳೆ, ಮುಂತಾದುವೆಲ್ಲ ಅಚ್ಚ ಜನಪದ ವಾದ್ಯಗಳು.

ರಾಗಿ ಬೀಸುವ ಹಾಡುಗಳು, ಕೋಲಾಟದ ಹಾಡುಗಳು, ಗೀಗೀ ಪದಗಳು, ಎಲ್ಲಮ್ಮನ ಪದಗಳು, ಕೊಂತ್ಯಮ್ಮನ ಪದಗಳು, ಮುಂತಾದವುಗಳಲ್ಲಿ ಕಾಣಬರುವ ಧ್ವನಿವೈವಿಧ್ಯ ಸಂಗೀತ ಪ್ರಪಂಚದ ಬೆರಗುಗಳಲ್ಲಿ ಒಂದು ಎಂದರೆ ಅತಿಶಯೋಕ್ತಿಯಲ್ಲ. ಮೂರುನಾಲ್ಕು ಸ್ವರಗಳ ಪರಿಧಿಯಲ್ಲೇ ಇದ್ದೂ ವಿಸ್ತಾರ ಮಾಡುವ ಪರಿಪಾಠವಿಲ್ಲದೆಯೇ ಬಗೆಬಗೆಯ ದನಿಗಳ ಸೃಷ್ಟಿ ಮಾಡುವ ಸಂಗೀತ ಪ್ರತಿಭೆಯನ್ನು ಇಲ್ಲಿ ಕಾಣುತ್ತೇವೆ. ಕಷ್ಟವಿಲ್ಲದೆ ಸಹಜವಾಗಿ, ಸರಳವಾಗಿ ಆದರೆ ಸಾರ್ಥಕವಾಗಿ ಇಂಪಾಗಿ ಮೂಡಿಬಂದಿವೆ-ಈ ನಾದರೂಪಗಳು, ಹಾಗೆಯೇ ಇಲ್ಲಿನ ಲಯದ ಓಟ ಗತಿಯ ಬೆಡಗುಗಳನ್ನೂ ಮನಮೋಹಕವಾದವು.

ಸಂಪ್ರದಾಯದ ಹಾಡುಗಳು, ನಾಟಕದ ಹಾಡುಗಳು ಇವೆಲ್ಲವುಗಳ ರಾಗಗಳು ಜನಪದ ದನಿಗಳಿಂದ ಬಹಳವಾಗಿ ಪ್ರಭಾವಿತವಾದವು.

(ಎಲ್.ಜಿ.ಎಸ್.)

(ಪರಿಷ್ಕರಣೆ: ಕ್ಯಾತನಹಳ್ಳಿ ರಾಮಣ್ಣ)